ಖಾಯಂಗೊಳ್ಳದೆ 50 ವರ್ಷ ದಾಟಿದ ಅಂಗನವಾಡಿ ತಾಯಂದಿರು

ತುಂಬಾ ಕಡಿಮೆ ಸಂಬಳಕ್ಕೆ ಕಡುಕಷ್ಟದ ಜೀವನ ನಡೆಸುವ ಅಂಗನವಾಡಿ ಮಹಿಳೆಯರ ಜೀವನ ಇಂದಿಗೂ ಸುಧಾರಣೆ ಕಂಡಿಲ್ಲ ಎನ್ನುವುದೇ ದುಃಖದ ಸಂಗತಿ. ನನ್ನ ಬಾಲ್ಯದಿಂದಲೂ ಅವರುಗಳು ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳಲು, ನೌಕರಿಯನ್ನು ಖಾಯಂ ಮಾಡಲು ನಿರಂತರ ಹೋರಾಟ ಮಾಡುತ್ತಲೇ ಬಂದಿರುವುದನ್ನು ಕಂಡಿದ್ದೇನೆ. ಇಂತಹ ಚಳವಳಿಗೆ ಬಾಲ್ಯದಲ್ಲಿ ಅವ್ವನ ಜತೆ ಹತ್ತಾರು ಬಾರಿ ಹೋಗಿದ್ದೇನೆ. ಇವುಗಳನ್ನು ನೆನಪಿಸಿಕೊಂಡರೆ ಅವು ಹೋರಾಟದ ಕಥನದಂತಿರದೆ, ಪ್ರವಾಸ ಕಥನದಂತಿರುವುದು ಸೋಜಿಗ. ಆದರೆ ಅವರ ಕನಸುಗಳು ಮಾತ್ರ ಈಗಲೂ ಕನಸಾಗಿಯೇ ಉಳಿದಿವೆ.
ಇದೇ ಡಿಸೆಂಬರ್ ಒಂದರಂದು ಕೊರೆವ ಚಳಿಯಲ್ಲಿ ರಾಜ್ಯದಲ್ಲಿರುವ ಕೇಂದ್ರ ಸಚಿವರ ನಿವಾಸಗಳ ಎದುರು ಸುಮಾರು 40 ಸಾವಿರದಷ್ಟು ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ಬೆಂಗಳೂರು, ಮಂಡ್ಯ, ತುಮಕೂರು ಹಾಗೂ ಹುಬ್ಬಳ್ಳಿಯಲ್ಲಿ ಈ ಧರಣಿಗಳು ನಡೆದವು. ಈ ಹೋರಾಟಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಡಿಸೆಂಬರ್ 3ರಂದು ದಿಲ್ಲಿಯಲ್ಲಿ ಕೇಂದ್ರ ಸಚಿವೆ ಅನ್ನಪೂರ್ಣದೇವಿ ಮತ್ತು ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ನೇತೃತ್ವದಲ್ಲಿ ಸಭೆ ನಡೆಸಿ ಬೇಡಿಕೆ ಈಡೇರಿಸುವ ಬರವಸೆ ನೀಡಿದ್ದಾರೆ. ‘‘ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಪೂರೈಸಲು 2026ರ ಫೆಬ್ರವರಿಯಲ್ಲಿ ನಡೆಯಲಿರುವ ಕೇಂದ್ರ ಬಜೆಟ್ ಅಧಿವೇಶನದವರೆಗೆ ಕಾಯುತ್ತೇವೆ. ಬಜೆಟ್‌ನಲ್ಲಿ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಿದ್ದರೆ, ಉಗ್ರ ಹೋರಾಟಗಳು ಭುಗಿಲೇಳಲಿವೆ’’ ಎಂದು ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮೀ ಹೇಳಿದ್ದಾರೆ.
