Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಸರಕಾರಿ ವಿ.ವಿ.ಗಳಿಗೆ ಬಜೆಟ್ ಬೆಂಬಲವಿಲ್ಲ

ಸರಕಾರಿ ವಿ.ವಿ.ಗಳಿಗೆ ಬಜೆಟ್ ಬೆಂಬಲವಿಲ್ಲ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ14 March 2026 1:23 PM IST
share
ಸರಕಾರಿ ವಿ.ವಿ.ಗಳಿಗೆ ಬಜೆಟ್ ಬೆಂಬಲವಿಲ್ಲ

ಕರ್ನಾಟಕದ ಅಸಂಖ್ಯಾತ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಕೇವಲ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಅವಲಂಬಿಸಿದ್ದಾರೆ. ಸರಕಾರಿ ವಿಶ್ವವಿದ್ಯಾನಿಲಯಗಳು ದುರ್ಬಲಗೊಂಡರೆ ಅಹಿಂದ ವರ್ಗದವರು ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣದಿಂದ ವಂಚಿತರಾಗುವುದು ಗ್ಯಾರಂಟಿ. ವಿದೇಶಿ ವಿಶ್ವವಿದ್ಯಾನಿಲಯಗಳು, ಕರ್ನಾಟಕದ ಖಾಸಗಿ ವಿಶ್ವವಿದ್ಯಾನಿಲಯಗಳು ಶಿಕ್ಷಣವನ್ನು ಅದರಲ್ಲೂ ಉನ್ನತ ಶಿಕ್ಷಣವನ್ನು ವ್ಯಾಪಾರಕ್ಕೆ ಇಟ್ಟಿವೆ. ಬಡವರ ಮಕ್ಕಳು ದಕ್ಕಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ವಿಶ್ವವಿದ್ಯಾನಿಲಯಗಳ ಕಾಯಕಲ್ಪಕ್ಕೆ ಮುಂದಾಗಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಹಣ ಒದಗಿಸಿದ್ದಾರೆ. ಆದರೆ ಉನ್ನತ ಶಿಕ್ಷಣದ ಕಿರೀಟದಂತಿರುವ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ವಿಶೇಷ ಯೋಜನೆಯೇನೂ ಪ್ರಸ್ತಾಪಿಸಿಲ್ಲ. ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಸಾವಿರ ಬೋಧಕ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದಾರೆ. ಸರಕಾರಿ ವಿಶ್ವವಿದ್ಯಾನಿಲಯಗಳಿಗಿಂತಲೂ ಸರಕಾರಿ ಪದವಿ ಕಾಲೇಜು ಮತ್ತು ಪೊಲಿಟೆಕ್ನಿಕ್‌ಗಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಷ್ಟು ಮಾತ್ರವಲ್ಲ ಸರಕಾರಿ ಶಾಲಾ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ಕಲ್ಪಿಸಲಾಗಿದೆ. ಮೂಲಭೂತ ಸೌಕರ್ಯದ ಕಾರಣಕ್ಕೆ ಖಾಸಗಿ ಶಿಕ್ಷಣ ರಂಗ ಪ್ರಾಬಲ್ಯ ಮೆರೆಯುತ್ತಿದೆ. ಹೀಗಿರುವಾಗ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ವಿಶೇಷ ನಿಗಾ ವಹಿಸಿ ಬಲಬಡಿಸುವುದು ಸರಕಾರದ ಮೊದಲ ಆದ್ಯತೆಯಾಗಬೇಕು.

