Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ದ್ವೇಷ ಭಾಷಣ ತಡೆ ಕಾಯ್ದೆಗೆ ಬಿಜೆಪಿ...

ದ್ವೇಷ ಭಾಷಣ ತಡೆ ಕಾಯ್ದೆಗೆ ಬಿಜೆಪಿ ಅಡ್ಡಿ!

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ20 Dec 2025 10:24 AM IST
share
ದ್ವೇಷ ಭಾಷಣ ತಡೆ ಕಾಯ್ದೆಗೆ ಬಿಜೆಪಿ ಅಡ್ಡಿ!

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ದ್ವೇಷ ಭಾಷಣ, ಪ್ರತೀಕಾರದ ರಾಜಕಾರಣ ನಡೆಯುವುದಿಲ್ಲ ಎಂಬುದಕ್ಕೆ ಸಾವಿರ ನಿದರ್ಶನಗಳಿವೆ. ಬಿಜೆಪಿ ಒಪ್ಪಲಿ ಬಿಡಲಿ. ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರಕಾರ ಗಂಭೀರ ಪ್ರಯತ್ನ ಮಾಡಬೇಕು. ಕಾಯ್ದೆ ರೂಪಿಸುವುದು ಎಷ್ಟು ಮುಖ್ಯವೋ ಅದನ್ನು ಅನುಷ್ಠಾನದಲ್ಲಿ ತರುವುದು ಸರಕಾರದ ಮೊದಲ ಆದ್ಯತೆಯಾಗಬೇಕು. ಕರ್ನಾಟಕದಲ್ಲಿ ಪ್ರೀತಿ ವಿಶ್ವಾಸ, ಸಾಮರಸ್ಯ ಮತ್ತು ಸಹಬಾಳ್ವೆಯ ರಾಜಕಾರಣ ಮಾತ್ರ ಯಶಸ್ವಿಯಾಗುತ್ತದೆ.