ಇದೀಗ ಅಂಗನವಾಡಿ ನೌಕರರ ಜತೆ ಆಶಾ ಕಾರ್ಯಕರ್ತೆಯರು, ಬಿಸಿಯೂಟದ ನೌಕರರು ಮುಷ್ಕರಕ್ಕೆ ಜಂಟಿಯಾಗಿದ್ದಾರೆ. ಆದರೆ ಕಳೆದ ನಾಲ್ಕೂವರೆ ದಶಕದಿಂದಲೂ ಅಂಗನವಾಡಿ ನೌಕರರೇ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ನಿರಂತರ ಹೋರಾಡುತ್ತಲೇ ಬಂದಿದ್ದಾರೆ. ಹೀಗೆ ನಿಲ್ಲದ ಹೋರಾಟ ಮಾಡಿದ ಫಲವೆಂದರೆ, ಜೀವಂತವಾಗಿ ಬದುಕಲು ಉಸಿರಾಡುವಷ್ಟು ಸಂಬಳ. ಇಂತಹ ಅಂಗನವಾಡಿ ಕೇಂದ್ರಗಳು ಭಾರತದಲ್ಲಿ ಆರಂಭವಾಗಿ 50 ವರ್ಷ ಪೂರೈಸಿದೆ. ಈಚೆಗೆ ಕರ್ನಾಟಕ ಸರಕಾರ ಸುವರ್ಣ ಮಹೋತ್ಸವವನ್ನೂ ಆಚರಿಸಿತು. ಹಿಂದಿರುಗಿ ನೋಡಿದರೆ ಕಳೆದ ಐವತ್ತು ವರ್ಷಗಳಲ್ಲಿ ಅಂಗನವಾಡಿ ನೌಕರರು ಈ ದೇಶಕ್ಕೆ ಸಲ್ಲಿಸಿದ ಸೇವೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದ್ದು.
ನನ್ನ ಅವ್ವ 1982ರಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸಕ್ಕೆ ಸೇರಿದ್ದರು. ಮೂರು ದಶಕಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿದು ಈಗ ನಿವೃತ್ತಿ ಹೊಂದಿದ್ದಾರೆ. ಹಾಗಾಗಿ ನನಗೆ ಅರಿವು ಬಂದಾಗಿನಿಂದಲೂ ‘ಅಂಗನವಾಡಿ’ ಎನ್ನುವ ಪದ ನನ್ನೊಳಗೆ ಭಿನ್ನ ರೀತಿಯಲ್ಲಿ ರೂಪಾಂತರಗೊಂಡಿದೆ. ಅಂಗನವಾಡಿ ಕಟ್ಟಡವೇ ನಮ್ಮ ವಾಸದ ಮನೆಯೂ, ನನ್ನವ್ವನೇ ಅಂಗನವಾಡಿ ಕಾರ್ಯಕರ್ತೆಯೂ ಆಗಿದ್ದರಿಂದ ಬಾಲ್ಯದ ನೆನಪುಗಳಲ್ಲಿ ಅದನ್ನು ಬಿಡಿಸಿ ನೋಡುವುದೇ ಕಷ್ಟ. ತುಂಬಾ ಕಡಿಮೆ ಸಂಬಳಕ್ಕೆ ಕಡುಕಷ್ಟದ ಜೀವನ ನಡೆಸುವ ಅಂಗನವಾಡಿ ಮಹಿಳೆಯರ ಜೀವನ ಇಂದಿಗೂ ಸುಧಾರಣೆ ಕಂಡಿಲ್ಲ ಎನ್ನುವುದೆ ದುಃಖದ ಸಂಗತಿ. ನನ್ನ ಬಾಲ್ಯದಿಂದಲೂ ಅವರುಗಳು ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳಲು, ನೌಕರಿಯನ್ನು ಖಾಯಂ ಮಾಡಲು ನಿರಂತರ ಹೋರಾಟ ಮಾಡುತ್ತಲೇ ಬಂದಿರುವುದನ್ನು ಕಂಡಿದ್ದೇನೆ. ಇಂತಹ ಚಳವಳಿಗೆ ಬಾಲ್ಯದಲ್ಲಿ ಅವ್ವನ ಜತೆ ಹತ್ತಾರು ಬಾರಿ ಹೋಗಿದ್ದೇನೆ. ಇವುಗಳನ್ನು ನೆನಪಿಸಿಕೊಂಡರೆ ಅವು ಹೋರಾಟದ ಕಥನದಂತಿರದೆ, ಪ್ರವಾಸ ಕಥನದಂತಿರುವುದು ಸೋಜಿಗ. ಆದರೆ ಅವರ ಕನಸುಗಳು ಮಾತ್ರ ಈಗಲೂ ಕನಸಾಗಿಯೇ ಉಳಿದಿವೆ.
