Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಕೋಗಿಲು ತೆರವು: ಗುಬ್ಬಿ ಮೇಲೆ...

ಕೋಗಿಲು ತೆರವು: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ3 Jan 2026 11:25 AM IST
share
ಕೋಗಿಲು ತೆರವು: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಹನ್ನೊಂದು ಲಕ್ಷ ಎಕರೆ ಸರಕಾರಿ ಜಮೀನನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಂದಾಜು 34,000 ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದೆ. ಅದನ್ನು ತೆರವು ಮಾಡಿಸುವ ತಾಕತ್ತು ಪ್ರದರ್ಶಿಸದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕೋಗಿಲು ಬಡಾವಣೆಯ ಬಡಪಾಯಿಗಳ ಮೇಲೆ ಬಲ ಪ್ರಯೋಗ ಮಾಡಿ ಶೆಡ್‌ನಂತಿರುವ ಮನೆಗಳನ್ನು ಧ್ವಂಸ ಮಾಡಿದ್ದಾರೆ. ಅಧಿಕಾರಿಗಳ ಹೀರೋಗಿರಿ ಬಡವರು, ಮಧ್ಯಮ ವರ್ಗದವರ ಎದುರುಗಡೆ ಮಾತ್ರ ಹೆಚ್ಚು ಕ್ರಿಯಾಶೀಲವಾಗುತ್ತದೆ. ಶ್ರೀಮಂತ ಉದ್ಯಮಿಗಳು, ಮೇಲು ಜಾತಿಯ ರಾಜಕಾರಣಿಗಳು, ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕುಳಗಳ ಎದುರು ಮಂಡಿಯೂರುತ್ತದೆ. ಸರಕಾರದ ಈ ಡಬಲ್ ಸ್ಟ್ಯಾಂಡರ್ಡ್‌ನಿಂದಾಗಿ ದಿನೇ ದಿನೇ ಬ್ರಾಂಡ್ ಬೆಂಗಳೂರು ವರ್ಚಸ್ಸು ಕಳೆದುಕೊಳ್ಳುತ್ತಿದೆ.

ಕಳೆದ ವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಯಲಹಂಕ ವಿಧಾನಸಭಾ ಮತ ಕ್ಷೇತ್ರದ ಕೋಗಿಲು ಬಡಾವಣೆಯ ಸುಮಾರು ಇನ್ನೂರು ಕುಟುಂಬಗಳು ವಾಸವಾಗಿರುವ ಮನೆಗಳನ್ನು ನಿರ್ದಯವಾಗಿ ನೆಲಸಮ ಮಾಡಿ ತೆರವುಗೊಳಿಸಿದ್ದಾರೆ. ಕೋಗಿಲು ಬಡಾವಣೆಯ ಫಕೀರ ಕಾಲನಿ ಮತ್ತು ವಾಸಿಂ ಕಾಲನಿಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಇನ್ನೂರಕ್ಕೂ ಹೆಚ್ಚು ಕುಟುಂಬಗಳನ್ನು ಕೊರೆಯುವ ಚಳಿಯಲ್ಲಿ ಬೀದಿಗೆ ತಳ್ಳಲಾಗಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೋಗಿಲು ಬಡಾವಣೆಯ ಬಡ ಕಾರ್ಮಿಕರ ಪರ ದನಿ ಎತ್ತಿದ ಮೇಲೆ ಕರ್ನಾಟಕ ಸರಕಾರ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಂಡು ಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಕೋಗಿಲು ಬಡಾವಣೆಯ ಮನೆ ಕಳೆದುಕೊಂಡ ಬಡ ಕಾರ್ಮಿಕರಲ್ಲಿ ಮುಸ್ಲಿಮ್ ಸಮುದಾಯದವರು ಹೆಚ್ಚಾಗಿರುವುದರಿಂದ ಬಿಜೆಪಿ ಮುಖಂಡರು ಮತೀಯ ರಾಜಕಾರಣ ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಕೋಗಿಲು ಬಡಾವಣೆಯ ಮನೆ ಕಳೆದುಕೊಂಡವರಲ್ಲಿ ಮುಸ್ಲಿಮರು ಮಾತ್ರವಲ್ಲ, ದಲಿತರು, ಹಿಂದುಳಿದ ವರ್ಗದವರು ಸೇರಿದ್ದಾರೆ. ಆದರೆ ಕಾಮಾಲೆ ಕಣ್ಣಿನ ಬಿಜೆಪಿಯವರಿಗೆ ಕೋಗಿಲು ಬಡಾವಣೆಯ ಎಲ್ಲರೂ ಬಾಂಗ್ಲಾ ವಲಸಿಗರಂತೆ ಕಾಣುತ್ತಿದ್ದಾರೆ.

