Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ದಾಖಲೆ ಅವಧಿಯ ಮುಖ್ಯಮಂತ್ರಿ ಮತ್ತು...

ದಾಖಲೆ ಅವಧಿಯ ಮುಖ್ಯಮಂತ್ರಿ ಮತ್ತು ಸಾಮಾಜಿಕ ನ್ಯಾಯ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ23 May 2026 11:40 AM IST
share
ದಾಖಲೆ ಅವಧಿಯ ಮುಖ್ಯಮಂತ್ರಿ ಮತ್ತು ಸಾಮಾಜಿಕ ನ್ಯಾಯ

ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯದ ಮಾತುಗಳನ್ನು ನಾಲಿಗೆ ಮೇಲೆ ತಂದುಕೊಳ್ಳಲು ಹಿಂಜರಿಯುವವರ ಸಂಖ್ಯೆ ಜಾಸ್ತಿ ಇದೆ. ಅಂತಹದರಲ್ಲಿ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಜಪ ಗ್ರೇಟ್ ಅನಿಸಿಕೊಳ್ಳುತ್ತದೆ. ‘‘ಇವಾನರವ ಇವಾನರವ’’ ಎಂದು ಪ್ರಶ್ನೆ ಮಾಡದೆ ಅತಿ ಹಿಂದುಳಿದ ಸಮುದಾಯಗಳನ್ನು ಅಪ್ಪಿಕೊಂಡರೆ, ಅಧಿಕಾರದಲ್ಲಿ ಸಮಾನ ಪಾಲು ನೀಡಿದರೆ ಈ ಎಂಟು ವರ್ಷದ ಅವರ ದಾಖಲೆ ಸಾರ್ಥಕ ಎನಿಸಿಕೊಳ್ಳುತ್ತದೆ.

‘‘ಇವನಾರವ ಇವನಾರವ

ಇವನಾರವನೆಂದೆನಿಸದಿರಯ್ಯ

ಇವ ನಮ್ಮವ ಇವ ನಮ್ಮವ

ಇವ ನಮ್ಮವನೆಂದೆನಿಸಯ್ಯ

ಕೂಡಲಸಂಗಮದೇವಯ್ಯ

ನಿಮ್ಮ ಮನೆಯ ಮಗನೆಂದೆನಿಸಯ್ಯ’’

-ಬಸವಣ್ಣ

ಮೇಲಿನ ವಚನವನ್ನು ಅತಿ ಹೆಚ್ಚು ಬಾರಿ ಬಳಸುತ್ತಿರುವ ಸಮಕಾಲೀನ ರಾಜಕಾರಣಿಗಳಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗ್ರಗಣ್ಯರು. ನುಡಿದಂತೆ ನಡೆಯುತ್ತಿದ್ದೇವೆ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯಾ ಚಿಂತನೆಗಳಲ್ಲಿ ತಮಗೆ ಅಪಾರವಾದ ನಂಬಿಕೆ ಇದೆ ಎಂದೂ ಮೊದಲಿನಿಂದಲೂ ಹೇಳುತ್ತಲೇ ಇದ್ದಾರೆ.

