‘ಪಾರಿಜಾತ’ದಲ್ಲಿ ಅರಳಿದ ದಲಿತ ಕಲಾವಿದೆಯರು

ಪಾರಿಜಾತ ಕಲಾ ಪ್ರಕಾರದ ಕುರಿತಂತೆ ಶ್ರೀರಾಮ ಇಟ್ಟಣ್ಣನವರು ಹೆಚ್ಚು ಕೆಲಸ ಮಾಡಿದ್ದರ ನೆಪದಲ್ಲಿ ಈ ಕೃತಿಯನ್ನು ಪಾರಿಜಾತ ಕಲೆಯ ಸಾಂಸ್ಕೃತಿಕ ಚರಿತ್ರೆಯ ಪಠ್ಯವನ್ನಾಗಿಸಿದ್ದಾರೆ. ಪಾರಿಜಾತದ ಹಸ್ತಪ್ರತಿಗಳು, ಪ್ರದರ್ಶನ ಪಠ್ಯಗಳು, ಕಲಾವಿದರ ಸೃಜನಶೀಲತೆ, ಪಾರಿಜಾತದ ಸಂಗೀತ ಪರಂಪರೆ, ಹಲವು ಪಾರಿಜಾತಗಳ ಹೋಲಿಕೆ, ಪಾರಿಜಾತದ ಪರಿಷ್ಕರಣೆ ಕುರಿತಂತೆ ಹಿರಿಯರಾದ ಬಸವರಾಜ ಮಲಶೆಟ್ಟರನ್ನು ಒಳಗೊಂಡಂತೆ ವೀರಣ್ಣ ದಂಡೆ, ಬಾಳಾಸಾಹೇಬ ಲೋಕಾಪುರ, ವೀರೇಶ ಬಡಿಗೇರ, ಜಿ.ಎನ್. ಉಪಾಧ್ಯ, ಶಿವಾನಂದ ಶೆಲ್ಲಿಕೇರಿ, ಬಸವಲಿಂಗ ಹಿರೇಮಠ ಮೊದಲಾದವರು ವಿದ್ವತ್ ಪೂರ್ಣ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಈ ಅರ್ಥದಲ್ಲಿ ಈ ಕೃತಿ ಒಂದು ಉಪಯುಕ್ತ ಆಕರ ಗ್ರಂಥವಾಗಿದೆ.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹಿರಿಯ ಲೇಖಕಿ ಲೇಖಕರನ್ನು ಗೌರವಿಸುವ, ನೆನಪಿಸುವ ಅಭಿನಂದನೆ ಸಲ್ಲಿಸುವ ಗ್ರಂಥ ಪ್ರಕಾರವೊಂದಿದೆ. ಇದು ಅಭಿನಂದಿಸಿದವರ ಒಡನಾಡಿಗಳ ಅನುಭವ, ಅವರ ಕೃತಿಗಳ ಪರಿಚಯ, ಅವರ ಆದ್ಯತೆಯ ಕ್ಷೇತ್ರವನ್ನು ಆಧರಿಸಿದ ಸಂಶೋಧನಾ ಲೇಖನಗಳನ್ನು ಸಂಪಾದಿಸುತ್ತಿರುತ್ತಾರೆ. ಹೀಗೆ ಕೆಲವು ಆಕರವಾಗಬಲ್ಲ ಮಹತ್ವದ ಅಭಿನಂದನ ಗ್ರಂಥಗಳು ಇವೆ. ಕುವೆಂಪು ಅವರ ಬಗೆಗಿನ ‘ಸಹ್ಯಾದ್ರಿ’ ಶಂಬಾ ಜೋಷಿ ಅವರ ‘ಅಧ್ಯಯನ’, ಎಂ.ಕೆ. ಇಂದಿರಾ ಅವರ ‘ಸುರಗಿ’ ದೇವನೂರರ ‘ಯಾರ ಜಪ್ತಿಗೂ ಸಿಗದ ನವಿಲು’ ಮುಂತಾದವುಗಳನ್ನು ಹೆಸರಿಸಬಹುದು. ಈ ಕುರಿತು ಪ್ರತ್ಯೇಕ ಅಧ್ಯಯನ ಸಂಶೋಧನೆ ಮಾಡುವಷ್ಟು ವಿಪುಲ ಅಭಿನಂದನ ಸಾಹಿತ್ಯ ಬಂದಿದೆ. ಹೀಗೆ ನನ್ನ ಗಮನ ಸೆಳೆದ ಒಂದು ಅಭಿನಂದನಾ ಗ್ರಂಥ ಡಾ. ಶ್ರೀರಾಮ ಇಟ್ಟಣ್ಣನವರ ಗ್ರಂಥ ‘ಪಾರಿಜಾತ’.
