Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಬರೆಯುವವರಿಗೆ ಗೂಗಿ ವಾ ಥಿಯಾಂಗೋರ ಪಾಠಗಳು

ಬರೆಯುವವರಿಗೆ ಗೂಗಿ ವಾ ಥಿಯಾಂಗೋರ ಪಾಠಗಳು

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ10 Jun 2025 10:22 AM IST
share
ಬರೆಯುವವರಿಗೆ ಗೂಗಿ ವಾ ಥಿಯಾಂಗೋರ ಪಾಠಗಳು
ಗೂಗಿ ನೆಲಮೂಲದ ಜನ ಚರಿತ್ರೆಯನ್ನು ಕಟ್ಟಲು ಪ್ರಯತ್ನಿಸಿದವರು. ಹೀಗೆ ಜನಚರಿತ್ರೆಯನ್ನು ಕಟ್ಟುತ್ತಲೇ ಆ ಜನರ ಮನದಲ್ಲಿ ಬೇರು ಬಿಟ್ಟವರು. ಇದೀಗ ಗೂಗಿ ಭೌತಿಕವಾಗಿ ಅಗಲಿರಬಹುದು. ಆತನ ಸೃಜನಶೀಲ ಸಾಹಿತ್ಯ, ಪ್ರಯೋಗಗಳು, ಗೂಗಿಯ ಆಳದ ನೋವಿನ ಅಲೆಗಳು ದಮನಿತರನ್ನು ಸದಾ ಅಪ್ಪಳಿಸುತ್ತಲೇ ಇರುತ್ತವೆ.

ಈಚೆಗೆ ನಮ್ಮನ್ನು ಅಗಲಿದ ದಕ್ಷಿಣ ಆಫ್ರಿಕಾದ ಕೀನ್ಯಾದ ಲೇಖಕ ಎನ್‌ಗೂಗಿ ವಾ ಥಿಯಾಂಗೋ ಜಗತ್ತು ಮರೆಯಬಾರದ ಶ್ರೇಷ್ಠ ಲೇಖಕರಲ್ಲಿ ಒಬ್ಬ. ಆತನ ಬದ್ಧತೆ, ನ್ಯಾಯಪರತೆ, ನಿಷ್ಠುರತೆ, ಪ್ರಭುತ್ವದೊಂದಿಗಿನ ಸಂಬಂಧ ಎಲ್ಲವೂ ಜಗತ್ತಿನಲ್ಲಿ ಬರೆಯುವವರಿಗೆ ಮಾದರಿಯಾಗಿದೆ. ಇಡೀ ಆಫ್ರಿಕಾ ಖಂಡದ ಯುವ ಲೇಖಕ-ಲೇಖಕಿಯರು ಗೂಗಿಯನ್ನು ನೆನಪಿಸಿಕೊಂಡ ಬರಹಗಳು ನೊಬೆಲ್ ಪ್ರಶಸ್ತಿಗಿಂತಲು ದೊಡ್ಡವು. ಬಹುಶಃ ನೊಬೆಲ್ ಪ್ರಶಸ್ತಿಯು ಗೂಗಿಯನ್ನು ಗುರುತಿಸದೆ ತನ್ನನ್ನು ತಾನೇ ವಂಚಿಸಿಕೊಂಡಿತು. ಗೂಗಿಯ ದನಿ ಇಡೀ ಜಗತ್ತಿನ ದಮನಕ್ಕೆ ಒಳಗಾದ ಜನರ ಸಂಗಾತಿಯಾಗಿದೆ. ಹೀಗಾಗಿ ಕನ್ನಡದಲ್ಲಿ ಬರೆಯುವವರು ಗೂಗಿಯಿಂದ ಕಲಿಯುವುದು ಬಹಳ ಇದೆ.