ಮುಖ್ಯಮಂತ್ರಿ ಹುದ್ದೆಯಲ್ಲಿ ಎಂಟು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಇದೇ ಮೇ ಇಪ್ಪತ್ತಕ್ಕೆ ಹೊಸ ದಾಖಲೆ ಸೃಷ್ಟಿಸಿದ ಸಿದ್ದರಾಮಯ್ಯ ಅವರು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ‘ಅಜರಾಮರ’ ಎನಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಡಿ. ದೇವರಾಜ ಅರಸು ಅವರದಾಗಿತ್ತು. ರಾಮಕೃಷ್ಣ ಹೆಗಡೆ, ಎಸ್. ನಿಜಲಿಂಗಪ್ಪ, ಬಿ.ಎಸ್. ಯಡಿಯೂರಪ್ಪ, ವೀರೇಂದ್ರ ಪಾಟೀಲ್, ಬಿ.ಡಿ. ಜತ್ತಿ ಹೆಚ್ಚೆಂದರೆ ನಾಲ್ಕರಿಂದ ಏಳು ವರ್ಷದ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ದಾಖಲೆ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಮತ್ತು ಇನ್ನೂ ಅದೇ ಹುದ್ದೆಯಲ್ಲಿ ಮುಂದುವರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೊದಲಿಗೆ ಅಭಿನಂದಿಸೋಣ. ದೇವರಾಜ ಅರಸು, ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಯಡಿಯೂರಪ್ಪ ಅವರಿಗಿಂತಲೂ ಸಿದ್ದರಾಮಯ್ಯ ಅವರು ಹೆಚ್ಚು ಅದೃಷ್ಟವಂತರು. ನಿಜಲಿಂಗಪ್ಪ, ಅರಸು, ಜತ್ತಿ, ವೀರೇಂದ್ರ ಪಾಟೀಲ್ ಕಾಲದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಬಲಿಷ್ಠವಾಗಿತ್ತು. ನೆಹರೂ ಕಾಲದ ಎಸ್. ನಿಜಲಿಂಗಪ್ಪ ಅವರು ಗೆಳೆಯರೊಂದಿಗೆ ಸೇರಿ ಇಂದಿರಾ ಗಾಂಧಿಯವರನ್ನೇ ವಿರೋಧಿಸಿದ್ದರು. ಆಗ ಕಾಂಗ್ರೆಸ್ ಪಕ್ಷ ಇಬ್ಭಾಗವಾಯಿತು. ಅವರೊಂದಿಗೆ ಇದ್ದ ವೀರೇಂದ್ರ ಪಾಟೀಲರು ಪ್ರವಾಹದೊಂದಿಗೆ ಈಜಲು ಸಾಧ್ಯವಾಗದೆ ಜನತಾ ಪಕ್ಷಕ್ಕೆ ಸೇರಿ ಕೈ ಸುಟ್ಟುಕೊಂಡರು. ಅನಿವಾರ್ಯವಾಗಿ ಕಾಂಗ್ರೆಸ್ ಕೈ ಹಿಡಿದರು. ವೀರೇಂದ್ರ ಪಾಟೀಲರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹೈಕಮಾಂಡ್ ದಾಖಲೆಯ ಸಂಸದರನ್ನು ಹೊಂದಿ ಉತ್ತುಂಗದಲ್ಲಿತ್ತು. ರಾಜೀವ್ ಗಾಂಧಿಯವರ ಅವಕೃಪೆಗೆ ಒಳಗಾಗಿ ವೀರೇಂದ್ರ ಪಾಟೀಲರು ಹನ್ನೊಂದು ತಿಂಗಳಿಗೆ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ ಕರ್ನಾಟಕದಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿ ಅಧಿಕಾರದ ಚುಕ್ಕಾಣಿ ಹಿಡಿದ ಡಿ. ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಎಂಬ ಮಾತಿಗೆ ಅಕ್ಷರಶ: ಜೀವ ತುಂಬಿದವರು. ಅಷ್ಟು ಮಾತ್ರವಲ್ಲ, ತುರ್ತು ಪರಿಸ್ಥಿತಿಯ ಕಳಂಕ, ಜನತಾ ಪಕ್ಷದ ಅಬ್ಬರ, ಆಡಳಿತ ವಿರೋಧಿ ಅಲೆ -ಎಲ್ಲವನ್ನು ಮೆಟ್ಟಿ ನಿಂತು 1978ರಲ್ಲಿ ನಿರಂತರ ಎರಡನೇ ಅವಧಿಗೆ ಕಾಂಗ್ರೆಸ್ ಪಕ್ಷದ ಸರಕಾರವನ್ನು ಮರು ಸ್ಥಾಪಿಸಿದ ಹೆಗ್ಗಳಿಕೆ ಡಿ. ದೇವರಾಜ ಅರಸು ಅವರದು ಮಾತ್ರ. ದುರಂತವೆಂದರೆ: ಸಂಜಯಗಾಂಧಿ ಚಾಡಿ ಮಾತು, ಆರ್. ಗುಂಡೂರಾವ್ ರಂಥ ಪ್ರತಿನಾಯಕರ ಪಿತೂರಿಯಿಂದ ಅರಸು ಅವರು 1980ರ ಹೊತ್ತಿಗೆ ಮುಖ್ಯಮಂತ್ರಿ ಹುದ್ದೆ ತೊರೆಯಬೇಕಾಗಿ ಬಂತು. ಹಾಗೆ ನೋಡಿದರೆ, 60-70ರ ದಶಕದಲ್ಲೇ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಶುರುವಾಗಿತ್ತು. ಕೇರಳದಲ್ಲಿ ಕಮ್ಯುನಿಸ್ಟರು, ತಮಿಳುನಾಡು ರಾಜ್ಯದಲ್ಲಿ ಡಿಎಂಕೆ ಪಕ್ಷ ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ಬೆಳೆದು ಅಧಿಕಾರ ಕಿತ್ತುಕೊಂಡಿದ್ದವು. ಕರ್ನಾಟಕದಲ್ಲಿ ದೇವರಾಜ ಅರಸು ಅವರು ಜನತಾ ಪಕ್ಷದ ಪ್ರವೇಶವನ್ನು ತಡೆದಿದ್ದರು.

ತಮಿಳುನಾಡು ರಾಜ್ಯದಲ್ಲಿ ಕಾಮರಾಜ್ ಅವರೊಂದಿಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಈಗಲೂ ಅಲ್ಲಿ ಪೂರ್ತಿ ನೆಲೆಯೂರಲು ಸಾಧ್ಯವಾಗಿಲ್ಲ.

ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದಿಂದ ದೂರವಾದ ದಿನದಿಂದಲೇ ಪಕ್ಷ ಹಿನ್ನಡೆ ಅನುಭವಿಸತೊಡಗಿತು. 1980ರಲ್ಲಿ ಆರ್. ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಹೊಸ ತಂಡವನ್ನೇನೋ ಕಟ್ಟಿಕೊಂಡಿತ್ತು. ಆದರೆ ಕೇವಲ ಮೂರೇ ವರ್ಷಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಜೋರಾಯಿತು. 1983ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಯಿತು. ಜನತಾ ಪಕ್ಷ, ಕ್ರಾಂತಿರಂಗ, ಬಿಜೆಪಿ ಸೇರಿದಂತೆ ಯಾವ ಪಕ್ಷವೂ ಸ್ವಂತ ಬಲದ ಮೇಲೆ ಸರಕಾರ ರಚಿಸುವಷ್ಟು ಸರಳ ಬಹುಮತ ಗಳಿಸಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಅಧಿಕಾರ ಕಳೆದುಕೊಂಡಿತು. ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಬಿಜೆಪಿ, ಕ್ರಾಂತಿರಂಗದ ಬೆಂಬಲದೊಂದಿಗೆ ಜನತಾ ಪಕ್ಷದ ಸಮ್ಮಿಶ್ರ ಸರಕಾರ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿತು. ಅದು ಮೊದಲ ಕಾಂಗ್ರೆಸೇತರ ಸರಕಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಸಾವಿನ ಅನುಕಂಪದ ಅಲೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ನೆಲ ಕಚ್ಚಿತು. ಅದೇ ನೆಪವಾಗಿಟ್ಟುಕೊಂಡು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಜನಾದೇಶ ಪಡೆಯಲು ಮುಂದಾದರು.ಸಮ್ಮಿಶ್ರ ಸರಕಾರದ ಮೂರು ವರ್ಷದ ಕಾಲಾವಧಿಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಎದ್ದು ನಿಲ್ಲುವ ಸದವಕಾಶ ಇತ್ತು. ಲೋಕಸಭಾ ಚುನಾವಣೆಯ ಫಲಿತಾಂಶ ಎದುರಾಳಿಗಳನ್ನು ಮಟ್ಟ ಹಾಕಿತ್ತು. 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಪಕ್ಷ ಪೂರ್ಣ ಬಹುಮತದ ಸರಕಾರ ರಚಿಸಲು ಜನಾದೇಶ ದೊರೆಯಿತು. ಆಗಲೇ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಇಂಬು ದೊರೆತದ್ದು.

ರಾಮಕೃಷ್ಣ ಹೆಗಡೆ -ಎಚ್.ಡಿ. ದೇವೇಗೌಡರ ನಡುವೆ ತಿಕ್ಕಾಟ ಇರದೇ ಹೋಗಿದ್ದರೆ, ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲರನ್ನು ರಾಜ್ಯ ರಾಜಕಾರಣಕ್ಕೆ ತರದೆ ಹೋಗಿದ್ದರೆ ಜನತಾ ಪಕ್ಷ ಖಾಯಂ ನೆಲೆಯೂರುತ್ತಿತ್ತು.

1989ರ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರು ಕಾಂಗ್ರೆಸ್ ಪಕ್ಷಕ್ಕೆ ಮರು ಜೀವ ನೀಡಿದರು. 178 ಶಾಸಕರನ್ನು ಗೆಲ್ಲಿಸಿಕೊಂಡು ಬಂದ ವೀರೇಂದ್ರ ಪಾಟೀಲರು ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ಆ ದಾಖಲೆಯನ್ನು ಕಾಂಗ್ರೆಸ್ ಸೇರಿದಂತೆ ಯಾವ ರಾಜಕೀಯ ಪಕ್ಷವೂ ಮುರಿಯಲಿಲ್ಲ.

