ಕರ್ನಾಟಕ ‘ಕಟ್ಟಿದವರ’ ಕಡೆಗಣನೆ

ಕರ್ನಾಟಕದ ವಿಶ್ವವಿದ್ಯಾನಿಲಯಗಳಿಗೆ ಬಸವಾದಿ ಶರಣರ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು, ನಂಜುಂಡಸ್ವಾಮಿ ಸೇರಿದಂತೆ ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯದಲ್ಲಿ ಬದುಕು ಸವೆಸಿದವರ ಹೆಸರುಗಳನ್ನು ನಾಮಕರಣ ಮಾಡಿದರೆ ಎಲ್ಲೆಡೆ ಇತ್ಯಾತ್ಮಕ ಶಕ್ತಿಯನ್ನು ಪಸರಿಸಿದಂತೆ. ಕೋಮುವಾದಿ ಶಕ್ತಿಗಳನ್ನು ಎದುರಿಸಬೇಕೆಂದರೆ, ಯುವ ಪೀಳಿಗೆ ಮುಂದೆ ಪ್ರಗತಿಪರ ಆಶಯದ ಅತ್ಯುತ್ತಮ ಮಾದರಿಗಳನ್ನು ನಿಲ್ಲಿಸಬೇಕು. ನಿತ್ಯ ಅವರ ಭಾವಕೋಶದ ಭಾಗವಾಗುವಂತೆ ಮಾಡಬೇಕು.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮತ್ತು ಸ್ವಾತಂತ್ರ್ಯಾನಂತರದ ಭಾರತದಲ್ಲಿ ದೇಶದ ಘನತೆ ಗೌರವ ಹೆಚ್ಚಿಸುವ ಹಾಗೆ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸಿದ ಸಂತರು, ಶರಣರು, ಸಮಾಜ ಸುಧಾರಕರು ಮತ್ತು ರಾಜಕೀಯ ಮುತ್ಸದ್ದಿಗಳನ್ನು ನೆನಪಿಸಿಕೊಳ್ಳುವುದು ನಾಗರಿಕ ಸರಕಾರದ ಆದ್ಯ ಕರ್ತವ್ಯ. ಅಂತಹ ಮಹಾನ್ ಸಾಧಕರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸುವುದು, ಅವರ ನೆನಪು ಚಿರಸ್ಥಾಯಿಗೊಳಿಸಲು ವಿಮಾನ ನಿಲ್ದಾಣಕ್ಕೋ, ವಿಶ್ವವಿದ್ಯಾನಿಲಯಗಳಿಗೋ ಹೆಸರು ಇಡುವ ಪರಿಪಾಠವನ್ನು ಭಾರತ ಮಾತ್ರವಲ್ಲ ಪ್ರಪಂಚದ ಎಲ್ಲ ದೇಶಗಳ ಸರಕಾರಗಳು ಅನುಸರಿಸುತ್ತಾ ಬಂದಿವೆ. ಛತ್ರಪತಿ ಶಿವಾಜಿ ಮಹಾರಾಜ, ಸಯ್ಯಾಜಿರಾವ್ ಗಾಯಕವಾಡ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಪಂಡಿತ್ ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂತಾದವರ ಹೆಸರುಗಳನ್ನು ಅತ್ಯುನ್ನತ ಶಿಕ್ಷಣ ಸಂಸ್ಥೆಗೋ, ಅಣೆಕಟ್ಟಿಗೋ ಇಟ್ಟು ಜನಮಾನಸದಲ್ಲಿ ಅವರನ್ನು ಸ್ಮರಿಸುವಂತೆ ಮಾಡುವುದು ಒಂದು ಕ್ರಮ. ಸ್ವಾತಂತ್ರ್ಯ ಹೋರಾಟದಲ್ಲಿ ಜೀವ ಪಣಕ್ಕಿಟ್ಟು ಹೋರಾಡಿದ ಮತ್ತು ಸ್ವಾತಂತ್ರ್ಯಾನಂತರ ಭಾರತವನ್ನು ಸಮೃದ್ಧವಾಗಿ ರೂಪಿಸಿದ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದ ಮಹಾನ್ ಚೇತನಗಳಿಗೆ ಭಾರತ ರತ್ನದಂಥ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತ ರತ್ನ ಮತ್ತು ಇನ್ನಿತರ ನಾಗರಿಕ ಪ್ರಶಸ್ತಿಗಳನ್ನು ಬದುಕಿದ್ದವರನ್ನು ಗುರುತಿಸಿ ನೀಡುವುದರ ಜೊತೆಗೆ ಮರಣೋತ್ತರವಾಗಿಯೂ ಪ್ರಧಾನ ಮಾಡಲಾಗುತ್ತಿದೆ.
