Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಅಂಚೆ ಪತ್ರವನ್ನೇ ಚಳವಳಿಯ ಅಸ್ತ್ರವಾಗಿಸಿದ...

ಅಂಚೆ ಪತ್ರವನ್ನೇ ಚಳವಳಿಯ ಅಸ್ತ್ರವಾಗಿಸಿದ ಕೊಟ್ರೇಶ್

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ6 Oct 2026 3:10 PM IST
share
ಅಂಚೆ ಪತ್ರವನ್ನೇ ಚಳವಳಿಯ ಅಸ್ತ್ರವಾಗಿಸಿದ ಕೊಟ್ರೇಶ್

2017ರ ಫೆಬ್ರವರಿ 26ರಂದು ಕೊಟ್ರೇಶ್ ಅವರ ವೈಯಕ್ತಿಕ ಆಸಕ್ತಿಯಿಂದ ಶುರುವಾದ ‘ನಮ್ಮೂರ ಕೆರೆ ಉಳಿಸಿ’ ಅಭಿಯಾನ, ಇಡೀ ಕೊಟ್ಟೂರಿನ ಜನತೆಯನ್ನು ಒಳಗೊಂಡು ಸಾಮೂಹಿಕವಾಗುತ್ತದೆ. ಮೊದಲ ಹಂತದ ಕೆಲಸ ಜೂನ್ ಹೊತ್ತಿಗೆ ಮುಗಿಯುತ್ತದೆ. ಅದೇ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಮುಕ್ಕಾಲು ಕೆರೆ ತುಂಬುತ್ತದೆ. ಇಡೀ ಊರಿಗೆ ಊರೇ ಹಬ್ಬದಂತೆ ಇದನ್ನು ಸಂಭ್ರಮಿಸುತ್ತದೆ. 1890ರಲ್ಲಿ ಕಟ್ಟಿದ ಈ ಕೆರೆ ಬಳ್ಳಾರಿ ಜಿಲ್ಲೆಯಲ್ಲಿ ಮೂರನೇ ದೊಡ್ಡ ಕೆರೆಯಾಗಿದ್ದು 852 ಎಕರೆ ವಿಸ್ತಾರ ಹೊಂದಿ, ಸುತ್ತಣ ನಾಲ್ಕು ಸಾವಿರ ಎಕರೆಗೆ ನೀರಾವರಿಯಾಗುತ್ತದೆ.

ಈಚೆಗೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಪೋಸ್ಟ್ ಮಾಸ್ಟರ್ ಕೊಟ್ರೇಶ್ ಜೂನ್ 22ರಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರಿಗೆ ಬರೆದ ಪತ್ರದ ಕಾರಣಕ್ಕೆ ಸುದ್ದಿಯಾದರು. ಈ ಪತ್ರದಲ್ಲಿ ಗ್ರಾಮೀಣ ಅಂಚೆ ಜೀವ ವಿಮೆ (ಆರ್.ಪಿ.ಎಲ್.ಐ.) ಮಾದರಿಯಲ್ಲಿ ನಗರದ ನಿವಾಸಿಗಳಿಗೂ ನಗರ ಅಂಚೆ ಜೀವ ವಿಮೆ ಆರಂಭಿಸುವಂತೆ ಒತ್ತಾಯಿಸಿದ್ದರು. ಇದಾದ ಎರಡು ತಿಂಗಳ ನಂತರ ಆಗಸ್ಟ್ 14ರಂದು ಕೇಂದ್ರ ಸಂವಹನ ಇಲಾಖೆಯು ಆರ್.