Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಬಂಡೆಗಳ ನಡುವೆ ಚಿಗುರೊಡೆದ ಭಟ್ರಳ್ಳಿ...

ಬಂಡೆಗಳ ನಡುವೆ ಚಿಗುರೊಡೆದ ಭಟ್ರಳ್ಳಿ ಗೂಳೆಪ್ಪ

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ11 Nov 2025 12:18 PM IST
share
ಬಂಡೆಗಳ ನಡುವೆ ಚಿಗುರೊಡೆದ ಭಟ್ರಳ್ಳಿ ಗೂಳೆಪ್ಪ

ಗೂಳೆಪ್ಪ ಕಾಡಿಗೆ ಹೋಗುವುದನ್ನು ನೋಡಿದರೆ ಸಾಕು ಯಾರೂ ಆ ಕಡೆ ಸುಳಿಯುವುದಿಲ್ಲ. ಮರ ಕಡಿಯುವುದಿರಲಿ ಆಡು, ಕುರಿ, ದನಕರು ಮೇಯಿಸುವುದೂ ಇಲ್ಲಿ ನಿಷಿದ್ಧ. ಕೆಲವೊಮ್ಮೆ ಇವರ ಕಣ್ತಪ್ಪಿಸಿ ಮರ ಕಡಿವ ಕೆಲವರನ್ನು ರೇಂಜರರಿಗೆ ಹಿಡಿದುಕೊಟ್ಟದ್ದಕ್ಕೆ ಗೂಳೆಪ್ಪ ಊರವರ ವಿರೋಧವನ್ನೂ ಎದುರಿಸಬೇಕಾಯಿತು. ಇದರಿಂದಾಗಿ ಸುತ್ತಮುತ್ತಲ ಊರವರ ಜತೆ ಸಣ್ಣಪುಟ್ಟ ಜಗಳಗಳೂ, ಮನಸ್ತಾಪಗಳೂ ನಡೆದವು. ಆದರೆ ಇದೀಗ ಇಂತಹ ಯಾವ ಸಂಘರ್ಷಗಳೂ ನಡೆಯುವಂತಿಲ್ಲ. ಸುತ್ತಮುತ್ತಣ ಊರವರಿಗೆ ಗೂಳೆಪ್ಪರ ಬಗ್ಗೆ ಎಂಥದೋ ಪ್ರೀತಿ ಸ್ನೇಹದ ಬೆಸುಗೆ ಸಾಧ್ಯವಾಗಿದೆ.

ಈಚೆಗೆ ಪತ್ರಕರ್ತರಾದ ಭೀಮಣ್ಣ ಗಜಾಪುರ ಅವರು ‘24/7 ಅರಣ್ಯ ರಕ್ಷಕ ಭಟ್ರಳ್ಳಿ ಗೂಳೆಪ್ಪ’ ಎಂಬ ಪುಸ್ತಕ ಪ್ರಕಟಿಸಿದರು. ನಾನು ಕುತೂಹದಿಂದ ಈ ಪುಸ್ತಕವನ್ನು ಓದಿದೆ. ಕಳೆದ ಮೂವತ್ತು ವರ್ಷಗಳಿಂದ ಕಾಡನ್ನು ತನ್ನ ತಾಯಿಯಂತೆ ಪೊರೆದು ಬರಡು ಬಯಲು ಸುಡುವ ಬಂಡೆಗಳ ಮಧ್ಯದ ಕುರುಚಲು ಕಾಡನ್ನು, ಇಂದು ಮೋಡಗಳಿಂದ ಮಳೆ ತರಿಸುವಂತಹ ದಟ್ಟ ಕಾಡನ್ನಾಗಿ ಮಾಡಿದ ಭಟ್ರಳ್ಳಿ ಗೂಳೆಪ್ಪನ ಬದುಕಿನ ಪಯಣದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಹೀಗೆ ಅಂಚಿಗೆ ಸರಿದವರು ‘ಪುಸ್ತಕ’ದ ರೂಪದಲ್ಲಿ ಮುನ್ನೆಲೆಗೆ ಬಂದು ಎಲ್ಲರನ್ನು ತಲುಪಬೇಕಿದೆ. ಈ ಸಂದರ್ಭದಲ್ಲಿ ಒಂದು ದಶಕದ ಹಿಂದೆ ಭಟ್ರಳ್ಳಿ ಗೂಳೆಪ್ಪರ ಜತೆ ಆತ ಬೆಳೆಸಿದ ಕಾಡನ್ನೆಲ್ಲಾ ಸುತ್ತಿ ಇಡೀ ದಿನ ಆತನ ಜತೆ ಮಾತುಕತೆ ನಡೆಸಿದ್ದು ನೆನಪಾಯಿತು.

