Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಸಾಂಸ್ಕೃತಿಕ ಕ್ಷೇತ್ರ ಪಕ್ಷಾತೀತವಾಗಿರಲಿ

ಸಾಂಸ್ಕೃತಿಕ ಕ್ಷೇತ್ರ ಪಕ್ಷಾತೀತವಾಗಿರಲಿ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ17 Oct 2026 11:45 AM IST
share
ಸಾಂಸ್ಕೃತಿಕ ಕ್ಷೇತ್ರ ಪಕ್ಷಾತೀತವಾಗಿರಲಿ

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸದಸ್ಯರನ್ನು ನಿರ್ದಿಷ್ಟ ಅವಧಿಗೆ ನೇಮಕ ಮಾಡಿರುತ್ತಾರೆ. ವಿಶ್ವವಿದ್ಯಾನಿಲಯಗಳ ಕುಲಪತಿಗಳನ್ನು ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿರುತ್ತಾರೆ. ಸರಕಾರ ಅಥವಾ ಮುಖ್ಯಮಂತ್ರಿ ಬದಲಾದಾಗ ಅವರನ್ನು ಬದಲಾಯಿಸುವುದಿಲ್ಲ. ಆದರೆ ಸಾಂಸ್ಕೃತಿಕ ಕ್ಷೇತ್ರದ ನೇಮಕಾತಿಗೆ ಯಾಕೆ ಈ ದುರ್ಗತಿ? ಸಾಂಸ್ಕೃತಿಕ ಕ್ಷೇತ್ರದ ನೇಮಕಾತಿಗಳು ಪಕ್ಷಾತೀತವಾಗಿರಬೇಕು. ಅಷ್ಟು ಮಾತ್ರವಲ್ಲ ಸರಕಾರ ಬದಲಾದಾಗ ಬದಲಾವಣೆ ಮಾಡಬಾರದು.

ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಅಕ್ಷರಶಃ ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಅತ್ಯಂತ ಪ್ರಾಚೀನವೂ ಮತ್ತು ಶ್ರೇಷ್ಠವೂ ಆಗಿರುವ ಕನ್ನಡ ಸಾರಸ್ವತ ಲೋಕ ತನ್ನ ಆಂತರ್ಯದಲ್ಲಿ ಎಲ್ಲರನ್ನು ಒಳಗೊಳ್ಳುವ ಮೌಲ್ಯವನ್ನು ಹೊಂದಿದೆ. ಮನುಷ್ಯ ಜಾತಿ ತಾನೊಂದೆವಲಂ ಎನ್ನುವ ಪಂಪ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಬಸವಾದಿ ಶರಣರು, ಕುಲದ ನೆಲೆಯನ್ನು ಪ್ರಶ್ನೆ ಮಾಡುವ ದಾಸರು, ಸರ್ವ ಜನಾಂಗದ ಶಾಂತಿಯ ತೋಟದ ಕನಸುಗಳನ್ನು ಬಿತ್ತಿದ ರಾಷ್ಟ್ರ ಕವಿ ಕುವೆಂಪು ಅವರ ಈ ಕನ್ನಡ ನಾಡು ಪರಧರ್ಮ, ಪರ ವಿಚಾರಗಳನ್ನು ಗೌರವಿಸುತ್ತದೆ.

