Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ರಾಜ್ಯಕ್ಕೆ ನೂತನ ರಾಜ್ಯಪಾಲರು

ರಾಜ್ಯಕ್ಕೆ ನೂತನ ರಾಜ್ಯಪಾಲರು

ಡಾ .ರಾಜಶೇಖರ ಹತಗುಂಡಿಡಾ .ರಾಜಶೇಖರ ಹತಗುಂಡಿ24 Oct 2026 9:57 AM IST
share
ರಾಜ್ಯಕ್ಕೆ ನೂತನ ರಾಜ್ಯಪಾಲರು

ಕರ್ನಾಟಕ ರಾಜ್ಯಕ್ಕೆ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳ ಮತ್ತು ಪ್ರಾಮಾಣಿಕ ರಾಜ್ಯಪಾಲರ ಅಗತ್ಯವಿತ್ತು. ಕರ್ನಾಟಕದ ವಿಶ್ವವಿದ್ಯಾನಿಲಯಗಳು ದಿಕ್ಕೆಟ್ಟ ಸ್ಥಿತಿಯಲ್ಲಿರುವಾಗ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ತಿಳಿವಳಿಕೆ ಮತ್ತು ಒಲವುಳ್ಳ ಡಾ. ಸುಧಾ ಯಾದವ್ ಅವರು ರಾಜ್ಯಪಾಲರಾಗಿ ಆಗಮಿಸಿದ್ದು ಆಶಾದಾಯಕ ಬೆಳವಣಿಗೆಯೇ ಸರಿ. ಶೈಕ್ಷಣಿಕ ವಲಯದ ಒಳ ಹೊರಗನ್ನು ಬಲ್ಲ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಏನನ್ನಾದರೂ ಮಾಡಬೇಕು ಎಂಬ ಹಂಬಲವುಳ್ಳ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಲೋಕಭವನವನ್ನು ಶುದ್ಧೀಕರಿಸಿದರೆ ಅರ್ಧ ಯಶಸ್ಸು ಪಡೆದಂತೆ.

ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದೆ. ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೌರವಾನ್ವಿತ ಥಾವರ್ ಚಂದ್ ಗೆಹ್ಲೋಟ್ ಅವರ ಐದು ವರ್ಷಗಳ ಅಧಿಕಾರಾವಧಿ ಜುಲೈ ತಿಂಗಳಲ್ಲೇ ಮುಗಿದಿತ್ತು. ರಾಜ್ಯಪಾಲರ ಅಧಿಕಾರಾವಧಿ ಐದು ವರ್ಷಕ್ಕೆ ನಿಗದಿಯಾಗಿದ್ದರೂ ಒಂದೆರಡು ವರ್ಷಗಳ ಕಾಲ ವಿಸ್ತರಣೆ ಮಾಡಿದ ನಿದರ್ಶನಗಳು ಇವೆ.

ರಾಜ್ಯಪಾಲರ ಹುದ್ದೆ ಅತ್ಯಂತ ಗೌರವಾನ್ವಿತವಾದುದು. ಸಕ್ರಿಯ ರಾಜಕಾರಣದಲ್ಲಿ ಇರಲು ಅಪೇಕ್ಷಿಸುವವರು ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಲು ಒಪ್ಪುವುದಿಲ್ಲ. ಒಂದು ವೇಳೆ ಯಾವುದೋ ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಕ ಮಾಡಿದರೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ವಿಶೇಷವಾಗಿ ಅಧಿಕಾರ ರಾಜಕಾರಣದ ಭಾಗವಾಗಿರುವ ರಾಜಕಾರಣಿಗಳಿಗೆ ರಾಜ್ಯಪಾಲರ ಹುದ್ದೆ ಒತ್ತಾಯದ ನೇಮಕ ಎನಿಸಿಕೊಳ್ಳುತ್ತದೆ. ಶಿಕ್ಷಣ ತಜ್ಞರು, ಆಡಳಿತಗಾರರು ರಾಜ್ಯಪಾಲರ ಹುದ್ದೆಯನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಒಪ್ಪಿಕೊಳ್ಳುತ್ತಾರೆ. ಅಷ್ಟು ಮಾತ್ರವಲ್ಲ, ಯಾವುದೇ ರಾಜ್ಯದ ರಾಜ್ಯಪಾಲರ ಹುದ್ದೆ ದೊರೆತರೂ ಸ್ಥಳೀಯರೊಂದಿಗೆ ಬೆರೆತು ಆ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ.

