Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಸರಕಾರಿ ಹುದ್ದೆಗಳ ಭರ್ತಿಯಲ್ಲಿನ ಅಕ್ರಮ...

ಸರಕಾರಿ ಹುದ್ದೆಗಳ ಭರ್ತಿಯಲ್ಲಿನ ಅಕ್ರಮ ನಿಲ್ಲಲಿ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ4 July 2026 11:05 AM IST
share
ಸರಕಾರಿ ಹುದ್ದೆಗಳ ಭರ್ತಿಯಲ್ಲಿನ ಅಕ್ರಮ ನಿಲ್ಲಲಿ

ಪಾರದರ್ಶಕವಾಗಿ ಹುದ್ದೆಗಳನ್ನು ಭರ್ತಿ ಮಾಡುವುದು ಮಹಾ ವಿದ್ಯೆಯೇನಲ್ಲ. ಪ್ರತೀ ವರ್ಷ ಕೇಂದ್ರ ಲೋಕಸೇವಾ ಆಯೋಗ ಸಾವಿರಾರು ಹುದ್ದೆಗಳನ್ನು ಅಕ್ರಮಕ್ಕೆ ಅವಕಾಶವಿಲ್ಲದೆ ನೇಮಕಾತಿ ಮಾಡುತ್ತಲೇ ಇದೆ. ಕರ್ನಾಟಕದಲ್ಲಿನ ಎಲ್ಲ ಐಎಎಸ್ ಅಧಿಕಾರಿಗಳು ಕೇಂದ್ರ ಲೋಕಸೇವಾ ಆಯೋಗದ ಪಾರದರ್ಶಕ ನೇಮಕ ಪ್ರಕ್ರಿಯೆಯ ಫಲಾನುಭವಿಗಳೇ. ಸರಕಾರದ ಮುಖ್ಯಸ್ಥರು, ಅದರಲ್ಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಲವಾದ ಸಂಕಲ್ಪ ಮಾಡಬೇಕು. ತನ್ನ ಅಧಿಕಾರಾವಧಿಯಲ್ಲಿ ಸರಕಾರಿ ಹುದ್ದೆಗಳು ನಿಜವಾದ ಅರ್ಹರಿಗೆ ದೊರೆಯಬೇಕು. ಪ್ರಾಮಾಣಿಕರು, ಪ್ರತಿಭಾವಂತರು ಮತ್ತು ಕ್ರಿಯಾಶೀಲರು ಸರಕಾರಿ ಕೆಲಸಕ್ಕೆ ಸೇರಬೇಕು ಎಂದು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕೊನೆಯ ಬಜೆಟ್ ಮಂಡನೆಯಲ್ಲಿ ಒಟ್ಟು 56,942 ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ವಾಗ್ದಾನ ಮಾಡಿದ್ದರು. ಅಷ್ಟು ಮಾತ್ರವಲ್ಲ ಎರಡು ದಶಕಗಳ ನಂತರ ಮೊದಲ ಬಾರಿಗೆ ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಒಂದು ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಸ್ತಾವಿಸಿದ್ದರು.

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ, ಜನಾದೇಶ ದೊರೆತು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದರೆ ಖಾಲಿ ಇರುವ 2.5ಲಕ್ಷ ಸರಕಾರಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿಸಿಕೊಂಡಿದ್ದ ಸಿದ್ದರಾಮಯ್ಯ ಸರಕಾರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿರಲಿಲ್ಲ. ಸರಕಾರದ ವಿಳಂಬ ಧೋರಣೆಯನ್ನು ವಿರೋಧಿಸಿ ನಿರುದ್ಯೋಗಿ ಯುವಕರು ಧಾರವಾಡದಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳುತ್ತಲೇ ಸರಕಾರಿ ಹುದ್ದೆಗಳ ಭರ್ತಿಗೆ ಮೊದಲ ಆದ್ಯತೆ ನೀಡಿದ್ದಾರೆ. ನಿರುದ್ಯೋಗಿ ಯುವಕರ ಅಳಲನ್ನು ಅರ್ಥ ಮಾಡಿಕೊಂಡಿರುವ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಜೆಟ್ ವಾಗ್ದಾನ ಮೀರಿ ಮುಂದಿನ ಆರು ತಿಂಗಳಲ್ಲಿ ವಿವಿಧ ಇಲಾಖೆಗಳಲ್ಲಿನ 72,000 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಯುವ ಸಮುದಾಯದ ಭಾವನೆಗಳಿಗೆ ಸ್ಪಂದಿಸಿದ್ದಾರೆ. ಅಷ್ಟು ಮಾತ್ರವಲ್ಲ ಮುಂದಿನ ಆರು ತಿಂಗಳ ಅವಧಿಯಲ್ಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದ್ದಾರೆ. ವಿಶೇಷವಾಗಿ ಶಿಕ್ಷಕರ, ವೈದ್ಯರ ಮತ್ತು ಇಂಜಿನಿಯರ್ ಹುದ್ದೆಗಳ ಭರ್ತಿಗೆ ಮೊದಲ ಆದ್ಯತೆ ಕಲ್ಪಿಸಿದ್ದಾರೆ. ಆಯ್ಕೆ ಪ್ರಕ್ರಿಯೆ ಸುಗಮವಾಗಿ ಮತ್ತು ತ್ವರಿತವಾಗಿ ನಡೆಯಲು ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ಮೇಲುಸ್ತುವಾರಿ ನೋಡಿಕೊಳ್ಳಲು ನೇಮಕ ಮಾಡಿದ್ದಾರೆ. ಹಿರಿಯ ಐಎಎಸ್ ಅಧಿಕಾರಿಗಳಾದ ಗೌರವ ಗುಪ್ತಾ ಮತ್ತು ಶ್ರೀಮತಿ ಉಮಾ ಮಹಾದೇವನ್ ಅವರು ಹುದ್ದೆಗಳ ಭರ್ತಿ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಇನ್ನೆರಡು ತಿಂಗಳಲ್ಲಿ ಹುದ್ದೆಗಳ ಭರ್ತಿಯ ಪ್ರಕ್ರಿಯೆ ಶುರುವಾಗಿ ಆರು ತಿಂಗಳಲ್ಲಿ ನಿರುದ್ಯೋಗಿ ಯುವಕರ ಕೈಯಲ್ಲಿ ನೇಮಕಾತಿ ಆದೇಶ ಪತ್ರ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಿರುದ್ಯೋಗಿ ಯುವ ಸಮುದಾಯದ ಬಗ್ಗೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ವಿಶೇಷ ಕಾಳಜಿ ವ್ಯಕ್ತಪಡಿಸಿದ್ದು ಅಭಿನಂದನಾರ್ಹ ನಡೆಯಾಗಿದೆ. 72,000 ಸರಕಾರಿ ಹುದ್ದೆಗಳ ಭರ್ತಿಗೆ ಮುಂದಾಗಿರುವುದು ಯುವ ಸಮುದಾಯದಲ್ಲಿ ಹುಮ್ಮಸ್ಸು ಮತ್ತು ಆಶಾ ಭಾವನೆ ಮೂಡಿಸಿದೆ.

ಸರಕಾರಿ ಹುದ್ದೆಗಳ ಭರ್ತಿ ಕತ್ತಿಯಂಚಿನ ನಡಿಗೆ ಇದ್ದಂತೆ. ಸರಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆದು, ಒಂದೇ ಒಂದು ಪೈಸೆ ಲಂಚವಿಲ್ಲದೆ ನೇಮಕಾತಿ ಆದೇಶ ಪತ್ರ ನಿರುದ್ಯೋಗಿ ಯುವಕರ ಕೈ ಸೇರಿದರೆ ಡಿ.ಕೆ. ಶಿವಕುಮಾರ್ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. 72,000 ಕುಟುಂಬಗಳು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಬೆಂಬಲಕ್ಕೆ ನಿಲ್ಲುತ್ತವೆ. ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯದಿದ್ದರೆ, ಅಕ್ರಮಗಳು ನಡೆದರೆ, ಪ್ರಶ್ನೆ ಪತ್ರಿಕೆ ಲೀಕ್ ಆಗಿ ದೊಡ್ಡ ಸುದ್ದಿಯಾದರೆ ಸರಕಾರಕ್ಕೆ ಕೆಟ್ಟ ಹೆಸರು ಬರುವುದು ಗ್ಯಾರಂಟಿ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಜೈಲು ಪಾಲಾದದ್ದು ಹುದ್ದೆಗಳ ಭರ್ತಿಯಲ್ಲಿನ ಹಗರಣದಿಂದಲೇ. ನರೇಂದ್ರ ಮೋದಿ ಸರಕಾರವಂತೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮಾಡಿದ ಎಡವಟ್ಟಿನಿಂದ ನೀಟ್ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿ ಬಹುದೊಡ್ಡ ಕಳಂಕ ಅಂಟಿಸಿಕೊಂಡಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಕುಟುಂಬಕ್ಕೆ ರೈಲ್ವೆ ನೇಮಕಾತಿ ಹಗರಣ ಶಾಪವಾಗಿ ಪರಿಣಮಿಸಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಪಿಎಸ್‌ಐ ನೇಮಕಾತಿ ಹಗರಣ ಕಳಂಕ ಅಂಟಿಸಿತ್ತು.

