Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ನೂತನ ಸಚಿವ ಸಂಪುಟ: ಬಣ ಪ್ರಾತಿನಿಧ್ಯ...

ನೂತನ ಸಚಿವ ಸಂಪುಟ: ಬಣ ಪ್ರಾತಿನಿಧ್ಯ ಮೇಲುಗೈ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ6 Jun 2026 11:10 AM IST
share
ನೂತನ ಸಚಿವ ಸಂಪುಟ: ಬಣ ಪ್ರಾತಿನಿಧ್ಯ ಮೇಲುಗೈ

ಒಂದು ಸರಕಾರದ ಮೌಲ್ಯ ಮಾಪನ ಮಾಡುವಲ್ಲಿ ಕರ್ನಾಟಕದ ಮತದಾರರು ಜಾಣರು. ಎಸ್.ಎಂ. ಕೃಷ್ಣ ಸರಕಾರಕ್ಕೆ ಮಾಧ್ಯಮಗಳು ಅತಿಯಾದ ಪ್ರಚಾರ ನೀಡಿದ್ದವು. ಆದರೆ ಕೆಟ್ಟ ಆಡಳಿತ ನೀಡಿದ್ದರ ಫಲವಾಗಿ 2004ರ ಚುನಾವಣೆಯಲ್ಲಿ ಹೀನಾಯವಾಗಿ ಸೋಲಬೇಕಾಯಿತು. ಬೊಮ್ಮಾಯಿ ಮತ್ತು ಎಸ್.ಎಂ. ಕೃಷ್ಣ ಸರಕಾರಗಳ ವೈಫಲ್ಯಗಳನ್ನು ಡಿ.ಕೆ. ಶಿವಕುಮಾರ್ ಅವರು ನಿದರ್ಶನವಾಗಿಟ್ಟುಕೊಂಡರೆ ದಕ್ಷ, ಪ್ರಾಮಾಣಿಕ ಮತ್ತು ಕ್ರಿಯಾಶೀಲರ ತಂಡ ಕಟ್ಟಿಕೊಂಡು ಗೆಲುವಿನ ದಡ ತಲುಪುತ್ತಾರೆ. ಇಲ್ಲದಿದ್ದರೆ ಇತಿಹಾಸ ಪುನರಾವರ್ತನೆಯಾಗುತ್ತದೆಯಷ್ಟೇ.

ಅಂತೂ ಇಂತೂ ಡಿ.ಕೆ. ಶಿವಕುಮಾರ್ ಅವರ ಬಹುದಿನಗಳ ಕನಸು ಈಡೇರಿದೆ. ಹದಿಮೂರು ಜನ ಸಚಿವರೊಂದಿಗೆ ಮುಖ್ಯಮಂತ್ರಿಯವರು ಕರ್ನಾಟಕ ಲೋಕಭವನದ ಸರಳ ಸಮಾರಂಭದಲ್ಲಿ ಅಧಿಕಾರದ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಎರಡು ವರ್ಷಗಳ ಕಾಲಾವಕಾಶ ಇದೆ. ಹಾಗಾಗಿ ಈಗ ಅಸ್ತಿತ್ವಕ್ಕೆ ಬರುವ ಸಚಿವ ಸಂಪುಟ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಇಲ್ಲಿಯವರೆಗಿನ ಆಡಳಿತ ವಿರೋಧಿ ಅಲೆಯನ್ನು ಅಳಿಸಿ ಹಾಕಿ, ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದರೆ ಅತ್ಯುತ್ತಮ ಆಡಳಿತ ನೀಡುವುದು ಅನಿವಾರ್ಯವಾಗುತ್ತದೆ. ಒಂದು ಸರಕಾರ ಅತ್ಯುತ್ತಮ ಆಡಳಿತ ನೀಡಬೇಕೆಂದರೆ: ಮುಖ್ಯಮಂತ್ರಿಯ ಅತ್ಯುತ್ಸಾಹ ಸಾಕಾಗುವುದಿಲ್ಲ. ಮಂತ್ರಿ ಮಂಡಲದ ಎಲ್ಲ ಸದಸ್ಯರು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಷ್ಟು ಮಾತ್ರವಲ್ಲ ಆ ಮಂತ್ರಿ ಮಂಡಲದಲ್ಲಿ ದಕ್ಷರು, ಪ್ರಾಮಾಣಿಕರು ಮತ್ತು ಕ್ರಿಯಾಶೀಲರ ಸಂಖ್ಯೆ ಹೆಚ್ಚಿರಬೇಕಾಗುತ್ತದೆ. ಭ್ರಷ್ಟರು, ಮೈಗಳ್ಳರು ಮತ್ತು ದಡ್ಡರು ಸಚಿವ ಸಂಪುಟಕ್ಕೆ ಹೊರೆಯಾಗಿ ಪರಿಣಮಿಸುತ್ತಾರೆ. ಅತ್ಯುತ್ತಮ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಮಹಿಳಾ ನ್ಯಾಯವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಸಚಿವ ಸಂಪುಟದಲ್ಲಿ ಸಮುದಾಯವಾರು ಪ್ರಾತಿನಿಧ್ಯ ಕಲ್ಪಿಸುವಾಗಲೂ ಆಯಾ ಸಮುದಾಯಗಳಲ್ಲಿ ವಿಶ್ವಾಸಾರ್ಹತೆ ಗಳಿಸಿದವರಿಗೆ ಆದ್ಯತೆ ನೀಡಬೇಕು. ಆಗ ಮಾತ್ರ ಚುನಾವಣಾ ರಾಜಕೀಯದಲ್ಲಿ ಗೆಲುವು ಸಿಗುತ್ತದೆ.

