ಪ್ರವೇಶ ಪರೀಕ್ಷೆ-ಅಕ್ರಮಗಳ ಸರಮಾಲೆ

ಪ್ರವೇಶ ಪರೀಕ್ಷೆಗಳೆಂದರೆ ಬಹುದೊಡ್ಡ ಹಗರಣ ಎಂಬಂತಾಗಿದೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅಸ್ತಿತ್ವಕ್ಕೆ ಬಂದ ಎಲ್ಲ ಬಗೆಯ ಪ್ರವೇಶ ಪರೀಕ್ಷೆಗಳು ಪರಮ ಭ್ರಷ್ಟ ಎಂಬುದು ಮತ್ತೆ ಮತ್ತೆ ರುಜುವಾತುಪಡಿಸಿವೆ. ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಆ ಎಲ್ಲ ಸಂಸ್ಥೆಗಳು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದರೂ, ಅನಗತ್ಯ ಪರೀಕ್ಷೆಗಳು ಹೇರುವುದು ಒಳ್ಳೆಯದಲ್ಲ. ಅನಗತ್ಯ ಪ್ರವೇಶ ಪರೀಕ್ಷೆಗಳು ನಡೆಸುವುದೆಂದರೆ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಅಪಮಾನಿಸಿದಂತೆ.
ಹತ್ತನೇ ತರಗತಿಯಲ್ಲಿ ನೂರಕ್ಕೆ ನೂರು ಅಂಕ ಗಳಿಸುವ ವಿದ್ಯಾರ್ಥಿಗಳನ್ನು ನೋಡುತ್ತಿದ್ದೇವೆ. ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯೊಂದಿಗೆ ಉತ್ತಿರ್ಣರಾಗುವುದು ಮಹಾನ್ ಸಾಧನೆ ಎನಿಸಿಕೊಳ್ಳುತ್ತಿತ್ತು. ಪಿಯುಸಿ ವಿಜ್ಞಾನವನ್ನು ಎರಡನೇ ದರ್ಜೆಯಲ್ಲಿ ಉತ್ತಿರ್ಣವಾದವರು ಇಂಜಿನಿಯರಿಂಗ್-ಮೆಡಿಕಲ್ ಸೀಟುಗಳನ್ನು ಪಡೆದುಕೊಳ್ಳುತ್ತಿದ್ದರು. ಇದು ಒಂದಾನೊಂದು ಕಾಲದ ಮಾತು. ಆಗ ಯಾವ ತರಗತಿಗೂ ಪ್ರವೇಶ ಪಡೆಯಲು ‘ಪ್ರವೇಶ’ ಪರೀಕ್ಷೆಯನ್ನು ಎದುರಿಸುವ ಅನಿವಾರ್ಯತೆ ಇರಲಿಲ್ಲ. ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಪಡೆದವರಿಗೆ ಪದವಿ ಪೂರ್ವ ತರಗತಿಗಳಿಗೆ ಅನಾಯಾಸವಾಗಿ ಪ್ರವೇಶ ದೊರೆಯುತ್ತಿತ್ತು. ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದವರು ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ಎಲ್ಲ ಪದವಿ ತರಗತಿಗಳಿಗೆ ಯಾವುದೇ ಪ್ರವೇಶ ಪರೀಕ್ಷೆ ಎದುರಿಸದೆ ಸೇರಿಕೊಳ್ಳುತ್ತಿದ್ದರು.