ಪಿ.ಎಲ್.ಐ. ಯೋಜನೆಯ ವ್ಯಾಪ್ತಿಯನ್ನೇ ವಿಸ್ತರಿಸಿತು. ಅದರ ಪ್ರಕಾರ ಅಂಚೆ ಕಚೆೇರಿಯಲ್ಲಿ ಸಕ್ರಿಯ ಉಳಿತಾಯ ಖಾತೆ ಹೊಂದಿದ ಯಾವುದೇ ಖಾತೆದಾರರು ಆರ್.ಪಿ.ಎಲ್.ಐ. ಪಾಲಿಸಿಯನ್ನು ಮಾಡಿಸಬಹುದು ಎನ್ನುವುದಾಗಿತ್ತು. ಈ ಬದಲಾವಣೆ ಇಡೀ ದೇಶದ ಜನರಿಗೆ ಅನ್ವಯವಾಗಿತ್ತು. ಕೇಂದ್ರ ಸರಕಾರ ಕೊಟ್ರೇಶ್ ಅವರ ಪತ್ರವನ್ನು ಉಲ್ಲೇಖಿಸದಿದ್ದರೂ ಈ ಪತ್ರಕ್ಕೂ ಪಾಲಿಸಿಯ ಬದಲಾವಣೆಗೂ ನಂಟಿದೆ. ಹೀಗೆ ಅಂಚೆ ಕಚೇರಿಯ ಒಳಗಿದ್ದುಕೊಂಡೇ ಸಮಾಜದ ಸಮಸ್ಯೆಗಳನ್ನು ಪ್ರಭುತ್ವದ ಗಮನಸೆಳೆಯುವ ಕೊಟ್ರೇಶ್ ಅವರ ‘ಅಂಚೆ ಪತ್ರ’ದ ಚಳವಳಿಗೆ ಇಪ್ಪತ್ತು ವರ್ಷಗಳ ಇತಿಹಾಸವಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ನಾನು ಪದವಿ ಓದುವಾಗ ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಎಸ್.ಡಿ. ಈರಗಾರ, ನಾಗನಗೌಡ, ಶಿವನಗುತ್ತಿ ದಂಪತಿ, ಎಚ್.ಎಂ. ನಿರಂಜನ್, ಸತೀಶ್ ಪಾಟೀಲ್, ಸಿದ್ಧು ದೇವರಮನಿ, ಪದ್ಮಾ ಜಾಗಟಗೆರೆ ಮೊದಲಾದವರು ‘ಬಯಲು ಸಾಹಿತ್ಯ ವೇದಿಕೆ’ ರೂಪಿಸುತ್ತಿದ್ದರು. ಪ್ರತೀ ತಿಂಗಳ ಉಪನ್ಯಾಸದ ಕೊನೆಗೆ ಕವಿತೆ ಓದುವ ಅವಕಾಶವಿತ್ತು. ನಾನು ಕವಿತೆ ಓದಲೆಂದೇ ಹೋಗುತ್ತಿದ್ದೆ. ಹೀಗೆ ಕವಿತೆ ಓದುವವರಲ್ಲಿ ಚುಟುಕು ಓದಿ ನಗಿಸುತ್ತಿದ್ದವರು ಅಂಚೆ ಕೊಟ್ರೇಶ್. ಕೊಟ್ಟೂರಿನ ಪ್ರಾಧ್ಯಾಪಕಿ ನಿರ್ಮಲಾ ಶಿವನಗುತ್ತಿ ಅವರ ಮುಂದಾಳತ್ವದಲ್ಲಿ ಮಧ್ಯಮವರ್ಗದ ಮಹಿಳೆಯರು ತಮ್ಮ ಕ್ರಿಯಾಶೀಲತೆಯ ತೋರ್ಪಡಿಕೆಗಾಗಿ, ಸಾಮಾಜಿಕ ಕಳಕಳಿಯ ಸ್ಪಂದನಕ್ಕಾಗಿ ಕಟ್ಟಿಕೊಂಡಿರುವ ಕ್ರಿಯೇಟಿವ್ ಲೇಡೀಸ್ ಕ್ಲಬ್ಬಿದೆ. ಈ ಕ್ಲಬ್ಬಿನಲ್ಲಿ ಕೊಟ್ರೇಶ್ ಅವರ ಕವಿತೆಗಳ ಅಭಿಮಾನಿ ಬಳಗ ದೊಡ್ಡದಿದೆ. ಹೀಗಾಗಿ ನನ್ನನ್ನೂ ಒಳಗೊಂಡಂತೆ ಗಂಭೀರ ಕಾವ್ಯ ಬರೆಯುವವರಿಗೆ ಕೊಟ್ರೇಶರ ಜನಪ್ರಿಯತೆಯ ಬಗ್ಗೆ ಹೊಟ್ಟೆಕಿಚ್ಚಿತ್ತು. ಹೀಗೆ ಹಾಸ್ಯ ಪ್ರವೃತ್ತಿಯ, ನಗುಮೊಗದ ಕೊಟ್ರೇಶ್ ಸಾಮಾಜಿಕ ವಿದ್ಯಮಾನಗಳಿಗೆ ಪ್ರತಿರೋಧ ದಾಖಲಿಸುತ್ತಿದ್ದುದು ವೈರುಧ್ಯದಂತೆ ಕಾಣುತ್ತಿತ್ತು.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಕೊಟ್ರೇಶ್ ಸಮಾಜಿಕ ಅವ್ಯವಸ್ಥೆಯ ಕುರಿತು ಕಚೆೇರಿ ಒಳಗಿಂದಲೇ ತಣ್ಣನೆ ಪ್ರತಿರೋಧ ದಾಖಲಿಸುವ ಮಾದರಿ ಕಂಡುಕೊಂಡಿದ್ದರು. ಕೆಲಕಾಲ ಬಯಲು ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿಯೂ ಸಕ್ರಿಯವಾಗಿದ್ದರು. ಸಮಾನಾಸಕ್ತರು ಪ್ರತೀ ವರ್ಷವೂ ಆಯಾ ಕಾಲದ ಬಿಕ್ಕಟ್ಟುಗಳ ಸಂವಾದಕ್ಕಾಗಿ ರೂಪಿಸುವ ‘ನಾವು-ನಮ್ಮಲ್ಲಿ’ ಕಾರ್ಯಕ್ರಮದ ರೂವಾರಿಗಳಲ್ಲೊಬ್ಬರು. ಸಾಲು ಸಾಲು ರಜೆಗಳು ಬಂದಾಗ ಅಂಚೆ ಕಚೇರಿ ತೆಗೆದು ಸಾಮಾನ್ಯ ಜನರಿಗೆ ಸೇವೆ ಒದಗಿಸುವಿಕೆಯೂ ಕೊಟ್ರೇಶ್ ಅವರ ಮತ್ತೊಂದು ನಡೆ. ಅಂಚೆ ನೌಕರರ ಮುಷ್ಕರಗಳಲ್ಲಿ ಮುಂಚೂಣಿಯ ನಾಯಕತ್ವ ವಹಿಸುತ್ತಾರೆ. ಉತ್ತರ ಕರ್ನಾಟಕದ ಹಳ್ಳಿಗಳು ನೆರೆಬಂದು ಕಷ್ಟದಲ್ಲಿದ್ದಾಗ ಕೊಟ್ಟೂರಿನ ದಾನಿಗಳಿಂದ ಹಣ, ವಸ್ತು ಪರಿಕರಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ಪರಿಹಾರ ಹಂಚುವಲ್ಲಿಯೂ ಸಕ್ರಿಯವಾಗಿದ್ದರು.

