ಆರೋಗ್ಯ ಇಲಾಖೆಯ ಆಪರೇಷನ್ ಹೋಟೆಲ್

ಸಸ್ಯಾಹಾರ, ಮಾಂಸಾಹಾರ, ಕಲಬೆರಕೆ ಅಡುಗೆ ಎಣ್ಣೆ ಅಷ್ಟೇ ಯಾಕೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟವಾಗುವ ಕುಡಿಯುವ ಬಾಟಲ್ ನೀರು ಕೂಡಾ ಕಲುಷಿತವಾಗಿವೆ. ಕಾಳ ದಂಧೆ ಎಲ್ಲಾ ಕಡೆ ವ್ಯಾಪಕವಾಗಿ ಆವರಿಸಿದೆ. ಮಾರಾಟ ಮಾಡುವವರಿಗೆ ತುಸು ಹೆಚ್ಚು ಕಮಿಷನ್ ನೀಡಿದರೆ ಸಾಕು ಗುಣಮಟ್ಟವಿಲ್ಲದ ಎಲ್ಲವನ್ನು ಮಾರಾಟ ಮಾಡುತ್ತಾರೆ. ಗ್ರಾಹಕನ ಧಾವಂತದ ಬದುಕು ಕಣ್ಣು ಮುಚ್ಚಿ ಊಟ ಮಾಡುವ, ಕಳಪೆ ಗುಣಮಟ್ಟದ ನೀರು ಕುಡಿಯುವ ಅನಿವಾರ್ಯತೆಗೆ ದೂಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ. ಖಾದರ್ ಅವರಿಗೆ ಮೊದಲು ಅಭಿನಂದನೆಗಳನ್ನು ಸಲ್ಲಿಸಬೇಕು. ಆರೋಗ್ಯ ಇಲಾಖೆಯ ಮಂತ್ರಿಯಾಗಿ ಈ ಹಿಂದೆಯೂ ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಮತ್ತೆ ಈಗ ಜನಸಾಮಾನ್ಯರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೋಟೆಲ್‌ಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ವಿಶೇಷವಾಗಿ ಮಂಗಳೂರು ಮತ್ತು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳು ಮತ್ತು ಔಟ್‌ಲೆಟ್‌ಗಳ ಆಹಾರದ ಗುಣಮಟ್ಟ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಕೆಎಫ್‌ಸಿ, ಸೇರಿದಂತೆ ಯುವ ಸಮುದಾಯ ಮತ್ತು ಶ್ರೀಮಂತ ಗ್ರಾಹಕರನ್ನು ಆಕರ್ಷಿಸುವ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ಹೋಟೆಲ್‌ಗಳನ್ನು ಈ ಹಿಂದೆ ಯಾರೂ ಕಾಟಾಚಾರಕ್ಕೂ ಮುಟ್ಟಿರಲಿಲ್ಲ.
ಈಗ ದಾಳಿಗೊಳಗಾದ ಬಹುಪಾಲು ಹೋಟೆಲ್‌ಗಳ ಅಡುಗೆಮನೆ ಪರಿಶೀಲಿಸಿದಾಗ ಕೊಳೆತ ಮಾಂಸ ಬಳಸಿದ್ದು, ಶುಚಿತ್ವ ಇರಲಾರದ್ದು ಕಂಡು ಬಂದಿದೆ. ಸಚಿವರು ಬಹಿರಂಗವಾಗಿ ಹೇಳಿದಂತೆ ಮುಂಬೈ ಸೇರಿದಂತೆ ಹೊರರಾಜ್ಯದಿಂದ ಮಾಂಸ ತರಿಸಿಕೊಳ್ಳುವ ಹೋಟೆಲ್ ಮಾಲಕರು ಬಹುದೊಡ್ಡ ಅವ್ಯವಹಾರದ ಭಾಗವಾಗಿದ್ದಾರೆ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಪತ್ರ ಬರೆದು ಈ ಮೋಸದ ಜಾಲವನ್ನು ಭೇದಿಸಲಾಗುವುದು ಎಂದು ಹೇಳಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳ ಮತ್ತು ಔಟ್ ಲೆಟ್‌ಗಳು ಹಳೆಯ ಮತ್ತು ಕೊಳೆತ ಮಾಂಸವನ್ನು ಮಾರಾಟ ಮಾಡುತ್ತಿದ್ದರು ಎಂಬುದಕ್ಕೆ ಲ್ಯಾಬ್ ಪರೀಕ್ಷೆಯ ಅಗತ್ಯವೇ ಇಲ್ಲ. ಮೇಲ್ನೋಟಕ್ಕೆ ಅವರ ಕಾಳದಂಧೆ ಗೊತ್ತಾಗುತ್ತದೆ. ವಿದ್ಯುತ್ ಒಲೆ ಮತ್ತು ಫ್ರಿಡ್ಜ್ ಇರುವ ಬಹುತೇಕ ಶ್ರೀಮಂತ ಹೋಟೆಲ್‌ಗಳು ಸಾಕಷ್ಟು ಪ್ರಚಾರ ಮಾಡಿ ಗ್ರಾಹಕರನ್ನು ಸೆಳೆಯುತ್ತವೆ. ಅಲ್ಲಿಯ ಟೇಸ್ಟ್ ಗೆ ಯುವ ಸಮುದಾಯ ಮಾರು ಹೋಗಿ ಒಂದೋ ಅಲ್ಲೇ ತಿನ್ನುತ್ತಾರೆ ಇಲ್ಲ ಮನೆಗೆ ಪಾರ್ಸೆಲ್ ತರಿಸಿಕೊಳ್ಳುತ್ತಾರೆ. ಅದು ಬಹುಕೋಟಿ ಹಣದ ವ್ಯವಹಾರ. ಸಾಮಾನ್ಯವಾಗಿ ಬಹುರಾಷ್ಟ್ರೀಯ ಕಂಪೆನಿಗಳನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಒಂದು ವೇಳೆ ಯಾರಾದರೂ ಪ್ರಶ್ನೆ ಮಾಡಿದರೆ ಅವರ ಧ್ವನಿ ಹತ್ತಿಕ್ಕುವ ಕಲೆ ಅವರಿಗೆ ಗೊತ್ತಿರುತ್ತದೆ. ಈ ಹಿಂದೆ ರೈತ ನಾಯಕ ಎಂ.ಡಿ. ನಂಜುಂಡ ಸ್ವಾಮಿ ನೇತೃತ್ವದಲ್ಲಿ ಕೆಂಟಕಿ ಚಿಕನ್ ಬಹುರಾಷ್ಟ್ರೀಯ ಕಂಪೆನಿ ವಿರುದ್ಧ ಬೃಹತ್ ಜನಾಂದೋಲನ ರೂಪಿಸಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾತ್ರವಲ್ಲ ಅವರ ಸಂಪರ್ಕಕ್ಕೆ ಬರುವ ಬಹುಪಾಲು ಅಧಿಕಾರಿಗಳಿಗೆ ಅಲ್ಲಿಯ ಅವ್ಯವಹಾರ ಅಕ್ರಮಗಳು ತಿಳಿದಿರುತ್ತವೆ. ಈಗ ಆರೋಗ್ಯ ಸಚಿವರೇ ವಿಶೇಷ ಕಾಳಜಿ ವಹಿಸಿದ್ದರಿಂದ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.
ಜನತೆಯ ಆರೋಗ್ಯ ಕೆಡಲು ಈ ಕೆಟ್ಟ ಆಹಾರ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೇವಲ ಹೋಟೆಲ್‌ಗಳಲ್ಲಿ ಮಾತ್ರ ಕೆಟ್ಟ ಆಹಾರ ಸಿಗುತ್ತದೆ ಎಂಬುದಷ್ಟೇ ಸತ್ಯವಲ್ಲ. ಕಳಪೆ ಮತ್ತು ಕಲಬೆರಕೆಯ ಅಡುಗೆ ಎಣ್ಣೆ ಎಲ್ಲೆಡೆ ರಾಜಾರೋಷವಾಗಿ ಮಾರಾಟ ಮಾಡುತ್ತಿರುವುದರಿಂದ ಮನೆಯಲ್ಲಿ ತಯಾರಾಗುವ ಊಟವು ಆರೋಗ್ಯಕ್ಕೆ ಹಾನಿಯನುಂಟು ಮಾಡುತ್ತದೆ. ಬಹಳ ದಿನಗಳ ಕಾಲ ಫ್ರಿಡ್ಜ್‌ಗಳಲ್ಲಿ ಶೇಖರಿಸಿ ಇಟ್ಟಿರುವ ಮಾಂಸ, ಮೀನು ಮತ್ತು ಇನ್ನಿತರ ಆಹಾರ ಪದಾರ್ಥಗಳು ಸಹಜವಾಗಿಯೇ ಒಂದೆರಡು ದಿನಗಳಲ್ಲಿ ಸತ್ವ ಕಳೆದುಕೊಳ್ಳುತ್ತದೆ. ಇನ್ನು ತಿಂಗಳಾನುಗಟ್ಟಲೆ ಶೀತಲೀಕರಣ ವ್ಯವಸ್ಥೆಯಲ್ಲಿ ಕಾಪಿಡುವ ಆಹಾರ ಸಾಮಗ್ರಿಗಳು ತಾಜಾ ಮತ್ತು ಆರೋಗ್ಯಪೂರ್ಣವಾಗಿ ಇರಲು ಸಾಧ್ಯವೇ ಇಲ್ಲ. ಇದು ಕೇವಲ ಸ್ಟಾರ್ ಹೋಟೆಲ್‌ಗಳ ಸಮಸ್ಯೆಯಲ್ಲ, ಇಡೀ ಹೋಟೆಲ್ ಉದ್ಯಮವೇ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಆಹಾರವನ್ನೇ ಅತ್ಯಂತ ದುಬಾರಿ ಬೆಲೆಗೆ ಉಣ ಬಡಿಸುತ್ತಿವೆ. ಸಸ್ಯಾಹಾರಿ ಹೋಟೆಲ್‌ಗಳೂ ಈ ಮೋಸದ ಜಾಲದ ಭಾಗವಾಗಿವೆ.
