Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಸರ್ ಮಿರ್ಝಾ ಇಸ್ಮಾಯೀಲ್ ದಿವಾನಗಿರಿಗೆ...

ಸರ್ ಮಿರ್ಝಾ ಇಸ್ಮಾಯೀಲ್ ದಿವಾನಗಿರಿಗೆ ‘ಶತಕ’

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ24 Nov 2026 11:17 AM IST
share
ಸರ್ ಮಿರ್ಝಾ ಇಸ್ಮಾಯೀಲ್ ದಿವಾನಗಿರಿಗೆ ‘ಶತಕ’

ಕೃಷ್ಣರಾಜ ಸಾಗರ ಅಣೆಕಟ್ಟೆಯನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಮಿರ್ಝಾರಿಗೆ ಸಲ್ಲುತ್ತದೆ. ಸರ್ ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ನಿರ್ಮಾಣವಾಗತೊಡಗಿ ಪ್ರಥಮ ಹಂತ 1916ರಲ್ಲೇ ಮುಗಿದಿದ್ದರೂ, ಮದ್ರಾಸ್‌ನ ಆಕ್ಷೇಪದಿಂದ ಕಾಮಗಾರಿ ನಿಂತಿತ್ತು. ಮಿರ್ಝಾರವರ ಕಾಲದಲ್ಲಿ, ಒಟ್ಟು ಎರಡು ಕೋಟಿ ನಲವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆ ಅಣೆಕಟ್ಟೆಯನ್ನು ಪೂರ್ಣಗೊಳಿಸಲಾಯಿತು.

ಹಲವು ಗದ್ದಲಗಳ ನಡುವೆ ನೆನಪಿಸಿಕೊಳ್ಳಬೇಕಾದ ಕೆಲವು ಮುಖ್ಯ ಸಂಗತಿಗಳು ಮರೆಯಾಗುತ್ತವೆ. ಅಂತಹ ಮರೆವಿಗೆ ಸಂದ ಘಟನೆಗಳಲ್ಲಿ ಆಧುನಿಕ ಮೈಸೂರಿನ ನಿರ್ಮಾತೃ ಮಿರ್ಝಾ ಇಸ್ಮಾಯೀಲ್ ಅವರ ದಿವಾನಗಿರಿಗೆ ನೂರು ವರ್ಷ ತುಂಬಿದ್ದೂ ಒಂದಾಗಿದೆ. ಈ ಹೊತ್ತಲ್ಲಿ ನೂರು ವರ್ಷದ ಹಿಂದೆ ಮಿರ್ಝಾ ಅವರು ಮಾಡಿದ ಸಾಧನೆಗಳು ಇಂದಿಗೂ ಅವರ ಹೆಸರನ್ನು ಹೇಳುತ್ತಿವೆ. ಅಂದು ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿ ಮಿರ್ಝಾ ಇಸ್ಮಾಯೀಲ್ ಅವರೇ ಆಗಿದ್ದರು. ಈಗಲೂ ಇದು ಲಾಭದಲ್ಲಿರುವ ಸರಕಾರಿ ಉದ್ಯಮವಾಗಿದೆ.

ಮಿರ್ಝಾರವರು ಅಗಲಿ 68 ವರ್ಷಗಳು ಕಳೆದವವು. ಅವರ ದಿವಾನಗಿರಿಗೆ ನೂರು ತುಂಬಿದೆ. ಈಗಲೂ ಅವರು ದಿವಾನರಾಗಿದ್ದಾಗ ಕೈಗೊಂಡ ಕಾರ್ಯಗಳು ಅವರ ಹೆಸರನ್ನು ಉಳಿಸಿವೆ. ದಿವಾನ್ ಮಿರ್ಝಾ ಇಸ್ಮಾಯೀಲ್ ಅವರು 1954ರಲ್ಲಿ ಬರೆದ ‘My Public Life: Recollections and Reflection’s’ ಆತ್ಮಕಥೆ ಓದಿದರೆ ಅವರು ಆಧುನಿಕ ಮೈಸೂರು ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವುದು ಮನವರಿಕೆಯಾಗುತ್ತದೆ.

ಇರಾನ್‌ನ ಶಿರಾಝ್ ನಗರದಿಂದ 1824ರಲ್ಲಿ ಭಾರತಕ್ಕೆ ಕುದುರೆ ವ್ಯಾಪಾರಕ್ಕೆ ಬಂದ ಅಲಿಅಸ್ಕರ್ ತಮ್ಮ ವ್ಯಾಪಾರದ ಚತುರತೆಯಿಂದ ಬ್ರಿಟಿಷರ ವಸತಿ ಮತ್ತು ಆಡಳಿತದ ಬಂಗಲೆಗಳನ್ನು ಕಟ್ಟುವ ಬಿಲ್ಡರ್ ಆದರು. ಇವರಿಗೆ ಮೈಸೂರಿನ ದೊರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಲಾರ್ಡ್ ಕಬ್ಬನ್ ಜತೆ ಸ್ನೇಹ ಬೆಳೆಯಿತು. ಈ ಸ್ನೇಹ ಚಾಮರಾಜ ಒಡೆಯರ ಜತೆಗೂ ಮುಂದುವರಿಯಿತು. ಪ್ರಭಾವಿ ವ್ಯಾಪಾರಿಯಾದ ಅಲಿಅಸ್ಕರ್ ಪುತ್ರ ಆಗಾಖಾನ್ ಕೂಡ ತಂದೆಯ ವಹಿವಾಟಿನ ವಾರಸುದಾರನಾದನು. ಆಗಾಖಾನರ ಮಗನೇ ಮಿರ್ಝಾ ಇಸ್ಮಾಯೀಲ್. 1883ರ ಅಕ್ಟೋಬರ್ 24ರಂದು ಬೆಂಗಳೂರಿನಲ್ಲಿ ಜನಿಸಿದರು.