ಸಾಹಿತ್ಯ ಕ್ಷೇತ್ರದ ಸಾಧನೆಗೆ ಎಂಟು ಜ್ಞಾನ ಪೀಠ ಪ್ರಶಸ್ತಿಗಳನ್ನು ತಂದು ಕೊಟ್ಟ ಕನ್ನಡದ ಲೇಖಕರು ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಗಳಿಸಿದ್ದಾರೆ. ಯಾವೊಂದು ಪಕ್ಷದ ತುತ್ತೂರಿಯಾಗದೆ ಕನ್ನಡದ ಸಾಕ್ಷಿ ಪ್ರಜ್ಞೆಯಂತೆ ಕಾರ್ಯ ನಿರ್ವಹಿಸಿದ್ದಾರೆ. ಶ್ರೇಷ್ಠ ಇಂಜಿನಿಯರ್ ಮೋಕ್ಷಗೊಂಡಂ ವಿಶ್ವೇಶ್ವರಯ್ಯ, ಖ್ಯಾತ ಸಂಗೀತಗಾರ ಪಂ.ಭೀಮಸೇನ್ ಜೋಶಿ ಮತ್ತು ಹಿರಿಯ ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್ ಭಾರತ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ. ಕನ್ನಡದ ಗೌರವವನ್ನು ಹೆಚ್ಚಿಸಿದ್ದಾರೆ. ಲಲಿತ ಕಲೆಗಳ ಕ್ಷೇತ್ರದಲ್ಲಿ ಕನ್ನಡಿಗರ ಸಾಧನೆ ಅನನ್ಯವಾದುದು. ವೆಂಕಟಪ್ಪ, ಹೆಬ್ಬಾರ್, ಎಸ್.ಎಂ. ಪಂಡಿತ್‌ರಂತಹ ಶ್ರೇಷ್ಠ ಚಿತ್ರಕಲಾವಿದರು ಕನ್ನಡಿಗರು ಎಂಬುದು ಅಭಿಮಾನಪಡುವ ಸಂಗತಿ. ಜಕಣಾಚಾರಿ ಪರಂಪರೆಯನ್ನು ಮುಂದುವರಿಸಿರುವ ಅಸಂಖ್ಯಾತ ಶಿಲ್ಪಿಗಳು ಕರ್ನಾಟಕದಲ್ಲಿದ್ದಾರೆ. ಭಾರತದ ಹತ್ತು ಜನ ಶ್ರೇಷ್ಠ ಸಂಗೀತಗಾರರ ಪಟ್ಟಿಯಲ್ಲಿ ಕರ್ನಾಟಕದ ಐದು ಜನ ಸಾಧಕರು ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ರತ್ನ ಪಂ. ಭೀಮಸೇನ್ ಜೋಶಿ, ಪದ್ಮ ವಿಭೂಷಣ ಪಂ. ಮಲ್ಲಿಕಾರ್ಜುನ ಮನ್ಸೂರ್, ಪದ್ಮ ವಿಭೂಷಣ ಪಂ. ಕುಮಾರ್ ಗಂಧರ್ವ, ಪದ್ಮಭೂಷಣ ಡಾ. ಗಂಗೂಬಾಯಿ ಹಾನಗಲ್ ಮತ್ತು ಪದ್ಮಭೂಷಣ ಪಂ. ಬಸವರಾಜ್ ರಾಜಗುರು ಅವರನ್ನು ಭಾರತದ ಶ್ರೇಷ್ಠ ಸಂಗೀತಗಾರರ ಸಾಲಿನಲ್ಲಿ ನಿಲ್ಲಿಸುತ್ತಾರೆ. ಸಾಹಿತಿಗಳು, ಕಲಾವಿದರು ಮತ್ತು ಶ್ರೇಷ್ಠ ಸಂಗೀತಗಾರರು ಯಾವ ರಾಜಕೀಯ ಪಕ್ಷಗಳಿಗೂ ವೋಟ್ ಬ್ಯಾಂಕ್ ಆಗಿ ಕೆಲಸ ಮಾಡಲಾರರು. ಆದರೆ ಅವರು ಕನ್ನಡದ ಕೀರ್ತಿಯನ್ನು ಬೆಳಗುತ್ತಿರುತ್ತಾರೆ. ಈ ಹೊತ್ತಿಗೂ ಕನ್ನಡದ ಪ್ರತಿಭೆಗಳು ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುತ್ತಿದ್ದಾರೆ. ಐ.ಟಿ., ಬಿ.ಟಿ. ಕ್ಷೇತ್ರದಲ್ಲಿನ ಕನ್ನಡದ ಮಕ್ಕಳ ಸಾಧನೆ ಟ್ರಂಪ್ ಕಣ್ಣು ಕೆಂಪಾಗುವಂತೆ ಮಾಡಿದೆ. ಆದರೆ ಕರ್ನಾಟಕದ ರಾಜಕಾರಣಿಗಳು ಮಾತ್ರ ಪರಸ್ಪರ ಸ್ಟಿಂಗ್ ಆಪರೇಷನ್ ಮಾಡಿಸುತ್ತಾ ಜನರ ಕಣ್ಣಲ್ಲಿ ಬೆತ್ತಲಾಗುತ್ತಿದ್ದಾರೆ. ಮಾತ್ರವಲ್ಲ, ಕರ್ನಾಟಕದ ಗೌರವವನ್ನು ಮಣ್ಣು ಪಾಲು ಮಾಡುತ್ತಿದ್ದಾರೆ.

ಸದ್ಯ ಕರ್ನಾಟಕದ ಹತ್ತೊಂಭತ್ತು ಜನ ರಾಜಕಾರಣಿಗಳು ಹನಿ ಟ್ರ್ಯಾಪ್ ಮೂಲಕ ತಯಾರಿಸಿದ ಪೆನ್‌ಡ್ರೈವ್ ಕಂಟೆಂಟ್ ಅನ್ನು ಪ್ರಸಾರ ಮಾಡಬಾರದೆಂದು ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ.

