ಭೀಕರ ಬರ-ಗುಳೆ ಹೊರಟ ರೈತರು...

ಅಕ್ಟೋಬರ್ ತಿಂಗಳಲ್ಲೇ ಭೀಕರ ಬರದ ಕಾರಣಕ್ಕೆ ಜನ-ಜಾನುವಾರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಅಂತರ್ಜಲ ಪಾತಾಳ ತಲುಪಿದೆ. ಕೊಳವೆ ಬಾವಿಗಳನ್ನು ಕೊರೆದರೂ ಉಪಯೋಗಕ್ಕೆ ಬರುವುದಿಲ್ಲ. ಐದು ಎಕರೆಗಿಂತಲೂ ಕಡಿಮೆ ಜಮೀನು ಇರುವ ರೈತರು ಹೆಚ್ಚು ದಿನಗಳ ಕಾಲ ಸರಕಾರದ ನೆರವಿಗಾಗಿ ಕಾಯುವುದಿಲ್ಲ. ಹೊಟ್ಟೆಗೆ ಅನ್ನ, ಕುಡಿಯುವ ನೀರಿಗೆ ಕೊರತೆಯಾದರೆ ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೋಗುತ್ತಾರೆ. ಸಾಕಿದ ಕುರಿ, ಕೋಳಿ ಮತ್ತು ದನ-ಕರುಗಳನ್ನು ಅಗ್ಗದ ಬೆಲೆಗೆ ಮಾರಿ ಮುಂದೆ ಸಾಗುತ್ತಾರೆ.
ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು ಹೆಸರನು ಬಯಸದೆ ಅತಿಸುಖಕೆಳಸದೆ ದುಡಿವನು ಗೌರವಕಾಶಿಸದೆ
ನೇಗಿಲದೊಳಡಗಿದೆ ಕರ್ಮ
ನೇಗಿಲ ಮೇಲೆಯೆ ನಿಂತಿದೆ ಧರ್ಮ
-ರಾಷ್ಟ್ರಕವಿ ಕುವೆಂಪು
ಕರ್ನಾಟಕದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಊರುಗಳು ಖಾಲಿಯಾಗುತ್ತಿವೆ. ಜಾನುವಾರುಗಳು ಮೇವು ಮತ್ತು ನೀರಿಗಾಗಿ ಪರದಾಡುತ್ತಿವೆ. ರೈತರು ದಿಕ್ಕುಗಾಣದೆ ಗುಳೆ ಹೋಗುತ್ತಿದ್ದಾರೆ. ಸರಕಾರ ಮಾತ್ರ ಇನ್ನೂ ಬರ ತಾಲೂಕುಗಳ ಪಟ್ಟಿಯನ್ನು ಕಂತುಗಳಲ್ಲಿ ಬಿಡುಗಡೆ ಮಾಡುತ್ತಲಿದೆ. ಬರ ಪಟ್ಟಿಯಲ್ಲಿ ಸೇರಿಸಿದ್ದೇ ಮಹಾನ್ ಕಾರ್ಯವೆಂದು ಆಯಾ ತಾಲೂಕುಗಳ ವ್ಯಾಪ್ತಿಯ ಶಾಸಕರು ಬೀಗುತ್ತಿದ್ದಾರೆ. ಕರ್ನಾಟಕ ಸರಕಾರ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿದೆ. ಕೇಂದ್ರ ಸರಕಾರ ಕರ್ನಾಟಕವೂ ಸೇರಿದಂತೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ರಾಜಸ್ಥಾನ್ ರಾಜ್ಯಗಳನ್ನು ಬರ ಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಿದೆ. ಕೇಂದ್ರ ಅಧ್ಯಯನ ತಂಡಗಳು ಬರ ಪೀಡಿತ ರಾಜ್ಯಗಳಿಗೆ ತೆರಳಿ ಬರಗಾಲದ ತೀವ್ರತೆಯನ್ನು ಪರಿಶೀಲಿಸುತ್ತಿವೆ.