ಕೋಗಿಲು ಬಡಾವಣೆಯ ಫಕೀರ ಮತ್ತು ವಾಸಿಂ ಕಾಲನಿಗಳಲ್ಲಿ ಬಡ ಕಾರ್ಮಿಕರು 2012ರಿಂದ ವಾಸಿಸುತ್ತಿದ್ದಾರೆ. ಆ ಕಾಲನಿಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸಿದ್ದಾರೆ. ಅಷ್ಟು ಮಾತ್ರವಲ್ಲ ಸ್ಥಳೀಯ ಪುಢಾರಿಗಳು ಬಡ ಕಾರ್ಮಿಕರಿಂದ ಲಕ್ಷಗಟ್ಟಲೆ ಹಣ ವಸೂಲಿ ಮಾಡಿದ್ದಾರೆ. ಕೆಲವರಿಂದ ಬಾಡಿಗೆ ಪಡೆದುಕೊಂಡಿದ್ದಾರೆ. ಇಂದಲ್ಲ ನಾಳೆ ಮನೆ ಹಕ್ಕು ಪತ್ರ ಸಿಗಬಹುದೆಂದು ಅಲ್ಲಿಯ ನಿವಾಸಿಗಳನ್ನು ನಂಬಿಸಲಾಗಿದೆ. ಕೋಗಿಲು ಬಡಾವಣೆಯನ್ನು ಒತ್ತುವರಿ ಮಾಡಿಕೊಂಡ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ ಎಂದೇ ಒಪ್ಪಿಕೊಳ್ಳೋಣ. ಒತ್ತುವರಿ ತೆರವು ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾನವೀಯ ರೀತಿಯಲ್ಲಿ ನಡೆದುಕೊಳ್ಳಬಹುದಿತ್ತು. ಅಲ್ಲಿಯ ನಿವಾಸಿಗಳಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಬೇಕಿತ್ತು. ಅದು ಬಿಟ್ಟು ಏಕಾಏಕಿ ಹಿಟಾಚಿಯಿಂದ ಮನೆ ನೆಲಸಮ ಮಾಡಿದ್ದು ಮತ್ತು ಅಲ್ಲಿಯ ನಿವಾಸಿಗಳನ್ನು ಒಕ್ಕಲೆಬ್ಬಿಸಿದ್ದು ಅತ್ಯಂತ ಅಮಾನವೀಯ ನಡೆ ಎನಿಸಿಕೊಳ್ಳುತ್ತದೆ. ಬಡ ಕಾರ್ಮಿಕರು ಮತ್ತು ಮಧ್ಯಮ ವರ್ಗದ ನಿವಾಸಿಗಳ ಮೇಲೆ ನಿರ್ದಯವಾಗಿ ಕ್ರಮ ಜರುಗಿಸುವ ಅಧಿಕಾರಿಗಳು ಶ್ರೀಮಂತರ ವಿಷಯದಲ್ಲಿ ಯಾಕೆ ಹೊಣೆಗೇಡಿಗಳಂತೆ ವರ್ತಿಸುತ್ತಾರೆ.?

