Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ‘ನವಯಾನ’ ನಿಚ್ಚಂ ಪೊಸತು

‘ನವಯಾನ’ ನಿಚ್ಚಂ ಪೊಸತು

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ10 Nov 2026 3:54 PM IST
share
‘ನವಯಾನ’ ನಿಚ್ಚಂ ಪೊಸತು

ಹಳೆಯ ಕಾಂಗೋ ಸಾಮ್ರಾಜ್ಯದಲ್ಲಿ ಕಿಂಪಾ ವಿಟಾ ಎಂಬ ಮಹಿಳೆ 18 ನೇ ಶತಮಾನದಲ್ಲಿ ಯೇಸು ಆಫ್ರಿಕನ್ ಮೂಲದ ಬುಡಕಟ್ಟಿನವನು ಎಂದು ‘ಆಫ್ರಿಕನ್ ಆಂಟೋನಿಯನ್’ ಚಳವಳಿ ಹುಟ್ಟುಹಾಕಿ ಸಜೀವ ದಹನಕ್ಕೆ ಒಳಗಾದಳು. ದಕ್ಷಿಣ ಆಫ್ರಿಕಾದ ಜುಲು ಬುಡಕಟ್ಟಿನ ಗುರುತನ್ನು ಆಧರಿಸಿ ಇಶಾಯ್ ಶೆಂಬೆ 1911ರಲ್ಲಿ ‘ಅಮಾನಜರೆಥಾ’ ಎಂಬ ಧಾರ್ಮಿಕ ಪಂಥವನ್ನು ಹುಟ್ಟುಹಾಕಿದ. ನೈಜೀರಿಯಾದಲ್ಲಿ ಆಫ್ರಿಕನ್ ಮೂಲ ಬೇರುಗಳನ್ನು ಹಿಡಿದು ಜೋಶಿಯಾ ಒಲುನೊವೊ ಒಸಿಟೆಲು 1920ರಲ್ಲಿ ‘ಅಲಡುರಾ ಚಳವಳಿ’ ಕಟ್ಟಿದ. ಕಾಂಗೋ ದೇಶದ ಸೈಮನ್ ಕಿಂಬಾಂಗು ಪಾಶ್ಚಿಮಾತ್ಯ ಮಿಷನರಿಗಳ ಶೋಷಣೆ ವಿರುದ್ಧ 1921 ರಲ್ಲಿ ‘ಕಿಂಬಾಂಗುಯಿಸ್ಟ್ ಚರ್ಚ್’ ಎಂಬ ಧಾರ್ಮಿಕ ಚಳವಳಿ ಕಟ್ಟಿದ್ದಕ್ಕೆ ಬೆಲ್ಜಿಯಮ್ ವಸಾಹತುಶಾಹಿ ಜೀವಾವಧಿ ಶಿಕ್ಷೆ ನೀಡಿತು.

ಆದಿಪುರಾಣದಲ್ಲಿ ಕವಿ ಪಂಪನು ಕಾವ್ಯದ ಜೀವಂತಿಕೆಯನ್ನು ‘ಇದು ನಿಚ್ಚಂ ಪೊಸತು ಅರ್ಣವಂಬೋಳ್ ಅತಿ ಗಂಭೀರಂ ಕವಿತ್ವಂ’ ಎನ್ನುತ್ತಾನೆ. ಸಮುದ್ರವು ಹೊಸ ಅಲೆಗಳೊಂದಿಗೆ ಸದಾ ಹೊಸತಾಗುವ ಹಾಗೆ ಶ್ರೇಷ್ಠ ಕಾವ್ಯವೂ ಕೂಡ ಎಂದರ್ಥ. ಈ ಮಾತನ್ನು ಬುದ್ಧನಿಗೂ ಅನ್ವಯಿಸಬಹುದು. ಕಾಲ ದೇಶಗಳನ್ನು ಮೀರಿ ಬುದ್ಧನು ಹೊಸ ಹೊಳಪನ್ನು ಪಡೆದಂತೆಯೇ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ದಮ್ಮಕ್ಕೆ ಮರಳಿ ಏಳು ದಶಕವಾದರೂ ‘ನವಯಾನ’ ನಿಚ್ಚಂ ಪೊಸತಾಗುತ್ತಿದೆ. ಈಚೆಗೆ ಅಕ್ಟೋಬರ್ 24, 25 ರಂದು ಚಾಮರಾಜನಗರದಲ್ಲಿ ಅಂತರ್‌ರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ವಿಷಯಮಂಡನೆಗಾಗಿ ಆಹ್ವಾನಿಸಿದರೂ ಕಾರಣಾಂತರಗಳಿಂದ ಒಪ್ಪಿಕೊಳ್ಳಲಾಗಲಿಲ್ಲ. ಈ ನೆಪದಲ್ಲಿ ಕುತೂಹಲದಿಂದ ಡಾ.ಬಾಬಾ ಸಾಹೇಬರ ಬೌದ್ಧ ನಡೆ ಹೇಗೆ ವಿಸ್ತರಿಸಿಕೊಂಡಿದೆ ಎನ್ನುವ ಕುರಿತು ಅಧ್ಯಯನ ಮಾಡಿದೆ. ಕೆಲವು ಟಿಪ್ಪಣಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಬಾಬಾ ಸಾಹೇಬರು ಆಧುನಿಕ ಯುಗಧರ್ಮದಲ್ಲಿ ಧರ್ಮದ ಆಯ್ಕೆಗೆ ಅನ್ವಯಿಸಬಹುದಾದ ಮೂರು ಪರೀಕ್ಷೆಗಳನ್ನು ಬೌದ್ಧ ದಮ್ಮಕ್ಕೆ ಒಡ್ಡಿದರು. ವಿಜ್ಞಾನದ ಕಣ್ಣೋಟ, ಸಾಮಾಜಿಕ ಜೀವನದ ಮೂಲಭೂತ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ನೈತಿಕತೆ ಮೂರನೆಯದಾಗಿ ಬಡತನದ ವೈಭವೀಕರಣದ ತಿರಸ್ಕಾರ. ಹೀಗೆ ತಾವು ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ಗೆದ್ದ ಧರ್ಮವೇ ಬೌದ್ಧಮತ. ಈ ಪರೀಕ್ಷೆಯಲ್ಲಿ ಬುದ್ಧನ ಕಾಲಾನಂತರದಲ್ಲಿ ದಮ್ಮದಲ್ಲಿ ನೆಲೆಗೊಂಡ ಮೌಢ್ಯಗಳನ್ನೂ, ವೈದಿಕ ಸನಾತನತೆ ಮತ್ತು ಬ್ರಾಹ್ಮಣಶಾಹಿಯ ಬೇರನ್ನೂ ಕಿತ್ತೆಸೆದರು. ಹಿಂದೂ ಧರ್ಮದ ತಿರಸ್ಕಾರಕ್ಕೆ ಒಡ್ಡಿದಷ್ಟೇ ಕಠಿಣ ಅಳತೆಗೋಲನ್ನು, ಸ್ವೀಕರಿಸಬಹುದಾದ ಬೌದ್ಧ ಮತಕ್ಕೂ ಒಡ್ಡಿದರು. ಈ ತೀಕ್ಷ್ಣ ಜರಡಿಯಲ್ಲಿ ಸೋಸಿ ತೆಗೆದದ್ದು ನವ ಬೌದ್ಧ ಮತ, ಅದುವೇ ಬಾಬಾ ಸಾಹೇಬರ ‘ನವಯಾನ’

ಮೂಲ ದಮ್ಮ ವೈಯಕ್ತಿಕ ವಿಮೋಚನೆ (ನಿರ್ವಾಣ) ಯೆಡೆಗಿದ್ದರೆ, ನವಯಾನ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳತ್ತ ಚಲಿಸಿದೆ. ಮೂಲದ ಕರ್ಮ ಮತ್ತು ಪುನರ್ಜನ್ಮವನ್ನು ನಿರಾಕರಿಸಿ ವ್ಯಕ್ತಿಯ ಇಂದಿನ ಸ್ಥಿತಿಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಶೋಧ ಇಲ್ಲಿದೆ. ಆಸೆಯೊಂದೇ ದುಃಖಕ್ಕೆ ಮೂಲವಲ್ಲ, ಅಸಮಾನತೆಯೂ