ಬಹುಶಃ ಗಂಡಾಳ್ವಿಕೆ ಸಮಾಜದಲ್ಲಿ ಮಹಿಳೆಯರಾಗಿದ್ದರಿಂದಲೇ ಅವರ ಅಭದ್ರತೆ ಈಗಲೂ ಮುಂದುವರಿದಿದೆಯೇ ಎನ್ನುವ ಪ್ರಶ್ನೆ ನನ್ನನ್ನು ಕಾಡಿದೆ. ಕಳೆದ ಐದು ದಶಕಗಳಿಂದಲೂ ಧಣಿವರಿಯದೆ ಬೇಸರಿಸಿಕೊಳ್ಳದೆ ದುಡಿಯುತ್ತಿರುವ ಅಂಗನವಾಡಿ ನೌಕರರ ಜಾಲ ಭಾರತದ ಹಳ್ಳಿ ಹಳ್ಳಿಗಳಿಗೂ, ಈ ದೇಶದ ಪ್ರತೀ ಮಗು ತಾಯಿಯ ಜತೆಗೂ ಬೆಸೆದುಕೊಂಡಿದೆ. ಅಂಗನವಾಡಿಗಳು ದೇಶದ ಜನನ ಮರಣದ ದಾಖಲಾತಿಯಿಂದ ಮೊದಲುಗೊಂಡು ಹಲವು ಬಗೆಯ ಗ್ರಾಮ ಜಗತ್ತಿನ ಮಾಹಿತಿಕೋಶದ ಕಣಜಗಳಾಗಿವೆ. ಹಾಗಾಗಿಯೇ ಭಾರತದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯು ವಿಶ್ವದಲ್ಲಿಯೇ ಮಾದರಿಯಾದದ್ದೆಂದು ಸ್ವತಃ ವಿಶ್ವಸಂಸ್ಥೆ ಸಕಾರಾತ್ಮಕ ಅಭಿಪ್ರಾಯ ಹೊಂದಿದೆ.
ಭಾರತದಲ್ಲಿ ಕೇಂದ್ರ ಸರಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ INTEGRATED CHILD DEVELOPMENT SERVICES (ICDS) SCHEME (ಸಶಿಅಯೋ, ICDS) ಇದನ್ನು ಅಕ್ಟೋಬರ್ 2, 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಪ್ರಾರಂಭಿಸಿದರು. ಕರ್ನಾಟಕದಲ್ಲಿಯೂ ಕಳೆದ 50 ವರ್ಷಗಳಿಂದಲೂ ಅಂಗನವಾಡಿಗಳು ಕ್ರಿಯಾಶೀಲವಾಗಿವೆೆ. ಈ ಯೋಜನೆಯ ಪ್ರಾಥಮಿಕ ಘಟಕಗಳಾದ ಅಂಗನವಾಡಿಯ ಮೂಲಕ ಮುಖ್ಯವಾಗಿ 6 ಸೇವೆಗಳನ್ನು ಪೂರೈಸುವ ಕೆಲಸ ನಡೆಯುತ್ತಿದೆ. ಅವುಗಳೆಂದರೆ, ಪೂರಕ ಪೌಷ್ಟಿಕ ಆಹಾರ, ಚುಚ್ಚುಮದ್ದು, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ತಾಯಂದಿರಿಗೆ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಶಿಕ್ಷಣ ಹಾಗೂ 3-6 ವರ್ಷದ ಮಕ್ಕಳಿಗೆ ಅನೌಪಚಾರಿಕ ಶಾಲಾ ಪೂರ್ವ ಶಿಕ್ಷಣ ನೀಡಲಾಗುತ್ತಿದೆ. ರಾಜ್ಯದಲ್ಲಿ ಈಗ ಒಟ್ಟು 69,922 ಅಂಗನವಾಡಿಗಳಿದ್ದು, 40,54,456 ಫಲಾನುಭವಿಗಳಿಗೆ ಸೇವೆ ಸಲ್ಲಿಸುತ್ತಿವೆ. ಇದರಲ್ಲಿ ಆರು ತಿಂಗಳಿಂದ ಆರು ವರ್ಷದ ಮಕ್ಕಳು 33,25,035 ಮಕ್ಕಳು, 7,29,421 ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಸೇರಿದ್ದಾರೆ.
ನೀತಿ ಆಯೋಗದ 2024ರ ವರದಿ ಪ್ರಕಾರ ಭಾರತದಲ್ಲಿ 13,99,661 ಅಂಗನವಾಡಿ ಕೇಂದ್ರಗಳು ಕೆಲಸ ಮಾಡುತ್ತಿವೆ. 12,93,448 ಅಂಗನವಾಡಿ ಕಾರ್ಯಕರ್ತೆಯರೂ, 11,64,178 ಸಹಾಯಕಿಯರೂ ದುಡಿಯುತ್ತಿದ್ದಾರೆ. ಒಟ್ಟಾರೆ ಭಾರತದಲ್ಲಿ ಐಸಿಡಿಎಸ್ ಯೋಜನೆಯ ವ್ಯಾಪ್ತಿಯಲ್ಲಿ ಹತ್ತು ಕೋಟಿ ಫಲಾನುಭವಿಗಳು ಸೇವೆ ಪಡೆಯುತ್ತಿದ್ದಾರೆ. ಸರಕಾರದ ವರದಿ ಭಾರತದಲ್ಲಿರುವ ಅಂಗನವಾಡಿಗಳಿಗೆ ಶೇ. 70ರಷ್ಟು ಕುಡಿಯುವ ನೀರಿನ ಸೌಲಭ್ಯವಿದ್ದರೆ, ಶೇ. 63ರಷ್ಟು ಶೌಚಾಲಯದ ಸೌಲಭ್ಯ ಪಡೆದಿವೆ ಎಂದು ಹೇಳುತ್ತದೆ. ಆದರೆ ಬೇರೆ ಬೇರೆ ಸಾಮಾಜಿಕ ಗುಂಪುಗಳು, ಸಂಸ್ಥೆಗಳು ನಡೆಸಿದ ಅಧ್ಯಯನಗಳ ಅಂಕೆ ಸಂಖ್ಯೆಗಳು ಬೇರೆಯದೆ ಕಥೆ ಹೇಳುತ್ತಿವೆ. ಒಂದು ಅಧ್ಯಯನದ ಪ್ರಕಾರ ಒಡಿಶಾ ರಾಜ್ಯದಲ್ಲಿ ಶೇ. 80ರಷ್ಟು ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯಗಳಿಲ್ಲ, ಶೇ. 70ರಷ್ಟು ಅಂಗನವಾಡಿಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಮಹಾರಾಷ್ಟ್ರದಲ್ಲಿಯೂ 26,232 ಅಂಗನವಾಡಿಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಹೆಚ್ಚು ಕಡಿಮೆ ಇದು ಭಾರತದ ಎಲ್ಲಾ ರಾಜ್ಯಗಳ ಅಂಗನವಾಡಿಗಳ ಸ್ಥಿತಿಯಾಗಿದೆ. ಕರ್ನಾಟಕ ಸರಕಾರ ತನ್ನ 2024ರ ಆರ್ಥಿಕ ಸಮೀಕ್ಷೆಯಲ್ಲಿ ಹೇಳುವಂತೆ 22,687 (ಶೇ. 32.45) ರಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ.
ಬಿಪಾಶ ಮೈತಿ ಅವರು 2016ರಲ್ಲಿ ‘ಇಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಅಂಗನವಾಡಿಗಳ ಕಾರ್ಯಚಟುವಟಿಕೆಗಳ ವ್ಯತ್ಯಾಸ ಮತ್ತು ಅದಕ್ಕೆ ಕಾರಣಗಳನ್ನು ವಿಶ್ಲೇಷಿಸಿದ್ದರು. ಈಗ ಒಂದಷ್ಟು ಬದಲಾವಣೆಗಳಾಗಿದ್ದರೂ ಈ ಬರಹದ ಕೆಲವು ಸಂಗತಿಗಳು ಆಸಕ್ತಿದಾಯಕವಾಗಿವೆ. ಭಾರತದಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸಿರುವಲ್ಲಿ ಗೋವಾ ರಾಜ್ಯ ಮೊದಲ ಸ್ಥಾನದಲ್ಲಿದೆ. ಅದರ ಶೇಕಡವಾರು 0.835 ಇದ್ದು ಇದು ಭಾರತದಲ್ಲಿ ಅತ್ಯುತ್ತಮ ಮೂಲಭೂತ ಸೌಕರ್ಯವನ್ನು ಒದಗಿಸಿದ ರಾಜ್ಯವಾಗಿದೆ. ದೇಶದಲ್ಲಿ ಅತಿ ಕಡಿಮೆ ಪ್ರಮಾಣ ನಾಗಾಲ್ಯಾಂಡ್ 0.250ನಷ್ಟಿದೆ. ಈ ಸಂಖ್ಯಾವಾರು ಕರ್ನಾಟಕದ ಪ್ರಮಾಣವನ್ನು ನೋಡಿದರೆ 6ನೇ ಸ್ಥಾನದಲ್ಲಿದೆ. ಇದರ ಶೇಕಡವಾರು 0.681ರಷ್ಟಿದ್ದು ಸಾಮಾನ್ಯ ದರ್ಜೆಯನ್ನು ಕಾಯ್ದುಕೊಡಿದೆ.
ಸಶಿಅಯೋ ಆಶಯಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅವುಗಳನ್ನು ತಮ್ಮ ಕಾರ್ಯಚಟುವಟಿಕೆಯ ಮೂಲಕ ಜನರನ್ನು ತಲುಪಿಸುವ ನಿಟ್ಟಿನಲ್ಲಿ ಗೋವಾ ರಾಜ್ಯವೇ ಮೊದಲ ಸ್ಥಾನದಲ್ಲಿದೆ. ಅದು ಶೇ 0.976ರಷ್ಟಿದ್ದು ದೇಶದಲ್ಲಿಯೇ ಅತ್ಯುತ್ತಮವಾಗಿದೆ. ಎರಡನೇ ಸ್ಥಾನದಲ್ಲಿ ಮಧ್ಯಪ್ರದೇಶವಿದ್ದು ಅದು 0.876ರಷ್ಟಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಕ್ರಮಾಂಕವೂ ಆಶಾದಾಯಕವಾಗಿದೆ. ಇಲ್ಲಿ ಶೇ 0.830ರಷ್ಟಿದ್ದು ದೇಶದಲ್ಲಿ ಅತ್ಯುತ್ತಮ 7 ರಾಜ್ಯಗಳಲ್ಲಿ ಆರನೇ ಸ್ಥಾನ ಪಡೆದಿದೆ. ಇದರಲ್ಲಿ ಕಡೆಯ ಸ್ಥಾನವನ್ನು ಮೆಘಾಲಯ ಪಡೆದಿದ್ದು ಅದು 0.140ರಷ್ಟಿದೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸರಿಯಾದ ಸೇವೆಯನ್ನು ಒದಗಿಸುವ ಕ್ರಮಾಂಕದಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದು 0.969ರಷ್ಟಿದೆ. ಇದು ದೇಶದಲ್ಲಿಯೇ ಅತ್ಯುತ್ತಮವಾಗಿದೆ. ಈ ವಿಷಯದಲ್ಲಿ ಕರ್ನಾಟಕದ ಸ್ಥಾನ ಶೇ 0.767ರಷ್ಟಿದೆ. ಉತ್ತಮ ಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ಎಲ್ಲಾ ವಿಷಯಗಳಲ್ಲಿ ಮೊದಲ ಸ್ಥಾನವನ್ನು ಪಡೆದ ಗೋವಾ ರಾಜ್ಯವು ಅತ್ಯುತ್ತಮ ಸೌಲಭ್ಯಗಳನ್ನೂ ಪಡೆದಾಗಲೂ ಯೋಜನೆಯ ಸೇವೆಯನ್ನು ಜನರಿಗೆ ಒದಗಿಸುವಲ್ಲಿ ಏಳನೇ ಸ್ಥಾನದಲ್ಲಿದ್ದು, ಅದು ಶೇ 0. 702ರಷ್ಟಿದೆ. ಇನ್ನು ಕೊನೆಯ ಸ್ಥಾನದಲ್ಲಿ ಅರುಣಾಚಲ ಪ್ರದೇಶವಿದ್ದು ಅದರ ಶೇಕಡವಾರು 0.189 ರಷ್ಟಿದೆ.
ಇನ್ನು ದೇಶದಲ್ಲಿ ಪರಿಶಿಷ್ಟ ಜಾತಿ (ಪ.ಜಾ.) ಮತ್ತು ಪರಿಶಿಷ್ಟ ಪಂಗಡದ (ಪ.ಪಂ.) ಮಕ್ಕಳ ತಾಯಂದಿರು ಐಸಿಡಿಎಸ್ ಜಾಗೃತಿ ಪಡೆದ ಶೇಕಡವಾರು ಕ್ರಮಾಂಕವೂ ಕುತೂಹಲಕಾರಿಯಾಗಿದೆ. ಇಲ್ಲಿ ಮುಖ್ಯವಾಗಿ ಯೋಜನೆಯ ಪೌಷ್ಟಿಕಾಂಶದ ಆಹಾರ ಮತ್ತು ಆರೋಗ್ಯ ನೈರ್ಮಲ್ಯದ ತಿಳಿವನ್ನು ಪಡೆದ ಪ.ಜಾ. ಮತ್ತು ಪ.ಪಂ. ತಾಯಂದಿರ ಜಾಗೃತಿಯ ಪ್ರಮಾಣವು 0-3 ವರ್ಷದವರೆಗಿನ ಮತ್ತು 3-6 ವರ್ಷದವರೆಗಿನ ಮಕ್ಕಳ ತಾಯಂದಿರ ಜಾಗೃತಿಯನ್ನು ಪ್ರತ್ಯೇಕವಾಗಿ ನೋಡಬಹುದಾಗಿದೆ.
0-3 ವರ್ಷದ ಮಕ್ಕಳ ತಾಯಂದಿರ ಜಾಗೃತಿಯ ಪ್ರಮಾಣ ದಲ್ಲಿ ಆಂಧ್ರ ಪ್ರದೇಶ ಮುಂಚೂಣಿಯಲ್ಲಿದೆ. ಇಲ್ಲಿ ಶೇ. 0.9.1ರಷ್ಟು ಪ.ಜಾ. ತಾಯಂದಿರಿದ್ದರೆ, 0.9.3ರಷ್ಟು ಪ.ಪಂ. ತಾಯಂದಿರಿದ್ದಾರೆ. ಈ ಪ್ರಮಾಣ ಕರ್ನಾಟಕದಲ್ಲಿ 0.6.5ರಷ್ಟು ಪ.ಪಂ. ತಾಯಂದಿರಿದ್ದು, 0.3.5ರಷ್ಟು ಪ.ಜಾ. ತಾಯಂದಿರಿದ್ದಾರೆ. ಇನ್ನು 3-6 ವರ್ಷದ ಒಳಗಿನ ಮಕ್ಕಳ ತಾಯಂದಿರ ಜಾಗೃತಿಯ ಪ್ರಮಾಣದಲ್ಲಿ ಆಂಧ್ರಪ್ರದೇಶವೇ ಮೊದಲ ಸ್ಥಾನದಲ್ಲಿದೆ. ಆಂಧ್ರದಲ್ಲಿ 0.8.9ರಷ್ಟು ಪ.ಜಾ. ತಾಯಂದಿರಿದ್ದರೆ, 0.6 ನಷ್ಟು ಪ.ಪಂ. ತಾಯಂದಿರಿದ್ದಾರೆ. ಈ ಪ್ರಮಾಣ ಕರ್ನಾಟಕದಲ್ಲಿ 0.6.4ರಷ್ಟು ಪ.ಪಂ. ತಾಯಂದಿರಿದ್ದರೆ, 0.3.7ರಷ್ಟು ಪ.ಜಾ. ತಾಯಂದಿರಿದ್ದಾರೆ.
ಈ ಬಗೆಯ ಎಲ್ಲಾ ಅಧ್ಯಯನಗಳು ಸಾಬೀತು ಪಡಿಸಿರುವುದು ಏನೆಂದರೆ ಕಳೆದ 50 ವರ್ಷದಲ್ಲಿ ಅಂಗನವಾಡಿ ನೌಕರರು ಈ ದೇಶದ ಮಕ್ಕಳು ಮತ್ತು ತಾಯಂದಿರಿಗೆ ಗಣನೀಯ ಸೇವೆ ಸಲ್ಲಿಸಿದ್ದಾರೆ. ಮೊದಲ ಅಂಗನವಾಡಿಗಳಲ್ಲಿ ಕೂತ ಮಕ್ಕಳು ಇದೀಗ 50 ವರ್ಷದ ಆಸುಪಾಸಿನವರಾಗಿದ್ದಾರೆ. ಈ ದೇಶದ ಬಡತನದಲ್ಲಿನ ಕೋಟ್ಯಂತರ ಮಕ್ಕಳು ಮತ್ತು ತಾಯಂದಿರನ್ನು ಆರೋಗ್ಯಯುತವಾಗಿ ಕಾಪಿಟ್ಟಿದ್ದಾರೆ. ಆದರೆ ಇವರಿಗೆ ಈಗಲೂ ಕೇಂದ್ರ ಸರಕಾರ ಕೊಡುವುದು ಘನತೆಯಿಂದ ಬದುಕಲೂ ಕಷ್ಟವಾಗುವ ಕನಿಷ್ಠ ವೇತನ. ಕೇಂದ್ರ ಸರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 4,500 ರೂ, ಸಹಾಯಕಿಯರುಗಳಿಗೆ 2,700 ಕೊಡುತ್ತಿದೆ. ಈ ಮೊತ್ತಕ್ಕೆ ಆಯಾ ರಾಜ್ಯ ಸರಕಾರಗಳು ತಮ್ಮ ಪಾಲಿನ ಮೊತ್ತವನ್ನು ಸೇರಿಸಿ ವೇತನ ಕೊಡುತ್ತಿವೆ. ಹಾಗಾಗಿ ಭಾರತದಾದ್ಯಾಂತ ಅಂಗನವಾಡಿ ನೌಕರರ ವೇತನ ಏಕರೂಪಿಯಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ 8,250 ರೂ. ಕೊಟ್ಟರೆ, ತಮಿಳುನಾಡಿನಲ್ಲಿ 13,452 ರೂ., ಕೇರಳದಲ್ಲಿ ಕಾರ್ಯಕರ್ತೆಯರಿಗೆ 13,000 ರೂ. ಸಹಾಯಕಿಯರಿಗೆ 9,000, ಕರ್ನಾಟಕದಲ್ಲಿ ಕಾರ್ಯಕರ್ತೆಯರಿಗೆ 12,000, ಸಹಾಯಕಿಯರಿಗೆ 6,000 ಕೊಡಲಾಗುತ್ತಿದೆ. ಭಾರತದಾದ್ಯಾಂತ ಸರಾಸರಿ 14 ಸಾವಿರ ದಾಟುವುದಿಲ್ಲ. ಇದರಿಂದಾಗಿ ದೇಶವ್ಯಾಪಿ ಅಂಗನವಾಡಿ ನೌಕರರು ಬಹಳ ದುಸ್ಥಿತಿಯಲ್ಲಿ ಬದುಕುವಂತಾಗಿದೆ.
ಕಡಿಮೆ ಸಂಬಳ, ಖಾಯಂ ಅಲ್ಲದ ವೃತ್ತಿ ಕೆಲವೊಮ್ಮೆ ಈ ನೌಕರರ ಪ್ರತಿರೋಧವನ್ನು ತಗ್ಗಿಸುತ್ತದೆ. ಜಾಗೃತಿ ಇರುವ ಕೆಲವಾದರೂ ತಮ್ಮ ಮೇಲಿನ ಸೂಪರ್ ವೈಜರ್ ಮೇಲಾಗಲಿ, ಸಿಡಿಪಿಒ ಮೇಲಾಗಲಿ ದೌರ್ಜನ್ಯದ ವಿರುದ್ಧ ಧ್ವನಿ ಎತ್ತದಷ್ಟು ಭಯಗ್ರಸ್ತರಾಗಿದ್ದಾರೆ. ಹಾಗಾಗಿ ಎಷ್ಟೋ ಬಾರಿ ಸೂಪರ್ ವೈಜರ್‌ಗಳೇ ಅಂಗನವಾಡಿ ಕಾರ್ಯಕರ್ತೆಯರ ಶೋಷಕರಾಗಿರುತ್ತಾರೆ. ಇನ್ನು ಕೆಲವು ಕಡೆ ಸಿಡಿಪಿಒ ಶೋಷಣೆ ಮಾಡುತ್ತಾರೆ. ಇಂತಹ ಅಸಹಾಯಕತೆಯ ಕಾರಣಕ್ಕೆ ಕೆಲವು ಕಾರ್ಯಕರ್ತೆಯರು ತಮ್ಮ ಸಹಾಯಕಿಯ ಪಾಲಿಗೆ ಶೋಷಕಿಯಾಗುವ ಸಾಧ್ಯತೆಯಿದೆ. ಇನ್ನು ಕೆಲವೆಡೆಗಳಲ್ಲಿ ಸಹಾಯಕಿ ಊರವರ ಜತೆ ಸೇರಿಕೊಂಡು ಕಾರ್ಯಕರ್ತೆಯನ್ನು ಶೋಷಿಸುವ ಘಟನೆಗಳೂ ಇಲ್ಲದಿಲ್ಲ. ಹೀಗೆ ದೇಶದ ಬಹುದೊಡ್ಡ ಯೋಜನೆಯೊಂದರಲ್ಲಿ ದುಡಿಯುವ ತಾಯಂದಿರ ದುಸ್ಥಿತಿ ಬದಲಾಗಬೇಕಿದೆ. ಆಳುವ ಸರಕಾರಗಳು ಕಣ್ತೆರೆಯಬೇಕಿದೆ.







