ಮೈಸೂರು ದಸರಾ: ಉದ್ಘಾಟಕರಿಗೂ ಬರ...?

ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ಶಿಫಾರಸು ಆಧರಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲು ವಯೋಮಿತಿ ನಿಗದಿಪಡಿಸಿದೆ. ಅರುವತ್ತು ವರ್ಷ ಮೇಲ್ಪಟ್ಟ ಸಾಧಕರು ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಅರ್ಹರು ಎಂದು ಅಧಿಕೃತ ಆದೇಶ ಹೊರಡಿಸಿದೆ. ಈ ಸರಕಾರಿ ಆದೇಶವನ್ನು ಎಲ್ಲ ಪಕ್ಷಗಳ ಸರಕಾರಗಳು ಪಾಲಿಸುತ್ತಾ ಬಂದಿವೆ. ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರಕಾರ ಕೊಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ. ಆ ಪ್ರಶಸ್ತಿ ಪಡೆಯಬೇಕಾದ ವ್ಯಕ್ತಿಗೆ ಕನಿಷ್ಠ ಅರುವತ್ತು ವರ್ಷ ತುಂಬಿರಬೇಕು ಎಂಬ ನಿಯಮ ಇರಬೇಕಾದರೆ ಮೈಸೂರು ದಸರಾ ಉದ್ಘಾಟನೆ ಮಾಡುವವರ ಹಿರಿತನ, ಸಾಧನೆ, ಸಿದ್ಧಿ ಯಾವ ಮಟ್ಟದ್ದಿರಬೇಕು?
ಕರ್ನಾಟಕ ಈ ವರ್ಷ ಭೀಕರ ಬರ ಎದುರಿಸುತ್ತಿದೆ. ಆದರೆ ರಾಜ್ಯ ಸರಕಾರ ಮಾತ್ರ ಬರ ಎದುರಿಸಲು ಇನ್ನೂ ಆಡಳಿತ ಯಂತ್ರವನ್ನು ಸಜ್ಜುಗೊಳಿಸಲು ಪರದಾಡುತ್ತಿದೆ. ಅಗತ್ಯದ ಸಂಪನ್ಮೂಲ ಕ್ರೋಡೀ ಕರಿಸಲು ಹೆಣಗಾಡುತ್ತಿದೆ. ಬರ ಎದುರಿಸುತ್ತಿರುವ ತಾಲೂಕುಗಳನ್ನು ಗುರುತಿಸಲು ಮೀನ ಮೇಷ ಎಣಿಸುತ್ತಿದೆ. ಶಾಸಕರ ಆಕ್ರೋಶ ಹೆಚ್ಚುತ್ತಿದೆ. ಕಾಂಗ್ರೆಸ್ ಪಕ್ಷದ ಶಾಸಕರೇ ರಾಜೀನಾಮೆ ನೀಡುವ ಬೆದರಿಕೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಮಂತ್ರಿ ಎಚ್.ಕೆ. ಪಾಟೀಲರು ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದೆ ಇರುವುದಕ್ಕೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರು ತಮ್ಮ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸದಿರುವುದಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಾಂತ್ರಿಕ ಕಾರಣಕ್ಕೆ ರಾಜೀನಾಮೆ ಅಂಗೀಕಾರವಾಗಿಲ್ಲ, ಆ ಮಾತು ಬೇರೆ.
