ಮೋದಿ-ಅಮಿತ್ ಶಾ ‘ಕೈಗೊಂಬೆ’ ಅಧ್ಯಕ್ಷ

ಇತ್ತೀಚೆಗಷ್ಟೇ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್ ಎಸೆಸೆಲ್ಸಿ ಪಾಸು ಮಾಡದ ಅನ್ಪಡ್ ಎಂದು ಬಿಜೆಪಿಯವರು ಮೂದಲಿಸಿದ್ದರು. ಈಗ ಮೋದಿ-ಅಮಿತ್ ಶಾ ಜೋಡಿ ಕೇವಲ ಪಿಯುಸಿ ಪಾಸಾದ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ. ವಿದ್ಯಾವಂತರ ಪಕ್ಷವೆಂದೇ ಖ್ಯಾತಿ ಪಡೆದ ಬಿಜೆಪಿಗೆ ಕನಿಷ್ಠ ಪಕ್ಷ ಪದವಿ ಪೂರೈಸಿದ ರಾಷ್ಟ್ರೀಯ ಅಧ್ಯಕ್ಷ ದೊರೆಯಲಿಲ್ಲವಲ್ಲ!
ಭಾರತೀಯ ಜನತಾ ಪಕ್ಷವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಆ ಪಕ್ಷದ ಹಿರಿಯ ನಾಯಕರು ಮತ್ತು ಸಂಘ ಪರಿವಾರದ ಮುಖಂಡರು ಮೋದಿ-ಅಮಿತ್ ಶಾ ಜೋಡಿಯ ನಿರ್ಧಾರಗಳನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳುವ ಹಂತ ತಲುಪಿದ್ದಾರೆ. ಕೆಲವು ಮಾಧ್ಯಮಗಳು ತಮ್ಮ ಸಮಾಧಾನಕ್ಕೆ ಸಂಘ ಪರಿವಾರದ ಪ್ರಾಮುಖ್ಯತೆ ಇದೆ ಎಂದು ರುಜುವಾತುಪಡಿಸಲು ಕತೆಗಳನ್ನು ಹೆಣೆಯುತ್ತಲೇ ಇರುತ್ತವೆ. ಸಂಘ ಪರಿವಾರದ ಮುಖಂಡರ ಅನುಮತಿಯಿಲ್ಲದೇ ಬಿಜೆಪಿಯಲ್ಲಿ ಹುಲ್ಲು ಕಡ್ಡಿಯೂ ಅಲುಗಾಡದು ಎಂಬ ಅಭಿಪ್ರಾಯಗಳನ್ನು ಮೂಡಿಸಲು ಪ್ರಯತ್ನಿಸುತ್ತಲೇ ಇರುತ್ತವೆ.
ಭಾರತೀಯ ಜನತಾ ಪಕ್ಷವನ್ನು ಶಿಸ್ತಿನ ಪಕ್ಷವೆಂದು ಒಂದು ಕಾಲದಲ್ಲಿ ಅತಿಯಾಗಿ ಪ್ರಚಾರ ಮಾಡಲಾಯಿತು. ಅಷ್ಟು ಮಾತ್ರವಲ್ಲ ಸೈದ್ಧಾಂತಿಕ ನೆಲೆಯುಳ್ಳ ಪಕ್ಷವೆಂದು ನಂಬಲಾಗಿತ್ತು. ಆದರೆ ಈಗ ಅದು ಕೇವಲ ಚುಣಾವಣೆಗಳನ್ನು ಗೆಲ್ಲುವ ಯಂತ್ರವಾಗಿ ಬದಲಾಗಿದೆ. ಬಿಜೆಪಿಯನ್ನು