ಹೌದು, ಬೆಂಗಳೂರು ಯೋಜಿತವಾಗಿ ಮತ್ತು ದೂರದೃಷ್ಟಿಯಿಂದ ನಿರ್ಮಾಣ ಮಾಡಿದ ನಗರವಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. 1969ಕ್ಕೂ ಮುಂಚೆ ಬೆಂಗಳೂರು ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ಎಂಬ ಹೆಸರಿನ ಸಕ್ಷಮ ಪ್ರಾಧಿಕಾರ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುತ್ತಿತ್ತು. ನಾಡಪ್ರಭು ಕೆಂಪೇಗೌಡರ ಕಾಲದ ಬೆಂಗಳೂರು ಯೋಜಿತವಾಗಿ ಮತ್ತು ನಿರ್ದಿಷ್ಟ ಉದ್ದೇಶ ಈಡೇರಿಕೆಗಾಗಿ ಸುಸಜ್ಜಿತವಾಗಿಯೇ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಕರ್ನಾಟಕದ ರಾಜಧಾನಿಯಾದ ಮೇಲಂತೂ ಶರ ವೇಗದಲ್ಲಿ ಬೆಳೆಯತೊಡಗಿತು. ಸ್ವಾತಂತ್ರ್ಯಾನಂತರದ ಬೆಂಗಳೂರನ್ನು ಯೋಜಿತವಾಗಿ, ಸುಸಜ್ಜಿತವಾಗಿ ನಿರ್ಮಾಣ ಮಾಡುವಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಶ್ರೀಮಂತರು ವಾಸಿಸುವ ಬಡಾವಣೆಗಳನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಿದ್ದಾರೆ. ಜಯನಗರ, ಸದಾಶಿವ ನಗರ, ಆರ್.ಟಿ. ನಗರ, ಇಂದಿರಾ ನಗರ, ಡಾಲರ್ಸ್ ಕಾಲನಿ ಇತ್ಯಾದಿ ಬಡಾವಣೆಗಳಿಗೆ ಅಗಲವಾದ ರಸ್ತೆಗಳು, ಅತ್ಯುತ್ತಮ ಚರಂಡಿ ವ್ಯವಸ್ಥೆ ಮತ್ತು ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಆಯಾ ಕಾಲಘಟ್ಟದ ಅಭಿವೃದ್ಧಿ ಪ್ರಾಧಿಕಾರಗಳು ಸರಕಾರಿ ಮತ್ತು ಖಾಸಗಿ ಬಡಾವಣೆ ನಿರ್ಮಾಣ ಮಾಡುವಾಗ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರೆ ಬೆಂಗಳೂರು ಈ ಮಟ್ಟದಲ್ಲಿ ಅಕ್ರಮ ಕಟ್ಟಡಗಳ ತಾಣವಾಗುತ್ತಿರಲಿಲ್ಲ. ಹಳೆಯ ಕಾಲದ ಮಾತು ಬಿಡಿ, ಈ ಹೊತ್ತಿಗೂ ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಅದಕ್ಕೆ ನೇರ ಕಾರಣ ಈ ಹಿಂದಿನ ಬಿಬಿಎಂಪಿ ಅಧಿಕಾರಿಗಳು ಮತ್ತು ಅವರ ಬೆಂಬಲಕ್ಕೆ ನಿಲ್ಲುವ ರಾಜಕಾರಣಿಗಳು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶುದ್ಧವಾಗಿದ್ದರೆ, ಅಕ್ರಮ ಬಡಾವಣೆ ಮತ್ತು ಅಕ್ರಮ ಕಟ್ಟಡಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ಭೂ ಮಾಫಿಯಾದ ಮಂದಿ ದಿಢೀರ್ ಹಣ ಮಾಡಲು ಹೋಗಿ ಇಡೀ ಬೆಂಗಳೂರು ನಗರವನ್ನು ಅವ್ಯವಸ್ಥೆಯ ಆಗರವನ್ನಾಗಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ನಗರದಲ್ಲಿ ಪ್ರತಿ ಶತ ಎಪ್ಪತ್ತರಷ್ಟು ಮನೆಗಳನ್ನು ನಿಯಮ ಉಲ್ಲಂಘಿಸಿ ಕಟ್ಟಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅತ್ಯಂತ ಭ್ರಷ್ಟ ಸಂಸ್ಥೆಯಾಗಿದ್ದರಿಂದಲೇ ಅಕ್ರಮ ಬಡಾವಣೆ ಮತ್ತು ಕಟ್ಟಡಗಳು ರಾಜಾರೋಷವಾಗಿ ತಲೆ ಎತ್ತಿ ನಿಂತಿವೆ.

ಒಂದಾನೊಂದು ಕಾಲದಲ್ಲಿ ಬೆಂಗಳೂರು ನಗರದಲ್ಲಿ ಅಂದಾಜು 900 ಕೆರೆ ಕುಂಟೆಗಳು ಅಸ್ತಿತ್ವದಲ್ಲಿದ್ದವು. ವೃಷಭಾವತಿ ನದಿ ಸೇರಿದಂತೆ ಹಲವಾರು ಹಳ್ಳಕೊಳ್ಳಗಳು ಮಳೆ ನೀರು ಸುಗಮವಾಗಿ ಹರಿದು ಹೋಗುವಂತೆ ಮಾಡುತ್ತಿದ್ದವು. ಕೆರೆ ಕುಂಟೆಗಳು ಮಳೆ ನೀರನ್ನು ಇಂಗಿಸಿ ಬೆಂಗಳೂರು ಅಂತರ್ಜಲ ಮಟ್ಟವನ್ನು ಸದಾ ಕಾಪಾಡುತ್ತಿದ್ದವು.