ಮೊದಲ ಕಂತಿನಲ್ಲಿ 101 ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ರಾಜ್ಯ ಸರಕಾರ ಪ್ರಕಟಿಸಿತ್ತು. ಎರಡನೇ ಕಂತಿನಲ್ಲಿ 23 ಮತ್ತು ಮೂರನೇ ಕಂತಿನಲ್ಲಿ 53 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಈಗ ರಾಜ್ಯದಲ್ಲಿ ಒಟ್ಟು 177 ತಾಲೂಕುಗಳು ಬರ ಪೀಡಿತವಾಗಿವೆ ಎಂದು ರಾಜ್ಯ ಸರಕಾರ ಒಪ್ಪಿಕೊಂಡಿದೆ. ಶಾಸಕರ ಅಸಮಾಧಾನ, ಒತ್ತಡ ಗಮನಿಸಿದರೆ ಬರಪೀಡಿತ ತಾಲೂಕುಗಳ ಸಂಖ್ಯೆ 200ಕ್ಕೆ ತಲುಪುವ ಸಾಧ್ಯತೆ ಇದೆ. ಕರ್ನಾಟಕದಲ್ಲಿನ ಅತ್ಯಂತ ಭೀಕರ ಬರ 150 ವರ್ಷಗಳ ನಂತರ ಕಾಣಿಸಿಕೊಂಡಿದೆ. ಮಳೆಯ ಪ್ರಮಾಣ ಈ ವರ್ಷ ಗಣನೀಯವಾಗಿ ಕುಸಿದಿದೆ. ರಾಜ್ಯ ಸರಕಾರ ಆರ್ಥಿಕವಾಗಿ ಸದೃಢವಾಗಿರುವುದಾಗಿ ಎಷ್ಟೇ ಬಡಾಯಿ ಕೊಚ್ಚಿಕೊಂಡರೂ ಸಂಪನ್ಮೂಲ ಕೊರತೆ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಆರ್ಥಿಕ ಇಲಾಖೆಯ ಪತ್ರ ಲೀಕ್ ಆಗಿರುವುದು ಗುಟ್ಟು ಬಹಿರಂಗಪಡಿಸಿದೆ.
ಇಂತಹ ದುರಿತ ಕಾಲದಲ್ಲಿ ಮೈಸೂರು ದಸರಾ ಸೇರಿದಂತೆ ಯಾವುದೇ ದುಂದು ವೆಚ್ಚದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದಿತ್ತು. ಒಂದು ವೇಳೆ ಮೈಸೂರು ದಸರಾ ಆಚರಿಸಲೇಬೇಕು ಅಂದರೆ ಸರಳವಾಗಿ ಆಚರಿಸಿ ಆರ್ಥಿಕ ಮಿತವ್ಯಯ ಸಾಧಿಸಬಹುದಿತ್ತು. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಮೇಲೆ ಹೊಸ ಚಿಂತನೆ ಮತ್ತು ನೂತನ ಯೋಜನೆಗಳನ್ನು ಪ್ರಕಟಿಸಿದ್ದರಿಂದ ನಾಡಿನ ಜನತೆಯಲ್ಲಿ ಭರವಸೆ ಮೂಡಿಸಿದ್ದರು. ಪ್ರಜಾ ಸೇವೆ, ಪ್ರಜಾ ಸೇವಕದಂತಹ ಹೊಸ ನುಡಿಗಟ್ಟುಗಳು ಸಂಚಲನ ಮೂಡಿಸಿದ್ದವು. ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸಿ ತುಳು ಭಾಷೆಗೆ ಎರಡನೇ ಭಾಷೆಯ ಮಾನ್ಯತೆ ನೀಡುವ ನಿರ್ಧಾರ ಕೈಗೊಂಡಿದ್ದು ನಿಜಕ್ಕೂ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಗೌರವ ಮೂಡಿಸುವಂತೆ ಮಾಡಿತ್ತು. ಸರಕಾರದ ಬೊಕ್ಕಸದಲ್ಲಿ ಹಣದ ಕೊರತೆಯಿದ್ದರೂ ದಕ್ಷಿಣ ಕನ್ನಡ ಜಿಲ್ಲೆಗೆ ಸಾವಿರಾರು ಕೋಟಿ ಹಣದ ಪ್ಯಾಕೇಜ್ ಘೋಷಿಸಿದಾಗ ತುಸು ಅನುಮಾನ ಬರುವಂತಾಯಿತು. ಈಗ ಮೈಸೂರು ದಸರಾ ಆಚರಣೆ ಮತ್ತು ಉದ್ಘಾಟನೆ ಮಾಡುವವರ ಹೆಸರು ಪ್ರಕಟಿಸಿದಾಗ ಈ ಸರಕಾರಕ್ಕೆ ಗಂಭೀರ ಕಾಳಜಿಗಳಿಲ್ಲ ಎಂಬುದು ರುಜುವಾತಾಯಿತು.
