ಸಚಿವ ಸಂಪುಟ ವಿಸ್ತರಣೆ ಮತ್ತು ಸಾಮಾಜಿಕ ನ್ಯಾಯ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಂತ್ರಗಾರಿಕೆ ಮೇಲೆ ಅಪಾರ ವಿಶ್ವಾಸ ಇದ್ದಂತಿದೆ. ಸದ್ಯ ಬಿಜೆಪಿ ಮತ್ತು ಜೆಡಿಎಸ್ ದುರ್ಬಲವಾಗಿರುವುದರಿಂದ 2028ರ ಗೆಲುವು ತಮ್ಮದೇ ಎಂಬ ಆಶಾ ಭಾವನೆ ಹೊಂದಿದ್ದಾರೆ. ಮತ್ತೊಮ್ಮೆ ಜನಾದೇಶ ಪಡೆದುಕೊಳ್ಳುವ ಇರಾದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇದ್ದರೆ ಅತ್ಯುತ್ತಮ ಸಚಿವ ಸಂಪುಟ ರಚಿಸಿಕೊಳ್ಳಬೇಕು. ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸಗಾರ ಮಂತ್ರಿಗಳು ಸಂಪುಟದಲ್ಲಿ ಇರದಿದ್ದರೆ ಮತ್ತೊಮ್ಮೆ ಜನಾದೇಶ ದಕ್ಕಿಸಿಕೊಳ್ಳುವುದು ಕನಸಿನ ಮಾತಾಗುತ್ತದೆ. ಅತ್ಯುತ್ತಮ ಸಚಿವ ಸಂಪುಟವೆಂದರೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಮತ್ತು ದಕ್ಷ, ಪ್ರತಿಭಾವಂತರನ್ನು ಒಳಗೊಂಡ ಕ್ರಿಯಾಶೀಲ ತಂಡ ಮಾತ್ರ 2028ರ ಚುನಾವಣೆಯಲ್ಲಿ ಗೆಲುವು ತಂದು ಕೊಡಬಲ್ಲದು.
‘‘ಮಂತ್ರಿಗಳು ತಮಗಾಗಲಿ ಅಥವಾ ತಮ್ಮ ಬಂಧು ಮಿತ್ರರಿಗಾಗಲಿ ಲಾಭ ಮಾಡಿಕೊಳ್ಳಬಾರದು. ನಮ್ಮ ಮಂತ್ರಿಗಳು ಜನತೆಗೆ ಸೇರಿದವರು. ಜನತೆಗಾಗಿ ಇರುವವರು. ಮಂತ್ರಿ ಸ್ಥಾನ ದೊರೆಯದ ಅನುಭವಶಾಲಿಗಳಿಗಿಂತ ತಾವೇ ಎಲ್ಲ ಬಲ್ಲವರು ಎಂದು ಮಂತ್ರಿಗಳು ಗರ್ವಿಸದಿರಲಿ.’’
-ಮಹಾತ್ಮಾ ಗಾಂಧೀಜಿ
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಮಹಾತ್ಮಾ ಗಾಂಧೀಜಿ ದಿಲ್ಲಿಯಲ್ಲಿ ಇರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದೆ ಇರುವವರು ಮಂತ್ರಿಗಿರಿ ಗಿಟ್ಟಿಸಲು ಹಂಬಲಿಸುತ್ತಿದ್ದರೆ ಮಹಾತ್ಮಾ ಗಾಂಧೀಜಿ ಕಲ್ಕತ್ತಾ, ನೌಕಾಲಿಗಳಲ್ಲಿನ ಕೋಮು ಗಲಭೆಗಳ ಶಮನಕ್ಕೆ ಪ್ರಯತ್ನಿಸುತ್ತಿದ್ದರು. ಭಾರತ ವಿಭಜನೆಯ ಭಾರವಾದ ನೋವು ಹೊತ್ತು ತಿರುಗಾಡುತ್ತಿದ್ದರು. ಮಹಾತ್ಮಾ ಗಾಂಧೀಜಿಯವರಿಗೆ ಸರಕಾರದಲ್ಲಿನ ಮಂತ್ರಿಗಿರಿಗಿಂತ ಹೊರಗಿದ್ದು ಮಾಡಬಹುದಾದ ಮಹತ್ವದ ಕೆಲಸಗಳು ಸಾಕಷ್ಟು ಇವೆ ಎಂಬ ಭಾವನೆ ಇತ್ತು.