ಕರ್ನಾಟಕದಲ್ಲಿ ಒಟ್ಟು 240 ತಾಲೂಕುಗಳ ಪೈಕಿ 217 ತಾಲೂಕುಗಳು ಬರಪೀಡಿತವೆಂದು ಸರಕಾರ ಅಧಿಕೃತವಾಗಿ ಪ್ರಕಟಿಸಿದೆ. ಕಂದಾಯ ಸಚಿವರು, ರಾಜ್ಯದ ಉಪಮುಖ್ಯಮಂತ್ರಿಯೂ ಆಗಿರುವ ಡಾ. ಜಿ. ಪರಮೇಶ್ವರ್ ಅವರು ಬರ ಪೀಡಿತ ತಾಲೂಕುಗಳ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ಸುಳಿವು ನೀಡಿದ್ದಾರೆ. ವಾಸ್ತವದಲ್ಲಿ ಕರಾವಳಿ ಪ್ರದೇಶದ ಐದಾರು ತಾಲೂಕುಗಳನ್ನು ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳು ಬರಪೀಡಿತವಾಗಿವೆ. ಎನ್‌ಡಿಆರ್‌ಎಫ್ (ನ್ಯಾಷನಲ್ ಡಿಸಾಸ್ಟರ್ ರೆಸ್ಪೋನ್ಸ್ ಫಂಡ್) ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯ ಸರಕಾರದ ಅಧಿಕಾರಿಗಳು ಬರಪೀಡಿತ ತಾಲೂಕುಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬರಪೀಡಿತ ತಾಲೂಕುಗಳನ್ನು ಗುರುತಿಸಿ ಅಧಿಕೃತವಾಗಿ ಘೋಷಣೆ ಮಾಡುವ ಹೊತ್ತಿಗೆ ಮಳೆಗಾಲವೇ ಮುಗಿದು ಹೋಗುತ್ತಿದೆ. ಈ ಬಾರಿಯ ಮುಂಗಾರು ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ಮುಂಚಿತವಾಗಿಯೇ ಗ್ರಹಿಸಿತ್ತು. ಬರದ ನೆರಳು ಆಗಲೇ ಮುನ್ಸೂಚನೆ ನೀಡಿತ್ತು.
ಹಾಗೆ ನೋಡಿದರೆ ಕರ್ನಾಟಕಕ್ಕೆ ಬರ ಹೊಸದೇನಲ್ಲ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಆಗಾಗ ಹಸಿ ಬರ, ಒಣ ಬರ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಮಳೆಯಾಶ್ರಿತ ಪ್ರದೇಶದಲ್ಲಿ ಜೂನ್ ಮತ್ತು ಸೆಪ್ಟಂಬರ್ ತಿಂಗಳ ಅವಧಿಯಲ್ಲಿ 852 ಮಿ.ಮೀ.ಗಿಂತಲೂ ಕಡಿಮೆ ಮಳೆ ಬಿದ್ದರೆ ಹೆಚ್ಚು ಕಡಿಮೆ ಬರದ ವಾತಾವರಣ ನಿರ್ಮಾಣವಾಗುತ್ತದೆ. ಈ ಬಾರಿ ಮಳೆಯ ಸರಾಸರಿ ಪ್ರಮಾಣ 530-551ಮಿ.ಮೀ. ಮಾತ್ರ ಇದೆ. ವಾಡಿಕೆಗಿಂತಲೂ ಪ್ರತಿಶತ 35ರಷ್ಟು ಕಡಿಮೆ ಮಳೆ ಬಿದ್ದಿದೆ. ಕರ್ನಾಟಕ ರಾಜ್ಯವು ಇಂತಹ ಭೀಕರ ಬರವನ್ನು 150 ವರ್ಷಗಳ ಹಿಂದೆ (1875)ಎದುರಿತ್ತು. ಅಂದಾಜು ಪ್ರತಿಶತ 82-90ರಷ್ಟು ಬೆಳೆ ನಾಶವಾಗಿದೆ. ರಾಜ್ಯ ಸರಕಾರದ ಅಧಿಕೃತ ಸಮೀಕ್ಷೆಯಂತೆ ಅಂದಾಜು 46 ಸಾವಿರ ಕೋಟಿ ರೂ. ಮೊತ್ತದ ಬೆಳೆ ನಾಶವಾಗಿದೆ. ವಾಸ್ತವದಲ್ಲಿ ಬೆಳೆ ನಾಶದ ಪ್ರಮಾಣ ಇದಕ್ಕಿಂತಲೂ ಹೆಚ್ಚಿದೆ.
ಬರದ ಭೀಕರತೆ ಅರಿತ ರಾಜ್ಯ ಸರಕಾರ
ಬರ ಮತ್ತು ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕ ಚರ್ಚಿಸಲು ವಿಶೇಷ ಅಧಿವೇಶನ ಕರೆದಿತ್ತು. ಬರದ ಕುರಿತು ತಲಸ್ಪರ್ಶಿ ಚರ್ಚೆ ನಡೆಯಲಿಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳು ಬೇಡದ ವಿಷಯಗಳಲ್ಲಿ ಆರೋಪ ಪ್ರತ್ಯಾರೊಪಗಳಲ್ಲೇ ಕಾಲ ಹರಣ ಮಾಡಿದವು.