ದುಃಖದ ಮೂಲ ಎನ್ನಲಾಗಿದೆ. ಇಲ್ಲಿ ಭಿಕ್ಕುಗಳು ಶೋಷಣೆಯ ವಿರುದ್ಧ ಧ್ವನಿ ಎತ್ತುವ ಸಾಮಾಜಿಕ ಕಾರ್ಯಕರ್ತರು. ಹೀಗೆ ಮೂಲ ದಮ್ಮ ‘ಆಧ್ಯಾತ್ಮಿಕ ವಿಮೋಚನೆ’ ಯಾದರೆ, ‘ನವಯಾನ’ ತರ್ಕ ಮತ್ತು ನೈತಿಕತೆಯ ‘ಸಾಮಾಜಿಕ ಕ್ರಾಂತಿ’ ಆಗಿದೆ. ಹೀಗಾಗಿಯೇ ವಿಶ್ವದಲ್ಲಿ ಎಲ್ಲಿ ದಮನಿತರಿದ್ದಾರೋ ಅವರೆಡೆಗೆ ನವಯಾನ ‘ಕೈಚಾಚಿ’ ಮೇಲೆತ್ತಿಕೊಳ್ಳುತ್ತಿದೆ. ಪರಿಣಾಮ ‘ನವಯಾನ’ ಕಾಲ, ದೇಶದ ಗಡಿಮೀರಿ ಚಲಿಸಿದೆ.

ಬೌದ್ಧ ದಮ್ಮವು ಹೇಗೆ ನಳಂದ ಮತ್ತು ತಕ್ಷಶಿಲಾ ದಂತಹ ಶಿಕ್ಷಣ ಸಂಸ್ಥೆಗಳ ಮೂಲಕ ಬೌದ್ಧ ದಮ್ಮವನ್ನು ಪ್ರಸಾರ ಮಾಡುವ ಗುರಿ ಹೊಂದಿತ್ತೋ, ಬಾಬಾ ಸಾಹೇಬರು 1945 ರಲ್ಲಿ ಪೀಪಲ್ಸ್ ಎಜುಕೇಷನ್ ಸೊಸೈಟಿ ಕಟ್ಟಿ ಆಮೂಲಕ ಬೌದ್ಧ ಧಮ್ಮವನ್ನು ಶಿಕ್ಷಣದ ಜತೆ ದಾಟಿಸುವ ಕನಸು ಹೊತ್ತಿದ್ದರು. ಹಾಗಾಗಿಯೇ ಅವರು ಆರಂಭಕ್ಕೆ ಸ್ಥಾಪಿಸಿದ ಕಾಲೇಜುಗಳಿಗೆ ಸಿದ್ಧಾರ್ಥ ಮತ್ತು ಮಿಲಿಂದ ಎಂದು ಹೆಸರಿಟ್ಟರು. ಪೀಪಲ್ಸ್ ಎಜುಕೇಷನ್ ಸೊಸೈಟಿಯು ಆಳದಲ್ಲಿ ಬೌದ್ಧಮತದ ಶಿಕ್ಷಣದ ಬೀಜಗಳನ್ನೂ ಒಳಗೊಂಡಿತ್ತು. ಇದರ ಹಿಂದೆ ಶಿಕ್ಷಣ ಸಂಸ್ಥೆಗಳ ಮೂಲಕ ಬೌದ್ಧ ದಮ್ಮದ ಕಣ್ಣೋಟದ ಶಿಕ್ಷಣ ಮಾದರಿಯೊಂದನ್ನು ರೂಪಿಸುವ ಕನಸುಹೊತ್ತಿದ್ದರು. ಇದೀಗ ಭಾರತದಲ್ಲಿ ಒಂದು ಕೋಟಿಯಷ್ಟು ಬೌದ್ಧರಿದ್ದಾರೆಂದು ಅಂದಾಜಿಸಲಾಗಿದೆ. ಅದರಲ್ಲಿ ಶೇ. 77 ರಷ್ಟು ಮಹಾರಾಷ್ಟ್ರದಲ್ಲಿದ್ದಾರೆ. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ನವಯಾನದ ಪಯಣಿಗರು ಮಹಾರಾಷ್ಟ್ರದಲ್ಲಿ ಹೆಚ್ಚಿದ್ದಾರೆ. ಉಳಿದಂಂತೆ ಲಡಾಖ್ ನಲ್ಲಿ ಶೇ. 39 ರಷ್ಟು, ಸಿಕ್ಕಿಂ ಶೇ.27.39, ಅರಣಾಚಲಪ್ರದೇಶ ಶೇ.11.77, ಮಿಜೋರಾಂ ಶೇ.8.51 ರಷ್ಟಿದ್ದಾರೆ. ಕರ್ನಾಟಕದಲ್ಲಿ 2011 ರ ಜನಗಣತಿ ಪ್ರಕಾರ 95,710 ರಷ್ಟಿದ್ದಾರೆ. ಆದರೆ ಬಾಬಾ ಸಾಹೇಬರ ‘ನವಯಾನ’ ಒಂದು ಪ್ರಖರ ಆಲೋಚನೆಯಾಗಿ ಜಾಗತಿಕವಾಗಿ ಪಯಣಿಸಿದೆ.