ಆದರೆ ಇತ್ತೀಚಿನ ದಶಕಗಳಲ್ಲಿ ಜನಪ್ರತಿನಿಧಿಗಳು ಮಂತ್ರಿಗಿರಿ ಇದ್ದರೆ ಮಾತ್ರ ಜನಸೇವೆ ಮಾಡಲು ಸಾಧ್ಯ ಎಂಬ ಭ್ರಮೆಯಲ್ಲಿದ್ದಾರೆ. ಮಂತ್ರಿಗಿರಿ ಕೊಟ್ಟರೆ, ಇಂತಹುದೇ ಖಾತೆ ಬೇಕು ಎಂಬ ಬೇಡಿಕೆ ಇರುತ್ತದೆ. ಅವರ ಇಷ್ಟದ ಖಾತೆ ಕೊಟ್ಟರೆ, ಆ ಖಾತೆಯಲ್ಲಿ ಅತ್ಯುತ್ತಮ ಕೆಲಸ ಮಾಡಿ ತೋರಿಸುವ ಕನಸುಗಳೇ ಇರುವುದಿಲ್ಲ. ದರ್ಪ, ದೌಲತ್ತು ಪ್ರದರ್ಶನಕ್ಕೆ ಮಾತ್ರ ಮಂತ್ರಿಗಿರಿಯನ್ನು ಬಳಸುತ್ತಾರೆ. ಅದರಿಂದ ಜನತೆಗೂ ಒಳಿತಾಗುವುದಿಲ್ಲ. ಅವರು ಪ್ರತಿನಿಧಿಸುವ ಪಕ್ಷಕ್ಕೂ ಹೆಸರು ಬರುವುದಿಲ್ಲ. ಅಯೋಗ್ಯ ಮಂತ್ರಿಗಳ ಕಾರಣಕ್ಕೆ ಸರಕಾರ ಮತ್ತು ಪಕ್ಷಗಳಿಗೆ ಕೆಟ್ಟ ಹೆಸರು ಬರುತ್ತದೆ. ಪ್ರಜ್ಞಾವಂತ ಮತದಾರರಿರುವ ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡದ ಮಂತ್ರಿಗಳು ಮತ್ತು ಸರಕಾರವನ್ನು ಮುಲಾಜಿಲ್ಲದೆ ಮನೆಗೆ ಕಳುಹಿಸಿಕೊಡುತ್ತಾರೆ. ಇತ್ತೀಚಿನ ದಶಕಗಳಲ್ಲಿ ಒಂದು ಪ್ರವೃತ್ತಿ ಮಂತ್ರಿಗಳಲ್ಲಿ ಹೆಚ್ಚು ಕಾಣಿಸುತ್ತಿದೆ. ಈ ಕೆಟ್ಟ ಪ್ರವೃತ್ತಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳು ಹೊರತಾಗಿಲ್ಲ. ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ನಾಯಕರು ಮೂರು ಬಾರಿ ಮಂತ್ರಿಯಾಗುವ ಅವಕಾಶ ಪಡೆದುಕೊಂಡಿದ್ದರು. ಮೊದಲ ಬಾರಿಗೆ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಜೊತೆಗೆ ಹಣಕಾಸು ಖಾತೆಯ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಅಧಿಕಾರ ನಡೆಸಿ ಅನುಭವ ಇಲ್ಲದಿದ್ದರೂ ಯಡಿಯೂರಪ್ಪ ಶಕ್ತಿ ಮೀರಿ ಅತ್ಯುತ್ತಮ ಕೆಲಸ ಮಾಡಲು ಪ್ರಯತ್ನಿಸಿದ್ದರು. ತಮಗೆ ಗೊತ್ತಿಲ್ಲದ ವಿಷಯಗಳನ್ನು ಅವರಿವರಿಂದ ತಿಳಿದುಕೊಂಡು ಜಾರಿಗೆ ತರಲು ಯತ್ನಿಸುತ್ತಿದ್ದರು. ಕೆ.ಎಸ್. ಈಶ್ವರಪ್ಪ ಅವರಿಗೂ ಮೂರು ಬಾರಿ ಮಂತ್ರಿಯಾಗುವ ಅವಕಾಶ ದೊರೆತಿತ್ತು. ತಮಗೆ ದೊರೆತ ಮಂತ್ರಿ ಖಾತೆಯಲ್ಲಿ ಅತ್ಯುತ್ತಮ ಕೆಲಸ ಮಾಡಿ ಜನತೆಗೆ ಒಳಿತು ಮಾಡಬೇಕು ಎಂದು ಈಶ್ವರಪ್ಪ ಒಮ್ಮೆಯೂ ಭಾವಿಸಲಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ರೋಷಾವೇಷದ ಟೀಕೆ ಮಾಡುತ್ತಾ ಮಹಾನ್ ದೇಶಭಕ್ತರ ಪೋಸು ಕೊಟ್ಟರೇ ಹೊರತು ಹೆಜ್ಜೆ ಗುರುತು ಮೂಡಿಸುವ ಸಾಧನೆ ಯಾವ ಖಾತೆಗಳಲ್ಲೂ ಮಾಡಲಿಲ್ಲ. ಮುಸ್ಲಿಮ್ ಸಮುದಾಯದ ವಿರುದ್ಧ ಕೆಂಡ ಕಾರುವುದು, ಬಿಜೆಪಿಯ ಕೋಮುವಾದಿ ನಿಲುವನ್ನು ಟೀಕಿಸುವ ಪ್ರಗತಿಪರರ ನಾಲಿಗೆ ಕತ್ತರಿಸಬೇಕು ಎಂದು ಬಾಯಿ ಹರಿಬಿಡುವುದು ಈಶ್ವರಪ್ಪ ಅವರ ಜಾಯಮಾನವೇ ಆಗಿತ್ತು. ಸಂಘ ಪರಿವಾರದ ಹಿರಿಯರಿಗೆ ಖುಷಿಪಡಿಸುವ ಹೇಳಿಕೆಗಳನ್ನು ನೀಡುವುದೇ ಹಿಂದುತ್ವ ಎಂದು ಭಾವಿಸಿರುವ ಹಲವಾರು ನಾಯಕರು ಬಿಜೆಪಿಯಲ್ಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ. ರವಿ, ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್, ವಿ. ಸುನೀಲ್ ಕುಮಾರ್, ಅನಂತಕುಮಾರ್ ಹೆಗಡೆ ಮುಂತಾದವರು ಮಂತ್ರಿಗಿರಿ ಸಿಕ್ಕಾಗ ಅತ್ಯುತ್ತಮ ಕೆಲಸ ಮಾಡಿ ತೋರಿಸಲೇ ಇಲ್ಲ.
ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ್, ಜಗದೀಶ್ ಶೆಟ್ಟರ್, ಸಿ.ಎನ್. ಅಶ್ವತ್ಥ ನಾರಾಯಣ್, ಆರ್. ಅಶೋಕ್ ಅವರಿಗೆ ಕೈಗಾರಿಕೆ, ಜಲಸಂಪನ್ಮೂಲ, ಲೋಕೋಪಯೋಗಿ, ಕಂದಾಯ, ಉನ್ನತ ಶಿಕ್ಷಣ, ಆರೋಗ್ಯ, ಗೃಹದಂತಹ ಮಹತ್ವದ ಖಾತೆ ದೊರೆತಾಗಲೂ ಅತ್ಯುತ್ತಮ ಕೆಲಸ ಮಾಡಿ ತೋರಿಸಲಿಲ್ಲ. ಸಂಘ ಪರಿವಾರದ ಮುಖಂಡರಿಗೆ ಇಷ್ಟವಾಗದ ಹೇಳಿಕೆಗಳನ್ನು ಕೊಡುತ್ತಿರಲಿಲ್ಲ. ಅವರೆಲ್ಲ ಹಣದ ಹಿಂದೆ ಬಿದ್ದು ವ್ಯಕ್ತಿಗತ ಅಭಿವೃದ್ಧಿ ಮಾಡಿಕೊಂಡರು. ಬಿ. ಶ್ರೀರಾಮುಲು ಅವರಿಗೆ ಸಾಕಷ್ಟು ಅವಕಾಶಗಳು ದೊರೆತಿವೆ. ಆತ ಒಳ್ಳೆಯ ಮಂತ್ರಿ, ಒಳ್ಳೆಯ ಜನನಾಯಕನಾಗಿ ಹೊರಹೊಮ್ಮಲೇ ಇಲ್ಲ. ಜನತಾ ಪರಿವಾರದಿಂದ ಬಿಜೆಪಿಗೆ ಬಂದಿದ್ದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೆ ಏರಿದರು. ಎರಡು ವರ್ಷಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದರೆ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚವಾಣ್ ಹಾಗೆ ಜನನಾಯಕನಾಗಿ ಬೆಳೆಯುವ ಅವಕಾಶಗಳಿದ್ದವು. ಸಂಘ ಪರಿವಾರದವರನ್ನು ಅತಿಯಾಗಿ ಮೆಚ್ಚಿಸಲು ಕೋಮುವಾದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಯತ್ನಿಸಿದರು. ಅದೇ ಅವರಿಗೆ ಮುಳುವಾಗಿ ಪರಿಣಮಿಸಿತ್ತು. ಕರ್ನಾಟಕದ ಜನತೆಗೆ ಅಗತ್ಯವಾಗಿರುವ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೆ ಬಸವರಾಜ ಬೊಮ್ಮಾಯಿ ಭವಿಷ್ಯವೇ ಭಿನ್ನವಾಗಿರುತ್ತಿತ್ತು. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮಾಡಿದ ಕೋಮುವಾದಿ ಕೆಲಸಗಳಿಂದ ಶಿಗ್ಗಾವಿಯಲ್ಲಿ ಅವರ ಮಗ ಭರತ್ ಬೊಮ್ಮಾಯಿ ಸೋಲುಣ್ಣಬೇಕಾಯಿತು.
ಕರ್ನಾಟಕ ಅಭಿವೃದ್ಧಿ ಹೊಂದಿದ ರಾಜ್ಯ. ಇಲ್ಲಿ ಹಿಂದಿನ ಸರಕಾರಕ್ಕಿಂತ ಅತ್ಯುತ್ತಮ ಕೆಲಸಗಳು ಮಾಡಿದರೆ ಮಾತ್ರ ಮತದಾರ ಒಪ್ಪಿಕೊಳ್ಳುತ್ತಾರೆ. ಮಾತಿನ ಮಂಟಪ ಕಟ್ಟಲು ಯತ್ನಿಸಿದರೆ ಮುಲಾಜಿಲ್ಲದೆ ಸೋಲಿಸುತ್ತಾರೆ. ಹಿಂದುತ್ವದ ರಾಜಕಾರಣವೆಂದರೆ: ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ಪಕ್ಷವನ್ನು, ಆ ಪಕ್ಷದ ನಾಯಕರಾದ ಸೋನಿಯಾ ಗಾಂಧಿಯವರನ್ನು ಕೆಟ್ಟ ಪದಗಳಲ್ಲಿ ನಿಂದಿಸುವುದೆಂದೇ ಭಾವಿಸಿದ್ದಾರೆ. ಅದರಾಚೆ ಅವರಿಗೆ ಹಿಂದೂ ಧರ್ಮದ ಬಗ್ಗೆಯಾಗಲಿ, ನಾಡಿನ ಅಭಿವೃದ್ಧಿ ಬಗ್ಗೆಯಾಗಲಿ ಅಥವಾ ತಾವು ವಹಿಸಿಕೊಂಡ ಖಾತೆಯ ಬಗ್ಗೆಯಾಗಲಿ ಕನಿಷ್ಠ ಜ್ಞಾನ ಇರುವುದಿಲ್ಲ. ಬಿಜೆಪಿಯ ವಿ. ಸುನೀಲ್ ಕುಮಾರ್ ಅವರಿಗೆ ಇಂಧನ ಖಾತೆ ನೀಡಿದ್ದರು. ಅಲ್ಲಿ ಹಣ ಬಾಚಿಕೊಳ್ಳುವುದು ಬಿಟ್ಟು ಮತ್ತೇನನ್ನು ಮಾಡಲಿಲ್ಲ. ಕೆ.ಎಸ್. ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಖಾತೆ ದೊರೆತಿತ್ತು. ಇನ್ನೊಬ್ಬ ನಜೀರ್ ಸಾಬ್ ಆಗುವ ಅವಕಾಶ ಅವರಿಗಿತ್ತು. ಎಂಜಲು ಕಾಸಿಗೆ ಕೈಚಾಚಿ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದರು. ಮಂತ್ರಿಗಿರಿಗೆ ರಾಜೀನಾಮೆ ನೀಡಿ ಮರ್ಯಾದೆ ಕಳೆದುಕೊಂಡರು.