ಇಲ್ಲಿಯವರೆಗೆ ಕರ್ನಾಟಕ, ಹತ್ತೊಂಭತ್ತು ರಾಜ್ಯಪಾಲರನ್ನು ಕಂಡಿದೆ. ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಡಾ. ಸುಧಾ ಯಾದವ್ ಅವರು ಇಪ್ಪತ್ತನೆಯ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ವಿಭು ಬಖರು ಅವರು ನೂತನ ರಾಜ್ಯಪಾಲರಿಗೆ ಪ್ರಮಾಣ ವಚನವನ್ನು ಬೋಧಿಸಿದ್ದಾರೆ.

ಕರ್ನಾಟಕದ ಮೊದಲ ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ರಾಜಮನೆತನಕ್ಕೆ ಸೇರಿದವರು. 1956ರಿಂದ 1963ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ ಅವರು ಯಾವುದೇ ಪಕ್ಷಕ್ಕೆ ಸೇರಿಕೊಳ್ಳದ ಪಕ್ಷಾತೀತವಾಗಿದ್ದರು. ಆದರೆ ನಂತರ ಬಂದ ಬಹುತೇಕ ರಾಜ್ಯಪಾಲರು ಪಕ್ಷ ರಾಜಕಾರಣ ಮತ್ತು ಅಧಿಕಾರ ರಾಜಕಾರಣದ ಭಾಗವಾಗಿದ್ದವರು. ಜನತಂತ್ರದ ಮೂಲಕ ಸ್ಥಾನಮಾನ ಪಡೆದುಕೊಂಡವರು. ಅಷ್ಟು ಮಾತ್ರವಲ್ಲ, ರಾಜ್ಯಪಾಲರ ಹುದ್ದೆ ಅಲಂಕರಿಸಿದ ಎಲ್ಲರೂ ಅತ್ಯುನ್ನತ ಶೈಕ್ಷಣಿಕ ಹಿನ್ನೆಲೆಯುಳ್ಳವರಾಗಿದ್ದರು. ಕರ್ನಾಟಕದ ರಾಜ್ಯಪಾಲರಾಗಿದ್ದ ಧರ್ಮವೀರ, ಗೋವಿಂದ್ ನಾರಾಯಣ, ಶ್ರೀಮತಿ ವಿ. ಎಸ್. ರಮಾದೇವಿ, ಟಿ.ಎನ್. ಚತುರ್ವೇದಿ ಅವರು ಭಾರತೀಯ ಆಡಳಿತ ಸೇವೆಯಲ್ಲಿದ್ದು ರಾಜಕಾರಣಕ್ಕೆ ಬಂದವರಾಗಿದ್ದರು. ಡಾ. ವಿ.ವಿ. ಗಿರಿ, ಉಮಾಶಂಕರ್ ದೀಕ್ಷಿತ್, ಅಶೋಕ್ ನಾಥ್ ಬ್ಯಾನರ್ಜಿ, ಖುರ್ಷಿದ್ ಆಲಂ ಖಾನ್, ರಾಮೇಶ್ವರ್ ಠಾಕೂರ್, ಎಚ್.ಆರ್. ಭಾರದ್ವಾಜ್, ವಜುಭಾಯಿ ವಾಲಾ, ಥಾವರ್ ಚಂದ್ ಗೆಹ್ಲೋಟ್ ಮುಂತಾದವರು ಪಕ್ಷ ರಾಜಕಾರಣದಲ್ಲಿದ್ದವರು. ಶಾಸಕರಾಗಿ, ಲೋಕಸಭಾ ಸದಸ್ಯರಾಗಿ, ಕೇಂದ್ರ ಮತ್ತು ರಾಜ್ಯಗಳಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಉತ್ತಮ ಆಡಳಿತ ನೀಡಿ ಜನಪ್ರಿಯರಾದವರು. ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ ಕೆಲವರು ಮಾತ್ರ ಹುದ್ದೆಯ ಘನತೆ ಗೌರವ ಕಾಪಾಡಿಕೊಳ್ಳಲು ವಿಫಲರಾದರು. ಆದರೆ ಬಹುತೇಕ ರಾಜ್ಯಪಾಲರು ಹುದ್ದೆಯ ಘನತೆ ಗೌರವ ಹೆಚ್ಚಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಪಕ್ಷದ ಹೈಕಮಾಂಡ್ ಎಷ್ಟೇ ಒತ್ತಡ ಹೇರಿದರೂ ಪಕ್ಷಾತೀತವಾಗಿ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದ್ದಾರೆ.

ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ಸಂಘರ್ಷ ಸರ್ವೇ ಸಾಮಾನ್ಯವಾಗಿದೆ. ಕೇರಳಂ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸರಕಾರ -ರಾಜ್ಯಪಾಲರ ನಡುವಿನ ಸಂಘರ್ಷ ಕೆಲವೊಮ್ಮೆ ತಾರಕಕ್ಕೆ ಮುಟ್ಟಿದೆ.

ಆದರೆ ಕರ್ನಾಟಕದಲ್ಲಿ ಮಾತ್ರ ಸರಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ವಿರಳಾತಿ ವಿರಳ. ಕರ್ನಾಟಕಕ್ಕೆ ದೊರೆತ ಬಹುಪಾಲು ರಾಜ್ಯಪಾಲರು ಪಕ್ಷಭೇದ ಮರೆತು ಕಾರ್ಯ ನಿರ್ವಹಿಸಿದ ಅಪರೂಪದ ಸಜ್ಜನರು. ಕರ್ನಾಟಕ ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ಕೇಂದ್ರ ಸರಕಾರ ಮತ್ತು ರಾಜ್ಯಪಾಲರೊಂದಿಗೆ ಅತ್ಯುತ್ತಮ ಸಂಬಂಧ ಹೊಂದಲು ಅಪೇಕ್ಷಿಸಿದವರು.

ಒಂದು ರಾಜ್ಯದ ರಾಜ್ಯಪಾಲರ ಹುದ್ದೆ ಕೇವಲ ಗೌರವದ ಸಂಕೇತವಾಗಿಲ್ಲ. ರಾಜ್ಯ ಸರಕಾರ ಜನ ವಿರೋಧಿಯಾಗಿ ನಡೆದುಕೊಂಡಾಗ, ಕಾನೂನು ಬಾಹಿರ ನಿರ್ಧಾರ ಕೈಗೊಳ್ಳುವಾಗ ಕಿವಿ ಹಿಂಡಿ ಸರಿದಾರಿಗೆ ತರುವ ಹೊಣೆಗಾರಿಕೆ ಅವರದು. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ, ಮಾಹಿತಿ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ, ವಿಧಾನ ಪರಿಷತ್ತಿನ ಸದಸ್ಯರ ನಾಮನಿರ್ದೇಶನದಲ್ಲಿ ಗೌರವಾನ್ವಿತ ರಾಜ್ಯಪಾಲರು ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ರಾಜ್ಯ ಸರಕಾರ ಅನರ್ಹರ ನಾಮನಿರ್ದೇಶನಕ್ಕೆ ಮುಂದಾದಾಗ ಅದನ್ನು ಪ್ರಶ್ನೆ ಮಾಡುವ ದಿಟ್ಟತನ ಪ್ರದರ್ಶಿಸಬೇಕಾಗುತ್ತದೆ. ವಿಶೇಷವಾಗಿ ಕರ್ನಾಟಕದ ವಿಶ್ವವಿದ್ಯಾನಿಲಯಗಳ ಹಣೆಬರಹ ನಿರ್ಧರಿಸುವ ಪರಮಾಧಿಕಾರ ಇರುವುದೇ ಗೌರವಾನ್ವಿತ ರಾಜ್ಯಪಾಲರಿಗೆ.

