ಡಾ. ಮಲ್ಲಿಕಾರ್ಜುನ ಖರ್ಗೆ ಕನಸು ಕಾಣ್ಕೆಯ ‘ಧೀಮಂತ ಧುರೀಣ’

ಖರ್ಗೆಯವರ ಪ್ರಕಾರ ಒಟ್ಟು ದೇಶದ ಜಿಡಿಪಿ ಹೆಚ್ಚಾದರೆ ಮಾತ್ರ ದೇಶದ ಅಭಿವೃದ್ಧಿಯಲ್ಲ, ಬದಲಾಗಿ ಬಡವರ, ಕಾರ್ಮಿಕರ, ರೈತರ ಆದಾಯ ಹೆಚ್ಚಾದಾಗ ಮಾತ್ರ ನಿಜಾರ್ಥದಲ್ಲಿ ದೇಶದ ಅಭಿವೃದ್ಧಿ ಎನ್ನುವುದು. ಖರ್ಗೆಯವರಿಗೆ ಸಿಕ್ಕ ಅವಕಾಶಗಳಲ್ಲಿ ರಾಜ್ಯ ಮತ್ತು ದೇಶದ ಆಡಳಿತದಲ್ಲಿ ಅದನ್ನು ಅನ್ವಯಗೊಳಿಸಿದ್ದರು. ಇದರ ಸೂತ್ರವೆಂದರೆ ಸಮಾಜದ ಆರ್ಥಿಕ ಬೆಳವಣಿಯು ಬಡವರ ಪರವಾಗಿರಬೇಕು ಎನ್ನುವುದಾಗಿತ್ತು. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಗಾಢವಾದ ಪ್ರಭಾವವಿರುವ ಖರ್ಗೆಯವರ ಈ ವಿಷನ್ ಕಾಂಗ್ರೆಸ್ ಪಕ್ಷದ ದೃಷ್ಟಿಕೋನವನ್ನು ದಮನಿತರ ಪರವಾಗಿಸಿದ ಈ ಎತ್ತರ ಬಹುದೊಡ್ಡ ಜಿಗಿತವಾಗಿದೆ. ಹೀಗೆ ‘ಧೀಮಂತ ಧುರೀಣ’ ಪುಸ್ತಕವು ಖರ್ಗೆಯವರ ಸಾಧನೆಗೆ ಕನ್ನಡಿ ಹಿಡಿಯುತ್ತದೆ.
ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 8ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರೂ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆಯವರು ಭಾಗವಹಿಸಿದ್ದರು. ಬಿಜೆಪಿ ಜತೆ ಗುರುತಿಸಿಕೊಂಡ ಶ್ರೀರಾಮ ಸೇನೆಯವರು ಕಾರ್ಯಕ್ರಮ ನಡೆದ ಎರಡು ದಿನಕ್ಕೆ ಗಂಗಾಜಲ ಸಿಂಪಡಿಸಿ ಹೋಮ ಹವನ ನಡೆಸಿ ಆ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ್ದಾರೆ. ದೇಶವ್ಯಾಪಿ ದಮನಿತ ಅಸ್ಪಶ್ಯ ಸಮುದಾಯಗಳು ಈ ಘಟನೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿವೆ. ಕಳೆದ 50 ವರ್ಷಗಳಿಂದಲೂ ರಾಜಕಾರಣ ಮಾಡುತ್ತಾ ಶಾಸಕರಾಗಿ, ರಾಜ್ಯ ಸಚಿವರಾಗಿ, ಸಂಸದರಾಗಿ, ಕೇಂದ್ರ ಸಚಿವರಾಗಿ, ಎಐಸಿಸಿ ಅಧ್ಯಕ್ಷರಾಗಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಇವರಿಗೇ ಅಸ್ಪಶ್ಯತೆಯನ್ನು ಆಚರಿಸುವಾಗ, ಸಮಾನ್ಯ ಅಸ್ಪಶ್ಯರ ಪಾಡೇನು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಘಟನೆ ದೇಶದಲ್ಲಿ ಅಸ್ಪಶ್ಯತೆ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ. ಈ ಹೊತ್ತಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆಯವರು ದೇಶಕ್ಕೆ ನೀಡಿದ ಕೊಡುಗೆ ಏನು? ಜಗತ್ತಿನ ಕಣ್ಣಲ್ಲಿ ಭಾರತದ ಘನತೆಯನ್ನು ಹೇಗೆ ಎತ್ತಿಹಿಡಿದಿದ್ದಾರೆ? ಮುಂತಾಗಿ ಚರ್ಚಿಸಬೇಕಿದೆ. ಖರ್ಗೆಯವರನ್ನು ‘ಕಲಬುರಗಿ’ಗೆ ಸೀಮಿತಗೊಳಿಸಿದ ನರೇಟಿವ್ಸ್‌ಗಳ ಮಿಥ್‌ಗಳನ್ನು ಹೊಡೆಯಬೇಕಿದೆ.