ಬಾಲಕ ಯುವರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಶಿಕ್ಷಣ ನೀಡಲು, ‘ರಾಯಲ್ ಸ್ಕೂಲ್’ ಎಂಬ ಪ್ರತ್ಯೇಕ ಶಾಲೆಯೊಂದನ್ನು ಆರಂಭಿಸಲಾಗಿತ್ತು. ಯುವರಾಜನ ಜತೆಗೆ ಓದಲು ಸಿಕ್ಕ ಸಮಾನ ಸಿರಿವಂತಿಕೆಯ ಮನೆತನದ ಚುರುಕಾದ ಬಾಲಕರಲ್ಲಿ ಮಿರ್ಝಾ ಕೂಡ ಒಬ್ಬರು. ಕೊಲ್ಹಾಪುರದ ಛತ್ರಪತಿ ಶಾಹು ಮಹರಾಜ್ ಮತ್ತು ರಾಜ್‌ಕೋಟ್‌ನ ಭಾವಾನಗರದ ಮಹಾರಾಜ ಭಾವಾಸಿಂಹಜಿ ಅವರಿಗೆ ಗುರು ಮತ್ತು ಮಾರ್ಗದರ್ಶಿಯಾಗಿದ್ದ ಆಂಗ್ಲ ಐಸಿಎಸ್ ಅಧಿಕಾರಿ ಸರ್ ಸ್ಟುವರ್ಟ್ ಮಿಲ್ಫೋರ್ಡ್ ಫ್ರೇಜರ್ ಶಿಕ್ಷಕರಾಗಿದ್ದ ಈ ಶಾಲೆಯಲ್ಲಿ ಮಿರ್ಝಾ ಯುವರಾಜರ ಸಹಪಾಠಿಯಾಗಿ ಐದು ವರ್ಷ ಕಲಿತರು. ಫ್ರೇಜರ್ ಅವರ ಸಾಮಾಜಿಕ ಸುಧಾರಣೆಯ ದೂರದೃಷ್ಟಿಯ ವಿವೇಕ ನಾಲ್ವಡಿ ಕೃಷ್ಣರಾಜ ಮತ್ತು ಶಾಹು ಮಹಾರಾಜರನ್ನು ಸಾಮಾಜಿಕ ಸುಧಾರಕರನ್ನಾಗಿಸುವಂತೆ ಪ್ರಭಾವಿಸಿತು. ಅಂತೆಯೇ ಫ್ರೇಜರ್ ಅವರ ಪ್ರಭಾವ ಮಿರ್ಝಾ ಅವರ ಮೇಲೂ ಆಯಿತು. ಮಿರ್ಝಾ ಅವರು ರಾಯಲ್ ಸ್ಕೂಲ್ ಶಿಕ್ಷಣದ ನಂತರ ಸೆಂಟ್ರಲ್ ಕಾಲೇಜು ಸೇರುತ್ತಾರೆ. 1905ರಲ್ಲಿ ಅಲ್ಲಿಂದ ಪದವೀಧರರಾಗಿ ಹೊರಬರುತ್ತಾರೆ.

ಮಿರ್ಝಾರು 1905ರಲ್ಲಿಯೇ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಸೇರ್ಪಡೆಗೊಳ್ಳುತ್ತಾರೆ. ಮಹಾರಾಜ ನಾಲ್ವಡಿ ಕೃಷ್ಣರಾಜರ ಆಪ್ತ ಕಾರ್ಯದರ್ಶಿಗಳಾಗಿದ್ದ ಆರ್.ಎಚ್. ಕ್ಯಾಂಪ್‌ಬೆಲ್ 1923ರಲ್ಲಿ ನಿವೃತ್ತರಾದ ನಂತರ ಕ್ಯಾಂಪ್‌ಬೆಲ್‌ರ ಸ್ಥಾನಕ್ಕೆ ಬಾಲ್ಯದ ಗೆಳೆಯ ಮಿರ್ಝಾರನ್ನು ನೇಮಿಸಿಕೊಳ್ಳುತ್ತಾರೆ. ಬ್ರಿಟಿಷ್ ಆಡಳಿತದಲ್ಲಿ ದೇಸೀಯ ರಾಜರುಗಳ ಆಪ್ತ ಕಾರ್ಯದರ್ಶಿಗಳಾಗಿ ಐಸಿಎಸ್ ಪರೀಕ್ಷೆ ಪಾಸು ಮಾಡಿದ ಬ್ರಿಟಿಷ್ ಅಧಿಕಾರಿಗಳೇ ಆಗುತ್ತಿದ್ದರು. ಹೀಗಿರುವಾಗ ಮಹಾರಾಜರೊಬ್ಬರ ಆಪ್ತಕಾರ್ಯದರ್ಶಿಯಾದ ಮೊತ್ತಮೊದಲ ಭಾರತೀಯ, ಸರ್ ಮಿರ್ಝಾ ಇಸ್ಮಾಯೀಲ್. ಮುಂದೆ ದಿವಾನ್ ಹುದ್ದೆಗೆ ಇನ್ನೊಂದೇ ಮೆಟ್ಟಿಲು ಉಳಿದಿತ್ತು.

