ಅಂಬೇಡ್ಕರ್ ಕನಸಿನ ‘ಸಂವಿಧಾನದ ನೈತಿಕತೆ’

ಅಂಬೇಡ್ಕರ್ ಕನಸಿನ ಸಾಂವಿಧಾನಿಕ ನೈತಿಕತೆ ಎಂದರೆ, ಭಾರತದ ಸಂವಿಧಾನ ಪ್ರಸ್ತಾವನೆಯಲ್ಲಿ ನಮಗೆ ನಾವೇ ಅರ್ಪಿಸಿಕೊಂಡ ತತ್ವಗಳನ್ನು ನಮ್ಮ ವೈಯಕ್ತಿಕ ಬದುಕಿನಲ್ಲಿ ಕಟ್ಟುನಿಟ್ಟಾಗಿ ಪಾಲಿಸುವುದೇ ಆಗಿದೆ. ಆದರೆ ಸದ್ಯದ ಭಾರತದ ನಡೆ ಸಾಂವಿಧಾನಿಕ ನೈತಿಕತೆಯನ್ನು ಮಣ್ಣುಮಾಡಿ ಮುಂದೆ ಸಾಗುತ್ತಿದೆ. ಸಮಾನತೆಯ ಎದುರು ಕಣ್ಣಿಗೆ ರಾಚುವಷ್ಟು ಅಸಮಾನತೆ ಹೆಚ್ಚಾಗುತ್ತಿದೆ. ಸಾಮಾಜಿಕ ನ್ಯಾಯದ ಬದಲಿಗೆ ಅನ್ಯಾಯವೇ ಮೆರೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ವಾಧಿಕಾರ ತಲೆದೋರುತ್ತಿದೆ. ರಾಜಶಾಹಿಯ ವಂಶಾಡಳಿತ ಪ್ರಜಾಪ್ರಭುತ್ವದಲ್ಲೂ ಬೇರುಬಿಡುತ್ತಿದೆ.
ದೇಶದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತಂತೆ ದೇಶದ ಒಳಗೂ-ಹೊರಗೂ ಜಾಗತಿಕವಾಗಿಯೂ ಹಲವು ಬಗೆಯ ಚರ್ಚೆ ಸಂವಾದ ವಾಗ್ವಾದಗಳು ನಡೆಯುತ್ತಿವೆ. ಅಂಬೇಡ್ಕರ್ ಆರಂಭಿಸಿದ ಮಹಾಡ್ ಸತ್ಯಾಗ್ರಹದಲ್ಲಿ ಮನುಧರ್ಮಶಾಸ್ತ್ರವನ್ನು ಸುಟ್ಟ ಪ್ರತಿರೋಧಕ್ಕೆ ನೂರು ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಮರಾಠಿ ಲೇಖಕ ಅಂಕಿತ್ ಕವಾಡೆ ಅವರು ನಡೆಸಿದ ‘ಮನುಧರ್ಮಶಾಸ್ತ್ರ’ ಕುರಿತಂತೆ ಫ್ರೆಡರಿಕ್ ನೀತ್ಸೆ ಮತ್ತು ಅಂಬೇಡ್ಕರ್ ಚಿಂತನೆಗಳ ತೌಲನಿಕ ಅಧ್ಯಯನ ಗಮನಸೆಳೆಯುತ್ತಿದೆ. ಅಂತೆಯೇ ಚಿಂತಕ ವಲೇರಿಯನ್ ರೋಡ್ರಿಗಸ್ ಅವರ ‘ಅಂಬೇಡ್ಕರ್ಸ್ ಪೊಲಿಟಿಕಲ್ ಪಿಲಾಸಫಿ’ ಪುಸ್ತಕ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಈ ಹೊತ್ತಲ್ಲಿ ನಾವು ಅಗತ್ಯವಾಗಿ ಅಂಬೇಡ್ಕರ್ ಅವರ ಉಸಿರಾಗಿದ್ದ ‘ಸಂವಿಧಾನದ ನೈತಿಕತೆ’ ಕುರಿತು ಚರ್ಚಿಸಬೇಕಿದೆ.