ಬರೀ ಟೀಕಾಸ್ತ್ರ ಬಳಸಿಯೇ ದಕ್ಷ, ಪ್ರಾಮಾಣಿಕ ಮಂತ್ರಿಯೆನಿಸಿಕೊಳ್ಳ ಬಹುದು ಎಂಬ ಭ್ರಮೆ ಕಾಂಗ್ರೆಸ್ ವಲಯದಲ್ಲೂ ಮೂಡಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಪ್ರಮುಖ ಖಾತೆಗಳಿಗೆ ಮಂತ್ರಿಯಾಗಿದ್ದ ಕೆಲವರು ಮೋದಿ, ಆರೆಸ್ಸೆಸ್ ವಿರುದ್ಧ ಕತ್ತಿ ಝಳಪಿಸಿ ಸುದ್ದಿಯಾದರೇ ಹೊರತು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಹೆಜ್ಜೆ ಗುರುತು ಮೂಡಿಸಲಿಲ್ಲ. ಮಂತ್ರಿಯಾದವರು ಸೈದ್ಧಾಂತಿಕ ಟೀಕೆ ಟಿಪ್ಪಣಿ ಮಾಡಲೇಬಾರದು ಅಂತ ಅಲ್ಲ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಲೇಬೇಕು. ಕೋಮುವಾದಿ ರಾಜಕಾರಣದ ಹುನ್ನಾರಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಮಂತ್ರಿಯಾದವರು, ಅದರಲ್ಲೂ ಮಹತ್ವದ ಖಾತೆಯ ಮಂತ್ರಿಯಾದವರು ಆ ಇಲಾಖೆಯಲ್ಲಿ ಅತ್ಯುತ್ತಮ ಕೆಲಸ ಮಾಡುವ ಮೂಲಕ ಕೋಮುವಾದಿ ಶಕ್ತಿಗಳ ಹುನ್ನಾರವನ್ನು ವಿಫಲಗೊಳಿಸಬೇಕು. ಮೋದಿ ಮತ್ತು ಆರೆಸ್ಸೆಸ್ ವಿರುದ್ಧ ಮಾತಾಡುವ ವ್ಯಸನಿಗಳಾಗಬಾರದು. ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ವಕ್ತಾರರು ಪ್ರತಿನಿತ್ಯ ಕೋಮುವಾದಿ ರಾಜಕಾರಣದ ವಿರುದ್ಧ ಮಾತಾಡುತ್ತಲೇ ಇರಬೇಕು. ಮಂತ್ರಿಯಾದವರು ಸೈದ್ಧಾಂತಿಕ ಬದ್ಧತೆಯಿಂದ ಕೋಮುವಾದಿ ರಾಜಕಾರಣದ ವಿರುದ್ಧ ಮಾತನಾಡುವುದು ಅತ್ಯಗತ್ಯ. ಆದರೆ ಕೇವಲ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ವ್ಯಸನಿಯಂತೆ ಟೀಕಿಸುವುದು ಒಳ್ಳೆಯದಲ್ಲ. ಪ್ರತೀ ದಿನ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿ ಇರುವವರು ಪಕ್ಷದ ವಕ್ತಾರರಾಗಿ ಕಾರ್ಯ ನಿರ್ವಹಿಸಬೇಕು. ಮಂತ್ರಿಗಿರಿಯ ಹೊಣೆಗಾರಿಕೆ ವಹಿಸಿಕೊಂಡರೆ ಅಲ್ಲಿ ಅತ್ಯುತ್ತಮ ಮಾದರಿ ಕೆಲಸ ಮಾಡಿ ಜನರ ಮೆಚ್ಚುಗೆ ಗಳಿಸಬೇಕು. ಅತ್ಯುತ್ತಮ ಸರಕಾರ ನೀಡುವುದರತ್ತ ಯಾರೂ ಗಮನ ಹರಿಸುವುದಿಲ್ಲ. ಒಂದೋ ಹಣ ಮಾಡುವುದರಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುತ್ತಾರೆ. ಇಲ್ಲ ಸುದ್ದಿ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಅತ್ಯುತ್ತಮ ಕೆಲಸ ಮಾಡಿ ಪ್ರಚಾರ ಪಡೆದುಕೊಳ್ಳುವವರ ಸಂಖ್ಯೆ ಕುಸಿಯುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಗತಿಪರರನ್ನು ಕಟುವಾಗಿ ಟೀಕಿಸಿ ಉಗ್ರ ಹಿಂದೂ -ಉಗ್ರ ದೇಶಭಕ್ತ ಎಂದು ಭ್ರಮಿಸಿದ ಈಶ್ವರಪ್ಪ, ಬಸನಗೌಡ ಪಾಟೀಲ್, ಅನಂತಕುಮಾರ್ ಹೆಗಡೆ ಬಿಜೆಪಿಗೆ ಭಾರವಾದರು. ಮೋದಿ ಮತ್ತು ಆರೆಸ್ಸೆಸ್ ಟೀಕಿಸಿದ ಮಾತ್ರಕ್ಕೆ ಪ್ರಗತಿಪರ ಆಗುವುದಿಲ್ಲ. ಆರೆಸ್ಸೆಸ್ ವಿಚಾರಧಾರೆಗಳನ್ನು ಬದುಕಿನ ಎಲ್ಲ ಹಂತದಲ್ಲೂ ವಿಫಲಗೊಳಿಸುವುದು ಕಾಂಗ್ರೆಸ್ ಪಕ್ಷದ ಮಂತ್ರಿಗಳ ಗುರಿಯಾಗಬೇಕು. ಸಿದ್ದರಾಮಯ್ಯ ಅವರು ಸೈದ್ಧಾಂತಿಕವಾಗಿ ಕೋಮುವಾದಿ ಶಕ್ತಿಗಳ ವಿರುದ್ಧವಾಗಿದ್ದರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಕರ್ನಾಟಕದ ಮುಸ್ಲಿಮ್ ಸಮುದಾಯದ ಹಿತ ಕಾಪಾಡುವಲ್ಲಿ ಸಿದ್ದರಾಮಯ್ಯ ಸರಕಾರ ವಿಶೇಷ ಕಾಳಜಿಯೇನು ತೋರಲಿಲ್ಲ. ಮತಾಂತರ ನಿಷೇಧ ಕಾಯ್ದೆ ರದ್ದು ಪಡಿಸಲಿಲ್ಲ. ಮುಸ್ಲಿಮ್ ಸಮುದಾಯಕ್ಕಿರುವ 2ಬಿ ಮೀಸಲಾತಿ ಮರುಸ್ಥಾಪಿಸಲಿಲ್ಲ. ಕೋಮುವಾದಿ ಶಕ್ತಿಗಳ ವಿರುದ್ಧ ಮಾತ ನಾಡಿದಷ್ಟೇ ಅವರ ಹುನ್ನಾರಗಳನ್ನು ವಿಫಲಗೊಳಿಸುವುದು ಮುಖ್ಯವಾಗಬೇಕು. ಕರ್ನಾಟಕ ಮಾತ್ರವಲ್ಲ ಭಾರತದೆಲ್ಲೆಡೆ ಮುಸ್ಲಿಮ್ ಸಮುದಾಯ ಆತಂಕದಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಆರೆಸ್ಸೆಸ್ ತನ್ನ ಕಾರ್ಯ ಚಟುವಟಿಕೆಗಳಲ್ಲಿಯೇ ಮುಸ್ಲಿಮ್ ವಿರೋಧಿ ಧೋರಣೆ ಅನುಸರಿಸುತ್ತಿದೆ. ಕಾಂಗ್ರೆಸ್ ಸರಕಾರ ಇರುವ ರಾಜ್ಯಗಳಲ್ಲಿ ಮುಸ್ಲಿಮ್ ಸಮುದಾಯ ಆತಂಕವಿಲ್ಲದ ಜೀವನ ನಡೆಸುವ ವಾತಾವರಣ ನಿರ್ಮಾಣ ಮಾಡಬೇಕು. ಅತ್ಯುತ್ತಮ ಕೆಲಸ ಮಾಡುವ ಮಂತ್ರಿಗಳು ನಮಗೆ ಬೇಕು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ವಿಸ್ತರಣೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಅತ್ಯುತ್ತಮ ಕೆಲಸ ಮಾಡುವ ಶಾಸಕರಿಗೆ ಅವಕಾಶ ನೀಡಬೇಕು. ಇನ್ನು ಎರಡು ವರ್ಷಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸಬೇಕಾಗಿದೆ. ಮೂರು ವರ್ಷಗಳ ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಿ ಜನ ಮೆಚ್ಚುವ ಆಡಳಿತ ನೀಡಿದರೆ ಮಾತ್ರ ಮತ್ತೊಮ್ಮೆ ಜನಾದೇಶ ಪಡೆದುಕೊಳ್ಳಬಹುದಾಗಿದೆ. 1985ರಿಂದ ಇಲ್ಲಿಯವರೆಗೆ ಆಡಳಿತ ನಡೆಸಿದ ಯಾವ ಸರಕಾರವೂ ಎರಡನೇ ಅವಧಿಗೆ ಜನಾದೇಶ ಪಡೆದುಕೊಂಡ ನಿದರ್ಶನ ಇಲ್ಲ. ರಾಮಕೃಷ್ಣ ಹೆಗಡೆಯವರನ್ನು ಮಾಧ್ಯಮಗಳು ಅತ್ಯಂತ ಜನಾನುರಾಗಿ ನಾಯಕ ಎಂದು ಬಿಂಬಿಸಿದ್ದವು. ಆದರೆ ಅವರ ನೇತೃತ್ವದ ಸರಕಾರವೂ 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯವಾಗಿ ಮುಗ್ಗರಿಸಿತ್ತು. 1999ರಲ್ಲಿ ಅಧಿಕಾರಕ್ಕೆ ಬಂದ ಎಸ್.ಎಂ. ಕೃಷ್ಣ ಸರಕಾರ ಯಾವುದೇ ಭಿನ್ನಮತ ಇಲ್ಲದೆ ಅವಧಿ ಪೂರೈಸಿತ್ತು. ಬೆಂಗಳೂರು ಅಭಿವೃದ್ಧಿ ಪಡಿಸಿದ ಹೆಗ್ಗಳಿಕೆ ಎಸ್.ಎಂ. ಕೃಷ್ಣ ಅವರದಾಗಿತ್ತು. ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎಂಬ ಬಿರುದಾವಳಿ ಮಾಧ್ಯಮಗಳಿಂದ ದಯಪಾಲಿಸಲಾಗಿತ್ತು. ಅಷ್ಟಕ್ಕೂ ಆಗ ಜನತಾಪರಿವಾರ ಎರಡು ಹೋಳಾಗಿ ದುರ್ಬಲವಾಗಿತ್ತು. ಜನತಾ ಪರಿವಾರದ ಅನೇಕ ನಾಯಕರು ಕಾಂಗ್ರೆಸ್ ಮತ್ತು ಬಿಜೆಪಿಗೆ ವಲಸೆ ಹೋಗಿದ್ದರು. ಬಿ.ಬಿ. ಶಿವಪ್ಪರಂಥ ಬಿಜೆಪಿಯ ಹಿರಿಯ ನಾಯಕ ಕಾಂಗ್ರೆಸ್ ಸೇರಿಕೊಂಡಿದ್ದರು. ಎಸ್.ಎಂ. ಕೃಷ್ಣ ಸರಕಾರವನ್ನು ಮಾಧ್ಯಮಗಳು ಖಳ ನಾಯಕನ ಸ್ಥಾನದಲ್ಲಿ ನಿಲ್ಲಿಸಿರಲಿಲ್ಲ. ಇಷ್ಟೆಲ್ಲ ಅನುಕೂಲಕರ ವಾತಾವರಣ ಇದ್ದಾಗಲೂ 2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದುಕೊಂಡಿದ್ದು ಕೇವಲ 65 ಶಾಸಕರ ಬಲ. ಸರಕಾರದಲ್ಲಿನ ಮಂತ್ರಿಗಳು ಅತ್ಯುತ್ತಮ ಕೆಲಸ ಮಾಡಿರಲಿಲ್ಲ. ಎಸ್.ಎಂ. ಕೃಷ್ಣ ಸರಕಾರದ ಅರ್ಧಕ್ಕಿಂತ ಹೆಚ್ಚು ಮಂತ್ರಿಗಳು ಚುನಾವಣೆಯಲ್ಲಿ ಸೋತಿದ್ದರು.
ಕ್ರಿಯಾಶೀಲರ ಪಡೆ ಕಟ್ಟಿಕೊಳ್ಳುವುದು, ಅತ್ಯುತ್ತಮ ಮಂತ್ರಿಮಂಡಲ ಹೊಂದುವುದು ಬಹಳ ಮುಖ್ಯ. ಅತ್ಯುತ್ತಮ ತಂಡ ಕಟ್ಟಿಕೊಂಡರೆ ಮಾತ್ರ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಜನಾದೇಶ ಪಡೆದುಕೊಳ್ಳಬಹುದು. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರಳ ಬಹುಮತ ದಕ್ಕಿಸಿಕೊಂಡರೆ ಅವರು ಜನನಾಯಕರಾಗಿ ಹೊರಹೊಮ್ಮತ್ತಾರೆ. ಸರಕಾರ ಮತ್ತು ಸರಕಾರದಲ್ಲಿನ ಮಂತ್ರಿಗಳು ಅತ್ಯುತ್ತಮ ಕೆಲಸ ಮಾಡದಿದ್ದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಸುದೀರ್ಘ ರಾಜಕೀಯ ಅನುಭವವೂ ಕೈ ಚೆಲ್ಲುತ್ತದೆ. ಕೆಟ್ಟ ಆಡಳಿತವನ್ನು ಎಷ್ಟೇ ಸಮರ್ಥಿಸಿಕೊಂಡರೂ ಮತದಾರರ ವಿಶ್ವಾಸ ಗಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ವ್ಯಕ್ತಿಯ ಸಾಮರ್ಥ್ಯಕ್ಕೆ ತಕ್ಕ ಖಾತೆ ನೀಡಿರಲಿಲ್ಲ. ಸಾಹಿತ್ಯದ ಗಂಧ ಗಾಳಿ ಇಲ್ಲದ ಶಿವರಾಜ್ ತಂಗಡಗಿಯವರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡಲಾಗಿತ್ತು. ಅತ್ಯಂತ ಅನುಭವಿ ಕೆಲಸಗಾರ ತನ್ವೀರ್ ಶೇಠ್ ಅವರನ್ನು ಮಂತ್ರಿ ಮಂಡಲದಿಂದ ಹೊರಗಿಟ್ಟು ರಹೀಮ್ ಖಾನ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ರಹೀಮ್ ಖಾನ್ ತನಗೆ ಸಿಕ್ಕ ಖಾತೆಗೆ ನ್ಯಾಯ ಒದಗಿಸಲಿಲ್ಲ. ಉನ್ನತ ಶಿಕ್ಷಣದ ಬಗ್ಗೆ ಪ್ರೀತಿ ಇಲ್ಲದ ಎಂ.ಸಿ. ಸುಧಾಕರ್ ಆ ಖಾತೆಯಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಲೇ ಇಲ್ಲ. ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಹೊರಗಿಟ್ಟು ಅದೇ ಸಮುದಾಯದ ಮಧು ಬಂಗಾರಪ್ಪ ಅವರನ್ನು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರನ್ನಾಗಿಸಿದ್ದರು. ಈ ಹೊತ್ತು ಆ ಇಲಾಖೆ ಪಾತಾಳ ಕಂಡಿದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಮಹಿಳಾ ನ್ಯಾಯ ಕಡ್ಡಾಯವಾಗಿ ಪಾಲಿಸಲೇಬೇಕು. ಹಾಗಂತ ದಕ್ಷ ಮತ್ತು ಪ್ರತಿಭಾವಂತರನ್ನು ಮಂತ್ರಿ ಮಂಡಲದಿಂದ ಹೊರಗಿಡಬೇಕು ಅಂತ ಅಲ್ಲ. ಖ್ಯಾತ ಅರ್ಥ ಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಹಣಕಾಸು ಮಂತ್ರಿಯಾಗಿದ್ದು ಪ್ರತಿಭಾ ನ್ಯಾಯದ ಕಾರಣಕ್ಕೆ. ವಿಧಾನಪರಿಷತ್ ಸದಸ್ಯರಲ್ಲಿ ದಕ್ಷರು, ಪ್ರಾಮಾಣಿಕರು ಮತ್ತು ಪ್ರತಿಭಾವಂತರು ಇದ್ದರೆ ಅವರನ್ನು ಮಂತ್ರಿ ಮಾಡಿ ಪ್ರಮುಖ ಖಾತೆ ನೀಡಬೇಕು. ಜನಸಾಮಾನ್ಯರ ಸಂಪರ್ಕಕ್ಕೆ ಬರುವ ಪ್ರಮುಖ ಖಾತೆಗಳಿಗೆ ಅತ್ಯುತ್ತಮ ಕೆಲಸಗಾರರನ್ನು ಮಂತ್ರಿ ಮಾಡಿದರೆ ಅಭಿವೃದ್ಧಿ ಯೋಜನೆಗಳ ಫಲಗಳನ್ನು ತಲುಪಿಸುತ್ತಾರೆ. ಸಾಮಾಜಿಕ ನ್ಯಾಯ ಪಾಲನೆ ಸಾಮಾಜಿಕ ಸಮೀಕರಣದ ದೃಷ್ಟಿಯಿಂದ ಅನಿವಾರ್ಯ. ಸಿದ್ದರಾಮಯ್ಯ ಸಂಪುಟದಲ್ಲಿ ಕಬ್ಬಲಿಗ ಮತ್ತು ಲಂಬಾಣಿ ಸಮುದಾಯದ ಪ್ರಾತಿನಿಧ್ಯವೇ ಇರಲಿಲ್ಲ. ಅವರ ಸಂಪುಟದಲ್ಲಿ ಮಹಿಳಾ ನ್ಯಾಯ ಮಾಯವಾಗಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಏಕೈಕ ಮಹಿಳಾ ಮಂತ್ರಿಯಾಗಿದ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಷ್ಟು ಅನುಭವ ಇಲ್ಲದ, ಸಾಮಾಜಿಕ ನ್ಯಾಯದ ಬಗ್ಗೆ ಹೆಚ್ಚು ಗೊತ್ತಿಲ್ಲದ ತಮಿಳನಾಡು ಮುಖ್ಯಮಂತ್ರಿ ಸಿ. ಜೋಸೆೆಫ್ ವಿಜಯ್ ತನ್ನ ಮಂತ್ರಿ ಮಂಡಲದಲ್ಲಿ ಪ್ರತಿಭಾವಂತರಾದ ನಾಲ್ಕು ಜನ ಮಹಿಳೆಯರಿಗೆ ಸ್ಥಾನ ಕಲ್ಪಿಸಿದ್ದಾರೆ. ಎಸ್. ಕೀರ್ತನಾ, ಎಸ್. ಕಮಲಿ ಅತ್ಯಂತ ಕಿರಿಯ ವಯಸ್ಸಿನ ಮಂತ್ರಿಗಳು. ಜಗದೀಶ್ವರಿ ಮತ್ತು ಸಿ. ವಿಜಯಲಕ್ಷ್ಮಿ ಅನುಭವಿಗಳು.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ದೊರಕಿತ್ತು. ನಂತರ ಬಂದ ಎಲ್ಲ ಮುಖ್ಯಮಂತ್ರಿಗಳೂ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ ಕಲ್ಪಿಸಿದ್ದರು. ಮಹಿಳಾ ಮತದಾರರನ್ನು ಸೆಳೆಯುವ ತಂತ್ರದ ಭಾಗವಾಗಿಯಾದರೂ ಹೆಚ್ಚು ಪ್ರಾತಿನಿಧ್ಯ ನೀಡುವುದು ಅಗತ್ಯ. ದಶಕಗಳ ಹಿಂದೆ ಮೇಲ್ಮನೆಯ ಪ್ರತಿಭಾವಂತ ಸದಸ್ಯರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಅತ್ಯುತ್ತಮ ಖಾತೆ ನೀಡುತ್ತಿದ್ದರು. ಈಗ ಮೇಲ್ಮನೆ ಸದಸ್ಯರ ಪ್ರಾತಿನಿಧ್ಯ ಕಡಿಮೆಯಾಗಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಎನ್.ಎಸ್. ಭೋಸರಾಜ್ ಎಂಬ ಉದ್ಯಮಿಯನ್ನು ಮೆಲ್ಮನೆಯಿಂದ ಮಂತ್ರಿ ಮಾಡಿದ್ದರು. ಆಗ ಮೇಲ್ಮನೆಯಲ್ಲಿ ಬಿ.