ದಲಿತ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್

ದ್ವೇಷದ ರಾಜಕಾರಣ ಮತ್ತು ಉಗ್ರ ಹಿಂದುತ್ವ ಎಂದರೆ ಕೇವಲ ಮುಸ್ಲಿಮ್ ದ್ವೇಷ ಎಂಬ ಯಾರೋ ಕಲಿಸಿಕೊಟ್ಟ ಪೂರ್ವಾಗ್ರಹಿತ ಮನಸ್ಥಿತಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಹೊರಬರಬೇಕು. ಅಟಲ್ ಬಿಹಾರಿ ವಾಜಪೇಯಿ ಅವರ ಜಾಣ ನಡೆ ಯತ್ನಾಳ್ ಅವರಿಗೆ ಪಾಠ ಕಲಿಸಿಲ್ಲ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ್ದನ್ನು ಅಟಲ್ ಬಿಹಾರಿ ವಾಜಪೇಯಿ ಬದುಕಿದ್ದಿದ್ದರೆ ಖುಷಿ ಪಡುತ್ತಿದ್ದರು. ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತ ರತ್ನ ನೀಡಿ ಖುಷಿ ಪಟ್ಟವರು ಅಟಲ್ ಬಿಹಾರಿ ವಾಜಪೇಯಿ ಅವರು. ದ್ವೇಷ ಅಸೂಯೆಯ ರಾಜಕಾರಣ ಯಾರನ್ನೂ ದಡ ಮುಟ್ಟಿಸಿಲ್ಲ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಹೇಗೆ ದಡ ತಲುಪುತ್ತಾರೆ?
‘‘ನುಡಿದರೆ ಮುತ್ತಿನ ಹಾರದಂತಿರಬೇಕು’’
-ಬಸವಣ್ಣ
ಬಸನಗೌಡ ಪಾಟೀಲ್ ಯತ್ನಾಳ್ 1994ರಲ್ಲಿ ಮೊದಲ ಬಾರಿಗೆ ಬಿಜಾಪುರ ಶಾಸಕನಾದಾಗ ಎಲ್ಲ ಧರ್ಮ ಮತ್ತು ಜನ ಸಮುದಾಯಗಳಿಗೆ ಸೇರಿದ ಮತದಾರರು ಇಷ್ಟಪಡುತ್ತಿದ್ದರು. ಆಗ ಬಸನಗೌಡ ಪಾಟೀಲ್ ಯತ್ನಾಳ್ ಗೆ ಅಟಲ್ ಬಿಹಾರಿ ವಾಜಪೇಯಿ ಆದರ್ಶವಾಗಿದ್ದರು. ಹಿಂದೂ -ಮುಸ್ಲಿಮ್ ಭೇದದ ಮಾತನಾಡುತ್ತಿರಲಿಲ್ಲ. ಅತ್ಯುತ್ತಮ ಜನಸಂಪರ್ಕ ಮತ್ತು ಅಭಿವೃದ್ಧಿ ಕೆಲಸಗಳಿಂದಾಗಿ ಬಸನಗೌಡ ಜನಪ್ರಿಯರಾಗಿದ್ದರು. ಪಂಚಮಸಾಲಿ ಸಮುದಾಯಕ್ಕೆ ಸೇರಿದ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲ ಸಮುದಾಯದ ಪ್ರೀತಿಗೆ ಪಾತ್ರರಾಗಿದ್ದರು. ಆಗ ವಿಧಾನಸಭೆಯ ಅಧ್ಯಕ್ಷರಾಗಿದ್ದ ಕೆ.ಆರ್. ರಮೇಶ್ ಕುಮಾರ್ ಅವರು ಯುವ ಶಾಸಕ ಬಸನಗೌಡ ಪಾಟೀಲರನ್ನು ಸದನದಲ್ಲಿ ಮಾತಾಡಲು ಬೆಂಬಲಿಸುತ್ತಿದ್ದರು. ಸಮಾಜವಾದಿ ಹಿನ್ನೆಲೆಯ ಜೆ.ಎಚ್. ಪಟೇಲ್ ಅವರು ಬಸನಗೌಡ ಪಾಟೀಲರಿಗೆ ಸಾಕಷ್ಟು ಉತ್ತೇಜನ ನೀಡಿದ್ದರು.
ಮೊದಲ ಬಾರಿಗೆ ಶಾಸಕರಾಗಿದ್ದಾಗ ಬಸನಗೌಡ ಪಾಟೀಲ್ ಯತ್ನಾಳ್ ತನ್ನ ಮತಕ್ಷೇತ್ರದ ಅಭಿವೃದ್ಧಿ ಮತ್ತು ಜಿಲ್ಲೆಯ ಸಮಸ್ಯೆಗಳ ಕುರಿತು ಹೆಚ್ಚು ಮಾತನಾಡುತ್ತಿದ್ದರು. ಹಾಗೆ ನೋಡಿದರೆ ಬಸನಗೌಡ ಆಗಲೂ ಅತ್ಯುತ್ತಮ ಸಂಸದೀಯ ಪಟುವಾಗಿರಲಿಲ್ಲ. ಸಂಸದೀಯ ಪಟುವಾಗುವ ಎಲ್ಲ ಗುಣಲಕ್ಷಣಗಳು ಅವರಲ್ಲಿ ಇದ್ದವು. ಪಂಚಮಸಾಲಿ ಸೇರಿ ಎಲ್ಲ ಸಮುದಾಯದ ಬಡವರಿಗೆ ಯತ್ನಾಳ್ ಗೌಡರು ಪ್ರೀತಿ ಪಾತ್ರರಾಗಿದ್ದರು. ಯಾರೇ ಅಪರಿಚಿತ ವ್ಯಕ್ತಿ ಬಂದರೂ ತಾಳ್ಮೆಯಿಂದ ಮಾತನಾಡಿಸಿ ಕೆಲಸ ಮಾಡಿ ಕಳುಹಿಸುತ್ತಿದ್ದರು. ಆಗ ಪಂಚಮಸಾಲಿ ಮತ್ತು ಹಿಂದುತ್ವದ ಭೂತ ಈ ಪರಿ ಆವರಿಸಿರಲಿಲ್ಲ. ಬಿಜಾಪುರದ ಮುಸ್ಲಿಮ್ ಸಮುದಾಯದ ಕೆಲವು ವ್ಯಕ್ತಿಗಳ ಜೊತೆಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದರು.
