‘ದೇವಿ ಮಹಾತ್ಮೆ’ ಪಠ್ಯದ ಸಾಂಸ್ಕೃತಿಕ ಬಹುತ್ವ

ಕರ್ನಾಟಕದಲ್ಲಿ ‘ದೇವಿ ಮಹಾತ್ಮೆ’ ಬಹುಪಠ್ಯಗಳಲ್ಲಿ ಕಂಡು ಬರುತ್ತದೆ. ಈ ತನಕದ ದೇವಿಮಹಾತ್ಮೆಯ ಪಠ್ಯಗಳನ್ನು ಪರಿಶೀಲಿಸಿದರೆ, ಚಿದಾನಂದಾವಧೂತರದೇ ಮೂಲ ಪಠ್ಯ ಅನ್ನಿಸುತ್ತದೆ. 1750ರ ನಂತರದಲ್ಲಿ ಮೈಸೂರಿನ ಮುಮ್ಮಡಿ ಕೃಷ್ಣರಾಜರು (1794-1868) ಮಾರ್ಕಂಡೇಯ ಪುರಾಣವನ್ನು ಆಧರಿಸಿ ದೇವಿಮಹಾತ್ಮೆ ಬರೆದರು. ನಂತರ ಈ ಮೂಲಕಥೆಯನ್ನು ಆಧರಿಸಿ ಭಾಗವತರು, ಬಯಲಾಟದ ಕವಿಗಳು ಸ್ಥಳೀಯವಾಗಿ ನೂರಾರು ಪಠ್ಯಗಳನ್ನು ರಚಿಸಿದ್ದಾರೆ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಸಂಪಾದಿಸಿದ ‘ಯಕ್ಷಗಾನ ಕವಿಚರಿತೆ’ಯಲ್ಲಿ 30 ಜನ ಭಾಗವತರು ದೇವಿಮಹಾತ್ಮೆಯ ಮರು ಪಠ್ಯಗಳನ್ನು ಬರೆದ ಬಗ್ಗೆ ಮಾಹಿತಿ ಇದೆ.
ಕರ್ನಾಟಕದಲ್ಲಿ ವಾರ್ಷಿಕವಾಗಿ ಹೆಚ್ಚು ಪ್ರದರ್ಶನಗೊಳ್ಳುವ ಪಠ್ಯಗಳಲ್ಲಿ ‘ದೇವಿಮಹಾತ್ಮೆ’ ಮುಖ್ಯವಾಗಿದೆ. ಇದು ತೆಂಕುತಿಟ್ಟು ಯಕ್ಷಗಾನಲ್ಲಿ ಸಂಚಲನ ಮೂಡಿಸಿದ ಪ್ರಸಂಗ. ಇಂದಿಗೂ ವಾರ್ಷಿಕ ಸರಾಸರಿ 800ಕ್ಕೂ ಹೆಚ್ಚು ಸಲ ಪ್ರದರ್ಶನಗೊಳ್ಳುತ್ತದೆ. ಪ್ರತೀ ವರ್ಷ ಕೋಟ್ಯಂತರ ವ್ಯವಹಾರಕ್ಕೆ ಕಾರಣವಾದ ಈ ಪಠ್ಯ ಕೇವಲ ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿಯೂ ಚಾಲ್ತಿಯಲ್ಲಿದೆ. ದಕ್ಷಿಣ ಕನ್ನಡ ಭಾಗದಲ್ಲಿ ಯಕ್ಷಗಾನದ ಮಾದರಿಯಲ್ಲಿದ್ದರೆ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಬಯಲಾಟದ ಸಣ್ಣಾಟ, ದೊಡ್ಡಾಟಗಳ ರೂಪದಲ್ಲಿದೆ.
ಶಾಕ್ತಪಂಥದಲ್ಲಿ ಬೇರುಬಿಟ್ಟು ಹುಲುಸಾಗಿ ಬೆಳೆದ ಬೆಳೆ ‘ದೇವಿಮಹಾತ್ಮೆ’. ಕರ್ನಾಟಕದ ಸಂದರ್ಭದಲ್ಲಿ ಬೌದ್ಧ, ಜೈನ, ಕಾಪಾಲಿಕ, ಕಾಳಾಮುಖ, ಕೌಳ, ಶಾಕ್ತ, ತಂತ್ರ, ನಾಥ, ಆರೂಢ, ಅವಧೂತ, ಸೂಫಿ, ದತ್ತ, ಆಜೀವಿಕ, ಅಚಲ, ಅಮನಸ್ಕ, ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಚಾರ್ವಾಕ, ಸಾಂಖ್ಯ, ಯೋಗ ಮೊದಲಾದ ದರ್ಶನ ಮತ್ತು ಪಂಥಗಳು ನೆಲೆಗೊಂಡು ಇಲ್ಲಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಬೇರುಬಿಟ್ಟಿವೆ. ಈ ಎಲ್ಲಾ ಶಕ್ತಿಯನ್ನು ಹೀರಿಕೊಂಡು ಬೆಳೆದ ಗಿಡಮರಗಳೇ ಇಂದು ದಟ್ಟ ಕಾಡಾಗಿವೆ. ಇಂತಹ ಪಂಥಗಳಲ್ಲಿ ಶಾಕ್ತ ಪಂಥವೂ ಒಂದು.