ವಿರೋಧ ಪಕ್ಷಗಳು: ಭ್ರಷ್ಟರ ಕಳಂಕವನ್ನು ತೊಳೆಯವ ವಾಷಿಂಗ್ ಮಷಿನ್ ಎಂದೂ ಗೇಲಿ ಮಾಡುತ್ತಿರುತ್ತಾರೆ. ಕೋಮುವಾದಿ ಅಜೆಂಡಾವನ್ನು ಬಗಲಲ್ಲಿ ಇಟ್ಟುಕೊಂಡು ಅವಕಾಶವಾದಿ ರಾಜಕಾರಣ ಮಾಡುವಲ್ಲಿ ಈಗ ಬಿಜೆಪಿ ಮುಂಚೂಣಿಯಲ್ಲಿದೆ. ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಮತ್ತು ವಿಕಸಿತ ಭಾರತದ ಕನಸುಗಳನ್ನು ಯುವ ಜನರಲ್ಲಿ ಬಿತ್ತುತ್ತಲೇ ಭಾರತವನ್ನು ಕೋಮುವಾದಿ ಪ್ರಯೋಗಶಾಲೆಯನ್ನಾಗಿ ಮಾಡಿದ್ದಾರೆ. ಆಧುನಿಕ ಭಾರತದ ಭ್ರಮೆ ಬಿತ್ತುತ್ತಲೇ ದೇಶವನ್ನು ನೂರು ವರ್ಷಗಳಷ್ಟು ಹಿಂದಕ್ಕೆ ತಳ್ಳುತ್ತಿದ್ದಾರೆ. ಸದ್ಯ ಭಾರತ ಆಧುನಿಕ ಕಾಲದ ಒಂದೂ ಸಮಸ್ಯೆಯನ್ನು ಎದುರುಗೊಳ್ಳುತ್ತಿಲ್ಲ. ಬಡತನ, ನಿರುದ್ಯೋಗ ನಮ್ಮ ಕಾಲದ ಜ್ವಲಂತ ಸಮಸ್ಯೆಗಳಾಗಿದ್ದರೂ ಜಾತೀಯತೆ, ಕೋಮುವಾದ ನಿತ್ಯ ನರ್ತಿಸುವ ಭೂತವಾಗಿ ಪರಿಣಮಿಸಿವೆ.
ಭಾರತೀಯ ಜನತಾ ಪಕ್ಷದ ಇತಿಹಾಸದಲ್ಲೇ ಅತಿ ಕಡಿಮೆ ವಿದ್ಯಾಭ್ಯಾಸ ಹೊಂದಿದ ರಾಷ್ಟ್ರೀಯ ಅಧ್ಯಕ್ಷನೆಂದರೆ ನಿತಿನ್ ನಬಿನ್ ಮಾತ್ರ. ಬಿಜೆಪಿಯವರು ‘ಅತಿ ಕಿರಿಯ’ ವಯಸ್ಸಿನ ರಾಷ್ಟ್ರೀಯ ಅಧ್ಯಕ್ಷ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್ ಎಸೆಸೆಲ್ಸಿ ಪಾಸು ಮಾಡದ ಅನ್ಪಡ್ ಎಂದು ಮೂದಲಿಸಿದ್ದರು. ಈಗ ಮೋದಿ-ಅಮಿತ್ ಶಾ ಜೋಡಿ ಕೇವಲ ಪಿಯುಸಿ ಪಾಸಾದ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ. ವಿದ್ಯಾವಂತರ ಪಕ್ಷವೆಂದೇ ಖ್ಯಾತಿ ಪಡೆದ ಬಿಜೆಪಿಗೆ ಕನಿಷ್ಠ ಪಕ್ಷ ಪದವಿ ಪೂರೈಸಿದ ರಾಷ್ಟ್ರೀಯ ಅಧ್ಯಕ್ಷ ದೊರೆಯಲಿಲ್ಲವಲ್ಲ!
ಭಾರತೀಯ ಜನಸಂಘದ ಕಾಲದಿಂದಲೂ ಸಂಘ ಪರಿವಾರದ ತತ್ವ ಸಿದ್ಧಾಂತಗಳಿಗೆ ಅಲ್ಪ ಪ್ರಮಾಣದ ನಗರವಾಸಿ ವಿದ್ಯಾವಂತ ಮಧ್ಯಮ ವರ್ಗದವರು ಅಭಿಮಾನಿಗಳಾಗಿದ್ದರು. 1980ರಲ್ಲಿ ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದ ಮೇಲೂ ಹಲವು ವರ್ಷಗಳ ಕಾಲ ಅದು ನಗರ ಕೇಂದ್ರಿತ ಮಧ್ಯಮವರ್ಗದ ವಲಯದಲ್ಲಷ್ಟೇ ಜನಪ್ರಿಯವಾಗಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಬಿಜೆಪಿಯ ಮಾತೃ ಸಂಸ್ಥೆಯಾಗಿತ್ತು. ಭಾರತೀಯ ಜನತಾ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿಯವರು ಮೂಲತಃ ಸಂಘ ಪರಿವಾರದವರು. ಆರೆಸ್ಸೆಸ್ ತತ್ವ ಸಿದ್ಧಾಂತಗಳ ಹಾದಿಯಲ್ಲೇ ರಾಜಕೀಯ ಜೀವನ ರೂಪಿಸಿಕೊಂಡವರು. ಕವಿ ಮತ್ತು ಉದಾರವಾದಿ ರಾಜಕಾರಣಿಯಾಗಿದ್ದರಿಂದ ಪರ ಸಿದ್ಧಾಂತ ಸಹಿಷ್ಣು ಆಗಿದ್ದರು. ಸಂಕುಚಿತ ನೆಲೆಯಲ್ಲಿ ರಾಜಕೀಯ ಮಾಡುತ್ತಿರಲಿಲ್ಲ. ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣ ಮಾಡುತ್ತಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಳೆಯ ಕಾಲದ ಬಿಜೆಪಿ ನಾಯಕರು ತಾವು ನಂಬಿದ ತತ್ವ ಸಿದ್ಧಾಂತಗಳ ಚೌಕಟ್ಟಿನಲ್ಲಿ ರಾಜಕಾರಣ ಮಾಡುತ್ತಿದ್ದರು. ಅಷ್ಟು ಮಾತ್ರವಲ್ಲ ಪ್ರಬುದ್ಧ ಮತ್ತು ಉದಾರವಾದಿಯಾಗಿ ನಡೆದುಕೊಳ್ಳುತ್ತಿದ್ದರು. ಎಲ್ಲಕ್ಕೂ ಮಿಗಿಲಾಗಿ ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ. ಅಡ್ವಾಣಿ, ಡಾ. ಮುರಳಿ ಮನೋಹರ್ ಜೋಶಿ ಪದವಿ ಪೂರೈಸಿದ ವಿದ್ಯಾವಂತರಾಗಿದ್ದರು. ಹೌದು ಅವರೂ ಕೋಮುವಾದಿ ರಾಜಕಾರಣದ ಭಾಗವಾಗಿದ್ದರು. ಅವರ ಶಕ್ತಿ ಮತ್ತು ದೌರ್ಬಲ್ಯಗಳು ಕಣ್ಣಿಗೆ ಢಾಳಾಗಿ ಗೋಚರಿಸುತ್ತಿದ್ದವು. ಹಳೆಯ ಕಾಲದ ಬಿಜೆಪಿ ನಾಯಕರು ಹಿಂದುತ್ವದ ಪ್ರತಿಪಾದಕರಾಗಿದ್ದರು. ಅಷ್ಟಾಗಿ ಜಾತಿ ಸಮೀಕರಣದ ಮೇಲೆ ನಂಬಿಕೆ ಇರಲಿಲ್ಲ. ಆದರೆ ನಿರಂತರ ಚುನಾವಣಾ ಸೋಲುಗಳಿಂದ ಜರ್ಜರಿತರಾದ ಅವರು ಮೊದಲು ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕೆ ಯತ್ನಿಸಿದ್ದರು. ನಂತರ ಜಾತಿ ಸಮೀಕರಣ ರೂಪಿಸಲು ಮುಂದಾದರು. ಅಷ್ಟಾಗಿಯೂ ಪ್ರತೀ ಆಯ್ಕೆಗೂ ಸಂಘದ ಹಿನ್ನೆಲೆ ಕಡ್ಡಾಯವಾಗಿ ಪರಿಗಣಿಸುತ್ತಿದ್ದರು.
