Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ವಿರೋಧ ಪಕ್ಷವಾಗಿ ವಿಫಲವಾದ ಬಿಜೆಪಿ

ವಿರೋಧ ಪಕ್ಷವಾಗಿ ವಿಫಲವಾದ ಬಿಜೆಪಿ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ6 Dec 2025 12:49 PM IST
share
ವಿರೋಧ ಪಕ್ಷವಾಗಿ ವಿಫಲವಾದ ಬಿಜೆಪಿ

ಬಿಜೆಪಿ ನಾಯಕರು ಪ್ರತಿಪಕ್ಷದ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೊಣೆಗೇಡಿ ಮತ್ತು ದುರ್ಬಲ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಮಾರಕ. ದುರ್ಬಲ ವಿರೋಧ ಪಕ್ಷ ಇರುವುದರಿಂದ ಕಾಂಗ್ರೆಸ್ ಪಕ್ಷದ ಕೆಲವರಿಗೆ ಖುಷಿ ತಂದಿರಬಹುದು. ಆದರೆ ಹೊಣೆಗೇಡಿ ವಿರೋಧ ಪಕ್ಷದಿಂದಾಗಿ ಜನಸಾಮಾನ್ಯರ ದನಿ ಕ್ಷೀಣವಾಗುತ್ತದೆ. ಅಂತಿಮವಾಗಿ ಜನತಂತ್ರ ದುರ್ಬಲ ಎನಿಸಿಕೊಳ್ಳುತ್ತದೆ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕೃತ ವಿರೋಧ ಪಕ್ಷಕ್ಕೆ ಬಹು ದೊಡ್ಡ ಹೊಣೆಗಾರಿಕೆ ಇರುತ್ತದೆ. ಆಡಳಿತದಲ್ಲಿ ಇರುವ ಪಕ್ಷ ಎಡವಿದಾಗ ವಿರೋಧ ಪಕ್ಷ ಜನರ ದನಿಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ ಬಹುತೇಕ ನಾಯಕರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಸಾಕಷ್ಟು ನಿದರ್ಶನಗಳಿವೆ.

ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುವ ರಾಜಕಾರಣಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವವರಿಗಿಂತಲೂ ಹೆಚ್ಚು ಜ್ಞಾನ ಅನುಭವ ಇರಬೇಕಾಗುತ್ತದೆ. ಕರ್ನಾಟಕದ ರಾಜಕಾರಣದಲ್ಲಿ ಕೆಲವೊಂದು ಸಂದರ್ಭ ಹೊರತು ಪಡಿಸಿದರೆ ಅಧಿಕೃತ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಗಿಂತಲೂ ಹೆಚ್ಚು ಜನಪ್ರಿಯರಾಗಿದ್ದ ನಿದರ್ಶನಗಳಿವೆ. ಸದನದಲ್ಲಿ ವಿರೋಧ ಪಕ್ಷದ ನಾಯಕ ಮಾತನಾಡಲು ಎದ್ದು ನಿಂತರೆ, ಆಡಳಿತ ಪಕ್ಷದ ಮಂತ್ರಿಗಳು ತಡವರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿರೋಧ ಪಕ್ಷದ ನಾಯಕ ಎಲ್ಲ ಇಲಾಖೆಗಳ ಬಗ್ಗೆ ಸಂಪೂರ್ಣ ತಯಾರಿಯೊಂದಿಗೆ ಸದನ ಪ್ರವೇಶಿಸಿದರೆ ಸರಕಾರದಲ್ಲಿ ಇರುವವರ ಎದೆಯಲ್ಲಿ ನಡುಕ ಶುರುವಾಗುತ್ತದೆ.

ಕರ್ನಾಟಕದಲ್ಲಿ ದಾಖಲೆ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಅಧಿಕೃತ ವಿರೋಧ ಪಕ್ಷದ ನಾಯಕರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ವಿರೋಧ ಪಕ್ಷದ ನಾಯಕರ ಮಾತುಗಳಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ. ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ದೇವೇಗೌಡರು ಸಂಪೂರ್ಣ ತಯಾರಿಯೊಂದಿಗೆ ಸದನಕ್ಕೆ ಬಂದು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು.