ರಾಜ್ಯ ಭೀಕರ ಬರ ಎದುರಿಸುತ್ತಿದ್ದರೂ ವಿರೋಧ ಪಕ್ಷಗಳಿಗೆ ಬರಗಾಲ ಮತ್ತು ರೈತರ ಶೋಚನೀಯ ಸ್ಥಿತಿ ಮೊದಲ ಆದ್ಯತೆಯಾಗಲಿಲ್ಲ. ಕೆಪಿಎಸ್‌ಸಿ ನೇಮಕಾತಿ ಹಗರಣ, ನೈಸ್ ಯೋಜನೆಯಲ್ಲಿ ಯಾರು ಹೆಚ್ಚು ಜಮೀನು ಕಬಳಿಸಿದರು ಎಂಬ ಆರೋಪ ಪ್ರತ್ಯಾರೋಪಗಳು ದಿನ ನಿತ್ಯದ ಸುದ್ದಿಗಳಾದವು. ಇಷ್ಟೊತ್ತಿಗೆ ರಾಜ್ಯ ಸರಕಾರ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ ಬರ ಪರಿಹಾರದ ಹೆಚ್ಚಿನ ಅನುದಾನಕ್ಕಾಗಿ ಒತ್ತಡ ಹೇರಬಹುದಿತ್ತು. ರಾಜ್ಯ ಸರಕಾರ ಬರ ಪರಿಹಾರಕ್ಕಾಗಿ ಒಟ್ಟು 11,000 ಕೋಟಿ ರೂ. ನೆರವು ಕೋರಿದೆ. ಅಷ್ಟು ಮಾತ್ರವಲ್ಲ, ತನ್ನ ನಿಧಿಯಿಂದ ರೂ. 1,250 ಕೋಟಿಯಷ್ಟು ಹಣವನ್ನು ಬರ ಪರಿಹಾರಕ್ಕಾಗಿ ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿದೆ. ಪ್ರತೀ ಅರ್ಹ ರೈತ ಕುಟುಂಬಕ್ಕೆ ರೂ. 2,500ನ್ನು ಬರ ಪರಿಹಾರವಾಗಿ ನೇರ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೂ ಯಾರೊಬ್ಬರ ಖಾತೆಗೂ ಹಣ ಜಮಾ ಆಗಿಲ್ಲ. ಹಾಗೆ ನೋಡಿದರೆ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯ (ಎನ್‌ಡಿಆರ್‌ಎಫ್) ನಿಯಮಗಳ ಪ್ರಕಾರ ಬರ ಪರಿಹಾರವಾಗಿ ಪ್ರತೀ ಹೆಕ್ಟೇರ್ ಜಮೀನಿಗೆ ಬೆಳೆ ನಾಶದ ಪ್ರಮಾಣವನ್ನು ಅವಲಂಬಿಸಿ ರೂ. 8,500ರಿಂದ ರೂ. 22,500ರವರೆಗೆ ಪಾವತಿಸಬೇಕು. ರಾಜ್ಯ ಸರಕಾರವೇ ಅಧಿಕೃತವಾಗಿ ಹೇಳಿಕೊಂಡಂತೆ ಈ ಬಾರಿ ಪ್ರತಿಶತ 90ರಷ್ಟು ಬೆಳೆ ನಾಶವಾಗಿದೆ. ಈಗ ರಾಜ್ಯ ಸರಕಾರ ಪ್ರಕಟಿಸಿರುವ ಬರ ಪರಿಹಾರ ಯಾವ ಮಾನದಂಡದಲ್ಲೂ ರೈತರ ಸಂಕಷ್ಟಗಳಿಗೆ ನೈಜ ಪರಿಹಾರವಲ್ಲ. ರೂ. 306 ಕೋಟಿಯನ್ನು ಕುಡಿಯುವ ನೀರು ಪೂರೈಸಲು ಮತ್ತು ರೂ. 25 ಕೋಟಿಯನ್ನು ಜಾನುವಾರುಗಳಿಗೆ ಮೇವು ಒದಗಿಸಲು ನೀಡಿದೆ. ರಾಷ್ಟ್ರೀಯ ವಿಪ್ಪತ್ತು ಸ್ಪಂದನಾ ನಿಧಿಯ ನಿಯಮದಂತೆ ಪ್ರತೀ ಜಾನುವಾರಿಗೆ ದಿನಕ್ಕೆ ರೂ. 45ರಿಂದ ರೂ. 80ನ್ನು ಮೇವಿಗಾಗಿ ಖರ್ಚು ಮಾಡಬೇಕು.