ಎಂ.ಎಂ. ಕಲಬುರ್ಗಿ ಅವರ ಕೊಲೆಯಾದಾಗ ಕೊಟ್ರೇಶ್ ಕೊಲೆಯನ್ನು ವಿರೋಧಿಸಿ ಉಪವಾಸ ಧರಣಿ ಕೂತಿದ್ದರು. ರಸ್ತೆಬದಿಯಲ್ಲಿ ಕಲಬುರ್ಗಿಯವರ ಮಾರ್ಗ ಸಂಪುಟಗಳನ್ನು ಓದುತ್ತಾ ಎಲ್ಲರ ಗಮನಸೆಳೆದಿದ್ದರು. ಅಂದು ಕೆಲಸಂಗಾತಿಗಳು ಕೊಟ್ರೇಶ್ ಅವರ ಉಪವಾಸವನ್ನು ಅಂತ್ಯಗೊಳಿಸಿದಾಗ, ಕಲಬುರ್ಗಿಯವರ ಬಗ್ಗೆ ನಾನೂ ನಾಲ್ಕು ಮಾತಾಡಿದ್ದೆ. ಗೌರಿ ಲಂಕೇಶ್ ಕೊಲೆಯನ್ನು ವಿರೋಧಿಸಿ ಸೆಪ್ಟಂಬರ್ 9, 2017 ರಿಂದ ಸೆಪ್ಟಂಬರ್ 5, 2018ರವರೆಗೆ ದಿನಕ್ಕೊಂದು ಪತ್ರದಂತೆ ಒಂದು ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತನಿಖೆ ತೀವ್ರಗೊಳಿಸುವ ಬಗ್ಗೆ ಪತ್ರ ಬರೆದಿದ್ದರು. ಹೀಗೆ ಜಿಂದಾಲ್‌ಗೆ ಭೂಮಿ ನೀಡುವುದನ್ನು ವಿರೋಧಿಸಿ, ಕೊಟ್ಟೂರು ಕೆರೆಗೆ ನೀರು ತರಲು ಒತ್ತಾಯಿಸಿ, ನೀಟ್ ಪರೀಕ್ಷೆಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕೆಂದೂ ಪತ್ರ ಚಳವಳಿ ಮಾಡಿದ್ದಾರೆ.

‘ಪ್ರಕೃತಿ ಉಳಿಸಿ’ ಎಂಬ ಅಭಿಯಾನದಲ್ಲಿ ಪ್ರಧಾನ ಮಂತ್ರಿಗೆ 25 ಸಾವಿರಕ್ಕಿಂತ ಹೆಚ್ಚು ಪತ್ರ ಬರೆಸುತ್ತಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಇದ್ದಾಗ ಖಾಸಗಿ ಗಣಿ ಮಾಲಕರಿಗೆ ಗಣಿಗಾರಿಕೆಗಾಗಿ 13,356 ಎಕರೆ ಪರಭಾರೆ ಮಾಡುವ ಯೋಜನೆ ಮಾಡಿದಾಗ ಕೊಟ್ರೇಶ್ ‘ನನಗೆ 10 ಎಕರೆ ಕೊಡಿ ನಾನು ಕಾಡು ಬೆಳೆಸಿ ಆಮ್ಲಜನಕ ಉಚಿತವಾಗಿ ಕೊಡುತ್ತೇನೆ’ ಎಂದು ಪತ್ರ ಬರೆದಿದ್ದರು. ಇದರಿಂದ ಸಂಡೂರಿನಲ್ಲಿ ದೊಡ್ಡದಾಗಿ ರೈತರ ಪ್ರತಿಭಟನೆಯಾಗಿ ಇಡೀ ಯೋಜನೆಯೇ ನಿಲುಗಡೆಯಾಯಿತು. ಹೀಗೆ ಪ್ರಸಕ್ತ ಸಂಗತಿಗಳ ಗಮನಸೆಳೆಯಲು ನೂರಕ್ಕೂ ಹೆಚ್ಚು ಪತ್ರ ಚಳವಳಿ ಮಾಡಿದ್ದಾರೆ. ಒಟ್ಟಾರೆ ಅಂಚೆ ಪತ್ರ ಅಭಿಯಾನದಲ್ಲಿ ಐವತ್ತು ಸಾವಿರಕ್ಕಿಂತ ಹೆಚ್ಚು ಪತ್ರಗಳನ್ನು ಸಾಮಾನ್ಯ ನಾಗರಿಕರಿಂದಲೂ ಬರೆಸಿದ್ದಾರೆ.