ದೇವೇಗೌಡ, ಎ.ಕೆ. ಸುಬ್ಬಯ್ಯ, ಎಸ್. ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ, ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಯಶಸ್ವಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದವರು. ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರು ವಿರೋಧ ಪಕ್ಷದ ನಾಯಕರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ನರೇಂದ್ರ ಮೋದಿಯವರು ಮೊದಲ ಬಾರಿಗೆ ಪ್ರಧಾನ ಮಂತ್ರಿಯಾದಾಗ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಪಕ್ಷದ ನಾಯಕರಾಗಿ ದೇಶದ ಗಮನ ಸೆಳೆದಿದ್ದರು.

‘‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’’ ಎಂಬ ಮಾತು ಚಾಲ್ತಿಗೆ ಬಂದಿದ್ದೇ ಅವರು ಪ್ರತಿಪಕ್ಷದಲ್ಲಿದ್ದು ಸರಕಾರದ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದಾಗಲೇ. ಕೆಲ ಕಾಲ ಯಡಿಯೂರಪ್ಪ ಅವರೂ ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿ ನಾಡಿನ ಜನತೆಯ ಗಮನ ಸೆಳೆದಿದ್ದರು.

ಕರ್ನಾಟಕದ ಸಂಸದೀಯ ಇತಿಹಾಸದಲ್ಲಿ ಅತ್ಯಂತ ದುರ್ಬಲ ವಿರೋಧ ಪಕ್ಷದ ನಾಯಕರೆಂದರೆ, ಜಗದೀಶ್ ಶೆಟ್ಟರ್ ಅವರು. 1999ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಸೋತಿದ್ದರು. ಇನ್ನೊಬ್ಬ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಗೆದ್ದಿದ್ದರು. ಅನಂತಕುಮಾರ್ ಮತ್ತು ಯಡಿಯೂರಪ್ಪ ತಮಗಿಂತಲೂ ಹಿರಿಯರಾದ ಬಿ.ಬಿ. ಶಿವಪ್ಪ ಅವರನ್ನು ಅಧಿಕೃತ ವಿರೋಧ ಪಕ್ಷದ ನಾಯಕನಾಗಲು ಬಿಡಲಿಲ್ಲ. ಅವರಿಬ್ಬರ ಹುನ್ನಾರ ದಿಂದ ಅತ್ಯಂತ ಕಿರಿಯನಾದ ಮತ್ತು ಅನನುಭವಿಯಾದ ಜಗದೀಶ್ ಶೆಟ್ಟರ್ ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಿಸಲಾಗಿತ್ತು. ಆಗ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು. ಹಾಗೆ ನೋಡಿದರೆ, ಕೃಷ್ಣ ಅವರ ಅಧಿಕಾರವಧಿಯಲ್ಲಿ ಅತಿ ಹೆಚ್ಚು ಸಮಸ್ಯೆ ಸವಾಲುಗಳು ಎದುರಾಗಿದ್ದವು. ದುರ್ಬಲ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರು ಒಮ್ಮೆಯೂ ಪರಿಣಾಮಕಾರಿಯಾಗಿ ಮಾತನಾಡಲೇ ಇಲ್ಲ. ಅವರ ಜ್ಞಾನ, ಅನುಭವ ಮತ್ತು ತಯಾರಿ ಅತ್ಯಂತ ದುರ್ಬಲವಾಗಿತ್ತು. ಸಮರ್ಥ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸದವನು ಜನನಾಯಕನಾಗಿ ರೂಪುಗೊಳ್ಳಲಾರ ಎಂಬ ಮಾತಿಗೆ ಜಗದೀಶ್ ಶೆಟ್ಟರ್ ಬಹು ದೊಡ್ಡ ನಿದರ್ಶನ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೇಲೂ ಜನನಾಯಕನಾಗಲೇ ಇಲ್ಲ. ಈ ಹೊತ್ತಿಗೂ ಅವರು ಎರಡನೇ ದರ್ಜೆಯ ನಾಯಕರಾಗಿಯೇ ಉಳಿದಿದ್ದಾರೆ.

ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಅವಧಿಗೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದವರು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಂಪೂರ್ಣ ತಯಾರಿಯೊಂದಿಗೆ ಸದನಕ್ಕೆ ಬರುತ್ತಿದ್ದರು. ಅವರ ವಾದ, ಪ್ರತಿಪಾದನೆ, ಮಾತನಾಡುವ ಶೈಲಿ, ವಿಚಾರ ಮಂಡಿಸುವ ರೀತಿ ಸದನದ ಘನತೆ ಗೌರವ ಹೆಚ್ಚಿಸುತ್ತಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ, ವಿರೋಧ ಪಕ್ಷದ ನಾಯಕರಾಗಿ ಅತ್ಯಂತ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬಜೆಟ್ ಮೇಲಿನ ಭಾಷಣವಂತೂ ಅಭ್ಯಾಸಪೂರ್ಣವಾಗಿರುತ್ತಿತ್ತು. ಸಿದ್ದರಾಮಯ್ಯ ಅವರಿಗೆ ಸಿದ್ದರಾಮಯ್ಯ ಅವರೇ ಸಾಟಿ ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದ್ದರು. ವಿರೋಧ ಪಕ್ಷದ ನಾಯಕನೆಂದರೆ ಸರಕಾರದ ಕಾವಲುಗಾರ ಎಂಬುದನ್ನು ಸಾಬೀತುಪಡಿಸಿದ್ದರು.

ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಕೆಲ ಕಾಲ ಎಚ್.ಡಿ. ಕುಮಾರ ಸ್ವಾಮಿ ವಿರೋಧ ಪಕ್ಷದ ನಾಯಕರಾಗಿದ್ದರು. ಕುಮಾರ ಸ್ವಾಮಿ ಹಿಟ್ ರನ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿರಲಿಲ್ಲ. ಕುಮಾರ ಸ್ವಾಮಿಯವರಲ್ಲಿ ಸರಕಾರಿ ಮಾಹಿತಿ ಸಾಕಷ್ಟು ಬಂದು ಸೇರುತ್ತಿತ್ತು. ಆ ಎಲ್ಲ ಮಾಹಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರು. ಆದರೆ ಸಮರ್ಥ ವಿರೋಧ ಪಕ್ಷದ ನಾಯಕರಾಗಿ ಹೊರ ಹೊಮ್ಮಲೇ ಇಲ್ಲ. ಆಗ ಬಿಜೆಪಿ ಮತ್ತು ಕೆಜೆಪಿ ಒಂದಾದ ಮೇಲೆ ಮತ್ತೆ ಜಗದೀಶ್ ಶೆಟ್ಟರ್ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುವ ಅವಕಾಶ ಪಡೆದರು. ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಅನುಭವ ಹೊಂದಿದ್ದರೂ ಸಮರ್ಥ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಲೇ ಇಲ್ಲ. ಅತ್ಯಂತ ಉಡಾಫೆ ಮತ್ತು ದುರ್ಬಲ ವಿರೋಧ ಪಕ್ಷದ ನಾಯಕರನ್ನು ಹೊಂದಿದ್ದ ಸಿದ್ದರಾಮಯ್ಯ ಅವರು ನೀರು ಕುಡಿದಷ್ಟೇ ಸರಳವಾಗಿ ಐದು ವರ್ಷ ಪೂರೈಸಿದ್ದರು.

ಈಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಆರ್. ಅಶೋಕ್ ಎಂಬ ಅನನುಭವಿ ವ್ಯಕ್ತಿ ವಿರೋಧ ಪಕ್ಷದ ನಾಯಕರಾಗಿ ದೊರೆತಿದ್ದಾರೆ. ವಿರೋಧ ಪಕ್ಷದ ನಾಯಕ ದುರ್ಬಲನಾಗಿದ್ದು, ಬಿಜೆಪಿ ಪಕ್ಷದ ಅಧ್ಯಕ್ಷ ಸಮರ್ಥನಾಗಿದ್ದರೆ ಆಡಳಿತ ನಡೆಸುವ ಪಕ್ಷದವರು ಸದಾ ಆತಂಕದಲ್ಲಿ ಇರುತ್ತಾರೆ. ಈ ಬಾರಿ ಅಧಿಕೃತ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಬ್ಬರೂ ಅನನುಭವಿ ಮತ್ತು ದುರ್ಬಲ ನಾಯಕರಾಗಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆದಿವೆ. ಸದನದ ಒಳಗೆ ಮತ್ತು ಹೊರಗೆ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್ ಅವರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಬಜೆಟ್ ಅಧಿವೇಶನದಲ್ಲಂತೂ ಏನೇನೂ ತಯಾರಿಲ್ಲದೆ ಬಂದು ನಗೆಪಾಟಲಿಗೆ ಈಡಾದರು. ವಿತ್ತೀಯ ಕೊರತೆಯಂತಹ ಸರಳ ಸಾಮಾನ್ಯ ಅರ್ಥ ಶಾಸ್ತ್ರದ ಪರಿಭಾಷೆ ಆರ್. ಅಶೋಕ್ ಅವರ ತಿಳುವಳಿಕೆಯ ಆಚೆ ಇತ್ತು. ಆರೇಳು ಅವಧಿಗೆ ಸದನದ ಸದಸ್ಯರಾಗಿದ್ದ ಆರ್. ಅಶೋಕ್ ಅವರ ಬಜೆಟ್ ಮೇಲಿನ ಭಾಷಣ ಅತ್ಯಂತ ಕಳಪೆಯಾಗಿದ್ದು ಕಂಡು ಬಿಜೆಪಿ ಸದಸ್ಯರೇ ತಬ್ಬಿಬ್ಬು ಆಗಿದ್ದರು. ಯಾವುದೇ ಸರಕಾರ ಇರಲಿ, ಭ್ರಷ್ಟಾಚಾರ ಸಹಜವಾಗಿ ನೆಲೆ ನಿಂತಿರುತ್ತದೆ. ಹಾಗಂತ ವಿರೋಧ ಪಕ್ಷದವರು ಭ್ರಷ್ಟಾಚಾರ ಕಂಡೂ ಸುಮ್ಮನೆ ಇರಬೇಕು ಅಂತ ಹೇಳಲಾಗದು. ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲೆ ಸಮೇತ ಬಯಲು ಮಾಡಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ವಿರೋಧ ಪಕ್ಷದ ನಾಯಕರ ಮತ್ತು ಪ್ರತಿಪಕ್ಷಗಳ ಆದ್ಯ ಕರ್ತವ್ಯ. ಬಿಜೆಪಿ-ಜೆಡಿಸ್ ನಡುವೆ ಚುನಾವಣಾ ಮೈತ್ರಿ ಏರ್ಪಟ್ಟಿದ್ದರಿಂದ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಡಲು ಅವಕಾಶ ದೊರೆತಿದೆ. ವಾಲ್ಮೀಕಿ ನಿಗಮದ ಹಗರಣ ಸೇರಿ ಹಲವಾರು ಹಗರಣಗಳು ಹೊರ ಬಂದರೂ ಪ್ರತಿಪಕ್ಷಗಳು ಅದರಲ್ಲೂ ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿ ಗಂಭೀರ ಸ್ವರೂಪದ ಹೋರಾಟಗಳನ್ನು ರೂಪಿಸಲೇ ಇಲ್ಲ. ಸದ್ಯ ಮಾಧ್ಯಮಗಳು ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಬಿಜೆಪಿ-ಜೆಡಿಎಸ್ ಹೊಣೆಗೇಡಿಯಂತೆ ನಡೆದುಕೊಳ್ಳುತ್ತಿವೆ.

ಸಿದ್ದರಾಮಯ್ಯ ಅವರ ಸರಕಾರದಲ್ಲಿ ಶಾಲಾ ಶಿಕ್ಷಣ ಸಂಪೂರ್ಣ ಕುಸಿದು ಹೋಗಿದೆ. ಸರಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗುತ್ತಿವೆ. ಕಳಪೆ ಗುಣಮಟ್ಟದ ಕಟ್ಟಡಗಳು, ಮೂಲಭೂತ ಸೌಕರ್ಯ ಇಲ್ಲದ ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳು, ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾನಿಲಯಗಳವರೆಗೆ ಶಿಕ್ಷಕರ ಕೊರತೆ ಇದೆ. ಶಿಕ್ಷಕರ ಭರ್ತಿಗೆ ಸರಕಾರ ಗಂಭೀರ ಪ್ರಯತ್ನವೇ ಮಾಡುತ್ತಿಲ್ಲ. ಯಾವುದೇ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಕ್ಷೇತ್ರ ಸಮೃದ್ಧವಾಗಿರಬೇಕು. ಇನ್ನುಳಿದ ಸರಕಾರಿ ಇಲಾಖೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಗಳು ಆಗುತ್ತಿಲ್ಲ. ಪೊಲೀಸ್ ಇಲಾಖೆ ಮತ್ತಷ್ಟು ಭ್ರಷ್ಟವಾಗಿದೆ. ಭ್ರಷ್ಟಾಚಾರವನ್ನು ಸಂಪೂರ್ಣ ತೊಡೆದು ಹಾಕಲು ಸಾಧ್ಯವಿಲ್ಲ. ಆದರೆ ಅದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬಹುದಲ್ಲ. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಕೋಟಿ ಕೋಟಿ ರೂ. ಅನುದಾನ ತಿಂದು ವಾಸ ಯೋಗ್ಯವಾಗಿಲ್ಲವೆಂದರೆ ವ್ಯವಸ್ಥೆ ಎಷ್ಟು ಕೆಟ್ಟಿರಬಹುದು.

