ಕೆಟ್ಟ ಸಾರಿಗೆ ವ್ಯವಸ್ಥೆಗೆ ಅಮಾಯಕರ ಬಲಿ

ಕರ್ನಾಟಕ ಸರಕಾರ ತನ್ನ ಸಾರಿಗೆ ಸಂಸ್ಥೆಗಳಲ್ಲಿ ಆಡಳಿತದ ಶಿಸ್ತು ಮತ್ತು ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಕಲ್ಪಿಸಿದರೆ ಜನ ಬೇರೆಡೆಗೆ ಕಣ್ಣು ಹಾಯಿಸುವುದಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಭೂತ ಸೌಕರ್ಯಗಳೊಂದಿಗೆ ಪೈಪೋಟಿ ನಡೆಸುವ ಶಕ್ತಿ ಹೊಂದಿರುವ ಖಾಸಗಿ ಸಾರಿಗೆ ಸಂಸ್ಥೆ ಮಾತ್ರ ಉಳಿದುಕೊಳ್ಳುತ್ತದೆ. ಕರ್ನಾಟಕ ಸರಕಾರ ಚಿತ್ರದುರ್ಗದ ಭೀಕರ ಅಪಘಾತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಮೃತರ ಗೌರವಾರ್ಥ ಕರ್ನಾಟಕ ಸಾರಿಗೆ ಸಂಸ್ಥೆಗೆ ಕಾಯಕಲ್ಪ ನೀಡಲು ಮುಂದಾಗಬೇಕು. ಮೊಸಳೆ ಕಣ್ಣೀರು ಸುರಿಸುವುದರಿಂದ ಯಾರಿಗೂ ಒಳಿತಾಗುವುದಿಲ್ಲ.
ಬುಧವಾರ ತಡರಾತ್ರಿ ಚಿತ್ರದುರ್ಗ-ಹಿರಿಯೂರು ರಾಷ್ಟ್ರೀಯ ಹೆದ್ದಾರಿಯ ಜವೆಗೊಂಡನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿಯೊಂದು, ಸೀ ಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ ಧಗಧಗನೇ ಉರಿದು ಅದರೊಳಗಿದ್ದ ಆರು ಜನ ಸಜೀವ ದಹನಗೊಂಡಿದ್ದಾರೆ. ಒಟ್ಟು 33 ಜನ ಪ್ರಯಾಣಿಕರಲ್ಲಿ ಬಹುತೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಇದಾಗಿದೆ. ಉತ್ತರ ಕರ್ನಾಟಕದಲ್ಲಿ ತೀವ್ರ ನೆರೆ ಬಂದಾಗಲೂ ಸ್ಪಂದಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ ಐವತ್ತು ಸಾವಿರ ರೂ. ಪರಿಹಾರ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ., ಗಾಯಗೊಂಡವರಿಗೆ ರೂ. ಐವತ್ತು ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಸತ್ತವರನ್ನು ತಂದು ಕೊಡುವ ಕೆಲಸ ಯಾರೂ ಮಾಡಲಾರರು. ಪ್ರತೀ ಬಾರಿ ಭೀಕರ ರಸ್ತೆ ಅಪಘಾತ ಸಂಭವಿಸಿದಾಗಲೆಲ್ಲ ಪರಿಹಾರ ಘೋಷಣೆ ಮತ್ತು ಸಂತಾಪ ಸೂಚಿಸುವುದು ಒಂದು ವಿಧಿಕ್ರಿಯೆಯಂತೆ ಅನುಚಾನವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲಿಯವರೆಗೆ ಭೀಕರ ರಸ್ತೆ ಅಪಘಾತದಿಂದ ಸರಕಾರ ಮತ್ತು ಸಮಾಜ ಪಾಠ ಕಲಿತ ನಿದರ್ಶನ ದೊರೆಯುವುದಿಲ್ಲ. ಸರಕಾರವಂತೂ ಕಟ್ಟು ನಿಟ್ಟಿನ ಕ್ರಮ ಜರುಗಿಸುವ ಗೋಜಿಗೂ ಹೋಗುವುದಿಲ್ಲ.
ಈ ಹಿಂದೆ ಖಾಸಗಿ ಬಸ್‌ಗಳು ಭೀಕರ ರಸ್ತೆ ಅಪಘಾತದಲ್ಲಿ ಹಲವು ಬಾರಿ ಪ್ರಯಾಣಿಕರ ಜೀವ ತೆಗೆದುಕೊಂಡಿವೆ. ಯಾವೊಬ್ಬ ಖಾಸಗಿ ಬಸ್ ಮಾಲಕರ ಮೇಲೆ ಕ್ರಮ ಜರುಗಿಸಿದ ಉದಾಹರಣೆ ಸಿಗುವುದಿಲ್ಲ. ಖಾಸಗಿ ಬಸ್ ಮಾಲಕರು ಅಪಘಾತ ಸಂಭವಿಸಿದಾಗ ಒಮ್ಮೆಯೂ ಮೃತರ ಕುಟುಂಬಕ್ಕೆ ಪರಿಹಾರ ನೀಡಿದ ನಿದರ್ಶನವೂ ಇಲ್ಲ. ಖಾಸಗಿ ಬಸ್ ಮಾಲಕರು ಲಾಭ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಈ ಮೊದಲು ಹುಮನಾಬಾದ ಬಳಿ ನ್ಯಾಷನಲ್ ಟ್ರಾವೆಲ್‌ಗೆ ಸೇರಿದ ಬಸ್ ಧಗಧಗನೆ ಉರಿದು ಹಲವು ಜನ ಪ್ರಯಾಣಿಕರು ಸಜೀವ ದಹನಗೊಂಡಿದ್ದರು. ಚಿತ್ರದುರ್ಗ ರಸ್ತೆಯಲ್ಲೇ ಒಮ್ಮೆ ಕರ್ನಾಟಕ ರಸ್ತೆ ಸಾರಿಗೆ ಬಸ್ ಬೆಂಕಿಯಲ್ಲಿ ಸುಟ್ಟು ಕರಕಲಾಗಿತ್ತು. ಸರಕಾರಿ ಮತ್ತು ಖಾಸಗಿ ಬಸ್‌ಗಳು ಹಲವು ಬಾರಿ ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಕಿತ್ತುಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತದಲ್ಲಿ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಸರಕಾರ ಮಾತ್ರ ಕಾಟಾಚಾರದ ಕ್ರಮದ ಆಚೆ ಗಂಭೀರವಾಗಿ ಚಿಂತಿಸುತ್ತಿಲ್ಲ.
ಒಂದು ಕಾಲದಲ್ಲಿ ನಮ್ಮ ಜನ ಪ್ರತಿನಿಧಿಗಳು ಕರ್ನಾಟಕ ರಸ್ತೆ ಸಾರಿಗೆಯ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಹಾಗೆ ನೋಡಿದರೆ ಆಗ ಈಗಿನಷ್ಟು ಅತ್ಯುತ್ತಮ ರಸ್ತೆಗಳು ಇರಲಿಲ್ಲ. ಸ್ಟೇಟ್ ಹೈವೇ, ರಾಷ್ಟ್ರೀಯ ಹೈವೇಗಳ ಸಂಖ್ಯೆ ಹೆಚ್ಚಾಗಿವೆ. ಎಲ್ಲೆಡೆ ಗುಣಮಟ್ಟದ ರಸ್ತೆಗಳು ರಾರಾಜಿಸುತ್ತಿವೆ. ಮೂರು ದಶಕಗಳ ಹಿಂದೆ ಅಂಬಸಡಾರ್, ಪದ್ಮಿನಿ ಸೇರಿದಂತೆ ಮೂರು ನಾಲ್ಕು ಮಾದರಿ ಕಾರುಗಳು ಮಾತ್ರ ಲಭ್ಯ ಇದ್ದವು. ಅವುಗಳ ವೇಗ ಬಹಳ ಕಡಿಮೆ ಇರುತ್ತಿತ್ತು. ಈಗ ವೇಗ ಹೆಚ್ಚಾಗಿದೆ. ಅಪಘಾತದ ಪ್ರಮಾಣ ಮತ್ತು ಸಾವಿನ ಸಂಖ್ಯೆ ನೂರಾರು ಪಟ್ಟು ಹೆಚ್ಚಾಗಿದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಅಪಘಾತದ ಪ್ರಮಾಣ ತಗ್ಗಿಸುವ ಸಾಧನಗಳು ಹೆಚ್ಚಾಗಬೇಕಿತ್ತು. ಇತ್ತೀಚೆಗೆ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ರಸ್ತೆ ಅಪಘಾತದಲ್ಲೇ ಜೀವ ಕಳೆದುಕೊಂಡರು. ರಸ್ತೆ ಅಪಘಾತದಲ್ಲಿ ಜನಸಾಮಾನ್ಯರು ಮಾತ್ರವಲ್ಲ ನಟ ನಟಿಯರು, ಶಾಸಕ ಮಂತ್ರಿಗಳು ಜೀವ ಕಳೆದುಕೊಂಡಿದ್ದಾರೆ. ಆದರೆ ಸರಕಾರ ಮತ್ತು ಅದರ ಭಾಗವಾಗಿರುವ ಅಧಿಕಾರಿಗಳು ಅದರಲ್ಲೂ ಪೊಲೀಸ್ ಅಧಿಕಾರಿಗಳು ಅಪಘಾತದ ಪ್ರಮಾಣ ತಪ್ಪಿಸಲು ವಿಶೇಷ ಯೋಜನೆ ರೂಪಿಸಿದಂತೆ ಕಾಣುತ್ತಿಲ್ಲ. ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆ ಕಾರ್ಯಕ್ರಮಗಳಲ್ಲಿ ಹೊಸತನ ಇರುವುದಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಏನೆಲ್ಲಾ ಕಸರತ್ತು ಮಾಡಿದರೂ ರಸ್ತೆ ಜನದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಿಶೇಷವಾಗಿ ಸಾರಿಗೆ ಮತ್ತು ಗೃಹ ಇಲಾಖೆಯ ಮಂತ್ರಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಿದರೆ ಮಾತ್ರ ಹೊಸ ಸಾಧನಗಳು ಲಭ್ಯವಾಗುತ್ತವೆ. ಚೀನಾ, ಜಪಾನ್, ಇಂಗ್ಲೆಂಡ್, ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ಅತ್ಯುತ್ತಮ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಿವೆ. ಅತಿ ವೇಗದ ಕಾರುಗಳು ಅದರಲ್ಲೂ ಚಾಲಕ ರಹಿತ ಕಾರುಗಳು ಬಳಕೆಗೆ ಬಂದಿವೆ. ಭಾರತಕ್ಕೆ ಹೋಲಿಸಿದರೆ ಕಡಿಮೆ ಪ್ರಮಾಣದ ರಸ್ತೆ ಅಪಘಾತಗಳು ಸಂಭವಿಸುತ್ತವೆ.