ಐವತ್ತು ವರ್ಷಗಳ ಹಿಂದೆ ಸರಕಾರಿ ಮತ್ತು ಖಾಸಗಿ ಶಿಕ್ಷಣ ರಂಗಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾನಿಲಯಗಳ ಹಂತದವರೆಗೆ ಸರಕಾರಿ ವ್ಯವಸ್ಥೆಯೇ ಶಕ್ತಿಶಾಲಿಯಾಗಿತ್ತು. ಆಗ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲೂ ಸರಕಾರಿ ಕಾಲೇಜುಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದವು. ಬಡ ಕೂಲಿಕಾರರ ಮಗನಿಂದ ಅತ್ಯಂತ ಶ್ರೀಮಂತರ ಮಕ್ಕಳೂ ಸರಕಾರಿ ಶಾಲಾ ವ್ಯವಸ್ಥೆಯನ್ನೇ ಅವಲಂಬಿಸಿದ್ದರು. ಜನಪ್ರತಿನಿಧಿಗಳ ಮಕ್ಕಳಿಗಂತೂ ಸರಕಾರಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಅನಿವಾರ್ಯವಾಗಿದ್ದವು. ಹಿರಿಯ ಅಧಿಕಾರಿಗಳ ಮಕ್ಕಳು, ಅದರಲ್ಲೂ ಜಿಲ್ಲಾ ಕೇಂದ್ರಗಳಲ್ಲಿ ವಾಸಿಸುವ ಮಧ್ಯಮ ವರ್ಗದ, ಶ್ರೀಮಂತರ ಮಕ್ಕಳು ಕಾನ್ವೆಂಟ್ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದರು. ಆಗ ಎಲ್ಲರ ಮಕ್ಕಳಿಗೂ ಸರಕಾರಿ ವಿಶ್ವವಿದ್ಯಾನಿಲಯಗಳೇ ಗತಿಯಾಗಿದ್ದವು. ಮೈಸೂರು, ಧಾರವಾಡ, ಬೆಂಗಳೂರು ವಿಶ್ವವಿದ್ಯಾನಿಲಯಗಳು ಪ್ರತಿಷ್ಠಿತ ವಿದ್ಯಾ ಕೇಂದ್ರಗಳಾಗಿದ್ದವು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳನ್ನು ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿ ಪಡಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ಬ್ರಿಟಿಷ್ ಕಾಲದ ಬಾಂಬೆ ಸರಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ವಿಶೇಷ ಮುತುವರ್ಜಿ ವಹಿಸಿ ಅಭಿವೃದ್ಧಿ ಪಡಿಸಿದ್ದರು. ಸಮಸ್ತ ಉತ್ತರ ಕರ್ನಾಟಕದ ವಿದ್ಯಾಕಾಂಕ್ಷಿಗಳಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಏಕೈಕ ಆಶಾಕಿರಣವಾಗಿತ್ತು. ಕಲಬುರ್ಗಿ, ಬೀದರ್ ಜಿಲ್ಲೆಯ ಜನರು ಸಮೀಪದ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾನಿಲಯವನ್ನು ಅವಲಂಬಿಸಿದ್ದರು.

ಉನ್ನತ ಶಿಕ್ಷಣವನ್ನು ಅದರಲ್ಲೂ ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣವನ್ನು ಬಡ ಮತ್ತು ಮಧ್ಯಮ ವರ್ಗದ ಜನತೆಗೂ ಲಭ್ಯವಾಗಲೆಂದು ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾನಿಲಯ, ಕುವೆಂಪು ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದವು. ಆಗ ಒಂದು ಹೊಸ ವಿಶ್ವವಿದ್ಯಾನಿಲಯ ಸ್ಥಾಪಿಸುವ ಮುಂಚೆ ಅಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಅತ್ಯುನ್ನತ ಗುಣಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದರು. ತೀರಾ ಅಗತ್ಯವೆನಿಸಿದಾಗ ಅಗತ್ಯದ ಮೂಲಭೂತ ಸೌಕರ್ಯಗಳನ್ನು ಒದಗಿಸಿಯೇ ಹೊಸ ವಿಶ್ವವಿದ್ಯಾನಿಲಯಗಳನ್ನು ಆರಂಭಿಸಲು ಅನುಮತಿ ನೀಡುತ್ತಿದ್ದರು. ಎಂಭತ್ತರ ದಶಕದಲ್ಲಿ ಆರಂಭವಾದ ವಿಶ್ವವಿದ್ಯಾನಿಲಯಗಳಿಗೆ ಆರೇಳು ನೂರು ಎಕರೆ ಜಮೀನು ಒದಗಿಸಿಯೇ ಕ್ಯಾಂಪಸ್ ವ್ಯವಸ್ಥೆ ಕಲ್ಪಿಸಿದ್ದರು. ಹೊಸ ವಿಭಾಗಗಳು ಆರಂಭಿಸಿದರೂ ಅವುಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಒದಗಿಸಿಯೇ ಕಾರ್ಯಾರಂಭ ಮಾಡುತ್ತಿದ್ದರು. ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಆಯಾ ಪ್ರದೇಶದ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಸೇರುತ್ತಿದ್ದವು. ಕುಲಪತಿ ಮತ್ತು ಕುಲಸಚಿವರ ನೇಮಕಾತಿಯಲ್ಲಿ ಹಣದ ಪಾತ್ರವೇ ಇರಲಿಲ್ಲ. ಜಾತಿ ಪ್ರಮುಖ ಪಾತ್ರ ವಹಿಸಿದ್ದರೂ ಒಟ್ಟು ಶಿಕ್ಷಣ ವ್ಯವಸ್ಥೆಯ ಮೂಲ ಸ್ವರೂಪಕ್ಕೇನು ಧಕ್ಕೆಯನ್ನುಂಟು ಮಾಡುತ್ತಿರಲಿಲ್ಲ. ಆಗ ವಿದ್ಯಾರ್ಥಿ ಸಂಘಟನೆಗಳು ಪ್ರಬಲವಾಗಿರುವುದರಿಂದ ಜಾತಿವಾದಿ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಲು ಸಹಕಾರಿಯಾಗಿದ್ದವು.