ಅಂಬೇಡ್ಕರ್ ಅವರ ಚಿಂತನೆಯಲ್ಲಿ ಹಾಸುಹೊಕ್ಕಾಗಿ ನೇಯ್ದಿರುವ ಮುಖ್ಯ ಎಳೆ ‘ನೈತಿಕ ಪ್ರಜ್ಞೆ’ಯಾಗಿದೆ. ಲ್ಯಾಟಿನ್ ಭಾಷೆಯ ಮೊರಾಲಿಸ್‌ನಿಂದ ಬಂದ ನೈತಿಕತೆ ಎಂದರೆ ಮನುಷ್ಯರ ನಡವಳಿಕೆಗಳನ್ನು ಕೇಂದ್ರೀಕರಿಸುತ್ತದೆ. ಒಂದು ಸಮಾಜ ಅಥವಾ ಸಂಸ್ಕೃತಿಯು ಅಳವಡಿಸಿಕೊಂಡ ಮೌಲ್ಯಗಳ ಅಸ್ತಿತ್ವದ ಬಗೆಗಿನ ನೀತಿಶಾಸ್ತ್ರವಾಗಿದೆ. ಜಗದ ಚರಾಚರ ಜೀವಿಗಳಿಗೆ ಒಳಿತಾಗುವ, ಯಾವುದೇ ಭೇದವಿಲ್ಲದ, ಎಲ್ಲರನ್ನೂ ಸಮತೆಯಿಂದ ಕಾಣುವ, ಕರುಣೆ, ಮೈತ್ರಿ, ಸಹೋದರ ಭಾವದಿಂದ ಎಲ್ಲರೊಳಗೂ ಒಳಿತನ್ನೇ ನೆಲೆಗೊಳಿಸುವ ತರ್ಕ ವಾಸ್ತವ ಜ್ಞಾನ ಮತ್ತು ಸತ್ಯದ ನಡಾವಳಿಕೆಯನ್ನು ಬಾಬಾ ಸಾಹೇಬರು ‘ನೈತಿಕತೆ’ ಎಂದು ಗುರುತಿಸುತ್ತಾರೆ.
ಅಮೆರಿಕದ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯ ದಲ್ಲಿ 1916ರ ಮೇ 9ರಂದು ನಡೆದ ಡಾ.ಎ.ಎ. ಗೋಲ್ಡನ್ ವೀಜರ್ ಸಂಸ್ಮರಣಾರ್ಥ ಆಯೋಜನೆಗೊಂಡ, ಮಾನವಕುಲಶಾಸ್ತ್ರದ ವಿಚಾರ ಸಂಕಿರಣದಲ್ಲಿ ಅಂಬೇಡ್ಕರ್ ಅವರು ಮಂಡಿಸಿದ ‘ಭಾರತದಲ್ಲಿ ಜಾತಿಗಳು: ಅವುಗಳ ರಚನಾಕ್ರಮ, ಉತ್ಪತ್ತಿ ಹಾಗೂ ವಿಕಾಸ’ ಪ್ರಬಂಧದಲ್ಲಿ ನಿರ್ದಿಷ್ಟವಾಗಿ ನೈತಿಕತೆಯ ಚರ್ಚೆಯನ್ನು ಆರಂಭಿಸುತ್ತಾರೆ. ‘ಜಾತಿಯಿಂದಾಗಿ ಹಿಂದೂಗಳ ನೈತಿಕತೆ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಜಾತಿ ಸಾರ್ವಜನಿಕ ಭಾವನೆಯನ್ನು ನಾಶಗೊಳಿಸಿ, ಹೃದಯ ವೈಶಾಲ್ಯವನ್ನು ಹಾಳುಮಾಡಿದೆ; ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮಾಡಿದೆ. ಹಿಂದೂವಿನ ಸಮಾಜ ಹಾಗೂ ಹೊಣೆಗಾರಿಕೆ ಅವನ ಜಾತಿಗೆ ಸೀಮಿತವಾದುದು. ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ. ಸದ್ಗುಣ ಹಾಗೂ ನೀತಿ ಎರಡೂ ಜಾತೀಯತೆಯ ಮುಷ್ಟಿಯಲ್ಲಿ ಸಿಕ್ಕಿಕೊಂಡಿದೆ (ಸಂ:1-ಪು:68) ಎನ್ನುತ್ತಾರೆ. ಹಿಂದೂ ಧರ್ಮವನ್ನು ಟೀಕಿಸಲು ಆರಂಭಿಸುವುದೇ ಅದರ ನೈತಿಕವಲ್ಲದ ನಡಾವಳಿಕೆಗಳಿಂದ.
ಮುಂದುವರಿದು 1921ರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಚರ್ಚಿಸುವಾಗಲೂ ಬ್ರಿಟಿಷ್ ಆಡಳಿತ ಕೂಡ ನೈತಿಕತೆಯಿಂದ ಕೂಡಿರಲಿಲ್ಲ 17-18ನೇ ಶತಮಾನದ ಆಂಗ್ಲರ ಅನೈತಿಕತೆಯು ಕ್ರಿಶ್ಚಿಯನ್ ಧರ್ಮಕ್ಕೆ ಕೆಟ್ಟಹೆಸರು ತಂದಿತು (4/444) ಎಂದು ಅಂಬೇಡ್ಕರ್ ವಿಶ್ಲೇಷಿಸುತ್ತಾರೆ. ಅಂದರೆ ಕ್ರಿಶ್ಚಿಯನ್ ಧರ್ಮದಲ್ಲಿ ನೈತಿಕ ಪ್ರಜ್ಞೆ ಇದ್ದರೂ ಅದನ್ನವರು ಪಾಲಿಸುತ್ತಿಲ್ಲ. ಇನ್ನು ಹಿಂದೂ ಧರ್ಮದ ಒಳಗಡೆಯೇ ನೈತಿಕತೆ ಇಲ್ಲ ಎಂದು ಎರಡೂ ಧರ್ಮಗಳನ್ನು ಪ್ರತ್ಯೇಕಿಸಿ ಚರ್ಚಿಸುತ್ತಾರೆ.
ಹೀಗೆ ಹಿಂದೂ ಧರ್ಮದ ಅನೈತಿಕತೆಯನ್ನು ಟೀಕಿಸುತ್ತಲೇ ಏಕಕಾಲಕ್ಕೆ ಬ್ರಿಟಿಷ್ ಸಮುದಾಯದ ಅನೈತಿಕತೆಯನ್ನೂ ಪ್ರಶ್ನಿಸು ತ್ತಾರೆ. 1924ರಲ್ಲಿ ‘ಬಹಿಷ್ಕೃತ ಹಿತಕಾರಿಣಿ ಸಭಾ’ವನ್ನು ಸ್ಥಾಪಿಸಿ ದಾಗ ದಲಿತರಲ್ಲಿ ನೈತಿಕ ಪ್ರಜ್ಞೆ ಬೆಳೆಯಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳುತ್ತಾರೆ. 1936ರ ‘ಜಾತಿ ವಿನಾಶ’ ಕೃತಿಯಲ್ಲಿ ‘ಜಾತಿವ್ಯವಸ್ಥೆಯು ಅನೈತಿಕತೆಯಿಂದ ಕೂಡಿದೆ, ಜಾತಿ ವಿನಾಶ ಆಗಬೇಕಾದರೆ ಸಮಾಜದಲ್ಲಿ ನೈತಿಕತೆ ನೆಲೆಗೊಳ್ಳಬೇಕು’ ಎನ್ನುತ್ತಾರೆ. ‘ಮನುಷ್ಯ ನೊಳಗೆ ಎಷ್ಟು ನೈತಿಕತೆ ಅಧಿಕವಾಗಿರುತ್ತದೆಯೋ ಅಷ್ಟು ಆತನಲ್ಲಿ ಆತ್ಮವಿಶ್ವಾಸ ತುಂಬುತ್ತ ಹೋಗುತ್ತದೆ. ಸೋಲಿನಲ್ಲೂ ಆತನಿಗೆ ಕೊನೆಗೆ ಗೌರವದ ಯಶಸ್ಸು ದೊರೆಯುತ್ತದೆ’ (19/532) ಎನ್ನುತ್ತಾರೆ.