ಕೀನ್ಯಾ ದೇಶದ ಲಿಮೂರು ಎಂಬಲ್ಲಿ 1938ರಲ್ಲಿ ಗೂಗಿ ಜನಿಸಿದರು. ಅದು ಮೌ ಮೌ ದಂಗೆ ತೀವ್ರವಾಗಿದ್ದ ಕಾಲ. ಕೀನ್ಯಾದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಗೂಗಿ ಉಗಾಂಡ ದೇಶದ ಉಕರೆರೆ ವಿಶ್ವವಿದ್ಯಾನಿಲಯ ಮತ್ತು ಇಂಗ್ಲೆಂಡ್ ದೇಶದ ಲೀಡ್ಸ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಮೌ ಮೌ ಬಂಡಾಯವನ್ನು ಎಳೆ ಎಳೆಯಾಗಿ ಚಿತ್ರಿಸಿದ ಗೂಗಿಯ ಮೊದಲ ಕಾದಂಬರಿ ‘ವೀಪ್ ನಾಟ್ ಚೈಲ್ಡ್’ (1964) ಅದರ ನಂತರ ‘ದಿ ರಿವರ್ ಬಿಟ್ವೀನ್’ (1965) ಮತ್ತು ‘ಎ ಗ್ರೆಯ್ನ್ ಆಫ್ ವೀಟ್’ (1967). ಹತ್ತು ವರ್ಷಗಳ ಬಳಿಕ ರೈತರ ದಂಗೆಯನ್ನು ವಸ್ತುವಾಗಿಸಿಕೊಂಡ ‘ಪೆಟಲ್ಸ್ ಆಫ್ ಬ್ಲಡ್’ ಗಮನಾರ್ಹವಾದುದು. ಕೀನ್ಯಾ ಸಮಾಜದಲ್ಲಿನ ಅಸಮಾನತೆ ಮತ್ತು ಅನ್ಯಾಯಗಳ ಕುರಿತು ತನ್ನ ಮಾತೃಭಾಷೆ ಗಿಕಯುನಲ್ಲಿ ಬರೆದ ‘ಗಾಹಿಕ ಡೀಂಡಾ’ ನಾಟಕದ ಕಾರಣಕ್ಕೆ ಬಂಧನಕ್ಕೊಳಗಾದರು. ದೇಶಭ್ರಷ್ಟರಾಗಿ ಇಡೀ ಬದುಕನ್ನು ಸಂಘರ್ಷದಲ್ಲಿಯೇ ಕಳೆದರು. ಗೂಗಿಯ ಬರಹಗಳು ಕರ್ನಾಟಕದ ಸಂದರ್ಭಕ್ಕೆ ಬಹಳ ಆಪ್ತವಾಗುತ್ತವೆ. ರಹಮತ್ ತರೀಕೆರೆ ಅವರು ಗೂಗಿಯ ‘ವಸಾಹತು ಪ್ರಜ್ಞೆ ಮತ್ತು ವಿಮೋಚನೆ’ ಪುಸ್ತಕದ ಮುನ್ನುಡಿಯಲ್ಲಿ ಬರೆದಿದ್ದಾರೆ.

ವಿಶ್ವವಿದ್ಯಾನಿಲಯದ ಅಧ್ಯಾಪಕರಿಗೆ ಗೂಗಿಯ ಪಾಠಗಳು ಹಲವಿವೆ. 1976ರಲ್ಲಿ ಗೂಗಿಯೂ ಎಲ್ಲಾ ವಿಶ್ವವಿದ್ಯಾನಿಲಯಗಳ ಅಧ್ಯಾಪಕರಂತೆ ಜನರಿಂದ ಸಂಪರ್ಕ ಕಡಿದುಕೊಂಡು ದೂರವೇ ಇದ್ದರು. 1976 ಒಂದು ಬೆಳಗ್ಗೆ ಕಮಿರಿತು ಗ್ರಾಮದಲ್ಲಿ ಒಬ್ಬ ಮಹಿಳೆ ಗೂಗಿಯನ್ನು ‘‘ನೀವು ತುಂಬಾ ಬುದ್ಧಿವಂತರಂತೆ, ತುಂಬಾ ಪುಸ್ತಕ ಬರೆದಿದ್ದೀರಂತೆ, ನಿಮ್ಮಂತಹ ಬುದ್ಧಿವಂತರೇಕೆ ನಮ್ಮ ಹಳ್ಳಿಗರಿಗೂ ಒಂದಿಷ್ಟು ಬುದ್ಧಿಯನ್ನು