ಅಧಿಕೃತ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರತಿ ನಿತ್ಯ ಜನಸಾಮಾನ್ಯರು ಎದುರಿಸುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.ಸರಕಾರಿ ಆಸ್ಪತ್ರೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಮರೀಚಿಕೆಯಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಸಾವಿರಾರು ಕೋಟಿ ಹಣ ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿವೆ. ಆ ಕಟ್ಟಡಗಳಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುತ್ತಿಲ್ಲ. ಆರ್. ಅಶೋಕ್ ಆರೋಗ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು. ಅಲ್ಲಿಯ ಸಮಸ್ಯೆಗಳು ಅವರಿಗೆ ಚೆನ್ನಾಗಿ ಗೊತ್ತು. ಜನರ ದನಿಯಾಗಿ ಸದನದಲ್ಲಿ ಮಾತನಾಡುವ ಅವಕಾಶ ಅವರಿಗೆ ದೊರೆತಿದೆ. ಆರ್. ಅಶೋಕ್ ಒಮ್ಮೆಯೂ ಮಾಹಿತಿ ಸಂಗ್ರಹಿಸಿ ಅಧಿಕೃತ ದಾಖಲೆಗಳೊಂದಿಗೆ ಸದನದಲ್ಲಿ ವಿಚಾರ ಮಂಡಿಸಿದ ನಿದರ್ಶನ ಸಿಗುವುದಿಲ್ಲ.