ಈಗ ರಚಿತವಾಗಿರುವ ನೂತನ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯವನ್ನು ಗಾಳಿಗೆ ತೂರಲಾಗಿದೆ. ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದ ಮೂಲ ತತ್ವಗಳನ್ನೇ ಮರೆತು ಸಚಿವ ಸಂಪುಟ ರಚಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆೆಫ್ ವಿಜಯ್ ರಾಜಕಾರಣಕ್ಕೆ ಹೊಸಬರು. ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಿಂತ ಹನ್ನೆರಡು ವರ್ಷ ಚಿಕ್ಕವರು. ವಿಜಯ್ ಅವರ ಸಚಿವ ಸಂಪುಟದಲ್ಲಿ ನಾಲ್ಕು ಜನ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. 29 ವರ್ಷದ ಶ್ರೀಮತಿ ಕೀರ್ತನಾ ಕೇವಲ ಪ್ರತಿಭೆ ಮತ್ತು ಕ್ರಿಯಾಶೀಲತೆಯ ಕಾರಣಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯದ ಶಾಸಕರಿಗೆ ಹೆಚ್ಚು ಅವಕಾಶ ನೀಡಿದ್ದಾರೆ. ಆದಷ್ಟು ವಿದ್ಯಾವಂತರು ಮತ್ತು ಅತ್ಯುತ್ಸಾಹದ ನಾಯಕರನ್ನು ಮಂತ್ರಿ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಎಪ್ಪತ್ತು ವರ್ಷ ಮೇಲ್ಪಟ್ಟವರು ನಾಲ್ಕು ಜನ ಅವಕಾಶ ಪಡೆದಿದ್ದಾರೆ. ಆ ನಾಲ್ಕೂ ಜನ ಈ ಹಿಂದೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರೇ. ಅಷ್ಟು ಮಾತ್ರವಲ್ಲ ಹಲವು ದಶಕಗಳಿಂದ ಒಂದಲ್ಲ ಒಂದು ಅಧಿಕಾರ ಅನುಭವಿಸುತ್ತಲೇ ಬಂದವರು. ಡಿ.ಕೆ. ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಪಡೆದ ಡಾ. ಜಿ. ಪರಮೇಶ್ವರ್ ಅವರು ಸಾಕಷ್ಟು ಬಾರಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸುಮಾರು 25 ವರ್ಷಗಳ ಹಿಂದೆಯೇ ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಆದರೆ ಬರಬರುತ್ತಾ ಅವರ ದಕ್ಷತೆ, ಕ್ರಿಯಾಶೀಲತೆ ಕಡಿಮೆಯಾಗುತ್ತಲಿದೆ. ಸಿದ್ದರಾಮಯ್ಯ ಅವರ ಮೊದಲ ಮತ್ತು ಎರಡನೇ ಮುಖ್ಯಮಂತ್ರಿ ಅವಧಿಯಲ್ಲಿ ಡಾ. ಜಿ. ಪರಮೇಶ್ವರ್ ಅವರಿಗೆ ಗೃಹ ಖಾತೆ ನೀಡಲಾಗಿತ್ತು.ಗೃಹ ಖಾತೆಯಲ್ಲಿ ಪರಮೇಶ್ವರ್ ಅವರಿಗೆ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ. ಕೋಮುವಾದಿ ಶಕ್ತಿಗಳ ಆಟಾಟೋಪ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾದರು. ಕಲ್ಲಡ್ಕ ಪ್ರಭಾಕರ್ ಭಟ್, ಬಸನಗೌಡ ಪಾಟೀಲ್‌ಯತ್ನಾಳ್ ಮತ್ತು ಇನ್ನಿತರರ ದ್ವೇಷ ಭಾಷಣಗಳಿಗೆ ಕಡಿವಾಣ ಹಾಕುವಲ್ಲಿ ಗೃಹ ಸಚಿವರು ಕೈ ಚೆಲ್ಲಿ ಕೂತರು. ದಲಿತ ಮುಖ್ಯಮಂತ್ರಿಯ ಅವಕಾಶ ಇದ್ದಾಗ, ಮಲ್ಲಿಕಾರ್ಜುನ ಖರ್ಗೆಯವರು ಬೇಡವೆಂದಾಗ ಎರಡನೇ ಆಯ್ಕೆಯಾಗಿ ಡಾ.ಜಿ. ಪರಮೇಶ್ವರ್ ಅವರನ್ನು ಆ ಹುದ್ದೆಗೆ ಪರಿಗಣಿಸಬಹುದಿತ್ತು. 74 ವರ್ಷದ ಡಾ. ಜಿ. ಪರಮೇಶ್ವರ್ ಅವರು ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮಂತ್ರಿಯಾಗಲು ಒಪ್ಪಲೇಬಾರದಿತ್ತು. ಮಂತ್ರಿಯಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಬಣದ ವ್ಯಕ್ತಿ ಎಂಬ ಕಾರಣಕ್ಕೆ ಮಂತ್ರಿ ಮಂಡಲದಲ್ಲಿ ಸೇರಿಸಿಕೊಂಡಿದ್ದಾರೆ. ಡಾ. ಜಿ. ಪರಮೇಶ್ವರ್ ಅವರ ಸಮುದಾಯಕ್ಕೆ ಸೇರಿದ ಯುವ ಮತ್ತು ಕ್ರಿಯಾಶೀಲ ಶಾಸಕರಿಗೆ ಅವಕಾಶ ಕಲ್ಪಿಸಿದ್ದರೆ ನಾಡಿಗೆ ಒಳಿತಾಗುತ್ತಿತ್ತು.

