ಕಾಂಗ್ರೆಸ್ ಪ್ರಣಾಳಿಕೆ-ಈಡೇರದ ಭರವಸೆಗಳು

ನರೇಂದ್ರ ಮೋದಿಯವರ ಭರವಸೆಯಂತೆ ಕಾಂಗ್ರೆಸ್ ಪಕ್ಷದ ಭರವಸೆಗಳು ಪ್ರಣಾಳಿಕೆಯ ಕೈಪಿಡಿಯಲ್ಲಿ ಉಳಿದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಕಾಂಗ್ರೆಸ್ ಪಕ್ಷ ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಕಾಲ ಮಿತಿಯಲ್ಲಿ ಅನುಷ್ಠಾನಗೊಳಿಸಿದರೆ ಮಾತ್ರ ಸರಕಾರದ ಶ್ರಮ ಸಾರ್ಥಕವಾಗುತ್ತದೆ. ಜನಸಾಮಾನ್ಯರಿಗೆ ಅಭಿವೃದ್ಧಿ ಯೋಜನೆಗಳ ಫಲ ತಲುಪಿಸದಿದ್ದರೆ ಎಷ್ಟೇ ಪ್ರಚಾರ ಮಾಡಿಕೊಂಡರೂ ಮತದಾರ ಒಲಿಯಲಾರ. ಮೂರು ವರ್ಷ ಮೂರು ತಿಂಗಳು ಕಳೆದ ಮೇಲಾದರೂ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಣಾಳಿಕೆಯನ್ನು ಮತ್ತು ಅಲ್ಲಿನ ಭರವಸೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯ ಪ್ರವೃತ್ತರಾದರೆ ಜನ ಮೆಚ್ಚಿಕೊಂಡಾರು.
ಪ್ರತಿಯೊಂದು ರಾಜಕೀಯ ಪಕ್ಷ ಪ್ರತೀ ಚುನಾವಣೆಯಲ್ಲಿ ಭರವಸೆಗಳನ್ನು ನೀಡುತ್ತಲೇ ಇರುತ್ತವೆ. ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಾರೆ. ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ವರಸೆ ಬದಲಾಯಿಸುತ್ತಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಭಾರತವನ್ನು ಸ್ವರ್ಗ ಮಾಡುವುದಾಗಿ ಭರವಸೆಗಳನ್ನು ನೀಡಿದ್ದರು. ಆದರೆ ಭಾರತ ದೇಶದ ಯುವಕರು ಕೇಂದ್ರ ಸರಕಾರದ ವಿರುದ್ಧ ಆಕ್ರೋಶಭರಿತರಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಜರಾತ್ ಅಭಿವೃದ್ಧಿ ಮಾದರಿಯ ಕನಸು ಬಿತ್ತಿದ ನರೇಂದ್ರ ಮೋದಿಯವರು 2014ರ ಲೋಕಸಭಾ ಚುನಾವಣೆಯಲ್ಲಿ ಹೊರದೇಶಗಳಲ್ಲಿ ಬಚ್ಚಿಟ್ಟ ಬಾರತೀಯರ ಕಪ್ಪು ಹಣವನ್ನು ತರುವುದಾಗಿ ಭರವಸೆ ನೀಡಿದ್ದರು. ಹಾಗೆ ತಂದ ಹಣವನ್ನು ಪ್ರತೀ ಭಾರತೀಯರ ಬ್ಯಾಂಕ್ ಖಾತೆಗೆ ರೂ. ಹದಿನೈದು ಲಕ್ಷದಂತೆ ಜಮಾ ಮಾಡುವುದಾಗಿ ಹೇಳಿದ್ದರು. ಎರಡನೇ ಚುನಾವಣೆಯಲ್ಲಿ ಅಚ್ಛೇ ದಿನ ತರುವುದಾಗಿ ಪುಂಗಿ ಊದಿದ್ದರು. ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಯುವ ಜನರನ್ನು ನಂಬಿಸಿದ್ದರು. ಭಾರತದಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿದ್ದರೂ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದು ನಿಂತಿದೆ ಎಂದು ಹುಸಿ ಕನಸುಗಳನ್ನು ಬಿಕರಿ ಮಾಡುತ್ತಲೇ ಇದ್ದಾರೆ. ಸದ್ಯ ಮೋದಿಯವರ ಯಾವ ಮಾತುಗಳನ್ನು ನಂಬದ ಸ್ಥಿತಿಗೆ ಭಾರತದ ಯುವ ಜನತೆ ತಲುಪಿದೆ.