ವಿಜಯೇಂದ್ರಗೆ ಅನುಭವ ಸಾಲದು. ಕಾಂಗ್ರೆಸ್ ಪಕ್ಷವನ್ನು, ಸರಕಾರವನ್ನು ರಾಜಕೀಯವಾಗಿ ಎದುರಿಸುವ ಜಾಣ್ಮೆ ವಿಜಯೇಂದ್ರ ಅವರಲ್ಲಿ ಇಲ್ಲ. ಸಿ. ಟಿ. ರವಿ ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ರಾಗಿ ಕಾರ್ಯ ನಿರ್ವಹಿಸಿದವರು. ಕನಿಷ್ಠ ಪಕ್ಷ ಆ ಇಲಾಖೆಗಳ ಕಾರ್ಯ ವೈಖರಿ, ಅಲ್ಲಿಯ ಲೋಪಗಳನ್ನು ಎತ್ತಿ ತೋರಿಸುವ ಕೆಲಸವನ್ನೂ ಮಾಡುತ್ತಿಲ್ಲ. ನಾಲ್ಕು ವರ್ಷಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವ ಅಶ್ವಥ್ ನಾರಾಯಣ ಅವರು ಆ ಇಲಾಖೆ ಎದುರಿಸುತ್ತಿರುವ ಸಮಸ್ಯೆ ಸವಾಲು ಮತ್ತು ಪರಿಹಾರಗಳ ಬಗ್ಗೆ ರಚನಾತ್ಮಕ ಟೀಕೆ ಮಾಡಬಹುದು. ಆದರೆ ಅಶ್ವಥ್ ನಾರಾಯಣ ಅವರು ಕಿಯೋನಿಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಿದ ಭ್ರಷ್ಟ ವೆಂಡರ್ ಪರ ವಕಾಲತ್ತು ವಹಿಸಿ ಮಾತನಾಡಿದರೇ ಹೊರತು ಒಟ್ಟಾರೆ ಐಟಿ ಬಿಟಿ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಗಂಭೀರ ಟೀಕೆ ಟಿಪ್ಪಣಿ ಮಾಡಲೇ ಇಲ್ಲ.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಯಾವ ಇಲಾಖೆಯ ಬಗ್ಗೆಯೂ ಕನಿಷ್ಠ ತಿಳುವಳಿಕೆ ಹೊಂದಿಲ್ಲ ಎಂಬುದು ಹಲವು ಬಾರಿ ರುಜುವಾತು ಮಾಡಿದ್ದಾರೆ. ಬೆಂಗಳೂರು ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮಳೆಗಾಲದಲ್ಲಿ ಅರ್ಧ ಬೆಂಗಳೂರು ಮುಳುಗಿರುತ್ತದೆ. ಐಟಿ ಬಿಟಿ ಕಂಪೆನಿಗಳು ಹೈದರಾಬಾದ್‌ಗೆ ವಲಸೆ ಹೋಗುತ್ತಿವೆ. ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿ ಯಾವತ್ತೂ ಸದನದ ಒಳಗೆ ಮತ್ತು ಹೊರಗೆ ಗಂಭೀರ ಸ್ವರೂಪದ ಹೋರಾಟ ರೂಪಿಸಲೇ ಇಲ್ಲ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ತಾವು ಮಾಡಿದ್ದನ್ನೇ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂಬ ಭಾವನೆ ಪ್ರತಿಪಕ್ಷದ ಪ್ರತೀ ನಾಯಕನಲ್ಲಿ ಮನೆ ಮಾಡಿದೆ. ಸರಕಾರದ ಕಾರ್ಯ ವೈಖರಿಯಿಂದ ಜನಸಾಮಾನ್ಯರು ಯಾವ ಬಗೆಯ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಆರ್. ಅಶೋಕ್ ಗಮನಿಸಲೇ ಇಲ್ಲ. ವಿರೋಧ ಪಕ್ಷದ ನಾಯಕ ಎಂಬ ಗತ್ತಿನಲ್ಲಿ ತಿರುಗಾಡುತ್ತಿದ್ದಾರೆಯೇ ಹೊರತು ಆ ಸ್ಥಾನದ ಹೊಣೆಗಾರಿಕೆ ಅರಿತಿಲ್ಲ.

ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ತಮಗಿಲ್ಲ ಎಂಬಂತೆ ವಿಜಯೇಂದ್ರ ಮತ್ತು ಆರ್. ಅಶೋಕ್ ನಡೆದುಕೊಳ್ಳುತ್ತಿದ್ದಾರೆ. ರಾಜಕೀಯ ಲಾಭ ಮಾಡಿಕೊಳ್ಳುವ ಇರಾದೆಯೂ ಆ ಇಬ್ಬರೂ ನಾಯಕರಿಗೆ ಇಲ್ಲ. ಕಾಂಗ್ರೆಸ್ ಸರಕಾರ ತನ್ನ ಭಾರಕ್ಕೆ ತಾನೇ ಕುಸಿಯುತ್ತದೆ. ಅದರ ಲಾಭ ಅನಾಯಾಸವಾಗಿ ಬಿಜೆಪಿಗೆ ಆಗುತ್ತದೆ ಎಂಬ ಭಾವನೆ ಹೊಂದಿದ್ದಾರೆ. ‘‘ಕೊಟ್ಟ ಕುದುರೆಯನೇರದವರು ವೀರರೂ ಅಲ್ಲ ಧೀರರೂ ಅಲ್ಲ’’ ಎಂಬ ಅಲ್ಲಮಪ್ರಭುಗಳ ವಚನದ ಸಾಲು ಬಿಜೆಪಿ ಮಂದಿಗೆ ಹೆಚ್ಚು ಅನ್ವಯಿಸುತ್ತದೆ. ಆರ್. ಅಶೋಕ್, ವಿಜಯೇಂದ್ರ, ಸಿ.ಟಿ. ರವಿ, ಅಶ್ವಥ್ ನಾರಾಯಣ ಸೇರಿದಂತೆ ಬಿಜೆಪಿಯ ಹಲವು ಮುಖಂಡರಿಗೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿದೆ. ಪ್ರತಿಪಕ್ಷದ ಕೆಲಸಗಳು ಸಮರ್ಥವಾಗಿ ನಿಭಾಯಿಸದೆ ಅಧಿಕಾರದ ಗದ್ದುಗೆ ಏರುವ ಹಂಬಲ ಬಿಜೆಪಿ ನಾಯಕರಿಗಿದೆ.

