ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ದೊರಕೀತೇ?

PC:X.com/ Amarrrrz/ OmarAbdullah
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಸಾಧ್ಯವಾದಷ್ಟು ಬೇಗ ನೀಡಬೇಕೆಂದು ಸುಪ್ರೀಂ ಕೋರ್ಟ್ ಎರಡು ವರ್ಷಗಳ ಹಿಂದೆಯೇ ಅಂದರೆ 2023ರಲ್ಲಿ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮತ್ತೆ ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರವಸೆಯನ್ನು ನೀಡಿದ್ದರು. ಈ ಸ್ಥಾನಮಾನವನ್ನು ನೀಡಲು ಯಾವುದೇ ಕಾಲಮಿತಿಯನ್ನು ಅವರು ನಿಗದಿ ಪಡಿಸಿರಲಿಲ್ಲ. ಹೀಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡುವ ಬಗ್ಗೆ ನೀಡಿರುವ ಭರವಸೆಯ ಕುರಿತು ಅವರಿಗೆ ಪ್ರಾಮಾಣಿಕ ಬದ್ಧತೆ ಇದೆಯೇ ಎಂಬ ಬಗ್ಗೆ ಸಂದೇಹ ಬರುವಂತೆ ಅವರು ಜಾಣ ಮೌನ ತಾಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡಿರುವ ಭರವಸೆಯ ಬಗ್ಗೆ ಕೇಂದ್ರದ ಮೋದಿ ನೇತೃತ್ವದ ಸರಕಾರ ಮೌನ ತಾಳಿರುವುದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿರುವ ಆ ರಾಜ್ಯದ ಮುಖ್ಯ ಮಂತ್ರಿ ಉಮರ್ ಅಬ್ದುಲ್ಲಾ ಅವರು ‘‘ರಾಜ್ಯದ ಸ್ಥಾನಮಾನವನ್ನು ನೀಡುವುದು ಮುಗಿದ ಅಧ್ಯಾಯವಲ್ಲ. ನೀತಿ ಆಯೋಗದ ಇತ್ತೀಚಿನ ಕಡತವೊಂದು ರಾಜ್ಯದ ಸ್ಥಾನಮಾನವನ್ನು ನೀಡುವ ಬಗ್ಗೆ ಸ್ಪಷ್ಟವಾಗಿ ಪ್ರಸ್ತಾಪ ಮಾಡಿದೆ. ಈ ಕಡತವನ್ನು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಹಾಗೂ ನೀತಿ ಆಯೋಗದ ಸದಸ್ಯರ ಜೊತೆ ಹಂಚಿಕೊಳ್ಳಲಾಗಿದೆ’’ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ನೀಡಿರುವ ಭರವಸೆಯನ್ನು ಈಡೇರಿಸದಿದ್ದರೆ ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದರೆ ತಮ್ಮ ಪಕ್ಷವು ಸುಪ್ರೀಂ ಕೋರ್ಟ್ಗೆ ಹೋಗುವುದಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಕೂಡ ಎಚ್ಚರಿಕೆ ನೀಡಿದ್ದಾರೆ. ಅಲ್ಲಿನ ವಿಧಾನಸಭಾ ಚುನಾವಣೆಯ ನಂತರ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡುವುದು ವಿಳಂಬವಾಗುತ್ತಿರುವುದರಿಂದ ಚುನಾಯಿತ ಸರಕಾರದ ದೈನಂದಿನ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಗುತ್ತಿದೆ ಎಂಬ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆ ಸಮರ್ಥನೀಯವಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮತ್ತೆ ನೀಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ನ್ಯಾಯವಾಗಿ ವಾಸ್ತವಕ್ಕೆ ಹತ್ತಿರವಾಗುತ್ತದೆ. ಪಹಲ್ಗಾಮ್ ನಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ರಾಜ್ಯದ ಸ್ಥಾನಮಾನವನ್ನು ನೀಡುವ ಸಂಬಂಧದಲ್ಲಿ ಕೇಂದ್ರ ಸರಕಾರ ಮರು ಆಲೋಚನೆಯನ್ನು ನಡೆಸಿದೆಯೇ ಎಂಬ ಸಂದೇಹ ಸಹಜವಾಗಿ ಬರುತ್ತದೆ. ಆದರೆ ಈ ಘಟನೆಯ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡುವ ಅಗತ್ಯವು ಮೊದಲಿಗಿಂತ ಹೆಚ್ಚಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಅಲ್ಲಿನ ಚುನಾಯಿತ ಸರಕಾರಕ್ಕೆ ಬಹಳ ಸೀಮಿತವಾದ ಅಧಿಕಾರವಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯ ಕುರಿತ ಅಧಿಕಾರವು ಚುನಾಯಿತರಲ್ಲದ ಲೆಫ್ಟಿನೆಂಟ್ ಗವರ್ನರ್ ಬಳಿ ಇರುವುದರಿಂದ ಈ ವಿಷಯದಲ್ಲಿ ರಾಜ್ಯ ಸರಕಾರಕ್ಕೆ ಅಧಿಕಾರವೇ ಇಲ್ಲದಂತಾಗಿದೆ.