ಮೊದಲನೆಯದಾಗಿ ದಸರಾ ಆಚರಣೆಯನ್ನು ಬರದ ಕಾರಣ ನೀಡಿ ಮುಂದೂಡಿದ್ದರೆ ಇಲ್ಲ ರದ್ದುಪಡಿಸಿದ್ದರೆ ಸರಕಾರ ಸಂವೇದನಾಶೀಲವಾಗಿದೆ ಎಂದು ಭಾವಿಸಬಹುದಿತ್ತು. ಒಂದು ವೇಳೆ ದಸರಾ ಆಚರಣೆ ಅನಿವಾರ್ಯ ಎಂದಾದರೆ ಸರಳವಾಗಿ ಆಚರಿಸಬಹುದಿತ್ತು. ದಸರಾ ಆಚರಿಸದೆ ಇರುವಷ್ಟು ಕೆಟ್ಟ ಆರ್ಥಿಕ ಪರಿಸ್ಥಿತಿ ಇಲ್ಲ ಎಂದಾದರೆ ಅರ್ಥಪೂರ್ಣ ದಸರಾ ಆಚರಣೆಗೆ ಮುಂದಾಗಬೇಕಿತ್ತು. ಮೈಸೂರು ದಸರಾ ಉದ್ಘಾಟನೆಗೆ ಕೊಪ್ಪಳ ಗವಿ ಮಠದ ಅಭಿನವ ಸಿದ್ದೇಶ್ವರ ಸ್ವಾಮೀಜಿಯನ್ನು ಆಹ್ವಾನಿಸುವ ನಿರ್ಧಾರ ಕೈಗೊಂಡು ನಾಡ ಹಬ್ಬದ ಘನತೆ ಗೌರವವನ್ನೇ ಮಣ್ಣು ಪಾಲು ಮಾಡಿದ್ದಾರೆ.
ಮೈಸೂರು ದಸರಾವನ್ನು ನಾಡ ಹಬ್ಬ ಎಂದು ಭಾವಿಸಲಾಗುತ್ತಿದೆ. ಕರ್ನಾಟಕದ ಹೆಮ್ಮೆಯ ಪ್ರತೀಕದಂತಿರುವ ಹಿರಿಯ ಸಾಧಕರನ್ನು ಕರೆಸಿ ನಾಡ ಹಬ್ಬ ದಸರಾವನ್ನು ಉದ್ಘಾಟನೆ ಮಾಡುವುದು ಸತ್ಸಂಪ್ರದಾಯ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ -ಯಾವುದೇ ಪಕ್ಷದ ಸರಕಾರ ಇದ್ದರೂ ಈ ಸತ್ಸಂಪ್ರದಾಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸುತ್ತಾ ಬಂದಿದೆ. ಸಾಮಾನ್ಯವಾಗಿ ಸಾಹಿತ್ಯ, ಕಲೆ, ಸಾಮಾಜಿಕ ಸೇವೆ ಅಥವಾ ಯಾವುದೇ ಕ್ಷೇತ್ರದ ಹಿರಿಯ ಸಾಧಕರನ್ನು ಕರೆಸಿ ಉದ್ಘಾಟನೆ ನೆರವೇರಿಸುವುದು ಅನೂಚಾನವಾಗಿ ನಡೆದುಕೊಂಡ ಬಂದ ಪದ್ಧತಿ. ಆದರೆ ಈ ಬಾರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರ ಆ ಘನ ಸತ್ಸಂಪ್ರದಾಯವನ್ನು ಮುರಿದಿದೆ. ಅತ್ಯಂತ ಕಿರಿಯ ವಯಸ್ಸಿನ ಸ್ವಾಮೀಜಿಯನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ನಾಡ ಹಬ್ಬದ ಘನತೆ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದೆೆ. ಇಲ್ಲಿಯವರೆಗೆ ನಾಡ ಹಬ್ಬ ಮೈಸೂರು ದಸರಾವನ್ನು ಉದ್ಘಾಟನೆ ಮಾಡಿದವರ ಹೆಸರುಗಳ ಮೇಲೆ ಕಣ್ಣಾಡಿಸಿದರೇನೇ ಈ ಸರಕಾರ ತಪ್ಪು ನಿರ್ಧಾರ ಕೈಗೊಂಡಿದೆ ಎಂಬುದು ಮೇಲ್ನೋಟಕ್ಕೆ ಮನದಟ್ಟಾಗುತ್ತದೆ. ಅನ್ನ ಮತ್ತು ಅಕ್ಷರ ದಾಸೋಹಕ್ಕೆ ಬಹುದೊಡ್ಡ ಮಾದರಿ ನಿರ್ಮಿಸಿದ ಸಿದ್ದಗಂಗಾ ಮಠದ ಡಾ. ಶಿವಕುಮಾರ್ ಸ್ವಾಮಿಗಳು ಒಂದು ಬಾರಿ ಮೈಸೂರು ದಸರಾ ಉದ್ಘಾಟನೆ ಮಾಡಿ ನಾಡ ಹಬ್ಬದ ಘನತೆ ಗೌರವ ಹೆಚ್ಚಿಸಿದ್ದರು. ಈ ಹೊತ್ತಿಗೂ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ದಾಸೋಹ ಮಾಡಲಾಗುತ್ತಿದೆ. ಜಾತಿ, ಮತ, ಪಂಥಗಳ ಭೆೇದ ಎಣಿಸದೆ ಆ ಮಠ ದಾಸೋಹ ಕೈಂಕರ್ಯದಲ್ಲಿ ನಿರತವಾಗಿದೆ. ಹಾಗೆ ನೋಡಿದರೆ ಡಾ. ಶಿವಕುಮಾರ್ ಸ್ವಾಮೀಜಿಯನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿದ ಸಂದರ್ಭದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿತ್ತು. ಬಿಜೆಪಿ ಮುಖ್ಯಮಂತ್ರಿಗೆ ಇರುವಷ್ಟು ಕಾಳಜಿ ಡಿ.ಕೆ. ಶಿವಕುಮಾರ್ ಅವರಿಗೆ ಇಲ್ಲದಿರುವುದು ಈ ನಾಡಿನ ದುರಂತ. ಮೈಸೂರು ದಸರಾವನ್ನು ಈ ಹಿಂದೆ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿಗಳು, ಬೇರೆ ಕ್ಷೇತ್ರದ ಸಾಧಕರು ಉದ್ಘಾಟನೆ ಮಾಡಿ ನಾಡ ಹಬ್ಬದ ಘನತೆ ಗೌರವ ಹೆಚ್ಚಿಸಿದ್ದರು. ಪದ್ಮಶ್ರೀ ಸಿದ್ದೇಶ್ವರ್ ಸ್ವಾಮೀಜಿ, ಡಾ. ಚಂದ್ರಶೇಖರ ಕಂಬಾರ, ಡಾ. ಗಿರೀಶ್ ಕಾರ್ನಾಡ್, ಡಾ. ಚನ್ನವೀರ ಕಣವಿ, ಡಾ. ಕೆ.ಎಸ್. ನಿಸಾರ್ ಅಹ್ಮದ್, ಡಾ. ಸುಧಾ ಮೂರ್ತಿ, ಡಾ. ಎಸ್.ಎಲ್. ಭೈರಪ್ಪ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ರಾಷ್ಟ್ರಪತಿ ದ್ರೌಪದಿ ಮುರ್ಮು, ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ, ಖ್ಯಾತ ಭಾಷಾ ವಿಜ್ಞಾನಿ ಹಂಪ ನಾಗರಾಜಯ್ಯ ಸೇರಿದಂತೆ ಅತ್ಯಂತ ಹಿರಿಯ ಸಾಧಕರಿಂದ ಮೈಸೂರು ದಸರಾವನ್ನು ಉದ್ಘಾಟನೆ ಮಾಡಿಸಿದ್ದರು. ಅವರೆಲ್ಲ ವಯಸ್ಸು ಮತ್ತು ಸಾಧನೆಯಲ್ಲಿ ಅತ್ಯಂತ ಹಿರಿಯರು. ಕಳೆದ ವರ್ಷದ ಮೈಸೂರು ದಸರಾ ಉತ್ಸವವನ್ನು ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದುಕೊಟ್ಟ ಹಿರಿಯ ಲೇಖಕಿ ಬಾನು ಮುಸ್ತಾಕ್ ಅವರು ಉದ್ಘಾಟನೆ ಮಾಡಿದ್ದರು. ಎಸ್. ಬಂಗಾರಪ್ಪ, ಎಸ್.