ಕರ್ನಾಟಕದಲ್ಲಿ 42 ಸರಕಾರಿ ವಿಶ್ವವಿದ್ಯಾನಿಲಯಗಳಿವೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಖಾಸಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಖಾಸಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದಂತೆ ಸರಕಾರಿ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಕರ್ನಾಟಕದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯೂ ಆಗಿರುವ ಗೌರವಾನ್ವಿತ ರಾಜ್ಯಪಾಲರು ಮನಸ್ಸು ಮಾಡಿದರೆ ಉನ್ನತ ಶಿಕ್ಷಣದ ಸಂಪೂರ್ಣ ಚಹರೆ ಬದಲಿಸಬಹುದಾಗಿದೆ.

ಕಳೆದ ಹದಿನೈದು ವರ್ಷಗಳಿಂದ ಈಚೆಗೆ ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಗುಣಮಟ್ಟ ಕುಸಿಯುವಂತಾಗಿದೆ. ಉನ್ನತ ಶಿಕ್ಷಣ ಬಿಕ್ಕಟ್ಟು ಎದುರಿಸುತ್ತಿದೆ. ಉನ್ನತ ಶಿಕ್ಷಣದ ಎಲ್ಲ ಸಮಸ್ಯೆಗಳಿಗೆ ಗೌರವಾನ್ವಿತ ರಾಜ್ಯಪಾಲರು ಮತ್ತು ಲೋಕಭವನವನ್ನು ಹೊಣೆಗಾರರನ್ನಾಗಿ ಮಾಡಲಾಗದು. ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಗುಣಮಟ್ಟ ಕುಸಿಯಲು ಮತ್ತು ಉನ್ನತ ಶಿಕ್ಷಣ ಅಧೋಗತಿ ತಲುಪಲು ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಬಂದು ಹೋಗಿರುವ ಎಲ್ಲ ಪಕ್ಷಗಳ ಸರಕಾರಗಳು ಕಾರಣ. ವಿಶೇಷವಾಗಿ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರು ಹೊಣೆ ಹೊರಬೇಕಾಗುತ್ತದೆ. ಈ ಅವಧಿಯಲ್ಲಿ ಬಂದು ಹೋದ ರಾಜ್ಯಪಾಲರು ತುಸು ಕಠಿಣ ನಿರ್ಧಾರ ತೆಗೆದುಕೊಂಡು ರಾಜ್ಯ ಸರಕಾರಗಳಿಗೆ ಕಿವಿ ಹಿಂಡಿದ್ದರೆ ಸರಕಾರಿ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕವಾಗಿ ಉನ್ನತ ಮಟ್ಟದಲ್ಲಿ ಇರುತ್ತಿದ್ದವು.

ಎರಡು ದಶಕಗಳ ಹಿಂದೆ ವಿಧಾನ ಪರಿಷತ್ತಿನ ಸದಸ್ಯರ ನಾಮನಿರ್ದೇಶನ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿತ್ತು. ಸಾಹಿತ್ಯ, ಕಲೆ, ಶಿಕ್ಷಣ ಮತ್ತು ಸಮಾಜ ಸೇವೆಯ ನಾಮ ನಿರ್ದೇಶನಕ್ಕೆ ಆಯಾ ಕ್ಷೇತ್ರದ ಗಣ್ಯರನ್ನೇ ಪಕ್ಷಾತೀತವಾಗಿ ಪರಿಗಣಿಸಲಾಗುತ್ತಿತ್ತು. ಮುಖ್ಯಮಂತ್ರಿಯಾದವರು ನಿರ್ದಿಷ್ಟ ಪಡಿಸಿದ ಕ್ಷೇತ್ರ ಹೊರತುಪಡಿಸಿ ಸಕ್ರಿಯ ರಾಜಕಾರಣದಲ್ಲಿ ಇದ್ದವರ ಹೆಸರು ಕಳುಹಿಸಿಕೊಟ್ಟರೆ ಗೌರವಾನ್ವಿತ ರಾಜ್ಯಪಾಲರು ಮುಲಾಜಿಲ್ಲದೆ ಹಿಂದಿರುಗಿಸುತ್ತಿದ್ದರು.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಬೀದರ್ ಜಿಲ್ಲೆಯ ಬಂಡೆಪ್ಪ ಕಾಶೇಂಪುರ ಅವರ ಹೆಸರನ್ನು ಸಹಕಾರ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ತಿನ ಸದಸ್ಯರ ನಾಮನಿರ್ದೇಶನಕ್ಕಾಗಿ ಕಳುಹಿಸಿ ಕೊಟ್ಟಿದ್ದರು. ಆದರೆ ಅಂದಿನ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿಯವರು ಮುಖ್ಯಮಂತ್ರಿ ಕಳುಹಿಸಿದ ಹೆಸರನ್ನು ಅನುಮೋದನೆ ಮಾಡಲಿಲ್ಲ. ಅನಿವಾರ್ಯವಾಗಿ ಎಸ್.ಎಂ. ಕೃಷ್ಣ ಅವರು ಕನ್ನಡದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಹೆಸರನ್ನು ಶಿಫಾರಸು ಮಾಡಿದರು. ರಾಜ್ಯಪಾಲರು ನಿಯಮ ಪಾಲನೆ ಮಾಡಿದ್ದರಿಂದ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ವಿಧಾನಪರಿಷತ್ತಿನ ಸದಸ್ಯರಾಗಲು ಸಾಧ್ಯವಾಯಿತು.

ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸಿದ ಬಹುತೇಕ ರಾಜ್ಯಪಾಲರು ರಾಜಭವನದ ಘನತೆ ಗೌರವ ಹೆಚ್ಚಿಸಿದ್ದಾರೆ. ಪ್ರಾಮಾಣಿಕರು, ದಕ್ಷರು ಮತ್ತು ಉನ್ನತ ವಿಚಾರಧಾರೆಯ ರಾಜ್ಯಪಾಲರು ಕರ್ನಾಟಕದ ಹಿತ ಕಾಪಾಡಿದ್ದಾರೆ. ನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಘನತೆವೆತ್ತ ಎಲ್ಲ ರಾಜ್ಯಪಾಲರ ಕಾಯಕ ನಿಷ್ಠೆಯನ್ನು ಕರ್ನಾಟಕದ ಜನತೆ ಸದಾ ಕಾಲ ಸ್ಮರಿಸಿಕೊಳ್ಳುತ್ತದೆ. ಆದರೆ ಒಂದಿಬ್ಬರು ಮಾತ್ರ, ಕರ್ನಾಟಕದ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿ ಲೋಕ ಭವನಕ್ಕೆ ಕಳಂಕ ಅಂಟಿಸಿದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೇಂದ್ರ ಸರಕಾರದಲ್ಲಿ ಕಾನೂನು ಸಚಿವರಾಗಿದ್ದ ಎಚ್.ಆರ್. ಭಾರದ್ವಾಜ್ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾದಾಗ ನಾಡಿನ ಜನರು ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುವುದು ಭಾರತ ದೇಶಕ್ಕೆ ಹೊಸತೇನಲ್ಲ. ಆದರೆ ವಿಶ್ವವಿದ್ಯಾನಿಲಯಗಳಿಗೆ ಅಯೋಗ್ಯ ಮತ್ತು ಭ್ರಷ್ಟರನ್ನು ಕುಲಪತಿಯನ್ನಾಗಿ ನೇಮಿಸಿ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಕಲುಷಿತಗೊಳಿಸುವ ಕೆಲಸಕ್ಕೆ ಕುಮ್ಮಕ್ಕು ದೊರೆತದ್ದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ಅಧಿಕಾರಾವಧಿಯಲ್ಲಿ. ಕುಲಪತಿಗಳ ನೇಮಕಾತಿ ಮಾತ್ರವಲ್ಲ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯಲ್ಲೂ ಸಾಕಷ್ಟು ಅಕ್ರಮಗಳು ನಡೆದವು. ಎಚ್.ಆರ್. ಭಾರದ್ವಾಜ್ ಅವರ ಅಧಿಕಾರಾವಧಿಯಲ್ಲಿ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ ಎಲ್ಲರ ಅನುಭವ ಕಹಿಯಾಗಿದೆ. ಎಷ್ಟೋ ಜನ ಅರ್ಹರಿಗೆ ಅವಕಾಶ ತಪ್ಪಿದ ನಿದರ್ಶನಗಳಿವೆ. ನಂತರ ರಾಜ್ಯಪಾಲರಾಗಿ ಬಂದ ಗುಜರಾತ್ ಮೂಲದ ವಜುಭಾಯಿ ವಾಲಾ ಅವರು ವ್ಯವಸ್ಥೆ ಸರಿಪಡಿಸಲು ಸಾಕಷ್ಟು ಶ್ರಮ ಹಾಕಬೇಕಾಯಿತು. ವಜುಬಾಯಿ ವಾಲಾ ಅವರ ಅವಧಿಯಲ್ಲಿ ಲೋಕಭವನ ಕಳಂಕ ರಹಿತವಾಗಿತ್ತು. ಆದರೆ ಲೋಕಭವನದ ಹೆಸರು ಬಳಸಿಕೊಂಡು ಕೆಲವರು ಅಕ್ರಮ ಎಸಗಿದರು. ಎಚ್.ಆರ್. ಭಾರದ್ವಾಜ್ ಅಧಿಕಾರಾವಧಿಗೆ ಹೋಲಿಸಿದರೆ, ವಜುಭಾಯಿ ವಾಲಾ ಅವರ ಅವಧಿ ಅತ್ಯುತ್ತಮವಾಗಿತ್ತು.

