ಗಾಝಾದಲ್ಲಿ ಆಹಾರ ಮಾರಾಟ ಮರು ಆರಂಭಿಸಿದ ಇಸ್ರೇಲ್
PC: x.com/Reuters
ರಮಲ್ಲಾ: ಗಾಝಾದಲ್ಲಿ ಇಸ್ರೇಲ್ ಹಾಗೂ ಆಕ್ರಮಿತ ಪಶ್ಚಿಮದಂಡೆ ಪ್ರದೇಶದಿಂದ ಆಹಾರ ಮಾರಾಟ ಮಾಡದಂತೆ ವಿಧಿಸಿದ್ದ ನಿಷೇಧವನ್ನು ಇಸ್ರೇಲಿ ಸೇನೆ ತೆರವುಗೊಳಿಸಿದೆ. ರಫಾ ಪಟ್ಟಣದ ಮೇಲಿನ ದಾಳಿಯಿಂದಾಗಿ ಅಂತಾರಾಷ್ಟ್ರೀಯ ನೆರವಿಗೆ ತಡೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಆರಂಭಿಸಿದೆ ಎಂದು ಫೆಲಸ್ತೀನಿ ಅಧಿಕಾರಿಗಳು, ವ್ಯಾಪಾರಿಗಳು ಮತ್ತು ಅಂತಾರಾಷ್ಟ್ರೀಯ ನೆರವು ಕಾರ್ಯಕರ್ತರು ಹೇಳಿದ್ದಾರೆ.
ತಾಜಾ ಹಣ್ಣು, ತರಕಾರಿ ಮತ್ತು ಡೈರಿ ಉತ್ಪನ್ನಗಳನ್ನು ಇಸ್ರೇಲಿ ಮತ್ತು ಫೆಲಸ್ತೀನಿ ಪೂರೈಕೆದಾರರಿಂದ ಖರೀದಿ ಮಾಡಲು ಗಾಜಾ ವ್ಯಾಪಾರಿಗಳಿಗೆ ಸೇನೆಯ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಗಾಝಾದ ರಫಾ ಪಟ್ಟಣದ ಮೇಲೆ ಭೀಕರ ದಾಳಿ ನಡೆಸಿದ ಕೆಲ ದಿನಗಳ ಬಳಿಕ ಇಸ್ರೇಲ್ ಈ ಅನುಮತಿ ನೀಡಿದೆ.
ರಫಾ ಪಟ್ಟಣದ ಮೇಲೆ ಆಕ್ರಮಣ ಮಾಡಿದ ಕಾರಣದಿಂದ ಗಾಝಾ ಪ್ರದೇಶಕ್ಕೆ ಈಜಿಪ್ಟ್ ನಿಂದ ಬರುವ ದಾರಿ ಮುಚ್ಚಿದ್ದು, ದಾಳಿಯಿಂದ ಸಂತ್ರಸ್ತವಾಗಿರುವ ಫೆಲಸ್ತೀನ್ ಪ್ರದೇಶಕ್ಕೆ ವಿಶ್ವಸಂಸ್ಥೆಯ ನೆರವಿಗೆ ಇದು ತಡೆಯಾಗಿ ಪರಿಣಮಿಸಿದೆ. ದೇಶದಲ್ಲಿ ಕ್ಷಾಮ ಪರಿಸ್ಥಿತಿ ಎದುರಾಗುವ ಬಗ್ಗೆ ಮಾನವೀಯ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಸಂಘರ್ಷವನ್ನು ಸ್ಥಗಿತಗೊಳಿಸುವಂತೆ ಇಸ್ರೇಲ್ ಮೇಲೆ ಜಾಗತಿಕ ಒತ್ತಡ ಹೆಚ್ಚುತ್ತಿದೆ.
"ಇಸ್ರೇಲ್ ಅಧಿಕಾರಿಗಳು, ಪಶ್ಚಿಮ ದಂಡೆ ಮತ್ತು ಇಸ್ರೇಲ್ ನಿಂದ ಯುದ್ಧಕ್ಕೆ ಮುನ್ನ ಸರಕುಗಳನ್ನು ಖರೀದಿ ಮಾಡುತ್ತಿದ್ದ ಗಾಝಾದ ವಿತರಕರಿಗೆ ದೂರವಾಣಿ ಕರೆ ಮಾಡಿದ್ದಾರೆ" ಎಂದು ಗಾಝಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಆಯಿದ್ ಅಬು ರಮದಾನ್ ಹೇಳಿದ್ದಾರೆ. ಸರಕುಗಳನ್ನು ಪಡೆಯುವ ನಿಟ್ಟಿನಲ್ಲಿ ಸಹಕರಿಸಲು ಸಿದ್ಧ ಎಂದು ಇಸ್ರೇಲ್ ಭರವಸೆ ನೀಡಿದೆ ಎಂದು ವಿವರಿಸಿದ್ದಾರೆ.