ಜಮ್ಮು ಮತ್ತು ಕಾಶ್ಮೀರ ಭದ್ರತೆಗೆ ಸಂಬಂಧಿಸಿದಂತೆ ಕೈಗೊಳ್ಳಲೇಬೇಕಾದ ಪ್ರಮುಖ ಕ್ರಮವೆಂದರೆ ಈ ಪ್ರಕ್ರಿಯೆಯಲ್ಲಿ ಸ್ಥಳೀಯರನ್ನು ಹಾಗೂ ಚುನಾಯಿತ ಸರಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ರಾಜ್ಯದ ಜನರ ಮತ್ತು ಚುನಾಯಿತ ಸರಕಾರದ ಪಾತ್ರವೇ ಇಲ್ಲದಂತಾಗಿದೆ. ಜಮ್ಮು ಮತ್ತು ಕಾಶ್ಮೀರದ ಭದ್ರತೆಯ ವಿಚಾರದಲ್ಲಿ ಅಲ್ಲಿನ ಜನರು ಚುನಾಯಿಸಿದ ಸರಕಾರ ಹೊರಗಿನವರಂತೆ ಇರಬೇಕಾಗಿದೆ. ಪಹಲ್ಗಾಮ್ ದಾಳಿಯ ನಂತರ ನಡೆದ ಭದ್ರತೆಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಮಿತಿಯ ಸಭೆಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನು ಆಹ್ವಾನಿಸಬೇಕಾಗಿತ್ತು. ಆದರೆ ಅವರನ್ನು ಆಹ್ವಾನಿಸಲಿಲ್ಲ.
ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ರಾಜಕೀಯವಾಗಿ ಬಗೆಹರಿಸುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಕಾಶ್ಮೀರದ ಭದ್ರತಾ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ, ಸಶಸ್ತ್ರ ಪಡೆಗಳು, ಗುಪ್ತಚರ ವ್ಯವಸ್ಥೆ ಹಾಗೂ ಲೆಫ್ಟಿನೆಂಟ್ ಗವರ್ನರ್ ಮಾತ್ರ ಭಾಗಿದಾರರಾಗಿ ಇರಬಾರದು, ಅಲ್ಲಿನ ಜನರನ್ನು ಪ್ರತಿನಿಧಿಸುವ ಚುನಾಯಿತ ಸರಕಾರ ಕೂಡ ಮುಖ್ಯ ಭಾಗಿದಾರನಾಗಿ ಇರಬೇಕು.ಆಗ ಮಾತ್ರ ಪರಿಸ್ಥಿತಿ ಸುಧಾರಿಸಲು ಸಾಧ್ಯ.
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ವಿಳಂಬ ಮಾಡದೆ ಅದಕ್ಕೆ ರಾಜ್ಯದ ಸ್ಥಾನಮಾನವನ್ನು ಮೊದಲು ನೀಡಬೇಕು. ಆಗ ಮಾತ್ರ ಜನರಲ್ಲಿ ವಿಶ್ವಾಸ ಮೂಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಪೂರ್ಣವಾಗುತ್ತದೆ. ಜನಸಾಮಾನ್ಯರ ಒಳಗೊಳ್ಳುವಿಕೆಯಿಲ್ಲದೇಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು.
ಅಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಕಾಶ್ಮೀರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಅವರು ಚುನಾಯಿಸಿದ ಉಮರ್ ಅಬ್ದುಲ್ಲಾ ನೇತೃತ್ವದ ಸರಕಾರಕ್ಕೆ ನ್ಯಾಯಸಮ್ಮತ ಅಧಿಕಾರವನ್ನು ನೀಡುವುದಾಗಿದೆ. ಕಾಶ್ಮೀರದ ದೇಶ ಪ್ರೇಮಿ ಜನತೆ ಎಂದೂ ಭಯೋತ್ಪಾದಕ ಶಕ್ತಿಗಳನ್ನು ಬೆಂಬಲಿಸಿಲ್ಲ, ಬೆಂಬಲಿಸುವುದೂ ಇಲ್ಲ. ಪಹಲ್ಗಾಮ್ ಘಟನೆಯ ನಂತರ ಇದು ಸ್ಪಷ್ಟವಾಗಿದೆ. ಅಲ್ಲಿ ಭಯೋತ್ಪಾದಕರ ದಾಳಿಯಿಂದ ಸಾವಿಗೀಡಾದ ಮತ್ತು ಗಾಯಗೊಂಡ ಪ್ರವಾಸಿಗರ ನೆರವಿಗೆ ಬಂದವರು ಕಾಶ್ಮೀರದ ಯುವಕರು. ಅನೇಕ ಜನರ ಪ್ರಾಣವನ್ನು ರಕ್ಷಿಸಿದವರು ಅವರು. ಹಾಗಾಗಿ ಕೇಂದ್ರ ಸರಕಾರ ವಿಳಂಬ ಮಾಡದೆ ಅಲ್ಲಿನ ಚುನಾಯಿತ ಸರಕಾರಕ್ಕೆ ಸಂಪೂರ್ಣ ಸಾಂವಿಧಾನಿಕ ಅಧಿಕಾರವನ್ನು ನೀಡಬೇಕು. ಮಾತು ತಪ್ಪಬಾರದು. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ರಾಜಕೀಯ ಸೌಹಾರ್ದ ಪರಿಹಾರವೊಂದೇ ಉಳಿದ ದಾರಿಯಾಗಿದೆ.