ಇನ್ನು ಯಾವುದೇ ಮೂರು ಅಥವಾ ನಾಲ್ಕು ವರ್ಷದ ಪದವಿಯಲ್ಲಿ ಅತ್ಯುತ್ತಮ ಅಂಕ ಪಡೆದವರು ಅನಾಯಾಸವಾಗಿ ಸ್ನಾತಕೋತ್ತರ ತರಗತಿಗೆ ಪ್ರವೇಶ ಪಡೆದುಕೊಳ್ಳುತ್ತಿದ್ದರು. ಸ್ನಾತಕೋತ್ತರ ಪದವಿಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದವರನ್ನು ಮಾತ್ರ ಪಿಎಚ್.ಡಿ. ಅಧ್ಯಯನಕ್ಕೆ ಆಯ್ಕೆ ಮಾಡುತ್ತಿದ್ದರು. ಆಗ ಈ ಪ್ರವೇಶ ಪರೀಕ್ಷೆಗಳ ಹಾವಳಿ ಇರಲಿಲ್ಲ. ಹಾಗಾಗಿ ಪ್ರವೇಶ ಪರೀಕ್ಷೆಗಳ ಅಕ್ರಮಗಳು ಇರಲಿಲ್ಲ. ಎಸೆಸೆಲ್ಸಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಗಳು ಇರುತ್ತಿದ್ದರಿಂದ ಕಡಿಮೆ ಪ್ರಮಾಣದ ಅಕ್ರಮಗಳು ನಡೆಯುತ್ತಿದ್ದವು. ಅಕ್ರಮ ನಡೆಸುತ್ತಿದ್ದವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಿ ಡಿಬಾರ್ ಮಾಡುತ್ತಿದ್ದರು. ಹಾಗಾಗಿಯೇ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣ ಆಗುವುದು ಕಷ್ಟ ಎನಿಸುತ್ತಿತ್ತು. ಇನ್ನು ಕೇಂದ್ರೀಕೃತ ಮೌಲ್ಯ ಮಾಪನ ವ್ಯವಸ್ಥೆ ಇದ್ದಿದ್ದರಿಂದ ಅಕ್ರಮ ನಡೆಸುವುದು ಕಷ್ಟ ಸಾಧ್ಯವಾಗಿತ್ತು. ಪದವಿ ತರಗತಿಗಳ ಪರೀಕ್ಷೆ ಮತ್ತು ಮೌಲ್ಯ ಮಾಪನ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಡೆಯುತ್ತಿದ್ದುದರಿಂದ ಅಲ್ಲಿಯೂ ಅಕ್ರಮ ಅಸಾಧ್ಯವಾಗಿತ್ತು. ಇಷ್ಟಾಗಿಯೂ ಕೆಲವು ಪುಂಡರು ಅಕ್ರಮ ನಡೆಸುತ್ತಿದ್ದರು ಎಂಬ ಸುದ್ದಿಗಳು ಪ್ರಕಟವಾಗುತ್ತಿದ್ದವು. ಸ್ನಾತಕೋತ್ತರ ಪದವಿ ಪರೀಕ್ಷೆಗಳು ಆಯಾ ವಿಭಾಗದಲ್ಲೇ ನಡೆಯುತ್ತಿದ್ದವು. ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ತುಸು ಹಸ್ತಕ್ಷೇಪ ಮಾಡಲು ಅವಕಾಶ ಇತ್ತಾದರೂ ಆಕ್ಷೇಪಣೆ ಕೇಳಿ ಬಂದಾಗ ಮೂರನೇ ಮೌಲ್ಯಮಾಪನಕ್ಕೆ ಕಳಿಸಿಕೊಡುತ್ತಿದ್ದರು. ಎಂ.ಫಿಲ್. ಮತ್ತು ಪಿಎಚ್.ಡಿ. ಪ್ರವೇಶಕ್ಕೆ ಸ್ನಾತಕೋತ್ತರ ಪದವಿ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡುತ್ತಿದ್ದರು. ಆಗಲೂ ಸ್ವಜನ ಪಕ್ಷಪಾತ, ಸಣ್ಣ ಪುಟ್ಟ ಅಕ್ರಮಗಳು ನಡೆಯುತ್ತಿದ್ದವು. ಅಕ್ರಮ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತಿತ್ತು.
ಕರ್ನಾಟಕದಲ್ಲಿ ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ )ನಡೆಸಿ, ಪಿಯುಸಿ ಮತ್ತು ಸಿಇಟಿ ಅಂಕಗಳ ಸರಾಸರಿ ಆಧಾರದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಮತ್ತು ಇನ್ನಿತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಪದ್ಧತಿ ಜಾರಿಗೆ ತಂದರು. ಆರಂಭದಲ್ಲಿ ಸಿಇಟಿ ಕೋಶವೇ ಪ್ರವೇಶ ಪರೀಕ್ಷೆಗಳನ್ನು ನಡೆಸಿ ಮೆರಿಟ್ ಮತ್ತು ಮೀಸಲಾತಿ ಆಧರಿಸಿ ಸೀಟುಗಳನ್ನು ಹಂಚಿಕೆ ಮಾಡುತ್ತಿತ್ತು. ಕರ್ನಾಟಕ ಸರಕಾರ ಆರಂಭಿಸಿದ ಸಿಇಟಿ ಪರೀಕ್ಷೆ ಅತ್ಯಂತ ಕ್ರಾಂತಿಕಾರಿ ಮತ್ತು ಮಾದರಿ ಪರೀಕ್ಷೆ ಎಂದೇ ಪ್ರಶಂಸೆಗೆ ಒಳಗಾಯಿತು. ಹಾಗೆ ನೋಡಿದರೆ ಸಿಇಟಿ ಪರೀಕ್ಷೆಯ ಅಗತ್ಯವೇ ಇರಲಿಲ್ಲ. ಪದವಿಪೂರ್ವ ಬೋರ್ಡ್ ನಡೆಸುವ ಪರೀಕ್ಷೆ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಅನುಮಾನದಿಂದ ನೋಡುವ ಕ್ರಮ ಇದಾಗಿತ್ತು. ಪದವಿಪೂರ್ವ ಪರೀಕ್ಷೆ ವಿದ್ಯಾರ್ಥಿಯ ಪ್ರತಿಭೆಯನ್ನು ಅಳೆಯುವ ಅತ್ಯಂತ ವೈಜ್ಞಾನಿಕ ವಿಧಾನ ಅನುಸರಿಸುತ್ತಿತ್ತು. ಸಿಇಟಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಗೆಲ್ಲಬೇಕಿತ್ತು. ಎಲ್ಲಕ್ಕೂ ಮಿಗಿಲಾಗಿ ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಲು ಪ್ರತಿಭೆಗಿಂತ ಟ್ರಿಕ್ ಮುಖ್ಯವಾಗುತಿತ್ತು. ಆ ಟ್ರಿಕ್ ಹೇಳಿಕೊಡುವ ಕೋಚಿಂಗ್ ಸೆಂಟರ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು.