ಚುನಾವಣಾ ಪ್ರಣಾಳಿಕೆ ಮತ್ತು ಭರವಸೆಗಳನ್ನು ಯಾರೂ ನಂಬದ ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರಿಂದ 2018ರ ಕಾಲಾವಧಿಯಲ್ಲಿ ಚುನಾವಣಾ ಪ್ರಣಾಳಿಕೆ ಕೈಯಲ್ಲಿ ಹಿಡಿದುಕೊಂಡೇ ಅಧಿಕಾರ ನಡೆಸಿದರು. ಅಷ್ಟು ಮಾತ್ರವಲ್ಲ, ಐದು ವರ್ಷಗಳುದ್ದಕ್ಕೂ ಪ್ರತೀ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿನ ಎಷ್ಟು ಭರವಸೆಗಳನ್ನು ಈಡೇರಿಸಿದ್ದೇನೆ ಎಂಬುದರ ಲೆಕ್ಕ ಕೊಡುತ್ತಿದ್ದರು. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾಗ ಚುನಾವಣಾ ಪ್ರಣಾಳಿಕೆಗೆ ಅರ್ಥ ಕಲ್ಪಿಸಿದ್ದರು. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎದುರಿಸಲಾಯಿತು. ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರು. ಡಾ. ಜಿ. ಪರಮೇಶ್ವರ್ ಅವರು ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಡಾ. ಕೆ.ಇ. ರಾಧಾಕೃಷ್ಣ ಮತ್ತು ಮಧು ಬಂಗಾರಪ್ಪ ಅವರು ಪ್ರಣಾಳಿಕೆ ಸಮಿತಿಗೆ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ಕಿರಿಯರ ಸಮ್ಮುಖದಲ್ಲಿ ಚುನಾವಣಾ ಪ್ರಣಾಳಿಕೆಯ ಹೊತ್ತಿಗೆಯನ್ನು 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಬಿಡುಗಡೆ ಮಾಡಿದ್ದರು. ಆ ಚುನಾವಣಾ ಪ್ರಣಾಳಿಕೆಯ ಮುನ್ನುಡಿಯಲ್ಲಿ ಕೆಲವು ಮಹತ್ವದ ಸಂಗತಿಗಳನ್ನು ಪ್ರಸ್ತಾಪಿಸಿದ್ದರು. ಆ ಮಾತುಗಳು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಜನಸಾಮಾನ್ಯರು ಗಂಭೀರವಾಗಿ ಪರಿಗಣಿಸುವಂತೆ ಪ್ರೇರೇಪಿಸಿದ್ದವು. ಪ್ರಣಾಳಿಕೆಯ ಮಾತುಗಳನ್ನು ಗಮನಿಸಿ: ‘ನಾವು ಇದೀಗ ನಿಮ್ಮ ಮುಂದೆ ಇಡುತ್ತಿರುವ ಈ ಪ್ರಣಾಳಿಕೆ ಕೇವಲ ಭರವಸೆಗಳ ಕೈಪಿಡಿಯಲ್ಲ. ಈ ಮೊದಲೇ ಕಾಂಗ್ರೆಸ್ ಸರಕಾರಗಳು ನಡೆದುಕೊಂಡಂತೆ, ಪ್ರಣಾಳಿಕೆ ಎಂಬುದು ಉತ್ತಮ ಆಡಳಿತದ ನೀಲ ನಕಾಶೆ ಎಂದು ಭಾವಿಸಿದ್ದೇವೆ. ಸಾರ್ವಜನಿಕರ ಸೇವೆ ನಮ್ಮ ಧರ್ಮ, ಪವಿತ್ರ ಕರ್ತವ್ಯ ಎಂದು ಭಾವಿಸಿ ಸಂಕಲ್ಪ ಮಾಡುತ್ತಿದ್ದೇವೆ’ ಅಂತ ನಂಬಿಕೆ ಮೂಡಿಸುವಂತೆ ಹೇಳಿದ್ದರು. ಅಷ್ಟು ಮಾತ್ರವಲ್ಲ-‘ನಾವು ಭರವಸೆಯನ್ನಷ್ಟೇ ನೀಡುವುದಿಲ್ಲ, ಅದನ್ನು ಸಾಧಿಸುತ್ತೇವೆ ಮತ್ತು ಅನುಷ್ಠಾನಕ್ಕೆ ತರುತ್ತೇವೆ. ಈ ಪ್ರಣಾಳಿಕೆಯನ್ನು ಕಾರ್ಯಗತಗೊಳಿಸಲು ಉನ್ನತ ಮಟ್ಟದ ಪ್ರಣಾಳಿಕಾ ಅನುಷ್ಠಾನ ಸಮಿತಿಯನ್ನು ರಚಿಸುತ್ತೇವೆ’ ಎಂದು ವಾಗ್ದಾನ ಮಾಡಿದ್ದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಮೂರು ತಿಂಗಳು ಗತಿಸಿವೆ. ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ಮಾತ್ರ ಹೆಚ್ಚು ಆಸಕ್ತಿ ವಹಿಸಿದ್ದರು. ಎರಡು ನೂರು ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಕುಟುಂಬದ ಯಜಮಾನಿಗೆ ಪ್ರತೀ ತಿಂಗಳು ರೂ. 2,000 ನಗದು ನೀಡುವ ಗೃಹ ಲಕ್ಷ್ಮಿ, ಪ್ರತೀ ತಿಂಗಳು ಹತ್ತು ಕೆ.ಜಿ. ಉಚಿತ ಅಕ್ಕಿ ಕೊಡುವ ಅನ್ನ ಭಾಗ್ಯ, ಪದವೀಧರರಿಗೆ ಮಾಸಿಕ ರೂ. 3,000 ಹಾಗೂ ಡಿಪ್ಲೊಮಾ ಹೊಂದಿದವರಿಗೆ ಮಾಸಿಕ ರೂ. 1,500 ನೀಡುವ ಯುವ ನಿಧಿ, ಕರ್ನಾಟಕದ ಎಲ್ಲ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ -ಈ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವಲ್ಲಿ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದರು. ಐದು ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆಂದು ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿದ್ದರು. ಆದರೆ ಒಟ್ಟಾರೆ ಚುನಾವಣಾ ಪ್ರಣಾಳಿಕೆಯನ್ನು ಕಾರ್ಯಗತಗೊಳಿಸಲು ಅನುಷ್ಠಾನ ಸಮಿತಿಯನ್ನು ಅವರ ಅಧಿಕಾರಾವಧಿಯಲ್ಲಿ ರಚಿಸಲೇ ಇಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಎಲ್ಲ ಅಂಶಗಳು ಅನುಷ್ಠಾನಗೊಳ್ಳಬೇಕು ಎಂದು ನಿರೀಕ್ಷೆ ಇಟ್ಟುಕೊಳ್ಳುವುದು ಸಾಧುವಲ್ಲ. ಆದರೆ ಪಕ್ಷದ ಸಿದ್ಧಾಂತದ ಪ್ರತೀಕವಾಗಿರುವ ಅಗತ್ಯದ ಭರವಸೆಗಳನ್ನು ಈಡೇರಿಸುವುದು ಪಕ್ಷದ ವಿಶ್ವಾಸಾರ್ಹತೆ ದೃಷ್ಟಿಯಿಂದ ಅನಿವಾರ್ಯವಾಗುತ್ತದೆ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಬದ್ಧತೆಯನ್ನು ಗುಮಾನಿಯಿಂದ ನೋಡಬೇಕಾಗುತ್ತದೆ.
ಈ ಹಿಂದಿನ ಬಿಜೆಪಿ ಸರಕಾರ (ಬಸವರಾಜ ಬೊಮ್ಮಾಯಿ ಸರಕಾರ )ಜಾರಿಗೆ ತಂದ ಎಲ್ಲ ಜನ ವಿರೋಧಿ ಕಾನೂನುಗಳನ್ನು ಒಂದು ವರ್ಷದೊಳಗೆ ರದ್ದು ಮಾಡುತ್ತೇವೆ ಎಂಬ ಖಚಿತ ಮಾತುಗಳನ್ನು ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಆ ಮಾತುಗಳು ದಾಖಲೆಯಲ್ಲಿವೆ. ಮೂರು ವರ್ಷ ಕಳೆದರೂ ಸಿದ್ದರಾಮಯ್ಯ ಸರಕಾರ ಬಿಜೆಪಿ ಕಾಲದ ಜನ ವಿರೋಧಿ ಕಾನೂನುಗಳನ್ನು ರದ್ದು ಮಾಡಲೇ ಇಲ್ಲ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಬಿಜೆಪಿ ಸರಕಾರ ಜಾರಿಗೆ ತಂದಿತ್ತು.