ಎಲೆ ಮಲ್ಲಪ್ಪ ಶೆಟ್ಟಿ, ಯಲಹಂಕ, ವರ್ತೂರು, ಉಲಸೂರು, ರಾಚೇನಹಳ್ಳಿ, ಮಾರಗೊಂಡನಹಳ್ಳಿ, ಮಡಿವಾಳ, ಕಲಕೆರೆ ಲೇಕ್, ಜಕ್ಕೂರು, ಹುಳಿಮಾವು, ಹೆಬ್ಬಾಳ, ದೊಡ್ಡನೆಕುಂಡಿ, ದೊಡ್ಡ ಬೊಮ್ಮಸಂದ್ರ, ಚಿಕ್ಕ ಬಾಣಾವರ, ಬೆಳಂದೂರು ಮತ್ತು ಬೇಗೂರು ಲೇಕ್‌ಗಳು ಬೆಂಗಳೂರಿನ ಜೀವನಾಡಿಗಳಾಗಿದ್ದವು. ಬೆಂಗಳೂರಿನ ಬಹುಪಾಲು ಕೆರೆ ಕುಂಟೆಗಳು ಭೂ ಗಳ್ಳರ ಪಾಲಾಗಿವೆ. ಧರ್ಮಾಂಬುದಿ ಕೆರೆ ಸೇರಿದಂತೆ ಹಲವು ಕೆರೆಗಳನ್ನು ಸರಕಾರವೇ ಅಭಿವೃದ್ಧಿ ಕಾರ್ಯಕ್ಕಾಗಿ ಬಳಸಿಕೊಂಡಿದೆ. ಈಗಿನ ಮೆಜೆಸ್ಟಿಕ್ ಬಸ್ ನಿಲ್ದಾಣ 1980ರ ಪೂರ್ವದಲ್ಲಿ ಧರ್ಮಾಂಬುದಿ ಕೆರೆಯಾಗಿತ್ತು. ಈಗ 180ರಿಂದ 200 ಕೆರೆಗಳು ಭೂಗಳ್ಳರಿಂದ ಬಚಾವ್ ಆಗಿ ಉಳಿದುಕೊಂಡಿವೆ. ಅವುಗಳಲ್ಲಿ 167 ಕೆರೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ವಹಣೆ ಮಾಡುತ್ತಿದೆ. ಕೆರೆ ಕುಂಟೆಗಳು ಭೂಗಳ್ಳರ ಪಾಲಾದರೆ, ನದಿ ನಾಲೆಗಳು ಅರ್ಥಾತ್ ರಾಜಕಾಲುವೆಗಳು (storm water drains) ಭೂಗಳ್ಳರ ಒತ್ತುವರಿಯಿಂದ ಅಕ್ಷರಶಃ ಚರಂಡಿಗಳಾಗಿ ರೂಪಾಂತರಗೊಂಡಿವೆ.