ಕೃಷಿ ವಿಶ್ವವಿದ್ಯಾನಿಲಯಗಳು ಸೇರಿದಂತೆ ವಿಶೇಷ ಪರಿಣತಿಯ ವಿಶ್ವವಿದ್ಯಾನಿಲಯಗಳು ಆರಂಭವಾಗುತ್ತಿದ್ದಂತೆ ಮೈಸೂರು, ಬೆಂಗಳೂರು, ಕರ್ನಾಟಕ, ಗುಲ್ಬರ್ಗಾ, ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳು ದುರ್ಬಲವಾಗತೊಡಗಿದವು. ನಂತರ ಸ್ನಾತಕೋತ್ತರ ಕೇಂದ್ರಗಳನ್ನು ವಿಶ್ವವಿದ್ಯಾನಿಲಯಗಳನ್ನಾಗಿ ಮಾರ್ಪಡಿಸತೊಡಗಿದರು. ಅಗತ್ಯದ ಮೂಲಭೂತ ಸೌಕರ್ಯ ಮತ್ತು ಸಿಬ್ಬಂದಿಯನ್ನು ಒದಗಿಸಿ ಹೊಸ ವಿಶ್ವವಿದ್ಯಾನಿಲಯ ಆರಂಭಿಸಿದಾಗ ಯಾವ ತೊಂದರೆಯೂ ಇರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ವಿಶ್ವವಿದ್ಯಾನಿಲಯಗಳ ದುರ್ದೆಸೆ ಆರಂಭವಾಯಿತು.

ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವನ್ನು ಕರ್ನಾಟಕದ ಜೆಎನ್‌ಯು ಎಂದೇ ಭಾವಿಸಲಾಗಿತ್ತು. ಸಂಶೋಧನೆಗೆಂದು ಮೀಸಲಾದ ಆ ವಿಶ್ವವಿದ್ಯಾನಿಲಯ ಕನ್ನಡದ ಶ್ರೇಷ್ಠ ಸಾಹಿತಿ, ಕಲಾವಿದರ ಒತ್ತಾಸೆಯ ಫಲವಾಗಿ ರೂಪುಗೊಂಡಿತ್ತು. ವೀರಪ್ಪ ಮೊಯ್ಲಿ, ಎಂ.ಪಿ. ಪ್ರಕಾಶ್ ಮುಂತಾದವರು ಕನ್ನಡ ವಿಶ್ವವಿದ್ಯಾನಿಲಯಕ್ಕೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಕನ್ನಡ ವಿಶ್ವವಿದ್ಯಾನಿಲಯದ ಮೊದಲ ಕುಲಪತಿ ಡಾ. ಚಂದ್ರಶೇಖರ ಕಂಬಾರರು ಅತ್ಯಂತ ಮಹತ್ವಾಕಾಂಕ್ಷೆ ಇಟ್ಟುಕೊಂಡೇ ಅದನ್ನು ಕಟ್ಟಲು ಪ್ರಯತ್ನಿಸಿದರು. ಆದರೆ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಅನೇಕ ಪ್ರತಿಭಾವಂತರ ಜೊತೆಗೇ ಹಲವು ಜನ ದಡ್ಡರು ಸೇರಿಕೊಂಡು ಕನ್ನಡ ವಿಶ್ವವಿದ್ಯಾನಿಲಯದ ಘನತೆ ಗೌರವ ಹಾಳು ಮಾಡಿದರು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಉನ್ನತ ಶಿಕ್ಷಣ ಮಂತ್ರಿಯಾಗಿ ಅರವಿಂದ ಲಿಂಬಾವಳಿ ನೇಮಕವಾಗಿದ್ದರು. ಅರವಿಂದ ಲಿಂಬಾವಳಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಒಪ್ಪಿಕೊಂಡವರೇ ಹೆಚ್ಚಾಗಿದ್ದರೆಂದು ಭಾವಿಸಿ ಆ ವಿಶ್ವವಿದ್ಯಾನಿಲಯದ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದರು. ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ ಹಣಕಾಸಿನ ನೆರವು ಒದಗಿಸಲಿಲ್ಲ. ಕನ್ನಡ ವಿಶ್ವವಿದ್ಯಾನಿಲಯದ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತು ಅದರ ಪ್ರಾಮುಖ್ಯತೆ ತಗ್ಗಿಸಲು ಮೂರು ಹೊಸ ವಿಶೇಷ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡರು. ಹಾಗೆ ನೋಡಿದರೆ ಕನ್ನಡ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲೇ ಆ ಮೂರೂ ವಿಶ್ವವಿದ್ಯಾನಿಲಯಗಳ ವಿಷಯಗಳನ್ನು ಅಭಿವೃದ್ಧಿ ಪಡಿಸಬಹುದಿತ್ತು.