ನೂತನ ಸಚಿವ ಸಂಪುಟದಲ್ಲಿ ಅವಕಾಶ ಪಡೆದ 78 ವರ್ಷದ ಕೆ. ಎಚ್. ಮುನಿಯಪ್ಪ ಯಾವತ್ತೂ ದಕ್ಷತೆ ಮೆರೆದವರಲ್ಲ. ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶ ಪಡೆದಿದ್ದ ಮುನಿಯಪ್ಪ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲೇ ಇಲ್ಲ. 2009ರಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಕಾರ್ಮಿಕ ಮಂತ್ರಿಯಾಗುವ ಅವಕಾಶ ಪಡೆದ ಮಲ್ಲಿಕಾರ್ಜುನ ಖರ್ಗೆಯವರು ಅತ್ಯುತ್ತಮ ಕೆಲಸ ಮಾತ್ರದಿಂದಲೇ ಎಲ್ಲರ ಗಮನ ಸೆಳೆದಿದ್ದರು. ಈಗ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರ ಸ್ಥಾನ ಅಲಂಕರಿಸಿದ್ದಾರೆ. ಅವಕಾಶ ಸಿಕ್ಕಾಗ ಅದನ್ನು ಹೇಗೆ ಸಮರ್ಥವಾಗಿ ನಿರ್ವಹಿಸಬೇಕು ಎಂಬುದು ಮಲ್ಲಿಕಾರ್ಜುನ ಖರ್ಗೆಯವರಿಂದ ಕಲಿಯಬೇಕು. ಕೆ.ಎಚ್. ಮುನಿಯಪ್ಪ ಮೊದಲ ಬಾರಿಗೆ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಮಂತ್ರಿಯಾಗಿ ಏನೇನೂ ಕೆಲಸ ಮಾಡಲಿಲ್ಲ. ಈಗ ಮತ್ತೆ ಅವರನ್ನೇ ಮಂತ್ರಿಯಾಗಿ ಮುಂದುವರಿಸಿದ್ದಾರೆ. ಮುನಿಯಪ್ಪ ಅವರ ಸಮುದಾಯಕ್ಕೆ ಸೇರಿದ ಬೇರೆಯವರಿಗೆ ಅವಕಾಶ ಕಲ್ಪಿಸಿದ್ದರೆ ಹೊಸ ನಾಯಕತ್ವ ರೂಪುಗೊಳ್ಳುತ್ತಿತ್ತು. ಮುನಿಯಪ್ಪ ಕೂಡಾ ಸಿದ್ದರಾಮಯ್ಯ ಬಣದ ಪ್ರಾತಿನಿಧ್ಯವೇ ಹೊರತು ಸಾಮಾಜಿಕ ನ್ಯಾಯದ ಸಮರ್ಥ ಪ್ರತಿನಿಧಿಯಲ್ಲ.

ಸರ್ವಜ್ಞ ನಗರದ ಶಾಸಕ ಕೆ.ಜೆ. ಜಾರ್ಜ್ ಮತ್ತೆ ಮಂತ್ರಿಯಾಗಿದ್ದಾರೆ. 76 ವರ್ಷದ ಜಾರ್ಜ್ ಅವರು ಹಲವು ಬಾರಿ ಮಂತ್ರಿಯಾಗುವ ಅವಕಾಶ ಪಡೆದುಕೊಂಡಿದ್ದರು. ಮೊದಲ ಬಾರಿಗೆ ಮಂತ್ರಿಯಾದಾಗ ತುಸು ಒಳ್ಳೆಯ ಕೆಲಸ ಮಾಡಿದ್ದರು. ಹಾಗೆ ನೋಡಿದರೆ ಜಾರ್ಜ್ ಒಳ್ಳೆಯವರೇ. ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಗೃಹ ಖಾತೆಯ ಹೊಣೆಗಾರಿಕೆ ವಹಿಸಲಾಗಿತ್ತು. ಪರಿಣಾಮಕಾರಿಯಾಗಿ ಕೆಲಸ ಮಾಡಲು ಅವರಿಂದ ಸಾಧ್ಯವಾಗಲೇ ಇಲ್ಲ. 2023ರಿಂದ ಇಲ್ಲಿಯವರೆಗೆ ಸಿದ್ದರಾಮಯ್ಯ ಸರಕಾರದಲ್ಲಿ ಇಂಧನ ಖಾತೆಯ ಸಚಿವರಾಗಿದ್ದ ಜಾರ್ಜ್ ಅತ್ಯುತ್ತಮ ನಿರ್ವಹಣೆ ಮಾಡಲಿಲ್ಲ. ಜಾರ್ಜ್ ಬದಲಿಗೆ ಅದೇ ಸಮುದಾಯದ ಮತ್ತೊಬ್ಬರಿಗೆ ಅವಕಾಶ ಕಲ್ಪಿಸಿದ್ದರೆ ಹೊಸ ಕನಸುಗಳಿಗೆ ಬಲ ನೀಡಿದಂತಾಗುತ್ತಿತ್ತು. ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಸೇರಿಕೊಂಡ ರಾಮಲಿಂಗರೆಡ್ಡಿಯವರು ಅತ್ಯಂತ ಹಿರಿಯ ನಾಯಕರು. ಆದರೆ ಬೆಂಗಳೂರು ಆಚೆ ಯಾವತ್ತೂ ಛಾಪು ಮೂಡಿಸಲೇ ಇಲ್ಲ. ಹಲವು ಬಾರಿ ಮಂತ್ರಿಯಾಗುವ ಅವಕಾಶ ಪಡೆದರೂ ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಜಾಯಮಾನದವರಲ್ಲ. ರಾಮಲಿಂಗಾರೆಡ್ಡಿಯವರಿಗೆ ಯಾವ ಖಾತೆ ನೀಡಿದರೂ ಅದನ್ನು ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಾರಿಗೆ ಮಂತ್ರಿಯಾಗಿದ್ದ ಅವರು ಅತ್ಯುತ್ತಮ ಕೆಲಸ ಮಾಡಿ ಇಲಾಖೆಯನ್ನು ಲಾಭದಲ್ಲಿ ಮುನ್ನಡೆಸಬಹುದಿತ್ತು. ಬಿಜೆಪಿಯ ಆರ್. ಅಶೋಕ್ ಮತ್ತು ರಾಮಲಿಂಗಾರೆಡ್ಡಿಯವರು ಬೆಂಗಳೂರು ನಗರದ ಕೆಟ್ಟ ಸ್ಥಿತಿಗೆ ಕಾರಣೀಭೂತರು ಎಂದು ಜನ ಆಡಿಕೊಳ್ಳುತ್ತಾರೆ. ರಾಮಲಿಂಗಾರೆಡ್ಡಿಯವರು ಖರ್ಗೆ ಬಣದ ನಾಯಕ ಎಂಬ ಕಾರಣಕ್ಕೆ ಸಂಪುಟದಲ್ಲಿ ಅವಕಾಶ ಗಿಟ್ಟಿಸಿದ್ದಾರೆ. ಒಳ್ಳೆಯವರು ಮತ್ತು ನಿರುಪದ್ರವಿ ಎಂಬ ವಿಶೇಷಣಗಳು ಕರ್ನಾಟಕಕ್ಕೆ ಅದರಲ್ಲೂ ಈಗ ಅವರಿಗೆ ಕೊಟ್ಟಿರುವ ಜಲಸಂಪನ್ಮೂಲ ಖಾತೆಗೆ ನ್ಯಾಯ ಒದಗಿಸಲಾರದು. ಅದೇ ಸಮುದಾಯದ ಅತ್ಯುತ್ತಮ ಕೆಲಸಗಾರರಿಗೆ ಈ ಅವಕಾಶ ನೀಡಬಹುದಾಗಿತ್ತು. ಈಗ ರಾಮಲಿಂಗಾರೆಡ್ಡಿಯವರು ಆ ಖಾತೆ ಕೊಟ್ಟಿದ್ದರ ಬಗ್ಗೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ.