ನಂಜುಂಡಪ್ಪ ಅವರ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕುಗಳಲ್ಲಿ ಚಳ್ಳಕೆರೆ ಒಳಗೊಂಡಂತೆ ಮೊಳಕಾಲ್ಮೂರು ತಾಲೂಕು ಸೇರುತ್ತದೆ. ಹಾಗೆ ನೋಡಿದರೆ ಇದು ಕರ್ನಾಟಕದ ನಡುಮಧ್ಯೆ ಬರುವ ಭೂಭಾಗ. ಬಯಲ ಬಿಸಿಲಿಗೆ ಬಿರುಕುಬಿಟ್ಟ ನೆಲದಂತೆಯೂ, ಬಟ್ಟಂಬಯಲ ಆಲಯದಂತೆಯೂ ಇದೆ. ಹಿರಿಯೂರು ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿಗೆ ಚಲಿಸುತ್ತಿದ್ದರೆ ಈ ಭಾಗದ ಬಂಡೆಗಳಿಂದ ಸುತ್ತುವರಿದ ಬೆಟ್ಟಗಳು ಎದುರಾಗುತ್ತವೆ. ಬಿತ್ತನೆ ಇಲ್ಲದ ಹೊಲಗಳು ಬಿಸಿಲ ಉಡುಪುತೊಟ್ಟು ದುಃಖಿಸುತ್ತಿರುವಂತೆ ಭಾಸವಾಗುತ್ತದೆ. ಸಂಗಾತಿಯಾಗಿ ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರುವ ಮಕ್ಕಳಂತಹ ಕುರುಚಲು ಕಾಡು ಅಲ್ಲಲ್ಲಿ ಕುಪ್ಪೆಕುಪ್ಪೆಯಾಗಿ ಕಾಣುತ್ತದೆ. ಈ ಮಧ್ಯೆಯೂ ಜೀವಚೈತನ್ಯದ ಕುರುಹು ಎಂಬಂತೆ ಹಾಡುವ ಹಕ್ಕಿಗಳು ಸುಳಿದಾಡುವ ಜೀವರಾಶಿ. ಉಳಿದಂತೆ ಬಯಲೆಂಬ ಬಯಲ ಜತೆ ಬಿಸಿಲೆಂಬ ಬಿಸಿಲು. ಇಂತಹ ಪರಿಸರದಲ್ಲಿ ಹಸಿರಿನ ಕನಸೊತ್ತು ಕಾಡಿನ ಕಾವಲಿಗೆ ತನ್ನ ಜೀವವನ್ನೇ ತೇದು ಗಂಧದ ವಾಸನೆ ಬೀರಿದಾತ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಭಟ್ರಳ್ಳಿಯ ತಳವಾರ ಗೂಳೆಪ್ಪ.

ಬಳ್ಳಾರಿಯಿಂದ ಬೆಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದರೆ ಹಾನಗಲ್ ಮುಂದೆ ಐದು ಕಿಲೋಮೀಟರ್ ಇರುವಾಗ ಮುಖ್ಯರಸ್ತೆಯಿಂದ ಭಟ್ರಳ್ಳಿ ಚಿಕ್ಕೇರಳ್ಳಿ ಅವಳಿ ಗ್ರಾಮಗಳ ಕ್ರಾಸೊಂದು ಬರುತ್ತದೆ. ಈ ಅಡ್ಡರಸ್ತೆಯಿಂದ ಎರಡು ಕಿಲೋಮೀಟರ್ ಕ್ರಮಿಸಿದರೆ ಭಟ್ರಳ್ಳಿ ಸಿಗುತ್ತದೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾಲಸಾಗರ ವ್ಯಾಪ್ತಿಯ ರಕ್ಷಿತ ಅರಣ್ಯವನ್ನು ಪ್ರವೇಶಿಸುತ್ತಿದ್ದಂತೆ ಕಾಡಿನ ಗಡಿಯನ್ನು ಗುರುತಿಸಲು ಗೂಳೆಪ್ಪ ಕಲ್ಲುಗಳನ್ನು ಜೋಡಿಸಿ ಮೇರೆ ಮಾಡಿದ್ದಾರೆ. ಅಂತೆಯೇ ಅಲ್ಲಲ್ಲಿ ದನಕರುಗಳು ದಾಟಬಹುದಾದ ಕಡೆಗಳಲ್ಲಿ ಮುಳ್ಳು ಬೇಲಿ ಹಾಕಿದ್ದಾರೆ. ನೀರಿಗಾಗಿ ಸರಕಾರ ಕಟ್ಟಿಸಿದ ಗೋಕಟ್ಟೆ ಗೂಳೆಪ್ಪನವರೇ ಅಲ್ಲಲ್ಲಿ ತೋಡಿದ ನೀರುಗುಂಡಿಗಳು ಗೂಳೆಪ್ಪರ ಸಾಹಸದ ಕಥೆಗಳನ್ನು ಹೇಳುತ್ತವೆ. 50 ಹೆಕ್ಟೇರ್ ಪ್ರದೇಶದ ಈ ಕಾಡನ್ನು ಗೂಳೆಪ್ಪ ಕಳೆದ ಮೂವತ್ತು ವರ್ಷಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಕಾಪಿಟ್ಟಿದ್ದಾರೆ.

ಗೂಳೆಪ್ಪ ಈ ಮರಗಳು ಯಾವಾಗ ನೆಟ್ಟವು ಎಂದು ಲೆಕ್ಕ ಇಟ್ಟು ಹೇಳುತ್ತಾರೆ. ಕೆಲವು 1995ರಲ್ಲಿ ನೆಟ್ಟವಾಗಿದ್ದರೆ ಮತ್ತೆ ಕೆಲವು 1997ರಲ್ಲಿ ನೆಟ್ಟವುಗಳು. ಅವೆಲ್ಲಾ ಈಗ ಎತ್ತರಕ್ಕೆ ಬೆಳೆದು ಗೂಳೆಪ್ಪರ ಹೆಸರೇಳುತ್ತಿವೆ. ಇಡೀ ಕಾಡಿನ ಜೀವನಾಡಿಯನ್ನು ಕೇಳಿಸಿಕೊಳ್ಳುವಷ್ಟು ಈ ಕಾಡಿನ ಜತೆ ಈತ ಬೆಸೆದುಕೊಂಡಿದ್ದಾರೆ. ಈ ಕಾಡನ್ನು ಸುತ್ತಿದ್ದರೆ ಕಡಿದು ಮೊಟಕಾದ ಒಂದೇ ಒಂದು ಬೊಡ್ಡೆಯೂ ಕಾಣಲು ಸಿಗುವುದಿಲ್ಲ. ಅಷ್ಟರಮಟ್ಟಿಗೆ ಗೂಳೆಪ್ಪರ ಕಾವಲು ಕಾಡನ್ನು ಸಂರಕ್ಷಿಸಿದೆ. ಆಲ, ಬೇವು, ಅರಳಿ, ನೇರಲ, ಬಿಕ್ಕೆ, ಕಮರ, ತಪ್ಸೆ, ದೊಂಡು ಜಾಲಿ, ಉಲಿಪೆ, ಸಪಳೆ, ಆಸು ಹೀಗೆ ಹತ್ತಾರು ಜಾತಿಯ ಮರ ಗಿಡಗಳು ನಿರಾತಂಕವಾಗಿ ಬೆಳೆಯುತ್ತಿವೆ. ಕವಳೆ, ಸೀತಾಫಲ, ಬಿಕ್ಕೆ, ಕಾರೆ, ಬರಗಿ, ಬೆಳವಿ, ಹುಣಸೆ, ಹತ್ತಿ ಮುಂತಾದ ಹಣ್ಣಿನ ಮರಗಿಡಗಳು ಕಾಲಾನುಸಾರ ಹಣ್ಣು ಕೊಡುತ್ತಿವೆ. ಕರಡಿ, ಕಾಡುಹಂದಿ, ಚಿರತೆ, ನರಿ, ಮೊಲ, ತೋಳ ಮೊದಲಾದ ಪ್ರಾಣಿಗಳು, ನವಿಲು, ಬೆಳವ, ಕೋಗಿಲೆ, ಕೌಜುಗ, ಗಿಡುಗ, ಕಾಜಾಣ, ಚಿವುಟ ಗುಬ್ಬಿ ಮೊದಲಾದ ಪಕ್ಷಿಗಳು ಒಂದು ಕುಟುಂಬದ ಸದಸ್ಯರಂತೆ ನಲಿದಾಡಿಕೊಂಡಿವೆ.

