Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಚುನಾವಣಾ ಫಲಿತಾಂಶ: ಎಲ್ಲ ಪಕ್ಷಗಳಿಗೂ ಪಾಠ

ಚುನಾವಣಾ ಫಲಿತಾಂಶ: ಎಲ್ಲ ಪಕ್ಷಗಳಿಗೂ ಪಾಠ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ9 May 2026 9:10 AM IST
share
ಚುನಾವಣಾ ಫಲಿತಾಂಶ: ಎಲ್ಲ ಪಕ್ಷಗಳಿಗೂ ಪಾಠ

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಶತ್ರು ಮತ್ತು ಮಿತ್ರ ಪಕ್ಷಗಳ ಆಯ್ಕೆಯಲ್ಲಿ ಎಡವುತ್ತಲೇ ಬಂದಿದೆ. ಅದರ ಪರಿಣಾಮವಾಗಿ ಬಿಜೆಪಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಬೆಳೆಸಿ, ಬಳಸಿಕೊಂಡು ವ್ಯವಸ್ಥಿತವಾಗಿ ಅವುಗಳನ್ನು ಮುಗಿಸುತ್ತಾ ಬಂತು. ಈ ಚುನಾವಣಾ ಫಲಿತಾಂಶ ಮೋದಿ-ಅಮಿತ್ ಶಾ ಅವರಿಗೂ ಒಂದು ಪಾಠವಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ವಿಶೇಷವಾಗಿ ಕೇರಳ, ತಮಿಳುನಾಡುಗಳಲ್ಲಿ ಬಿಜೆಪಿಗೆ ಬಾಗಿಲು ಬಂದ್ ಆಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸಿದ ತಂತ್ರಗಾರಿಕೆಯನ್ನೇ ಮೋದಿ-ಅಮಿತ್ ಶಾ ಅಳವಡಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ದಕ್ಷಿಣ ಭಾರತದಲ್ಲಿ ಭವಿಷ್ಯ ಇಲ್ಲ ಎನ್ನುವುದು ಈ ಚುನಾವಣೆಯ ಫಲಿತಾಂಶದಿಂದ ನಿಚ್ಚಳವಾಗಿದೆ.

ಇತ್ತೀಚೆಗೆ ಹೊರ ಬಿದ್ದ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಭಾರತದ ಎಲ್ಲ ರಾಜಕೀಯ ಪಕ್ಷಗಳಿಗೂ ಬಹುದೊಡ್ಡ ಪಾಠ ಕಲಿಸಿದೆ. ತಮ್ಮದೇ ಕಾರಣಕ್ಕೆ ಬಿಜೆಪಿ ಸೇರಿದಂತೆ ಪ್ರತೀ ರಾಜಕೀಯ ಪಕ್ಷ ಚುನಾವಣಾ ಫಲಿತಾಂಶ ತಮ್ಮ ಪರವಾಗಿದೆ ಎಂದು ಒಣ ಜಂಬ ಪ್ರದರ್ಶಿಸುತ್ತಿರಬಹುದು. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದರೆ ಹುಳುಕುಗಳು ಅನಾವರಣಗೊಳ್ಳುತ್ತವೆ.

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶವನ್ನೇ ನೋಡಿ. ತಾಂತ್ರಿಕವಾಗಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವಕ್ಕೆ ಬಂದ ಸರಕಾರ ಮೇಲುನೋಟಕ್ಕೆ ಬಿಜೆಪಿಯದ್ದು. ಆದರೆ ವಾಸ್ತವದಲ್ಲಿ ಬಿಜೆಪಿ ನಾಮ ಫಲಕದ, ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರಕಾರದಂತಿದೆ. ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ ಕಳೆದ ಹತ್ತು ವರ್ಷಗಳಿಂದ ಗಂಭೀರವಾಗಿ ಪ್ರಯತ್ನ ನಡೆಸುತ್ತಿತ್ತು. ಬಿಜೆಪಿಯ ಏಕೈಕ ಗುರಿ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಸರಕಾರವನ್ನು ಕಿತ್ತೊಗೆಯುವುದೇ ಆಗಿತ್ತು. ಭಾರತೀಯ ಜನತಾ ಪಕ್ಷ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಸಮಸ್ತ ಕಾರ್ಯಕರ್ತರ ಪಡೆ ಸಂಘ ಪರಿವಾರದ ಮೂಲದಿಂದ ಬಂದಿದ್ದಲ್ಲ. ಮಮತಾ ಬ್ಯಾನರ್ಜಿ ಸರಕಾರದ ದಾಳಿಗೆ ತತ್ತರಿಸಿ ಹೋದ ಎಡ ಪಕ್ಷಗಳ ಕಾರ್ಯಕರ್ತರು ಸಾಮೂಹಿಕವಾಗಿ ಬಿಜೆಪಿಗೆ ವಲಸೆ ಬಂದಿದ್ದಾರೆ. ಮಮತಾ ಬ್ಯಾನರ್ಜಿ ಸರಕಾರವು ಎಡ ಪಕ್ಷಗಳ ಕಾರ್ಯಕರ್ತರನ್ನು ಗುರಿಯಾಗಿಸಿ ನಿರಂತರ ದಾಳಿ ನಡೆಸಿದ್ದರಿಂದ ಅವರಿಗೆ ಆಶ್ರಯ ಕೊಡುವ ಒಂದು ಪಕ್ಷ ಬೇಕಾಗಿತ್ತು. ಹಾಗಾಗಿ ಬಿಜೆಪಿಗೆ ವಲಸೆ ಬಂದರು. ಪಶ್ಚಿಮ ಬಂಗಾಳದ ಬಿಜೆಪಿಯಲ್ಲಿ ಪಕ್ಷವನ್ನು