ಕರ್ನಾಟಕ ಸರಕಾರ ಬೆಂಗಳೂರಿನಲ್ಲಿ ‘ಬಿ.ಆರ್.ಅಂಬೇಡ್ಕರ್: ದ ಕ್ವೆಸ್ಟ್ ಫಾರ್ ಜಸ್ಟೀಸ್’ ಕುರಿತು ಅಂತರ್‌ರಾಷ್ಟ್ರೀಯ ಸೆಮಿನಾರನ್ನು 2017ರಲ್ಲಿ ಆಯೋಜಿಸಿತ್ತು. ಜಗತ್ತಿನಾದ್ಯಂತ 350 ಕ್ಕೂ ಹೆಚ್ಚಿನ ಚಿಂತಕರು ಅಂಬೇಡ್ಕರ್ ಬಗೆಗೆ ಸಂವಾದ ನಡೆಸಿದ್ದರು. ಈ ಮಾತುಕತೆಗಳ ಅತ್ತುತ್ತಮ ಆಯ್ದ ಸಂಶೋಧನಾ ಬರಹಗಳನ್ನು 2021 ರಲ್ಲಿ ಚಿಂತಕ ಆಕಾಶ್ ಸಿಂಗ್ ರಾಥೋರ್ ಆರು ಸಂಪುಟಗಳಲ್ಲಿ ಸಂಪಾದಿಸಿದ್ದಾರೆ. ಇದನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಪ್ರಕಟಿಸಿದೆ. ಈ ಸರಣಿಯ ಆರನೇ ಸಂಪುಟ ‘ರಿಲೀಜಿಯಸ್ ಆಂಡ್ ಕಲ್ಚರಲ್ ಜಸ್ಟೀಸ್’. ಈ ಸಂಪುಟದಲ್ಲಿ ಅಂಬೇಡ್ಕರ್ ಅವರ ಬೌದ್ಧ ದಮ್ಮದೆಡಗಿನ ನಡೆಯನ್ನು ಜಾಗತಿಕ ‘ಲಿಬರೇಷನ್ ಥಿಯಾಲಜಿ’ (ವಿಮೋಚನ ದೇವತಾಶಾಸ್ತ್ರ) ಯ ಕಣ್ಣೋಟದಲ್ಲಿ ಒರೆಗೆ ಹಚ್ಚಲಾಗಿದೆ.

ಜಾಗತಿಕವಾಗಿ ಎಲ್ಲಿ ನಿರಂಕುಶ ಪ್ರಭುತ್ವಗಳು ಜನರನ್ನು ದಮನಿಸಲು ಧರ್ಮವೊಂದನ್ನು ಅಸ್ತ್ರವನ್ನಾಗಿ ಬಳಸಿದ್ದವೋ, ಅಲ್ಲಿ ಜನರ ಬಿಡುಗಡೆಗಾಗಿ ಅದೇ ಧರ್ಮ ಅಥವಾ ಬೇರೊಂದು ಒಳಿತಿನ ಧರ್ಮವನ್ನು ಹುಟ್ಟುಹಾಕಿದವರ ಸಾಲಿನಲ್ಲಿ ಅಂಬೇಡ್ಕರ್ ಅವರನ್ನು ಗುರುತಿಸಲಾಗಿದೆ. ಹೀಗಾಗಿ ಪಾಶ್ಚಿಮಾತ್ಯ ವಿದ್ವತ್‌ಲೋಕ ಅಂಬೇಡ್ಕರ್ ಅವರನ್ನು ಜಾಗತಿಕ ಚಿಂತಕ ಎಂದು ಗುರುತಿಸುವಲ್ಲಿ ಅವರು ಶೋಧಿಸಿದ ‘ನವಯಾನ’ವೂ ಒಂದಾಗಿದೆ.

