ಶಿಕ್ಷಣ ಕ್ಷೇತ್ರ: ಸರಕಾರಿ v/s ಖಾಸಗಿ

ಕರ್ನಾಟಕ ಸರಕಾರ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಮತ್ತು ವಿಶ್ವವಿದ್ಯಾನಿಲಯಗಳ ಗುಣಮಟ್ಟ ಸುಧಾರಣೆಗೆ ಸಾವಿರಾರು ಕೋಟಿ ರೂ. ವ್ಯಯ ಮಾಡಿದೆ. ಆದರೆ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಜವಾಹರ ನವೋದಯ ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಸರಕಾರಿ ವ್ಯವಸ್ಥೆಯ ಭಾಗವಾಗಿಯೇ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆದರೆ ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿವೆ. ಇಡೀ ಸರಕಾರಿ ಶಿಕ್ಷಣ ವ್ಯವಸ್ಥೆ ಹಾಳಾಗಲು ನಮ್ಮ ಜನ ಪ್ರತಿನಿಧಿಗಳ ಪಾತ್ರ ಹಿರಿದಾಗಿದೆ.
ಬರೋಬ್ಬರಿ ನಲವತ್ತು ವರ್ಷಗಳ ಹಿಂದೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯು ಜವಾಹರ ನವೋದಯ ಶಾಲೆಗಳನ್ನು ಆರಂಭಿಸಿತ್ತು. ಆಗ ದಿ. ರಾಜೀವ್ ಗಾಂಧಿಯವರು ಭಾರತದ ಪ್ರಧಾನ ಮಂತ್ರಿಯಾಗಿದ್ದರು. ಅವರು ಡೆಹ್ರಾಡೂನ್‌ನ ದಿ ಡೂನ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ನಡೆಸಿದ್ದರು. ದಿ ಡೂನ್ ಸ್ಕೂಲ್ ಅತ್ಯುತ್ತಮ ಗುಣಮಟ್ಟದ ವಸತಿ ಶಾಲೆ. ಶ್ರೀಮಂತರ ಮಕ್ಕಳು ಓದುವ ಮತ್ತು ಅತ್ಯಂತ ದುಬಾರಿ ವೆಚ್ಚದ ಪ್ರತಿಷ್ಠಿತ ಶಾಲೆ.
ತನಗೆ ದೊರೆತ ಗುಣಮಟ್ಟದ ಶಿಕ್ಷಣ ಭಾರತದ ಗ್ರಾಮೀಣ ಭಾಗದ ಬಡ, ಹಿಂದುಳಿದ, ದಲಿತ ಮಕ್ಕಳಿಗೂ ಸಿಗುವಂತಾಗಲಿ ಎಂದು ದಿ. ರಾಜೀವ್ ಗಾಂಧಿಯವರು ಅತ್ಯುತ್ತಮ ಜವಾಹರ ನವೋದಯ ಶಾಲೆಗಳನ್ನು ಆರಂಭಿಸಿದ್ದರು. ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಈ ಜವಾಹರ ನವೋದಯ ವಸತಿ ಶಾಲೆಗಳಲ್ಲಿ ಆರರಿಂದ ಹನ್ನೆರಡನೆಯ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತದೆ. ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ (ಈ ಮೊದಲು ಮಾನವ ಸಂಪನ್ಮೂಲ ಇಲಾಖೆಯಾಗಿತ್ತು) ಜವಾಹರ ವಸತಿ ಶಾಲೆಗಳನ್ನು ನವೋದಯ ವಿದ್ಯಾಲಯ ಸಮಿತಿಯು ನಿಗಾ ವಹಿಸುತ್ತದೆ. ನವೋದಯ ವಸತಿ ಶಾಲೆಗಳ ಜಿಲ್ಲಾ ಮಟ್ಟದ ಸಮಿತಿಗೆ ಆಯಾ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಸಿ.ಬಿ.