ಕೆಪಿಎಸ್‌ಸಿ ಅಕ್ರಮ: ಸುಪ್ರೀಂ ಕೋರ್ಟ್ ತಪರಾಕಿ

ಬಹುಕೋಟಿ ಹಗರಣದ ಈ ನೇಮಕಾತಿಯನ್ನು ಸಿಂಧುಗೊಳಿಸುವ ಕ್ರಮವೇ ಜನ ವಿರೋಧಿಯಾದುದು. ಅಕ್ರಮ ನೇಮಕಾತಿಗಳಿಗೆ ಒಂದು ಬಾರಿ ಕಠಿಣ ಶಿಕ್ಷೆಯಾದರೆ ಅಕ್ರಮಗಳಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಹೆದರುತ್ತಾರೆ. ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ಪ್ರಕಟಿಸಿದ ಮೇಲೂ ಕರ್ನಾಟಕ ಸರಕಾರ ಅಕ್ರಮವಾಗಿ ನೌಕರಿ ಪಡೆದವರ ಪರ ನಿಂತರೆ ಪಾರದರ್ಶಕ ನೇಮಕಾತಿಯ ಕನಸುಗಳಿಗೆ ಕೊಳ್ಳಿ ಇಟ್ಟಂತಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ. ಕರ್ನಾಟಕ ಲೋಕಸೇವಾ ಆಯೋಗವನ್ನು ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಪುನರ್ ಸಂಘಟಿಸಿದರೆ ಅತ್ಯುತ್ತಮ ಫಲ ಪಡೆಯಬಹುದಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ)ಅಸ್ತಿತ್ವಕ್ಕೆ ಬಂದ ದಿನದಿಂದ ಇಂದಿನವರೆಗೆ ಅಕ್ರಮ ನೇಮಕಾತಿ ಮಾಡುತ್ತಾ ಬಂದಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಕ್ರಮ ನೇಮಕಾತಿ ಕೆಪಿಎಸ್‌ಸಿಯ ಮೂಲ ಧ್ಯೇಯವಾಗಿದೆ. ಕಾಲಕಾಲಕ್ಕೆ ಅಕ್ರಮ ನೇಮಕಾತಿಗಳ ಸ್ವರೂಪದಲ್ಲಿ ಸ್ಥಿತ್ಯಂತರವಾಗಿದೆಯೇ ಹೊರತು ಭ್ರಷ್ಟಾಚಾರ ರಹಿತ ನೇಮಕಾತಿಗಳು ನಡೆದ ನಿದರ್ಶನ ದೊರೆಯುವುದಿಲ್ಲ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಕ್ರಮ ನೇಮಕಾತಿಗಳು ನಡೆಯಲು ಅಲ್ಲಿನ ವ್ಯವಸ್ಥೆ ಮತ್ತು ಸ್ವರೂಪ ಮುಖ್ಯ ಕಾರಣ. ಜೊತೆಗೆ ಆಯೋಗದ ಭ್ರಷ್ಟ ಅಧ್ಯಕ್ಷರು ಮತ್ತು ಸದಸ್ಯರ ಭಂಡತನ ಇನ್ನೊಂದು ಕಾರಣ. ಎಲ್ಲಕ್ಕೂ ಮಿಗಿಲಾಗಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ಅಕ್ರಮ ನಡೆಸಿರುವುದು. ನಮ್ಮನ್ನಾಳಿದ ಎಲ್ಲ ಸರಕಾರಗಳ ಮುಖ್ಯಮಂತ್ರಿಗಳ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ನಡೆ ಕರ್ನಾಟಕ ಲೋಕಸೇವಾ ಆಯೋಗದ ಈ ದುರ್ಗತಿಗೆ ಪ್ರಮುಖ ಕಾರಣ.