ಪಾರದರ್ಶಕವಾಗಿ ಹುದ್ದೆಗಳನ್ನು ಭರ್ತಿ ಮಾಡುವುದು ಮಹಾ ವಿದ್ಯೆಯೇನಲ್ಲ. ಪ್ರತೀ ವರ್ಷ ಕೇಂದ್ರ ಲೋಕಸೇವಾ ಆಯೋಗ ಸಾವಿರಾರು ಹುದ್ದೆಗಳನ್ನು ಅಕ್ರಮಕ್ಕೆ ಅವಕಾಶವಿಲ್ಲದೆ ನೇಮಕಾತಿ ಮಾಡುತ್ತಲೇ ಇದೆ. ಕರ್ನಾಟಕದಲ್ಲಿನ ಎಲ್ಲ ಐಎಎಸ್ ಅಧಿಕಾರಿಗಳು ಕೇಂದ್ರ ಲೋಕಸೇವಾ ಆಯೋಗದ ಪಾರದರ್ಶಕ ನೇಮಕ ಪ್ರಕ್ರಿಯೆಯ ಫಲಾನುಭವಿಗಳೇ. ಸರಕಾರದ ಮುಖ್ಯಸ್ಥರು, ಅದರಲ್ಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಲವಾದ ಸಂಕಲ್ಪ ಮಾಡಬೇಕು. ತನ್ನ ಅಧಿಕಾರಾವಧಿಯಲ್ಲಿ ಸರಕಾರಿ ಹುದ್ದೆಗಳು ನಿಜವಾದ ಅರ್ಹರಿಗೆ ದೊರೆಯಬೇಕು. ಪ್ರಾಮಾಣಿಕರು, ಪ್ರತಿಭಾವಂತರು ಮತ್ತು ಕ್ರಿಯಾಶೀಲರು ಸರಕಾರಿ ಕೆಲಸಕ್ಕೆ ಸೇರಬೇಕು ಎಂದು. ಈಗ ಸರಕಾರಿ ಹುದ್ದೆ ಪಡೆಯಲಿರುವ 72,000 ಜನ ಮುಂದಿನ ಮೂವತ್ತು ವರ್ಷಗಳ ಕಾಲ ಕರ್ನಾಟಕ ಸರಕಾರದ ಆಡಳಿತ ಯಂತ್ರವನ್ನು ಮುನ್ನಡೆಸುತ್ತಾರೆ. ಸರಕಾರಿ ವ್ಯವಸ್ಥೆ ಮತ್ತು ಆಡಳಿತ ಯಂತ್ರ ರೂಪುಗೊಳ್ಳುವುದೇ ನೌಕರ ವರ್ಗದಿಂದ. ಸರಕಾರಿ ಹುದ್ದೆಗಳ ಭರ್ತಿಯಲ್ಲಿ ಮತ್ತು ಸರಕಾರಿ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕ-ಲಂಚ ರಹಿತ ವ್ಯವಸ್ಥೆ ತಂದರೆ ಆಡಳಿತ ಯಂತ್ರ ತನ್ನಷ್ಟಕ್ಕೆ ತಾನೇ ಪ್ರಾಮಾಣಿಕವೂ ಕ್ರಿಯಾಶೀಲವೂ ಆಗುತ್ತದೆ. ವ್ಯವಸ್ಥೆ ಕೆಟ್ಟಿದೆ ಎಂದು ಸಬೂಬು ಹೇಳಿ ಲಂಚ ಹೊಡೆಯುವ ಪ್ರಮೆಯವೇ ಬರುವುದಿಲ್ಲ. ಜನಸಾಮಾನ್ಯರು ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯ ಫಲಾನುಭವಿಗಳು ಆಗಬೇಕಾದರೆ ಸರಕಾರಿ ಆಡಳಿತ ಯಂತ್ರ ಪ್ರಾಮಾಣಿಕವೂ ಕ್ರಿಯಾಶೀಲವೂ ಆಗಿರಲೇಬೇಕು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣದ ಶಕ್ತಿ ಮತ್ತು ಮಿತಿ ಎರಡನ್ನೂ ಬಲ್ಲವರು. ದೈವ ಭಕ್ತ ಆಗಿರುವುದರಿಂದ ಬದುಕಿನ ಸಾರ್ಥಕತೆ, ಕ್ಷಣ ಬಂಗುರತೆ ಅರ್ಥವಾಗಿರುತ್ತದೆ.

