ಕಲ್ಯಾಣ ಕರ್ನಾಟಕ: ನೆರೆ ಹಾವಳಿಗೆ ಮುಳುಗಿದ ಬದುಕು

ಸೆಪ್ಟಂಬರ್ ಕೊನೆಯ ವಾರದ ಮಳೆ ಮತ್ತು ನೆರೆಯ ಮಹಾರಾಷ್ಟ್ರದ ಹುಚ್ಚು ಹೊಳೆ ನದಿ ಪಾತ್ರಗಳ ಜನರ ಬದುಕು ಕೊಚ್ಚಿ ಹೋಗುವಂತೆ ಮಾಡಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ ಮಾತ್ರವಲ್ಲ ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟ, ಗದಗ, ಧಾರವಾಡ ಜಿಲ್ಲೆಗಳು ಮಳೆ ಮತ್ತು ನೆರೆ ಹಾವಳಿಯಿಂದ ತತ್ತರಿಸಿ ಹೋಗಿವೆ. ಅಂದಾಜು ನೂರಾ ಹದಿನೈದಕ್ಕೂ ಹೆಚ್ಚು ಹಳ್ಳಿಗಳು ನೆರೆ ಹಾವಳಿಯಿಂದ ಬಾಧಿತವಾಗಿವೆ. ಸರಿ ಸುಮಾರು ಹತ್ತು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದು ನಿಂತ ಪೈರು ಕೊಚ್ಚಿ ಹೋಗಿದೆ. ನೂರಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳು ರಣ ರಣ ಬಿಸಿಲಿಗೆ ಹೆಸರಾಗಿವೆ. ಬೇಸಿಗೆಯ ಕಾಲದಲ್ಲಿ ಈ ಭಾಗದ ಜಿಲ್ಲೆಗಳ ತಾಪಮಾನ ವರ್ಷದಿಂದ ವರ್ಷಕ್ಕೆ ದಾಖಲೆ ಮುರಿಯುತ್ತಾ ಹೋಗುತ್ತದೆ. ದಿಲ್ಲಿಯ ತಾಪಮಾನವನ್ನೂ ಮೀರಿಸುತ್ತದೆ.
ಬೇಸಿಗೆಯ ಕಾಲದಲ್ಲಿ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ, ನೆತ್ತಿಗೆ ಆಸರೆಯಾಗುವ ನೆರಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿರುತ್ತದೆ. ಅನಾವೃಷ್ಟಿ, ಗುಳೆ ಹೋಗುವುದು ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಪ್ರತಿವರ್ಷದ ಗೋಳು. ಬರದ ನಾಡಲ್ಲಿ ಅತಿವೃಷ್ಟಿಯೂ ಬದುಕಿನ ಭಾಗವಾಗುತ್ತಿದೆ. ಬೇಸಿಗೆ ಕಾಲದಲ್ಲಿ ಈ ಭಾಗದ ನದಿ ಪಾತ್ರಗಳಲ್ಲಿ ವಾಸಿಸುವ ಜನ ಜಾನುವಾರುಗಳು ಕುಡಿಯುವ ನೀರು ದಕ್ಕಿಸಿಕೊಳ್ಳಲು ಹರಸಾಹಸ ಪಡುತ್ತಿರುತ್ತವೆ. ವಿಶೇಷವಾಗಿ ಭೀಮಾ ನದಿ ಪಾತ್ರವಂತೂ ಬೇಸಿಗೆ ಕಾಲದಲ್ಲಿ ಅಕ್ಷರಶಃ ಬತ್ತಿ ಹೋಗಿರುತ್ತದೆ. ಕೃಷ್ಣಾ ನದಿಯೊಂದು ಹೊರತು ಪಡಿಸಿದರೆ ಉಳಿದ ಬಹುಪಾಲು ಉಪನದಿಗಳು ಬತ್ತಿ ಹೋಗಿರುತ್ತವೆ. ಜಲಾಶಯಗಳು ಬಾಯಿ ತೆರೆದಿರುತ್ತವೆ. ಭೀಮಾ ನದಿ ಪಾತ್ರದ ಜನ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಮಹಾರಾಷ್ಟ್ರದಿಂದ ಐದು ಟಿಎಂಸಿ ಕುಡಿಯುವ ನೀರು ಪಡೆದುಕೊಂಡ ರೋಚಕ ಕಥಾನಕ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಭೀಮಾ ನದಿ ಪಾತ್ರದುದ್ದಕ್ಕೂ ಬೇಸಿಗೆಯಲ್ಲಿ ನೀರ ಕೊಡ ಹೊತ್ತ ಜನ ಮರಳ ಆಳ ಬಗೆದು ಜಿನುಗುವ ನೀರಿಗೆ ಹಪಹಪಿಸುತ್ತಾರೆ.