ಮಹಾತ್ಮಾ ಗಾಂಧಿ, ಜವಹಾರಲಾಲ್ ನೆಹರೂ, ಮೌಲಾನ ಆಝಾದ್, ಜಾನ್ಸಿ ರಾಣಿ ಲಕ್ಷ್ಮೀ ಬಾಯಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಅನೇಕ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗಿದೆ. ದೇಶ ಕಟ್ಟುವಲ್ಲಿ ನಿಸ್ವಾರ್ಥವಾಗಿ ಶ್ರಮಿಸಿದ ಮಹನೀಯರನ್ನು ನೆನಪಿಸಿಕೊಳ್ಳುವುದೆಂದರೆ ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಸಾಧನೆ, ಸಿದ್ಧಿ ಮತ್ತು ತತ್ವ, ಆದರ್ಶಗಳನ್ನು ನಮ್ಮ ಪೀಳಿಗೆಗೆ ಪರಿಚಯಿಸಿದಂತೆ. ದೇಶದಲ್ಲಿ ಒಡಕಿನ ಭಾವನೆಗಳು ಹೆಚ್ಚುತ್ತಿವೆ. ಮತೀಯ ಮತ್ತು ಜಾತಿಯ ವೈಷಮ್ಯಗಳಿಂದ ದೇಶದಲ್ಲಿ ಗಲಭೆಗಳು ಹೆಚ್ಚುತ್ತಿವೆ. ಮತೀಯ ಸಾಮರಸ್ಯ ಕೆಡುತ್ತಿದೆ. ಸೌಹಾರ್ದ ಮರೀಚಿಕೆಯಾಗುತ್ತಿದೆ. ಹಿರಿಯ ಚೇತನಗಳ ಸ್ಮರಣೆಯೇ ಈ ಎಲ್ಲ ಸಮಸ್ಯೆಗಳಿಗೆ ದಿವ್ಯ ಸಂಜೀವಿನಿಯಾಗಬಲ್ಲದೆಂದು ಬಲವಾಗಿ ನಂಬಲಾಗಿದೆ. ಮಹಾತ್ಮರ ಹೆಸರಿನ ಸಂಸ್ಥೆಗಳು ಮಾತ್ರ ಎಲ್ಲ ಅವಾಂತರಗಳಿಗೆ ಉತ್ತರವಾಗಲಾರವು. ಅವರ ತತ್ವ, ಆದರ್ಶಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುವ ಸಂಘ-ಸಂಸ್ಥೆ ಸ್ಥಾಪಿಸುವ ಅಗತ್ಯವಿದೆ. ಅದನ್ನು ದೇಶಾದ್ಯಂತ ಮತ್ತು ವಿವಿಧ ರಾಜ್ಯಗಳಲ್ಲಿ ಮಾಡಲಾಗುತ್ತಿದೆ.
ಆದರೆ ಕರ್ನಾಟಕದಲ್ಲಿ ಮಾತ್ರ ಮಹಾನ್ ಚೇತನಗಳನ್ನು ಸ್ಮರಿಸಿಕೊಳ್ಳುವ ಅವರ ತತ್ವ, ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಹಾಗೆ ನೋಡಿದರೆ ಕನ್ನಡ ಪರಂಪರೆಯಲ್ಲಿ ಸೌಹಾರ್ದ ಮತ್ತು ಸಾಮರಸ್ಯ ಬದುಕಿನ ಮಾದರಿಗಳು ಸಾಕಷ್ಟಿವೆ. ಪರಧರ್ಮ, ಪರ ವಿಚಾರಗಳ ಸಹಿಷ್ಣುತೆಯ ಪಾಠ ಹೇಳಿಕೊಟ್ಟ ಶ್ರೀವಿಜಯ, ಮನುಷ್ಯ ಜಾತಿ ತಾನೊಂದೇ ವಲಂ ಎಂದು ಸಾರಿದ ಪಂಪ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಾದಿ ಶರಣರು, ಕುಲಕುಲವೆಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ ಎಂದು ಕುಲದ ನೆಲೆ ತಿಳಿಸಿದ ದಾಸರು, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವೆಂದು ಭಾವಿಸಿದ ಕುವೆಂಪು ಮುಂತಾದವರು ಕನ್ನಡ ಪ್ರಜ್ಞೆಯ ಔನತ್ಯವನ್ನು ಹೆಚ್ಚಿಸಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಕರ್ನಾಟಕವನ್ನು ಎಲ್ಲ ಬಗೆಯಲ್ಲೂ ಸದೃಢವಾಗಿ ರೂಪಿಸಲು ಯತ್ನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಮಿರ್ಝಾ ಇಸ್ಮಾಯೀಲ್, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು ಅವರ ಕೊಡುಗೆಯನ್ನು ಸದಾ ಸ್ಮರಿಸುವ ಅಗತ್ಯವಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಂತೂ ಪ್ರಾತಃಸ್ಮರಣೀಯರು. ಅವರನ್ನು ದೇಶ ಮತ್ತು ಎಲ್ಲ ರಾಜ್ಯಗಳು ನೆನಪಿಸಿಕೊಳ್ಳಬೇಕು.