ಚುನಾವಣೆಗಳು ದುಬಾರಿಯಾಗಿರುವುದರಿಂದ ರಾಜಕೀಯ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಮಾತನಾಡುವುದು ಪ್ರಾಯೋಗಿಕ ಮಾತು ಎನಿಸುವುದಿಲ್ಲ.ರಾಜಕೀಯ ವ್ಯವಸ್ಥೆ ಐದು ವರ್ಷಕ್ಕೊಮ್ಮೆ ಬದಲಾಗುತ್ತದೆ. ಆದರೆ ಆಡಳಿತ ವ್ಯವಸ್ಥೆ ಮೂವತ್ತು ವರ್ಷಕ್ಕೊಮ್ಮೆ ಬದಲಾಗುವುದರಿಂದ ಆರಂಭದ ಹಂತದಲ್ಲಿ ಅದನ್ನು ಅತ್ಯಂತ ಪ್ರಾಮಾಣಿಕ ವ್ಯವಸ್ಥೆಯಾಗಿ ರೂಪಿಸಿದರೆ ಜನಸಾಮಾನ್ಯರು ತುಸು ನೆಮ್ಮದಿ ಪಡೆದುಕೊಳ್ಳಬಹುದು.

ಭ್ರಷ್ಟಾಚಾರ ರಹಿತ ನೇಮಕಾತಿ ಸಾಧ್ಯವೇ ಎಂದು ಕೆಲವರು ಗೇಲಿ ಮಾಡಬಹುದು. ಜನಸಾಮಾನ್ಯರ ಒಡನಾಟದಲ್ಲಿರುವ ಆಡಳಿತ ವ್ಯವಸ್ಥೆ ಪ್ರಾಮಾಣಿಕವಾಗಿರುವುದರಿಂದಲೇ ಚೀನಾ, ಜಪಾನ್, ಇಂಗ್ಲೆಂಡ್‌ನಂಥ ದೇಶಗಳು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ಆ ದೇಶದಲ್ಲೂ ಭ್ರಷ್ಟಾಚಾರ ಇದೆ. ಅದು ಮೇಲು ಹಂತದಲ್ಲಿ. ಆ ಭ್ರಷ್ಟಾಚಾರ ಜನಸಾಮಾನ್ಯರನ್ನು ಬಾಧಿಸುವುದಿಲ್ಲ. ಭ್ರಷ್ಟಾಚಾರ ರಹಿತ ಆಡಳಿತ ಯಂತ್ರ ಸಜ್ಜುಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುವರ್ಣ ಅವಕಾಶ ದೊರೆತಿದೆ.

ಭ್ರಷ್ಟಾಚಾರ ರಹಿತ ಹುದ್ದೆಗಳ ನೇಮಕಾತಿ ಸಾಧ್ಯವಾಗಬೇಕಾದರೆ ಪ್ರತಿಭೆ ಅಳೆಯುವ ಮಾನದಂಡಗಳು ಸರಳವೂ, ವೈಜ್ಞಾನಿಕವೂ ಆಗಿರಬೇಕು. ಶಿಕ್ಷಕರ, ವೈದ್ಯರ, ನರ್ಸ್‌ಗಳ ಮತ್ತು ಇನ್ನಿತರ ಗುಮಾಸ್ತ ಹುದ್ದೆಗಳ ನೇಮಕಾತಿಗೆ ಅನಗತ್ಯ ಪ್ರವೇಶ ಪರೀಕ್ಷೆ ನಡೆಸುವುದು ನಿಲ್ಲಿಸಬೇಕು. ಈಗಾಗಲೇ ಅವರು ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ವರ್ಷಾನುಗಟ್ಟಲೆ ಓದಿ ಯಶಸ್ವಿಯಾಗಿ ಪೂರೈಸಿರುತ್ತಾರೆ. ಆ ಎಲ್ಲ ಪದವಿಗಳ ಸರಾಸರಿ ಅಂಕಗಳ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಂಡರೆ ಅಕ್ರಮ ನಡೆಸುವವರಿಗೆ ಅವಕಾಶ ದೊರೆಯುವುದಿಲ್ಲ. 1992ರಲ್ಲಿ, ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇವಲ ಅಂಕಗಳ ಆಧಾರದಲ್ಲಿ ಲಕ್ಷಾಂತರ ಶಾಲಾ ಶಿಕ್ಷಕರ ನೇಮಕಾತಿ ನಡೆದಿತ್ತು. ನಂತರ ಅದೇ ಮಾದರಿಯನ್ನು ಎಚ್. ಜಿ. ಗೋವಿಂದೇಗೌಡರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಸಚಿವರಾಗಿದ್ದಾಗ ಅನುಸರಿಸಿದ್ದರು. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಮೌಖಿಕ ಸಂದರ್ಶನ ಈ ಹೊತ್ತಿಗೂ ಮೌಲ್ಯ ಉಳಿಸಿಕೊಂಡಿದೆ. ಆದರೆ ಅದೇ ಮಾತು ಕರ್ನಾಟಕ ಲೋಕ ಸೇವಾ ಆಯೋಗದ ಬಗ್ಗೆ ಹೇಳಲಾಗದು. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮೌಖಿಕ ಸಂದರ್ಶನ ಅರ್ಥ ಕಳೆದುಕೊಂಡು ದಶಕಗಳೇ ಕಳೆದಿವೆ. ಆದರೆ ಒಂದೆರಡು ದಶಕಗಳ ಹಿಂದೆ ಲಿಖಿತ ಪರೀಕ್ಷೆಗಳು ಕನಿಷ್ಠ ಘನತೆ ಉಳಿಸಿಕೊಂಡಿದ್ದವು. ಒಎಂಆರ್ ಶೀಟ್ ಬಂದ ಮೇಲೆ ಅಕ್ರಮಗಳು, ಪೇಪರ್ ಲೀಕ್ ಪ್ರಕರಣಗಳು ಜಾಸ್ತಿಯಾಗಿವೆ. ಕರ್ನಾಟಕ ಲೋಕಸೇವಾ ಆಯೋಗದ ಲಿಖಿತ ಪರೀಕ್ಷೆಯೂ ಕಳಂಕ ಅಂಟಿಸಿಕೊಂಡಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದ ಲಂಚ ರಹಿತ ನೇಮಕಾತಿ ನಿರೀಕ್ಷೆ ಮಾಡಲಾಗದು ಎಂಬುದನ್ನು ಆ ಸಂಸ್ಥೆಯೇ ಹಲವು ಬಾರಿ ರುಜುವಾತುಪಡಿಸಿದೆ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ಲಂಚ ನೀಡಿಯೇ ಆ ಹುದ್ದೆ ಗಿಟ್ಟಿಸಿಕೊಂಡಿರುವ ಆರೋಪವಿರುವುದರಿಂದ ಅವರಿಂದ ಲಂಚ ರಹಿತ ನೇಮಕಾತಿ ನಿರೀಕ್ಷಿಸುವುದೇ ತಪ್ಪು. ಲಂಚಕ್ಕೆ ಅವಕಾಶ ಮಾಡಿಕೊಡದ ಪಾರದರ್ಶಕ ನೇಮಕಾತಿ ಮಾನದಂಡಗಳನ್ನು ರೂಪಿಸಬೇಕು. ಹಾಗೆ ಮಾಡಲು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ಬಿಡುವುದಿಲ್ಲ. ಕರ್ನಾಟಕ ಲೋಕಸೇವಾ ಆಯೋಗ ಭ್ರಷ್ಟಗೊಂಡಿದೆ ಎಂದು ಭಾವಿಸಿ ಅಥವಾ ಆರೋಪಿಸಿ ಈ ಹಿಂದಿನ ಬಿಜೆಪಿ ಸರಕಾರ ನೇಮಕಾತಿ ಹೊಣೆಗಾರಿಕೆಯನ್ನು, ಪ್ರವೇಶ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿತ್ತು. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟು ಬ್ಲಾಕಿಂಗ್ ಹಗರಣದಲ್ಲಿ ಭಾಗಿಯಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂದೋ ವಿಶ್ವಾಸಾರ್ಹತೆ ಕಳೆದುಕೊಂಡಿತ್ತು. ಉನ್ನತ ಶಿಕ್ಷಣ ಇಲಾಖೆಗೆ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಮಂತ್ರಿಯಾಗಿ ಬಂದ ಮೇಲೆ, ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುವುದು ಒಂದು ದಂಧೆಯಾಯಿತು. ಕಳೆದ ಒಂದು ದಶಕದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ ಎಲ್ಲ ಪ್ರವೇಶ ಪರೀಕ್ಷೆಗಳ ಅಕ್ರಮಗಳನ್ನು ತನಿಖೆ ನಡೆಸಿದರೆ ಅದರ ಭ್ರಷ್ಟ ಬಂಡವಾಳ ಬಯಲಿಗೆ ಬರುತ್ತದೆ. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸೇರಿದಂತೆ ಹತ್ತು ಹಲವು ನೇಮಕಾತಿಗಳಲ್ಲಿ ಒಎಂಆರ್ ಶೀಟ್ ಟ್ಯಾಂಪರಿಂಗ್ ಮಾಡಿರುವ ಸುದ್ದಿ ದಾಖಲೆ ಸಮೇತ ಹೊರ ಬಿದ್ದಿದೆ. ಆದರೆ ಅದರ ವಿರುದ್ಧ ಯಾವ ಕ್ರಮವೂ ಜರುಗಿಸಿಲ್ಲ. ಒಎಂಆರ್ ಶೀಟ್ ಇರುವವರೆಗೂ ಟ್ಯಾಂಪರಿಂಗ್ ನಡೆಯುತ್ತಲೇ ಇರುತ್ತದೆ. ಮತ್ತಷ್ಟು ಪಾರದರ್ಶಕ ವ್ಯವಸ್ಥೆ ಅಳವಡಿಸಿಕೊಂಡರೆ ಮಾತ್ರ ಪ್ರವೇಶ ಪರೀಕ್ಷೆಗಳನ್ನು ನಂಬಬಹುದು. ಇತ್ತೀಚೆಗೆ ಮಹಾರಾಷ್ಟ್ರ ಸರಕಾರ ನಡೆಸಿರುವ ಶಿಕ್ಷಕರ ನೇಮಕಾತಿಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿ ದೊಡ್ಡ ಸುದ್ದಿಯಾಯಿತು. ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗುವುದು ಸರ್ವೇ ಸಾಮಾನ್ಯ ವಿದ್ಯಮಾನವಾಗಿದೆ. ಅದರಲ್ಲಿ ಹಿರಿಯ ಅಧಿಕಾರಿಗಳು, ಮಂತ್ರಿ ಮಹೋದಯರು ಶಾಮೀಲಾಗಿರುತ್ತಾರೆ.