ಪ್ರೊ ಸುಖದೇವ್ ಥೋರಟ್ ಮತ್ತು ಚೇತನ್ ಶಿಂದೆ ಅವರು ‘ಮಲ್ಲಿಕಾರ್ಜುನ ಖರ್ಗೆ: ಪೊಲಿಟಿಕಲ್ ಎಂಗೇಜ್ಮೆಂಟ್ ವಿಥ್ ಕಂಪ್ಯಾಷನ್, ಜಸ್ಟೀಸ್ ಆಂಡ್ ಇನ್‌ಕ್ಲೂಸಿವ್ ಡೆವಲಪ್‌ಮೆಂಟ್’ ಎನ್ನುವ ಅಭಿನಂದನಾ ಗ್ರಂಥವನ್ನು 2023ರಲ್ಲಿ ಸಂಪಾದನೆ ಮಾಡಿದ್ದರು. ಖರ್ಗೆಯವರ 50 ವರ್ಷಗಳ ರಾಜಕೀಯ ಸೇವೆ ಮತ್ತು 80ನೇ ಹುಟ್ಟುಹಬ್ಬದ ನೆನಪಿಗೆ ಈ ಕೃತಿಯನ್ನು ಅರ್ಪಿಸಲಾಗಿತ್ತು. 73 ಜನ ಭಾರತದ ಎಲ್ಲಾ ರಾಜಕೀಯ ಪಕ್ಷಗಳ ನೇತಾರರು, ಆಡಳಿತಾಧಿಕಾರಿಗಳು, ಚಿಂತಕರು, ಪತ್ರಕರ್ತರು, ಒಡನಾಡಿಗಳು, ರಾಜಕೀಯ ವಿಶ್ಲೇಷಕರೂ ಕಂಡಂತೆ ಖರ್ಗೆಯವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಈ ಕೃತಿಯ ಎರಡು ಅನುವಾದಗಳಿವೆ. ಎನ್. ಸಂಧ್ಯಾರಾಣಿ ಅವರು ಅನುವಾದಿಸಿದ ಕೃತಿ ಬಿಡುಗಡೆಯಾಗಿಲ್ಲ. ಮತ್ತೊಂದು ಕಲಬುರಗಿಯ ಹಿರಿಯ ಚಿಂತಕ ಆರ್.ಕೆ. ಹುಡಗಿ (ರಾಹು) ಅವರು ಅನುವಾದಿಸಿದ, ದತ್ತಾತ್ರೇಯ ಇಕ್ಕಳಕಿ ಅವರ ಸುಮೇಧ ಪ್ರಕಾಶನದಿಂದ ಪ್ರಕಟಿಸಿದ ‘ಧೀಮಂತ ಧುರೀಣ: ಸಾಮಾಜಿಕ ನ್ಯಾಯ ಹಾಗೂ ಸರ್ವಾಭ್ಯುದಯದ ರಾಜಕೀಯ ಮುತ್ಸದ್ದಿ ಡಾ.ಮಲ್ಲಿಕಾರ್ಜುನ ಖರ್ಗೆಜಿ.’ ಈ ಕೃತಿ ಇದೇ ಆಗಸ್ಟ್ 22ರಂದು ಕಲಬುರಗಿಯಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಯ ಎಲ್ಲಾ ಬರಹಗಳು ಮಲ್ಲಿಕಾರ್ಜುನ ಖರ್ಗೆಯವರ ಸಾರ್ವಜನಿಕ ರಾಜಕೀಯ ಬದುಕಿನ ಬಹುಮುಖ ಪ್ರತಿಭೆಯನ್ನು ಕಾಣಿಸಿವೆ. ಪ್ರೊ. ಸುಖದೇವ್ ಥೋರಟ್ ಮತ್ತು ಚೇತನ್ ಶಿಂದೆ ಅವರ ದೀರ್ಘ ಪ್ರಸ್ತಾವನೆಯಲ್ಲಿ ಖರ್ಗೆಯವರ ಕಣ್ಣೋಟಗಳನ್ನು ತಾತ್ವೀಕರಿಸಲು ಪ್ರಯತ್ನಿಸಿದ್ದಾರೆ.