ಎಸ್. ಇ. ಆಫಿಲೇಷನ್ ಹೊಂದಿರುವ ಈ ವಸತಿ ಶಾಲೆಗಳಲ್ಲಿ ಗ್ರಾಮೀಣ ಭಾಗದ ಪ್ರತಿಶತ ಎಪ್ಪತ್ತರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗುತ್ತಿದೆ. ಪ್ರತಿಶತ ಇಪ್ಪತ್ತೈದು ಸೀಟುಗಳು ನಗರ ಪ್ರದೇಶದ ಮಕ್ಕಳಿಗೆ ಮೀಸಲಾಗಿವೆ. ಅಷ್ಟು ಮಾತ್ರವಲ್ಲ ಪ್ರತಿಶತ 33ರಷ್ಟು ಸೀಟುಗಳು ಹುಡುಗಿಯರಿಗೆ ನಿಗದಿಪಡಿಸಲಾಗಿದೆ. ಕೇಂದ್ರ ಸರಕಾರದ ಮೀಸಲಾತಿ ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮಕ್ಕಳಿಗೆ ಸೀಟುಗಳನ್ನು ನಿಗದಿಪಡಿಸಲಾಗಿದೆ. ಪ್ರತಿಶತ ಮೂರರಷ್ಟು ದಿವ್ಯಾಂಗ ಮಕ್ಕಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ ಐದರಿಂದ ಗರಿಷ್ಠ 30 ಎಕರೆ ಜಮೀನಿನಲ್ಲಿ ಜವಾಹರ ವಸತಿ ಶಾಲೆಗಳ ಕ್ಯಾಂಪಸ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಭಾರತದಾದ್ಯಂತ ಒಟ್ಟು 661 ಜವಾಹರ ನವೋದಯ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ತಲಾ ಹತ್ತು ಜವಾಹರ ನವೋದಯ ವಸತಿ ಶಾಲೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 31 ಜವಾಹರ ನವೋದಯ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಭಾರತದಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಜವಾಹರ ನವೋದಯ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಕೇಂದ್ರ ಸರಕಾರ ಪ್ರಸ್ತುತ ಪ್ರತೀ ವರ್ಷ ನಾಲ್ಕು ಸಾವಿರ ಕೋಟಿ ಹಣವನ್ನು ಈ ವಸತಿ ಶಾಲೆಗಳ ನಿರ್ವಹಣೆಗಾಗಿ ಖರ್ಚು ಮಾಡುತ್ತಿದೆ. ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಹೆಚ್ಚು ಕಡಿಮೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. 1986ರಿಂದ ಇಲ್ಲಿಯವರೆಗೆ ಅದೆಷ್ಟೋ ಸರಕಾರಗಳು ಕೇಂದ್ರ ಮತ್ತು ರಾಜ್ಯದಲ್ಲಿ ಬದಲಾವಣೆಯಾಗಿವೆ. ಆದರೆ ಜವಾಹರ ನವೋದಯ ವಸತಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಹಾಗೆಯೇ ಕಾಯ್ದುಕೊಳ್ಳಲಾಗಿದೆ. ಒಡಲುಗೊಂಡ ಮನುಷ್ಯರೇ ಕಳೆದ ನಲುವತ್ತು ವರ್ಷಗಳಿಂದ ಜವಾಹರ ನವೋದಯ ವಸತಿ ಶಾಲೆಗಳನ್ನು ನಿರ್ವಹಿಸುತ್ತಿದ್ದಾರೆ. ಬಿಜೆಪಿ ಸರಕಾರ ಬಂದ ಮೇಲೆ ಜವಾಹರ ಹೆಸರನ್ನು ಮಾತ್ರ ಕಿತ್ತು ಹಾಕಿದೆ. ಆದರೆ ದಿ. ರಾಜೀವ್ ಗಾಂಧಿಯವರ ಕನಸಿನ ಶಾಲೆಗಳ ಗುಣಮಟ್ಟ ಹಾಗೆಯೇ ಮುಂದುವರಿದಿದೆ. ಅವರ ಸಂಕಲ್ಪ ಅದೆಷ್ಟು ದೃಢವಾಗಿದ್ದಿರಬೇಕು!