ಕರ್ನಾಟಕ ಲೋಕಸೇವಾ ಆಯೋಗದ ಹುಟ್ಟಿಗೆ ಪ್ರೇರಣೆಯಾದ ಕೇಂದ್ರ ಲೋಕಸೇವಾ ಆಯೋಗ ಈ ಹೊತ್ತಿಗೂ ಪಾರದರ್ಶಕ ನೇಮಕಾತಿಗೆ ಹೆಸರಾಗಿದೆ. ಹಲವು ಪಕ್ಷಗಳ ಸರಕಾರಗಳು ಬಂದು ಹೋದ ಮೇಲೂ ಕೇಂದ್ರ ಲೋಕಸೇವಾ ಆಯೋಗವನ್ನು ಭ್ರಷ್ಟಗೊಳಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಕೇಂದ್ರ ಲೋಕಸೇವಾ ಆಯೋಗದ ಒಟ್ಟು ಸ್ವರೂಪ ಮತ್ತು ರಚನಾ ವ್ಯವಸ್ಥೆಯನ್ನು ಅಕ್ರಮಗಳಿಗೆ ಅವಕಾಶ ಮಾಡಿಕೊಡದಂತೆ ರೂಪಿಸಲಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವನ್ನು ಪುನರ್ ಸಂಘಟಿಸಿ ಒಟ್ಟು ವ್ಯವಸ್ಥೆಯ ಸ್ವರೂಪದಲ್ಲಿ ಪಾರದರ್ಶಕ ವಿಧಾನ ಅಳವಡಿಸಿಕೊಂಡರೆ ಭ್ರಷ್ಟಾಚಾರ ರಹಿತ ನೇಮಕಾತಿಗಳು ನಡೆಯುತ್ತವೆ. ಭ್ರಷ್ಟ ವ್ಯಕ್ತಿಗಳಿಗೆ ಭ್ರಷ್ಟಾಚಾರ ನಡೆಸಲು ಕಳ್ಳ ಹಾದಿಗಳು ಇಲ್ಲದ ಬಿಗಿ ವ್ಯವಸ್ಥೆ ತಂದರೆ ತಂತಾನೆ ಪಾರದರ್ಶಕ ನೇಮಕಾತಿಗಳು ನಡೆಯುತ್ತವೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪಾರದರ್ಶಕ ವ್ಯವಸ್ಥೆ ರೂಪಿಸುವುದು ನಮ್ಮ ರಾಜಕಾರಣಿಗಳಿಗೆ ಬೇಕಾಗಿಲ್ಲ. ಹಾಗಾಗಿ ಕೆಪಿಎಸ್‌ಸಿ ಕಳಂಕ ಹೊರುವುದು, ಸಾರ್ವಜನಿಕರು ಮತ್ತು ನ್ಯಾಯಾಲಯಗಳ ಆಕ್ರೋಶಕ್ಕೆ ಗುರಿಯಾಗುವುದು ಅನಿವಾರ್ಯವಾಗಿದೆ.
