ಸಾವಧಾನದ ಬೆನ್ನೇರಿದ ತಣ್ಣನೆ ಪ್ರತಿರೋಧ: ಡಾ.ಕೆ.ವಿ.ನೇತ್ರಾವತಿ

ನೇತ್ರಾವತಿ ಒಬ್ಬ ಸಂಶೋಧಕಿಯಾಗಿ, ಲೇಖಕಿಯಾಗಿ, ಕವಯಿತ್ರಿಯಾಗಿ, ರೇಖಾಚಿತ್ರ ಕಲಾವಿದೆಯಾಗಿ, ಪ್ರಾಧ್ಯಾಪಕಿಯಾಗಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವ ಅಬ್ಬರವೂ ಇಲ್ಲದೆ, ಪ್ರಚಾರದ ಹಪಾಹಪಿ ಇಲ್ಲದೆ ಸಾವಧಾನದಿಂದ ರೂಪುಗೊಂಡವರು. ಕನ್ನಡ ಸಾಹಿತ್ಯ ಪರಿಷತ್ತು 2026ರ ಶ್ರೀವಿಜಯ ಪ್ರಶಸ್ತಿಯನ್ನು ಘೋಷಿಸಿದಾಗ, ಆಯ್ಕೆಯಾದವರ ಪಟ್ಟಿಯಲ್ಲಿ ನೇತ್ರಾವತಿ ಇದ್ದುದು ನೋಡಿ ಇದೊಂದು ಒಳ್ಳೆಯ ಆಯ್ಕೆ ಅನ್ನಿಸಿತ್ತು.
ಹೊಸಪೇಟೆಯ ಬಸ್ ಸ್ಟಾಂಡಿನಲ್ಲಿ ಮೈತುಂಬಾ ಹೊದ್ದು ಸ್ವೆಟರ್ ಹಾಕಿ ಕೂತ ಕುಳ್ಳ ಹುಡುಗಿ, ತನಗಿಂತ ಹಿರಿಯ ಹುಡುಗನ ಜತೆ ಕೂತು ಕನ್ನಡ ವಿಶ್ವವಿದ್ಯಾನಿಲಯದ ಬಸ್ ಬರುವ ಕಾರ್ನರಲ್ಲಿ ಬಸ್ ಕಾಯುತ್ತಿದ್ದರು. ಇವರನ್ನು ನೋಡಿ ಎಂ.ಎ.ಪಿಎಚ್.ಡಿ ಕೋರ್ಸಿನ ಪರೀಕ್ಷೆಗೆ ಬಂದಿರಬಹುದು ಅಂದುಕೊಂಡೆ. ನನ್ನ ಊಹೆ ನಿಜವಾಗಿತ್ತು. ಕನ್ನಡ ವಿವಿಯ ಬಸ್ ಹತ್ತಿದರು. ಒಂದೇ ಬಸ್ಸಲ್ಲಿ ಕ್ಯಾಂಪಸ್ಸಿಗೆ ಬಂದೆವು. ನಾನು ಜಾನಪದ ವಿಭಾಗದ ಕಡೆ ಹೊರಟೆ. ಅವರೂ ಅತ್ತಲೇ ಬಂದರು. ಇಬ್ಬರೂ ಜಾನಪದ ಎಂ.ಎ ಗೆ ಪರೀಕ್ಷೆ ಬರೆದು ಆಯ್ಕೆಯೂ ಆದೆವು. ತರಗತಿಗೆ ಬರತೊಡಗಿದೆವು. ಆಗ ಆ ಹುಡುಗಿ ಕೋಲಾರದಿಂದ ಬಂದಿರುವ ಕೆ.ವಿ.ನೇತ್ರಾವತಿ ಎಂದೂ, ಮೊದಲ ದಿನ ಬಸ್‌ನಲ್ಲಿ ಜತೆಗಿದ್ದವರು ನೇತ್ರಾರ ಅಣ್ಣನೆಂದು ಪರಿಚಯವಾಯಿತು.
