Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಬಸವ ಸಂಸ್ಕೃತಿ ಮತ್ತು ವೀರಶೈವ-ಲಿಂಗಾಯತರು

ಬಸವ ಸಂಸ್ಕೃತಿ ಮತ್ತು ವೀರಶೈವ-ಲಿಂಗಾಯತರು

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ11 Oct 2025 11:57 AM IST
share
ಬಸವ ಸಂಸ್ಕೃತಿ ಮತ್ತು ವೀರಶೈವ-ಲಿಂಗಾಯತರು

ಮತ್ತೆ ಕಲ್ಯಾಣ, ಬಸವ ಸಂಸ್ಕೃತಿ ಅಭಿಯಾನದಲ್ಲಿ ಬಸವಣ್ಣನವರ ಕನಸಿನ ಧರ್ಮದ ಪರಿಕಲ್ಪನೆಗಳೇ ಸೇರಿಲ್ಲವೆಂದರೆ ಅದು ಹೇಗೆ ನಿಜವಾದ ಅರ್ಥದ ಲಿಂಗಾಯತ ಧರ್ಮ ಎನಿಸಿಕೊಳ್ಳುತ್ತದೆ. ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಲಿಂಗಾಯತ ಒಂದು ಧರ್ಮ ಎನಿಸಿಕೊಳ್ಳುವುದಾದರೆ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಅಪಮಾನ ಮಾಡಿದಂತೆ. ಲಿಂಗಾಯತ ಧರ್ಮ ಪ್ರತಿಪಾದಕರಿಗೂ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಬೇಕು. ವೀರಶೈವ ಲಿಂಗಾಯತ ಮಹಾಸಭಾದವರಿಗೂ ಅದೇ ಬೇಕು. ಪ್ರತ್ಯೇಕ ಧರ್ಮದ ಬೇಡಿಕೆಗೆ ಬಸವಣ್ಣನವರ ಕನಸುಗಳ ಲೇಪನ ಇಲ್ಲದೆ ಹೋದರೆ ಆ ಧರ್ಮ ಶಿಕ್ಷಣ ವ್ಯಾಪಾರಿಗಳಿಗೆ ತಿಜೋರಿ ತುಂಬಿಸುವ ಒಂದು ವ್ಯವಸ್ಥೆಯಾಗುತ್ತದೆ.

‘‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ

ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ

ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ

ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ

ಎನ್ನನೇತಕ್ಕರಿಯರಿ ಕೂಡಲಸಂಗಯ್ಯ’’

-ಬಸವಣ್ಣ

ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಡಾ. ಸಿ.ಎಸ್. ದ್ವಾರಕಾನಾಥ್ ಅವರು ಅಧ್ಯಕ್ಷರಾಗಿದ್ದಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ತೀರ್ಮಾನವಾಗಿತ್ತು. ಸಮೀಕ್ಷೆ ಕೈಗೊಳ್ಳಲು ಸಿದ್ಧತೆ ನಡೆಸುತ್ತಿರುವಾಗಲೇ ಅವರ ಅಧಿಕಾರಾವಧಿ ಮುಗಿದಿತ್ತು. ದ್ವಾರಕಾನಾಥ್ ಅವರು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಕಾಲಾವಧಿಯಲ್ಲಿ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇಪ್ಪತ್ತು ತಿಂಗಳಲ್ಲಿ ಆ ಸರಕಾರ ಬಿದ್ದು ಹೋಯಿತು. ನಂತರ ಬಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಡಾ. ಸಿ.ಎಸ್. ದ್ವಾರಕಾನಾಥ್ ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ದೊರೆಯದೆ ಇದ್ದುದರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನನೆಗುದಿಗೆ ಬಿತ್ತು. 2013ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜು ಅವರನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಆಗ ಎಚ್. ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅವರ ವ್ಯಾಪ್ತಿಯಲ್ಲೇ ಇತ್ತು. ಆಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಗವೇನೋ ಪಡೆದುಕೊಂಡಿತ್ತು. ಆದರೆ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಅಧಿಕೃತವಾಗಿ ಸರಕಾರಕ್ಕೆ ಸಲ್ಲಿಸುವ ಮೊದಲೇ ಅಂಕಿ-ಅಂಶಗಳು ಸೋರಿಕೆಯಾದವು.

ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳು ತಮ್ಮವರ ಸಂಖ್ಯಾಬಲ ಕುರಿತು ತಕರಾರು ತೆಗೆದವು. ಕಾಂತರಾಜು ಅವರು ಸರಕಾರಕ್ಕೆ ವರದಿಯನ್ನು ಸಲ್ಲಿಸಲೇ ಇಲ್ಲ. ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜಯಪ್ರಕಾಶ್ ಹೆಗ್ಡೆಯವರನ್ನು ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತು. 2023ರಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಜಯಪ್ರಕಾಶ್ ಹೆಗ್ಡೆಯವರ ಅಧಿಕಾರಾವಧಿಯನ್ನು ವಿಸ್ತರಿಸಿದರು. ಹೆಗ್ಡೆಯವರು ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಸಿದ್ದರಾಮಯ್ಯ ಸರಕಾರಕ್ಕೆ ಸಲ್ಲಿಸಿದರು. ಸಚಿವ ಸಂಪುಟದಲ್ಲಿ ಚರ್ಚೆಯೂ ನಡೆಯಿತು. ವರದಿ ಅವೈಜ್ಞಾನಿಕವಾಗಿದೆಯೆಂದೂ, ಹತ್ತು ವರ್ಷಗಳ ಹಳೆಯ ವರದಿಯೆಂದೂ ಕಾಂಗ್ರೆಸ್ ಪಕ್ಷದ ವೀರಶೈವ -ಲಿಂಗಾಯತ ಹಾಗೂ ಒಕ್ಕಲಿಗ ಮುಖಂಡರು ಬಹಿರಂಗವಾಗಿಯೇ ವಿರೋಧಿಸತೊಡಗಿದರು. ಎಲ್ಲರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಳ್ಳುತ್ತಾರೆಂದು ಈ ನಾಡಿನ ಅಸಂಖ್ಯಾತ ಶೋಷಿತ ಸಮುದಾಯ ಬಲವಾಗಿ ನಂಬಿಕೊಂಡಿತ್ತು.

ಆದರೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಜಯಪ್ರಕಾಶ್ ಹೆಗ್ಡೆಯವರು ಸಲ್ಲಿಸಿದ ವರದಿ ಹತ್ತು ವರ್ಷಗಳಷ್ಟು ಹಳೆಯದು. ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂದು ಫರ್ಮಾನು ಹೊರಡಿಸಿತು. ಕಾಂಗ್ರೆಸ್ ಹೈಕಮಾಂಡ್ ಆ ನಿರ್ಧಾರಕ್ಕೆ ಬರಲು ವೀರಶೈವ-ಲಿಂಗಾಯತರು ಮತ್ತು ಒಕ್ಕಲಿಗರ ಶಕ್ತಿಪ್ರದರ್ಶನ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಜಯಪ್ರಕಾಶ್ ಹೆಗ್ಡೆ ವರದಿ ವಿರೋಧಿಸಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಿದರು. ಗುರು ವಿರಕ್ತರು ಮಾತ್ರವಲ್ಲ ಪಕ್ಷಾತೀತವಾಗಿ ವೀರಶೈವ ಲಿಂಗಾಯತ ಸಮುದಾಯದ ಸಮಸ್ತ ನಾಯಕರು ಭಾಗವಹಿಸಿದ್ದರು. ಜಗದ್ಗುರುಗಳ ಜೊತೆಗೆ ಎಲ್ಲರೂ ವೇದಿಕೆ ಹಂಚಿಕೊಂಡಿದ್ದರು. ಒಕ್ಕಲಿಗ ಸಮುದಾಯದವರು ಒಳಪಂಗಡದ ಭೇದ ಮರೆತು ಸ್ವಾಮೀಜಿಗಳನ್ನೂ ಒಳಗೊಂಡು ಪಕ್ಷಾತೀತವಾಗಿ ಜಯಪ್ರಕಾಶ್ ಹೆಗ್ಡೆ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದರು. ಪ್ರಬಲ ಸಮುದಾಯಗಳ ಒಗ್ಗಟ್ಟಿನ ವಿರೋಧದ ಕಾರಣಕ್ಕೆ ನೂರಾರು ಕೋಟಿ ಹಣ ಖರ್ಚು ಮಾಡಿ ಸಿದ್ಧಪಡಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಕಸದ ಬುಟ್ಟಿ ಸೇರಿತು.