ಪ್ರತೀ ಬಾರಿ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಅಕ್ರಮ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ನಡೆಯುತ್ತಾ ಬಂದಿದೆ. ಕೆಲವೊಮ್ಮೆ ಅಕ್ರಮಗಳು ಬಯಲಿಗೆ ಬಂದು ಮಾನ ಹರಾಜಾಗಿದೆ. ಹಲವಾರು ಬಾರಿ ಅಕ್ರಮಗಳು ಮುಚ್ಚಿ ಹೋಗಿವೆ. ಕರ್ನಾಟಕ ಲೋಕ ಸೇವಾ ಆಯೋಗ ಅಸ್ತಿತ್ವಕ್ಕೆ ಬಂದ ಆರಂಭದ ದಿನಗಳಲ್ಲಿ ಹಣದ ವಹಿವಾಟು ಹೆಚ್ಚು ನಡೆಯುತ್ತಿರಲಿಲ್ಲ. ಅಕ್ರಮ ನೇಮಕಾತಿಗಳು ಸ್ವಜನ ಪಕ್ಷಪಾತಿಯಾಗಿರುತ್ತಿದ್ದವು. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಸಂಬಂಧಿಕರು, ಪ್ರಭಾವಿ ರಾಜಕಾರಣಿಗಳ ರಕ್ತ ಸಂಬಂಧಿಗಳು ಪ್ರತಿಭಾವಂತರಲ್ಲದಿದ್ದರೂ ದೊಡ್ಡ ಹುದ್ದೆ ಗಿಟ್ಟಿಸಿಕೊಳ್ಳುತ್ತಿದ್ದರು. ಆಗ ತಾಳಿ ಭಾಗ್ಯ ಯೋಜನೆ ಹೆಚ್ಚು ಜನಪ್ರಿಯವಾಗಿತ್ತು. ಪ್ರತಿಭಾವಂತ ಅಭ್ಯರ್ಥಿ ಪ್ರಭಾವಿ ರಾಜಕಾರಣಿಯ ಮಗಳನ್ನು ಮದುವೆಯಾಗಲು ಒಪ್ಪಿಕೊಂಡರೆ ಹುದ್ದೆ ಗ್ಯಾರಂಟಿ ದೊರೆಯುತ್ತಿತ್ತು. ಮದುವೆಗೆ ಒಪ್ಪದಿದ್ದರೆ ಎಷ್ಟೇ ಪ್ರತಿಭಾವಂತ ಅಭ್ಯರ್ಥಿಯಾದರೂ ಹುದ್ದೆ ವಂಚಿತರಾಗುತ್ತಿದ್ದರು. ಆಗ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಒಂದು ಹುದ್ದೆ ಗಿಟ್ಟಿಸಿಕೊಳ್ಳಬೇಕೆಂದರೆ ಪ್ರಿಲಿಮನರಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವಷ್ಟು ಪ್ರತಿಭಾವಂತನಾಗಿರುವುದು ಅನಿವಾರ್ಯವಾಗಿತ್ತು. ಹಾಗಾಗಿ ಬಡ ಪ್ರತಿಭಾವಂತ ಅಭ್ಯರ್ಥಿಗಳಿಗೆ ಆಯಾ ಸಮುದಾಯದ ರಾಜಕಾರಣಿಗಳು ಮತ್ತು ಆಯೋಗದ ಅಧ್ಯಕ್ಷರು-ಸದಸ್ಯರು ಬೆನ್ನು ಬಿದ್ದು ತಾಳಿ ಭಾಗ್ಯ ಯೋಜನೆಗೆ ಒಪ್ಪಿಸುತ್ತಿದ್ದರು. ಎರಡನೇ ಹಂತದಲ್ಲಿ ಭ್ರಷ್ಟಾಚಾರ ಹಣದ ಸ್ವರೂಪಕ್ಕೆ ಬದಲಾಯಿತು. ಆಯೋಗದ ಅಧ್ಯಕ್ಷರು-ಸದಸ್ಯರು ಮತ್ತು ಪ್ರಭಾವಿ ರಾಜಕಾರಣಿಗಳು ಸೂಚಿಸುವ ಶಿಕ್ಷಣ ಸಂಸ್ಥೆಗೆ ಹಣ ಜಮಾ ಮಾಡಿ ರಶೀದಿ ತೋರಿಸಿದರೆ ಹುದ್ದೆ ದೊರೆಯುತ್ತಿತ್ತು. ಆಗಲೂ ಪ್ರಥಮ ಮತ್ತು ಮುಖ್ಯ ಪರೀಕ್ಷೆಯಲ್ಲಿ ಕಷ್ಟ ಪಟ್ಟು ಹೆಚ್ಚು ಅಂಕ ಪಡೆಯಲೇಬೇಕಿತ್ತು. ಸಂದರ್ಶನದಲ್ಲಿ ಮಾತ್ರ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಕೈ ಚಳಕ ತೋರಿಸಿ ಹಣ ಕೊಟ್ಟವರಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಕಾಲ ಬದಲಾದಂತೆ ಭ್ರಷ್ಟಾಚಾರದ ಸ್ವರೂಪದಲ್ಲಿ ಭಾರೀ ಸುಧಾರಣೆಗಳಾದವು. ಪ್ರಥಮ ಪರೀಕ್ಷೆಯಲ್ಲಿ ತುಸು ಕಷ್ಟ ಪಟ್ಟು ಅರ್ಹತೆ ಪಡೆದುಕೊಂಡರೆ ಮುಖ್ಯ ಪರೀಕ್ಷೆಗಳನ್ನು ಬ್ರೋಕರ್‌ಗಳೇ ಮ್ಯಾನೇಜ್ ಮಾಡುತ್ತಿದ್ದರು. ಈಗ ಕರ್ನಾಟಕ ಲೋಕಸೇವಾ ಆಯೋಗದ ಹುದ್ದೆಗಳಿಗೆ ಆಯ್ಕೆಯಾಗಲು ಕಷ್ಟಪಟ್ಟು ಓದುವುದರ ಅಗತ್ಯವೇ ಇಲ್ಲ. ಕೋಟಿ ಕೋಟಿ ಹಣ ಕೊಟ್ಟರೆ ಪ್ರಥಮ ಮತ್ತು ಮುಖ್ಯ ಪರೀಕ್ಷೆ ಸೇರಿ ಒಟ್ಟು ಒಂದು ಪ್ಯಾಕೇಜ್ ಮಾಡಿ ದೊಡ್ಡ ಹುದ್ದೆಯನ್ನು ಮನೆಗೆ ತಂದು ಕೊಡುತ್ತಾರೆ. ಇದು ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಮತ್ತವರ ತಂಡದ ಭ್ರಷ್ಟಾಚಾರದ ಹೊಸ ಅನ್ವೇಷಣೆ. ಪಶು ವೈದ್ಯಾಧಿಕಾರಿ ಹುದ್ದೆಗಳನ್ನು ಬ್ರೋಕರ್ ಬಸವರಾಜ ಕನ್ಹಾಳೆ, ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಜೋಡಿ ಹರಾಜಿಗಿಟ್ಟು ಮಾರಾಟ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಸದ್ಯ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಬ್ರೋಕರ್‌ಗಳು ಜೈಲು ಪಾಲಾಗುವ ಸ್ಥಿತಿಯಲ್ಲಿ ಇದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ನೇಮಕಾತಿಯಲ್ಲಿ ಅಕ್ರಮ ನಡೆಯುವುದು ತೀರಾ ಸಹಜ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೊಸದಲ್ಲ. ಆದರೆ ಪ್ರತೀ ಬಾರಿ ಅಕ್ರಮ ನೇಮಕಾತಿ, ಭ್ರಷ್ಟಾಚಾರ ಸದ್ದು ಮಾಡಿದಾಗ ಕಾಟಾಚಾರದ ತನಿಖೆ ನಡೆಸಿ ಮುಚ್ಚಿ ಹಾಕುತ್ತಿದ್ದರು. ಆದರೆ ಮೊದಲ ಬಾರಿ ಸುಪ್ರೀಂ ಕೋರ್ಟ್ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಪಾಳ ಮೋಕ್ಷ ಮಾಡಿದೆ. ಈ ಹಿಂದೆ ಕೆಪಿಎಸ್‌ಸಿ ಅಧ್ಯಕ್ಷ-ಸದಸ್ಯರಾಗಿದ್ದವರು ಜೈಲಿಗೆ ಹೋಗಿ ಬಂದ ನಿದರ್ಶನಗಳು ಇದ್ದವು. ಆದರೆ ಕರ್ನಾಟಕ ಸರಕಾರದ ಒಟ್ಟು ತೀರ್ಮಾನವನ್ನೇ ಅಸಿಂಧುಗೊಳಿಸಿದ ಮಹತ್ವದ ತೀರ್ಪು ಗುರುವಾರವಷ್ಟೇ ಸುಪ್ರೀಂ ಕೋರ್ಟ್ ನೀಡಿ ಆಶಾಕಿರಣ ಮೂಡಿಸಿದೆ.
ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಕರ್ನಾಟಕದ ಬಿಜೆಪಿ ಮುಖಂಡರ ಬಂಡವಾಳ ಬಯಲು ಮಾಡಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿವೇಕ ರಹಿತ ನಿರ್ಧಾರಕ್ಕೆ ಚಾಟಿ ಬೀಸಿದಂತಾಗಿದೆ. ಗುರುವಾರ ಹೊರ ಬಿದ್ದ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕ ಲೋಕಸೇವಾ ಆಯೋಗದ ಒಟ್ಟು ಕಾರ್ಯ ವೈಖರಿಗೆ ಶಿಕ್ಷೆ ನೀಡಿದಂತಿದೆ. ಬಿಜೆಪಿ ಸರಕಾರದ ಜನವಿರೋಧಿ ಮತ್ತು ಭ್ರಷ್ಟಾಚಾರ ಉತ್ತೇಜಿಸುವ ನಿರ್ಧಾರಕ್ಕೆ ತಕ್ಕ ಶಾಸ್ತಿ ಮಾಡಿದೆ.
ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದ್ದ ಕಾಲಾವಧಿ. ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದರು. ಇಡೀ ಸರಕಾರವನ್ನು ಬಿ.ಎಲ್. ಸಂತೋಷ್ ನಿಯಂತ್ರಿಸುತ್ತಿದ್ದರು. ಸಂತೋಷ್ ಶಿಫಾರಸಿನ ಮೇರೆಗೆ ಅಂದಿನ ಮುಖ್ಯಮಂತ್ರಿ ಸದಾನಂದಗೌಡರು ಮಂಗಳಾ ಶ್ರೀಧರ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನೇಮಿಸಿದ್ದರು. ಅತ್ಯಂತ ಕಿರಿಯ ವಯಸ್ಸಿನ ಮಂಗಳಾ ಶ್ರೀಧರ್ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಯಾಗಿದ್ದವರು. ಅವರಿಗಿದ್ದ ಏಕೈಕ ಅರ್ಹತೆ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದು. ಮಂಗಳಾ ಶ್ರೀಧರ್ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡ ಆಸುಪಾಸಿನ ದಿನಗಳಲ್ಲಿ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಭರ್ತಿಗೆ ಆಯೋಗ ಅಧಿಸೂಚನೆ ಹೊರಡಿಸಿತ್ತು. 2011ರ ನವೆಂಬರ್ ತಿಂಗಳಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ 362 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವ ಹೊತ್ತಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಂದಿತ್ತು (ಮೊದಲ ಬಾರಿಗೆ). ಆಗ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಷ್ಟು ಮಾತ್ರವಲ್ಲ, ಡಾ. ಮೈತ್ರಿ ಎಂಬವರು ಅಂದಿನ ಅಡ್ವೊಕೇಟ್ ಜನರಲ್ ಅವರಿಗೆ ದೂರು ನೀಡಿದ್ದರು. ಅಡ್ವೊಕೇಟ್ ಜನರಲ್ ಅವರ ಶಿಫಾರಸಿನ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. 