ಕರ್ನಾಟಕ ಸರಕಾರ ಆರಂಭಿಸಿದ ಸಿಇಟಿ ಪರೀಕ್ಷೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಹುದೊಡ್ಡ ಸವಾಲು ಒಡ್ಡಿತ್ತು. ಹಳ್ಳಿಗಾಡಿನಲ್ಲಿ ಕೋಚಿಂಗ್ ಸೆಂಟರ್‌ಗಳು ಇರಲಿಲ್ಲ. ನಗರದ ವಿದ್ಯಾರ್ಥಿಗಳು, ಅದರಲ್ಲೂ ಬಾಯಿಪಾಠ ಮಾಡುವ ವಿದ್ಯಾರ್ಥಿಗಳು ಸಿಇಟಿಯಲ್ಲಿ ಹೆಚ್ಚು ಅಂಕ ಗಳಿಸಿ ಗೆಲುವು ತಮ್ಮದಾಗಿಸಿಕೊಳ್ಳುತ್ತಿದ್ದರು. ಖುಷಿಯ ಸಂಗತಿಯೆಂದರೆ ಆಗ ಅಕ್ರಮಗಳು ನಡೆಯುತ್ತಿರಲಿಲ್ಲ. ಹಾಗಾಗಿ ಎಲ್ಲರೂ ಮರು ಪ್ರಶ್ನೆ ಮಾಡದೆ ಒಪ್ಪಿಕೊಂಡಿದ್ದರು.
ಆಗಲೂ ಸಿಇಟಿ ಪರೀಕ್ಷೆ ನಡೆಸದೆ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಇನ್ನಿತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡಲು ಹಲವು ದಾರಿಗಳಿದ್ದವು. ಪಿಯುಸಿ ವಿಜ್ಞಾನದಲ್ಲಿ ಅದರಲ್ಲೂ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸಂಬಂಧಿತ ವಿಷಯಗಳ ಅಂಕಗಳ ಆಧಾರದಲ್ಲಿ ಮೆರಿಟ್ ನಿರ್ಧರಿಸಿ ಸೀಟು ಹಂಚಿಕೆ ಮಾಡಬಹುದಾಗಿತ್ತು. ಎಸೆಸೆಲ್ಸಿ ಮತ್ತು ಪಿಯುಸಿ ಅಂಕಗಳ ಸರಾಸರಿ ಆಧರಿಸಿ ಮೆಡಿಕಲ್, ಇಂಜಿನಿಯರಿಂಗ್ ಅಥವಾ ಇನ್ನಿತರ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ನೀಡಬಹುದಾಗಿತ್ತು. ನಿಜವಾದ ಪ್ರತಿಭಾವಂತರು ಎಸೆಸೆಲ್ಸಿ, ಪಿಯುಸಿ ಅಥವಾ ಸಿಇಟಿ -ಯಾವುದೇ ಪರೀಕ್ಷೆ ಇರಲಿ ಶ್ರದ್ಧೆಯಿಂದ ಓದಿ ಮೆರಿಟ್‌ನಲ್ಲಿ ಉತ್ತಿರ್ಣ ಆಗುತ್ತಾರೆ. ಆದರೆ ಹೆಚ್ಚುವರಿ ಪ್ರವೇಶ ಪರೀಕ್ಷೆಗಳ ಮೂಲಕ ಪ್ರತಿಭಾವಂತರಲ್ಲದ, ಬಾಯಿಪಾಠ ಮಾಡುವ ಗಿಳಿಗಳು ಸೀಟು ಗಿಟ್ಟಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಯಿತು.