ಮುನ್ನಡೆಸುವ ಸಮರ್ಥ ನಾಯಕತ್ವದ ಕೊರತೆ ಇತ್ತು. ಮೋದಿ-ಆಮಿತ್ ಶಾ ಜೋಡಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಒಬ್ಬ ಕ್ರಿಯಾಶೀಲ ನಾಯಕನನ್ನು ರೂಪಿಸಲು ಸಾಧ್ಯವಾಗಿಲ್ಲ. ಹಾಗಾಗಿ ಕಾಂಗ್ರೆಸ್ ಮೂಲದ, ತೃಣಮೂಲ ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಮಂತ್ರಿಯಾಗಿದ್ದ, ಮಮತಾ ಬ್ಯಾನರ್ಜಿ ಬಲಗೈ ಬಂಟನಂತಿದ್ದ ಸುವೇಂದು ಅಧಿಕಾರಿಯನ್ನು ಹೈಜಾಕ್ ಮಾಡಿದರು. ಹಾಗೆ ನೋಡಿದರೆ ಸುವೇಂದು ಅಧಿಕಾರಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕಳಂಕ ಅಂಟಿಸಿಕೊಂಡವರು. ಮಮತಾ ಬ್ಯಾನರ್ಜಿ ತನ್ನ ಅಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಉತ್ತರಾಧಿಕಾರಿಯಾಗಿ ಬೆಳೆಸುತ್ತಿರುವುದು ಹಲವರಿಗೆ ಇಷ್ಟ ಇರಲಿಲ್ಲ. ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಸುವೇಂದು ಅಧಿಕಾರಿಗೆ ಸಹಜವಾಗಿಯೇ ಅಸಮಾಧಾನವಾಗಿತ್ತು. ಅಷ್ಟಕ್ಕೂ ಸುವೇಂದು ಅಧಿಕಾರಿಗೆ ಮಮತಾ ಬ್ಯಾನರ್ಜಿಯ ಎಲ್ಲ ರಾಜಕೀಯ ಪಟ್ಟುಗಳು, ದೌರ್ಬಲ್ಯಗಳು ಚೆನ್ನಾಗಿ ಗೊತ್ತಿದ್ದವು. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕಳಂಕ ಮೆತ್ತಿಕೊಂಡಿದ್ದ ಸುವೇಂದು ಅಧಿಕಾರಿಯನ್ನು ಬಿಜೆಪಿಗೆ ಕರೆ ತಂದು ತಮ್ಮ ‘ವಾಷಿಂಗ್ ಮೆಷಿನ್’ನಲ್ಲಿ ಶುದ್ಧೀಕರಿಸಿ ನಾಯಕ ಪಟ್ಟ ನೀಡಿದರು. ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ ಸುವೇಂದು ಅಧಿಕಾರಿಗೆ ಬಿಜೆಪಿ ಜೊತೆಗೆ ಸೈದ್ಧಾಂತಿಕ ಮತ್ತು ಭಾವನಾತ್ಮಕ ಸಂಬಂಧ ಇರಲು ಸಾಧ್ಯವಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವವರೆಗೆ ಆತ ಬಿಜೆಪಿಯಲ್ಲಿ ಇರುತ್ತಾರೆ. ಸರಕಾರ ಬದಲಾದರೆ ಸುವೇಂದು ಅಧಿಕಾರಿಯ ನಿಯತ್ತು ಬದಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಮುಂದೊಂದು ದಿನ ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ಶಕ್ತಿ ಹುಟ್ಟಿಕೊಂಡರೆ, ಎಡ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದ ಕಾರ್ಯಕರ್ತರ ಪಡೆ ಮತ್ತೆ ಪಕ್ಷಾಂತರ ಮಾಡಿದರೂ ಆಶ್ಚರ್ಯವಿಲ್ಲ. ಸುವೇಂದು ಅಧಿಕಾರಿಯ ಮೈ ಮನದಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ಮತ್ತು ತೃಣ ಮೂಲ ರಕ್ತ. ಅಷ್ಟಕ್ಕೂ ಮಮತಾ ಬ್ಯಾನರ್ಜಿಯೇ ಮೂಲತಃ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ. ಅವಕಾಶ ಸಿಗಲಿಲ್ಲ ಎಂದು ಹೊಸ ಪಕ್ಷ ಕಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾದವರು. ಹಾಗೆ ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ನೆಲೆ ದೊರಕಿಸಿಕೊಟ್ಟಿದ್ದೇ ಮಮತಾ ಬ್ಯಾನರ್ಜಿ. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ರೈಲ್ವೆ ಮಂತ್ರಿಯಾಗಿ ಬಿಜೆಪಿ ನೇತೃತ್ವಕ್ಕೆ ಶರಣು ಹೋದವರು. ಮಮತಾ ಬ್ಯಾನರ್ಜಿಯವರನ್ನು ಹಣಿಯಲು ಬಿಜೆಪಿ ಎಲ್ಲ ತಂತ್ರಗಳನ್ನು, ವಾಮ ಮಾರ್ಗಗಳನ್ನು ಅನುಸರಿಸಿದೆ. ಈ.ಡಿ., ಚುನಾವಣಾ ಆಯೋಗ, ಮತಗಳನ್ನು ಅಳಿಸಿ ಹಾಕುವುದು ಸೇರಿದಂತೆ ಎಲ್ಲ ಅಡ್ಡ ಹಾದಿ ಅನುಸರಿಸಿದ್ದಾರೆಂಬ ಆರೋಪವಿದೆ.