ಜವಾಹರಲಾಲ್ ನೆಹರೂ ಅವರು ಭಾರತದ ಪ್ರಧಾನಿಯಾಗಿದ್ದಾಗ (1965)ಎಲ್‌ಕೆಜಿಯಿಂದ ಪಿಯುಸಿಯವರೆಗೆ ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲಾಗಿತ್ತು. ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯ ವ್ಯಾಪ್ತಿಯಲ್ಲಿ ‘ಕೇಂದ್ರೀಯ ವಿದ್ಯಾಲಯ ಸಂಘಟನ್’ ಎಂಬ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅದರಡಿ ಕೇಂದ್ರೀಯ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ದೇಶದಲ್ಲಿ ಒಟ್ಟು 1289 ಕೇಂದ್ರೀಯ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ಕೇವಲ 54 ಕೇಂದ್ರೀಯ ವಿದ್ಯಾಲಯಗಳು ಕ್ರಿಯಾಶೀಲವಾಗಿವೆ. ಈ ಕೇಂದ್ರೀಯ ವಿದ್ಯಾಲಯಗಳಲ್ಲಿ ಸಾಮಾನ್ಯವಾಗಿ ಕೇಂದ್ರ ಸರಕಾರದ ಮಕ್ಕಳಿಗೆ ಪ್ರವೇಶಾವಕಾಶ ನೀಡಲಾಗುತ್ತದೆ. ಸೀಟುಗಳು ಮಿಕ್ಕಿ ಉಳಿದರೆ ಸ್ಥಳೀಯರಿಗೂ ಅವಕಾಶ ಕಲ್ಪಿಸುತ್ತಾರೆ. ಶಿಕ್ಷಣದ ವ್ಯಾಪಾರೀಕರಣ ಭರದಿಂದ ಸಾಗುತ್ತಿರುವಾಗ, ಖಾಸಗಿ ಶಿಕ್ಷಣ ಸಂಸ್ಥೆಗಳ ಕಬಂಧ ಬಾಹುಗಳು ಎಲ್ಲೆಡೆ ಚಾಚುತ್ತಿರುವಾಗಲೂ ಜವಾಹರ ನವೋದಯ ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ತಮ್ಮ ಎಂದಿನ ಗುಣಮಟ್ಟದ ಶಿಕ್ಷಣದೊಂದಿಗೆ ಮುಂದುವರಿಯುತ್ತಿವೆ. ಬಡತನದ ಬವಣೆಯಲ್ಲೂ ಅಸಂಖ್ಯಾತ ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ವೈದ್ಯರು ಶಿಕ್ಷಣ ಪಡೆದು ಮೇಲೆ ಬಂದಿದ್ದು ಈ ಜವಾಹರ ನವೋದಯ ವಸತಿ ಶಾಲೆಗಳ ಗುಣಮಟ್ಟದ ಶಿಕ್ಷಣದಿಂದ. ದಿ. ರಾಜೀವ್ ಗಾಂಧಿಯವರು ಕಂಡ ಕನಸನ್ನು ಅಕ್ಷರಶಃ ಜವಾಹರ ನವೋದಯ ವಸತಿ ಶಾಲೆಗಳು ಸಾಕಾರಗೊಳಿಸುತ್ತಿವೆ. ಜವಾಹರ ನವೋದಯ ವಸತಿ ಶಾಲೆಗಳ ಕ್ಯಾಂಪಸ್‌ಗಳು ಗ್ರಾಮೀಣ ಪ್ರದೇಶದಲ್ಲೇ ನೆಲೆ ನಿಂತಿವೆ.