ಕಳಬೇಡ ಕೊಲಬೇಡ

ಹುಸಿಯ ನುಡಿಯಲು ಬೇಡ

ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ

ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ

ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ

ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ

-ಬಸವಣ್ಣ

ಮೇಲಿನ ವಚನ ಮನು ಪ್ರಣೀತ ಭಾರತೀಯ ಜನತಾ ಪಕ್ಷದ ಒಟ್ಟು ತಾತ್ವಿಕತೆಗೆ ಬುದ್ಧಿವಾದ ಹೇಳಿದಂತಿದೆ. ಅಷ್ಟು ಮಾತ್ರವಲ್ಲ ಭಗವದ್ಗೀತೆಯ ಬೋಧನೆಯ ಸಾರಕ್ಕೆ ಪರ್ಯಾಯ ಚಿಂತನೆ ಈ ವಚನ ಪ್ರತಿಪಾದಿಸುತ್ತದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರಕಾರ ತಡವಾಗಿಯಾದರೂ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡಿಸಿ ಒಪ್ಪಿಗೆ ಪಡೆದುಕೊಂಡಿದೆ. ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನು ಕೂಲಂಕಷವಾಗಿ ಚರ್ಚಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಮಾತ್ರವಲ್ಲ ರಾಜ್ಯ ಸರಕಾರ ಮಂಡಿಸುವ ಸಾರ್ವಜನಿಕ ಮಹತ್ವವುಳ್ಳ ಪ್ರತಿಯೊಂದು ಮಸೂದೆಯೂ ಎಲ್ಲ ಆಯಾಮಗಳಲ್ಲಿ ಚರ್ಚಿಸಿಯೇ ಕಾಯ್ದೆಯ ರೂಪ ಪಡೆದುಕೊಳ್ಳಬೇಕು. ಆದರೆ ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವಾಗ, ವಿಶೇಷವಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಹಲವಾರು ಮಸೂದೆಗಳನ್ನು ಚರ್ಚೆಯಿಲ್ಲದೆ ಅನುಮೋದನೆ ಪಡೆದುಕೊಂಡ ನಿದರ್ಶನಗಳಿವೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ವ್ಯಾಪಕವಾಗಿ ಮತಾಂತರ ನಡೆದಿದ್ದು ಹನ್ನೆರಡನೆಯ ಶತಮಾನದಲ್ಲಿ. ಅದು ಬಿಜ್ಜಳನ ಆಸ್ಥಾನದ ಮಹಾಮಂತ್ರಿ ಬಸವಣ್ಣನವರ ನೇತೃತ್ವದಲ್ಲಿ. ಬಸವಣ್ಣನವರ ಮೂಲ ಆಶಯಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಬಸವರಾಜ ಬೊಮ್ಮಾಯಿ ಸರಕಾರ ಮತಾಂತರ ನಿಷೇಧ ಮಸೂದೆ ಮಂಡಿಸಿ ಉಭಯ ಸದನಗಳ ಒಪ್ಪಿಗೆ ಪಡೆದು ಕಾಯ್ದೆ ರೂಪಿಸಿತು. ದನದ ಮಾಂಸವನ್ನು ಭಾರೀ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತು ಮಾಡಿ ಹಣ ಮಾಡುತ್ತಿರುವವರು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಭಕ್ತರು. ಆದರೆ ಬಡ ಮುಸ್ಲಿಮರನ್ನು ಗುರಿಯಾಗಿಸಿ ಗೋ ಹತ್ಯೆ ನಿಷೇಧ ಕಾಯ್ದೆ ರೂಪಿಸಿದರು. ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿರುವಾಗ ರಾಜ್ಯದ ಅಭಿವೃದ್ಧಿ ಮರೆತು ದ್ವೇಷ ಮತ್ತು ಮತೀಯ ರಾಜಕಾರಣವನ್ನೇ ಮಾಡಿದರು.

ಅಷ್ಟು ಮಾತ್ರವಲ್ಲ, ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರು ಬಹಿರಂಗವಾಗಿಯೇ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟರು: ‘‘ಇದು ಚುನಾವಣಾ ಸಮಯ. ಯಾರೂ ಅಭಿವೃದ್ಧಿ ಕುರಿತು ಮಾತನಾಡಬೇಡಿ. ಮತೀಯ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಬೇಕು’’ ಎಂದು. ಹಿಜಾಬ್, ಹಲಾಲ್, ಜಟ್ಕಾ, ಟಿಪ್ಪು ಮತ್ತು ಉರಿಗೌಡ-ನಂಜೇಗೌಡ ವಿಷಯವನ್ನು ಮುನ್ನೆಲೆಗೆ ತಂದು ವ್ಯಾಪಕವಾಗಿ ಚರ್ಚೆ ನಡೆಸಿದರು. ಬಿಜೆಪಿಯ ದ್ವೇಷ ಬಿತ್ತುವ, ಮತೀಯ ಗಲಭೆ ಸೃಷ್ಟಿಸುವ, ಕೋಮುವಾದಿ ವಿಚಾರಧಾರೆಗಳನ್ನು ಕರ್ನಾಟಕದ ಪ್ರಜ್ಞಾವಂತ ಮತದಾರ 2023ರ ವಿಧಾನಸಭಾ ಚುನಾವಣೆಯಲ್ಲಿ ಮುಲಾಜಿಲ್ಲದೆ ತಿರಸ್ಕರಿಸಿದರು. ಬಿಜೆಪಿ ಆ ಚುನಾವಣೆಯನ್ನು ಮತೀಯ ವಿಚಾರಧಾರೆಗಳನ್ನು ಮುನ್ನೆಲೆಗೆ ತಂದು ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣ ಮಾಡಿ ಗೆಲುವು ಸಾಧಿಸುವ ಇರಾದೆ ಹೊಂದಿತ್ತು.