ದುರಂತ ನೋಡಿ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಬಿದ್ದ ಭಾರೀ ಮಳೆಯಿಂದ ಬೀದರ್, ಕಲಬುರಗಿ, ಯಾದಗಿರಿ ಮತ್ತು ಅಲ್ಪ ಪ್ರಮಾಣದಲ್ಲಿ ರಾಯಚೂರು ಜಿಲ್ಲೆಗಳ ನೂರಾರು ಹಳ್ಳಿಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಸೆಪ್ಟಂಬರ್ ಕೊನೆಯ ವಾರದ ಮಳೆ ಮತ್ತು ನೆರೆಯ ಮಹಾರಾಷ್ಟ್ರದ ಹುಚ್ಚು ಹೊಳೆ ನದಿ ಪಾತ್ರಗಳ ಜನರ ಬದುಕು ಕೊಚ್ಚಿ ಹೋಗುವಂತೆ ಮಾಡಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ ಮಾತ್ರವಲ್ಲ ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟ, ಗದಗ, ಧಾರವಾಡ ಜಿಲ್ಲೆಗಳು ಮಳೆ ಮತ್ತು ನೆರೆ ಹಾವಳಿಯಿಂದ ತತ್ತರಿಸಿ ಹೋಗಿವೆ. ಅಂದಾಜು ನೂರಾ ಹದಿನೈದಕ್ಕೂ ಹೆಚ್ಚು ಹಳ್ಳಿಗಳು ನೆರೆ ಹಾವಳಿಯಿಂದ ಬಾಧಿತವಾಗಿವೆ. ಸರಿ ಸುಮಾರು ಹತ್ತು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದು ನಿಂತ ಪೈರು ಕೊಚ್ಚಿ ಹೋಗಿದೆ. ನೂರಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಮೂರುನಾಲ್ಕು ದಿನಗಳ ಮಟ್ಟಿಗೆ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ(5)ಯಲ್ಲಿ ಸಾರಿಗೆ ಸಂಪರ್ಕ ಸ್ಥಗಿತಗೊಂಡಿತ್ತು. ಜೇವರ್ಗಿ ಸಮೀಪದ ಕಟ್ಟಿಸಂಗಾವಿ ಸೇತುವೆ ಸಂಪೂರ್ಣ ಮುಳುಗಿ ವಾಹನ ಸಂಚಾರ ಇಲ್ಲದಂತಾಗಿತ್ತು. ಬೀದರ್ ಜಿಲ್ಲೆಯ ಮಾಂಜರಾ, ಕಾರಂಜಾ ನದಿ ಪಾತ್ರಗಳು ಉಕ್ಕಿ ಹರಿದಿದ್ದರಿಂದ ಔರಾದ, ಭಾಲ್ಕಿ, ಕಮಲನಗರ್ ಮತ್ತು ಹುಲಸೂರು ತಾಲೂಕಿನ ಹಲವಾರು ಹಳ್ಳಿಗಳು ಜಲಾವೃತಗೊಂಡು ತತ್ತರಿಸಿ ಹೋಗಿವೆ. ಭೀಮಾ ನದಿ ಪಾತ್ರಕ್ಕೆ ಮಹಾರಾಷ್ಟ್ರ ಸರಕಾರವು ಉಜ್ಜನಿ, ಸೀನಾ ಮತ್ತು ನೀರಾ ಅಣೆಕಟ್ಟಿನಿಂದ ಹೆಚ್ಚುವರಿ ನೀರು (ಅಂದಾಜು 3.5ಲಕ್ಷ ಕ್ಯೂಸೆಕ್ಸ್)ಹರಿ ಬಿಟ್ಟಿದ್ದರಿಂದ ಅಫ್ಝಲಪುರ, ಕಲಬುರಗಿ, ಜೇವರ್ಗಿ, ಯಡ್ರಾಮಿ, ಸಿಂದಗಿ, ಯಾದಗಿರಿ, ಶಹಾಪುರ ತಾಲೂಕಿನ ಹಲವಾರು ಹಳ್ಳಿಗಳ ಜನ ಮನೆಗಳನ್ನು ತೊರೆದು ಕಾಳಜಿ ಕೇಂದ್ರಗಳಲ್ಲಿ ವಾಸ ಮಾಡುವಂತಾಗಿದೆ. ನೂರಾರು ಮನೆಗಳು, ಶಾಲಾ ಕಟ್ಟಡಗಳು ಜಖಂಗೊಂಡಿವೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನೂರಾರು ಕಿ.ಮೀ. ಉದ್ದದ ರಸ್ತೆಗಳು ಹಾಳಾಗಿವೆ. ಅಫ್ಝಲಪುರ ತಾಲೂಕಿನ ಮಣ್ಣೂರು ಗ್ರಾಮದ ಚನ್ನಕೇಶವ ದೇವಾಲಯ, ಗಾಣಗಾಪುರ ದತ್ತಾತ್ರೇಯ ದೇವಾಲಯ ಸಂಪೂರ್ಣ ಜಲಾವೃತಗೊಂಡಿದ್ದವು. ಈ ಪ್ರದೇಶದಲ್ಲಿ ವಾಡಿಕೆಗಿಂತ ಪ್ರತಿಶತ 48ರಷ್ಟು ಹೆಚ್ಚು ಮಳೆಯಾಗಿದ್ದರಿಂದ ಚಿಂಚೋಳಿ ತಾಲೂಕಿನ ಮುಲ್ಲಾಮಾರಿ, ಚಿತ್ತಾಪುರ ತಾಲೂಕಿನ ಬೆಣ್ಣೆ ತೋರಾ, ಕಾಗಿಣಾ, ಆಳಂದ ತಾಲೂಕಿನ ಅಮರ್ಜಾ ಉಪನದಿಗಳು ಭರ್ತಿಯಾಗಿ ಭೋರ್ಗರೆದಿವೆ. ಚಿಂಚೋಳಿ ತಾಲೂಕಿನ ಸುಮಾರು ಐವತ್ತರಷ್ಟು ಹಳ್ಳಿಗಳು ನಿರಾಶ್ರಿತವಾಗಿವೆ.