ದಕ್ಷಿಣ ಭಾರತದ ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ ಸಂತರು, ಶರಣರು, ಸಮಾಜ ಸುಧಾರಕರು, ರಾಜಕೀಯ ಮುತ್ಸದ್ದಿಗಳನ್ನು ಒಟ್ಟು ಹೇಳಬೇಕೆಂದರೆ: ನಾಡು ಕಟ್ಟಿದವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವ ಮನೋಭಾವ ಕರ್ನಾಟಕದಲ್ಲಿ ಕಡಿಮೆ ಎಂದೇ ಹೇಳಬೇಕಾಗುತ್ತದೆ. ದ್ರಾವಿಡ ಚಳವಳಿಯ ನೇತಾರ ರಾಮಸ್ವಾಮಿ ಪೆರಿಯಾರ್ ತಮಿಳುನಾಡಿನ ವೈಚಾರಿಕ ಪ್ರಜ್ಞೆಯನ್ನು ರೂಪಿಸಿದವರು. ಅತ್ಯಂತ ಕ್ರಾಂತಿಕಾರಿ ಮನೋಭಾವದ ಪೆರಿಯಾರ್ ಬ್ರಾಹ್ಮಣ್ಯದ ಪ್ರಾಬಲ್ಯ ಮತ್ತು ಪಾರುಪತ್ಯವನ್ನು ಮುಲಾಜಿಲ್ಲದೆ ಪ್ರಶ್ನೆ ಮಾಡಿದವರು. ಅಂಥ ಹಿರಿಯ ಚೇತನದ ಹೆಸರಿನಲ್ಲಿ ತಮಿಳುನಾಡು ಸರಕಾರ ಸೇಲಂನಲ್ಲಿ ಪೆರಿಯಾರ್ ವಿಶ್ವವಿದ್ಯಾನಿಲಯ ಸ್ಥಾಪಿಸಿ ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳುತ್ತಿದೆ. ತಿರುವಳ್ಳುವರ್ ತಮಿಳುನಾಡಿನ ಕವಿ ಶ್ರೇಷ್ಠರಲ್ಲಿ ಒಬ್ಬರು. ವೆಲ್ಲೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಶ್ವವಿದ್ಯಾನಿಲಯಕ್ಕೆ ತಿರುವಳ್ಳುವರ್ ಅವರ ಹೆಸರಿಡಲಾಗಿದೆ. ದಕ್ಷಿಣ ಭಾರತದ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಪಕ್ಕದ ಮಹಾರಾಷ್ಟ್ರ ರಾಜ್ಯಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ವಿಶ್ವವಿದ್ಯಾನಿಲಯಗಳಿಗೆ ನಾಮಕರಣ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಎರಡೆರಡು ವಿಶ್ವವಿದ್ಯಾನಿಲಯಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಬಹಳ ತಡವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಅರ್ಥಶಾಸ್ತ್ರದ ಸಂಸ್ಥೆಯೊಂದನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ಸಂಸ್ಥೆಯ ವ್ಯಾಪ್ತಿ ಚಿಕ್ಕದು. ದಲಿತರು ಮತ್ತು ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಮೈಸೂರು ಸಂಸ್ಥಾನದ ಅತ್ಯಂತ ಕ್ರಾಂತಿಕಾರಿ ಮಿಲ್ಲರ್ ಆಯೋಗದ ವರದಿಯನ್ನು ವಿರೋಧಿಸಿದವರು ಸರ್ ಎಂ. ವಿಶ್ವೇಶ್ವರಯ್ಯ ಅವರು. ಆ ಕಾರಣಕ್ಕೆ ದಿವಾನ್ ಗಿರಿ ತ್ಯಜಿಸಿ ಮೈಸೂರು ಸಂಸ್ಥಾನದಿಂದ ಹೊರಬಂದವರು. ಅವರ ಹೆಸರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಬೆಳಗಾವಿಯಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ರಾಜ್ಯದ ದೊಡ್ಡ ವಿಶ್ವವಿದ್ಯಾನಿಲಯಕ್ಕೆ ನಾಮಕರಣ ಮಾಡಿ ಗೌರವ ಸೂಚಿಸುವ ಅವಕಾಶ ನಮ್ಮ ಸರಕಾರಗಳು ಕಳೆದುಕೊಂಡಿವೆ. ಬೆಂಗಳೂರಿನ ಅರ್ಥಶಾಸ್ತ್ರದ ಸಂಸ್ಥೆಗೆ ಡಾ. ಮನಮೋಹನ್ ಸಿಂಗ್ ಹೆಸರಿಟ್ಟು ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಿದ್ದರೆ ಅರ್ಥಪೂರ್ಣ ಕಾರ್ಯ ಎನಿಸಿಕೊಳ್ಳುತ್ತಿತ್ತು. ಸ್ವಾತಂತ್ರ್ಯಾನಂತರದ ತಮಿಳುನಾಡು ಕಟ್ಟುವಲ್ಲಿ ಬದ್ಧತೆ ತೋರಿದವರಲ್ಲಿ ಕಾಮರಾಜ್ ಪ್ರಮುಖರು. ತಮಿಳುನಾಡು ಸರಕಾರ ಮದುರೈಯಲ್ಲಿ ಕಾಮರಾಜ್ ವಿಶ್ವವಿದ್ಯಾನಿಲಯ ಸ್ಥಾಪಿಸಿದೆ ಅಥವಾ ಆ ವಿಶ್ವವಿದ್ಯಾನಿಲಯಕ್ಕೆ ಕಾಮರಾಜ್ ಹೆಸರನ್ನು ನಾಮಕರಣ ಮಾಡಿದೆ. ಚಿದಂಬರಂನಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯ ಇದೆ, ಚೆನ್ನೈನಲ್ಲಿ ಅಣ್ಣಾ ದೊರೈ ಹೆಸರಿನ ವಿಶ್ವವಿದ್ಯಾನಿಲಯ ಇದೆ. ಅಷ್ಟು ಮಾತ್ರವಲ್ಲ ಎಂ.ಜಿ.ಆರ್. ಹೆಸರಿನಲ್ಲಿ ವೈದ್ಯಕೀಯ ವಿಶ್ವವಿದ್ಯಾನಿಲಯವೂ ಸ್ಥಾಪನೆಯಾಗಿದೆ.