ಕೊಟ್ಟು ನಮ್ಮನ್ನು ಶಿಕ್ಷಿತರನ್ನಾಗಿಸಬಾರದು? ಎಲ್ಲಾ ಕೊಡಿ ಎಂದು ನಾವೇನು ಕೇಳುತ್ತಿಲ್ಲ. ಸ್ವಲ್ಪ ಹಣ ಮತ್ತು ಸ್ವಲ್ಪ ಸಮಯ’’ ಎಂದು ಕೇಳುತ್ತಾರೆ. ಆಗ ನೈರೋಬಿ ವಿಶ್ವವಿದ್ಯಾನಿಲಯದ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿದ್ದ ಗೂಗಿಗೆ ಆ ತಾಯಿಯ ಮಾತುಗಳು ಕಾಡುತ್ತವೆ. ಆ ಮಹಿಳೆ ನಾಲ್ಕು ರವಿವಾರ ಸತತವಾಗಿ ಗೂಗಿಗೆ ಇದೇ ಪ್ರಶ್ನೆಯನ್ನು ಕೇಳುತ್ತಾರೆ. ಆ ಮಹಿಳೆಯ ಪ್ರಶ್ನೆಯು ವಿಶ್ವವಿದ್ಯಾನಿಲಯದ ಗಂಭೀರ ವಿದ್ವಾಂಸನ ವೇಷ ಕಳಚಿ ಹಳ್ಳಿಯ ಜನರೊಂದಿಗೆ ಬೆರೆಯುವಂತೆ ಮಾಡುತ್ತದೆ. ಮುಂದೆ ಆ ಹಳ್ಳಿಯಲ್ಲಿ ಸಾಂಸ್ಕೃತಿಕ ಸಮುದಾಯ ಕೇಂದ್ರವನ್ನು ಆರಂಭಿಸಿ ರಂಗ ಚಟುವಟಿಕೆಗಳನ್ನು ಶುರುಮಾಡುತ್ತಾರೆ. 1972ರ ‘ಹೋಮ್ ಕಮಿಂಗ್’ ಕೃತಿಯಲ್ಲಿ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಪಠ್ಯಕ್ರಮದ ಬಗ್ಗೆಯೂ ದಿಟ್ಟವಾದ ಪ್ರಶ್ನೆಗಳನ್ನು ಎತ್ತುತ್ತಾರೆ. ಇದರಲ್ಲಿ ಇಂಗ್ಲಿಷ್ ಮಾತ್ರ ಜ್ಞಾನದ ಭಾಷೆಯಲ್ಲ, ನಮ್ಮ ಸ್ಥಳೀಯ ಭಾಷೆಗಳೂ ವಿಶ್ವವಿದ್ಯಾನಿಲಯದ ಪಠ್ಯಗಳಲ್ಲಿ ಬರಬೇಕು ಎಂದು ಅನೇಕ ಪ್ರಯೋಗಗಳನ್ನು ಮಾಡುತ್ತಾರೆ.

ಬರೆಯುವವರು ಪ್ರಭುತ್ವದ ಜೊತೆ ಎಂತಹ ಸಂಬಂಧ ಹೊಂದಿರಬೇಕು ಎನ್ನುವುದರಲ್ಲಿ ಗೂಗಿ ಅವರಿಗೆ ಬಹಳ ಸ್ಪಷ್ಟವಾದ ಅರಿವಿತ್ತು. ಇದೀಗ ಗೂಗಿಯನ್ನು ಇಡೀ ಆಫ್ರಿಕಾ ಖಂಡದ ಯುವ ಬರಹಗಾರ-ಗಾರ್ತಿಯರು ನೆನೆಯುತ್ತಿರುವುದು ಈ ಕಾರಣಕ್ಕಾಗಿಯೇ. ಹಾಗಾಗಿಯೇ ಬರೆಯುವವರಿಗೆ ಗೂಗಿ ಪ್ರಭುತ್ವದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ನೀಚತನ ಎನ್ನುತ್ತಾರೆ. ಗೂಗಿ ಈ ವಿಷಯವಾಗಿ ಮಾತನಾಡುತ್ತಾ, ‘‘ಕಲೆ ಎಂದರೆ ಸೃಜನಶೀಲತೆ, ಚಲನೆ ಹಾಗೂ ಬದಲಾವಣೆ. ಸಮಾಜ ಎಂದರೆ ಈಗಿರುವಂತಹುದಲ್ಲ. ಅದೊಂದು ನೈತಿಕ ಸಮಾಜವಾಗಿರಬೇಕು. ‘ಕಲೆಯ ಸಾಮ್ರಾಜ್ಯ’ ಸರಕಾರದ ದಬ್ಬಾಳಿಕೆಯನ್ನು ಬದಲಾಯಿಸುತ್ತದೆ. ಒಂದಾನೊಂದು ಕಾಲದಲ್ಲಿ ಜನರನ್ನು ನಿಯಂತ್ರಿಸುವ ಸರಕಾರವಾಗಲೀ, ಕೇಂದ್ರವಾಗಲೀ ಇರಲಿಲ್ಲ. ಆಗ ಮನುಷ್ಯ ಬೆಳೆಯಲಿಲ್ಲವೇ? ಸರಕಾರಕ್ಕಿಂತಲೂ ಮುಂಚೆ ಬಂದದ್ದು ಕಲೆ. ಸೃಜನಶೀಲತೆ ಒಂದು ಆಧ್ಯಾತ್ಮಿಕ ಕ್ರಿಯೆ. ಬದಲಾವಣೆ ಜಗದ ನಿಯಮ. ದೇವರ ಬಗೆಗಿನ ಕಲ್ಪನೆಗಳೂ ಬದಲಾಗುತ್ತಿವೆ. ಒಂದು ಬೀಜ ಬಿತ್ತಿದರೆ, ಸಾವಿರಾರು ಬೀಜಗಳನ್ನು ಪಡೆಯುತ್ತೇವೆ. ಬಿತ್ತಿದ್ದನ್ನು ಪಡೆಯುತ್ತೇವೆ. ಪಡೆದದ್ದನ್ನು ಇನ್ನೂ ಉತ್ತಮಗೊಳಿಸುತ್ತೇವೆ. ವಿಜ್ಞಾನ ಹಾಗೂ ತಂತ್ರಜ್ಞಾನ ಹಲವು ರೀತಿಯ ಬದಲಾವಣೆಗಳನ್ನು ತಂದಿವೆ. ಆದರೆ ಇದು ಜನರಿಗೆ ಎಷ್ಟರ ಮಟ್ಟಿಗೆ ಉಪಯೋಗವಾಗಿದೆ ಎಂಬುದು ಪ್ರಶ್ನಾರ್ಹ. ಕಲೆ ಹಾಗೂ ಪ್ರಭುತ್ವ ಒಂದಕ್ಕೊಂದು ಹಂಗಿಲ್ಲದೆ ಸ್ವತಂತ್ರವಾಗಿರಬೇಕೆಂದು ಬಯಸುತ್ತವೆ. ಹಾಗಾಗಿ ವಿರೋಧಗಳು ಶುರುವಾಗುತ್ತವೆ. ಆದರೆ ಇಬ್ಬರಲ್ಲಿ ಯಾರೂ ಅಂತಿಮವಲ್ಲ. ಪ್ರಭುತ್ವ ಕಲೆಯನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದರೆ, ಕಲೆ ಪ್ರಭುತ್ವದ ಮೇಲೆ ಪ್ರಭಾವ ಬೀರಲು ಕಾಯುತ್ತಿರುತ್ತದೆ. ಕೆಲ ಕಲಾವಿದರು/ಲೇಖಕರು ಪ್ರಭುತ್ವದೊಟ್ಟಿಗೆ ಗುರುತಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. ಕಲೆ ಜನರ ನಡುವಿನ ಕಂದಕಗಳನ್ನು ಮುಚ್ಚಲು ಪ್ರಯತ್ನ ಪಡುತ್ತಿದ್ದರೆ, ಪ್ರಭುತ್ವ ಹೊಸ ಹೊಸ ಕಂದಕಗಳನ್ನು ಸೃಷ್ಟಿಸುತ್ತಿರುತ್ತವೆ. ಕಲೆ ಹಾಗೂ ಕ್ರಾಂತಿ ಯಾವತ್ತೂ ನವ ಸಮಾಜದ ನಿರ್ಮಾಣಕ್ಕಾಗಿ ಹಾತೊರೆಯುತ್ತಿರುತ್ತವೆ. ಹಾಗಾಗಿ ಬರೆಯುವವರು ಎಂದಿಗೂ ಪ್ರಭುತ್ವದೊಟ್ಟಿಗೆ ಇರಬಾರದು’’ ಎನ್ನುತ್ತಾರೆ.