ಮುಸ್ಲಿಮ್ ಸಮುದಾಯಕ್ಕೆ ನೀಡುತ್ತಿದ್ದ 2ಬಿ ಮೀಸಲಾತಿಯನ್ನು ಬಿಜೆಪಿ ಸರಕಾರ ರದ್ದುಪಡಿಸಿತ್ತು. ಕೋಮುವಾದಿ ಸಿದ್ಧಾಂತಗಳ ಪ್ರಚಾರಕ್ಕೆಂದೇ ಸ್ಥಾಪಿತವಾದ ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ ಅನುಮತಿ ನೀಡಿ ಕಡಿಮೆ ಬೆಲೆಯಲ್ಲಿ ಜಮೀನು ಮಂಜೂರು ಮಾಡಿತ್ತು. ದುರಂತವೆಂದರೆ ಬಿಜೆಪಿ ಕಾಲದ ಜನ ವಿರೋಧಿ ನಿರ್ಧಾರಗಳನ್ನು ಇಲ್ಲಿಯವರೆಗೆ ರದ್ದು ಮಾಡಿಲ್ಲ. ಮುಸ್ಲಿಮ್ ಸಮುದಾಯಕ್ಕೆ ಆಸರೆಯಾಗಿದ್ದ 2ಬಿ ಮೀಸಲಾತಿಯನ್ನು ಇಲ್ಲಿಯವರೆಗೂ ಮರು ಸ್ಥಾಪಿಸಲಿಲ್ಲ. ಚಾಣಕ್ಯ ವಿಶ್ವವಿದ್ಯಾನಿಲಯ ಖಾಯಂ ಆಗಿ ನೆಲೆಯೂರಿ ತನ್ನ ಕೋಮುವಾದಿ ಪ್ರಚಾರ ಭರದಿಂದ ನಡೆಸುತ್ತಿದೆ. ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಕೃಷಿ ಮತ್ತು ಕೃಷಿ ಮಾರುಕಟ್ಟೆಯ ರೈತ ವಿರೋಧಿ ಕಾಯ್ದೆಗಳನ್ನು ರದ್ದು ಪಡಿಸಬೇಕಿತ್ತು. ಕೇಂದ್ರ ಸರಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಹಿಂದಿನ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸಿದ ಸಿದ್ದರಾಮಯ್ಯ ಸರಕಾರ ಸುಖದೇವ್ ಥೋರಟ್ ಅವರ ನೇತೃತ್ವದಲ್ಲಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿತ್ತು. ಸುಖದೇವ್ ಥೋರಟ್ ನೇತೃತ್ವದ ಸಮಿತಿ ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಆದರೆ ಆ ವರದಿ ಅನುಷ್ಠಾನಗೊಳ್ಳಲೇ ಇಲ್ಲ. ಕೇಂದ್ರದ ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿದ್ದ ಸಿದ್ದರಾಮಯ್ಯ ಅವರ ಸರಕಾರ ರಾಜ್ಯ ಶಿಕ್ಷಣ ನೀತಿಯ ವರದಿ ಜಾರಿಗೊಳಿಸಿದ್ದರೆ ಮಾದರಿ ನಡೆ ಎನಿಸಿಕೊಳ್ಳುತ್ತಿತ್ತು.
ಕರ್ನಾಟಕದ ಯುವ ಸಮುದಾಯ ಸರಕಾರಿ ನೌಕರಿಯ ಕನಸು ಸಾಕಾರ ಮಾಡಿ ಎಂದು ಬಹಿರಂಗ ಆಕ್ರೋಶ ವ್ಯಕ್ತಪಡಿಸುತ್ತಲೇ ಇದೆ. ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಎರಡು ಮಹತ್ವದ ಭರವಸೆಗಳನ್ನು ನೀಡಿತ್ತು. ಈ ಭರವಸೆಗಳನ್ನು ಕಾಂಗ್ರೆಸ್ ಪಕ್ಷದ ಸರಕಾರವಿದ್ದಾಗ ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಸರಕಾರದಲ್ಲಿ ಖಾಲಿ ಇರುವ ಎಲ್ಲ ಅನುಮೋದಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಸಿದ್ದರಾಮಯ್ಯ ಅವರು ಮರೆತೇ ಬಿಟ್ಟಿದ್ದರು. ಅದರ ಜೊತೆಗೆ 2006ರಿಂದ ನೇಮಕವಾದ ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ಸಹಾನುಭೂತಿಯ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಒಂದು ವರ್ಷದ ಅವಧಿಯಲ್ಲೇ ಜಾರಿ ಮಾಡಬೇಕಾದ ಪ್ರಣಾಳಿಕೆಯಲ್ಲಿನ ಭರವಸೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹಾಗಾದರೆ ಉಳಿದ ಕನಸುಗಳ ಗತಿಯೇನು?