ಒಂದೇ ವರ್ಷದಲ್ಲಿ ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಿ ಎಸ್. ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿದ ಕಾಂಗ್ರೆಸ್ ಹೈ ಕಮಾಂಡ್ ಎರಡೇ ವರ್ಷದಲ್ಲಿ ವೀರಪ್ಪ ಮೊಯ್ಲಿಯವರನ್ನು ಆಯ್ಕೆ ಮಾಡಿಕೊಂಡಿತ್ತು. ಮೂರು ಮುಖ್ಯಮಂತ್ರಿಗಳು ಬಂದು ಹೋಗಿದ್ದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ನೆಲ ಕಚ್ಚಿತು. 178 ಸಂಖ್ಯಾ ಬಲದ ಕಾಂಗ್ರೆಸ್ ಪಕ್ಷ 1994ರ ವಿಧಾನಸಭಾ ಚುನಾವಣೆಯಲ್ಲಿ 34ಕ್ಕೆ ಇಳಿಯಿತು. ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ಸೋತಿದ್ದರು. ಪ್ರತಿಕೂಲ ರಾಜಕೀಯ ಸನ್ನಿವೇಶದಿಂದಾಗಿ ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲರಿಗೆ ಜನಾದೇಶದ ಸಂಪೂರ್ಣ ಅವಧಿ ಪೂರೈಸಲು ಸಾಧ್ಯವಾಗಲೇ ಇಲ್ಲ. ಯಡಿಯೂರಪ್ಪ ಅವರು ಎರಡು ಬಾರಿಯೂ ಜನಾದೇಶ ಪಡೆಯಲೇ ಇಲ್ಲ. ಸರಳ ಬಹುಮತಕ್ಕೆ ಹತ್ತಿರವಾಗಲಿಲ್ಲ. ಆಪರೇಷನ್ ಕಮಲದ ಮೂಲಕ ಮುಖ್ಯಮಂತ್ರಿ ಹುದ್ದೆ ಪಡೆದುಕೊಂಡರು. ಬಿಜೆಪಿ ಹೈಕಮಾಂಡ್, ಅನಂತಕುಮಾರ್ ಮತ್ತು ಬಿ.ಎಲ್. ಸಂತೋಷ್ ಪಿತೂರಿಯಿಂದ ಅವರಿಗೆ ಅವಧಿ ಪೂರೈಸಲು ಆಗಲೇ ಇಲ್ಲ.

ಸನ್ನಿವೇಶದ ಕೈವಾಡ ಮತ್ತು ಬದಲಾದ ರಾಜಕೀಯ ಸಂದರ್ಭ ಸಿದ್ದರಾಮಯ್ಯ ಅವರನ್ನು ಅದೃಷ್ಟವಂತ ಮುಖ್ಯಮಂತ್ರಿಯನ್ನಾಗಿ ಮಾಡಿ ದಾಖಲೆಯ ದಡ ತಲುಪುವಂತಾಗಿದೆ.

ಸಿದ್ದರಾಮಯ್ಯ ಅವರು ಪ್ರತಿಕೂಲ ಸಂದರ್ಭಗಳನ್ನು ಸದವಕಾಶವನ್ನಾಗಿ ಬಳಸಿಕೊಳ್ಳುವ ಮೂಲಕ ಜಾಣ್ಮೆ ಪ್ರದರ್ಶಿಸಿದ್ದಾರೆ. ಜನತಾ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ವಾರಿಗೆಯವರಾದ ಜೀವರಾಜ್ ಆಳ್ವ, ಎಂ.ಪಿ. ಪ್ರಕಾಶ್, ಪಿ.ಜಿ. ಆರ್. ಸಿಂಧ್ಯಾ ಅತ್ಯಂತ ಪ್ರಭಾವಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರೂ ಮುಖ್ಯಮಂತ್ರಿ ಹುದ್ದೆಯ ಹತ್ತಿರ ಬರಲು ಸಾಧ್ಯವಾಗಲಿಲ್ಲ.ಜನತಾ ಪರಿವಾರದಲ್ಲಿ ಸಿದ್ದರಾಮಯ್ಯ ಅವರಿಗೆ ಕಿರಿಯರಾಗಿದ್ದ ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿಕೊಂಡರು. ಯಡಿಯೂರಪ್ಪ ಅವರ ಕೃಪೆಯಿಂದ ಪುಟ್ಟ ಅವಧಿಗೆ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿದರು. ಸಿದ್ದರಾಮಯ್ಯ ಅವರ ದಾಖಲೆಗೆ ಸನ್ನಿವೇಶ ಪೂರಕವಾಗಿದ್ದರಿಂದ ಅವರನ್ನು ಅದೃಷ್ಟವಂತ ಮುಖ್ಯಮಂತ್ರಿ ಎಂದು ಹೇಳುತ್ತಿದ್ದೇವೆ.