ಬಿಜೆಪಿ ಕರ್ನಾಟಕದಲ್ಲಿ ಮತೀಯ ವಿಚಾರಧಾರೆಗಳನ್ನು ಪ್ರಮುಖ ವಿಷಯಗಳನ್ನಾಗಿ ಸ್ವೀಕರಿಸಿ ಚುನಾವಣೆ ಎದುರಿಸಿದಾಗ ಹೀನಾಯ ಸೋತಿದೆ. 2008 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ, ಅಭಿವೃದ್ಧಿಯ ಕನಸುಗಳನ್ನು ಬಿತ್ತಿದ್ದರಿಂದ ಅಲ್ಪ ಪ್ರಮಾಣದ ಮುನ್ನಡೆ ಸಾಧಿಸಿತ್ತು. ಯಡಿಯೂರಪ್ಪ ತಮ್ಮ ಸುದೀರ್ಘ ಹೋರಾಟದ ರಾಜಕಾರಣದಲ್ಲಿ ರೈತ ನಾಯಕ ಎಂದೇ ಬಿಂಬಿಸಿಕೊಳ್ಳಲು ಯತ್ನಿಸಿದ್ದರು. ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಮಾದರಿ ರಾಜ್ಯವನ್ನಾಗಿ ರೂಪಿಸುವುದಾಗಿ ಹೇಳುತ್ತಿದ್ದರು. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಹೆಗಲ ಮೇಲೆ ಹಸಿರು ಟವೆಲ್ ಧರಿಸಿದ್ದರು. ಸಾಧ್ಯವಾದಷ್ಟು ರೈತ ನಾಯಕ ಎಂದು ಬಿಂಬಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. 2013ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಪ್ರಹ್ಲಾದ್ ಜೋಶಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. ದ್ವೇಷ, ಪ್ರತೀಕಾರ, ಮತೀಯ ವಿಚಾರಧಾರೆಗಳನ್ನು ಮುಂದೆ ಮಾಡಿ ಚುನಾವಣೆ ಎದುರಿಸಿದರು. ಕರ್ನಾಟಕದ ಪ್ರಜ್ಞಾವಂತ ಮತದಾರ ಆ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಶಾಸಕರ ಬಲ ನೀಡುವ ಮೂಲಕ ಹೀನಾಯವಾಗಿ ಸೋಲಿಸಿದ್ದರು. ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡಾ 40 ಮತ ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿಯಂತೂ ಬಿಜೆಪಿ ದ್ವೇಷ ಮತ್ತು ಮತೀಯ ರಾಜಕಾರಣದ ಪರಾಕಾಷ್ಠೆ ತಲುಪಿತ್ತು. ಕೋಮು ಗಲಭೆಗಳನ್ನು ಸೃಷ್ಟಿಸಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಕನಸು ಕಂಡಿತ್ತು.

ನೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಆರೆಸ್ಸೆಸ್ ಜನರಿಗೆ ಹತ್ತಿರವಾಗಿದ್ದು ಸಂಘಟನಾ ಕೌಶಲ್ಯದಿಂದ. ಸಂಘದ ಪ್ರಚಾರಕರ ಸರಳತೆ ಮತ್ತು ಆಪ್ತ ಒಡನಾಟದಿಂದ. ಆದರೆ ಆರೆಸ್ಸೆಸ್ ಮನು ಪ್ರಣೀತ ಹಿಂದೂ ಧರ್ಮವನ್ನು ಪ್ರತಿಪಾದಿಸುತ್ತಾ ಬಂದಿದೆ. ದ್ವೇಷ, ಪ್ರತೀಕಾರ ಮತ್ತು ಸಾಮಾಜಿಕ ಸಾಮರಸ್ಯ ಹಾಳು ಮಾಡಿ ಮತೀಯ ಗಲಭೆ ಸೃಷ್ಟಿಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದೆ. ಧರ್ಮದ ಆಧಾರದಲ್ಲಿ ಮತದಾರರನ್ನು ವಿಭಜಿಸುವ ಮುಖ್ಯ ಉದ್ದೇಶ ಬಿಜೆಪಿಯದ್ದು. ಹಾಗಾಗಿ ಅದು ದ್ವೇಷ ಭಾಷಣಗಳನ್ನು ಹೆಚ್ಚು ಅವಲಂಬಿಸಿದೆ. ಬಿಜೆಪಿಗೆ ಭಾರತದ ಸಂವಿಧಾನದ ಮೇಲೆ ಕಿಂಚಿತ್ ನಂಬಿಕೆಯಿಲ್ಲ.

ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕರ್ನಾಟಕ ಸರಕಾರ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ರೂಪಿಸುತ್ತಿದೆ. ಉಭಯ ಸದನಗಳಲ್ಲಿ ಮಂಡಿಸಲು ಸಿದ್ಧಪಡಿಸಿರುವ ವಿಧೇಯಕವನ್ನು ಚರ್ಚೆಗೆ ಒಳಪಡಿಸಿ ಹೆಚ್ಚು ವೈಜ್ಞಾನಿಕವಾಗಿ ರೂಪಿಸಲು ಬಿಜೆಪಿಯವರು ಒತ್ತಾಯಿಸಬೇಕಿತ್ತು. ವಿಧೇಯಕದ ಸಾಧಕ ಬಾಧಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿತ್ತು. ಅದು ಬಿಟ್ಟು ಬಿಜೆಪಿಯವರು ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯನ್ನೇ ಸಾರಾಸಗಟಾಗಿ ವಿರೋಧಿಸುತ್ತಿರುವುದು ಜನತಂತ್ರವನ್ನು ಅಣಕಿಸಿದಂತೆ.

ಪ್ರಜಾಪ್ರಭುತ್ವದ ಮೂಲ ಆಶಯವೇ ಸ್ವಾತಂತ್ರ್ಯ, ಸಮಾನತೆ, ಪ್ರೀತಿ-ವಿಶ್ವಾಸ, ಸಾಮರಸ್ಯ ನೆಲೆಸುವಂತೆ ಪ್ರಯತ್ನಿಸುವುದು. ಆದರೆ ಬಿಜೆಪಿ ಭಂಡತನಕ್ಕೆ ಬಿದ್ದು ಪ್ರೀತಿ-ವಿಶ್ವಾಸ, ಸಾಮರಸ್ಯದ ವಿರೋಧಿಯಂತೆ ನಡೆದುಕೊಳ್ಳುತ್ತಿದೆ. ಬಿಜೆಪಿಯ ಶಾಸಕರು ಸಂವಿಧಾನ ಪಾಲನೆಯ ಪ್ರಮಾಣ ವಚನ ಸ್ವೀಕರಿಸಿದವರು. ಭಾರತದ ಸಂವಿಧಾನ ಕೂಡಿ ಬಾಳುವುದರ ಮಹತ್ವವನ್ನೇ ಮತ್ತೆ ಮತ್ತೆ ಒತ್ತಿ ಹೇಳಿದೆ. ಭಾರತದ ಸಂವಿಧಾನ ಮಾತ್ರವಲ್ಲ, ಹಿಂದೂ ಧರ್ಮವು ‘ಸರ್ವೇ ಜನ ಸುಖಿನೋ ಭವ’ ಆದರ್ಶದಲ್ಲಿ ನಂಬಿಕೆ ಇರಿಸಿದೆ. ‘ವಸುಧೈವ ಕುಟುಂಬಕಂ’ ತತ್ವವನ್ನು ಸಾರುತ್ತದೆ. ಹಿಂದೂ ಧರ್ಮವನ್ನು ಆತ್ಯಂತಿಕವಾಗಿ ಗೌರವಿಸುತ್ತಿದ್ದ ಮತ್ತು ತಾವು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದ ಮಹಾತ್ಮಾ ಗಾಂಧಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರು ಪ್ರೀತಿ ವಿಶ್ವಾಸ, ಸಾಮರಸ್ಯ ಪ್ರತಿಪಾದಿಸುವ ನೈಜ ಹಿಂದೂ ಧರ್ಮದಲ್ಲಿ ನಂಬಿಕೆ ಇರಿಸಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಅವರು ಕರುಣೆ, ಪ್ರೀತಿ, ಮಾನವೀಯತೆ, ಸಾಮರಸ್ಯವೇ ನಿಜವಾದ ಧರ್ಮದ ತಿರುಳು ಎಂದು ನಂಬಿಕೊಂಡಿದ್ದರು.