ಅಂಬೇಡ್ಕರ್ ಅವರ ಪುಟ್ಟ ಸಂವಿಧಾನ ಎಂದು ಗುರುತಿಸುವ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಕೃತಿಯು ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟದ ಪರವಾಗಿ ಪರಿಶಿಷ್ಟ ಜಾತಿಗಳ ರಕ್ಷಣೆ ಕೋರಿ ರಾಜ್ಯಾಂಗ ರಚನಾ ಸಭೆಗೆ 1947ರಲ್ಲಿ ಅರ್ಪಿಸಿದ ಮನವಿಯಾಗಿತ್ತು. ‘ಸಾರ್ವಜನಿಕ ಶಿಸ್ತು ಮತ್ತು ನೈತಿಕತೆಯ ಸಾಮರಸ್ಯದೊಡನೆ ಎಲ್ಲರಿಗೂ ಬಹಿರಂಗವಾದ ಆಚರಣೆ ಮತಬೋಧನೆ ಮತ್ತು ಮತಾಂತರವೂ ಸೇರಿದಂತೆ ಧರ್ಮವನ್ನು ಮುಕ್ತವಾಗಿ ಅನುಸರಿಸಲು ಮತ್ತು ಆತ್ಮಸಾಕ್ಷಿಗನುಗುಣವಾಗಿ ಬದುಕಲು ಸರಕಾರ ರಕ್ಷಣೆ ಕೊಡಬೇಕು’ (1-447) ಎಂದು ಕೋರುತ್ತಾರೆ.
ಅಂಬೇಡ್ಕರ್ ಬಡತನಕ್ಕೂ ನೈತಿಕತೆಗೂ ಇರುವ ಸಂಬಂಧವನ್ನು ಚರ್ಚಿಸುತ್ತಾರೆ. ‘ಬಡತನವೇ ಅನೈತಿಕತೆಗೆ ಮೂಲ ಕಾರಣ ಆಗಬಲ್ಲದು ಎನ್ನುತ್ತಾರೆ. ಅನಾಗರಿಕ ಸಮಾಜದಲ್ಲಿ ಧರ್ಮಕ್ಕೂ ನೈತಿಕತೆಗೂ ಸಂಬಧವಿರುವುದಿಲ್ಲ. ಹಾಗಾಗಿಯೇ ಅನೈತಿಕತೆ ಹೆಚ್ಚಾಗಿರುತ್ತದೆ. ನೀತಿಯು ಧರ್ಮದಿಂದ ಸ್ವಾತಂತ್ರ್ಯವಾಗಿದೆ. ಎಂದು ಹೇಳುತ್ತಾ, ‘ಹಿಂದೂ ಧರ್ಮದ ತತ್ವಜ್ಞಾನ’ದ ಬಗ್ಗೆ ಬರೆಯುತ್ತಾ ‘ಋಗ್ವೇದದಲ್ಲಿ ನೈತಿಕತೆಯ ಬಗ್ಗೆ ಚರ್ಚೆಯೇ ಇಲ್ಲ’ ಎಂದು ವಿಶ್ಲೇಷಿಸುತ್ತಾರೆ.
ಹಿಂದೂ ಧರ್ಮದಲ್ಲಿ ನೈತಿಕತೆ ಇಲ್ಲ ಎನ್ನುವ ಕಾರಣಕ್ಕೆ 1935ರಲ್ಲಿ ನಾಸಿಕ್ ಸಮೀಪದ ಯಹೋಲದಲ್ಲಿ ‘‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯುವುದಿಲ್ಲ’’ ಎಂದು ಘೋಷಿಸುತ್ತಾರೆ. ಮುಂದುವರಿದು ಯಾವ ಧರ್ಮಕ್ಕೆ ಮತಾಂತರವಾಗಬೇಕು ಎಂದು ಜಗತ್ತಿನ ಎಲ್ಲಾ ಧರ್ಮಗಳನ್ನು, ಜನಸಮುದಾಯಗಳ ಸಣ್ಣಪುಟ್ಟ ಆಧ್ಯಾತ್ಮಿಕ ಪಂಥಗಳನ್ನು ಅಧ್ಯಯನ ಮಾಡುತ್ತಾರೆ. ಆಗಲೂ ಕೂಡ ಆಯಾ ಧರ್ಮಗಳನ್ನು ನೈತಿಕ ಪ್ರಜ್ಞೆಯ ಮೂಲಕ ಪರೀಕ್ಷಿಸುತ್ತಾರೆ. ಈ ಪರೀಕ್ಷೆಯಲ್ಲಿ ಬೌದ್ಧ ದಮ್ಮ ಮುನ್ನೆಲೆಗೆ ಬರುತ್ತದೆ. ಸ್ವತಃ ಅಂಬೇಡ್ಕರ್ ಅವರು ‘ಬುದ್ಧ ಮತ್ತು ಆತನ ದಮ್ಮ’ ಕೃತಿಯಲ್ಲಿ ‘ಬುದ್ಧ ದಮ್ಮ ನೈತಿಕತೆಗೆ ದೇವರ ಸ್ಥಾನ ಕೊಟ್ಟಿದೆ, ದಮ್ಮವೇ ನೈತಿಕತೆ, ನೈತಿಕತೆಯೇ ದಮ್ಮ, ದಮ್ಮದ ಸಾರವೇ ನೈತಿಕತೆ, ನೈತಿಕತೆಯನ್ನು ಮತವೊಂದರ ತಳಹದಿಯನ್ನಾಗಿ, ತಿರುಳನ್ನಾಗಿ ಮಾಡಿದ ಧರ್ಮಬೋಧಕರಲ್ಲಿ ಬುದ್ಧನೇ ಮೊದಲಿಗನು’ ಎನ್ನುತ್ತಾರೆ.
‘ಧರ್ಮವು ನೈತಿಕ ಸಂಹಿತೆಯನ್ನು ಹೊಂದಿದ್ದರಷ್ಟೇ ಸಾಲದು. ಆ ಸಂಹಿತೆಯು ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ಮಾನ್ಯಮಾಡಬೇಕು. ಮತಧರ್ಮವೊಂದು ಈ ಮೂರು ಮೂಲಭೂತ ತತ್ವಗಳನ್ನು ಅರಿತುಕೊಳ್ಳದಿದ್ದರೆ, ಅದು ಖಂಡಿತವಾಗಿಯೂ ವಿನಾಶದ ಹಾದಿಯನ್ನು ಹಿಡಿಯುತ್ತದೆ ಎನ್ನುವ ಬಲವಾದ ನಂಬಿಕೆಯಿಂದ ಬಾಬಾ ಸಾಹೇಬರು ಬುದ್ಧ ದಮ್ಮಕ್ಕೆ ಮತಾಂತರ ಹೊಂದುತ್ತಾರೆ. ಬಾಬಾ ಸಾಹೇಬರು ‘ಭ್ರಾತೃತ್ವ’ ಎಂದರೇನು ಎಂದು ವಿಶ್ಲೇಷಿಸುತ್ತಾ ‘ಮನುಷ್ಯ ಮನುಷ್ಯರ ನಡುವಣ ಸೋದರತ್ವಕ್ಕೆ ಅದು ಮತ್ತೊಂದು ಹೆಸರು, ಅಷ್ಟೇ ಅಲ್ಲ ಅದು ನೈತಿಕತೆ ಕೂಡ’ ಎನ್ನುತ್ತಾರೆ. ಅಂದರೆ ಭ್ರಾತೃತ್ವವನ್ನೂ ಕೂಡ ನೈತಿಕತೆಯ ಚೌಕಟ್ಟಿನಲ್ಲೇ ಗುರುತಿಸುತ್ತಾರೆ.
ಮಹಾತ್ಮಾ ಗಾಂಧಿಯವರ ಜತೆಗಿನ ಅವರ ಭಿನ್ನಾಭಿಪ್ರಾಯಕ್ಕೂ ‘ನೈತಿಕತೆ’ಗೂ ನಂಟಿದೆ. ಗಾಂಧಿಯನ್ನು ಟೀಕಿಸುತ್ತಾ, ‘ಗಾಂಧಿಯವರ ರಾಜಕೀಯವು ಟೊಳ್ಳು ಮತ್ತು ತೋರಿಕೆಯಿಂದ ಕೂಡಿದೆ. ಭಾರತದ ರಾಜಕೀಯ ಚರಿತ್ರೆಯಲ್ಲಿ ಇದೊಂದು ಅತ್ಯಂತ ಅಪ್ರಾಮಾಣಿಕ ರಾಜಕೀಯವಾಗಿದೆ. ರಾಜಕೀಯದಿಂದ ನೈತಿಕತೆಯನ್ನು ಹೊರಹಾಕಿ ಬದಲಿಗೆ ರಾಜಕೀಯದೊಳಕ್ಕೆ ವ್ಯಾಪಾರಿ ಮನೋಭಾವವನ್ನು ತಂದವರು ಗಾಂಧಿಯೇ, ಹಾಗಾಗಿಯೇ ನೈತಿಕ ದೃಷ್ಟಿಯಿಂದಲೂ ಅವರು ಮಹಾತ್ಮರಾಗಿರಲಿಲ್ಲ’ (17/383)ಎನ್ನುತ್ತಾರೆ.
