ಗಣೇಶ ಉತ್ಸವದಲ್ಲಿ ಭಕ್ತಿಯೇ ಮಾಯ...

ಇತ್ತೀಚಿನ ವರ್ಷಗಳಲ್ಲಿ ಗಣೇಶ ಉತ್ಸವ, ಮೆರವಣಿಗೆ ಸಮುದಾಯಗಳನ್ನು ಒಂದು ಮಾಡುವುದರ ಬದಲು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸುತ್ತಿವೆ. ಸಾಮರಸ್ಯ ಕದಡುವ ಮತೀಯ ಶಕ್ತಿಗಳು, ಅರ್ಥಪೂರ್ಣ ಮತ್ತು ಸೌಹಾರ್ದದ ಗಣೇಶ ಉತ್ಸವ-ಮೆರವಣಿಗೆಗಳನ್ನು ವಿರೂಪಗೊಳಿಸುತ್ತಿವೆ. ಅಬ್ಬರದ ಡಿ.ಜೆ. ಸಂಗೀತ, ಅಲ್ಲಿ ಬಳಸುವ ಅಶ್ಲೀಲ ಹಾಡುಗಳು ಗಣೇಶ ಉತ್ಸವ ಮತ್ತು ಮೆರವಣಿಗೆಯ ವಾತಾವರಣದಲ್ಲಿ ಗಣಪತಿ ಭಕ್ತಿಯೇ ಮಾಯವಾಗುವಂತೆ ಮಾಡಿವೆ. ಡಿ.ಜೆ. ಸಂಗೀತದ ಅಬ್ಬರ ಶಬ್ದ ಮಾಲಿನ್ಯದ ಪರಮಾವಧಿಯಂತಿದೆ.
ಗಣೇಶ, ಗಣಪತಿ, ಗಣನಾಯಕ, ಸಿದ್ಧಿ ವಿನಾಯಕ, ಬೆನಕ, ವಿಘ್ನೇಶ್ವರ-ಹೀಗೆ ಹಲವು ನಾಮಗಳಿಂದ ಕರೆಯಲ್ಪಡುವ ಮತ್ತು ಎಲ್ಲ ಭಾರತೀಯರಿಂದ ಪೂಜಿಸಲ್ಪಡುವ ಗಣಪತಿ ಶೈವ, ಶಾಕ್ತ, ವೈಷ್ಣವ ಪಂಥಗಳಾಚೆ ಪ್ರಭಾವ ಹೊಂದಿದ್ದಾನೆ. ಭಾರತದಲ್ಲಿ ಮಾತ್ರವಲ್ಲ ನೇಪಾಳ, ಥಾಯ್ಲೆಂಡ್, ಜಪಾನ್, ಇಂಡೋನೇಶ್ಯ, ಟಿಬೆಟ್, ಫಿಲಿಪ್ಪೀನ್ಸ್, ಜಾವಾ, ಬಾಲಿ ದೇಶಗಳಲ್ಲೂ ಗಣೇಶ ಜನಪ್ರಿಯ ಮತ್ತು ಪೂಜನೀಯನಾಗಿದ್ದಾನೆ.
ಭಾರತೀಯ ಪರಂಪರೆಯಲ್ಲಿಯಂತೂ ಅತಿ ಹೆಚ್ಚು ಭಕ್ತರಿಂದ ಆರಾಧಿಸಲ್ಪಡುವ ಗಣೇಶ ಅವರವರ ಭಕುತಿಗೆ ಬೇಡಿದ್ದನ್ನು ದಯಪಾಲಿಸುವ ವರಪ್ರಸಾಧಿಯಾಗಿದ್ದಾನೆ. ಭಾರತೀಯ ಕಲೆ ಮತ್ತು ಸಂಸ್ಕೃತಿಯಲ್ಲಿ ಗಣೇಶ ಪ್ರಥಮ ಪೂಜ್ಯ ದೇವತೆಯಾಗಿದ್ದಾನೆ. ದೈವಿಕತೆಯಲ್ಲಿ ನಂಬಿಕೆಯಿರುವ ಬರಹಗಾರರು ಶ್ರೀಗಣೇಶಾಯ ಎಂದು ಬರೆದು ತಮ್ಮ ಬರಹದ ಕಾರ್ಯ ಆರಂಭಿಸುತ್ತಾರೆ. ಭರತನಾಟ್ಯ ಕಾರ್ಯಕ್ರಮಗಳ ಆರಂಭಕ್ಕೂ ಮುಂಚೆ ಗಣೇಶ ಸ್ತುತಿ ಕಡ್ಡಾಯವಾಗಿರುತ್ತದೆ. ಭರತನ ನಾಟ್ಯಶಾಸ್ತ್ರ ಗ್ರಂಥದಲ್ಲಿ ರಂಗಮಂಟಪದಲ್ಲಿ ಜರುಗುವ ಎಲ್ಲ ಕಾರ್ಯಕ್ರಮಗಳಿಗೂ ಮುಂಚೆ ವಿಘ್ನ ನಿವಾರಕನ ಸ್ಮರಣೆಯನ್ನು ಕಡ್ಡಾಯಗೊಳಿಸಿದ್ದಾರೆ. ರಂಗ ಭೂಮಿಯಲ್ಲಂತೂ, ನಾಟಕ ಪ್ರದರ್ಶನ ಆರಂಭವಾಗುವುದೇ ‘ಗಜಾನನಂ ಭೂತ ಗಣಾದಿ ಸೇವಿತಂ.. ಗಜವದನ ಹೇರಂಭಾ ’-ಎಂಬ ನಾಂದಿ ಪದದಿಂದ.