ಗೂಳೆಪ್ಪನ ಜತೆ ನಡೆಯುತ್ತಿದ್ದಾಗ ಸುತ್ತಲೂ ಮಳ್ಳುಕಂಟಿ ಹಾಕಿದ ಪೌಳಿಯೊಂದು ಸಿಕ್ಕಿತು. ಈ ಪೌಳಿಯ ಬಗ್ಗೆ ವಿಚಾರಿಸಿದಾಗ ಕುತೂಹಲಕಾರಿ ಸಂಗತಿಯೊಂದು ಹೊರಬಿತ್ತು. ಇದು ಗೊಲ್ಲರ ಈರ ಜಂಪಣ್ಣನ ಪೌಳಿ. ಈರ ಜಂಪಣ್ಣ ಕಾಡಲ್ಲಿ ಕುರಿ ಕಾಯುತ್ತಿದ್ದಾಗ ಚಿರತೆ ಆಡನ್ನು ಹಿಡಿಯುತ್ತದೆ. ಈ ಸಂದರ್ಭದಲ್ಲಿ ಜಂಪಣ್ಣ ಆಡಿನ ಕಾಲು ಹಿಡಿದು ಬಿಡಿಸಲು ಚಿರತೆಯ ಜತೆ ಕಾದಾಡಿದ. ಸಿಟ್ಟಿಗೆದ್ದ ಚಿರತೆ ಜಂಪಣ್ಣನ ಕುತ್ತಿಗೆಗೆ ಬಾಯಿ ಹಾಕಿ ಹಿಚುಕಿತು. ಆಗ ಜೋರು ಕಿರುಚಿದ ಕಾರಣ ಕಾಡಲ್ಲಿದ್ದ ಜನರು ಸೇರುವ ಹೊತ್ತಿಗೆ ಚಿರತೆ ತನ್ನ ಬೇಟೆಯೊಂದಿಗೆ ಮಾಯವಾಗಿತ್ತು. ಜಂಪಣ್ಣನನ್ನು ಬದುಕಿಸುವ ಆಸೆಯೊತ್ತು ಜನರು ಆಸ್ಪತ್ರೆಗೆ ಸೇರಿಸಲೆಂದು ಹೋದರೆ ದಾರಿಯ ನಡುವೆ ಪ್ರಾಣ ಬಿಡುತ್ತಾನೆ. ಪ್ರಾಣ ಬಿಡುವ ಮುಂಚೆ ಜಂಪಣ್ಣ ತನ್ನನ್ನು ಚಿರತೆ ಜತೆ ಕಾದಾಡಿದ ಜಾಗದಲ್ಲೇ ಹೂಳಬೇಕೆಂದು ಹೇಳುತ್ತಾನೆ. ಇದರಂತೆ ಆತನನ್ನು ಅದೇ ಜಾಗದಲ್ಲಿ ಹೂಳುತ್ತಾರೆ. ಮುಂದೆ ಈರಜಂಪಣ್ಣ ವೀರನಾಗಿ ಆರಾಧನೆಗೊಳ್ಳುತ್ತಾನೆ. ಈಗಲೂ ಗೊಲ್ಲರ ಸಮುದಾಯ ದೀಪಾವಳಿ ಸಂದರ್ಭಕ್ಕೆ ಈರಜಂಪಣ್ಣನ ಪರವು ಮಾಡುತ್ತಾರೆ. ಅಂತೆಯೇ ಕಾಡಿಗೆ ಹೊಂದಿಕೊಂಡಂತೆ ಬೆಟ್ಟದಲ್ಲಿರುವ ಅಡವಿ ಮಲ್ಲಪ್ಪ, ಕಾಲುಟಿ ಮಾರೆಮ್ಮ, ಮೂಖ ಬಸಪ್ಪ ಮುಂತಾದ ದೈವಗಳು, ಅವುಗಳ ಆರಾಧನೆಯ ಬಗ್ಗೆ ಗೂಳೆಪ್ಪ ಶ್ರದ್ಧೆಯಿಂದ ಹೇಳಿದರು. ಈ ದೇವರುಗಳೇ ತನ್ನನ್ನು ಕಾಡಲ್ಲಿ ಕಾಪಾಡುತ್ತವೆ ಎಂದು ಆತ ನಂಬಿದ್ದಾರೆ.

