Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಬೆಂಗಳೂರು ಫುಟ್‌ಪಾತ್ ತೆರವು: ಪರ-ವಿರೋಧ

ಬೆಂಗಳೂರು ಫುಟ್‌ಪಾತ್ ತೆರವು: ಪರ-ವಿರೋಧ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ11 July 2026 11:20 AM IST
share
ಬೆಂಗಳೂರು ಫುಟ್‌ಪಾತ್ ತೆರವು: ಪರ-ವಿರೋಧ

ಹಲವು ದಶಕಗಳ ಕಾಲ ಹದಗೆಟ್ಟ ಬೆಂಗಳೂರು ಮಹಾನಗರವನ್ನು ಕೃಷ್ಣ ಬೈರೇಗೌಡರು ಎರಡು ವರ್ಷದಲ್ಲಿ ಮ್ಯಾಜಿಕ್ ಮಾಡಬೇಕು ಎಂದು ನಿರೀಕ್ಷೆ ಮಾಡುವುದು ತಪ್ಪು. ಮೊದಲ ಬಾರಿಗೆ ಬೆಂಗಳೂರು ನಗರದ ಸುಧಾರಣೆ ಮತ್ತು ಅಭಿವೃದ್ಧಿ ಬಗ್ಗೆ ಗಂಭೀರ ಕಾಳಜಿ ತೋರಿಸಿದ್ದು ಅಭಿನಂದನಾರ್ಹ ಕೆಲಸ. ಬೀದಿ ಬದಿಯ ವ್ಯಾಪಾರಿಗಳ ಪುನರ್ವಸತಿ ಬಗ್ಗೆ ಕೃಷ್ಣ ಬೈರೇಗೌಡರಿಗೆ ಕಾಳಜಿ ಇದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಶಾಹಿಯನ್ನು ಒಂದೇ ದಿನದಲ್ಲಿ ದಕ್ಷರು, ಪ್ರಾಮಾಣಿಕರನ್ನಾಗಿ ಬದಲಾಯಿಸುವುದು ಸರಳ ಮಾತಲ್ಲ. ಅಂತಿಮವಾಗಿ ಬೆಂಗಳೂರು ಅಭಿವೃದ್ಧಿ ಕನಸನ್ನು ಆ ಅಧಿಕಾರಶಾಹಿ ಮೂಲಕವೇ ಸಾಕಾರಗೊಳಿಸಬೇಕು.

ಒಂದೂವರೆ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರು ಮಹಾನಗರ ವಿಶಾಲವಾಗಿ ಬೆಳೆದಿದೆ. ಅಷ್ಟು ಮಾತ್ರವಲ್ಲ ಇನ್ನೂ ಬೆಳೆಯುತ್ತಲೇ ಇದೆ. ಬೆಂಗಳೂರು ನಗರಕ್ಕೆ ಒಂದು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಸಾಲುತ್ತಿಲ್ಲ. ಈಗ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಇಪ್ಪತ್ತಾರು ವರ್ಷಗಳ ಹಿಂದೆ ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸು ಕಾಣಲಾಗಿತ್ತು. ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು ಎಂಬುದು ಸತ್ಯ. ಬೆಂಗಳೂರಿನಲ್ಲಿ ಅತಿ ಹೆಚ್ಚು ಫ್ಲೈ ಓವರ್ ನಿರ್ಮಾಣವಾಗಿದ್ದು ಅವರ ಕಾಲದಲ್ಲೇ.

ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟ ಎಸ್.ಎಂ. ಕೃಷ್ಣ ಅವರು ದೂರದೃಷ್ಟಿ ಇಟ್ಟುಕೊಂಡು ರಸ್ತೆ ಮತ್ತು ಫ್ಲೈ ಓವರ್ ನಿರ್ಮಾಣ ಮಾಡಿದ್ದರೆ ಈ ಹೊತ್ತು ಬೆಂಗಳೂರು ಜನದಟ್ಟಣೆಯ ನಗರವಾಗಿ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನಿರ್ಮಿಸಲಾದ ವಿಶಾಲ ಮತ್ತು ವೈಜ್ಞಾನಿಕ ರಸ್ತೆಗಳು ಎಸ್.ಎಂ. ಕೃಷ್ಣ ಸರಕಾರಕ್ಕೆ ಮಾದರಿಯಾಗಿಬೇಕಿತ್ತು. ಯಾವುದೇ ಒಂದು ನಗರವನ್ನು ನೂರು ವರ್ಷದ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಭಿವೃದ್ಧಿಪಡಿಸಬೇಕು. 2000 ಇಸವಿ ನಂತರ ಇಡೀ ಜಗತ್ತೇ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬದಲಾವಣೆ ಕಾಣುತ್ತಿದೆ. ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ, ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ವೇಗವಾಗಿ ಬೆಳೆಯುವುದು ನಿರೀಕ್ಷಿತ. ರಿಯಲ್ ಎಸ್ಟೇಟ್ ಲಾಭಕ್ಕಾಗಿ ಒಂದು ನಗರವನ್ನು ಅಭಿವೃದ್ಧಿ ಪಡಿಸುವುದಕ್ಕೂ, ನೂರು ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಪಡಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ.

ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ವಾಹನಗಳ ಆವಿಷ್ಕಾರ ಆಗಿದ್ದರೂ ಮನೆ ಮನೆಗೆ ಆವರಿಸಿಕೊಳ್ಳುತ್ತವೆ ಎಂಬ ಊಹೆ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿಯೇ ಚಿಕ್ಕಪೇಟೆ, ಅರಳೆಪೇಟೆ, ನಗರ್ತ ಪೇಟೆಯಂತಹ ವ್ಯಾಪಾರಿ ಕೇಂದ್ರವನ್ನು ಅಭಿವೃದ್ಧಿ ಪಡಿಸಿದ್ದರು. ಬೆಂಗಳೂರು ಬಹುದೊಡ್ಡ ವ್ಯಾಪಾರಿ ಕೇಂದ್ರವಾಗಿ ಬೆಳೆದು ನಿಲ್ಲಲು ಈ ಪೇಟೆಗಳ ಪಾತ್ರ ಹಿರಿದಾದುದು. ಸ್ವಾತಂತ್ರ್ಯಾನಂತರ ಬಂದ ಸರಕಾರಗಳಿಗೆ ನಾಡಪ್ರಭು ಕೆಂಪೇಗೌಡರಿಗೆ ಇರುವ ದೂರದೃಷ್ಟಿ ಇದ್ದಿದ್ದರೆ ಇವತ್ತು ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಒಂದು ಬಡಾವಣೆ ನಿರ್ಮಾಣವಾಗುವ ಹಂತದಲ್ಲೇ ಆ ಪ್ರದೇಶಕ್ಕೆ ಅಗತ್ಯವಾಗಿರುವ ವ್ಯಾಪಾರಿ ಕೇಂದ್ರಗಳನ್ನು ನಿರ್ಮಾಣ ಮಾಡಿದ್ದರೆ ಬೀದಿ ಬದಿಯಲ್ಲಿ ಯಾರೂ ವ್ಯಾಪಾರ ಮಾಡುತ್ತಿರಲಿಲ್ಲ. ಬೀದಿ ಬದಿಯ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದೇ ಭ್ರಷ್ಟ ಅಧಿಕಾರಿಗಳು. ಬೆಂಗಳೂರಿನ ಶ್ರೀಮಂತ ಬಡಾವಣೆಗಳಾದ ಸದಾಶಿವ ನಗರ, ಇಂದಿರಾ ನಗರಗಳಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಬಡ ಮತ್ತು ಮಧ್ಯಮ ವರ್ಗ ವಾಸಿಸುವ ಪ್ರದೇಶಗಳ ಮುಖ್ಯ ರಸ್ತೆಯಲ್ಲಿ ಬೀದಿ ಬದಿಯ ವ್ಯಾಪಾರ ನಡೆಯುವುದೇ ರಸ್ತೆ ಮೇಲೆ. ಫುಟ್ ಪಾತ್ ಒತ್ತುವರಿಯನ್ನು ಎಲ್ಲರೂ ಒಂದು ಹಕ್ಕು ಎಂದೇ ಭಾವಿಸಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳ ಕುಮ್ಮಕ್ಕಿನಿಂದ ನೆಲೆ ನಿಂತಿದ್ದಾರೆ. ಆದರೆ ರಸ್ತೆ ಬದಿಯ ಖಾಯಂ ವಾಣಿಜ್ಯ ಕಟ್ಟಡಗಳು ಯಾರ ಅನುಮತಿ ಇಲ್ಲದೆ ಫುಟ್‌ಪಾತ್ ಆಕ್ರಮಿಸಿಕೊಂಡಿವೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಿದ್ದರೆ ಸಮಸ್ಯೆ ಉಲ್ಬಣಿಸುತ್ತಿರಲಿಲ್ಲ. ಹೊಸದಿಲ್ಲಿ ನಗರದ ವಿಶಾಲ ರಸ್ತೆಗಳ ಫುಟ್‌ಪಾತ್ ಈಗಲೂ ಪಾದಚಾರಿಗಳಿಗೆ ಲಭ್ಯ ಇವೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವ ಕೃಷ್ಣ ಬೈರೇಗೌಡರು ಮಹಾನಗರದಲ್ಲಿನ ಪಾದಚಾರಿ ರಸ್ತೆಗಳ ಒತ್ತುವರಿ ತೆರವುಗೊಳಿಸುತ್ತಿರುವುದು ಮೆಚ್ಚುವಂತಹದು. ಆದರೆ ಬೆಂಗಳೂರು ಸಮಸ್ಯೆಗಳನ್ನು ಬಿಡಿಯಾಗಿ ನೋಡದೆ ಇಡಿಯಾಗಿ ಗ್ರಹಿಸಿದರೆ ನಾಲ್ಕು ದಿನ ಬಾಳುವ ಅತ್ಯುತ್ತಮ ಕೆಲಸ ಮಾಡಲು ಸಾಧ್ಯ. ಸಚಿವ ಕೃಷ್ಣ ಬೈರೇಗೌಡರು ಕಾನೂನು ಬದ್ಧವಾಗಿಯೇ ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಪಾಲನೆ ಮಾಡುವುದು ಚುನಾಯಿತ ಸರಕಾರದ ಆದ್ಯ ಕರ್ತವ್ಯ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರಗಳಲ್ಲಿ ಒಟ್ಟು 931 ಪಾದಚಾರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 3,800 ಜನ ಪಾದಚಾರಿಗಳು ಗಂಭೀರ ಸ್ವರೂಪದ ಗಾಯದಿಂದ ತೊಂದರೆ ಅನುಭವಿಸಿದ್ದಾರೆ. 3,500 ಪಾದಚಾರಿಗಳು ಸಣ್ಣ ಪುಟ್ಟ ಗಾಯಗಳಿಂದ ಬಳಲಿದ್ದಾರೆ. ಒಟ್ಟಾರೆ ಪಾದಚಾರಿಗಳ ರಸ್ತೆ ಒತ್ತುವರಿಯಾಗಿರುವುದರಿಂದ ಅವರು ಸಾವು ನೋವು ಅನುಭವಿಸುವಂತಾಗಿದೆ. ಅಷ್ಟಕ್ಕೂ ಕೃಷ್ಣ ಬೈರೇಗೌಡರು ತೆರವುಗೊಳಿಸಲು ಹೊರಟಿರುವುದು ಬೆಂಗಳೂರು ನಗರದ ಒಟ್ಟು ರಸ್ತೆಯ ಕೇವಲ ಪ್ರತಿಶತ ಹತ್ತರಷ್ಟು ಭಾಗವನ್ನು.