ಸಿಇಟಿ ಸೆಲ್ ನಂತರದ ದಿನಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವಾಗಿ ಬದಲಾಯಿತು. ಇಂಜಿನಿಯರಿಂಗ್, ಮೆಡಿಕಲ್ ಸೀಟುಗಳ ಬ್ಲಾಕಿಂಗ್ ಹಗರಣ ಬಯಲಾಯಿತು. ಒಎಂಆರ್ ಶೀಟುಗಳ ಮೂಲಕ ನಡೆಸುವ ಸಿಇಟಿ ಪರೀಕ್ಷೆ ಟ್ಯಾಂಪರಿಂಗ್‌ಗೆ ಜನಪ್ರಿಯವಾಯಿತು. ಕಷ್ಟ ಪಟ್ಟು ಪರೀಕ್ಷೆ ಬರೆದವರು ಕಡಿಮೆ ಅಂಕ ಗಳಿಸತೊಡಗಿದರು. ಒಎಂಆರ್ ಸೀಟ್ ಟ್ಯಾಂಪರ್ ಮಾಡಿದವರು ಅನಾಯಾಸವಾಗಿ ಸಿಇಟಿಯಲ್ಲಿ ಹೆಚ್ಚು ಅಂಕ ಗಳಿಸಿ ಮೆಡಿಕಲ್ ಸೀಟು ಪಡೆದುಕೊಳ್ಳಬೇಕು ಎಂಬ ಕನಸು ಸಾಕಾರ ಮಾಡಿಕೊಂಡರು. ಕ್ರಮೇಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭ್ರಷ್ಟ ಅಧಿಕಾರಿಗಳಿಗೆ ನಿರಂತರ ಆದಾಯ ತಂದು ಕೊಡುವ ಕಲ್ಪವೃಕ್ಷ ಕಾಮಧೇನುವಾಯಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಹಲವು ಬಾರಿ ಹಗರಣಗಳು ಬೆಳಕಿಗೆ ಬಂದರೂ ಯಾರೊಬ್ಬರ ವಿರುದ್ಧವೂ ಕ್ರಮ ಜರುಗಿಸಲಿಲ್ಲ. ಕ್ರಾಂತಿಕಾರಿ ವ್ಯವಸ್ಥೆ ಭ್ರಷ್ಟಾಚಾರವನ್ನು ಅಧಿಕೃತಗೊಳಿಸಿತು. ಒಎಂಆರ್ ಸೀಟ್ ಪ್ರಶ್ನೆ ಪತ್ರಿಕೆಯನ್ನು ಅತ್ಯಂತ ಕಠಿಣವಾಗಿ ಸಿದ್ಧಪಡಿಸಿ ಬೇಡಿಕೆ ಹೆಚ್ಚಿಸಿಕೊಂಡರು. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಅದರ ಬದಲಿಗೆ ಒಎಂಆರ್ ಶೀಟ್ ಟ್ಯಾಂಪರ್ ಮಾಡುವುದು ಸುಲಭದ ಮಾರ್ಗವಾಯಿತು. ಸಿಇಟಿ ಪರೀಕ್ಷೆ, ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ನಡೆಸುವ ಪ್ರವೇಶ ಪರೀಕ್ಷೆ ಮತ್ತು ಇನ್ನಿತರ ನೇಮಕಾತಿಗೆ ನಡೆಸುವ ಪರೀಕ್ಷೆಗಳು ಅಕ್ರಮದ ಗೂಡಾದವು. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬ ಭೇದವಿಲ್ಲ. ಯಾವ ಸರಕಾರ ಬಂದರೂ ಹಗರಣಗಳು ನಡೆಯುತ್ತಲೇ ಇರುತ್ತವೆ. ಬಯಲಿಗೆ ಬಂದಾಗ ನಾಲ್ಕು ದಿನ ಸುದ್ದಿ ಮಾಡಿ ಮರೆಯಾಗುತ್ತವೆ. ತಪ್ಪು ಮಾಡುವವರು ಈಗ ವೃತ್ತಿಪರರಾಗಿದ್ದಾರೆ. ಕಳ್ಳತನ ಬಯಲಿಗೆ ಬಾರದಂತೆ ನಿಗಾ ವಹಿಸುತ್ತಾರೆ. ಒಂದು ವೇಳೆ ಬಯಲಿಗೆ ಬಂದರೂ ಯಾರ ಮೇಲೂ ಕ್ರಮವಾಗದಂತೆ ಮ್ಯಾನೇಜ್ ಮಾಡುತ್ತಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರಿನಲ್ಲಿ ಇರುವುದರಿಂದ ಅದರ ಹಗರಣಗಳು, ವಹಿವಾಟುಗಳು ನಮಗೆ ಗೊತ್ತಾಗುತ್ತವೆ. ಆದರೆ ರಾಷ್ಟ್ರೀಯ ಮಟ್ಟದ ಅರ್ಹತಾ ಪ್ರವೇಶ ಪರೀಕ್ಷೆಗಳು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಾರೆ ಎಂದೇ ನಾವು ನಂಬಿರುತ್ತೇವೆ. ದೂರದ ಬೆಟ್ಟ ನುಣ್ಣಗೆ ಎಂಬ ಮಾತಿನಂತೆ ಅಕ್ಷರಶಃ ಕಣ್ಣು ಮುಚ್ಚಿ ನಂಬಿರುತ್ತೇವೆ. ಅದರಲ್ಲೂ ಪ್ರಧಾನ ಸೇವಕ ಮೋದಿಯವರು ‘ಕಾವಲುಗಾರ’ನಾಗಿರುವಾಗ ಅಕ್ರಮ ನಡೆಯಲು ಸಾಧ್ಯ ಎಂದು ಊಹೆ ಮಾಡಲು ಬಿಡುವುದಿಲ್ಲ.