ವಾಸ್ತವದಲ್ಲಿ ವ್ಯತಿರಿಕ್ತ ಸನ್ನಿವೇಶಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಕಲೆ ಸಿದ್ದರಾಮಯ್ಯ ಅವರಿಗೆ ಸಿದ್ಧಿಸಿದೆ. 2008ರಲ್ಲಿ ಸಿದ್ದರಾಮಯ್ಯ ಅವರು ತುಸು ಉದಾರವಾಗಿ ನಡೆದುಕೊಂಡಿದ್ದರೂ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿದ್ದರು. ಸಿದ್ದರಾಮಯ್ಯ ಅವರಿಂದ ಆ ನಡೆ ಅಪೇಕ್ಷಿಸುವುದು ಪ್ರಾಯೋಗಿಕವಾಗಿ ತಪ್ಪು. ಸೈದ್ಧಾಂತಿಕವಾಗಿ, ಭಾವನಾತ್ಮಕವಾಗಿ ಸಾವಿರ ಪ್ರಮೇಯಗಳನ್ನು ಹರಿಬಿಟ್ಟರೂ ವಾಸ್ತವ ಎನ್ನುವುದು ಅದು ಬಹಳ ಕಠೋರವಾಗಿರುತ್ತದೆ. 2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಅವರು ಮಹತ್ವಾಕಾಂಕ್ಷೆಯುಳ್ಳ ರಾಜಕಾರಣಿಯಂತೆ ನಡೆದುಕೊಂಡರು. ಹಾಗಾಗಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ಅಷ್ಟೊತ್ತಿಗೆ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ರಾಜಕಾರಣದ ಭಾಗವಾಗಿದ್ದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ಬಹುಪಾಲು ಶಾಸಕರು ವರವೆಂದೇ ಭಾವಿಸಿದ್ದರು. ಕರ್ನಾಟಕದಲ್ಲಿ ಕುರುಬ ಸಮುದಾಯದ ಸಂಖ್ಯಾ ಬಲ ಗಣನೀಯವಾಗಿರುವುದು ಮತ್ತು ರಾಜ್ಯಾದ್ಯಂತ ಹರಡಿರುವುದು ಚುನಾವಣಾ ದೃಷ್ಟಿಯಿಂದ ವಿಶೇಷ. ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತದಾರರ ಸಂಖ್ಯೆ ಕನಿಷ್ಠ ಹತ್ತು ಸಾವಿರದಿಂದ ನಲವತ್ತು ಸಾವಿರದವರೆಗೆ ವ್ಯಾಪಿಸಿದೆ. ಬೀಳಗಿ ಮತಕ್ಷೇತ್ರದಲ್ಲಿ ಜೆ.ಟಿ. ಪಾಟೀಲ್‌ರನ್ನು ಗೆಲ್ಲುವುದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ. ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಬಿ.ಆರ್. ಪಾಟೀಲ್, ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ರಾಜಕಾರಣಿಗಳ ವಿನ್ನಿಂಗ್ ಮಾರ್ಜಿನ್ ನಿರ್ಧರಿಸುವುದೇ ಕುರುಬ ಸಮುದಾಯದ ಮತದಾರರು. ಕುರುಬ ಸಮುದಾಯದಲ್ಲಿ ರೇವಣ್ಣ, ವಿಶ್ವನಾಥ್, ಈಶ್ವರಪ್ಪ ಮುಂತಾದ ನಾಯಕರಿದ್ದರೂ ಅವರಿಗೆ ಸಮುದಾಯದ ಏಕೈಕ ನಾಯಕನಾಗಿ ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಕುರುಬ ಸಮುದಾಯದ ದನಿಯಾಗಿ ಕಾರ್ಯ ನಿರ್ವಹಿಸಿದರು. ಆ ಸಮುದಾಯದ ಆತ್ಮಬಲ ಹೆಚ್ಚಿಸಿದರು. ಎಲ್ಲಕ್ಕೂ ಮಿಗಿಲಾಗಿ ಶಾಸಕರನ್ನು ಪ್ರೀತಿಸುವ ಕಲೆ ಸಿದ್ದರಾಮಯ್ಯ ಅವರಿಗೆ ಕರಗತವಾಗಿದೆ. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಗೆ ಎದುರಾಳಿ ನಾಯಕರೇ ಇರಲಿಲ್ಲ. ಜಿ. ಪರಮೇಶ್ವರ್ ಚುನಾವಣೆಯಲ್ಲಿ ಸೋತಿದ್ದು ಮತ್ತು ಮಲ್ಲಿಕಾರ್ಜುನ ಖರ್ಗೆ ಕೇಂದ್ರ ರಾಜಕಾರಣದಲ್ಲಿ ಇದ್ದಿದ್ದು ಭಿನ್ನಮತಕ್ಕೆ ಆಸ್ಪದ ಇಲ್ಲದಂತಾಗಿತ್ತು.

ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಎಂಬ ಮಾತಿಗೆ ಹೆಚ್ಚು ಅಂಟಿಕೊಂಡಿದ್ದರು. ಕುರುಬ ಸಮುದಾಯಕ್ಕೆ ಹೆಚ್ಚು ಅವಕಾಶ ಕಲ್ಪಿಸಿಯೂ ಅತಿ ಹಿಂದುಳಿದ ಸಮುದಾಯಗಳನ್ನು ಅಪ್ಪಿಕೊಂಡಿದ್ದರು. ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರನ್ನು ಮನಸಾರೆ ಪ್ರೀತಿಸಿದ್ದರು. ದಲಿತರಲ್ಲಿ ಎಡಗೈ ಸಮುದಾಯದ ಎಚ್. ಆಂಜನೇಯ ಅವರಿಗೆ ಸಮಾಜ ಕಲ್ಯಾಣದಂತಹ ಪ್ರಮುಖ ಖಾತೆ ನೀಡಿ ನಿಜವಾದ ಕಾಳಜಿ ಮೆರೆದಿದ್ದರು. ಮಹದೇವಪ್ಪ-ಆಂಜನೇಯ ಸಿದ್ದರಾಮಯ್ಯ ಅವರ ಎರಡು ಕಣ್ಣುಗಳಾಗಿದ್ದರು. ಮಡಿವಾಳ, ನೇಕಾರ, ಕಂಬಾರ, ಕುಂಬಾರದಂತ ಅತಿ ಹಿಂದುಳಿದ ಸಮುದಾಯಗಳಿಗೆ ಹುಡುಕಿ ಹುಡುಕಿ ಪ್ರಾತಿನಿಧ್ಯ ಕಲ್ಪಿಸುತ್ತಿದ್ದರು. ಆಗ ಸಿದ್ದರಾಮಯ್ಯ ಅವರ ಸುತ್ತಮುತ್ತ ಕುರುಬ ಸಮುದಾಯದ ಹಲವು ನಾಯಕರಿದ್ದರು. ಆಗ ಸಾಮಾಜಿಕ ನ್ಯಾಯದ ಮೇಲೆ ಅಪಾರ ನಂಬಿಕೆಯುಳ್ಳವರ ಸಂಖ್ಯೆ ಜಾಸ್ತಿ ಇತ್ತು.

2023ರ ವಿಧಾನಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಅವರ ನಾಯಕತ್ವ ಕಾಂಗ್ರೆಸ್ ಪಕ್ಷಕ್ಕೆ ಒಂದು ಆಯ್ಕೆಯಾಗಿದೆ. ಅನಿವಾರ್ಯವಾಗಿ ಉಳಿದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಡಿ.ಕೆ. ಶಿವಕುಮಾರ್ ಈ ಸರಕಾರದಲ್ಲಿ ಸಮಾನ ಪಾಲುದಾರ ಎಂಬಂತೆ ವರ್ತಿಸುತ್ತಿರುವುದು ಸನ್ನಿವೇಶ ಬದಲಾಗಿದ್ದರ ಸಂಕೇತ. ಇಷ್ಟಾಗಿಯೂ ಶಾಸಕರು ಸಿದ್ದರಾಮಯ್ಯ ಪರ ಇದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ಮೊದಲಿನ ಹಾಗೆ ಉಳಿದಿಲ್ಲ. ಈ ಮಾತು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ. ಆರ್. ಪಾಟೀಲರಾದಿಯಾಗಿ ಹಲವರು ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಸಚಿವ ಸಂಪುಟ ರಚಿಸಿಕೊಂಡ ದಿನದಿಂದಲೇ ಅವರು ಮೊದಲಿನವರಂತಿಲ್ಲ ಎಂಬ ಭಾವನೆ ಮೂಡಿದೆ. ಫಂಡ್ ರೈಸಿಂಗ್ ಸಚಿವರಿಗೆ ಮಹತ್ವದ ಖಾತೆ ನೀಡಿದಾಗಲೇ ಸಾಮಾಜಿಕ ನ್ಯಾಯ ಮತ್ತು ಸಮಾಜವಾದ ಅಪಾಯದತ್ತ ಸಾಗುತ್ತಿದೆ ಎಂಬುದು ಮನವರಿಕೆಯಾಗಿತ್ತು. ಬೈರತಿ ಸುರೇಶ್, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಝಮೀರ್ ಅಹ್ಮದ್ ಮತ್ತು ಸತೀಶ್ ಜಾರಕಿಹೊಳಿಯವರ ಖಾತೆಯಲ್ಲಿ ಅತ್ಯುತ್ತಮ ಕೆಲಸಗಳು ಆಗಿವೆಯೇ ಎಂಬುದನ್ನು ಕಂದೀಲು ಹಚ್ಚಿ ಹುಡುಕಬೇಕಾಗಿದೆ. ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದಾರೆ. ಐದೂ ಗ್ಯಾರಂಟಿಗಳು ಜನಪ್ರಿಯ ಕಾರ್ಯಕ್ರಮಗಳು. ಜನರ ಬದುಕಿಗೆ ತಾತ್ಕಾಲಿಕ ಪರಿಹಾರವಾಗಿ ನಿಲ್ಲುತ್ತವೆ. ಅರಸು ಕಾಲದಲ್ಲಿ ಜಾರಿಗೆ ಬಂದ ಹಾವನೂರು ಆಯೋಗದ ವರದಿ, ಲ್ಯಾಂಡ್ ಸೀಲಿಂಗ್ ಆ್ಯಕ್ಟ್‌ನ ಹಾಗೆ ದೂರಗಾಮಿ ಪರಿಣಾಮ ಬೀರುವ ಒಳನೋಟ ಗ್ಯಾರಂಟಿಗಳಿಗೆ ಇರುವುದಿಲ್ಲ.

ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ಕೋಮುವಾದಿ ಶಕ್ತಿಗಳು ಹೆಚ್ಚು ಬಲಿಷ್ಠವಾಗಿವೆ. ನಾಡಿನ ಮುಸ್ಲಿಮ್ ಸಮುದಾಯ ಅಭದ್ರತೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರೆಸ್ಸೆಸ್ ನವರ ಕನಸಿನ ಕೂಸು ಚಾಣಕ್ಯ ವಿಶ್ವವಿದ್ಯಾನಿಲಯ ಪ್ರವರ್ಧಮಾನಕ್ಕೆ ಬರುತ್ತಿದೆ. ಕೋಮುವಾದವನ್ನು ಸಮರ್ಥವಾಗಿ ವಿರೋಧಿಸುವ ಪ್ರಬಲ ಅಸ್ತ್ರಗಳನ್ನೇ ರೂಪಿಸಿಲ್ಲ. ಕೇಂದ್ರ ಸರಕಾರದ ಎನ್.ಇ.ಪಿ.ಯ ಕೋಮುವಾದಿ ಹುನ್ನಾರಗಳನ್ನು ಅನಾವರಣಗೊಳಿಸುವ ರಾಜ್ಯ ಶಿಕ್ಷಣ ನೀತಿ ಸರ್ವ ತಯಾರಿಯೊಂದಿಗೆ ಹೊರ ಬರಲೇ ಇಲ್ಲ.

ಸಿದ್ದರಾಮಯ್ಯ ಸರಕಾರ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿಯೂ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಮುಸ್ಲಿಮ್ ಮೀಸಲಾತಿ ಕಲ್ಪಿಸುವ 2ಬಿ ಮರುಸ್ಥಾಪನೆಯಾಗಲೇ ಇಲ್ಲ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಶ್ವತ್ಥ ನಾರಾಯಣ ಛಾಯೆ ಈಗಲೂ ಭೂತದಂತೆ ಎದ್ದು ಕಾಣುತ್ತಿದೆ.

ಸಿದ್ದರಾಮಯ್ಯ ಸರಕಾರದಲ್ಲಿ ಕುರುಬ ಸಮುದಾಯದವರಿಗೆ ಹೆಚ್ಚು ಅವಕಾಶ ದೊರೆತರೆ ಅದು ಖಂಡಿತ ಸಾಮಾಜಿಕ ನ್ಯಾಯದ ಉಪಕ್ರಮವೇ ಸರಿ. ಆದರೆ ಅತಿ ಹಿಂದುಳಿದ, ವಂಚಿತ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಕಡೆಗಣಿಸಿ ಹೆಚ್ಚು ಅವಕಾಶ ಪಡೆದರೆ ಅದು ಜಾತಿವಾದ ಎನಿಸಿಕೊಳ್ಳುತ್ತದೆ. ಈ ಸರಕಾರದಲ್ಲಿ ಮೇಲು ಜಾತಿಗಳು ಹೋರಾಟ ಮಾಡಿಯಾದರೂ ತಮ್ಮ ಹಕ್ಕಿನ ಪಾಲು ಪಡೆದುಕೊಳ್ಳುತ್ತಿವೆ. ಸಣ್ಣ ಪುಟ್ಟ ಸಮುದಾಯಗಳು ಅಕ್ಷರಶಃ ಅನಾಥವಾಗಿವೆ. ಒಂದೆರಡು ನಿದರ್ಶನಗಳ ಮೂಲಕ ಮನವರಿಕೆ ಮಾಡಿಕೊಡಬಹುದು. ಮುಖ್ಯಮಂತ್ರಿ ಕಚೇರಿ ಸೇರಿದಂತೆ, ಸರಕಾರದ ಆಯಕಟ್ಟಿನ ಜಾಗದಲ್ಲಿ ಯಾವ ಸಮುದಾಯದವರ ಪ್ರಾತಿನಿಧ್ಯ ಹೆಚ್ಚಾಗಿದೆ ಎಂಬುದು ಸ್ವಯಂ ಸಿದ್ದರಾಮಯ್ಯ ಅವರೇ ದೃಢಪಡಿಸಿಕೊಳ್ಳಬಹುದು. ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಕುರುಬ ಸಮುದಾಯ ಅತಿ ಹಿಂದುಳಿದವರ ಒಳಿತನ್ನೇ ಬಯಸಿದೆ. ಆದರೆ ಕುರುಬ ಸಮುದಾಯಲ್ಲಿನ ಜಾತಿವಾದಿ ಗುಂಪು ಅತಿ ಹಿಂದುಳಿದ ವರ್ಗದ ಪಾಲಿಗೆ ವಿಲನ್ ಆಗಿ ಪರಿಣಮಿಸಿದೆ. ದಾಖಲೆ ಅವಧಿಯ ಸಿ.ಎಂ. ಸಿದ್ದರಾಮಯ್ಯ ಅವರು ಅಹಿಂದ ಏಳ್ಗೆಯ ವಿಷಯದಲ್ಲಿ ಕುರುಡಾಗಿದ್ದು ದುರಂತ.ಕರ್ನಾಟಕದಲ್ಲಿ ಒಟ್ಟು ನಲವತ್ತೆರಡು ಸರಕಾರಿ ವಿಶ್ವವಿದ್ಯಾನಿಲಯಗಳಿವೆ. ಮುಸ್ಲಿಮ್ ಸಮುದಾಯದ ಒಬ್ಬ ಕುಲಪತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರಿಶ್ಚಿಯನ್, ಕಾಡು ಗೊಲ್ಲ, ಮಡಿವಾಳ, ಲಂಬಾಣಿ, ನೇಕಾರ, ವಾಲ್ಮೀಕಿ, ಭೋವಿ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಯೂ ಕುಲಪತಿ ಹುದ್ದೆಯಲ್ಲಿ ಇಲ್ಲ. ಇನ್ನು ಕಬ್ಬಲಿಗ, ಅಲೆಮಾರಿ, ಹಡಪದ ಸೇರಿದಂತೆ ಅತಿ ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಯೂ ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಕುಲಪತಿ ಹುದ್ದೆ ಪಡೆಯಲು ಸಾಧ್ಯವಾಗಿಲ್ಲ. ದಲಿತರಲ್ಲಿನ ಎಡಗೈ ಸಮುದಾಯದ ಒಬ್ಬ ವ್ಯಕ್ತಿ ಕುಲಪತಿ ಹುದ್ದೆಯಲ್ಲಿದ್ದಾರೆ. ಇದು ಸಾಮಾಜಿಕ ನ್ಯಾಯದ ಒಂದು ವಲಯದಲ್ಲಿನ ಸ್ಯಾಂಪಲ್ ಮಾತ್ರ.