ಹೀಗೆ ಗೂಳೆಪ್ಪ ಕಾಡಿಗೆ ಅಂಟಿಕೊಂಡ ಕಥೆಯೂ ಕುತೂಹಲಕಾರಿಯಾಗಿದೆ. 1994ರಲ್ಲಿ ಪಿ.ವಿ. ನರಸಿಂಹರಾವ್ ಪ್ರಧಾನ ಮತ್ರಿಯಾಗಿದ್ದಾಗ ನರ್ಸರಿಯಲ್ಲಿ ಗಿಡಗಳಿಗೆ ನೀರುಣಿಸುವ ಕೆಲಸಕ್ಕೆ ಸೇರಿಕೊಂಡರು. ಎಲ್ಲರಂತೆ ಗೂಳೆಪ್ಪ ಸಸಿ ನೆಡುತ್ತಾ ಕಾಡಿನ ನಂಟಿಗೆ ಬಿದ್ದರು. ಕೆಲಸ ಕಡಿಮೆಯಾದಂತೆ ಇಲಾಖೆ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುತ್ತಾ ಬಂತು. ನಂತರ ಮಳೆಗಾಲದ ಆರಂಭಕ್ಕಷ್ಟೇ ಒಂದೆರಡು ತಿಂಗಳುಗಳಿಗೆ ಈ ಕೆಲಸ ಸೀಮಿತವಾಯಿತು. ಬರುಬರುತ್ತಾ ನಿಂತೇ ಹೋಯಿತು. ಹೀಗಿರುವಾಗ ಗೂಳೆಪ್ಪರಿಗೆ ಕಾಡಿನ ನಂಟು ಅಷ್ಟು ಹೊತ್ತಿಗೆ ಗಟ್ಟಿಯಾಗಿತ್ತು. ಇಲಾಖೆಯವರು ಕೂಲಿ ಕೊಟ್ಟರೆಷ್ಟು ಬಿಟ್ಟರೆಷ್ಟು ಸಸಿನೆಡುತ್ತಾ ಕಾಡನ್ನು ಕಾಯುತ್ತೇನೆ ಎಂಬ ನಿರ್ಧಾರಕ್ಕೆ ಬಂದರು. ಈ ಮಧ್ಯೆ ಅರಣ್ಯ ಇಲಾಖೆಯು ನೇಮಿಸಿದ ಕಾಡಿನ ವಾಚರುಗಳು ತಮ್ಮ ಎಂದಿನ ಸಂಬಳಕ್ಕಾಗಿ ಡ್ಯೂಟಿ ಮಾಡುತ್ತಿದ್ದರೆ, ಗೂಳೆಪ್ಪ ಕೂಲಿಯೂ ಇಲ್ಲದೆ ಕಾಡು ಕಾಯುವುದನ್ನು ತನ್ನ ನಿತ್ಯದ ಕರ್ಮವನ್ನಾಗಿಸಿಕೊಂಡರು.

ಹಳ್ಳಿ ಜನರು ಗೂಳೆಪ್ಪ ಪುಗಸಟ್ಟೆ ಕಾಡು ಕಾಯ್ತಾರೆ ಅಂದರೆ ಏನೋ ಬೇರೆ ಆದಾಯ ಇರಬೇಕೆಂದು ಮಾತಾಡಿಕೊಂಡರು. ಇದು ಸುಳ್ಳೆಂದು ನಿಧಾನಕ್ಕೆ ಜನರ ಅರಿವಿಗೆ ಬಂತು. ಆದರೆ ಯಾರೊಬ್ಬರೂ ಕಾಡನ್ನು ಪ್ರವೇಶಿಸದಂತೆ, ಒಂದು ಗಿಡ ಮುಕ್ಕಾಗದಂತೆ ಕಾವಲು ಕಾಯುವಾಗ ಇನ್ನೆಲ್ಲಿಯ ಆದಾಯ? ಹೀಗಾಗಿ ಆರೋಪಿಸಿದವರೇ ಮೌನವಾದರು. ಅರಣ್ಯ ಇಲಾಖೆಯ ಅರಣ್ಯಾಧಿಕಾರಿಗಳಲ್ಲಿ ಕೆಲವರು ಇವರ ಕೆಲಸವನ್ನು ನೋಡಿ ದಿನಗೂಲಿ ಕೊಟ್ಟರೆ ಇನ್ನು ಕೆಲವರು ಸಂಬಂಧವಿಲ್ಲದಂತೆ ಇದ್ದುಬಿಡುತ್ತಿದ್ದರು. ಆಗೆಲ್ಲಾ ಬಿಡಿಗಾಸಿನ ಕೂಲಿಯೂ ಇಲ್ಲದಂತೆ ಕಾಯಬೇಕಾಗುತ್ತಿತ್ತು. ಈ ಏರಿಳಿತಕ್ಕೆ ಗೂಳೆಪ್ಪ ಹೊಂದಿಕೊಳ್ಳುತ್ತಾ ಒಂದು ಬಗೆಯ ಲಯ ಕಂಡುಕೊಂಡಿದ್ದರು. ದಿನವೂ ಗೂಳೆಪ್ಪರ ದಿನಚರಿ ಶುರುವಾಗುವುದು ಬೆಳಗ್ಗೆ ಐದು ಗಂಟೆಗೆ. ಅಷ್ಟೊತ್ತಿಗೆ ಊಟ ಮಾಡಿ, ಬುತ್ತಿ ನೀರು ತೊಗೊಂದು ಕೈಲೊಂಡು ಮಚ್ಚು, ಕೋಲು ಹಿಡಿದು ಕಾಡಿಗೆ ಹೊರಟರೆ ಮತ್ತೆ ಬರುವುದು ಸಂಜೆ ಏಳರ ಹೊತ್ತಿಗೆ. ಇಂತಹ ದಿನಚರಿಯನ್ನು 30 ವರ್ಷಗಳಿಂದ ಮಾಡುತ್ತಾ ಬಂದಿರುವುದೇ ಒಂದು ಅಪರೂಪದ ಸಂಗತಿಯಾಗಿದೆ.