ಹಗರಿಬೊಮ್ಮನಹಳ್ಳಿಯಿಂದ ಚಂದ್ರಪ್ಪ ಸೊಬಟಿ ಮತ್ತು ನಿಸಾರ್ ಅಹಮದ್, ಕೊಪ್ಪಳ ಭಾಗದಿಂದ ನಿಂಗಪ್ಪ, ಶಿಗ್ಗಾವಿಯಿಂದ ಸುಮಂಗಲ ಅತ್ತೀಗೇರಿ, ಕಮಲಾಪುರದಿಂದ ಸುನಂದ, ಹೊಸಪೇಟೆಯಿಂದ ಸಬೀನಾ, ತಾರಾಮತಿ ಹೀಗೆ ಬೇರೆ ಬೇರೆ ಭಾಗದಿಂದ ಬಂದವರು ನಮ್ಮ ಮೊದಲ ಬ್ಯಾಚ್‌ನಲ್ಲಿದ್ದರು. ಇದರಲ್ಲಿ ನೇತ್ರಾವತಿ ಬಹಳ ದೂರದಿಂದ ಬಂದವರಾಗಿದ್ದರು. ಮೊದಲಬಾರಿಗೆ ನೇತ್ರಾವತಿ ಅವರ ಕೋಲಾರ ಕನ್ನಡದ ವಿಶಿಷ್ಟ ನುಡಿಗಟ್ಟನ್ನು ಕೇಳಿದೆವು. ಅಧ್ಯಾಪಕರಾಗಿ ಮೊಗಳ್ಳಿ ಗಣೇಶ್, ಮಂಜುನಾಥ ಬೇವಿನಕಟ್ಟಿ, ಹೆಬ್ಬಾಲೆ ಕೆ.ನಾಗೇಶ್, ಹರಿಶ್ಚಂದ್ರ ದಿಗ್ಸಂಗಿಕರ್, ಸ.ಚಿ.ರಮೇಶ್, ಟಿ.ಸಿ.ಗುರುಪ್ರಸಾದ್ ನಮಗೆ ಕಲಿಸುತ್ತಿದ್ದರು. ಹೀಗೆ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದ ಮೊದಲ ದಿನದಿಂದ ಜಾನಪದ ಎಂ.ಎ.ಪಿಎಚ್.ಡಿ ಮುಗಿಸಿ (2008) ಡಾ.ಕೆ.ವಿ.ನೇತ್ರಾವತಿ ಆಗುವ ತನಕ ನಾವು ಜತೆಗೆ ಓದಿದವರು. 2005ರಲ್ಲಿ ತಲಪರಿಗೆ ಕೃತಿಯಲ್ಲಿ ನೇತ್ರ ಬರೆದ ‘ಒಕ್ಕಲಿಗರಾಗಿದ್ದಿದ್ದರೆ..’ ಎನ್ನುವ ಆತ್ಮಕಥನದ ಭಾಗವನ್ನು ಓದಿದ ಮೇಲೆ ಅವರ ಮಡುಗಟ್ಟಿದ ನೋವು ಅಪಮಾನ ನನ್ನನ್ನು ದಂಗುಬಡಿಸಿದವು.
ನಮ್ಮ ತಿಳಿವನ್ನು ರೂಪಿಸಿದ್ದು ಅಂದಿನ ಕನ್ನಡ ವಿಶ್ವವಿದ್ಯಾನಿಲಯದ ವಿದ್ವತ್ಪೂರ್ಣ ಪರಿಸರ. ಇದೀಗ ಕಳೆದ 25 ವರ್ಷಗಳ ಜರ್ನಿಯನ್ನು ಹಿಂದಿರುಗಿ ನೋಡಿದರೆ ನೇತ್ರಾವತಿ ಬಾಳ ಸಂಗಾತಿ ಅಮರ್, ಮಕ್ಕಳು ಕುಟುಂಬವನ್ನು ನಿರ್ವಹಿಸುತ್ತಲೇ ಒಬ್ಬ ಸಂಶೋಧಕಿಯಾಗಿ, ಲೇಖಕಿಯಾಗಿ, ಕವಯಿತ್ರಿಯಾಗಿ, ರೇಖಾಚಿತ್ರ ಕಲಾವಿದೆಯಾಗಿ, ಪ್ರಾಧ್ಯಾಪಕಿಯಾಗಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವ ಅಬ್ಬರವೂ ಇಲ್ಲದೆ, ಪ್ರಚಾರದ ಹಪಾಹಪಿ ಇಲ್ಲದೆ ಸಾವಧಾನದಿಂದ ರೂಪುಗೊಂಡವರು. ಕನ್ನಡ ಸಾಹಿತ್ಯ ಪರಿಷತ್ತು 2026ರ ಶ್ರೀವಿಜಯ ಪ್ರಶಸ್ತಿಯನ್ನು ಘೋಷಿಸಿದಾಗ, ಆಯ್ಕೆಯಾದವರ ಪಟ್ಟಿಯಲ್ಲಿ ನೇತ್ರಾವತಿ ಇದ್ದುದು ನೋಡಿ ಇದೊಂದು ಒಳ್ಳೆಯ ಆಯ್ಕೆ ಅನ್ನಿಸಿತ್ತು.