ಈ ಕೃತಿಯಲ್ಲಿ ದಾಖಲಾದ ಬರಹಗಳಲ್ಲಿನ ಸಮಾನ ಎಳೆಗಳನ್ನು ಜೋಡಿಸಿದರೆ ಖರ್ಗೆಯವರ ವ್ಯಕ್ತಿತ್ವದ ಅಗಾಧತೆ ಕಾಣುತ್ತದೆ. ಅವರ ಬದುಕಿನ ದೃಷ್ಟಿಕೋನ ಬುದ್ಧನ ಕರುಣೆ, ಮೈತ್ರಿ, ವೈಜ್ಞಾನಿಕತೆಯಿಂದಲೂ, ಬಸವಣ್ಣನ ನಡೆನುಡಿ ಒಂದಾಗಿರುವಿಕೆ ಮತ್ತು ಕಾಯಕ ನಿಷ್ಠೆಯಿಂದಲೂ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಮತೆಯ ವಾಸ್ತವವಾದಿ (ಪ್ರಾಗ್ಮಾಟಿಸಂ) ಚಿಂತನೆಯಿಂದಲೂ ರೂಪುಗೊಂಡಿದೆ. ಹೀಗಾಗಿಯೇ ಉಳ್ಳವರ ಪರವಾಗಿದ್ದ ಸರಕಾರಿ ಕಾಯ್ದೆಗಳನ್ನು ಬದಲಿಸಿ ದಮನಿತರನ್ನು ಒಳಗೊಳ್ಳುವಂತೆ ಮಾಡಿದ್ದಾರೆ. ಮೇಲ್ವರ್ಗ ಮತ್ತು ಮಧ್ಯಮವರ್ಗದ ಕಡೆಗಿದ್ದ ಪ್ರಭುತ್ವದ ದೃಷ್ಟಿಕೋನವನ್ನು ಕೆಳವರ್ಗದತ್ತ ಹರಿಸಿದ್ದಾರೆ. ಜಡ್ಡುಗಟ್ಟಿದ ಸರಕಾರಿ ವ್ಯವಸ್ಥೆಯನ್ನು ಚಲನಶೀಲಗೊಳಿಸಿ, ಸಾಂಪ್ರದಾಯಿಕ ಶೈಲಿಯನ್ನು ಆಧುನೀಕರಣಗೊಳಿಸಿದ್ದಾರೆ. ದಮನಿತರ ಕಣ್ಣೋಟದ ಜನಪರ ಆಡಳಿತದ ಅತ್ಯುನ್ನತ ಮಾದರಿಯನ್ನು ಸೃಜಿಸಿದ್ದಾರೆ. ಖರ್ಗೆಯವರ ಕೊಡುಗೆಗಳು ಕಲ್ಯಾಣ ಕರ್ನಾಟಕದಿಂದ ಮೊದಲುಗೊಂಡು, ರಾಜ್ಯಕ್ಕೂ, ದೇಶಕ್ಕೂ ಮತ್ತು ವಿದೇಶಗಳಲ್ಲಿ ದೇಶದ ಘನತೆಯನ್ನು ಎತ್ತಿಹಿಡಿಯುವುದಕ್ಕೂ ಕಾರಣವಾಗಿವೆ.
ಅರುವತ್ತರ ದಶಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿಸಿದ ‘ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ’ದ ಮೂಲಕ ರಾಜಕೀಯ ಪ್ರವೇಶ ಪಡೆಯುವ ಖರ್ಗೆ ಯವರು 1969ರಲ್ಲಿ ಗುಲ್ಬರ್ಗಾ ನಗರದ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ ಕಾಂಗ್ರೆಸ್‌ಗೆ ಪ್ರವೇಶಿಸುತ್ತಾರೆ. 1972ರಲ್ಲಿ ಮೊದಲಬಾರಿಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗುತ್ತಾರೆ. ಶಾಸಕರಾದಾಗ ತಾವು ಶಿಕ್ಷಣ ಆರಂಭಿಸಿದ ಜೋಪಡಿ ಇದ್ದ ಬಸವನಗರದಲ್ಲಿ ಒಂದು ಶಾಲೆ ಆರಂಭಿಸುವ ಕನಸು ಕಂಡರು. ಆಗ ಖಾಸಗಿ ಶಾಲೆ ಆರಂಭಿಸಲು 1 ಲಕ್ಷ ರೂ. ಠೇವಣಿ, ಹತ್ತು ಎಕರೆ ನಿವೇಶನ ಇರಬೇಕಿತ್ತು. ಇದನ್ನು ಪೂರೈಸಲಾಗದೆ ಖರ್ಗೆಯವರ ಕನಸು ಈಡೇರುವುದಿಲ್ಲ. ಇದರಿಂದಾಗಿ 1976ರಲ್ಲಿ ಶಿಕ್ಷಣ ಸಚಿವರಾದ ಕೂಡಲೇ ಮೊದಲು ಸರಕಾರೇತರರು ಶಾಲೆ ಆರಂಭಿಸಲು ಮೊದಲಿಗಿದ್ದ ನಿಯಮ ಸಡಿಲಿಸಿ 10 ಸಾವಿರ ರೂ. ಠೇವಣಿ 4 ಎಕರೆ ಜಮೀನಿಗೆ ಮಿತಿಗೊಳಿಸಿದರು. ಹಲವು ವರ್ಷಗಳಿಂದ ಶಿಕ್ಷಕರ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲಾಗಿರಲಿಲ್ಲ. ಕಾರಣ ಎಸ್‌ಸಿ, ಎಸ್‌ಟಿ ವಿದ್ಯಾವಂತರಲ್ಲಿ ಶಿಕ್ಷಣದ ಡಿಪ್ಲೊಮಾ ಮುಗಿಸಿದ ಅರ್ಹರಿರಲಿಲ್ಲ. ಖರ್ಗೆಯವರು ಈ ನಿಯಮ ಸಡಿಲಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿ, ನಂತರ ನಿಗದಿತ ಸಮಯದಲ್ಲಿ ಶಿಕ್ಷಣದ ಡಿಪ್ಲೊಮಾ ಮಾಡಿಕೊಳ್ಳಲು ಅನುಮತಿಸಿದರು. ಇದರ ಫಲವಾಗಿ ರಾಜ್ಯವ್ಯಾಪಿ 18 ಸಾವಿರ ಎಸ್‌ಸಿ, ಎಸ್‌ಟಿ ಸಮುದಾಯದ ಶಿಕ್ಷಕರು ನೇಮಕವಾದರು. ಇದರಲ್ಲಿ ಕಾಯ್ದೆಗಾಗಿ ಜನರು ಎನ್ನುವ ತತ್ವಕ್ಕಿಂತ ಜನರಿಗಾಗಿ ಕಾಯ್ದೆಗಳು ಎನ್ನುವ ತತ್ವವನ್ನು ಮುನ್ನೆಲೆಗೆ ತಂದರು.
ಖರ್ಗೆ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಹಲವು ಅಚ್ಚರಿಯ ಸುಧಾರಣೆಗೆ ಕಾರಣವಾಗಿದ್ದಾರೆ. ಎಲ್ಲಿ ಶೇ. 50ಕ್ಕಿಂತ ಹೆಚ್ಚಿನ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಓದುತ್ತಾರೋ, ಎಲ್ಲಿ ಮ್ಯಾನೇಜ್‌ಮೆಂಟ್ ಪರಿಶಿಷ್ಟ ಜಾತಿಯವರದಾಗಿರುತ್ತೋ ಅಂತಹ ಶಾಲೆಗಳಿಗೆ ಸರಕಾರ ಕೂಡಲೇ ಅನುದಾನ ಒದಗಿಸುವ ಕಾಯ್ದೆ ತಂದರು. ಅಂತೆಯೇ ಎಸ್‌ಸಿ, ಎಸ್‌ಟಿ ಮ್ಯಾನೇಜ್‌ಮೆಂಟಿನ ಶಾಲೆಗಳಿಗೆ ಶೈಕ್ಷಣಿಕ ವರ್ಷದ ಆರಂಭಕ್ಕೆ ಅನುದಾನ ಬಿಡುಗಡೆ ಮಾಡುವ ಕ್ರಮ ಕೈಗೊಂಡರು. ಅನುದಾನಿತ ಶಾಲೆ ಕಾಲೇಜುಗಳ ಉದ್ಯೋಗಿಗಳು ಮ್ಯಾನೇಜ್‌ಮೆಂಟ್‌ನಿಂದ ಸಂಬಳ ಪಡೆಯಬೇಕಾಗಿತ್ತು. ಇದರಿಂದ ನೌಕರರು ಮ್ಯಾನೇಜ್‌ಮೆಂಟ್‌ನಿಂದ ಶೋಷಣೆಗೆ ಒಳಗಾಗುತ್ತಿದ್ದರು. ಪರಿಣಾಮವಾಗಿ ಸರಕಾರದಿಂದ ಆಯಾ ಉದ್ಯೋಗಿಗಳ ಬ್ಯಾಂಕ್ ಅಕೌಂಟಿಗೆ ನೇರ ಸಂಬಳ ಪಾವತಿಯಾಗುವ ಕ್ರಾಂತಿಕಾರಕ ಬದಲಾವಣೆ ತಂದರು. ಇದು ಇಡೀ ದೇಶದಲ್ಲಿ ಒಂದು ಮಾದರಿಯಾಯಿತು.