ಕರ್ನಾಟಕದ ಲೋಕಭವನದ ಬಗ್ಗೆ ಜನಸಾಮಾನ್ಯರು ಆಡಿಕೊಳ್ಳುವಂತಾಗಿದ್ದು ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಮೇಲೆ. ಕುಲಪತಿ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮಗಳು ನಡೆದವು. ಲೋಕಭವನ ಒಮ್ಮೆಯೂ ನಿರಾಕರಣೆ ಮಾಡಲಿಲ್ಲ. ಕೇಂದ್ರದಲ್ಲಿ ಸಾಮಾಜಿಕ ನ್ಯಾಯದ ಸಚಿವರಾಗಿದ್ದ ಗೌರವಾನ್ವಿತ ಥಾವರ್ ಚಂದ್ ಗೆಹ್ಲೋಟ್ ಅವರು ಲೋಕಭವನದ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಯಲು ಗಂಭೀರ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದ ಅನೇಕ ಜನ ಹಿರಿಯರಿಗೆ ಅಲ್ಲಿಯ ವಿದ್ಯಮಾನಗಳ ಅರಿವಿತ್ತು.

ಈಗ ಕರ್ನಾಟಕದ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರು ನೇಮಕಗೊಂಡಿದ್ದಾರೆ. ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳವರು. ಹರ್ಯಾಣ ಮೂಲದ ಡಾ. ಸುಧಾ ಯಾದವ್ ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದವರು. ಚಿನ್ನದ ಪದಕದೊಂದಿಗೆ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ರಾಜ್ಯಪಾಲರು, ರೂರ್ಕಿ ಐಐಟಿಯಲ್ಲಿ ಪಿಎಚ್.ಡಿ. ಪಡೆದಿದ್ದಾರೆ (ರಸಾಯನ ಶಾಸ್ತ್ರದಲ್ಲಿ). ಡಾ. ಸುಧಾ ಯಾದವ್ ಅವರ ಪತಿ ಸುಖಬೀರ್ ಸಿಂಗ್ ಯಾದವ್ ಅವರು, ಭಾರತೀಯ ಸೇನೆಯಲ್ಲಿ ಡೆಪ್ಯುಟಿ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಗಿಲ್ ಯುದ್ಧದಲ್ಲಿ ವೀರೋಚಿತವಾಗಿ ಹೋರಾಡಿ ಪ್ರಾಣ ಬಲಿದಾನ ಮಾಡಿದವರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 1999ರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರನ್ನು ಹರ್ಯಾಣ ರಾಜ್ಯದ ಲೋಕಸಭಾ ಚುನಾವಣೆಯ ಉಸ್ತುವಾರಿಯಾಗಿ ನಿಯೋಜಿಸಲಾಗಿತ್ತು. ಆಗ ನರೇಂದ್ರ ಮೋದಿಯವರ ಅನ್ವೇಷಣೆಯ ಫಲವಾಗಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದ ಡೆಪ್ಯುಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್ ಅವರ ಪತ್ನಿ ಡಾ. ಸುಧಾ ಯಾದವ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನೀಡಲಾಯಿತು. ಅಂದಿನ ದಿನಮಾನಗಳಲ್ಲಿ ಹರ್ಯಾಣ ಸಂಪೂರ್ಣ ಕಾಂಗ್ರೆಸ್‌ಮಯವಾಗಿತ್ತು. ಮಹೇಂದ್ರ ಘಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ. 