ಕಾಯಿಪಲ್ಲೆ ಮಾರುವ ರಿಲಯನ್ಸ್ ಔಟ್‌ಲೆಟ್‌ಗಳು ಹತ್ತಾರು ದಿನ ಶೀತಲೀಕರಣ ವ್ಯವಸ್ಥೆಯಲ್ಲಿ ದಾಸ್ತಾನು ಮಾಡಿದ್ದನ್ನೇ ಮಾರಾಟ ಮಾಡುತ್ತಿವೆ. ಕಾಯಿಪಲ್ಲೆ ಮತ್ತು ಹಣ್ಣು ಹಂಪಲಗಳು ಒಂದೋ ಶೀತಲೀಕರಣ ವ್ಯವಸ್ಥೆಯಲ್ಲಿ ಅಂತಃಸತ್ವ ಕಳೆದುಕೊಂಡಿದ್ದನ್ನು ಅಥವಾ ಕ್ರಿಮಿನಾಶಕ ಔಷಧಿ ಬಳಕೆಯಾಗಿದ್ದನ್ನೇ ಗ್ರಾಹಕರು ಖರೀದಿಸುವುದು.
ಸಸ್ಯಾಹಾರ, ಮಾಂಸಾಹಾರ, ಕಲಬೆರಕೆ ಅಡುಗೆ ಎಣ್ಣೆ ಅಷ್ಟೇ ಯಾಕೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟವಾಗುವ ಕುಡಿಯುವ ಬಾಟಲ್ ನೀರು ಕೂಡಾ ಕಲುಷಿತವಾಗಿವೆ. ಕಾಳ ದಂಧೆ ಎಲ್ಲಾ ಕಡೆ ವ್ಯಾಪಕವಾಗಿ ಆವರಿಸಿದೆ. ಮಾರಾಟ ಮಾಡುವವರಿಗೆ ತುಸು ಹೆಚ್ಚು ಕಮಿಷನ್ ನೀಡಿದರೆ ಸಾಕು ಗುಣಮಟ್ಟವಿಲ್ಲದ ಎಲ್ಲವನ್ನು ಮಾರಾಟ ಮಾಡುತ್ತಾರೆ. ಗ್ರಾಹಕನ ಧಾವಂತದ ಬದುಕು ಕಣ್ಣು ಮುಚ್ಚಿ ಊಟ ಮಾಡುವ, ಕಳಪೆ ಗುಣಮಟ್ಟದ ನೀರು ಕುಡಿಯುವ ಅನಿವಾರ್ಯತೆಗೆ ದೂಡಿದೆ. ವಿಶೇಷವಾಗಿ ರೈಲು ಮತ್ತು ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ಕಳಪೆ ಗುಣಮಟ್ಟದ ಬಾಟಲ್ ನೀರು ರಾಜಾರೋಷವಾಗಿ ಮಾರಾಟ ಮಾಡುತ್ತಾರೆ. ಆ ಎಲ್ಲಾ ಬ್ರಾಂಡ್‌ಗಳು ಒಂದೋ ಹೊಸದಾಗಿ ಇರುತ್ತವೆ ಇಲ್ಲಾ ಹಳೆಯ ಬ್ರಾಂಡ್‌ಗಳ ಹೆಸರನ್ನು ತುಸು ತಿರುಚಿ ಪ್ರಿಂಟ್ ಮಾಡಿದ ನೀರಿನ ಬಾಟಲ್‌ಗಳು ಮಾತ್ರ ಲಭ್ಯ ಇರುತ್ತವೆ. ಕಳಪೆ ಗುಣಮಟ್ಟದ ನೀರಿನ ಬಾಟಲ್‌ಗಳು ಹೊರತು ಪಡಿಸಿ ಬೇರೆ ಉತ್ತಮ ಗುಣಮಟ್ಟದ ನೀರಿನ ಲಭ್ಯತೆಯೇ ಇರುವುದಿಲ್ಲ. ಗ್ರಾಹಕರು ಅನಿವಾರ್ಯವಾಗಿ ಅವುಗಳನ್ನೇ ಬಳಸುತ್ತಾರೆ. ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವಾಗ ಪರಿಸ್ಥಿತಿಯ ಲಾಭವನ್ನು ಕಾಳ ದಂಧೆಕೋರರು ಮಾಡಿಕೊಳ್ಳುತ್ತಾರೆ.
ಕರ್ನಾಟಕ ಸರಕಾರ ಇತ್ತೀಚೆಗೆ ಗುಟ್ಕಾ ನಿಷೇಧ ಮಾಡುವ ನಿರ್ಧಾರ ಕೈಗೊಂಡು ತನ್ನ ಜನಪರ ಕಾಳಜಿ ಮೆರೆದಿದೆ. ದುರಂತವೆಂದರೆ ವಿವೇಚನೆ ಇಲ್ಲದ ಬಿಜೆಪಿ ಮುಖಂಡರು ಗುಟ್ಕಾ ನಿಷೇಧಕ್ಕೂ ಅಡಿಕೆ ಬೆಳೆಗಾರರಿಗೂ ಸಂಬಂಧ ಕಲ್ಪಿಸಿ ರಾಜಕೀಯ ಮಾಡಲು ಯತ್ನಿಸಿದರು. ಈ ದೇಶದ ಯುವ ಸಮುದಾಯದ ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ.