ಬಾಬಾ ಸಾಹೇಬರು ರಮಾಬಾಯಿ ತೀರಿದ ನಂತರ 13 ವರ್ಷಗಳ ಕಾಲ ಒಂಟಿಯಾಗಿರುತ್ತಾರೆ. ಅನಾರೋಗ್ಯದ ಕಾರಣ ಚಿಕಿತ್ಸೆಯ ಸಂದರ್ಭದಲ್ಲಿ 1948ರಲ್ಲಿ ಡಾ. ಶಾರದಾ ಕಬೀರ್ ಅವರನ್ನು ಮದುವೆಯಾಗುತ್ತಾರೆ. ಈ ಸಂದರ್ಭದಲ್ಲಿ ಬಾಬಾ ಸಾಹೇಬರು ಶಾರದಾ ಅವರಿಗೆ ಬರೆದ ಖಾಸಗಿ ಪತ್ರಗಳಲ್ಲಿ ವೈಯಕ್ತಿಕ ನೆಲೆಯ ‘ನೈತಿಕತೆ’ಯ ಬಗ್ಗೆ ಹೆಚ್ಚು ಬರೆದಿದ್ದಾರೆ. ‘ನನ್ನ ನೈತಿಕತೆಯೇ ನನ್ನ ಶಕ್ತಿ, ಅದುವೇ ನನ್ನ ಆತ್ಮವಿಶ್ವಾಸವನ್ನು ದೃಢಗೊಳಿಸಿದೆ’ ಎನ್ನುತ್ತಾರೆ. ಅಂದರೆ ಬಾಬಾ ಸಾಹೇಬರು ವೈಯಕ್ತಿಕ ನಡೆಯಲ್ಲಿ ನೈತಿಕತೆಯನ್ನು ಆಚರಿಸುತ್ತಾ, ಅದನ್ನು ಸಂವಿಧಾನದಲ್ಲಿ ನೆಲೆಗೊಳಿಸುವ ಮೂಲಕ ಇಡೀ ದೇಶಕ್ಕೆ ವಿಸ್ತರಿಸುವ ಕನಸು ಕಾಣುತ್ತಾರೆ. ಇದು ವಚನಕಾರರ ‘ನಡೆ-ನುಡಿ’ ಒಂದಾಗಿರಬೇಕಾದ ತತ್ವವನ್ನು ನೆನಪಿಸುತ್ತದೆ.
ಗ್ರೀಕ್ ಇತಿಹಾಸಕಾರ ಗ್ರೋಟೆ (Grote) ಅವರ ‘ಸಮುದಾಯದಲ್ಲಿ ಸಾಂವಿಧಾನಿಕ ನೈತಿಕತೆಯ ಪ್ರಸರಣವು ಸ್ವತಂತ್ರವೂ ಶಾಂತಿಯುತವೂ ಆದ ಒಂದು ಸರಕಾರದ ಅನಿವಾರ್ಯ ಪರಿಸ್ಥಿತಿಯಾಗಿದೆ’ ಎನ್ನುವುದನ್ನು ಉಲ್ಲೇಖಿಸುತ್ತಾ, ಸಂವಿಧಾನದಲ್ಲಿ ನೈತಿಕತೆಯನ್ನು ನೆಲೆಗೊಳಿಸುವ ನೆಲೆಯಲ್ಲಿ ‘ಸಾರ್ವಜನಿಕ ನೈತಿಕತೆ’ಯನ್ನು ‘ಸಾಂವಿಧಾನಿಕ ನೈತಿಕತೆ’ಯನ್ನಾಗಿ ‘Constitutional Morality’ ಎಂಬ ಪದವನ್ನು ಬಹಳ ವಿಶಾಲಾರ್ಥದಲ್ಲಿ ನೆಲೆಗೊಳಿಸುತ್ತಾರೆ. ‘ಕೆಲವೊಮ್ಮೆ ಭಾರತದಲ್ಲಿನ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ನನಗೆ ನಿರಾಸೆಯಾಗುತ್ತದೆ. ಆದರೆ, ಸಾಂವಿಧಾನಿಕ ನೈತಿಕತೆಗೆ ನಾವೆಲ್ಲರೂ ಹೆಗಲುಕೊಟ್ಟರೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಉಳ್ಳ ಪಕ್ಷಗಳ ಪದ್ಧತಿಯನ್ನು ಜಾರಿಗೆ ತಂದರೆ ಯಶಸ್ವಿಯಾಗುತ್ತೇವೆ ಎಂಬ ಆಶಾವಾದವು ಮೊಳೆಯುತ್ತದೆ’ (18/91) ಎನ್ನುತ್ತಾರೆ.