ಇದರಿಂದಾಗಿ ಎಸ್‌ಸಿ-ಎಸ್‌ಟಿ ಮ್ಯಾನೇಜ್‌ಮೆಂಟ್‌ನ ಅನುದಾನಿತ ಶಾಲೆಗಳು ಹೆಚ್ಚಾದವು. ಒಟ್ಟಾರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣದ ಹೆಚ್ಚಳಕ್ಕೂ ಇದು ಕಾರಣವಾಯಿತು. ಈ ಬಗೆಯ ಕ್ರಾಂತಿಕಾರಿ ಬದಲಾವಣೆಯ ಕಾರಣದಿಂದ ಈಗಲೂ ಲಕ್ಷಾಂತರ ಜನರು ಇದರ ಫಲಾನುಭವಿಗಳಾಗಿದ್ದಾರೆ. ಇಂದು ಸರಕಾರಗಳು ಖಾಸಗಿಯವರಿಗೆ ಸರಕಾರಿ ಸಂಸ್ಥೆಗಳನ್ನು ಬಿಟ್ಟುಕೊಡುವ ನಡೆಗಳಿವೆ. ಆದರೆ ಖರ್ಗೆಜಿಯವರು 1976-78ರಲ್ಲಿ ಸೀತಾರಾಮ ಜಿಂದಾಲ್ ಅವರಿಂದ ನೂರು ಸುಸಜ್ಜಿತ ಶಾಲಾ ಕಟ್ಟಡಗಳನ್ನು ಕಟ್ಟಿಸಿ ಅವುಗಳನ್ನು ಸರಕಾರದ ವ್ಯಾಪ್ತಿಗೆ ಪಡೆದುಕೊಂಡರು. ಅಂದರೆ ಖಾಸಗಿಯವರನ್ನು ಸರಕಾರದ ಚೌಕಟ್ಟಿಗೆ ಬಗ್ಗಿಸಿದರು.
1980-83ರಲ್ಲಿ ಕಂದಾಯ ಸಚಿವರಾಗಿದ್ದಾಗ ಎಂಟೂವರೆ ಲಕ್ಷಕ್ಕೂ ಹೆಚ್ಚು ಭೂವಿವಾದಗಳು ಇತ್ಯಾರ್ಥವಾಗಿರಲಿಲ್ಲ. ಇದನ್ನು ಮನಗಂಡ ಖರ್ಗೆಯವರು ಭೂವ್ಯಾಜ್ಯಗಳನ್ನು ಇತ್ಯರ್ಥ ಮಾಡುವ 165ರಷ್ಟಿದ್ದ ಭೂನ್ಯಾಯ ಮಂಡಳಿಗಳನ್ನು 300ಕ್ಕೇರಿಸಿದರು. ಇದರಿಂದ ಕೆಲವೇ ದಿನಗಳಲ್ಲಿ ನಾಲ್ಕು ಲಕ್ಷದಷ್ಟು ಭೂವಿವಾದಗಳಿಗೆ ಪರಿಹಾರ ಸಿಕ್ಕಿ ಪಟ್ಟ ಪಹಣಿ ಸಿಗುವಂತಾಯಿತು. 1990-92ರ ಎರಡನೇ ಅವಧಿಗೆ ಕಂದಾಯ ಮಂತ್ರಿಗಳಾಗಿದ್ದಾಗ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ಭೂರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಕ್ಕುಪತ್ರ ನೀಡಿದ್ದು ಕ್ರಾಂತಿಕಾರಕ ಬದಲಾವಣೆ. ಈ ಕಾಯ್ದೆಯಿಂದ ಕರ್ನಾಟಕದ ಪರಿಶಿಷ್ಟ ಜಾತಿ-ಪಂಗಡದ ಲಕ್ಷಾಂತರ ಭೂಹೀನರು ಸ್ವಂತ ಭೂಮಿಯನ್ನು ಪಡೆಯುವಂತಾಯಿತು.
