ಬಲ್ದೋಟ ತೊಲಗಿಸಿ, ಕೊಪ್ಪಳ ಉಳಿಸಿ

ವಿಕಸಿತ ಭಾರತದ ಭಾಗವಾಗಿ ಕೇಂದ್ರ ಸರಕಾರ 2047ರ ಕರಡು ಯೋಜನೆಯಂತೆ ಭಾರತದಲ್ಲಿ 600 ಮಿಲಿಯನ್ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿ ಹೊಂದಿದೆ. ಈ ಎಲ್ಲ ಕಾರಣಕ್ಕೆ ಬಲ್ದೋಟ ಕಂಪೆನಿ ತನ್ನ ವಿಸ್ತರಣಾ ಘಟಕಕ್ಕೆ 2021ರಲ್ಲೇ ಪರಿಸರ ಅರಣ್ಯ ಇಲಾಖೆಯ ಅನುಮತಿ ದಕ್ಕಿಸಿಕೊಂಡಿದೆ. ಕೊಪ್ಪಳ ಜನತೆಯ ಪರಿಸರ ಕಾಳಜಿಯ ಮಾತುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಜನಸಾಮಾನ್ಯರ ಬದುಕು ಬರ್ಬಾದ್ ಮಾಡಿ ಬಲ್ದೋಟ ಕಂಪೆನಿ ಕಾರ್ಯ ನಿರ್ವಹಿಸಬೇಕೆ? ಎನ್ನುವುದು ಎಲ್ಲ ಪಕ್ಷದ ಜನಪ್ರತಿನಿಧಿಗಳ ಪ್ರಧಾನ ಕಾಳಜಿಯಾಗಬೇಕು.
ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲಿ ಅಭಿವೃದ್ಧಿ ಹೊಂದದ ಪ್ರದೇಶಗಳ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿತ್ತು. ಭಾಷಾವಾರು ಪ್ರಾಂತ ರಚನೆಗಾಗಿ ನಾಯಮೂರ್ತಿ ಫಜಲ್ ಅಲಿ ನೇತೃತ್ವದಲ್ಲಿ ರಾಜ್ಯ ಪುನರ್ ವಿಂಗಡಣಾ ಆಯೋಗವನ್ನು ರಚಿಸಲಾಗಿತ್ತು. ಈ ಏಕ ಸದಸ್ಯ ಆಯೋಗ ಭಾಷಾವಾರು ಪ್ರಾಂತ ರಚನೆಗೆ ಶಿಫಾರಸು ಮಾಡಿತ್ತು. ಅಷ್ಟು ಮಾತ್ರವಲ್ಲ ನಿಜಾಮ್ ರಾಜ್ಯದ ಭಾಗವಾಗಿದ್ದ ತೆಲಂಗಾಣ, ಮರಾಠವಾಡ ಮತ್ತು ಅಂದಿನ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಚಾರಿತ್ರಿಕ ಕಾರಣದಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ವಿಶೇಷ ಕಾಳಜಿ ವಹಿಸಿ ಆ ಪ್ರದೇಶದ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಬೇಕು ಎಂದೂ ಒತ್ತು ಕೊಟ್ಟು ಹೇಳಿತ್ತು.
ನ್ಯಾಯಮೂರ್ತಿ ಫಝಲ್ ಅಲಿ ನೇತೃತ್ವದ ಶಿಫಾರಸು ಆಧರಿಸಿಯೇ ಮೊತ್ತ ಮೊದಲ ಬಾರಿಗೆ ತೆಲಂಗಾಣ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ನಂತರ ಮರಾಠವಾಡ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಾಡಲಾಯಿತು.
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ(ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ) ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಯಿತು. ಹೈದರಾಬಾದ್ ರಾಜ್ಯದ ದೊರೆ ನಿಜಾಮ್ ಭಾರತ ದೇಶದಲ್ಲಿ ಸೇರಿಕೊಳ್ಳಲು ತಡ ಮಾಡಿದ್ದರಿಂದ ಈ ಭಾಗದ ಜಿಲ್ಲೆಗಳಿಗೆ 1948ಕ್ಕೆ ಸ್ವಾತಂತ್ರ್ಯ ದೊರಕಿತು. ಆ ದಿನವನ್ನು ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ರಾಜ್ಯದ ವ್ಯಾಪ್ತಿಗೆ ಒಳಪಟ್ಟಿದ್ದವು. ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳು, ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅಸ್ತಿತ್ವಕ್ಕೆ ಬಂದವು. ಮದ್ರಾಸ್ ಪ್ರಾಂತಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆಯನ್ನು ಆಡಳಿತಾತ್ಮಕ ಅನುಕೂಲಕ್ಕೆಂದು ಕಲಬುರಗಿ ಕಂದಾಯ ವಿಭಾಗಕ್ಕೆ ಸೇರಿಸಲಾಗಿತ್ತು. ಹಾಗಾಗಿ ಬಳ್ಳಾರಿ ಮತ್ತು ಹೊಸಪೇಟೆ ಜಿಲ್ಲೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೇರಿಕೊಂಡವು.
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಉದ್ಧಾರ ಮಾಡಲೆಂದು ಬಂದ ಕೈಗಾರಿಕೆಗಳು ಈ ಹೊತ್ತು ಜನಸಾಮಾನ್ಯರ ಬದುಕಿಗೆ ಕಂಟಕವಾಗಿ ಪರಿಣಮಿಸಿವೆ. ಕಲಬುರಗಿ ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳು, ಬಳ್ಳಾರಿ, ಹೊಸಪೇಟೆ ಮತ್ತು ಕೊಪ್ಪಳ ಜಿಲ್ಲೆಗಳ ಸ್ಟೀಲ್ ಕಾರ್ಖಾನೆಗಳು ಹೊಗೆ ಉಗುಳುವ ಮೂಲಕ ಆ ಭಾಗದ ಒಟ್ಟಾರೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ. ಆರೋಗ್ಯಪೂರ್ಣ ಬದುಕು ಎನ್ನುವುದು ಮರೀಚಿಕೆಯಾಗಿದೆ.
1994ರಲ್ಲಿ ಕೊಪ್ಪಳ ಭಾಗದಲ್ಲಿ ಮೊತ್ತ ಮೊದಲಿಗೆ ಕಿರ್ಲೊಸ್ಕರ್ ಕಾಸ್ಟಿಂಗ್ ಘಟಕ ಆರಂಭವಾಗಿತ್ತು. ಆಗ ಈ ಭಾಗದಲ್ಲಿ ಸಂಭ್ರಮವೋ ಸಂಭ್ರಮ. ಯುವಕರಿಗೆ ಉದ್ಯೋಗ ಸಿಗುತ್ತವೆ ಎಂಬ ಆಶಾ ಭಾವನೆ. ಕಿರ್ಲೊಸ್ಕರ್ ಕಾರ್ಖಾನೆ ಆರಂಭವಾದಾಗ ಕೊಪ್ಪಳ ಭಾಗದ ಜನ ಕಂಡ ಕನಸು ಸಾಕಾರಗೊಳ್ಳಲಿಲ್ಲ. ಕಾರ್ಖಾನೆ ಸ್ಥಾಪನೆಗಾಗಿ ಜಮೀನು ಕಳೆದುಕೊಂಡ ಅಸಂಖ್ಯಾತ ರೈತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಸಿಗಲಿಲ್ಲ. ರೈತರ ಮಕ್ಕಳಿಗೆ ಸಣ್ಣ ಪುಟ್ಟ ಹುದ್ದೆಗಳನ್ನು ನೀಡಿದರೇ ಹೊರತು ಆಯಕಟ್ಟಿನ ಜಾಗಗಳಿಗೆ ಸ್ಥಳೀಯ ಪ್ರತಿಭೆಗಳನ್ನು ಬಿಟ್ಟುಕೊಳ್ಳಲಿಲ್ಲ. ಆರಂಭದಲ್ಲಿ ಒಂದು ಚಿಮಣಿ ಹೊಗೆ ಉಗುಳುತ್ತಿತ್ತು. ಆಗ ಯಾರಿಗೂ ಇದು ಅಪಾಯಕಾರಿ ಹೊಗೆ ಎಂದು ಅನಿಸಿರಲಿಲ್ಲ. ಪರಿಸರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಖಾನೆ ಪ್ರಾರಂಭಿಸಲು ಅನುಮತಿ ನೀಡುವ ಮುಂಚೆ ಪರಿಸರ ಮಾಲಿನ್ಯದ ಸಾಧಕ ಬಾಧಕಗಳ ಕುರಿತು ಪರಿಶೀಲಿಸಬೇಕಿತ್ತು. ದೂರದೃಷ್ಟಿ ಇಲ್ಲದೆ ಮತ್ತು ಎಲ್ಲ ಆಯಾಮಗಳಲ್ಲಿ ಪರಿಶೀಲಿಸದೆ ಒಂದು ಕಾರ್ಖಾನೆ ಸ್ಥಾಪಿಸಲು ಒಪ್ಪಿಗೆ ನೀಡಿದರೆ ಏನೆಲ್ಲಾ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಕಿರ್ಲೊಸ್ಕರ್ ಮತ್ತು ಇನ್ನಿತರ ಕಾರ್ಖಾನೆಗಳು ಉಂಟು ಮಾಡುತ್ತಿರುವ ಭೀಕರ ಪರಿಸರ ಮಾಲಿನ್ಯ ಜ್ವಲಂತ ನಿದರ್ಶನವಾಗಿದೆ. ಈಗ ಹಲವಾರು ಚಿಮಣಿಗಳು ತಲೆ ಎತ್ತಿ ನಿತ್ಯ ಹೊಗೆ ಉಗುಳಿ ಜನ ಜಾನುವಾರುಗಳ ಬದುಕನ್ನು ಅಕ್ಷರಶಃ ನರಕವನ್ನಾಗಿಸಿದ್ದಾರೆ. ಕೊಪ್ಪಳ-ಹೊಸಪೇಟೆ ನಡುವೆ 28ಕ್ಕೂ ಹೆಚ್ಚು ಹೊಗೆ ಉಗುಳುವ ಕಾರ್ಖಾನೆಗಳು ಉಸಿರುಗಟ್ಟಿಸುವ ಪರಿಸರ ನಿರ್ಮಾಣ ಮಾಡಿವೆ. ಸ್ಟೀಲ್, ಸ್ಪಾಂಜ್, ಪೆಲ್ಲೆಟ್, ಸಿಮೆಂಟ್, ಸುಣ್ಣ, ರಸಗೊಬ್ಬರ ಕಾರ್ಖಾನೆಗಳು ಪರಿಸರ ಮಾಲಿನ್ಯಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳದೆ ವಿಸ್ತರಣೆಗೆ ಮುಂದಾಗುತ್ತಿವೆ.
ಹೊಗೆ ಉಗುಳುವ ಕಾರ್ಖಾನೆಗಳ ಪೈಕಿ ಬಲ್ದೋಟ ಸಮೂಹದ ಬಲ್ದೋಟ ಸ್ಟೀಲ್ ಆಂಡ್ ಪವರ್ ಲಿಮಿಟೆಡ್ (BSPL)ಕಂಪೆನಿ ರಾಕ್ಷಸಿ ಪ್ರವೃತ್ತಿ ಬೆಳೆಸಿಕೊಂಡು ಕೊಪ್ಪಳ ಸುತ್ತಮುತ್ತಲಿನ ಜನರ ಬದುಕನ್ನು ಬರ್ಬಾದ್ ಮಾಡುತ್ತಿದೆ. ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮುರುಗೇಶ್ ನಿರಾಣಿಯವರು ಕೈಗಾರಿಕಾ ಮಂತ್ರಿಯಾಗಿದ್ದರು. ಬೆಂಗಳೂರು ನಗರದಲ್ಲಿ ಹೂಡಿಕೆದಾರರ ಸಮಾವೇಶಗಳನ್ನು ಆಯೋಜಿಸುತ್ತಿದ್ದರು. ಅಷ್ಟು ಬಂಡವಾಳ ಬಂತು ಇಷ್ಟು ಬಂಡವಾಳ ಬಂತು ಅಂತ ನಿತ್ಯ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಒಂದು ರಾಜ್ಯದ ಅಭಿವೃದ್ಧಿಗೆ ಉದ್ಯಮಗಳು ಅಗತ್ಯ. ಹೆಚ್ಚು ಹೆಚ್ಚು ಕೈಗಾರಿಕೆಗಳು ಬರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ರೈತರ ಕೃಷಿ ಭೂಮಿಯನ್ನು ಬಲಿ ಕೊಟ್ಟು ಕೈಗಾರಿಕೆ ಬರುವುದು ಒಳ್ಳೆಯ ಲಕ್ಷಣವಲ್ಲ. ಕೃಷಿಯಾಧಾರಿತ ಕೈಗಾರಿಕೆಗಳು ಪರಿಸರಕ್ಕೂ, ಕೃಷಿಗೂ ಪೂರಕವಾಗಿ ನಿಲ್ಲುವಂತಿದ್ದರೆ ಮಾತ್ರ ಅಂಥ ಕಂಪೆನಿಗಳಿಗೆ ಮುಕ್ತ ಆಹ್ವಾನ ನೀಡಬಹುದು. ಆದರೆ ನಿರಾಣಿಯವರು ಸಾಧಕ ಬಾಧಕಗಳನ್ನು ಪರಿಶೀಲನೆ ಮಾಡದೆ ಒಪ್ಪಿಗೆ ನೀಡಿದ್ದರ ಕೆಟ್ಟ ಪರಿಣಾಮವನ್ನು ಕೊಪ್ಪಳ ಭಾಗದ ಜನರು ಅನುಭವಿಸುತ್ತಿದ್ದಾರೆ. ಅದೇ ಅವಧಿಯಲ್ಲಿ ಪೋಕ್ಸೋ ಕಂಪೆನಿ ಅವಸರದಲ್ಲಿ ಮಂಜೂರಾತಿ ದಕ್ಕಿಸಿಕೊಂಡಿತ್ತು. ಗದುಗಿನ ತೊಂಟದಾರ್ಯ ಮಠದ ಡಾ. ಸಿದ್ದಲಿಂಗ ಶ್ರೀಗಳು ಉಗ್ರ ಹೋರಾಟ ರೂಪಿಸಿದ ಪರಣಾಮವಾಗಿ ಪೋಕ್ಸೋ ಅಲ್ಲಿಂದ ಕಾಲು ಕಿತ್ತಿತು. ಕಪ್ಪತಗುಡ್ಡದ ಮೇಲೂ ಉದ್ಯಮಿಗಳು ಕಣ್ಣು ಹಾಕಿದ್ದರು. ಪ್ರಜ್ಞಾವಂತರು, ಮಠಾಧೀಶರು, ಜನಸಾಮಾನ್ಯರು ಒಟ್ಟಿಗೆ ಸೇರಿ ಓಡಿಸಿ ಕಳುಹಿಸಿದ್ದರು.
ಕೊಪ್ಪಳ ಸಮೀಪದ ಹಾಲವರ್ತಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಜಮೀನು ಸ್ವಾಧೀನಪಡಿಸಿಕೊಂಡು ಬಲ್ದೋಟ ಸಮೂಹ ಸಂಸ್ಥೆ ಕಾರ್ಖಾನೆ ಸ್ಥಾಪನೆಗೆ ಮುಂದಾದಾಗ ಸ್ಥಳೀಯರು ಎಚ್ಚೆತ್ತುಕೊಳ್ಳಬೇಕಿತ್ತು. ಹೆಚ್ಚಿನ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸುವ ಆಮಿಷ ತೋರಿಸಿ ದಲ್ಲಾಳಿಗಳು ಅಮಾಯಕ ರೈತರನ್ನು ಯಾಮಾರಿಸಿಬಿಟ್ಟರು. ಹಾಗಾಗಿ ಬಲ್ದೋಟ ಸ್ಟೀಲ್ ಆಂಡ್ ಪವರ್ ಲಿಮಿಟೆಡ್ (BSPL)-ಪೆಲ್ಲೆಟ್ ಪ್ಲಾಂಟ್ ಸ್ಥಾಪನೆಯಾಗಿ 2011ರ ಹೊತ್ತಿಗೆ ಉತ್ಪಾದನೆ ಶುರು ಮಾಡಿತು. ಜೊತೆಗೆ ಬಸಾಪುರ ಗ್ರಾಮದ ಜನ ಬಳಕೆಗೆ ಇರುವ 44.35 ಎಕರೆ ವಿಸ್ತೀರ್ಣದ ಕೆರೆ ಜಾಗವನ್ನು ಅತಿಕ್ರಮಿಸಿಕೊಂಡಿತ್ತು. ಬಲ್ದೋಟ ಸಮೂಹ ಸಂಸ್ಥೆಯ ಮಾಲಕರು ಬಲ್ದೋಟ ಕಾರ್ಖಾನೆ ಸ್ಥಾಪಿಸುವ ಮುಂಚೆ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳುವ ವಾಗ್ದಾನ ಮಾಡಿದ್ದರು. ಅತ್ಯಂತ ಪ್ರಭಾವಿ ಉದ್ಯಮಿಯಾಗಿರುವ ಅವರು ಹಣ ಬಲ ಮತ್ತು ಅಧಿಕಾರ ಬಲದಿಂದ ಎಲ್ಲವನ್ನು ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿಗೂ ನಿರ್ಲಕ್ಷಿಸುವ ಉದ್ಧಟತನ ಅವರದು.