ಕನ್ನಡ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗ ಕಾರ್ಯ ನಿರ್ವಹಿಸುತ್ತಿತ್ತು. ಬುಡಕಟ್ಟು ಮತ್ತು ಜಾನಪದ ವಿಭಾಗಗಳು ಕಾರ್ಯಾರಂಭ ಮಾಡಿದ್ದವು. ಪಾಲಿ ಮತ್ತು ಸಂಸ್ಕೃತ ವಿಭಾಗಗಳು ಆರಂಭಿಸಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ಅನುದಾನ ನೀಡಿದ್ದರೆ ಆ ವಿಶ್ವವಿದ್ಯಾನಿಲಯವೂ ಬೆಳೆಯುತ್ತಿತ್ತು.

ಅರವಿಂದ ಲಿಂಬಾವಳಿಯವರು ತಮ್ಮ ಅಧಿಕಾರಾವಧಿಯಲ್ಲಿ ಹೊಸದಾಗಿ ಮೂರು ವಿಶೇಷ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮತ್ತು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯಗಳನ್ನು ಆರಂಭಿಸಿದರು. ಸಂಘ ಪರಿವಾರದ ಒತ್ತಡದ ಕಾರಣಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭರ್ತಿಗೆ ಹಣಕಾಸಿನ ನೆರವು ನೀಡಿದರು.

ಆದರೆ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯಗಳನ್ನು ಸಂಪೂರ್ಣ ಕಡೆಗಣಿಸಿದರು. 2008ರಲ್ಲಿ ಸ್ಥಾಪನೆಯಾದ ಈ ಮೂರು ವಿಶ್ವವಿದ್ಯಾನಿಲಯಗಳ ಪೈಕಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಮಾತ್ರ ಅಗತ್ಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಹೊಂದಿದೆ. ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾದಾಗ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಅಕ್ರಮವಾಗಿ ಒಂದಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದೆ. ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದೆ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರಿನ ಸಂಗೀತ ವಿಶ್ವವಿದ್ಯಾನಿಲಯ ಮಾತ್ರ ಏಳ್ಗೆ ಹೊಂದದೆ ನಿಂತಲ್ಲೇ ನಿಂತಿದೆ.