ಬಿಜೆಪಿ ಶಾಸಕರು ವಿರೋಧಿಸುತ್ತಿರುವ ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯಲ್ಲಿ ‘ಪ್ರೀತಿ-ವಿಶ್ವಾಸ, ಸಾಮರಸ್ಯ’ದ ಮಾತುಗಳೇ ಇವೆ. ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ, ಪ್ರಚಾರವನ್ನು, ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ಅಸಾಮರಸ್ಯ ದ್ವೇಷವನ್ನು ಹುಟ್ಟಿಸುವ ಅಪರಾಧಗಳನ್ನು ಈ ಕಾಯ್ದೆ ಪ್ರತಿಬಂಧಿಸುತ್ತದೆ. ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ ಮುಂತಾದ ವಿಷಯಗಳ ಅವಹೇಳನ, ನಿಂದನೆಯನ್ನು ಈ ಕಾಯ್ದೆ ಪ್ರತಿಬಂಧಿಸುತ್ತದೆ.

ಹಾಗೆ ನೋಡಿದರೆ ಈ ಕಾಯ್ದೆ ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ. ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸುತ್ತಿದ್ದರು. ಕಲ್ಲಡ್ಕ ಪ್ರಭಾಕರ್ ಭಟ್, ಪ್ರಮೋದ್ ಮುತಾಲಿಕ್, ಸಿ.ಟಿ. ರವಿ ಮತ್ತು ಕರಾವಳಿ ಭಾಗದ ಬಹುತೇಕ ಬಿಜೆಪಿ ಶಾಸಕರು ದ್ವೇಷ ಭಾಷಣಕ್ಕೆ ಹೆಸರಾಗಿದ್ದಾರೆ. ಅಂಥವರನ್ನು ನಿಯಂತ್ರಿಸಲು ಕಾಯ್ದೆ ರೂಪಿಸುವುದು ತಪ್ಪೇ? ಕಾಂಗ್ರೆಸ್, ಜೆಡಿಎಸ್ ಅಥವಾ ಬೇರೆ ಯಾವುದೇ ಸಂಘಟನೆಯ ಮುಖಂಡರು ದ್ವೇಷ ಭಾಷಣ ಮಾಡಿದರೂ ಅದು ಶಿಕ್ಷಾರ್ಹ ಅಪರಾಧ ಎನಿಸಿಕೊಳ್ಳುತ್ತದೆ.

ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಬಿಜೆಪಿ ಮತ್ತು ಮೋದಿ ಮಡಿಲ ಮೀಡಿಯಾ ಮಂದಿಗೆ ಕಂಗೆಡಿಸಿದಂತಿದೆ. ದ್ವೇಷ ಭಾಷಣದ ಚಟ ಇರುವುದು ಮೋದಿ ಮಡಿಲ ಮಾಧ್ಯಮಗಳಿಗೆ ಮಾತ್ರ.