ಸಹಕಾರಿ ಸಚಿವರಾಗಿ 1992-93ಅವಧಿಯಲ್ಲಿ ಮಹತ್ವದ ಬದಲಾವಣೆ ತಂದರು. ಸಹಕಾರಿ ಗವರ್ನಿಂಗ್ ಮಂಡಳಿಯಲ್ಲಿ ಎಸ್‌ಸಿ, ಎಸ್‌ಟಿ ಸದಸ್ಯರಿಗೆ ಮೀಸಲಾತಿಯನ್ನು ಜಾರಿಗೊಳಿಸಿದರು. ಸಹಕಾರಿ ಸಂಸ್ಥೆಯ ಕಾಯ್ದೆಗೆ ತಿದ್ದುಪಡಿ ತಂದು ಎಸ್‌ಸಿ, ಎಸ್‌ಟಿ ಜನರಿಗೆ ಸಾಕಷ್ಟು ಸದಸ್ಯತ್ವ ಸಿಗುವಂತೆ ಮಾಡಿದರು. ಪರಿಣಾಮ ರಾಜ್ಯವ್ಯಾಪಿ ಸಹಕಾರಿ ಸಂಸ್ಥೆಗಳಲ್ಲಿ ಐದು ಲಕ್ಷದಷ್ಟು ಎಸ್‌ಸಿ, ಎಸ್‌ಟಿ ಸದಸ್ಯರು ಸೇರ್ಪಡೆಗೊಂಡರು. 1999ರಲ್ಲಿ ಗೃಹ ಸಚಿವರಾಗಿದ್ದಾಗ ದೇಶದಲ್ಲಿಯೇ ಮೊತ್ತ ಮೊದಲ ಸೈಬರ್ ಕ್ರೈಮ್ ಪೊಲೀಸ್ ಸ್ಟೇಷನ್ ಒಂದನ್ನು ಬೆಂಗಳೂರಲ್ಲಿ ಆರಂಭಿಸಿದರು. ಪೊಲೀಸ್ ಇಲಾಖೆಯಲ್ಲಿ ಹೊಸ ಹೊಸ ಬದಲಾವಣೆಗಳನ್ನು ತಂದರು. ಸಾವಿರಾರು ಪೊಲೀಸ್ ಹುದ್ದೆಗಳನ್ನು ಭರ್ತಿಮಾಡಿದರು. ಪೊಲೀಸ್ ಸಿಬ್ಬಂದಿಗಾಗಿ 11 ಸಾವಿರ ಮನೆಗಳನ್ನು ನಿರ್ಮಿಸಿದರು. ಕಲಬುರಗಿಯಲ್ಲಿ ಪೊಲೀಸ್ ಟ್ರೈನಿಂಗ್ ಸ್ಕೂಲ್ ಆರಂಭಿಸಿದರು.
2004-2006ರಲ್ಲಿ ಸಾರಿಗೆ ಸಚಿವರಾಗಿದ್ದಾಗ ನಷ್ಟದಲ್ಲಿದ್ದ ಸಾರಿಗೆ ಕಾರ್ಪೊರೇಷನ್‌ಗಳನ್ನು ನಿಧಾನಕ್ಕೆ ಲಾಭದಾಯಕ ಸಂಸ್ಥೆಗಳನ್ನಾಗಿಸಿದರು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿದರು. ಭಾರತದಲ್ಲಿ ಮೊತ್ತಮೊದಲಿಗೆ ಅಂತರರಾಜ್ಯ ಪ್ರಯಾಣಕ್ಕೆ ವೋಲ್ವೊ ಬಸ್‌ಗಳನ್ನು ಖರೀದಿಸಿದರು. ಕೆಎಸ್ಸಾರ್ಟಿಸಿಯಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ಸ್ಟೈಪೆಂಡ್ ಸಮೇತ ಮೂರು ತಿಂಗಳು ತರಬೇತಿ ನೀಡಿ, ಅರ್ಹರಿಗೆ ಖಾಯಂ ಉದ್ಯೋಗ ನೀಡಿದರು. ಬೆಂಗಳೂರು ನಗರ ಸಾರಿಗೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದರು. ಈ ಬದಲಾವಣೆಗೆ ಜಾಗತಿಕ ಮನ್ನಣೆ ದೊರೆಯಿತು. ಜಾಗತಿಕ ಸಂಸ್ಥೆಯಾದ ಇಂಟರ್ ನ್ಯಾಷನಲ್ ಅಸೋಷಿಯನ್ ಆಫ್ ಪಬ್ಲಿಕ್ ಟ್ರಾನ್ಸ್ ಪೋರ್ಟ್‌ನಿಂದ ಮೆಚ್ಚುಗೆ ಪಡೆಯಿತು. ಬೆಲ್ಜಿಯಮ್ ಬೆಂಗಳೂರಿನ ನಗರ ಸಾರಿಗೆಯ ಮಾದರಿಯನ್ನು ಅಳವಡಿಸಿಕೊಂಡಿತು. 1999-2004 ರ ಅವಧಿಯಲ್ಲಿ ಮೂಲಭೂತ ಸೌಕರ್ಯಗಳ ಸಚಿವರಾಗಿದ್ದಾಗ ಬೆಂಗಳೂರಿನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಿದರು. ಮೂರು ರಾಷ್ಟ್ರೀಯ ಹೈವೆಗಳನ್ನು ನಿರ್ಮಿಸಿದರು.