ಅರವಿಂದ ಲಿಂಬಾವಳಿ ಉನ್ನತ ಶಿಕ್ಷಣ ಮಂತ್ರಿಯಾಗಿದ್ದಾಗಲೇ ಹೊಸದಾಗಿ ಎರಡು ವಿಶ್ವವಿದ್ಯಾನಿಲಯಗಳನ್ನು ಆರಂಭಿಸಿದ್ದರು. ಹೊಸದಾಗಿ ಆರಂಭವಾದ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯಗಳಿಗೆ ಸಂಘ ಪರಿವಾರಕ್ಕೆ ಸೇರಿದ ಮಂಜಪ್ಪ ಹೆಗಡೆ, ಅನಂತನ್ ಅವರನ್ನು ಕುಲಪತಿಗಳನ್ನಾಗಿ ನೇಮಿಸಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿದರು. ಅಗತ್ಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಒದಗಿಸಿ ಇಡೀ ವಿಶ್ವವಿದ್ಯಾನಿಲಯ ಆರೆಸ್ಸೆಸ್ ಮಯ ಮಾಡಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವನ್ನು ಬಿಜೆಪಿ ಆಡಳಿತಾವಧಿಯಲ್ಲಿ ಸಂಪೂರ್ಣ ಕಡೆಗಣಿಸಿದ್ದರ ಪರಿಣಾಮವಾಗಿ ಅದು ಈಗ ಅಕ್ಷರಶಃ ಹಾಳು ಹಂಪಿಯಾಗಿದೆ. ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ. ಅತಿಥಿ ಉಪನ್ಯಾಸಕರಿಗೂ ಸಂಬಳ ನೀಡದ ಸ್ಥಿತಿ ತಲುಪಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗಲೆಲ್ಲ ಹೊಸ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಹೆಚ್ಚು ಆಸಕ್ತಿ ತೋರಿದೆ. ಆದರೆ ಹೊಸ ವಿಶ್ವವಿದ್ಯಾನಿಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ, ಅಗತ್ಯದ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಒದಗಿಸುವಲ್ಲಿ ಸಂಪೂರ್ಣ ಎಡವಿದೆ. 2019ರಿಂದ 2023ರವರೆಗೆ ನಾಲ್ಕು ವರ್ಷಗಳ ಕಾಲ ಸತತ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಮಂತ್ರಿಯಾಗಿದ್ದ ಡಾ. ಅಶ್ವತ್ಥ ನಾರಾಯಣ್ ಅವರು ಮನಸ್ಸು ಮಾಡಿದ್ದರೆ ಕರ್ನಾಟಕದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿ ಪಡಿಸಬಹುದಿತ್ತು. ಕಾರ್ಪೊರೇಟ್ ವಲಯದ ಸಿ.ಎಸ್.ಆರ್. ಫಂಡ್‌ನ್ನು ತಂದಿದ್ದರೂ ಸರಕಾರಿ ವಿಶ್ವವಿದ್ಯಾನಿಲಯಗಳು ಚಾಣಕ್ಯ ವಿಶ್ವವಿದ್ಯಾನಿಲಯವನ್ನು ಮೀರಿಸುವ ಹಾಗೆ ತಲೆ ಎತ್ತಿ ನಿಲ್ಲುತ್ತಿದ್ದವು.

ಇರುವ ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿ ಪಡಿಸುವುದು ಒತ್ತಟ್ಟಿಗಿರಲಿ ಹಳೆಯ ವಿಶ್ವವಿದ್ಯಾನಿಲಯಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುವ ಪರಿಸ್ಥಿತಿ ತಲುಪಿವೆ. ಅಶ್ವತ್ಥ ನಾರಾಯಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಎಂಟು ಹೊಸ ವಿಶ್ವವಿದ್ಯಾನಿಲಯಗಳನ್ನು ಆರಂಭಿಸುವ ಮೂಲಕ ಹಳೆಯ ವಿಶ್ವವಿದ್ಯಾನಿಲಯಗಳ ಆದಾಯ ಮೂಲಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಹಾಸನ ವಿಶ್ವವಿದ್ಯಾನಿಲಯ, ಮಂಡ್ಯ ವಿಶ್ವವಿದ್ಯಾನಿಲಯ ಮತ್ತು ಚಾಮರಾಜನಗರ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಮೂಲಕ ಹಳೆಯ ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುವಂತಾಗಿದೆ. ಹೊಸದಾಗಿ ಸ್ಥಾಪನೆ ಮಾಡಿದ ವಿಶ್ವವಿದ್ಯಾನಿಲಯಗಳಿಗೆ ಬಿಡಿಗಾಸು ಅನುದಾನ ನೀಡದೆ ಹಳೆಯ ಮತ್ತು ಹೊಸ ವಿಶ್ವವಿದ್ಯಾನಿಲಯಗಳನ್ನು ಸಂಕಷ್ಟಕ್ಕೆ ದೂಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಮೈಸೂರು ವಿಶ್ವವಿದ್ಯಾನಿಲಯ ನಿವೃತ್ತಿ ಹೊಂದಿದ ಸಿಬ್ಬಂದಿಗೆ ಪಿಂಚಣಿ ನೀಡಲಾಗದ ದುಸ್ಥಿತಿಗೆ ತಲುಪಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕೆಲವು ಕಾಲೇಜುಗಳನ್ನು ಕೊಡಗು ವಿಶ್ವವಿದ್ಯಾನಿಲಯಕ್ಕೆ ಸೇರಿಸಿ ಕೊಡಗು ವಿಶ್ವವಿದ್ಯಾನಿಲಯ ಆರಂಭಿಸಿದ್ದಾರೆ. ಅತ್ಯಂತ ಹಳೆಯದಾದ ಕರ್ನಾಟಕ ವಿಶ್ವವಿದ್ಯಾನಿಲಯದ ಕಾಲೇಜುಗಳು ಹಾವೇರಿ ಮತ್ತು ಬಾಗಲಕೋಟ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ಹಂಚಿ ಹೋಗಿವೆ. ಅದರ ಪರಿಣಾಮ ಕರ್ನಾಟಕ ವಿಶ್ವವಿದ್ಯಾನಿಲಯ ಬಡವಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜುಗಳು ಬೀದರ್ ಮತ್ತು ಕೊಪ್ಪಳ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ಹಂಚಿ ಹೋಗಿದ್ದರಿಂದ ಮೂಲ ವಿಶ್ವವಿದ್ಯಾನಿಲಯ ಬಡವಾಗಿದೆ.