ಆದರೆ ಅದೇ ಸಮಯದಲ್ಲಿ ಶಿವಾನಂದ ಪಾಟೀಲ್ ಮತ್ತು ವಿಜೂಗೌಡ ಪಾಟೀಲ್ ಸಕ್ರಿಯ ರಾಜಕಾರಣದಲ್ಲಿ ಇದ್ದರು. ಜನತಾದಳದ ಟಿಕೆಟ್ ಮೇಲೆ ಶಿವಾನಂದ ಪಾಟೀಲ್ ಅಷ್ಟೊತ್ತಿಗೆ ಶಾಸಕರಾಗಿದ್ದರು. ಬಾರ್ ನಡೆಸುತ್ತಿದ್ದ ಶಿವಾನಂದ ಪಾಟೀಲ್ ಮತ್ತು ವಿಜೂಗೌಡ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ದರ್ಪ ದಬ್ಬಾಳಿಕೆ ಮಾಡುತ್ತಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಅವರಿಬ್ಬರ ಬಾಡಿ ಲ್ಯಾಂಗ್ವೇಜ್ ಕೂಡಾ ಹಾಗೇ ಇತ್ತು. ಶಿವಾನಂದ ಪಾಟೀಲ್ ಸಹೋದರರಿಗೆ ಹೋಲಿಸಿದರೆ ಬಸನಗೌಡ ಪಾಟೀಲ್ ಇಮೇಜ್ ಸಜ್ಜನಿಕೆಯ ಜೊತೆಗೆ ತಳಕು ಹಾಕಿಕೊಂಡಿತ್ತು.
ಸಜ್ಜನ, ಸುಸಂಸ್ಕೃತ ಎಂಬ ಅಭಿದಾನಗಳು ಬಸನಗೌಡ ಪಾಟೀಲ್ ಯತ್ನಾಳ್ ಅವರ ವ್ಯಕ್ತಿತ್ವದ ಭಾಗವಾಗಿದ್ದವು. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದಾಗಲೂ ಬಿಜಾಪುರ ನಗರ ಹೆಚ್ಚು ಡಿಸ್ಟರ್ಬ್ ಆಗಿರಲಿಲ್ಲ. ಆ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ 1999ರ ಲೋಕಸಭಾ ಚುನಾವಣೆಯಲ್ಲಿ ಬಿಜಾಪುರ ಮತಕ್ಷೇತ್ರದಿಂದ ಅನಾಯಾಸವಾಗಿ ಗೆಲುವು ಸಾಧಿಸಿದ್ದರು. ಅಲ್ಲಿಯವರೆಗೆ ಬಿಜೆಪಿ ಅಭ್ಯರ್ಥಿ ಗೆದ್ದ ನಿದರ್ಶನ ಇರಲಿಲ್ಲ. 2004ರ ಲೋಕಸಭಾ ಚುನಾವಣೆಯಲ್ಲಿಯೂ ಬಸನಗೌಡ ಪಾಟೀಲ್ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸಚಿವ ಸಂಪುಟದಲ್ಲಿ ರೈಲ್ವೆ ಖಾತೆಯ ರಾಜ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರಕಿತ್ತು. ಆಗ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿಜಯ ಸಂಕೇಶ್ವರ ಮತ್ತು ಬಸವರಾಜ ಪಾಟೀಲ್ ಸೇಡಂ ಅವರಂಥ ಸಜ್ಜನ ರಾಜಕಾರಣಿಗಳು ಇಷ್ಟಪಡುತ್ತಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ವಂಚಿತ ನಾಯಕ ಎಂದು ಪ್ರಚಾರ ಮಾಡಿಕೊಂಡರು. ಅನುಕಂಪ ಗಿಟ್ಟಿಸಿಕೊಳ್ಳಲು ಆಕಳು ವೇಷ ಧರಿಸಿದರು. ಮಾತಿಗೆ ತಪ್ಪಿದ ಕುಮಾರಸ್ವಾಮಿಯವರನ್ನು ಕಟಕಟೆಯಲ್ಲಿ ನಿಲ್ಲಿಸಿದರು. ಆಗಲೇ ಯಡಿಯೂರಪ್ಪ ಲಿಂಗಾಯತರ ನಾಯಕನಾಗಿ ಹೊರಹೊಮ್ಮಿದರು. ಅತ್ತು ಕರೆದು ಯಡಿಯೂರಪ್ಪ 110 ಶಾಸಕರನ್ನು ಗೆಲ್ಲಿಸಿಕೊಂಡು ಬಂದರು. 2008ರ ಚುನಾವಣೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಿಜಾಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಯಡಿಯೂರಪ್ಪ ಟಿಕೆಟ್ ನಿರಾಕರಿಸಿದರು. ಅಲ್ಲಿಂದ ಬಸನಗೌಡರ ಸಜ್ಜನಿಕೆ ಮುಖವಾಡ ಕಳಚಿ ಬಿತ್ತು. ರೆಬೆಲ್ ನಾಯಕರಾಗಿ ಬದಲಾದರು. ರೆಬೆಲ್ ಎಂದರೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಎಂದೇ ಭಾವಿಸಿದ್ದರು. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಬಗ್ಗೆ ಕೀಳು ಮಟ್ಟದಲ್ಲಿ ಟೀಕಿಸತೊಡಗಿದರು. ಆಗ ಮಾಧ್ಯಮಗಳು ಬಸನಗೌಡರ ಮಾತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಯಾಕೆಂದರೆ ಆಗ ಬಸನಗೌಡ ಪಾಟೀಲ್ ಯತ್ನಾಳ್ ಬಿ.