ಮುಂದೆ 42ರ ಸಣ್ಣ ಪ್ರಾಯದಲ್ಲಿಯೇ 1926ರಲ್ಲಿ ಸರ್ ಅಲ್ಟಿಯನ್ ಬ್ಯಾನರ್ಜಿಯವರು ದಿವಾನ್ ಪದವಿಯಿಂದ ನಿವೃತ್ತರಾದಾಗ, ನಾಲ್ವಡಿಯವರು ಮಿರ್ಝಾರನ್ನು ರಾಜ್ಯದ ದಿವಾನರನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆ. ಶೇಷಾದ್ರಿ ಅಯ್ಯರ್ ನಂತರ 1926ರ ಮೇ 1ರಿಂದ 1941ರ ಮೇ 31ರ ತನಕ 15 ವರ್ಷಗಳ ಕಾಲ ಸಂಸ್ಥಾನದ ದಿವಾನರಾಗಿದ್ದವರು ಸರ್ ಅಮಿನುಲ್-ಮುಲ್ಕ್ ಮಿರ್ಝಾ ಮುಹಮ್ಮದ್ ಇಸ್ಮಾಯೀಲ್. ಆ ಹೊತ್ತಿಗೆ ಸಾಮಾಜಿಕ ಸುಧಾರಣೆಯಲ್ಲಿ ಒಂದು ಕ್ರಾಂತಿಯನ್ನೇ ಮಾಡಿದರು.

ಮಿರ್ಝಾ ಇಸ್ಮಾಯೀಲ್ ಅವರ ಕಾಲಘಟ್ಟ ಬಹಳ ಬಿಕ್ಕಟ್ಟಿನದಾಗಿತ್ತು. ಒಂದೆಡೆ ಬ್ರಿಟಿಷ್ ವಸಾಹತು ಅಧಿಕಾರಿಗಳ ಒತ್ತಡ, ಮತ್ತೊಂದೆಡೆ ಪ್ರಜೆಗಳ ಹಿತ ಕಾಯಬೇಕು ಎನ್ನುವ ಮಹಾರಾಜರ ಇಚ್ಛೆ. ಇದರ ಮಧ್ಯೆ ಬ್ರಿಟಿಷ್ ವಸಾಹತಿನ ವಿರುದ್ಧ ಸಂಸ್ಥಾನದ ಒಳಗೇ ಹೆಚ್ಚುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು..ಈ ಎಲ್ಲವನ್ನೂ ಸಮಚಿತ್ತದಿಂದ ನಿಭಾಯಿಸಿ ಸಂಸ್ಥಾನವನ್ನು ಮುನ್ನಡೆಸಿದರು. ಸಂವಿಧಾನ ರಚನಾ ಸಮಿತಿ ಮತ್ತು ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಸ್ವತಃ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರೂ ಮೆಚ್ಚುವಂತೆ ಮೈಸೂರು ಸಂಸ್ಥಾನವನ್ನು ರೂಪಿಸಿದರು. ಶೇಷಾದ್ರಿ ಅಯ್ಯರ್ ರವರಿಂದ ಚುರುಕುಗೊಂಡಿದ್ದ ವಿದ್ಯುತ್ ಹಾಗೂ ಇತರ ಅಭಿವೃದ್ಧಿ ಕಾಮಗಾರಿ, ನಂತರದ ದಿವಾನರುಗಳು ಮುಂದುವರಿಸಿದ ರಾಜ್ಯದ ಅಭಿವೃದ್ಧಿಯ ಚಟುವಟಿಕೆ, ಸರ್ ಎಂ.ವಿಶ್ವೇಶ್ವರಯ್ಯ ಅವರ ಕಾಲದ ನೀರಾವರಿ, ಕೈಗಾರಿಕೆ ಮುಂತಾದ ಹಲವು ಕ್ಷೇತ್ರಗಳ ಪ್ರಗತಿಯನ್ನು ಮಿರ್ಝಾ ಅವರು ಮುಂದುವರಿಸಿದರು.