ಜನರಾಡುವ ಮಾತನ್ನೇ ಸೃಜನಶೀಲ ಅಭಿವ್ಯಕ್ತಿಯನ್ನಾಗಿಸಿಕೊಂಡು ಆಯಾ ಆಡುನುಡಿಗೆ ಹೊಸ ಜೀವಂತಿಕೆ ಕೊಡುವ ನೆಲೆಯಲ್ಲಿ ಗೂಗಿ ಜಗತ್ತಿನ ಎಲ್ಲಾ ಪುಟ್ಟ ಪುಟ್ಟ ಭಾಷೆಯಲ್ಲಿ ಬರೆಯುವವರಿಗೆ ಪ್ರೇರಣೆಯಾಗಿದ್ದಾರೆ. ಗೂಗಿಯದೇ ಮಾತಿನಲ್ಲಿ ಹೇಳುವುದಾದರೆ, ‘‘ಜನರ ‘ಭಾಷೆ’ಯನ್ನು ವಾಪಸ್ ಜನರಿಗೇ ಕೊಡಲು ಕಲೆ ಯಾವತ್ತೂ ಪ್ರಯತ್ನಿಸುತ್ತಿರುತ್ತದೆ. ಆಫ್ರಿಕಾದಂತಹ ಸನ್ನಿವೇಶದಲ್ಲಿ ಲೇಖಕನಾದವನು ಜನರ ಭಾಷೆಗೇ ಹಿಂದಿರುಗಿ ಜನರ ಅನುಭವ ಹಾಗೂ ತಿಳಿವಳಿಕೆ ಮಟ್ಟವನ್ನು ಕಾಪಾಡಬೇಕಿದೆ. ತನ್ನ ಸುತ್ತಲ ಪ್ರಪಂಚವನ್ನು ಈ ಹಿಂದಿಗಿಂತಲೂ ಚೆನ್ನಾಗಿ ಅರ್ಥೈಸಬೇಕಿದೆ. ಆಫ್ರಿಕಾ ಜನತೆಯಲ್ಲಿ ಒಂದು ಜಾಗೃತಿ ಹಾಗೂ ಧಾರ್ಮಿಕ ಅರಿವು ಮೂಡಲು ಆಫ್ರಿಕಾ ಭಾಷೆಗಳು ದೊಡ್ಡ ಪಾತ್ರ ವಹಿಸಬೇಕಿದೆ. ಇದಕ್ಕೆ ನಮಗೆ ದೊಡ್ಡ ತೊಡಕಾಗಿರುವುದು ಇಂಗ್ಲಿಷ್ ಹಾಗೂ ಫ್ರೆಂಚರ ದಬ್ಬಾಳಿಕೆ’’ ಎನ್ನುತ್ತಾರೆ. ಹಾಗಾಗಿಯೇ ಗೂಗಿ ಥಿಯಾಂಗೋ ಗೂಗಿ ವಾಮಿರ್ರಿ ಅವರ ಜತೆಗೂಡಿ ತನ್ನದೇ ಮಾತೃಭಾಷೆಯಾದ ಗಿಕಯುನಲ್ಲಿ ‘ಐ ವಿಲ್ ಮ್ಯಾರಿ ವೆನ್ ಐ ವಾಂಟ್’ ಎನ್ನುವ ನಾಟಕ ಬರೆಯುತ್ತಾರೆ. ರಂಗಭೂಮಿ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದ ಗೂಗಿಯನ್ನು ವಿಚಾರಣೆ ಇಲ್ಲದೆ ಜೈಲಿನಲ್ಲಿ ಇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮತ್ತದೇ ಗಿಕಯು ಭಾಷೆಯಲ್ಲಿ ಟಾಯ್ಲೆಟ್ ಪೇಪರ್ ಮೇಲೆ ‘ಡೆವಿಲ್ ಆನ್ ದ ಕ್ರಾಸ್’ ಕಾದಂಬರಿ ಬರೆಯುತ್ತಾರೆ. ಇದು ಜನರ ನುಡಿಯಲ್ಲಿ ಬರೆಯುವವರ ಹೊಣೆಗಾರಿಕೆ ಮತ್ತು ಸಂಘರ್ಷ ಎರಡನ್ನೂ ಕಾಣಿಸುತ್ತದೆ.