2014 ಜೂನ್ 27ರಂದು ಅಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ 2011ರ ನೇಮಕಾತಿ ಪ್ರಕರಣವನ್ನು ತನಿಖೆ ಮಾಡಲು ಅಪರಾಧ ತನಿಖಾ ಇಲಾಖೆಗೆ(ಸಿಐಡಿ)ವಹಿಸಿತ್ತು. ಸಿಐಡಿ ತನಿಖೆಯ ಮಧ್ಯಂತರ ವರದಿ ಆಧರಿಸಿ ಸಿದ್ದರಾಮಯ್ಯ ಸರಕಾರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯ(ಕೆಎಟಿ) ಮಂಡಳಿಯ ಮೊರೆ ಹೋಗಿದ್ದರು. ಕೆಎಟಿ ಆಯ್ಕೆಯಾದ ಅಭ್ಯರ್ಥಿಗಳ ಪರ ತೀರ್ಪು ನೀಡಿ ತಾತ್ಕಾಲಿಕ ಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಸರಕಾರಕ್ಕೆ ಸೂಚನೆ ನೀಡಿತ್ತು. ಕೆಎಟಿ ಆದೇಶ ಪ್ರಶ್ನಿಸಿ ಅನ್ಯಾಯಕ್ಕೆ ಒಳಗಾದ ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋದರು. ಕರ್ನಾಟಕ ಹೈಕೋರ್ಟ್ ಕೆಎಟಿ ಆದೇಶವನ್ನು ರದ್ದುಗೊಳಿಸಿತ್ತು. ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಅಂದರೆ 2011ರ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಅಕ್ರಮಗಳು ನಡೆದಿವೆ ಎಂಬುದು ಸಾಬೀತಾಗಿತ್ತು. ಸಿಐಡಿ ತನಿಖಾ ವರದಿ, ಹೈಕೋರ್ಟ್ ತೀರ್ಪು ಮತ್ತು ಆ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ತೀರ್ಪು ಬಂದ ಮೇಲೆ ಸಂವೇದನಾ ಶೀಲ ಸರಕಾರ ತೀರ್ಪಿಗೆ ತಲೆ ಬಾಗಿ ಲೋಕಸೇವಾ ಆಯೋಗದ ನೇಮಕಾತಿ ಪಟ್ಟಿಯನ್ನು ರದ್ದುಗೊಳಿಸಬೇಕಿತ್ತು.
ಸಿಐಡಿ ವರದಿ ಆಧರಿಸಿ ಸಿದ್ದರಾಮಯ್ಯ ನೇತೃತ್ವದ ಸರಕಾರ 2011ರ ನೇಮಕಾತಿ ಪಟ್ಟಿಯನ್ನು ರದ್ದುಗೊಳಿಸಲು ನಿರ್ಧಾರ ಕೈಗೊಂಡಿತ್ತು. ಅಷ್ಟು ಮಾತ್ರವಲ್ಲ, ಪುನರ್ ಮೌಲ್ಯಮಾಪನ ಮತ್ತು ಪುನರ್ ಸಂದರ್ಶನ ನಡೆಸಲು ತೀರ್ಮಾನ ಕೈಗೊಂಡಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಮಂಗಳಾ ಶ್ರೀಧರ್ ಮತ್ತು ಆಯೋಗದ ಕಾರ್ಯದರ್ಶಿ ಸುಂದರ ಅವರು ಅಕ್ರಮ ಎಸಗಿದ್ದಾರೆ ಎಂಬುದು ರುಜುವಾತಾಗಿತ್ತು. ಅವರಿಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿಐಡಿ ಶಿಫಾರಸು ಮಾಡಿತ್ತು. ಸಹಾಯಕ ಆಯುಕ್ತರ ಹುದ್ದೆಗೆ ಒಂದೂವರೆ ಕೋಟಿ ಮತ್ತು ಡಿವೈಎಸ್‌ಪಿ ಹುದ್ದೆಗೆ ಎಂಭತ್ತು ಲಕ್ಷ ಹಣದ ವಹಿವಾಟು ನಡೆದಿದೆ ಎಂಬುದನ್ನು ಸಾಕ್ಷಿ ಸಮೇತ ಸಾಬೀತು ಪಡಿಸಿತ್ತು. ಸಿಐಡಿ ವರದಿಯಲ್ಲಿ ಸತ್ಯ ಅಡಗಿರುವುದರಿಂದಲೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಬೇಕೆಂದು ಕಠಿಣ ತೀರ್ಪು ನೀಡಿದ್ದರು.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಲಯಗಳ ತೀರ್ಪುಗಳನ್ನು ಗೌರವಿಸದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಾಸಕಾಂಗವನ್ನು ದುರುಪಯೋಗ ಮಾಡಿಕೊಂಡರು.
