Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಸಂಪುಟ ವಿಸ್ತರಣೆಯಲ್ಲಿ ‘ಅಸಮತೋಲನ’

ಸಂಪುಟ ವಿಸ್ತರಣೆಯಲ್ಲಿ ‘ಅಸಮತೋಲನ’

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ8 Aug 2026 11:42 AM IST
share
ಸಂಪುಟ ವಿಸ್ತರಣೆಯಲ್ಲಿ ‘ಅಸಮತೋಲನ’

ಆಡಳಿತ ವಿರೋಧಿ ಅಲೆ ಮೆಟ್ಟಿ ನಿಲ್ಲುವಂತಹ ಅತ್ಯುತ್ತಮ ಸರಕಾರ ಈಗ ಬೇಕಾಗಿದೆ. ಹೈಕಮಾಂಡ್ ಹಸ್ತಕ್ಷೇಪದಿಂದ ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾಯಿಸಿದ ನಂತರ ಚುನಾವಣಾ ಫಲಿತಾಂಶ ಏನಾಗಿದೆ ಎಂಬುದು ದಾಖಲೆಯಲ್ಲಿದೆ. ಈಗ ಸಿದ್ದರಾಮಯ್ಯ ಅವರನ್ನು ಬದಲಾಯಿಸಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಲದ ಅನಿವಾರ್ಯತೆಯೆಂದೇ ಒಪ್ಪಿಕೊಳ್ಳೋಣ. ಆದರೆ ಅತ್ಯುತ್ತಮ ಸಚಿವ ಸಂಪುಟ ರಚಿಸಿಕೊಳ್ಳದ ಡಿ.ಕೆ. ಶಿವಕುಮಾರ್ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವೇ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತಕ್ಕಿಂತ ಹೆಚ್ಚು ಶಾಸಕರ ಬಲ ದೊರೆತರೆ ಅರಗಿಸಿಕೊಳ್ಳುವ ಮತ್ತು ಎಲ್ಲರನ್ನು ನಿಭಾಯಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಸ್ಥಳೀಯ ನಾಯಕತ್ವದ ಕಾರಣಕ್ಕೆ ಶಾಸಕರ ಸಂಖ್ಯಾ ಬಲ ಏರಿಕೆಯಾಗಿದೆ ಎಂಬ ಕಟು ಸತ್ಯ ಗೊತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್ ಎಲ್ಲವೂ ತನ್ನಿಂದಲೇ ಎಂಬ ಅಹಂಭಾವ ತಾಳುತ್ತದೆ. ಅದರ ಪರಿಣಾಮವಾಗಿ ಪಕ್ಷ ಮತ್ತು ಸರಕಾರದಲ್ಲಿ ಅರಾಜಕತೆ ತಾಂಡವವಾಡುತ್ತದೆ. ಕಾಂಗ್ರೆಸ್ ಪಕ್ಷದ ಬಹುದೊಡ್ಡ ದೌರ್ಬಲ್ಯವೆಂದರೆ: ಪಕ್ಷಕ್ಕೆ ನಿಷ್ಠರಾಗಿದ್ದವರನ್ನು ಕಡೆಗಣಿಸುವುದು. ಭಾರತದಾದ್ಯಂತ ಕಾಂಗ್ರೆಸ್ ಪಕ್ಷ ನೆಲೆ ಕಳೆದುಕೊಳ್ಳುವಂತಾಗಿದ್ದು, ಸ್ಥಳೀಯ ಶಕ್ತಿಶಾಲಿ ನಾಯಕತ್ವವನ್ನು ಪಕ್ಕಕ್ಕೆ ಸರಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವವರನ್ನು ಹೇರಿಕೆ ಮಾಡಿದ್ದರಿಂದ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೈಕಮಾಂಡ್ ಬಲ ಪ್ರಯೋಗದ ಕಾರಣಕ್ಕೆ ಮೂರು ನಾಲ್ಕು ಸಲ ಭಾರೀ ಹಿನ್ನಡೆ ಅನುಭವಿಸಿದೆ.

ಭಾರತದಲ್ಲಿ ಕಾಂಗ್ರೆಸ್ ಪಕ್ಷ ಎಪ್ಪತ್ತರ ದಶಕದಲ್ಲಿ ಮಹಾ ವಿಘಟನೆಗೆ ಒಳಗಾಯಿತು. ಇಂಡಿಕೇಟ್ -ಸಿಂಡಿಕೇಟ್ ವಿಘಟನೆಯಾದಾಗ ಕರ್ನಾಟಕದಲ್ಲಿ ಹಿರಿಯ ಕಾಂಗ್ರೆಸ್ ನಾಯಕರೆಲ್ಲ ಎಸ್. ನಿಜಲಿಂಗಪ್ಪ ಅವರೊಂದಿಗೆ ಇದ್ದರು. ಎಸ್. ನಿಜಲಿಂಗಪ್ಪ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸುತ್ತಲೇ ಇಂದಿರಾ ಗಾಂಧೀಯವರನ್ನೇ ಪಕ್ಷದಿಂದ ಹೊರ ಹಾಕಿದ್ದರು. ಕಾಮರಾಜ್ ಮುಂತಾದ ಹಿರಿಯ ಕಾಂಗ್ರೆಸ್ ನಾಯಕರು ಎಸ್. ನಿಜಲಿಂಗಪ್ಪ ಬೆಂಬಲಕ್ಕೆ ನಿಂತಿದ್ದರು. ಕರ್ನಾಟಕದಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷ ಸಂಕ್ರಮಣ ಸ್ಥಿತಿಯಲ್ಲಿದ್ದಾಗ ನೇತೃತ್ವ ವಹಿಸಿಕೊಂಡು ಪಕ್ಷಕ್ಕೆ ಅಧಿಕಾರ ತಂದುಕೊಟ್ಟವರು ಡಿ. ದೇವರಾಜ ಅರಸು ಅವರು. ಅಹಿಂದ ವರ್ಗದ ಸಮೀಕರಣ ಮಾಡಿ ಹೊಸ ಮುಖಗಳಿಗೆ ರಾಜಕೀಯ ಅವಕಾಶ ಕಲ್ಪಿಸಿದ ಕೀರ್ತಿ ದೇವರಾಜ ಅರಸು ಅವರಿಗೇ ಸಲ್ಲುತ್ತದೆ. ದೇವರಾಜ ಅರಸು ಅವರ ಜಾತಿ ಸಮೀಕರಣದ ಜೊತೆಗೆ ಇಂದಿರಾ ಗಾಂಧಿಯವರ ಇಪ್ಪತ್ತು ಅಂಶಗಳ ಕಾರ್ಯಕ್ರಮ, ಜನಪ್ರಿಯತೆ ಇಂಬಾಗಿ ನಿಂತಿತ್ತು. ಪಕ್ಕದ ತಮಿಳುನಾಡು ರಾಜ್ಯದಲ್ಲೂ ಇಂದಿರಾ ಗಾಂಧಿಯವರ ಜನಪ್ರಿಯ ಕಾರ್ಯಕ್ರಮಗಳು ಜಾರಿಯಾಗಿದ್ದವು. ಆದರೆ ಮಹಾವಿಘಟನೆಯ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ತಲೆ ಎತ್ತಲೇ ಇಲ್ಲ.

1972ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಹೆಚ್ಚು ಶಾಸಕರ ಬಲದೊಂದಿಗೆ ಅಧಿಕಾರ ಹಿಡಿಯುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಮಾಧ್ಯಮಗಳಂತೂ ದೇವರಾಜ ಅರಸು ನೇತೃತ್ವದ ಇಂದಿರಾ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ ಎಂದೇ ಲೆಕ್ಕಾಚಾರ ಹಾಕಿದ್ದರು. ನಿಜಲಿಂಗಪ್ಪ ನೇತೃತ್ವದ, ವೀರೇಂದ್ರ ಪಾಟೀಲ್ -ರಾಮಕೃಷ್ಣ ಹೆಗಡೆ ಸಾರಥ್ಯದ ಸಂಸ್ಥಾ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಬಲವಾಗಿ ನಂಬಲಾಗಿತ್ತು. ಎರಡನೇ ಸ್ಥಾನದಲ್ಲಿ ಆಗಲೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಜನತಾ ಪಕ್ಷ ಇರಬಹುದೆಂದು ರಾಜಕೀಯ ಪಂಡಿತರು ಲೆಕ್ಕ ಹಾಕಿದ್ದರು. ಮೇಲು ಜಾತಿಯ ನಾಯಕತ್ವ ಹೊಂದಿರದ ಇಂದಿರಾ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಪಂಡಿತರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಂಖ್ಯಾ ಬಲವೇ ಇಲ್ಲದ ಸಮುದಾಯದ ದೇವರಾಜ ಅರಸು ವಿಫಲ ಯತ್ನ ಮಾಡುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು. ದೇವರಾಜ ಅರಸು ಮತ್ತು ಎಲ್.