ರಂಗಭೂಮಿಯವರಿಗೆ ಗೂಗಿಯ ಪಾಠಗಳು ಹಲವಿವೆ. ಆತ ತನ್ನ ಬರಹ, ಹೋರಾಟ ಮತ್ತು ಜನರ ಸಂಕಷ್ಟಗಳ ಬಿಡುಗಡೆಗೆ ಕ್ರಾಂತಿಕಾರಿ ರಂಗಭೂಮಿಯನ್ನು ಶೋಧಿಸುತ್ತಾರೆ. ರಂಗಭೂಮಿಯ ಕಾರಣಕ್ಕೆ ಸರಕಾರ ಅವರನ್ನು ಜೈಲಿಗಟ್ಟುತ್ತದೆ. ರಂಗಭೂಮಿ ಎಂದರೆ ಕೇವಲ ಕಟ್ಟಡವಲ್ಲ. ರಂಗಭೂಮಿ ಆಗುವುದು ಜನರಿಂದ. ಅವರ ಜೀವನವೇ ನಾಟಕದ ದ್ರವ್ಯ. ಆಫ್ರಿಕಾದ ಒಡೆದುಹೋಗಿದ್ದ ನಾಗರಿಕತೆ ಮತ್ತು ಕಳೆದುಹೋಗಿದ್ದ ಬೇರುಗಳನ್ನು ಪುನಃ ಹುಡುಕಲು ಗೂಗಿ ರಂಗಭೂಮಿಯನ್ನೇ ಅಸ್ತ್ರವನ್ನಾಗಿಸಿಕೊಂಡರು. ಹಳ್ಳಿಯ ಸಾಮಾನ್ಯ ಜನರು ತಮ್ಮದೇ ಕಷ್ಟಗಳನ್ನು ತಾವೇ ರಂಗಭೂಮಿ ಮೂಲಕ ಹೇಳುವ ತಂತ್ರವನ್ನು ಗೂಗಿ ಬಳಸುತ್ತಾರೆ. ಕನ್ನಡದ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಗೂಗಿಯನ್ನೊಮ್ಮೆ ಮರು ಓದಬೇಕಿದೆ. ಆತನ ರಂಗಭೂಮಿಯ ಕ್ರಾಂತಿಯನ್ನು ನಮ್ಮದೇ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಪ್ರಯೋಗಿಸಬೇಕಾಗಿದೆ.

ಗೂಗಿ ಅವರ ಸಾಹಿತ್ಯದ ಬೇರುಗಳಿರುವುದು ಆಫ್ರಿಕಾದ ಜನರ ಮೌಖಿಕ ಸಾಹಿತ್ಯದಲ್ಲಿ. ಈ ನೆಲೆಯಲ್ಲಿ ಕನ್ನಡದಲ್ಲಿ ಜಾನಪದ ಅಧ್ಯಯನ ಮಾಡುವ ವಿದ್ವಾಂಸರು ಮತ್ತು ಜನಪದ ಸಾಹಿತ್ಯವನ್ನು ಸಾಹಿತ್ಯದಲ್ಲಿ ಅಭಿವ್ಯಕ್ತಿಸುವವರು ಗೂಗಿಯನ್ನು ಓದಬೇಕಿದೆ. ಗೂಗಿ ಮೌಖಿಕ ಸಾಹಿತ್ಯವನ್ನು ಓರಲ್ ಲಿಟ್ರೇಚರ್ ಎಂದು ಬಳಸದೆ, ORATURE-- ಒರೇಚರ್ ಎನ್ನುವ ಹೊಸ ನುಡಿಗಟ್ಟಿನಲ್ಲಿ ಬಳಸುತ್ತಾರೆ. ‘‘ಪ್ರಪಂಚದ ಯವುದೇ ಮೌಖಿಕ ಸಾಹಿತ್ಯವನ್ನು ಗಮನಿಸಿದಾಗ ಶಿಷ್ಠ ಸಾಹಿತ್ಯಕ್ಕೂ ಇತರ ಸಾಹಿತ್ಯಕ್ಕೂ ಯಾವುದೇ ರೀತಿಯ ನಿರ್ದಿಷ್ಟ ಗೆರೆ ಕಾಣಬರುವುದಿಲ್ಲ. ಮೌಖಿಕವಾಗಿರುವ ಒಂದು