ಕೊಟ್ರೇಶ್ ಅವರು ರಾಜ್ಯದ ಗಮನಸೆಳೆದದ್ದು ಕೊಟ್ಟೂರು ಕೆರೆಗೆ ಮರುಜೀವ ನೀಡಿದ ಒಂದು ಯಶಸ್ವೀ ಅಭಿಯಾನದ ಕಾರಣಕ್ಕೆ. ಇದೊಂದು ಸಾಹಸಗಾಥೆಯಂತಿದೆ. 2017ರ ಫೆಬ್ರವರಿಯಲ್ಲಿ ಕೊಟ್ಟೂರೇಶ್ವರನ ತೇರು ಮುಗುಚಿ ಇಡೀ ಊರಿಗೆ ಊರೇ ಮಂಕಾಗಿತ್ತು. ಊರನ್ನು ಚಿವುಟಿದರೆ ರಕ್ತ ಬರದಂತೆ ಮರಗಟ್ಟಿತ್ತು. ಇಂತಹ ಸಂದರ್ಭದಲ್ಲಿ ಕೊಟ್ರೇಶ್ ಒಮ್ಮೆ ಕೆರೆದಡಕ್ಕೆ ವಾಕ್ ಹೋದಾಗ ಕೆರೆಯನ್ನು ಆವರಿಸಿದ ಜಾಲಿ ದಂಗುಬಡಿಸುತ್ತದೆ. ನೀರಿನ ಮೂಲವಿದು, ಜಾಲಿಮಯವಾಗಿದೆಯಲ್ಲ, ಏನಾದರೂ ಮಾಡಬೇಕು ಅಂದುಕೊಳ್ಳುತ್ತಾರೆ. ಆರಂಭಕ್ಕೆ ಕೊಟ್ರೇಶ್ ಕೊಡಲಿ ನೀರು ಬುತ್ತಿ ಕಟ್ಟಿಕೊಂಡು ಹೋಗಿ ಜಾಲಿ ಕಡಿಯಲು ನಿಲ್ಲುತ್ತಾರೆ. ಹೀಗೆ 15 ದಿನ ಒಬ್ಬರೇ ಕಡಿದಾಗ, ಇದು ತನ್ನೊಬ್ಬನಿಂದಾಗದ ಕೆಲಸ, ಏನಾದರೂ ಮಾಡಿ ಜನರ ಗಮನ ಸೆಳೆಯಬೇಕೆಂದು ಫೋಟೊ ಸಮೇತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುತ್ತಾರೆ.

ಸಂಜೆಗೆ ಮೊಬೈಲ್ ಅಂಗಡಿ ಅಶೋಕ್, ಕುಮಾರ್ ಕುಲಕರ್ಣಿ ಬಟಾರಂಗಡಿ ನಭಿ ಕೊಟ್ರೇಶ್ ಹತ್ತಿರ ಚರ್ಚಿಸಿ ಜೆಸಿಬಿಯಿಂದ ಜಾಲಿಯ ಬುಡಸಮೇತ ತೆಗೆಸೋಣ ಎಂದು ಚರ್ಚಿಸುತ್ತಾರೆ. ಜೆಸಿಬಿಯ ಒಂದೊಂದು ತಾಸಿನ ಖರ್ಚನ್ನು ಒಬ್ಬೊಬ್ಬರು ಭರಿಸುವ ಯೋಚನೆ ಮಾಡುತ್ತಾರೆ. ಈ ಸಂಗತಿ ಬಾಯಿಂದ ಬಾಯಿಗೆ ಹಬ್ಬಿ 25 ತಾಸಿನ ಸಹಾಯಕ್ಕೆ ಮುಂದುವರಿಯುತ್ತದೆ. ಈ ಚರ್ಚೆಯ ಮರುದಿನ ಎಲ್ಲರೂ ಮಾಯವಾಗುತ್ತಾರೆ. ಇದೇನು ಆಗೋ ಮಾತಲ್ಲ ಅನ್ನಿಸಿ ಕೊಟ್ರೇಶ್ ಎಂದಿನಂತೆ ಒಬ್ಬರೇ ಕೆರೆಯಂಗಳಕ್ಕೆ ನಡೆಯುತ್ತಾರೆ. ಈ ಕುರಿತು ಪತ್ರಕರ್ತ ದೇವರಮನಿ ಸುರೇಶ್ ಪತ್ರಿಕೆಯಲ್ಲಿ ಒಂದು ವರದಿ ಮಾಡುತ್ತಾರೆ. ಇದಕ್ಕೆ ಸ್ಪಂದಿಸಿ 100 ತಾಸಿನ ಜೆಸಿಬಿ ಕೆಲಸಕ್ಕೆ ಹಣ ಹೊಂದಿಕೆಯಾಗುತ್ತದೆ. ಇದರಿಂದ ಮೂರು ಎಕರೆ ಜಾಲಿ ಬಯಲಾಗುತ್ತದೆ. ಮತ್ತೂ ಕೆಲಸ ಅರ್ಧಕ್ಕೆ ನಿಲ್ಲುತ್ತದೆ.