ಕರ್ನಾಟಕದ ಇತಿಹಾಸದಲ್ಲೇ ಇಂಥ ದುರ್ಬಲ ಪ್ರತಿಪಕ್ಷಗಳನ್ನು ಜನರು ಕಂಡಿಲ್ಲ. ಜೆಡಿಎಸ್ ಪಕ್ಷವನ್ನು ವಿಧಾನಸಭೆಯಲ್ಲಿ ಯಾರು ಪ್ರತಿನಿಧಿಸುತ್ತಿದ್ದಾರೆ ಎಂಬುದು ಜನತೆಗೆ ಗೊತ್ತಿಲ್ಲ. ಆರ್. ಅಶೋಕ್, ವಿಜಯೇಂದ್ರ ನಿತ್ಯ ಸುದ್ದಿ ಮಾಡುತ್ತಾರೆಯಾದರೂ ಆಳದ ಕಾಳಜಿ ಕಾಣುತ್ತಿಲ್ಲ. ಅತ್ಯಂತ ದುರ್ಬಲ ವಿರೋಧ ಪಕ್ಷದ ನಾಯಕ ಎಂಬ ಕುಖ್ಯಾತಿ ಆರ್. ಅಶೋಕ್ ಅವರಿಗೆ ಅಂಟಿದೆ.

ಇದೇ ತಿಂಗಳ 9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಮಾವೇಶಗೊಳ್ಳಲಿದೆ. ವಿವಿಧ ರೈತ ಸಂಘಟನೆಗಳು ಕ್ರಿಯಾಶೀಲವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿವೆ. ಆದರೆ ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿ ಒಂದು ಬಾರಿಯೂ ರೈತರ ಸಮಸ್ಯೆ ಕುರಿತು ದನಿ ಎತ್ತಲಿಲ್ಲ. ತೀವ್ರ ಹೋರಾಟ ರೂಪಿಸಲಿಲ್ಲ. ದೇವನಹಳ್ಳಿ ರೈತರ ಹೋರಾಟ, ಮೆಕ್ಕೆಜೋಳ ಬೆಂಬಲ ಬೆಲೆಗೆ ನಡೆಸಿದ ಹೋರಾಟ, ಕಬ್ಬು ಬೆಳೆಗಾರರು ನಡೆಸಿದ ಹೋರಾಟ- ಯಾವುದರಲ್ಲೂ ಬಿಜೆಪಿ ಜೆಡಿಎಸ್ ಕಾಳಜಿಯಿಂದ ಪಾಲ್ಗೊಳ್ಳಲಿಲ್ಲ.

ಬಿಜೆಪಿಯಲ್ಲಿನ ಬಣ ರಾಜಕೀಯ ನಿತ್ಯದ ಗೋಳಾಗಿದೆ. ಜನಸಾಮಾನ್ಯರ ಸಮಸ್ಯೆಗೆ ಗಂಭೀರವಾಗಿ ಸ್ಪಂದಿಸುವ ಇರಾದೆಯೇ ಬಿಜೆಪಿ ನಾಯಕರಿಗಿಲ್ಲ ಎಂಬುದು ನೂರಾರು ಸಂದರ್ಭದಲ್ಲಿ ಸಾಬೀತಾಗಿದೆ. ಕೋಮು ಗಲಭೆ ಸಂದರ್ಭದಲ್ಲಿ ಮಾತ್ರ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟು ಪ್ರದರ್ಶಿಸಿ ತಮ್ಮ ಅಸ್ತಿತ್ವ ರುಜುವಾತುಪಡಿಸುತ್ತವೆ. ಕಳೆದ ಎರಡೂವರೆ ವರ್ಷಗಳಲ್ಲಿ ನಡೆದ ಸದನದ ಕಲಾಪಗಳು ಬಿಜೆಪಿಯ ನೈಜ ಕಾಳಜಿಯನ್ನು ಅನಾವರಣ ಮಾಡುತ್ತವೆ. ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಯತ್ನಾಳ್ ತನ್ನ ಇರುವಿಕೆಯನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಜೋಕರ್ ತರಹ ಸದ್ದು ಮಾಡಿದ್ದು ಬಿಟ್ಟರೆ ಬಿಜೆಪಿ ನಾಯಕರು ಪ್ರತಿಪಕ್ಷದ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೊಣೆಗೇಡಿ ಮತ್ತು ದುರ್ಬಲ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಮಾರಕ. ದುರ್ಬಲ ವಿರೋಧ ಪಕ್ಷ ಇರುವುದರಿಂದ ಕಾಂಗ್ರೆಸ್ ಪಕ್ಷದ ಕೆಲವರಿಗೆ ಖುಷಿ ತಂದಿರಬಹುದು. ಆದರೆ ಹೊಣೆಗೇಡಿ ವಿರೋಧ ಪಕ್ಷದಿಂದಾಗಿ ಜನಸಾಮಾನ್ಯರ ದನಿ ಕ್ಷೀಣವಾಗುತ್ತದೆ. ಅಂತಿಮವಾಗಿ ಜನತಂತ್ರ ದುರ್ಬಲ ಎನಿಸಿಕೊಳ್ಳುತ್ತದೆ.