ಹಳೆಯ ಕಾಂಗೋ ಸಾಮ್ರಾಜ್ಯದಲ್ಲಿ ಕಿಂಪಾ ವಿಟಾ ಎಂಬ ಮಹಿಳೆ 18 ನೇ ಶತಮಾನದಲ್ಲಿ ಯೇಸು ಆಫ್ರಿಕನ್ ಮೂಲದ ಬುಡಕಟ್ಟಿನವನು ಎಂದು ‘ಆಫ್ರಿಕನ್ ಆಂಟೋನಿಯನ್’ ಚಳವಳಿ ಹುಟ್ಟುಹಾಕಿ ಸಜೀವದಹನಕ್ಕೆ ಒಳಗಾದಳು. ದಕ್ಷಿಣ ಆಫ್ರಿಕಾದ ಜುಲು ಬುಡಕಟ್ಟಿನ ಗುರುತನ್ನು ಆಧರಿಸಿ ಇಶಾಯ್ ಶೆಂಬೆ 1911ರಲ್ಲಿ ‘ಅಮಾನಜರೆಥಾ’ ಎಂಬ ಧಾರ್ಮಿಕ ಪಂಥವನ್ನು ಹುಟ್ಟುಹಾಕಿದ. ನೈಜೀರಿಯಾದಲ್ಲಿ ಆಫ್ರಿಕನ್ ಮೂಲ ಬೇರುಗಳನ್ನು ಹಿಡಿದು ಜೋಶಿಯಾ ಒಲುನೊವೊ ಒಸಿಟೆಲು 1920ರಲ್ಲಿ ‘ಅಲಡುರಾ ಚಳವಳಿ’ ಕಟ್ಟಿದ. ಕಾಂಗೋ ದೇಶದ ಸೈಮನ್ ಕಿಂಬಾಂಗು ಪಾಶ್ಚಿಮಾತ್ಯ ಮಿಷನರಿಗಳ ಶೋಷಣೆ ವಿರುದ್ಧ 1921 ರಲ್ಲಿ ‘ಕಿಂಬಾಂಗುಯಿಸ್ಟ್ ಚರ್ಚ್’ ಎಂಬ ಧಾರ್ಮಿಕ ಚಳವಳಿ ಕಟ್ಟಿದ್ದಕ್ಕೆ ಬೆಲ್ಜಿಯಮ್ ವಸಾಹತುಶಾಹಿ ಜೀವಾವಧಿ ಶಿಕ್ಷೆ ನೀಡಿತು. ಹೀಗೆ ಆಫ್ರಿಕಾ ಖಂಡದಲ್ಲಿ ಜನರನ್ನು ಶೋಷಿಸುವ ಧರ್ಮಗಳ ವಿರುದ್ಧ ಬಂಡಾಯ ಚಳವಳಿ ಕಟ್ಟಿದವರ ಜತೆ ಅಂಬೇಡ್ಕರ್ ಅವರನ್ನು ತಾಳೆ ನೋಡುತ್ತಾರೆ.

ಯೂರೋಪ್‌ನಲ್ಲೂ ರೋಮನ್ ಕೆಥೊಲಿಕ್ ಚರ್ಚ್‌ಗಳ ಶೋಷಣೆ ವಿರುದ್ಧ 16 ನೇ ಶತಮಾನದಿಂದಲೂ ಕ್ರಿಶ್ಚಿಯನ್ ಧರ್ಮದ ಸುಧಾರಣಾ ಚಳವಳಿಗಳು ನಡೆದಿವೆ. ‘ಲೂಥರನ್ ಪಂಥ’ ಹುಟ್ಟುಹಾಕಿದ ಜರ್ಮನಿಯ ಮಾರ್ಟಿನ್ ಲೂಥರ್,

ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಕರ್ಮಟ ಕ್ರಿಶ್ಚಿಯನ್ ಧರ್ಮವನ್ನು ಸುಧಾರಿಸಿ ‘ಕ್ವಾಲ್ವಿನಿಜಂ’ ಪಂಥ ಹುಟ್ಟುಹಾಕಿದ ಜಾನ್ ಕ್ಯಾಲ್ವಿನ್, ಪೋಪ್‌ಗಳ ಅಧಿಕಾರ ಧಿಕ್ಕರಿಸಿ ‘ಆಂಗ್ಲಿಕನ್ ಚರ್ಚ್’ ಎಂಬ ಸ್ವತಂತ್ರ ಧರ್ಮವನ್ನು ಸ್ಥಾಪಿಸಿದ ಇಂಗ್ಲೆಂಡ್‌ನ ಎಂಟನೇ ರಾಜ ಹೆನ್ರಿ, ಅಮೆರಿಕದಲ್ಲಿ 18 ನೇ ಶತಮಾನದಲ್ಲಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಶೋಷಣೆ ವಿರುದ್ಧ ‘ಮಾರ್ಮನ್ ಧರ್ಮ’ ಶೋಧಿಸಿದ ಜೋಸೆಫ್ ಸ್ಮಿತ್, ಅಮೆರಿಕದಲ್ಲಿ ಧಾರ್ಮಿಕ ಶೋಷಣೆಯ ವಿರುದ್ಧ ಬಂಡೆದ್ದ ರೋಜರ್ ವಿಲಿಯಮ್ಸ್, ಕ್ವೇಕರ್ಸ್ ಸಮುದಾಯದ ವಿಲಿಯಂ ಪೆನ್ ಹೀಗೆ ದಮನಿತರ ಶೋಷಣೆಯ ಧರ್ಮವನ್ನು, ಬಿಡುಗಡೆಯ ಧರ್ಮವನ್ನಾಗಿಸಿದ ಜಾಗತಿಕ ಚರಿತ್ರೆಯಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ‘ನವಯಾನ’ವು ಸ್ಥಾನ ಪಡೆದಿದೆ.

ಹೀಗಾಗಿಯೇ ‘ನವಯಾನ’ವು ದೇಶದ ಗಡಿಯನ್ನು ದಾಟಿದೆ. ಯೂರೋಪ್‌ನಲ್ಲಿ ಸಾಮಾಜಿಕ ಬಹಿಷ್ಕಾರ ಮತ್ತು ತೀವ್ರ ತಾರತಮ್ಯಕ್ಕೆ ಒಳಗಾದ ಹಂಗೇರಿಯ ‘ರೋಮಾ’ (ಜಿಪ್ಸಿ) ಜನರು ತಮ್ಮ ಹಕ್ಕುಗಳ ಹೋರಾಟಕ್ಕೆ ಡಾ.ಅಂಬೇಡ್ಕರ್ ಮತ್ತು ಅವರ ‘ನವಯಾನ’ ಬೌದ್ಧ ದಮ್ಮವನ್ನು ಅಳವಡಿಸಿಕೊಂಡಿದ್ದಾರೆ. ಇಲ್ಲಿನ ಸಮಾಜಶಾಸ್ತ್ರಜ್ಞ ಟಿಬೋರ್ ಡೆರ್ಡಾಕ್ ಮತ್ತು ಜಾನೋಸ್ ಒರ್ಸೋಸ್ ಭಾರತದ ದಲಿತರು, ಹಂಗೇರಿಯಾ ರೋಮಾಗಳು ಒಂದೇ ಎಂದು 2007 ರಿಂದ ‘ಜೈಭೀಮ್ ನೆಟ್‌ವರ್ಕ್’ ಸ್ಥಾಪಿಸಿ, ಡಾ.ಅಂಬೇಡ್ಕರ್ ಪ್ರೌಢಶಾಲೆಗಳನ್ನು ತೆರೆದು ‘ನವಯಾನ’ವನ್ನು ಅಳವಡಿಸಿಕೊಂಡಿದ್ದಾರೆ. ಮಧ್ಯ ಯೂರೋಪ್‌ನಲ್ಲಿ ಮೊದಲ ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಹಂಗೇರಿಯ ಸಜೋಕಾಜಾದಲ್ಲಿ ಸ್ಥಾಪಿಸಿದ್ದಾರೆ.