ಈಗ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿರುವ ಆರ್. ಮಧುಸೂಧನ್ ಅವರು ಸರಕಾರದೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ಅಂತೂ ಇಂತೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಎಲ್ಲ ಸಮುದಾಯಗಳ ಮುಖಂಡರು ತಮ್ಮ ರಾಜಕೀಯ ಅನುಕೂಲಕ್ಕೆ ಪೂರಕವಾಗುವಂತೆ ಧರ್ಮ, ಜಾತಿ, ಉಪಜಾತಿಗಳ ಹೆಸರನ್ನು ಬರೆಸುವಂತೆ ಪ್ರಚಾರ ಮಾಡುತ್ತಿದ್ದಾರೆ.ಎಲ್ಲರಿಗೂ ಮಿಗಿಲಾಗಿ ವೀರಶೈವ ಲಿಂಗಾಯತ ಮತ್ತು ಲಿಂಗಾಯತರ ಬಣ ಬಡಿದಾಟ ತಾರಕಕ್ಕೆ ತಲುಪಿದೆ. ವೀರಶೈವ ಲಿಂಗಾಯತರಲ್ಲಿ ನಾಲ್ಕು ಗುಂಪುಗಳಾಗಿ ತಮ್ಮದೇ ಆದ ಅನುಕೂಲಸಿಂಧು ಸಿದ್ಧಾಂತಗಳನ್ನು ತೇಲಿ ಬಿಡುತ್ತಿದ್ದಾರೆ. ಪಂಚ ಪೀಠಗಳ ಜಗದ್ಗುರುಗಳನ್ನೊಳಗೊಂಡ ಬೃಹತ್ ಸಮಾವೇಶ ಹುಬ್ಬಳ್ಳಿಯಲ್ಲಿ ನಡೆದರೆ, ಬಸವ ಸಂಸ್ಕೃತಿ ಅಭಿಯಾನದ ಶಕ್ತಿ ಪ್ರದರ್ಶನ ಬೆಂಗಳೂರಿನಲ್ಲಿ ಜರುಗಿತು. ಹುಬ್ಬಳ್ಳಿ ಸಮಾವೇಶದಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಭಾಗವಹಿಸಿದ್ದರು. ಅವರ ಜೊತೆಗೆ ಬಿಜೆಪಿ ಮುಖಂಡರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ವೇದಿಕೆ ಹಂಚಿಕೊಂಡಿದ್ದರು. ಆ ಸಮಾವೇಶದಲ್ಲೂ ಧರ್ಮ ಮತ್ತು ಜಾತಿಗಳ ಹೆಸರು ಬರೆಯಿಸುವುದರ ಕುರಿತು ಎರಡು ಅಭಿಪ್ರಾಯಗಳು ವ್ಯಕ್ತವಾದವು. ಒಂದು, ಬಿಜೆಪಿಗೆ ಅನುಕೂಲವಾಗುವ ಅಭಿಪ್ರಾಯ: ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂಬುದು. ಎರಡು: ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿರುವ ವೀರಶೈವ ಲಿಂಗಾಯತ ಮಹಾಸಭಾದ ಈಶ್ವರ್ ಖಂಡ್ರೆಯವರ ಅಭಿಪ್ರಾಯ. ಇವರ ಅಭಿಮತದಂತೆ: ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬಾರದು. ಇತರ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ನಮೂದಿಸಬೇಕು. ಜಾತಿ ಉಪಜಾತಿಗಳನ್ನು ಯಥಾವತ್ತಾಗಿ ಬರೆಸಬೇಕು ಎಂಬುದು ಮಹಾಸಭಾದ ನಿಲುವು. ಬಸವ ಸಂಸ್ಕೃತಿ ಅಭಿಯಾನ ಆಯೋಜಿಸಿದವರು ಲಿಂಗಾಯತ ಮಹಾಸಭಾದವರು ಮತ್ತು ಅವರ ಬೆಂಬಲಿತ ಸ್ವಾಮೀಜಿಗಳು. ಅವರ ನಿಲುವು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸದೆ, ಇತರ ಕಾಲಂನಲ್ಲಿ ಲಿಂಗಾಯತ ಧರ್ಮ ಎಂದು ಬರೆಸಬೇಕು. ಜಾತಿ ಮತ್ತು ಉಪಜಾತಿಗಳು ಯಥಾವತ್ ಬರೆಸಬೇಕು ಎಂಬುದು. ಈ ಮೂರೂ ಅಭಿಪ್ರಾಯಗಳಿಗೆ ಹೊರತಾದ ವೀರಶೈವ ಲಿಂಗಾಯತರ ಇನ್ನೊಂದು ಗುಂಪಿನವರು: ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಜಾತಿ ಉಪಜಾತಿ ಕಾಲಂನಲ್ಲಿ ಎಲ್ಲೂ ವೀರಶೈವ ಲಿಂಗಾಯತ ನಮೂದಿಸದೆ ಕೇವಲ ಉಪಜಾತಿ ಹೆಸರನ್ನು ಮಾತ್ರ ಬರೆಸಬೇಕು ಎಂಬುದು ಈ ಗುಂಪಿನವರ ನಿಲುವು.