ಕೋವಿಡ್ ಕಾಲಾವಧಿಯಲ್ಲಿ ಕನ್ನಡದ ಕೆಲವು ಮಾಧ್ಯಮಗಳು ಕೊರೋನ ಹಬ್ಬಲು ತಬ್ಲಿಗಿ ಸಂಸ್ಥೆ ಕಾರಣ ಎಂಬಂತೆ ಸುದ್ದಿ ಪ್ರಸಾರ ಮಾಡಿದ್ದವು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟೀಕರಣ ನೀಡಬೇಕಾಯಿತು. ಭಾರತೀಯ ಜನತಾ ಪಕ್ಷ ಮತ್ತು ಮೋದಿ ಮಡಿಲ ಮಾಧ್ಯಮಗಳು ದ್ವೇಷ ಬಿತ್ತುವ ಕೆಲಸದಲ್ಲಿ ತೃಪ್ತಿ ಪಟ್ಟುಕೊಳ್ಳುತ್ತಿವೆ. ಈ ನೀಚ ಪ್ರವೃತ್ತಿಗೆ ಕಡಿವಾಣ ಹಾಕಲು ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಅಗತ್ಯವಾಗಿತ್ತು.

ಭಾರತೀಯ ಜನತಾ ಪಕ್ಷಕ್ಕೆ ದ್ವೇಷ, ಪ್ರತೀಕಾರದ ಮೇಲೆ ಹೆಚ್ಚು ಆಸಕ್ತಿ ಇದೆ ಎನ್ನುವುದಕ್ಕೆ ನೂರಾರು ನಿದರ್ಶನಗಳು ಕೊಡಬಹುದು. ಆದರೆ ಬಿಜೆಪಿ ದ್ವೇಷ ರಾಜಕಾರಣದಿಂದ ಏನನ್ನೂ ಸಾಧಿಸಲಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನಸಂಘವು ಸೇರಿದಂತೆ ಜನತಾ ಪರಿವಾರದ ಎಲ್ಲರೂ ಪ್ರೀತಿ ವಿಶ್ವಾಸ, ಸಾಮರಸ್ಯಕ್ಕಾಗಿ ಹಂಬಲಿಸಿದ್ದರು. ಆ ಕಾರಣಕ್ಕೆ ಜನಸಂಘ ಜನತಾ ಪಕ್ಷದ ಭಾಗವಾಗಿತ್ತು. ಆದರೆ ಮೂಲತಃ ದ್ವೇಷ, ಪ್ರತೀಕಾರದ ಮೇಲೆ ವಿಶ್ವಾಸ ಹೊಂದಿರುವ ಬಿಜೆಪಿ ಹೆಚ್ಚು ಕಾಲ ಜನತಾ ಪರಿವಾರದ ಭಾಗವಾಗಿ ಉಳಿಯಲಿಲ್ಲ. ಭಾರತೀಯ ಜನತಾ ಪಕ್ಷ ದ್ವೇಷ ಮತ್ತು ಸಾಮರಸ್ಯ ಹಾಳು ಮಾಡುವ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಿದ್ದರೆ ಎಂದೋ ಜನತೆಯ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗುತ್ತಿತ್ತು. ಸಂವಿಧಾನ ಬಾಹಿರವಾಗಿ ಬಾಬರಿ ಮಸೀದಿ ಧ್ವಂಸ ಮಾಡಿದ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ದೇಶದ ತುಂಬಾ ಕೋಮು ಗಲಭೆ ಸೃಷ್ಟಿಸಿದವು. ಅಪಾರ ಪ್ರಮಾಣದ ಪ್ರಾಣ ಹಾನಿಗೆ ಕಾರಣವಾಗಿದ್ದವು. ಆದರೆ ಕೋಮು ಗಲಭೆ ಸೃಷ್ಟಿಸಿ ಬಿಜೆಪಿ ಇನ್ನೂರು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. 2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಗೆಲುವು ಸಾಧಿಸಲು ಕಾರಣವಾಗಿದ್ದು ಅಭಿವೃದ್ಧಿ ರಾಜಕಾರಣದ ಮಾತುಗಳಿಂದ. ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಸ್ಲೋಗನ್ ಬಿಜೆಪಿ ಬಗೆಗಿನ ಗ್ರಹಿಕೆ ಬದಲಾಯಿಸಿತು. ಆದರೆ ಆಳದಲ್ಲಿ ಮೋದಿ ನೇತೃತ್ವದ ಬಿಜೆಪಿ ಕೂಡಾ ದ್ವೇಷ ಪ್ರತೀಕಾರದ ಆಶಯವನ್ನೇ ಹೊತ್ತು ಅಭಿವೃದ್ಧಿಯ ಮುಖವಾಡ ಧರಿಸಿತ್ತು.