ಕರ್ನಾಟಕ ಸರಕಾರ ಭರ್ತಿ ಮಾಡಲು ಹೊರಟಿರುವ 72,000 ಹುದ್ದೆಗಳು ನಿಜವಾದ ಅರ್ಹರಿಗೆ ಲಂಚ ರಹಿತವಾಗಿ ಸಿಗಬೇಕೆಂದರೆ, ಅನಗತ್ಯ ಪ್ರವೇಶ ಪರೀಕ್ಷೆ ನಡೆಸುವುದು ನಿಲ್ಲಿಸಬೇಕು. ಪ್ರವೇಶ ಪರೀಕ್ಷೆ ನಡೆಸುವುದು ಅನಿವಾರ್ಯ ಎಂದಾದರೆ, ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳನ್ನು ಹೊರಗಿಟ್ಟು ಬೇರೊಂದು ಪಾರದರ್ಶಕ ವ್ಯವಸ್ಥೆ ರೂಪಿಸಿಕೊಂಡು ಲಂಚ ರಹಿತ ನೌಕರಿ ನೀಡುವ ಗ್ಯಾರಂಟಿ ಕೊಡಬೇಕು. ಕರ್ನಾಟಕ ಸರಕಾರದಲ್ಲಿನ ಹಿರಿಯ ಐಎಎಸ್ ಅಧಿಕಾರಿಗಳಿಗೆ ಲಂಚ ರಹಿತ ನೇಮಕಾತಿ ಪ್ರಕ್ರಿಯೆ ನಡೆಸುವುದು ಗೊತ್ತಿರುತ್ತದೆ. ಲಂಚ ಸಹಿತ ವ್ಯವಸ್ಥೆ ರೂಪಿಸುವುದು ತಿಳಿದಿರುತ್ತದೆ. ಸರಕಾರದ ಮುಖ್ಯಸ್ಥ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊಡುವ ಸೂಚನೆ ಮತ್ತು ನಿರ್ದೇಶನಗಳ ಮೇಲೆ ಎಲ್ಲವೂ ಅವಲಂಬನೆಯಾಗಿರುತ್ತದೆ. ಆತ್ಮ ಸಾಕ್ಷಿಯಾಗಿ ಮತ್ತು ದೈವ ಸಾಕ್ಷಿಯಾಗಿ ಡಿ.ಕೆ. ಶಿವಕುಮಾರ್ ಅವರು ಲಂಚ ರಹಿತ ನೇಮಕಾತಿ ಮಾಡಿ ಎಂದು ಹೇಳಿದರೆ ಹಾಗೆಯೇ ನಡೆಯುತ್ತದೆ. ಕರ್ನಾಟಕ ಸರಕಾರದಲ್ಲಿ ಪ್ರಾಮಾಣಿಕರು, ದಕ್ಷರು, ಕ್ರಿಯಾಶೀಲ ಅಧಿಕಾರಿಗಳು ಇರುವಂತೆ ಪರಮ ಭ್ರಷ್ಟರು ಇದ್ದಾರೆ. ಸರಕಾರ ಯಾರನ್ನು ಬಳಸಿಕೊಳ್ಳುತ್ತದೆಯೋ ಅದರ ಮೇಲೆ ನೇಮಕಾತಿಯ ಗುಣಮಟ್ಟ ನಿರ್ಧಾರವಾಗುತ್ತದೆ.