ಶಕ್ತಿಗೆ ಹೆಣ್ಣುಬಲ, ಶಿವನ ಸತಿ, ಆಯುಧ, ಮಂತ್ರ ಸಾಧನ ಮುಂತಾದ ಅರ್ಥಗಳಿವೆ. ಶಿವನು ಶಕ್ತಿಯ ಜತೆ ಇರುವುದರಿಂದ ಸೃಷ್ಟಿಕ್ರಿಯೆಯಲ್ಲಿ ತೊಡಗಿರುವನು. ಶಕ್ತಿ ಇಲ್ಲದೆ ಹೋದರೆ ಅವನು ಅಲುಗಾಡಲು ಆಗುವುದಿಲ್ಲ. ಶಿವ ಶಕ್ತಿ ಇಲ್ಲದೆ ಏನನ್ನೂ ಮಾಡಲಾರನು. ಹಾಗಾಗಿ ಶಿವ ತತ್ವಕ್ಕಿಂತ ಶಾಕ್ತವು ಸಮಸ್ತ ಲೋಕವನ್ನೂ ಒಳಗೊಳ್ಳುತ್ತದೆ ಎಂದು ಪ್ರತೀತಿಯಲ್ಲಿದೆ. ಹಾಗಾಗಿಯೇ ದ.ರಾ.ಬೇಂದ್ರೆಯವರು ಸೌಂದರ್ಯ ಲಹರಿಯ ಮೊದಲ ಸ್ತೋತ್ರದಲ್ಲಿ ‘‘ಶಿವನು ಶಕ್ತಿಯುತನಾದರೇಯೆ ಜಗ ಪಡೆಯಲಾಪನವನು, ಇಲ್ಲದಿರಲು ಮಿಡುಕಾಟ ಕೂಡ ಅವನಿಗಿಲ್ಲ, ಅವನು ಶವನು’’ ಎನ್ನುತ್ತಾರೆ. ಭಾರತದಲ್ಲಿ ಬಂಗಾಳ ಮತ್ತು ಅಸ್ಸಾಂ ಬಿಟ್ಟರೆ, ಶಾಕ್ತ ಆರಾಧನೆ ದಟ್ಟವಾಗಿರುವ ಪ್ರದೇಶಗಳಲ್ಲಿ ಕರ್ನಾಟಕವೂ ಒಂದು. ಬಹುಶಃ ಕರ್ನಾಟಕದಲ್ಲಿ ಶಾಕ್ತ ದೈವವಿಲ್ಲದ ಊರಿಲ್ಲ. ಬಳರಿ, ಮಾಳಚಿ, ಗುಳ್ಳವ್ವ, ಮಾರಬ್ಬೆ, ಮಾಸಕಬ್ಬೆ, ಎಕ್ಕಲಮ್ಮ, ಬನದಮ್ಮ, ಭಗವತಿ ಮೊದಲಾದ ದೇವತೆಗಳು ಕರ್ನಾಟಕದ ಪ್ರಾಚೀನತೆಗೆ ಸಂಬಂಧಿಸಿದಂತೆ ಉಲ್ಲೇಖವಾಗುತ್ತವೆ. ಅದರಲ್ಲೂ ಹೊಲೇರ ದೇವತೆ ಬಳರಿ ಪ್ರಾಚೀನ ಶಾಸನ ಮತ್ತು ಪಠ್ಯಗಳಲ್ಲಿ ಬರುತ್ತಾಳೆ. ವಚನಕಾರರ ಕಾಲಕ್ಕೆ ಈ ದೇವಿಯರು ಜನಮಾನಸದಲ್ಲಿ ಬಹುವಾಗಿ ನೆಲೆಸಿದಂತೆ ಕಾಣುತ್ತದೆ. ಹಾಗಾಗಿಯೇ ವಚನಕಾರರು ಮಾರಿ ಮಸಣೆ ಬಣಗು ದೈವಗಳ ನಿಂದೆ ಮಾಡುತ್ತಾರೆ. ಈ ನೆಲೆಯ ಚರ್ಚೆಯನ್ನು ಪ್ರೊ. ರಹಮತ್ ತರೀಕೆರೆ ಅವರು ‘ಕರ್ನಾಟಕ ಶಾಕ್ತಪಂಥ’ ಕೃತಿಯಲ್ಲಿ ಆಳವಾಗಿ ಚರ್ಚಿಸಿದ್ದಾರೆ.