ಕೆ. ಹರಿಪ್ರಸಾದ್ ಅವರೂ ಇದ್ದರು. ಅವರನ್ನು ಮಂತ್ರಿ ಮಾಡಿದ್ದರೆ ಸಭಾ ನಾಯಕ ಹುದ್ದೆಗೆ ಘನತೆ ಪ್ರಾಪ್ತವಾಗುತ್ತಿತ್ತು. ಪ್ರಾದೇಶಿಕ ನ್ಯಾಯ ಕಡ್ಡಾಯವಾಗಿ ಪರಿಗಣಿಸಬೇಕು. ಕೆಲವು ಜಿಲ್ಲೆಗಳಿಗೆ ಹೆಚ್ಚು ಸಚಿವ ಸ್ಥಾನ, ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ನೀಡುವುದಿಲ್ಲ. ಇದು ಸಹಜವಾಗಿಯೇ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಯಡಿಯೂರಪ್ಪ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಕಲಬುರಗಿಯಂಥ ದೊಡ್ಡ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಿರಲಿಲ್ಲ. ಪರಿಣಾಮವಾಗಿ ಕಲಬುರಗಿ ಜಿಲ್ಲೆಯ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಂತ್ರಗಾರಿಕೆ ಮೇಲೆ ಅಪಾರ ವಿಶ್ವಾಸ ಇದ್ದಂತಿದೆ. ಸದ್ಯ ಬಿಜೆಪಿ ಮತ್ತು ಜೆಡಿಎಸ್ ದುರ್ಬಲವಾಗಿರುವುದರಿಂದ 2028ರ ಗೆಲುವು ತಮ್ಮದೇ ಎಂಬ ಆಶಾ ಭಾವನೆ ಹೊಂದಿದ್ದಾರೆ. ಮತ್ತೊಮ್ಮೆ ಜನಾದೇಶ ಪಡೆದುಕೊಳ್ಳುವ ಇರಾದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇದ್ದರೆ ಅತ್ಯುತ್ತಮ ಸಚಿವ ಸಂಪುಟ ರಚಿಸಿಕೊಳ್ಳಬೇಕು. ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸಗಾರ ಮಂತ್ರಿಗಳು ಸಂಪುಟದಲ್ಲಿ ಇರದಿದ್ದರೆ ಮತ್ತೊಮ್ಮೆ ಜನಾದೇಶ ದಕ್ಕಿಸಿಕೊಳ್ಳುವುದು ಕನಸಿನ ಮಾತಾಗುತ್ತದೆ. ಅತ್ಯುತ್ತಮ ಸಚಿವ ಸಂಪುಟವೆಂದರೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಮತ್ತು ದಕ್ಷ, ಪ್ರತಿಭಾವಂತರನ್ನು ಒಳಗೊಂಡ ಕ್ರಿಯಾಶೀಲ ತಂಡ ಮಾತ್ರ 2028ರ ಚುನಾವಣೆಯಲ್ಲಿ ಗೆಲುವು ತಂದು ಕೊಡಬಲ್ಲದು. ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಯೋಜನೆಗಳು ಮತದಾರರಿಗೆ ತಲುಪಬೇಕು. ಕೃಷ್ಣ ಬೈರೇಗೌಡರ ತರಹ ಮನದಾಳದ ಕಾಳಜಿಯೊಂದಿಗೆ ಅಭಿವೃದ್ಧಿ ಕೆಲಸ ಮಾಡುವ ಸಚಿವರ ಸಂಖ್ಯೆ ಹೆಚ್ಚಬೇಕು. ಮಂತ್ರಿ ಹುದ್ದೆ ಪಡೆದುಕೊಳ್ಳುವುದೇ ಸಾಧನೆಯಾಗಬಾರದು. ಮಂತ್ರಿಯಾಗಿ ಜನಮೆಚ್ಚುವ ಕೆಲಸ ಮಾಡಿ ಸಾಧನೆ ಎಂದು ಹೇಳಿಕೊಳ್ಳಬೇಕು. ಅತ್ಯುತ್ತಮ ಟೀಕೆಗಳು ಅಭಿವೃದ್ಧಿಗೆ ಪೂರಕವಾಗಿರುತ್ತವೆ. ಅವು ಯಾವತ್ತೂ ಸಾಯುವುದಿಲ್ಲ. ಅತ್ಯುತ್ತಮ ಅಭಿವೃದ್ಧಿ ಕೆಲಸಗಳು ಮಾತ್ರ ಜನಮಾನಸದಲ್ಲಿ ಬಹುಕಾಲ ಬಾಳುತ್ತದೆ. ಹಣ ಮಾಡುವುದಕ್ಕೆಂದೇ ಮಾಡುವ ಅಭಿವೃದ್ಧಿ ಕೆಲಸಗಳ ಆಯುಷ್ಯ ಬಹಳ ಕಡಿಮೆ. ಕರ್ನಾಟಕದ ಮತದಾರ ಅಂತಹ ಅಭಿವೃದ್ಧಿ ಮಾದರಿಯನ್ನೇ ಹಲವು ಬಾರಿ ತಿರಸ್ಕರಿಸಿದ್ದಾರೆ.