ಸತೀಶ್ ಜಾರಕಿಹೊಳಿಯವರು ಸಿದ್ದರಾಮಯ್ಯ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಅತ್ಯುತ್ತಮ ಕೆಲಸ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅವರು ಕೆಪಿಸಿಸಿ ಅಧ್ಯಕ್ಷರಾಗುವ ಹಗಲುಗನಸು ಕಾಣುತ್ತಾ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಲಿಲ್ಲ. ಒಂದು ಬಾರಿ ರಾಜ್ಯ ಸುತ್ತಿ ಬಂದರೆ ಲೋಕೋಪಯೋಗಿ ಇಲಾಖೆಯಲ್ಲಿ ಎಂತಹ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಿವೆ ಎಂಬುದು ಮನದಟ್ಟಾಗುತ್ತದೆ. ಮಂತ್ರಿಯಾದ ಆರಂಭದಲ್ಲಿ ಇದ್ದ ಉತ್ಸಾಹ ನಂತರ ಕಳೆದುಕೊಂಡರು. ವಾಲ್ಮೀಕಿ ಸಮುದಾಯದ ಸತೀಶ್ ಜಾರಕಿಹೊಳಿಯವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡಿದ್ದರೆ ಒಳ್ಳೆಯದಿತ್ತು. ಸತೀಶ್ ಅವರ ಶಕ್ತಿಯೆಂದರೆ ಹಣ ಬಲ ಮತ್ತು ಸೈದ್ಧಾಂತಿಕ ಸ್ಪಷ್ಟತೆ. ವಾಲ್ಮೀಕಿ ಸಮುದಾಯದ ಕ್ರಿಯಾಶೀಲ ಶಾಸಕರಿಗೆ ಮಂತ್ರಿಗಿರಿ ಕೊಡಿಸಲು ಸ್ವತಃ ಜಾರಕಿಹೊಳಿಯವರೇ ಪ್ರಯತ್ನಿಸಬೇಕಿತ್ತು. ಜಾರಕಿಹೊಳಿ ಚಿತಾವಣೆಯಿಂದಲೇ ಕೆ.ಎನ್. ರಾಜಣ್ಣ ಅವಕಾಶ ಕಳೆದುಕೊಂಡಿದ್ದು. ವೋಟ್ ಬ್ಯಾಂಕ್ ರಾಜಕೀಯ ದೃಷ್ಟಿಯಿಂದ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿದ್ದು ಸರಿ ಇದೆ. ಜಾರಕಿಹೊಳಿಯವರು ಲೋಕೋಪಯೋಗಿ ಖಾತೆಯಲ್ಲಿ ಅತ್ಯುತ್ತಮ ಕೆಲಸ ಮಾಡಿ ದಕ್ಷ ಆಡಳಿತಗಾರ ಎಂಬುದು ಸಾಬೀತುಪಡಿಸಬೇಕಿದೆ.