ತುರ್ತು ಆಪತ್ತು ನಿಧಿಯಾಗಿ ರೂ. 329 ಕೋಟಿಯನ್ನು ಒದಗಿಸಿರುವುದಾಗಿ ರಾಜ್ಯ ಸರಕಾರ ಹೇಳಿಕೊಂಡಿದೆ.
ಮಳೆಗಾಲದ ಕೊನೆಯ ದಿನಗಳಲ್ಲೂ ನಿರೀಕ್ಷಿತ ಪ್ರಮಾಣದ ಮಳೆ ಬೀಳದಿದ್ದರೆ ಮುಂಬರುವ ದಿನಗಳು ಮತ್ತಷ್ಟು ಭೀಕರವಾಗಲಿವೆ.
ಅಕ್ಟೋಬರ್ ತಿಂಗಳಲ್ಲೇ ಭೀಕರ ಬರದ ಕಾರಣಕ್ಕೆ ಜನ-ಜಾನುವಾರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಅಂತರ್ಜಲ ಪಾತಾಳ ತಲುಪಿದೆ. ಕೊಳವೆ ಬಾವಿಗಳನ್ನು ಕೊರೆದರೂ ಉಪಯೋಗಕ್ಕೆ ಬರುವುದಿಲ್ಲ. ಐದು ಎಕರೆಗಿಂತಲೂ ಕಡಿಮೆ ಜಮೀನು ಇರುವ ರೈತರು ಹೆಚ್ಚು ದಿನಗಳ ಕಾಲ ಸರಕಾರದ ನೆರವಿಗಾಗಿ ಕಾಯುವುದಿಲ್ಲ. ಹೊಟ್ಟೆಗೆ ಅನ್ನ, ಕುಡಿಯುವ ನೀರಿಗೆ ಕೊರತೆಯಾದರೆ ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೋಗುತ್ತಾರೆ. ಸಾಕಿದ ಕುರಿ, ಕೋಳಿ ಮತ್ತು ದನ-ಕರುಗಳನ್ನು ಅಗ್ಗದ ಬೆಲೆಗೆ ಮಾರಿ ಮುಂದೆ ಸಾಗುತ್ತಾರೆ.
ಆದರೆ ಹೆಚ್ಚು ಜಮೀನು ಇರುವ ಮಳೆಯಾಶ್ರಿತ ರೈತ ಕುಟುಂಬಗಳು ಗುಳೆ ಹೋಗುವುದಿಲ್ಲ. ಮುಂಗಾರು ಬಿತ್ತನೆಗೆ, ಬದುಕು ನಿರ್ವಹಣೆಗೆ ಅಷ್ಟು ಮಾತ್ರವಲ್ಲ ತುರ್ತು ಕೆಲಸ ಕಾರ್ಯಗಳಿಗೆ ಖಾಸಗಿ ಬ್ಯಾಂಕ್ ಸಾಲವನ್ನು ಅವಲಂಬಿಸುತ್ತಾರೆ. ಬಡ್ಡಿ, ಚಕ್ರಬಡ್ಡಿ ಸುಳಿಯಲ್ಲಿ ಸಾಲದ ಹೊರೆ ಹೆಚ್ಚುತ್ತಲೇ ಇರುತ್ತದೆ. ಸಾಲದ ಹೊರೆ ಹೆಚ್ಚಾದಾಗ ಜಮೀನು ಮಾರಿಕೊಳ್ಳುವುದು ಅನಿವಾರ್ಯವಾಗುತ್ತದೆ. ಸಾಲ ಮಾಡಿ ಕುಟುಂಬ ನಿರ್ವಹಣೆ ಮಾಡಬಹುದು. ಆದರೆ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರು ಒದಗಿಸುವುದು ಕಷ್ಟವಾಗುತ್ತದೆ. ದುಡ್ಡು ಮಾಡಲು ಹುಟ್ಟಿಕೊಂಡಿರುವ ಯಾವ ಗೋಶಾಲೆಯೂ ಜಾನುವಾರುಗಳಿಗೆ ಆಶ್ರಯ ನೀಡುವುದಿಲ್ಲ. ಮುಖ್ಯಮಂತ್ರಿ, ಕಂದಾಯ ಮಂತ್ರಿ ಅಷ್ಟೇ ಯಾಕೆ ಸರಕಾರದ ಅಧಿಕಾರಿಗಳು ಕೋಟಿ ಕೋಟಿ ಹಣವನ್ನು ಬರ ಪರಿಹಾರಕ್ಕೆಂದು ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡರೂ ವಾಸ್ತವದಲ್ಲಿ ಸಂತ್ರಸ್ತ ರೈತರಿಗೆ ತಲುಪಿರು ವುದಿಲ್ಲ. ರೈತರು ಬೆಳೆ ವಿಮೆ ಮಾಡಿಸಿರುವುದರಿಂದ ಅಷ್ಟೋ ಇಷ್ಟೋ ಪರಿಹಾರ ದೊರಕಿದೆ. ಕೆಲವು ವಿಮಾ ಕಂಪೆನಿಗಳು ತಗಾದೆ ತೆಗೆದರೆ ವಕೀಲರ ನೆರವು ಪಡೆದುಕೊಂಡು, ಅವರ ಸಂಭಾವನೆ ಪಾವತಿಸಬೇಕಾಗುತ್ತದೆ. ಭೀಕರ ಬರದಲ್ಲಿ ಲಾಭ ಮಾಡಿಕೊಳ್ಳುವ ಮಂದಿ ಹಲವರು. ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಅತಿ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ತೃಪ್ತಿ ಪಟ್ಟುಕೊಳ್ಳುತ್ತಾರೆ. ಬರಪೀಡಿತ ತಾಲೂಕು ಎಂದು ಘೋಷಿಸಿ ಹೆಚ್ಚು ಅನುದಾನ ನೀಡಿದ ಮಾತ್ರಕ್ಕೆ ಜನಪ್ರತಿನಿಧಿಗಳ ಕರ್ತವ್ಯ ಮುಗಿಯುವುದಿಲ್ಲ. ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ಸಂತ್ರಸ್ತ ಕುಟುಂಬಗಳಿಗೆ ತಲುಪಿಸುವುದು ಬಹಳ ಮುಖ್ಯ. ಬರ ಬಂದರೆ, ಅದರಲ್ಲೂ ಭೀಕರ ಬರ ಕಾಣಿಸಿಕೊಂಡರೆ ಭ್ರಷ್ಟ ಅಧಿಕಾರಿಗಳು ಹಬ್ಬ ಎಂದೇ ಭಾವಿಸಿ ಕಾರ್ಯ ಪ್ರವೃತ್ತರಾಗುತ್ತಾರೆ. ಬರ, ನೆರೆ ಹಾವಳಿ, ರೋಗ ರುಜಿನ ಬಂದರೆ ಹೆಚ್ಚು ಸಂಭ್ರಮಿಸುವವರು ಬಡ್ಡಿ ವ್ಯವಹಾರ ಮಾಡುವ ಖಾಸಗಿ ಲೇವಾದೇವಿ ಸಂಸ್ಥೆಯವರು. ಜಮೀನು ಕಾಗದ ಪತ್ರಗಳನ್ನು ಇಟ್ಟುಕೊಂಡು ಸಾಲ ಕೊಡುವ ಅವರು ಬಡ್ಡಿ, ಚಕ್ರಬಡ್ಡಿ ಸೇರಿ ಸಾಲದ ಪ್ರಮಾಣ ಹೆಚ್ಚಾದಾಗ ಆ ಜಮೀನು ಕಬಳಿಸುತ್ತಾರೆ.
ಇನ್ನು ಒಂದೂವರೆ ವರ್ಷಗಳಲ್ಲಿ ಚುನಾವಣೆ ಬರುವುದರಿಂದ ಪ್ರತಿ ಪಕ್ಷಗಳು ಸಣ್ಣ ಪುಟ್ಟ ಪ್ರಕರಣಗಳನ್ನು ದೊಡ್ಡದಾಗಿ ಬಿಂಬಿಸಿ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿ ಆಡಳಿತ ವಿರೋಧಿ ಅಲೆಯ ಲಾಭ ಪಡೆದುಕೊಳ್ಳಲು ಹವಣಿಸುವುದು ಸಹಜ. ಹಾಗೆಯೇ ಆಡಳಿತ ಪಕ್ಷವು ತನ್ನ ಸಣ್ಣ ಪುಟ್ಟ ಸಾಧನೆಯನ್ನು ದೊಡ್ಡದಾಗಿ ಬಿಂಬಿಸಿಕೊಂಡು ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡು ಜನರ ಕಣ್ಣಲ್ಲಿ ಹೀರೋ ಆಗಲು ಹರಸಾಹಸ ಮಾಡುವುದು ಸರ್ವೇ ಸಾಮಾನ್ಯ.