ಕರ್ನಾಟಕದ ರಾಜಕಾರಣ ನೈತಿಕತೆ ಕಳೆದುಕೊಂಡು ಪಾತಾಳ ತಲುಪಿದೆ. ಈ ಹಿಂದಿನ ರಾಜಕಾರಣಿಗಳೂ ಚುನಾವಣೆಗಳನ್ನು ಎದುರಿಸಿದ್ದಾರೆ. ಸೋಲು-ಗೆಲುವುಗಳನ್ನು ದಾಖಲಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ಆದರೆ ಈ ಮಟ್ಟದಲ್ಲಿ ಕೀಳು ರಾಜಕಾರಣ ಮಾಡುತ್ತಿರಲಿಲ್ಲ. ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ಬಿ.ಡಿ. ಜತ್ತಿ, ದೇವರಾಜ ಅರಸು, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ, ಎಚ್.ಡಿ. ದೇವೇಗೌಡರು ಎಷ್ಟೇ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಕಿತ್ತಾಡಿಕೊಂಡರೂ ನೆಲ ಜಲದ ವಿಷಯದಲ್ಲಿ ಒಂದಾಗುತ್ತಿದ್ದರು. ವ್ಯಕ್ತಿಗತ ದೌರ್ಬಲ್ಯಗಳನ್ನು ಬಳಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿರಲಿಲ್ಲ.

ಕರ್ನಾಟಕದ ರಾಜಕಾರಣಿಗಳು ಅಧಿಕಾರ ಲಾಲಸೆಗೆ ಮೌಲ್ಯಾಧಾರಿತ ರಾಜಕಾರಣವನ್ನು ಮರೆತಂತಿದೆ. ರಾಜಕಾರಣವನ್ನು ಹಾಳು ಮಾಡಿದ ಇವರೇ ಸಾಂಸ್ಕೃತಿಕ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದ್ದಾರೆ.

ಕರ್ನಾಟಕದ ಅಕಾಡಮಿ, ಪ್ರಾಧಿಕಾರ ಮತ್ತು ರಂಗಾಯಣದಂತಹ ಸಾಂಸ್ಕೃತಿಕ ಕೇಂದ್ರಗಳು ಈ ಮೊದಲು ಪಕ್ಷ ರಾಜಕಾರಣದಿಂದ ಹೊರತಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಈಗ ಸಾಹಿತಿ ಮತ್ತು ಕಲಾವಿದರನ್ನು ಬಿಜೆಪಿ, ಕಾಂಗ್ರೆಸ್ ಎಂದು ವಿಭಜಿಸಲಾಗುತ್ತಿದೆ. ನಿಜವಾದ ಸಾಹಿತಿ, ಕಲಾವಿದರು ಅತ್ಯುತ್ತಮವಾದುದನ್ನು ನಿರ್ಮಿಸುವುದರಲ್ಲಿ, ಸೃಜಿಸುವುದರಲ್ಲಿ ನಿರತರಾಗಿರುತ್ತಾರೆ. ಪಕ್ಷ ರಾಜಕಾರಣ ಸೃಜನಶೀಲ ಪ್ರವೃತ್ತಿಯುಳ್ಳವರಿಗೆ ಹೊಂದಾಣಿಕೆಯಾಗುವುದಿಲ್ಲ. ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರಾದ ಡಾ. ಗಂಗೂಬಾಯಿ ಹಾನಗಲ್ ಅವರು ಹುಬ್ಬಳ್ಳಿಯ ಈದ್ಗಾ ಮೈದಾನ ಕೋಮು ಗಲಭೆ ಸಂದರ್ಭದಲ್ಲಿ ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಡಾ. ಗಂಗೂಬಾಯಿ ಹಾನಗಲ್ ಅವರ ಬಳಿ ಹೋಗುತ್ತಿದ್ದರು. ಆದರೆ ಅವರು ಮಾತ್ರ ಯಾರೊಬ್ಬರ ಪಕ್ಷ ವಹಿಸುತ್ತಿರಲಿಲ್ಲ. ಹಿರಿಯ ಸಾಹಿತಿ, ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರು ಎಲ್ಲ ಪಕ್ಷಗಳ ರಾಜಕಾರಣಿಗಳನ್ನು ಮುಲಾಜಿಲ್ಲದೆ ಟೀಕಿಸುತ್ತಿದ್ದರು. ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ ಮುಂತಾದವರು ಎಡಪಂಥೀಯ ಚಿಂತನೆಗಳಿಗೆ ಹತ್ತಿರವಾಗಿದ್ದರೂ ಎಲ್ಲ ರಾಜಕೀಯ ಪಕ್ಷಗಳ ಲೋಪಗಳನ್ನು ಕಂಡುಕೊಳ್ಳುವಷ್ಟು ಸೂಕ್ಷ್ಮತೆ ಸದಾ ಉಳಿಸಿಕೊಂಡಿದ್ದರು.