ಲಿಂಗಾಯತ ಕೋಟಾದಲ್ಲಿ ಮಂತ್ರಿಗಿರಿ ಗಿಟ್ಟಿಸಿದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಮತ್ತು ಡಾ. ಶರಣಪ್ರಕಾಶ ಪಾಟೀಲ್ ಅಪ್ಪಟ ಸವಕಲು ನಾಣ್ಯಗಳೇ. ಈ ಮೂವರಲ್ಲಿ ಯಾರೊಬ್ಬರಿಗೂ ನಾಡಿನ ಸಮಸ್ತ ಲಿಂಗಾಯತ ವೋಟ್ ಬ್ಯಾಂಕ್ ನಿಯಂತ್ರಿಸುವ ಸಾಮರ್ಥ್ಯ ಇಲ್ಲ. ಇವರು ಪ್ರತಿನಿಧಿಸುವ ಉಪ ಜಾತಿಗಳ ಸಂಖ್ಯಾ ಬಲ ಬಹಳ ಕಡಿಮೆ. ಈ ಮೂವರಿಗೆ ತಮ್ಮ ಉಪಜಾತಿಯ ಮತಗಳನ್ನು ಸೆಳೆಯುವಷ್ಟು ಪ್ರಭಾವ ಮತ್ತು ವಿಶ್ವಾಸಾರ್ಹತೆ ಇಲ್ಲ. ಕುಡು ಒಕ್ಕಲಿಗ ಸಮುದಾಯದ ಎಂ.ಬಿ. ಪಾಟೀಲ್ ಈ ಹಿಂದೆಯೂ ಮೂರು ಬಾರಿ ಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಅವರ ಮೊದಲ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಆದರೆ ಲಿಂಗಾಯತ ಪ್ರತ್ಯೇಕ ಧರ್ಮದ ಹಿಂದೆ ಬಿದ್ದು ವೀರಶೈವ ಲಿಂಗಾಯತ ಸಮುದಾಯದ ನಾಯಕನಾಗುವ ಅವಕಾಶ ಕಳೆದುಕೊಂಡರು. ಸ್ವಭಾವತಃ ಒಳ್ಳೆಯವರಾದ ಎಂ.ಬಿ. ಪಾಟೀಲ್ ಅವರಿಗೆ ಲಿಂಗಾಯತರಲ್ಲಿನ ಎಲ್ಲ ಉಪಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಇದೆ. ಆದರೆ ಪ್ರಬಲವಾದ ಇಚ್ಛಾ ಶಕ್ತಿ ಇಲ್ಲ. ಲಿಂಗಾಯತ ನಾಯಕತ್ವ ಪಡೆದುಕೊಳ್ಳಬೇಕೆಂದರೆ ಬೀದರ್‌ನಿಂದ ಚಾಮರಾಜನಗರದವರೆಗೆ, ಬೆಳಗಾವಿಯಿಂದ ಚಿಕ್ಕಮಗಳೂರುವರೆಗೆ ಸಂಪರ್ಕ ಜಾಲ ಬೆಳೆಸಬೇಕಾಗುತ್ತದೆ. ನಾಡಿನ ವೀರಶೈವ ಲಿಂಗಾಯತ ಸಮುದಾಯದ ಕಷ್ಟ ಸುಖದಲ್ಲಿ ನಿಲ್ಲಬೇಕಾಗುತ್ತದೆ. ಯಡಿಯೂರಪ್ಪ ಲಿಂಗಾಯತರ ನಾಯಕರಾಗಿ ಬೆಳೆದದ್ದು ಹಾಗೆಯೇ. ಪಕ್ಷದಲ್ಲಿನ ಲಿಂಗಾಯತ ಶಾಸಕರಿಗೆ ಪ್ರತೀ ಹಂತದಲ್ಲಿ ಬಲ ನೀಡಿ ಬೆಂಬಲ ನೀಡಬೇಕು. ಎಂ. ಬಿ. ಪಾಟೀಲರಿಗೆ ಈ ಹೊತ್ತಿಗೂ ವಿಜಯಪುರ ಜಿಲ್ಲೆಯವರಾದ ಶಿವಾನಂದ ಪಾಟೀಲ್ ಮತ್ತು ಯಶವಂತರಾಯಗೌಡ ಪಾಟೀಲ್ ಅವರೊಂದಿಗಿನ ಸಂಬಂಧ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಎಂ.ಬಿ. ಪಾಟೀಲ್ ನಾಯಕರಾಗಿ ರೂಪುಗೊಂಡಿದ್ದು ಅಪ್ಪನ ನಾಮಬಲ ಮತ್ತು ಸಿದ್ದರಾಮಯ್ಯ ಅವರ ರಾಜಕೀಯ ಬಲದ ಮೇಲೆ. ಸಿದ್ದರಾಮಯ್ಯ ಅವರು ಸಕ್ರಿಯ ರಾಜಕೀಯದಿಂದ ದೂರವಾದರೆ ಎಂ.ಬಿ. ಪಾಟೀಲ್ ಬಬಲೇಶ್ವರ್ ಮತಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ. ಆ ಮತ ಕ್ಷೇತ್ರದ ಕುರುಬ ಸಮುದಾಯ ಸಿದ್ದರಾಮಯ್ಯ ಕಾರಣಕ್ಕೆ ಇವರ ಬೆಂಬಲಕ್ಕೆ ನಿಂತಿತ್ತು.

ಈಶ್ವರ್ ಖಂಡ್ರೆ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದರೂ ನಾಡಿನ ಸಮಸ್ತ ವೀರಶೈವ ಲಿಂಗಾಯತ ಸಮುದಾಯದೊಂದಿಗೆ ಕನೆಕ್ಟ್ ಆಗಿಲ್ಲ. ಪೌರಾಡಳಿತ ಸಚಿವರಾಗಿ ಒಂದಷ್ಟು ಉತ್ತಮ ಕೆಲಸ ಮಾಡಿದ್ದ ಈಶ್ವರ್ ಖಂಡ್ರೆಯವರ ಕಳೆದ ಮೂರು ವರ್ಷಗಳ ಅರಣ್ಯ ಪರ್ವ ಸೊನ್ನೆ ಸಾಧನೆಯಲ್ಲಿ ಪರ್ಯಾವಸಾನಗೊಂಡಿದೆ. 2008ರಿಂದ ಶಾಸಕರಾಗಿ ಆಯ್ಕೆಯಾಗುತ್ತಿರುವ ಈಶ್ವರ್ ಖಂಡ್ರೆ ಲಿಂಗಾಯತ ಸಮುದಾಯದ ನಾಯಕನಾಗಿ ಬೆಳೆದು ನಿಲ್ಲುವ ಸಾಕಷ್ಟು ಅವಕಾಶಗಳಿದ್ದವು. ಅಷ್ಟಕ್ಕೂ ಈಶ್ವರ್ ಖಂಡ್ರೆ ಪ್ರತಿನಿಧಿಸುವ ಉಪಜಾತಿಯ ಸಂಖ್ಯಾ ಬಲ ಬಹಳ ಕಡಿಮೆ. ಭಾಲ್ಕಿ ಮತಕ್ಷೇತ್ರದಲ್ಲೇ ಈಶ್ವರ್ ಖಂಡ್ರೆಯವರಿಗೆ ಎಲ್ಲ ಉಪಜಾತಿಯ ಲಿಂಗಾಯತರ ಮತಗಳು ಬೀಳುವುದಿಲ್ಲ. ಅಹಿಂದ ಮತಗಳ ಆಶ್ರಯದಲ್ಲಿ ಇವರ ಗೆಲುವಿನ ಓಟ ಸಾಗಿದೆ. ಸಿದ್ದರಾಮಯ್ಯ ನಾಯಕತ್ವ ಹಿಂದಕ್ಕೆ ಸರಿದರೆ ಇವರ ಗೆಲುವು ಕಷ್ಟವಾಗುತ್ತದೆ. ಸಿದ್ದರಾಮಯ್ಯ ಅವರ ಬಣದವರು ಅನ್ನೋ ಕಾರಣಕ್ಕೆ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆಯೇ ಹೊರತು ಅತ್ಯುತ್ತಮ ಕಾರ್ಯ ನಿರ್ವಹಣೆ ಮತ್ತು ಲಿಂಗಾಯತ ಮತ ಸೆಳೆಯುವ ಶಕ್ತಿ ಇದೆ ಎಂಬ ಕಾರಣಕ್ಕೆ ಅಲ್ಲ. ಅರಣ್ಯ ಖಾತೆಯಲ್ಲೇ ಅತ್ಯುತ್ತಮ ಕೆಲಸ ಮಾಡದ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯಲ್ಲಿ ಏನು ಮಾಡಬಲ್ಲರು?