1999ರ ಲೋಕಸಭಾ ಚುನಾವಣೆಯಲ್ಲಿ ಮಹೇಂದ್ರ ಘಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಡಾ. ಸುಧಾ ಯಾದವ್ ಅವರು ಕಾಂಗ್ರೆಸ್ ಅಭ್ಯರ್ಥಿ ರಾವ್ ಇಂದ್ರಜಿತ್ ಸಿಂಗ್ ಅವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದರು. ಸುಷ್ಮಾ ಸ್ವರಾಜ್ ನಂತರ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಡಾ. ಸುಧಾ ಯಾದವ್ ಅವರಿಗೆ ಸ್ಥಾನ ಕಲ್ಪಿಸಲಾಗಿತ್ತು. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯರಾಗಿಯೂ ಇವರು ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳ ಮತ್ತು ಪ್ರಾಮಾಣಿಕ ರಾಜ್ಯಪಾಲರ ಅಗತ್ಯವಿತ್ತು. ಕರ್ನಾಟಕದ ವಿಶ್ವವಿದ್ಯಾನಿಲಯಗಳು ದಿಕ್ಕೆಟ್ಟ ಸ್ಥಿತಿಯಲ್ಲಿರುವಾಗ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ತಿಳಿವಳಿಕೆ ಮತ್ತು ಒಲವುಳ್ಳ ಡಾ. ಸುಧಾ ಯಾದವ್ ಅವರು ರಾಜ್ಯಪಾಲರಾಗಿ ಆಗಮಿಸಿದ್ದು ಆಶಾದಾಯಕ ಬೆಳವಣಿಗೆಯೇ ಸರಿ. ಶೈಕ್ಷಣಿಕ ವಲಯದ ಒಳ ಹೊರಗನ್ನು ಬಲ್ಲ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಏನನ್ನಾದರೂ ಮಾಡಬೇಕು ಎಂಬ ಹಂಬಲವುಳ್ಳ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಲೋಕಭವನವನ್ನು ಶುದ್ಧೀಕರಿಸಿದರೆ ಅರ್ಧ ಯಶಸ್ಸು ಪಡೆದಂತೆ. ಕರ್ನಾಟಕದ ಜನ ಋಣ ಪ್ರಜ್ಞೆಯುಳ್ಳವರು. ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಕರ್ನಾಟಕದ 41 ವಿಶ್ವವಿದ್ಯಾನಿಲಯಗಳಿಗೆ ಕಾಯಕಲ್ಪ ನೀಡಿದರೆ, ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪಾರದರ್ಶಕತೆ ತಂದರೆ ಮಹದುಪಕಾರವಾಗುತ್ತದೆ. ನಿಜವಾದ ಸಾಹಿತಿ, ಕಲಾವಿದರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಪರಿಪಾಠ ತಪ್ಪಿ ಹೋಗಿದೆ. ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳವರು ಮಾತ್ರ ಕರ್ನಾಟಕದ ಶೈಕ್ಷಣಿಕ ಆರೋಗ್ಯಕ್ಕೆ ಮದ್ದು ಕಂಡುಕೊಳ್ಳಬಲ್ಲರು. ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಕರ್ನಾಟಕ ಮರೆಯಲಾಗದ ಅತ್ಯುತ್ತಮ ಕಾರ್ಯ ಮಾಡಬಲ್ಲರು ಎಂದು ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ. ಕರ್ನಾಟಕ ಇಂಥ ರಾಜ್ಯಪಾಲರ ನಿರೀಕ್ಷೆಯಲ್ಲಿತ್ತು.

(ಅಂಕಣಕಾರರು ಹಿರಿಯ ಲೇಖಕರು, ಪತ್ರಕರ್ತರು)

Tags

New Governor of KarnatakaKarnataka
share
ಡಾ .ರಾಜಶೇಖರ ಹತಗುಂಡಿ
ಡಾ .ರಾಜಶೇಖರ ಹತಗುಂಡಿ
Next Story
X