ಕರ್ನಾಟಕದ ಸಾಹಿತಿ ಕಲಾವಿದರು ಹಲವು ಸೈದ್ಧಾಂತಿಕ ಚಿಂತನ ಧಾರೆಗಳಲ್ಲಿ ಹಂಚಿ ಹೋಗಿದ್ದಾರೆ. ಆದರೆ ಕನ್ನಡ ಪ್ರಜ್ಞೆಯ ಮುಖ್ಯ ತಿರುಳಾದ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಹಾ ಮಂತ್ರಕ್ಕೆ ಎಲ್ಲರೂ ಬದ್ಧರು. ನವೋದಯ ಕಾಲದ ಪ್ರಮುಖ ಸಾಹಿತಿಗಳಾದ ಕುವೆಂಪು, ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಪು.ತಿ.ನ., ಕೆ.ಎಸ್. ನರಸಿಂಹ ಸ್ವಾಮಿ, ದ.ರಾ. ಬೇಂದ್ರೆ ಮುಂತಾದವರು ಭಿನ್ನ ವಿಭಿನ್ನ ಸೈದ್ದಾಂತಿಕ ಒಲವು ನಿಲುವುಗಳನ್ನು ಹೊಂದಿದ್ದರೂ ಕನ್ನಡ ಪ್ರಜ್ಞೆ ಅವರ ಬರಹದ ಪ್ರಮುಖ ಚಾಲಕ ಶಕ್ತಿಯಾಗಿತ್ತು. ಕನ್ನಡದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಡಾ. ಎಸ್.ಎಲ್. ಭೈರಪ್ಪ ಅವರು ಬಲಪಂಥೀಯ ವಿಚಾರ ಧಾರೆಗಳತ್ತ ಒಲವು ಹೊಂದಿದ್ದರು. ಆದರೆ ಕನ್ನಡ ಸಾರಸ್ವತ ಲೋಕ ಮಾತ್ರ ಅವರನ್ನು ಕನ್ನಡದ ಅತ್ಯುತ್ತಮ ಕಾದಂಬರಿಕಾರ ಎಂದೇ ಪರಿಗಣಿಸಿ ಗೌರವ ನೀಡುತ್ತಿತ್ತು. ಮಾಸ್ತಿ, ಪು.ತಿ.ನ. ಸಂಪ್ರದಾಯಸ್ಥರಾಗಿದ್ದರು. ಆದರೆ ಅವರ ಬರಹ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿತ್ತು. ಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರು ಮಾರ್ಕ್ಸ್ ವಾದಿ ಚಿಂತನೆಗಳ ಬಗ್ಗೆ ತಕರಾರು ಹೊಂದಿದ್ದರು. ಕನ್ನಡದ ಶ್ರೇಷ್ಠ ಕಥನ ಕವಿ ಸು.ರಂ. ಎಕ್ಕುಂಡಿಯವರು ಮಾಧ್ವ -ಮಾರ್ಕ್ಸ್ ತತ್ವಗಳನ್ನು ಸಮನ್ವಯಗೊಳಿಸಿ, ಎರಡು ವಿಚಾರಧಾರೆಗಳು ತಮ್ಮ ಕಾವ್ಯದ ಪ್ರೇರಣೆ ಎಂದು ಹೇಳಿಕೊಳ್ಳುತ್ತಿದ್ದರು. ನವ್ಯ, ಪ್ರಗತಿಶೀಲ, ದಲಿತ ಬಂಡಾಯ ಲೇಖಕರಿಗೆ ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ಮಾರ್ಕ್ಸ್‌ವಾದಿ ಚಿಂತನೆಗಳು ಪ್ರಭಾವಿಸಿದ್ದವು. ಹಾಗಂತ ಯಾವ ಲೇಖಕರೂ ಆಯಾ ವಿಚಾರಧಾರೆಗಳ ಪ್ರಚಾರ ಮಾಡಲು ಸಾಹಿತ್ಯ ರಚಿಸಲಿಲ್ಲ.