ಶ್ರೀರಾಮ ಇಟ್ಟಣ್ಣನವರು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಯಾದವಾಡದವರು. 240 ಎಕರೆ ಜಮೀನು ಇದ್ದ ಹಾಲುಮತ ಸಮುದಾಯದ ಅವಿಭಕ್ತ ಕುಟುಂಬದಲ್ಲಿ ಬೆಳೆದರು. ಜನಪದ ಹಾಡುಪರಂಪರೆಯನ್ನು ಕೇಳುತ್ತಲೇ ಬೆಳೆದ ಇಟ್ಟಣ್ಣ ಎಂ.ಎಂ. ಕಲಬುರ್ಗಿ ಅವರ ಶಿಷ್ಯತ್ವದಲ್ಲಿ 1972ರಲ್ಲಿ ಕನ್ನಡ ಎಂ.ಎ. ಮುಗಿಸಿ ಅಧ್ಯಾಪನದ ಜತೆ ಜತೆಗೆ ಸಂಶೋಧನೆ ಆರಂಭಿಸುತ್ತಾರೆ. 1984 ರಲ್ಲಿ ಎಂ.ಎಂ. ಕಲಬುರಗಿ ಅವರ ಮಾರ್ಗದರ್ಶನದಲ್ಲಿ ‘ಶ್ರೀಕೃಷ್ಣ ಪಾರಿಜಾತ: ಒಂದು ಅಧ್ಯಯನ ಕುರಿತಂತೆ ಸಂಶೋಧನೆ ಪೂರೈಸಿ ಪಿಎಚ್.ಡಿ. ಪಡೆಯುತ್ತಾರೆ. ಕನ್ನಡದ ಅತ್ಯುತ್ತಮ ಸಂಶೋಧನೆಗಳನ್ನು ಪಟ್ಟಿ ಮಾಡಿದರೆ ಇಟ್ಟಣ್ಣನವರ ಈ ಸಂಶೋಧನೆಯೂ ಒಂದಾಗಿರುತ್ತದೆ. ಉತ್ತರ ಕರ್ನಾಟಕದಲ್ಲಿ ನೆಲೆಗೊಂಡ ಶ್ರೀಕೃಷ್ಣ ಪಾರಿಜಾತ ಜನಪದ ರಂಗ ಪ್ರಕಾರಕ್ಕೆ ಒಂದು ವಿಶ್ವವಿದ್ಯಾನಿಲಯ ಮಟ್ಟದ ಸಂಶೋಧನೆಯ ಗೌರವ ತಂದುಕೊಟ್ಟವರು. ಹೀಗೆ ಉತ್ತರ ಕರ್ನಾಟಕದ ಬಯಲಾಟ ಪರಂಪರೆಯ ಪಾರಿಜಾತ, ಸಣ್ಣಾಟ, ದೊಡ್ಡಾಟಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡಿದವರು. 27ರಷ್ಟು ವಿವಿಧ ಕೃತಿಗಳನ್ನು ರಚಿಸಿದವರು. ಅಷ್ಟೂ ಕೃತಿಗಳಲ್ಲಿ ಹಾದುಹೋದ ಎಳೆಯೆಂದರೆ ಗಡಿಭಾಗದ ಅಂಚಿನ ಸಮುದಾಯಗಳ ಬದುಕು ಸಂಸ್ಕೃತಿ ಮತ್ತು ಪರಂಪರೆಯದಾಗಿದೆ. ಈ ಕಾರಣಕ್ಕೆ ಡಾ. ಶ್ರೀರಾಮ ಇಟ್ಟಣ್ಣನವರು ಗಮನಸೆಳೆದ ಹಿರಿಯ ವಿದ್ವಾಂಸರು.
ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳದ ಡಾ. ಎಂ.ಎಂ. ಕಲಬುರ್ಗಿ ಲಿಂಗಾಯತ ಅಧ್ಯಯನ ಸಂಸ್ಥೆಯು 2021ರಲ್ಲಿ ಪ್ರಕಟಿಸಿದ ಇಟ್ಟಣ್ಣನವರ ಅಭಿನಂದನಾ ಗ್ರಂಥ ‘ಪಾರಿಜಾತ’ದಲ್ಲಿ ಏಳು ಭಾಗಗಳಿವೆ. ಮೊದಲ ಭಾಗದಲ್ಲಿ ಇಟ್ಟಣ್ಣನವರ ಆತ್ಮಕಥಾನಕವೂ, ಎರಡನೇ ಭಾಗದಲ್ಲಿ ಹಲವರ ಒಡನಾಟದ ನೆನಪುಗಳು, ಮೂರನೇ ಭಾಗದಲ್ಲಿ ಗ್ರಂಥಾವಲೋಕನ, ನಾಲ್ಕನೇ ಭಾಗದಲ್ಲಿ ಶ್ರೀಕೃಷ್ಣಪಾರಿಜಾತದ ಬಗೆಗಿನ ಸಂಶೋಧನಾ ಲೇಖನಗಳು, ಐದನೇ ಭಾಗದಲ್ಲಿ ಪಾರಿಜಾತ ಕಲಾವಿದೆಯರ ಪರಿಚಯ, ಆರನೇ ಭಾಗದಲ್ಲಿ ಇಟ್ಟಣ್ಣನವರ ಸಂದರ್ಶನವಿದೆ. ಒಟ್ಟು 840 ಪುಟದ ಈ ಗ್ರಂಥದಲ್ಲಿ 134 ಪುಟದಷ್ಟಿರುವ ಈ ಕೃತಿಯ ಐದನೇ ಎಸಳಲ್ಲಿನ ಪಾರಿಜಾತ ಕಲಾವಿದೆಯರ ಆತ್ಮಕಥನಗಳ ತುಣುಕಿನ ಪರಿಚಯಾತ್ಮಕ ಬರಹಗಳು ಈ ಕೃತಿಯ ತೂಕವನ್ನು ಹೆಚ್ಚಿಸಿವೆ. ಈ ಭಾಗವು ಅಭಿನಂದನಾ ಗ್ರಂಥದ ಜೀವಾಳದಂತೆ ಉಸಿರಾಡಿದೆ.
ಈ ಕೃತಿಯು ಬಯಲಾಟ ಪರಂಪರೆಯ ಪಾರಿಜಾತ, ಸಣ್ಣಾಟ, ರಾಧಾನಾಟ, ದೊಡ್ಡಾಟ ಕಲೆಯ ಬೇರುಗಳನ್ನು ಅರ್ಥಮಾಡಿಕೊಳ್ಳಲು ಒಂದು ಆಕರ ಗ್ರಂಥವಾಗಿದೆ. ಪಾರಿಜಾತ ಕಲಾ ಪ್ರಕಾರದ ಕುರಿತಂತೆ ಶ್ರೀರಾಮ ಇಟ್ಟಣ್ಣನವರು ಹೆಚ್ಚು ಕೆಲಸ ಮಾಡಿದ್ದರ ನೆಪದಲ್ಲಿ ಈ ಕೃತಿಯನ್ನು ಪಾರಿಜಾತ ಕಲೆಯ ಸಾಂಸ್ಕೃತಿಕ ಚರಿತ್ರೆಯ ಪಠ್ಯವನ್ನಾಗಿಸಿದ್ದಾರೆ. ಪಾರಿಜಾತದ ಹಸ್ತಪ್ರತಿಗಳು, ಪ್ರದರ್ಶನ ಪಠ್ಯಗಳು, ಕಲಾವಿದರ ಸೃಜನಶೀಲತೆ, ಪಾರಿಜಾತದ ಸಂಗೀತ ಪರಂಪರೆ, ಹಲವು ಪಾರಿಜಾತಗಳ ಹೋಲಿಕೆ, ಪಾರಿಜಾತದ ಪರಿಷ್ಕರಣೆ ಕುರಿತಂತೆ ಹಿರಿಯರಾದ ಬಸವರಾಜ ಮಲಶೆಟ್ಟರನ್ನು ಒಳಗೊಂಡಂತೆ ವೀರಣ್ಣ ದಂಡೆ, ಬಾಳಾಸಾಹೇಬ ಲೋಕಾಪುರ, ವೀರೇಶ ಬಡಿಗೇರ, ಜಿ.ಎನ್. ಉಪಾಧ್ಯ, ಶಿವಾನಂದ ಶೆಲ್ಲಿಕೇರಿ, ಬಸವಲಿಂಗ ಹಿರೇಮಠ ಮೊದಲಾದವರು ವಿದ್ವತ್ ಪೂರ್ಣ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಈ ಅರ್ಥದಲ್ಲಿ ಈ ಕೃತಿ ಒಂದು ಉಪಯುಕ್ತ ಆಕರ ಗ್ರಂಥವಾಗಿದೆ.