ನೇತ್ರಾವತಿ ಎಂ.ಎ. ಓದುವಾಗಲೂ, ಸಂಶೋಧನೆ ಮಾಡುವಾಗಲೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಿತ ಮಾತು. ತಮ್ಮ ಪಾಡಿಗೆ ಓದು ಬರಹ ಮಾಡಿಕೊಂಡಿದ್ದವರು. ಹೊಸಪೇಟೆಯ ಡಾ.ಭಾಗ್ಯಲಕ್ಷ್ಮಿ ಅವರು ನಡೆಸುತ್ತಿದ್ದ ಸಖಿ ಎನ್.ಜಿ. ಸಂಪರ್ಕಕ್ಕೆ ಬಂದು ರಜಾ ಸಮಯವನ್ನು ಸಖಿ ಬಳಗದ ಜತೆ ಕಳೆಯತೊಡಗಿದರು. ಹೈದರಾಬಾದ್ ಕರ್ನಾಟಕದ ಮಹಿಳೆಯರ ಬಗ್ಗೆ ಕೆಲಸ ಮಾಡುತ್ತಿದ್ದ ‘ಸಖಿ’ ತಂಡದ ಚಟಿವಟಿಕೆಗಳಲ್ಲಿ ತೊಡಗಿಕೊಂಡರು. ಓದಿಗೆ ಆರ್ಥಿಕ ನೆರವೂ ಆಯಿತು. ಇದು ಅವರ ಓದು ಮಾತು ಆಲೋಚನೆಯನ್ನು ಒಂದಷ್ಟು ಚುರುಕಾಗಿಸಿತು. ಇನ್ನು 2002ರಿಂದ 2010ರ ಸಮಯದ ಕನ್ನಡ ವಿಶ್ವವಿದ್ಯಾನಿಲಯವು ಗಂಭೀರ ಸಂಶೋಧನೆ, ಸಂಶೋಧನಾತ್ಮಕ ಚರ್ಚೆ ಸಂವಾದಗಳಿಂದ ಗಿಜಿಗುಡುತ್ತಿತ್ತು. ಈ ಬಗೆಯ ಅಕಾಡಮಿಕ್ ವಾತಾವರಣ ನಮ್ಮನ್ನು ಸ್ವಂತಃ ಆಲೋಚಿಸುವಂತೆಯೂ ಬರೆಯುವಂತೆಯೂ ಪ್ರೇರೇಪಿಸಿತು. ಈ ಕಾಲಘಟ್ಟ ನಮ್ಮನ್ನು ಪ್ರಜ್ಞಾವಂತರನ್ನಾಗಿ ರೂಪಿಸಿತು.