ಎಂಟು ವರ್ಷಗಳಿಂದ ವೈದ್ಯಕೀಯ ಶಿಕ್ಷಣ ಮಂತ್ರಿಯಾಗಿರುವ ಡಾ. ಶರಣಪ್ರಕಾಶ್ ಪಾಟೀಲ್ ಮಲ್ಲಿಕಾರ್ಜುನ ಖರ್ಗೆಯವರ ಕೋಟಾದಲ್ಲಿ ಮತ್ತೊಮ್ಮೆ ಅದೇ ಖಾತೆಯಲ್ಲಿ ಮುಂದುವರಿದಿದ್ದಾರೆ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದು ಡಾ. ಶರಣಪ್ರಕಾಶ್ ಹೆಗ್ಗಳಿಕೆ. ಆದರೆ ಮೆಡಿಕಲ್ ಕಾಲೇಜು ಮತ್ತು ಅಲ್ಲಿನ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸುವ ಗೋಜಿಗೆ ಹೋಗದ ಶರಣಪ್ರಕಾಶ್ ಮತ್ತೆ ಮತ್ತೆ ಅದೇ ಖಾತೆ ಯಾಕೆ ಪಡೆದುಕೊಳ್ಳುತ್ತಾರೋ ಆ ದೇವರೇ ಬಲ್ಲ. ಬೆಂಗಳೂರು ಜಯದೇವ ಮಾದರಿಯಲ್ಲಿ ಹೊರ ಜಿಲ್ಲೆಗಳಲ್ಲೂ ಜಯದೇವ ಆಸ್ಪತ್ರೆಗಳು ನಿರ್ಮಾಣವಾಗಿವೆ. ಸಾವಿರಾರು ಕೋಟಿ ಹಣ ವ್ಯಯ ಮಾಡಲಾಗಿದೆ. ಆದರೆ ತಜ್ಞ ವೈದ್ಯರು ಮತ್ತು ಗುಣಮಟ್ಟದ ಚಿಕಿತ್ಸೆ ಇಲ್ಲದೆ ಬಣಗುಟ್ಟುತ್ತಿವೆ. ಖುದ್ದು ವೈದ್ಯಕೀಯ ಪದವೀಧರರಾಗಿರುವ ಡಾ. ಶರಣಪ್ರಕಾಶ್ ಪಾಟೀಲ್ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ರೂಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮಂತ್ರಿಯಾಗಿ ವಿಫಲರಾದ ಶರಣಪ್ರಕಾಶ್ ಪಾಟೀಲ್ ಲಿಂಗಾಯತ ನಾಯಕನಾಗಿಯೂ ಹೊರ ಹೊಮ್ಮಿಲ್ಲ. ಲಿಂಗಾಯತರಲ್ಲಿನ ಕಡಿಮೆ ಸಂಖ್ಯಾ ಬಲದ ಆದಿ ಬಣಜಿಗ ಉಪಪಂಗಡಕ್ಕೆ ಸೇರಿರುವ ಇವರು ಸಮುದಾಯದ ಜೊತೆಗೆ ಕನೆಕ್ಟ್ ಆಗಿಲ್ಲ. ಕಲ್ಯಾಣ ಕರ್ನಾಟಕದ ಮಾತು ಬಿಡಿ, ಕಲಬುರಗಿ ಜಿಲ್ಲೆಯ ಲಿಂಗಾಯತರ ಮತ ಸೆಳೆಯುವ ಶಕ್ತಿಯೂ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗಿಲ್ಲ. ಅಹಿಂದ ಮತಗಳ ಋಣದಲ್ಲಿ ಗೆಲುವು ಸಾಧಿಸುವ ಇವರನ್ನು ವೀರಶೈವ ಲಿಂಗಾಯತ ಸಮುದಾಯದವರೇ ಇಷ್ಟ ಪಡುವುದಿಲ್ಲ. ಸಮುದಾಯದ ಯುವಕರನ್ನು ಬೆಳೆಸುವ, ಬೆಂಬಲಕ್ಕೆ ನಿಲ್ಲುವ ಜಾಯಮಾನವೇ ಇವರದಲ್ಲ. ಕಾಂಗ್ರೆಸ್ ಪಕ್ಷಕ್ಕೆ ಇವರು ಬಹು ದೊಡ್ಡ ಹೊರೆ. ಈಗ ಡಿ.ಕೆ. ಶಿವಕುಮಾರ್ ಸಂಪುಟಕ್ಕೆ ಅತಿ ಭಾರವಾಗಿ ಪರಿಣಮಿಸಿದ್ದಾರೆ.