ಕಾರ್ಖಾನೆಯ ಚಿಮಣಿಗಳು ಉಗುಳುವ ವಿಷಪೂರಿತ ಹೊಗೆ, ಧೂಳು ಹಾಲವರ್ತಿ ಸುತ್ತಲಿನ ಹಳ್ಳಿಗಳನ್ನು ಬಾಧಿಸುತ್ತಿದೆ. ಬಲ್ದೋಟ ಕಂಪೆನಿ ಸೇರಿ ಒಟ್ಟು 28 ಕಾರ್ಖಾನೆಗಳು ಕೊಪ್ಪಳ -ಭಾಗ್ಯ ನಗರ ಸುತ್ತಲಿನ 22 ಹಳ್ಳಿಗಳನ್ನು ವಿಷಪೂರಿತ ಹೊಗೆಯಿಂದ ನರಕವನ್ನಾಗಿಸಿವೆ. ಸ್ಥಳೀಯ ಬಾಧಿತರು, ಪರಿಸರವಾದಿಗಳು ಮಾಲಿನ್ಯ ತಡೆಯಬೇಕೆಂದು ನೂರಾರು ಬಾರಿ ಪರಿಸರ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಗಾಳಿ, ನೀರು ಸಂಪೂರ್ಣ ಕಲುಷಿತಗೊಂಡಿದೆ. ಅಂತರ್ಜಲವು ವಿಷಪೂರಿತವಾಗಿದೆ. ಐವತ್ತು ಸಾವಿರಕ್ಕೂ ಹೆಚ್ಚು ಕೃಷಿಕರು ಈ ಪರಿಸರ ಮಾಲಿನ್ಯದಿಂದ ಬದುಕು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕೊಪ್ಪಳ ಜಿಲ್ಲಾ ಕೇಂದ್ರದ ಪ್ರತಿಶತ 40 ಭಾಗದಲ್ಲಿ ವಿಷಪೂರಿತ ಹೊಗೆ ಆವರಿಸಿದೆ. ಕಾರ್ಖಾನೆಗಳು ಉಗುಳುವ ವಿಷಪೂರಿತ ಹೊಗೆಯಿಂದ ಜನರು ಹೃದಯ ರೋಗ, ಮೂರ್ಛೆ ರೋಗ, ನರರೋಗ, ಕುರುಡುತನ, ಟಿ.ಬಿ., ಅಸ್ತಮಾ, ಉಸಿರಾಟದ ಅಲರ್ಜಿ, ಚರ್ಮರೋಗ, ಬಂಜೆತನ ಮತ್ತು ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಂದ ಬಳಲುತ್ತಿದ್ದಾರೆ. ಹಿರೇಬಗನಾಳ ಮತ್ತು ಅಲ್ಲಾ ನಗರ ಹತ್ತಿರದ ಕಾರ್ಖಾನೆಗಳ ವಿಷಪೂರಿತ ಹೊಗೆ, ಧೂಳು ಅತಿ ಹೆಚ್ಚು ಅಪಾಯಕಾರಿ ಎಂಬುದು ಪರಿಸರ ಇಲಾಖೆಗೂ ಮನವರಿಕೆಯಾಗಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು ವರದಿ ನೀಡಿ ಹಿರೇಬಗನಾಳ ಮತ್ತು ಅಲ್ಲಾ ನಗರ ಸಮೀಪದ ಕಾರ್ಖಾನೆಗಳನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕೆಂದು ಶಿಫಾರಸು ಮಾಡಿದೆ.ಕುಡಿಯುವ ನೀರು, ಉಸಿರಾಡುವ ಗಾಳಿ ವಿಷಪೂರಿತವಾಗಿದೆ. ವಿಷಾನಿಲಪೂರಿತ ನೀರು ಕುಡಿದು ಅಸಂಖ್ಯಾತ ಜಾನುವಾರುಗಳು ಸಾವನ್ನಪ್ಪಿವೆ.