ಎಲ್. ಸಂತೋಷ್ ಅವರ ನಿಯಂತ್ರಣಕ್ಕೆ ಬಂದಿರಲಿಲ್ಲ. ಬಿಜಾಪುರ ನಗರದಲ್ಲಿ ಅಪ್ಪು ಪಟ್ಟಣಶೆಟ್ಟಿ ಬಸನಗೌಡ ಯತ್ನಾಳ್ ಅವರಿಗೆ ಪರ್ಯಾಯ ನಾಯಕರಾಗಿ ಬೆಳೆಯುವುದು ಇಷ್ಟವಿರಲಿಲ್ಲ. 2013ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿ ಇಬ್ಭಾಗವಾಯಿತು. ಕೆಜೆಪಿ ಕಟ್ಟಿದ ಯಡಿಯೂರಪ್ಪ ಬಿಜೆಪಿ ಸರ್ವನಾಶಕ್ಕೆ ಪಣ ತೊಟ್ಟರು. ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಬಸನಗೌಡರನ್ನು ಪಕ್ಷದಿಂದ ಹೊರ ಹಾಕಿದರು. ಅನಿವಾರ್ಯವಾಗಿ ಜಾತ್ಯತೀತ ಜನತಾದಳ ಸೇರಿಕೊಂಡರು. ಅಷ್ಟು ಮಾತ್ರವಲ್ಲ ಬಿಜಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಬಿಜೆಪಿ, ಕೆಜೆಪಿ ಮತ್ತು ಜೆಡಿಎಸ್ ಪೈಪೋಟಿಯಲ್ಲಿ ಕಾಂಗ್ರೆಸ್‌ನ ಮುಸ್ಲಿಮ್ ಅಭ್ಯರ್ಥಿ ಅನಾಯಾಸವಾಗಿ ಗೆಲುವು ಸಾಧಿಸಿದರು.
ಹಾಗೆ ನೋಡಿದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 40 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿತ್ತು. ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್, ಬಿ.ಆರ್. ಪಾಟೀಲ್ ಮುಂತಾದವರು ಜೆಡಿಎಸ್ ತೊರೆದ ಮೇಲೆ ಅತಿ ಹೆಚ್ಚು ಸ್ಥಾನದ ಗೆಲುವು ದಾಖಲಿಸಿತ್ತು. ಆ ಚುನಾವಣೆಯಲ್ಲಿ ಬಸನಗೌಡ ಯತ್ನಾಳ್ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರೆ ಸೆಕ್ಯುಲರ್ ಭಾಷಣಕಾರರ ಸಾಲಿನಲ್ಲೇ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಬಸನಗೌಡ ಪಾಟೀಲರನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಂಡರು. ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಅವರಿಗೆ ಎಂಎಲ್‌ಸಿ ಹುದ್ದೆ ಬೇಕಾಗಿತ್ತು. ಹಾಗಾಗಿ ಜೆಡಿಎಸ್ ತೊರೆದು ಹೊರ ಬಂದರು. ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜಾಪುರ-ಬಾಗಲಕೋಟೆ ಮತಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪಂಚಮಸಾಲಿ ಮತ್ತು ಬಿಜಾಪುರ ಜಿಲ್ಲೆಯ ಅಸ್ಮಿತೆ ಸೆಂಟಿಮೆಂಟ್ ಮುಂದು ಮಾಡಿ ಚುನಾವಣೆ ಎದುರಿಸಿದರು. ನಿರೀಕ್ಷೆಯಂತೆ ಗೆಲುವು ಸಾಧಿಸಿದರು. 2018ರ ವಿಧಾನಸಭಾ ಚುನಾವಣೆ ಹೊತ್ತಿಗೆ ಯಡಿಯೂರಪ್ಪ ಮನೆಗೆ ಎಡತಾಕಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡರು. ಆ ಚುನಾವಣೆಯಲ್ಲಿ ಬಿಜೆಪಿ ಕೇವಲ 104 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಅಲ್ಲಿಯವರೆಗೆ ಯಡಿಯೂರಪ್ಪ ಅಭಿಮಾನಿಯಾಗಿದ್ದ ಬಸನಗೌಡ ಯತ್ನಾಳ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಬಂಡುಕೋರರಾದರು. ಬಿ.ಎಲ್. ಸಂತೋಷ್ ಕೈಚಳಕದಿಂದಲೇ ಬಸನಗೌಡ ಪಾಟೀಲ್, ಉಮೇಶ್ ಕತ್ತಿ ಮುಂತಾದ ಯಡಿಯೂರಪ್ಪ ಅನುಯಾಯಿಗಳಿಗೆ ಮಂತ್ರಿಗಿರಿ ತಪ್ಪಿತ್ತು. ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿಸುವಲ್ಲಿ ಬಿ.ಎಲ್. ಸಂತೋಷ್ ಯಶಸ್ವಿಯಾಗಿದ್ದರು. ಆಲ್ಲದೆ ವಿಜಯೇಂದ್ರ ಯಡಿಯೂರಪ್ಪ ಕಷ್ಟಕಾಲದಲ್ಲಿ ಜೊತೆಗೆ ನಿಂತವರನ್ನು ಪಕ್ಕಕ್ಕೆ ತಳ್ಳಿದರು.