ಬೆಂಗಳೂರು ಮಾತ್ರವಲ್ಲ, ಇಡೀ ಕರ್ನಾಟಕದಲ್ಲಿ ಸರಕಾರಿ ಜಮೀನಿನ ಒತ್ತುವರಿ ವ್ಯಾಪಕವಾಗಿ ನಡೆದಿದೆ. ಬಾಲಸುಬ್ರಮಣ್ಯನ್ ಅಧ್ಯಕ್ಷತೆಯ ಕಾರ್ಯಪಡೆ ಸರಕಾರಿ ಜಮೀನು ಒತ್ತುವರಿಯ ಸಮಗ್ರ ಮಾಹಿತಿ ಸರಕಾರಕ್ಕೆ ನೀಡಿದೆ. ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಒತ್ತುವರಿ ಕುರಿತ ವಿವರವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿ 2011-2012ರ ಅವಧಿಯಲ್ಲೇ ಸಲ್ಲಿಕೆಯಾಗಿದ್ದರೂ ಒತ್ತುವರಿ ತೆರವಿಗೆ ಸರಕಾರಗಳು ರಾಜಕೀಯ ಇಚ್ಛಾಶಕ್ತಿ ತೋರಲಿಲ್ಲ. ಆ ಎರಡೂ ವರದಿಗಳು, ಅಪಾರ ಪ್ರಮಾಣದ ಸರಕಾರಿ ಜಮೀನು ಭೂಗಳ್ಳರ ವಶದಲ್ಲಿರುವುದನ್ನು ದಾಖಲೆ ಸಮೇತ ಬಹಿರಂಗಪಡಿಸಿವೆ. ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಹನ್ನೊಂದು ಲಕ್ಷ ಎಕರೆ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಂದಾಜು 34,000 ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದೆ. ಅದನ್ನು ತೆರವು ಮಾಡಿಸುವ ತಾಕತ್ತು ಪ್ರದರ್ಶಿಸದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕೋಗಿಲು ಬಡಾವಣೆಯ ಬಡಪಾಯಿಗಳ ಮೇಲೆ ಬಲ ಪ್ರಯೋಗ ಮಾಡಿ ಶೆಡ್‌ನಂತಿರುವ ಮನೆಗಳನ್ನು ಧ್ವಂಸ ಮಾಡಿದ್ದಾರೆ. ಅಧಿಕಾರಿಗಳ ಹೀರೋಗಿರಿ ಬಡವರು, ಮಧ್ಯಮ ವರ್ಗದವರ ಎದುರುಗಡೆ ಮಾತ್ರ ಹೆಚ್ಚು ಕ್ರಿಯಾಶೀಲವಾಗುತ್ತದೆ. ಶ್ರೀಮಂತ ಉದ್ಯಮಿಗಳು, ಮೇಲು ಜಾತಿಯ ರಾಜಕಾರಣಿಗಳು, ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕುಳಗಳ ಎದುರು ಮಂಡಿಯೂರುತ್ತದೆ. ಸರಕಾರದ ಈ ಡಬಲ್ ಸ್ಟ್ಯಾಂಡರ್ಡ್‌ನಿಂದಾಗಿ ದಿನೇ ದಿನೇ ಬ್ರಾಂಡ್ ಬೆಂಗಳೂರು ವರ್ಚಸ್ಸು ಕಳೆದುಕೊಳ್ಳುತ್ತಿದೆ.

ಅರ್ಧ ಬೆಂಗಳೂರು ನಗರ ಪ್ರತೀ ವರ್ಷ ಮಳೆಗಾಲದಲ್ಲಿ ಮುಳುಗಿ ಹೋಗಿರುತ್ತದೆ. ಮಳೆ ನೀರು ಸುಗಮವಾಗಿ ಹರಿದು ಹೋಗಲು ದಾರಿಗಳು ಮುಚ್ಚಿ ಹೋಗಿವೆ. ಅಪಾರ ಸಂಖ್ಯೆಯ ಕೆರೆ ಕಟ್ಟೆಗಳು ಒತ್ತುವರಿಯಾಗಿದ್ದರಿಂದ ಮಳೆ ನೀರು ಇಂಗಲು ಅವಕಾಶ ಇಲ್ಲ.

ರಾಜಕಾಲುವೆಗಳು, ಸಣ್ಣ ಪುಟ್ಟ ಹಳ್ಳ ಕೊಳ್ಳಗಳು ಮಳೆ ನೀರನ್ನು ಸಾಗಿಸುವ ವಾಹಕಗಳಾಗಿದ್ದವು. ಅವುಗಳನ್ನು ಕಾಪಾಡಿಕೊಳ್ಳಲು ಸರಕಾರ ಬಫರ್ ರೆನ್ ನಿಯಮಗಳನ್ನು ರೂಪಿಸಿತ್ತು. ರಾಜಕಾಲುವೆಗಳನ್ನು ಪ್ರೈಮರಿ ಬಫರ್ ರೆನ್ ಎಂದು ಗುರುತಿಸಿ ಅವುಗಳಿಂದ ಐವತ್ತು ಮೀಟರ್ ದೂರದವರೆಗೂ ಯಾವುದೇ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ಮಿಸುವಂತಿಲ್ಲ. ಸಣ್ಣ ಪುಟ್ಟ ನಾಲೆಗಳನ್ನು ಸೆಕೆಂಡರಿ ಬಫರ್ ರೆನ್ ಗಳೆಂದು ಗುರುತಿಸಿ ಅವುಗಳಿಂದ 35 ಮೀಟರ್ ದೂರದವರೆಗೂ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಟೆರಿಟರಿ ಬಫರ್ ರೆನ್‌ನ 25 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ನಿಯಮ ಜಾರಿಯಲ್ಲಿತ್ತು. ಈಗ ಬಫರ್ ರೆನ್ ವ್ಯಾಪ್ತಿಯನ್ನು ಕಿರಿದುಗೊಳಿಸಿ ನಿಯಮ ರೂಪಿಸಿದ್ದಾರೆ. ಪ್ರೈಮರಿ ಬಫರ್ ರೆನ್-15 ಮೀಟರ್, ಸೆಕೆಂಡರಿ ಬಫರ್ ರೆನ್-10 ಮೀಟರ್ ಮತ್ತು ಟೆರಿಟರಿ ಬಫರ್ ರೆನ್-5ಮೀಟರ್‌ಗೆ ಇಳಿಸಿದ್ದಾರೆ. ಹೊಸ ನಿಯಮಾವಳಿಗಳನ್ನು ಶ್ರೀಮಂತರು ಮತ್ತು ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ದಣಿಗಳು ಪಾಲಿಸುತ್ತಿಲ್ಲ.

