ಖಾಮಿನೈ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಗಳ ಬಗ್ಗೆ ತಪ್ಪು ಮಾಹಿತಿ ಆರೋಪ: ಜಮ್ಮು-ಕಾಶ್ಮೀರ ಪೊಲೀಸರಿಂದ ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲು

ಆಯತುಲ್ಲಾ ಅಲಿ ಖಾಮಿನೈ | Photo Credit : X \ @khamenei_ir
ಶ್ರೀನಗರ: ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಅಶಾಂತಿ ಪ್ರಚೋದಿಸುವ, ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶದಿಂದ ಕಪೋಲಕಲ್ಪಿತ, ದಾರಿ ತಪ್ಪಿಸುವ ಮಾಹಿತಿ ಪ್ರಸಾರ ಮಾಡಿದ ಆರೋಪದಲ್ಲಿ ಇಲ್ಲಿನ ಕೆಲವು ಮಾಧ್ಯಮ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.
ಶ್ರೀನಗರ ಪೊಲೀಸರು ಕೆಲವು ಸುದ್ದಿ ವಾಹಿನಿಗಳು, ಮಾಧ್ಯಮ ಸಂಸ್ಥೆಗಳು ಹಾಗೂ ಎಲೆಕ್ಟ್ರಾನಿಕ್ಸ್, ಸಾಮಾಜಿಕ ಮಾಧ್ಯಮ ವೇದಿಕೆಗಳ ವ್ಯಕ್ತಿಗಳು ಸುಳ್ಳು, ಕಪೋಲಕಲ್ಪಿತ ಹಾಗೂ ದಾರಿ ತಪ್ಪಿಸುವ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಪ್ರಸಾರ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಆದರೆ, ಮಾಧ್ಯಮ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿವರ ತತ್ಕ್ಷಣ ತಿಳಿದು ಬಂದಿಲ್ಲ.
ಈ ಶಕ್ತಿಗಳು ಅಶಾಂತಿಯನ್ನು ಪ್ರಚೋದಿಸುವ, ಸಾರ್ವಜನಿಕ ಸುವ್ಯವಸ್ಥೆಯನ್ನು ಕದಡುವ ಹಾಗೂ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ವಿಕೃತ ನಿರೂಪಣೆಗಳು ಹಾಗೂ ಪರಿಶೀಲಿಸದ ವಿಷಯಗಳನ್ನು ಹರಡಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇಂತಹ ದುರದ್ದೇಶಪೂರಿತ ತಪ್ಪು ಮಾಹಿತಿಯು ದೇಶದ ಶಾಂತಿ, ಭದ್ರತೆ ಹಾಗೂ ಸಮಗ್ರತೆಗೆ ಗಂಭೀರ ಬೆದರಿಕೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಶ್ರೀನಗರ ಪೊಲೀಸರು ಸಂಬಂಧಿತ ಕಾನೂನಿನ ನಿಯಮಗಳ ಅಡಿಯಲ್ಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
‘‘ಹಲವು ವ್ಯಕ್ತಿಗಳನ್ನು ಗುರುತಿಸಲಾಗಿದೆ. ಸೈಬರ್ ಸೆಲ್ ಮುಂದೆ ಹಾಜರಾಗುವಂತೆ ಸಂಬಂಧಿತ ವ್ಯಕ್ತಿಗಳಿಗೆ ಸಮನ್ಸ್ ನೀಡಲಾಗಿದೆ. ತನಿಖೆ ಸಕ್ರಿಯವಾಗಿ ನಡೆಯುತ್ತಿದೆ. ಯಾರಾದರೂ ಭಾಗಿಯಾಗಿರುವುದು ಕಂಡು ಬಂದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಅವರು ಹೇಳಿದ್ದಾರೆ.