ಮಹಾರಾಷ್ಟ್ರ ರಾಜ್ಯವು ಸಂತರು, ಸಮಾಜ ಸುಧಾರಕರು ಮತ್ತು ರಾಜಕೀಯ ಮುತ್ಸದ್ದಿಗಳ ಹೆಸರನ್ನು ವಿಶ್ವವಿದ್ಯಾನಿಲಯಗಳಿಗೆ ನಾಮಕರಣ ಮಾಡಿ ಗೌರವ ಸೂಚಿಸುವುದರಲ್ಲಿ ಮುಂಚೂಣಿಯಲ್ಲಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠವಾಡಾ ವಿಶ್ವವಿದ್ಯಾನಿಲಯ, ಮಹಾತ್ಮಾ ಫುಲೆ ಕೃಷಿ ವಿದ್ಯಾಪೀಠ, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯ-ಪುಣೆ, ಅಹಲ್ಯಾದೇವಿ ಹೋಳ್ಕರ್ ವಿಶ್ವವಿದ್ಯಾನಿಲಯ-ಸೊಲ್ಲಾಪುರ, ಯಶವಂತರಾವ್ ಚವಾಣ್ ಮುಕ್ತ ವಿಶ್ವವಿದ್ಯಾನಿಲಯ, ನಾಸಿಕ್.. ಈ ಪಟ್ಟಿ ಇನ್ನೂ ದೊಡ್ಡದಿದೆ. ಯಶವಂತರಾವ್ ಚವಾಣ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದವರು. ಛತ್ರಪತಿ ಶಿವಾಜಿ ಮಹಾರಾಜ ಮತ್ತು ಶಾಹೂ ಮಹಾರಾಜ ಅವರನ್ನು ಮಹಾರಾಷ್ಟ್ರ ಜನತೆ ಹೆಮ್ಮೆಯ ಪ್ರತೀಕವೆಂದೇ ಭಾವಿಸಿ ಸದಾ ಸ್ಮರಿಸುತ್ತಾರೆ. ಅವರ ನೆನಪಿನ ಅನೇಕ ಸ್ಮಾರಕಗಳನ್ನು ಸ್ಥಾಪಿಸಿದೆ.
ಪಕ್ಕದ ಅವಿಭಜಿತ ಆಂಧ್ರ ಪ್ರದೇಶ ರಾಜ್ಯದಲ್ಲಿ ಸಂತರು, ಸಾಹಿತಿಗಳು, ಸಮಾಜ ಸುಧಾರಕರು ಮತ್ತು ರಾಜಕೀಯ ಮುತ್ಸದ್ದಿಗಳನ್ನು ಗೌರವದಿಂದ ಸ್ಮರಿಸಿಕೊಂಡಿದ್ದಾರೆ. ಕರ್ನಾಟಕದ ದಾರ್ಶನಿಕ ಅನುಬಾವಿ ಕವಿ ಅಲ್ಲಮಪ್ರಭು ಅವರಿಗೆ ಸಮಾನವಾಗಿ ನಿಲ್ಲುವ, ಆಚಾರ್ಯ ನಾಗಾರ್ಜುನ ಹೆಸರಲ್ಲಿ ವಿಶ್ವವಿದ್ಯಾನಿಲಯವೊಂದನ್ನು ಗುಂಟೂರಿನಲ್ಲಿ ಆಂಧ್ರ ಸರಕಾರ ಬಹಳ ಹಿಂದೆಯೇ ಸ್ಥಾಪಿಸಿದೆ. ಆದಿಕವಿ ನನ್ನಯ್ಯ ಹೆಸರಿನ ವಿಶ್ವವಿದ್ಯಾನಿಲಯ ರಾಜಮಹೇಂದ್ರವರಂನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಡಪದಲ್ಲಿ ಯೋಗಿ ವೇಮನ್ ಹೆಸರಿನ ವಿಶ್ವವಿದ್ಯಾನಿಲಯ ಇದೆ. ಶ್ರೀಕಾಕುಳಂನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನ ಸರಕಾರಿ ವಿಶ್ವವಿದ್ಯಾನಿಲಯ ಕಾರ್ಯ ನಿರ್ವಹಿಸುತ್ತಿದೆ. ಕಾಂಗ್ರೆಸ್ ಪಕ್ಷದ ಸರಕಾರಗಳು ಆಡಳಿತ ನಡೆಸುತ್ತಿರುವಾಗ ಜವಾಹರಲಾಲ್ ನೆಹರೂ ಮತ್ತು ರಾಜೀವ್ ಗಾಂಧಿ ಹೆಸರಿನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿವೆ. ತೆಲುಗು ದೇಶಂ ಪಕ್ಷದ ಸರಕಾರ ಆಡಳಿತ ನಡೆಸುತ್ತಿರುವಾಗ ವಿಜಯವಾಡದಲ್ಲಿ ಡಾ. ಎನ್. ಟಿ.ಆರ್. ಆರೋಗ್ಯ ವಿಶ್ವವಿದ್ಯಾನಿಲಯ ಸ್ಥಾಪಿಸಿದೆ. ಎನ್.ಟಿ.ಆರ್. ಅತ್ಯಂತ ಜನಪ್ರಿಯ ಸಿನೆಮಾ ನಟ ಮಾತ್ರವಲ್ಲ ಆಂಧ್ರ ಪ್ರದೇಶದ ರಾಜಕೀಯ ಚಹರೆ ಬದಲಿಸಿದ ಛಲದಂಕಮಲ್ಲ ರಾಜಕಾರಣಿಯೂ ಹೌದು. ಸರಕಾರದ ಆಡಳಿತ ಯಂತ್ರವನ್ನು ಜನರ ಹತ್ತಿರ ಕೊಂಡೊಯ್ದ ಅಪರೂಪದ ರಾಜಕಾರಣಿ ಎನ್.ಟಿ.ಆರ್.ರವರು. ಕಾಂಗ್ರೆಸ್ ಪಕ್ಷದ ಡೈನಾಮಿಕ್ ರಾಜಕಾರಣಿ ರಾಜಶೇಖರ ರೆಡ್ಡಿ ಅವರ ಹೆಸರಲ್ಲೂ ಒಂದು ವಿಶ್ವವಿದ್ಯಾನಿಲಯ ಆಂಧ್ರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೈದರಾಬಾದ್ ರಾಜ್ಯದ ನಿಜಾಮರನ್ನು ನೆನಪಿಸುವ ಅನೇಕ ಸಂಸ್ಥೆಗಳು ಇವೆ. ಭಾರತದ ಪ್ರಧಾನಿ ಪಿ.ವಿ. ನರಸಿಂಹ ರಾವ್ ಹೆಸರಿನಲ್ಲಿ ಸರಕಾರಿ ವಿಶ್ವವಿದ್ಯಾನಿಲಯವೊಂದು ಕಾರ್ಯ ನಿರ್ವಹಿಸುತ್ತಿದೆ.