ಕರ್ನಾಟಕದ ವೀರಶೈವ ಲಿಂಗಾಯತರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ನಾಲ್ಕು ವಿಭಾಗಗಳಲ್ಲಿ ಹಂಚಿ ಹೋಗಿದ್ದಾರೆ. ಅದಕ್ಕೆ ಅವರದೇ ಆದ ಅನುಕೂಲಸಿಂಧು ಸಮರ್ಥನೆಗಳಿವೆ. ಲಿಂಗಾಯತ ಮಹಾಸಭಾದವರು ಸೈದ್ಧಾಂತಿಕ ಕಾರಣವನ್ನು ಮುಂದು ಮಾಡಿದ್ದಾರೆ. ಬಿಜೆಪಿಯ ವೀರಶೈವ ಲಿಂಗಾಯತ ಮುಖಂಡರಿಗೆ ತಾತ್ವಿಕವಾಗಿ ಲಿಂಗಾಯತರು ಹಿಂದೂಗಳಲ್ಲ ಎಂಬ ನಿಲುವಿನಲ್ಲಿ ನಂಬಿಕೆಯಿಲ್ಲ. ಯಾಕೆಂದರೆ ಆರೆಸ್ಸೆಸ್ ಪ್ರಣೀತ ಹಿಂದೂ ಧರ್ಮದ ಸಂಖ್ಯಾ ಬಲ ವೀರಶೈವ ಲಿಂಗಾಯತರು ಹೊರಗುಳಿಯುವಿಕೆಯಿಂದ ಕಡಿಮೆಯಾಗಬಾರದು. ವೀರಶೈವ ಲಿಂಗಾಯತರು ಹಿಂದೂಗಳಲ್ಲ ಎಂದರೆ, ಆರೆಸ್ಸೆಸ್ ಸಿದ್ಧಾಂತವನ್ನೇ ಧಿಕ್ಕರಿಸಿ ನಿಂತ ಭಾವ ಮೂಡುತ್ತದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದವರಿಗೆ ಧರ್ಮ ಸಂಕಟ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಲು ಸೂಚಿಸಿದರೆ, ಆರೆಸ್ಸೆಸ್ ಪ್ರಣೀತ ಹಿಂದೂ ಧರ್ಮವನ್ನು ಬೆಂಬಲಿಸಿದಂತಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬಾರದು ಎಂದು ಭಾವಿಸಿ ಇತರ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸಲು ಸೂಚಿಸಿದ್ದಾರೆ. ಜಾತಿ ಉಪಜಾತಿ ಕಾಲಂನಲ್ಲಿ ಯಥಾವತ್ ಬರೆಸಿದರೆ ನಷ್ಟ ಇಲ್ಲ ಎಂಬುದು ಈಶ್ವರ್ ಖಂಡ್ರೆಯವರ ತರ್ಕ. ಆದರೆ ನಾಲ್ಕನೇ ಗುಂಪಿನವರ ವಾಸ್ತವವಾದಿ ನಿಲುವು ವೀರಶೈವ ಲಿಂಗಾಯತರ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಸಾಮರ್ಥ್ಯ ಪಡೆದಿದೆ. ಈ ಗುಂಪಿಗೆ ಸೇರಿದವರು, ಹನ್ನೆರಡನೇ ಶತಮಾನದ ಬಸವಾದಿ ಶರಣರ ಚಳವಳಿಯ ಕಾರಣಕ್ಕೆ ಲಿಂಗಾಯತ ಸಮುದಾಯದ ಭಾಗವಾದವರು. ತಳಸಮುದಾಯಕ್ಕೆ ಸೇರಿದ ಕಾಯಕ ಜೀವಿಗಳು. ಬಸವಣ್ಣನವರ ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವ ನಂಬಿಕೊಂಡು ಲಿಂಗ ಧರಿಸಿದವರು. ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹಾರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಯ್ಯ, ನುಲಿಯ ಚೆಂದಯ್ಯ, ವೀರ ಗೊಲ್ಲಾಳ (ಕುರಿ ಕಾಯುವ ವೃತ್ತಿ), ಉರಿಲಿಂಗ ಪೆದ್ದಿ, ಪುಣ್ಯಸ್ತ್ರೀ ಕಾಳವ್ವೆ, ಮೇದರ ಕೇತಯ್ಯ, ಮೋಳಿಗೆ ಮಾರಯ್ಯ, ಲದ್ದೆಯ ಸೋಮಯ್ಯ ಸೇರಿದಂತೆ ಅಸಂಖ್ಯಾತ ತಳಸಮುದಾಯದ ಕಾಯಕ ಜೀವಿಗಳ ಸಂತತಿ ನಡೆ ನುಡಿಯಲ್ಲಿ ಲಿಂಗವಂತರಾದರೂ ವೀರಶೈವ ಲಿಂಗಾಯತ ಒಕ್ಕೂಟದಿಂದ ದೂರ ಸರಿಯುತ್ತಿದ್ದಾರೆ. ಹಿಂದೂ ಹಡಪದ, ಹಿಂದೂ ಜೇಡರ, ಹಿಂದೂ ಕುಂಬಾರ, ಹಿಂದೂ ಮೇದಾರ, ಹಿಂದೂ ಸಮಗಾರ, ಹಿಂದೂ ಡೋಹಾರ ಎಂದು ಬರೆಸುವುದರಲ್ಲಿ ಅವರಿಗೆ ಮೀಸಲಾತಿಯ ಅನುಕೂಲಗಳಿವೆ.