ಆಗ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಮೇಲಿನ ವಿಶ್ವಾಸ ಕಳೆದುಕೊಂಡು ಬಿ.ಎಲ್. ಸಂತೋಷ್ ಬಣ ಸೇರಿಕೊಂಡರು. ಸಂತೋಷ್ ಖುಷಿಪಡಿಸಲು ಯಡಿಯೂರಪ್ಪ ಅವರನ್ನು ವಾಚಾಮಗೋಚರವಾಗಿ ನಿಂದಿಸತೊಡಗಿದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಮಿಷನ್‌ನಲ್ಲಿ ಪರಿಣಾಮಕಾರಿ ಉಪಕರಣವಾಗಿ ಬಳಕೆಯಾದರು. ಬಿ.ಎಲ್. ಸಂತೋಷ್ ಮನಸ್ಸು ಮಾಡಿದ್ದರೆ, ಬಸನಗೌಡ ಪಾಟೀಲರನ್ನು ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ತೂಕದ ಖಾತೆಗೆ ಮಂತ್ರಿ ಮಾಡಿಸಬಹುದಿತ್ತು. ಸುನೀಲ್ ಕುಮಾರ್‌ಗೆ ಇಂಧನ ಖಾತೆ, ಹಾಲಪ್ಪ ಆಚಾರ್‌ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಬಿ.ಸಿ. ನಾಗೇಶ್‌ರನ್ನು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವರನ್ನಾಗಿಸಿದ ಸಂತೋಷ್ ಅವರಿಗೆ ಬಸನಗೌಡರಿಗೆ ಮಂತ್ರಿಸ್ಥಾನ ಕೊಡಿಸುವುದು ದೊಡ್ಡ ಸಂಗತಿಯಾಗಿರಲಿಲ್ಲ. ಬಸನಗೌಡರನ್ನು ಖಾಯಂ ಕೂಗುಮಾರಿಯಾಗಿ ಬಳಸಿಕೊಳ್ಳಬೇಕೆಂಬ ಸಂತೋಷ್ ಅಭೀಪ್ಸೆಯಂತೆ ಬಸನಗೌಡರನ್ನು ಸಚಿವ ಸಂಪುಟದಿಂದ ಹೊರಗುಳಿಸಿದರು. ಸಂತೋಷ್ ಅವರನ್ನು ಮೆಚ್ಚಿಸಲು ಬಸನಗೌಡ ತಮ್ಮ ನಾಲಗೆಯನ್ನು ಮತ್ತಷ್ಟು ಹರಿತ ಮಾಡಿಕೊಂಡರು.
ಆರಂಭದಲ್ಲಿ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಮಾತನಾಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಉಗ್ರ ಹಿಂದೂವಾದರೆ ಮಾತ್ರ ಬಿಜೆಪಿಯಲ್ಲಿ ನಾಯಕತ್ವ ಪಡೆಯಬಹುದು ಎಂಬ ಭ್ರಮೆಗೆ ಒಳಗಾದರು. ಬಸವರಾಜ ಬೊಮ್ಮಾಯಿಯವರನ್ನು ನಿಯಂತ್ರಿಸಲು ಬಸನಗೌಡರನ್ನು ಬಳಸಿಕೊಳ್ಳುವ ಸಂತೋಷ್ ಹುನ್ನಾರ ನಡೆಯಲಿಲ್ಲ. ಯಾಕೆಂದರೆ, ಬೊಮ್ಮಾಯಿ ಸ್ವತಃ ಸಂತೋಷ್‌ಗೆ ಶರಣಾಗಿದ್ದರು. ಸಂತೋಷ್ ಅಜೆಂಡಾವನ್ನು ಒಂದು ಹೆಜ್ಜೆ ಮುಂದೆ ಹೋಗಿ ಬೊಮ್ಮಾಯಿ ಜಾರಿಗೊಳಿಸಿದರು.
ಯಡಿಯೂರಪ್ಪ, ವಿಜಯೇಂದ್ರರನ್ನು ಕಟುವಾಗಿ ಟೀಕಿಸುತ್ತಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅಥವಾ ವಿರೋಧ ಪಕ್ಷದ ನಾಯಕ ಹುದ್ದೆ ಗಿಟ್ಟಿಸಲು ಬಸನಗೌಡ ಉಗ್ರ ಹಿಂದುತ್ವದ ವೇಷ ಧರಿಸಿದರು. ಹಿಂದೂ ಹುಲಿ ಎಂಬ ಅಬಿಧಾನ ಪಡೆದುಕೊಂಡರು. ಉಗ್ರ ಹಿಂದೂ ಆಗುವುದೆಂದರೆ ವಿಕೃತವಾಗಿ ಮುಸ್ಲಿಮ್ ಮತ್ತು ಪ್ರಗತಿಪರರ ಮೇಲೆ ನಂಜು ಕಾರುವುದೆಂದೇ ಬಸನಗೌಡ ಬಲವಾಗಿ ನಂಬಿದರು. ಮೊದಮೊದಲು ಕೆ.ಎಸ್. ಭಗವಾನ್ ರಂಥ ಪ್ರಗತಿಪರ ಚಿಂತಕರನ್ನು, ದೊರೆ ಸ್ವಾಮಿಯಂಥ ಗಾಂಧಿವಾದಿಯನ್ನು ಬಾಯಿಗೆ ಬಂದಂತೆ ನಿಂದಿಸುವುದು ಚಾಳಿ ಮಾಡಿಕೊಂಡರು.