ಜಿ. ಹಾವನೂರು ಅವರು ಹೊಸ ರಾಜಕೀಯ ಮತ್ತು ಜಾತಿ ಸಮೀಕರಣ ಸಿದ್ಧಪಡಿಸಿ ಕಡೆಗಣಿಸಲ್ಪಟ್ಟ ಸಮುದಾಯದ ಯುವಕರಿಗೆ ಟಿಕೆಟ್ ನೀಡಿದರು. ಮಲ್ಲಿಕಾರ್ಜುನ ಖರ್ಗೆ, ಎನ್. ಧರಂಸಿಂಗ್, ವೀರಪ್ಪ ಮೊಯ್ಲಿಯಂಥ ಕ್ರಿಯಾಶೀಲ ಅಹಿಂದ ಸಮುದಾಯದ ಯುವಕರಿಗೆ ಮೊದಲ ಬಾರಿಗೆ ರಾಜಕೀಯ ಅವಕಾಶ ಕಲ್ಪಿಸಿ ಯಶಸ್ವಿಯಾದರು. 1972ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರ ಹುಸಿ ಮಾಡಿ ದೇವರಾಜ ಅರಸು ನೇತೃತ್ವದಲ್ಲಿ ಇಂದಿರಾ ಕಾಂಗ್ರೆಸ್ ಸರಳ ಬಹುಮತಕ್ಕಿಂತ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಂಡಿತ್ತು. ಮೊದಲ ಬಾರಿಗೆ ಅರಸು ರೂಪಿಸಿದ ಸಾಮಾಜಿಕ ಸಮೀಕರಣವನ್ನೇ ಇಂದಿಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸುತ್ತಿದೆ. ಒಂದು ವೇಳೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಗದೆ ಹೋಗಿದ್ದರೆ ಕರ್ನಾಟಕದಲ್ಲಿ ತಳಸಮುದಾಯದ ಕ್ರಿಯಾಶೀಲ ಯುವ ನಾಯಕರು ಮುನ್ನೆಲೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‌ರಂತಹ ಯುವಕರು ರಾಜಕಾರಣದಿಂದ ದೂರವೇ ಉಳಿಯುತ್ತಿದ್ದರು. 1972ರಿಂದ 1977ರವರೆಗೆ ಐದು ವರ್ಷಗಳ ಕಾಲ ದೇವರಾಜ ಅರಸು ಅವರು ಹೆಜ್ಜೆ ಹೆಜ್ಜೆಗೂ ಸವಾಲು ಎದುರಿಸಿದರು. ಅಷ್ಟು ಮಾತ್ರವಲ್ಲ ಮೇಲು ಜಾತಿಗಳಿಗೆ ವಿಶೇಷವಾಗಿ ಜಮೀನುದಾರಿ ವರ್ಗಕ್ಕೆ ಅಪ್ರಿಯವೆನಿಸುವ ಲ್ಯಾಂಡ್ ಸೀಲಿಂಗ್ ಆ್ಯಕ್ಟ್ ಜಾರಿಗೆ ತಂದರು. ಅದರ ಜೊತೆಗೆ ಹಿಂದುಳಿದ ವರ್ಗಕ್ಕೆ ಅನುಕೂಲವಾಗುವ ಹಾವನೂರ ಆಯೋಗದ ವರದಿಯನ್ನು ದಿಟ್ಟತನದಿಂದ ಅನುಷ್ಠಾನಗೊಳಿಸಿದರು. ಭೂಮಿತಿ ಕಾಯ್ದೆ ಮತ್ತು ಹಾವನೂರು ಆಯೋಗದ ವರದಿ ಜಾರಿಗೊಳಿಸಿದರೆ ಕರ್ನಾಟಕದಲ್ಲಿ ರಕ್ತಪಾತ ಸಂಭವಿಸುತ್ತದೆ ಎಂದೇ ಭಾವಿಸಲಾಗಿತ್ತು. ಅಷ್ಟು ಮಾತ್ರವಲ್ಲ ಮುಂಬರುವ ಯಾವ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಇಂದಿರಾ ಕಾಂಗ್ರೆಸ್ ಗೆಲ್ಲಲಾರದು ಎಂದು ಭವಿಷ್ಯ ನುಡಿಯಲಾಗಿತ್ತು. ದೇವರಾಜ ಅರಸು ಅವರ ಕ್ರಾಂತಿಕಾರಿ ಯೋಜನೆಗಳನ್ನು ಅಂದಿನ ಮಾಧ್ಯಮಗಳು ಸಾಕಷ್ಟು ಅಪಪ್ರಚಾರ ಮಾಡಿದ್ದವು. 1978ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ದೇಶಾದ್ಯಂತ ಇಂದಿರಾ ಕಾಂಗ್ರೆಸ್ ವಿರೋಧಿ ಅಲೆ ವ್ಯಾಪಕವಾಗಿ ಹರಡಿತ್ತು. ಸಾಹಿತಿ, ಕಲಾವಿದರು, ಬುದ್ಧಿಜೀವಿಗಳು ಮಾತ್ರವಲ್ಲ ಸಮಸ್ತ ಜನವರ್ಗವೇ ಜನಾಂದೋಲನದ ಭಾಗವಾಗಿ ತುರ್ತು ಪರಿಸ್ಥಿತಿ ವಿರುದ್ಧ ಸಂಘಟಿತವಾಗಿತ್ತು. 