ರೋಗಗಳಿಗೆ ಅತ್ಯುತ್ತಮ ಚಿಕಿತ್ಸೆ ಕೊಡಿ ಎನ್ನುವುದಕ್ಕಿಂತ ರೋಗ ಬಾರದ ಹಾಗೆ ನೋಡಿಕೊಳ್ಳುವುದು ಅತ್ಯುತ್ತಮ ಮಾರ್ಗ. ಆದರೆ ಈ ಹಣ ಮಾಡುವ ಲಾಲಸೆ ಎಲ್ಲ ವಲಯದಲ್ಲೂ ಆವರಿಸಿ ಬಡವ-ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲ ಬಗೆಯ ಗ್ರಾಹಕರು ಈ ವಿಷ ವರ್ತುಲದಲ್ಲಿ ಸಿಲುಕಿಕೊಂಡಿದ್ದಾರೆ. ಈ ವಿಷ ವರ್ತುಲದಿಂದ ಹೊರ ಬರಲು ಸರಕಾರ ಗ್ರಾಹಕರ ಬೆನ್ನಿಗೆ ನಿಲ್ಲಬೇಕಾಗುತ್ತದೆ.
ಆಹಾರ, ಆಹಾರ ಸಾಮಗ್ರಿ ಮತ್ತು ಕುಡಿಯುವ ನೀರಿನ ಕಲಬೆರಕೆ ದಂಧೆ ಪತ್ತೆ ಹಚ್ಚಲು ವಿಶೇಷ ಪಡೆಯನ್ನು ಕಟ್ಟುವ ಅಗತ್ಯವಿದೆ. ಜನರ ಆರೋಗ್ಯವನ್ನು ಹಾಳು ಮಾಡುವ ಬಹುದೊಡ್ಡ ಮಾಫಿಯಾ ನಮ್ಮನ್ನು ಸುತ್ತುವರಿದಿರುವಾಗ ಇದರಿಂದ ತಪ್ಪಿಸಿಕೊಂಡು ಆರೋಗ್ಯಪೂರ್ಣ ಆಹಾರ ತಿಂದು ಅತ್ಯುತ್ತಮ ಗುಣಮಟ್ಟದ ನೀರು ಕುಡಿದು ನೆಮ್ಮದಿಯ ಜೀವನ ನಡೆಸುವುದು ದುಸ್ತರವಾಗಿದೆ.. ವಿಶೇಷವಾಗಿ ನಗರ ಜೀವನದಲ್ಲಿ ಆರೋಗ್ಯದಾಯಕ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವೆನಿಸಿದೆ. ಆರೋಗ್ಯ ಕೆಟ್ಟ ಮೇಲೆ ಸರಿ ಮಾಡಲು ಮತ್ತಷ್ಟು ವ್ಯವಸ್ಥೆಗಳು ನಿರ್ಮಾಣಗೊಂಡಿವೆ. ಆ ಎಲ್ಲ ವ್ಯವಸ್ಥೆಗಳು ಹಣ ಮಾಡುವ ಇರಾದೆಯನ್ನೇ ಹೊಂದಿವೆ. ಆರೋಗ್ಯಪೂರ್ಣ ಜೀವನದತ್ತ ಮುನ್ನಡೆಸುವ ಒಂದೇ ಒಂದು ಪ್ರಾಮಾಣಿಕ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಅಲೋಪತಿ ವ್ಯವಸ್ಥೆ ಮತ್ತು ಔಷಧಿ ಕಂಪೆನಿಗಳ ಮಾರಾಟ ಜಾಲ ಜನತೆಯ ಆರೋಗ್ಯವನ್ನು ಹಾಳು ಮಾಡುತ್ತಿದೆ ಎಂದು ಪರ್ಯಾಯ ಹಾದಿಯಲ್ಲಿ ಹೋದರೆ ಅಲ್ಲೂ ಮೋಸದ ಜಾಲವೇ ಇದೆ. ಆಯುರ್ವೇದ ಈ ಹೊತ್ತು ಸಾವಿರಾರು ಕೋಟಿ ರೂ. ವಹಿವಾಟು ಮಾಡುವ ಬಹುದೊಡ್ಡ ಮೋಸದ ಜಾಲವಾಗಿ ಪರಿವರ್ತನೆಗೊಂಡಿದೆ. ಅಡ್ಡ ಪರಿಣಾಮ ಇಲ್ಲ ಎಂದು ಹೇಳುತ್ತಲೇ ಕೋಟಿ ಕೋಟಿ ಮೊತ್ತದ ಆಯುರ್ವೇದ ಔಷಧಿ ಮಾರುವ ಮೋಸದ ಜಾಲಕ್ಕೆ ಅಮಾಯಕ ಜನತೆ ಬಲಿಯಾಗುತ್ತಾರೆ. ಯಾಕೆಂದರೆ, ಆಯುರ್ವೇದ ಔಷಧಿಗಳಲ್ಲೂ ಅನಗತ್ಯವಾದುದು ಬಹಳಷ್ಟಿದೆ. ಬಾಬಾ ರಾಮದೇವ್ ಔಷಧಿ ಉತ್ಪನ್ನಗಳು ಮರುಳು ಮಾಡುವ ಜಾಹೀರಾತುಗಳನ್ನೇ ಅವಲಂಬಿಸಿವೆ. ಗುಣಮಟ್ಟ ಒಂದೋ ಪ್ರಯೋಗದಲ್ಲಿ ಇಲ್ಲಾ ಅದನ್ನು ಬಳಸುವ ವ್ಯಕ್ತಿಯಲ್ಲಿ ಸಾಬೀತಾಗಬೇಕು. ಯಾವ ಸರಕಾರಿ ಪ್ರಯೋಗಾಲಯವು ಆಯುರ್ವೇದ ಮತ್ತು ಬಾಬಾ ರಾಮದೇವ್ ಉತ್ಪನ್ನಗಳನ್ನು ಪರೀಕ್ಷಿಸಿ ಸತ್ಯವಾದ ರಿಪೋರ್ಟ್ ಕೊಡುವುದಿಲ್ಲ. ಹಾಗೊಂದು ವೇಳೆ ಸತ್ಯ ಹೊರಹಾಕಿದರೆ ದೇಶದ್ರೋಹಿ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ.
ಕಳಪೆ ಗುಣಮಟ್ಟದ ಆಹಾರವನ್ನು ಸಸ್ಯಾಹಾರಿ ಹೋಟೆಲ್‌ಗಳಲ್ಲಿ ನೀಡಿದರೂ ಅಪರಾಧವೇ. ಹಿಂದೆ ಹೋಟೆಲ್ ಊಟದ ಬಗ್ಗೆ ಯಾರಿಗೂ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಮನೆಯ ಊಟವೇ ಶುಚಿ ರುಚಿ ಮತ್ತು ಆರೋಗ್ಯದಾಯಕ ಎಂಬ ಭಾವನೆ ನಮ್ಮಲ್ಲಿ ಬೇರೂರಿ ಬಿಟ್ಟಿದೆ. ಆದರೆ ಒಂದೆರಡು ದಶಕಗಳ ಈಚೆ ಸ್ಟಾರ್ ಹೋಟೆಲ್‌ಗಳಿಗೆ ಅಥವಾ ಹೊರಗೆ ಊಟ ಮಾಡುವುದು ಶ್ರೀಮಂತರು, ಮಧ್ಯಮ ವರ್ಗದವರಿಗೆ ಒಂದು ಫ್ಯಾಷನ್, ಪ್ರತಿಷ್ಠೆಯಾಗಿದೆ. ಸಚಿವ ಖಾದರ್ ಅವರು ನಡೆಸಿದ ದಾಳಿಗಳಿಂದ ಈ ಒಣ ಭ್ರಮೆ ಎಂಬ ಬಲೂನಿಗೆ ಸೂಜಿ ಚುಚ್ಚಿದಂತಾಗಿದೆ. ವಿಶೇಷವಾಗಿ ಈ ಹಣವುಳ್ಳ ಯುವ ಸಮುದಾಯ ಮತ್ತು ಹಣವುಳ್ಳ ಬಹುತೇಕರು ಬಹುರಾಷ್ಟ್ರೀಯ ಕಂಪೆನಿಗಳ ಸ್ಟಾರ್ ಹೋಟೆಲ್‌ಗಳ -ಔಟ್‌ಲೆಟ್‌ಗಳ ಬಣ್ಣದ ಜಾಹೀರಾತಿಗೆ ಮರುಳಾಗಿ ಗ್ರಾಹಕರಾಗಿದ್ದಂತೂ ನಿಜ.
ಆರೋಗ್ಯ ಇಲಾಖೆಯ ಆಪರೇಷನ್ ಹೋಟೆಲ್ ಏಕಕಾಲಕ್ಕೆ ಗ್ರಾಹಕರನ್ನು ಮತ್ತು ಕಳಪೆ ಗುಣಮಟ್ಟದ ಆಹಾರ ಮಾರಾಟ ಮಾಡಿ ಹಣ ಮಾಡುವ ಹೋಟೆಲ್ ಉದ್ಯಮಿಗಳನ್ನು ಎಚ್ಚರಿಸಿದೆ. ಆರೋಗ್ಯ ಇಲಾಖೆಯ ಈ ದಾಳಿಗಳು ಬೆಂಗಳೂರು, ಮಂಗಳೂರು ಆಚೆ ಜಿಲ್ಲಾ ತಾಲೂಕು ಸ್ಥಳಗಳಿಗೂ ವಿಸ್ತರಿಸಬೇಕು. ಮೊದಲ ಬಾರಿ ಸರಕಾರಿ ವ್ಯವಸ್ಥೆ ದಾಳಿ ಮಾಡಿದಾಗ ಒಂದಷ್ಟು ಜನ ತನ್ನಷ್ಟಕ್ಕೆ ತಾನೇ ರಿಪೇರಿ ಮಾಡಿಕೊಳ್ಳುತ್ತಾರೆ. ದಾಳಿಯ ನೆಪದಲ್ಲಿ ಭ್ರಷ್ಟ ಅಧಿಕಾರಿಗಳು ಲಾಭ ಮಾಡಿಕೊಳ್ಳದಂತೆ ನಿಗಾ ವಹಿಸುವುದು ಮಂತ್ರಿಗಳ ಆದ್ಯ ಕರ್ತವ್ಯ ಆಗಬೇಕು. ಈ ವಿಶೇಷ ಡ್ರೈವ್‌ಗಳು ಸಾಕಷ್ಟು ಒಳ್ಳೆಯದು ಮಾಡಿದರೂ ಭ್ರಷ್ಟರು ಇಂಥ ಸಂದರ್ಭದಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳಲು ಹೊಂಚು