ಆಧುನಿಕ ಕೈಗಾರಿಕಾ ಕ್ರಾಂತಿಯೇ ಮೈಸೂರಿನಲ್ಲಾಯಿತು. ಮಿರ್ಝಾರವರ ಕಾಲದಲ್ಲಿ ಬೆಂಗಳೂರಿನ ಸರಕಾರಿ ಪಿಂಗಾಣಿ ಕಾರ್ಖಾನೆ, ಶಿವಮೊಗ್ಗದ ಸಕ್ಕರೆ ಕಾರ್ಖಾನೆ, ಬೆಂಕಿಪೊಟ್ಟಣ ಕಾರ್ಖಾನೆ. ಭದ್ರಾವತಿಯ ಸಿಮೆಂಟ್ ಮತ್ತು ಕಾಗದದ ಕಾರ್ಖಾನೆ, ಮೈಸೂರ್ ಲ್ಯಾಂಪ್ಸ್, ರೇಷ್ಮೆ ನೂಲು ಮತ್ತು ನೇಯ್ಗೆ ಕಾರ್ಖಾನೆ, ವಿದ್ಯುತ್ ಟ್ರಾನ್ಸ್ ಫಾರ್ಮರ್, ರಾಸಾಯನಿಕಗಳ ಔಷಧೋತ್ಪಾದನೆ. ಚರ್ಮ, ಗೊಬ್ಬರ, ವ್ಯವಸಾಯೋಪಕರಣ, ಭದ್ರಾವತಿ ಉಕ್ಕು, ಕಬ್ಬಿಣ ಕೊಳವೆಗಳ ಎರಕದ ಕುಲುಮೆ, ಕಾಫಿ ಕ್ಯೂರಿಂಗ್ ವರ್ಕ್ಸ್, ಗಾಜು ಕಾರ್ಖಾನೆ ಮೊದಲಾದವುಗಳನ್ನು ಸ್ಥಾಪಿಸಿದರು. ವಿಮಾನ ಕಾರ್ಖಾನೆಯನ್ನು ಒಳಗೊಂಡಂತೆ ಹತ್ತು ಹಲವು ಕೈಗಾರಿಕೆಗಳು ರಾಜ್ಯದ ಹಲವು ಪ್ರದೇಶಗಳಲ್ಲಿ ಆರಂಭಗೊಂಡವು. ಕೈಗಾರಿಕೆಗಳ ವಿಕೇಂದ್ರೀಕರಣ ಮಿರ್ಝಾ ಅವರ ಆದ್ಯತೆಯಾಗಿತ್ತು.

ಮಿರ್ಝಾ ಅವರು ಮೈಸೂರು ಸಂಸ್ಥಾನದ ಮಾರುಕಟ್ಟೆಯನ್ನು ಯೂರೋಪ್‌ಗೂ ವಿಸ್ತರಿಸಿದರು. ಸಂಸ್ಥಾನದ ವಿಶೇಷ ಉತ್ಪನ್ನಗಳಾದ ಗಂಧದ ಎಣ್ಣೆ, ರೇಷ್ಮೆ ವಸ್ತ್ರ, ಮೈಸೂರು ಸಾಬೂನು, ಅಗರಬತ್ತಿ ಇವುಗಳಿಗೆ ಯುರೋಪಿನ ಮಾರುಕಟ್ಟೆಯಲ್ಲಿ ಮಾರಾಟದ ಸೌಲಭ್ಯವನ್ನು ಸುಗಮಗೊಳಿಸಲು ಲಂಡನ್‌ನಲ್ಲಿ ಟ್ರೇಡ್ ಕಮಿಶನರ್ ಕಚೇರಿಯೊಂದನ್ನು ತೆರೆದರು. ವಿಶ್ವೇಶ್ವರಯ್ಯನವರ ಕಾಲದಲ್ಲಿ ಆರಂಭಗೊಂಡು ಆನಂತರ ನಿಂತು ಹೋಗಿದ್ದ ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ ಮಿರ್ಝಾ ಮರುಚಾಲನೆ ನೀಡಿದರು. ಇದರಿಂದ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳಿಗೆ ಅಪಾರ ಪ್ರಯೋಜನವಾಯಿತು. ವ್ಯಾಪಾರೋದ್ಯಮದ ಬೆಳವಣಿಗೆಗೆ ಉತ್ತಮ ಸಾರಿಗೆ ವ್ಯವಸ್ಥೆ ಅಗತ್ಯವೆಂದು ರಾಜ್ಯದಲ್ಲಿ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದರಲ್ಲದೇ, 1938ರಲ್ಲಿ ಎಂ.ಎಸ್.ಎಂ. ಎಂಬ ಖಾಸಗಿ ಉದ್ಯಮ ಸಂಸ್ಥೆಯ ಅಧೀನದಲ್ಲಿದ್ದ ರಾಜ್ಯದ 7,216 ಮೈಲು ಉದ್ದದ ರೈಲ್ವೆಯನ್ನು ಸರಕಾರದಿಂದ ಕೊಂಡುಕೊಂಡರು. ಇದೇ ಸಂದರ್ಭದಲ್ಲಿ ಶಿವಮೊಗ್ಗದಿಂದ ತಾಳಗುಪ್ಪ ರೈಲುಮಾರ್ಗ ನಿರ್ಮಾಣಗೊಂಡಿತು. ಇಡೀ ರಾಜ್ಯದಲ್ಲಿ ರಸ್ತೆಗಳಿಗೆ ಡಾಂಬರು ಹಾಕುವ, ಹೊಸ ರಸ್ತೆ, ಸೇತುವೆ ನಿರ್ಮಿಸುವ ಕಾಮಗಾರಿಗಳಾದವು. ಮಿರ್ಝಾರವರ ಕಾಲದಲ್ಲಿಯೇ ರಾಜ್ಯದ ಪ್ರತೀ ಊರಿನಲ್ಲಿಯೂ ಬಸ್ ನಿಲ್ದಾಣ ನಿರ್ಮಿಸುವ ರೂಢಿ ಆರಂಭವಾಯಿತು.