ತಳಸಮುದಾಯದ ಕಾಯಕ ಜೀವಿಗಳಿಗೆ ಬಸವಣ್ಣ ಲಿಂಗವಂತರನ್ನಾಗಿ ಮಾಡಿ ಸಾಮಾಜಿಕ ಸ್ಥಾನಮಾನವೇನೋ ನೀಡಿದರು. ಆದರೆ ಸ್ವಾತಂತ್ರ್ಯಾ ನಂತರದ ಕರ್ನಾಟಕದಲ್ಲಿ ವೀರಶೈವ ಲಿಂಗಾಯತರಲ್ಲಿನ ಬೆರಳೆಣಿಕೆಯ ಉಪಜಾತಿಗಳಾದ ಬಣಜಿಗರು, ಪಂಚಮಸಾಲಿ, ಕುಡು ಒಕ್ಕಲಿಗರು, ರೆಡ್ಡಿ ಲಿಂಗಾಯತರು, ಸಾದ ಲಿಂಗಾಯತರು, ಗಾಣಿಗ ಲಿಂಗಾಯತರು ಮಾತ್ರ ರಾಜಕೀಯ ಅವಕಾಶ ಪಡೆದರು. ಅಷ್ಟು ಮಾತ್ರವಲ್ಲ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮೇಲುಸ್ತರದಲ್ಲಿ ಗುರುತಿಸಿಕೊಳ್ಳುವ ಅವಕಾಶ ಪಡೆದರು. ತಳಸಮುದಾಯಕ್ಕೆ ಸೇರಿದ್ದ ಇನ್ನುಳಿದ ವೀರಶೈವ ಲಿಂಗಾಯತರಲ್ಲಿನ ಉಪಜಾತಿಗಳು ಆಧುನಿಕ ಕರ್ನಾಟಕದಲ್ಲಿ ಕಡೆಗಣನೆಗೆ ಒಳಗಾದರು. ಭಾವನಾತ್ಮಕವಾಗಿ ವೀರಶೈವ ಲಿಂಗಾಯತರೊಂದಿಗೆ ಗುರುತಿಸಿಕೊಂಡಿದ್ದ ಅವರು ನಿಜಲಿಂಗಪ್ಪ, ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ್ ಮುಂತಾದವರ ರಾಜಕಾರಣಕ್ಕೆ ವೋಟುಗಳಾಗಿ ಬಳಕೆಯಾದರು. ಕಂಬಾರ, ಕುಂಬಾರ, ನೇಕಾರ, ಹಡಪದ, ಹೂಗಾರ ಸೇರಿದಂತೆ ಎಂಭತ್ತಕ್ಕೂ ಹೆಚ್ಚಿನ ವೀರಶೈವ ಲಿಂಗಾಯತರಲ್ಲಿನ ಉಪಜಾತಿಗಳು ಸ್ಥಾನ ಮಾನದ ಲೆಕ್ಕದಲ್ಲಿ ಲಿಂಗಾಯತರೆಂದು ಪರಿಗಣಿಸಲಿಲ್ಲ. ಊರ ಗೌಡನ ಊಳಿಗವಾಗಿಯೇ ಬದುಕು ಸವೆಸಿದರು. ಕಂಬಾರ, ಕುಂಬಾರ, ಹಡಪದರ ಮಾತು ಬೇಡ ಸ್ವಾತಂತ್ರ್ಯ ಲಭಿಸಿ ದಶಕ ಕಳೆದರೂ ಸಾದರ ಲಿಂಗಾಯತರನ್ನು ಕನಿಷ್ಠವಾಗಿ ಕಾಣುತ್ತಿದ್ದರು. ಸಿರಿಗೇರಿ ಮಠದ ಶಿವಕುಮಾರ ಸ್ವಾಮಿಗಳು ಛಲದಿಂದ ಸಾದರ ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಎತ್ತಿ ಹಿಡಿಯದೆ ಹೋಗಿದ್ದರೆ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಸಾದರು -ಮಾದರು ಎಂದು ಕುಹಕವಾಡುತ್ತಿದ್ದರು. ಆ ಕುಹಕದ ಫಲವಾಗಿಯೇ ಎಸ್. ನಿಜಲಿಂಗಪ್ಪನವರು ಚಿತ್ರದುರ್ಗ ಜಿಲ್ಲೆಯಲ್ಲೇ ಹೀನಾಯವಾಗಿ ಸೋತಿದ್ದು.

ಹಾನಗಲ್ ಕುಮಾರಸ್ವಾಮಿಗಳು ಅಖಿಲಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಮೇಲೆ ಬಸವಾದಿ ಶರಣರು ಮತ್ತು ವಚನ ಸಾಹಿತ್ಯವನ್ನು ಅಪಾರವಾಗಿ ಗೌರವಿಸಿದರು. ಪಂ. ಪಂಚಾಕ್ಷರಿ ಗವಾಯಿಗಳಿಗೆ ವಚನಗಳನ್ನು ಹಾಡಿನ ಮೂಲಕ ಜನಮನ ತಲುಪಿಸುವ ಹೊಣೆ ಹೊರಿಸಿದರು. ವೀರಶೈವ ಲಿಂಗಾಯತರಲ್ಲಿನ ಬಡವರ ಮಕ್ಕಳಿಗೆ ಅನುಕೂಲವಾಗಲೆಂದು ಮಠ ಮಾನ್ಯಗಳಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹ ದೊರೆಯುವಂತೆ ನೋಡಿಕೊಂಡರು. ಆದರೆ ಬಸವಣ್ಣನವರ ಕಾರಣಕ್ಕೆ ಲಿಂಗವಂತರಾಗಿಯೂ ಜಾತಿ ಕಳಂಕದಿಂದ ಇವ ನಮ್ಮವ ಇವ ನಮ್ಮವ ಎಂದೆನಿಸದ ಸಂದಿಗ್ಧ ಸ್ಥಿತಿ ತಳಸಮುದಾಯದ ವೀರಶೈವ ಲಿಂಗಾಯತ ಉಪಜಾತಿಗಳಿಗೆ ಸಮುದಾಯವೇ ಬಿಸಿ ತುಪ್ಪವಾಗಿ ಪರಿಣಮಿಸಿತು.

ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು ಅವರು ವೀರಶೈವ ಲಿಂಗಾಯತರಲ್ಲಿನ ತಳ ಸಮುದಾಯಗಳ ಉಪಜಾತಿಗಳಿಗೆ ಅಭಿನವ ಬಸವಣ್ಣ ಎನಿಸಿಕೊಂಡರು. ಅರಸು ಏಕಕಾಲಕ್ಕೆ ಫ್ಯೂಡಲ್ ಲಿಂಗಾಯತರ ಪ್ರಾಬಲ್ಯ ಕುಗ್ಗಿಸಿ ವೀರಶೈವ ಲಿಂಗಾಯತರಲ್ಲಿನ ತಳ ಸಮುದಾಯಗಳ ಉಪಜಾತಿಗಳಿಗೆ ಮೀಸಲಾತಿ ಎಂಬ ಸಂಜೀವಿನಿ ನೀಡಿ ತಲೆ ಎತ್ತಿ ನಡೆಯುವಂತೆ ಮಾಡಿದರು. ಆ ಮೂಲಕ ಜಾಗೃತರಾದ ಬಹು ದೊಡ್ಡ ಮಧ್ಯಮ ವರ್ಗ ಸೃಷ್ಟಿಯಾಯಿತು. ವೀರಶೈವ ಲಿಂಗಾಯತರಲ್ಲಿನ ತಳಸಮುದಾಯದ ಉಪಜಾತಿಗಳು ಶಿಕ್ಷಣ ಪಡೆದು ಸಾಮಾಜಿಕವಾಗಿ, ಆರ್ಥಿಕವಾಗಿ ಬಲ ಪಡೆದವು. ಆದರೆ, ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಬಸವಣ್ಣನವರ ಕಾರಣಕ್ಕೆ ಲಿಂಗಾಯತ ಸಂಪ್ರದಾಯ ಆಚರಿಸುತ್ತಿರುವ ಸಮಗಾರ, ಡೋಹಾರ ಮುಂತಾದ ಅಸ್ಪಶ್ಯ ಸಮುದಾಯಗಳು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದಿದ್ದರಿಂದ ಮೀಸಲು ಕ್ಷೇತ್ರಗಳಲ್ಲಿ ಗೆದ್ದು ಶಾಸನ ಸಭೆ ಪ್ರವೇಶ ಮಾಡಲು ಸಾಧ್ಯವಾಗಿದೆ. ಆದರೆ, ಕಂಬಾರ, ಕುಂಬಾರ, ಹಡಪದ, ಬಣಗಾರ, ಶಿವ ಸಿಂಪಿಯಂಥ ಕಡಿಮೆ ಸಂಖ್ಯಾ ಬಲದ ಮತ್ತು ಆರ್ಥಿಕ ಬಲವಿಲ್ಲದ ವೀರಶೈವ ಲಿಂಗಾಯತರಲ್ಲಿನ ಉಪಜಾತಿಗಳು ಶಾಸನ ಸಭೆ ಪ್ರವೇಶದ ಕನಸು ಕಾಣಲು ಸಾಧ್ಯವಾಗಿಲ್ಲ. ಉತ್ತರ ಕರ್ನಾಟಕದ ವೀರಶೈವ ಲಿಂಗಾಯತ ಗಾಣಿಗ ಸಮುದಾಯದವರು ಮೂಲತಃ ಕಾಯಕ ಜೀವಿಗಳು. ದೇವರಾಜ ಅರಸು ಬರುವವರೆಗೂ ಆ ಸಮುದಾಯದಿಂದ ಒಬ್ಬರೂ ಶಾಸಕರಾಗಿರಲಿಲ್ಲ. ಈಗ ಆ ಸಮುದಾಯ ಆರ್ಥಿಕ ಬಲ ಪಡೆದ ಕಾರಣಕ್ಕೆ ರಾಜಕೀಯ ಅವಕಾಶ ಪಡೆಯುವಂತಾಗಿದೆ.

ವೀರಶೈವ ಲಿಂಗಾಯತರು ಹದಿನೈದನೇ ಶತಮಾನದ ಹೊತ್ತಿಗೆ ಬಸವಣ್ಣನವರನ್ನು ಸಂಪೂರ್ಣ ಮರೆತು ಪಟ್ಟಭದ್ರ ಜಾತಿವಂತರಾಗಿದ್ದರು. ಹಳೆ ಮೈಸೂರು ಭಾಗದಲ್ಲಿ ಮಂಟೇಸ್ವಾಮಿ ಮತ್ತವರ ಶಿಷ್ಯರು ಬಸವ ಧರ್ಮದ ಕಹಳೆ ಊದುತ್ತಾರೆ. ಮಂಟೇಸ್ವಾಮಿ ಶಿಷ್ಯರಾದ ರಾಚಪ್ಪಾಜಿ, ಸಿದ್ದಪ್ಪಾಜಿ ಮತ್ತು ನೀಲಗಾರರ ಪರಂಪರೆಯ ಆಕ್ರೋಶಕ್ಕೆ ಸ್ಪಂದಿಸಿದ್ದರೆ ಲಿಂಗಾಯತ ಎಂಬುದು ನಿಜವಾದ ಅರ್ಥದಲ್ಲಿ ಧರ್ಮವಾಗಿ ವಿಸ್ತಾರ ಪಡೆಯುತ್ತಿತ್ತು.