ಎಂ. ಕೃಷ್ಣ ಮತ್ತು ಎನ್. ಧರಂಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಶ್ರೇಷ್ಠ ವಿಜ್ಞಾನಿಗಳು, ಕಲಾವಿದರು, ಸಂಸ್ಕೃತಿ ಚಿಂತಕರು ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಉದ್ಘಾಟನೆ ನೆರವೇರಿಸಿದ್ದರು.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ಶಿಫಾರಸು ಆಧರಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲು ವಯೋಮಿತಿ ನಿಗದಿಪಡಿಸಿದೆ. ಅರುವತ್ತು ವರ್ಷ ಮೇಲ್ಪಟ್ಟ ಸಾಧಕರು ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಅರ್ಹರು ಎಂದು ಅಧಿಕೃತ ಆದೇಶ ಹೊರಡಿಸಿದೆ. ಈ ಸರಕಾರಿ ಆದೇಶವನ್ನು ಎಲ್ಲ ಪಕ್ಷಗಳ ಸರಕಾರಗಳು ಪಾಲಿಸುತ್ತಾ ಬಂದಿವೆ. ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರಕಾರ ಕೊಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ. ಆ ಪ್ರಶಸ್ತಿ ಪಡೆಯಬೇಕಾದ ವ್ಯಕ್ತಿಗೆ ಕನಿಷ್ಠ ಅರುವತ್ತು ವರ್ಷ ತುಂಬಿರಬೇಕು ಎಂಬ ನಿಯಮ ಇರಬೇಕಾದರೆ ಮೈಸೂರು ದಸರಾ ಉದ್ಘಾಟನೆ ಮಾಡುವವರ ಹಿರಿತನ, ಸಾಧನೆ, ಸಿದ್ಧಿ ಯಾವ ಮಟ್ಟದ್ದಿರಬೇಕು?
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಹುಟ್ಟಿದ್ದು 1977ರ ಜೂನ್ ಒಂದರಂದು. ಕಲಬುರಗಿ ಜಿಲ್ಲೆಯ, ಜೇವರ್ಗಿ ತಾಲೂಕಿನ ಹಾಗರಗುಂಡಿ ಗ್ರಾಮದಲ್ಲಿ. ಇವರು ಮೂಲತಃ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಹೇರಿ ಗ್ರಾಮದವರು. ಕೊಪ್ಪಳದ ಗವಿಸಿದ್ದೇಶ್ವರ ಮಠ ಅತ್ಯಂತ ಪ್ರಾಚೀನ ಇತಿಹಾಸವುಳ್ಳ ಸಿದ್ದ ಪರಂಪರೆಯ ಮಠ. ಮೊದಲ ಪೀಠಾಧಿಪತಿ ಶ್ರೀ ರುದ್ರಮುನಿ ಶಿವಯೋಗಿಗಳು. ದಾಸೋಹ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಹಿರಿಯ ಸಾಧಕರು. ಹದಿನೇಳನೇ ಪೀಠಾಧಿಪತಿ ಶ್ರೀ ಶಾಂತವೀರ ಸ್ವಾಮಿಗಳು ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹಕ್ಕೂ ಆದ್ಯತೆ ನೀಡಿ ಶಾಲಾ ಕಾಲೇಜು ಆರಂಭಿಸಿದವರು. ಗವಿಮಠ ಮೂಲತಃ ಜಾತ್ಯತೀತ ಪರಂಪರೆಗೆ ಸೇರಿದ್ದು. ಗವಿಸಿದ್ದೇಶ್ವರ ಜಾತ್ರೆ ಆ ಪರಂಪರೆಯ ಪ್ರತೀಕ. ಕೊಪ್ಪಳ ಗವಿಮಠದ ಹದಿನೆಂಟನೇ ಪೀಠಾಧಿಪತಿಯಾಗಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು 2002ರಲ್ಲಿ ಮಠದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಿಂದಿನ ಸ್ವಾಮೀಜಿಗಳ ಹಾದಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರು ಹೆಚ್ಚು ಜನಪ್ರಿಯತೆ ಗಳಿಸಿದ್ದು ಗವಿಸಿದ್ದೇಶ್ವರ ಜಾತ್ರೆಯ ಆಯೋಜನೆ, ದಾಸೋಹ ಮತ್ತು ರೀಲ್ಸ್‌ಗಳ ಮೂಲಕ. ಅವರ ವಯಸ್ಸು ಕೇವಲ 49 ವರ್ಷಗಳು. ರಾಜ್ಯೋತ್ಸವ ಪ್ರಶಸ್ತಿಗೆ ಅರುವತ್ತು ವರ್ಷ ನಿಗದಿಪಡಿಸಿರುವಾಗ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಉದ್ಘಾಟನೆ ಮಾಡುವ ಸಾಧಕರು ಹಿರಿಯರು ಮತ್ತು ಬಹುದೊಡ್ಡ ಸಾಧಕರು ಆಗಿರಬೇಕಲ್ಲವೇ?
ಹಾಗೆ ನೋಡಿದರೆ ಕರ್ನಾಟಕದಲ್ಲಿ ಹಿರಿಯ ಸಾಧಕರು ಮತ್ತು ಅನುಭವಿಗಳಿಗೆ ಬರ ಇಲ್ಲ. ಆದರೆ ಡಿ.ಕೆ. ಶಿವಕುಮಾರ್ ಸರಕಾರ ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಹಿರಿಯ ಸಾಧಕರನ್ನು ಕಡೆಗಣಿಸಿ ಕಿರಿಯ ಸ್ವಾಮೀಜಿಯನ್ನು ಆಹ್ವಾನಿಸಿದ್ದು ಯಾಕೆ? ಅಷ್ಟಕ್ಕೂ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಪ್ರಗತಿಪರ ಮತ್ತು ಕ್ರಾಂತಿಕಾರಿ ಸಿದ್ದಾಂತಗಳ ಪ್ರತಿಪಾದಕರೆಂದು ಗುರುತಿಸಿಕೊಂಡಿಲ್ಲ. ಕೊಪ್ಪಳ ಗವಿಮಠಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಚ್ಚು ಭೇಟಿ ನೀಡುತ್ತಾರೆ. ಮತೀಯ ಭಾವನೆ ಕೇರಳಿಸುವ, ಮುಸ್ಲಿಮ್ ಸಮುದಾಯವನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸುವ, ಅಷ್ಟೇ ಯಾಕೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುವ ಬಸನಗೌಡ ಯತ್ನಾಳ್ ಅವರಿಗೆ ಬುದ್ಧಿ ಮಾತು ಹೇಳುವವರು ಯಾರೂ ಇಲ್ಲ. ಕೊಪ್ಪಳ ಗವಿಮಠದ ಭಕ್ತನಾಗಿರುವ ಬಸನಗೌಡ ಯತ್ನಾಳ್ ಅವರಿಗೆ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಬುದ್ಧಿ ಮಾತುಗಳನ್ನು