ಬಹುತ್ವವನ್ನು ಒಳಗೊಂಡು ಸತ್ವಶಾಲಿ ಸಾಹಿತ್ಯ ರಚನೆ ಮಾಡುತ್ತಾ ಬಂದ ಕನ್ನಡ ಸಾರಸ್ವತ ಲೋಕವನ್ನು ಬಿಜೆಪಿ, ಕಾಂಗ್ರೆಸ್ ಎಂದು ವಿಭಜಿಸಿ ಸ್ಥಾನಮಾನ ನೀಡುವುದು ಕನ್ನಡ ಪ್ರಜ್ಞೆಗೆ ಅಪಮಾನ ಮಾಡಿದಂತೆ.

ಹಿರಿಯ ರಾಜಕಾರಣಿ ಎಸ್. ನಿಜಲಿಂಗಪ್ಪ ಅವರಿಂದ ಹಿಡಿದು ಯಡಿಯೂರಪ್ಪ, ಎಚ್.ಡಿ. ಕುಮಾರ ಸ್ವಾಮಿಯವರೆಗೂ ಯಾರೊಬ್ಬರೂ ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ, ಅಕಾಡಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡುವಾಗ ಆಯಾ ಕ್ಷೇತ್ರಗಳಲ್ಲಿನ ಅವರ ಸಾಧನೆ, ಸಿದ್ಧಿಯನ್ನು ಪರಿಗಣಿಸಿ ಸ್ಥಾನಮಾನ, ಗೌರವಗಳನ್ನು ನೀಡುತ್ತಿದ್ದರು. ಸಾಮಾಜಿಕ ನ್ಯಾಯದ ಪರಿಕಲ್ಪನೆಯೂ ಪ್ರತಿಭೆಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸುತ್ತಿತ್ತು. 2006ನೇ ಇಸವಿಯವರೆಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಸರಕಾರಗಳೇ ಆಡಳಿತ ನಡೆಸುತ್ತಿದ್ದವು. ಸಾಹಿತಿ, ಕಲಾವಿದರನ್ನು ಪಕ್ಷದ ಕಾರ್ಯಕರ್ತರೆಂದು ಭಾವಿಸದೆ ಅಪ್ಪಟ ಮಾನವೀಯ ಅಂತಃಕರಣವುಳ್ಳ ಸೃಜನಶೀಲರು ಎಂದೇ ಭಾವಿಸಿ ಗೌರವ ಕೊಡುತ್ತಿದ್ದರು.

ಎನ್. ಧರಂ ಸಿಂಗ್ ಅವರು 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿದ್ದರು. 2005ರಲ್ಲಿ ಅತ್ಯುತ್ತಮ ಸಾಹಿತಿ ಕಲಾವಿದರನ್ನು ಒಳಗೊಂಡ ಅಕಾಡಮಿ-ಪ್ರಾಧಿಕಾರಗಳನ್ನು ರಚಿಸಿದ್ದರು. ಹಾಗೆ ನೋಡಿದರೆ ದಲಿತ ಬಂಡಾಯ ಸಾಹಿತಿಗಳೇ ಹೆಚ್ಚು ಸ್ಥಾನ ಪಡೆದುಕೊಂಡಿದ್ದರು. ಸಂಗೀತ, ನೃತ್ಯ ಅಕಾಡಮಿಗೆ ರಾಜಶೇಖರ ಮನ್ಸೂರ್ ಅವರನ್ನು ಅಧ್ಯಕ್ಷರನ್ನಾಗಿಸಿದ್ದರು. ಯಾವೊಬ್ಬ ಸಾಹಿತಿ, ಕಲಾವಿದರು ಕಾಂಗ್ರೆಸ್ ಪಕ್ಷದ ವಲಯದಲ್ಲಿ ಗುರುತಿಸಿಕೊಂಡವರಾಗಿರಲಿಲ್ಲ. ತಮ್ಮ ತಮ್ಮ ಕ್ಷೇತ್ರದಲ್ಲಿನ ಬಹುದೊಡ್ಡ ಸಾಧಕರಾಗಿದ್ದರು. ಡಾ. ಗೀತಾ ನಾಗಭೂಷಣ ಅವರು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿದ್ದರು. 2006ರಲ್ಲಿ ಮುಖ್ಯಮಂತ್ರಿಯ ಬದಲಾವಣೆಯಾಯಿತು. ಮಾತ್ರವಲ್ಲ ಮೈತ್ರಿಕೂಟದಲ್ಲೇ ಬಹುದೊಡ್ಡ ಪಲ್ಲಟ ಕಾಣಿಸಿಕೊಂಡಿತು. ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಸರಕಾರದ ನೇತೃತ್ವವನ್ನು ಎಚ್.ಡಿ. ಕುಮಾರ ಸ್ವಾಮಿಯವರು ವಹಿಸಿಕೊಂಡಿದ್ದರು. ಎಚ್.ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದರೆ, ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಧರಂ ಸಿಂಗ್ ಆಡಳಿತಾವಧಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರು ಕೇವಲ ಒಂದು ವರ್ಷದ ಹಾದಿ ಕ್ರಮಿಸಿದ್ದರು. ಇನ್ನು ಎರಡು ವರ್ಷಗಳ ಹಾದಿ ಕ್ರಮಿಸಬೇಕಿತ್ತು. ಬಿಜೆಪಿ ಮೈತ್ರಿ ಸರಕಾರದ ಪಾಲುದಾರ ಪಕ್ಷವಾಗಿದ್ದರಿಂದ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರನ್ನು ಬದಲಾವಣೆ ಮಾಡುತ್ತಾರೆ ಎಂದೇ ಭಾವಿಸಲಾಗಿತ್ತು. ಎಚ್.ಡಿ. ಕುಮಾರ ಸ್ವಾಮಿ ಮತ್ತು ಯಡಿಯೂರಪ್ಪ ಸಾಂಸ್ಕೃತಿಕ ಲೋಕದ ನೇಮಕಾತಿಗಳನ್ನು ರದ್ದುಪಡಿಸಲಿಲ್ಲ. ಅಷ್ಟು ಮಾತ್ರವಲ್ಲ ಹೆಚ್ಚಿನ ಅನುದಾನ ನೀಡಿ ಉತ್ತಮ ಕೆಲಸ ಮಾಡುವಂತೆ ಉತ್ತೇಜಿಸಿದರು. ಬಿಜೆಪಿ ತನ್ನ ಕೋಮುವಾದಿ ಅಜೆಂಡಾ ಹೇರಲಿಲ್ಲ. ಬಿ.ಎಂ. ಇದಿನಬ್ಬ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮೂರು ವರ್ಷದ ಅವಧಿ ಪೂರೈಸಿದ್ದರು. ಇದಿನಬ್ಬ ಅವರಿಂದ ತೆರವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರನ್ನು ನೇಮಿಸಿದ್ದರು.

