ಮುಂದುವರಿದ ನೇಮಕಾತಿ ಅಕ್ರಮಗಳು

ಭ್ರಷ್ಟ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ಮಾಡದೆ ತೇಪೆ ಹಚ್ಚುವ ಕೆಲಸ ಮಾಡುತ್ತಾ ಹೋದರೆ ಅಕ್ರಮಗಳು ನಡೆಯುತ್ತಲೇ ಇರುತ್ತವೆ. ನುಸುಳುಕೋರರು ಹೊಸ ಭ್ರಷ್ಟ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಒಂದು ಸಣ್ಣ ಕ್ರಿಮಿ ಕೂಡ ನುಸುಳಲು ಅವಕಾಶ ಇರಬಾರದು. ಅಂಥ ಬಿಗಿಯಾದ ಪರೀಕ್ಷಾ ವ್ಯವಸ್ಥೆ ತರಬೇಕು. ಎಸ್.ವಿ. ರಂಗನಾಥ್, ವಂದಿತಾ ಶರ್ಮಾ, ಟಿ.ಎಂ. ವಿಜಯಭಾಸ್ಕರ್ ಮತ್ತು ಎಲ್.ಕೆ. ಅತೀಕ್ ಅವರ ಸಮಿತಿ ಕೊಡುವ ವರದಿಯ ಸಾರ ಅಳವಡಿಸಿಕೊಂಡರೆ ಪಾರದರ್ಶಕ ವ್ಯವಸ್ಥೆ ರೂಪಿಸಬಹುದು.
ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳ ತನಿಖೆ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. 2011ರ ಪ್ರೊಬೆಷನರಿ ಅಧಿಕಾರಿಗಳ (ಗ್ರೂಪ್ ಎ ಮತ್ತು ಬಿ) ನೇಮಕಾತಿ ಮತ್ತು ಆ ನೇಮಕಾತಿಗೆ ಬೆಂಬಲವಾಗಿ ರಾಜ್ಯ ಸರಕಾರ ರೂಪಿಸಿದ್ದ ಕಾಯ್ದೆಯನ್ನೇ ಸುಪ್ರೀಂ ಕೋರ್ಟ್ ರದ್ದುಪಡಿಸಿ ಆದೇಶ ನೀಡಿದೆ. ಆ ಸಮಸ್ಯೆಯೂ ಇನ್ನು ಇತ್ಯರ್ಥವಾಗಿಲ್ಲ.
ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಬಹುಕೋಟಿ ಹಗರಣ ನಡೆದಿದೆಯೆಂದು ಭಾರೀ ಸುದ್ದಿಯಾಯಿತು. ಈ ಹಗರಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕನಾಗಿದ್ದ ಜ್ಞಾನೇಂದ್ರಕುಮಾರ್ ಗಂಗ್ವಾರ್ ಜೈಲುವಾಸ ಅನುಭವಿಸುತ್ತಿದ್ದಾರೆ. ಅಕ್ರಮಗಳಿಗೆ ಸಾಥ್ ನೀಡಿದ್ದ ಮಧ್ಯವರ್ತಿ ಭಾಲ್ಕಿ ಮೂಲದ ಬಸವರಾಜ್ ಕನ್ನಾಳೆ ಪೊಲೀಸ್ ತನಿಖೆಯಲ್ಲಿ ಸತ್ಯ ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಲಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಜೈಲುವಾಸ ಅನುಭವಿಸಬೇಕಾಯಿತು. ಸದಸ್ಯರಾದ ಶಾಂತಾ, ಡಾ. ಬಿ.ವಿ. ಗೀತಾ ಬಂಧನ-ಜಾಮೀನಿನ ತ್ರಿಶಂಕು ಸ್ಥಿತಿಯಲ್ಲಿ ಇದ್ದಾರೆ. ಪಶು ವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿಯ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ತನಿಖಾ ಸಮಿತಿಯ ಮುಖ್ಯಸ್ಥರು ಯಾರಾಗಬೇಕೆಂಬ ಗೊಂದಲ ಬಗೆ ಹರಿದಿಲ್ಲ. ಕರ್ನಾಟಕ ಲೋಕಸೇವಾ ಆಯೋಗ ಸಂಪೂರ್ಣ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಅಲ್ಲಿಯ ಒಟ್ಟು ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು, ಯುಪಿಎಸ್ಸಿ ಮಾದರಿಯಲ್ಲಿ ಮರು ರೂಪಿಸಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕ ಲೋಕಸೇವಾ ಆಯೋಗವನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಆಕ್ರೋಶ ಹೊರ ಹಾಕಿದ್ದರು. ಈ ಹಿಂದೆ ಪ್ರೊಬೆಷನರಿ ಹುದ್ದೆಗಳಿಗೆ ಅರ್ಜಿ ಕರೆದು, ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆ ಮುಗಿಸಿದ್ದರು. ಇನ್ನೇನು ನೇಮಕಾತಿ ಆದೇಶ ನೀಡಬೇಕು ಎನ್ನುವಷ್ಟರಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಅದು ಇನ್ನೂ ಇತ್ಯರ್ಥವಾಗಿಲ್ಲ. ಎಲ್ಲಕ್ಕೂ ಮಿಗಿಲಾಗಿ ಭ್ರಷ್ಟ, ಕಳಂಕಿತ ಅಧ್ಯಕ್ಷ ಮತ್ತು ಸದಸ್ಯರು ಬಂಧನ-ಜಾಮೀನು ಹೋರಾಟ ನಡೆಸುತ್ತಿದ್ದರೂ ಆ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಹಣ ಕೊಟ್ಟು ಸದಸ್ಯರಾಗಿ ಬಂದ ಇನ್ನೂ ಕೆಲವರ ಬಣ್ಣ ಬಯಲಾಗಿಲ್ಲ. ಹಾಗಂತ ಅವರನ್ನು ಪ್ರಾಮಾಣಿಕರು ಅಂತ ನಂಬುವಂತಿಲ್ಲ. ಭ್ರಷ್ಟಾಚಾರ ಮಾಡಲು ಅವರಿಗೆ ಅವಕಾಶ ದೊರೆತಿಲ್ಲ. ಹೀಗಿರುವಾಗ ಕರ್ನಾಟಕ ಲೋಕಸೇವಾ ಆಯೋಗ ಮತ್ತೆ 319 ಪ್ರೊಬೇಷನರಿ ಹುದ್ದೆಗಳಿಗೆ (ಗ್ರೂಪ್ ಎ ಮತ್ತು ಬಿ) ಇದೇ ನವೆಂಬರ್ ಹದಿನೈದರಂದು ಪ್ರಿಲಿಮಿನರಿ ಪರೀಕ್ಷೆ ನಡೆಸಲು ಮುಂದಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಹುದ್ದೆಯಲ್ಲಿ ಕೆ. ಜ್ಯೋತಿ ಮತ್ತು ಪರೀಕ್ಷಾ ನಿಯಂತ್ರಕರ ಹುದ್ದೆಯಲ್ಲಿ ಎಚ್. ಪ್ರಸನ್ನ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರೂ ಐಎಎಸ್ ಅಧಿಕಾರಿಗಳು. ಇಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿವೆ. ಇವರಿಬ್ಬರು ಪ್ರಾಮಾಣಿಕರು, ದಕ್ಷರು ಎಂದೇ ಒಪ್ಪಿಕೊಳ್ಳೋಣ. ಇಬ್ಬರೂ ಸೇರಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳನ್ನು ಅಕ್ರಮ ರಹಿತವಾಗಿ ಅತ್ಯಂತ ಪಾರದರ್ಶಕವಾಗಿ ನಡೆಸುತ್ತಾರೆ ಎಂದೇ ಭಾವಿಸೋಣ. ಆದರೆ ಮೌಖಿಕ ಸಂದರ್ಶನದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಪಾತ್ರವೇ ನಿರ್ಣಾಯಕವಾಗಿರುತ್ತದೆ. ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಕೆಲವು ಸದಸ್ಯರು ಆರೋಪ ಎದುರಿಸುತ್ತಿರುವುದರಿಂದ ಅವರನ್ನು ಸಂದರ್ಶನ ಪ್ರಕ್ರಿಯೆಯಿಂದ ಹೊರಗಿಡುತ್ತಾರೆಂದೇ ಅಂದುಕೊಳ್ಳೋಣ. ಆ ಸ್ಥಾನಕ್ಕೆ ಇನ್ನುಳಿದ ಸದಸ್ಯರು ಬರುತ್ತಾರೆ. ಕೋಟಿ ಕೋಟಿ ಹಣ ಕೊಟ್ಟು ಬಂದವರು ಹಣ ಪಡೆದುಕೊಳ್ಳದೆ ಮೌಖಿಕ ಸಂದರ್ಶನ ನಡೆಸುತ್ತಾರೆ ಎಂದು ಹೇಗೆ ನಂಬುವುದು? ಅಸಂಖ್ಯಾತ ಉದ್ಯೋಗ ಆಕಾಂಕ್ಷಿಗಳು ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ಪ್ರಿಲಿಮ್ಸ್ ಪರೀಕ್ಷೆಯನ್ನು ವಿರೋಧಿಸುತ್ತಿದ್ದಾರೆ. ಕಾರ್ಯದರ್ಶಿ ಕೆ. ಜ್ಯೋತಿ ಮತ್ತು ಪರೀಕ್ಷಾ ನಿಯಂತ್ರಕ ಎಚ್. ಪ್ರಸನ್ನ ಅವರು ಹಠಕ್ಕೆ ಬಿದ್ದು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆಗಳಲ್ಲಿ ಮತ್ತೆ ಮತ್ತೆ ಅಕ್ರಮಗಳು ಜರುಗುತ್ತಿರುವುದರಿಂದ ಸುಧಾರಣೆ ಮತ್ತು ಪಾರದರ್ಶಕ ವ್ಯವಸ್ಥೆ ರೂಪಿಸಲು ಒಂದು ತಜ್ಞರ ಸಮಿತಿ ರಚಿಸಲಾಗಿದೆ. ಆ ಸಮಿತಿಗೆ ಕರ್ನಾಟಕ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಅವರು ಅಧ್ಯಕ್ಷರಾಗಿದ್ದಾರೆ. ಇನ್ನಿಬ್ಬರು ಮಾಜಿ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ, ಟಿ.ಎಂ. ವಿಜಯಭಾಸ್ಕರ್ ಮತ್ತು ಹಾಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಎಲ್.ಕೆ. ಅತೀಕ್ ಅವರು ಈ ಸಮಿತಿಗೆ ಸದಸ್ಯರಾಗಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳ ಒಟ್ಟು ಪರೀಕ್ಷಾ ವ್ಯವಸ್ಥೆ ಬಗ್ಗೆ ಈ ತಜ್ಞರ ಸಮಿತಿಯ ಅಭಿಪ್ರಾಯ ಪಡೆದುಕೊಂಡು ಹೊಸ ವ್ಯವಸ್ಥೆ ರೂಪಿಸಿ ಪ್ರಿಲಿಮ್ಸ್ ಪರೀಕ್ಷೆ ನಡೆಸಲು ಮುಂದಾಗಿದ್ದರೆ ಅಕ್ರಮ ರಹಿತ ನೇಮಕಾತಿ ನಿರೀಕ್ಷೆ ಮಾಡಬಹುದಿತ್ತು.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆ ಆಲಂಕರಿಸಿದ ಹೊಸದರಲ್ಲಿ, ಒಟ್ಟು ಶೈಕ್ಷಣಿಕ ವ್ಯವಸ್ಥೆ, ಪರೀಕ್ಷಾ ಪದ್ಧತಿ, ಪಾರದರ್ಶಕ ನೇಮಕಾತಿ ಸೇರಿದಂತೆ ಅಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಸಚಿವ ಸಂಪುಟದ ಉಪ ಸಮಿತಿಯೊಂದನ್ನು ರಚಿಸಲಾಗಿದೆ. ಆರೋಗ್ಯ ಸಚಿವ ಯು. ಟಿ. ಖಾದರ್ ಅಧ್ಯಕ್ಷತೆಯ ಈ ಉಪ ಸಮಿತಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮತ್ತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇದ್ದಾರೆ. ಈ ಸಚಿವ ಸಂಪುಟ ಉಪ ಸಮಿತಿ ಇನ್ನೂ ವರದಿ ನೀಡಿಲ್ಲ. ಸಚಿವ ಸಂಪುಟ ಉಪಸಮಿತಿ ಮತ್ತು ಎಸ್.ವಿ. ರಂಗನಾಥ್ ನೇತೃತ್ವದ ತಜ್ಞರ ಸಮಿತಿ ವರದಿ ಆಧರಿಸಿ ಒಂದು ನೇಮಕಾತಿ ಮತ್ತು ಪಾರದರ್ಶಕ ಪರೀಕ್ಷಾ ನೀತಿ ರೂಪಿಸಬೇಕಿತ್ತು. ಹೊಸ ವ್ಯವಸ್ಥೆ ರೂಪಿಸಿದ ಮೇಲೆ ಕರ್ನಾಟಕ ಲೋಕಸೇವಾ ಆಯೋಗದ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅರ್ಹತಾ ಪರೀಕ್ಷೆಗಳನ್ನು ನಡೆಸಿದ್ದರೆ ಪಾರದರ್ಶಕ ನೇಮಕಾತಿಗಳು ನಡೆಯಬಹುದೆಂದು ಭಾವಿಸಬಹುದಾಗಿತ್ತು. ಅದೇ ಹಳೆ ವ್ಯವಸ್ಥೆ, ಆದರೆ ಇಬ್ಬರೂ ಅಧಿಕಾರಿಗಳು ಮಾತ್ರ ಹೊಸಬರು. ಗುಣಾತ್ಮಕ ಬದಲಾವಣೆ ನಿರೀಕ್ಷಿಸಬಹುದೆ?