ಹೀಗೆ ಶಾಕ್ತ ಪರಂಪರೆಯ ಹಿನ್ನೆಲೆಯಲ್ಲಿ ‘ದೇವಿಮಹಾತ್ಮೆ’ ಪಠ್ಯವನ್ನು ನೋಡಬೇಕಿದೆ. ಈ ಶಕ್ತಿಯ ಕಥನದಲ್ಲಿ ‘ರಕ್ಕಸು ದೈವದ’ ಸಂಘರ್ಷ ಪ್ರಾಮುಖ್ಯತೆ ಪಡೆಯುತ್ತದೆ. ‘ಎಡದಲ್ಲಿ ರಕ್ಸಿಯೂ, ಬಲದಲ್ಲಿ ರಕ್ಸಿಯೂ’ ಎಂಬ ಉಲ್ಲೇಖ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಉಜ್ಜನಿ ಚೌಡಮ್ಮನ ಬಗೆಗಿನ ಹಾಡುಗಳಲ್ಲಿ ಬರುತ್ತದೆ. ಅಂತೆಯೇ ಅಂತರಗಟ್ಟೆಮ್ಮನಲ್ಲೂ ಅಮ್ಮನ ಜತೆ ರಕ್ಕಸನ ಮುಖವಾಡವಿದೆ. ಬಸರೂರಿನ ಅಮ್ಮನ ಪಕ್ಕ ರಕ್ಕಸನ ಮೂರ್ತಿಯಿದೆ. ಚಂದ್ರಗುತ್ತಿಯ ಶೂಲದ ಬೀರರು ರಕ್ಕಸರನ್ನೇ ಪ್ರತಿನಿಧಿಸುವಂತಿದೆ. ಇದನ್ನೆಲ್ಲಾ ಗಮನಿಸಿದರೆ ದೇವಿ ಪುರಾಣದ ರಕ್ಕಸ ಸಂಹಾರಕ್ಕೂ ಈ ದೈವಗಳಿಗೂ ಸಂಬಂಧ ಇರುವುದು ಅರಿವಿಗೆ ಬರುತ್ತದೆ.
ಈ ಬಗೆಯ ಶಾಕ್ತಪಂಥದ ಚಾರಿತ್ರಿಕ ಹಿನ್ನೆಲೆಯಿಂದ ದೇವಿಮಹಾತ್ಮೆ ಪಠ್ಯವನ್ನು ಪ್ರವೇಶಿಸುವ ಅಗತ್ಯವಿದೆ. ದೇವಿಮಹಾತ್ಮೆ ಪಠ್ಯಗಳಲ್ಲಿ ಮೂರು ಬಗೆಯ ಬೆಳವಣಿಗೆಗಳನ್ನು ಗುರುತಿಸಬಹುದು. ಮೊದಲನೆಯದಾಗಿ ಚಿದಾನಂದಾವಧೂತರ (1750) ದೇವಿಮಹಾತ್ಮೆ ಮುಖ್ಯವಾದುದು. ಭಾಮಿನಿಷಟ್ಪದಿಯಲ್ಲಿ 18 ಸಂಧಿಗಳೂ, 796 ಪದ್ಯಗಳೂ ಇರುವ ಪಠ್ಯ. ಇದು ಮೂಲತಃ ಅನುವಾದ ಕೃತಿ. ಸಂಸ್ಕೃತ ದೇವಿಮಹಾತ್ಮೆಯ ಕನ್ನಡ ಅನುವಾದವಾಗಿದೆ. ತನ್ನ ಗುರು ಚಿದಾನಂದರ ಆಜ್ಞೆಯಿಂದ ಇದನ್ನು ಅನುವಾದ ಮಾಡಿದ್ದಾಗಿ ಉಲ್ಲೇಖವಿದೆ. ಇದಕ್ಕೆ ‘ಪಾರ್ವತಿ ಮಹಾತ್ಮೆ’ ಎನ್ನುವ ಪರ್ಯಾಯ ಹೆಸರು ಕೂಡ ಇದೆ. ಎರಡನೆಯದಾಗಿ ಪುರಾಣದ ನೆಲೆ ಇರುವುದನ್ನು ಗಮನಿಸಬೇಕು. ದೇವಿಮಹಾತ್ಮೆಯು ಮಾರ್ಕಂಡೇಯ ಪುರಾಣದ 13 ಅಧ್ಯಾಯಗಳಲ್ಲಿ ವರ್ಣನೆಗೊಂಡಿದೆ. ಮಾರ್ಕಂಡೇಯ ಮುನಿ ಶ್ರೌಷ್ಟುಕಿಗೆ ದೇವಿ ಮಹಾತ್ಮೆ ಕತೆಯನ್ನು ಹೇಳುತ್ತಾನೆ.