ಬಸವಣ್ಣ ಸಾಮಾಜಿಕ ನ್ಯಾಯದ ಕನಸುಗಳನ್ನು ಬಿತ್ತಿ ಹೋದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜಸತ್ತೆಯ ಮಿತಿಯಲ್ಲಿ ಸಾಮಾಜಿಕ ನ್ಯಾಯದ ರಥ ಎಳೆದರು. ಮಿಲ್ಲರ್ ಕಮಿಷನ್ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ವಂಚಿತ ಸಮುದಾಯಗಳಿಗೆ ಬೆಳಕಾದರು. ದೇವರಾಜ ಅರಸು ಅವರು ಹಿಂದುಳಿದ ವರ್ಗದ ಹರಿಕಾರ ಎನಿಸಿಕೊಳ್ಳುವ ಕ್ರಾಂತಿಕಾರಿ ನಿಲುವು ತೆಗೆದುಕೊಂಡರು.

ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯ ವರದಿ ಸಿದ್ಧಪಡಿಸಿದ ಎಚ್. ಕಾಂತರಾಜು ಮತ್ತು ಜಯಪ್ರಕಾಶ್ ಹೆಗ್ಡೆಯವರಿಗೆ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದರು. ಆದರೆ ನಿರಾಸೆ ಮೂಡಿಸಿದರು. ಹಾಗೆ ನೋಡಿದರೆ ನಾಲ್ವಡಿ ಮತ್ತು ಅರಸು ಅವರಿಗಿಂತ ಹೆಚ್ಚು ಅವಕಾಶಗಳು ಸಿದ್ದರಾಮಯ್ಯ ಅವರಿಗೆ ಇವೆ. ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯದ ಮಾತುಗಳನ್ನು ನಾಲಿಗೆ ಮೇಲೆ ತಂದುಕೊಳ್ಳಲು ಹಿಂಜರಿಯುವವರ ಸಂಖ್ಯೆ ಜಾಸ್ತಿ ಇದೆ. ಅಂತಹದರಲ್ಲಿ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಜಪ ಗ್ರೇಟ್ ಅನಿಸಿಕೊಳ್ಳುತ್ತದೆ. ‘ಇವಾನರವ ಇವಾನರವ’ ಎಂದು ಪ್ರಶ್ನೆ ಮಾಡದೆ ಅತಿ ಹಿಂದುಳಿದ ಸಮುದಾಯಗಳನ್ನು ಅಪ್ಪಿಕೊಂಡರೆ, ಅಧಿಕಾರದಲ್ಲಿ ಸಮಾನ ಪಾಲು ನೀಡಿದರೆ ಈ ಎಂಟು ವರ್ಷದ ಅವರ ದಾಖಲೆ ಸಾರ್ಥಕ ಎನಿಸಿಕೊಳ್ಳುತ್ತದೆ.

Tags

Longest-serving Chief MinisterSocial justice
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X