ಮತ್ತೆ ಕಲ್ಯಾಣ ಮತ್ತು ಬಸವ ಸಂಸ್ಕೃತಿ ಅಭಿಯಾನ ನಡೆಸಿದ, ಲಿಂಗಾಯತ ಧರ್ಮವನ್ನು ವಿಸ್ತರಿಸುವ ಹೊಣೆ ಹೊತ್ತವರ ಕಾರ್ಯ ಸೂಚಿಯಲ್ಲಿ ಬಸವ ತತ್ವದ ಮುಖ್ಯ ಅಂಶಗಳು ಮಾಯವಾಗಿವೆ. ಜಾತಿಗೆ ಚಲನೆಯಿಲ್ಲ. ಅದು ಸ್ಥಗಿತ ಸ್ಥಿತಿಯ ಪ್ರತೀಕ. ಆದರೆ ಧರ್ಮ ಚಲನಶೀಲವಾದದ್ದು. ಅದು ನಿರಂತರವಾಗಿ ಎಲ್ಲರನ್ನು ಒಳಗೊಳ್ಳುತ್ತಲೇ ಇರಬೇಕು. ಕ್ರಿಶ್ಚಿಯನ್ ಧರ್ಮ ಜಗತ್ತಿನ ತುಂಬಾ ವ್ಯಾಪಿಸಿದ್ದು ಒಳಗೊಳ್ಳುವ ಗುಣದಿಂದ.

ಮತ್ತೆ ಕಲ್ಯಾಣ ಮತ್ತು ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಸ್ವಾಮೀಜಿಗಳು ವರ್ಣ ಸಂಕರ-ಅಂತರ್ ಜಾತಿ ವಿವಾಹ, ಕಾಯಕ ಮತ್ತು ದಾಸೋಹದ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರು. ಮೌಢ್ಯ, ಕಂದಾಚಾರದ ಜಾಗದಲ್ಲಿ ವೈಜ್ಞಾನಿಕ, ವೈಚಾರಿಕ, ವಿಚಾರಧಾರೆಗಳನ್ನು ಬಿತ್ತುವುದು ನಿಜವಾದ ಲಿಂಗಾಯತ ಧರ್ಮದ ಆಶಯ. ಬ್ರಾಹ್ಮಣ ಸಮುದಾಯದ ಮಧುವರಸರ ಮಗಳು ಲಾವಣ್ಯ ಮತ್ತು ಸಮಗಾರ ಹರಳಯ್ಯನವರ ಮಗ ಶೀಲವಂತರ ನಡುವಿನ ಮದುವೆ ಜಾತಿ ವ್ಯವಸ್ಥೆಗೆ ದೊಡ್ಡ ಸವಾಲಾಗಿತ್ತು. ವೈದಿಕ ಶಾಹಿಯ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಅದೇ ಕಲ್ಯಾಣ ಕ್ರಾಂತಿಗೆ ಕಾರಣವಾಗಿತ್ತು. ಶೀಲವಂತನ ಕಣ್ಣುಗಳನ್ನು ಕಿತ್ತು ಎಳೆಹೊಟ್ಟೆ ಶಿಕ್ಷೆ ವಿಧಿಸಲಾಗಿತ್ತು. ಬಸವಣ್ಣ ಸಂಕರಗೊಂಡ ಜಾತ್ಯತೀತ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಮತ್ತೆ ಕಲ್ಯಾಣ, ಬಸವ ಸಂಸ್ಕೃತಿ ಅಭಿಯಾನದಲ್ಲಿ ಬಸವಣ್ಣನವರ ಕನಸಿನ ಧರ್ಮದ ಪರಿಕಲ್ಪನೆಗಳೇ ಸೇರಿಲ್ಲವೆಂದರೆ ಅದು ಹೇಗೆ ನಿಜವಾದ ಅರ್ಥದ ಲಿಂಗಾಯತ ಧರ್ಮ ಎನಿಸಿಕೊಳ್ಳುತ್ತದೆ. ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಲಿಂಗಾಯತ ಒಂದು ಧರ್ಮ ಎನಿಸಿಕೊಳ್ಳುವುದಾದರೆ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಅಪಮಾನ ಮಾಡಿದಂತೆ. ಲಿಂಗಾಯತ ಧರ್ಮ ಪ್ರತಿಪಾದಕರಿಗೂ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಬೇಕು. ವೀರಶೈವ ಲಿಂಗಾಯತ ಮಹಾಸಭಾದವರಿಗೂ ಅದೇ ಬೇಕು. ಪ್ರತ್ಯೇಕ ಧರ್ಮದ ಬೇಡಿಕೆಗೆ ಬಸವಣ್ಣನವರ ಕನಸುಗಳ ಲೇಪನ ಇಲ್ಲದೆ ಹೋದರೆ ಆ ಧರ್ಮ ಶಿಕ್ಷಣ ವ್ಯಾಪಾರಿಗಳಿಗೆ ತಿಜೋರಿ ತುಂಬಿಸುವ ಒಂದು ವ್ಯವಸ್ಥೆಯಾಗುತ್ತದೆ.