ಖರ್ಗೆಯವರು 2009ರಲ್ಲಿ ತಮ್ಮ ರಾಜಕೀಯ ಸೇವೆಯನ್ನು ರಾಜ್ಯದಿಂದ ಕೇಂದ್ರಕ್ಕೆ ವಿಸ್ತರಿಸಿಕೊಂಡರು. 2009-2013ರ ಅವಧಿಯಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾಗಿದ್ದಾಗ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ನಗದು ಮತ್ತು ಕಾಗದ ರಹಿತ ಆರೋಗ್ಯ ವಿಮಾ ಯೋಜನೆಯಾದ ‘ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ’ (ಆರ್‌ಎಸ್‌ಬಿವೈ) ಯನ್ನು ಜಾರಿಗೊಳಿಸಿದರು. ಇದರಿಂದಾಗಿ ಐದು ವರ್ಷದಲ್ಲಿ 11 ಕೋಟಿ ಕಾರ್ಮಿಕರು ಲಾಭ ಪಡೆದರು. ಈ ಯೋಜನೆ ಈಗ ‘ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ಯಾಗಿ ಚಾಲ್ತಿಯಲ್ಲಿದೆ. ಈ ಯೋಜನೆಯನ್ನು ವರ್ಲ್ಡ್ ಬ್ಯಾಂಕ್ ಮತ್ತು ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಇದೊಂದು ಪ್ರಪ್ರಂಚದಲ್ಲಿಯೇ ಅತ್ತುತ್ತಮ ಸೋಷಿಯಲ್ ಸೆಕ್ಯುರಿಟಿ ಸ್ಕೀಮ್ ಎಂದು ಶ್ಲಾಘಿಸಿವೆ. ಈ ಯೋಜನೆ 30 ಕೋಟಿ ಜನರನ್ನು ಒಳಗೊಳ್ಳುವ ಬೃಹತ್ ಹೆಲ್ತ್ ಇನ್ಸೂರೆನ್ಸ್ ಸ್ಕೀಮಾಗಿತ್ತು.
ದೇಶದಲ್ಲಿದ್ದ ಇಎಸ್‌ಐಸಿ ಆಸ್ಪತ್ರೆಗಳನ್ನು ಆಧುನೀಕರಣಗೊಳಿಸಿ ಸೂಪರ್ ಸ್ಪೆಷಾಲಿಟಿ ಹೈಟೆಕ್ ಆಸ್ಪತ್ರೆಗಳನ್ನಾಗಿಸಿದರು. ಏಕಕಾಲದಲ್ಲೇ ಅವುಗಳನ್ನು ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜುಗಳನ್ನಾಗಿಯೂ, ಸಂಶೋಧನಾ ಕೇಂದ್ರಗಳನ್ನಾಗಿಯೂ ರೂಪಿಸಿದರು.
ಕೇಂದ್ರ ರೈಲ್ವೆ ಸಚಿವರಾಗಿ ಆ ಇಲಾಖೆಯ ಸಮಸ್ಯೆಗಳನ್ನು ಸರಿಪಡಿಸಲು ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟರು. ಒಟ್ಟು 73 ಹೊಸ ರೈಲುಗಳನ್ನು ಆರಂಭಿಸಿದರು. ಇವರ ಅವಧಿಯಲ್ಲಿ ರಾಜ್ಯದಲ್ಲಿ ಎರಡು ರೈಲ್ವೆ ಕೋಚ್ ಫ್ಯಾಕ್ಟರಿಗಳನ್ನು ಆರಂಭಿಸಿದರು. ಇವರ ಅವಧಿಯ ಮಹತ್ವದ ಸುಧಾರಣೆಯೆಂದರೆ ‘ರೈಲ್ವೆ ಟ್ಯಾರೀಫ್ ರೆಗುಲೇಟರಿ ಅಥಾರಿಟಿ’ಯನ್ನು ಸ್ಥಾಪಿಸಿದ್ದು. ಇದರಿಂದಾಗಿ ಭಾರತೀಯ ರೈಲ್ವೆಗೆ ಸ್ವಾಯತ್ತೆ ದೊರೆತು ಸ್ವಾವಲಂಬಿಯಾಯಿತು.