ಕೊನೆಗೆ ಕೊಟ್ರೇಶ್ ಇದ್ದೊಂದು ಸೈಟ್ ಮಾರಿ ಕೆಲಸ ಮುಂದುವರಿಸುವ ಬಗ್ಗೆ ಹೇಳಿಕೊಳ್ಳುತ್ತಾರೆ. ಈ ವಿಷಯ ತಿಳಿದು ಎಪಿಎಂಸಿ ಗಣೇಶಪ್ಪ 50 ಸಾವಿರ ರೂ. ಕೊಡುವುದಾಗಿ ಘೋಷಿಸುತ್ತಾರೆ. ನಾಗರಕಟ್ಟೆ ರಾಜಣ್ಣ ಹಿಟಾಚಿ ನೆರವು ಒದಗಿಸುತ್ತಾರೆ. ಈ ಮಧ್ಯೆ ಜೈನ ಸಮುದಾಯ ಸಹಾಯಕ್ಕೆ ನಿಲ್ಲುತ್ತದೆ. ಉಳಿದಂತೆ ಕೊಟ್ಟೂರಿನ ವಾಣಿಜ್ಯ ವ್ಯಾಪಾರ ಸಮುದಾಯ ಸಂಘಟನೆಗಳಲ್ಲಿ ಕೊಟ್ರೇಶ್ ಮತ್ತವರ ತಂಡ ಸಹಾಯ ಕೋರುತ್ತಾರೆ. ಇದೆಲ್ಲ ಒಟ್ಟಾಗಿ ಹದಿನಾಲ್ಕು ಲಕ್ಷ ರೂ. ಸಂಗ್ರಹವಾಗುತ್ತದೆ. ಮತ್ತೆ ಹತ್ತು ಜೆಸಿಬಿಗಳು ಹಗಲು ರಾತ್ರಿ ಕೆಲಸ ಮಾಡುತ್ತವೆ. ಈ ಮಧ್ಯೆ ಜಿಲ್ಲಾಧಿಕಾರಿ ಆದಿತ್ಯ ಬಿಸ್ವಾಸ್ ಮೊದಲು ಸಾರ್ವಜನಿಕರೇ ಅಭಿವೃದ್ಧಿ ಕಾರ್ಯಕೈಗೊಂಡದ್ದಕ್ಕೆ ಗದರಿದಂತೆ ಮಾಡಿ ನೆರವಾಗುವ ಭರವಸೆ ನೀಡಿ, ಉದ್ಯೋಗ ಖಾತರಿಕೆಲಸ ಕೆರೆಯಲ್ಲಿ ನಡೆಯುವಂತೆ ಆದೇಶಿಸುತ್ತಾರೆ. ಎಪಿಎಂಸಿ ಗಣೇಶಪ್ಪ ಕೆರೆ ಅಂಗಳಕ್ಕೆ ಬಂದು ಕೆಲಸವನ್ನು ಗಮನಿಸುತ್ತಾರೆ.