ಚಿದಾನಂದಾವಧೂತರ ಪಠ್ಯದಲ್ಲಿ ಅಮರಾವತಿ ಪಟ್ಟಣ, ಶಚಿ, ರಂಬೆ ದೇವೇಂದ್ರನ ಅರಮನೆಯಲ್ಲಿ ವಾಸವಾಗಿರುತ್ತಾರೆ. ಅಸುರ ಶುಂಭ ಶಚಿಯನ್ನು ಅಪಹರಿಸಿ ಹಿಂಸೆ ಮಾಡುತ್ತಾನೆ. ಇವಳು ದೇವತೆಗಳ ಮೊರೆ ಹೋಗುತ್ತಾಳೆ. ನಾರದ ಹಿಮಾಲಯದಲ್ಲಿರುವ ಶಕ್ತಿದೇವತೆಯ ಬಗ್ಗೆ ವರ್ಣನೆ ಮಾಡಿ, ಅವಳನ್ನು ಪಡೆ ಎಂದು ಶುಂಭನಿಗೆ ಹೇಳುತ್ತಾನೆ. ಶುಂಭನು ನಾರದನ ವರ್ಣನೆಯನ್ನು ಕೇಳಿ ಮೋಹಿತನಾಗಿ ಅವಳನ್ನು ಮನವೊಲಿಸಿ ಕರೆತರಲು ಸುಗ್ರೀವ, ದೂಮ್ರಾಕ್ಷ, ಚಂಡ-ಮುಂಡ, ರಕ್ತಬೀಜ, ನಿಶುಂಭರನ್ನು ಕಳಿಸಿ, ಕೊನೆಗೆ ಶುಂಭ ತಾನೇ ಹೋಗುತ್ತಾನೆ. ಇನ್ನು ರೇಣುಕೆಯ ಕಥನವನ್ನು ‘ದೇವಿಮಹಾತ್ಮೆ’ ಎನ್ನುವ ಹೆಸರಲ್ಲಿ ದೇವಿಕತೆಯನ್ನು ಹೇಳುವುದೂ ಇದೆ. ಇದು ಇನ್ನೂ ಮುಂದುವರಿದು ಆಯಾ ಊರಿನ ದೇವಿಯ ಕತೆಯನ್ನೂ ದೇವಿಮಹಾತ್ಮೆ ಎಂದು ಗುರುತಿಸುವ ಪರಿಪಾಟವೂ ಇದೆ. ಹಾಗಾಗಿಯೇ ದುರ್ಗಾವಿಜಯ, ಚಾಮುಂಡೇಶ್ವರಿ ಮಹಾತ್ಮೆ ಮುಂತಾದ ಸ್ಥಳೀಯ ಪಠ್ಯಗಳಿರುವುದನ್ನು ಗಮನಿಸಬಹುದು.
ಮುಖ್ಯವಾಗಿ ಶಕ್ತಿಯಲ್ಲಿ ಎರಡು ಮುಖಗಳಿವೆ. ಒಂದನೆಯದು ಶಕ್ತಿಯ ಉಗ್ರ ಸ್ವರೂಪದ್ದು. ಇದು ನಾಶಕ್ಕೆ ಸಂಬಂಧಿಸಿದ್ದು. ದುರ್ಗಿ, ಚಾಮುಂಡಿ, ಕಾಳಿ, ಮೋಹಿನಿ ಮುಂತಾದವುಗಳನ್ನು ನೋಡಬಹುದು. ಮತ್ತೊಂದು ಪಾರ್ವತಿ, ಉಮೆ, ಶಂಕರಿ, ಲಕ್ಕವ್ವನಂತಹ ಶಕ್ತಿಯ ಸೌಮ್ಯ ಸ್ವರೂಪ ಫಲವಂತಿಕೆಯದು. ಇದರಲ್ಲಿ ದೇವಿಮಹಾತ್ಮೆ ದೇವಿಯ ಉಗ್ರ ಸ್ವರೂಪಿಣಿಯ ಕತೆಯಾಗಿದೆ. ಮೂರನೆಯದಾಗಿ ಬ್ರಾಹ್ಮಣ ಕನ್ಯೆ ದಲಿತನನ್ನು ವರಿಸುವ, ನಂತರ ಸೇಡು ತೀರಿಸಿಕೊಳ್ಳಲು ದಲಿತನನ್ನು ಸಂಹಾರ ಮಾಡುವ ಕಥನವೂ ‘ದೇವಿಮಹಾತ್ಮೆ’ ಕಥನವಾಗಿ ಕೆಲವೆಡೆ ಇದೆ. ಈ ಕಥನದಲ್ಲಿ ಆರ್ಯ-ದ್ರಾವಿಡ, ಮಾತೃ-ಪಿತೃ ಪ್ರಧಾನತೆಯ ಸಂಘರ್ಷವಿರುವುದು ಮುಖ್ಯವಾಗಿದೆ.