ಹೈದರಾಬಾದ್ ಕರ್ನಾಟಕದ ಹಣೆಬರಹವನ್ನು ತಿದ್ದಿ ಬರೆದವರು ಮಲ್ಲಿಕಾರ್ಜುನ ಖರ್ಗೆಯವರು. ಇವರ ಇಚ್ಛಾಶಕ್ತಿಯಿಂದ ಸಂವಿಧಾನಕ್ಕೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕಕ್ಕೆ 2013 ರಲ್ಲಿ 371 (ಜೆ) ವಿಶೇಷ ಪ್ರಾತಿನಿಧ್ಯವನ್ನು ದೊರಕಿಸಿಕೊಟ್ಟರು. ಇದು ಈ ಭಾಗದಲ್ಲಿ ದೊಡ್ಡ ಪಲ್ಲಟಕ್ಕೆ ಕಾರಣವಾಯಿತು. 2013 ರಿಂದ 2026ರ ತನಕ 371ಜೆ ಕಾಲಂನ ಅನ್ವಯ ರಚನೆಯಾದ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಗೆ 24,773.30 ಕೋಟಿ ರೂ. ಗಳ ಅನುದಾನ ನಿಗದಿಯಾಗಿದ್ದು, 17,728.80 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 371 ಜೆ ಸ್ಥಳೀಯ ವೃಂದದಡಿ ಈ ತನಕ 79,373 ಹುದ್ದೆಗಳು ಭರ್ತಿಯಾಗಿವೆ. ಮುಂಭಡ್ತಿಯಲ್ಲಿ 25,8006 ಹುದ್ದೆಗಳು ಭರ್ತಿಯಾಗಿವೆ. ಶೈಕ್ಷಣಿಕವಾಗಿ ಈ ಭಾಗದ ವಿದ್ಯಾರ್ಥಿಗಳು 2014ರಿಂದ 2026ರ ತನಕ 11,431 ಮೆಡಿಕಲ್ ಸೀಟುಗಳನ್ನೂ, 45,000 ಇಂಜಿನಿಯರಿಂಗ್ ಸೀಟುಗಳನ್ನೂ ಪಡೆದಿದ್ದಾರೆ. ಹೀಗಾಗಿ ಈ ಕೃತಿಯಲ್ಲಿ ಸಿ.ಜಿ. ಚಂದ್ರಶೇಖರ್ ಅವರು ಖರ್ಗೆ ಅವರನ್ನು ‘ಹೈದರಾಬಾದ್ ಕರ್ನಾಟಕ ಪ್ರಾಂತದ ಆಧುನಿಕ ನಿರ್ಮಾಪಕ’ ಎಂದಿದ್ದಾರೆ.
ಖರ್ಗೆಯವರ ಪ್ರಕಾರ ಒಟ್ಟು ದೇಶದ ಜಿಡಿಪಿ ಹೆಚ್ಚಾದರೆ ಮಾತ್ರ ದೇಶದ ಅಭಿವೃದ್ಧಿಯಲ್ಲ, ಬದಲಾಗಿ ಬಡವರ, ಕಾರ್ಮಿಕರ, ರೈತರ ಆದಾಯ ಹೆಚ್ಚಾದಾಗ ಮಾತ್ರ ನಿಜಾರ್ಥದಲ್ಲಿ ದೇಶದ ಅಭಿವೃದ್ಧಿ ಎಂದಾಗಿದೆ. ಖರ್ಗೆಯವರಿಗೆ ಸಿಕ್ಕ ಅವಕಾಶಗಳಲ್ಲಿ ರಾಜ್ಯ ಮತ್ತು ದೇಶದ ಆಡಳಿತದಲ್ಲಿ ಅದನ್ನು ಅನ್ವಯ ಗೊಳಿಸಿದ್ದರು. ಇದರ ಸೂತ್ರವೆಂದರೆ ಸಮಾಜದ ಆರ್ಥಿಕ ಬೆಳವಣಿಯು ಬಡವರ ಪರವಾಗಿರಬೇಕು ಎನ್ನುವುದಾಗಿತ್ತು. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಗಾಢವಾದ ಪ್ರಭಾವವಿರುವ ಖರ್ಗೆಯವರ ಈ ವಿಷನ್ ಕಾಂಗ್ರೆಸ್ ಪಕ್ಷದ ದೃಷ್ಟಿಕೋನವನ್ನು ದಮನಿತರ ಪರವಾಗಿಸಿದ ಈ ಎತ್ತರ ಬಹುದೊಡ್ಡ ಜಿಗಿತವಾಗಿದೆ. ಹೀಗೆ ‘ಧೀಮಂತ ಧುರೀಣ’ ಪುಸ್ತಕವು ಖರ್ಗೆಯವರ ಸಾಧನೆಗೆ ಕನ್ನಡಿ ಹಿಡಿಯುತ್ತದೆ.