ಈ ಸುದ್ದಿ ಎಲ್ಲಾ ಟಿ.ವಿ., ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಲೂ ಆಗಿನ ಕೊಟ್ಟೂರಿನ ಶಾಸಕ ಭೀಮಾನಾಯ್ಕ್ ಒಳಗೊಂಡಂತೆ ಎಲ್ಲಾ ರಾಜಕೀಯ ಪಕ್ಷದ ನಾಯಕರುಗಳೂ, ಊರಿನ ಹಿರಿಯರೂ ಕೆರೆ ಅಂಗಳಕ್ಕೆ ಧಾವಿಸುತ್ತಾರೆ. ಒಮ್ಮೆ ಸಾಹಿತಿ ಕುಂ. ವೀರಭದ್ರಪ್ಪರೂ ಬರುತ್ತಾರೆ. ಚಾನುಕೋಟಿ ಮಠದ ಸ್ವಾಮೀಜಿ ಕೆರೆ ಅಂಗಳ ಕೆಲಸದ ಕೊನೆತನಕ ಊಟ, ಟಿಫಿನ್ ಟೀ ವಿತರಿಸುತ್ತಾರೆ. ಇನ್ನು ಕೆರೆಯ ನೀರಿನ ಮೂಲಗಳನ್ನು ಹುಡುಕುತ್ತ ಕೆರೆಗೆ ಹೊಂದಿಕೊಂಡಂತೆ ಎಂಟು-ಹತ್ತು ಕಿಲೋಮೀಟರ್ ಹಳ್ಳಿಗಳಿಂದ ಹರಿದು ಬರುತ್ತಿದ್ದ ಮುಚ್ಚಿಹೋಗಿದ್ದ ಹಳ್ಳಗಳನ್ನು ತೆರೆಯಲಾಗುತ್ತದೆ.

2017ರ ಫೆಬ್ರವರಿ 26ರಂದು ಕೊಟ್ರೇಶ್ ಅವರ ವೈಯಕ್ತಿಕ ಆಸಕ್ತಿಯಿಂದ ಶುರುವಾದ ‘ನಮ್ಮೂರ ಕೆರೆ ಉಳಿಸಿ’ ಅಭಿಯಾನ, ಇಡೀ ಕೊಟ್ಟೂರಿನ ಜನತೆಯನ್ನು ಒಳಗೊಂಡು ಸಾಮೂಹಿಕವಾಗುತ್ತದೆ. ಮೊದಲ ಹಂತದ ಕೆಲಸ ಜೂನ್ ಹೊತ್ತಿಗೆ ಮುಗಿಯುತ್ತದೆ. ಅದೇ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಮುಕ್ಕಾಲು ಕೆರೆ ತುಂಬುತ್ತದೆ. ಇಡೀ ಊರಿಗೆ ಊರೇ ಹಬ್ಬದಂತೆ ಇದನ್ನು ಸಂಭ್ರಮಿಸುತ್ತದೆ. 1890ರಲ್ಲಿ ಕಟ್ಟಿದ ಈ ಕೆರೆ ಬಳ್ಳಾರಿ ಜಿಲ್ಲೆಯಲ್ಲಿ ಮೂರನೇ ದೊಡ್ಡ ಕೆರೆಯಾಗಿದ್ದು 852 ಎಕರೆ ವಿಸ್ತಾರ ಹೊಂದಿ, ಸುತ್ತಣ ನಾಲ್ಕು ಸಾವಿರ ಎಕರೆಗೆ ನೀರಾವರಿಯಾಗುತ್ತದೆ. ಇದೀಗ ಕೆರೆ ಏರಿಯಲ್ಲಿ ಗಿಡ ನೆಡುವ ಕಾರ್ಯವನ್ನು ಸರಕಾರ ಕೈಗೊಂಡಿದೆ. ಹೀಗೆ ಅಂಚೆ ಕಚೇರಿಯ ಒಳಗೆ ಕೂತು ಪತ್ರ ಚಳವಳಿ ಮಾಡುತ್ತಿದ್ದ ಕೊಟ್ರೇಶ್ ಬೀದಿಗೆ ಬಂದು ಸಾರ್ವಜನಿಕ ಕೆರೆ ಉಳಿಸಿ ಚಳವಳಿ ರೂಪಿಸಿದ್ದು ನಿಜಕ್ಕೂ ಮಾದರಿಯಾಗಿದೆ. ಇದು ಹತ್ತಾರು ಊರುಗಳಲ್ಲಿ ಕೆರೆ ಉಳಿಸಿ ಅಭಿಯಾನಕ್ಕೂ ಪ್ರೇರಣೆಯಾಯಿತು.