ಆದರೆ ಅತ್ಯಂತ ಪ್ರಗತಿಪರ ರಾಜ್ಯ ಎನಿಸಿಕೊಂಡಿರುವ ಕರ್ನಾಟಕದಲ್ಲಿ ಕೃತಜ್ಞತಾ ಭಾವ ಕಾಣಿಸಿಕೊಳ್ಳುವುದಿಲ್ಲ. ಮಹಾರಾಷ್ಟ್ರ ಮತ್ತು ದಕ್ಷಿಣದ ರಾಜ್ಯಗಳ ರಾಜಕಾರಣಿಗಳ ಆಳದ ಕಾಳಜಿ, ಸಂತರು, ಸಾಹಿತಿಗಳು, ಸಮಾಜ ಸುಧಾರಕರು, ರಾಜಕೀಯ ಮುತ್ಸದ್ದಿಗಳನ್ನು ಗುರುತಿಸಿ ಗೌರವಿಸುವ ದೊಡ್ಡ ಗುಣ ನಮ್ಮ ರಾಜಕಾರಣಿಗಳಲ್ಲಿ ಇಲ್ಲ. ಕರ್ನಾಟಕದಲ್ಲಿ, ಕೃಷಿ ವಿಶ್ವವಿದ್ಯಾನಿಲಯಗಳು ಸೇರಿ ನಲವತ್ತಕ್ಕೂ ಹೆಚ್ಚು ಸರಕಾರಿ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಕೇಂದ್ರೀಯ ವಿಶ್ವವಿದ್ಯಾನಿಲಯ ಇದೆ. ರಾಜೀವ್ ಗಾಂಧಿ ಹೆಸರಿನಲ್ಲಿ ಅರೋಗ್ಯ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ. ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ರಾಣಿ ಚೆನ್ನಮ್ಮ ಹೆಸರಿನ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ವಿಜಯಪುರದ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಕನ್ನಡದ ಮೊದಲ ಕವಯಿತ್ರಿ ಶರಣೆ ಅಕ್ಕಮಹಾದೇವಿ ಅವರ ಹೆಸರು ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಆ ಕಾರ್ಯ ಮಾಡಿದ್ದರು. ಇನ್ನು ಶಿವಮೊಗ್ಗ ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರ ಕವಿ ಕುವೆಂಪು ಅವರ ಹೆಸರು ನಾಮಕರಣ ಮಾಡಿದ್ದು ಎಸ್.ಎಂ. ಕೃಷ್ಣ ಸರಕಾರ. ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಬಳ್ಳಾರಿ ವಿಶ್ವವಿದ್ಯಾನಿಲಯವನ್ನು ಪ್ರತ್ಯೇಕಿಸಿ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ ಮಾಡಿದವರು ಗಣಿ ವ್ಯವಹಾರದ ಜನಾರ್ದನ ರೆಡ್ಡಿಯವರು. ಜನಾರ್ದನ ರೆಡ್ಡಿಯವರು ಅಧಿಕಾರದಲ್ಲಿ ಮುಂದುವರಿದಿದ್ದರೆ ವಿಶ್ವವಿದ್ಯಾನಿಲಯಕ್ಕೆ ತಮ್ಮ ಹೆಸರೇ ಇಟ್ಟುಕೊಳ್ಳುತ್ತಿದ್ದರೇನೋ.
ಬಿ.ಎಸ್. ಯಡಿಯೂರಪ್ಪ ತಮ್ಮ ರಾಜಕೀಯ ಅನುಕೂಲಕ್ಕಾಗಿ ಕೆಳದಿ ಅರಸರ ಹೆಸರನ್ನು ಒಂದು ವಿಶ್ವವಿದ್ಯಾನಿಲಯಕ್ಕೆ ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಮೇಲೆ ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟ ರಾಯಚೂರು ವಿಶ್ವವಿದ್ಯಾನಿಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರನ್ನು ನಾಮಕರಣ ಮಾಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಮೈಸೂರಿನ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯಕ್ಕೆ ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರು ನಾಮಕರಣ ಮಾಡಿದ್ದಾರೆ. ಹಾಗೆ ನೋಡಿದರೆ ಇಲ್ಲಿಯವರೆಗಿನ ವಿಶ್ವವಿದ್ಯಾನಿಲಯಗಳ ನಾಮಕರಣಗಳು ಪಕ್ಕಾ ರಾಜಕೀಯ ಪ್ರೇರಿತವಾದವು. ಸೈದ್ಧಾಂತಿಕ ಮತ್ತು ಸಾಮಾಜಿಕ ಕಾಳಜಿಯ ಕಾರಣಕ್ಕಾದ ನಾಮಕರಣ ಕಡಿಮೆ.
ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಜೀವ ಮೂಡಿಸಿದವರು ಹನ್ನೆರಡನೆಯ ಶತಮಾನದ ಬಸವಾದಿ ಶರಣರು. ಜಾತಿವ್ಯವಸ್ಥೆಗೆ ಬಲವಾದ ಪೆಟ್ಟು ನೀಡಿದ ಬಸವಾದಿ ಶರಣರು ವರ್ಣ ಸಂಕರ ಮತ್ತು ಮತಾಂತರಕ್ಕೆ ನಾಂದಿ ಹಾಡಿದರು. ಅಸಂಖ್ಯಾತ ತಳಸಮುದಾಯದ ಕಾಯಕ ಜೀವಿಗಳಿಗೆ ಸಾಮಾಜಿಕ ಸ್ಥಾನಮಾನ ಕಲ್ಪಿಸಿದವರು ಬಸವಣ್ಣ. ದೈವ ಮತ್ತು ದೇವಾಲಯ ಪರಿಕಲ್ಪನೆಗೆ ಹೊಸ ಆಯಾಮ ಕೊಟ್ಟವರು ಬಸವಾದಿ ಶರಣರು. ವಚನ ಸಾಹಿತ್ಯ ಕನ್ನಡ ಅನರ್ಘ್ಯ ರತ್ನ. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ದರಾಮ ಮಾತ್ರವಲ್ಲ ಅಸಂಖ್ಯಾತ ತಳಸಮುದಾಯದ ವಚನಕಾರರಿಗೆ ಅಭಿವ್ಯಕ್ತಿಯ ಅವಕಾಶ ದೊರೆತದ್ದು ಅನುಭವ ಮಂಟಪದಲ್ಲಿ. ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ, ಸಮಾಗರ ಹರಳಯ್ಯ, ಹಡಪದ ಅಪ್ಪಣ್ಣ, ಮಾದಾರ ಚೆನ್ನಯ್ಯ, ಜೇಡರ ದಾಸಿಮಯ್ಯ, ಡೋಹಾರ ಕಕ್ಕಯ್ಯ ಮುಂತಾದವರು ವಚನಗಳನ್ನು ರಚಿಸಿದ್ದು, ಬೃಹತ್ ಚಳವಳಿಯೊಂದರ ಭಾಗವಾಗಿದ್ದು ಅಪರೂಪದ ವಿದ್ಯಮಾನ. ಕಲ್ಯಾಣದ ಕ್ರಾಂತಿ ಮತ್ತು ವಚನ ಚಳವಳಿ ಕರ್ನಾಟಕದ ನೆಲದಲ್ಲಿ ಮೂಡಿಸಿದ ಹೆಜ್ಜೆ ಗುರುತು, ಹೊತ್ತಿಸಿದ ಕಿಡಿ ಈ ಹೊತ್ತಿಗೂ ಸ್ಫೂರ್ತಿದಾಯಕವಾಗಿದೆ. ವಚನ ಚಳವಳಿಯ ಆಧಾರಸ್ತಂಭವೇ ಅಲ್ಲಮಪ್ರಭು ಮತ್ತು ಬಸವಣ್ಣ. ನಟುವ ಸಮುದಾಯದ ಅಲ್ಲಮಪ್ರಭು ಜ್ಞಾನದ ಶಿಖರ. ಖ್ಯಾತ ಸಂಸ್ಕೃತಿ ಚಿಂತಕ ಡಾ. ಡಿ.ಆರ್. ನಾಗರಾಜ್ ಅವರು ಅಲ್ಲಮಪ್ರಭು ಅವರ ದಿವ್ಯ ಪ್ರಭೆಯನ್ನು, ಶೈವ ಪ್ರತಿಭೆಯನ್ನು ಕಾಶ್ಮೀರಿ ಶೈವದ ಅಭಿನವ ಗುಪ್ತಾ ಅವರೊಂದಿಗೆ ತುಲನೆ ಮಾಡುತ್ತಾರೆ. ಅಲ್ಲಮಪ್ರಭು ದಾರ್ಶನಿಕತೆಯಲ್ಲಿ, ಅನುಭಾವ ಮತ್ತು ಕಾವ್ಯ ಪ್ರತಿಭೆಯಲ್ಲಿ ಗೋರಖನಾಥ, ನಾಗಾರ್ಜುನ ಅವರಿಗೆ ಸಮ ಹಾಗೂ ಸಮಕಾಲೀನ. ಬಸವಣ್ಣ ಒಂದು ಚಳವಳಿಯನ್ನು ಮುನ್ನಡೆಸಿದ ನೇತಾರ. ಬಸವಣ್ಣ ಮತ್ತು ಅಲ್ಲಮಪ್ರಭು ಅವರ ಹೆಸರುಗಳನ್ನು ಕರ್ನಾಟಕದ ಸರಕಾರಿ ವಿಶ್ವವಿದ್ಯಾನಿಲಯಗಳಿಗೆ ನಾಮಕರಣ ಮಾಡಿದರೆ ಬಸವಾದಿ ಶರಣರ ಸಮಸ್ತ ಆಶಯಗಳಿಗೆ ಗೌರವಿಸಿದಂತಾಗುತ್ತದೆ.
ಬಸವಾದಿ ಶರಣರ ತತ್ವ, ಆದರ್ಶಗಳನ್ನು ಸ್ವಾತಂತ್ರ್ಯ ಪೂರ್ವ ಕರ್ನಾಟಕದಲ್ಲಿ ಜಾರಿಗೆ ತರಲು ಯತ್ನಿಸಿದವರು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಕರ್ನಾಟಕದ ಯಾವುದಾದರೂ ಒಂದು ವಿಶ್ವವಿದ್ಯಾನಿಲಯಕ್ಕೆ ನಾಲ್ವಡಿಯವರ ಹೆಸರು ನಾಮಕರಣ ಮಾಡುವುದು ಕಾಲದ ಅಗತ್ಯವಾಗಿದೆ. ಅವರ ಕೆಲಸ ಕಾರ್ಯಗಳು ನಮ್ಮ ರಾಜಕಾರಣಿಗಳಿಗೆ ಸದಾ ಮಾದರಿಯಾಗಿ ನಿಲ್ಲುವ ಶಕ್ತಿ ಪಡೆದಿವೆ.
ಬಸವಾದಿ ಶರಣರ ತತ್ವ, ಆದರ್ಶಗಳನ್ನು, ನಾಲ್ವಡಿಯವರ ಸಾಮಾಜಿಕ ನ್ಯಾಯದ ಕೆಲಸಗಳನ್ನು ಸ್ವಾತಂತ್ರ್ಯಾನಂತರದ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಿದವರು ದೇವರಾಜ ಅರಸು ಅವರು. ಕರ್ನಾಟಕ ರಾಜ್ಯದ ವಿಶ್ವವಿದ್ಯಾನಿಲಯವೊಂದಕ್ಕೆ ದೇವರಾಜ ಅರಸು ಅವರ ಹೆಸರನ್ನು ನಾಮಕರಣ ಮಾಡುವುದರಿಂದ ಸಾಮಾಜಿಕ ನ್ಯಾಯದ ಹರಿಕಾರನಿಗೆ ಗೌರವ ಸೂಚಿಸಿದಂತಾಗುತ್ತದೆ. ಅಷ್ಟು ಮಾತ್ರವಲ್ಲ, ಅರಸು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ, ಹಾವನೂರು ಆಯೋಗದ ವರದಿ ಅನುಷ್ಠಾನದ ಮೂಲಕ ಹಿಂದುಳಿದ ವರ್ಗಗಳಿಗೆ ಬಲ ತುಂಬಿದ ಐತಿಹಾಸಿಕ ಘಟನೆಗಳನ್ನು ಯುವ ಪೀಳಿಗೆಗೆ ಮತ್ತೆ ನೆನಪಿಸಿಕೊಟ್ಟಂತಾಗುತ್ತದೆ.
ಕರ್ನಾಟಕದಲ್ಲಿ ರೈತ ಚಳವಳಿಯ ಮೂಲಕ ಬಹು ದೊಡ್ಡ ಜನಾಂದೋಲನ ರೂಪಿಸಿದ ಪ್ರೊ. ಎಂ.ಡಿ. ನಂಜುಂಡ ಸ್ವಾಮಿ ಭಾರತದ ಕೃಷಿ ಮತ್ತು ಕೃಷಿಕರ ಕುರಿತು ಚಿಂತಿಸಿದವರು. ರೈತ ಸ್ವಾವಲಂಬನೆಯಾಗಬೇಕು ಎಂದು ಕನಸು ಕಂಡವರು. ಅವರ ಹೆಸರನ್ನು ಕರ್ನಾಟಕದ ಯಾವುದಾದರೂ ಕೃಷಿ ವಿಶ್ವವಿದ್ಯಾನಿಲಯಕ್ಕೆ ನಾಮಕರಣ ಮಾಡಿದರೆ ಹೊಸ ಚಿಂತನೆಗೆ ಉತ್ತೇಜಿಸಿದಂತಾಗುತ್ತದೆ.
ಕರ್ನಾಟಕದಲ್ಲಿ 1991ರಿಂದ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಪರಿಪಾಠ ಆರಂಭಿಸಲಾಗಿದೆ. ಅದು ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಅಸಾಧಾರಣ ಕೊಡುಗೆ ಸಲ್ಲಿಸಿದ ವಿವಿಧ ಕ್ಷೇತ್ರದ ಶ್ರೇಷ್ಠ ಸಾಧಕರಿಗೆ ಕರ್ನಾಟಕ ರತ್ನ ನೀಡಿ ಗೌರವಿಸಬೇಕು. ಭಾರತರತ್ನದ ಹಾಗೆ ಕರ್ನಾಟಕ ರತ್ನವನ್ನು ಮರಣೋತ್ತರವಾಗಿ ನೀಡಬಹುದಾಗಿದೆ. ಮೊದಲ ಕರ್ನಾಟಕ ರತ್ನ ಚಿತ್ರರಂಗದ ಹಿರಿಯ ನಟ, ಗಾಯಕ ಡಾ. ರಾಜಕುಮಾರ್ ಅವರಿಗೆ ನೀಡಲಾಗಿತ್ತು. ಕುವೆಂಪು ಅವರಿಗೆ ಸಲ್ಲಬೇಕಾದ ಕರ್ನಾಟಕ ರತ್ನ ತನಗೆ ಬೇಡ ಎಂದ ಡಾ. ರಾಜಕುಮಾರ್ ಮೊದಲು ಅವರಿಗೆ ನೀಡಿ, ಆಮೇಲೆ ನಾನು ಸ್ವೀಕರಿಸುತ್ತೇನೆ ಎಂದು ಷರತ್ತು ಹಾಕಿದರು. ಅನಿವಾರ್ಯವಾಗಿ ಕರ್ನಾಟಕ ಸರಕಾರ ಕರ್ನಾಟಕ ರತ್ನವನ್ನು ಮೊದಲು ಕುವೆಂಪು ಅವರಿಗೆ ಪ್ರದಾನ ಮಾಡಿ ನಂತರ ಡಾ. ರಾಜಕುಮಾರ್ ಅವರಿಗೆ ನೀಡಿತು. ಹಾಗೆ ನೋಡಿದರೆ ಕರ್ನಾಟಕ ರತ್ನ ಪ್ರತಿವರ್ಷ ಶ್ರೇಷ್ಠ ಸಾಧಕರಿಗೆ ನೀಡಬೇಕು. ಯಾವ ಸರಕಾರಗಳು ಇತ್ತ ವಿಶೇಷ ಕಾಳಜಿ ವಹಿಸಿಲ್ಲ. ಇಲ್ಲಿಯವರೆಗೆ ಸಮಯ ಸಿಕ್ಕಾಗ ಒಟ್ಟು ಹನ್ನೆರಡು ಜನರಿಗೆ ಕರ್ನಾಟಕ ರತ್ನ ನೀಡಿ ಗೌರವಿಸಲಾಗಿದೆ. ಎಸ್. ನಿಜಲಿಂಗಪ್ಪ, ಡಾ. ಸಿ.ಎನ್.