ಚುನಾವಣೆಗೂ ಮುಂಚೆ ಪ್ರಕಟವಾದ ಪ್ರಣಾಳಿಕೆ ಕೈಪಿಡಿಯನ್ನು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದಾ ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೆ ಈಡೇರದ ಭರವಸೆಗಳನ್ನು ಯುದ್ಧೋಪಾದಿಯಲ್ಲಿ ಅನುಷ್ಠಾನಗೊಳಿಸಬೇಕಾದ ಅನಿವಾರ್ಯತೆ ಅವರಿಗಿದೆ. ಒಂದು ವರ್ಷ ಒಂಭತ್ತು ತಿಂಗಳ ನಂತರ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆ ತಂದು ಭ್ರಷ್ಟಾಚಾರ ರಹಿತ ನೇಮಕಾತಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ದುರಂತವೆಂದರೆ, ಕರ್ನಾಟಕ ಲೋಕಸೇವಾ ಆಯೋಗದ ಹಗರಣಗಳು ಇನ್ನೂ ಸದ್ದು ಮಾಡುತ್ತಿಲಿವೆ. ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆ ತರಬೇಕೆಂದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಒಟ್ಟು ವ್ಯವಸ್ಥೆ ಸುಧಾರಿಸಬೇಕು. ಕೇವಲ ಕಾನೂನು ಏನನ್ನೂ ಸಾಧಿಸುವುದಿಲ್ಲ. ಪ್ರಣಾಳಿಕೆಯಲ್ಲಿ ಇನ್ನೊಂದು ಮಹತ್ವದ ಅಂಶ ಪ್ರಸ್ತಾಪಿಸಲಾಗಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ಕಠಿಣ ನಿಯಮಗಳ ಜಾರಿ, ನಿಯಂತ್ರಣ ಕ್ರಮಗಳ ಪಾರದರ್ಶಕತೆ ಹಾಗೂ ಲೋಕಾಯುಕ್ತ ಬಲವರ್ಧನೆ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಹೇಳಿಕೊಂಡಿತ್ತು. ಭ್ರಷ್ಟಾಚಾರ ಅವ್ಯಾಹತವಾಗಿ ಮುಂದುವರಿದಿದೆ. ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವ ವಿಳಂಬ ನೀತಿ ತಪ್ಪಿಸಲು-ಸಕಾಲ ಕಾಯ್ದೆಗೆ ಬಲ. ಎಲ್ಲ ನಾಗರಿಕರಿಗೆ ನಿಗದಿತ ಸಮಯದೊಳಗೆ ಸೇವೆ ನೀಡಲು ಸಕಾಲ ಕಾಯ್ದೆಗೆ ಪರಿಷ್ಕರಣೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಮೂರು ವರ್ಷ ಕಳೆದರೂ ಸಕಾಲ ದುರ್ಬಲವಾಗಿಯೇ ಇದೆ. ಹಣ ಕೊಟ್ಟರೆ ಮಾತ್ರ ಕಡತ ವೇಗ ಪಡೆದುಕೊಂಡು ಮುಂದೆ ಹೋಗುವ ವ್ಯವಸ್ಥೆ ಇನ್ನೂ ಜಾರಿಯಲ್ಲಿದೆ. ತಬರನ ಕತೆಗಳಿಗೆ ಕಡಿವಾಣ ಇನ್ನೂ ಬಿದ್ದಿಲ್ಲ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಿದವರಿಗೆ ಸರಕಾರಿ ವ್ಯವಸ್ಥೆಯ ಎಲ್ಲ ಒಳ ಹೊರಗುಗಳ ಗಾಢ ಪರಿಚಯ ಇದ್ದಿದ್ದರಿಂದ ಎಲ್ಲ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಸೆಸ್ ಸಮಸ್ಯೆ ಅನಾದಿ ಕಾಲದ್ದು. ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಣಾಳಿಕೆಯಲ್ಲಿ ವಿವಿಧ ಉದ್ದೇಶಗಳಿಗೆ ಸಂಗ್ರಹಿಸುವ ಸೆಸ್ ಗಳನ್ನು ಆಯಾ ಉದ್ದೇಶಗಳಿಗೆ ಬಳಕೆಯಾಗಬೇಕು. ಕಟ್ಟಡ ನಿರ್ಮಾಣದಲ್ಲಿ ಸಂಗ್ರಹಿಸುವ ಗ್ರಂಥಾಲಯ ಸೆಸ್, ಭಿಕ್ಷುಕರ ಪುನರ್ ವಸತಿ ಸೆಸ್, ಆರೋಗ್ಯ ಸೆಸ್ ಆಯಾ ಉದ್ದೇಶಗಳಿಗೆ ಕಾಲ ಮಿತಿಯೊಳಗೆ ಬಳಸುವುದು ಎಂದು ಭರವಸೆ ನೀಡಿದ್ದಾರೆ. ಗ್ರಂಥಾಲಯ ಇಲಾಖೆಗೆ ಲೈಬ್ರರಿ ಸೆಸ್ ಬಾಕಿ ಬಂದರೆ ಪುಸ್ತಕ ಖರೀದಿ ಸಮಸ್ಯೆಯೇ ಉದ್ಭವಿಸುವುದಿಲ್ಲ. ಸೆಸ್ ಸಮಸ್ಯೆಗೆ ಮೂರು ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ. ಚುನಾವಣಾ ಭರವಸೆ ಭಾರವಸೆಯಾಗಿಯೇ ಉಳಿದಿದೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇನ್ನೊಂದು ಅತ್ಯಂತ ಮಹತ್ವದ ಭರವಸೆ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ. ಕಟ್ಟುನಿಟ್ಟಿನ ಸಮಯ ಪಾಲನೆ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅದೂ ಹುಸಿಯಾಗಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಇಲಾಖಾವಾರು ಭರವಸೆಗಳನ್ನು ನೀಡಲಾಗಿತ್ತು. ಬಹುತೇಕ ಇಲಾಖೆಗಳಲ್ಲಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಬೆರಳೆಣಿಕೆಯ ಭರವಸೆಗಳೂ ಅನುಷ್ಠಾನಗೊಂಡಿಲ್ಲ.
ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಳೆದ 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ರಾಜಸ್ಥಾನ, ಹಿಮಾಚಲ್ ಪ್ರದೇಶಗಳ ಸರಕಾರಗಳ ಆದೇಶಗಳ ಮಾದರಿಯಲ್ಲಿ ಖಾಯಂಗೊಳಿಸುವ ಪ್ರಕ್ರಿಯೆ ಜಾರಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಅತಿಥಿ-ಗುತ್ತಿಗೆ ಆಧಾರದ ಮೇಲೆ ಸರಕಾರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಸರಕಾರಿ ನೇಮಕಾತಿಯಲ್ಲಿ ಆದ್ಯತೆ ಇರುವಂತೆ ಕಾನೂನು ತಿದ್ದುಪಡಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಇಲ್ಲಿಯವರೆಗೆ ನೇಮಕಾತಿ ಕಾನೂನಿಗೆ ತಿದ್ದುಪಡಿ ಮಾಡಿಲ್ಲ. ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ನಿಯಂತ್ರಿಸಲು ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಇಂಧನ ಮುಂತಾದ ಇಲಾಖೆಗಳಲ್ಲಿ ನಡೆಯುವ ಟೆಂಡರ್‌ಗಳಲ್ಲಿ ಸಮರ್ಥವಾದ ಪಾರದರ್ಶಕ ವ್ಯವಸ್ಥೆ ರೂಪಿಸಿ ಭ್ರಷ್ಟಾಚಾರ ನಿಗ್ರಹಿಸಲು, ವಿಶೇಷವಾದ ಬಿಗಿಯಾದ ಕಾನೂನಿನ ರಚನೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿತ್ತು. ವ್ಯವಸ್ಥೆಯ ಕರಾಳತೆ ಎಲ್ಲ ಗುತ್ತಿಗೆದಾರರು ಅನುಭವಿಸುತ್ತಿದ್ದಾರೆ. ಬಿಜೆಪಿ ಸರಕಾರ ಇದ್ದಾಗಿನ ವ್ಯವಸ್ಥೆಯೇ ಮುಂದುವರಿದಿದೆ. ಭ್ರಷ್ಟಾಚಾರ ರಹಿತ ಕಾಮಗಾರಿ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಕಾಮಗಾರಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಎಲ್ಲ ನಗರಗಳು, ಗ್ರಾಮೀಣ ರಸ್ತೆ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಹಣ ಲಪಟಾಯಿಸಲು ಕಾಮಗಾರಿಗಳು ಸಾಧನವಾಗಿ ಬಳಕೆಯಾಗುತ್ತಿವೆ. ಅತ್ಯುತ್ತಮ ರಸ್ತೆ ನಿರ್ಮಾಣ ಮಾಡುವ ಉದ್ದೇಶ ಯಾರಿಗೂ ಇಲ್ಲದಂತಾಗಿದೆ.