ಬಸನಗೌಡ ಮಾಡಿದ ತಪ್ಪನ್ನು ನ್ಯಾಯಾಲಯ ಖಂಡಿಸಿ ಶಿಕ್ಷೆಗೆ ಗುರಿ ಪಡಿಸಿದ್ದರೆ ಆತನ ಆಟಾಟೋಪ ಅಲ್ಲಿಗೆ ನಿಲ್ಲುತ್ತಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಭರದಲ್ಲಿ ಅವರ ಶ್ರೀಮತಿಯವರನ್ನು ನಿಂದಿಸಿದರು. ‘‘ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ’’ ಎಂದು ಹೇಳುವ ಮೂಲಕ ಪವಿತ್ರ ಪ್ರೀತಿಯನ್ನು ಅಪಮಾನಿಸಿದರು. ಈ ವಿಷಯದಲ್ಲಿ ನ್ಯಾಯಾಲಯ ಬಸನಗೌಡರಿಗೆ ತಾಕೀತು ಮಾಡಿತೇ ಹೊರತು ಕಠಿಣ ಶಿಕ್ಷೆ ನೀಡಲಿಲ್ಲ. ಮುಖ್ಯಮಂತ್ರಿ, ಗೃಹ ಸಚಿವರು ಅಥವಾ ವಿಧಾನಸಭೆಯ ಅಧ್ಯಕ್ಷರು ಕಾನೂನು ಕ್ರಮ ಜರುಗಿಸುವ ಮಾತನಾಡಿದ್ದರೆ ತಪ್ಪನ್ನು ತಿದ್ದಿಕೊಳ್ಳಬಹುದಿತ್ತೇನೋ? ಸದನದಿಂದ ಹೊರ ಹಾಕುವ ಅಥವಾ ಶಾಸಕತ್ವ ಕಳೆದುಕೊಳ್ಳುವ ಭಯ ಇದ್ದಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಕಡಿವಾಣ ಬೀಳಬಹುದಿತ್ತೇನೋ? ಯಾವ ಭಯ ಇಲ್ಲದಿರುವುದರಿಂದ ಮುಸ್ಲಿಮ್ ದ್ವೇಷ ಬಿತ್ತುವ ಕಾರ್ಯವನ್ನು ವ್ಯಾಪಕವಾಗಿ ಮಾಡುತ್ತಿದ್ದಾರೆ. ಮದ್ದೂರು ಗಣೇಶ ಮೆರವಣಿಗೆ ಗಲಾಟೆ ಮತ್ತು ಕಲ್ಲು ತೂರಾಟ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕೆ ಬಳಸಿಕೊಳ್ಳಲು ಯತ್ನಿಸಿದರು.
ಯಡಿಯೂರಪ್ಪ-ವಿಜಯೇಂದ್ರರನ್ನು ಕಟುವಾಗಿ ಟೀಕಿಸಿದ್ದಕ್ಕೆ ಬಸನಗೌಡರಿಗೆ ರಾಷ್ಟ್ರೀಯ ಬಿಜೆಪಿ ಉಚ್ಚಾಟನೆಯ ಶಿಕ್ಷೆ ನೀಡಿದೆ. ಯತ್ನಾಳ್ ರಕ್ಷಣೆಗೆ ಬಿ.ಎಲ್. ಸಂತೋಷ್ ನಿಲ್ಲಲೇ ಇಲ್ಲ. ಬಸನಗೌಡ ಕಿರುಚುತ್ತಾ ಹೋದಂತೆ ಸಂತೋಷ್‌ಗೆ ಲಾಭ. ಈಗ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಒಂದು ದಿನ ಮತದಾರರಿಂದಲೇ ತಿರಸ್ಕರಿಸಲ್ಪಡುತ್ತಾರೆ. ಬಸನಗೌಡ ಯತ್ನಾಳ್, ಪ್ರತಾಪ ಸಿಂಹ, ಕೆ. ಎಸ್. ಈಶ್ವರಪ್ಪ ಅಂಥವರನ್ನು ಬಳಸಿ ಬಿಸಾಕುವುದೇ ಬಿ.ಎಲ್. ಸಂತೋಷ್ ಅವರ ರಾಜಕೀಯ ಆಟ. ಬಾನು ಮುಷ್ತಾಕ್ ಅವರನ್ನು ದಸರಾ ನಾಡ ಹಬ್ಬದ ಉದ್ಘಾಟನೆಗೆ ಆಹ್ವಾನಿಸಿದ್ದೇ ತಪ್ಪು ಎನ್ನುವಂತೆ ವಾದ ಮಾಡುತ್ತಿರುವ ಪ್ರತಾಪ ಸಿಂಹರಿಗೆ ಹೈಕೋರ್ಟ್ ಸರಿಯಾಗಿಯೇ ಉಗಿದಿದೆ. ಇಷ್ಟಾಗಿಯೂ ಬಸನಗೌಡ ಯತ್ನಾಳ್ ಮತ್ತು ಪ್ರತಾಪ ಸಿಂಹರಂಥ ಕೂಗುಮಾರಿಗಳಿಗೆ ಬುದ್ಧಿ ಬಂದಿಲ್ಲ.