ಹಾಕಿ ಕೂತಿರುತ್ತಾರೆ. ಸ್ಟಾರ್ ಹೋಟೆಲ್‌ಗಳ ಜೊತೆಗೆ ಮಹಾನಗರಗಳಲ್ಲಿ ನೆಲೆ ನಿಂತ ಪ್ರತಿಷ್ಠಿತ ಕ್ಲಬ್‌ಗಳು ಕೂಡಾ ಆರೋಗ್ಯ ಇಲಾಖೆಯ ಅಧಿಕಾರಿಗಳ ದಾಳಿಗೆ ಒಳಗಾಗಬೇಕು. ಯಾಕೆಂದರೆ, ಪ್ರತಿಷ್ಠಿತ ಕ್ಲಬ್‌ಗಳ ಆಡಳಿತ ಮಂಡಳಿಯಲ್ಲಿ ಶ್ರೀಮಂತ ವ್ಯಾಪಾರಿಗಳು, ಹಿರಿಯ ಅಧಿಕಾರಿಗಳು ಇರುತ್ತಾರೆ. ಈ ಮಧ್ಯ ಆ ಕ್ಲಬ್‌ಗಳ ಅಡುಗೆ ಮನೆಯಲ್ಲಿ ಹಣ ಹೊಡೆಯಲು ಏನೇನು ಮಸಲತ್ತು ನಡೆಯುತ್ತದೆಯೋ ಯಾರಿಗೆ ಗೊತ್ತು? ಬಡವ ಶ್ರೀಮಂತ ಎನ್ನದೆ ಎಲ್ಲರ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಮುಖ್ಯ. ಎಲ್ಲರ ಆರೋಗ್ಯ ಮತ್ತು ಬದುಕು ಅಮೂಲ್ಯವಾದುದು.
ಆರೋಗ್ಯ ಸಚಿವರು ಈ ವಿಷಯದಲ್ಲಿ ತುಸು ಪ್ರಾಕ್ಟಿಕಲ್ ಆಗಿ ಮುಂದುವರಿಯಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬಡ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಕೊಡಲು ಸಿಬ್ಬಂದಿಯ ಕೊರತೆ ಇದೆ. ರಾಜ್ಯವ್ಯಾಪಿ ಹೋಟೆಲ್‌ಗಳು, ಆಹಾರ ಮಾರುವ ಔಟ್‌ಲೆಟ್‌ಗಳು, ಕಾಯಿಪಲ್ಲೆ, ಹಣ್ಣು ಹಂಪಲು ಮಾರುವ ಕಾರ್ಪೊರೇಟ್ ವಲಯದ ಅಂಗಡಿಗಳ ಮೇಲೆ ದಾಳಿ ಮಾಡುವ ಬಹು ದೊಡ್ಡ ಪಡೆಯೇ ಬೇಕು. ಅಷ್ಟಕ್ಕೂ ಆ ಪಡೆ ಬದ್ಧತೆ ಮತ್ತು ಪ್ರಮಾಣಿಕತೆಯಿಂದ ಕಾರ್ಯ ನಿರ್ವಹಿಸುವಂತಿರಬೇಕು. ಅಂತಹ ಸದೃಢ ಪಡೆ ಕಟ್ಟಿಕೊಂಡು ದಾಳಿ ನಡೆಸಿ, ಸ್ಯಾಂಪಲ್ ಕಲೆಕ್ಟ್ ಮಾಡಿ ಪ್ರಯೋಗಾಲಯಗಳಿಗೆ ಕಳುಹಿಸಿ ವರದಿ ಬಂದ ಮೇಲೆ ಕಠಿಣ ಕ್ರಮ ಜರುಗಿಸುವ ಹಂತದವರೆಗೆ ನಿಗಾ ವಹಿಸುವ ಸಮರ್ಥ ವ್ಯವಸ್ಥೆ ರೂಪಿಸಬೇಕು. ಆಗ ಮಾತ್ರ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಕಾಳಜಿ ಮತ್ತು ಪ್ರಯತ್ನ ಯಶಸ್ವಿಯಾಗುತ್ತದೆ.