ಭೀಕರ ಬರಗಾಲದಂತಹ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಬರದಿಂದ ತತ್ತರಿಸಿ ಹೋಗಿರುವ ಸಂತ್ರಸ್ತ ರೈತರ ಬದುಕು ಮುಖ್ಯವಾಗಬೇಕು. ಮೇವು ನೀರು ದೊರೆಯದೆ ಕಂಗಾಲಾಗಿರುವ ಜಾನುವಾರುಗಳ ದಾರುಣ ಸ್ಥಿತಿ ಮುಖ್ಯವಾಗಬೇಕು. ಆರೋಪ ಪ್ರತ್ಯಾರೋಪಗಳು ಬರ ಕೇಂದ್ರೀತವಾಗಿರಬೇಕು. ಭೀಕರ ಬರಗಾಲವನ್ನು ಎದುರಿಸಲು ಆಡಳಿತ ಪಕ್ಷ ಎಲ್ಲೆಲ್ಲಿ ಸೋತಿದೆ ಎನ್ನುವುದನ್ನು ಎತ್ತಿ ತೋರಿಸುವುದು ವಿರೋಧ ಪಕ್ಷದವರ ಪ್ರಧಾನ ಕಾಳಜಿಯಾಗಬೇಕು. ವಿರೋಧ ಪಕ್ಷಗಳ ಟೀಕೆಗೆ ಅವಕಾಶ ಮಾಡಿಕೊಡದಂತೆ ಬರ ಪರಿಹಾರ ಕಾರ್ಯವನ್ನು ಯುದ್ಧೋಪಾದಿಯಲ್ಲಿ ನಡೆಸಿ ಸರಕಾರ ನಮ್ಮ ನೆರವಿಗೆ ನಿಂತಿದೆ ಎಂಬ ಕೃತಜ್ಞತಾ ಭಾವ ಸಂತ್ರಸ್ತ ರೈತರ ಕಣ್ಣಲ್ಲಿ ಮೂಡುವ ಹಾಗೆ ನೋಡಿಕೊಳ್ಳಬೇಕು. ಜವಾಬ್ದಾರಿಯುತ ಮಾಧ್ಯಮಗಳು ಭೀಕರ ಬರದ ಹೊರತಾದ ಸುದ್ದಿಗಳಿಗೆ ಪ್ರಾಮುಖ್ಯತೆ ಕೊಡಬಾರದು. ಭೀಕರ ಬರದಿಂದ ನರಳುತ್ತಿರುವ ಜನ ಜಾನುವಾರುಗಳಿಗೆ ನೆಮ್ಮದಿಯ ಬದುಕು ಪ್ರಾಪ್ತಿಯಾದ ಮೇಲೆ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಕಾರ್ಯಕ್ರಮ ಬಿತ್ತರ ಮಾಡುವುದು ಇದ್ದೇ ಇರುತ್ತದೆ. ಭೀಕರ ಬರವನ್ನು ಆಡಳಿತಾರೂಢ ಸರಕಾರವಾಗಲಿ, ಪ್ರತಿಪಕ್ಷಗಳಾಗಲಿ ಮತ್ತು ಮಾಧ್ಯಮದವರಾಗಲಿ ಹಗುರವಾಗಿ ಪರಿಗಣಿಸಬಾರದು. ಬರವನ್ನು ಗಂಭೀರವಾಗಿ ಪರಿಗಣಿಸದ ಎಷ್ಟೋ ಸರಕಾರಗಳು ಮಣ್ಣು ಮುಕ್ಕಿವೆ. ರೈತರ ಕಷ್ಟಗಳಿಗೆ ಸ್ಪಂದಿಸದ ಯಾವ ಜನಪ್ರತಿನಿಧಿಯೂ ಜನಬೆಂಬಲ ಗಳಿಸಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ಹಲವು ಶಾಸಕರು ತಮ್ಮ ಮತಕ್ಷೇತ್ರದ ವ್ಯಾಪ್ತಿಯ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ದುಂಬಾಲು ಬಿದ್ದರು. ಕೆಲವರಂತೂ ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸರಕಾರಕ್ಕೆ ಬೆದರಿಕೆ ಹಾಕಿದರು. ಬರಪೀಡಿತ ತಾಲೂಕು ಎಂದು ಘೋಷಣೆಯಾದರೆ ಸಂತ್ರಸ್ತ ರೈತರು ಸಮಾಧಾನವಾಗುತ್ತಾರೆ ಎಂಬುದು ಜನಪ್ರತಿನಿಧಿಗಳ ಲೆಕ್ಕಾಚಾರ. ಬರಪೀಡಿತ ತಾಲೂಕು ಎಂದು ಅಧಿಕೃತವಾಗಿ ಘೋಷಿಸುವುದು ಮೊದಲ ಹಂತ. ಸಂತ್ರಸ್ತ ರೈತರಿಗೆ ಸರಕಾರದ ಪರಿಹಾರ ದೊರಕಿಸಿಕೊಡುವುದು ಪ್ರಮುಖ ಹಂತ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಜಾಸೇವೆ ಕಾರ್ಯಕ್ರಮದ ಯಶಸ್ಸು ಮತ್ತು ವೈಫಲ್ಯ ಪರಿಣಾಮಕಾರಿ ಬರ ನಿರ್ವಹಣೆಯನ್ನು ಅವಲಂಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಮೂರು ವರ್ಷಗಳ ಆಡಳಿತದಲ್ಲಿ ಸಾಕಷ್ಟು ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿಕೊಂಡಿದೆ. ಆಡಳಿತ ವಿರೋಧಿ ಅಲೆಯನ್ನು ಅಳಿಸಿ ಹಾಕಿ ಜನರ ಪ್ರೀತಿ ಗಳಿಸಬೇಕೆಂದರೆ ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಳ್ಳುವುದೇ ರಾಜಮಾರ್ಗ. ಪ್ರಚಾರಕ್ಕೆ ಅತಿ ಹೆಚ್ಚು ಹಣ ಖರ್ಚು ಮಾಡಿ ಆಡಳಿತ ವಿರೋಧಿ ಅಲೆಯನ್ನು ಅಳಿಸಿ ಹಾಕುವುದು ಕರ್ನಾಟಕದಲ್ಲಿ ಸಾಧ್ಯವಿಲ್ಲ. ಕರ್ನಾಟಕದ ಜನ ಫಲಿತಾಂಶ ನಿರೀಕ್ಷಿಸುತ್ತಾರೆ. ನಿರೀಕ್ಷಿತ ಮಟ್ಟದ ಅತ್ಯುತ್ತಮ ಆಡಳಿತ ನೀಡದೆ ಹೋದರೆ ಕರ್ನಾಟಕದ ಮತದಾರ ಮುಲಾಜಿಲ್ಲದೆ ತಿರಸ್ಕರಿಸಿ ಬಿಡುತ್ತಾರೆ. ಅತ್ಯುತ್ತಮ ಕೆಲಸ ಮಾಡಿದ ಮೇಲೂ ಮಾಧ್ಯಮಗಳು ಅಪಪ್ರಚಾರ ಮಾಡಿದರೆ ಆ ಮಾತನ್ನು ಕರ್ನಾಟಕದ ಜನ ಕೇಳಿಸಿಕೊಳ್ಳುವುದಿಲ್ಲ.
ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಸಜ್ಜನ ರಾಜಕಾರಣಿ ಎಂಬ ಇಮೇಜ್ ಮತ್ತಷ್ಟು ವೃದ್ಧಿಯಾಗಿತ್ತು. ಪಕ್ಷ ಮತ್ತು ಸರಕಾರಗಳಲ್ಲಿ ಗೊಂದಲಗಳಿರಲಿಲ್ಲ. ಭಿನ್ನಮತಕ್ಕೆ ಆಗ ಅವಕಾಶವೇ ಇರಲಿಲ್ಲ. ಮಾಧ್ಯಮ ಪ್ರಚಾರದಲ್ಲೂ ಎಸ್.ಎಂ. ಕೃಷ್ಣ ಮುಂದಿದ್ದರು. ರಾಷ್ಟ್ರೀಯ ಪತ್ರಿಕೆಯೊಂದು ನಂಬರ್ ಒನ್ ಮುಖ್ಯಮಂತ್ರಿ ಬಿರುದು ನೀಡಿತ್ತು. ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸು ಬಿತ್ತಿದ್ದರು. ಬೆಂಗಳೂರು ಪ್ರಪಂಚದ ಭೂಪಟದಲ್ಲಿ ಎದ್ದು ಕಾಣುವಂತೆ ಮಾಡಿದ್ದೇ ಎಸ್.