ಈ ಬಗೆಯ ದೇವಿಮಹಾತ್ಮೆಗಳಲ್ಲಿ ಹಿಮಾಲಯದ ಶಾಂಭವಿಯನ್ನು ವರಿಸಲು ದ್ರಾವಿಡರು ಉತ್ತರಭಾರತಕ್ಕೆ ಹೋಗುವ ಚಲನೆ ವಿಶಿಷ್ಟವಾಗಿದೆ. ಇದೊಂದು ರೀತಿಯಲ್ಲಿ ಉತ್ತರಭಾರತ ಮತ್ತು ದಕ್ಷಿಣ ಭಾರತದ ಮುಖಾಮುಖಿಯಾಗಿದೆ. ಕಾರಣ ಶಾಂಭವಿಯ ವಾಹನ ಸಿಂಹ. ದಕ್ಷಿಣ ಭಾರತದ ಕಾಡುಗಳಲ್ಲಿ ಸಿಂಹವು ನೆಲೆಗೊಂಡಿಲ್ಲದ ಕಾರಣ ದಕ್ಷಿಣ ಭಾರತದ ಯಾವುದೇ ದೇವಿಗೆ ಸಿಂಹವು ವಾಹನವಲ್ಲ. ಆದರೆ ದೇವಿಮಹಾತ್ಮೆಯ ಸಿಂಹವು ಉತ್ತರಭಾರತದ ಗುರುತನ್ನು ದಕ್ಷಿಣದಲ್ಲಿ ಚಾಲನೆಗೊಳಿಸುತ್ತಿದೆ. ರಾ.ಚಿಂ. ಡೇರೆಯವರು ಹೇಳುವಂತೆ ಮಾತೆಯರ ಪ್ರಭುತ್ವ ಇದ್ದ ಕಾಲದಲ್ಲಿ ಪುರುಷರು ದೇವಿಯ ಗರ್ಭಗುಡಿಯನ್ನು ಪ್ರವೇಶಿಸುವಂತಿರಲಿಲ್ಲ. ಆಗ ಗಂಡು ಹೆಣ್ಣಿನ ಉಪಾಸನೆಯ ಅಧಿಕಾರ ಪಡೆಯಲು ‘ಗಂಡು ಹೆಣ್ಣಾಗುವ’ ರೂಪಾಂತರ ನಡೆಯಿತು. ಹಾಗಾಗಿಯೇ ದೇವಿ ಉಪಾಸನೆಯ ಗಂಡಸರು ಉದ್ದನೆ ಕೂದಲು ಬಿಟ್ಟು ಹೆಣ್ಣಿನ ಹಾಗೆ ಕಾಣುವುದನ್ನು ನೋಡಬಹುದು ಎನ್ನುತ್ತಾರೆ. ಈ ತರಹದ ಗಂಡಸರ ಹೆಣ್ಣಿನ ರೂಪಾಂತರವನ್ನು ದೇವಿಮಹಾತ್ಮೆ ಆಟದ ಕಲಾವಿದರಲ್ಲೂ ಕಾಣಬಹುದಾಗಿದೆ.
ಕರ್ನಾಟಕದಲ್ಲಿ ‘ದೇವಿ ಮಹಾತ್ಮೆ’ ಬಹುಪಠ್ಯಗಳಲ್ಲಿ ಕಂಡು ಬರುತ್ತದೆ. ಈ ತನಕದ ದೇವಿಮಹಾತ್ಮೆಯ ಪಠ್ಯಗಳನ್ನು ಪರಿಶೀಲಿಸಿದರೆ, ಚಿದಾನಂದಾವಧೂತರದೇ ಮೂಲ ಪಠ್ಯ ಅನ್ನಿಸುತ್ತದೆ. 1750ರ ನಂತರದಲ್ಲಿ ಮೈಸೂರಿನ ಮುಮ್ಮಡಿ ಕೃಷ್ಣರಾಜರು (1794-1868) ಮಾರ್ಕಂಡೇಯ ಪುರಾಣವನ್ನು ಆಧರಿಸಿ ದೇವಿಮಹಾತ್ಮೆ ಬರೆದರು. ನಂತರ ಈ ಮೂಲಕಥೆಯನ್ನು ಆಧರಿಸಿ ಭಾಗವತರು, ಬಯಲಾಟದ ಕವಿಗಳು ಸ್ಥಳೀಯವಾಗಿ ನೂರಾರು ಪಠ್ಯಗಳನ್ನು ರಚಿಸಿದ್ದಾರೆ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಸಂಪಾದಿಸಿದ ‘ಯಕ್ಷಗಾನ ಕವಿಚರಿತೆ’ಯಲ್ಲಿ 30 ಜನ ಭಾಗವತರು ದೇವಿಮಹಾತ್ಮೆಯ ಮರು ಪಠ್ಯಗಳನ್ನು ಬರೆದ ಬಗ್ಗೆ ಮಾಹಿತಿ ಇದೆ.
ಉಡುಪಿಯ ದೇವಿದಾಸ, ಎಣ್ಣೆಮಡಿ ವೆಂಕಟರಮಣಯ್ಯ, ಕಾಳಗಿ ರಾಮಭದ್ರ ಜೋಯಿಸ, ಬವುಲಾಡಿ ಹಿರಿಯಣ್ಣ, ಬಲಿಪ ನಾರಾಯಣ, ಅಮೃತ ಸೋಮೇಶ್ವರ, ಅಗರಿ ಶ್ರೀನಿವಾಸ ಭಾಗವತ ಮುಂತಾದವರನ್ನು ನೋಡಬಹುದು. ಇದರಲ್ಲಿ ಕಟೀಲು ಮೇಳ ಅಗರಿಯವರ ಪಠ್ಯವನ್ನು ಆಧರಿಸಿ ದೇವಿಮಹಾತ್ಮೆಯನ್ನು ಅಭಿನಯಿಸುತ್ತಾರೆ. ಕಾಸರಗೋಡು-ಕೇರಳ ಗಡಿ ಭಾಗದಲ್ಲಿ ಬಹಳ ಪಠ್ಯಗಳು ರಚನೆಯಾಗಿವೆ. ಕಳ್ಳಂಬೆಳ್ಳ ರಾಮಭಟ್ಟ, ಮದ್ವಾರು ಕಿಟ್ಟಣ್ಣ ಭಾಗವತ, ವೆಂಕಟರಮಣ ಭಟ್ಟರ ರಚನೆಗಳಿವೆ. ಇನ್ನು ಉತ್ತರ ಕರ್ನಾಟಕದಲ್ಲಿ ರಾಮಸಾಗರದ ಸಾಲಿ ವೆಂಕಣ್ಣಯ್ಯ, ರಾಯಚೂರು ಭಾಗದ ಬಳಗಾನೂರು ಮರಿಸ್ವಾಮಿ ಅವರ ರಚನೆಗಳು ಬಯಲಾಟವಾಗಿ ಅಭಿನಯಗೊಳ್ಳುತ್ತವೆ. ಮಧ್ಯ ಕರ್ನಾಟಕದಲ್ಲಿ ತುಮಕೂರಿನ ಮಧುಗಿರಿ ಸಮೀಪದ ಬೆಡಪುರದ ರಾಮಾಂಜನೇಯ ಎಚ್.ಬಿ., ತಿಪಟೂರಿನ ಅರಳಗುಪ್ಪೆಯ ಮಲ್ಲಿಕಾರ್ಜುನಪ್ಪ ಇವರ ಪಠ್ಯಗಳು ಈ ಭಾಗದಲ್ಲಿ ಚಾಲ್ತಿಯಲ್ಲಿವೆ. ಎಂ.ಎಸ್. ಲಠ್ಠೆಯವರು ಸಂಗ್ರಹಿಸಿದ ಜನಪದ ಕವಿಚರಿತೆಯಲ್ಲಿ ಹತ್ತು ಜನ ಜನಪದ ಕವಿಗಳು ದೇವಿಮಹಾತ್ಮೆಯನ್ನು ಬರೆದಿದ್ದಾರೆ. ಇವೆಲ್ಲಾ ದಾಖಲಾದ ಕವಿಗಳು ಹುಟ್ಟಿಸಿದ ಪಠ್ಯಗಳು. ಹೀಗೆ ದಾಖಲಾಗದ ಕವಿಗಳ ಪಠ್ಯಗಳೂ ಇವೆ ಎನ್ನುವುದನ್ನು ಮರೆಯುವಂತಿಲ್ಲ.
ಹೀಗೆ ಕವಿಕೃತ ಬಹುಪಠ್ಯಗಳಿದ್ದರೆ, ಇದೇ ಪಠ್ಯಗಳು ಅಭಿವ್ಯಕ್ತಿಯಲ್ಲಿ ಬಹುನೆಲೆಯವೂ ಆಗಿವೆ. ಇದರಲ್ಲಿ ದೇವಿಪುರಾಣವನ್ನು ವಾಚನ ಮಾಡುವ ಪಠ್ಯಗಳಿವೆ. ಹೀಗೆ ವಾಚಿಸುವ ವಾಚಕರೂ ಇದ್ದಾರೆ. ಅಂತೆಯೇ ಜನಪದ ಹಾಡಿಕೆಯಲ್ಲಿ ದೇವಿಪುರಾಣದ ಬಿಡಿಬಿಡಿ ಹಾಡಿಕೆಯೂ ಇದೆ. ಇದರಲ್ಲಿ ಬಹುಮುಖ್ಯವಾಗಿ ಹೆಣ್ಣೆಚ್ಚು ಎಂದು ಹಾಡುವ ಹಾಡುಗಾರರು ದೇವಿಕತೆಯನ್ನು ಹೇಳುತ್ತಾರೆ. ಇನ್ನು ರಂಗಾಭಿನಯದಲ್ಲಿ ದೇವಿಮಹಾತ್ಮೆ ಭಿನ್ನವಾದ ಪಠ್ಯಗಳನ್ನು ಹೊಂದಿದೆ. ಇದರಲ್ಲಿ ಬಯಲಾಟ, ಯಕ್ಷಗಾನ ಪ್ರಮುಖವಾಗಿವೆ. ಉತ್ತರ ಕರ್ನಾಟಕದಲ್ಲಿ ಬಯಲಾಟದ ಅಭಿವ್ಯಕ್ತಿಯಲ್ಲಿ ದೇವಿಮಹಾತ್ಮೆ ಇದ್ದರೆ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗದಲ್ಲಿ ಯಕ್ಷಗಾನವಾಗಿ ದೇವಿ ಮಹಾತ್ಮೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಅಂತೆಯೇ ಜನಪದ ಕವಿಗಳಾದ ಶಿಶುನಾಳ ಶರೀಫ, ಇಂಗಳಗಿ ಹಸೇನ್ ಸಾಬ್, ಮಾಗಾಂವದ ಮೀರ್ ಸಾಬ್, ಸಾವಳಗಿ ಮಹಮದ್ ಸಾಬ್, ಹದಲಿ ಬಡೇಸಾಬ್ ಮೊದಲಾದವರೂ ದೇವಿಮಹಾತ್ಮೆಯ ಬಗೆಗೆ ಹಾಡಿದ್ದಾರೆ. ಹೀಗೆ ದೇವಿಮಹಾತ್ಮೆಯ ಅಭಿವ್ಯಕ್ತಿ ಧರ್ಮದ ಗಡಿಗಳನ್ನು ಮೀರಿರುವುದನ್ನು ನೋಡಬಹುದು.