ಕೃಷ್ಣಾ ನದಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಹರಿದರೂ ಕರ್ನಾಟಕಕ್ಕೆ ಹೆಚ್ಚು ಫಲ ನೀಡಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ ಕೃಷ್ಣಾ ನದಿಯ ಮತ್ತಷ್ಟು ನೀರನ್ನು ಬಳಸಿಕೊಳ್ಳಬಹುದಾಗಿದೆ. ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟು ಪಡೆಯುವ ಕೃಷ್ಣಾ ನದಿ ಸುಮಾರು 1,400 ಕಿ.ಮೀ. ಹರಿದಿದೆ. ಕೃಷ್ಣಾ ನದಿಯ ಉಪನದಿಗಳಾದ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ಉಕ್ಕಿ ಹರಿದಾಗ ಅಲ್ಪಮಟ್ಟಿಗೆ ನದಿಪಾತ್ರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದರೂ ಕರ್ನಾಟಕದ ನೀರಾವರಿಗೆ ಹೆಚ್ಚು ಉಪಯುಕ್ತವಾಗಿವೆ. ಬಚಾವತ್ ತೀರ್ಪಿನ ಪ್ರಕಾರ ಕರ್ನಾಟಕ ಕೃಷ್ಣಾ ನದಿ ಪಾತ್ರಕ್ಕೆ ಅಡ್ಡಲಾಗಿ ಕಡಿಮೆ ಅಣೆಕಟ್ಟು-ಬ್ಯಾರೇಜ್ ನಿರ್ಮಿಸಿ ಸಾಧ್ಯವಾದಷ್ಟು ಲಾಭ ಪಡೆದಿದೆ. ಮಹಾರಾಷ್ಟ್ರ ಸರಕಾರ ಕೊಯ್ನಾ ಜಲವಿದ್ಯುತ್ ಸ್ಥಾವರ ನಿರ್ಮಿಸಿ 1920 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಧೂಮ್ ಅಣೆಕಟ್ಟು, ಹಿಪ್ಪರಗಿ ಬ್ಯಾರೇಜ್, ಆಲಮಟ್ಟಿ ಅಣೆಕಟ್ಟು, ನಾರಾಯಣಪುರ ಅಣೆಕಟ್ಟುಗಳು ಕಡಿಮೆ ಪ್ರಮಾಣದ ನೀರು ಬಳಸುತ್ತವೆ. ಕೃಷ್ಣಾ ನದಿ ನೀರು ಹೆಚ್ಚು ಬಳಸಿಕೊಂಡಿದ್ದು ಅವಿಭಜಿತ ಆಂಧ್ರ ಪ್ರದೇಶ. ತೆಲಂಗಾಣ-ಆಂಧ್ರ ಪ್ರದೇಶ ರಾಜ್ಯಗಳಲ್ಲಿ, ಜೂರಾಲಾ ಅಣೆಕಟ್ಟು, ಶ್ರೀಶೈಲಂ ಅಣೆಕಟ್ಟು, ನಾಗಾರ್ಜುನ ಸಾಗರ ಅಣೆಕಟ್ಟು, ಪುಲಿ ಚಿಂತಲಾ ಅಣೆಕಟ್ಟು, ಪ್ರಕಾಶಂ ಬ್ಯಾರೇಜ್, ರಾಜೋಲಿ ಬಂಡಾ ಬ್ಯಾರೇಜ್ ಮತ್ತು ಸುಂಕೇಸುಲಾ ಬ್ಯಾರೇಜ್‌ಗಳನ್ನು ನಿರ್ಮಿಸಿದ್ದಾರೆ. ಇದಲ್ಲದೆ ಇನ್ನೂ ಹಲವಾರು ಅಕ್ರಮ ನೀರಾವರಿ ಯೋಜನೆಗಳನ್ನು ನಿರ್ಮಿಸಿ ಕೃಷ್ಣಾ ನದಿ ಪಾತ್ರದ ಹೆಚ್ಚುವರಿ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.
ಭೀಮಾ ನದಿ ಹರಿವಿನ ನೀರನ್ನು ಬಳಸಿಕೊಳ್ಳಲು ಕರ್ನಾಟಕ ಅಗತ್ಯದ ಯೋಜನೆಗಳನ್ನು ನಿರ್ಮಿಸಿಕೊಂಡಿದ್ದರೆ ಪ್ರತೀ ವರ್ಷ ಭೀಮಾ ನದಿ ಪಾತ್ರದ ಜನರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗುವ ಪ್ರಸಂಗವೇ ಎದುರಾಗುತ್ತಿರಲಿಲ್ಲ.