ಭಾರತೀಯ ಜನತಾ ಪಕ್ಷದ ಸಹವಾಸಕ್ಕೆ ಹೋದ ಪಕ್ಷಗಳು ಮತ್ತು ವ್ಯಕ್ತಿಗಳನ್ನು ಅದು ನಿರ್ನಾಮ ಮಾಡದೇ ಬಿಟ್ಟಿಲ್ಲ. ಒಡಿಶಾದ ನವೀನ್‌ಪಟ್ನಾಯಕ್, ಬಿಹಾರದ ನಿತೀಶ್ ಕುಮಾರ್, ಮಹಾರಾಷ್ಟ್ರದ ಉದ್ಧವ್ ಠಾಕ್ರೆ, ಉತ್ತರ ಪ್ರದೇಶದ ಮಾಯಾವತಿ-ಎಲ್ಲರನ್ನೂ ಬಳಸಿಕೊಂಡು ಬಿಸಾಡಿದ್ದಾರೆ. ನಿತೀಶ್ ಕುಮಾರ್ ಅವರನ್ನು ಚೆನ್ನಾಗಿ ಬಳಸಿಕೊಂಡು ಬಿಹಾರದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ನಿತೀಶ್ ಪುತ್ರನಿಗೆ ಮಂತ್ರಿ ಹುದ್ದೆಯೇನೋ ದಯಪಾಲಿಸಿದ್ದಾರೆ. ಮುಂದೊಂದು ದಿನ ಸಂಯುಕ್ತ ಜನತಾ ದಳವನ್ನೇ ಆಪೋಷನ ತೆಗೆದುಕೊಳ್ಳುತ್ತಾರೆ.

ಅಸ್ಸಾಂ ರಾಜ್ಯದಲ್ಲೂ ಬಿಜೆಪಿಗೆ ಒಬ್ಬ ಜನನಾಯಕನನ್ನು ರೂಪಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಬೆಳೆದು ಸಾಕಷ್ಟು ಹೆಸರು ಮಾಡಿದ್ದ, ಅವಕಾಶವಾದಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಬಿಜೆಪಿಗೆ ಕರೆ ತಂದು, ಅವರ ಮೂಲಕ ಅಸ್ಸಾಂ ಕೈ ವಶ ಮಾಡಿಕೊಂಡಿದ್ದಾರೆ. ಬಿಜೆಪಿ ಎರಡು ತಂತ್ರಗಳನ್ನು ಕರಗತ ಮಾಡಿಕೊಂಡಿದೆ. ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಬರದಂತೆ ನೋಡಿಕೊಳ್ಳುವುದು. ಬಿಜೆಪಿಯೇತರ ಸರಕಾರ ಇರುವ ರಾಜ್ಯಗಳಲ್ಲಿನ ಆಡಳಿತ ವಿರೋಧಿ ಅಲೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಲೆ ತಿಳಿದುಕೊಂಡಿದೆ. ಇಷ್ಟಾಗಿಯೂ ಬಿಜೆಪಿಗೆ ಕರ್ನಾಟಕದಲ್ಲಿನ ಆಡಳಿತ ವಿರೋಧಿ ಅಲೆ ತಡೆಯಲಾಗಿರಲಿಲ್ಲ. ಯಾಕೆಂದರೆ ಇಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ಬಿಜೆಪಿ ಸರಕಾರದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವಷ್ಟು ಸಮರ್ಥವಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಮತದಾರ ಯಾವ ಪಕ್ಷಕ್ಕೂ ಐದು ಅಥವಾ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸತತ ಅಧಿಕಾರದಲ್ಲಿ ಇರಲು ಬಿಡುವುದಿಲ್ಲ. ಅಸ್ಸಾಂ ರಾಜ್ಯದ ಗೆಲುವು ಹಿಮಂತ ಬಿಸ್ವಾ ಶರ್ಮಾ ಗೆಲುವು ಎಂದೇ ಪರಿಗಣಿಸಲಾಗುತ್ತಿದೆ. ಹಿಮಂತ ಮಹಾ ಕಲಾವಿದ. ಮೇಲ್ನೋಟಕ್ಕೆ ಉಗ್ರ ಹಿಂದುತ್ವದ ಪ್ರತಿಪಾದಕನಂತೆ ಬಿಂಬಿಸಿಕೊಂಡು ತಳಹಂತದಲ್ಲಿ ಜಾತಿ ಸಮೀಕರಣದ ನೆಲೆ ಗಟ್ಟಿ ಮಾಡಿಕೊಂಡಿದ್ದಾರೆ. ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಕಾಯಸ್ತ ಸಮುದಾಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಕೊಡುಗೆ ನೀಡಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಆರೆಸ್ಸೆಸ್ ಮೂಲದ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ ಗೆಲುವು ಸಾಧಿಸಿದ್ದರೆ ಅದು ಬಿಜೆಪಿಯ ನಿಜವಾದ ಗೆಲುವು ಆಗುತ್ತಿತ್ತು. ಎರಡೂ ಕಡೆ ಬಿಜೆಪಿ ಗೆಲುವಿಗೆ ಕಾಂಗ್ರೆಸ್ ಪಕ್ಷದ ಹೊಣೆಗೇಡಿತನವೂ ಕಾರಣವಾಗಿದೆ. ಪುದುಚೇರಿಯಲ್ಲಿ ಬಿಜೆಪಿ ಗೆಲುವು ಮಹಾನ್ ಸಾಧನೆಯೇನಲ್ಲ. ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸಾಕಷ್ಟು ಶ್ರಮ ಹಾಕಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಎಲ್ಲ ಬಗೆಯ ಪಟ್ಟುಗಳನ್ನು ಬಳಸಿ ವಿಫಲರಾಗಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಕೆಲ ಕಮ್ಯುನಿಸ್ಟ್ ನಾಯಕರನ್ನು ಬಳಸಿಕೊಂಡು ಬಿಜೆಪಿ ನುಸುಳಲು ಎಷ್ಟೇ ಯತ್ನಿಸಿದರೂ ಮತದಾರ ಒಳಿಯಲಿಲ್ಲ. ದೇಶದ ಹಲವೆಡೆ ಕಾಂಗ್ರೆಸ್ ಹೊರತು ಪಡಿಸಿದ ಮೂರನೇ ಶಕ್ತಿ ಪ್ರಬಲವಾಗಿದ್ದಲ್ಲಿ ಬಿಜೆಪಿ ಆಟ ನಡೆದಿಲ್ಲ. ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಸಮರ್ಥ ಪರ್ಯಾಯ ಪಕ್ಷವಾಗಿ ಕಾಂಗ್ರೆಸ್ ನೆಲೆ ಉಳಿಸಿಕೊಂಡಿದೆ. ಹಾಗಾಗಿ ಬಿಜೆಪಿಗೆ ನುಸುಳಲು ಜಾಗವೇ ಸಿಗಲಿಲ್ಲ. ಕೇರಳದ ಕಾಂಗ್ರೆಸ್ ನಾಯಕರು ಕಮ್ಯುನಿಸ್ಟ್ ನಾಯಕರಿಗಿಂತಲೂ ಸರಳ. ಅಭಿವೃದ್ಧಿ ಪರ ಆಲೋಚನೆ ಹೊಂದಿದ್ದಾರೆ. ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಕಾಂಗ್ರೆಸ್ ಅಥವಾ ಕಮ್ಯುನಿಸ್ಟ್ ಸಂಘಟನೆಯನ್ನು ದುರ್ಬಲಗೊಳಿಸಿಯೇ ಬರಬೇಕು. ಸದ್ಯದ ಮಟ್ಟಿಗೆ ಅದು ಅಸಾಧ್ಯವಾಗಿದೆ.