ರಾಜಕಾಲುವೆಗಳ ಬಫರ್ ರೆನ್ ವ್ಯಾಪ್ತಿ ಉಲ್ಲಂಘಿಸಿ ಬೆಂಗಳೂರಿನಲ್ಲಿ ನೂರಾರು ಕಟ್ಟಡಗಳು ನಿರ್ಮಾಣವಾಗಿವೆ. ಆ ಎಲ್ಲ ಬಹುಮಹಡಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಶ್ರೀಮಂತರ ಒಡೆತನದಲ್ಲಿವೆ. ಹಾಗಾಗಿ ಸರಕಾರ ಅಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಧೀರ ಅಧಿಕಾರಿಗಳು ಅಕ್ರಮ ಕಟ್ಟಡಗಳನ್ನು ತೆರವು ಮಾಡಿಸಲು ಧೈರ್ಯ ತೋರುತ್ತಿಲ್ಲ.

ಒಂದು ಉದಾಹರಣೆಯೊಂದಿಗೆ ಹಿಂದಿನ ಬಿಬಿಎಂಪಿ ಮತ್ತು ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ದ್ವಂದ್ವ ನೀತಿಯನ್ನು ಬೆತ್ತಲುಗೊಳಿಸಬಹುದು. ಇದೊಂದು ಸ್ಯಾಂಪಲ್ ಮಾತ್ರ. ಇಂತಹ ನೂರಾರು ನಿದರ್ಶನಗಳು ದಾಖಲೆ ಸಮೇತ ಸರಕಾರದ ಮುಂದೆ ಇಡಬಹುದು.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ರಾಜರಾಜೇಶ್ವರಿ ನಗರ ಎಂಬ ಹೆಸರಿನ ವಿಶಾಲವಾದ ಏರಿಯಾ ಇದೆ. ಆ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲೇ ಐಡಿಯಲ್ ಹೋಮ್ಸ್ ಲೇಔಟ್ ನಿರ್ಮಾಣ ಮಾಡಲಾಗಿದೆ. ಈ ಲೇಔಟ್ ನಿರ್ಮಾಣಕ್ಕೆ 1969ರಲ್ಲಿ ಅಂದಿನ ಬೆಂಗಳೂರು ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ಅನುಮೋದನೆ ನೀಡಿದೆ. 1989ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಐಡಿಯಲ್ ಹೋಮ್ಸ್ ಲೇಔಟ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಈ ಮಧ್ಯ 2003ರಲ್ಲಿ ರಾಜರಾಜೇಶ್ವರಿ ಪ್ರತಿಷ್ಠಾಪನ ಸಮಿತಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿತು. ನ್ಯಾಯಾಲಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿತು. 2007ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿ ರಾಜಕಾಲುವೆ ಬಫರ್ ರೆನ್‌ನ ಒಟ್ಟು ಏಳು ಎಕರೆ ಮೂವತ್ತೊಂದು ಗುಂಟೆ ಜಮೀನು ಒತ್ತುವರಿಯಾಗಿದೆ ಎಂದು ಆ ತನಿಖಾ ವರದಿಯಲ್ಲಿ ದಾಖಲಿಸಲಾಗಿತ್ತು. ಒತ್ತುವರಿ ಜಾಗದಲ್ಲಿ ನಿರ್ಮಾಣವಾದ 63 ನಿವೇಶನಗಳಲ್ಲಿನ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಅದೇಶಿಸಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ಜಾಗದಲ್ಲಿ ನಿರ್ಮಾಣವಾದ ಕಟ್ಟಡಗಳನ್ನು ತೆರವುಗೊಳಿಸಲು ಸಿದ್ಧತೆ ಕೂಡ ಮಾಡಿಕೊಂಡಿದ್ದರು. ಕೆಲವು ಬಡಪಾಯಿಗಳ ಮನೆಗಳನ್ನು ನೆಲಸಮ ಮಾಡಿದರು. ಆದರೆ ಒತ್ತುವರಿ ಜಾಗದಲ್ಲಿ ನಿರ್ಮಾಣವಾದ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ಬಹು ದೊಡ್ಡ ಆಸ್ಪತ್ರೆಯ ಕಟ್ಟಡವನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಂದ ಸಾಧ್ಯವಾಗಲಿಲ್ಲ. ಅದೇ ಲೇಔಟ್‌ನಲ್ಲಿ ನಿರ್ಮಾಣವಾದ ನಟ ದರ್ಶನ್ ಅವರ ಅಕ್ರಮ ಕಟ್ಟಡವನ್ನು ಅಧಿಕಾರಿಗಳು ಮುಟ್ಟಲಿಲ್ಲ. ಆದರೆ ಮಧ್ಯಮ ವರ್ಗದ ಜನರಿಗೆ ಸೇರಿದ್ದ ನೂರಾರು ಮನೆಗಳನ್ನು ನೆಲಸಮ ಮಾಡಿ ಬಿಬಿಎಂಪಿ ಅಧಿಕಾರಿಗಳು ವೀರಾಧಿವೀರ ಪಟ್ಟ ಗಳಿಸಿಕೊಂಡರು. ರಾಜಕಾಲುವೆ ಹಾಯ್ದು ಹೋಗುವ, ಬಫರ್ ರೆನ್ ವ್ಯಾಪ್ತಿಯ ಸರ್ವೇ ನಂಬರ್: 38, 39, 40, 41, 43, 44, 45, 46, 47, 51, 52, 53, 54, 55, 56-ಲೇಔಟ್ ರದ್ದು ಪಡಿಸಬೇಕು ಎಂಬ ಆದೇಶ ಇದ್ದಾಗಲೂ ಕ್ರಮ ಜರುಗಿಸುವ ಧೈರ್ಯ ಪ್ರದರ್ಶನ ಮಾಡಿಲ್ಲ. ಇದು ಹಲಗೆ ವಡೇರಹಳ್ಳಿ, ಕೆಂಗೇರಿ ಹೋಬಳಿ ವ್ಯಾಪ್ತಿಗೆ ಸೇರಿದೆ.