ಆಯುರ್ವೇದ, ಶುದ್ಧ ಹಸುವಿನ ತುಪ್ಪ, ಸರ್ವ ರೋಗಕ್ಕೂ ಯಾವುದೋ ಒಂದು ಚೂರ್ಣ, ಲೇಹ ಇತ್ಯಾದಿ ಜಾಹೀರಾತು ನೀಡಿ ಮಾರಾಟ ಜಾಲ ವಿಸ್ತರಿಸಿಕೊಳ್ಳುವ ಮಾಫಿಯಾ ಕ್ರಿಯಾಶೀಲವಾಗಿದೆ. ಇವರಿಗೆ ದೇಶಭಕ್ತಿಯ ಮುಖವಾಡ ಬೇರೆ ಇರುತ್ತದೆ. ಕಡಿಮೆ ದರದಲ್ಲಿ ಹಸುವಿನ ತುಪ್ಪ ಸಿಗುವುದಾಗಿ ಜಾಹೀರಾತು ನೀಡುವ ಕಂಪೆನಿಗಳ ಸಾಚಾತನ ಹೊರ ಬರಬೇಕು. ಬಾಬಾ ರಾಮದೇವ್ ಔಟ್‌ಲೆಟ್‌ಗಳು ಜನರನ್ನು ನಿರಂತರ ಮರುಳು ಮಾಡುತ್ತಿವೆ. ಅವುಗಳ ಅಸಲಿ ಕಹಾನಿ ಹೊರ ಬೀಳಬೇಕು. ಅಲೋಪತಿ, ಆಯುರ್ವೇದ, ನಾಟಿ, ಹೋಮಿಯೋಪತಿ ಮತ್ತು ಇನ್ನಿತರ ಪರ್ಯಾಯ ಚಿಕಿತ್ಸಾ ಪದ್ಧತಿಗಳು ಗ್ರಾಹಕ ಸಂಸ್ಕೃತಿಯ ಭಾಗವಾಗಿ ಲೂಟಿಗೆ ಇಳಿದಿವೆ. ಆರೋಗ್ಯ ಇಲಾಖೆಯ ಅಲ್ಲಿಯೂ ದಾಳಿ ನಡೆಸಿ ಸತ್ಯಾಸತ್ಯತೆ ಜನತೆಗೆ ತಿಳಿಸಬೇಕಿದೆ. ಉಣ್ಣುವ ಅನ್ನ ಕಲುಷಿತಗೊಳಿಸಿದ್ದು ಮೂಲತಃ ಆಹಾರ ಸಾಮಗ್ರಿ ಮಾರಾಟ ಮಾಡುವ ವ್ಯಾಪಾರಿಗಳು. ಅಡುಗೆ ಎಣ್ಣೆ, ಶುದ್ಧ ಆಕಳು ತುಪ್ಪ, ಡಾಲ್ಡಾ, ತೂಕ ಇಳಿಸುವ ಜ್ಯೂಸ್, ಆರೋಗ್ಯ ವೃದ್ಧಿಸುವ ಪ್ಯಾಕೆಟ್ ಆಹಾರ ಪೊಟ್ಟಣಗಳು ಪರೀಕ್ಷೆಗೆ ಒಳಪಡಬೇಕಿದೆ. ಸಾಮಾನ್ಯ ಗ್ರಾಹಕರು ಬಣ್ಣ ಬಣ್ಣದ ಜಾಹೀರಾತು ನೋಡಿಯೇ ಆಹಾರ ಸಾಮಗ್ರಿ ಸೇರಿದಂತೆ ಎಲ್ಲವೂ ಖರೀದಿಸುತ್ತಾರೆ. ಗುಣಮಟ್ಟ ತಿಳಿದುಕೊಳ್ಳಲು ಆತನಲ್ಲಿ ಸಾಧನಗಳಿಲ್ಲ. ಶುದ್ಧವೆನ್ನುವ ಆಕಳ ತುಪ್ಪ ಎಂದು ಜಾಹೀರಾತು ನೀಡಿ ನಮ್ಮನ್ನು ಸೆಳೆಯುವ ಬ್ರಾಂಡ್‌ಗೆ ಒಲಿದು ಬಿಡುತ್ತೇವೆ. ಆ ಉತ್ಪನ್ನವನ್ನು ಖರೀದಿಸಿ ಬಳಕೆ ಮಾಡಿದ ತಕ್ಷಣ ಅದರ ಸಾಚಾತನ ಗೊತ್ತಾಗುವುದಿಲ್ಲ. ಹಲವು ವರ್ಷಗಳ ನಂತರ ಅದರ ಅಡ್ಡ ಪರಿಣಾಮ ದೇಹದ ಮೇಲೆ ಆಗುತ್ತದೆ. ಶುದ್ಧವೆಂದು ನಕಲಿ ಜೇನು ತುಪ್ಪ ಮಾರುಕಟ್ಟೆಯಲ್ಲಿ ಸಿಗುತ್ತದೆ. ದೇಸಿ ಸ್ಥಳೀಯ ಎಂದು ಬಡಾಯಿ ಕೊಚ್ಚಿಕೊಳ್ಳುವ ದೇಶಭಕ್ತರ ಉತ್ಪನ್ನಗಳು ಮಾರಾಟಕ್ಕೆ ಲಭ್ಯ ಇವೆ. ಅವುಗಳ ಸಾಚಾತನ ಪತ್ತೆ ಹಚ್ಚುವುದು ಹೇಗೆ?