2008ರಲ್ಲಿ ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಅಕಾಡಮಿ, ಪ್ರಾಧಿಕಾರಗಳ ಅಧ್ಯಕ್ಷ-ಸದಸ್ಯರ ನೇಮಕಾತಿಯಲ್ಲಿ ಆಯಾ ಕ್ಷೇತ್ರದ ಸಾಧಕರನ್ನೇ ಪರಿಗಣಿಸಿದ್ದರು. ಸಾಹಿತ್ಯ ಅಕಾಡಮಿಗೆ ಎಂ.ಎಚ್. ಕೃಷ್ಣಯ್ಯ, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ದಲಿತ ಕವಿ ಡಾ. ಸಿದ್ದಲಿಂಗಯ್ಯ, ಸಂಗೀತ, ನೃತ್ಯ ಅಕಾಡಮಿಗೆ ತಳ ಸಮುದಾಯದ ಖ್ಯಾತ ಸಂಗೀತಗಾರ ಡಾ. ನರಸಿಂಹಲು ವಡವಾಟಿ ಮುಂತಾದ ಹಿರಿಯರನ್ನು ನೇಮಕ ಮಾಡಿದ್ದರು. ಮೈಸೂರು ರಂಗಾಯಣದ ನಿರ್ದೇಶಕರನ್ನಾಗಿ ಲಿಂಗದೇವರು ಹಳೆಮನೆಯವರನ್ನು ನೇಮಕ ಮಾಡಿದ್ದರು. ಲಿಂಗದೇವರು ಹಳೆಮನೆ ಎಡಪಂಥೀಯ ವಿಚಾರಧಾರೆ ಹೊಂದಿದ್ದವರು. ನಕ್ಸಲ್ ಚಳವಳಿಯ ಸಿಂಪತೈಸರ್ ಆಗಿದ್ದರು. ಆರೆಸ್ಸೆಸ್‌ನ ಕೆಲವರು ಲಿಂಗದೇವರು ಹಳೆಮನೆಯವರ ಸೈದ್ಧಾಂತಿಕ ಹಿನ್ನೆಲೆ ಮುಂದು ಮಾಡಿ ಆಕ್ಷೇಪಣೆ ಎತ್ತಿದ್ದರು. ಆಗಲೂ ಅವರನ್ನು ಬದಲಾಯಿಸರಲಿಲ್ಲ.

ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರು ಮೂರು ವರ್ಷ ಪೂರೈಸಿದ್ದರಿಂದ ಹೊಸ ನೇಮಕಾತಿ ಮಾಡಿದ್ದರು. ಆಗಲೂ ನಿಜವಾದ ಸಾಹಿತಿ, ಕಲಾವಿದರನ್ನು ನೇಮಕ ಮಾಡಲಾಗಿತ್ತು. ಕರ್ನಾಟಕ ಜಾನಪದ ಅಕಾಡಮಿಗೆ ಖ್ಯಾತ ಜನಪದ ಗಾಯಕ ಡಾ. ಬಾನಂದೂರು ಕೆಂಪಯ್ಯ, ಸಂಗೀತ, ನೃತ್ಯ ಅಕಾಡಮಿಗೆ ಖ್ಯಾತ ಕಥಕ್ ನೃತ್ಯ ಪಟು ವೈಜಯಂತಿ ಖಾಸಿಯವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿತ್ತು. ಸದಸ್ಯರ ನೇಮಕಾತಿಯಲ್ಲೂ ಸಾಧಕರನ್ನೇ ಗುರುತಿಸಿದ್ದರು. ನಂತರ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಿಜೆಪಿ ಸರಕಾರದಲ್ಲಿ ನೇಮಕಗೊಂಡಿದ್ದ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರನ್ನು ಮೂರು ವರ್ಷದ ಅವಧಿ ಪೂರೈಸಲು ಅವಕಾಶ ಮಾಡಿಕೊಡದೆ ಕಿತ್ತೊಗೆದರು. ಒಂದು ವರ್ಷ ತಡವಾಗಿ ಹೊಸ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಿದ್ದರು. ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರನ್ನು ಒಂದು ಸೇಡಿನ ಕ್ರಮದಂತೆ ಬದಲಾಯಿಸುವ ಕೆಟ್ಟ ಪರಂಪರೆ ಚಾಲ್ತಿಗೆ ಬಂತು. ಅಷ್ಟು ಮಾತ್ರವಲ್ಲ ಸಾಹಿತಿ ಕಲಾವಿದರಲ್ಲದ ಪಕ್ಷದ ಕಾರ್ಯಕರ್ತರನ್ನು ನೇಮಿಸುವ, ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವ ಕೆಟ್ಟ ಪರಂಪರೆ ಹುಟ್ಟಿಕೊಂಡಿತು. 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕ ಮಾಡಿದ ಅಕಾಡಮಿ -ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯನ್ನು ನಂತರ ಬಂದ ಬಿಜೆಪಿ ಸರಕಾರ ಒಂದು ಸೇಡಿನ ಕ್ರಮವಾಗಿ ರದ್ದು ಪಡಿಸಿತು. ಅಷ್ಟು ಮಾತ್ರವಲ್ಲ ಸಂಘ ಪರಿವಾರದ ಗರಡಿಯಲ್ಲಿ ಬೆಳೆದ ಸಾಹಿತಿ, ಕಲಾವಿದರನ್ನೇ ಅಕಾಡಮಿ -ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಮಹಾತ್ಮಾ ಗಾಂಧೀಜಿಯವರ ಉಗ್ರ ನಿಂದಕ ಅಡ್ಡಂಡ ಕಾರ್ಯಪ್ಪ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. 2019ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇಮಕ ಮಾಡಿದವರಲ್ಲಿ ಬೆರಳೆಣಿಕೆಯಷ್ಟು ಜನ ಸಾಹಿತ್ಯ, ಸಂಗೀತ ಮತ್ತು ಕನ್ನಡ ಸಂಸ್ಕೃತಿಗೆ ನಿಷ್ಠರಾಗಿ ಕಾರ್ಯ ನಿರ್ವಹಿಸಿದರು. ಉಳಿದವರು ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡಿ ಅಕಾಡಮಿ-ಪ್ರಾಧಿಕಾರಗಳನ್ನು ಹಾಳು ಮಾಡಿದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿದ್ದ ಡಾ. ಬಿ.ವಿ. ವಸಂತಕುಮಾರ್ ಅವರು ಪ್ರಶಸ್ತಿ ನೀಡುವಲ್ಲಿ ಆರೆಸ್ಸೆಸ್ ಮಾನದಂಡ ಅನುಸರಿಸಲಿಲ್ಲ. ಸಾಹಿತ್ಯದ ಮಾನದಂಡ ಅನುಸರಿಸಿ, ಪ್ರತಿಭಾವಂತ ಸಾಹಿತಿಗಳಾದ ಸುಬ್ಬು ಹೊಲೆಯಾರ್, ಅಮರೇಶ್ ನುಗಡೋಣಿ, ರಾಜಪ್ಪ ದಳವಾಯಿ, ಎಂ.ಎಸ್. ಆಶಾದೇವಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದೊಂದು ಅಪರೂಪದ ಪ್ರಕರಣ.