ಕರ್ನಾಟಕದಲ್ಲಿ ಎರಡು ಮೂರು ದಶಕಗಳ ಹಿಂದೆ ನಿರ್ಮಾಣವಾಗಿರುವ ಕಿರಿದಾದ ರಸ್ತೆಗಳು ಇವೆ. ಆದರೆ ಪ್ರತೀ ದಿನ ಹೊಸ ವಾಹನಗಳು ರಸ್ತೆಗೆ ಬರುತ್ತಲೇ ಇವೆ. ಒಂದೊಂದು ಮನೆಯಲ್ಲಿ ಮೂರ್ನಾಲ್ಕು ಕಾರುಗಳಿವೆ. ಸಾರಿಗೆ ಇಲಾಖೆ ಕಾರುಗಳ ಸಂಖ್ಯೆ ನಿಯಂತ್ರಿಸಲು ಇಲ್ಲಿಯವರೆಗೆ ಕಾನೂನು ರೂಪಿಸಿಲ್ಲ. ಕಾನೂನು ರೂಪಿಸುವುದು ಒಂದು ಭಾಗ, ಕಾನೂನುಗಳನ್ನು ಕಟ್ಟು ನಿಟ್ಟಿನಿಂದ ಜಾರಿಗೊಳಿಸಲು ನಿಗಾ ವಹಿಸುವುದು ಪ್ರಮುಖ ಭಾಗ. ಬೆಂಗಳೂರಿನಲ್ಲಿ ರಸ್ತೆ ನಿಯಮ ಪಾಲಿಸಲು ಗುಣಮಟ್ಟದ ರಸ್ತೆಗಳೇ ಇಲ್ಲ. ಬೆಂಗಳೂರಿನ ಎಷ್ಟೋ ಬಡಾವಣೆಗಳಲ್ಲಿ ಅದರಲ್ಲೂ ಕಮರ್ಷಿಯಲ್ ಏರಿಯಾದಲ್ಲಿ ವಾಹನಗಳ ನಿಲುಗಡೆಗೆ ಸ್ಥಳವೇ ಇಲ್ಲ. ಬೇಕಾಬಿಟ್ಟಿ ವಾಹನ ನಿಲ್ಲಿಸಿ ಕಾನೂನು ಉಲ್ಲಂಘನೆ ಮಾಡುತ್ತಾರೆ.
ಕರ್ನಾಟಕ ಸರಕಾರ ತನ್ನದೇಯಾದ ಸಾರಿಗೆ ವ್ಯವಸ್ಥೆ ಹೊಂದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಂಸ್ಥೆಗಳು ಪೂರ್ಣ ಪ್ರಮಾಣದ ಮೂಲಭೂತ ಸೌಕರ್ಯಗಳು ಹೊಂದಿವೆ. ತಾಲೂಕು ಹೋಬಳಿ ಕೇಂದ್ರಗಳಲ್ಲೂ ಸ್ವಂತ ಕಟ್ಟಡ ಮತ್ತು ಸ್ಥಳದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಹೊಂದಿವೆ. ಬೆಂಗಳೂರು ಮತ್ತು ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ವಿಶಾಲ ಜಾಗದಲ್ಲಿ ಅತ್ಯುತ್ತಮ ಬಸ್ ನಿಲ್ದಾಣಗಳು ನಿರ್ಮಾಣವಾಗಿವೆ. ಅಷ್ಟು ಮಾತ್ರವಲ್ಲ ಪ್ರತೀ ಜಿಲ್ಲಾ ಮತ್ತು ದೊಡ್ಡ ಪಟ್ಟಣಗಳಲ್ಲಿ ಬಸ್ ಡಿಪೋಗಳನ್ನು ನಿರ್ಮಾಣ ಮಾಡಲಾಗಿದೆ. ಅತ್ಯುತ್ತಮ ಸಂಬಳ ಪಡೆಯುವ ಲಕ್ಷ ಲಕ್ಷ ಡ್ರೈವರ್, ಕಂಡಕ್ಟರ್ ಮತ್ತು ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬಿಎಂಟಿಸಿ ಮತ್ತು ಇನ್ನೆರಡು ಸಾರಿಗೆ ಸಂಸ್ಥೆಗಳು ಕೋಟಿ ಕೋಟಿ ರೂ. ಬೆಲೆ ಬಾಳುವ ಚಿರಾಸ್ತಿ ಹೊಂದಿವೆ. ಲಭ್ಯ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕರ್ನಾಟಕದ ಸಾರಿಗೆ ಸಂಸ್ಥೆಗಳೇ ರಾಜ್ಯ ಸರಕಾರದ ಬೊಕ್ಕಸಕ್ಕೆ ಬಹು ದೊಡ್ಡ ಆರ್ಥಿಕ ಸಂಪನ್ಮೂಲ ಒದಗಿಸುವ ಶಕ್ತಿ ಪಡೆದಿವೆ. ಕರ್ನಾಟಕ ಸರಕಾರದ ಅಧೀನ ಸಂಸ್ಥೆಗಳಾಗಿರುವ ಸಾರಿಗೆ ಸಂಸ್ಥೆಗಳು ಒಂದು