1978ರ ಆಸುಪಾಸಿನಲ್ಲಿ ನಡೆದ ಬಹುತೇಕ ರಾಜ್ಯದ ವಿಧಾನಸಭಾ ಚುನಾವಣೆಗಳಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಮುಗ್ಗರಿಸಿತ್ತು. ಕರ್ನಾಟಕದಲ್ಲಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಜನತಾ ಪಕ್ಷ ಸಮರ್ಥ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಮೇಲು ಜಾತಿಗಳ ವಿರೋಧ ಕಟ್ಟಿಕೊಂಡ, ತುರ್ತು ಪರಿಸ್ಥಿತಿ ಹೇರಿದ ಕಳಂಕ ಹೊತ್ತ ಇಂದಿರಾ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಉಳಿಗಾಲವಿಲ್ಲವೆಂದೇ ಭಾವಿಸಲಾಗಿತ್ತು. ಅಷ್ಟೊತ್ತಿಗೆ ಒಕ್ಕಲಿಗ-ಲಿಂಗಾಯತ ನಾಯಕತ್ವ ಜನತಾ ಪಕ್ಷದ ಭಾಗವಾಗಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲೂ ದೇವರಾಜ ಅರಸು ನೇತೃತ್ವದಲ್ಲಿ ಇಂದಿರಾ ಕಾಂಗ್ರೆಸ್ 1978ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ದೇವರಾಜ ಅರಸು ಅವರು ರೂಪಿಸಿದ ಜನಪರ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪಿದ್ದವು. ಹಾಗಾಗಿ ಯಾವ ಬಗೆಯ ಅಪಪ್ರಚಾರವೂ ಕೆಲಸ ಮಾಡಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಲಿಷ್ಠವಾಗುತ್ತಿದ್ದಂತೆ ದೇವರಾಜ ಅರಸು ವಿರುದ್ಧ ಒಳಸಂಚು, ಪಿತೂರಿ ಶುರುವಾದವು. ಆರ್. ಗುಂಡೂರಾವ್ ನೇತೃತ್ವದ ಯುವ ಬ್ರಿಗೇಡ್ ಸಂಜಯ ಗಾಂಧಿ, ಇಂದಿರಾ ಗಾಂಧಿಯವರ ಕಿವಿಗಳನ್ನು ಆಕ್ರಮಿಸಿಕೊಂಡು ಬಿಟ್ಟಿತ್ತು. ಅರಸು ಕಡೆಗಣನೆ ಶುರುವಾಯಿತು. ಕೆರಳಿದ ಅರಸು 1980ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಅರಸು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸೆಡ್ಡು ಹೊಡೆದರು. ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಅರಸು ಅವರಿಂದ ಮರು ಜೀವ ಪಡೆದಿದ್ದ ಇಂದಿರಾ ಗಾಂಧಿಯವರು 1980ರಲ್ಲಿ ಬೆಂಕಿ ಬಿರುಗಾಳಿಯಾಗಿ ಹೊರಹೊಮ್ಮಿದರು. ಕಾಂಗ್ರೆಸ್ ಹೈಕಮಾಂಡ್ ಬಲಿಷ್ಠವಾಗಿದ್ದರಿಂದ ದೇವರಾಜ ಅರಸು ಅವರನ್ನು ಪಕ್ಕಕ್ಕೆ ಸರಿಸಿಬಿಟ್ಟಿತು. ಅರಸು ಮೂಲಕ ಬೆಳೆದವರೆಲ್ಲ ಹೈಕಮಾಂಡ್ ಆದೇಶಕ್ಕೆ ಜೈ ಎಂದರು. ಅರಸು ಜಾಗಕ್ಕೆ ಬಂದ ಆರ್. ಗುಂಡೂರಾವ್ ಅಂಧಾ ದರ್ಬಾರು ನಡೆಸಿದರು. ಕೇವಲ ಇಂದಿರಾ ಜನಪ್ರಿಯತೆ ನಂಬಿ 1983ರ ವಿಧಾನಸಭಾ ಚುನಾವಣೆ ಎದುರಿಸಿದರು. ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ಆ ಚುನಾವಣೆಯಲ್ಲಿ ಕರ್ನಾಟಕದಾದ್ಯಂತ ಪ್ರಚಾರ ಮಾಡಿದರು. ಆದರೆ ಫಲಿತಾಂಶ ಬಂದಾಗ ಮತದಾರ ಇಂದಿರಾ ಜನಪ್ರಿಯತೆ ಲೆಕ್ಕಿಸದೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು. ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸೇತರ ಸರಕಾರ ಅಧಿಕಾರಕ್ಕೆ ಬರುವಂತಾಯಿತು. ಒಂದು ವೇಳೆ ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿದಿದ್ದರೆ ಜನತಾ ಪಕ್ಷಕ್ಕೆ ಅವಕಾಶವೇ ಇರುತ್ತಿರಲಿಲ್ಲ.