ತಮಿಳುನಾಡು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಕಳೆದ ಹತ್ತು ವರ್ಷಗಳಿಂದ ಹರ ಸಾಹಸ ಪಡುತ್ತಿದೆ. ತಮಿಳುನಾಡಿನ ತಮಿಳಿಸೈ ಸೌಂದರರಾಜನ್ ಮುಂತಾದವರಿಗೆ ರಾಜ್ಯಪಾಲ ಹುದ್ದೆ ನೀಡಿದರೂ ಅಲ್ಲಿಯ ಮತದಾರರು ಬಿಜೆಪಿಯತ್ತ ದೃಷ್ಟಿ ಹಾಯಿಸಲಿಲ್ಲ. ಕರ್ನಾಟಕ ಕೇಡರಿನ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ತಮಿಳುನಾಡು ಮೂಲದವರು. ಬಿ.ಎಲ್. ಸಂತೋಷ್ ಅವರು ಅಣ್ಣಾಮಲೈ ಅವರನ್ನು ತಮಿಳುನಾಡಿನಲ್ಲಿ ಪ್ರತಿಷ್ಠಾಪನೆ ಮಾಡಲು ಸಾಕಷ್ಟು ಶ್ರಮಿಸಿದರು. ಬಿಜೆಪಿಯ ಉಗ್ರ ಹಿಂದುತ್ವವೇ ತಮಿಳು ಅಸ್ಮಿತೆಗೆ ಇಷ್ಟವಾಗಲಿಲ್ಲ. ಎಂ.ಜಿ. ರಾಮಚಂದ್ರನ್ ಮತ್ತು ಜಯಲಲಿತಾ ಅವರಿಂದ ಶಕ್ತಿಶಾಲಿಯಾಗಿದ್ದ ಎಡಿಎಂಕೆ ಪಕ್ಷ ಪಳನಿಸ್ವಾಮಿ ಕೈಯಲ್ಲಿ ದುರ್ಬಲವಾಗಿದೆ. ಆ ದುರ್ಬಲ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ತಮಿಳು ಅಸ್ಮಿತೆ ಮೇಲೆ ಸವಾರಿ ಮಾಡಲು ಹೊಂಚು ಹಾಕಿದ್ದ ಬಿಜೆಪಿಗೆ ಮನ್ನಣೆ ನೀಡದೆ ತಮಿಳುನಾಡು ಮತದಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಡಿಎಂಕೆ ಪಕ್ಷಕ್ಕೆ ಪರ್ಯಾವಾಗಿ ಇನ್ನೊಂದು ನೆಲಮೂಲದ ಪಕ್ಷವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಡ್ಡ ಹಾದಿಯ ನುಸುಳುವಿಕೆಗೆ ತಮಿಳುನಾಡು ಮತದಾರ ಬಿಜೆಪಿಗೆ ಸದ್ಯಕ್ಕಂತೂ ಅವಕಾಶ ನೀಡಿಲ್ಲ. ಎರಡೂ ದ್ರಾವಿಡ ಪಕ್ಷಗಳಿಂದ ರೋಸಿ ಹೋಗಿರುವ ತಮಿಳುನಾಡು ಮತದಾರ ಬಿಜೆಪಿ ಪರ್ಯಾಯ ಪಕ್ಷ ಎಂದು ಪರಿಗಣಿಸಿಯೇ ಇಲ್ಲ. ಕೇವಲ ಎರಡು ವರ್ಷಗಳ ಹಿಂದೆ ಹುಟ್ಟಿಕೊಂಡ ತಮಿಳು ನಾಯಕ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಿದೆ. ನಟ ವಿಜಯ್ ಅವರಿಗೆ ಅನುಭವ ಇಲ್ಲ ಎಂದು ವಾದಿಸುವವರು ಇದ್ದಾರೆ. ಆತ ಸಿನೆಮಾ ಶೈಲಿಯಲ್ಲಿಯೇ ರಾಜಕೀಯ ಪ್ರವೇಶ ಮಾಡಿರಬಹುದು. ಆದರೆ ನಟ ವಿಜಯ್ ಅವರಿಗೆ ತಮಿಳುನಾಡು ಅಸ್ಮಿತೆಗೆ ಧಕ್ಕೆ ತರಬಾರದು ಎಂಬ ಸಾಮಾನ್ಯ ತಿಳುವಳಿಕೆ ಇದೆ. ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವ ವಹಿಸಿಕೊಂಡಿದ್ದ ಅಣ್ಣಾಮಲೈ ಹೆಚ್ಚು ಓದಿದವರು. ಅಷ್ಟು ಮಾತ್ರವಲ್ಲ ತಮಿಳುನಾಡು ರಾಜ್ಯದ ಸಮಸ್ತವನ್ನು ಅರಿತಿದ್ದರು. ಆದರೆ ಅವರು ಬಿಜೆಪಿ ಸಿದ್ಧಾಂತಕ್ಕೆ ಕಟ್ಟು ಬಿದ್ದು ತಮಿಳು ಅಸ್ಮಿತೆಗೆ ವಿರುದ್ಧವಾಗಿ ರಾಜಕೀಯ ಪಯಣ ಆರಂಭಿಸಿದ್ದರು. ಬಿಜೆಪಿ ಪ್ರತಿಪಾದಿಸುವ ಉಗ್ರ ಹಿಂದುತ್ವ ತಮಿಳುನಾಡು ರಾಜ್ಯದ ಪೆರಿಯಾರ್ ಅವರ ತತ್ವಗಳಿಗೆ ವಿರುದ್ಧವಾದುದು ಎಂಬುದು ಅಣ್ಣಾಮಲೈ ಅವರಿಗೆ ಅರ್ಥವಾಗಲಿಲ್ಲ. ಆದರೆ ನಟ ವಿಜಯ್ ತನ್ನ ಸೈದ್ದಾಂತಿಕ ನಿಲುವನ್ನು ಅತ್ಯಂತ ಸರಳ ರೀತಿಯಲ್ಲಿ ನಿರ್ವಚಿಸಿಕೊಂಡಿದ್ದಾರೆ. ಪೆರಿಯಾರ್, ಅಂಬೇಡ್ಕರ್, ಕಾಮರಾಜ್ ಅವರ ಭಾವಚಿತ್ರಗಳನ್ನು ಬಳಸಿಕೊಳ್ಳುವ ಮೂಲಕ ತಾನು ತಮಿಳು ಅಸ್ಮಿತೆಗೆ ವಿರುದ್ಧವಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದಾರೆ. ಅಷ್ಟುಮಾತ್ರವಲ್ಲ ಡಿಎಂಕೆ ಮತ್ತು ಎಡಿಎಂಕೆ ಪಕ್ಷಗಳ ಕುಟುಂಬ ರಾಜಕಾರಣ, ಭ್ರಷ್ಟಾಚಾರವನ್ನು ಶತ್ರುಗಳು ಎಂದು ಪರಿಗಣಿಸಿರುವ ವಿಜಯ್ ಬಿಜೆಪಿ ತನ್ನ ಸೈದ್ಧಾಂತಿಕ ವಿರೋಧಿ ಎಂದು ಹೇಳಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ 108 ವಿಧಾನ ಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ವಿಜಯ್ ಸರಳ ಬಹುಮತಕ್ಕೆ ಪರದಾಡುವ ಸ್ಥಿತಿಯಲ್ಲಿ ಇದ್ದಾರೆ. ವಿಜಯ್ ಅವರಿಗೆ ತಮಿಳು ಅಸ್ಮಿತೆ ಬಗ್ಗೆ ನೈಜ ಗೌರವ ಪ್ರೀತಿ ಇರದೇ ಹೋಗಿದ್ದರೆ ಆತ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಬಿಜೆಪಿ ನೆರವು ಕೇಳಬಹುದಿತ್ತು. ಮೋದಿ-ಅಮಿತ್ ಶಾ ಮನಸ್ಸು ಮಾಡಿದರೆ ಮೂರನೇ ಶಕ್ತಿಯಾಗಿ ಹೊರಹೊಮ್ಮಿರುವ ಎಡಿಎಂಕೆ ಪಕ್ಷದ ಬೆಂಬಲ ಕೊಡಿಸಿಕೊಡುತ್ತಿದ್ದರು. ಟಿವಿಕೆ ಪಕ್ಷಕ್ಕೆ ಬಿಜೆಪಿ ಮತ್ತು ಎಡಿಎಂಕೆ ಪಕ್ಷಗಳ ಬೆಂಬಲ ದೊರಕಿದರೆ ಸ್ಥಿರ ಸರಕಾರ ನೀಡಲು ಸಾಧ್ಯವಾಗುತ್ತಿತ್ತು. ಆದರೆ ನಟ ವಿಜಯ್ ಸವಾಲಿನ ದಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಇನ್ನಿತರ ಸಣ್ಣ ಪುಟ್ಟ ಪಕ್ಷಗಳ ಬೆಂಬಲ ಪಡೆಯುವ ಮೂಲಕ ಬಿಜೆಪಿಗೆ ತಮಿಳುನಾಡು ಪ್ರವೇಶ ಮಾಡದಂತೆ ನಿಗಾ ವಹಿಸಿದ್ದಾರೆ. ನಟ ವಿಜಯ್ ಬಿಜೆಪಿಯ ಅಣ್ಣಾಮಲೈ ಅವರಿಗಿಂತ ಹೆಚ್ಚು ಪ್ರಬುದ್ಧ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬಿಜೆಪಿಯ ತತ್ವ ಸಿದ್ಧಾಂತ ತಮಿಳುನಾಡಿನ ಒಟ್ಟು ಸಂಸ್ಕೃತಿಗೆ ಹೇಳಿ ಮಾಡಿಸಿದ್ದಲ್ಲ ಎಂಬ ಪ್ರಜ್ಞೆ ನಟ ವಿಜಯ್ ಅವರಿಗೆ ಇದೆ. ಆ ಕಾರಣಕ್ಕೆ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ರಾಜಕಾರಣ ಆಯ್ದುಕೊಂಡಿದ್ದಾರೆ. ಆ ನಿಲುವು ಒಬ್ಬ ಸಾಹಸಿ ಮತ್ತು ದ್ರಾವಿಡ ಪ್ರಜ್ಞೆ ಹೊಂದಿರುವ ಜನನಾಯಕ ಮಾತ್ರ ತಳೆಯಬಲ್ಲ. ನಟ ವಿಜಯ್ ಅವರ ಬಗ್ಗೆ ಈಗಲೇ ಷರಾ ಬರೆಯಯುವುದು ಸರಿಯಲ್ಲ. ಎಂ. ಕರುಣಾನಿಧಿ, ಎಂ.ಜಿ. ರಾಮಚಂದ್ರನ್, ಜಯಲಲಿತಾ ಎಲ್ಲರೂ ಸಿನೆಮಾ ಹಿನ್ನೆಲೆಯಿಂದ ಬಂದವರು. ಕಳೆದ ಐವತ್ತು ವರ್ಷಗಳಿಂದ ತಮಿಳುನಾಡು ರಾಜ್ಯದಲ್ಲಿ ಆಡಳಿತ ನಡೆಸಿರುವ ಸಿನೆಮಾ ಮಂದಿ ಅಭಿಮಾನಪಡುವಷ್ಟು ಅಭಿವೃದ್ಧಿ ಪಡಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದಾಗಲೂ ತಮಿಳು ಅಸ್ಮಿತೆ ಉಳಿಸಿಕೊಳ್ಳಲು ಗಂಭೀರ ಪ್ರಯತ್ನ ಮಾಡಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುವ ಎಲ್ಲ ಸರಕಾರಗಳಿಂದ ಹೆಚ್ಚು ಸವಲತ್ತುಗಳನ್ನು ರಾಜ್ಯಕ್ಕೆ ತಂದಿದ್ದಾರೆ. ತಮಿಳು ಅಸ್ಮಿತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಟಿವಿಕೆ ಪಕ್ಷದ ವಿಜಯ್ ಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆ.