ಕಟು ಸತ್ಯವೆಂದರೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್), ಜಾಯಿಂಟ್ ಎಂಟ್ರನ್ಸ್ ಎಕ್ಸಾಮ್ -ಜಂಟಿ ಪ್ರವೇಶ ಪರೀಕ್ಷೆ (ಜೆಇಇ), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಅಸ್ತಿತ್ವಕ್ಕೆ ಬಂದಾಗಿನಿಂದ ಸಣ್ಣ ಪುಟ್ಟ ಹಗರಣಗಳು ನಡೆಯುತ್ತಲೇ ಇವೆ. ದೊಡ್ಡ ಮಟ್ಟದ ಸುದ್ದಿಯಾದಾಗಲೇ ಅದೂ ಭ್ರಷ್ಟ ಸಂಸ್ಥೆ ಎಂದು ದೂರದ ನಾವು ನಂಬುತ್ತೇವೆ. ದಿಲ್ಲಿ ಸುತ್ತಮುತ್ತಲಿನ ಅತಿ ದಡ್ಡರು, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಪಾಸ್ ಆಗಿರುತ್ತಾರೆ. ಆದರೆ ಕರ್ನಾಟಕದ ಪ್ರತಿಭಾವಂತರು ಅದನ್ನು ಕ್ಲಿಯರ್ ಮಾಡಲು ಎರಡು ಮೂರು ಬಾರಿ ಪ್ರಯತ್ನ ಮಾಡಿ ಯಶಸ್ಸು ಪಡೆದಿರುತ್ತಾರೆ. ಕೆಲವರಿಗಂತೂ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಕ್ಲಿಯರ್ ಮಾಡುವುದು ಗಗನ ಕುಸುಮವಾಗಿದೆ.
ದಿಲ್ಲಿ ಸುತ್ತಮುತ್ತಲಿನ ರಾಜ್ಯಗಳ ಜನತೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಲ್ಲಿನ ಭ್ರಷ್ಟ ವ್ಯವಸ್ಥೆ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಅದನ್ನು ಸರಳವಾಗಿ ಆಪರೇಟ್ ಮಾಡುತ್ತಾರೆ. ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ನಡೆಸುವ ಬಹುತೇಕ ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಲೇ ಇರುತ್ತವೆ. ಆದರೆ ಕೆಲವೊಮ್ಮೆ ಬೆಳಕಿಗೆ ಬರುತ್ತವೆ. ಈಗ ಮೆಡಿಕಲ್ ಸೀಟು ಪಡೆಯಲು ನಡೆದಿರುವ ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದು ಬಿಜೆಪಿಯ ಕಾರ್ಯಕರ್ತರೇ ಸಿಕ್ಕಿ ಬಿದ್ದಿದ್ದಾರೆ. ಮೋದಿ, ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರಿಗೆ ಎಲ್ಲವೂ ಗೊತ್ತಿರುತ್ತದೆ. ಆದರೂ ಕಳ್ಳತನ ಬಯಲಿಗೆ ಬಾರಲಾರದು.