ಕರ್ನಾಟಕ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ಗುಲ್ಬರ್ಗಾ ವಿಶ್ವವಿದ್ಯಾನಿಲಯಗಳ ಆರ್ಥಿಕ ಸಂಪನ್ಮೂಲಗಳು ಬತ್ತಿ ಹೋಗಿವೆ. ಅಶ್ವತ್ಥ ನಾರಾಯಣ ಕಾಲದ ಎಂಟು ವಿಶ್ವವಿದ್ಯಾನಿಲಯಗಳಿಗೆ ಖಾಯಂ ಸಿಬ್ಬಂದಿ ಮತ್ತು ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಕರ್ನಾಟಕದ ಎಲ್ಲ ಹಳೆಯ ವಿಶ್ವವಿದ್ಯಾನಿಲಯಗಳು ಕಳೆದ ಒಂದೂವರೆ ದಶಕಗಳಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಿಲ್ಲದೆ ತೀವ್ರ ಹಿನ್ನಡೆ ಅನುಭವಿಸುತ್ತಿವೆ.

ವಿದೇಶಗಳಲ್ಲಿ ಅತಿಥಿ ಉಪನ್ಯಾಸಕರನ್ನು ಅವಲಂಬಿಸಿ ವಿಶ್ವವಿದ್ಯಾನಿಲಯಗಳನ್ನು ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಸಲು ಯಾಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಕುಲಪತಿಗಳಿಗೆ ಕೇಳಿದ್ದಾರೆ. ವಿದೇಶಗಳಲ್ಲಿ ಯಾವ ತಜ್ಞ ಪ್ರಾಧ್ಯಾಪಕರೂ ಖಾಯಂ ಆಗಿ ಒಂದು ಕಡೆ ನೆಲೆ ನಿಲ್ಲಲು ಬಯಸುವುದಿಲ್ಲ. ಅನಿವಾರ್ಯವಾಗಿ ಸಂದರ್ಶಕ ಪ್ರಾಧ್ಯಾಪಕರಿಗೆ ಅತಿ ಹೆಚ್ಚು ಸಂಬಳ ನೀಡಿ ಅವರ ಸೇವೆ ಪಡೆಯುತ್ತಾರೆ. ಆದರೆ ಕರ್ನಾಟಕದಲ್ಲಿ ಅತಿಥಿ ಉಪನ್ಯಾಸಕರ ಪಾಡು ಹಾಗಿಲ್ಲ. ಪ್ರತೀ ವರ್ಷ ಅರ್ಜಿ ಹಾಕಿ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ವಿದ್ಯಾರ್ಹತೆ ಹೊಂದಿಯೂ ಅತಿ ಕಡಿಮೆ ಸಂಬಳದಲ್ಲಿ ದುಡಿಯಬೇಕು. ವಿದೇಶಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಿಗೆ ಇರುವ ಬೇಡಿಕೆ ಮತ್ತು ಸಂಬಳ ಅಲ್ಲಿ ಖಾಯಂ ಪ್ರಾಧ್ಯಾಪಕರಿಗೆ ನೀಡುವುದಿಲ್ಲ. ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಪಿಎಚ್.ಡಿ. ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲು ಯುಜಿಸಿ ನಿಯಮಗಳು ಒಪ್ಪುವುದಿಲ್ಲ. ದುರಂತವೆಂದರೆ, ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರು ಹತ್ತು ವರ್ಷಗಳ ಕಾಲ ಪಾಠ ಮಾಡಿದರೂ ಅವರ ಬೋಧನಾನುಭವವನ್ನು ಎಲ್ಲೂ ಪರಿಗಣಿಸುವುದಿಲ್ಲ. ಈ ಎಲ್ಲ ಕಾರಣಕ್ಕೆ ಅತಿಥಿ ಉಪನ್ಯಾಸಕರು ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಯುಜಿಸಿ ನಿರ್ಬಂಧಿಸಿದೆ.