ಗೂಳೆಪ್ಪ ಕಾಡಿಗೆ ಹೋಗುವುದನ್ನು ನೋಡಿದರೆ ಸಾಕು ಯಾರೂ ಆ ಕಡೆ ಸುಳಿಯುವುದಿಲ್ಲ. ಮರ ಕಡಿಯುವುದಿರಲಿ ಆಡು, ಕುರಿ, ದನಕರು ಮೇಯಿಸುವುದೂ ಇಲ್ಲಿ ನಿಷಿದ್ಧ. ಕೆಲವೊಮ್ಮೆ ಇವರ ಕಣ್ತಪ್ಪಿಸಿ ಮರ ಕಡಿವ ಕೆಲವರನ್ನು ರೇಂಜರರಿಗೆ ಹಿಡಿದುಕೊಟ್ಟದ್ದಕ್ಕೆ ಗೂಳೆಪ್ಪ ಊರವರ ವಿರೋಧವನ್ನೂ ಎದುರಿಸಬೇಕಾಯಿತು. ಇದರಿಂದಾಗಿ ಸುತ್ತಮುತ್ತಲ ಊರವರ ಜತೆ ಸಣ್ಣಪುಟ್ಟ ಜಗಳಗಳೂ, ಮನಸ್ತಾಪಗಳೂ ನಡೆದವು. ಆದರೆ ಇದೀಗ ಇಂತಹ ಯಾವ ಸಂಘರ್ಷಗಳೂ ನಡೆಯುವಂತಿಲ್ಲ. ಸುತ್ತಮುತ್ತಣ ಊರವರಿಗೆ ಗೂಳೆಪ್ಪರ ಬಗ್ಗೆ ಎಂಥದೋ ಪ್ರೀತಿ ಸ್ನೇಹದ ಬೆಸುಗೆ ಸಾಧ್ಯವಾಗಿದೆ.