ಒಂದು ಕಾಲದಲ್ಲಿ ಕರ್ನಾಟಕ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿತ್ತು. ಸರಕಾರಿ-ಖಾಸಗಿ ಶಾಲಾ ಕಾಲೇಜುಗಳ ನಡುವೆ ಪೈಪೋಟಿ ಇರಲಿಲ್ಲ. ಸರಕಾರಿ ಶಾಲಾ ಕಾಲೇಜುಗಳು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದವು. ಕ್ರಿಶ್ಚಿಯನ್ ಮಿಷನರಿ ನಡೆಸುತ್ತಿರುವ ಆಂಗ್ಲ ಮಾಧ್ಯಮದ ಶಾಲೆಗಳು ಹಣಕ್ಕಾಗಿ ಶಿಕ್ಷಣ ನೀಡುತ್ತಿರಲಿಲ್ಲ. ಮಠ ಮಾನ್ಯಗಳು ನಡೆಸುತ್ತಿರುವ ಶಾಲಾ ಕಾಲೇಜುಗಳು ಸರಕಾರಿ ಶಾಲಾ ಕಾಲೇಜುಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಜಾಗತೀಕರಣದ ನಂತರ ಆದ್ಯತೆಗಳು ಬದಲಾದವು. ಹಳ್ಳಿಗಳು ಸೊರಗತೊಡಗಿದವು. ಗ್ರಾಮೀಣ ಪ್ರದೇಶದ ಆರ್ಥಿಕತೆ ಕುಸಿಯತೊಡಗಿತು. ಇಂಗ್ಲಿಷ್ ಶಿಕ್ಷಣದ ವ್ಯಾಮೋಹ ಹೆಚ್ಚತೊಡಗಿತು. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳು ಕಾಲದ ಪೈಪೋಟಿ ಗೆಲ್ಲಬಲ್ಲರು ಎಂಬ ಭ್ರಮೆ ಸೃಷ್ಟಿಯಾಯಿತು. ಕನ್ನಡ ಆಂಗ್ಲ ಮಾಧ್ಯಮಗಳ ನಡುವೆ ಬಹು ದೊಡ್ಡ ಕಂದಕ ನಿರ್ಮಾಣವಾಯಿತು. ನ್ಯಾಯಾಲಯಗಳು ಆಂಗ್ಲ ಮಾಧ್ಯಮದ ಪರ ತೀರ್ಪು ನೀಡಿದವು.
ದಿನೇ ದಿನೇ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಗುಣಮಟ್ಟ ಕುಸಿಯತೊಡಗಿತು. ಕಾಲದ ಅಗತ್ಯಕ್ಕೆ ತಕ್ಕಂತೆ ಸರಕಾರಿ ಶಾಲಾ ಕಾಲೇಜುಗಳು ಗುಣಾತ್ಮಕ ಬದಲಾವಣೆ ತಂದುಕೊಳ್ಳದೆ ಇರುವುದರಿಂದ, ನಗರ ಪಟ್ಟಣಗಳಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿದವು. ಶಾಲಾ ಶಿಕ್ಷಣದ ಅಧಿಕಾರಿಗಳು, ಪದವಿ ಕಾಲೇಜುಗಳ ಪ್ರಿನ್ಸಿಪಾಲರು, ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು, ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಮಂತ್ರಿಗಳು-ಎಲ್ಲರೂ ಸೇರಿ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರು. ಕರ್ನಾಟಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಮಟ್ಟದಲ್ಲಿ ಬೆಳೆದು ನಿಲ್ಲಲು ಇಲ್ಲಿಯವರೆಗೆ ಆಡಳಿತ ನಡೆಸಿದ ಸರಕಾರಗಳೇ ಕಾರಣ.ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಶಿಕ್ಷಣದ ಗುಣಮಟ್ಟ ಕಾಯ್ದುಕೊಂಡಿದ್ದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಮಟ್ಟದಲ್ಲಿ ಸರಕಾರದ ಹಂಗು ತೊರೆದು ಸವಾಲು ಒಡ್ಡುತ್ತಿರಲಿಲ್ಲ.