ಹಿಂದೂ ಧರ್ಮವನ್ನು ವಿಶಾಲ ಅರ್ಥದಲ್ಲಿ ಜಗತ್ತಿಗೆ ಪರಿಚಯಿಸಿದ ಮಹಾತ್ಮಾ ಗಾಂಧಿ, ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಅವರ ಬಗ್ಗೆಯೂ ಬಿಜೆಪಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ ಎಂಬುದು ದಿನೇ ದಿನೇ ಅನಾವರಣಗೊಳ್ಳುತ್ತಾ ಹೋಯಿತು. ಮಹಾತ್ಮಾ ಗಾಂಧಿ ಗುಜರಾತ್ ನೆಲದ ಹೆಮ್ಮೆಯ ಪುತ್ರ. ಇಡೀ ಪ್ರಪಂಚವೇ ಗಾಂಧೀಜಿ ಅವರ ತತ್ವ ಆದರ್ಶಗಳಿಂದ ಪ್ರಭಾವಿತವಾಗಿತ್ತು. ಆದರೆ ಗುಜರಾತ್ ಮೂಲದ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಮೇಲೆಯೂ ಮಹಾತ್ಮಾ ಗಾಂಧೀಜಿ ನಿಂದನೆಗೆ ಕಡಿವಾಣ ಹಾಕಲಿಲ್ಲ. ಮಹಾತ್ಮಾ ಗಾಂಧೀಜಿಯವರನ್ನು ಸಂಘ ಪರಿವಾರದ ಅಂಗ ಸಂಸ್ಥೆಗಳು ಅತ್ಯಂತ ಕೆಟ್ಟ ಪದಗಳಲ್ಲಿ ಟೀಕಿಸುತ್ತಿದ್ದವು.

ವಿಶೇಷವಾಗಿ ಕೆಲವು ಯೂಟ್ಯೂಬ್ ಚಾನೆಲ್‌ಗಳು ಮಹಾತ್ಮಾ ಗಾಂಧೀಜಿಯವರ ಅವಹೇಳನಕ್ಕೆ ಮೀಸಲಾಗಿದ್ದವು. ಅವುಗಳ ವಿರುದ್ಧ ಕ್ರಮ ಜರುಗಿಸುವುದು ಒತ್ತಟ್ಟಿಗಿರಲಿ ಮೋದಿ ಸರಕಾರ ನಿಯಂತ್ರಿಸಲು ಯತ್ನಿಸಲಿಲ್ಲ. ಕನ್ನಡದ ‘ಸಂವಾದ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಸೌಜನ್ಯಾ ಕೌಶಿಕ್ ಎನ್ನುವವರು ಮಹಾತ್ಮಾ ಗಾಂಧೀಜಿಯವರನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸಿ ವೀಡಿಯೊ ಮಾಡಿದ್ದರು.

ಮಹಾತ್ಮಾ ಗಾಂಧೀಜಿಯವರ ಬಗ್ಗೆ ಮೋದಿಯವರು ತೋರಿಕೆಯ ಪ್ರೀತಿ ಇಟ್ಟುಕೊಂಡಿದ್ದರು. ಅದು ಈಗ ಬಟಾ ಬಯಲಾಗಿದೆ. 2005ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ ಆರಂಭಿಸಲಾಗಿತ್ತು. ಈಗ ಮೋದಿ ಸರಕಾರ ಯೋಜನೆಯ ಶೀರ್ಷಿಕೆಯಲ್ಲಿ ಸೇರಿಕೊಂಡಿದ್ದ ಮಹಾತ್ಮಾ ಗಾಂಧಿ ಹೆಸರನ್ನೇ ಕಿತ್ತು ಹಾಕಿದ್ದಾರೆ. ಗೋಡ್ಸೆ ಹೆಸರು ಭಾಸವಾಗುವಂತೆ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿಯಾಗಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಪ್ರಚಾರ ಮಾಡಿಕೊಂಡಿತ್ತು. ಅಷ್ಟು ಮಾತ್ರವಲ್ಲ ಮುಸ್ಲಿಮ್ ವಿರೋಧಿ ನಿಲುವನ್ನು ಬಹಿರಂಗವಾಗಿ ಪ್ರಕಟಿಸಿತ್ತು. ಬಹು ಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿಗಳ ಈ ದೇಶದಲ್ಲಿ ಮೋದಿ ಮತ್ತು ಬಿಜೆಪಿಯವರ ದ್ವೇಷ ರಾಜಕಾರಣ ಯಶಸ್ಸು ಆಗಲಿಲ್ಲ. ಭಾರತದ ಮತದಾರ ಮೋದಿಯವರ ‘ಚಾರ್ ಸೌ ಪಾರ್’ ಸ್ಲೋಗನ್‌ನ್ನು ಪುರಸ್ಕರಿಸಲಿಲ್ಲ. ಅಷ್ಟು ಮಾತ್ರವಲ್ಲ ರಾಮಮಂದಿರ ನಿರ್ಮಾಣ ಕಾರ್ಯ ಮಾತ್ರ ವೋಟು ತಂದು ಕೊಡಲಾರದು ಎಂಬ ಸಂದೇಶ ರವಾನಿಸಿದ್ದರು.

ಈಗಲಾದರೂ ಕರ್ನಾಟಕದ ಬಿಜೆಪಿ ನಾಯಕರು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಗೌರವಿಸಿ ದ್ವೇಷ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ದ್ವೇಷ ಭಾಷಣ, ಪ್ರತೀಕಾರದ ರಾಜಕಾರಣ ನಡೆಯುವುದಿಲ್ಲ ಎಂಬುದಕ್ಕೆ ಸಾವಿರ ನಿದರ್ಶನಗಳಿವೆ. ಬಿಜೆಪಿ ಒಪ್ಪಲಿ ಬಿಡಲಿ. ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರಕಾರ ಗಂಭೀರ ಪ್ರಯತ್ನ ಮಾಡಬೇಕು. ಕಾಯ್ದೆ ರೂಪಿಸುವುದು ಎಷ್ಟು ಮುಖ್ಯವೋ ಅದನ್ನು ಅನುಷ್ಠಾನದಲ್ಲಿ ತರುವುದು ಸರಕಾರದ ಮೊದಲ ಆದ್ಯತೆಯಾಗಬೇಕು. ಕರ್ನಾಟಕದಲ್ಲಿ ಪ್ರೀತಿ ವಿಶ್ವಾಸ, ಸಾಮರಸ್ಯ ಮತ್ತು ಸಹಬಾಳ್ವೆಯ ರಾಜಕಾರಣ ಮಾತ್ರ ಯಶಸ್ವಿಯಾಗುತ್ತದೆ. ಅಭಿವೃದ್ಧಿ ರಾಜಕಾರಣದಿಂದ ವಿಮುಖವಾಗಿ ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಈ ನಾಡಿನ ಮತದಾರರೇ ಪಾಠ ಕಲಿಸುತ್ತಾರೆ. ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಕಾಲದ ಅಗತ್ಯವಾಗಿತ್ತು. ಕರ್ನಾಟಕ ಸರಕಾರ ನಿರ್ಧಾರ ಕೈಗೊಂಡಿದೆ.


share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X