ಕರ್ನಾಟಕದಲ್ಲಿ ಒಟ್ಟು 32 ಸರಕಾರಿ ವಿಶ್ವವಿದ್ಯಾನಿಲಯಗಳಿವೆ. ಎಂಟು ಹೊಸ ವಿಶ್ವವಿದ್ಯಾನಿಲಯಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲ. ಎಂಟು ಹೊಸ ವಿಶ್ವವಿದ್ಯಾನಿಲಯಗಳನ್ನು ಮುಂದುವರೆಸಬೇಕೇ ಬೇಡವೇ ಎಂದು ನಿರ್ಧರಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ. ಸಂಪುಟ ಉಪಸಮಿತಿ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಆ ಎಂಟು ವಿಶ್ವವಿದ್ಯಾನಿಲಯಗಳು ಮುಂದುವರಿಯಬಾರದು ಎಂಬ ನಿರ್ಧಾರ ಕೈಗೊಂಡರೆ ಹಳೆಯ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ನಿರಾಳವಾಗುತ್ತವೆ.

ಆಗ ಒಟ್ಟು ಸರಕಾರಿ ವಿಶ್ವವಿದ್ಯಾನಿಲಯಗಳ ಸಂಖ್ಯೆ 24ಕ್ಕೆ ಇಳಿಯುತ್ತದೆ. ಈ ಇಪ್ಪತ್ತನಾಲ್ಕು ವಿಶ್ವವಿದ್ಯಾನಿಲಯಗಳಿಗೆ ಒಟ್ಟು 4,705 ಬೋಧಕ ಸಿಬ್ಬಂದಿಯ ಅಗತ್ಯವಿದೆ. ಈಗ ಕೇವಲ ಪ್ರತಿಶತ 36ರಷ್ಟು ಬೋಧಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ ಪ್ರತಿಶತ 64ರಷ್ಟು ಬೋಧಕ ಸಿಬ್ಬಂದಿ ಖಾಲಿ ಇವೆ. ಪ್ರತಿಶತ ಎಪ್ಪತ್ತರಷ್ಟು ಬೋಧಕೇತರ ಹುದ್ದೆಗಳು ಖಾಲಿ ಇವೆ.

ಇದೇ ವರ್ಷದ ಜನವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಪೀಠ ‘‘ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಕುಲಪತಿ ಮತ್ತು ಕುಲಸಚಿವರ ಹುದ್ದೆಗಳನ್ನು ಒಂದು ತಿಂಗಳಲ್ಲಿ, ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ನಾಲ್ಕು ತಿಂಗಳಲ್ಲಿ ಭರ್ತಿ ಮಾಡಬೇಕು’’ ಎಂದು ಯುಜಿಸಿ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆದೇಶ ನೀಡಿದೆ. ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಕಾಯ್ದುಕೊಳ್ಳಬೇಕು ಎನ್ನುವುದು ನ್ಯಾಯಪೀಠದ ಆಶಯ. ನ್ಯಾಯ ಮೂರ್ತಿ ಜೆ.ಬಿ. ಪರ್ದಿವಾಲ ಮತ್ತು ನ್ಯಾಯಮೂರ್ತಿ ಆರ್. ಮಾಧವನ್ ಅವರ ನ್ಯಾಯ ಪೀಠ 38 ಪುಟಗಳ ಆದೇಶ ಹೊರಡಿಸಿದ್ದು ವಿ.ವಿ.ಗಳ ಪ್ರಾಧ್ಯಾಪಕರ ನೇಮಕಾತಿ ಯು.ಜಿ.ಸಿ. ನಿಯಮಗಳಿಗೆ ಬದ್ಧವಾಗಿರಬೇಕು ಎಂದೂ ಎಚ್ಚರಿಕೆ ನೀಡಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವುದು ಕೇಂದ್ರ-ರಾಜ್ಯ ಸರಕಾರಗಳಿಗೆ ಅನಿವಾರ್ಯವಾಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 380ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇವೆ. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅತಿ ಹೆಚ್ಚು ಬೋಧಕ (415ಕ್ಕೂ ಹೆಚ್ಚು) ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಜ್ಞಾನ ಭಾರತಿ ವಿಶ್ವವಿದ್ಯಾನಿಲಯ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಎಂದು ಮೂರು ವಿಶ್ವವಿದ್ಯಾನಿಲಯಗಳನ್ನಾಗಿ ವಿಭಜಿಸಲಾಗಿದೆ. ಬೆಂಗಳೂರು ಉತ್ತರ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾನಿಲಯಗಳಿಗೆ ಅಗತ್ಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಭರ್ತಿ ಮಾಡಬೇಕಿದೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಈ ಬಾರಿಯ ಬಜೆಟ್ ನಲ್ಲಿ ವಿಶ್ವವಿದ್ಯಾನಿಲಯಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಗೆ ಮೊದಲ ಆದ್ಯತೆ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓದಿದ ಬಜೆಟ್‌ನಲ್ಲಿ ಒಂದು ಸಾವಿರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ವಿಶ್ವವಿದ್ಯಾನಿಲಯಗಳಲ್ಲಿ ಭರ್ತಿ ಮಾಡುವುದಾಗಿ ಪ್ರಕಟಿಸಿದ್ದಾರೆ.