ಮಿರ್ಝಾರ ಕಾಲದಲ್ಲಿ ಮೈಸೂರು ಸಂಸ್ಥಾನದ ಕೃಷಿಯು ಉತ್ತುಂಗಕ್ಕೇರಿತು. ಮೈಸೂರು ರಾಜ್ಯದ ಒಟ್ಟು ಭೂ ವಿಸ್ತೀರ್ಣ 175 ಲಕ್ಷ ಎಕರೆಗಳಾಗಿದ್ದರೂ, ತರಿ, ಖುಷ್ಕಿ ಬಾಗಾಯಿತು ಸೇರಿ ಒಟ್ಟು 63.2 ಲಕ್ಷ ಎಕರೆ ಮಾತ್ರ ಸಾಗುವಳಿಯಾಗುತ್ತಿತ್ತು. ಅಂದಿನ ಒಟ್ಟು ಜನಸಂಖ್ಯೆಯಲ್ಲಿ (1921ರ ಜನಗಣತಿ) 88.7ರಷ್ಟು ಮಂದಿ ಹಳ್ಳಿಗಳಲ್ಲೇ ವಾಸಿಸುತ್ತಿದ್ದರು. ಹಿಂದಿನ ದಿವಾನರುಗಳ ಕಾಲದಿಂದಲೂ ಕೆರೆಗಳ ನಿರ್ಮಾಣ ಮತ್ತು ದುರಸ್ತಿ ನಡೆಯುತ್ತಿತ್ತಾದರೂ ಮಿರ್ಝಾ ದಿವಾನರಾದ ನಂತರ ಅದಕ್ಕೆ ವೇಗ ದಕ್ಕಿತು. ಅವರ ಕಾಲದಲ್ಲಿ ಅಂಜಾನಾಪುರ, ಗೋಪಾಲ, ಭೀಮನಹಳ್ಳಿ, ಚಂದನಹಳ್ಳಿ, ನೆಲ್ಲಿಗೆರೆ, ಭೈಗು ನದಿ ಅಣೆಕಟ್ಟು ಮುಂತಾದ ಮಧ್ಯಮ ಪ್ರಮಾಣದ ಹಾಗೂ ಚಿಕ್ಕ ಜಲಾಶಯಗಳು ನಿರ್ಮಾಣಗೊಂಡವು. ಅವರು 1927ರಿಂದ 1939ರವರೆಗೆ ಒಟ್ಟು 7,400 ಕೆರೆಗಳನ್ನು ಜೀರ್ಣೋದ್ಧಾರ ಮಾಡಿಸಿದರು. ಒಟ್ಟು 23,453 ಕೆರೆಗಳಿಗೆ ವಿವಿಧ ಕಾಮಗಾರಿ ನಡೆಸಿ. ಅವುಗಳನ್ನು ನೀರಾವರಿಗೆ ಅಣಿಗೊಳಿಸಿದರು. ಬೆಂಗಳೂರು ಜಿಲ್ಲೆಯ ಕೇರೋಹಳ್ಳಿ ಕೆರೆ, ಮರಳವಾಡಿ ಕೆರೆ, ಮೈಸೂರು ಜಿಲ್ಲೆಯ ತುಂಬಾಡಿ ಕೆರೆ, ದಳವಾಯಿ ಕೆರೆ, ನಿಡಸಾಲೆ ಕೆರೆ, ಭುವನಹಳ್ಳಿ ಕೆರೆ, ಕೋಲಾರದ ಕಾಮಸಮುದ್ರ ಕೆರೆ ಮತ್ತು ಶಿವಮೊಗ್ಗದ ಸೌಳಂಗ ಕೆರೆ ಮುಂತಾಗಿ ಹಲವು ದೊಡ್ಡ, ಚಿಕ್ಕ ಕೆರೆಗಳನ್ನು ನಿರ್ಮಿಸಿದರು. ವಿಶೇಷವಾಗಿ ಇವರ ಕಾಲದಲ್ಲಿ ಕೃಷಿ ಕ್ಷೇತ್ರದ ನೀರಾವರಿ ವ್ಯವಸ್ಥೆಗಾಗಿಯೇ, ‘ನೀರಾವರಿ ಅಭಿವೃದ್ಧಿ ನಿಧಿ’ಯೊಂದು ಸ್ಥಾಪನೆಗೊಂಡು ಅದರ ಆರಂಭಿಕ ಬಂಡವಾಳವಾಗಿ ಸರಕಾರ ಇಪ್ಪತ್ತೆಂಟು ಲಕ್ಷ ರೂಪಾಯಿ ತೊಡಗಿಸಿತು.