ಅಂಚೆ ಕೊಟ್ರೇಶ್ ರಂಗಭೂಮಿ ಕಲಾವಿದ ಕೂಡ. ಕೊಟ್ಟೂರೇಶ್ವರ ಕಲಾ ರಂಗದ ಸಕ್ರಿಯ ಕಲಾವಿದ. ಕೊಟ್ಟೂರು ಕಲಾಕೇಂದ್ರದ ಚಟುವಟಿಕೆಗಳಲ್ಲೂ ಇವರ ಶ್ರಮವಿದೆ. 2015 ರಲ್ಲಿ ಮುಂಬೈ ಕನ್ನಡ ಸಂಘ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ರಂಗ ನಿರ್ದೇಶಕ ಶ್ರೀಕಾಂತ್ ನಿರ್ದೇಶನದ ರವೀಂದ್ರನಾಥ ಠಾಗೂರ್ ಅವರ ಕಾಲಯಾತ್ರ ನಾಟಕದ ಬಂಗಾರಶೆಟ್ಟಿ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಗಿರೀಶ್ ಕಾರ್ನಾಡ್ ಅವರ ತುಘಲಕ್ ನಾಟಕದಲ್ಲಿ ಶಿಯಾಬುದ್ದೀನ್ ಮತ್ತು ಆಜಂ ಪಾತ್ರ, ಕುಂವಿಯವರ ಮಾತೇ ಜೋತಿರ್ಲಿಂಗಪ್ಪಾಜಿ ನಾಟಕದ ಕೊಟ್ರೇಶ್ ಹಾಗೂ ಮರಿಬಸಪ್ಪನ ಪಾತ್ರದಲ್ಲಿ, ಲಂಕೇಶರ ಸಂಕ್ರಾಂತಿ ನಾಟಕದ ಉಜ್ಜನ ಪಾತ್ರದಲ್ಲಿ, ಆನಂದ ಋಗ್ವೇದಿಯ ಉರ್ವಿಯಲ್ಲಿ ಮಯ, ರಕ್ತರಾತ್ರಿಯಲ್ಲಿ ಅಶ್ವತ್ತಾಮನ ಪಾತ್ರದಲ್ಲಿ ನಟಿಸಿದ್ದಾರೆ. ಕೊಟ್ರೇಶ್ ಅವರ ಈ ಎಲ್ಲಾ ಚಟುವಟಿಕೆಗಳ ಹಿಂದಣ ಶಕ್ತಿ ಅವರ ಸಂಗಾತಿ ಅರುಣಾ. ಇವರೂ ಕೂಡ ಕ್ರಿಯೇಟಿವ್ ಲೇಡೀಸ್ ಕ್ಲಬ್ಬಿನ ಸಕ್ರಿಯ ಸದಸ್ಯೆ. ಹೀಗೆ ಕೊಟ್ರೇಶ್ ಅಂಚೆ ನೌಕರರಾಗಿದ್ದೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವ ಕ್ರಿಯಾಶೀಲತೆ ಇತರರಿಗೆ ಮಾದರಿಯಾಗಿದೆ.

(ಅಂಕಣಕಾರರು ಪ್ರಾಧ್ಯಾಪಕರು ಮತ್ತು ಜನಪದ ಸಂಶೋಧಕರು)

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X