ಯಶವಂತಪುರದಲ್ಲಿ ನಿರ್ಮಾಣವಾದ ಒರಾಯಿನ್ ಮಾಲ್, ಮಲ್ಲೇಶ್ವರಂನ ಮಂತ್ರಿ ಮಾಲ್, ಇಟಿಎ ಮಾಲ್ ಸೇರಿದಂತೆ ನೂರಾರು ವಾಣಿಜ್ಯ ಕಟ್ಟಡಗಳು ಅಕ್ರಮವಾಗಿ ತಲೆ ಎತ್ತಿವೆ. ಅವುಗಳನ್ನು ನೆಲಸಮ ಮಾಡುವ ಬುಲ್ಡೋಝರ್ ಇನ್ನೂ ತಯಾರಾಗಿಲ್ಲ. ಕೆಂಗೇರಿ ಬಳಿ ಕಾಸಾಗ್ರಾಂಡ್‌ನವರು ವೃಷಭಾವತಿ ಸಮೀಪವೇ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿದ್ದಾರೆ. ಅಲ್ಲಿಯ ನಿವಾಸಿಗಳಿಗೆ ಚರಂಡಿಯ ದುರ್ವಾಸನೆ ಉಚಿತವಾಗಿ ನೀಡುತ್ತಾರೆ. ಸತ್ವ, ಬ್ರಿಗೇಡ್‌ನಂತಹ ಹೆಸರಾಂತ ರಿಯಲ್ ಎಸ್ಟೇಟ್ ದಣಿಗಳು ರಾಜಕಾಲುವೆಯ ಬಫರ್ ರೆನ್ ಆಕ್ರಮಿಸಿದ್ದಾರೆ.