ಹೀಗೆ ಶಾಕ್ತದ ಅಭಿವ್ಯಕ್ತಿಯನ್ನು ನೋಡುವಾಗ ಮತ್ತೊಂದು ಆಯಾಮವಿರುವುದನ್ನು ಗಮನಿಸಬೇಕಿದೆ. ಅಮ್ಮನ ಜಾತ್ರೆಗಳಲ್ಲಿ ಕ್ರಿಯಾಶೀಲವಾಗುವ ಕಲಾಮಾಧ್ಯಮಗಳಲ್ಲಿ ದೇವಿಕತೆಯ ವಿವಿಧ ರೂಪಗಳ ಅಭಿವ್ಯಕ್ತಿಯನ್ನು ಕಾಣಬಹುದು. ಇದರಲ್ಲಿ ಮುಖ್ಯವಾಗಿ ದೇವಿಯ ಅರ್ಚಕರೇ ಕಲಾವಿದರಾಗಿ ಬದಲಾಗುವುದು ವಿಶೇಷವಾಗಿದೆ. ಇದರಲ್ಲಿ ಹೆಸರಿಸುವುದಾದರೆ, ಗೊಂದಲಿಗರು, ಭೂತೇರು, ಸಿಂಧೊಳ್ಳು, ಬೈದ್ಯ, ಪಾತ್ರಿಗಳು, ಜೋಗತಿಯರು ಮುಂತಾದವರನ್ನು ನೋಡಬಹುದು. ಮದುವೆ, ಹಬ್ಬ, ಜಾತ್ರೆಗಳಲ್ಲಿ ಗೊಂದಲ ಹಾಕುವುದು ವಿಶೇಷವಾಗಿದೆ. ಇದರಲ್ಲಿ ದೇವಿಯ ಸಂಕೇತವಾಗಿ ಕಳಸ ಸ್ಥಾಪನೆ ಮಾಡುತ್ತಾರೆ. ತುಂತುಣಿ ತಾಳಗಳು ಈ ಹಾಡಿಕೆಗೆ ಸಾಥ್ ನೀಡುತ್ತವೆ. ಇದರಲ್ಲಿ ಅಂಬಾಭವಾನಿಯನ್ನು ಸ್ಮರಿಸುತ್ತಾರೆ. ಮುಖ್ಯವಾಗಿ ಸತಿ ಸುಲೋಚನ, ಬಾಲ ನಾಗಮ್ಮ, ಶೀಲಾವತಿ, ಹೇಮರೆಡ್ಡಿ ಮಲ್ಲಮ್ಮ ಮುಂತಾದ ಸ್ತ್ರೀಪ್ರಧಾನ ಕತೆಗಳನ್ನು ಹೇಳುತ್ತಾರೆ.