1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾಯಿತು. 1985ರ ಲೋಕಸಭಾ ಚುನಾವಣೆಯಲ್ಲಿ ಅನುಕಂಪದ ಅಲೆ ನಿರ್ಣಾಯಕ ಪಾತ್ರ ವಹಿಸಿತ್ತು. ಕರ್ನಾಟಕವೂ ಸೇರಿ ಎಲ್ಲೆಡೆ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದರು. ಕರ್ನಾಟಕದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತ್ತು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷಕ್ಕಾದ ಹಿನ್ನಡೆಯ ನೈತಿಕ ಹೊಣೆ ಹೊತ್ತು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ಎದುರಿಸಲು ಮುಂದಾದಾಗ ಸ್ಥಳೀಯ ಕಾಂಗ್ರೆಸ್ ನಾಯಕರು ಖುಷಿಪಟ್ಟಿದ್ದರು. 1985ರಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಕೇವಲ ಆರು ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಮತದಾರ, ವಿಧಾನಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ವಹಿಸಿದರು. ಅಂದಿನಿಂದ ಇಲ್ಲಿಯವರೆಗೆ ಕರ್ನಾಟಕದ ಮತದಾರರು ಪ್ರಬುದ್ಧತೆ ಮೆರೆಯುತ್ತಾ ಬಂದಿದ್ದಾರೆ. ಸತತ ಎರಡನೇ ಅವಧಿಗೆ ಯಾವ ಪಕ್ಷವನ್ನೂ ಕರ್ನಾಟಕದ ಪ್ರಬುದ್ಧ ಮತದಾರ ಬೆಂಬಲಿಸಿಲ್ಲ. ಬಲಿಷ್ಠ ಹೈಕಮಾಂಡ್ ಎಂಬ ಕಾರಣಕ್ಕೆ ಕೇಂದ್ರದಲ್ಲಿ ಅಧಿಕಾರ ಹಿಡಿದ ಪಕ್ಷವನ್ನು ಕಣ್ಣು ಮುಚ್ಚಿ ಹಿಂಬಾಲಿಸಿಲ್ಲ. ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಿಸಲಾರರು ಎಂಬ ಮಾತು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕರ್ನಾಟಕದ ಮತದಾರರನ್ನು ಮೂರ್ಖರು ಎಂದು ಭಾವಿಸಿದವರೆಲ್ಲ ಮಣ್ಣು ಮುಕ್ಕಿದ್ದಾರೆ.

1999ರ ಹೊತ್ತಿಗೆ ಭಾರತದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಆರಾಧಿಸುವ ಕಾಲ ಶುರುವಾಗಿತ್ತು. 1999ರ ಹೊತ್ತಿಗೆ ಜನತಾ ಪರಿವಾರದ ಬಹುತೇಕ ಮುಖಂಡರು ವಾಜಪೇಯಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರು. ಜಾರ್ಜ್ ಫೆರ್ನಾಂಡಿಸ್, ರಾಮಕೃಷ್ಣ ಹೆಗಡೆ, ನಿತೀಶ್ ಕುಮಾರ್ ಬಿಜೆಪಿ ಭಜನೆ ಶುರು ಮಾಡಿದ್ದರು. 1999ರಲ್ಲಿ ಲೋಕಸಭೆ ಮತ್ತು ಕರ್ನಾಟಕದ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಯಿತು. ಕರ್ನಾಟಕದ ಪ್ರಬುದ್ಧ ಮತದಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಲೋಕಸಭೆಗೆ ಬಿಜೆಪಿ ಅಭ್ಯರ್ಥಿಗಳತ್ತ ವಾಲಿದ್ದರು. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಮೋದಿ ಅಮಿತ್-ಶಾ ಜೋಡಿ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿತ್ತು. ಸ್ಥಳೀಯ ಪ್ರಬಲ ನಾಯಕತ್ವವನ್ನು ಕಡೆಗಣಿಸಿ ಹೈಕಮಾಂಡ್ ಬಲದ ಮೇಲೆ ಚುನಾವಣೆ ಗೆಲ್ಲುವ ಇರಾದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರದಾಗಿತ್ತು. ಹಾಗಾಗಿಯೇ ಉತ್ತರ ಭಾರತದಲ್ಲಿ ಬಳಸಿದ ಹಿಂದುತ್ವದ ಎಲ್ಲಾ ಅಸ್ತ್ರಗಳನ್ನು ಕರ್ನಾಟಕದಲ್ಲೂ ಪ್ರಯೋಗ ಮಾಡಿದರು. ಮೋದಿ-ಅಮಿತ್ ಶಾ ರೋಡ್ ಶೋಗಳನ್ನು ಆಯೋಜಿಸಿದರು. ಆದರೆ ಬಿಜೆಪಿಗೆ ಮತದಾರ ಒಲಿಯಲಿಲ್ಲ. ಬಿಜೆಪಿಗೆ ಮತ ತಂದು ಕೊಡುವ ಯಡಿಯೂರಪ್ಪ ಸೈಡ್‌ಲೈನ್ ಆಗಿದ್ದರು. ಬಿಜೆಪಿ ಆಡಳಿತ ವಿರೋಧಿ ಅಲೆ ತೀವ್ರವಾಗಿತ್ತು. ಮೋದಿ -ಅಮಿತ್ ಶಾ ಎಷ್ಟೇ ಹೈಕಮಾಂಡ್ ಪ್ರವರ ತೋರಿಸಿದರೂ ಕರ್ನಾಟಕದ ಮತದಾರ ಜಪ್ಪೆನ್ನಲಿಲ್ಲ. ಆರೆಸ್ಸೆಸ್ ತಂತ್ರಗಾರಿಕೆಗೆ ಕರ್ನಾಟಕದ ಪ್ರಬುದ್ಧ ಮತದಾರ ಮರುಳಾಗಲಿಲ್ಲ. ಸಿದ್ದರಾಮಯ್ಯ ಅವರ ಜನಪ್ರಿಯತೆ, ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಕೌಶಲ್ಯ ಜಯ ಗಳಿಸಿದವು. ರಾಹುಲ್ ಗಾಂಧಿ ಮುಖ ನೋಡಿ ಮತದಾರ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರಲಿಲ್ಲ. ಮೂವತ್ತಕ್ಕಿಂತಲೂ ಹೆಚ್ಚು ಮತಕ್ಷೇತ್ರಗಳಲ್ಲಿ ಸ್ವಂತ ಬಲದ ಮೇಲೆ ಗೆಲ್ಲುವ ಶಾಸಕರಿದ್ದಾರೆ. ಅವರು ಆಡಳಿತ ವಿರೋಧಿ ಅಲೆ ಇದ್ದಾಗಲೂ ಗೆಲ್ಲುತ್ತಾರೆ. ಐವತ್ತು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರ ಕುರುಬ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಹಳೆ ಮೈಸೂರು ಭಾಗದ ಕೆಲವು ಮತ ಕ್ಷೇತ್ರಗಳಲ್ಲಿ ಡಿ.ಕೆ. ಶಿವಕುಮಾರ್ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಈ ಎಲ್ಲ ಸಂಗತಿಗಳನ್ನು ಮನದಲ್ಲಿ ಇಟ್ಟುಕೊಂಡು ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ವಿಸ್ತರಣೆ ಮಾಡಬೇಕಿತ್ತು. ಇತಿಹಾಸ ಮರೆತ ಪರಿಣಾಮವಾಗಿ ಹೈಕಮಾಂಡ್ ಹೆಸರಿನಲ್ಲಿ ಅತ್ಯಂತ ಕೆಟ್ಟ ಮತ್ತು ಅಸಮತೋಲನದ ಸಚಿವ ಸಂಪುಟ ರಚಿಸಿಕೊಂಡಿದ್ದಾರೆ. ಸ್ವಂತ ಬಲದ ಮೇಲೆ ಗೆಲ್ಲುವ ಶಾಸಕರು ಪಕ್ಷಕ್ಕೆ ಹಾನಿ ಮಾಡುವುದು ಗ್ಯಾರಂಟಿ.