ಕಾಲದಲ್ಲಿ ಸಾಕಷ್ಟು ಲಾಭ ತಂದು ಕೊಡುವ ಕಾಮಧೇನುವಾಗಿದ್ದವು. ಕರ್ನಾಟಕ ಸಾರಿಗೆ ಸಂಸ್ಥೆಗಳು ಲಾಭ ಮಾಡಿದರೆ, ರಸ್ತೆ ಅಪಘಾತ ತಡೆಗೆ ವಿನೂತನ ತಂತ್ರ ಜ್ಞಾನ ಬಳಸಬಹುದು. ಹಾಗೆ ನೋಡಿದರೆ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಅತ್ಯುತ್ತಮ ಬಸ್‌ಗಳನ್ನು ಹೊಂದಿವೆ. ಇಂತಹ ದುಬಾರಿ ಮತ್ತು ಹೈಟೆಕ್ ಬಸ್‌ಗಳು ಬಹುತೇಕ ಖಾಸಗಿ ಸಾರಿಗೆ ಸಂಸ್ಥೆಗಳು ಹೊಂದಿಲ್ಲ. ಇಷ್ಟಾಗಿಯೂ ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳು ನಿರಂತರ ನಷ್ಟ ಅನುಭವಿಸುತ್ತಿವೆ. ಕನಿಷ್ಠ ಮೂಲಭೂತ ಸೌಕರ್ಯ ಹೊಂದದ, ಅತ್ಯಂತ ಕಳಪೆ ಬಸ್‌ಗಳನ್ನು ಹೊಂದಿರುವ ಅನೇಕ ಖಾಸಗಿ ಸಾರಿಗೆ ಸಂಸ್ಥೆಗಳು ಅತ್ಯಧಿಕ ಲಾಭ ಮಾಡಿಕೊಳ್ಳುತ್ತಿವೆ. ಕರ್ನಾಟಕ ರಾಜ್ಯ ಸರಕಾರದ ಅಧೀನದಲ್ಲಿರುವ ರಸ್ತೆ ಸಾರಿಗೆ ಸಂಸ್ಥೆಗಳು ಹೊಂದಿರುವ ಸವಲತ್ತುಗಳು, ಅತ್ಯಾಧುನಿಕ ಬಸ್ ಗಳು ದೇಶದ ಬೇರೆ ಯಾವ ರಾಜ್ಯಗಳಲ್ಲೂ ಇಲ್ಲ. ಕರ್ನಾಟಕದಲ್ಲಿ ವಿಆರ್‌ಎಲ್, ಎಸ್‌ಆರ್‌ಎಸ್‌ನಂತಹ ಖಾಸಗಿ ಸಾರಿಗೆ ಸಂಸ್ಥೆಗಳು ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಹೊಂದಿವೆ. ಆದರೆ ಮೂಲಭೂತ ಸೌಕರ್ಯಗಳೇ ಹೊಂದಿಲ್ಲ. ವಿಆರ್‌ಎಲ್ ಮತ್ತು ಎಸ್‌ಆರ್‌ಎಸ್‌ನಂತಹ ಖಾಸಗಿ ಸಾರಿಗೆ ಸಂಸ್ಥೆಗಳು ಆನಂದ್ ರಾವ್ ವೃತ್ತದಲ್ಲಿ ಅತ್ಯಂತ ಚಿಕ್ಕ ಮತ್ತು ಇಕ್ಕಟ್ಟಿನ ಸ್ಥಳದಲ್ಲಿ ಬಸ್ ನಿಲ್ದಾಣ ಹೊಂದಿವೆ. ಉಳಿದಂತೆ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುಪಾಲು ಖಾಸಗಿ ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ ಸಾರ್ವಜನಿಕ ರಸ್ತೆಗಳೇ ನಿಲ್ದಾಣಗಳಾಗಿವೆ. ಟ್ರಾಫಿಕ್ ಪೊಲೀಸರಿಗೆ ಲಂಚ ನೀಡಿ ಸಾರ್ವಜನಿಕ ರಸ್ತೆಗಳನ್ನು ಬಳಸಿಕೊಳ್ಳುತ್ತಾರೆ. ಖಾಸಗಿ ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ ಪಿಕ್ ಅಪ್ ಮತ್ತು ಡ್ರಾಪ್ ಸ್ಥಳಗಳು ಸಾರ್ವಜನಿಕ ರಸ್ತೆಗಳೇ ಆಗಿರುತ್ತವೆ. ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್‌ಗಳು ಪ್ರಯಾಣಿಕರಿಗೆ ರಸ್ತೆ ಬದಿಯಲ್ಲಿ ಕಾಯಲು ಹೇಳುತ್ತವೆ.