ಬೆಂಗಳೂರಿನಲ್ಲಿ ಮನೆ, ವಾಣಿಜ್ಯ ಕಟ್ಟಡ, ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಬಿಬಿಎಂಪಿ ಸೆಟ್ ಬ್ಯಾಕ್ ನಿಯಮಗಳನ್ನು ರೂಪಿಸಿತ್ತು. ಅಧಿಕಾರಿಗಳ ಕುಮ್ಮಕ್ಕಿನಿಂದಲೋ ಅಥವಾ ಜನತೆಯ ದುರಾಸೆಯೋ ನೂರಕ್ಕೆ ಎಪ್ಪತ್ತರಷ್ಟು ಕಟ್ಟಡಗಳು ನಿಯಮ ಉಲ್ಲಂಘನೆ ಮಾಡಿವೆ. 30x40 ಅಳತೆಯ ನಿವೇಶನದಲ್ಲಿ ಕನಿಷ್ಠ ಪ್ರಮಾಣದ ಸೆಟ್ ಬ್ಯಾಕ್ ಬಿಡದೆ ಐದರಿಂದ ಆರು ಅಂತಸ್ತಿನ ಮನೆಗಳನ್ನು ನಿರ್ಮಿಸಿದ್ದಾರೆ ಮತ್ತು ಇನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಬಹುಪಾಲು ಅಪಾರ್ಟ್‌ಮೆಂಟ್‌ಗಳು ಡೆವಿಯೇಷನ್ ಮಾಡಿ ನಿರ್ಮಾಣಗೊಂಡಿವೆ. ಬ್ರಾಂಡೆಡ್ ಅಪಾರ್ಟ್ ಮೆಂಟ್‌ಗಳು ಒಸಿ, ಸಿಸಿ ಎಲ್ಲವೂ ಪಡೆದಿರುತ್ತವೆ. ಆದರೆ ಕಾನೂನು ಪರಿಪಾಲನೆ ಮಾಡಿರುವುದಿಲ್ಲ.

ಮಹದೇವ ಪುರಂ, ಕೆ.ಆರ್. ಪುರಂ ಸೇರಿದಂತೆ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಒತ್ತುವರಿ ಪ್ರಮಾಣ ಜಾಸ್ತಿ ಇದೆ. ರಾಜ್ಯಾದ್ಯಂತ ಒತ್ತುವರಿಯಾದ ಒಟ್ಟು ಹನ್ನೊಂದು ಲಕ್ಷ ಎಕರೆ ಸರಕಾರಿ ಜಮೀನು ತೆರವುಗೊಳಿಸಲು ಕರ್ನಾಟಕ ಸರಕಾರ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಬೆಂಗಳೂರಿನಲ್ಲಿ ಬೆಲೆ ಬಾಳುವ ಒಟ್ಟು 34,000 ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದೆ. ಅದನ್ನು ವಶಕ್ಕೆ ಪಡೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ದೃಢ ಸಂಕಲ್ಪ ಮಾಡಬೇಕು. ಅಕ್ರಮವಾಗಿ ನಿರ್ಮಾಣವಾಗಿರುವ ಶ್ರೀಮಂತರ ಆಸ್ಪತ್ರೆ, ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಒತ್ತುವರಿಯಾದ ಸರಕಾರದ ಜಮೀನನ್ನು ವಶಕ್ಕೆ ತೆಗೆದುಕೊಂಡು ಅದರ ಒಂದು ಭಾಗ ವಿನಿಯೋಗಿಸಿದರೂ ಬಡವರಿಗೆ ಸೂರು ನೀಡಿ ಪುಣ್ಯ ಕಟ್ಟಿಕೊಳ್ಳಬಹುದು. ಒತ್ತುವರಿ, ಡೆವಿಯೇಷನ್, ನಿಯಮ ಉಲ್ಲಂಘನೆ ಮತ್ತು ಎಲ್ಲ ಬಗೆಯ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳನ್ನು ಹೊಣೆಯಾಗಿಸಿದರೆ ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ. ಬಡವರು ಮತ್ತು ಮಧ್ಯಮವರ್ಗದ ಜನ ಕೂಡ ರಿಯಲ್ ಎಸ್ಟೇಟ್ ದಲ್ಲಾಳಿಗಳ ಆಮಿಷಗಳಿಗೆ ಬಲಿಯಾಗಬಾರದು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವುದರಿಂದ ವಿಘ್ನ ಸಂತೋಷ ಅನುಭವಿಸಬಹುದಷ್ಟೇ. ಭೂ ಮಾಫಿಯಾದ ಭಾಗವಾಗಿರುವವರ ಮೇಲೆ ಕ್ರಮ ಜರುಗಿಸದೆ ಅಮಾಯಕರ ಮೇಲೆ ಬುಲ್ಡೋಜರ್ ಬಿಟ್ಟರೆ ಸಿದ್ದರಾಮಯ್ಯ ಅವರ ಸರಕಾರಕ್ಕೆ ಒಳ್ಳೆಯ ಹೆಸರು ಖಂಡಿತ ಬರುವುದಿಲ್ಲ.

share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X