ಎಂ. ಕೃಷ್ಣ ಅವರು. ಅವರ ಅವಧಿಯಲ್ಲಿ (2002) ರಾಜ್ಯದಲ್ಲಿ ಬರ ಕಾಣಿಸಿಕೊಂಡಿತ್ತು. ಆಡಳಿತ ಯಂತ್ರ ನಿರೀಕ್ಷಿತ ಪ್ರಮಾಣದಲ್ಲಿ ಬರ ಸಂತ್ರಸ್ತ ರೈತರ ಪರ ಕೆಲಸ ಮಾಡಿರಲಿಲ್ಲ. ಎಸ್.ಎಂ. ಕೃಷ್ಣ ಸರಕಾರಕ್ಕೆ ಆಡಳಿತ ವಿರೋಧಿ ಅಲೆ ಇಲ್ಲವೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಜಗದೀಶ್ ಶೆಟ್ಟರ್ ಅತ್ಯಂತ ದುರ್ಬಲ ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಿದ್ದೂ, 2004ರ ಚುನಾವಣೆಯಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಹೀನಾಯವಾಗಿ ನೆಲ ಕಚ್ಚಿತ್ತು. ಎಸ್.ಎಂ. ಕೃಷ್ಣ ಸಂಪುಟದ ಅರ್ಧಕ್ಕಿಂತ ಹೆಚ್ಚು ಸಚಿವರು ಸೋತಿದ್ದರು. ಬರಗಾಲ ಸೃಷ್ಟಿಸಿದ ಆಡಳಿತ ವಿರೋಧಿ ಅಲೆಯನ್ನು ಯಾವ ರಾಜಕೀಯ ಪಂಡಿತರೂ ಗಮನಿಸಿರಲಿಲ್ಲ.
ಆಗಿನ ಬರಕ್ಕೆ ಹೋಲಿಸಿದರೆ ಈ ಸಾಲಿನ ಬರ ಅತ್ಯಂತ ಭೀಕರವಾಗಿದೆ. ಚಳಿಗಾಲ ಮತ್ತು ನಂತರ ಬರುವ ಬೇಸಿಗೆ ಕಾಲದಲ್ಲಿ ಅನ್ನಕ್ಕೆ ಏನೋ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡರೆ ಜನರ ನಿಟ್ಟುಸಿರೇ ಶಾಪವಾಗಿ ಪರಿಣಮಿಸುತ್ತದೆ. ರೂಢಿಗತ ಭ್ರಷ್ಟಾಚಾರದ ಜೊತೆಗೆ ಬರಗಾಲದ ಭ್ರಷ್ಟಾಚಾರ ಸೇರಿಕೊಂಡರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅತ್ಯುತ್ತಮ ಬರ ನಿರ್ವಹಣೆ ಮತ್ತು ಭ್ರಷ್ಟಾಚಾರ ರಹಿತ ವ್ಯವಸ್ಥೆ ರೂಪಿಸುವುದು ಇಂದಿನ ಅಗತ್ಯವಾಗಿದೆ. ತೇಪೆ ಸಾರಿಸುವ ಮಾಧ್ಯಮ ಪ್ರಚಾರ ಮಾತ್ರದಿಂದಲೇ ಆಡಳಿತ ವಿರೋಧಿ ಅಲೆ ಅಳಿಸಿ ಹಾಕುವುದು ಒಂದು ವ್ಯರ್ಥ ಪ್ರಯತ್ನ ಎನಿಸಿಕೊಳ್ಳುತ್ತದೆ. ಶತಮಾನದ ಈ ಭೀಕರ ಬರವನ್ನು ಡಿ.ಕೆ. ಶಿವಕುಮಾರ್ ಸರಕಾರ ಅದೆಷ್ಟೋ ಮಾನವೀಯವಾಗಿ, ಪರಿಣಾಮಕಾರಿಯಾಗಿ ಎದುರಿಸುತ್ತದೆಯೋ ಅಷ್ಟು ಜನತೆಯ ಪ್ರೀತಿಗೆ ಪಾತ್ರವಾಗುತ್ತದೆ. ಈ ಸರಕಾರಕ್ಕೆ ಇದೊಂದು ಅಗ್ನಿ ಪರೀಕ್ಷೆಯ ಕಾಲ. ಭೀಕರ ಬರದಲ್ಲಿ ತತ್ತರಿಸಿ ಹೋಗಿರುವ ಸಂತ್ರಸ್ತ ರೈತರ ಪಾಲಿಗೆ ಇದು ಜೀವನ್ಮರಣದ ಅತ್ಯಂತ ಸವಾಲಿನ ಸಂದಿಗ್ಧ ಕಾಲ
(ಅಂಕಣಕಾರರು ಹಿರಿಯ ಲೇಖಕರು, ಪತ್ರಕರ್ತರು)