ಈ ಗ್ರಂಥದ ಜೀವಾಳವೆಂದರೆ ಪಾರಿಜಾತ ಕಲಾವಿದೆಯರ ಪರಿಚಯದ ಭಾಗ. ಡೊಂಬರ ಸಮುದಾಯದ ಕೌಜಲಗಿ ನಿಂಗವ್ವನನ್ನು ಮೊದಲುಗೊಂಡು ಫಾತಿಮಾ ಮುಗಳಖೋಡ, ಯಮನವ್ವ ಸೂಳಿಕೆರಿ, ಲೋಕಾಪುರ ಯಲ್ಲವ್ವ, ಮಲ್ಲಮ್ಮ ಮ್ಯಾಗೇರಿ, ಕಾಶೀಬಾಯಿ ದಾದನಟ್ಟಿ, ಚಂದ್ರವ್ವ ಕೌಜಲಗಿ, ಚಂಪಾಬಾಯಿ ನಣದಿ, ಮೆಟಗುಡ್ಡದ ಕಮಲವ್ವ, ಮಾಲಾಬಾಯಿ ಹಿಡಕಲ್ಲ, ಮಹಾದೇವಿ ಚೀಲಮಗೇರಿ ಮಠ, ವಿಶ್ವೇಶ್ವರಿ ಹಿರೇಮಠ, ಚಂದ್ರವ್ವ ನಾವಲಗಿ, ಕಾಕನೂರು ಕಾಕವ್ವ, ರೇಣುಕಾ ಮಾಲಾಪುರ, ಶಿರೋಳ ಮಲ್ಲವ್ವ, ಸುಂದ್ರವ್ವ ಚಿಮ್ಮಡಿ, ವಿಲಾಸಬಾಯಿ ತೇರದಾಳ, ಮುತ್ತವ್ವ ಕೆಸರಗೊಪ್ಪ, ಈಶ್ವರವ್ವ ಸಾರವಾಡ, ಪಾರವ್ವ ಹೊಸಕೋಟಿ, ಕುಳ್ಳೂರು ಯಲ್ಲವ್ವ, ಶಾಂತಾಬಾಯಿ ಸಾಲೊಟಗಿ, ಪ್ರೇಮಾ ತುಳಸಿಗೇರಿ, ಕಸ್ತೂರವ್ವ ಮನ್ನೀಕೇರಿ, ಅನಸೂಯ ಬಬಲೇಶ್ವರ, ಸತ್ಯವ್ವ ಹಿಪ್ಪರಗಿ, ಮಹಾದೇವಿ ಉತ್ತೂರು, ಸೊನ್ನದ ಮಾರೆವ್ವ, ಶಾಂತಬಾಯಿ ಕಂಕಣವಾಡಿ, ಪುತಳವ್ವ ಕೊಟ್ಯಾಳ, ಲಕ್ಷ್ಮಿಬಾಯಿ ಮನಗೊಳಿ, ಮರಗವ್ವ ಇಂಗಳಗಿ ಒಟ್ಟು 34 ಕಲಾವಿದೆಯರ ಪರಿಚಯವಿದೆ.