ದಿ. ರಾಜೀವ ಗಾಂಧಿಯವರು ತನಗೆ ದೊರೆತ ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದ ಬಡ ಮಕ್ಕಳಿಗೂ ದೊರೆಯಲಿ ಎಂಬ ಮಹಾನ್ ಸಂಕಲ್ಪದೊಂದಿಗೆ ಆರಂಭಿಸಿದ ಜವಾಹರ ನವೋದಯ ವಸತಿ ಶಾಲೆಗಳು ಕಾಲದ ಸವಾಲುಗಳನ್ನು ಮೆಟ್ಟಿ ನಿಂತು ಮುಂದುವರಿದಿವೆ. ಆದರೆ, ಕರ್ನಾಟಕ ಸರಕಾರದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಯಾಕೆ ಗುಣಮಟ್ಟ ಕಾಯ್ದು ಕೊಳ್ಳುವಲ್ಲಿ ವಿಫಲವಾದವು?
ಹಾಗೆ ನೋಡಿದರೆ, ಕರ್ನಾಟಕ ಸರಕಾರ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಮತ್ತು ವಿಶ್ವವಿದ್ಯಾನಿಲಯಗಳ ಗುಣಮಟ್ಟ ಸುಧಾರಣೆಗೆ ಸಾವಿರಾರು ಕೋಟಿ ರೂ. ವ್ಯಯ ಮಾಡಿದೆ. ಆದರೆ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಜವಾಹರ ನವೋದಯ ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಸರಕಾರಿ ವ್ಯವಸ್ಥೆಯ ಭಾಗವಾಗಿಯೇ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆದರೆ ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿವೆ. ಇಡೀ ಸರಕಾರಿ ಶಿಕ್ಷಣ ವ್ಯವಸ್ಥೆ ಹಾಳಾಗಲು ನಮ್ಮ ಜನ ಪ್ರತಿನಿಧಿಗಳ ಪಾತ್ರ ಹಿರಿದಾಗಿದೆ. ಒಬ್ಬ ಶಾಸಕ ತನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮಂಜೂರು ಮಾಡಿಸಿಕೊಳ್ಳುವ ಶಾಲೆ ಕಾಲೇಜುಗಳ ನಿರ್ಮಾಣದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದರೆ ಈ ಮಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿರಲಿಲ್ಲ. ಶಾಲೆ ಕಾಲೇಜುಗಳನ್ನು ಮಂಜೂರು ಮಾಡಿಸಿಕೊಳ್ಳುವ ಶಾಸಕ ಅವುಗಳ ನಿರ್ಮಾಣದ ಹಂತದಲ್ಲಿ ತನ್ನ ಸ್ವಂತ ಮನೆ ಕಟ್ಟುವಾಗ ತೆಗೆದುಕೊಳ್ಳುವಾಗಿನ ಕಾಳಜಿ ಕಕ್ಕುಲಾತಿ ವಹಿಸಿದ್ದರೆ ಮೂಲಭೂತ ಸೌಕರ್ಯಗಳ ಗುಣಮಟ್ಟ ಕಾಯ್ದು ಕೊಳ್ಳಬಹುದಿತ್ತು. ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿಗೆ ನಿಗಾ ವಹಿಸಿದ್ದರೆ ಎಲ್ಲ ಸರಕಾರಿ ಶಾಲಾ ಕಾಲೇಜುಗಳು, ಜವಾಹರ ನವೋದಯ ವಸತಿ ಶಾಲೆಗಳಂತೆ ಕಂಗೊಳಿಸುತ್ತಿದ್ದವು. ಶಾಲೆ ಕಾಲೇಜುಗಳನ್ನು ಮಂಜೂರು ಮಾಡಿಸಿಕೊಳ್ಳುವ ಜನಪ್ರತಿನಿಧಿಗಳು ಕೇವಲ ಕಮಿಷನ್ ಸಿಕ್ಕರೆ ಸಾಕು ಎಂದು ಉದಾಸೀನತೆ ತೋರಿದ್ದರಿಂದಲೇ ಸರಕಾರಿ ಶಾಲಾ ಕಾಲೇಜುಗಳು ಅವ್ಯವಸ್ಥೆಯ ಆಗರವಾಗಿವೆ. ಇದಕ್ಕೆ ಕಾರಣ: ನಮ್ಮ ರಾಜಕಾರಣಿಗಳ ಶಿಕ್ಷಣ ಸಂಸ್ಥೆಗಳು. ನಮ್ಮ ರಾಜಕಾರಣಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ನಳ ನಳಿಸುತ್ತಿರುತ್ತವೆ. ದಿಲ್ಲಿ ಸ್ಕೂಲ್, ನ್ಯಾಶನಲ್ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ನಡೆಸುವ ಆ ಶಾಲೆಗಳ ನಿರ್ಮಾಣಕ್ಕೆ ಹಣ ಹರಿದು ಹೋಗಿದ್ದು ಸರಕಾರಿ ವ್ಯವಸ್ಥೆಯಿಂದಲೇ.