ಕಾರ್ಪೊರೇಟ್ ವಲಯದ ಸಿಎಸ್‌ಆರ್ ಫಂಡ್ ಬಳಸಿಕೊಂಡು ಚಾಣಕ್ಯದಂತಹ ಖಾಸಗಿ ವಿಶ್ವವಿದ್ಯಾನಿಲಯಗಳು ಅತ್ಯುತ್ತಮ ಮೂಲಭೂತ ಸೌಕರ್ಯ ಹೊಂದಿದ ಕ್ಯಾಂಪಸ್‌ನೊಂದಿಗೆ ತಲೆ ಎತ್ತುತ್ತಿವೆ. ಆದರೆ ಸರಕಾರಿ ವಿಶ್ವವಿದ್ಯಾನಿಲಯಗಳು ಸರಕಾರದ ನೆರವು ಸಿಗದೇ ದಿನೇ ದಿನೇ ಸೊರಗುತ್ತಿವೆ. ಕರ್ನಾಟಕದ ಅಸಂಖ್ಯಾತ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಕೇವಲ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಅವಲಂಬಿಸಿದ್ದಾರೆ. ಸರಕಾರಿ ವಿಶ್ವವಿದ್ಯಾನಿಲಯಗಳು ದುರ್ಬಲಗೊಂಡರೆ ಅಹಿಂದ ವರ್ಗದವರು ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣದಿಂದ ವಂಚಿತರಾಗುವುದು ಗ್ಯಾರಂಟಿ. ವಿದೇಶಿ ವಿಶ್ವವಿದ್ಯಾನಿಲಯಗಳು, ಕರ್ನಾಟಕದ ಖಾಸಗಿ ವಿಶ್ವವಿದ್ಯಾನಿಲಯಗಳು ಶಿಕ್ಷಣವನ್ನು ಅದರಲ್ಲೂ ಉನ್ನತ ಶಿಕ್ಷಣವನ್ನು ವ್ಯಾಪಾರಕ್ಕೆ ಇಟ್ಟಿವೆ. ಬಡವರ ಮಕ್ಕಳು ದಕ್ಕಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ವಿಶ್ವವಿದ್ಯಾನಿಲಯಗಳ ಕಾಯಕಲ್ಪಕ್ಕೆ ಮುಂದಾಗಬೇಕು. ಅರವಿಂದ ಲಿಂಬಾವಳಿ ಮತ್ತು ಅಶ್ವತ್ಥ ನಾರಾಯಣ ಅವರ ಹಾಗೆ ಸಿದ್ದರಾಮಯ್ಯ ಸರಕಾರ ಕೂಡಾ ವಿಶ್ವವಿದ್ಯಾನಿಲಯಗಳನ್ನು ಕಡೆಗಣಿಸಿದರೆ ಈ ನಾಡಿನ ಅಹಿಂದ ವರ್ಗದ ಹಿತವನ್ನು ಕಡೆಗಣಿಸಿದಂತೆ. ಕಾಂಗ್ರೆಸ್ ಪಕ್ಷ ಬಿಜೆಪಿಗಿಂತಲೂ ಭಿನ್ನ ಎನ್ನುವುದು ಕೃತಿಯ ಮೂಲಕವೇ ರುಜುವಾತುಪಡಿಸಬೇಕು. ಈ ಬಾರಿಯ ಬಜೆಟ್ ಭಾಷಣದಲ್ಲಿ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ವಿಷಯದಲ್ಲಿ ಗಮನಾರ್ಹ ಘೋಷಣೆ ಮಾಡಿಲ್ಲ ಎಂಬುದು ದೊಡ್ಡ ಕೊರತೆ

Tags

budgetGovernment Universities
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X