ಇಲ್ಲಿ ಪರಿಚಯಿಸಿರುವ ಇಬ್ಬರು ಕಲಾವಿದೆಯರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ತಳವರ್ಗದ ಹಿಂದುಳಿದ ದಲಿತ ಕಲಾವಿದೆಯರಾಗಿದ್ದಾರೆ. 14 ಕಲಾವಿದೆಯರು ಚಮ್ಮಾರಿಕೆ ವೃತ್ತಿಯ ಮಾದಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರೆಲ್ಲಾ ಅನಿಷ್ಟ ದೇವದಾಸಿ ಪದ್ಧತಿಗೆ ಒಳಗಾದವರು. ಈ ದೇವದಾಸಿ ಪದ್ಧತಿಯ ಶೋಷಣೆಯಿಂದ ಹೊರಬರಲು ಇವರುಗಳೆಲ್ಲಾ ಪಾರಿಜಾತ ಕಲಾವಿದೆಯರಾಗಿ ಸಾಮಾಜಿಕ ಮಾನ್ಯತೆ ಪಡೆಯಲು ಜೀವನಪೂರ್ತಿ ಹೆಣಗಿದವರು. ಪಾರಿಜಾತ ಕಂಪನಿಗಳು ಆರಂಭಕ್ಕೆ ಮೇಲುಜಾತಿ ಗಂಡಸರ ಒಡೆತನದಲ್ಲಿದ್ದವು. ಈ ಮೇಲುಜಾತಿಗಳ ಒಡೆಯರು ದಲಿತ ಸಮುದಾಯದ ಕಲಾವಿದೆಯರನ್ನು ತಮ್ಮ ಕಂಪನಿಗಳನ್ನು ಬೆಳೆಸಲು ಅಡಿಗಲ್ಲಾಗಿ ಬಳಸಿಕೊಳ್ಳುತ್ತಿದ್ದರು. ದಲಿತ ಡೊಂಬರ ಸಮುದಾಯಕ್ಕೆ ಸೇರಿದ ಕೌಜಲಗಿ ನಿಂಗಮ್ಮ ಪಾರಿಜಾತವನ್ನು ಪರಿಷ್ಕರಿಸಿ ಮೊದಲಿಗೆ ಸ್ವಂತ ಪಾರಿಜಾತ ಕಂಪನಿಯನ್ನು ಕಟ್ಟಿದರು. ಈ ರೀತಿ ಕೌಜಲಗಿ ನಿಂಗಮ್ಮ ಹಾಕಿಕೊಟ್ಟ ದಾರಿಯಲ್ಲಿ ದೊಡ್ಡಮಟ್ಟದಲ್ಲಿ ದಲಿತ ಕೆಳಜಾತಿ ಮಹಿಳೆಯರು ಪಾರಿಜಾತ ಬಯಲಾಟ ಪರಂಪರೆಗೆ ಬರಲು ಸಾಧ್ಯವಾಯಿತು. ಅಂತೆಯೇ ಕೌಜಲಗಿ ನಿಂಗಮ್ಮನ ಪ್ರಭಾವದಿಂದ ಇಲ್ಲಿನ ಬಹುಪಾಲು ಕಲಾವಿದೆಯರು ಸ್ವಂತ ಪಾರಿಜಾತ ಸಂಘಗಳನ್ನು ಕಟ್ಟಿಕೊಂಡು ಮಾಲಕಿಯರಾಗಿ ಕಲಾವಿದರನ್ನು ಬೆಳೆಸಿದ್ದಾರೆ.
ಪಾರಿಜಾತ ರಂಗಭೂಮಿ ದಲಿತ ಕಲಾವಿದೆಯರಿಗೆ ಕಲಿಕೆಯ ಶಾಲೆಯಾಗಿದೆ. ಅಂತೆಯೇ ಪಾರಿಜಾತದ ಅಭಿನಯದ ಮೂಲಕ ಸಮಾಜವನ್ನು ತಿದ್ದುವ ಕೆಲಸಕ್ಕೆ ಮುಂದಾಗುತ್ತಾರೆ. ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಗೌರವ ಪಡೆದ ಎಲ್ಲವ್ವ ರೊಡ್ಡಪ್ಪನವರ ಮೂಲತಃ ದೇವದಾಸಿಯಾಗಿದ್ದರೂ, ಯಲ್ಲವ್ವನಿಗೆ ಬಿಟ್ಟಿದ್ದ ದೇವದಾಸಿ ಪದ್ಧತಿಯಿಂದ ಹೊರಬಂದು ತಾನು ಹುಟ್ಟಿದ ಲೋಕಾಪುರದ ಠಾಣಿಕೇರಿಯಲ್ಲಿ ದೇವದಾಸಿ ಪದ್ಧತಿಯ ವಿರುದ್ಧ ಸಿಡಿದೇಳುತ್ತಾರೆ. ತನ್ನ ಕೇರಿಯ ಜನರಿಗೆ ತಿಳಿ ಹೇಳಿ ಮನವರಿಕೆ ಮಾಡಿ ಕೇರಿಯ ಯಾವುದೇ ಹೆಣ್ಣುಮಕ್ಕಳನ್ನು ದೇವದಾಸಿ ಪದ್ಧತಿಗೆ ಬಲಿಯಾಗದಂತೆ ತಡೆಯುತ್ತಾರೆ. ಯಾವ ದೇವದಾಸಿ ಪದ್ಧತಿ ತನಗೆ ಪಾರಿಜಾತಕ್ಕೆ ಪ್ರವೇಶ ಒದಗಿಸಿದ್ದಿತೋ, ಅದೇ ಪಾರಿಜಾತವನ್ನು ಬಳಸಿ ಕಲಾವಿದೆಯಾದ ಎಲ್ಲವ್ವ ದೇವದಾಸಿ ಪದ್ಧತಿಯ ವಿರುದ್ಧ ಹೋರಾಟ ಮಾಡಿದ್ದು ಅಪರೂಪದ ವಿದ್ಯಮಾನ. ಇದನ್ನು ಗುರುತಿಸಿಯೇ ಕನ್ನಡ ವಿಶ್ವವಿದ್ಯಾನಿಲಯ ಎಲ್ಲವ್ವನನ್ನು ನಾಡೋಜ ಎಂದು ಗುರುತಿಸಿತು.