ಒಮ್ಮೆ ಜನಪ್ರತಿನಿಧಿಗಳು ಸರಕಾರಿ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣದಲ್ಲಿ ದುಡ್ಡು ಹೊಡೆಯಲು ಆರಂಭಿಸಿದರೋ ಅದು ಚಾಳಿಯಾಗಿ ಬದಲಾಯಿತು. ಇಲ್ಲಿ ಎಲ್ಲ ಪಕ್ಷ, ಪ್ರದೇಶದ ಜನಪ್ರತಿನಿಧಿಗಳು ಸೇರಿದ್ದಾರೆ. ತನ್ನ ಮತಕ್ಷೇತ್ರದ ವ್ಯಾಪ್ತಿಯ ಸರಕಾರಿ ಶಾಲಾ ಕಾಲೇಜುಗಳನ್ನು ಅತ್ಯಂತ ಶ್ರದ್ಧೆಯಿಂದ ದೇಗುಲಗಳಂತೆ ನಿರ್ಮಾಣ ಮಾಡಿದವರು ವಿರಳ. ಹಣ ಮಾಡಲು ನಮ್ಮ ಸರಕಾರಿ ಶಾಲಾ ಕಾಲೇಜು ವ್ಯವಸ್ಥೆಯನ್ನೇ ಬುಡ ಮೇಲು ಮಾಡಲಾಗಿದೆ.
ಸರಕಾರಿ ವಸತಿ ನಿಲಯಗಳಿಗೆ ಕೋಟಿ ಕೋಟಿ ಹಣ ವ್ಯಯಿಸಿದರೂ ಗುಣಮಟ್ಟದ ವ್ಯವಸ್ಥೆ ರೂಪಿಸಲು ಸಾಧ್ಯವಾಗುತ್ತಿಲ್ಲ. ಬಡ ಮಕ್ಕಳು ತಿನ್ನುವ ಅನ್ನದಲ್ಲೂ ಹಣ ಹೊಡೆಯುವ ಚಾಳಿ ರೂಢಿಸಿಕೊಂಡರೆ ಗುಣಮಟ್ಟ ಸಾಧಿಸುವುದು ಸಾಧ್ಯವಾಗುವುದಿಲ್ಲ.