ಕೃಷ್ಣರಾಜ ಸಾಗರ ಅಣೆಕಟ್ಟೆಯನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಮಿರ್ಝಾರಿಗೆ ಸಲ್ಲುತ್ತದೆ. ಸರ್ ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ನಿರ್ಮಾಣವಾಗತೊಡಗಿ ಪ್ರಥಮ ಹಂತ 1916ರಲ್ಲೇ ಮುಗಿದಿದ್ದರೂ, ಮದ್ರಾಸ್‌ನ ಆಕ್ಷೇಪದಿಂದ ಕಾಮಗಾರಿ ನಿಂತಿತ್ತು. ಇದು ಮಿರ್ಝಾರವರ ಕಾಲದಲ್ಲಿ, ಒಟ್ಟು ಎರಡು ಕೋಟಿ ನಲವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅಣೆಕಟ್ಟೆಯನ್ನು ಪೂರ್ಣಗೊಳಿಸಲಾಯಿತು. 1927ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿ, ಅವರ ಸಲಹೆಯಂತೆ ಒಟ್ಟು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಹುಲಿಕೆರೆಯ ಸುರಂಗ ಮಾರ್ಗವೂ ಸೇರಿದಂತೆ, ಈಗ ವಿಶ್ವೇಶ್ವರಯ್ಯ ನಾಲೆ ಎಂದು ಕರೆಯಲಾಗುತ್ತಿರುವ, ಇರ್ವಿನ್ ನಾಲೆಯನ್ನು ನಿರ್ಮಿಸಿ ಮಂಡ್ಯ ಮಳವಳ್ಳಿಗಳ ಒಟ್ಟು ಒಂದು ಲಕ್ಷದ ಇಪ್ಪತ್ತು ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಯಿತು.

ವಿದ್ಯುತ್ ಬೆಳಕಿನ ಶಕೆಯನ್ನು ಮಿರ್ಝಾ ಮುಂದುವರಿಸಿದರು. ಮಹಾರಾಜರ ಸೂಚನೆಯಂತೆ ಹಳ್ಳಿ, ಪಟ್ಟಣಗಳಿಗೂ ವಿದ್ಯುತ್ ಸರಬರಾಜನ್ನು ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡರು. 1926 ರಲ್ಲಿ ಮೊದಲು ಬೌರಿಂಗ್ ಪೇಟೆ, ನಂತರ ಚನ್ನಪಟ್ಟಣ, ಕೋಲಾರ, ತುಮಕೂರು ವಿದ್ಯುತ್ ಸಂಪರ್ಕ ಪಡೆದವು. ಮೈಸೂರಿನಿಂದ ದೂರದ ಭದ್ರಾವತಿ, ದಾವಣಗೆರೆಯಂತಹ ಪಟ್ಟಣಗಳಿಗೂ ವಿದ್ಯುತ್ ಬೆಳಕು ಹರಿಯಿತು. ಭಾರತದಲ್ಲಿ ಮೊಟ್ಟಮೊದಲು ಗ್ರಾಮಗಳಿಗೆ ವಿದ್ಯುತ್ ಒದಗಿಸುವ ಪ್ರಕ್ರಿಯೆ ಆರಂಭಗೊಂಡಿದ್ದೇ ಮೈಸೂರು ಸಂಸ್ಥಾನದಲ್ಲಿ.

ವಿದ್ಯುತ್ತಿನಲ್ಲಿ ಕ್ರಾಂತಿಕಾರಕ ಹೆಜ್ಜೆಯೆಂದರೆ, 1930-31ರಲ್ಲಿ ಸರಕಾರವೇ ವಿದ್ಯುತ್‌ಪಂಪ್ ಸ್ಥಾಪಿಸಿ ಕಾನಕಾನಹಳ್ಳಿಯಲ್ಲಿ ನಡೆಸಿದ ವಿದ್ಯುತ್ ಪಂಪಿನ ಪ್ರಾತ್ಯಕ್ಷಿಕೆ. ಅದರ ಮೂಲಕ ಬೆಳೆಗೆ ನೀರು ಹಾಯಿಸಿ, ಬೆಳೆ ಬೆಳೆಯುವ ಪ್ರಾತ್ಯಕ್ಷಿಕೆ ನಡೆಸಿ, ರೈತರಿಗೆ ವಿದ್ಯುತ್ ಪಂಪ್ ಬಳಸಲು ಪ್ರೋತ್ಸಾಹಿಸಲಾಯಿತು. ಜೊತೆಗೆ ಹೈರ್‌ಪರ್ಚೇಸ್ ಆಧಾರದಲ್ಲಿ, ಅಂದರೆ ಸರಕಾರ ಆರಂಭದಲ್ಲಿ ಕೇವಲ ಶೇ. ಇಪ್ಪತ್ತರಷ್ಟು ಮಾತ್ರ ಹಣ ಪಡೆದು, ರೈತರ ಜಮೀನಿನಲ್ಲಿ ತಾನೇ ಸ್ವತಃ ವಿದ್ಯುತ್ ಪಂಪ್ ಸ್ಥಾಪಿಸಿ, ಚಾಲನೆಗೊಳಿಸಿಕೊಡುವ ಮೂಲಕ ಅದರ ಬಳಕೆಯನ್ನು ಪ್ರೋತ್ಸಾಹಿಸಿತು. ಮುಂದಿನ ಮೂರು ವರ್ಷಗಳಲ್ಲಿ ರೈತರು ಮೂರು ಸಮಾನ ಕಂತುಗಳಲ್ಲಿ ಉಳಿದ ಹಣ ಸಂದಾಯ ಮಾಡಬೇಕಿತ್ತು. ಜೊತೆಗೆ ಇಂತಹ ಗ್ರಾಹಕರಿಗೆ ವಿದ್ಯುತ್ ದರ ಯೂನಿಟ್‌ಗೆ ಕೇವಲ ಒಂದೂವರೆ ಆಣೆಯಾಗಿತ್ತು. 1926ರಿಂದ 1928ರವರೆಗೆ ಒಟ್ಟು 219 ಗ್ರಾಹಕರು ಈ ಸೌಲಭ್ಯವನ್ನು ಪಡೆದಿದ್ದರು. ಆ ಕಾಲದಲ್ಲಿ ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿತ್ತು.