ಬಿಜೆಪಿಯ ಮೊದಲ ರಾಷ್ಟ್ರೀಯ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿಯವರು ಆರು ವರ್ಷಗಳ ಕಾಲ ಆ ಹುದ್ದೆಯಲ್ಲಿ ಇದ್ದರು. ತಮ್ಮ ಉತ್ತರಾಧಿಕಾರಿ ಆಯ್ಕೆಯಲ್ಲಿ ಸಂಘದ ಬದ್ಧತೆ ಮತ್ತು ಕ್ರಿಯಾಶೀಲತೆಯನ್ನು ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸರಿಸಮವಾದ ಆರೆಸ್ಸೆಸ್ ಮೂಲದ ಎಲ್.ಕೆ. ಅಡ್ವಾಣಿಯವರನ್ನು ಬಿಜೆಪಿಯ ಎರಡನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಹಾಗೆ ನೋಡಿದರೆ ಬಿಜೆಪಿಗೆ ಅತಿ ಹೆಚ್ಚು ಕಾಲ ರಾಷ್ಟ್ರೀಯ ಅಧ್ಯಕ್ಷರಾಗಿ ಎಲ್.ಕೆ. ಅಡ್ವಾಣಿ ಕಾರ್ಯ ನಿರ್ವಹಿಸಿದ್ದರು. 1986ರಲ್ಲಿ ಬಿಜೆಪಿಯ ಎರಡನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಅಡ್ವಾಣಿಯವರು ಐದು ವರ್ಷಗಳ ಕಾಲ ಆ ಹುದ್ದೆಯಲ್ಲಿ ಇದ್ದರು. ಮೂರು ಅವಧಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಎಲ್.ಕೆ. ಅಡ್ವಾಣಿಯವರು ಕೋಮು ರಾಜಕಾರಣದ ರಕ್ತಸಿಕ್ತ ಇತಿಹಾಸ ಸೃಷ್ಟಿಸಿದವರು. ಬಿಜೆಪಿ ಲೋಕಸಭಾ ಸದಸ್ಯರ ಹೆಚ್ಚಳಕ್ಕೆ, ಬಾಬರಿ ಮಸೀದಿ ಧ್ವಂಸಕ್ಕೆ ಮತ್ತು ಕೋಮು ದಳ್ಳುರಿಗೆ ಕಾರಣೀಭೂತರಾದ ಎಲ್.ಕೆ. ಅಡ್ವಾಣಿಯವರು ಖಳ ನಾಯಕ ಪಾತ್ರ ನಿಭಾಯಿಸಿದರೇ ಹೊರತು ಭಾರತದ ಪ್ರಧಾನಿ ಹುದ್ದೆ ಅಲಂಕರಿಸಲೇ ಇಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಉದಾರವಾದಿ, ಜಂಟಲ್ ಮ್ಯಾನ್ ಇಮೇಜ್ ಇದ್ದರೆ ಎಲ್.ಕೆ. ಅಡ್ವಾಣಿಗೆ ಬಾಬರಿ ಮಸೀದಿ ದ್ವಂಸದ ಖಳ ನಾಯಕನ ಕಳಂಕ ಅಂಟಿದೆ. ಮಹಾಭಾರತದ ಕರ್ಣನಂತೆ ಎಲ್.ಕೆ. ಅಡ್ವಾಣಿ ಒಂದು ದಿನ ಸಂಘ ಪರಿವಾರದ ಅವಕೃಪೆಗೂ ಒಳಗಾದವರು (ಜಿನ್ನಾ ಹೊಗಳಿದ್ದಕ್ಕೆ)ನಾಲ್ಕು ವರ್ಷಗಳ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಡಾ. ಮುರಳಿ ಮನೋಹರ್ ಜೋಶಿ ವಾಜಪೇಯಿ, ಅಡ್ವಾಣಿಯವರ ಸಮ ಜೋಡಿ. ಭಾರತೀಯ ಜನತಾ ಪಕ್ಷ ಕಟ್ಟಿದ ಪ್ರಮುಖರಲ್ಲಿ ಒಬ್ಬರು. ಆರೆಸ್ಸೆಸ್ ಮೂಲದ ಡಾ. ಮುರಳಿ ಮನೋಹರ್ ಜೋಶಿ ಉತ್ತಮ ಶಿಕ್ಷಣ ಪಡೆದವರು. ಆದರೆ ಕಾಲಾಂತರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅವಕೃಪೆಗೆ ಒಳಗಾದವರು. ತಮ್ಮ ದುಡಿಮೆಗೆ ರಾಷ್ಟ್ರಪತಿ ಹುದ್ದೆ ನಿರೀಕ್ಷಿಸಿ ಹತಾಶರಾದವರು.