ಜವಾಹರ ನವೋದಯ ವಸತಿ ಶಾಲೆಗಳ ಮಾದರಿಯಲ್ಲಿ ಕರ್ನಾಟಕದಲ್ಲೂ 1999ರಲ್ಲಿ ವಸತಿ ಶಾಲೆಗಳನ್ನು ಆರಂಭಿಸಲಾಯಿತು. ಮೊರಾರ್ಜಿ ವಸತಿ ಶಾಲೆಗಳು ಆರಂಭದಲ್ಲಿ ಗುಣಮಟ್ಟ ಕಾಯ್ದುಕೊಂಡಿದ್ದವು. ವಸತಿ ಶಾಲೆಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ದುಡ್ಡು ಯಾವಾಗ ಹೊಡೆಯಲು ಆರಂಭಿಸಿದರೋ ಅಂದಿನಿಂದ ಅವುಗಳ ಗುಣಮಟ್ಟವೇ ಕುಸಿಯಿತು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಾಮಕಾವಾಸ್ತೆ ಸ್ವಾಯತ್ತ ಸಂಸ್ಥೆ. ಅದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಧನದಾಹಕ್ಕೆ ಸಂಪೂರ್ಣ ಹಳಿ ತಪ್ಪಿದೆ. ಈ ಸಂಸ್ಥೆಯಡಿ ಒಟ್ಟು 821 ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಮೊರಾರ್ಜಿ ವಸತಿ ಶಾಲೆಗಳ ಜೊತೆಗೆ, ಇಂದಿರಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ನಾರಾಯಣ ಗುರು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಆರಂಭಿಸಲಾಯಿತು. ಈ ಎಲ್ಲ ವಸತಿ ಶಾಲೆಗಳಲ್ಲಿ ಆರರಿಂದ ಹತ್ತನೆ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಬಾಲಕಿಯರಿಗಾಗಿ ಮೀಸಲಿವೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳನ್ನು ಆರಂಭಿಸಿತು. ಈ ವಸತಿ ಶಾಲೆಗಳಲ್ಲಿ ಆರರಿಂದ ಹನ್ನೆರಡನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಹೊಸ ವಸತಿ ಶಾಲೆಗಳನ್ನು ಆರಂಭಿಸುವುದೇ ಕಟ್ಟಡ ನಿರ್ಮಾಣ ಮತ್ತು ಅದರಲ್ಲಿ ದುಡ್ಡು ಹೊಡೆಯಲು ಎಂಬಂತಾಗಿದೆ. ಹಳೆಯ ವಸತಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವ ಪ್ರಯತ್ನ ಯಾರೂ ಮಾಡಲಿಲ್ಲ. ಸದ್ಯ ಕರ್ನಾಟಕದಲ್ಲಿ ವಸತಿ ಶಾಲೆಗಳು, ಸರಕಾರಿ ಶಾಲಾ ಕಾಲೇಜುಗಳು ಆರಂಭಿಸುವುದೇ ಕಟ್ಟಡ ನಿರ್ಮಾಣಕ್ಕೆ. ಆ ಕಟ್ಟಡ ನಿರ್ಮಾಣದಲ್ಲಿ ದುಡ್ಡು ಹೊಡೆಯಲು. ಅತ್ಯುತ್ತಮ ಮೂಲಭೂತ ಸೌಕರ್ಯ ಕಲ್ಪಿಸುವುದು ಯಾರೊಬ್ಬರ ಆದ್ಯತೆಯಾಗಿ ಉಳಿದಿಲ್ಲ. ಗುಣಮಟ್ಟದ ಶಿಕ್ಷಣ ಯಾರಿಗೂ ಬೇಕಿಲ್ಲ. ಒಂದು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ. ರಾಜೀವ್ ಗಾಂಧಿಯವರ ಕನಸಿನ ಜವಾಹರ ನವೋದಯ ವಸತಿ ಶಾಲೆಗಳಿಗೆ ಭೇಟಿ ಕೊಡಬೇಕು. ಅವುಗಳ ಗುಣಮಟ್ಟದ ಜೊತೆಗೆ ಕರ್ನಾಟಕ ಸರಕಾರದ ವ್ಯಾಪ್ತಿಯ ವಸತಿ ಶಾಲೆಗಳ ಗುಣಮಟ್ಟವನ್ನು ತುಲನೆ ಮಾಡಬೇಕು. ಈ ವಸತಿ ಶಾಲೆಗಳಲ್ಲಿ ಎಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿಯವರ ಮಕ್ಕಳು, ಮೊಮ್ಮಕ್ಕಳು ಓದಲು ಸಾಧ್ಯವೇ ಎನ್ನುವುದನ್ನು ಊಹಿಸಿಕೊಳ್ಳಬೇಕು. ಆಗ ಮಾತ್ರ ಗುಣಮಟ್ಟ ಸುಧಾರಿಸಬಹುದು.