ಬಹುರಾಷ್ಟ್ರೀಯ ಕಂಪೆನಿಗಳು ವ್ಯಾಪಕ ಪ್ರಚಾರ ಮಾಡಿ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಈಗ ಅಡುಗೆ ಎಣ್ಣೆ ಮತ್ತು ದೇಸಿ ತುಪ್ಪದ ನಿದರ್ಶನ ನೋಡಿ. ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾದ ಅಡುಗೆ ಎಣ್ಣೆ, ರಿಫೈನ್ಡ್ ಎಂದೆಲ್ಲ ಆರೇಳು ಬ್ರಾಂಡ್‌ಗಳು ಪೈಪೋಟಿ ಮೇಲೆ ಜಾಹೀರಾತು ನೀಡಿ ಪ್ರಚಾರ ಮಾಡಿಕೊಳ್ಳುತ್ತವೆ. ಇನ್ನೊಂದೆಡೆ ದೇಸಿ ಉತ್ಪನ್ನಗಳನ್ನು ಮಾರಾಟ ಮಾಡುವವರು ಮಾರುಕಟ್ಟೆಯಲ್ಲಿ ದೊರೆಯುವ ಅಡುಗೆ ಎಣ್ಣೆ ಹೃದಯದ ಆರೋಗ್ಯಕ್ಕೆ ಹಾನಿಕಾರಕ-ಎಂದೆಲ್ಲ ಹೇಳಿ ಸ್ಥಳೀಯ ಗಾಣದ ಎಣ್ಣೆ ಮಾರಾಟಗಾರರು ನಂಬಿಸಲು ಯತ್ನಿಸುತ್ತಾರೆ. ಒಬ್ಬರಿಗೆ ಬ್ರಾಂಡ್ ಮುದ್ರೆ ಇರುತ್ತದೆ. ಇನ್ನೊಬ್ಬರು ದೇಸಿ ಭಾವನೆಗಳನ್ನು ಕೆರಳಿಸಿ ಮಾರಾಟ ಜಾಲದತ್ತ ಸೆಳೆಯುತ್ತಾರೆ. ಯಾವುದನ್ನು ನಂಬುವುದು, ಯಾವುದನ್ನು ಖೊಟ್ಟಿ ಎಂದು ತೀರ್ಮಾನಿಸುವುದು? ದೇಹದೊಳಗೆ ಸೇವಿಸಿ ಅಡ್ಡ ಪರಿಣಾಮ ಎದುರಿಸುವುದಕ್ಕಿಂತ ಮೊದಲೇ ತಿಳಿದುಕೊಂಡರೆ ಉತ್ತಮವಲ್ಲವೇ?
ಈಗ ಸಾವಯವ ಉತ್ಪನ್ನಗಳು ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳಿಗೆ ಪರ್ಯಾಯವಾಗಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿವೆ. ಒಂದರ ಮೇಲಿನ ದ್ವೇಷವನ್ನು ಇನ್ನೊಂದರ ಮೇಲೆ ಪ್ರೀತಿ ಹುಟ್ಟಲು ಕಾರಣವಾಗಬಾರದು. ಆದರೆ ದುಬಾರಿ ಬೆಲೆಯ ಸಾವಯವ ಉತ್ಪನ್ನಗಳು ಗ್ರಾಹಕರನ್ನು ಸೆಳೆಯುತ್ತಿವೆ. ಅವುಗಳ ಸಾಚಾತನವು ಸಾಬೀತಾಗಬೇಕು. ಜನತೆಗೆ ಅತ್ಯುತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳು ದೊರೆಯುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮಾಡಿದರೆ ಆಸ್ಪತ್ರೆಗಳ ಅಗತ್ಯ ಬೀಳುವುದಿಲ್ಲ. ವಿಶೇಷವಾಗಿ ಅಡುಗೆಗೆ ಬಳಸುವ ಖಾದ್ಯ ಪದಾರ್ಥಗಳು ಸಮಸ್ಯೆಯ ಮೂಲ ಕಾರಣವಾಗಿವೆ. ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಬಾಹ್ಯ ಶತ್ರುವನ್ನು ಮಟ್ಟ ಹಾಕಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ ಶತ್ರು ಅತ್ಯುತ್ತಮ ಅಡುಗೆ ಎಣ್ಣೆ, ದೇಸಿ ಆಕಳ ತುಪ್ಪ, ಶುದ್ಧ ಜೇನು ತುಪ್ಪ, ಗುಂಟೂರು ಮಿರ್ಚಿ, ಅಜ್ಜಿ ಸಿದ್ಧಪಡಿಸಿದ ಅರಿಶಿಣ ಎಂದೆಲ್ಲ ಮಾರು ವೇಷ ಹಾಕಿಕೊಂಡು ಪ್ರತಿಯೊಬ್ಬರ ಅಡುಗೆ ಮನೆ ಪ್ರವೇಶಿಸಿದರೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಜನತೆಯ ಆರೋಗ್ಯ ಕೆಡಿಸುವ ಹೊರ ಮತ್ತು ಒಳಗಿನ ಶತ್ರುಗಳ ವಿರುದ್ಧ ನೈಜ ಹೋರಾಟಕ್ಕೆ ಮುಂದಾದರೆ ಆರೋಗ್ಯ ಮಂತ್ರಿ ಖಾದರ್ ಅವರ ಪ್ರಯತ್ನ ಸಾರ್ಥಕವೆನಿಸುತ್ತದೆ