ಆರೆಸ್ಸೆಸ್ ಮೂಲದ ಕುಶಾಭಾವು ಠಾಕ್ರೆ, ಬಂಗಾರು ಲಕ್ಷ್ಮಣ, ವೆಂಕಯ್ಯ ನಾಯ್ಡು ಒಂದೆರಡು ವರ್ಷಗಳ ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಿದವರು. ದಲಿತ ಸಮುದಾಯಕ್ಕೆ ಸೇರಿದ ಬಂಗಾರು ಲಕ್ಷ್ಮಣ ಲಂಚ ಪ್ರಕರಣದಲ್ಲಿ ತಲೆ ದಂಡ ತೆತ್ತವರು. ನರೇಂದ್ರ ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರುವ ಮುಂಚೆ ಭಾರತೀಯ ಜನತಾ ಪಕ್ಷದ ಪ್ರಮುಖ ನಿರ್ಧಾರಗಳನ್ನು ತ್ರಿಮೂರ್ತಿಗಳಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಡಾ. ಮುರಳಿ ಮನೋಹರ್ ಜೋಶಿಯವರು ಕೈಗೊಳ್ಳುತ್ತಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಸಂಘ ಮೂಲ, ಕ್ರಿಯಾಶೀಲತೆ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸುತ್ತಿದ್ದರು. ಅಡ್ವಾಣಿ ಹೊರತು ಪಡಿಸಿದರೆ ಹೆಚ್ಚು ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿದ್ದವರು ರಾಜನಾಥ್ ಸಿಂಗ್. ತ್ರಿಮೂರ್ತಿಗಳ ಪ್ರೀತಿಗೆ ಪಾತ್ರರಾಗಿದ್ದ ರಾಜನಾಥ್ ಸಿಂಗ್ ಸವ್ಯ ಸಾಚಿಯಂತೆ ಕಾರ್ಯ ನಿರ್ವಹಿಸಿದವರು. ಸಂಘದ ಹಿನ್ನೆಲೆ ಜೊತೆಗೆ ಪ್ರಬುದ್ಧ ರಾಜಕಾರಣಿ ಇಮೇಜ್ ಕಾಪಾಡಿಕೊಂಡವರು. ಬಿಜೆಪಿಯ ತ್ರಿಮೂರ್ತಿಗಳು ಅತ್ಯಂತ ಕ್ರಿಯಾಶೀಲರಾಗಿದ್ದ ಹತ್ತು ಹಲವು ಜನ ವಿದ್ಯಾವಂತ ಯುವ ನಾಯಕರನ್ನು ಬೆಳೆಸಿದ್ದರು. ಒಂದು ನೂರು ವರ್ಷಗಳ ಕಾಲ ಬಿಜೆಪಿಗೆ ನಾಯಕತ್ವದ ಕೊರತೆಯೇ ಆಗುತ್ತಿರಲಿಲ್ಲ. ಪ್ರಮೋದ್ ಮಹಾಜನ್, ಅರುಣ್ ಜೇಟ್ಲಿ, ಮನೋಹರ್ ಪಾರಿಕ್ಕರ್, ಎಚ್.ಎನ್. ಅನಂತಕುಮಾರ್, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಯಡಿಯೂರಪ್ಪ, ಕಲ್ಯಾಣ ಸಿಂಗ್, ರಾಜನಾಥ್ ಸಿಂಗ್ ಮತ್ತು ನರೇಂದ್ರ ಮೋದಿ. ನರೇಂದ್ರ ಮೋದಿಯವರನ್ನು ಉಗ್ರ ಹಿಂದುತ್ವದ ಕಾರಣಕ್ಕೆ ಬೆಳೆಸಿದವರು ಎಲ್.ಕೆ. ಅಡ್ವಾಣಿಯವರೇ. ಎಲ್.ಕೆ. ಅಡ್ವಾಣಿಯವರಿಗೆ ಪ್ರಧಾನಿ ಹುದ್ದೆ ದಕ್ಕದಂತೆ ಮಾಡಿದ ನರೇಂದ್ರ ಮೋದಿಯವರು ತ್ರಿಮೂರ್ತಿಗಳು ಬೆಳೆಸಿದ ಬಿಜೆಪಿಯ ಕುಡಿಗಳನ್ನು ಅಲ್ಲಲ್ಲೇ ಚಿವುಟಿ ಹಾಕಿದರು. 2009ರಲ್ಲಿ ಬಿಜೆಪಿ ಎಲ್.ಕೆ. ಅಡ್ವಾಣಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿತ್ತು. ಆಗ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಯಡಿಯೂರಪ್ಪ ಹರಸಾಹಸ ಮಾಡಿ ಕರ್ನಾಟಕದಿಂದ ಹತ್ತೊಂಭತ್ತು ಸಂಸದರನ್ನು ಕಳುಹಿಸಿಕೊಟ್ಟಿದ್ದರು. ನರೇಂದ್ರ ಮೋದಿ ತನ್ನ ಗುರು ಎಲ್. ಕೆ. ಅಡ್ವಾಣಿ ಪ್ರಧಾನಿ ಆಗಲೆಂದು ಕಿಂಚಿತ್ತೂ ಪ್ರಯತ್ನಿಸಲಿಲ್ಲ. ಆಗ ಗುಜರಾತ್ ರಾಜ್ಯದಿಂದ ಕೇವಲ ಹನ್ನೆರಡು ಸಂಸದರನ್ನು ಮೋದಿ ಕೊಡುಗೆಯಾಗಿ ನೀಡಿದ್ದರು. ಮೋದಿ ಪ್ರಧಾನಿಯಾದ ವರ್ಷದಿಂದ ಗುಜರಾತ್‌ನಲ್ಲಿ 26ಕ್ಕೆ 26 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯವರೇ ಗೆಲ್ಲುತ್ತಾರೆ. ಹಾಗೆ ನೋಡಿದರೆ ನಿತಿನ್ ಗಡ್ಕರಿಯೇ ಬಿಜೆಪಿಯ ಕೊನೆಯ ಅಧ್ಯಕ್ಷರು: ತ್ರಿಮೂರ್ತಿಗಳು ಮತ್ತು ಸಂಘ ಪರಿವಾರದ ಮುಖಂಡರು ಸೇರಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು.
ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದಾಗ ರಾಜನಾಥ್ ಸಿಂಗ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಮೋದಿ ತಮ್ಮ ಅನುಕೂಲಕ್ಕೆ, ಸಂಘ ಪರಿವಾರದ ಮುಖಂಡರನ್ನು ಒಪ್ಪಿಸಿ ರಾಜನಾಥ್ ಸಿಂಗ್ ಅವರಿಗೆ ಆ ಹುದ್ದೆ ಕೊಡಿಸಿದ್ದರು. ನಂತರ ಬಿಜೆಪಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಬಂದವರೆಲ್ಲ ಮೋದಿಯವರ ಆಜ್ಞಾ ಪಾಲಕರೇ. ನರೇಂದ್ರ ಮೋದಿಯವರ ಮೊದಲ ಅವಧಿಯ ಕೇಂದ್ರ ಸರಕಾರದಲ್ಲಿ ರಾಜನಾಥ್ ಸಿಂಗ್ ನಂಬರ್ ಟು ಸ್ಥಾನದಲ್ಲಿದ್ದರು. ಗೃಹಖಾತೆ ಅವರ ಹೆಗಲೇರಿತ್ತು. ಎರಡು ಮತ್ತು ಮೂರನೇ ಅವಧಿಯಲ್ಲಿ ರಾಜನಾಥ್ ಸಿಂಗ್ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆದರೆ ಅಮಿತ್ ಶಾ ಕೈ ಕೆಳಗೆ. ನಾಲ್ಕು ವರ್ಷಗಳ ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಾಗಪುರದ ನಿತಿನ್ ಗಡ್ಕರಿ ಇಲ್ಲಿಯವರೆಗೆ ಮಂತ್ರಿಯಾಗಿ ಉಳಿದಿದ್ದೇ ಹೆಚ್ಚು. ಅತ್ಯುತ್ತಮ ಕೆಲಸಗಾರ ಎಂಬ ಹೆಗ್ಗಳಿಕೆ ಇದ್ದರೂ ಮೋದಿ ಯುಗದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇಲ್ಲ.
ಸಂಘ ಪರಿವಾರದಲ್ಲಿ ಕ್ರಿಯಾಶೀಲರಾಗಿದ್ದವರೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ ಎಂಬ ಪ್ರತೀತಿ ಅಳಿಸಿ ಹಾಕಿದ ಮೋದಿ-ಅಮಿತ್ ಶಾ ಜೋಡಿ ಅಕ್ಷರಶಃ ತಮಗೆ ಬೇಕಾದವರನ್ನು ಆ ಸ್ಥಾನದಲ್ಲಿ ಕೂರಿಸುತ್ತಿದ್ದಾರೆ.