ಪುಣೆಯ ಜಿಲ್ಲಾ ಕಾನೂನು ಗ್ರಂಥಾಲಯದಲ್ಲಿ 1952 ಡಿಸೆಂಬರ್ 22ರಂದು ಆಡಿದ ಮಾತುಗಳಲ್ಲಿ ಸಾಂವಿಧಾನಿಕ ನೈತಿಕತೆಯೇ ಪ್ರಜಾಪ್ರಭುತ್ವದ ಆಧಾರ ಸ್ತಂಭ, ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವುದೇ ‘ಸಾಂವಿಧಾನಿಕ ನೈತಿಕತೆ’ಯ ಮೇಲೆ. ನಮ್ಮ ಸಂವಿಧಾನ ಒಂದು ಬರಿಯ ಎಲುಬಿನ ಹಂದರ ಮಾತ್ರ, ಈ ಹಂದರದ ಮೇಲಿರಬೇಕಾದ ಮಾಂಸ ಮಜ್ಜವೇ ‘ಸಾಂವಿಧಾನಿಕ ನೈತಿಕತೆ’ ಎನ್ನುತ್ತಾರೆ. ಆರಂಭದಿಂದಲೂ ನೈತಿಕತೆಯನ್ನು ರಾಜಕೀಯ ಪರಿಭಾಷೆಯಾಗಿಯೂ ಬಳಸುತ್ತಾರೆ. 1936 ಆಗಸ್ಟ್ 15ರಂದು ಸ್ವತಂತ್ರ ಕಾರ್ಮಿಕ ಪಕ್ಷ (ಇಂಡಿಪೆಂಡೆಂಟ್ ಲೇಬರ್ ಪಾರ್ಟಿ-ಐಎಲ್‌ಪಿ) ಕಟ್ಟಿದಾಗಲೂ, 1942, ಜುಲೈ 18ರಲ್ಲಿ ಐಎಲ್‌ಪಿಯನ್ನು ರದ್ದುಗೊಳಿಸಿ ‘ಅಖಿಲ ಭಾರತ ಶೆಡೂಲ್ಡ್ ಕಾಸ್ಟ್ ಫೆಡೆರೇಷನ್ (ಎಐಎಸ್‌ಸಿಎಫ್)ಕಟ್ಟಿದಾಗಲೂ ‘ನೈತಿಕತೆ’ಯನ್ನೇ ಮುಖ್ಯ ತತ್ವವನ್ನಾಗಿಸುತ್ತಾರೆ. ಬೌದ್ಧ ದಮ್ಮದ ಮತಾಂತರಕ್ಕೂ ಮೊದಲು ಎಐಎಸ್‌ಎಫ್‌ಸಿಯನ್ನು ರದ್ದುಗೊಳಿಸಿ 1956ರ ಅಕ್ಟೋಬರ್ 13ರಂದು ‘ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ’ವನ್ನು (ಆರ್‌ಪಿಐ) ಸ್ಥಾಪಿಸುತ್ತಾರೆ. ಅಂಬೇಡ್ಕರ್ ಅವರು ಈ ಪಾರ್ಟಿಯ ಸಂವಿಧಾನವನ್ನು ಬರೆಯುತ್ತಾ, ‘ಇಂದಿನ ನಮ್ಮ ಸಂವಿಧಾನವು ಕಾನೂನಿನ್ವಯದ ವ್ಯವಸ್ಥೆ ಹಾಗೂ ತತ್ವಗಳ ಎಲುಬಿನ ಗೂಡಾಗಿದೆ, ಸಾಂವಿಧಾನಿಕ ನೀತಿಮತ್ತೆಯ ಪಾಲನೆಯಿಂದಲೇ ಈ ಎಲುಬಿನ ಗೂಡಿಗೆ ಅವಶ್ಯಕವಿದ್ದ ರಕ್ತಮಾಂಸಗಳು ಲಭಿಸುವುವು. ಇಂಗ್ಲೆಂಡ್‌ನಲ್ಲಿ ಈ ಸಾಂವಿಧಾನಿಕ ನೀತಿಮತ್ತೆಯನ್ನೇ ಸಾಂವಿಧಾನಿಕ ಸಂಕೇತಗಳೆಂದು (Conventions of the Constitution) ಗುರುತಿಸುತ್ತಾರೆ. ಜನರು ಅ ಸಂಕೇತಗಳನ್ನು ತಾವಾಗಿಯೇ ಪಾಲಿಸುತ್ತಾರೆ. ಭಾರತದಲ್ಲಿಯೂ ಸಾಂವಿಧಾನಿಕ ನೈತಿಕತೆಯನ್ನು ಜನರು ತಾವಾಗಿಯೇ ಪಾಲಿಸುವಂತೆ ಜಾಗೃತಗೊಳಿಸಬೇಕಿದೆ’(22-325) ಎನ್ನುತ್ತಾರೆ.
ಅಂಬೇಡ್ಕರ್ ಕನಸಿನ ಸಾಂವಿಧಾನಿಕ ನೈತಿಕತೆ ಎಂದರೆ, ಭಾರತದ ಸಂವಿಧಾನ ಪ್ರಸ್ತಾವನೆಯಲ್ಲಿ ನಮಗೆ ನಾವೇ ಅರ್ಪಿಸಿಕೊಂಡ ತತ್ವಗಳನ್ನು ನಮ್ಮ ವೈಯಕ್ತಿಕ ಬದುಕಿನಲ್ಲಿ ಕಟ್ಟುನಿಟ್ಟಾಗಿ ಪಾಲಿಸುವುದೇ ಆಗಿದೆ. ಆದರೆ ಸದ್ಯದ ಭಾರತದ ನಡೆ ಸಾಂವಿಧಾನಿಕ ನೈತಿಕತೆಯನ್ನು ಮಣ್ಣುಮಾಡಿ ಮುಂದೆ ಸಾಗುತ್ತಿದೆ. ಸಮಾನತೆಯ ಎದುರು ಕಣ್ಣಿಗೆ ರಾಚುವಷ್ಟು ಅಸಮಾನತೆ ಹೆಚ್ಚಾಗುತ್ತಿದೆ. ಸಾಮಾಜಿಕ ನ್ಯಾಯದ ಬದಲಿಗೆ ಅನ್ಯಾಯವೇ ಮೆರೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ವಾಧಿಕಾರ ತಲೆದೋರುತ್ತಿದೆ. ರಾಜಶಾಹಿಯ ವಂಶಾಡಳಿತ ಪ್ರಜಾಪ್ರಭುತ್ವದಲ್ಲೂ ಬೇರುಬಿಡುತ್ತಿದೆ. ಹೀಗೆ ಅಂಬೇಡ್ಕರ್ ಕನಸಿನ ಸಂವಿಧಾನಿಕ ನೈತಿಕತೆ ನೆಲಕಚ್ಚುತ್ತಿರುವ ಈ ಸಂದರ್ಭದಲ್ಲಿ ಬಾಬಾ ಸಾಹೇಬರ ಹುಟ್ಟುಹಬ್ಬದ ದಿನವನ್ನು ಬಣ್ಣ ಬಣ್ಣದ ಮಾತುಗಳಿಂದ ಸಿಂಗರಿಸುವುದರಲ್ಲಿ ತೊಡಗಿದ್ದೇವೆ.