ಇಂತಹ ಪರಿಸರದಲ್ಲಿ ರೂಪುಗೊಂಡ ಕೆ.ವಿ.ನೇತ್ರಾವತಿ ನಿಧಾನಕ್ಕೆ ತಣ್ಣನೆಯ ಪ್ರತಿರೋಧದ ದನಿಯಾಗಿ ಹೊರ ಹೊಮ್ಮಿದ್ದು ಅಚ್ಚರಿಯ ಸಂಗತಿ. ನಂತರದಲ್ಲಿ ಕೋಲಾರದ ದಲಿತ ಚಳವಳಿ, ಮಹಿಳಾ ಚಳವಳಿ ನೇತ್ರಾ ಅವರನ್ನು ಮತ್ತಷ್ಟು ಸಾಣೆ ಹಿಡಿದು ಮೊನಚಾಗಿಸಿವೆ. ಮಾಗಿಸಿದೆ. ಚಳವಳಿ, ಅಧ್ಯಾಪನ, ಬರಹ, ಮಾತುಕತೆ ಹೀಗೆ ನೇತ್ರಾವತಿ ಮೆಲುದನಿಯಲ್ಲಿಯೇ ತಣ್ಣಗೆ ತನ್ನ ನೋಟವನ್ನು ರಾಜಿಯಿಲ್ಲದೆ ಮಂಡಿಸುತ್ತಾರೆ. ಈಗಲೂ ದಲಿತ ಸಾಹಿತ್ಯದಲ್ಲಿ ಮಹಿಳಾ ದನಿ ವಿರಳವಾಗಿದೆ. ಕಲಿತು ಚಾಣಾಕ್ಷತನದಿಂದ ಮಾತನಾಡುವ ಕೆಲವರು ಸತ್ವವಿಲ್ಲದೆಯೂ ಅವಕಾಶಗಳಿಗಾಗಿ ಲಾಬಿ ಮಾಡುತ್ತಾ ಕೂತಿದ್ದಾರೆ. ಈ ವಿಷಯದಲ್ಲಿ ನೇತ್ರಾ ಯಾವುದೇ ಪ್ರಶಸ್ತಿ, ಪುರಸ್ಕಾರ, ಆಯ್ಕೆಗಳ ಚೌಕಟ್ಟುಗಳಿಂದ ಹೊರಗಿದ್ದಾರೆ. ಇದೀಗ ಈ ಎಲ್ಲಾ ಹೆಜ್ಜೆ ಗುರುತುಗಳನ್ನು ಅವರು ಹೊರ ತಂದ ‘ಜೀವನಾವೆ’ ಕವನ ಸಂಕಲನ ದೃಢವಾಗಿ ಕಾಣಿಸುತ್ತಿದೆ. ಕನ್ನಡದ ದಲಿತ ಕಾವ್ಯಕ್ಕೆ ‘ಜೀವನಾವೆ’ಯ ಕವಿತೆಗಳು ಹೊಸ ನುಡಿಗಟ್ಟನ್ನು ಕೊಡುತ್ತಿವೆ. ಆಳದ ನೋವನ್ನು, ಅಪಮಾನವನ್ನು ತಣ್ಣಗೆ ದಾಟಿಸುತ್ತಾರೆ. ಎಲ್ಲರೂ ಓದಿ ಚರ್ಚಿಸಬಹದಾದಷ್ಟು ಅನುಭವ, ಅರಿವು, ತಾಯ್ತನ ಮಡುಗಟ್ಟಿದ ಕವಿತೆಗಳಿವು.
ಬಾಲ್ಯದಲ್ಲಿ ಅಜ್ಜ ಹಲಗೆ ಹೊಡೆಯೋಕೆ ಹೋಗಬಾರದು, ನಮ್ಮ ಮನೇಲಿ ತಮಟೆ ಇಡಬಾರದು ಎಂದು ಜಗಳ ಆಡಿದ್ದನ್ನು ನೆನೆಯುತ್ತಾ, ನಮಗೆ ನಮ್ಮದೇ ಬದುಕಿನ ಕ್ರಮಗಳ ಬಗ್ಗೆ ಅಸಹ್ಯ ಮೂಡಿಸುವಂತೆ ಮಾಡಿದ ಜಾತಿವ್ಯವಸ್ಥೆಯ ಕುತಂತ್ರಗಳ ಬಗ್ಗೆ ತಣ್ಣಗೆ ದನಿ ಎತ್ತುತ್ತಾರೆ. ಒಂದು ಸಮುದಾಯ ತನಗೆ ತಾನೇ ಕಟ್ಟಿಕೊಂಡ ಕತೆಗಳು ಮತ್ತು ಇತರ ಸಮುದಾಯಗಳು ದಲಿತರ ಬಗ್ಗೆ ಕಟ್ಟಿದ ಪೂರ್ವಾಗ್ರಹಗಳ ಕಥೆಗಳ ಬಗ್ಗೆ ಮಾತನಾಡುತ್ತಾರೆ.