ಬಿ.ಎಸ್. ಯಡಿಯೂರಪ್ಪ ನಂತರ ಬಿಜೆಪಿಯಲ್ಲಿ ಜನನಾಯಕ ರೂಪುಗೊಳ್ಳದೆ ಇರುವುದಕ್ಕೆ ಮುಖ್ಯ ಕಾರಣ ಅವಕಾಶ ಪಡೆದ ನಾಯಕರು ತಮ್ಮ ಸಾಮರ್ಥ್ಯ ರುಜುವಾತು ಪಡಿಸಲು ಶ್ರಮ ಹಾಕದಿರುವುದು. ಆರ್. ಅಶೋಕ್ ಮತ್ತು ವಿಜಯೇಂದ್ರ ಅವರಿಗೆ ಜನನಾಯಕರಾಗಲು ಅವಕಾಶ ಒದಗಿ ಬಂದಿತ್ತು. ಜನರ ದನಿಯಾಗಿ ಹಗಲಿರುಳು ಆ ಇಬ್ಬರೂ ನಾಯಕರು ದುಡಿದಿದ್ದರೆ ಇಷ್ಟೊತ್ತಿಗೆ ಅವರಿಗೆ ಸಾರ್ವಜನಿಕ ಮಾನ್ಯತೆ ದೊರೆಯುತ್ತಿತ್ತು. ಯಾವ ಹೈಕಮಾಂಡ್ ಕೂಡಾ ವೋಟು ತರುವ ಸಾಮರ್ಥ್ಯ ಇರದ ದುರ್ಬಲ ನಾಯಕರನ್ನು ಹೆಚ್ಚು ಕಾಲ ಬೆಂಬಲಿಸುವುದಿಲ್ಲ. ಈ ಹೊತ್ತು ಸಿದ್ದರಾಮಯ್ಯ ತಮ್ಮ ಸಾಮರ್ಥ್ಯದಿಂದ ಕಾಂಗ್ರೆಸ್ ಹೈ ಕಮಾಂಡ್‌ಗೆ ಅನಿವಾರ್ಯ ಆಗಿದ್ದಾರೆ. ಯಡಿಯೂರಪ್ಪ ಕೂಡಾ ಬಿಜೆಪಿಗೆ ಅನಿವಾರ್ಯವಾಗಿದ್ದರು. ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಾಯಕ ಮಾತ್ರ ಜನಸಾಮಾನ್ಯರಿಗೆ ಮತ್ತು ಹೈ ಕಮಾಂಡ್‌ಗೆ ಬೇಕಾದ ಜನನಾಯಕನಾಗುತ್ತಾನೆ. ಆರ್. ಅಶೋಕ್ ಮತ್ತು ವಿಜಯೇಂದ್ರ ಅವರಂಥ ಹೊಣೆಗೇಡಿ ನಾಯಕರು ಜನರಿಗೆ ಮಾತ್ರವಲ್ಲ ಹೈಕಮಾಂಡ್‌ಗೂ ಹೊರೆಯಾಗುತ್ತಾರೆ.

share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X