ಬಲ್ದೋಟ ಸ್ಟೀಲ್ ಕಾರ್ಖಾನೆ ಸೇರಿ ಒಟ್ಟು 28 ಕಾರ್ಖಾನೆಗಳು ನಿತ್ಯ ಕಾರುತ್ತಿರುವ ವಿಷಪೂರಿತ ಹೊಗೆ, ಧೂಳು ಯಾವ ಪ್ರಮಾಣದಲ್ಲಿ ಪರಿಸರ ಮಾಲಿನ್ಯವನ್ನುಂಟು ಮಾಡಿದೆ ಎಂಬುದರ ವೈಜ್ಞಾನಿಕ ಅಧ್ಯಯನ ನಡೆದಿಲ್ಲ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸದನದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಮಿತಿ ರಚಿಸಿ, ಕೊಪ್ಪಳ ಸುತ್ತಮುತ್ತಲಿನ ಭಾಗದ ಪರಿಸರ ಮಾಲಿನ್ಯದ ಅಧ್ಯಯನ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಜನ ಜಾನುವಾರುಗಳ ಸಾವು ನೋವಿನ ಅಂಕಿ ಸಂಖ್ಯೆಗಳೇ ಅಲ್ಲಿನ ವಿಷಪೂರಿತ ಪರಿಸರದ ದುರಂತ ಗಾಥೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲವಾದರೂ, ಬಲ್ದೋಟ ಮತ್ತು ಇನ್ನಿತರ ಕಂಪೆನಿಗಳ ಪರಿಸರ ಕಾಳಜಿ ಬೆತ್ತಲೆಗೊಳಿಸಲು ವೈಜ್ಞಾನಿಕ ಅಧ್ಯಯನ ನಡೆಸುವುದು ಅಗತ್ಯವಾಗಿದೆ. ಎಂ.ಬಿ. ಪಾಟೀಲರು ಆ ಕೆಲಸವನ್ನು ಬೇಗ ಮಾಡಿ ಮುಗಿಸಬೇಕು.
ಕೊಪ್ಪಳ ಸುತ್ತಮುತ್ತಲಿನ ಹಳ್ಳಿಗಳು ವಿಷಪೂರಿತ ಹೊಗೆಯಿಂದ ಬಾಧಿತವಾಗಿ ದಶಕಗಳೇ ಕಳೆದವು. ಇಲ್ಲಿಯವರೆಗೆ ಪರಿಹಾರ ಕಂಡುಕೊಳ್ಳಲಾಗಿಲ್ಲ. ಕಳೆದ ಹದಿನೈದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಲ್ದೋಟ ಸ್ಟೀಲ್ ಆಂಡ್ ಪವರ್ ಲಿಮಿಟೆಡ್ -ಪೆಲ್ಲೆಟ್ ಪ್ಲಾಂಟ್ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಿಂಚಿತ್ತೂ ಕ್ರಮ ವಹಿಸಿಲ್ಲ. ಆದರೆ ಕಂಪೆನಿಯ ಬಣ್ಣ ಬಣ್ಣದ ಸ್ಲೋಗನ್‌ಗಳು, ಪರಿಸರ ಕಾಳಜಿಯ ಮಾತುಗಳು ಸದಾ ರಾರಾಜಿಸುತ್ತಿವೆ. ಪರಿಸರ ಮಾಲಿನ್ಯದಿಂದ ಬದುಕನ್ನು ಕಳೆದುಕೊಂಡ ಕೊಪ್ಪಳ ಸುತ್ತಮುತ್ತಲಿನ ಜನತೆಗೆ ದಿ. 14-2-2025ರಂದು ಬರ ಸಿಡಿಲಿನಂಥ ಸುದ್ದಿ ಅಪ್ಪಳಿಸಿತ್ತು. ಅಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬಲ್ದೋಟ ಸಮೂಹ ಸಂಸ್ಥೆಯು ಪ್ರಮುಖ ಘೋಷಣೆಯೊಂದನ್ನು ಮಾಡಿತು. ರೂ. 