ಗಣಪತಿಯನ್ನು ವ್ಯಕ್ತಿಗತವಾಗಿ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಭಾರತೀಯರು ಭಕ್ತಿ ಭಾವದಿಂದ ಪೂಜಿಸುತ್ತಾರೆ. ಗಣೇಶನ ಭಕ್ತರು ಒಂದು ಜಾತಿ, ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಶೈವ ದೇವಸ್ಥಾನಗಳಿವೆ. ತಮಿಳುನಾಡು, ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿಯೂ ಶೈವ, ಶಾಕ್ತ ಮತ್ತು ವೈಷ್ಣವ ಸಂಪ್ರದಾಯದ ದೇವಸ್ಥಾನಗಳಿವೆ. ದೇವಸ್ಥಾನ ಯಾವ ಸಂಪ್ರದಾಯಕ್ಕೆ ಸೇರಿದ್ದರೂ ಪ್ರತೀ ದೇವಸ್ಥಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುತ್ತಾರೆ. ಬೆಂಗಳೂರಿನ ದೊಡ್ಡ ಗಣಪತಿ, ಮುಂಬೈ ನಗರದ ಸಿದ್ಧಿ ವಿನಾಯಕ, ಇಡಗುಂಜಿ ಗಣಪತಿ, ಕೋಲಾರದ ಕುರುಡು ಮಲೈ ಗಣಪತಿ -ಹೀಗೆ ಭಾರತದ ತುಂಬಾ ಅಸಂಖ್ಯಾತ ಗಣೇಶ ದೇವಸ್ಥಾನಗಳಿವೆ. ಅವುಗಳಲ್ಲಿ ಸಂಕಷ್ಟ ಹರ ಗಣಪತಿ, ವಿದ್ಯಾ ಗಣಪತಿ, ಬಲಮುರಿ ಗಣಪತಿ, ಮಹಾಗಣಪತಿ ದೇವಸ್ಥಾನಗಳು ಪ್ರಮುಖವಾಗಿವೆ. ಬೌದ್ಧ ಧರ್ಮದ ಮಹಾಯಾನ ಪಂಥದವರು ಗಣೇಶನನ್ನು ದೇವರೆಂದು ಭಾವಿಸುತ್ತಾರೆ. ಗಣೇಶ, ಶಿವ-ಪಾರ್ವತಿಯರ ಮಗ ಎಂಬುದು ಜನಜನಿತ. ಗಣಪತಿಯ ಹುಟ್ಟಿನ ಕುರಿತಾದ ಕತೆ ಎಲ್ಲರಿಗೂ ಗೊತ್ತು. ಕಾರ್ತಿಕೇಯ ಗಣಪತಿಯ ಸಹೋದರ ಎಂಬುದು ಬಿಡಿಸಿ ಹೇಳಬೇಕಾಗಿಲ್ಲ. ಶಿವ, ಪಾರ್ವತಿ ಮತ್ತು ಕಾರ್ತಿಕೇಯರನ್ನು ಪೂಜಿಸುವ ಎಲ್ಲರೂ ಗಣಪತಿಯನ್ನು ಪೂಜಿಸುತ್ತಾರೆ. ಗಣೇಶನನ್ನು ಅತಿ ಹೆಚ್ಚು ಜನ ಆರಾಧಿಸಲು ಬೇರೆ ಬೇರೆ ಕಾರಣಗಳಿವೆ. ಯಾವುದೇ ಕೆಲಸ ಮಾಡುವ ಮುಂಚೆ, ಗಣೇಶ ಪೂಜೆ ಸಲ್ಲಿಸಿ ಕಾರ್ಯ ಆರಂಭ ಮಾಡುವುದು ವಾಡಿಕೆ. ಕೆಲಸ ಕಾರ್ಯಗಳಲ್ಲಿ ಯಾವುದೇ ಬಗೆಯ ವಿಘ್ನಗಳು ಎದುರಾಗಬಾರದು ಎಂಬುದು ಹಾಗೆ ಪೂಜಿಸುವವರ ಬಲವಾದ ನಂಬಿಕೆ. ನಿರಂತರ ವೈಫಲ್ಯ ಎದುರಿಸುತ್ತಿರುವವರು ಯಶಸ್ಸು ಕೋರಿ ಗಣೇಶನನ್ನು