72,000 ಹುದ್ದೆಗಳ ನೇಮಕಾತಿಗೆ ಸರಕಾರ ಕಟ್ಟುನಿಟ್ಟಿನ ಮತ್ತು ಲಂಚಕ್ಕೆ ಅವಕಾಶ ಇರದ ಆಯ್ಕೆ ಮಾನದಂಡಗಳನ್ನು ರೂಪಿಸಿ ಕೊಟ್ಟರೆ ನಿಜವಾದ ಅರ್ಹರಿಗೆ ಉದ್ಯೋಗ ದೊರೆಯುತ್ತವೆ. ಲಂಚವಿಲ್ಲದೆ ನೌಕರಿ ಪಡೆದವರು ಹಪಾಹಪಿಯಿಂದ ಲಂಚಕ್ಕೆ ಕೈ ಚಾಚುವುದಿಲ್ಲ. ಕೋಟಿ ಕೋಟಿ ಹಣ ಲಂಚ ಕೊಟ್ಟು ಆಯಕಟ್ಟಿನ ಹುದ್ದೆ ಗಿಟ್ಟಿಸುವ ಅಧಿಕಾರಿಗಳು ಹಾಕಿದ ಬಂಡವಾಳ ವಾಪಸ್ ಪಡೆಯಲು ಪರದಾಡುತ್ತಾರೆ. ಆರ್‌ಟಿಐ ಕಾಯ್ದೆ, ಲೋಕಾಯುಕ್ತ ಮತ್ತು ಮೊಬೈಲ್ ಫೋನ್, ಹದ್ದಿನ ಕಣ್ಣಾಗಿ ನೋಡುವ ಕ್ರಿಯಾಶೀಲ ಮಾಧ್ಯಮಗಳು ಇರುವಾಗ ಎಲ್ಲರಿಗೂ ಕಷ್ಟವಿಲ್ಲದೆ ಲಂಚ ಹೊಡೆಯಲು ಸಾಧ್ಯವಾಗುವುದಿಲ್ಲ. ಲಂಚ ಹೊಡೆಯುವ ಕಲೆ ಕೆಲವರಿಗೆ ಮಾತ್ರ ಕರಗತವಾಗಿರುತ್ತದೆ. ಲಂಚ ಕೊಟ್ಟು ಆಯಕಟ್ಟಿನ ಹುದ್ದೆಗೆ ಬರುವ ಬಹುತೇಕರು ಹಾಕಿದ ಬಂಡವಾಳ ವಾಪಸ್ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಕೆಲವರಂತೂ ಹಣ ಸಂಪಾದಿಸುವುದರ ಜೊತೆಗೆ ಮೈ ತುಂಬಾ ಕಾಯಿಲೆ ಅಂಟಿಸಿಕೊಂಡಿರುತ್ತಾರೆ. ಲಂಚ ಕೊಡುವ ಪ್ರತೀ ವ್ಯಕ್ತಿ ಹಾಳಾಗಿ ಹೋಗಲಿ ಎಂದು ಶಾಪ ಹಾಕಿಯೇ ಹಣ ಕೊಟ್ಟಿರುತ್ತಾನೆ. ಸಾಮಾನ್ಯವಾಗಿ ಉದ್ಯೋಗ ಪಡೆಯುವ ಅನರ್ಹ ಮತ್ತು ಹಣವಿರುವ ವ್ಯಕ್ತಿ ಮಾತ್ರ ಲಂಚ ಕೊಟ್ಟಿರುತ್ತಾನೆ. ಉದ್ಯೋಗ ವಂಚಿತ ನಿಜವಾದ ಅರ್ಹ ಅಭ್ಯರ್ಥಿ ಜೀವನದುದ್ದಕ್ಕೂ ನಿಟ್ಟುಸಿರು ಬಿಡುತ್ತಾ ಶಾಪ ಹಾಕುತ್ತಿರುತ್ತಾನೆ.

ಎಲ್ಲಕ್ಕೂ ಮಿಗಿಲಾಗಿ ಪಾರದರ್ಶಕ ಮತ್ತು ಲಂಚ ರಹಿತ ಹುದ್ದೆಗಳ ಭರ್ತಿ ಕಾಂಗ್ರೆಸ್ ಸರಕಾರಕ್ಕೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಒಂದು ಮುಕ್ಕಾಲು ವರ್ಷಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಲಂಚ ರಹಿತ ನೇಮಕಾತಿ ಡಿ.ಕೆ. ಶಿವಕುಮಾರ್ ಸರಕಾರಕ್ಕೆ ವರವಾಗಿ ಪರಿಣಮಿಸುತ್ತದೆ. ಒಂದು ವೇಳೆ 72,000 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದು, ಹಾದಿ ಬೀದಿಯ ಸುದ್ದಿಯಾದರೆ ಶಾಪವಾಗಿ ಪರಿಣಮಿಸುತ್ತದೆ. ಪ್ರತಿಪಕ್ಷಗಳಿಗೆ ಇದೇ ಚುನಾವಣಾ ಅಸ್ತ್ರವಾಗಿ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹತ್ತು ರೂಪಾಯಿ ಲಂಚದ ವಹಿವಾಟು ನಡೆದಿದ್ದರೆ ಸಾವಿರ ರೂಪಾಯಿಯ ಅಕ್ರಮ ನಡೆದಿದೆ ಎಂದು ಸುದ್ದಿಯಾಗುವ ಅಪಪ್ರಚಾರದ ಕಾಲವಿದು. ಹಿರಿಯ ಐಎಎಸ್ ಅಧಿಕಾರಿ ಉಮಾ ಮಹಾದೇವನ್ ಇಲ್ಲಿಯವರೆಗೆ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಗೌರವ ಗುಪ್ತಾ ಗೌರವದಿಂದ ಸೇವೆ ಮಾಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನನಾಯಕನಾಗಿ ಹೊರಹೊಮ್ಮವ ಸಂಕ್ರಮಣ ಕಾಲಘಟ್ಟವಿದು. ಅತ್ಯುತ್ತಮ ಕೆಲಸ ಮಾಡಿದರೆ, ಜನಸಾಮಾನ್ಯರಿಗೆ ಸರಕಾರದ ಅಭಿವೃದ್ಧಿ ಯೋಜನೆಯ ಫಲಗಳು ತಲುಪಿದರೆ, ಇದು ನಮ್ಮ ಸರಕಾರ ಎಂಬ ಭಾವನೆ ಜನರಲ್ಲಿ ಮೂಡಿದರೆ ಮಾತ್ರ ಮತ್ತೊಮ್ಮೆ ಜನಾದೇಶ ಪಡೆದುಕೊಳ್ಳಲು ಸಾಧ್ಯ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದರೆ ಹಿಂದಿನ ಎಲ್ಲ ದಾಖಲೆ ಮತ್ತು ಮಿಥ್ ಸುಳ್ಳು ಮಾಡಿದ ಕೀರ್ತಿ ಡಿ.ಕೆ. ಶಿವಕುಮಾರ್ ಅವರ ಹೆಗಲೇರುತ್ತದೆ. ಅಷ್ಟು ಮಾತ್ರವಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಜನನಾಯಕ ಪಟ್ಟ ಖಾಯಂ ಆಗುತ್ತದೆ. ಹುದ್ದೆಗಳ ಭರ್ತಿ ಪ್ರಕ್ರಿಯೆ ಒಂದೇ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದಾದರೆ, ಇನ್ನಿತರ ಅಭಿವೃದ್ಧಿ ಕಾರ್ಯಗಳು ತಮ್ಮದೇ ಕೊಡುಗೆ ನೀಡುತ್ತವೆ.

ನೇಮಕಾತಿ ಅಕ್ರಮಗಳು, ಜನವಿರೋಧಿ ನೀತಿಗಳು ಮುನ್ನೆಲೆಗೆ ಬಂದು ರೆಕ್ಕೆ ಬಿಚ್ಚಿ ಹಾರಾಡಿದರೆ ಡಿ.ಕೆ. ಶಿವಕುಮಾರ್ ಸರಕಾರವೂ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರಕಾರಕ್ಕಿಂತಲೂ ಕಡೆಯಾಗಿ ಪರಿಗಣಿಸಲ್ಪಡುತ್ತದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸರಕಾರಗಳ ಆಡಳಿತ ವಿರೋಧಿ ಅಲೆ ಸಹಜವಾಗಿಯೇ ಪ್ರತಿಪಕ್ಷಗಳಿಗೆ ಅನುಕೂಲವಾಗುತ್ತದೆ. ಅನಾಯಾಸವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಸಿದ್ದರಾಮಯ್ಯ ಸರಕಾರದ ಮೂರು ವರ್ಷಗಳ ಆಡಳಿತ ವಿರೋಧಿ ಅಲೆಯನ್ನು ನಿವಾರಿಸಿಕೊಂಡು, ಮುಂದಿನ ಎರಡು ವರ್ಷಗಳ ಕಾಲ ಜನ ಮೆಚ್ಚುವ ಆಡಳಿತ ನೀಡಿದರೆ ಮಾತ್ರ ಮತ್ತೊಮ್ಮೆ ಜನಾದೇಶ ಪಡೆದುಕೊಳ್ಳಲು ಸಮರ್ಥರಾಗುತ್ತಾರೆ. 72,000 ಹುದ್ದೆಗಳ ನೇಮಕಾತಿ ಜವಾಬ್ದಾರಿ ಬಹಳ ಭಾರವಾದದ್ದು. ಈ ಸವಾಲು ಗೆದ್ದರೆ, ಡಿ.ಕೆ. ಶಿವಕುಮಾರ್ ಜನನಾಯಕನಾಗಿ ಇತಿಹಾಸದ ಭಾಗವಾಗುತ್ತಾರೆ. ಇಲ್ಲದಿದ್ದರೆ, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ತರಹ ಸಂಧಿಕಾಲದ ಮುಖ್ಯಮಂತ್ರಿಗಳ ಸಾಲಿಗೆ ಸೇರುತ್ತಾರೆ. ಆಯ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟಿದ್ದು.

Tags

government jobs
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X