ಸಿದ್ದರಾಮಯ್ಯ ಸಂಪುಟದಲ್ಲಿ ಅವಕಾಶ ಪಡೆದಿದ್ದ ಅಧಕ್ಷರನ್ನು ಈ ಬಾರಿ ಕೈ ಬಿಡಬಹುದಿತ್ತು. ಮಧು ಬಂಗಾರಪ್ಪ ಶಾಲಾ ಶಿಕ್ಷಣವನ್ನು ಹಾಳು ಮಾಡಿದವರು. ಕರ್ನಾಟಕದ ಎಲ್ಲ ಶಿಕ್ಷಣ ತಜ್ಞರು ಅವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅದೇ ಸಮುದಾಯದ ಬೇರೊಬ್ಬರಿಗೆ ಅವಕಾಶ ನೀಡಬಹುದಾಗಿತ್ತು. ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿಯ ಗಂಧ ಗಾಳಿ ಇಲ್ಲದವರು. ಅವರ ಬದಲಿಗೆ ಅದೇ ಸಮುದಾಯದ ಬೇರೊಬ್ಬರಿಗೆ ಅವಕಾಶ ಕೊಡಬಹುದಾಗಿತ್ತು. ತನ್ವೀರ್ ಸೆೇಟ್ ಅತ್ಯುತ್ತಮ ಕೆಲಸಗಾರ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವುದು ಮುಸ್ಲಿಮ್ ಸಮುದಾಯಕ್ಕೆ ಮಾಡಿದ ಅಪಮಾನ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಾಗಲೂ ಸೇಟ್ ಗೆಲುವು ಸಾಧಿಸಿದ್ದರು. ಸ್ವಂತ ಬಲದ ಮೇಲೆ ಗೆಲ್ಲುವ ಶಾಸಕರನ್ನು ಬೇಕೆಂತಲೇ ಸಂಪುಟದಿಂದ ಹೊರಗಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಹಾನಿ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಳ್ಳಾರಿಯ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು ತಪ್ಪು. ಮುಂದಿನ ಚುನಾವಣೆಯ ಹೊತ್ತಿಗೆ ಬಿಜೆಪಿ ಸೇರುವ ಲಕ್ಷ್ಮಣ ಸವದಿ ಸೇರ್ಪಡೆಯಂತೂ ಕಾಂಗ್ರೆಸ್ ಪಕ್ಷದ ದಿವಾಳಿ ಮನಸ್ಥಿತಿಯ ಪ್ರತೀಕ. ಲಿಂಗಾಯತ ಸಮುದಾಯದಲ್ಲಿಯೇ ಅತಿ ಹೆಚ್ಚು ಸಂಖ್ಯಾ ಬಲ ಹೊಂದಿರುವ ಪಂಚಮಸಾಲಿ ಸಮುದಾಯದಿಂದ ಒಬ್ಬರಿಗಷ್ಟೇ ಅವಕಾಶ ಸಿಕ್ಕಿರುವುದು ಚುನಾವಣೆಯ ದೃಷ್ಟಿಯಿಂದ ಜಾಣ ನಡೆಯಲ್ಲ. ಆ ಸಮುದಾಯದಿಂದ ಮಂತ್ರಿಯಾದ ವಿಜಯಾನಂದ ಕಾಶಪ್ಪನವರ ಪಂಚಮಸಾಲಿ ಸಮುದಾಯಕ್ಕೆ ಶೋಭೆ ತರಲಾರರು. ಉನ್ನತ ಶಿಕ್ಷಣ ಇಲಾಖೆ ಈ ಕೆಟ್ಟ ಸ್ಥಿತಿಗೆ ಬರಲು ಅಡಿಪಾಯ ಹಾಕಿದವರೇ ಬಸವರಾಜ ರಾಯರೆಡ್ಡಿ. ಅವರನ್ನು ಮಂತ್ರಿ ಮಾಡಿದ್ದು ದುರಂತ. ಎಚ್.ಕೆ. ಪಾಟೀಲ್ ಯಾವ ಖಾತೆಯಲ್ಲೂ ಹೆಸರು ಕೆಡಿಸಿಕೊಂಡಿರಲಿಲ್ಲ. ಸದನದಲ್ಲಿ ಅತ್ಯುತ್ತಮ ವಾಗ್ಮಿ ಎನಿಸಿಕೊಂಡಿದ್ದ ಅವರನ್ನು ಹೊರಗಿಟ್ಟು ಕಾಂಗ್ರೆಸ್ ತಪ್ಪು ಮಾಡಿದೆ. ಕಲ್ಯಾಣ ಕರ್ನಾಟಕದ ಐದೂ ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲು ಮುಸ್ಲಿಮ್ ಮತದಾರರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಕಲ್ಯಾಣ ಕರ್ನಾಟಕದ ಒಬ್ಬ ಮುಸ್ಲಿಮ್ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಿತ್ತು.