ಜಪಾನ್‌ನಲ್ಲಿ ಮಹಾಯಾನ, ಝೆನ್ ಮತ್ತು ಶಿಂಗೋನ್ ಬೌದ್ಧ ಪಂಥಗಳಿದ್ದರೂ ಸಾಮಾಜಿಕ ನ್ಯಾಯದ ಬೌದ್ಧ ಚಿಂತನೆಯಾಗಿ ಅಂಬೇಡ್ಕರ್ ಅವರ ‘ನವಯಾನ’ ಅಲ್ಲಿನ ಬೌದ್ಧ ಚಿಂತಕರ ಕುತೂಹಲ ಕೆರಳಿಸಿದೆ. ಜಪಾನ್‌ನ ‘ಬುರಾಕುಮಿನ್’ ಎಂಬ ಅಸ್ಪ ಶ್ಯ ಸಮುದಾಯ 1940 ರಲ್ಲೇ ಅಂಬೇಡ್ಕರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಜಪಾನ್ ಮೂಲದ ಬೌದ್ಧ ಭಿಕ್ಷು ಸುರೇಯ್ ಸಸಾಯಿ ಭಾರತಕ್ಕೆ ಬಂದು ಅಂಬೇಡ್ಕರ್ ಅವರ ಬಗ್ಗೆ ಆಳವಾದ ಅಧ್ಯಯನ ಮಾಡಿ ಲಕ್ಷಾಂತರ ಜಪಾನಿಯರನ್ನು ನವಯಾನದತ್ತ ಆಕರ್ಷಿತರಾಗುವಂತೆ ಮಾಡಿದ್ದಾರೆ. ಜಪಾನ್‌ನ ಉದ್ಯಮಿ ಯೂಶಿ ಒನೊ ಅಪಾರ ಸಂಪತ್ತನ್ನು ತ್ಯಜಿಸಿ ಸುರೇಯ್ ಸಸಾಯಿ ಪ್ರಭಾವದಲ್ಲಿ ನವಯಾನ ಸ್ವೀಕರಿಸಿದ್ದಾರೆ. ಪರಿಣಾಮವಾಗಿ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಜಪಾನ್‌ಗೆ ವಲಸೆ ಹೋದ ಅಂಬೇಡ್ಕರ್‌ವಾದಿ ವಲಸಿಗರು ಜಪಾನ್‌ನಲ್ಲಿ ‘ಡಾ.ಅಂಬೇಡ್ಕರ್ ಇಂಟರ್ ನ್ಯಾಷನಲ್ ಮಿಷನ್’ ಹುಟ್ಟುಹಾಕಲು ಸಾಧ್ಯವಾಗಿದೆ. ಜಪಾನ್‌ನ ಹಲವು ವಿಶ್ವವಿದ್ಯಾನಿಲಯಗಳಲ್ಲಿ ‘ಬುದ್ಧ ಆಂಡ್ ಹಿಸ್ ದಮ್ಮ’ ಕೃತಿಯ ಅಧ್ಯಯನಗಳು ನಡೆಯುತ್ತಿವೆ.

