ಕೂತು ಮಾತನಾಡುವುದು ಸುಲಭ: ಜೈಸ್ವಾಲ್ ರನ್ನು ಟೀಕಿಸಿದ ಗಾವಸ್ಕರ್ಗೆ ತಿರುಗೇಟು ನೀಡಿದ ಆರ್.ಶ್ರೀಧರ್

ಸುನೀಲ್ ಗಾವಸ್ಕರ್ | ಯಶಸ್ವಿ ಜೈಸ್ವಾಲ್
PC:x.com/CricketNDTV
ಮುಂಬೈ: ಭಾರತದ ಉದಯೋನ್ಮುಖ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್, ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್ ನಲ್ಲಿ ಶತಕ ಸಾಧಿಸಿದರೂ, ಫೀಲ್ಡಿಂಗ್ ಪ್ರಮಾದಕ್ಕಾಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಇಡೀ ಟೆಸ್ಟ್ ನಲ್ಲಿ ಭಾರತ ಎಂಟು ಕ್ಯಾಚ್ ಅವಕಾಶಗಳನ್ನು ಕೈಚೆಲ್ಲಿತ್ತು. ಇದು ಫಲಿತಾಂಶ ಇಂಗ್ಲೆಂಡ್ ಪರವಾಗಿ ಬರಲು ಕಾರಣವಾಯಿತು. ಎಂಟು ಕ್ಯಾಚಿಂಗ್ ಅವಕಾಶಗಳನ್ನು ಕೈಚೆಲ್ಲಿದ್ದು ಭಾರತಕ್ಕೆ 250 ರನ್ ಗಳಷ್ಟು ದುಬಾರಿಯಾಯಿತು. ಈ ಪೈಕಿ ಅತಿಹೆಚ್ಚು ಕ್ಯಾಚ್ ಗಳನ್ನು ಕೈಚೆಲ್ಲಿದ್ದು ಜೈಸ್ವಾಲ್.
ಭಾರತ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್, ಭಾರತದ ಫೀಲ್ಡಿಂಗ್ ಬಗ್ಗೆ ಬಹಿರಂಗವಾಗಿಯೇ ಅತೃಪ್ತಿ ವ್ಯಕ್ತಪಡಿಸಿದ್ದರು. "ಯಾವುದೇ ಪದಕ ನೀಡಲಾಗಿದೆ ಎಂದು ನನಗೆ ಅನಿಸುವುದಿಲ್ಲ. ಟಿ.ದಿಲೀಪ್ ಪಂದ್ಯದ ಬಳಿಕ ಅದನ್ನು ನೀಡುತ್ತಾರೆ. ಇದು ತೀರಾ ನಿರಾಶಾದಾಯಕ. ಯಶಸ್ವಿ ಜೈಸ್ವಾಲ್ ಒಳ್ಳೆಯ ಫೀಲ್ಡರ್; ಆದರೆ ಈ ಬಾರಿ ಏನೂ ಮಾಡಲಿಲ್ಲ" ಎಂದು ಗಾವಸ್ಕರ್ ಟೀಕಿಸಿದ್ದರು. ಸೂರತ್ ಕ್ರಿಕೆಟ್ ಮಂಡಳಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಆದರೆ ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರು ಯಶಸ್ವಿ ಜೈಸ್ವಾಲ್ ಪರ ನಿಂತಿದ್ದಾರೆ. "ಆತ ನಿಜಕ್ಕೂ ಅದ್ಭುತ ಗಲ್ಲಿ ಫೀಲ್ಡರ್. ಯಾವುದೇ ತಪ್ಪು ಮಾಡುವುದಿಲ್ಲ. ಆದರೆ ಎರಡು ಪಂದ್ಯಗಳಲ್ಲಿ ಕೆಟ್ಟದಾಗಿ ಫೀಲ್ಡಿಂಗ್ ಮಾಡಿದ್ದಾರೆ. ಒಂದು ಮೆಲ್ಬೋರ್ನ್, ಇನ್ನೊಂದು ಲೀಡ್ಸ್. ಇದು ಹೊರತುಪಡಿಸಿದರೆ ಅದ್ಭುತ ಫೀಲ್ಡರ್. ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ಅವರು ಪಡೆದ ಕ್ಯಾಚ್ ಅತ್ಯದ್ಭುತ. ಕಮೆಂಟರಿ ಬಾಕ್ಸ್ ನಲ್ಲಿ ಕುಳಿತು ಟೀಕಿಸುವುದು ಸುಲಭ. ಆದರೆ ಸವಾಲಿನ ಸಂದರ್ಭದಲ್ಲಿ, ಹಲವರಿಗೆ ಇದು ಇಂಥ ವಾತಾವರಣದಲ್ಲಿ ಮೊದಲ ಅನುಭವ" ಎಂದು ತಿರುಗೇಟು ನೀಡಿದ್ದಾರೆ.
ಆದರೆ ಭಾರತದ ಫೀಲ್ಡಿಂಗ್ ಮಟ್ಟ ಒಟ್ಟಾರೆ ಕಳಪೆಯಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ.