ಹಾಗೆ ನೋಡಿದರೆ ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲ, ಸಮಸ್ತ ನಾಡಿನಲ್ಲಿ ಪಂಚಮಸಾಲಿ ಉಪಜಾತಿಯ ಮತಗಳು ಗಣನೀಯ ಪ್ರಮಾಣದಲ್ಲಿವೆ. ಅವರ ಸಂಖ್ಯಾ ಬಲ ಎಲ್ಲರಿಗಿಂತಲೂ ಹೆಚ್ಚು. ಆದರೆ ಪಂಚಮಸಾಲಿ ಸಮುದಾಯದ ಒಬ್ಬರಿಗೂ ಮಂತ್ರಿಗಿರಿಯ ಅವಕಾಶ ಕಲ್ಪಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಸಚಿವೆಯಾಗಿ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿದ, ಪಂಚಮಸಾಲಿ ಸಮುದಾಯಕ್ಕೆ ಸೇರಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರೆ ಅನುಕೂಲವಾಗುತ್ತಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಕ್ರಿಯಾಶೀಲರು. ಆದರೆ ಆಪ್ತ ಸಹಾಯಕ ಮತ್ತು ತಮ್ಮ ಚೆನ್ನರಾಜ್ ಹಟ್ಟಿಹೊಳಿಯವರ ವಸೂಲಿ ಪ್ರಕರಣಗಳು ಅವರಿಗೆ ಕಳಂಕ ತಂದಿವೆ. ಮಹಿಳಾ ಪ್ರಾತಿನಿಧ್ಯ ಕಲ್ಪಿಸುವಾಗ ಲಕ್ಷ್ಮೀ ಹೆಬ್ಬಾಳ್ಕರ್, ಡಾ. ಉಮಾಶ್ರೀ, ನಯನಾ ಮೋಟಮ್ಮ, ರೂಪಾ ಶಶಿಧರ್ ಅವರನ್ನು ಪರಿಗಣಿಸಬಹುದಿತ್ತು.

ಈ ಹೊತ್ತಿಗೂ ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ತಂದು ಕೊಡುವ ಒಬ್ಬನೇ ಒಬ್ಬ ನಾಯಕನನ್ನು ರೂಪಿಸಲು ಸಾಧ್ಯವಾಗಿಲ್ಲ. ಗೃಹ ಖಾತೆಗೆ ಮಂತ್ರಿಯಾಗಿರುವ ಪ್ರಿಯಾಂಕ್ ಖರ್ಗೆಯವರು ಸೈದ್ಧಾಂತಿಕ ಸ್ಪಷ್ಟತೆಯುಳ್ಳವರು. ಛಲದಿಂದ ಕೆಲಸ ಮಾಡುವ ಹಂಬಲ ಉಳ್ಳವರು. ಕಲಬುರಗಿಯಿಂದ ಚಾಮರಾಜನಗರದವರೆಗೆ ಅನುಯಾಯಿಗಳನ್ನು ಹೊಂದಿರುವ ಪ್ರಿಯಾಂಕ್ ಖರ್ಗೆಯವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿ ದ್ದರೆ ಮುಂಬರುವ ಚುನಾವಣೆ ಎದುರಿಸಲು ಅನುಕೂಲವಾಗುತ್ತಿತ್ತು. ನೂತನ ಸಂಪುಟದಲ್ಲಿ ಮತ್ತೆ ಮಂತ್ರಿಯಾಗಿರುವ ಕೃಷ್ಣ ಬೈರೇಗೌಡರು ಅತ್ಯುತ್ತಮ ಕೆಲಸ ಗಳಿಂದಲೇ ಹೆಸರು ಮಾಡಿದವರು. ಕಂದಾಯ ಮಂತ್ರಿಯಾಗಿ ಗಮನಾರ್ಹ ಕೆಲಸ ಮಾಡಿದ್ದಾರೆ. ಬ್ರಾಂಡ್ ಬೆಂಗಳೂರು ಇಮೇಜ್ ಮರು ಸ್ಥಾಪಿಸಲು ಕೃಷ್ಣ ಬೈರೇಗೌಡರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದ್ದು ಜಾಣ ನಡೆ. ಮತ್ತೆ ಮಂತ್ರಿಯಾಗಿರುವ ಯು.ಟಿ. ಖಾದರ್ ಅತ್ಯುತ್ತಮ ಕೆಲಸಗಾರ. ಆದರೆ ಸೈದ್ಧಾಂತಿಕ ಸ್ಪಷ್ಟತೆಯಿಲ್ಲ. ಮುಸ್ಲಿಮ್ ಸಮುದಾಯದಲ್ಲೂ ಛಾಪು ಮೂಡಿಸಿಲ್ಲ. ಈ ಮೊದಲು ಆರೋಗ್ಯ ಮಂತ್ರಿಯಾಗಿ ಅತ್ಯುತ್ತಮ ಕೆಲಸ ಮಾಡಿದ್ದರು. ಈಗಲೂ ಅದೇ ಖಾತೆ ದೊರೆತಿದೆ. ಒಳ್ಳೆಯ ಕೆಲಸ ಮಾಡಬಹುದು. ಸಿದ್ದರಾಮಯ್ಯ ಅವರ ಪುತ್ರ ಸಂಪುಟ ಸೇರುವುದು ಅನಿವಾರ್ಯವಾಗಿತ್ತು. ಕುರುಬ ಸಮುದಾಯದಿಂದ ಉತ್ತರ ಕರ್ನಾಟಕದ ಯುವ ಶಾಸಕನನ್ನು ಮಂತ್ರಿಗಿರಿಗೆ ಆಯ್ಕೆ ಮಾಡಿದ್ದರೆ ಚುನಾವಣೆಯ ದೃಷ್ಟಿಯಿಂದ ಅನುಕೂಲವಾಗುತ್ತಿತ್ತು. ಬೈರತಿ ಸುರೇಶ್ ಕಳೆದ ಮೂರು ವರ್ಷಗಳಿಂದ ನಗರಾಭಿವೃದ್ಧಿ ಖಾತೆಯಲ್ಲಿ ವಿಶೇಷವಾದದ್ದು ಏನೂ ಮಾಡಿಲ್ಲ. ಅವರಿಗೆ ಈಗ ಸಾರಿಗೆ ಖಾತೆ ನೀಡಿ ಸಿದ್ದರಾಮಯ್ಯರಿಗೆ ಖುಷಿಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಸಣ್ಣಪುಟ್ಟ ಹಿಂದುಳಿದ ಸಮುದಾಯಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಸಂತೋಷ್‌ಲಾಡ್ ಕಾರ್ಮಿಕ ಮಂತ್ರಿಯಾಗಿ ಗಮನ ಸೆಳೆದಿದ್ದರು. ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ಪುತ್ರ ಡಾ. ಅಜಯ್ ಸಿಂಗ್, ಡಾ. ಉಮಾಶ್ರೀ, ಹಿರಿಯ ಹಾಗೂ ಅನುಭವಿ ಶಾಸಕರಾದ ಎಚ್.ಕೆ. ಪಾಟೀಲರನ್ನು ಸಂಪುಟದಿಂದ ಹೊರಗೆ ಇಡಬಾರದಿತ್ತು. ಮೂರು ಬಾರಿ ಶಾಸಕರಾಗಿರುವ ರಘುಮೂರ್ತಿ, ಯಶವಂತರಾಯಗೌಡ, ಅಬ್ಬಯ್ಯ ಪ್ರಸಾದ್ ಮುಂತಾದವರಿಗೆ ಮೊದಲ ಕಂತಿನಲ್ಲೇ ಅವಕಾಶ ನೀಡಬಹುದಿತ್ತು.

ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹಾಗೆಯೇ ಬಸವರಾಜ ಬೊಮ್ಮಾಯಿ ಅವರಿಗೂ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿತ್ತು. ಅದಕ್ಷ ಮಂತ್ರಿಗಳು, ಮತೀಯ ಭಾವನೆ ಆವಾಹಿಸಿಕೊಂಡ ಮುಖ್ಯಮಂತ್ರಿ ಮತ್ತು ಸಂಘ ಪರಿವಾರದ ಹುಚ್ಚಾಟಗಳಿಂದಾಗಿ ಜನರ ತಿರಸ್ಕಾರಕ್ಕೆ ಒಳಗಾಗಬೇಕಾಯಿತು. ಬೊಮ್ಮಾಯಿ ನಿದರ್ಶನವನ್ನು ಪಾಠವಾಗಿ ಸ್ವೀಕರಿಸಿದ್ದರೆ ಡಿ.ಕೆ. ಶಿವಕುಮಾರ್ ಸಾಮಾಜಿಕ ನ್ಯಾಯದ ಮತ್ತು ಕ್ರಿಯಾಶೀಲರ ಸಂಪುಟ ರಚಿಸಿಕೊಳ್ಳುತ್ತಿದ್ದರು.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ನಂತರ ಮಾಧ್ಯಮ ಸಹಕಾರದ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದ್ದಾರೆ. ಸರಕಾರ ಅತ್ಯುತ್ತಮ ಕೆಲಸ ಮಾಡಿ, ಯೋಜನೆಗಳನ್ನು ಮತದಾರರಿಗೆ ತಲುಪಿಸಿದರೆ ಮಾಧ್ಯಮಗಳ ವಿರೋಧದ ನಡುವೆಯೂ ಉತ್ತಮ ಸಾಧನೆ ಮಾಡಬಹುದು. ಪಿಣರಾಯಿ ಸರಕಾರ ಒಂದು ಮಾದರಿ. ಅತ್ಯುತ್ತಮ ಆಡಳಿತದ ಕಾರಣಕ್ಕೆ ಸತತ ಎರಡನೇ ಅವಧಿಗೆ ಜನಾದೇಶ ಪಡೆದುಕೊಂಡಿದ್ದರು.

ಕೆಟ್ಟ ಆಡಳಿತ ನೀಡಿ ಎಷ್ಟೇ ಮಾಧ್ಯಮಗಳ ಬೆಂಬಲ ಪಡೆದರೂ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಸರಕಾರದ ಮೌಲ್ಯ ಮಾಪನ ಮಾಡುವಲ್ಲಿ ಕರ್ನಾಟಕದ ಮತದಾರರು ಜಾಣರು. ಎಸ್.ಎಂ. ಕೃಷ್ಣ ಸರಕಾರಕ್ಕೆ ಮಾಧ್ಯಮಗಳು ಅತಿಯಾದ ಪ್ರಚಾರ ನೀಡಿದ್ದವು. ಆದರೆ ಕೆಟ್ಟ ಆಡಳಿತ ನೀಡಿದ್ದರ ಫಲವಾಗಿ 2004ರ ಚುನಾವಣೆಯಲ್ಲಿ ಹೀನಾಯವಾಗಿ ಸೋಲಬೇಕಾಯಿತು. ಬೊಮ್ಮಾಯಿ ಮತ್ತು ಎಸ್.ಎಂ. ಕೃಷ್ಣ ಸರಕಾರಗಳ ವೈಫಲ್ಯಗಳನ್ನು ಡಿ.ಕೆ. ಶಿವಕುಮಾರ್ ಅವರು ನಿದರ್ಶನವಾಗಿಟ್ಟುಕೊಂಡರೆ ದಕ್ಷ, ಪ್ರಾಮಾಣಿಕ ಮತ್ತು ಕ್ರಿಯಾಶೀಲರ ತಂಡ ಕಟ್ಟಿಕೊಂಡು ಗೆಲುವಿನ ದಡ ತಲುಪುತ್ತಾರೆ. ಇಲ್ಲದಿದ್ದರೆ ಇತಿಹಾಸ ಪುನರಾವರ್ತನೆಯಾಗುತ್ತದೆಯಷ್ಟೇ.

Tags

New Cabinet
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X