ಪೂಜಿಸುತ್ತಾರೆ. ವಿದ್ಯೆ, ವಿವೇಕ ಮತ್ತು ಜ್ಞಾನದ ಸಂಕೇತದಂತಿರುವ ಸಿದ್ಧಿ ವಿನಾಯಕನನ್ನು ವಿಶೇಷ ಸಿದ್ಧಿಗಾಗಿ ಆರಾಧಿಸುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳು ಗಣೇಶನನ್ನು ವಿದ್ಯಾ ದೇವತೆಯೆಂದು ನಂಬಿ ಪೂಜಿಸುತ್ತಾರೆ.
ಅಷ್ಟಕ್ಕೂ ಗಣೇಶ ಬ್ರಹ್ಮಚಾರಿ ಎಂಬ ನಂಬಿಕೆಯೇ ಹೆಚ್ಚು ಪ್ರಚಲಿತದಲ್ಲಿದೆ. ಗಣೇಶ ಜನಸಮುದಾಯಗಳ ನಂಬಿಕೆಯ ಭಾಗವಾಗಿರುವುದರಿಂದ ವ್ಯಕ್ತಿಗತ ಮತ್ತು ಸಾಮುದಾಯಿಕ ನೆಲೆಯಲ್ಲಿ ಗಣೇಶ ಹಬ್ಬ, ಉತ್ಸವ, ಆಚರಣೆಗಳು ಕಾಲಾನುಕಾಲದಿಂದ ನಡೆಯುತ್ತಾ ಬಂದಿವೆ.
ವ್ಯಕ್ತಿಗತ ನೆಲೆಯಲ್ಲಿ ಭಕ್ತರು, ತಮ್ಮ ತಮ್ಮ ಮನೆ ಮತ್ತು ಮನಗಳಲ್ಲಿ ವಿವಿಧ ಮಂತ್ರಸ್ತುತಿಗಳಿಂದ ಪೂಜಿಸುತ್ತಾರೆ. ಈ ಬಗೆಯ ಪೂಜೆ, ಧ್ಯಾನ ಮತ್ತು ಮಂತ್ರ ಪಠಣೆಯಿಂದ ಅಕ್ಕ ಪಕ್ಕದಲ್ಲಿ ಇರುವವರಿಗೆ, ನೆರೆ ಹೊರೆಯವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಭಾರತೀಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಅಬ್ಬರದ ಪೂಜೆಗಿಂತಲೂ ಮಾನಸಿಕ ಮಂತ್ರ ಪಠಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
ಭಕ್ತಿ, ಪೂಜೆ, ಧ್ಯಾನ, ಮಂತ್ರ ಪಠಣೆ, ಆರಾಧನೆ -ವ್ಯಕ್ತಿಗತ ನಂಬಿಕೆಯನ್ನು ಅವಲಂಬಿಸಿ ನಡೆಯುವ ಆಚರಣೆಗಳು. ಮನೆ ಮತ್ತು ದೇವಸ್ಥಾನಗಳಿಗೆ ಸೀಮಿತವಾಗಿದ್ದ ಭಕ್ತಿ ಪ್ರಧಾನ ಗಣಪತಿ ಆರಾಧನೆಯನ್ನು 1893ರಲ್ಲಿ ಲೋಕಮಾನ್ಯ ಬಾಲಗಂಗಾಧರ್ ತಿಲಕರು ಸಮುದಾಯಗಳ ನಡುವೆ ಸಾರ್ವಜನಿಕವಾಗಿ ಗಣೇಶ ಉತ್ಸವ ಮತ್ತು ಮೆರವಣಿಗೆ ಆಚರಿಸಲು ಶುರು ಮಾಡಿದರು. ತಿಲಕರ ಉದ್ದೇಶ, ಆಶಯ ಸ್ಪಷ್ಟವಾಗಿತ್ತು. ಬ್ರಿಟಿಷರ ವಿರುದ್ಧ ಭಾರತೀಯರನ್ನು ಜಾತಿ, ಮತ, ಪಂಥ ಮೀರಿ ಸಂಘಟಿಸಲು ಗಣೇಶ ಉತ್ಸವಗಳನ್ನು ಆಯೋಜಿಸತೊಡಗಿದರು. ಮುಖ್ಯವಾಗಿ ರಾಷ್ಟ್ರೀಯ ಭಾವ ಮೂಡಿಸಲು ಈ ಉತ್ಸವ, ಮೆರವಣಿಗೆಗಳನ್ನು ಪೂರಕವಾಗಿ ಬಳಸಿಕೊಂಡರು. ಈ ಹೊತ್ತಿಗೂ ಗಣೇಶ ಉತ್ಸವವನ್ನು ಸಾರ್ವಜನಿಕವಾಗಿ ಅತಿ ವಿಜೃಂಭಣೆಯಿಂದ ಮಹಾರಾಷ್ಟ್ರದಲ್ಲಿ ಆಚರಿಸುತ್ತಾರೆ. ವಿಶೇಷವಾಗಿ ಮುಂಬೈ, ಪುಣೆ ನಗರಗಳಲ್ಲಿ.