54,000/ ಕೋಟಿ ಅಂದಾಜು ವೆಚ್ಚದಲ್ಲಿ ಬಲ್ದೋಟ ಸ್ಟೀಲ್ ಆಂಡ್ ಪವರ್ ಲಿಮಿಟೆಡ್ -ಪೆಲ್ಲೆಟ್ ಘಟಕವನ್ನು ವಿಸ್ತರಣೆ ಮಾಡುವುದಾಗಿ ಪ್ರಕಟಿಸಿತು. ಅಷ್ಟು ಮಾತ್ರವಲ್ಲ ಕೇಂದ್ರ ಪರಿಸರ ಇಲಾಖೆಯ ಅನುಮತಿಯನ್ನು ಪಡೆದುಕೊಂಡಿರುವುದಾಗಿ ಹೇಳಿತು. ಒಟ್ಟು 3.5 ಮಿಲಿಯನ್ ಟನ್ ಸ್ಟೀಲ್ ಉತ್ಪಾದನಾ ಸಾಮರ್ಥ್ಯದ ಗುರಿ ಹೊಂದಿರುವ ಈ ವಿಸ್ತರಣಾ ಘಟಕಕ್ಕೆ ಒಂದು ಸಾವಿರ ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿರುವುದಾಗಿ ಹೇಳಿಕೊಂಡಿತು. ಬಲ್ದೋಟ ಕಂಪೆನಿಯ ಈ ನಿರ್ಧಾರದಿಂದ ಎಚ್ಚೆತ್ತ ಕೊಪ್ಪಳ ಜನತೆ ಆಕ್ರೋಶ ವ್ಯಕ್ತಪಡಿಸಿತು. ಫೆ. 24,2025ರಂದು ಕೊಪ್ಪಳ ಬಂದ್‌ಗೆ ಕರೆ ನೀಡಲಾಯಿತು. ಪಕ್ಷಾತೀತವಾಗಿ ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸಿದ್ದರು. ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಹೋರಾಟವನ್ನು ಬೆಂಬಲಿಸಿದ್ದರು. ನಾಡಿನ ಹಿರಿಯ ಬಂಡಾಯ ಸಾಹಿತಿ ಶ್ರೀ ಅಲ್ಲಮಪ್ರಭು ಬೆಟ್ಟದೂರು ಅವರ ನೇತೃತ್ವದ ಹೋರಾಟ ಸಮಿತಿ ಅಂದಿನಿಂದ ಇಂದಿನವರೆಗೆ ನಿರಂತರ ಸತ್ಯಾಗ್ರಹ ನಡೆಸುತ್ತಿದೆ. 23-3-2026ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ‘ಬಲ್ದೋಟ ತೊಲಗಿಸಿ ಕೊಪ್ಪಳ ಉಳಿಸಿ’ ಸತ್ಯಾಗ್ರಹ ನಡೆಸಲಾಯಿತು. ಈ ಸತ್ಯಾಗ್ರಹದಲ್ಲಿ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೊಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ, ಎ.ಟಿ. ರಾಮಸ್ವಾಮಿ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮುಂತಾದವರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದರು.