ಎಲ್ಲ ಪೊಲೀಸ್ ಸಿಬ್ಬಂದಿಗೆ ವಸತಿ ಸೌಲಭ್ಯ ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಅದು ಇಲ್ಲಿಯವರೆಗೆ ಈಡೇರಿಸಿಲ್ಲ. ಮಹಿಳಾ ದೌರ್ಜನ್ಯ ತಡೆಗೆ ಕಠಿಣ ಕಾನೂನು ರೂಪಿಸುವುದಾಗಿ ಹೇಳಿಕೊಂಡಿದ್ದರು. ಕನಕಪುರದಲ್ಲಿ ಅತ್ಯಾಧುನಿಕ ವಿಶ್ವ ದರ್ಜೆಯ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ದಾಖಲಿಸಿದ್ದರು. ಮತದಾರರ ಹಕ್ಕು ರಕ್ಷಣೆಗೆ ಕಾನೂನು ರೂಪಿಸುವುದಾಗಿ ಭರವಸೆ ನೀಡಿದ್ದರು.
ಇನ್ನು ಕೃಷಿಗೆ ಸಂಬಂಧಿಸಿದ ಭರವಸೆಗಳೂ ಈಡೇರಿಲ್ಲ. ಪ್ರತೀ ಕಂದಾಯ ವಿಭಾಗಕ್ಕೆ ಒಂದರಂತೆ ಕೃಷಿ ಬೆಲೆ ಆಯೋಗ ಸ್ಥಾಪಿಸುವ ಭರವಸೆಯನ್ನು ಕಾಂಗ್ರೆಸ್ ಮುಖಂಡರು ನೀಡಿದ್ದರು. ಅಷ್ಟು ಮಾತ್ರವಲ್ಲ ರೈತರಿಗೆ ರೂ. ಹತ್ತು ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ನಂಬಿಸಿದ್ದರು. ಶೇ. ಮೂರರ ಬಡ್ಡಿ ದರದಲ್ಲಿ ರೂ. ಹದಿನೈದು ಲಕ್ಷದವರೆಗೆ ರೈತರಿಗೆ ಸಾಲ ಸೌಲಭ್ಯದ ಭರವಸೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಬಡ್ಡಿ ವ್ಯತ್ಯಾಸದ ಹಣವನ್ನು ಸರಕಾರವೇ ಭರಿಸುವುದಾಗಿ ಹೇಳಿಕೊಂಡಿತ್ತು. ಕೃಷಿ ಉನ್ನತ ನಿಧಿಗೆ ರೂ. 500 ಕೋಟಿ ಒದಗಿಸುವುದಾಗಿ ಭರವಸೆ ನೀಡಲಾಗಿತ್ತು. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಶೀತಲೀಕರಣ ವ್ಯವಸ್ಥೆಯೊಂದಿಗೆ ಆಹಾರ ಶೇಖರಣಾ ಪಾರ್ಕ್ ಸ್ಥಾಪನೆ ಮಾಡುವ ಅಂಶ ಪ್ರಣಾಳಿಕೆಯಲ್ಲಿ ಪ್ರಸ್ತಾಪಗೊಂಡಿತ್ತು. ಅದು ಇನ್ನೂ ಕಾರ್ಯಗತವಾಗಿಲ್ಲ. ನೀರಾವರಿ ಇಲಾಖೆಯಲ್ಲಂತು ಕ್ರಾಂತಿ ಮಾಡುವುದಾಗಿ ಹೇಳಿಕೊಂಡಿತ್ತು. ಮುಂದಿನ ಐದು ವರ್ಷಗಳಲ್ಲಿ 1.5ಲಕ್ಷ ಕೋಟಿ ಹಣವನ್ನು ವಿನಿಯೋಗ ಮಾಡುವುದಾಗಿ ಪ್ರಣಾಳಿಕೆಯಲ್ಲಿ ದಾಖಲಿಸಲಾಗಿದೆ. ಎತ್ತಿನ ಹೊಳೆ, ಮೇಕೆ ದಾಟು, ಮಹಾದಾಯಿ ಯೋಜನೆಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ನೀಡಲಾಗಿತ್ತು. ರಾಜ್ಯದ ಪ್ರಮುಖ ನದಿಗಳ ಸ್ವಚ್ಛತೆಗೆ ಒಂದು ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿಕೊಂಡಿತ್ತು. ಬೀದರಿನಿಂದ ಚಾಮರಾಜ ನಗರದವರೆಗೆ ಏಕರೂಪದ ಬೆಳವಣಿಗೆ ಸಾಧಿಸಲು ಕೈಗಾರಿಕಾ ಪಾರ್ಕ್‌ಗಳು, ಉಪನಗರಗಳ ನಿರ್ಮಾಣ ಮಾಡಿ ಅಂದಾಜು ಮೂವತ್ತು ಲಕ್ಷ ಉದ್ಯೋಗ ಕಲ್ಪಿಸುವ ಕನಸು ಬಿತ್ತಿದ್ದರು. ಅದು ಸಾಕಾರಗೊಳ್ಳುವ ಸಾಧ್ಯತೆ ಇಲ್ಲ. ತಂತ್ರಜ್ಞಾನ ಆಧಾರಿತ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಐದು ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದ್ದರು.