ಕರ್ನಾಟಕದ ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಂಚಮಸಾಲಿ ಮತದಾರರು ಹೆಚ್ಚಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಿ ಕೊಂಡು ಬರುತ್ತೇನೆ ಎಂದು ಪಣ ತೊಟ್ಟಿದ್ದ ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೀನಾಯವಾಗಿ ಮುಗ್ಗರಿಸಿದ್ದಾರೆ. ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೈಲಾಗದ ನಾಯಕ ಎಂಬುದು ಸಾಬೀತಾಗಿದೆ. ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಾಗದ ಕರ್ನಾಟಕದ ಬಿಜೆಪಿ ನಾಯಕರು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಪಕ್ಷ ಜಯಭೇರಿ ಬಾರಿಸಿರುವುದಕ್ಕೆ ಸಂಭ್ರಮ ಪಡುತ್ತಿದ್ದಾರೆ.

ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡರೇ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಾಲ್ಕು ರಾಜ್ಯಗಳಲ್ಲಿ ಮೇಲೆದ್ದಿಲ್ಲ ಎಂಬುದರ ಕುರಿತು ಚಿಂತಿತರಾಗಿಲ್ಲ. ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು ಆಡಳಿತ ವಿರೋಧಿ ಅಲೆಯಿಂದ. ಪಿಣರಾಯಿ ವಿಜಯನ್ ಸರಕಾರ ಒಂದು ವ್ಯವಸ್ಥೆಯಾಗಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿತ್ತು. ಆದರೆ ಕೇರಳದ ಅಭಿವೃದ್ಧಿಯನ್ನು ಕಡೆಗಣಿಸಿರಲಿಲ್ಲ. ಹತ್ತು ವರ್ಷಗಳ ಆಡಳಿತ ವಿರೋಧಿ ಅಲೆಗೆ ಸೋಲು ಅನುಭವಿಸಿದೆ. ಆ ಗೆಲುವಿನಲ್ಲಿ ಕೇರಳ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರ ಶ್ರಮ ಇದೆ ಹೊರತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಕೊಡುಗೆ ಏನಿದೆ?

ಐದು ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ಎಚ್ಚರಿಕೆ ಗಂಟೆ ಬಾರಿಸಿದಂತಿದೆ. ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿ ನಡುವೆ ಸಮನ್ವಯತೆ ಇಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕೈಗೊಂಡಿಲ್ಲ. ಬೆಂಗಳೂರು ನಗರ, ಬ್ರಾಂಡ್ ಬೆಂಗಳೂರು ಇಮೇಜ್ ಕಳೆದುಕೊಳ್ಳುತ್ತಿದೆ. ಭ್ರಷ್ಟಾಚಾರ ಮಿತಿಮೀರಿದೆ. ಆಡಳಿತ ವಿರೋಧಿ ಅಲೆ ಎಷ್ಟಿದೆಯೆಂದರೆ, ಬಿಜೆಪಿ ಪ್ರಯತ್ನ ಮಾಡದೆ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಬಿಜೆಪಿ ಒಳಜಗಳ ತಾರಕಕ್ಕೆ ಏರಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಉಪಚುನಾವಣೆಯಲ್ಲಿ ಲಾಭ ತಂದುಕೊಟ್ಟಿದೆ. ಬಿ.