ಖಾಸಗಿ ಸಾರಿಗೆ ಸಂಸ್ಥೆಗಳ ಬಸ್‌ಗಳು ಬೆಳಗ್ಗೆ ಬಂದು ತಲುಪಿದಾಗ ಸಾರ್ವಜನಿಕ ರಸ್ತೆ ಅಕ್ಷರಶಃ ಜನದಟ್ಟಣೆಯಿಂದ ಕೂಡಿರುತ್ತದೆ. ರಾತ್ರಿ ಆ ಬಸ್ ಗಳು ತೆರಳುವಾಗಲೂ ರಸ್ತೆ ಬದಿಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಆಗಲೂ ಆ ರಸ್ತೆಗಳು ಜನದಟ್ಟಣೆಯಿಂದ ಕೂಡಿರುತ್ತವೆ. ಅದರಿಂದ ಜನಸಾಮಾನ್ಯರಿಗೆ ಎಷ್ಟೇ ತೊಂದರೆಯಾದರೂ ಟ್ರಾಫಿಕ್ ಪೊಲೀಸರು ಲಂಚದ ಆಸೆಗೆ ಬಾಯಿ ಮುಚ್ಚಿಕೊಂಡು ಕೂತಿರುತ್ತಾರೆ.
ರಾತ್ರಿ ಒಂಭತ್ತು ಗಂಟೆಯ ನಂತರ ಬೆಂಗಳೂರಿಂದ ಹೊರಡುವ ಎಂಟು ದಿಕ್ಕುಗಳಲ್ಲಿ ಇರುವ ಎಲ್ಲ ಮುಖ್ಯ ರಸ್ತೆಗಳು ಈ ಖಾಸಗಿ ಸಾರಿಗೆ ಸಂಸ್ಥೆಯ ಬಸ್‌ಗಳಿಂದ ಕಿಕ್ಕಿರಿದು ಜನದಟ್ಟಣೆಯಾಗಿರುತ್ತವೆ. ಮೈಸೂರು ರಸ್ತೆ, ತುಮಕೂರು ರಸ್ತೆ, ಕೋಲಾರ ರಸ್ತೆ, ಹೈದರಾಬಾದ್ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆಗಳು ರಾತ್ರಿ ಒಂಭತ್ತರಿಂದ ಹನ್ನೊಂದರವರೆಗೆ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ ನಿಲುಗಡೆಯಿಂದಾಗಿ ಟ್ರಾಫಿಕ್ ಸಮಸ್ಯೆ ಎದುರಿಸ ಬೇಕಾಗುತ್ತದೆ. ಕನಿಷ್ಠ ನಿಲುಗಡೆ ಸ್ಥಳವನ್ನು ಹೊಂದದ ಈ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್‌ಗಳು ಪ್ರತೀ ದಿನ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳೊಂದಿಗೆ ಸ್ಪರ್ಧೆ ಮಾಡುತ್ತಿರುತ್ತವೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದಾಯವನ್ನೇ ಕಸಿದುಕೊಳ್ಳುತ್ತಿರುತ್ತವೆ. ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಹೋಗುವ ಪ್ರಯಾಣಿಕರನ್ನು ವಿಆರ್‌ಎಲ್ ಖಾಸಗಿ ಸಾರಿಗೆ ಸಂಸ್ಥೆ ಕಸಿದುಕೊಳ್ಳುತ್ತದೆ. ಬೆಂಗಳೂರಿಂದ ಹೊರಡುವ ಎಲ್ಲ ವಿಆರ್‌ಎಲ್ ಬಸ್‌ಗಳು ಭರ್ತಿಯಾಗಿರುತ್ತವೆ. ಎಸ್‌ಆರ್‌ಎಸ್ ಬಸ್‌ಗಳು ಎರಡನೇ ಆದ್ಯತೆ ಪಡೆದುಕೊಂಡಿರುತ್ತವೆ. ದುರಂತವೆಂದರೆ, ಅತ್ಯಂತ ಸುಸಜ್ಜಿತ ಕೇಂದ್ರ ಬಸ್ ನಿಲ್ದಾಣ ಹೊಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಸ್ಲೀಪರ್ ಕೋಚ್ ಎಸಿ ಮತ್ತು ನಾನ್ ಎಸಿ ಬಸ್‌ಗಳು ಅರ್ಧ ಭರ್ತಿಯಾಗಿರುತ್ತವೆ. ಉಳಿದಂತೆ ರಾಜಹಂಸ, ಐರಾವತದಂತಹ ಹೈಟೆಕ್ ಬಸ್‌ಗಳು ಕೆಲವೇ ಪ್ರಯಾಣಿಕರನ್ನು ಹೊತ್ತು ಅರ್ಧ ಖಾಲಿಯಾಗಿಯೇ ಪ್ರಯಾಣ ಮಾಡುತ್ತವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಗಲು ಪ್ರಯಾಣಿಸುವ ಬಸ್ ಗಳು ಅದರಲ್ಲೂ ಕೆಂಪು ವೇಗದೂತ ಬಸ್‌ಗಳು ತುಂಬಿ ತುಳುಕುತ್ತವೆ. ಯಾಕೆಂದರೆ, ಖಾಸಗಿ ಸಾರಿಗೆ ಸಂಸ್ಥೆಯ ಬಸ್‌ಗಳು ಹಗಲು ಪ್ರಯಾಣ ಮಾಡುವುದಿಲ್ಲ.
ರಾತ್ರಿ ಪ್ರಯಾಣ ಹೊರಡುವ ಖಾಸಗಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ವಿಆರ್‌ಎಲ್ ಮಾತ್ರ ಕನಿಷ್ಠ ಸೌಲಭ್ಯ ನೀಡುತ್ತದೆ. ಸಿಸಿಟಿವಿ, ಸ್ವಚ್ಛವಾದ ಕ್ಯಾಬಿನ್, ಇದ್ದುದರಲ್ಲೇ ಉತ್ತಮವಾದ ಬಸ್‌ಗಳನ್ನು ಒದಗಿಸಿರುತ್ತಾರೆ. ಕಲಬುರಗಿ, ಬೀದರ್ ಕಡೆ ಪ್ರಯಾಣಿಸುವ ವಿಆರ್‌ಎಲ್ ಬಸ್‌ಗಳು ಅತ್ಯಂತ ಕಳಪೆ ಗುಣಮಟ್ಟ ಹೊಂದಿರುತ್ತವೆ. ಯಾವುದೇ ಸಮಯದಲ್ಲಿ ಕೆಟ್ಟು ನಿಲ್ಲಬಹುದಾದ ಸ್ಥಿತಿಯಲ್ಲಿ ಇರುತ್ತವೆ. ಆದರೂ ವಿಆರ್‌ಎಲ್ ಸಂಸ್ಥೆಯ ಎಲ್ಲಾ ಬಸ್‌ಗಳು ಭರ್ತಿಯಾಗಿರುತ್ತವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಇನ್ನಿತರ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಹೋಲಿಸಿದರೆ ವಿಆರ್‌ಎಲ್ ಸಾರಿಗೆ ಸಂಸ್ಥೆಯ ಪ್ರಯಾಣ ದರ ದುಬಾರಿಯಾಗಿರುತ್ತದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅತ್