ಕನ್ನಡಕ್ಕೆ ವೈಚಾರಿಕತೆಯನ್ನು ಅನುವಾದಿಸುತ್ತಿರುವ ಬಿ. ಸುಜ್ಞಾನಮೂರ್ತಿ

ತೆಲುಗು ಸಾಹಿತ್ಯದ ಪ್ರಖರ ವೈಚಾರಿಕತೆಯನ್ನು ಅನುವಾದಗಳ ಮೂಲಕ ಕನ್ನಡಕ್ಕೆ ಕಸಿಮಾಡಿದ ಸುಜ್ಞಾನಮೂರ್ತಿಯವರು 2003ರಲ್ಲಿ ಅನುವಾದಿಸಿದ ಮಹಾಶ್ವೇತಾದೇವಿ ಅವರ ‘ಯಾರದೀ ಕಾಡು’ ಮೊದಲುಗೊಂಡು ಈ ತನಕ 23 ವರ್ಷಗಳಲ್ಲಿ 60 ಪುಸ್ತಕಗಳನ್ನು ತೆಲುಗಿನಿಂದ ಕನ್ನಡಕ್ಕೆ ತಂದಿದ್ದಾರೆ. ‘ಯಾರದೀ ಕಾಡು’ ಕೃತಿಗೆ 2003ರಲ್ಲಿಯೂ, ಆಂಧ್ರದ ಚಾರಿತ್ರಿಕ ರೈತ ಹೋರಾಟದ ಕಥನ ‘ತೆಲಂಗಾಣ ಹೋರಾಟ’ ಕೃತಿಗೆ 2013ರಲ್ಲಿಯೂ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿಗಳು ಸಂದಿವೆ. ಅನುವಾದಗಳ ಮೂಲಕ ಆಯಾ ಹೊತ್ತಿನ ಗಾಯಗಳಿಗೆ ಔಷಧಿ ಹುಡುಕಿದ ಬಿ.ಸುಜ್ಞಾನಮೂರ್ತಿ ಅವರನ್ನು ಗುರುತಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2016ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿದೆ.
ಜಗತ್ತಿನ ಅನುಭವ ಲೋಕಗಳು, ಅಧ್ಯಯನ, ಪ್ರವಾಸ, ಸಂಶೋಧನೆಗಳು ಇಂದು ಕನ್ನಡಕ್ಕೆ ವ್ಯಾಪಕವಾಗಿ ಅನುವಾದವಾಗುತ್ತಿವೆ. ಹಾಗೆ ನೋಡಿದರೆ ಸದ್ಯದ ಕನ್ನಡ ಸಾಹಿತ್ಯದ ಸಂದರ್ಭವನ್ನು ‘ಅನುವಾದ ಸಾಹಿತ್ಯದ ಕಾಲ’ ಎಂದು ಕರೆಯಬಹುದಾದಷ್ಟು ಅಪಾರ ವೈವಿಧ್ಯತೆ ಇದೆ. ಈ ಅನುವಾದಗಳು ಹೊಸ ಚರ್ಚೆ, ಸಂವಾದಗಳನ್ನು ಹುಟ್ಟುಹಾಕುತ್ತಿವೆ. ಈಚೆಗೆ ನಾನು ಓದಿದ ಹಿರಿಯ ಚಿಂತಕರಾದ ಓ.ಎಲ್. ನಾಗಭೂಷಣ ಸ್ವಾಮಿ ಅವರು ಅನುವಾದಿಸಿದ ರಿಚರ್ಡ್ ಎಂ. ಈಟನ್ ಅವರ ‘ಪಾರಸಿಕ ದೇಶಕಾಲದಲ್ಲಿ ಭಾರತ’(1000-1765) ಕೃತಿಯು ನಮ್ಮ ಚರಿತ್ರೆಯ ಗ್ರಹಿಕೆಯನ್ನು ಬದಲಿಸುವಷ್ಟು ಸಶಕ್ತವಾಗಿದೆ. ಹೀಗೆ ಕನ್ನಡಕ್ಕೆ ಬಂದ ಅನುವಾದಗಳ ಚರಿತ್ರೆಯಲ್ಲಿ ಕನ್ನಡಕ್ಕೆ ಬೇಕಾದ ವೈಚಾರಿಕತೆಯನ್ನು ನಿರಂತರವಾಗಿ ಅನುವಾದಿಸಿದವರು ಬಸಪ್ಪಾಚಾರಿ ಸುಜ್ಞಾನಮೂರ್ತಿ.
ತಮಿಳುನಾಡಿನ ಗಡಿಯಿಂದ ಕೇವಲ 8 ಕಿ.ಮೀ. ದೂರ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮುತ್ತಾನಲ್ಲೂರಿನವರಾದ ಮೂರ್ತಿ ಅವರು ತೆಲುಗು ಮನೆ ಮಾತಿನ ತ್ರಿಭಾಷಿಕ ಪರಿಸರದಲ್ಲಿ ಬೆಳೆಯುತ್ತಾರೆ. ಈ ಬಗ್ಗೆ ಮೂರ್ತಿ ಅವರು ‘‘ಬಾಲ್ಯದಲ್ಲಿ ನಾನು ತ್ರಿಭಾಷಿಕ ಪರಿಸರದಲ್ಲಿದ್ದಿದ್ದರಿಂದ ಅನಾಯಾಸವಾಗಿ ತೆಲುಗು ಮಾತಾಡಲು ಕಲಿತೆ. ತೆಲುಗು ಸಿನೆಮಾಗಳನ್ನು ನೋಡುತ್ತಾ ತೆಲುಗು ಭಾಷಿಕ ಪರಿಸರದಲ್ಲಿ ಬೆಳೆದೆ. ಕನ್ನಡ ಎಂ.ಎ. ನಂತರ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದ್ವಿಭಾಷಿಕ ನಿಘಂಟು ರೂಪಿಸುವ ಯೋಜನೆಯಲ್ಲಿ ಕೆಲಸ ಸಿಕ್ತು. ಆ ಸಂದರ್ಭದಲ್ಲಿ ತೆಲುಗು ಓದಲು ಕಲಿತು ತೆಲುಗು ಸಾಹಿತ್ಯದ ಮುಖ್ಯ ಕೃತಿಗಳನ್ನು ಓದಿಕೊಂಡೆ. ಆಗ ಅಲ್ಲಿ ಪ್ರಾಧ್ಯಾಪಕರಾಗಿದ್ದ ಆರ್ವಿಯಸ್ ಸುಂದರಂ ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಲು ಪ್ರೇರೇಪಿಸಿದರು’’ ಎನ್ನುತ್ತಾರೆ.
ಕನ್ನಡ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಸುತ್ತಲೂ ವಿದ್ಯಾರ್ಥಿಗಳು ಸುತ್ತುವರಿದು ನಡುವೆ ಒಬ್ಬ ಎತ್ತರದ ವ್ಯಕ್ತಿಯಿದ್ದು, ಎಲ್ಲರೂ ನಗುತ್ತಾ ವಿಡಂಬನೆ ಮಾಡುತ್ತಾ ಮಾತುಕತೆಯಲ್ಲಿ ಲವಲವಿಕೆಯ ವಾತಾವರಣ ಇದೆಯೆಂದರೆ, ಹೀಗೆ ಕಡ್ಡಿಯಂತೆ ನಿಂತ ಎತ್ತರದ ವ್ಯಕ್ತಿ ಸುಜ್ಞಾನಮೂರ್ತಿ ಎಂದು ಯಾರಾದರೂ ಗುರುತಿಸುತ್ತಿದ್ದರು. ಹೀಗೆ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪ್ರಸಾರಾಂಗದ ಸಹಾಯಕ ನಿರ್ದೇಶಕರಾಗಿ 2020ರಲ್ಲಿ ನಿವೃತ್ತರಾಗುವವರೆಗೂ ತಮ್ಮ ವಿಶಿಷ್ಟ ನಡೆನುಡಿ, ಅಭಿರುಚಿಗಳ ಕಾರಣಕ್ಕೆ ಬದುಕಲ್ಲಿ ಬೆರಗು ಮೂಡಿಸಿದವರು. ಇಂತಹ ಪುಸ್ತಕ ವಿನ್ಯಾಸ ವಿಜ್ಞಾನಿ ಮತ್ತು ಅನುವಾದಕರ ಬಗೆಗೆ ಉಳಿದವರು ಕಂಡಂತಹ ಬರಹಗಳನ್ನು ಒಟ್ಟುಗೂಡಿಸಿ ‘ಬದುಕಿನ ಬೆರಗು’ ಎಂಬ ಅಭಿನಂದನಾ ಗ್ರಂಥವೂ ಪ್ರಕಟವಾಗಿದೆ. ಸುಜ್ಞಾನಮೂರ್ತಿ ಅನುವಾದಕರು, ಮಾತ್ರವಲ್ಲ ಕನ್ನಡ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಪುಸ್ತಕಗಳಿಗೆ ವಿಶಿಷ್ಟ ಛಾಪು ಮೂಡಿಸಿದವರು. ಇಂದು ಪುಸ್ತಕ ವಿನ್ಯಾಸದ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಆದರೆ ಇಂತಹ ತಂತ್ರಜ್ಞಾನ ಇಲ್ಲದ ಕಾಲದಲ್ಲಿ, ತಂತ್ರಜ್ಞಾನಕ್ಕೆ ಬೇಕಾದ ತಂತ್ರಾಂಶಗಳನ್ನು ರೂಪಿಸುವಷ್ಟು ಅನುಭವ ಹೊಂದಿದ್ದವರು.
ಅನುವಾದದಲ್ಲಿ ಸೃಜನಶೀಲ ಪ್ರಕಾರಗಳಾದ ಕಾವ್ಯ, ಕಥೆ, ಕಾದಂಬರಿಗಳ ಅನುವಾದವೇ ಹೆಚ್ಚಾಗಿದೆ. ಆದರೆ ಸುಜ್ಞಾನ ಮೂರ್ತಿ ಅವರು ವಿಶೇಷ ಅನ್ನಿಸುವುದು ಅವರ ವೈಚಾರಿಕ ಬರಹಗಳ ಅನುವಾದದಿಂದ. ಈ ಬಗ್ಗೆ ಅವರು ‘‘ವಿಚಾರ ಸಾಹಿತ್ಯ ನಮ್ಮ ಬದುಕನ್ನು ಸುಲಭವಾಗಿಸುತ್ತೆ, ಸುಖವಾಗಿಸುತ್ತೆ, ಮತ್ತು ಹಸನಾಗಿಸುತ್ತೆ ಎಂದು ಇಂದಿಗೂ ನಂಬಿದ್ದೇನೆ. ಸರಿಯಾದ ವಿಚಾರಗಳಿಂದ ಯುದ್ಧಗಳನ್ನೇ ತಪ್ಪಿಸಬಹುದೆಂದು ತೆಲುಗಿನ ಪ್ರಖ್ಯಾತ ಚಿಂತಕ ವಿ.ಆರ್. ನಾರ‌್ಲ ಹೇಳಿರುವುದು ಸತ್ಯವೆನಿಸುತ್ತಿದೆ. ದೇವರು, ಧರ್ಮ, ಜಾತಿ, ಕಂದಾಚಾರ, ಸಂಪ್ರದಾಯ ಮೂಢನಂಬಿಕೆ ಇವು ನನ್ನೊಳಗೆ ಇದುವರೆಗೂ ಬರದಂತೆ ವಿಚಾರ ಸಾಹಿತ್ಯ ನನ್ನನ್ನು ರೂಪಿಸಿದೆ’’ ಎನ್ನುತ್ತಾರೆ.
ಸುಜ್ಞಾನಮೂರ್ತಿ ಅವರ ಅನುವಾದಿತ ಕೃತಿಗಳನ್ನು ಪರಿಚಯಿಸುತ್ತಾ, ವಿಮರ್ಶೆ ಮಾಡುತ್ತಾ ಕನ್ನಡದ ವಿದ್ವತ್ ಲೋಕ ಕನ್ನಡಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಪರೀಕ್ಷಿಸುವ, ತೌಲನಿಕವಾಗಿ ಮೌಲ್ಯಮಾಪನ ಮಾಡುವ ಮತ್ತು ಕನ್ನಡದ ಗೈರುಹಾಜರಿಗಳನ್ನು ಗುರುತಿಸುವ ಪ್ರಯತ್ನಗಳೂ ನಡೆದಿವೆ. ಕೆ.ವಿ. ನಾರಾಯಣ ಅವರು ‘ಯಾರದೀ ಕಾಡು ಕೃತಿ’ ಬಗ್ಗೆ ಬರೆಯುತ್ತ, ‘‘ಮಹಾಶ್ವೇತಾ ದೇವಿಯವರು ಬಿರ್ಸಾ ಮುಂಡಾನ ಕೃತಿಯನ್ನು ಹಾಡಿನಲ್ಲಿ ಹೇಳುವುದನ್ನು ಕೇಳಿದ್ದೇನೆ. ಅವರು ಅವನನ್ನು ಹತ್ತಿರದ ವ್ಯಕ್ತಿಯಂತೆ ಬಲ್ಲರು, ಹಾಗಾಗಿಯೇ ಇಲ್ಲಿನ ನಿರೂಪಣೆಗೆ ಚರಿತ್ರೆಕಾರರ ‘ದೂರ’ ಅಥವಾ ರೋಚಕ ಕಾದಂಬರಿಗಳ ‘ಹತ್ತಿರ’ ಇವೆರಡಕ್ಕಿಂತ ಭಿನ್ನವಾದ ಅಂತರ ಲಭ್ಯವಾಗಿದೆ. ಕನ್ನಡಕ್ಕೆ ಇದೊಂದು ಹೊಸ ಮಾದರಿ’’ ಎನ್ನುತ್ತಾರೆ. ಓ.ಎಲ್. ನಾಗಭೂಷಣ ಅವರು ಕೊಡವಟಿಗಂಟಿ ಕುಟುಂಬರಾವ್ ಅವರ ‘ಚದುವು’ ಕಾದಂಬರಿಯ ಅನುವಾದ ‘ಓದು’ ಕೃತಿ ಬಗ್ಗೆ ಬರೆಯುತ್ತಾ, ‘‘ಚದುವು ಕಾದಂಬರಿ ‘ಓದು’ ಅಥವಾ ‘ಶಿಕ್ಷಣ’ ವ್ಯಕ್ತಿ ಮತ್ತು ಸಮಾಜದ ಬದುಕನ್ನು ಹೇಗೆ ತಿದ್ದುತ್ತದೆ ಎನ್ನುವುದನ್ನು ಮುಖ್ಯ ಥೀಮ್ ಆಗಿಸಿಕೊಂಡಿದೆ. ಲೇಖಕ ಅಥವಾ ಕಲಾವಿದನೊಬ್ಬ ಶಿಕ್ಷಣದ ಮೂಲಕ ರೂಪುಗೊಳ್ಳುವ ಬಗೆಯನ್ನು ಚಿತ್ರಿಸುವ ಶಿಕ್ಷಣ ಕಾದಂಬರಿಯ ಎರ್‌ಝೀಂಗ್ಸ್ ರೊಮಾನ್ (ಇಡಿziehuಟಿgsಡಿomಚಿಟಿ) ಎಂಬ ಒಂದು ಸಾಹಿತ್ಯ ಪ್ರಕಾರವೇ ಪಾಶ್ಚಾತ್ಯ ಕಾದಂಬರಿ ಲೋಕದಲ್ಲಿ ಕಾಣಸಿಗುತ್ತದೆ. ಕನ್ನಡದ ಕಾದಂಬರಿಗಳಲ್ಲಿ ಶಿಕ್ಷಣ ಒಂದು ಮುಖ್ಯ ಸಂಗತಿಯಾಗಿ ಎಲ್ಲಾ ಪ್ರಮುಖ ಲೇಖಕರಲ್ಲೂ ಸಿಗುತ್ತದೆ. ಕಾರಂತರ ‘ಮರಳಿ ಮಣ್ಣಿಗೆ’, ಕುವೆಂಪು ಅವರ ‘ಕಾನೂರು ಹೆಗ್ಗಡತಿ’, ರಾವ್‌ಬಹದ್ದೂರ್ ಅವರ ‘ಗ್ರಾಮಾಯಣ’ ಇಂಥ ಕತೆ, ಕಾದಂಬರಿಗಳಲ್ಲದೆ ಟಿ.ಪಿ. ಕೈಲಾಸಂ ಅವರ ‘ಪೋಲಿಕಿಟ್ಟಿ’ಯೂ ಸೇರಿದಂತೆ, ಲಂಕೇಶರ ‘ಉಮಾಪತಿಯ ಸ್ಕಾಲರ್‌ಶಿಪ್’ ಯಾತ್ರೆ ತನಕ’’ ಎಂದು ಇಡಿಯಾಗಿ ಕನ್ನಡ ಸಾಹಿತ್ಯದ ಜತೆ ತುಲನೆ ಮಾಡುತ್ತಾರೆ.
ಹೀಗೆ ಅರ್ಥಶಾಸ್ತ್ರಜ್ಞರಾದ ಟಿ.ಆರ್. ಚಂದ್ರಶೇಖರ್, ಡಾ. ಚಂದ್ರಪೂಜಾರಿ ಅವರು ಆರ್ಥಿಕ ಸಂಗತಿಗಳನ್ನು ಕರ್ನಾಟಕದ ಜತೆ ಹೋಲಿಕೆ ಮಾಡಿ ಬೊಜ್ಜಾ ತಾರಕಂ ಅವರ ‘ಎಸ್‌ಸಿ-ಎಸ್‌ಟಿ ಅನುದಾನ ಹಂಚಿಕೆ ವಾಪಾಸಾತಿ’ ಮತ್ತು ಪ್ರೊ. ಎಸ್. ಸಿಂಹಾದ್ರಿ ಅವರ ‘ಜಾತಿ ನೆರಳಲ್ಲಿ ಅಭಿವೃದ್ಧಿ ರಾಜಕೀಯ’ ಕೃತಿಗಳ ಕುರಿತು ಬರೆಯುತ್ತಾರೆ. ಸ್ವತಃ ಅನುವಾದಕರೂ ಆಗಿರುವ ಡಾ. ಮೋಹನ್ ಕುಂಟಾರ್ ಅವರು ಕನ್ನಡ ಅನುವಾದ ಪರಂಪರೆಯಲ್ಲಿ ಸುಜ್ಞಾನಮೂರ್ತಿ ಅವರ ಅನುವಾದಗಳನ್ನು ಅವಲೋಕಿಸುತ್ತಾ ‘‘ಒಂದು ನಿರ್ದಿಷ್ಟ ಚಿಂತನೆಯನ್ನು ಕೇಂದ್ರವಾಗಿರಿಸಿ ಬೇರೆ ಬೇರೆ ಭಾಷೆಗಳ ಲೇಖಕರ ಕೃತಿಗಳನ್ನು ಇಷ್ಟು ಪ್ರಮಾಣದಲ್ಲಿ ಅನುವಾದಕರೊಬ್ಬರೇ ಕನ್ನಡದಲ್ಲಿ ನೀಡಿದ ಉದಾಹರಣೆ ಸುಜ್ಞಾನಮೂರ್ತಿ ಅವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ’’ ಎನ್ನುತ್ತಾರೆ. ಹೀಗೆ ಸುಜ್ಞಾನಮೂರ್ತಿಗಳ ಅನುವಾದಗಳು ಕನ್ನಡದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ತೌಲನಿಕವಾಗಿ ಪರೀಕ್ಷಿಸುವಂತೆ ಮಾಡಿವೆ. ಇದೊಂದು ಮಹತ್ವದ ಸಂಗತಿ. ಕಾರಣವೆಂದರೆ ನೆರೆಯ ಭಾಷೆಗಳಾದ ತಮಿಳು, ಮಲಯಾಳಂ, ಮರಾಠಿ ಭಾಷಿಕ ಪರಿಸರದ ಜತೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ತೌಲನಿಕವಾಗಿ ಪರಿಶೀಲಿಸುವಷ್ಟು ವಿಪುಲ ಅನುವಾದಗಳು ಇಲ್ಲದಿರುವ ಗೈರುಹಾಜರಿ ಎದ್ದು ಕಾಣುತ್ತದೆ.
ಸುಜ್ಞಾನಮೂರ್ತಿ ಅವರ ಎಲ್ಲಾ ಅನುವಾದಗಳಲ್ಲಿ ಚಳವಳಿ-ಹೋರಾಟದ ಎಳೆಗಳು ಹಾಸುಹೊಕ್ಕಾಗಿವೆ. ಇದನ್ನು ಇನ್ನಷ್ಟು ನಿರ್ದಿಷ್ಟವಾಗಿ ಹೇಳುವುದಾದರೆ, ರೈತ, ಆದಿವಾಸಿ ಬುಡಕಟ್ಟು, ಮಹಿಳೆ, ದಲಿತ, ವಿದ್ಯಾರ್ಥಿ ಚಳವಳಿಗಳ ಭೂತ, ವರ್ತಮಾನ ಮತ್ತು ಭವಿಷ್ಯದ ಬಗೆಗಿನ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಹಾಗಾಗಿ ಈ ಮೇಲಿನ ಎಲ್ಲಾ ಚಳವಳಿಗಳ ತಿಳುವಳಿಕೆಯನ್ನು ವಿಸ್ತರಿಸುತ್ತ ಪರೋಕ್ಷವಾಗಿ ಈ ಚಳವಳಿಗಳ ಸಂಗಾತಿಯೂ ಆಗಿದ್ದಾರೆ. ಈ ಮೂಲಕ ಕನ್ನಡದಲ್ಲಿ ಸಬಾಲ್ಟ್ರನ್ ಚಿಂತನೆಯನ್ನು ಬೆಳೆಸಲು ಮೂರ್ತಿ ಅವರ ಅನುವಾದಗಳು ನೆರವಾಗಿವೆ. ಮಾರ್ಕ್ಸ್‌ವಾದ, ಮಹಿಳಾವಾದ, ಅಂಬೇಡ್ಕರ್‌ವಾದಗಳ ಕುರುಡು ಆರಾಧನೆಯ ಕೃತಿಗಳನ್ನು ಅನುವಾದಿಸಿಲ್ಲ, ಬದಲಾಗಿ ಈ ವಾದಗಳ ಬಗೆಗಿನ ವಿಮರ್ಶಾತ್ಮಕ ಅಂತರ ಕಾಯ್ದುಕೊಂಡ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಈ ಮೂಲಕ ಎಲ್ಲಾ ಬಗೆಯ ಶೋಷಣೆ ಮುಕ್ತವಾದ ಮನುಷ್ಯ ಘನತೆಯ ಬದುಕು ಸಾಧ್ಯವಾಗಲಿ ಎನ್ನುವುದು ಅನುವಾದಗಳ ಕನಸಾಗಿದೆ.
ಮೂರ್ತಿಯವರು ವಿಶ್ವವಿದ್ಯಾಲಯದ ಒಳಗಿದ್ದೂ, ಕಂಚಾ ಐಲಯ್ಯ ಅವರ ‘ಇಂಟಲೆಕ್ಚವಲ್ ಗೂಂಡಾಗಳು’, ‘ವಿಶ್ವವಿದ್ಯಾಲಯಗಳಲ್ಲಿ ಜ್ಯೋತಿಷ್ಯದ ಗೆದ್ದಲು’ ಮುಂತಾದ ಕೃತಿಗಳನ್ನು ಅನುವಾದಿಸುವಾಗ ಸ್ವತಃ ತಾನಿರುವ ವಿಶ್ವವಿದ್ಯಾನಿಲಯದ ಅಧ್ಯಾಪಕರ ಜಡತೆಯನ್ನು ಜಾಡಿಸುವ ಅಪೇಕ್ಷೆಯೂ ಗುಪ್ತವಾಗಿ ಅಡಗಿದಂತಿದೆ. ಒಟ್ಟಾರೆ ಬಹುತ್ವ ಭಾರತದ ಸಾಕ್ಷ್ಯಗಳನ್ನು ಅನುವಾದಗಳ ಮೂಲಕ ನೀಡಿದ್ದಾರೆ. ಕೇರಳದ ದಲಿತ ಹೋರಾಟಗಾರ ಅಯ್ಯನ್ ಕಾಳಿ ಮತ್ತು ಆದಿವಾಸಿಗಳನ್ನು ಸಂಘಟಿಸಿದ ಸಿ.ಕೆ. ಜಾನು, ಮಾನವ ಹಕ್ಕುಗಳ ಹೋರಾಟಗಾರ ಈಚರ್ ವಾರಿಯರ್, ತಮಿಳುನಾಡಿನ ಬೌದ್ಧ ಚಳವಳಿಗಾರ ಅಯೋತಿದಾಸ್ ಮತ್ತು ಪೆರಿಯಾರ್, ಆಂಧ್ರದ ‘ಕೊಮರಂ ಭೀಮು’ ಈ ಹೋರಾಟಗಾರರ ಕೃತಿಗಳ ಮೂಲಕ ದ್ರಾವಿಡ ಸಂಸ್ಕೃತಿಯ ಹೋರಾಟ ಮತ್ತು ವೈಚಾರಿಕತೆಯನ್ನು ಕನ್ನಡ ಸಂಸ್ಕೃತಿಗೆ ಕಸಿ ಮಾಡುವ ಕೆಲಸವನ್ನು ಸುಜ್ಞಾನಮೂರ್ತಿಗಳು ಮಾಡಿದ್ದಾರೆ.
ಸುಜ್ಞಾನಮೂರ್ತಿ ಅವರು ಅನುವಾದಿಸಿದ ಎಲ್ಲಾ ಪುಸ್ತಕಗಳಿಗೂ ‘ಅನುವಾದಕನ ಅರಿಕೆ’ ಎಂಬ ಪುಟ್ಟದಾದ ಪ್ರವೇಶಿಕೆ ಬರೆದಿದ್ದಾರೆ. ಈ ಪ್ರವೇಶಿಕೆಯಲ್ಲಿ ಅನುವಾದಿತ ಕೃತಿಯನ್ನು ಸೂಕ್ಷ್ಮವಾಗಿ ಪರಿಚಯಿಸಿ, ಅದರ ಮಹತ್ವವನ್ನು ತಿಳಿಸಿ, ಆ ಕೃತಿಯು ಕನ್ನಡಕ್ಕೆ ಏಕೆ ಬೇಕು ಎನ್ನುವ ಸ್ಪಷ್ಟತೆಯನ್ನು ಕೊಡುತ್ತಾರೆ. ಈ ಅರಿಕೆಗಳನ್ನು ಗಮನಿಸಿದರೆ ಮೂರ್ತಿಯವರು ಕೇವಲ ಯಾಂತ್ರಿಕ ಅನುವಾದಕರಲ್ಲ ಪ್ರಖರ ವೈಚಾರಿಕ ಸ್ಪಷ್ಟತೆ ಇರುವ, ಆಯಾ ವಿಷಯಗಳ ಬಗ್ಗೆ ಸೂಕ್ಷ್ಮ ಒಳನೋಟಗಳಿರುವ ತಜ್ಞರು ಎನ್ನುವುದು ತಿಳಿಯುತ್ತದೆ. ಪೆರಿಯಾರ್ ಅವರ ‘ದಿಟ ರಾಮಾಯಣ’ದ ಅರಿಕೆಯಲ್ಲಿ ‘ನಮ್ಮಲ್ಲೊಂದು ವೈಚಾರಿಕ ವಿವೇಕ ಸೃಷ್ಟಿಸುವ, ಪುರಾಣ ಮತ್ತು ಚರಿತ್ರೆಯನ್ನು ಗ್ರಹಿಸಲು ನಿಖರ ದೃಷ್ಟಿಕೋನವನ್ನು ನೀಡುವ ಈ ಕೃತಿ ಕನ್ನಡದ ಸಂದರ್ಭದಲ್ಲಿ ಮಹತ್ವವಾದುದು ಎಂದು ನಂಬಿದ್ದೇನೆ’ ಎನ್ನುತ್ತಾರೆ. ತೆಲುಗಿನ ಓಲ್ಗಾ ಅವರ ‘ಸ್ತ್ರೀವಾದಿ ಅರಿವಿನ ಹಾದಿ’ ಕೃತಿಯ ಆರಂಭಕ್ಕೆ ‘‘ರಚನೆ ಮತ್ತು ಆಲೋಚನಾ ವಿಧಾನಗಳಲ್ಲಿ ತೀರಾ ಭಿನ್ನವೆನಿಸುವ ಈ ಕೃತಿಯನ್ನು ಕನ್ನಡದ ಅರಿವಿನ ಹಾದಿಗಳು ಮತ್ತಷ್ಟು ವಿಸ್ತರಿಸಲಿ ಎಂಬ ಮಹದಾಸೆಯಿಂದ ಕನ್ನಡಕ್ಕೆ ಇದನ್ನು ಅನುವಾದಿಸಿದ್ದೇನೆ’’ ಎನ್ನುತ್ತಾರೆ. ತೆಲಂಗಾಣ ರೈತ ಹೋರಾಟ ಕೃತಿಯ ಅರಿಕೆಯಲ್ಲಿ ‘‘ಸಾಮಾನ್ಯರೇ ನೇತೃತ್ವ ವಹಿಸಿದ ಅಸಾಮಾನ್ಯ ಹೋರಾಟವೇ ವೀರ ತೆಲಂಗಾಣ ವಿಪ್ಲವ. ಚರಿತ್ರೆಯ ವಿದ್ಯಮಾನಗಳನ್ನು ಶ್ರಮಿಕರ ಮತ್ತು ಸಾಮಾನ್ಯರ ನೆಲೆಯಿಂದ ಚಿತ್ರಿಸಿದ ಈ ಕೃತಿ ನಮ್ಮ ಅರಿವನ್ನು ವಿಸ್ತರಿಸುತ್ತದೆ. ಈ ಹೋರಾಟ ನನ್ನಲ್ಲೊಂದು ರೋಮಾಂಚನ ಹುಟ್ಟಿಸಿದೆ, ಶ್ರಮಜೀವಿಗಳ ಬೆವರನ್ನು ಗೌರವಿಸುವವರು ಈ ಪುಸ್ತಕವನ್ನು ಓದಲಿ ಎನ್ನುವುದು ನನ್ನ ಅಪೇಕ್ಷೆ. ಈ ಆಶಯ ಈಡೇರಿದರೆ ನಾನು ನಿಜಕ್ಕೂ ಧನ್ಯ’’ ಎನ್ನುತ್ತಾರೆ. ಈ ಎಲ್ಲಾ ಅನುವಾದಗಳ ಅರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೂರ್ತಿಯವರು ತಮ್ಮ ಅನುವಾದಗಳ ಮೊದಲ ವಿಮರ್ಶಕರೂ ಕೂಡ. ಅಂತೆಯೇ ಕನ್ನಡದ ಓದುಗರು ಓದಲಿ, ವೈಚಾರಿಕ ಅರಿವು ವಿಸ್ತರಿಸಲಿ ಎಂಬ ಅಪೇಕ್ಷೆ ನೈಜ ಕಾಳಜಿಯುಳ್ಳದ್ದು.
ಸುಜ್ಞಾನಮೂರ್ತಿಗಳು ವಿದ್ಯಾರ್ಥಿ ಸ್ನೇಹಿ. ಕನ್ನಡ ವಿವಿಯಲ್ಲಿ ಅಧ್ಯಾಪಕರಾಗುವ ಅವಕಾಶವಿದ್ದರೂ ಪ್ರಸಾರಾಂಗವನ್ನು ಆಯ್ದು ಕೊಳ್ಳುತ್ತಾರೆ. ಮೂರ್ತಿಯವರು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಇರುವಷ್ಟು ದಿನ ವಿದ್ಯಾರ್ಥಿಗಳ ವಿವೇಕವನ್ನು ಅನೌಪಚಾರಿಕ ಮಾತುಕತೆಗಳ ಮೂಲಕ ತಿದ್ದಿದ್ದಾರೆ. ಮೂರ್ತಿಯವರ ಕೈಗೆ ಕರಡು ತಿದ್ದಲು ಬಂದ ಸಂಶೋಧನಾ ಪ್ರಬಂಧಗಳನ್ನು ವಿಸ್ತರಿಸಲು, ತಪ್ಪುಗಳನ್ನು ತಿದ್ದಲು ಸೂಚಿಸಿದ್ದಾರೆ. ಅಗತ್ಯವಾಗಿ ಓದಬೇಕಾದ ಪುಸ್ತಕಗಳ ಓದುವಂತೆ ಮಾಡಿ ಸಂಶೋಧನಾ ಪ್ರಬಂಧಗಳ ಗುಣಮಟ್ಟ ಸುಧಾರಿಸಲು ನೆರವಾಗಿದ್ದಾರೆ. ಈ ಅರ್ಥದಲ್ಲಿ ಕನ್ನಡ ವಿಶ್ವವಿದ್ಯಾನಿಲಯಗಳ ಕೆಲವು ಸಂಶೋಧನೆಗಳಿಗೆ ಅನೌಪಚಾರಿಕ ಮಾರ್ಗದರ್ಶಕರಾಗಿದ್ದಾರೆ. ರೋಹಿತ್ ವೇಮುಲಾರ ಕುರಿತ ‘ಕತ್ತಲ ನಕ್ಷತ್ರ’ ಕೃತಿಯನ್ನು ಕನ್ನಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಅರ್ಪಿಸಿದ್ದಾರೆ. ಹೀಗಾಗಿ ಸುಜ್ಞಾನ ಮೂರ್ತಿಗಳ ಅನುವಾದಗಳನ್ನು ಕನ್ನಡ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಥಾಟ್ ಪ್ರಭಾವಿಸಿದೆ. ಅಂತೆಯೇ ಕನ್ನಡ ವಿಶ್ವವಿದ್ಯಾನಿಲಯದ ಚಿಂತನಾ ಕ್ರಮವನ್ನು ಮೂರ್ತಿಗಳು ತಮ್ಮ ಅನುವಾದಗಳ ಮೂಲಕ ತಿದ್ದುವ, ವಿಸ್ತರಿಸುವ, ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ. ಸುಜ್ಞಾನ ಮೂರ್ತಿಗಳು ಓದುಗಸ್ನೇಹಿ ಅನುವಾದಕರು. ಒಂದು ಓದಿನಲ್ಲಿ ಮುಗಿಯಬೇಕು ಅಂತಹ ಪುಟ್ಟ ಪುಟ್ಟ ಕೃತಿಗಳನ್ನು ಅನುವಾದಿಸಿದ್ದಾರೆ. ಪುಸ್ತಕವನ್ನು ಅಂದಗೊಳಿಸುವ ವಿನ್ಯಾಸಕಾರರಾಗಿಯೂ, ತಂತ್ರಜ್ಞರಾಗಿಯೂ ಇವರು ದುಡಿದಿದ್ದಾರೆ. ಸುಜ್ಞಾನ ಮೂರ್ತಿ ಅವರಿಂದ ಮತ್ತಷ್ಟು ಮಹತ್ವದ ಕೃತಿಗಳು ಕನ್ನಡಕ್ಕೆ ಬರಲೆಂದು ಆಶಿಸೋಣ.