ಮುಂದೆ 1931ರಲ್ಲಿ ವಿದ್ಯುತ್ ದರವನ್ನು ಒಂದಾಣೆಗೆ ಇಳಿಸಿ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಯಿತು. ಇಷ್ಟೇ ಅಲ್ಲದೆ ಗ್ರಾಮಗಳ ಹಿಟ್ಟಿನ ಮಿಲ್ಲುಗಳಿಗೆ, ಗೃಹಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ಅಖಿಲ ಭಾರತ ಮಟ್ಟದಲ್ಲಿಯೇ ಮೈಸೂರು ಗ್ರಾಮೀಣ ವಿದ್ಯುದೀಕರಣದ ವಿಚಾರದಲ್ಲಿ ಮುಂಚೂಣಿಯ ರಾಜ್ಯವೆಂದು ಪ್ರಸಿದ್ಧಿ ಪಡೆಯಿತು. ಈ ಎಲ್ಲ ಪ್ರೋತ್ಸಾಹಗಳ ಫಲವಾಗಿ 1939-40ರ ಹೊತ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಒಟ್ಟು 196 ನಗರ, ಹಳ್ಳಿ, ಪಟ್ಟಣಗಳು ವಿದ್ಯುದೀಕರಣಕ್ಕೆ ಒಳಗಾಗಿದ್ದವು. ರಾಜ್ಯದಲ್ಲಿ ಒಟ್ಟು 41,229 ಗ್ರಾಹಕರು ವಿದ್ಯುತ್ ಸೌಲಭ್ಯ ಪಡೆದಿದ್ದರು. ಮೂವತ್ತರ ದಶಕದಲ್ಲಿ ಕಬ್ಬಿಣದ ದರ ಹೆಚ್ಚಳದಿಂದ ಭದ್ರಾವತಿಯ ಕಬ್ಬಿಣ ಕಾರ್ಖಾನೆಯಲ್ಲಿ ತಯಾರಾಗುತ್ತಿದ್ದ ವಿದ್ಯುತ್ ಕಂಬಗಳು ಇಲಾಖೆಗೆ ದುಬಾರಿ ಎನ್ನಿಸಿತು. ಆಗ ಮಿರ್ಝಾ ಸರಕಾರ, ಮೈಸೂರಿನ ಕಾಡುಗಳಲ್ಲಿ ಬೆಳೆಯುತ್ತಿದ್ದ ‘ಬಳಿಗ’ ಎಂಬ ಜಾತಿಯ ಮರಗಳನ್ನು ವಿದ್ಯುತ್ ಕಂಬಗಳಿಗೆ ಬಳಸಲು ನಿರ್ಧರಿಸಿ, ವಿದ್ಯುತ್ ಇಲಾಖೆಯಲ್ಲಿ ಅಪಾರ ಹಣ ಉಳಿತಾಯ ಮಾಡಿದರು.

ಮಹಾನಗರ ಬೆಂಗಳೂರನ್ನು ಸುಂದರ ನಗರವನ್ನಾಗಿಸುವಲ್ಲಿ ಮಿರ್ಝಾ ಇಸ್ಮಾಯೀಲ್ ಅವರ ಪಾತ್ರ ದೊಡ್ಡದಿದೆ. ನಾಲ್ವಡಿ ಅವರ ಪಟ್ಟಾಭಿಷೇಕದ ಕಾರಣ ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯಿಂದ ಪುಟ್ಟಣ್ಣಚೆಟ್ಟಿ ಪುರಭವನದ ತನಕ ಸಿಲ್ವರ್ ಜುಬ್ಲಿ ಉದ್ಯಾನವನ್ನು ನಿರ್ಮಿಸಿದರು. ಕಬ್ಬನ್‌ಪಾರ್ಕ್ ಮತ್ತು ಲಾಲ್‌ಬಾಗ್ ಉದ್ಯಾನಗಳನ್ನು ನವೀಕರಣ ಮಾಡಿಸಿದರು. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಒಂದುಲಕ್ಷದ ಮೂವತ್ತು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿದರು. ಕೃಷ್ಣರಾಜ ಮಾರುಕಟ್ಟೆ, ಕಲಾಸಿಪಾಳ್ಯ ವಿಕ್ಟೋರಿಯಾ ಆಸ್ಪತ್ರೆ ಇತರ ಕಡೆಗಳಲ್ಲಿ ಗಿಡಗಳನ್ನು ನೆಡಿಸಿದರು. ಬೆಂಗಳೂರನ್ನು ಉದ್ಯಾನ ನಗರಿ ಎಂದು ಹೇಳುವಂತೆ ಮಾಡುವಲ್ಲಿ ಮಿರ್ಝಾರ ಪರಿಶ್ರಮ ದೊಡ್ಡದಿದೆ.