ಕೊಪ್ಪಳ ನಗರದಲ್ಲಿ ಅಲ್ಲಮಪ್ರಭು ಬೆಟ್ಟದೂರು ಅವರ ಪ್ರಧಾನ ಸಂಚಾಲಕತ್ವದಲ್ಲಿ, ಸಂತೋಷ್ ದೇಶಪಾಂಡೆ, ಡಿ.ಎಂ. ಬಡಿಗೇರ್ ಮತ್ತು ಮಲ್ಲಿಕಾರ್ಜುನ ಗೋನಾಳ್ ಅವರು ಸಂಚಾಲಕರಾಗಿ ‘ಬಲ್ದೋಟ ತೊಲಗಿಸಿ, ಕೊಪ್ಪಳ ಉಳಿಸಿ’ ಹೋರಾಟವನ್ನು ಕಳೆದ ಹನ್ನೊಂದು ತಿಂಗಳಿಂದ ಮುನ್ನಡೆಸುತ್ತಿದ್ದಾರೆ. ಹಿರಿಯ ಚಿತ್ರ ನಟ ಪ್ರಕಾಶ್ ರಾಜ್ ಸೇರಿದಂತೆ ಕನ್ನಡ ನಾಡಿನ ಎಲ್ಲ ಪ್ರಮುಖ ಸಾಹಿತಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹೋರಾಟಕ್ಕೆ ಈ ತಿಂಗಳ ಕೊನೆಗೆ ಒಂದು ವರ್ಷ ತುಂಬುತ್ತಿದೆ. ಆದರೂ ಪೂರಕ ಸ್ಪಂದನ ದೊರೆತಿಲ್ಲ. ಬಸಾಪುರ ಕೆರೆಯನ್ನು, ಸುಪ್ರೀಂ ಕೋರ್ಟ್ ಆದೇಶ ಇದ್ದಾಗಲೂ ಬಲ್ದೋಟ ಕಂಪೆನಿಯವರು ಅತಿಕ್ರಮಿಸಿದ್ದರು. ಅದು ಸಾರ್ವಜನಿಕ ಬಳಕೆಗೆ ಲಭ್ಯವಾಗಬೇಕೆಂದು ಜನರೇ ಗೇಟು ಮುರಿದು ಒಳ ನುಗ್ಗಿದ್ದಾರೆ. ವಿಷಪೂರಿತ ಹೊಗೆ ಉಗುಳುತ್ತಿರುವ ಎಲ್ಲ ಕಾರ್ಖಾನೆಗಳು ಮತ್ತು ವಿಸ್ತರಣೆಗೆ ಮುಂದಾಗಿರುವ ಬಲ್ದೋಟ ಕಂಪೆನಿ ವಿರುದ್ಧ ಕೊಪ್ಪಳ ಜನತೆ ಸಿಡಿದೆದ್ದಿದ್ದಾರೆ. ಬಲ್ದೋಟ ವಿಸ್ತರಣೆ ಘಟಕ ಕಾರ್ಯ ಆರಂಭಿಸಿದರೆ. ಕೊಪ್ಪಳ ನಗರವೇ ವಿಷಪೂರಿತ ಗಾಳಿಯಿಂದ ಆವರಿಸಿಕೊಳ್ಳುತ್ತದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಘೋಷಣೆಯ ಭಾಗವಾಗಿ ಈ ಸ್ಟೀಲ್ ಕಂಪೆನಿ ಕಾರ್ಯಾರಂಭ ಮಾಡುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಉಕ್ಕು ನೀತಿ-2017ರ ಗುರಿ ತಲುಪಲು ದೇಶದಲ್ಲಿ 300 ಮಿಲಿಯನ್ ಟನ್ ಉಕ್ಕು ಉತ್ಪಾದನೆ ಮಾಡಬೇಕಿದೆ. ವಿಕಸಿತ ಭಾರತದ ಭಾಗವಾಗಿ ಕೇಂದ್ರ ಸರಕಾರ 2047ರ ಕರಡು ಯೋಜನೆಯಂತೆ ಭಾರತದಲ್ಲಿ 600 ಮಿಲಿಯನ್ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿ ಹೊಂದಿದೆ. ಈ ಎಲ್ಲ ಕಾರಣಕ್ಕೆ ಬಲ್ದೋಟ ಕಂಪೆನಿ ತನ್ನ ವಿಸ್ತರಣಾ ಘಟಕಕ್ಕೆ 2021ರಲ್ಲೇ ಪರಿಸರ ಅರಣ್ಯ ಇಲಾಖೆಯ ಅನುಮತಿ ದಕ್ಕಿಸಿಕೊಂಡಿದೆ. ಕೊಪ್ಪಳ ಜನತೆಯ ಪರಿಸರ ಕಾಳಜಿಯ ಮಾತುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಜನಸಾಮಾನ್ಯರ ಬದುಕು ಬರ್ಬಾದ್ ಮಾಡಿ ಬಲ್ದೋಟ ಕಂಪೆನಿ ಕಾರ್ಯ ನಿರ್ವಹಿಸಬೇಕೆ? ಎನ್ನುವುದು ಎಲ್ಲ ಪಕ್ಷದ ಜನಪ್ರತಿನಿಧಿಗಳ ಪ್ರಧಾನ ಕಾಳಜಿಯಾಗಬೇಕು.
(ಅಂಕಣಕಾರರು ಹಿರಿಯ ಲೇಖಕರು, ಪತ್ರಕರ್ತರು)