ಪ್ರವೇಶ ಪರೀಕ್ಷೆಗಳಲ್ಲಿ ಒಎಂಆರ್ ಶೀಟು ಇರುವವರೆಗೂ ಅಕ್ರಮಗಳು ನಡೆಯುತ್ತಲೇ ಇರುತ್ತವೆ. ಒಎಂಆರ್ ಶೀಟ್ ಟ್ಯಾಂಪರ್ ಮಾಡುವುದನ್ನು ಎಲ್ಲರೂ ಕಲಿತುಕೊಂಡಿದ್ದಾರೆ. ಒಮ್ಮೆ ಒಂದು ಪರೀಕ್ಷಾ ಪದ್ಧತಿಯಲ್ಲಿ ಲೋಪಗಳು ಕಂಡು ಬಂದರೆ ಅದನ್ನು ಅನಿವಾರ್ಯವಾಗಿ ಬದಲಾಯಿಸಿ ಉತ್ತಮ ವ್ಯವಸ್ಥೆ ರೂಪಿಸಬೇಕು. ಆ ವ್ಯವಸ್ಥೆಯಲ್ಲಿ ಕಳ್ಳತನ ಮಾಡುವುದು ಸರಳ ಎಂಬ ಸತ್ಯ ಗೊತ್ತಾದ ಮೇಲೂ ಅದೇ ವ್ಯವಸ್ಥೆ ಮುಂದುವರಿಸಿದರೆ ಸರಕಾರಕ್ಕೆ ಅಕ್ರಮಗಳ ಬಗ್ಗೆ ತಕರಾರಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆರಂಭದಲ್ಲಿ ಎಲ್ಲ ವ್ಯವಸ್ಥೆಯೂ ಕ್ರಾಂತಿಕಾರಿ ಎನಿಸಿಕೊಳ್ಳುತ್ತದೆ. ಒಂದಷ್ಟು ವರ್ಷ ಕಳೆದ ಮೇಲೆ ಕಳ್ಳರು ಅಡ್ಡ ಹಾದಿ ಕಂಡುಕೊಳ್ಳುತ್ತಾರೆ. ಹಲವು ಬಾರಿ ಕಳ್ಳತನ ನಡೆದ ಮೇಲೂ ಅದೇ ವ್ಯವಸ್ಥೆಯನ್ನು ಮುಂದುವರಿಸಬಾರದು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಳ್ಳತನದ ವ್ಯವಸ್ಥೆಗೆ ಕಡಿವಾಣ ಹಾಕಲು ಬೇರೆ ಉತ್ತಮ ವ್ಯವಸ್ಥೆ ರೂಪಿಸಬೇಕು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜಂಟಿ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ. ಆ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು ಐಐಟಿ, ಐಐಐಟಿ, ಎನ್‌ಐಟಿಯಂಥ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಓದುವ ಅವಕಾಶ ಪಡೆದುಕೊಳ್ಳುತ್ತಾರೆ. ಕೇಂದ್ರ ಸರಕಾರದ ವ್ಯಾಪ್ತಿಯ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಮಾತ್ರ ನೀಟ್ ಪ್ರವೇಶ ಪರೀಕ್ಷೆ ನಡೆಸಬೇಕಿತ್ತು. ‘ಪ್ರಧಾನ ಸೇವಕ’ ನರೇಂದ್ರ ಮೋದಿಯವರು ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿರುವ ಮೆಡಿಕಲ್ ಕಾಲೇಜುಗಳಲ್ಲಿನ ಮೆರಿಟ್ ಕೋಟಾದ ಪ್ರತಿಶತ ಹದಿನೈದು ಸೀಟುಗಳನ್ನು ನೀಟ್ ವ್ಯಾಪ್ತಿಗೆ ಸೇರಿಸಿ ರಾಜ್ಯಗಳ ಪ್ರತಿಭಾವಂತರಿಗೆ ಅನ್ಯಾಯ ಮಾಡಿದರು. ನೀಟ್ ಮೂಲಕ ಕಿತ್ತುಕೊಂಡ ಮೆರಿಟ್ ಮೆಡಿಕಲ್ ಸೀಟುಗಳು ಈಗ ಕಳ್ಳರ ಪಾಲಾಗುತ್ತಿವೆೆ. ಪ್ರತಿಶತ ಹದಿನೈದು ಮೆಡಿಕಲ್ ಸೀಟುಗಳು ನೀಟ್ ಪಾಲಾಗುವುದರಿಂದ ಸಹಜವಾಗಿಯೇ ಕರ್ನಾಟಕದ ಪ್ರತಿಭಾವಂತರಿಗೆ ಕಡಿಮೆ ಸೀಟುಗಳು ಉಳಿಯುತ್ತವೆ.
ಹಾಗೆ ನೋಡಿದರೆ ಈ ಪ್ರವೇಶ ಪರೀಕ್ಷೆಯ ಮೂಲಕ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ. ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ಕ್ರಮವೇ ಅತ್ಯಂತ ಅವೈಜ್ಞಾನಿಕವಾದುದು. ಪರೀಕ್ಷೆ ಮೇಲೆ ಪರೀಕ್ಷೆ ಬರೆಯುವುದರಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರಿದಂತಾಗುತ್ತದೆ.
ದೇಶದಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸಾಕಷ್ಟು ಹಗರಣಗಳಲ್ಲಿ ಭಾಗಿಯಾದ ಮೇಲೂ ಅದನ್ನು ಮುಂದುವರಿಸುತ್ತಿರುವುದು ದುರಂತವೇ ಸರಿ. ಕರ್ನಾಟಕದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯಾವತ್ತೋ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಅದನ್ನು ಯಾವತ್ತೋ ಮುಚ್ಚಬೇಕಿತ್ತು.