ಗೂಳೆಪ್ಪರ ಮನದಲ್ಲಿ ಅವಿತು ಕುಳಿತು ಬಿಕ್ಕಳಿಸುವ ದುಃಖದ ಕಡಲೊಂದಿದೆ. ಅದು ಗೂಳೆಪ್ಪರನ್ನು ಇನ್ನಷ್ಟು ಗಟ್ಟಿಗೊಳಿಸಿದಂತಿದೆ. ಆರು ಜನ ಮಕ್ಕಳು ಚಿಕ್ಕವರಿರುವಾಗಲೇ ಮಡದಿ ಅಕಾಲಿಕ ಮರಣವನ್ನಪ್ಪುತ್ತಾಳೆ. ಮಡದಿಯ ಸಾವು ಗೂಳೆಪ್ಪರನ್ನು ಇನ್ನಿಲ್ಲದ ಕಷ್ಟಕ್ಕೆ ಸಿಲುಕಿಸುತ್ತದೆ. ಅನಿವಾರ್ಯವಾಗಿ ಮುಂದೆ ಮಕ್ಕಳಿಗೆ ಗೂಳೆಪ್ಪ ತಾಯಿಯಾಗಿಯೂ ಜವಾಬ್ದಾರಿಯನ್ನು ನಿರ್ವಹಿಸಬೇಕಾಯಿತು. ಇಂತಹ ಕಡುಕಷ್ಟದಲ್ಲಿ ಗೂಳೆಪ್ಪ ಮಕ್ಕಳಿಗೆ ಅಡುಗೆ ಮಾಡಿಟ್ಟು, ಅವರನ್ನೆಲ್ಲಾ ಶಾಲೆಗೆ ಕಳಿಸಿ ಮತ್ತೆ ತನ್ನ ಕಾಡುಕಾಯುವ ಕಾಯಕಕ್ಕೆ ಹೋಗುತ್ತಿದ್ದರು. ಈ ಮಧ್ಯೆ ಮರುಮದುವೆಗೆ ಸಲಹೆಗಳು ಬಂದರೂ ಗೂಳೆಪ್ಪ ಅತ್ತ ಕಡೆ ಗಮನಹರಿಸಲಿಲ್ಲ. ಬಹುಶಃ ಕಾಡಿನ ಗಿಡ ಮರ ಬಳ್ಳಿಗಳ ಜತೆಗಿನ ಒಡನಾಟವೇ ಅವರ ಒಂಟಿತನವನ್ನು ನೀಗಿ ಜೀವನೋತ್ಸಾಹವನ್ನು ತುಂಬಿದಂತಿದೆ.

ಮಡದಿ ತೀರಿದ ಆರಂಭದಲ್ಲಿ ಕಾಡನ್ನು ಕಾಯುವ ದಿನಗೂಲಿಯಿಂದ ಸಂಸಾರ ನಿಭಾಯಿಸಲಾಗುತ್ತಿರಲಿಲ್ಲ. ಹೀಗಾಗಿ ಆರುಜನ ಮಕ್ಕಳ ಹೊಟ್ಟೆತುಂಬಿಸುವುದು ಕಷ್ಟವಿತ್ತು. ಈ ಕಷ್ಟವನ್ನು ನಿಭಾಯಿಸಿಯೂ ಮಕ್ಕಳನ್ನು ಸಾಧ್ಯವಾದಷ್ಟು ಓದಿಸಿದ್ದಾರೆ. ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಮಕ್ಕಳಾದ ತಿಪ್ಪೇಸ್ವಾಮಿ, ಸಣ್ಣ ತಿಪ್ಪೇಸ್ವಾಮಿ, ಆಂಜನೇಯ, ಓಬಳೇಶ್ ಎಲ್ಲರೂ ಹೊಲಕೂಲಿ ಮಾಡುತ್ತಿದ್ದಾರೆ. ಅಪ್ಪನಿಗೆ ವಯಸ್ಸಾಗಿದೆ. ಮಕ್ಕಳಾದ ನಮ್ಮನ್ನು ಕಾಡು ಕಾವಲಿಗೆ ತೆಗೆದುಕೊಂಡರೆ ನಾವೂ ಅಪ್ಪನಂತೆಯೇ ಕೆಲಸ ಮಾಡುತ್ತೇವೆ ಎಂದು ಎಷ್ಟೇ ಅರಣ್ಯ ಇಲಾಖೆಯ ಅಧಿಕಾರಿಗಳ ಮುಂದೆ ಕೇಳಿಕೊಂಡರೂ ಈ ತನಕ ಮಕ್ಕಳಿಗೆ ಗೂಳೆಪ್ಪರ ಕೆಲಸ ಮಾಡಲು ಅನುಮತಿಸಿಲ್ಲ. ಶಾಸಕರಾದ ಡಾ.ಶ್ರೀನಿವಾಸ ಎನ್.ಇ. ಅವರು ಹೇಳಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಮಗ ಅಂಜಿನಪ್ಪ ಹೇಳುತ್ತಾರೆ.