ಕಥೆಯನ್ನು ನೋಡಿ. ಅದರಲ್ಲಿ ಸಹಜವಾಗಿಯೇ ಹಾಡು, ನೃತ್ಯ ಇದ್ದೇ ಇರುತ್ತದೆ. ಪ್ರೇಕ್ಷಕನನ್ನೂ ತನ್ನೊಟ್ಟಿಗೆ ಸೇರಿಸಿಕೊಂಡು ಕಥೆ ಮುಂದುವರಿಯುತ್ತದೆ. ಹಾಗಾಗಿ ಇಲ್ಲೆಲ್ಲ ‘ಪ್ರದರ್ಶನ’ ಬಹಳ ಮುಖ್ಯವಾಗುತ್ತದೆ. ಮೌಖಿಕ ಸಾಹಿತ್ಯದ ಬಗ್ಗೆ ಇರುವ ನಂಬಿಕೆ ಎಂದರೆ ಮಾನವ ಪ್ರಪಂಚಕ್ಕೂ ಹಾಗೂ ಅತೀಂದ್ರಿಯ (Supernatural) ಪ್ರಪಂಚಕ್ಕೂ ನಡುವೆ ಇರುವ ಸಂಬಂಧ ಬಹಳ ಅಸ್ಥಿರವಾದುದು. ಕಲೆಯ ದೃಷ್ಟಿಯಿಂದ ಮೌಖಿಕಸಾಹಿತ್ಯ ಸಮಗ್ರವಾದುದು. ಅನೇಕ ರೀತಿಯ ಸಾಹಿತ್ಯಗಳು ಮೌಖಿಕ ಸಾಹಿತ್ಯದ ಅಡಿಯಲ್ಲಿಯೇ ಬರುತ್ತವೆ. ಯಾವುದೇ ರಂಗ ಚಟುವಟಿಕೆ ಮೌಖಿಕ ಸಾಹಿತ್ಯ ಇಲ್ಲದೆ ಸಂಪೂರ್ಣವಾಗುವುದಿಲ್ಲ. ಅನೇಕ ವಿವಿಧ ಕಲೆಗಳನ್ನು ಮೌಖಿಕ ಸಾಹಿತ್ಯ ಒಗ್ಗೂಡಿಸಿದರೂ ಸಹ ಕಲೆಯಲ್ಲಿನ ವೈವಿಧ್ಯತೆಗೆ ಅವಕಾಶ ನೀಡುತ್ತದೆ’’ ಎನ್ನುತ್ತಾರೆ. ಇಲ್ಲಿ ಗೂಗಿ ಗ್ರಹಿಸುವ ಮೌಖಿಕ ಸಾಹಿತ್ಯದ ಗ್ರಹಿಕೆ, ಯುರೋಪ್ ಕೇಂದ್ರಿಕ ಮತ್ತು ಅಮೆರಿಕ ಕೇಂದ್ರಿತ ಜಾನಪದ ವಿದ್ವತ್ ಲೋಕದ ಗ್ರಹಿಕೆಗಿಂತ ಭಿನ್ನವಾಗಿದೆ.

ಗೂಗಿ ನೆಲಮೂಲದ ಜನ ಚರಿತ್ರೆಯನ್ನು ಕಟ್ಟಲು ಪ್ರಯತ್ನಿಸಿದವರು. ಹೀಗೆ ಜನಚರಿತ್ರೆಯನ್ನು ಕಟ್ಟುತ್ತಲೇ ಆ ಜನರ ಮನದಲ್ಲಿ ಬೇರು ಬಿಟ್ಟವರು. ಇದೀಗ ಗೂಗಿ ಭೌತಿಕವಾಗಿ ಅಗಲಿರಬಹುದು. ಆತನ ಸೃಜನಶೀಲ ಸಾಹಿತ್ಯ, ಪ್ರಯೋಗಗಳು, ಗೂಗಿಯ ಆಳದ ನೋವಿನ ಅಲೆಗಳು ದಮನಿತರನ್ನು ಸದಾ ಅಪ್ಪಳಿಸುತ್ತಲೇ ಇರುತ್ತವೆ.

(ಗೂಗಿ ವಾಥಿಯಾಂಗೋರ ವೈಚಾರಿಕ ಬರಹಗಳ ಎಚ್.ಎಸ್.ನಾಗಭೂಷಣ ಅನುವಾದ ‘ಎಲ್ಲೆ ಮೀರಿ’ ಕೃತಿಯನ್ನು ಉಲ್ಲೇಖಗಳ ಆಕರವಾಗಿ ಬಳಸಿರುವೆ)

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X