ಬಸನಗೌಡ ಪಾಟೀಲ್ ಯತ್ನಾಳ್ ಮುಸ್ಲಿಮ್ ದ್ವೇಷದ ಜೊತೆಗೆ ದಲಿತ ದ್ವೇಷಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸನಾತನ ಧರ್ಮದ ಪ್ರಕಾರ ಮುಸ್ಲಿಮರು ಮಾತ್ರವಲ್ಲ, ದಲಿತ ಮಹಿಳೆಯರು ಕೂಡಾ ಚಾಮುಂಡೇಶ್ವರಿ ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ ಎಂದು ಫರ್ಮಾನು ಹೊರಡಿಸಿದ್ದಾರೆ. ಬಿಜೆಪಿಯಲ್ಲಿ ಹೈಕಮಾಂಡ್ ಮೆಚ್ಚಿಸುವ ಮತ್ತು ತಾನೇ ಉಗ್ರ ಹಿಂದೂ ನಾಯಕ ಎಂದು ರುಜುವಾತುಪಡಿಸುವ ತೀವ್ರ ಪೈಪೋಟಿ ನಡೆದಿದೆ. ಹಾಗಾಗಿ ಬಸನಗೌಡ ಪಾಟೀಲ್ ಯತ್ನಾಳ್, ರವಿಕುಮಾರ್, ಸಿ.ಟಿ. ರವಿ, ಸುನೀಲ್ ಕುಮಾರ್, ಪ್ರತಾಪ ಸಿಂಹ ಮುಸ್ಲಿಮ್ ದ್ವೇಷ ಮತ್ತು ದಲಿತ ಮಹಿಳೆಯರ ನಿಂದಿಸುವ ಸ್ಪರ್ಧೆಯಲ್ಲಿ ಗೆಲುವಿಗಾಗಿ ಹಪಾಹಪಿಸುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪ ಹಲವು ದಶಕಗಳ ಕಾಲ ದ್ವೇಷ ರಾಜಕಾರಣದ ಟೂಲ್ ಆಗಿ ಬಳಕೆಯಾಗಿ ಬೀದಿಗೆ ತಳ್ಳಲ್ಪಟ್ಟಿದ್ದಾರೆ. ಈಗ ಬಸನಗೌಡ ಪಾಟೀಲ್ ಯತ್ನಾಳ್ ಹೊಲಸು ಬಾಯಿಯಿಂದಾಗಿಯೇ ಪಕ್ಷದಿಂದ ಹೊರ ಹಾಕಿಸಿಕೊಂಡಿದ್ದಾರೆ.
ಚಾಮುಂಡೇಶ್ವರಿ ಹೇಳಿ ಕೇಳಿ ಶಕ್ತಿ ದೇವತೆ. ಶಾಕ್ತ ಪಂಥದ ಕನಿಷ್ಠ ತಿಳವಳಿಕೆ ಇಲ್ಲದ ಬಸನಗೌಡ, ಪ್ರತಾಪ ಸಿಂಹ ಬಾನು ಮುಷ್ತಾಕ್ ಮತ್ತು ದಲಿತ ಮಹಿಳೆಯರನ್ನು ವಿರೋಧಿಸುವ ಭರದಲ್ಲಿ ಸ್ತ್ರೀ ಅಸ್ಮಿತೆಗೇ ಅಪಮಾನ ಮಾಡಿದ್ದಾರೆ. ದಲಿತ ಮಹಿಳೆಯರಿಗೆ ಅಪಮಾನ ಮಾಡಿದ ದಿನವೇ ಕರ್ನಾಟಕ ಸರಕಾರ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕಿತ್ತು.
ಬಸನಗೌಡ ಪಾಟೀಲ್ ಅವರ ಆಚಾರವಿಲ್ಲದ ನೀಚ ನಾಲಗೆಯಿಂದ ಬಸವಣ್ಣ, ಮಹಾತ್ಮಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಕಿತ್ತೂರು ಚೆನ್ನಮ್ಮ ಮತ್ತು ಶಕ್ತಿ ದೇವತೆ ಚಾಮುಂಡೇಶ್ವರಿಯನ್ನು ಅಪಮಾನ ಮಾಡುತ್ತಿದ್ದಾರೆ.
ಹಿಂದೂ ಧರ್ಮ ಸರ್ವೇ ಜನ ಸುಖಿನೋ ಭವಂತು ಎನ್ನುತ್ತದೆ. ವಸುಧೈವ ಕುಟುಂಬಕಂ ಎಂಬುದು ಹಿಂದೂ ಧರ್ಮದ ಧ್ಯೇಯ ಮಂತ್ರವಾಗಿದೆ. ಬಸವಣ್ಣನವರ ಲಿಂಗಾಯತ ಧರ್ಮ ವರ್ಣ ಸಂಕರ, ಸಮಾನತೆ, ಮೌಢ್ಯ ಕಂದಾಚಾರದ ನಿರಾಕರಣೆಯನ್ನು ತನ್ನ ಮೂಲ ಆಶಯ ಮಾಡಿಕೊಂಡಿದೆ. ದಯೆಯಿಲ್ಲದ ಧರ್ಮ ಯಾವುದು ಎಂದು ಬಸವಣ್ಣನವರೇ ಪ್ರಶ್ನಿಸುತ್ತಾರೆ. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವ ಲಿಂಗಾಯತ ಧರ್ಮದ ಅನುಯಾಯಿಯಾಗಿ ಬಸನಗೌಡ ಪಾಟೀಲ್ ಯತ್ನಾಳ್ ರಾಜಕಾರಣದ ತೆವಲಿಗೆ ಮುಸ್ಲಿಮ್ ದ್ವೇಷ, ದಲಿತ ದ್ವೇಷ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಹಿಂದೂ ಧರ್ಮ, ಲಿಂಗಾಯತ ಧರ್ಮ ಮತ್ತು ಶಾಕ್ತ ಪಂಥದ ಬಗ್ಗೆ ಆಳವಾದ ತಿಳುವಳಿಕೆ ಇರುವ ಯಾರೂ ಈ ರೀತಿ ಕೀಳು ಮಟ್ಟದಲ್ಲಿ ಮಾತನಾಡುವುದಿಲ್ಲ.