ಸಚಿವರ ಉದ್ದೇಶ ಬೆಂಗಳೂರು ನಗರದ ಪ್ರಮುಖ ರಸ್ತೆಗಳ ಪಾದಚಾರಿ ರಸ್ತೆಗಳಾದರೂ ತೆರವುಗೊಳ್ಳಲಿ ಎಂಬುದು. ಇದರಿಂದ ತೊಂದರೆಗೊಳಗಾದ ಬೀದಿ ಬದಿಯ ವ್ಯಾಪಾರಿಗಳು ಸರಕಾರದ ವಿರುದ್ಧ, ವಿಶೇಷವಾಗಿ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸಚಿವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಸಿಟ್ಟು ಹೊರಹಾಕಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿಗೆ ಮಾನವೀಯ ನೆಲೆಯಲ್ಲಿ ಸರಕಾರ ಸ್ಪಂದಿಸಬೇಕು ಎನ್ನುವುದು ಒಪ್ಪುವ ಮಾತು. ಆದರೆ ಅವರೆಲ್ಲ ಕೃಷ್ಣ ಬೈರೇಗೌಡರನ್ನು ಗುರಿಯಾಗಿಸಿ ಅವಾಚ್ಯ ಪದಗಳಿಂದ ನಿಂದಿಸುವುದು ಸಮರ್ಥನೀಯ ನಡೆಯಲ್ಲ. ಬೆಂಗಳೂರು ಸುಧಾರಣೆಗೆ ಈ ಹಿಂದಿನ ಮಂತ್ರಿಗಳು ಶ್ರಮಿಸಿದ್ದರೆ ಕೃಷ್ಣ ಬೈರೇಗೌಡರ ಮೇಲಿನ ಭಾರ ಕಮ್ಮಿಯಾಗುತ್ತಿತ್ತು. ಹೂಸ ನಡಿಗೆ ಆರಂಭಿಸುವವರು ಪ್ರವರ್ತಕರು ಎನಿಸಿಕೊಳ್ಳುತ್ತಾರೆ. ಹೊಗಳಿಕೆ ಜೊತೆಗೆ ಟೀಕೆಯನ್ನು ಕೇಳಿಸಿಕೊಳ್ಳಬೇಕಾಗುತ್ತದೆ.

ಪಾದಚಾರಿ ರಸ್ತೆಯಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳನ್ನು ತೆರವುಗೊಳಿಸಿದ್ದರಿಂದ ಒಂದು ಸಮಸ್ಯೆ ಬಗೆ ಹರಿದಂತಾಗುತ್ತದೆ. ಪಾದಚಾರಿ ರಸ್ತೆಯಲ್ಲಿ ಚಾಚಿಕೊಂಡಿರುವ ವಾಣಿಜ್ಯ ಕಟ್ಟಡಗಳ ತೆರವು ಕಾರ್ಯವೂ ಪಾದಚಾರಿಗಳ ಹಕ್ಕು ಪ್ರತಿಷ್ಠಾಪನೆ ಮಾಡಲು ಸಹಕರಿಸಿದಂತಾಗುತ್ತದೆ. ಪಾದಚಾರಿಗಳ ಯೋಗ ಕ್ಷೇಮ ನೋಡಿಕೊಂಡ ಸಚಿವ ಕೃಷ್ಣ ಬೈರೇಗೌಡರು ವಾಹನ ಸವಾರರ ಸಮಸ್ಯೆಯನ್ನು ಆಲಿಸಬೇಕು. ಬೆಳೆಯುತ್ತಿರುವ ಬೆಂಗಳೂರು ಎಷ್ಟು ವಾಹನಗಳ ಸಾಮರ್ಥ್ಯ ಹೊಂದಿದೆ ಎಂಬ ವೈಜ್ಞಾನಿಕ ಸಮೀಕ್ಷೆ ನಡೆಸಿ ಅಷ್ಟು ವಾಹನಗಳ ಖರೀದಿಗೆ ಮಾತ್ರ ಅವಕಾಶ ನೀಡಿದರೆ ಪಾರ್ಕಿಂಗ್ ಸಮಸ್ಯೆ ಎದುರಾಗುವುದಿಲ್ಲ. ಸಾರಿಗೆ ಇಲಾಖೆಯವರು, ವಿಶೇಷವಾಗಿ ಆರ್‌ಟಿಒ ಅಧಿಕಾರಿಗಳು ಕಾರು, ಆಟೋ ಮತ್ತು ಅಸಂಖ್ಯಾತ ದ್ವಿಚಕ್ರ ವಾಹನಗಳ ಖರೀದಿಗೆ ಅನುಮತಿ ನೀಡುತ್ತಲೇ ಇರುತ್ತಾರೆ. ವಾಹನಗಳನ್ನು ಖರೀದಿಸಿದವರು ರಸ್ತೆ ಮೇಲೆ ಬಂದಾಗಲೇ ನಿಜವಾದ ಸಮಸ್ಯೆ ಗೊತ್ತಾಗುವುದು. ಮೆಟ್ರೋ ಮತ್ತು ಬೆಂಗಳೂರು ಮಹಾನಗರ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದ್ದರೂ ಕಾರು ಮತ್ತು ದ್ವಿಚಕ್ರ ವಾಹನಗಳ ಪ್ರವೃತ್ತಿಯೇನು ಕಡಿಮೆಯಾಗಿಲ್ಲ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಅರ್ಧ ಜಾಗ ಪಾರ್ಕಿಂಗ್ ಆಕ್ರಮಿಸಿಕೊಳ್ಳುತ್ತದೆ. ಸಹಜವಾಗಿಯೇ ವಾಹನಗಳ ಸಂಚಾರಕ್ಕೆ ಕಿರಿದಾದ ರಸ್ತೆ ಲಭ್ಯವಾಗುತ್ತದೆ. ಬೆಂಗಳೂರಿನ ಬಹುಪಾಲು ವಾಣಿಜ್ಯ ಮಳಿಗೆಗಳು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿರುವುದಿಲ್ಲ. ಮಲ್ಲೇಶ್ವರಂ, ಜಯನಗರ, ಬಸವನಗುಡಿ, ಎಚ್.