ದಲಿತ ಸಂಘರ್ಷ ಸಮಿತಿಯ ಅಂತರಾಳದ ತಾತ್ವಿಕತೆಯನ್ನು ನೇತ್ರಾ ಅವರು ಬಹಳ ಸೂಕ್ಷ್ಮವಾಗಿ ಗುರುತಿಸುತ್ತಾರೆ. ‘ದಸಂಸ ಕಟ್ಟಿದವರು ಕೂಲಿ ಮಾಡುವ ದಲಿತ ಹೆಣ್ಣುಮಕ್ಕಳ ಮಕ್ಕಳು. ಅವಳ ಸಂಕಟ ಅವಳ ನೋವು ಗೊತ್ತಿತ್ತು. ಅಂತಹ ತಾಯಂದಿರ ಮಕ್ಕಳಾದುದರಿಂದಲೇ ದಸಂಸದ ಕಾರ್ಯಕರ್ತರು ಸಾಮಾಜಿಕ ಸಮಸ್ಯೆಗಳಿಗೆ ಇಷ್ಟು ತೀಕ್ಷ್ಣವಾಗಿ ಸ್ಪಂದಿಸಲು ಸಾಧ್ಯವಾಯಿತು. ಹಾಗಾಗಿಯೇ ದಲಿತ ಚಳವಳಿಗೆ ತಾಯ್ತನದ ಕಣ್ಣೋಟ ಸಾಧ್ಯವಾಯಿತು’ ಎನ್ನುತ್ತಾರೆ. ಹೀಗೆ ಇಡೀ ದಲಿತ ಚಳವಳಿಯನ್ನು ಹೆಣ್ಣಿನ ಕಣ್ಣೋಟದಿಂದ ತೀಕ್ಷ್ಣವಾಗಿ ವಿಮರ್ಶೆಗೆ ಒಡ್ಡಿರುವುದು ನೇತ್ರಾ ಅವರ ಚಳವಳಿಯ ಬಗೆಗಿರುವ ಸ್ಪಷ್ಟತೆಯನ್ನು ತೋರುತ್ತದೆ. ಮಹಿಳಾ ಕಣ್ಣೋಟದಿಂದ ದಲಿತ ಚಳವಳಿಯ ಪುರುಷಾಧಿಪತ್ಯವನ್ನು ತೀವ್ರವಾಗಿ ಟೀಕೆ ಮಾಡಿದಂತೆಯೇ, ಮಹಿಳಾ ಹೋರಾಟವನ್ನು ಕೂಡ ದಲಿತ ಮಹಿಳೆಯನ್ನು ಒಳಗೊಳ್ಳದ ಗೈರುಹಾಜರಿಯ ಬಗ್ಗೆಯೂ ಕೂಡ ಟೀಕಿಸುತ್ತಾರೆ. ಇದು ನೇತ್ರಾವತಿ ಅವರ ತಿಳಿವಿನ ಸ್ಪಷ್ಟತೆಯನ್ನು ಮನಗಾಣಿಸುತ್ತದೆ.