362 ಅಭ್ಯರ್ಥಿಗಳ ಆಯ್ಕೆ ಮತ್ತು ನೇಮಕಾತಿಯನ್ನು ಊರ್ಜಿತಗೊಳಿಸಲು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ 2022ರಲ್ಲಿ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ)ಕಾಯ್ದೆ ಜಾರಿಗೆ ತಂದಿತ್ತು. ಕೆಪಿಎಸ್‌ಸಿಯ ಅಕ್ರಮ ನೇಮಕಾತಿಯನ್ನು ಸಿಂಧುಗೊಳಿಸುವ ಕರ್ನಾಟಕ ಸರಕಾರದ ಕಾಯ್ದೆ ಭ್ರಷ್ಟಾಚಾರವನ್ನು ಬೆಂಬಲಿಸುವಂತಿತ್ತು. ಕರ್ನಾಟಕ ಸರಕಾರದ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಟಿ. ಶ್ರೀನಿವಾಸ ಎಂಬವರು ಕರ್ನಾಟಕ ಹೈಕೋರ್ಟ್ ಮೊರೆ ಹೋದರು. ಈ ಬಾರಿ ಹೈಕೋರ್ಟ್ ಅನ್ಯಾಯಕ್ಕೊಳಗಾದವರ ಮನವಿಯನ್ನು ಪುರಸ್ಕಾರ ಮಾಡಲಿಲ್ಲ.ಅನಿವಾರ್ಯವಾಗಿ ಅನ್ಯಾಯಕ್ಕೆ ಒಳಗಾದವರು ಸುಪ್ರೀಂ ಕೋರ್ಟ್‌ಗೆ ಮೆಲ್ಮನವಿ ಸಲ್ಲಿಸಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಮತ್ತು ನೇಮಕಾತಿಯನ್ನು ಸಿಂಧುಗೊಳಿಸುವ ಕಾಯ್ದೆ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದುದು ಎಂದು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಲು ಯತ್ನಿಸಿದ್ದರು. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ವಿನೋದ್ ಚಂದ್ರನ್ ಅವರನ್ನು ಒಳಗೊಂಡ ನ್ಯಾಯ ಪೀಠವು 2022ರಲ್ಲಿ ಕರ್ನಾಟಕ ಸರಕಾರ ಜಾರಿಗೆ ತಂದ ಕರ್ನಾಟಕ ಸಿವಿಲ್ ಸೇವೆಗಳ ಕಾಯ್ದೆಯನ್ನೇ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ 2011ರ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯ ಒಟ್ಟು ಪ್ರಕ್ರಿಯೆಯೇ ಅಸಿಂಧುವಾಗಿದೆ. ಅಕ್ರಮ ನೇಮಕಾತಿಗಳನ್ನು ಸಕ್ರಮಗೊಳಿಸುವ ಬಿಜೆಪಿ ಸರಕಾರದ ಕೆಟ್ಟ ನಡೆಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣ ತಿರಸ್ಕರಿಸಿದೆ.