ಎಸ್.ಆರ್. ಲೇಔಟ್, ನಾಗರಭಾವಿ ಪ್ರಮುಖ ರಸ್ತೆಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಪೊಲೀಸರು ಸೂಚಿಸುವ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್ ಮಾಡಬೇಕು. ವಾರದ ಕೊನೆಗೆ ಎಲ್ಲರ ವಾಹನಗಳು ರಸ್ತೆಗೆ ಇಳಿಯುವುದರಿಂದ ಪಾರ್ಕ್ ಮಾಡಲು ಸ್ಥಳವೇ ಇರುವುದಿಲ್ಲ. ಖಾಲಿ ಜಾಗ ಕಂಡಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಪೊಲೀಸರ ಅವಕೃಪೆಗೆ ಗುರಿಯಾಗಬೇಕಾಗತ್ತದೆ. ಬೆಲೆ ಬಾಳುವ ವಾಹನ ಖರೀದಿಸಿ ರಸ್ತೆಗೆ ತಂದು ಹೆಮ್ಮೆ ಪಡುವಷ್ಟರಲ್ಲಿ ಪೊಲೀಸರು ವಾಹನಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ವಾಹನ ಮರಳಿ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಅಗಲವಾದ ರಸ್ತೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಲಭ್ಯವಿಲ್ಲದಿದ್ದರೆ ವಾಹನಗಳ ಖರೀದಿಗೆ ಅವಕಾಶವೇ ಕೊಡಬಾರದು. ವಾಯು ಮಾಲಿನ್ಯದ ಕಾರಣಕ್ಕೆ ವಾಹನಗಳ ಮಾರಾಟದ ಮೇಲೆ ನಿರ್ಬಂಧ ಹೇರುವುದು ಬಹು ದೊಡ್ಡ ಪರಿಸರ ಕಾಳಜಿಯ ಮಾತಾಗುತ್ತದೆ. ಕನಿಷ್ಠ ಪಕ್ಷ ಪಾರ್ಕಿಂಗ್ ಸಮಸ್ಯೆ ಮುಂದು ಮಾಡಿ ವಾಹನಗಳ ಮಾರಾಟದ ಮೇಲೆ ನಿಯಂತ್ರಣ ಸಾಧಿಸಬೇಕು. ಗಾಂಧಿ ನಗರ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆ ತೀವ್ರವಾಗಿತ್ತು. ಫ್ರೀಡಂ ಪಾರ್ಕ್ ಪಕ್ಕದಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಸಂಕೀರ್ಣ ನಿರ್ಮಾಣವಾಗಿದ್ದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. ಇಂದಿರಾನಗರ, ಸದಾಶಿವನಗರದಂತಹ ಪ್ರತಿಷ್ಠಿತ ಬಡಾವಣೆಗಳ ಮುಖ್ಯ ರಸ್ತೆಯಲ್ಲಿ ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿವೆ. ಆದರೆ ರಸ್ತೆ ಹೊರತು ಪಡಿಸಿದ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಲ್ಲ. ನೂರು ಅಡಿ ರಸ್ತೆ ಇರುವ ಮುಖ್ಯ ಮಾರ್ಗದಲ್ಲಿ ಸಾರಿಗೆ ಬಸ್ ಮತ್ತು ದೊಡ್ಡ ವಾಹನಗಳು ಸಂಚರಿಸಲು ರಸ್ತೆ ಬದಿಯ ಪಾರ್ಕಿಂಗ್ ಇಕ್ಕಟ್ಟು ಸೃಷ್ಟಿಸುತ್ತದೆ. ಇಕ್ಕಟ್ಟಿನ ರಸ್ತೆ ಕಾರಣಕ್ಕೂ ಅಪಘಾತಗಳು ಸಂಭವಿಸುತ್ತವೆ. ಸರಕಾರಿ ಬಸ್‌ಗಳು ಬಹಳಷ್ಟು ಸಲ ದ್ವಿಚಕ್ರ ವಾಹನ ಸವಾರರಿಗೆ ಹಿಟ್ ಆಂಡ್ ರನ್ ಮಾಡುವುದು ಈ ಇಕ್ಕಟ್ಟಿನ ರಸ್ತೆ ಮಾರ್ಗದಲ್ಲೇ. ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳ ನಿರ್ಮಾಣ ಹಂತದಲ್ಲೇ ಅವರ ಗ್ರಾಹಕರ ಪ್ರಮಾಣ ಗಮನಿಸಿ ಪಾರ್ಕಿಂಗ್ ವ್ಯವಸ್ಥೆ ಕುರಿತು ಗಂಭೀರ ಚಿಂತನೆ ನಡೆಸಬೇಕು. ಎಚ್.ಎಸ್.ಆರ್. ಲೇಔಟ್ ಮುಖ್ಯರಸ್ತೆ ಸದಾ ಜನನಿಬಿಡವಾಗಿರುತ್ತದೆ. ಯಾಕೆಂದರೆ ಅಲ್ಲಿ ಪ್ರತಿಷ್ಠಿತ ಬ್ರಾಂಡೆಡ್ ಕಂಪೆನಿಗಳ ವಾಣಿಜ್ಯ ಮಳಿಗೆಗಳಿವೆ. ಅವರೆಲ್ಲ ಕೋಟಿ ಕೋಟಿ ರೂ. ವಹಿವಾಟು ನಡೆಸುತ್ತಾರೆ. ಜನಸಾಮಾನ್ಯರು ಅವರ ಗಿರಾಕಿಗಳು ಆಗಿರುತ್ತಾರೆ. ಗ್ರಾಹಕರಿಗೆ ಅನುಕೂಲವಾಗುವ ವ್ಯವಸ್ಥೆ ಮಾಡಿಕೊಡಬೇಕಾಗಿರುವುದು ಅವರ ಧರ್ಮ. ದ್ವಿಚಕ್ರ ವಾಹನ ಮತ್ತು ದುಬಾರಿ ವೆಚ್ಚದ ಕಾರುಗಳ ಖರೀದಿಗೆ ಅವಕಾಶ ಮಾಡಿಕೊಡುವ ಸರಕಾರವೇ ಆ ವಾಹನಗಳಿಗೆ ಅತ್ಯುತ್ತಮ ರಸ್ತೆ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಸರಕಾರದ ಮೊದಲ ಆದ್ಯತೆಯಾಗಬೇಕು. ಕಾರು ಖರೀದಿಸುವಾಗ ಎಲ್ಲ ಬಗೆಯ ಟ್ಯಾಕ್ಸ್ ಪಾವತಿ ಮಾಡಿರುತ್ತಾರೆ. ಒಂದು ಕಾರು ಖರೀದಿಯಲ್ಲಿ ಕಾರು ಮಾರಾಟ ಮಾಡುವ ಕಂಪೆನಿಗೆ ಸಾಕಷ್ಟು ಲಾಭವಾಗುತ್ತದೆ. ಶೋ ರೂಮ್ ಮಾಲಕ ಲಾಭ ಮಾಡಿಕೊಳ್ಳುತ್ತಾನೆ. ಸರಕಾರವಂತೂ ನೋಂದಣಿ ಸಮಯದಲ್ಲೇ ತನ್ನ ಪಾಲಿನ ತೆರಿಗೆ ತೆಗೆದುಕೊಂಡಿರುತ್ತದೆ. ಆದರೆ ವಾಹನ ಸವಾರ ರಸ್ತೆಗೆ ಇಳಿದರೆ ಅತ್ಯಂತ ಕೆಟ್ಟ ರಸ್ತೆಗಳು ಸ್ವಾಗತಿಸುತ್ತವೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರದಾಡಬೇಕಾಗುತ್ತದೆ. ಪೊಲೀಸರು ಕಾನೂನು ಪಾಲನೆ ಮಾಡುತ್ತಾರೆ ಅಥವಾ ಅದರ ಹೆಸರಲ್ಲಿ ಒಂದಷ್ಟು ಅನುಕೂಲ ಮಾಡಿಕೊಡುತ್ತಾರೆ. ಆದರೆ ಗ್ರಾಹಕ ಮಹಾಶಯ ಮಾತ್ರ ಕಷ್ಟ ಪಟ್ಟು ಕಂತು ಕಟ್ಟುತ್ತಾ ವಾಹನವನ್ನು ರಸ್ತೆಗೆ ತರಲು ಭಯ ಪಡುತ್ತಾನೆ. ಆತನ ರಕ್ಷಣೆಗೆ ಯಾರೂ ನಿಲ್ಲುವುದಿಲ್ಲ. ಕೆಟ್ಟು ಹೋದ, ಗುಂಡಿ ಬಿದ್ದ ರಸ್ತೆಗಳ ಕಾರಣಕ್ಕೆ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಾನೆ. ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಸಚಿವ ಕೃಷ್ಣ ಬೈರೇಗೌಡರು ಈ ಮಧ್ಯಮ ವರ್ಗದ ಮಹಾಶಯರ ಕಷ್ಟಗಳನ್ನು ಪರಿಹರಿಸಬೇಕಲ್ಲವೇ? ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಮನ್ವಯದಲ್ಲೇ ಈ ಸಾಮಾನ್ಯ ನಾಗರಿಕನಿಗೆ ಪರಿಹಾರ ಮಾಡಿಕೊಡಬೇಕು.