ಆರ್. ರಾವ್, ಡಾ. ದೇವಿಪ್ರಸಾದ್ ಶೆಟ್ಟಿ, ಡಾ. ಭೀಮಸೇನ ಜೋಶಿ, ಡಾ. ಶಿವಕುಮಾರ ಸ್ವಾಮಿಗಳು, ಡಾ. ದೇ. ಜವರೇಗೌಡ, ಶ್ರೀ ವೀರೇಂದ್ರ ಹೆಗ್ಗಡೆ, ನಟ ಪುನೀತ್ ರಾಜಕುಮಾರ್, ಬಹುಭಾಷಾ ತಾರೆ ಡಾ. ಬಿ. ಸರೋಜಾ ದೇವಿ, ನಟ ವಿಷ್ಣುವರ್ಧನ್ ಕರ್ನಾಟಕ ರತ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿಂದಿನ ಸರಕಾರಗಳು ತಮ್ಮ ಒಲವು ನಿಲುವು ಆಧರಿಸಿ ಕರ್ನಾಟಕ ರತ್ನ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿವೆ. ಹಿಂದಿನದರ ಬಗ್ಗೆ ಮಾತನಾಡಿ ಅರ್ಥವಿಲ್ಲ. ಆದರೆ ಕರ್ನಾಟಕ ರತ್ನ ಪ್ರಶಸ್ತಿ ಪಟ್ಟಿಯಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ಹೆಸರಿಲ್ಲ. ಭೂಸಾ ಪ್ರಕರಣದ ಮೂಲಕ ದಲಿತ ಚಳವಳಿಗಳಿಗೆ ಪ್ರೇರಣೆ ನೀಡಿದ ಬಿ. ಬಸವಲಿಂಗಪ್ಪ ಅವರು ನಿಜವಾದ ಅರ್ಥದಲ್ಲಿ ಕರ್ನಾಟಕ ರತ್ನರು. ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿದ ಬಿ. ಕೃಷ್ಣಪ್ಪ ಅವರು ಹಳ್ಳಿ ಹಳ್ಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳನ್ನು ತಲುಪಿಸಿದವರು. ಬುದ್ಧ, ಬಸವ, ಅಂಬೇಡ್ಕರ್ ತತ್ವ ಆಧಾರಿತ ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸಿದ ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ನೀಡಿಲ್ಲ. ಪ್ರೊ. ಎಂ.ಡಿ. ನಂಜುಂಡ ಸ್ವಾಮಿ ಅವರನ್ನು ರಾಜಕೀಯ ಗುರು ಎಂದು ಒಪ್ಪಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರತ್ನಕ್ಕೆ ಅವರನ್ನು ಆಯ್ಕೆ ಮಾಡುವಲ್ಲಿ ಯಾಕೆ ಮನಸ್ಸು ಮಾಡಲಿಲ್ಲವೋ. ಕರ್ನಾಟಕದಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಪ್ರಸಾರ ಮಾಡಿದ, ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಿದ ಅದೆಷ್ಟೋ ಹೋರಾಟಗಾರರು, ಚಿಂತಕರು ಸಾಹಿತಿಗಳು ಬಂದು ಹೋಗಿದ್ದಾರೆ. ಡಾ. ಎಂ.ಎಂ. ಕಲಬುರ್ಗಿ ಮತೀಯ ಶಕ್ತಿಗಳ ಗುಂಡೇಟಿಗೆ ಎದೆಯೊಡ್ಡಿದವರು. ಕರ್ನಾಟಕದ ವಿಶ್ವವಿದ್ಯಾನಿಲಯಗಳಿಗೆ ಬಸವಾದಿ ಶರಣರ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು, ನಂಜುಂಡಸ್ವಾಮಿ ಸೇರಿದಂತೆ ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯದಲ್ಲಿ ಬದುಕು ಸವೆಸಿದವರ ಹೆಸರುಗಳನ್ನು ನಾಮಕರಣ ಮಾಡಿದರೆ ಎಲ್ಲೆಡೆ ಇತ್ಯಾತ್ಮಕ ಶಕ್ತಿಯನ್ನು ಪಸರಿಸಿದಂತೆ. ಕೋಮುವಾದಿ ಶಕ್ತಿಗಳನ್ನು ಎದುರಿಸಬೇಕೆಂದರೆ, ಯುವ ಪೀಳಿಗೆ ಮುಂದೆ ಪ್ರಗತಿಪರ ಆಶಯದ ಅತ್ಯುತ್ತಮ ಮಾದರಿಗಳನ್ನು ನಿಲ್ಲಿಸಬೇಕು. ನಿತ್ಯ ಅವರ ಭಾವಕೋಶದ ಭಾಗವಾಗುವಂತೆ ಮಾಡಬೇಕು.