ಎಸ್. ಯಡಿಯೂರಪ್ಪ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಗೆಲುವು ಸಾಧಿಸುತ್ತಿದ್ದರು. ಮುಸ್ಲಿಮ್ ಮತದಾರರು ಕಾಂಗ್ರೆಸ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಬಂಡೆದ್ದಿದ್ದರು. ಸಂದರ್ಭ, ಸನ್ನಿವೇಶದ ಲಾಭ ಪಡೆದುಕೊಳ್ಳಲಾಗದಷ್ಟು ಬಿಜೆಪಿಯಲ್ಲಿ ಕಿತ್ತಾಟಗಳಿವೆ. ಯಡಿಯೂರಪ್ಪ ಹೊರತು ಪಡಿಸಿದರೆ ಬಿಜೆಪಿಗೆ ಮತ ತಂದು ಕೊಡುವ ನಾಯಕರೇ ಇಲ್ಲ. ಬಿಜೆಪಿ ಒಳಜಗಳಕ್ಕೆ ಪರಿಹಾರ ಕಂಡುಕೊಳ್ಳಲಾಗದಿದ್ದರೆ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರವೇ ಗತಿಯಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಎರಡು ವರ್ಷಗಳ ಕಾಲಾವಕಾಶ ಇದೆ. ಅಭಿವೃದ್ಧಿ ವೇಗ ಹೆಚ್ಚಿಸಿ, ನಾಯಕತ್ವದ ಕುರಿತ ಗೊಂದಲ ಬಗೆ ಹರಿಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲಿನಿಂದ ಪಾರಾಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಭುವಿಗೆ ಸೀಮಿತ ಅವಕಾಶಗಳಿವೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಮ್ಯುನಿಸ್ಟ್ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ಮಾಡದೆ ಹೋಗಿದ್ದರೆ ಇವತ್ತು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಕಂಟಕವಾಗಿ ಪರಿಣಮಿಸುತ್ತಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನತಾ ಪರಿವಾರದ ಜೆಡಿಎಸ್ ಪರ್ಯಾಯ ರಾಜಕೀಯ ಶಕ್ತಿಯಾಗಿತ್ತು. ಜೆಡಿಎಸ್ ಪಕ್ಷವನ್ನು ದಿನೇ ದಿನೇ ದುರ್ಬಲಗೊಳಿಸಿ ಆ ಪಕ್ಷ ಅನಿವಾರ್ಯ ವಾಗಿ ಬಿಜೆಪಿಯೊಂದಿಗೆ ಸಖ್ಯ ಬೆಳೆಸಲು ದಾರಿ ಮಾಡಿ ಕೊಟ್ಟಿದ್ದೇ ಕಾಂಗ್ರೆಸ್ ಮುಖಂಡರು. ಕರ್ನಾಟಕದಲ್ಲಿ ಬಿಜೆಪಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆದು ನಿಲ್ಲಲು ಜನತಾ ಪರಿವಾರದ ನಾಯಕರೇ ಕಾರಣ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಶತ್ರು ಮತ್ತು ಮಿತ್ರ ಪಕ್ಷಗಳ ಆಯ್ಕೆಯಲ್ಲಿ ಎಡವುತ್ತಲೇ ಬಂದಿದೆ. ಅದರ ಪರಿಣಾಮವಾಗಿ ಬಿಜೆಪಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಬೆಳೆಸಿ, ಬಳಸಿಕೊಂಡು ವ್ಯವಸ್ಥಿತವಾಗಿ ಅವುಗಳನ್ನು ಮುಗಿಸುತ್ತಾ ಬಂತು. ಈ ಚುನಾವಣಾ ಫಲಿತಾಂಶ ಮೋದಿ-ಅಮಿತ್ ಶಾ ಅವರಿಗೂ ಒಂದು ಪಾಠವಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ವಿಶೇಷವಾಗಿ ಕೇರಳ, ತಮಿಳುನಾಡುಗಳಲ್ಲಿ ಬಿಜೆಪಿಗೆ ಬಾಗಿಲು ಬಂದ್ ಆಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸಿದ ತಂತ್ರಗಾರಿಕೆಯನ್ನೇ ಮೋದಿ-ಅಮಿತ್ ಶಾ ಅಳವಡಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ದಕ್ಷಿಣ ಭಾರತದಲ್ಲಿ ಭವಿಷ್ಯ ಇಲ್ಲ ಎನ್ನುವುದು ಈ ಚುನಾವಣೆಯ ಫಲಿತಾಂಶದಿಂದ ನಿಚ್ಚಳ ವಾಗಿದೆ. ಮೋದಿ ಅಮಿತ್-ಶಾ ಕುತಂತ್ರ ಹೊರತು ಪಡಿಸಿದರೆ ದೇಶದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ. ಮೋದಿ-ಅಮಿತ್ ಶಾ ತಮಿಳನಾಡು ಮತದಾರರ ಕಣ್ಣಲ್ಲಿ ಈ ಹೊತ್ತಿಗೂ ವಿಲನ್ ಎಂಬುದು ಗಮನಾರ್ಹ ಸಂಗತಿ. ಸೀಮಿತ ಅವಕಾಶ ಬಳಸಿಕೊಂಡು ಮತದಾರರು ಪ್ರಬುದ್ಧತೆ ಮೆರೆದಿದ್ದಾರೆ.

Tags

Election Resultslessonsparties
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X