ಈ ಪ್ರವೇಶ ಪರೀಕ್ಷೆಗಳ ವ್ಯವಸ್ಥೆ ವೈರುಧ್ಯದಿಂದ ಕೂಡಿದೆ. ಒಂದು ತರ್ಕವೆಂಬುದೇ ಇಲ್ಲ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಆಯ್ದ ಕೆಲವು ಪ್ರತಿಷ್ಠಿತ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪರೀಕ್ಷೆ ನಡೆಸುತ್ತದೆ. ಎಷ್ಟೋ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್.ಡಿ. ಅಧ್ಯಯನಕ್ಕೆ ಪ್ರವೇಶ ನೀಡುತ್ತವೆ. ಎಲ್ಲ ವಿಶ್ವವಿದ್ಯಾನಿಲಯಗಳು ಯು.ಜಿ.ಸಿ. ನಿಯಮಾವಳಿಯಡಿ ಕಾರ್ಯ ನಿರ್ವಹಿಸಿದರೂ ಏಕರೂಪ ವ್ಯವಸ್ಥೆ ಇಲ್ಲ. ವಿಶ್ವವಿದ್ಯಾನಿಲಯ ಮತ್ತು ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸೇರಲು ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್) ಅಥವಾ ಪಿಎಚ್.ಡಿ. ಹೊಂದುವುದು ಕಡ್ಡಾಯ.ಆದರೆ ಕರ್ನಾಟಕದಲ್ಲಿ ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿಎಚ್.ಡಿ. ಅಥವಾ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಮಾಣದ ಜೊತೆಗೆ ಮತ್ತೊಮ್ಮೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದು ಕಡ್ಡಾಯ. ಇದರಲ್ಲಿ ಯಾವ ಬಗೆಯ ವೈಜ್ಞಾನಿಕ ತರ್ಕ ಇದೆಯೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಬೇಕು. ಇದಕ್ಕಿಂತಲೂ ದೊಡ್ಡ ವೈರುಧ್ಯವೆಂದರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತೀವರ್ಷ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಮಾದರಿಯಲ್ಲಿ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ -ಸೆಟ್) ನಡೆಸುತ್ತದೆ. ಆ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಕರ್ನಾಟಕದ ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಪಡೆಯಲು ಅರ್ಹರು ಎಂಬ ಕಾನೂನು ರೂಪಿಸಲಾಗಿದೆ. ವಿಚಿತ್ರವೆಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೆ -ಸೆಟ್ ಪ್ರಮಾಣ ಪತ್ರ ಪಡೆದವರೂ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಲು ಮತ್ತೊಮ್ಮೆ ಅದೇ ಪ್ರಾಧಿಕಾರದ ಪ್ರವೇಶ ಪರೀಕ್ಷೆ ಬರೆದು ಹೆಚ್ಚು ಅಂಕ ಪಡೆದುಕೊಳ್ಳಬೇಕು. ಆಗ ಮಾತ್ರ ಅವರು ಸರಕಾರಿ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಬಹುದು. ಆಶ್ಚರ್ಯದ ಸಂಗತಿಯೆಂದರೆ, ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲೇ ಕಾರ್ಯ ನಿರ್ವಹಿಸುವ ಒಂದೇ ರೀತಿಯ ವೇತನ ಶ್ರೇಣಿ ಪಡೆಯುವ ಖಾಸಗಿ ಸಂಸ್ಥೆಯಡಿಯಲ್ಲಿನ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗೆ ಯಾವ ಪ್ರವೇಶ ಪರೀಕ್ಷೆಯೂ ಕಡ್ಡಾಯವಾಗಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನೇತೃತ್ವದಲ್ಲಿ ಒಂದು ಆಯ್ಕೆ ಸಮಿತಿ ರಚನೆಯಾಗಿರುತ್ತದೆ. ಅದರಲ್ಲಿ ವಿಷಯ ತಜ್ಞರು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಸಂದರ್ಶನದ ಮೂಲಕ ಖಾಸಗಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆಸಲಾಗುತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಯವರು ನಡೆಸುವ ಇಂಜಿನಿಯರಿಂಗ್, ಮೆಡಿಕಲ್ ಮತ್ತು ಇನ್ನಿತರ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಯಾವ ಪ್ರವೇಶ ಪರೀಕ್ಷೆಯೂ ನಡೆಸುವುದಿಲ್ಲ. ಅಲ್ಲಿ ಪ್ರವೇಶ ಪಡೆಯಲು ಹಣವೇ ಪ್ರಧಾನ ಪಾತ್ರ ವಹಿಸುತ್ತದೆ. ಡೀಮ್ಡ್ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು ಹಣ ಬಿಟ್ಟು ಬೇರೆ ಯಾವ ಮಾನದಂಡವನ್ನೂ ಅನುಸರಿಸುವುದಿಲ್ಲ. ಅಷ್ಟಕ್ಕೂ ಡೀಮ್ಡ್ ವಿಶ್ವವಿದ್ಯಾನಿಲಯಗಳ ಮೇಲೆ ಸರಕಾರದ ನಿಯಂತ್ರಣವೇ ಇರುವುದಿಲ್ಲ. ಅವರದೇ ಪಠ್ಯ, ಅವರದೇ ಪರೀಕ್ಷೆ, ಅವರದೇ ಪ್ರತ್ಯಕ್ಷ ಘಟಿಕೋತ್ಸವ ಆಯೋಜಿಸುತ್ತಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳ ಅಗ್ನಿ ದಿವ್ಯವೇ ಎದುರಾಗುತ್ತವೆ. ಹಣ ಇದ್ದವರಿಗೆ ಯಾವ ಪ್ರವೇಶ ಪರೀಕ್ಷೆಯೂ ಇಲ್ಲ. ಇಂಥ ಶಿಕ್ಷಣ ಪದ್ಧತಿಯಲ್ಲಿ ಯಾವ ಬಗೆಯ ತರ್ಕ ಇದೆ? ಪ್ರವೇಶ ಪರೀಕ್ಷೆಗಳು ಪ್ರತಿಭಾವಂತರಿಗೆ ಸ್ಪೀಡ್‌ಬ್ರೇಕ್ ಇದ್ದಂತೆ. ಜೀವನದುದ್ದಕ್ಕೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಾ ಹೋಗಬೇಕು. ಖಾಸಗಿ ಸಂಸ್ಥೆಯವರ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಯಾವ ಪ್ರವೇಶ ಪರೀಕ್ಷೆಯೂ ಇರುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ದಡ್ಡ ವಿದ್ಯಾರ್ಥಿಗಳಿಗೆ ದಡ್ಡ ಶಿಕ್ಷಕರೇ ಕಲಿಸುತ್ತಾರೆ. ಆದರೆ ಅಂಥ ಸಂಸ್ಥೆಗಳನ್ನು ಶ್ರೇಷ್ಠ ಶಿಕ್ಷಣ ಸಂಸ್ಥೆಗಳೆಂದು ಪ್ರಚಾರ ಮಾಡಲಾಗುತ್ತಿದೆ.
ಸಿಇಟಿ, ನೀಟ್, ನೆಟ್, ಜೆಇಇ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಗಳಲ್ಲಿ ನಡೆಯುವ ಎಲ್ಲ ಬಗೆಯ ಪ್ರವೇಶ ಪರೀಕ್ಷೆಗಳನ್ನು ನಿಲ್ಲಿಸಬೇಕು. ಅದರಿಂದ ಪ್ರತಿಭಾವಂತರ ಕಗ್ಗೊಲೆ ನಡೆಯುತ್ತದೆಯಷ್ಟೇ. ನೇಮಕಾತಿಗಳಲ್ಲೂ ಅನಗತ್ಯ ಪ್ರವೇಶ ಪರೀಕ್ಷೆಗಳ ಅಗತ್ಯವಿಲ್ಲ. ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ. ಅಧ್ಯಯನದ ಸರಾಸರಿ ಅಂಕಗಳ ಆಧಾರದಲ್ಲಿ ನೇಮಕಾತಿ ನಡೆಯಬೇಕು. ಪರೀಕ್ಷಾ ಪ್ರಾಧಿಕಾರಗಳು, ಟೆಸ್ಟಿಂಗ್ ಏಜೆನ್ಸಿ, ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ಭ್ರಷ್ಟಗೊಂಡಿರುವ ಎಲ್ಲ ನೇಮಕಾತಿ ಪ್ರಾಧಿಕಾರಗಳನ್ನು ರದ್ದು ಪಡಿಸಬೇಕು. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ಪ್ರವೇಶ ಪರೀಕ್ಷೆಗಿಂತಲೂ ಬೋಧನಾ ಕೌಶಲ್ಯ ಅಳೆಯುವ ವ್ಯವಸ್ಥೆ ರೂಪಿಸಬೇಕು. ಪ್ರವೇಶ ಪರೀಕ್ಷೆಗಳೆಂದರೆ ಬಹುದೊಡ್ಡ ಹಗರಣ ಎಂಬಂತಾಗಿದೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅಸ್ತಿತ್ವಕ್ಕೆ ಬಂದ ಎಲ್ಲ ಬಗೆಯ ಪ್ರವೇಶ ಪರೀಕ್ಷೆಗಳು ಪರಮ ಭ್ರಷ್ಟ ಎಂಬುದು ಮತ್ತೆ ಮತ್ತೆ ರುಜುವಾತುಪಡಿಸಿವೆ. ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಆ ಎಲ್ಲ ಸಂಸ್ಥೆಗಳು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದರೂ, ಅನಗತ್ಯ ಪರೀಕ್ಷೆಗಳು ಹೇರುವುದು ಒಳ್ಳೆಯದಲ್ಲ. ಅನಗತ್ಯ ಪ್ರವೇಶ ಪರೀಕ್ಷೆಗಳು ನಡೆಸುವುದೆಂದರೆ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಅಪಮಾನಿಸಿದಂತೆ.