ಒಂದು ಕಾಲದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭ್ರಷ್ಟಾಚಾರದ ಕೂಪವಾಗಿತ್ತು. ಎಚ್. ಪ್ರಸನ್ನ ಅವರು ಅದರ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಬಂದ ಮೇಲೆ ಅಲ್ಲಿ ಪಾರದರ್ಶಕ ವ್ಯವಸ್ಥೆ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಎಚ್. ಪ್ರಸನ್ನ ಅವರು ಪ್ರಾಮಾಣಿಕರು, ದಕ್ಷರು ಎಂದೇ ಒಪ್ಪಿಕೊಳ್ಳೋಣ. ಆದರೆ ಒಂದು ವ್ಯವಸ್ಥೆ ಸ್ವಯಂ ಪಾರದರ್ಶಕವಾಗಿ ಇರಬೇಕು. ಅದು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ದಕ್ಷತೆಗೆ ಒಬ್ಬ ವ್ಯಕ್ತಿಯನ್ನು ಅವಲಂಬಿಸಬಾರದು. ಎಲ್ಲ ಕಾಲಕ್ಕೂ ಎಚ್. ಪ್ರಸನ್ನ ಅವರಂತಹ ಪ್ರಾಮಾಣಿಕರು ಸಿಗುವುದಿಲ್ಲ. ಕೇಂದ್ರ ಲೋಕಸೇವಾ ಆಯೋಗದಲ್ಲಿನ ಪಾರದರ್ಶಕ ಮತ್ತು ಪ್ರಾಮಾಣಿಕ ನೇಮಕಾತಿಗಳು ಒಬ್ಬ ವ್ಯಕ್ತಿಯ ಸಚ್ಚರಿತ್ರೆಯನ್ನು ಅವಲಂಬಿಸಿಲ್ಲ. ಅಲ್ಲಿ ಅತ್ಯಂತ ಬಿಗಿಯಾದ ಮತ್ತು ಪಾರದರ್ಶಕವಾದ ಒಂದು ವ್ಯವಸ್ಥೆಯನ್ನು ರೂಪಿಸಿದ್ದಾರೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ, ಅಷ್ಟು ಮಾತ್ರವಲ್ಲ ಕೇಡರ್ ನಿಗದಿಪಡಿಸುವ ಹಂತದವರೆಗೆ ಯಾರೊಬ್ಬರ ಹಸ್ತಕ್ಷೇಪ ಇಲ್ಲದ ಪಾರದರ್ಶಕ ವ್ಯವಸ್ಥೆ ರೂಪಿಸಿದ್ದಾರೆ. ಎಷ್ಟೇ ಪ್ರಭಾವಿ ವ್ಯಕ್ತಿಯೂ ಅಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಕಲ್ಪಿಸಿಲ್ಲ. ಹಾಗಾಗಿ ಸರಕಾರ, ಅಧಿಕಾರಿಗಳು ಬದಲಾದಾಗಲೂ ಕೇಂದ್ರ ಲೋಕಸೇವಾ ಆಯೋಗದಲ್ಲಿ ಅಕ್ರಮ ನಡೆಸಲು ಸಾಧ್ಯವಾಗಿಲ್ಲ. ಯಾವುದೇ ಒಂದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದರೆ ಅಥವಾ ಅಕ್ರಮ ನಡೆದಿದೆ ಎಂದು ವರದಿಯಾದರೆ ಕೇಂದ್ರ ಲೋಕಸೇವಾ ಆಯೋಗ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಹಾಗಾಗಿಯೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು, ಅದರ ಪಾವಿತ್ರ್ಯತೆಯನ್ನು ಎಲ್ಲರೂ ಗೌರವಿಸುತ್ತಾರೆ. ಒಬ್ಬ ಕೂಲಿ ಮಾಡುವ ವ್ಯಕ್ತಿಯ ಮಗನೂ ಐಎಎಸ್, ಐಪಿಎಸ್ ಅಧಿಕಾರಿಯಾಗಿ ನೇಮಕವಾಗಬಹುದು ಎಂಬ ಭರವಸೆ ಮೂಡಿಸಿದೆ. ಈ ಹೊತ್ತಿನವರೆಗೂ ಕೇಂದ್ರ ಲೋಕಸೇವಾ ಆಯೋಗ ಅದೇ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ.