ಈಗ ಕಳೆದ ಮೂರ್ನಾಲ್ಕು ದಶಕಗಳಿಂದ ಕರ್ನಾಟಕದ ನಗರ, ಪಟ್ಟಣ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಉತ್ಸವ, ಮೆರವಣಿಗೆ ನಡೆಸಲಾಗುತ್ತಿದೆ. ಎಲ್ಲ ಸಮುದಾಯದ ಜನರು ಸಂಭ್ರಮದಿಂದ ಈ ಉತ್ಸವಗಳಲ್ಲಿ ಭಾಗವಹಿಸುತ್ತಾರೆ. ಆ ಕಾರಣಕ್ಕೆ ನಗರಗಳಲ್ಲಿ ವಿನಾಯಕ ಬಳಗ, ವಿನಾಯಕ ಯುವಕರ ಸಂಘದಂತಹ ಸಂಘಟನೆಗಳು ಹುಟ್ಟಿಕೊಂಡವು. ಈ ಹಿಂದೆ ಗಣೇಶ ಉತ್ಸವಗಳನ್ನು ಅತ್ಯಂತ ಸೌಹಾರ್ದಯುತವಾಗಿ ಆಚರಿಸುತ್ತಿದ್ದರು. ಮುಂಬೈ, ಪುಣೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಗಣೇಶ ಉತ್ಸವದ ಅಂಗವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಪಟ್ಟಣ ಮತ್ತು ನಗರಗಳ ಏರಿಯಾಗಳಲ್ಲಿ ಆಯೋಜಿಸುವ ಗಣೇಶ ಉತ್ಸವಗಳು ಸ್ಥಳೀಯ ಪ್ರತಿಭೆಗಳ ಪ್ರತಿಭಾನ್ವೇಷಣೆಗೆ ವೇದಿಕೆ ಒದಗಿಸುತ್ತಿದ್ದವು. ನೃತ್ಯ, ಅಭಿನಯ, ಹಾಡು ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನೀಡುವವರಿಗೆ ಅವಕಾಶ ಒದಗಿಸುವ ತಾಣಗಳಾಗಿದ್ದವು. ಜಗಮಗಿಸುವ ಬೆಳಕಿನಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ, ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಮಣ್ಯ, ಎಸ್. ಜಾನಕಿಯವರು ಹಾಡಿದ ಭಕ್ತಿ ಗೀತೆಗಳು ಒಂದೊಂದೇ ಬಿತ್ತರಗೊಳ್ಳುತ್ತಿದ್ದಂತೆ ಜನ ಹರಿದು ಬರುತ್ತಿದ್ದರು. ‘ಗಜಮುಖನೆ ಗಣಪತಿಯೇ ನಿನಗೆ ವಂದನೆ, ನಂಬಿದವರ ಬಾಳಿನ ಕಲ್ಪತರು ನೀನೇ’-ಎಂಬ ಭಕ್ತಿಗೀತೆ ಎಸ್. ಜಾನಕಿಯವರ ಕಂಠಸಿರಿಯಲ್ಲಿ ಸುಶ್ರಾವ್ಯವಾಗಿ ಬಿತ್ತರಗೊಳ್ಳುತ್ತಿದ್ದರೆ ಇಡೀ ವಾತಾವರಣದಲ್ಲಿ ಭಕ್ತಿ ಭಾವ ಆವರಿಸುತ್ತಿತ್ತು. ಇಂತಹ ಅನುಭೂತಿ ಪಡೆದೇ ಆರ್. ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಸಿ.ಎನ್. ಅಶ್ವತ್ಥ ನಾರಾಯಣ, ಬಸನಗೌಡ ಪಾಟೀಲ್ ಯತ್ನಾಳ್ ಬೆಳೆದಿದ್ದು. ಪಿ.ಬಿ. ಶ್ರೀನಿವಾಸ್ ಕಂಠ ಸೀರಿಯಲ್ಲಿ ‘ಶರಣು ಶರಣಯ್ಯ ಶರಣು ಬೆನಕ... ಎಲ್ಲಾರು ಒಂದಾಗಿ ನಿನ್ನ ನಮಿಸಿ ನಲಿಯೋದೆ ಚಂದ’ ಎಂಬ ಗಣೇಶ ಸ್ತುತಿ ಪದ್ಯ ಕೇಳುತ್ತಿದ್ದರೆ ಮನದಲ್ಲಿ ಭಕ್ತಿ ಭಾವ, ಸ್ನೇಹ ಸೌಹಾರ್ದ ಭಾವ ಹರಿದು ಬರುತ್ತಿತ್ತು. ಆ ಹಾಡುಗಳು ಈ ಹೊತ್ತಿಗೂ ಕೇಳಲು ಚಂದ. ‘ಭಾದ್ರಪದ ಶುಕ್ಲದ ಚೌತಿಯೆಂದು’ಎಂಬ ಹಾಡು ಮಕ್ಕಳು ಮತ್ತು ಯುವಕರಲ್ಲಿ ಹಬ್ಬದ ಸಂಭ್ರಮ ಹುಟ್ಟು ಹಾಕುತ್ತಿತ್ತು. ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಮುಹಮ್ಮದ್ ರಫಿಯವರು ತಮ್ಮ ಕಂಠ ಸಿರಿಯಲ್ಲಿ ಹಾಡಿದ ‘ದೇವಾ ಹೋ ದೇವಾ ಗಣಪತಿ ದೇವಾ’ ಹಾಡು ಭಕ್ತಿ ಮತ್ತು ಸಾಮರಸ್ಯದ ಬದುಕಿನ ಪ್ರತೀಕದಂತಿದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಗಣೇಶ ಉತ್ಸವ, ಮೆರವಣಿಗೆ ಸಮುದಾಯಗಳನ್ನು ಒಂದು ಮಾಡುವುದರ ಬದಲು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸುತ್ತಿವೆ. ಸಾಮರಸ್ಯ ಕದಡುವ ಮತೀಯ ಶಕ್ತಿಗಳು, ಅರ್ಥಪೂರ್ಣ ಮತ್ತು ಸೌಹಾರ್ದದ ಗಣೇಶ ಉತ್ಸವ-ಮೆರವಣಿಗೆಗಳನ್ನು ವಿರೂಪಗೊಳಿಸುತ್ತಿವೆ. ಅಬ್ಬರದ ಡಿ.ಜೆ. ಸಂಗೀತ, ಅಲ್ಲಿ ಬಳಸುವ ಅಶ್ಲೀಲ ಹಾಡುಗಳು ಗಣೇಶ ಉತ್ಸವ ಮತ್ತು ಮೆರವಣಿಗೆಯ ವಾತಾವರಣದಲ್ಲಿ ಗಣಪತಿ ಭಕ್ತಿಯೇ ಮಾಯವಾಗುವಂತೆ ಮಾಡಿವೆ. ಡಿ.ಜೆ. ಸಂಗೀತದ ಅಬ್ಬರ ಶಬ್ದ ಮಾಲಿನ್ಯದ ಪರಮಾವಧಿಯಂತಿದೆ. ಗಣೇಶ ಉತ್ಸವ ಮತ್ತು ಮೆರವಣಿಗೆಯ ದಿನ ಬಂತೆಂದರೆ ಓದುವ ವಿದ್ಯಾರ್ಥಿಗಳು ಆತಂಕದಲ್ಲಿದ್ದರೆ, ಹೃದಯ ರೋಗಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ.