ವೀರಶೈವ ಲಿಂಗಾಯತರಲ್ಲಿನ ತಳಸಮುದಾಯಗಳ ಉಪಜಾತಿಗಳನ್ನು ಕಳೆದ ಎಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ಕಡೆಗಣಿಸಿದ್ದರ ಫಲವಾಗಿ ಅವರ ಸಂಖ್ಯಾ ಬಲ ಕುಸಿಯುತ್ತಿದೆ. ವೀರಶೈವ ಲಿಂಗಾಯತರಲ್ಲಿನ ರೆಡ್ಡಿ ಸಮುದಾಯ ರಾಜಕೀಯವಾಗಿ ಆರ್ಥಿಕವಾಗಿ ಬಲಶಾಲಿಯಾದದ್ದು. ರೆಡ್ಡಿ ಸಮುದಾಯವೇ ಮೀಸಲಾತಿ ಸೌಲಭ್ಯ(3ಎ ಪ್ರಮಾಣ ಪತ್ರಕ್ಕಾಗಿ) ಪಡೆಯಲು ಲಿಂಗಾಯತವನ್ನು ಮರೆಮಾಚುತ್ತಿರುವಾಗ ಉಳಿದ ಶೋಷಿತ ಉಪಜಾತಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವೀರಶೈವ ಲಿಂಗಾಯತರಿಂದ ದೂರ ಹೋಗುತ್ತಿರುವುದರಲ್ಲಿ ಯಾವ ತಪ್ಪು ಕಾಣದು. ಲಿಂಗಾಯತರಲ್ಲಿನ ಶೋಷಿತ ಉಪಜಾತಿಗಳನ್ನು ಕಡೆಗಣಿಸಿ, ಬಸವ ತತ್ವದ ಮೂಲ ಆಶಯವಾದ ವರ್ಣ ಸಂಕರ ಅರ್ಥಾತ್ ಅಂತರ್ ಜಾತಿ ವಿವಾಹದಂತಹ ಕೇಂದ್ರ ಕಾಳಜಿ ಮರೆತು ಲಿಂಗಾಯತ ಧರ್ಮದ ಕುರಿತು ಮಾತನಾಡಿದರೆ ಬಸವ ಸಂಸ್ಕೃತಿಗೆ ವಂಚಿಸಿದಂತೆ. ಬಣಜಿಗ, ಪಂಚಮಸಾಲಿ, ಕುಡು ಒಕ್ಕಲಿಗ, ಸಾದರು, ಗಾಣಿಗರು, ರೆಡ್ಡಿಗಳು -ವೀರಶೈವ ಲಿಂಗಾಯತ ಉಪಜಾತಿಗಳಲ್ಲಿನ ಪ್ರಮುಖ ಫಲಾನುಭವಿಗಳು. ಉಳಿದ ಉಪಜಾತಿಗಳು ಅಂಚಿಗೆ ತಳ್ಳಲ್ಪಟ್ಟಿವೆ. ಅದರ ಪರಿಣಾಮವಾಗಿ ವೀರಶೈವ ಲಿಂಗಾಯತ ಸಂಖ್ಯಾ ಬಲ ಸಹಜವಾಗಿಯೇ ಕುಸಿದಿದೆ. ಮುಂದೆಯೂ ಕುಸಿಯುತ್ತದೆ. ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವ ಕಾಯಾ ವಾಚಾ ಮನಸಾ ಆಚರಣೆಯಲ್ಲಿ ತಂದರೆ ಆ ಸಮುದಾಯಕ್ಕೆ ಮೀಸಲಾತಿ ಅಗತ್ಯವೇ ಬೀಳುವುದಿಲ್ಲ. ವೀರಶೈವ ಲಿಂಗಾಯತರಲ್ಲಿನ ಪ್ರತ್ಯೇಕಗೊಂಡ ನಾಲ್ಕೂ ಗುಂಪುಗಳು ಬಸವಣ್ಣನವರ ನಿಜ ವಾರಸುದಾರರನ್ನು ಮರೆತು ಸ್ವಾರ್ಥ ರಾಜಕಾರಣದಲ್ಲಿ ನಿರತವಾಗಿವೆ. ಬಸವ ಕಾಳಜಿ ಎಂಬುದು ಕಿಂಚಿತ್ ಯಾರಲ್ಲೂ ಉಳಿದಿಲ್ಲ.

share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X