ಪಾರಿಜಾತ ವೈಷ್ಣವ ಮತವನ್ನು ಸಾರುವ ಕೃಷ್ಣ ಮತ್ತು ಆತನ ಇಬ್ಬರು ಹೆಂಡತಿಯರ ನಡುವೆ ನಡೆಯುವ ಸಂಭಾಷಣೆಯಾಗಿದೆ. ಕೃಷ್ಣ, ರುಕ್ಮಿಣಿ, ಸತ್ಯಭಾಮೆ, ಕೊರವಂಜಿ, ಗೊಲ್ಲತಿ ಹೀಗೆ ಎಲ್ಲಾ ಪಾತ್ರಗಳನ್ನು ದಲಿತ ಕೆಳವರ್ಗದ ಮಹಿಳೆಯರೇ ಅಭಿನಯಿಸಿದ್ದರಿಂದ ಇಡೀ ವೈಷ್ಣವ ಮತವನ್ನು ದಲಿತ ಕಣ್ಣೋಟದಿಂದಲೂ ಅಂತೆಯೇ ವೈಷ್ಣವ ಪಂಥ ದಲಿತರೊಳಗೆ ನೆಲೆಗೊಳ್ಳಲೂ ಕಾರಣವಾದಂತಿದೆ. ಅಂತೆಯೇ ಈ ಕಲಾವಿದೆಯರ ವೈವಾಹಿಕ ಜೀವನ ಜಾತ್ಯತೀತ, ಧರ್ಮಾತೀತವೂ ಆಗುವುದರೊಂದಿಗೆ ದುಃಖಕರವೂ ಆಗಿದೆ. ಕೌಜಲಗಿ ನಿಂಗವ್ವ ಹರೆಯದಲ್ಲಿ ತನ್ನ ಅಭಿನಯಕ್ಕೆ ಮಾರುಹೋದ ಶ್ರೀಮಂತ ವಕೀಲನನ್ನು ಮದುವೆಯಾಗುತ್ತಾಳೆ. ಬಹಳ ದಿನ ಬಾಳಲಾಗದೆ ಬೇರೆಯಾಗಿ ಬ್ರಹ್ಮಚಾರಿಣಿಯಾಗಿಯೇ ಬದುಕು ದೂಡುತ್ತಾಳೆ. ಕಲಾವಿದೆ ಚಂದ್ರವ್ವ ಕೌಜಲಗಿ ತಾನು ಮದುವೆ ಆಗದಿದ್ದರೂ ತವರು ಮತ್ತು ಗಂಡನ ಮನೆಯಿಂದ ತಿರಸ್ಕೃತಗೊಂಡ ಸರಗವ್ವ ಎಂಬ ಗರ್ಭಿಣಿಗೆ ಆಶ್ರಯ ಕೊಟ್ಟು ಹುಟ್ಟಿದ ಮಗಳನ್ನು ದತ್ತುಕ ಪಡೆದು ಸಾಕುತ್ತಾಳೆ. ಹೀಗೆ ಬಹುಪಾಲು ಕಲಾವಿದೆಯರು ಅವಿವಾಹಿತರಾಗಿಯೂ, ವಿವಾಹವಾದರೂ ಒಂಟಿಯಾಗಿ ಬದುಕಿದ್ದಾರೆ.