ಅಷ್ಟಕ್ಕೂ ಭೀಮಾ ನದಿಯಿಂದ ಕರ್ನಾಟಕ ರಾಜ್ಯಕ್ಕೆ ಲಾಭಕ್ಕಿಂತಲೂ ನಷ್ಟವೇ ಜಾಸ್ತಿಯಿದೆ. ಪ್ರವಾಹದ ಕಾಲ ಹೊರತು ಪಡಿಸಿದರೆ ಕರ್ನಾಟಕದಲ್ಲಿ ಹರಿಯುವ ಭೀಮಾ ನದಿ ಹೆಚ್ಚು ಕಡಿಮೆ ವರ್ಷದುದ್ದಕ್ಕೂ ಬತ್ತಿ ಹೋಗಿರುತ್ತದೆ. ಭೀಮಾ ನದಿ ಪಾತ್ರದ ಜನರಿಗೆ ಕುಡಿಯುವ ನೀರಿಗೂ ಬರ ಎದುರಾಗುತ್ತದೆ. ಕರ್ನಾಟಕದಲ್ಲಿ ಭೀಮಾ ನದಿಗೆ ದುರ್ಗತಿ ಎದುರಾಗಲು ಮಹಾರಾಷ್ಟ್ರ ಸರಕಾರದ ಅತಿಯಾದ ಸ್ವಾರ್ಥ ಮತ್ತು ನಮ್ಮವರ ಹೊಣೆಗೇಡಿತನ ಕಾರಣ. ಭೀಮಾ ನದಿ ಪಾತ್ರದ ನೀರು ಹೆಚ್ಚು ಪ್ರಮಾಣದಲ್ಲಿ ಬಳಸಿಕೊಳ್ಳುವುದು ಒತ್ತಟ್ಟಿಗಿರಲಿ ಪ್ರವಾಹ ಬಂದಾಗ ಹರಿಯುವ ಹೆಚ್ಚುವರಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಒಂದಷ್ಟು ಬ್ಯಾರೇಜ್‌ಗಳನ್ನು ನಿರ್ಮಿಸಿದ್ದರೂ ಉಪಯುಕ್ತವಾಗುತ್ತಿತ್ತು.
ಕರ್ನಾಟಕದಲ್ಲಿ ಭೀಮಾ ನದಿ ಪಾತ್ರಕ್ಕೆ ಅಡ್ಡಲಾಗಿ 1973ರಲ್ಲಿ ಚಂದ್ರಪಳ್ಳಿ ಅಣೆಕಟ್ಟು ನಿರ್ಮಾಣವಾಗಿತ್ತು. ಚಿಂಚೋಳಿ ತಾಲೂಕಿಗೆ ನೀರಾವರಿ ಮತ್ತು ಕುಡಿಯುವ ನೀರು ಒದಗಿಸುವ ಆ ಅಣೆಕಟ್ಟು ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿರ್ಮಾಣಗೊಂಡಿತ್ತು. ಅದೇ ಅವಧಿಯಲ್ಲಿ ತಾಂತ್ರಿಕ ಮಂಜೂರಾತಿ ಪಡೆದಿದ್ದ ಚಿತ್ತಾಪೂರ ತಾಲೂಕಿನ ಮಹತ್ವಾಕಾಂಕ್ಷೆಯ ಬೆಣ್ಣೆ ತೋರಾ ಯೋಜನೆ ದಶಕಗಳು ಕಳೆದರೂ ಸಮರ್ಪಕವಾಗಿ ನಿರ್ಮಾಣಗೊಳ್ಳಲಿಲ್ಲ. ಬೆಣ್ಣೆ ತೋರಾ ಅಣೆಕಟ್ಟು ನಿರ್ಮಾಣ ದೋಷಪೂರಿತವಾಗಿದ್ದರಿಂದ ನಿರೀಕ್ಷೆಯ ಪ್ರಮಾಣದಲ್ಲಿ ರೈತರಿಗೆ ಲಾಭವಾಗಿಲ್ಲ.
ಭೀಮಾ ನದಿಗೆ ಅಡ್ಡಲಾಗಿ ಅಫ್ಝಲಪುರ ತಾಲೂಕಿನಲ್ಲಿ ಬ್ಯಾರೇಜ್ ನಿರ್ಮಾಣ ಮಾಡಿದ್ದು ಬಿಟ್ಟರೆ, ಚೆಕ್ ಡ್ಯಾಮ್ ಇತ್ಯಾದಿ ದೂರದೃಷ್ಟಿ ಯೋಜನೆಗಳನ್ನು ಕರ್ನಾಟಕ ಸರಕಾರ ರೂಪಿಸಲೇ ಇಲ್ಲ. ಅದರ ಅಡ್ಡಪರಿಣಾಮವಾಗಿ ಭೀಮಾ ನದಿ ಪಾತ್ರದ ಜನ ಭೀಕರ ನೆರೆ ಹಾವಳಿಯನ್ನು ಪ್ರತಿವರ್ಷ ಎದುರಿಸಬೇಕಾಗಿದೆ.