ಹೇಳುವ ಅವಕಾಶ ಹೊಂದಿದ್ದಾರೆ. ಆದರೆ ಅವರು ಬುದ್ಧಿ ಮಾತು, ಕಿವಿ ಮಾತು ಹೇಳಿದ ನಿದರ್ಶನ ಸಿಗುವುದಿಲ್ಲ. ಸಾರ್ವಜನಿಕ ಬದುಕಿನಲ್ಲಿ ಇರುವ ಎಲ್ಲರಿಗೂ ಅಪಾರ ತಾಳ್ಮೆ ಇರಬೇಕಾದದ್ದು ಅನಿವಾರ್ಯ. ಬಳ್ಳಾರಿಯ ಕಾರ್ಯಕ್ರಮವೊಂದರಲ್ಲಿ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಭಾಗವಹಿಸಿದ್ದರು. ಆ ಕಾರ್ಯಕ್ರಮಕ್ಕೆ ಇಂದಿನ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆಯವರು ತುಸು ತಡವಾಗಿ ಆಗಮಿಸಿದ್ದರು. ಸಚಿವರು ಆಗಮಿಸಿದ್ದಾಗ ವೇದಿಕೆಯಲ್ಲಿ ಗದ್ದಲ ಶುರುವಾಗಿದೆ. ಆಗ ಭಾಷಣ ಮಾಡುತ್ತಿದ್ದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತುಸು ತಾಳ್ಮೆಯಿಂದ ಇದ್ದು ಗದ್ದಲವನ್ನು ತಹಬಂದಿಗೆ ತರಲು ಯತ್ನಿಸಬಹುದಿತ್ತು. ಆದರೆ ತಾಳ್ಮೆ ಕಳೆದುಕೊಂಡು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದರು. ಸಚಿವ ಈಶ್ವರ್ ಖಂಡ್ರೆಯವರನ್ನು ಅಪಮಾನಿಸಿದ್ದರು. ಸಚಿವ ಈಶ್ವರ್ ಖಂಡ್ರೆ ಸಜ್ಜನಿಕೆಗೆ ಹೆಸರಾದವರು. ಒಮ್ಮೆಯೂ ಬಸನಗೌಡ ಯತ್ನಾಳ್ ಅವರ ಹಾಗೆ ಕೆಟ್ಟ ಮಾತುಗಳನ್ನಾಡಿದವರಲ್ಲ. ಅಂತಹವರ ಮೇಲೆ ಮುನಿಸು ಪ್ರದರ್ಶಿಸಿ ಸ್ವಾಮೀಜಿ ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಉದ್ಘಾಟನೆ ಮಾಡಲಿದ್ದಾರೆ. ಘನ ಸರಕಾರ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ.
ಮಠಾಧೀಶರನ್ನೇ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಆಹ್ವಾನಿಸಬೇಕು ಅಂತಿದ್ದರೆ, ಅತ್ಯಂತ ಹಿರಿಯ ಹಾಗೂ ಪ್ರಗತಿಪರ ವಿಚಾರಧಾರೆಗಳ ಮೂಲಕ ಮನೆ ಮಾತಾಗಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಅವರನ್ನು ಆಹ್ವಾನಿಸಬಹುದಿತ್ತು. ಕಲ್ಯಾಣ ಕರ್ನಾಟಕದ ಹಿರಿಯ ಸಾಧಕರನ್ನು ಆಹ್ವಾನಿಸುವ ಇರಾದೆ ಇದ್ದರೆ, ಪ್ರಾಮಾಣಿಕತೆಗೆ ಹೆಸರಾದ ನ್ಯಾಯಮೂರ್ತಿ ನಾಡೋಜ ಡಾ. ಶಿವರಾಜ್ ಪಾಟೀಲ್ ಅವರಿಂದ ಮೈಸೂರು ದಸರಾ ಉತ್ಸವವನ್ನು ಉದ್ಘಾಟನೆ ಮಾಡಿಸಬಹುದಿತ್ತು. ನ್ಯಾಯಮೂರ್ತಿ ಗೋಪಾಲ್ ಗೌಡರು, ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಅವರು ಅರ್ಹರಾಗಿದ್ದರು. ವಿಜ್ಞಾನಿಯೇ ಬೇಕಿದ್ದರೆ, ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಡಾ. ಕಿರಣಕುಮಾರ್ ಅವರನ್ನು ಉದ್ಘಾಟನೆ ಮಾಡಲು ಆಹ್ವಾನಿಸಬಹುದಿತ್ತು. ಶ್ರೇಷ್ಠ ವೈದ್ಯರು, ವಿಜ್ಞಾನಿಗಳು, ಕಲಾವಿದರು ಮತ್ತು ಸಾಹಿತಿಗಳಿಗೆ ಕರ್ನಾಟಕದಲ್ಲಿ ಬರ ಇಲ್ಲ. ಮೈಸೂರಿನವರೇ ಆದ ಹಿರಿಯ ಸಾಹಿತಿ ಪದ್ಮಶ್ರೀ ನಾಡೋಜ ಡಾ.ದೇವನೂರ ಮಹಾದೇವ ಅವರಿಂದ ದಸರಾ ಉತ್ಸವವನ್ನು ಉದ್ಘಾಟನೆ ಮಾಡಿಸಬಹುದಿತ್ತು.
ಯುವ ಸಮುದಾಯವನ್ನು ಆಕರ್ಷಿಸಬೇಕು ಎಂಬ ಇರಾದೆ ಇದ್ದಿದ್ದರೆ, ಯುವ ದಸರಾ ಉದ್ಘಾಟನೆ ಮಾಡುತ್ತಿರುವ 53 ವರ್ಷ ವಯಸ್ಸಿನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಮತ್ತು ನೃತ್ಯ ಪಟು ಪದ್ಮಶ್ರೀ ಪ್ರಭುದೇವ್ ಅವರನ್ನೇ ಮುಖ್ಯ ವೇದಿಕೆಯ ಉದ್ಘಾಟನೆ ನೆರವೇರಿಸಲು ಕರೆಯಬಹುದಿತ್ತು. ಪ್ರಭುದೇವ್ ಬಹುದೊಡ್ಡ ಸಾಧಕ ಮತ್ತು ಯುವಕರ ಕಣ್ಮಣಿ ಕೂಡಾ. ಹಿರಿಯ ಚಿತ್ರನಟರಾದ ರವಿಚಂದ್ರನ್, ಪ್ರಕಾಶ್ ರಾಜ್, ಉಮಾಶ್ರೀ ಕನ್ನಡದ ಹೆಮ್ಮೆಯಂತಿದ್ದಾರೆ. ಅವರಿಂದ ಮೈಸೂರು ದಸರಾ ಉದ್ಘಾಟನೆ ನೆರವೇರಿಸಿದ್ದರೂ ಅರ್ಥಪೂರ್ಣ ಆಯ್ಕೆ ಎನಿಸುತ್ತಿತ್ತು. ಯುವ ದಸರಾ ಉದ್ಘಾಟನೆ ಮಾಡುವ ಪ್ರಭುದೇವ್ ಮತ್ತು ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ ನೆರವೇರಿಸುವ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಒಂದೇ ಸಮುದಾಯದವರು. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅತ್ಯುತ್ತಮ ಆಡಳಿತಗಾರರು ಮಾತ್ರವಲ್ಲ ಶ್ರೇಷ್ಠ ಕಲಾವಿದರು, ಕಲಾ ಪೋಷಕರು ಆಗಿದ್ದರು. ನಮ್ಮನ್ನು ಆಳುವ ರಾಜಕಾರಣಿಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಲ್ಲ ಬಗೆಯಲ್ಲೂ ಮಾದರಿ. ಅವರಿಂದ ಪಾಠ ಕಲಿಯಬೇಕಷ್ಟೆ.
(ಅಂಕಣಗಾರರು ಹಿರಿಯ ಲೇಖಕರು, ಪತ್ರಕರ್ತರು)