ಒಂದು ಬಾರಿ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದ ಜಯಶ್ರೀ ಬ್ಯಾನರ್ಜಿ ಯಾರಿಗೂ ಗೊತ್ತಿಲ್ಲ. ಹಿಮಾಚಲ ಪ್ರದೇಶ ಮೂಲದ ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಜಗನ್ನಾಥ್ ಪ್ರಕಾಶ್ ನಡ್ಡಾ 2014ಕ್ಕೂ ಮುಂಚೆ ಅಮಿತ್ ಶಾ ಸಹಾಯಕನಂತೆ ಕಾರ್ಯ ನಿರ್ವಹಿಸುತ್ತಿದ್ದರು. ಅಮಿತ್ ಶಾ ತೋರಿಕೆಗೆ ಸಂಘದ ಆಜ್ಞಾ ಪಾಲಕನ ಪೋಸು ಕೊಟ್ಟರೂ ಆತ ಮೋದಿಯವರಿಗೆ ಬೇಕಾಗಿದ್ದನ್ನೇ ಜಾರಿ ಮಾಡುತ್ತಿದ್ದರು. ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಜೆ.ಪಿ. ನಡ್ಡಾ, ರಾಮ ಮಾಧವ ಮುಂತಾದವರು ಕೈ ಚೀಲ ಹಿಡಿಯುವ ಹಿಂಬಾಲಕರು. ಈಗ ಆ ಹಿಂಬಾಲಕರಿಗೆ ಶುಕ್ರ ದೆಸೆ ಒದಗಿ ಬಂದಿದೆ. ಜೆ.ಪಿ. ನಡ್ಡಾ ಹೆಚ್ಚು ಓದಿದವರಾಗಿದ್ದರು. ಬ್ರಾಹ್ಮಣ ಎಂಬ ಬಿರುದಾವಳಿ ಇತ್ತು. ಆದರೆ ಆತ ಕೂಡ ಆರೆಸ್ಸೆಸ್ ಗರಡಿಯಲ್ಲಿ ಬೆಳೆದವರಲ್ಲ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಸೇರಿದಂತೆ ಸಂಘ ಪರಿವಾರದ ಯಾವ ಸಂಘಟನೆಯಲ್ಲೂ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರಲ್ಲ. ಜಯಶ್ರೀ ಬ್ಯಾನರ್ಜಿಯವರ ಅಳಿಯ ಎಂಬ ಕಾರಣಕ್ಕೆ (ಡಿಎನ್‌ಎ)ಹಿಮಾಚಲ ಪ್ರದೇಶ ವಿಧಾನಸಭಾ ಸದಸ್ಯರಾದರು, ಮಂತ್ರಿಯಾದರು. ಅಮಿತ್ ಶಾ ಕೈಗೊಂಬೆಯಾಗಿದ್ದಕ್ಕೆ ಮೊದಲು ನರೇಂದ್ರ ಮೋದಿ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾದರು. ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮೋಘ ಗುಲಾಮಗಿರಿ ಮಾಡಿದರು. ಈಗ ಮತ್ತೆ ಮೋದಿ ಸಂಪುಟದಲ್ಲಿ ಆರೋಗ್ಯ ಮಂತ್ರಿ. ಕರ್ನಾಟಕದ ಡಾ. ಸಿ.ಎನ್. ಮಂಜುನಾಥ್ ಅವರಲ್ಲಿ ಇರುವ ತಜ್ಞತೆ ನಡ್ಡಾ ಅವರಲ್ಲಿ ಇಲ್ಲ. ಆದರೆ ಗುಲಾಮಗಿರಿ ರಕ್ಷಣಾ ಕವಚದಂತೆ ಅವರನ್ನು ಕಾಪಾಡುತ್ತಿದೆ.
ಈಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬಿನ್ ಪಿಯುಸಿ ಓದಿದ ಒಬ್ಬ ನಿಯತ್ತಿನ ಸೇವಕ ಅಷ್ಟೇ. ಆರೆಸ್ಸೆಸ್ ಅಂಗ ಸಂಸ್ಥೆಯ ಯಾವ ಸಂಘಟನೆಯಲ್ಲೂ ಕಾರ್ಯ ನಿರ್ವಹಿಸಿದ ಅನುಭವ ಇಲ್ಲ. ನಿತಿನ್ ನಬಿನ್ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಬಿಹಾರ ರಾಜ್ಯದ ಪಾಟ್ನಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಟಿಕೆಟ್ ಮೇಲೆ ಗೆದ್ದು ಶಾಸಕರಾಗಿದ್ದರು. 2006ರಲ್ಲಿ ಹಠಾತ್ತನೇ ನಿಧನರಾದಾಗ ಡಿಎನ್‌ಎ ಕಾರಣಕ್ಕೆ ಅವರ ಪುತ್ರ ಇಪ್ಪತ್ತಾರು ವಯಸ್ಸಿನ ನಿತಿನ್ ನಬಿನ್ ಅಭ್ಯರ್ಥಿಯಾಗುತ್ತಾರೆ. ನಿರೀಕ್ಷೆಯಂತೆ ಅನುಕಂಪದ ಅಲೆಯಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಶಾಸಕನಾದ ಮೇಲೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಜ್ಯ ಅಧ್ಯಕ್ಷರಾಗುತ್ತಾರೆ. ನಂತರ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ನಿತಿನ್ ನಬಿನ್ ಹೆಗ್ಗಳಿಕೆಯೆಂದರೆ ಇಲ್ಲಿಯವರೆಗೆ ಚುನಾವಣಾ ರಾಜಕೀಯದಲ್ಲಿ ಸೋಲು ಅನುಭವಿಸಿಲ್ಲ. 2006ರ ಉಪಚುನಾವಣೆಯಲ್ಲಿ ಗೆದ್ದ ನಿತಿನ್ ನಬಿನ್ ಕ್ಷೇತ್ರ ಮರುವಿಂಗಡಣೆಯಾದ ಮೇಲೆ ಬಂಕಿಪುರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. 2024ರಿಂದ 2025ರವರೆಗೆ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಕಾನೂನು ಸೇರಿದಂತೆ ಪ್ರಮುಖ ಖಾತೆಗಳ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಿತಿನ್ ನಬಿನ್ ಚುನಾವಣಾ ರಾಜಕಾರಣದಲ್ಲಿ ನಿರಂತರ ಗೆಲುವು ಸಾಧಿಸಲು ಅಪ್ಪನ ಹೆಸರು ಮತ್ತು ಆತ ಹುಟ್ಟಿದ ಜಾತಿ ಬೆಂಬಲಕ್ಕೆ ನಿಂತಿ ರುತ್ತವೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬರಲು ಗುಲಾಮಿ ವ್ಯಕ್ತಿತ್ವ ಮತ್ತು ಆತ ಪ್ರತಿನಿಧಿಸುವ ಕಾಯಸ್ಥ ಜಾತಿಯೂ ಪ್ರಮುಖ ಪಾತ್ರ ವಹಿಸಿದೆ. ಕಾಯಸ್ಥ ಸಮುದಾಯದ ಜನಸಂಖ್ಯೆ ಹಲವು ಉತ್ತರದ ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಯಸ್ಥರು ಹೆಚ್ಚಿದ್ದಾರೆ. ಅಸ್ಸಾಂ, ಜಾರ್ಖಂಡ್, ಒಡಿಶಾ, ದಿಲ್ಲಿ, ಮಧ್ಯಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯದಲ್ಲೂ ಕಾಯಸ್ಥರ ಸಂಖ್ಯಾ ಬಾಹುಳ್ಯವಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿತೀನ್ ನಬಿನ್ ಆಯ್ಕೆ ನಡೆದಿದೆ. ಯುವ ನಾಯಕತ್ವದ ಕೈಯಲ್ಲಿ ಬಿಜೆಪಿ ಎನ್ನುವುದು ಬೊಗಳೆ ಭಾಷಣ. ಈಗಲೂ ಬಿಜೆಪಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕಪಿಮುಷ್ಟಿಯಲ್ಲಿದೆ. ತಮಗೆ ಬೇಕಾದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುತ್ತಾರೆ. ತಮಗೆ ನಿಯತ್ತು ತೋರಿದವರಿಗೆ ರಾಜ್ಯ ಅಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಹುದ್ದೆ ದಯಪಾಲಿಸುತ್ತಾರೆ. ಪಾಪ ಕರ್ನಾಟಕದ ಸಂತೋಷ್ ಜೀ ಈ ಜೀ ಹುಜೂರು ಸಂಸ್ಕೃತಿಯ ಭಾಗವಾದರಲ್ಲ. ಇಂಜಿನಿಯರಿಂಗ್ ಪದವೀಧರ. ಸಂಘದ ಗರಡಿಯಲ್ಲಿ ಬೆಳೆದ ಅಪಾರ ವಿದ್ವತ್ ಇರುವ ಬಿ.ಎಲ್. ಸಂತೋಷ್ ಪಿಯುಸಿ ಓದಿದ ನಿತಿನ್ ನಬಿನ್ ಕೈಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತಲ್ಲ. ಸರ್ವಾಧಿಕಾರಿ ಹುಟ್ಟು ಪಡೆಯುವುದು ಇದೇ ಬಗೆಯಲ್ಲಿ.