ಹಾಗೆ ನೋಡಿದರೆ ಭೀಮಾ ನದಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿದ್ದು ಮಹಾರಾಷ್ಟ್ರದವರು. ಭೀಮಾ ನದಿ ಮೂಲ ಇರುವುದು ಮಹಾರಾಷ್ಟ್ರದಲ್ಲೇ. ಭೀಮಾ ನದಿಯನ್ನು ಚಂದ್ರಭಾಗ ಎಂದು ಕರೆಯುತ್ತಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ ತಾಲೂಕಿನ ಭೀಮಾಶಂಕರ ದೇವಸ್ಥಾನದ ಹತ್ತಿರ ಹುಟ್ಟು ಪಡೆಯುವ ಭೀಮಾ ನದಿ, ಮಹಾರಾಷ್ಟ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ 861 ಕಿ.ಮೀ. ಹರಿಯುತ್ತದೆ. ತೆಲಂಗಾಣ ತಲುಪುತ್ತಿದ್ದಂತೆ ಭೀಮಾ ನದಿ ಕೃಷ್ಣಾ ನದಿಯೊಂದಿಗೆ ಬೆರೆತು ಒಂದಾಗುತ್ತದೆ. ಭೀಮಾ ನದಿಗೆ, ಸೀನಾ, ನೀರಾ, ಭೋಗಾವತಿ, ಭೋರಿ, ಕಾಗಿಣಾ ಉಪನದಿಗಳಿವೆ. ಅದು ಒಟ್ಟು 70,614 ಸ್ಕ್ವೇರ್ ಕಿ.ಮೀ. ವಿಸ್ತೀರ್ಣ ಹೊಂದಿದೆ.
ಭೀಮಾ ನದಿ ಪಾತ್ರದ ಒಡಲು ಬರಿದು ಮಾಡಿದ್ದು ಮಹಾರಾಷ್ಟ್ರ ಸರಕಾರ. ಭೀಮಾ ನದಿಗೆ ಅಡ್ಡಲಾಗಿ ಮಹಾರಾಷ್ಟ್ರ ಸರಕಾರ ಒಟ್ಟು 22 ಅಣೆಕಟ್ಟುಗಳನ್ನು ನಿರ್ಮಿಸಿದೆ. ಅಂದಾಜು 30 ಬ್ಯಾರೇಜ್‌ಗಳನ್ನು ಕಟ್ಟಿದೆ. ಭೀಮಾ ನದಿಯ ಮೊದಲ ಅಣೆಕಟ್ಟು, ಖೇಡ ತಾಲೂಕಿನ ಚಾಸ ಕಮಾನ ಅಣೆಕಟ್ಟು. ಅತಿ ದೊಡ್ಡ ಅಣೆಕಟ್ಟು ಉಜ್ಜನಿ ಅಣೆಕಟ್ಟು. ಇದರ ಜಲಾಶಯದ ಸಾಮರ್ಥ್ಯ 118 ಟಿಎಂಸಿ ಭೀಮಾ ನದಿಯ ಒಟ್ಟು ನೀರು ಸಂಗ್ರಹಣಾ ಸಾಮರ್ಥ್ಯ 300 ಟಿಎಂಸಿ. ಮಹಾರಾಷ್ಟ್ರದವರ ದುರಾಸೆ ಮಿತಿ ಮೀರಿದ್ದು ಉಜ್ಜನಿ ಜಲಾಶಯದಿಂದ ನೀರನ್ನು ಸೀನಾ ಉಪನದಿಗೆ ಸಾಗಿಸಲು 21 ಕಿ.ಮೀ. ಉದ್ದದ ಟನೆಲ್ ನಿರ್ಮಿಸಿದ್ದಾರೆ. ಅಷ್ಟು ಮಾತ್ರವಲ್ಲ ಹತ್ತು ಜಲ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿಕೊಂಡಿದ್ದಾರೆ. ಭೀಮಾ ನದಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು, ಕರ್ನಾಟಕದ ಜನ ಕುಡಿಯುವ ನೀರು ಹರಿಬಿಡಲು ಕೇಳಿದಾಗ ಮಹಾರಾಷ್ಟ್ರ ಸರಕಾರ ನಿರ್ದಯವಾಗಿ ನಿರಾಕರಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಬಳಿಕ ಐದು ಟಿಎಂಸಿ ನೀರು ಬಿಡಲು ಒಪ್ಪಿಕೊಂಡಿತ್ತು.