ಮೈಸೂರಿನ ಚಾಮುಂಡಿ ಬೆಟ್ಟ ಇವರ ಕಾಲದಲ್ಲಿಯೇ ಆಧುನೀಕರಣಗೊಂಡಿತು. ಬೆಟ್ಟದಲ್ಲಿ ಗಿಡಗಳನ್ನು ನೆಡಿಸಿ ಅದನ್ನು ಹಸಿರಾಗಿಸಿದರು. ಬೆಟ್ಟಕ್ಕೆ ಮೋಟರ್ ರಸ್ತೆ ಮಾಡಿಸಿದರು. ರಾತ್ರಿ ವೇಳೆ ಬೆಟ್ಟ ಏರಲು ವಿದ್ಯುತ್ ದೀಪ ಹಾಕಿಸಿದರು. ಬೆಟ್ಟದ ದೊಡ್ಡ ದೊಡ್ಡ ಬಂಡೆಗಳನ್ನು ಸೀಳಿ ಅಲ್ಲಿ ಸೂಕ್ತಿಗಳನ್ನೂ, ಶ್ಲೋಕಗಳನ್ನೂ ಕೆತ್ತಿಸಿದರು. ಬೆಂಗಳೂರು ರಸ್ತೆಯಲ್ಲಿ ದೂರದಿಂದಲೇ ಚಾಮುಂಡಿ ಬೆಟ್ಟದ ದೀಪಾಲಂಕೃತ ಫಲಕ ಕಾಣುವ ವ್ಯವಸ್ಥೆ ಮಾಡಿದರು.

ಮೈಸೂರು ಮೃಗಾಲಯ ಮಿರ್ಝಾರ ಕಾಲಕ್ಕೆ ಹೆಚ್ಚು ವಿಸ್ತರಿಸಿಕೊಂಡಿತು. ಮೃಗಾಲಯಕ್ಕೆ ಹಲವು ಬಗೆಯ ಮೃಗಗಳನ್ನು ಅದರಲ್ಲೂ ಬಿಳಿಯ ಕರಡಿ, ಫೇಂಡಾಮೃಗ, ಹುಲಿ, ಸಿಂಹ, ನಾನಾ ಬಗೆಯ ಕೋತಿಗಳು, ಉರಗಗಳು ಮತ್ತು ಪಕ್ಷಿಗಳನ್ನು ತಂದು ಮೃಗಾಲಯವನ್ನು ಜನಪ್ರಿಯಗೊಳಿಸಿದರು. ರಾಜ್ಯದ ಉದ್ದಕ್ಕೂ ಪ್ರವಾಸಿ ಮಂದಿರಗಳನ್ನು ಹೆಚ್ಚಿಸಿದರು. ಪುರಸಭೆಗಳಿಗೆ ಅಗಲವಾದ ರಸ್ತೆ, ಸಾಲುಮರ, ಉದ್ಯಾನವನ ಮತ್ತು ವಿಶಾಲವಾದ ಮೈದಾನಗಳನ್ನು ನಿರ್ಮಿಸಲು ಶ್ರಮಿಸಿದರು. ಶಾಲೆಯ ಸುತ್ತ ಮರಗಿಡ ನೆಟ್ಟು ಅದಕ್ಕೆ ಸ್ಥಳೀಯ ಮತ್ತು ಸಸ್ಯ ಶಾಸ್ತ್ರೀಯ ಶಿಕ್ಷಣಾಧಿಕಾರಿಗಳಿಗೆ ಸೂಚಿಸುತ್ತಿದ್ದರು. ಕಾರ್ಖಾನೆಯ ಸುತ್ತ ಉದ್ಯಾನವನ ಬೆಳೆಸುವ ಮೂಲಕ ಕಾರ್ಮಿಕರ ವಿಶ್ರಾಂತಿಗೆ ಸ್ಥಳ ಒದಗಿಸಲು ಅದರ ಅಧಿಕಾರಿಗಳಿಗೆ ಸೂಚಿಸಿದರು. ಅವರು ಸ್ವಚ್ಛತೆಗೆ ವಿಶೇಷ ಗಮನ ಕೊಡುತ್ತಿದ್ದರು. ತಾವೇ ಸ್ವತಃ ಪುರಸಭಾಧ್ಯಕ್ಷರು, ಆರೋಗ್ಯ ಅಧಿಕಾರಿ ಮತ್ತು ಕಾಮಗಾರಿ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ನಡೆಸಿ ಕುಂದು ಕೊರತೆ, ಕೊಳಕುಗಳನ್ನು ನಿವಾರಿಸಲು ನಿರಂತರವಾಗಿ ಶ್ರಮಿಸುತ್ತಿದ್ದರು. ಬೇಲೂರು ಹಳೇಬೀಡು ಸುಂದರ ಪ್ರವಾಸಿ ತಾಣಗಳನ್ನಾಗಿಸಿದರು.

ಹೀಗೆ ಮಿರ್ಝಾರ ದಿವಾನಗಿರಿಗೆ ನೂರು ತುಂಬಿದ ಸಂದರ್ಭದಲ್ಲಿ ಅವರ ನೂರಾರು ಕೆಲಸಗಳೇ ಮೌನವಾಗಿ ಶತಮಾನೋತ್ಸವ ಆಚರಿಸುತ್ತಿವೆ.

(ಅಂಕಣಕಾರರು ಕಲಬುರಗಿಯ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾನಿಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ)

Tags

Sir Mirza IsmailKrishna Raja Sagara Dam
share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X