ಕರ್ನಾಟಕ ಸರಕಾರ ಪಬ್ಲಿಕ್ ಶಾಲೆಗಳನ್ನು ನಡೆಸುತ್ತಿದೆ. ಈಗಾಗಲೇ 309 ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್‌ಕೆಜಿಯಿಂದ ಹನ್ನೆರಡನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇನ್ನೂ 900 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದಾಗಿ ಶಾಲಾ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಹೇಳಿದ್ದಾರೆ. ಈಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳು ಗುಣಮಟ್ಟದಲ್ಲಿ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡಲಾರವು. 900 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳು ಹಣ ಹೊಡೆಯಲು ನಿರ್ಮಾಣ ಮಾಡಿದರೆ ಯಾರಿಗೂ ಪ್ರಯೋಜನ ಇಲ್ಲ. ಮಧು ಬಂಗಾರಪ್ಪ ಅವರಿಗೆ ನಿಜವಾಗಿಯೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ರೂಪಿಸುವ ಇರಾದೆ ಇದ್ದರೆ, ದಿ. ರಾಜೀವ್ ಗಾಂಧಿ ಮೇಲೆ ಗೌರವ ಇದ್ದಿದ್ದರೆ ಜವಾಹರ ನವೋದಯ ವಸತಿ ಶಾಲೆಗಳ ಗುಣಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡಲಿ. ರಾಜೀವ್ ಗಾಂಧಿ ಕರ್ನಾಟಕ ಸರಕಾರಕ್ಕೆ ಆದರ್ಶವಾಗದಿದ್ದರೆ ಕರ್ನಾಟಕ ಸರಕಾರ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡಲು ಸಾಧ್ಯವಿಲ್ಲ. ಕರ್ನಾಟಕ ಸರಕಾರದ ವ್ಯಾಪ್ತಿಯ ವಿಶ್ವವಿದ್ಯಾನಿಲಯಗಳು ಖಾಸಗಿ ವಿಶ್ವವಿದ್ಯಾನಿಲಯಗಳ ಎದುರು ಮಂಕಾಗಿ ಕಾಣುತ್ತಿವೆ. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹನ್ನೊಂದಕ್ಕೂ ಹೆಚ್ಚು ಕೇಂದ್ರ ಸರಕಾರದ ಅನುದಾನದಡಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆ ಎಲ್ಲ ಸಂಸ್ಥೆಗಳು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿರ್ಮಾಣವಾಗಿದ್ದವು. ಸರಕಾರಿ ವ್ಯವಸ್ಥೆಯಲ್ಲೂ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡಬಹುದು ಎಂಬುದಕ್ಕೆ ಜವಾಹರ ನವೋದಯ ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಸಾಕ್ಷಿಯಾಗಿ ನಿಂತಿವೆ. ಅಹಿಂದ ವರ್ಗಗಳೇ ಹೆಚ್ಚು ಅವಲಂಬಿಸಿರುವ ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿ ಪಡಿಸಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಂತ್ರಣಕ್ಕೆ ಬರುತ್ತವೆ. ಇಲ್ಲದಿದ್ದರೆ ಅವು ಮಧ್ಯಮ ವರ್ಗದವರ ಪಾಲಿಗೂ ಗಗನ ಕುಸುಮವಾಗುತ್ತವೆ. ಖಾಸಗಿಯೆಂದರೆ ಗುಣಮಟ್ಟದ ಶಿಕ್ಷಣ ಎಂಬುದು ಕೇವಲ ಹುಸಿ ಪ್ರಚಾರ. ಅತ್ಯುತ್ತಮ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳ ಕಾರಣಕ್ಕೆ ಆಕರ್ಷಿಸುಸುತ್ತಿವೆ. ನಿಜವಾದ ಪ್ರತಿಭಾವಂತರು ಕಾರ್ಯ ನಿರ್ವಹಿಸುತ್ತಿರುವುದು ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ. ಆದರೆ ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಅತ್ಯುತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳ ಕಾರಣಕ್ಕೆ ಹಿಂದೆ ಬಿದ್ದಿವೆ.