ಗುಲ್ಬರ್ಗಾ ಭಾಗದಲ್ಲಿ ಭೂತೇರು ಕಾಲಿಗೆ ಗೆಜ್ಜೆ, ಕಣ್ಣಿಗೆ ಕಾಡಿಗೆ, ಕೊರಳಿಗೆ ಕವಡೆಸರದ ಹಾರ ತೊಟ್ಟು ಉಧೋ ಉಧೋ ಎಂದು ಕುಣಿಯುತ್ತಾ ಜನರ ಮನೆ ಮುಂದೆ ‘ದೇವಿಕಥೆ’ಯನ್ನು ಆಟವಾಗಿಸುತ್ತಾರೆ. ಇದನ್ನೇ ಉತ್ತರ ಕರ್ನಾಟಕದಲ್ಲಿ ಜೋಗತಿಯರ ತಂಡವು ಊರುಗಳಲ್ಲಿ ಯಲ್ಲಮ್ಮನ ನಾಟಕವನ್ನು ರಾತ್ರಿಪೂರಾ ಅಭಿನಯಿಸುತ್ತಾರೆ. ಹಳ್ಳಿಗಳಲ್ಲಿ ಇದನ್ನೂ ದೇವಿಕತೆ ಎಂದು ಕರೆಯುತ್ತಾರೆ. ಆಂಧ್ರದ ಗಡಿಭಾಗದಲ್ಲಿ ಸಿಂಧ್ ಮಾದಿಗರು ಆದಿ ಜಾಂಬವರ ಪುರಾಣದ ಕತೆಯನ್ನು ‘ಎಲ್ಲಮ್ಮನಾಟ’ ಎಂದು ಆಡುತ್ತಾರೆ. ಕರಾವಳಿಯ ಆದಿವಾಸಿಗಳು ಸರ್ಪಾರಾಧನೆಯ ಕುರುಹಾದ ಕಾಡ್ಯನಾಟ, ಸ್ವಾಮಿಕೋಲ, ಪಾಣರಾಟಗಳಿವೆ. ನಾಗಾರಾಧನೆಯಲ್ಲಿ ಬ್ರಾಹ್ಮಣರ ವೈದ್ಯ ಮುಖ್ಯ ಪಾತ್ರ ವಹಿಸಿದರೆ, ದಲಿತ ಮೇರರು ಪಾತ್ರಿ, ಬೈದ್ಯ ವೇಷಧರಿಸಿ ಆಡುವ ಕಾಡ್ಯನಾಟ, ದಲಿತ ಪಾಣರು ಆಡುವ ಸ್ವಾಮಿಕೋಲ ಮುಂತಾದವುಗಳು ಶಾಕ್ತೇಯ ಆಚರಣೆಗಳೇ ಆಗಿವೆ. ಇವುಗಳೆಲ್ಲಾ ಶಾಕ್ತೇಯ ತತ್ವವನ್ನು ಸಂವಹನ ಮಾಡುವುದಕ್ಕೆ ಹುಟ್ಟಿಕೊಂಡ ಆಚರಣೆ ಮತ್ತು ಆಟಗಳು. ಆದರೆ ಶಾಕ್ತದ ತತ್ವವನ್ನು ಹೊರತುಪಡಿಸಿ ಶಾಕ್ತದ ಕಥನವನ್ನು ಮಾತ್ರ ಸಂವಹನ ಮಾಡಲು ಪ್ರಯತ್ನಿಸುವುದು ರಾಕ್ಷಸ ಸಂಹಾರದ ದೇವಿ ಮಹಾತ್ಮೆಯಾಗಿದೆ.
ದಕ್ಷಿಣ ಕನ್ನಡದಲ್ಲಿ ನಡೆಯುವ ದೇವಿಮಹಾತ್ಮೆ ಪಠ್ಯ ಬಹುನೆಲೆ ಗಳಲ್ಲಿ ವಿಸ್ತರಿಸಿಕೊಂಡಿದೆ. ದೇವಿಮಹಾತ್ಮೆಯನ್ನು ಆಡಿಸುವುದು ಹರಕೆಯ ಆಟ ಆದ ಕಾರಣ ದೇವಿಮಹಾತ್ಮೆಯ ಆಟಕ್ಕೆ ತುಂಬಾ ಬೇಡಿಕೆಯಿದೆ. ‘ದೇವಿ ಮಹಾತ್ಮೆ’ಯ ಜನಪ್ರಿಯತೆ ರಾಜಕಾರಣಕ್ಕೂ ಬಳಕೆಯಾಗಿದೆ. 2018ರ ಲೋಕಸಭೆ ಚುನಾವಣೆಗೂ ಮೊದಲು ನರೇಂದ್ರ ಮೋದಿಯವರು ಮರಳಿ ಪ್ರಧಾನಿಯಾಗಲು ಮಂಗಳೂರಿನಲ್ಲಿ ದೇವಿಮಹಾತ್ಮೆಯ ಹರಕೆ ಅಟ ನಡೆದಿದೆ. ಕರಾವಳಿಯ ದೇವಿಮಹಾತ್ಮೆಯ ಪಠ್ಯಗಳು ವೈಷ್ಣವ ಪಾರಮ್ಯವಾಗಿದ್ದು ಮೇಲುಜಾತಿಗಳ ಹಿಡಿತದಲ್ಲಿದೆ. ಹೀಗಾಗಿ ದೇವಿ ಮಹಾತ್ಮೆಗೆ ಅದ್ದೂರಿತನ ಬಂದಿದೆ. ಉತ್ತರ ಕರ್ನಾಟಕದಲ್ಲಿ ದೇವಿ ಆಟಗಳು ರಂಜಕವಾಗಿದ್ದರೂ ಸೊರಗಿದಂತೆ ಬಡಕಲಾಗಿವೆ.