ಸಚಿವ ಸಂಪುಟದಲ್ಲಿ ದಕ್ಷರು, ಪ್ರಾಮಾಣಿಕರು ಮತ್ತು ಕ್ರಿಯಾಶೀಲರಿಗೆ ಅವಕಾಶ ನೀಡಿದರೆ ಸರಕಾರದ ಇಮೇಜ್ ಹೆಚ್ಚುತ್ತದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಮಹಿಳಾ ನ್ಯಾಯಕ್ಕೆ ಆದ್ಯತೆ ನೀಡಿದರೆ ಮತ ಬ್ಯಾಂಕ್ ಸುರಕ್ಷಿತವಾಗಿಟ್ಟುಕೊಂಡಂತೆ. ಮಾಯಕೊಂಡದ ಶಾಸಕ ಬಸವಂತಪ್ಪ ಅವರನ್ನು ಮಂತ್ರಿ ಮಾಡಿದ್ದು ಅತ್ಯಂತ ಪ್ರಬುದ್ಧ ನಡೆ. ಪೌರ ಕಾರ್ಮಿಕನ ಮಗ ಉನ್ನತ ಹುದ್ದೆ ಅಲಂಕರಿಸುವುದು ಪ್ರಜಾಪ್ರಭುತ್ವದ ಸೌಂದರ್ಯ ಹೆಚ್ಚಿಸಿದಂತೆ. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಜೇವರ್ಗಿ ಶಾಸಕ ಡಾ. ಅಜಯಸಿಂಗ್, ಕಲಘಟಗಿ ಶಾಸಕ ಸಂತೋಷ್ ಲಾಡ್ ಸಂಪುಟದ ಗೌರವ ಹೆಚ್ಚಿಸಿದ್ದಾರೆ. ಜಿಲ್ಲಾವಾರು ಪ್ರಾತಿನಿಧ್ಯ, ಜಾತಿವಾರು ಪ್ರಾತಿನಿಧ್ಯ ನೀಡುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಡವಿದೆ. ಉತ್ತರ ಕರ್ನಾಟಕದ ಕುರುಬ ಸಮುದಾಯವೇ ಸಿದ್ದರಾಮಯ್ಯ ಅವರ ರಾಜಕೀಯದ ಪ್ರಮುಖ ಶಕ್ತಿ. ಆ ಶಕ್ತಿಯನ್ನು ಕಡೆಗಣಿಸಲಾಗಿದೆ. ದಕ್ಷರು, ಪ್ರಾಮಾಣಿಕರು, ಕೆಲಸಗಾರರು ಈ ಸಂಪುಟದಲ್ಲಿ ಅವಕಾಶ ಪಡೆದಿಲ್ಲ. ಮಹಿಳಾ ಪ್ರಾತಿನಿಧ್ಯವನ್ನಂತೂ ಸಂಪೂರ್ಣ ನಿರಾಕರಿಸಲಾಗಿದೆ. ಐದು ಜನ ಮಹಿಳೆಯರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್, ನಯನಾ ಮೋಟಮ್ಮ, ಅನ್ನಪೂರ್ಣ ತುಕಾರಾಂ, ಖನೀಸ್ ಫಾತಿಮಾ, ರೂಪಕಲಾ ಶಶಿಧರ್ ಪೈಕಿ ಕನಿಷ್ಠ ಮೂವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಿತ್ತು. ಮಹಿಳಾ ಕೋಟಾದಲ್ಲೂ ಸಾಮಾಜಿಕ ನ್ಯಾಯ ಪಾಲನೆಗೆ ಅವಕಾಶ ಇತ್ತು. ಉಮಾಶ್ರೀ, ಬಲ್ಕಿಸ್ ಬಾನು, ಡಾ. ಆರತಿ ಕೃಷ್ಣ, ಗಾಯತ್ರಿ ಶಾಂತೇಗೌಡರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಬಹುದಾಗಿತ್ತು. ಅದರಲ್ಲೂ ಉಮಾಶ್ರೀ ಅವರು ಅತ್ಯುತ್ತಮ ಕೆಲಸ ಮಾಡಿ ಹೆಸರು ಮಾಡಿದ್ದರು. 2028ರ ಚುನಾವಣೆಗೆ ಸಜ್ಜಾಗಬೇಕಾದ ಕಾಂಗ್ರೆಸ್ ಪಕ್ಷ ಸಂಪುಟ ವಿಸ್ತರಣೆಯಲ್ಲಿ ಹೆಚ್ಚು ನಿಗಾ ವಹಿಸಬೇಕಿತ್ತು. ಸಿದ್ದರಾಮಯ್ಯ ಅವರಂತಹ ಜನನಾಯಕರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಿಸಿದ್ದು ಸಹಜವಾಗಿಯೇ ಚುನಾವಣಾ ರಾಜಕೀಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆಡಳಿತ ವಿರೋಧಿ ಅಲೆ ಮೆಟ್ಟಿ ನಿಲ್ಲುವಂತಹ ಅತ್ಯುತ್ತಮ ಸರಕಾರ ಈಗ ಬೇಕಾಗಿದೆ. ಹೈ ಕಮಾಂಡ್ ಹಸ್ತಕ್ಷೇಪದಿಂದ ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾಯಿಸಿದ ನಂತರ ಚುನಾವಣಾ ಫಲಿತಾಂಶ ಏನಾಗಿದೆ ಎಂಬುದು ದಾಖಲೆಯಲ್ಲಿದೆ. ಈಗ ಸಿದ್ದರಾಮಯ್ಯ ಅವರನ್ನು ಬದಲಾಯಿಸಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಲದ ಅನಿವಾರ್ಯತೆಯೆಂದೇ ಒಪ್ಪಿಕೊಳ್ಳೋಣ. ಆದರೆ ಅತ್ಯುತ್ತಮ ಸಚಿವ ಸಂಪುಟ ರಚಿಸಿಕೊಳ್ಳದ ಡಿ.ಕೆ. ಶಿವಕುಮಾರ್ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವೇ?

Tags

cabinetexpansion
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X