ಉಚ್ಚಾಟಿಸಲ್ಪಟ್ಟ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ಬಿ.ಎಲ್. ಸಂತೋಷ್ ಅವರೇ ಬಸನಗೌಡ ಬಿಜೆಪಿ ಪಕ್ಷ ಸೇರ್ಪಡೆಗೆ ಅಡ್ಡಿ ಮಾಡಿರುತ್ತಾರೆ. ಮುಸ್ಲಿಮ್ ದ್ವೇಷ, ದಲಿತ ದ್ವೇಷ ಮತ್ತು ಸನಾತನ ಧರ್ಮದ ಪರ ನಡೆಸುವ ಯಾವ ವಕಾಲತ್ತು ಬಸನಗೌಡ ಪಾಟೀಲರಿಗೆ ರಾಜಕೀಯ ಲಾಭ ತಂದು ಕೊಡುವುದಿಲ್ಲ.
ಕೆ.ಎಸ್. ಈಶ್ವರಪ್ಪ ಮತ್ತು ಸಿದ್ದರಾಮಯ್ಯ ನಡುವಿನ ವ್ಯತ್ಯಾಸವನ್ನೇ ಗಮನಿಸಿ. ಈಶ್ವರಪ್ಪ ಇಡೀ ಜೀವನದುದ್ದಕ್ಕೂ ಉಗ್ರ ಹಿಂದೂ ಎಂದು ಬಿಂಬಿಸಿಕೊಂಡು ಮುಸ್ಲಿಮ್ ವಿರೋಧಿ ರಾಜಕಾರಣ ಮಾಡಿದರು. ಬಿ.ಎಲ್. ಸಂತೋಷ್ ಅವರ ಮಾತು ಕೇಳಿ ಬೈಗುಳದ, ವಾಗ್ದಾಳಿಯ ರಾಜಕಾರಣ ಮಾಡಿದರು. ಸದನದಲ್ಲಿ ಅತ್ಯುತ್ತಮ ಸಂಸದೀಯ ಪಟುವೂ ಆಗಲಿಲ್ಲ. ಮುಖ್ಯಮಂತ್ರಿ ಹುದ್ದೆಯೂ ಗಿಟ್ಟಿಸಲಿಲ್ಲ. ಕುರುಬ ಸಮುದಾಯದ ನಾಯಕನಾಗಿಯೂ ಹೊರಹೊಮ್ಮಲಿಲ್ಲ.
ಆದರೆ ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಜೀವನದುದ್ದಕ್ಕೂ ದ್ವೇಷದ ರಾಜಕಾರಣ ಮಾಡಲಿಲ್ಲ. ದೇವೇಗೌಡರನ್ನು ಹೊರತು ಪಡಿಸಿ ಯಾರನ್ನೂ ವ್ಯಕ್ತಿಗತವಾಗಿ ನಿಂದಿಸಲಿಲ್ಲ. ಸದನದಲ್ಲಿ ಅತ್ಯುತ್ತಮ ಸಂಸದೀಯ ಪಟುವಾಗಿ ಹೊರಹೊಮ್ಮಿದರು. ಕರ್ನಾಟಕದಂಥ ರಾಜ್ಯಕ್ಕೆ ಎರಡು ಬಾರಿ ಮುಖ್ಯಮಂತ್ರಿಯಾದರು. ಕುರುಬ ಸಮುದಾಯದ ಪ್ರೀತಿಯ ನಾಯಕರಾಗಿಯೂ ಬೆಳೆದು ನಿಂತರು.
ಬಸನಗೌಡ ಪಾಟೀಲ್ ಯತ್ನಾಳ್ 1994ರಿಂದ ಇಲ್ಲಿಯವರೆಗೆ ಅತ್ಯುತ್ತಮ ಸಂಸದೀಯ ಪಟುವಾಗಲು ಪ್ರಯತ್ನಿಸಿದ್ದರೆ ರಾಜಕಾರಣದಲ್ಲಿ ಭಿನ್ನ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಿದ್ದರು. ಯಡಿಯೂರಪ್ಪ-ವಿಜಯೇಂದ್ರರ ವ್ಯಕ್ತಿ ದ್ವೇಷ, ಮುಸ್ಲಿಮ್, ದಲಿತ ಸಮುದಾಯಗಳ ದ್ವೇಷದಿಂದಾಗಿ ಬಸನಗೌಡ ಪಾಟೀಲ್ ಯತ್ನಾಳ್ ಜನನಾಯಕನಾಗಿ ರೂಪುಗೊಳ್ಳಲೇ ಇಲ್ಲ. ರಾಜಕೀಯ ವ್ಯಕ್ತಿತ್ವ ನಿಂತಲ್ಲೇ ನಿಂತಿದೆ. ಅಷ್ಟಕ್ಕೂ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಹಿಂದೂ-ಮುಸ್ಲಿಮ್ ಮತ ವಿಭಜನೆಯಿಂದಾಗಲಿ, ಅಭಿವೃದ್ಧಿ ರಾಜಕಾರಣದಿಂದಾಗಲಿ ಗೆಲ್ಲುತ್ತಿಲ್ಲ. ಉಳಿದ ರಾಜಕಾರಣಿಗಳಿಗೆ ಹೋಲಿಸಿದರೆ ಬಸನಗೌಡ ಯತ್ನಾಳ್ ವಿಜಯಪುರದಲ್ಲಿ ಒಂದಷ್ಟು ಕೆಲಸ ಮಾಡಿದ್ದಾರೆ. ಆದರೆ ಅವರ ಗೆಲುವಿನ ಗುಟ್ಟು ಇರುವುದು ಗೋವಾ-ಮುಂಬೈಗೆ ಗುಳೆ ಹೋದ ಮತದಾರರಿಂದ. ಚುನಾವಣೆಯ ಸಂದರ್ಭದಲ್ಲಿ ಗುಳೆ ಹೋದ ಮತದಾರರಿಗೆ ಊಟ, ವಸತಿ, ಬಂದು ಹೋಗುವ ಸಾರಿಗೆ ವ್ಯವಸ್ಥೆ ಮಾಡಿ ಎರಡು ದಿನಕ್ಕೆ ಕರೆಸಿಕೊಳ್ಳುತ್ತಾರೆ. ಆ ಮತದಾರರು ದಲಿತ ಹಿಂದುಳಿದ ಸಮುದಾಯಕ್ಕೆ ಸೇರಿದವರೇ ಆಗಿರುತ್ತಾರೆ. ವಿಜಯಪುರ ನಗರದ ಮಧ್ಯಮ ವರ್ಗದ ಮತದಾರರಿಗೆ ಬಿಜೆಪಿ ಪರ ಒಲವು ಇದ್ದರೂ ಮತಗಟ್ಟೆಗೆ ಬಂದು ಮತ ಚಲಾಯಿಸುವುದಿಲ್ಲ. ಗುಳೆ ಹೋದ ಮತದಾರರೇ ಬಸನಗೌಡ ಪಾಟೀಲರ ಆಸ್ತಿ. ಅದರಿಂದಲೇ ಮತ್ತೆ ಮತ್ತೆ ಗೆಲ್ಲುವ ತಂತ್ರ ಕಂಡುಕೊಂಡಿದ್ದಾರೆ. ಮುಸ್ಲಿಮರನ್ನು, ದಲಿತರನ್ನು, ಸಾಹಿತಿ-ಬುದ್ಧಿಜೀವಿಗಳನ್ನು ಅನಗತ್ಯವಾಗಿ ನಿಂದಿಸಿ ಅವರ ವಿರುದ್ಧ ದ್ವೇಷದ ಮಾತುಗಳನ್ನಾಡಿ ಬಸನಗೌಡರು ತಮ್ಮ ವ್ಯಕ್ತಿತ್ವವನ್ನು ಕುಬ್ಜಗೊಳಿಸಿಕೊಳ್ಳುತ್ತಾರೆ. ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಮೂಲತಃ ಜನಸಂಘದವರು. ಅವರು ಯಾವತ್ತೂ ಮುಸ್ಲಿಮ್, ದಲಿತ ದ್ವೇಷದ ಮಾತುಗಳನ್ನು ಆಡುವುದಿಲ್ಲ. ಅಷ್ಟೇ ಯಾಕೆ ಸ್ವಯಂ ಬಿ.ಎಲ್. ಸಂತೋಷ್ ಅವರೇ ಒಂದು ಬಾರಿಯೂ ಈಶ್ವರಪ್ಪ, ಬಸನಗೌಡ ಮತ್ತು ಪ್ರತಾಪ ಸಿಂಹ ಶೈಲಿಯಲ್ಲಿ ಮುಸ್ಲಿಮ್ ಮತ್ತು ದಲಿತ ದ್ವೇಷಿ ಭಾಷಣ ಮಾಡಿದ ನಿದರ್ಶನ ಸಿಗುವುದಿಲ್ಲ. ಸಂತೋಷ್ ಕಾರ್ಯತಂತ್ರ ರೂಪಿಸುತ್ತಾರೆ. ಬಸನಗೌಡ, ಈಶ್ವರಪ್ಪ, ಪ್ರತಾಪಸಿಂಹ ಅವರ ಮೂಲಕ ದ್ವೇಷದ ರಾಜಕಾರಣಕ್ಕೆ ಅಭಿವ್ಯಕ್ತಿ ಒದಗಿಸುತ್ತಾರೆ. ಸಂಘ ಪರಿವಾರ ಮೂಲದ ಪ್ರಹ್ಲಾದ ಜೋಶಿಯವರು ಯಾವತ್ತೂ ಅನಗತ್ಯವಾಗಿ ಕೂಗುಮಾರಿ ವೇಷ ಧರಿಸಿಲ್ಲ.
ದ್ವೇಷದ ರಾಜಕಾರಣ ಮತ್ತು ಉಗ್ರ ಹಿಂದುತ್ವ ಎಂದರೆ ಕೇವಲ ಮುಸ್ಲಿಮ್ ದ್ವೇಷ ಎಂಬ ಯಾರೋ ಕಲಿಸಿಕೊಟ್ಟ ಪೂರ್ವಾಗ್ರಹಿತ ಮನಸ್ಥಿತಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಹೊರಬರಬೇಕು. ಅಟಲ್ ಬಿಹಾರಿ ವಾಜಪೇಯಿ ಅವರ ಜಾಣ ನಡೆ ಯತ್ನಾಳ್ ಅವರಿಗೆ ಪಾಠ ಕಲಿಸಿಲ್ಲ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ್ದನ್ನು ಅಟಲ್ ಬಿಹಾರಿ ವಾಜಪೇಯಿ ಬದುಕಿದ್ದಿದ್ದರೆ ಖುಷಿ ಪಡುತ್ತಿದ್ದರು. ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತ ರತ್ನ ನೀಡಿ ಖುಷಿ ಪಟ್ಟವರು ಅಟಲ್ ಬಿಹಾರಿ ವಾಜಪೇಯಿ ಅವರು. ದ್ವೇಷ ಅಸೂಯೆಯ ರಾಜಕಾರಣ ಯಾರನ್ನೂ ದಡ ಮುಟ್ಟಿಸಿಲ್ಲ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಹೇಗೆ ದಡ ತಲುಪುತ್ತಾರೆ?