ಸಿದ್ಧಿ ವಿನಾಯಕ, ವಿಘ್ನ ನಿವಾರಕ, ಸಂಕಷ್ಟ ಹರ ಗಣಪತಿ ಮೂರ್ತಿ ಸಮ್ಮುಖದಲ್ಲಿ ಡಿ.ಜೆ. ಸಂಗೀತದ ಅಬ್ಬರದೊಂದಿಗೆ ಅಶ್ಲೀಲ ಹಾಡುಗಳು ವಿಜೃಂಭಣೆ ಮಾಡುತ್ತಿವೆ. ಒಂದೆಡೆ ಡಿ.ಜೆ. ಅಬ್ಬರದ ಸಂಗೀತ ಶಬ್ದ ಮಾಲಿನ್ಯ ಉಂಟು ಮಾಡಿದರೆ, ಕೀಳು ಅಭಿರುಚಿಯ ಹಾಡಿನ ಅರ್ಥ ಯುವಕರ ಮನಸ್ಸು ಮತ್ತು ಇಡೀ ಗಣೇಶ ಉತ್ಸವ-ಮೆರವಣಿಗೆಯ ವಾತಾವರಣವನ್ನು ಮಲಿನಗೊಳಿಸುತ್ತಿವೆ.
ಇಡೀ ಪೊಲೀಸ್ ವ್ಯವಸ್ಥೆ ಕೈಯಲ್ಲಿ ಜೀವ ಹಿಡಿದುಕೊಂಡು ಬಂದೋಬಸ್ತ್‌ಗಾಗಿ ಶ್ರಮಿಸುತ್ತಿರುತ್ತದೆ. ಕಾನೂನು ಸುವ್ಯವಸ್ಥೆ ಹಾಳಾಗಬಾರದು, ಮತೀಯ ಗಲಭೆಗಳಿಗೆ ಅವಕಾಶವಾಗಬಾರದು ಎಂದು ಮೈತುಂಬಾ ಕಣ್ಣಾಗಿ ನಿಗಾ ವಹಿಸುತ್ತಾರೆ. ಕೆಲವು ರಾಜಕಾರಣಿಗಳು ಗಣೇಶ ಉತ್ಸವ ಮತ್ತು ಮೆರವಣಿಗೆಯಲ್ಲಿ ಹಾದಿ ತಪ್ಪಿದ ಹುಡುಗರಿಗೆ ಹೆಂಡ ಕುಡಿಸಿ ಭಾಗವಹಿಸಲು ಬಿಟ್ಟಿರುತ್ತಾರೆ. ಅವರ ಏಕೈಕ ಉದ್ದೇಶ ಗಣೇಶ ಉತ್ಸವದ ಮೆರವಣಿಗೆ ಮಸೀದಿ ಬಳಿ ಹೋಗುತ್ತಲೇ ಕಿಡಿಗೇಡಿಗಳು ಪಟಾಕಿ ಸಿಡಿಸಬೇಕು. ಮಸೀದಿ ಕಡೆಯಿಂದ ಪ್ರತಿಕ್ರಿಯೆ ಬಂದರೆ ಅವರ ಉದ್ದೇಶ ಸಫಲವಾದಂತೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ, ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಮತಕ್ಷೇತ್ರಗಳಲ್ಲಿ ಗಣೇಶ ಉತ್ಸವಗಳನ್ನು ವಿರೂಪಗೊಳಿಸಿಯೇ ಆಚರಿಸುತ್ತಾರೆ. ಭಟ್ಕಳ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ನಗರಗಳಲ್ಲಿ ಈ ಮಾದರಿಯ ಗಣೇಶ ಉತ್ಸವಗಳು ಪ್ರತೀ ವರ್ಷ ನಡೆಯುತ್ತವೆ. ಈಗ ಚಾಮರಾಜನಗರ, ಮಂಡ್ಯ, ತಿ. ನರಸೀಪುರದಂತಹ ಪ್ರದೇಶಗಳಿಗೂ ವಿಸ್ತರಿಸಿಕೊಳ್ಳುತ್ತಿವೆ. ಒಂದೊಮ್ಮೆ ಇಂಥ ಕಡೆ ಕೋಮು ಗಲಭೆಗಳು ಸಂಭವಿಸಿದರೆ ತೊಂದರೆ ಅನುಭವಿಸುವವರು ಬಡವರ ಮಕ್ಕಳೇ. ಯಾವ ರಾಜಕೀಯ ಮುಖಂಡರ ಮಕ್ಕಳು ಜೀವ ಕಳೆದುಕೊಳ್ಳುವುದಿಲ್ಲ, ಗಾಯಗೊಳ್ಳುವುದಿಲ್ಲ. ಯಾರಾದರೊಬ್ಬ ಪೊಲೀಸ್ ಅಧಿಕಾರಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಮಾತುಗಳನ್ನಾಡಿದರೆ ಅಂತಹವರನ್ನು ಹಿಂದೂ ವಿರೋಧಿಗಳು, ದುರಹಂಕಾರಿ ಎಂದು ಬಿಂಬಿಸಲು ಯತ್ನಿಸುತ್ತಾರೆ. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಮತ್ತು ಚಲುವಾದಿ ನಾರಾಯಣ ಸ್ವಾಮಿಯವರು ಒಮ್ಮೆ ತಮ್ಮ ಬಾಲ್ಯದ ಗಣೇಶ ಉತ್ಸವ ಮತ್ತು ಮೆರವಣಿಗೆಗಳನ್ನು ನೆನಪು ಮಾಡಿಕೊಳ್ಳಲಿ. ಆಗ ಇದೊಂದು ನಿರರ್ಥಕ ಪ್ರಹಸನ ಎಂಬುದು ಮನವರಿಕೆಯಾಗುತ್ತದೆ.
ಈ ಹಿಂದೆ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಜರಂಗ ದಳ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂದು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಅದರರ್ಥ ಹನುಮಾನ್ ಆರಾಧನೆ ನಿಲ್ಲಿಸುತ್ತೇವೆ ಎಂಬುದಾಗಿರಲಿಲ್ಲ. ತಕ್ಷಣವೇ ಬಿಜೆಪಿಯ ಎಲ್ಲ ಮುಖಂಡರು ಬೀದಿಗಿಳಿದು ಹನುಮಾನ್ ಚಾಲೀಸ ಪಠಣ ಮಾಡತೊಡಗಿದರು. ಹಾಗೆ ಮಾಡುವುದರಿಂದ ಚುನಾವಣೆಯಲ್ಲಿ ಯಾವ ಬಗೆಯ ಲಾಭ ಸಿಗಲಿಲ್ಲ. ದೈವ ಭಕ್ತಿ ತೀರಾ ವ್ಯಕ್ತಿಗತವಾದದ್ದು. ಅದರ ಪಾವಿತ್ರ್ಯವನ್ನು ಬೀದಿಗೆ ತಂದು ಹಾಳು ಮಾಡಬಾರದು.
ಗಣಪತಿಯನ್ನು ಈ ದೇಶದ ಅಸಂಖ್ಯಾತ ಭಕ್ತರು ಅತ್ಯಂತ ಶ್ರದ್ಧೆಯಿಂದ ಪೂಜಿಸುತ್ತಾರೆ. ಆ ಮೂಲಕ ಸಮಾಧಾನ, ಸಂತೃಪ್ತಿ ಪಡೆದುಕೊಳ್ಳುತ್ತಾರೆ. ವಿಶೇಷವಾಗಿ ಆತ್ಮಬಲ ಮತ್ತು ಕರ್ತೃತ್ವ ಶಕ್ತಿ ಹೆಚ್ಚಿಸಿ ಕೊಳ್ಳುತ್ತಾರೆ. ದೈವ ಮತ್ತು ಭಕ್ತನ ಸಂಬಂಧ ಅತ್ಯಂತ ಖಾಸಗಿಯಾದದ್ದು. ಏಕಾಂತದಲ್ಲಿ ಏರ್ಪಡುವಂತಹದ್ದು. ದೈವ-ದೇವರುಗಳನ್ನು ಸಾರ್ವಜನಿಕ ಬದುಕಿನ ಭಾಗವಾಗಿಸುವ ಮೂಲ ಆಶಯ ಸಾಮುದಾಯಿಕ ಜೀವನದಲ್ಲಿ ಸಾಮರಸ್ಯ, ಸೌಹಾರ್ದ ನೆಲೆಸುವಂತೆ ಮಾಡುವುದಾಗಿರುತ್ತದೆ.