ಇದರಲ್ಲೂ ಕೆಲವು ದೇವದಾಸಿಯರು ಪಾರಿಜಾತದ ಕಲಾವಿದೆಯರಾಗಿ ಒಂದಷ್ಟು ಆರ್ಥಿಕವಾಗಿ ಉತ್ತಮಗೊಂಡ ಕಾರಣ ತಮ್ಮ ಮಕ್ಕಳನ್ನು ಓದಿಸಿ ನೌಕರಿಗೆ ಹತ್ತಿಸಿದ್ದಾರೆ. ಮಾದಾರ ಮಾಲಾಬಾಯಿ ಹಿಡಕಲ್ಲ ಅವರು ತನ್ನ ಮಗನನ್ನು ಓದಿಸಿ ಶಿಕ್ಷಕನನ್ನಾಗಿ ಮಾಡಿದ್ದಾರೆ. ಕಾಶಿಬಾಯಿ ದಾದನಟ್ಟಿ ಅವರ ಮಗಳು ಸವಿತಾ ಶಿಕ್ಷಕಿಯಾದರೆ, ಮಗ ದೀಪಕ್ ಇಂಜಿನಿಯರ್ ಆಗಿದ್ದಾರೆ. ಹೀಗೆ ದಲಿತ ಹಿಂದುಳಿದ ವರ್ಗದ ಕಲಾವಿದೆಯರಿಗೆ ತಾವು ಅನಕ್ಷರಸ್ಥರಾಗಿದ್ದರೂ ತಮ್ಮ ಮುಂದಿನ ತಲೆಮಾರನ್ನು ಶಿಕ್ಷಿತರನ್ನಾಗಿ ಉದ್ಯೋಗಸ್ಥರನ್ನಾಗಿ ಮಾಡಿರುವುದು ಕೂಡ ಅಪರೂಪದ ಸಂಗತಿಯಾಗಿದೆ. ಕಲಾವಿದರಲ್ಲಿ ಧರ್ಮ-ಜಾತಿ ಕೂಡಾವಳಿ ಮಾಡುತ್ತವೆ. ಅಂತೆಯೇ ಕಲಾವಿದೆ ಚಂಪಾಬಾಯಿ ನಣದಿ ಸಹ ಕಲಾವಿದ ಅಪ್ಪಾಲಾಲ್ ನದಾಫ್ ಅವರನ್ನು ಮದುವೆಯಾಗಿ ಹಿಂದೂ-ಮುಸ್ಲಿಮ್ ಸಂಸ್ಕೃತಿಯನ್ನು ಕೂಡಿಸಿಕೊಂಡು ಬದುಕುತ್ತಾರೆ. ಮಕ್ಕಳಾದ ಗೈಬುಸಾಬ, ಲಸ್ಸಿಮಾ, ಮಾಬೂಬಿ, ರಝಿಯಾ ಅವರುಗಳನ್ನು ಸಾಧ್ಯವಾದಷ್ಟು ಶಿಕ್ಷಿತರನ್ನಾಗಿಸಿದ್ದಾರೆ.