ಕರ್ನಾಟಕ ಲೋಕಸೇವಾ ಆಯೋಗ ಭ್ರಷ್ಟಗೊಂಡಿದೆ ಎಂದು ಅದಕ್ಕೆ ಪರ್ಯಾಯ ಸಂಸ್ಥೆ ನಿರ್ಮಾಣ ಮಾಡುವುದು ಪರಿಹಾರವಲ್ಲ. ಕರ್ನಾಟಕ ಲೋಕಸೇವಾ ಆಯೋಗದ ಒಟ್ಟು ವ್ಯವಸ್ಥೆಯಲ್ಲಿ, ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಪಾರದರ್ಶಕ ಮತ್ತು ಬಿಗಿಯಾದ ವ್ಯವಸ್ಥೆ ಮರು ರೂಪಿಸುವ ಕಾರ್ಯ ಮಾಡಬೇಕು. ಕರ್ನಾಟಕ ಲೋಕಸೇವಾ ಆಯೋಗ ಭ್ರಷ್ಟಗೊಂಡಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಪರ್ಯಾಯ ಸಂಸ್ಥೆ ಎಂದು ಭ್ರಮಿಸಿದರೆ ಅದು ಹುಚ್ಚುತನ ಎನಿಸಿಕೊಳ್ಳುತ್ತದೆ. ಆ ಸಂಸ್ಥೆಯನ್ನು ಎಚ್. ಪ್ರಸನ್ನ ಅವರು ಮುನ್ನಡೆಸುವವರೆಗೂ ಅಲ್ಲಿ ಎಲ್ಲವೂ ಚೆನ್ನಾಗಿ ಇರುತ್ತದೆ. ಅಲ್ಲಿಂದ ಅವರು ವರ್ಗಾವಣೆಯಾಗಿ ಒಬ್ಬ ಭ್ರಷ್ಟ ಅಧಿಕಾರಿಯಾಗಿ ಬಂದರೆ ಮತ್ತೆ ಯಥಾಸ್ಥಿತಿಗೆ ಮರುಳುತ್ತದೆ. ಒಂದು ಕಾಲದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಕೋಶವಾಗಿತ್ತು. ಆರಂಭದಲ್ಲಿ ಅತ್ಯಂತ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದ ಆ ಸಂಸ್ಥೆ ನಂತರದ ದಿನಗಳಲ್ಲಿ ಮೆಡಿಕಲ್ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿ ಹೆಸರು ಕೆಡಿಸಿಕೊಂಡಿತ್ತು.
ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಒಟ್ಟು ಅರ್ಜಿಗಳಲ್ಲಿ ಒಂದು ಅನುಪಾತ ಮೂರು ಅಥವಾ ಐದರಂತೆ ಮೌಖಿಕ ಸಂದರ್ಶನಕ್ಕೆ ಕರೆದು ಯಾರು ಹೆಚ್ಚು ಹಣ ಕೊಡುತ್ತಾರೋ ಅವರನ್ನು ಆ ಹುದ್ದೆಗೆ ಆಯ್ಕೆ ಮಾಡಲಾಗುತ್ತಿತ್ತು. ಕರ್ನಾಟಕ ಲೋಕಸೇವಾ ಆಯೋಗದ ಜಾಯಮಾನವೇ ಅಂತಹದ್ದು. ಪ್ರೊಬೇಷನರಿ ಅಧಿಕಾರಿಗಳ ಹುದ್ದೆ ನೇಮಕಾತಿಯಲ್ಲೂ ಕೈ ಚಳಕವಾಗುವುದು ಮೌಖಿಕ ಸಂದರ್ಶನದಲ್ಲೇ. ಹಣ ಕೊಟ್ಟವರಿಗೆ ಮೊದಲ ಆದ್ಯತೆ ಎಂಬುದು ಕರ್ನಾಟಕ ಲೋಕಸೇವಾ ಆಯೋಗದ ಘೋಷ ವಾಕ್ಯವಾಗಿದೆ. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ವಿಪರೀತ ಭ್ರಷ್ಟಾಚಾರ ನಡೆಸುತ್ತದೆ. ಅದನ್ನು ತಪ್ಪಿಸಲು ಆ ನೇಮಕಾತಿ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿತ್ತು. ಪಾರದರ್ಶಕ ನೇಮಕಾತಿ ನಡೆಸಲಾಗುವುದು ಎಂದು ಹೇಳಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಒಎಂಆರ್ ಶೀಟ್ ಪರಿಚಯಿಸಿತು. ಒಎಂಆರ್ ಶೀಟ್ ಮೂಲಕ ನಡೆಸುವ ಪ್ರವೇಶ ಪರೀಕ್ಷೆ ಸಂಪೂರ್ಣ ಲಂಚ ರಹಿತವಾಗಿರುತ್ತದೆ ಎಂದು ಬಿಂಬಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಅತ್ಯಂತ ಕಠಿಣ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಒಎಂಆರ್ ಕೈ ಚಳಕ ಶುರು ಮಾಡಿದರು. ಸ್ನಾತಕೋತ್ತರ ಪದವಿಯಲ್ಲಿ ಕೇವಲ ಪ್ರತಿಶತ 56 ಅಂಕ ಪಡೆದವರು ಒಎಂಆರ್ ಶೀಟಿನಲ್ಲಿ ಎಪ್ಪತ್ತು-ಎಂಭತ್ತು ಅಂಕ ಗಳಿಸಿ ನೌಕರಿ ಗಿಟ್ಟಿಸತೊಡಗಿದರು. ಈ ಬಗೆಯ ಪ್ರವೇಶ ಪರೀಕ್ಷೆ ನಡೆಸಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆಸುವುದು ಯುಜಿಸಿ ನಿಯಮಕ್ಕೆ ವಿರುದ್ಧವಾದುದು. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಏಕರೂಪತೆ ಅಳವಡಿಸಿಕೊಳ್ಳಲಿಲ್ಲ. ಒಂದೇ ಹುದ್ದೆಗೆ ಎರಡು ಬಗೆಯ ನೇಮಕಾತಿ ವಿಧಾನ ಅನುಸರಿಸತೊಡಗಿತು. ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಒಎಂಆರ್ ಶೀಟ್ ಪ್ರವೇಶ ಪರೀಕ್ಷೆ ಕಡ್ಡಾಯ ಮಾಡಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ನೇಮಕಾತಿ ಪ್ರಾಧಿಕಾರವಾಯಿತು. ಆದರೆ ಸರಕಾರದ ಅನುದಾನ ಪಡೆಯುವ ಖಾಸಗಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಒಎಂಆರ್ ಶೀಟ್ ಪ್ರವೇಶ ಪರೀಕ್ಷೆಯನ್ನು ಕಡ್ಡಾಯ ಮಾಡಲಿಲ್ಲ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ರಚಿಸುವ ವಿಷಯ ತಜ್ಞರು ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೊಗೊಂಡ ನೇಮಕಾತಿ ಸಮಿತಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆ ಮಾಡುವ ಅಧಿಕಾರ ಪಡೆದಿದೆ. ಹಾಗೆ ನೋಡಿದರೆ, ಖಾಸಗಿ ಮತ್ತು ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಸಂಬಳ ಯುಜಿಸಿ ನಿಯಮಾನುಸಾರ ನಿಗದಿಯಾಗಿರುತ್ತದೆ. ಆದರೆ ನೇಮಕ ಮಾಡುವ ವಿಧಾನ ಭಿನ್ನವಾಗಿದೆ. ಹೀಗೆ ಮಾಡುವುದರಲ್ಲಿ ಯಾವ ಘನವಾದ ತರ್ಕ ಅಡಗಿದೆ ಎಂಬುದನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರೇ ಉತ್ತರಿಸಬೇಕು.
ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದ ಒಂದು ಪ್ರಶ್ನೆ ಹಲವರಲ್ಲಿದೆ. ಸ್ನಾತಕೋತ್ತರ ಪದವಿ ಪೂರೈಸಿ ನೆಟ್ ಅಥವಾ ಸೆಟ್ ಅರ್ಹತಾ ಪರೀಕ್ಷೆ ಪಾಸ್ ಆದವರು ಮತ್ತು ಪಿಎಚ್. ಡಿ. ಪದವಿ ಪಡೆದವರು ಸರಕಾರಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು, ನೇಮಕಾತಿ ಹೊಂದಲು ಅರ್ಹರು. ಇತ್ತೀಚಿನ ದಿನಮಾನಗಳಲ್ಲಿ ಪಿಎಚ್. ಡಿ. ಗುಣಮಟ್ಟ ಕುಸಿದಿದೆ. ಹಾಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಎಂಆರ್ ಶೀಟ್ ಮೂಲಕ ಮತ್ತೊಂದು ಪ್ರವೇಶ ಪರೀಕ್ಷೆ ನಡೆಸಿ ಆಯ್ಕೆ ಮಾಡುವುದು ಗುಣಮಟ್ಟದ ದೃಷ್ಟಿಯಿಂದ ಅತ್ಯಗತ್ಯ ಎಂದೇ ಭಾವಿಸೋಣ. ಸ್ನಾತಕೋತ್ತರ ಪದವಿ ನಂತರ ಪಿಎಚ್. ಡಿ. ಪದವಿ ಪಡೆದುಕೊಂಡು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ನಡೆಸುವ ಅತ್ಯಂತ ಕಠಿಣವಾದ ಕೆ-ಸೆಟ್ ಅರ್ಹತಾ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಆದ ಅಭ್ಯರ್ಥಿಗಳು ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ಪಡೆದುಕೊಳ್ಳಲು ಮತ್ತೊಮ್ಮೆ ಒಎಂಆರ್ ಶೀಟ್ ಮೂಲಕ ಪ್ರವೇಶ ಪರೀಕ್ಷೆ ಬರೆದು ಪ್ರತಿಭಾ ಸಾಮರ್ಥ್ಯ ರುಜುವಾತುಪಡಿಸುವ ಅನಿವಾರ್ಯತೆ ಇದೆಯೇ..? ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ನಡೆಸುವ ಕೆ-ಸೆಟ್ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಮೇಲೆ ಪರೀಕ್ಷಾ ಪ್ರಾಧಿಕಾರಕ್ಕೆ ನಂಬಿಕೆ ಇಲ್ಲವೇ? ಪ್ರವೇಶ ಪರೀಕ್ಷೆಗಳ ಮೇಲೆ ಮತ್ತೊಂದು ಪ್ರವೇಶ ಪರೀಕ್ಷೆ ಬರೆಯುವುದು ಯಾವ ಪುರುಷಾರ್ಥಕ್ಕೆ? ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ನೆಟ್ ಅರ್ಹತಾ ಪರೀಕ್ಷೆಯಲ್ಲಿ ಉತ್ತಿರ್ಣರಾದವರು ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕವಾಗುತ್ತಾರೆ. ಮತ್ತೊಂದು ಪ್ರವೇಶ ಪರೀಕ್ಷೆ ಬರೆಯುವ ಅಗತ್ಯ ಇರುವುದಿಲ್ಲ. ಯುಜಿಸಿ ನಿಯಮಗಳು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟ ಕಾನೂನು ರೂಪಿಸಿದೆ. ಆದರೆ ಕರ್ನಾಟಕದಲ್ಲಿ ಯಾವುದೇ ಖಚಿತ ಹಾಗೂ ಸ್ಪಷ್ಟ ಕಾನೂನು ಇಲ್ಲ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ನಡೆಸುವ ಒಎಂಆರ್ ಶೀಟಿನ ಪ್ರವೇಶ ಪರೀಕ್ಷೆಗೆ ಒಂದು ನಿಯಮ ಮತ್ತು ತರ್ಕ ಇಲ್ಲ. ಹೀಗಿರುವಾಗ ಸ್ವಾಯತ್ತ ಸಂಸ್ಥೆಗಳಾದ ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಒಎಂಆರ್ ಶೀಟಿನ ಪ್ರವೇಶ ಪರೀಕ್ಷೆ ಕಡ್ಡಾಯ ಎಂಬ ಒಂದು ಸುತ್ತೋಲೆ ಹೊರಡಿಸಲಾಗಿತ್ತು. ಆ ಸುತ್ತೋಲೆ ಹಿನ್ನೆಲೆಯಲ್ಲಿ ರಾಯಚೂರು ವಾಲ್ಮೀಕಿ ವಿಶ್ವವಿದ್ಯಾನಿಲಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪರೀಕ್ಷೆ ಆಧರಿಸಿ ಒಂದು ಅನುಪಾತ ಐದರಂತೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ಮೌಖಿಕ ಸಂದರ್ಶನ ನಡೆಸಲು ಎಲ್ಲ ತಯಾರಿ ನಡೆಸಿತ್ತು. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪರೀಕ್ಷೆ ನಡೆಸುವುದು ಯುಜಿಸಿ ನಿಯಮಾವಳಿಗಳ ವಿರುದ್ಧವಾದುದು ಎಂದು ಕೆಲವು ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ನ್ಯಾಯಾಲಯ ಅವರ ಮನವಿಯನ್ನು ಮಾನ್ಯ ಮಾಡಿ ರಾಯಚೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ತಡೆಯಾಜ್ಞೆ ನೀಡಿದೆ. ಅಂತಿಮ ತೀರ್ಪು ಬರುವವರೆಗೂ ಆಯ್ಕೆ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ. ಅತಾರ್ಕಿಕವಾಗಿ ಅನಗತ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿರುವುದು ಹಣ ಮಾಡುವುದಕ್ಕಾಗಿ ಎಂಬುದು ಈಗಾಗಲೇ ಒಎಂಆರ್ ಶೀಟ್ ಟ್ಯಾಂಪರಿಂಗ್ ಪ್ರಕರಣಗಳಲ್ಲಿ ಸಾಬೀತಾಗಿದೆ. ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದು ದಾಖಲೆ ಸಮೇತ ಸಾಬೀತುಪಡಿಸಿದ ಮೇಲೂ ಕ್ರಮ ಜರುಗಿಸಿಲ್ಲ. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಒಎಂಆರ್ ಶೀಟಿನ ಕೈ ಚಳಕ ಹೇಳತೀರದು. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಒಎಂಆರ್ ಶೀಟಿನ ಅಂಕಗಳು ಮತ್ತು ಸ್ನಾತಕೋತ್ತರ ಪದವಿಯಲ್ಲಿ ಗಳಿಸಿದ ಅಂಕಗಳ ತಾಳೆ ಮಾಡಿದರೆ ಬಂಡವಾಳ ಬಯಲಾಗುತ್ತದೆ. ಎಚ್. ಪ್ರಸನ್ನ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ. ಅಷ್ಟಾಗಿಯೂ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಹಾವೇರಿಯ ಶಂಕರ್ ಬನ್ನೂರ್ ಅಕ್ರಮ ನಡೆಸಿ ಅತಿ ಹೆಚ್ಚು ಅಂಕ ಗಳಿಸಿದ್ದ. ಆರಂಭದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಕ್ರಮ ನಡೆದೇ ಇಲ್ಲ ಎಂದು ಬಲವಾಗಿ ವಾದಿಸಿತ್ತು. ಆದರೆ ದಾಖಲೆ ಸಮೇತ ಅಕ್ರಮ ಸಾಬೀತಾದ ಮೇಲೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಇದು ಬೆಳಕಿಗೆ ಬಂದ ಏಕೈಕ ಪ್ರಕರಣ. ಬೆಳಕಿಗೆ ಬಾರದ ಅಕ್ರಮಗಳ ಬಗ್ಗೆ ಯಾರು ತನಿಖೆ ಮಾಡಿ ಪತ್ತೆ ಹಚ್ಚುತ್ತಾರೆ?
ಕರ್ನಾಟಕ ಲೋಕಸೇವಾ ಆಯೋಗವಾಗಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವಾಗಲಿ ಸ್ವರೂಪದಲ್ಲೇ ಪಾರದರ್ಶಕ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಜ್ಞಾನೇಂದ್ರಕುಮಾರ್ನಂತಹ ಪರಮ ಭ್ರಷ್ಟ ಅಧಿಕಾರದಲ್ಲಿದ್ದರೂ ಅಕ್ರಮ ಎಸಗಲು ಅವಕಾಶ ಇರಬಾರದು. ಅಂತಹ ಬಿಗಿಯಾದ ಅತ್ಯಂತ ಪಾರದರ್ಶಕ ವ್ಯವಸ್ಥೆ ರೂಪಿಸಬೇಕು. ನಮ್ಮ ಕಣ್ಣ ಮುಂದೆ ಕೇಂದ್ರ ಲೋಕಸೇವಾ ಆಯೋಗದ ಅತ್ಯುತ್ತಮ ಮಾದರಿ ಇದೆ. ಅಂತಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಭ್ರಷ್ಟ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ಮಾಡದೆ ತೇಪೆ ಹಚ್ಚುವ ಕೆಲಸ ಮಾಡುತ್ತಾ ಹೋದರೆ ಅಕ್ರಮಗಳು ನಡೆಯುತ್ತಲೇ ಇರುತ್ತವೆ. ನುಸುಳುಕೋರರು ಹೊಸ ಭ್ರಷ್ಟ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಒಂದು ಸಣ್ಣ ಕ್ರಿಮಿ ಕೂಡ ನುಸುಳಲು ಅವಕಾಶ ಇರಬಾರದು. ಅಂಥ ಬಿಗಿಯಾದ ಪರೀಕ್ಷಾ ವ್ಯವಸ್ಥೆ ತರಬೇಕು. ಎಸ್.ವಿ. ರಂಗನಾಥ್, ವಂದಿತಾ ಶರ್ಮಾ, ಟಿ.ಎಂ. ವಿಜಯಭಾಸ್ಕರ್ ಮತ್ತು ಎಲ್.ಕೆ. ಅತೀಕ್ ಅವರ ಸಮಿತಿ ಕೊಡುವ ವರದಿಯ ಸಾರ ಅಳವಡಿಸಿಕೊಂಡರೆ ಪಾರದರ್ಶಕ ವ್ಯವಸ್ಥೆ ರೂಪಿಸಬಹುದು.
(ಅಂಕಣಕಾರರು ಹಿರಿಯ ಲೇಖಕರು, ಪತ್ರಕರ್ತರು)