ಭೀಮಾ ನದಿ ಪಾತ್ರದ ಕರ್ನಾಟಕದ ಹಳ್ಳಿಗಳು ವರ್ಷದುದ್ದಕ್ಕೂ ನೀರಿನ ಬರ ಅನುಭವಿಸಿ ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ಮಾತ್ರ ಪ್ರವಾಹದ ನೀರಲ್ಲಿ ಬದುಕು ಮುಳುಗುವ ದುರ್ದಿನಗಳನ್ನು ಕಾಣಬೇಕು. ಮಹಾರಾಷ್ಟ್ರದ ಪುಣೆ, ಸೋಲಾಪುರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿ ಉಜ್ಜನಿ, ಸೀನಾ ಅಣೆಕಟ್ಟೆಗಳು ಭರ್ತಿಯಾದರೆ ಸಾಕು ಹಿಂದೆ ಮುಂದೆ ನೋಡದೆ ಹೆಚ್ಚುವರಿ ನೀರನ್ನು ಕರ್ನಾಟಕಕ್ಕೆ ಹರಿದು ಬಿಡುತ್ತಾರೆ. ಕರ್ನಾಟಕದ ಭೀಮಾ ನದಿ ಪಾತ್ರದ ಹಳ್ಳಿಗಳು ಅಕ್ಷರಶಃ ಕೊಚ್ಚಿ ಹೋಗುತ್ತವೆ. ಮತ್ತೆ ಬದುಕು ಕಟ್ಟಿಕೊಳ್ಳಲು ಆರೇಳು ತಿಂಗಳು ಬೇಕು.
ಭೀಮಾ ನದಿ ಪಾತ್ರಕ್ಕೆ ಹೆಚ್ಚು ನೀರು ಹರಿದು ಬರುತ್ತಿರುವುದು ಇದೇ ಮೊದಲಲ್ಲ. 2007, 2018, 2019, 2020, 2021ರಲ್ಲೂ ಹೆಚ್ಚು ಮಳೆಯಾಗಿ, ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಹರಿದು ಬಂದು ಭೀಮಾ ನದಿ ಪಾತ್ರದ ಕರ್ನಾಟಕದ ಹಳ್ಳಿಗಳು ಜಲಾವೃತಗೊಂಡಿದ್ದವು. ನಾಲ್ಕು ದಿನ ಮುಖ್ಯಮಂತ್ರಿಗಳ ವೈಮಾನಿಕ ಸಮೀಕ್ಷೆ, ಮಂತ್ರಿ ಅಧಿಕಾರಿಗಳ ಭೇಟಿ, ಕಾಳಜಿ ಕೇಂದ್ರಗಳ ಸ್ಥಾಪನೆ ಎಲ್ಲವೂ ವಿಧಿಕ್ರಿಯೆಯಂತೆ ನಡೆದು ಸ್ತಬ್ಧವಾಗುತ್ತವೆ. ಪ್ರವಾಹದಿಂದ ಪ್ರತಿವರ್ಷ ಬಾಧಿತವಾಗುವ ಹಳ್ಳಿಗಳನ್ನು ಖಾಯಂ ಆಗಿ ಶಿಫ್ಟ್ ಮಾಡುವ, ಪುನರ್ ವಸತಿ ವ್ಯವಸ್ಥೆ ಕಲ್ಪಿಸುವ ಪ್ರಯತ್ನಗಳು ನಡೆಯುವುದಿಲ್ಲ. ಇಲ್ಲಿ ಸರಕಾರ ಮುಖ್ಯಮಂತ್ರಿ, ಮಂತ್ರಿ, ಅಧಿಕಾರಿಗಳು ಸೇರಿ ಯಾರನ್ನೂ ದೂಷಿಸುವಂತಿಲ್ಲ. ಯಾಕೆಂದರೆ, ವ್ಯವಸ್ಥೆ ಹಾಗೆ ನಿರ್ಮಾಣವಾಗಿದೆ. ಬರ ಮತ್ತು ನೆರೆ ಹಾವಳಿ ವ್ಯವಸ್ಥೆಯ ಭಾಗವಾಗಿರುವವರಿಗೆ ಹಬ್ಬ. ಈ ಬಾರಿಯ ಮುಂಗಾರು ಹತ್ತು ದಿನ ಮೊದಲೇ ಪ್ರವೇಶ ಮಾಡಿದೆ. ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಮುಂಚಿತವಾಗಿಯೇ ಹೇಳಿತ್ತು. ಆಗ ಯಾರೂ ಆ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಪ್ರವಾಹದ ಉಗ್ರ ಪ್ರತಾಪ ಎದುರಾದಾಗ ರಕ್ಷಣೆಯ ಪ್ರಹಸನ ನಡೆಯುತ್ತದೆ. ಮುಂಜಾಗ್ರತಾ ಕ್ರಮ ಜರುಗಿಸಿದ್ದರೆ, ಜನ, ಜಾನುವಾರು ಅನುಭವಿಸಿದ ಕಷ್ಟ ಕೋಟಲೆ ತಪ್ಪಿಸಬಹುದಿತ್ತಲ್ಲ. ಕೆಟ್ಟು ಹೋದ ರಸ್ತೆಗಳು ಗುತ್ತಿಗೆದಾರರ ಅನುಕೂಲಕ್ಕಾಗಿ ಬೇಗ ಎದ್ದು ನಿಲ್ಲುತ್ತವೆ. ಬೆಳೆ ಹಾನಿ ಪರಿಹಾರ ಅರ್ಧಂಬರ್ದ ಸಿಗುತ್ತದೆ. ಜಲಪ್ರವಾಹ ಉಂಟು ಮಾಡಿದ ಘೋರ ದುರಂತ ಸರಿಪಡಿಸಿಕೊಳ್ಳಲು ಸಾಕಷ್ಟು ಸಮಯ ಬೇಕು. ನೆಲೆ ನಿಂತ ಭಾವದಲ್ಲಿ ಸಂಭ್ರಮ ಪಡುತ್ತಿರುವಾಗ ಮತ್ತೆ ನೆರೆ ಹಾವಳಿ ಅಪ್ಪಳಿಸಿ ಬದುಕನ್ನು ಮೂರಾಬಟ್ಟೆ ಮಾಡುತ್ತದೆ. ಈ ತಿರುಗಣಿಯ ಯಾತನೆಗೆ ಖಾಯಂ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ ಇಂದಿನ ದಿನಮಾನಗಳಲ್ಲಿ ಜಲಪ್ರವಾಹದ ಭೀಕರತೆ ತಗ್ಗಿಸುವುದು ದೊಡ್ಡ ಸಮಸ್ಯೆಯಲ್ಲ. ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ನೀರು ನಿರ್ವಹಣೆಯ ಕಲೆಯನ್ನು ಪಕ್ಕದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಂದ ನೋಡಿ ಕಲಿಯಬೇಕು. ಕರ್ನಾಟಕದವರ ಉದಾಸೀನತೆಗೆ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸದೆ ಇರುವುದು ಜ್ವಲಂತ ಸಾಕ್ಷಿ.