ನೇತ್ರಾ ಅವರು ತಮ್ಮ ಪಿಎಚ್.ಡಿ ಸಂಶೋಧನೆಯ ಕೃತಿ ‘ದಲಿತ ಮಹಿಳಾ ಸಂಕಥನ’ ಕೃತಿಯಲ್ಲಿ ದಲಿತ ಮತ್ತು ಮಹಿಳಾ ಚಳವಳಿಯನ್ನು ವಿಮರ್ಶೆಗೆ ಒಡ್ಡುತ್ತಾರೆ. ‘ದಲಿತ ಸಂಘಟನೆಗಳು ಪುರುಷಾಧಿಪತ್ಯವನ್ನು ಒರೆಗೆ ಹಚ್ಚಲಿಲ್ಲ. ದಲಿತ ಮಹಿಳೆಯರ ಬಿಡುಗಡೆ ನಮ್ಮಿಂದಲೇ ಆಗುತ್ತದೆ ಎಂಬ ಭ್ರಮೆ ಅವರಿಗಿತ್ತು. ಸಮಾಜದಲ್ಲಿ ಹೆಣ್ಣಿಗೆ ಹಾಕಿರುವ ಸೀಮಾರೇಖೆಯ ಬಗ್ಗೆ ಚಿಂತಿಸಲು, ಮಹಿಳೆಯರ ಅಭಿಪ್ರಾಯವನ್ನು ತಿಳಿದುಕೊಂಡು ತಮ್ಮ ತಿಳಿವಳಿಕೆಯನ್ನು ತಿದ್ದಿಕೊಳ್ಳಲು ದಲಿತ ಪುರುಷರು ತಯಾರಿರಲಿಲ್ಲ. ಇಡೀ ಚಳವಳಿಯಲ್ಲಿ ಜಾತಿ ನ್ಯಾಯ ಇತ್ತೇ ಹೊರತು ಲಿಂಗ ನ್ಯಾಯವಿರಲಿಲ್ಲ. ಜಾತಿಯ ಹಿನ್ನೆಲೆಯಿಂದಲೇ ಪುರುಷ, ಮಹಿಳೆ ಇಬ್ಬರೂ ಒಂದೇ ಎಂದು ತಿಳಿದದ್ದು ದಲಿತ ಚಳವಳಿಯ ಮುಖ್ಯ ತೊಡುಕುಗಳಲ್ಲಿ ಒಂದು. ಇದು ಚಳುವಳಿಯ ಆಶಯಕ್ಕೆ ವ್ಯತಿರಿಕ್ತವಾಗಿದ್ದು ಇದರ ಬಗ್ಗೆ ದಲಿತ ಚಳವಳಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ’ ಎನ್ನುತ್ತಾರೆ.
ಇದೇ ಸಂಶೋಧನೆಯಲ್ಲಿ ನೇತ್ರಾವತಿ ಮಹಿಳಾ ಚಳವಳಿಯನ್ನು ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ. ‘ಮಹಿಳಾ ಚಳವಳಿಯೂ ಕೂಡ ದಲಿತ ಮಹಿಳೆಯನ್ನು ಮುಖ್ಯವೆಂದು ಪರಿಗಣಿಸಲಿಲ್ಲ. ದಲಿತ ಚಳವಳಿಯು ಜಾತಿಯ ಹಿನ್ನೆಲೆಯಿಂದ ಪುರುಷ ಮತ್ತು ಮಹಿಳೆಯರ ಸಮಸ್ಯೆಗಳನ್ನು ಸಾರ್ವತ್ರೀಕರಿಸಿದಂತೆ ಮಹಿಳಾ ಚಳವಳಿಯು ಲಿಂಗದ ಹಿನ್ನೆಲೆಯಿಂದ ಮೇಲ್ವಾತಿಯ ಮಹಿಳೆ, ಕೆಳಜಾತಿಯ ಮಹಿಳೆಯರ ಸಮಸ್ಯೆಗಳನ್ನು ಸಾರ್ವತ್ರೀಕರಿಸಿದ್ದು ಮಹಿಳಾ ಚಳವಳಿಯ ಮುಖ್ಯ ತೊಡಕು’ ಎನ್ನುತ್ತಾರೆ. ಮುಂದುವರಿದು, ‘ಮಹಿಳಾ ಚಳವಳಿಯು ದಲಿತ ಮಹಿಳೆಯನ್ನೂ ಪರಿಗಣಿಸಲಾಗುತ್ತಿದೆ ಎಂದು ಹೇಳಲಾಗುತ್ತದೆ, ಆದರೆ ಚಳವಳಿಯ ಮುಖ್ಯ ಪಾತ್ರದಲ್ಲಿರುವವರು, ನಿರ್ಣಯಗಳನ್ನು ತೆಗೆದುಕೊಳ್ಳುವವರು ಮೇಲ್ಜಾತಿ ಮಹಿಳೆಯರೇ ಆಗಿದ್ದಾರೆ. ಇಲ್ಲಿ ದಲಿತ ಮಹಿಳೆಗೆ ಯಾವುದೇ ಅವಕಾಶಗಳಿಲ್ಲ. ದಲಿತ ಮಹಿಳೆಯರು ಜಾತಿಯ ಕಾರಣಕ್ಕಾಗಿ ದಲಿತ ವರ್ಗದ ಕಕ್ಷೆಯಲ್ಲಿ ಸೇರಿಸಿಕೊಳ್ಳುವ ಬದಲು, ಲಿಂಗದ ಕಾರಣದ ಹಿನ್ನೆಲೆಯಿಂದ ಮಹಿಳಾ ಚಳವಳಿಯನ್ನು ಸೇರಿಕೊಳ್ಳುವುದು ಸೂಕ್ತ ಎಂಬ ಆಶಯವಿದೆ. ಮಹಿಳಾ ಚಳವಳಿಯು ಪುರುಷಾಧಿಪತ್ಯವನ್ನು ವಿಮರ್ಶೆ ಮಾಡಿದ ಹಾಗೆ ಬ್ರಾಹ್ಮಣಶಾಹಿಯನ್ನು ವಿಮರ್ಶೆಗೆ ಒಳಪಡಿಸುವುದಿಲ್ಲ’ ಎನ್ನುತ್ತಾರೆ.
ದಲಿತ ಮೌಖಿಕ ಆತ್ಮಕಥೆಗಳ ಕುರಿತು ಪೋಸ್ಟ್ ಡಾಕ್ಟರಲ್ ಫೆಲೋ ಆಗಿ 2014ರಿಂದ 2019ರ ತನಕ ಸಂಶೋಧನೆ ಜತೆ ಅಧ್ಯಾಪನವನ್ನೂ ಮಾಡಿದ್ದಾರೆ. ಯಾವ ಶಾಸ್ತ್ರೀಯ ಕಲಿಕೆ ಇಲ್ಲದೆ ತೋಚಿದಂತೆ ಗೆರೆ ಎಳೆಯುತ್ತಾ, ಇದೀಗ ನೇತ್ರ ಅವರದ್ದೇ ಆದ ಗೆರೆಯ ಶೈಲಿಯ ಗುರುತೊಂದನ್ನು ಮೂಡಿಸಿದ್ದಾರೆ. ತನ್ನ ಕವಿತೆಗಳ ಕಟ್ಟು ‘ಜೀವ ನಾವೆ’ಗೆ ರೇಖಾಚಿತ್ರ ಬರೆದಿದ್ದಾರೆ. ಈ ರೇಖಾಚಿತ್ರಗಳನ್ನು ಗಮನಿಸಿದರೆ, ನೇತ್ರ ಅಕ್ಷರಗಳಲ್ಲಿ ಹೇಳಲಾಗದ್ದನ್ನು ಗೆರೆಗಳ ಮೂಲಕ ಹೇಳಿದಂತೆ ಕಾಣುತ್ತದೆ. ಹಾಗಾಗಿ ಇಲ್ಲಿ ಈ ಗೆರೆಗಳೂ ಕೂಡ ನೋವಿನಲ್ಲಿ ಅದ್ದಿತೆಗೆದ ಅಪಮಾನದ ಗುರುತುಗಳಾಗಿವೆ. ನೇತ್ರಾ ಹಲವು ಕಮ್ಮಟಗಳ ನಿರ್ದೇಶಕರಾಗಿ, ಹಲವು ಸಂಘಟನೆಗಳ ಸಹಭಾಗಿಯಾಗಿ, ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವಿದ್ವಾಂಸೆಯಾಗಿ ಕೆಲಸ ಮಾಡಿದ್ದಾರೆ. ನೇತ್ರಾವತಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗ ಹೊರ ತರುತ್ತಿದ್ದ ಜಾನಪದ ಕರ್ನಾಟಕ ಸಂಶೋಧನಾ ಪತ್ರಿಕೆಯಲ್ಲಿಯೇ ಆರಂಭಿಕ ಬರವಣಿಗೆಯನ್ನು ಆರಂಭಿಸಿದರು. ಮುಂದೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಪ್ರಕಟಿಸಿದ ಮಹಿಳಾ ಸಾಂಸ್ಕೃತಿಕ ಕೋಶದ ‘ಆಹಾರ ಸಂಪುಟ’, ‘ಪಶು ಸಂಗೋಪನೆ ಸಂಪುಟ’ಕ್ಕೆ ದೀರ್ಘವಾಗಿ ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿಯ ಸಾಬಲ್ಟ್ರನ್ ಓದು ಸಂಪುಟಗಳಿಗೆ ಬರೆದಿದ್ದಾರೆ.
ಹೊಸಪೇಟೆಯ ಸಖಿ ಎನ್.ಜಿ.ಒ ನಡೆಸುವ ಸಖಿ ಪತ್ರಿಕೆಯ ಸಂಪಾದಕರಾಗಿಯೂ 2004 ರಿಂದ 2007 ರ ತನಕ ಕೆಲಸ ಮಾಡಿದ್ದಾರೆ. ಕರ್ನಾಟಕ ಮಹಿಳಾ ದೌರ್ಜನ್ಯವಿರೋಧಿ ಒಕ್ಕೂಟ ವೇದಿಕೆಯಲ್ಲಿ 2012 ರಿಂದಲೂ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. 2021 ರಲ್ಲಿ ಕೋಲಾರದಲ್ಲಿ ನಡೆದ ವೇದಿಕೆಯ ಸಮಾವೇಶದ ಜವಾಬ್ದಾರಿಯನ್ನೂ ನೇತ್ರ ನಿರ್ವಹಿಸಿದ್ದಾರೆ. ಕೋಲಾರದಲ್ಲಿ ಓದುಗ ಕೇಳುಗ ನಮ್ಮ ಬಳಗದ ಮೂಲಕ ಓದುವ ಅಭಿರುಚಿ ಮೂಡಿಸುತ್ತಿರುವ ಮನಸ್ಸುಗಳ ಜತೆ ನೇತ್ರಾವತಿ ಇದ್ದಾರೆ. ಈ ವೇದಿಕೆಯ ಮೂಲಕ ಕನ್ನಡದ ಮಹತ್ವದ ಕೃತಿಗಳನ್ನು ಕುರಿತ ಓದು-ಸಂವಾದ ಏರ್ಪಡಿಸಿ ಅರಿವಿನ ವಿಸ್ತರಣೆಯ ಕೆಲಸದಲ್ಲೂ ತೊಡಗಿದ್ದಾರೆ. ಕೆ.ರಾಮಯ್ಯ ಸ್ಥಾಪಿಸಿದ ಆದಿಮದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ನೇತ್ರ ಅವರು ಸಕ್ರಿಯವಾಗಿದ್ದಾರೆ. ಇದೀಗ ಕೆ.ರಾಮಯ್ಯ ಅವರ ಬುಡ್ಡಿದೀಪ ಲಿವಿಂಗ್ ಟೈಮ್ಸ್ ಪ್ರಯೋಗಗಳ ಜತೆಗೂ ಇದ್ದಾರೆ. ಪೌರ ಕಾರ್ಮಿಕರ ಸಮಾಜಿಕ, ಸಾಂಸ್ಕೃತಿಕ ಬದುಕಿನೊಂದಿಗಿನ ಪಯಣದ ನೀರದಾರಿ ವೆಬ್ ಪೇಜನ್ನು ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಮಂಗಸಂದ್ರ ಆವರಣದಲ್ಲಿ ಕನ್ನಡ ವಿಭಾಗದಲ್ಲಿ ಅರೆಕಾಲಿಕ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ನೇತ್ರಾವತಿ ಅವರು ಸಾವಧಾನದ ಬೆನ್ನೇರಿದ ತಣ್ಣನೆಯ ಪ್ರತಿರೋಧವಾಗಿ ಕಾಣುತ್ತಿದ್ದಾರೆ.
(ಅಂಕಣಕಾರರು ಕಲಬುರಗಿಯ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾನಿಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ)