ಸರಕಾರಿ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಂಪೂರ್ಣ ಹಾಳಾಗಿ ಹೋಗಿದೆ. ಗುಣಮಟ್ಟದ ಶಿಕ್ಷಣ ಗಗನ ಕುಸುಮವಾಗಿದೆ. ಖಾಸಗಿ ಶಿಕ್ಷಣ ಮಾಫಿಯಾ ಮೇಲುಗೈ ಸಾಧಿಸುತ್ತಿದೆ. ಸರಕಾರಿ -ಅನುದಾನಿತ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ, ಶಿಕ್ಷಕೇತರ ಹುದ್ದೆಗಳು ಖಾಲಿ ಇವೆ. ಅದು ಪರೀಕ್ಷಾ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಒಂದು ವರ್ಷದೊಳಗೆ ಎಲ್ಲ ಹುದ್ದೆ ಭರ್ತಿಗೆ ಕ್ರಮ ಜರುಗಿಸುವ ಭರವಸೆ ನೀಡಲಾಗಿತ್ತು. ಈಗ ಹುದ್ದೆ ಭರ್ತಿ ಪ್ರಕ್ರಿಯೆ ಆರಂಭಿಸಿದ್ದಾರೆ. ಸಂಗೀತ, ದೈಹಿಕ ಮತ್ತು ಕಲಾ ಶಿಕ್ಷಕರ ಭರ್ತಿ ಮಾಡುವ ವಾಗ್ದಾನ ಸಂಪೂರ್ಣ ಮರೆತಂತಿದೆ. ಕರ್ನಾಟಕದ ಸರಕಾರಿ ವಿಶ್ವವಿದ್ಯಾನಿಲಯಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ವಿಶ್ವವಿದ್ಯಾನಿಲಯಗಳ ಉನ್ನತೀಕರಣಕ್ಕೆ ರೂ. ಎರಡು ಸಾವಿರ ಕೋಟಿ ಆವರ್ತ ನಿಧಿ ಸ್ಥಾಪಿಸುವ ಭರವಸೆಗೆ ಇನ್ನೂ ಚಾಲನೆ ಸಿಕ್ಕಿಲ್ಲ.
ಕುಟುಂಬಕ್ಕೊಂದು ಮನೆ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಭರವಸೆಗಳು ನೀಡಲಾಗಿದೆ. ಆದರೆ ಕಾರ್ಯರೂಪಕ್ಕೆ ತಂದಿಲ್ಲ.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಪ್ರಮುಖ ಭರವಸೆಗಳನ್ನು ಈಡೇರಿಸಲು ಕ್ರಮ ವಹಿಸಿದರೂ ಜನ ಮೆಚ್ಚಿಕೊಳ್ಳುತ್ತಾರೆ. ನರೇಂದ್ರ ಮೋದಿಯವರ ಭರವಸೆಯಂತೆ ಕಾಂಗ್ರೆಸ್ ಪಕ್ಷದ ಭರವಸೆಗಳು ಪ್ರಣಾಳಿಕೆಯ ಕೈಪಿಡಿಯಲ್ಲಿ ಉಳಿದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಕಾಂಗ್ರೆಸ್ ಪಕ್ಷ ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಕಾಲ ಮಿತಿಯಲ್ಲಿ ಅನುಷ್ಠಾನಗೊಳಿಸಿದರೆ ಮಾತ್ರ ಸರಕಾರದ ಶ್ರಮ ಸಾರ್ಥಕವಾಗುತ್ತದೆ. ಜನಸಾಮಾನ್ಯರಿಗೆ ಅಭಿವೃದ್ಧಿ ಯೋಜನೆಗಳ ಫಲ ತಲುಪಿಸದಿದ್ದರೆ ಎಷ್ಟೇ ಪ್ರಚಾರ ಮಾಡಿಕೊಂಡರೂ ಮತದಾರ ಒಲಿಯಲಾರ. ಮೂರು ವರ್ಷ ಮೂರು ತಿಂಗಳು ಕಳೆದ ಮೇಲಾದರೂ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಣಾಳಿಕೆಯನ್ನು ಮತ್ತು ಅಲ್ಲಿನ ಭರವಸೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯ ಪ್ರವೃತ್ತರಾದರೆ ಜನ ಮೆಚ್ಚಿಕೊಂಡಾರು.