ಕೌಜಲಗಿ ನಿಂಗಮ್ಮ
ಇಲ್ಲಿ ಪರಿಚಯವಾಗಿರುವ ಕಲಾವಿದೆಯರ ಜೀವನ ಚಿತ್ರಗಳನ್ನು ನೋಡುತ್ತಿದ್ದರೆ, ಇವರುಗಳೆಲ್ಲಾ ಅಡುಗೆ ಮನೆಯ ಚೌಕಟ್ಟನ್ನು ಮೀರಿ ಹೊರಬಂದವರು. ಸಮುದಾಯದ ಎದುರು ನಿಂತು ನಟಿಸಿದವರು. ಇದು ಗ್ರಾಮೀಣ ಭಾಗದ ಲಿಂಗತಾರತಮ್ಯದ ನೋಟವನ್ನು ಚೂರು ಪಲ್ಲಟಗೊಳಿಸಲು ಸಹಾಯಕವಾಗಿದೆ. ವಿಶೇಷವೆಂದರೆ ಇಲ್ಲಿನ ಬಹುಪಾಲು ಕಲಾವಿದೆಯರು ಮೊದ ಮೊದಲು ಬೇರೆ ಬೇರೆ ಕಂಪನಿಗಳಲ್ಲಿ ನಟಿಸುತ್ತಲೇ ತಾವು ನಟನೆಯಲ್ಲಿ ಪ್ರಬುದ್ಧರಾದಂತೆ, ಪಾರಿಜಾತ ಕಲೆಯ ಎಲ್ಲಾ ಆಯಾಮಗಳನ್ನು ಅನುಭವದಿಂದ ಅರಿತಂತೆ ತಾವೇ ಸ್ವತಃ ಪಾರಿಜಾತ ಕಂಪನಿಗಳನ್ನು ಕಟ್ಟಿ ಮುನ್ನಡೆಸಿದ್ದಾರೆ. ಇದು ಪ್ರಾಚೀನ ಮಾತೃಪ್ರಧಾನ ಸಮಾಜದ ಒಂದು ನೆನಪನ್ನು ತರುತ್ತದೆ. ಮಹಿಳೆಯರ ಈ ಬಗೆಯ ಆರ್ಥಿಕ ಸ್ವಾವಲಂಬನೆಯು ಪುರುಷ ಪಾರಮ್ಯದ ನಡುವೆಯೂ ಪಾರಿಜಾತವನ್ನು ಮಹಿಳಾಪ್ರಧಾನ ಕಲೆಯನ್ನಾಗಿಸಿದ್ದಾರೆ.
ಇಲ್ಲಿನ ಕಲಾವಿದೆಯರ ಪರಿಚಯ ಮೇಲುನೋಟದ್ದು. ಈ ಕಲಾವಿದೆಯರ ಒಂದೊಂದು ಫೋಟೊವನ್ನಾದರೂ ಸಂಗ್ರಹಿಸಿ ಪ್ರಕಟಿಸಬಹುದಿತ್ತು. ಆದರೆ ಈ ಪರಿಚಯಗಳು ಹಲವು ಬಗೆಯ ಅಧ್ಯಯನಗಳಿಗೆ ಪ್ರೇರಣೆ ಆಗುವಂತಿವೆ. ಈ ಎಲ್ಲಾ ಕಲಾವಿದೆಯರ ಮೂಲಕ ಉತ್ತರ ಕರ್ನಾಟಕದ ಜನಪದ ರಂಗಭೂಮಿಯನ್ನು ಹೆಣ್ಣಿನ ಕಣ್ಣೋಟದಿಂದ ನೋಡುವ ಒಂದು ಆಯಾಮವನ್ನು ಒದಗಿಸುತ್ತದೆ. ಅಂತೆಯೇ ಈಗ ಬದುಕಿರುವ ಕಲಾವಿದೆಯರ ಆತ್ಮಕಥಾನಕಗಳನ್ನು ನಿರೂಪಣೆ ಮಾಡಿ ಒಬ್ಬೊಬ್ಬರ ಬಗ್ಗೆಯೂ ಅವರ ಅನುಭವಗಳನ್ನು ಆಧರಿಸಿ ಆತ್ಮಕಥನಗಳನ್ನು ಪ್ರಕಟಿಸಿದರೆ ಕರ್ನಾಟಕದ ಸಂದರ್ಭದಲ್ಲಿ ಅಪರೂಪದ ಅನುಭವಲೋಕಕ್ಕೆ ಜೀವ ಬರಿಸಿದಂತಾಗುತ್ತದೆ. ಇನ್ನು ಸಾಹಿತ್ಯದಲ್ಲಿ ಮಾತ್ರ ದಲಿತ ಮಹಿಳೆಯರ ಕೊಡುಗೆಗಳನ್ನು ಚರ್ಚಿಸುವ ನಾವುಗಳು ಜನಪದ ರಂಗಭೂಮಿಗೆ ದಲಿತ ಕೆಳವರ್ಗದ ಮಹಿಳೆಯರ ಕೊಡುಗೆಯನ್ನು ಚಾರಿತ್ರಿಕವಾಗಿ ಗುರುತಿಸಲು ಸಹಾಯವಾಗುತ್ತವೆ. ಹೀಗೆ ಪಾರಿಜಾತ ಕಲೆಯನ್ನು ಜೀವಂತಗೊಳಿಸಿದ ಈ ಎಲ್ಲಾ ಕಲಾವಿದೆಯರು ನಮ್ಮ ಚರಿತ್ರೆಯಲ್ಲಿ ದಾಖಲಾಗಬೇಕಿದೆ.