ಇನ್ನು ಬೆಂಗಳೂರಿನಲ್ಲಿ ಮಳೆಗಾಲ ಬಂದರೆ ದ್ವಿಚಕ್ರ ವಾಹನಗಳ ಸವಾರರು ಅನಿವಾರ್ಯವಾಗಿ ಮಳೆ ನೀರ ಸ್ನಾನ ಮಾಡಲೇಬೇಕು. ಅದರಿಂದ ತಪ್ಪಿಸಿಕೊಳ್ಳಲು ನಾಲ್ಕು ಚಕ್ರದ ವಾಹನವನ್ನು ರಸ್ತೆಗೆ ತಂದರೆ ಬದುಕಿ ಮನೆಗೆ ಹೋಗುವುದು ಕಷ್ಟ. ರಸ್ತೆಯಲ್ಲಿನ ನೀರಿನ ರಭಸಕ್ಕೆ ಗುಂಡಿಗಳು ಕಾಣಿಸುವುದಿಲ್ಲ. ರಸ್ತೆ ಅಪಘಾತ ಗ್ಯಾರಂಟಿ. ಇನ್ನು ಅಂಡರ್ ಪಾಸ್ ಕೆಳಗಿನಿಂದ ಹಾದು ಹೋಗುವ ಪ್ರಸಂಗ ಬಂದರೆ ಅಲ್ಲಿಗೆ ಹರಿದು ಬರುವ ನೀರಲ್ಲೇ ಸಾವು ಗ್ಯಾರಂಟಿ. ಸರಕಾರದ ಜನಪರ ಗ್ಯಾರಂಟಿಗಳ ಜೊತೆಗೆ ಈ ಅಪಾಯಕಾರಿ ಗ್ಯಾರಂಟಿಗಳು ಉಚಿತವಾಗಿ ದೊರೆಯುತ್ತವೆ.

ಬೆಂಗಳೂರಿನ ಸಮಶೀತೋಷ್ಣ ವಾತಾವರಣದ ಕಾರಣಕ್ಕೆ ಇಲ್ಲಿ ನೆಲೆ ನಿಂತ ಐಟಿ, ಬಿಟಿ ಕಂಪೆನಿಗಳು ಜಾಗ ಖಾಲಿ ಮಾಡಿಲ್ಲ. ಕೆಟ್ಟ ರಸ್ತೆಗಳು, ಜನನಿಬಿಡ ಟ್ರಾಫಿಕ್, ಕಾಲಕ್ಕೆ ತಕ್ಕಂತೆ ಅಪ್ ಗ್ರೇಡ್ ಆಗದ ಮಹಾನಗರದ ಆಡಳಿತ ವ್ಯವಸ್ಥೆ. ಬೆಂಗಳೂರಿನಲ್ಲಿ ಅತ್ಯುತ್ತಮ ರಸ್ತೆ ನಿರ್ಮಾಣ ಮಾಡುವುದು, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದು ಮತ್ತು ಟ್ರಾಫಿಕ್ ಸಮಸ್ಯೆ ನಿವಾರಿಸುವುದು ಬಹುದೊಡ್ಡ ರಾಕೆಟ್ ವಿಜ್ಞಾನವೇನು ಅಲ್ಲ. ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಬೆಳೆದಿರುವ ಈ ಕಾಲದಲ್ಲಿ ಬೆಂಗಳೂರನ್ನು ವಾಸ ಯೋಗ್ಯ ತಾಣವನ್ನಾಗಿಸಲು ಸಾಧ್ಯವಿದೆ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುವ ಮೊದಲೇ ನಿಗಾವಹಿಸಿದ್ದರೆ ಮಳೆ ನೀರು ಒಂದು ಸಮಸ್ಯೆಯಾಗುತ್ತಿರಲಿಲ್ಲ. ವಾಟರ್ ಹಾರ್ವೆಸ್ಟಿಂಗ್ ಮೂಲಕ ಎಷ್ಟೋ ಮಹಾನಗರಗಳು ಕುಡಿಯುವ ನೀರಿನ ಬರದಿಂದ ಪಾರಾಗಿವೆ. ಬೋರ್‌ವೆಲ್ ಕೊರೆತದ ಅಡ್ಡ ಪರಿಣಾಮದಿಂದ ನಗರಗಳನ್ನು ಕಾಪಾಡಿದೆ.