ಗೂಳೆಪ್ಪರನ್ನು ಹೊರ ಜಗತ್ತು ಗುರುತಿಸಿದ್ದು ಆವರ ಕಾಯಕದ 20 ವರ್ಷದ ನಂತರ. ಈ ಗುರುತಿಸುವಿಕೆ, ಪ್ರಚಾರವನ್ನು ಅವರೇನೂ ಬಯಸಿರಲಿಲ್ಲ. ಅದೆಲ್ಲವೂ ಆಕಸ್ಮಿಕವಾಗಿ ಒದಗಿ ಬಂದದ್ದು. ಒಮ್ಮೆ ಕೂಡ್ಲಿಗಿಯ ಪತ್ರಿಕಾ ವರದಿಗಾರರಾಗಿದ್ದ ಸಿದ್ದರಾಮ ಹಿರೇಮಠ ಮೊದಲಬಾರಿಗೆ ವರದಿ ಮಾಡಿದ್ದರು. ಇದರ ಜಾಡು ಹಿಡಿದು ವರದಿಗಾರ ಭೀಮಣ್ಣ ಗಜಾಪುರ ಅವರು ಇನ್ನಷ್ಟು ವಿಸ್ತಾರವಾಗಿ ಪರಿಚಯಿಸಿದರು. ಇದರಿಂದಾಗಿ ಹೊರಜಗತ್ತಿನ ಅನೇಕರ ಜತೆ ಗೂಳೆಪ್ಪ ಮಾತನಾಡುವಂತಾಯಿತು. ಹಿಂದೆ 2008ರಲ್ಲಿ ಬಿ. ನಾಗೇಂದ್ರ ಅವರು ಶಾಸಕರಾಗಿದ್ದಾಗ, ಅವರ ಆಪ್ತ ಸಹಾಯಕರಾಗಿದ್ದ ಡಾ.ವೆಂಟಕಗಿರಿ ದಳವಾಯಿ ಅವರು ಗೂಳೆಪ್ಪರನ್ನು ಗುರುತಿಸಿ ತಿಂಗಳಿಗೆ ಇಂತಿಷ್ಟು ಸಂಬಳವನ್ನು ಶಾಸಕರ ನಿಧಿಯಿಂದ ಸಿಗುವಂತೆ ಮಾಡಿದ್ದರು. ಮುಂದೆ ಟಿ.ವಿ. ವಾಹಿನಿಯೊಂದರ ವಾರ್ಷಿಕ ವ್ಯಕ್ತಿಯಾಗಿ ದೃಶ್ಯಮಾಧ್ಯಮದಲ್ಲಿಯೂ ಪರಿಚಯವಾದರು.

ಇದೀಗ ಅರಣ್ಯ ಇಲಾಖೆಯ ಖಾಯಂ ನೌಕರರಾಗಿ ಕಾಡು ಪೋಷಿಸುತ್ತಿರುವ ಭಟ್ರಳ್ಳಿ ಗೂಳೆಪ್ಪರನ್ನು ಗುರುತಿಸಿ ಕರ್ನಾಟಕ ಸರಕಾರ 2021ರಲ್ಲಿ ವಾಲ್ಮೀಕಿಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಗೂಳೆಪ್ಪ ತನಗೆ ಸಿಕ್ಕ ಪ್ರಚಾರವನ್ನಾಗಲಿ, ಪ್ರಶಸ್ತಿಗಳನ್ನಾಗಲಿ ಒಂಚೂರೂ ತಲೆಗೇರಿಸಿಕೊಂಡಿಲ್ಲ. ಅವುಗಳನ್ನೆಲ್ಲ ಆಗಾಗ ಕೊಡವಿಕೊಂಡು ತನ್ನ ಪಾಡಿನ ಕಾಯಕದಲ್ಲಿ ತೊಡಗಿಕೊಂಡಂತೆ ಕಾಣುತ್ತದೆ. ಕೆಲವು ಸಾಹಿತಿ-ಕಲಾವಿದರು ಪ್ರಶಸ್ತಿ ಪ್ರಚಾರವನ್ನು ಮೈಗೆಲ್ಲಾ ಅಂಟಿಸಿಕೊಂಡು ಸದಾ ಅವುಗಳನ್ನು ಹೊತ್ತು ತಿರುಗುವುದನ್ನು ನೋಡಿದರೆ ಗೂಳೆಪ್ಪರ ನಿರ್ಲಿಪ್ತತೆಗೆ ಹೆಚ್ಚು ಮೌಲ್ಯ ಬರುತ್ತದೆ. ಇದೀಗ ಗೂಳೆಪ್ಪ ಮಾಗಿದ್ದಾರೆ. ಈ ಇಳಿವಯಸ್ಸಿನಲ್ಲಿ ಪತ್ರಕರ್ತ ಭೀಮಣ್ಣ ಗಜಾಪುರ ಅವರು ಗೂಳೆಪ್ಪರ ಬಗ್ಗೆ ಪುಸ್ತಕ ಬರೆದಿದ್ದಾರೆ. ಈ ವಿದ್ಯಮಾನ ಗೂಳೆಪ್ಪರ ಚೈತನ್ಯವನ್ನು ಹೆಚ್ಚಿಸಲಿ.

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X