ರಾಜಕೀಯ ಪಕ್ಷಗಳು, ಮತೀಯ ಸಂಘಟನೆಗಳು ಆಯೋಜಿಸುವ ಉತ್ಸವಗಳಲ್ಲಿ ಮಾತ್ರ ಭಕ್ತಿ ಮಾಯವಾಗಿ ದ್ವೇಷ, ಅಸೂಯೆ ನೆಲೆಸುವಂತಾಗುತ್ತಿದೆ. ಆದರೆ ಕರ್ನಾಟಕದ ಹಳ್ಳಿ, ಪಟ್ಟಣ, ನಗರ, ಮಹಾನಗರಗಳಲ್ಲಿ ನಡೆಯುವ ಜಾತ್ರೆಗಳು ಈ ಹೊತ್ತಿಗೂ ಸಾಮರಸ್ಯ ಕಾಪಾಡುವ ತಾಣಗಳಾಗಿವೆ. ಹುಬ್ಬಳ್ಳಿಯ ಸಿದ್ದಾರೂಢ ಜಾತ್ರೆ, ಕಲಬುರಗಿಯ ಶರಣಬಸವೇಶ್ವರ ಜಾತ್ರೆ, ಕೊಟ್ಟೂರ ಜಾತ್ರೆ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗಳು ಸರ್ವ ಜನಾಂಗದವರು ಸಂಭ್ರಮಿಸುವ ಸಮಾವೇಶಗಳಂತಿವೆ.
ಕಲಬುರಗಿಯ ಬಂದೇನವಾಝ್ ಉರೂಸ್ ಮತ್ತು ಶರಣಬಸವೇಶ್ವರ ಜಾತ್ರೆಗಳು ಮೂರ್ನಾಲ್ಕು ನೂರು ವರ್ಷಗಳಿಂದ ನಡೆಯುತ್ತಾ ಬಂದಿವೆ. ಅಲ್ಲಿ ಮತೀಯ ಗಲಭೆ ಸಂಭವಿಸಿದ ಒಂದೇ ಒಂದು ನಿದರ್ಶನ ದೊರೆಯುವುದಿಲ್ಲ. ಬಂದೇನವಾಝ್ ಉರೂಸ್‌ನಲ್ಲಿ ಅಸಂಖ್ಯಾತ ಹಿಂದೂಗಳು ಮತ್ತು ಶರಣಬಸವೇಶ್ವರ ಜಾತ್ರೆಯಲ್ಲಿ ಅಸಂಖ್ಯಾತ ಮುಸ್ಲಿಮ್ ಬಂಧುಗಳು ಭಕ್ತಿ ಭಾವದೊಂದಿಗೆ ಭಾಗವಹಿಸಿರುತ್ತಾರೆ.
ಅಸಂಖ್ಯಾತ ಭಾರತೀಯರಿಂದ ಪೂಜಿಸಲ್ಪಡುವ ಗಣೇಶನ ಹಬ್ಬ, ಉತ್ಸವ, ಮೆರವಣಿಗೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಹಿಂದೂ ಧರ್ಮದ ಶ್ರದ್ಧೆ ನಂಬಿಕೆಗಳಿಗೆ ಅಪಚಾರ ಬಗೆದಂತೆ. ಅಬ್ಬರದ ಡಿ.ಜೆ., ಅಶ್ಲೀಲ ಸಾಹಿತ್ಯವುಳ್ಳ ಹಾಡುಗಳು, ನಶೆಯಿಂದ ಗಣೇಶ ಉತ್ಸವ, ಮೆರವಣಿಗೆಯಲ್ಲಿ ಭಾಗವಹಿಸುವುದು ಶಬ್ದ ಮಾಲಿನ್ಯ ಮಾತ್ರವಲ್ಲ ಭಕ್ತಿ ಭಾವವನ್ನು ಮಲಿನಗೊಳಿಸಿದಂತೆ. ಸಮುದಾಯಗಳಲ್ಲಿ ಸೌಹಾರ್ದ ಮೂಡಿಸುವ ಗಣೇಶ ಉತ್ಸವಗಳ ಆಯೋಜನೆಗೆ ಎಲ್ಲ ಪಕ್ಷದವರು ಆದ್ಯತೆ ನೀಡಬೇಕು. ಡಿ.ಜೆ. ಎಂಬ ಶಬ್ದ ಮಾಲಿನ್ಯದ ರಾಕ್ಷಸನನ್ನು ಒದ್ದೋಡಿಸಬೇಕು. ಜನರ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಬಿಜೆಪಿಯವರಿಗೆ ಸಾಕಷ್ಟು ಅವಕಾಶಗಳಿವೆ.
(ಅಂಕಣಗಾರರು ಹಿರಿಯ ಲೇಖಕರು, ಪತ್ರಕರ್ತರು)