ಚೀನಾದಲ್ಲಿ ‘ನವಯಾನ’ ದ ಬೇರುಗಳಿಲ್ಲದಿದ್ದರೂ ಅಲ್ಲಿನ ಬೌದ್ಧ ಚಿಂತಕರು ನವಯಾನದ ಕುರಿತು ಕುತೂಹಲಿಗಳಾಗಿದ್ದಾರೆ. ಯೂರೋಪ್‌ನಲ್ಲಿ ನವಯಾನಕ್ಕೆ ಸಂಬಂಧಿಸಿದ ದಾಖಲೆಗಳ ಸಂಗ್ರಹ ಮತ್ತು ಅಧ್ಯಯನಕ್ಕಾಗಿ ‘ನವಯಾನ ಬೌದ್ಧ ಚಾರಿಟೆಬಲ್ ಟ್ರಸ್ಟ್’ ಮೂಲಕ ‘ಬೌದ್ಧ ಆರ್ಖೈವ್ಸ್ ಯೂರೋಪ್’ ಎಂಬ ಸಂಸ್ಥೆ ತಲೆಯೆತ್ತಿದೆ. ಯುಕೆ, ಜರ್ಮನಿ, ಫ್ರಾನ್ಸ್ ಸೇರಿದಂತೆ ದೇವರಿಲ್ಲದ, ಮೂಢ ನಂಬಿಕೆಗಳಿಲ್ಲದ, ವೈಜ್ಞಾನಿಕ ನೈತಿಕ ಧಮ್ಮವಾದ ‘ನವಯಾನ’ ವನ್ನು ಯೂರೋಪ್‌ನ ಸೆಕ್ಯುಲರ್ ಬುದ್ಧಿಷ್ಟ್ ಚಿಂತಕರು ಒಪ್ಪಿಕೊಳ್ಳುತ್ತಿದ್ದಾರೆ. ಯೂರೋಪ್‌ನಲ್ಲಿಯೂ ಭಾರತೀಯ ಮೂಲದ ಅಂಬೇಡ್ಕರ್‌ವಾದಿ ವಲಸಿಗರು ಬುದ್ಧ ವಿಹಾರಗಳನ್ನು ಸ್ಥಾಪಿಸಿ ದಮ್ಮಚಕ್ರ ಪರಿವರ್ತನಾ ದಿನ ಮತ್ತು ಅಂಬೇಡ್ಕರ್ ಜಯಂತಿಗಳನ್ನು ಆಚರಿಸುತ್ತಿದ್ದಾರೆ. ಏಶ್ಯದ ಮ್ಯಾನ್ಮಾರ್ (ಬರ್ಮಾ) ನ ರಂಗೂನ್‌ನಲ್ಲಿ ಸಾವಿರಾರು ತಮಿಳು ಮೂಲದ ಬೌದ್ಧರು ‘ನವಯಾನ’ಕ್ಕೆ ಮರಳಿದ್ದಾರೆ.

ಜಾಗತಿಕವಾಗಿ ವರ್ತಮಾನದ ಶೋಷಿತ ಜನರ ವಿಮೋಚನೆಯ ನೆಲೆಯಲ್ಲಿ ಮರುಹುಟ್ಟು ಪಡೆದ ‘ಸೋಷಿಯಲಿ ಎಂಗೇಜ್ಡ್ ಬುದ್ಧಿಜಂ’ ಮತ್ತು ‘ಹ್ಯೂಮನಿಸ್ಟಿಕ್ ಬುದ್ಧಿಝಂ’ ಚಳವಳಿಯೊಂದಿಗೆ ಅಂಬೇಡ್ಕರರ ನವಯಾನ ಬೌದ್ಧ ನಡೆಯು ಬೆಸೆದುಕೊಂಡಿದೆ. ಹೀಗಾಗಿಯೇ ಅಮೆರಿಕ ಮತ್ತು ಯೂರೋಪ್‌ನ ಆಕ್ಸ್‌ಫರ್ಡ್ ಮತ್ತು ಟೆಕ್ಸಾಸ್ ನಂತಹ ವಿಶ್ವವಿದ್ಯಾನಿಲಯಗಳಲ್ಲಿ ಅಂಬೇಡ್ಕರ್ ಅವರ ರಾಜಕೀಯ ತತ್ವಶಾಸ್ತ್ರ ಮತ್ತು ನವಯಾನದ ಕುರಿತು ಅಧ್ಯಯನಗಳು ನಡೆಯುತ್ತಿವೆ. ಜಾಗತಿಕ ಬೌದ್ಧ ಸಮುದಾಯ ‘ನವಯಾನ’ ವನ್ನು ಪ್ರತ್ಯೇಕ ಬೌದ್ಧ ದಮ್ಮದ ಶಾಖೆಯನ್ನಾಗಿ ನೋಡದಿದ್ದರೂ, ಶೋಷಣೆಯ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಜಾಗತಿಕ ಸಮುದಾಯಕ್ಕೆ ‘ನವಯಾನ’ ಹೊಸ ಪ್ರೇರಣೆಯಾಗಿದೆ.

(ಲೇಖಕರು ಕಲಬುರಗಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರು)

Tags

Navayana
share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X