ಈಗ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕಾಡಮಿ -ಪ್ರಾಧಿಕಾರಗಳು ಮತ್ತು ರಂಗಾಯಣದ ಮುಖ್ಯಸ್ಥರನ್ನು ಅವಧಿಗೂ ಮುಂಚೆ ಬದಲಾಯಿಸಲು ಚಿಂತಿಸುತ್ತಿದ್ದಾರಂತೆ. ಹಾಗಂತ ಹಲವು ಮಾಧ್ಯಮಗಳು ವರದಿ ಮಾಡಿವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಕಾಡಮಿ-ಪ್ರಾಧಿಕಾರ ಮತ್ತು ರಂಗಾಯಣದ ಮುಖ್ಯಸ್ಥರನ್ನು ನೇಮಕ ಮಾಡಿದ್ದರು. ಬಹುತೇಕರು ಪ್ರತಿಭೆ ಮತ್ತು ಸಾಧನೆಯ ಕಾರಣಕ್ಕೆ ಸಾಂಸ್ಕೃತಿಕ ಲೋಕದ ಹುದ್ದೆಗಳಿಗೆ ಭಾಜನರಾಗಿದ್ದರು. ಒಬ್ಬಿಬ್ಬರು ಯೋಗ್ಯತೆ ಇಲ್ಲದಿದ್ದರೂ ಅವಕಾಶ ಗಿಟ್ಟಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕ ಮಾಡಿದ ಅಕಾಡಮಿ -ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರನ್ನು ತೆಗೆಯುವುದು ಕೆಟ್ಟ ನಿರ್ಧಾರ ಎನಿಸಿಕೊಳ್ಳುತ್ತದೆ.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸದಸ್ಯರನ್ನು ನಿರ್ದಿಷ್ಟ ಅವಧಿಗೆ ನೇಮಕ ಮಾಡಿರುತ್ತಾರೆ. ವಿಶ್ವವಿದ್ಯಾನಿಲಯಗಳ ಕುಲಪತಿಗಳನ್ನು ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿರುತ್ತಾರೆ. ಸರಕಾರ ಅಥವಾ ಮುಖ್ಯಮಂತ್ರಿ ಬದಲಾದಾಗ ಅವರನ್ನು ಬದಲಾಯಿಸುವುದಿಲ್ಲ. ಆದರೆ ಸಾಂಸ್ಕೃತಿಕ ಕ್ಷೇತ್ರದ ನೇಮಕಾತಿಗೆ ಯಾಕೆ ಈ ದುರ್ಗತಿ? ಸಾಂಸ್ಕೃತಿಕ ಕ್ಷೇತ್ರದ ನೇಮಕಾತಿಗಳು ಪಕ್ಷಾತೀತವಾಗಿರಬೇಕು. ಅಷ್ಟು ಮಾತ್ರವಲ್ಲ ಸರಕಾರ ಬದಲಾದಾಗ ಬದಲಾವಣೆ ಮಾಡಬಾರದು. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿನ ಅಕಾಡಮಿ-ಪ್ರಾಧಿಕಾರಗಳು ನಿಗದಿ ಪಡಿಸಿದ ಅವಧಿ ಪೂರೈಸಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ನೀಡುವಾಗಲೂ ಆಯಾ ಕ್ಷೇತ್ರದ ಸಾಧನೆ ಪ್ರಧಾನವಾಗಿ ಪರಿಗಣನೆಯಾಗಬೇಕು. ಅದರಲ್ಲೂ ಪಕ್ಷದ ಕಾರ್ಯಕರ್ತರನ್ನು ಸಾಂಸ್ಕೃತಿಕ ಕ್ಷೇತ್ರದ ಹುದ್ದೆಗಳಿಗೆ ಪರಿಗಣಿಸಲೇಬಾರದು. ಸಾಂಸ್ಕೃತಿಕ ಲೋಕದ ಚೇತನಗಳು ಸಾಕ್ಷಿ ಪ್ರಜ್ಞೆಯಂತೆ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಆ ವ್ಯವಸ್ಥೆ ಹಾಗೆಯೇ ಮುಂದುವರಿಯಲಿ. ಅಕಾಡಮಿ -ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರು ನಿಗದಿ ಪಡಿಸಿದ ಅಧಿಕಾರಾವಧಿ ಪೂರೈಸಲು ಅನುವು ಮಾಡಿಕೊಡಬೇಕು.

(ಅಂಕಣಕಾರರು ಹಿರಿಯ ಲೇಖಕರು, ಪತ್ರಕರ್ತರು)

Tags

cultural
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X