ಮಂಗಳಾ ಶ್ರೀಧರ್ ನೇಮಕಾತಿ ಅಕ್ರಮದಲ್ಲಿ ಪ್ರಮುಖ ಪಾತ್ರಧಾರಿ ಎಂಬುದು ತನಿಖೆಯಿಂದಲೇ ಹೊರ ಬಿದ್ದಿತ್ತು. ಬಿ.ಎಲ್. ಸಂತೋಷ್ ಬಣದ ನಾಯಕಿ ಎಂಬ ಕಾರಣಕ್ಕೆ ಅವರ ಹಿತ ಕಾಪಾಡಲು ಪವಿತ್ರ ಶಾಸಕಾಂಗದ ದುರುಪಯೋಗ ಮಾಡಿಕೊಳ್ಳಲಾಯಿತು. ಈಗ ಹೊರ ಬಂದಿರುವ ಸುಪ್ರೀಂ ಕೋರ್ಟ್ ತೀರ್ಪು ಅಕ್ರಮ ನೇಮಕಾತಿಗಳನ್ನು ಸಕ್ರಮಗೊಳಿಸುವ ಕೆಟ್ಟ ಚಾಳಿಯನ್ನು ತಿರಸ್ಕರಿಸಿದೆ. ಪರೋಕ್ಷವಾಗಿ ಶಾಸಕಾಂಗಕ್ಕೆ ಕಿವಿ ಮಾತು ಹೇಳಿದೆ. ಕರ್ನಾಟಕ ಲೋಕಸೇವಾ ಆಯೋಗವನ್ನು ಮುಚ್ಚಬೇಕು ಎಂದು ವಾದಿಸುವವರಿಗೆ ಈ ತೀರ್ಪು ಬೆಂಬಲವಾಗಿ ನಿಲ್ಲಬಹುದು. ಅಕ್ರಮ ನೇಮಕಾತಿಯನ್ನು ಸಕ್ರಮಗೊಳಿಸಬಾರದು ಎಂಬ ಸುಪ್ರೀಂ ತೀರ್ಪುನ್ನು ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರ ಗೌರವಿಸಿದರೆ ಘನತೆ ಹೆಚ್ಚುತ್ತದೆ. ಪಾರದರ್ಶಕ ನೇಮಕಾತಿಯ ಬಗ್ಗೆ ಕಾಳಜಿ ಹೊಂದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಯಾವ ಪಾತ್ರ ನಿಭಾಯಿಸುತ್ತಾರೆ ಎಂಬುದು ಅವರ ವಿಶ್ವಾಸಾರ್ಹತೆ ನಿರ್ಧರಿಸುವ ಮಾನದಂಡವಾಗುತ್ತದೆ. ಬಹುಕೋಟಿ ಹಗರಣದ ಈ ನೇಮಕಾತಿಯನ್ನು ಸಿಂಧುಗೊಳಿಸುವ ಕ್ರಮವೇ ಜನ ವಿರೋಧಿಯಾದುದು. ಅಕ್ರಮ ನೇಮಕಾತಿಗಳಿಗೆ ಒಂದು ಬಾರಿ ಕಠಿಣ ಶಿಕ್ಷೆಯಾದರೆ ಅಕ್ರಮಗಳಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಹೆದರುತ್ತಾರೆ. ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ಪ್ರಕಟಿಸಿದ ಮೇಲೂ ಕರ್ನಾಟಕ ಸರಕಾರ ಅಕ್ರಮವಾಗಿ ನೌಕರಿ ಪಡೆದವರ ಪರ ನಿಂತರೆ ಪಾರದರ್ಶಕ ನೇಮಕಾತಿಯ ಕನಸುಗಳಿಗೆ ಕೊಳ್ಳಿ ಇಟ್ಟಂತಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ. ಕರ್ನಾಟಕ ಲೋಕಸೇವಾ ಆಯೋಗವನ್ನು ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಪುನರ್ ಸಂಘಟಿಸಿದರೆ ಅತ್ಯುತ್ತಮ ಫಲ ಪಡೆಯಬಹುದಾಗಿದೆ.
(ಅಂಕಣಕಾರರು ಹಿರಿಯ ಲೇಖಕರು, ಪತ್ರಕರ್ತರು)