ಬೆಂಗಳೂರು ನಗರ ಈಗ ಮಿನಿ ಭಾರತವಾಗಿ ಮಾರ್ಪಟ್ಟಿದೆ. ದೇಶದ ಬೇರೆ ನಗರಗಳಿಗಿಂತಲೂ ಬೆಂಗಳೂರು ಹೆಚ್ಚು ಜನರನ್ನು ಆಕರ್ಷಿಹಿಸುತ್ತಿದೆ. ಹೊಸ ಹೊಸ ಟೌನ್ ಶಿಪ್ ಮಾಡುವ ಮುಂಚೆ ಮೂಲ ಬೆಂಗಳೂರನ್ನು ಅಂತರ್ ರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು. ಬೆಂಗಳೂರಿನಲ್ಲಿ ಮಳೆ ನೀರು ಕೊಯ್ಲಿಗೆ ಮೊದಲ ಆದ್ಯತೆ ನೀಡಿದರೆ ಕುಡಿಯುವ ನೀರಿಗಾಗಿ ಬೇರೆ ಕಡೆ ನೋಡುವ ಅಗತ್ಯ ಇರುವುದಿಲ್ಲ.

ಹಲವು ದಶಕಗಳ ಕಾಲ ಹದಗೆಟ್ಟ ಬೆಂಗಳೂರು ಮಹಾನಗರವನ್ನು ಕೃಷ್ಣ ಬೈರೇಗೌಡರು ಎರಡು ವರ್ಷದಲ್ಲಿ ಮ್ಯಾಜಿಕ್ ಮಾಡಬೇಕು ಎಂದು ನಿರೀಕ್ಷೆ ಮಾಡುವುದು ತಪ್ಪು. ಮೊದಲ ಬಾರಿಗೆ ಬೆಂಗಳೂರು ನಗರದ ಸುಧಾರಣೆ ಮತ್ತು ಅಭಿವೃದ್ಧಿ ಬಗ್ಗೆ ಗಂಭೀರ ಕಾಳಜಿ ತೋರಿಸಿದ್ದು ಅಭಿನಂದನಾರ್ಹ ಕೆಲಸ. ಬೀದಿ ಬದಿಯ ವ್ಯಾಪಾರಿಗಳ ಪುನರ್ವಸತಿ ಬಗ್ಗೆ ಕೃಷ್ಣ ಬೈರೇಗೌಡರಿಗೆ ಕಾಳಜಿ ಇದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಶಾಹಿಯನ್ನು ಒಂದೇ ದಿನದಲ್ಲಿ ದಕ್ಷರು, ಪ್ರಾಮಾಣಿಕರನ್ನಾಗಿ ಬದಲಾಯಿಸುವುದು ಸರಳ ಮಾತಲ್ಲ. ಅಂತಿಮವಾಗಿ ಬೆಂಗಳೂರು ಅಭಿವೃದ್ಧಿ ಕನಸನ್ನು ಆ ಅಧಿಕಾರಶಾಹಿ ಮೂಲಕವೇ ಸಾಕಾರಗೊಳಿಸಬೇಕು. ಮಂತ್ರಿ ಕೃಷ್ಣ ಬೈರೇಗೌಡರು ಬೆಂಗಳೂರು ಸುಧಾರಣೆ ಮತ್ತು ಅಭಿವೃದ್ಧಿಗೆ ವೈಜ್ಞಾನಿಕ ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಆರಂಭಿಸಿದರೆ ಮುಂದಿನ ದಿನಗಳಲ್ಲಿ ಸರಿಯಾದ ದಿಕ್ಕು ದೆಸೆಯಲ್ಲಿ ಸಾಗಬಹುದು. ಇಲ್ಲಿಯವರೆಗೆ ಆಡಳಿತ ನಡೆಸಿದ ಮಂತ್ರಿ, ಮುಖ್ಯಮಂತ್ರಿಗಳು ಇದು ನಮ್ಮ ಬೆಂಗಳೂರು ಎಂದು ಭಾವಿಸಿ ಕಾರ್ಯ ನಿರ್ವಹಿಸಿದ್ದರೆ ಸಮಸ್ಯೆಗಳು ಈ ಮಟ್ಟದಲ್ಲಿ ಗುಡ್ಡೆಯಾಗುತ್ತಿರಲಿಲ್ಲ. ಬೆಂಗಳೂರು ಸಮಸ್ಯೆ, ಸುಧಾರಣೆ ಮತ್ತು ಅಭಿವೃದ್ಧಿಯನ್ನು ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ, ಬೀದಿ ಬದಿಯ ವ್ಯಾಪಾರಿಗಳ ಅಳಲು ಎಂಬಷ್ಟಕ್ಕೆ ಸೀಮಿತಗೊಳಿಸಿ ಚರ್ಚೆ ಮಾಡುವುದು ಸರಿಯಾದ ನಿಲುವಲ್ಲ. ಈ ಬೆಂಗಳೂರು ಮಹಾನಗರದಲ್ಲಿ ಬಡವರು, ಮಧ್ಯಮ ವರ್ಗದವರು, ಬೀದಿ ಬದಿಯ ವ್ಯಾಪಾರಿಗಳು, ಐಟಿ, ಬಿಟಿ ಕಂಪೆನಿಗಳ ಮಾಲಕರು, ಅಲ್ಲಿನ ಉದ್ಯೋಗಿಗಳು ಸುಂದರ ಬದುಕಿನ ಕನಸು ಸಾಕಾರ ಮಾಡಿಕೊಳ್ಳಲು ನಿತ್ಯ ಹೆಣಗುತ್ತಾರೆ. ಈ ಮಹಾನಗರದಲ್ಲಿ ಬರಿಗೈಲಿ ಬಂದವರು ಕೋಟ್ಯಧಿಪತಿ ಆಗಿದ್ದಾರೆ. ಓದಲು ಬಂದವರು ಉದ್ಯಮಿಗಳಾಗಿದ್ದಾರೆ. ಈ ಮಹಾನಗರ ಯಾವುದೇ ಭೇದ ಭಾವ ಎಣಿಸದೆ ಎಲ್ಲರನ್ನು ಪೊರೆಯುವ ಮಹಾ ತಾಯಿಯಂತೆ. ಅವರವರ ಸಾಮರ್ಥ್ಯ, ಕ್ರಿಯಾಶೀಲತೆಗೆ ತಕ್ಕ ಪ್ರತಿಫಲ ಪಡೆಯುತ್ತಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬದುಕು ಕಟ್ಟಿಕೊಳ್ಳಲು ಬಂದು ಈ ಹೊತ್ತು ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಇಲ್ಲಿ ಕೋಟಿ ಕೋಟಿ ಹಣಕ್ಕೂ ಬೆಲೆಯಿಲ್ಲ. ಸುಂದರ, ಸ್ವಾಭಿಮಾನಿ ಬದುಕಿನ ಕನಸೇ ಎಲ್ಲರ ಗುರಿ. ಇಂಥ ಬೆಂಗಳೂರು ಮಹಾನಗರವನ್ನು ವಾಸ ಯೋಗ್ಯ ಸುಂದರ ನಗರವನ್ನಾಗಿ ರೂಪಿಸುವ ಹೊಣೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಇದು ನನ್ನೂರು ಎಂಬ ಅಭಿಮಾನದಿಂದ ಸುಧಾರಣೆಗೆ ಕೈ ಹಾಕಿದ್ದಾರೆ. ಅಷ್ಟಕ್ಕೂ ಹೊರ ರಾಜ್ಯ, ಹೊರ ದೇಶದವರು ಬೆಂಗಳೂರನ್ನು ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ, ಕೆ.ಜೆ. ಜಾರ್ಜ್ ಅವರ ಊರು ಎಂದೇ ಗುರುತಿಸುತ್ತಾರೆ. ಒಂದಷ್ಟು ಕಾಲ, ಹಣ, ಕಮಿಷನ್, ಆಸ್ತಿ ಅಂತಸ್ತಿನ ಗೊಡವೆಗೆ ಹೋಗದೆ ಇದು ನನ್ನ ಮನೆ, ನನ್ನ ಕುಟುಂಬ, ನನ್ನ ಊರು ಎಂಬ ಸಮರ್ಪಣಾ ಭಾವದಲ್ಲಿ ಕೆಲಸ ಮಾಡಿದರೆ ಬೆಂಗಳೂರು ಪ್ರಪಂಚದ ಬೇರೆಲ್ಲ ದೇಶಗಳ ಮಹಾನಗರಗಳ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತದೆ. ಬೆಂಗಳೂರು ಅಭಿವೃದ್ಧಿ ಕರ್ನಾಟಕಕ್ಕೆ ಭಾರವಾಗಬಾರದು. ಬೆಂಗಳೂರಿಗೆ ಪೂರಕವಾಗಿಯೇ ಕಲಬುರಗಿ, ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮತ್ತು ದಾವಣಗೆರೆ ನಗರಗಳನ್ನು ಅಭಿವೃದ್ಧಿ ಪಡಿಸಿದರೆ ಕರ್ನಾಟಕ ಹೆಮ್ಮೆ ಪಡುವ ರಾಜ್ಯವಾಗಿ ಬದಲಾಗುತ್ತದೆ. ಈ ಮೂಲಕ ಬೆಂಗಳೂರು ತನ್ನ ಭಾರವನ್ನು ನೀಗಿಸಿಕೊಳ್ಳಬೇಕು. ಒಂದು ರಾಜಧಾನಿಗೆ ಅಗತ್ಯ ಇರುವ ಎಲ್ಲವೂ ಬೆಂಗಳೂರಿನಲ್ಲೇ ಇರಲಿ. ಬೆಂಗಳೂರು ನಗರಕ್ಕೆ ಭಾರವಾದ ಅನಗತ್ಯ ಎನಿಸುವ ಉಳಿದೆಲ್ಲವನ್ನು ಕರ್ನಾಟಕದ ಉಳಿದ ನಗರಗಳಿಗೆ ವರ್ಗಾಯಿಸಬೇಕು. ಬೀದಿ ಬದಿಯ ವ್ಯಾಪಾರಿಗಳು ಮತ್ತು ಶ್ರೀಮಂತ ಉದ್ಯಮಿಗಳನ್ನು ತರತಮ ಭಾವದಲ್ಲಿ ನೋಡಿದಾಗ ಮಾತ್ರ ಸಂಘರ್ಷಕ್ಕೆ ಹಾದಿ ಮಾಡಿಕೊಡುತ್ತದೆ. ಮಂತ್ರಿ ಕೃಷ್ಣ ಬೈರೇಗೌಡರು ಸೂಕ್ಷ್ಮ ಸಂವೇದನಾಶೀಲ ರಾಜಕಾರಣಿಯಾಗಿರುವುದರಿಂದ ತರತಮ ಭಾವಕ್ಕೆ ಅವಕಾಶ ನೀಡಲಾರರು.

Tags

BengalurufootpathClearance
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X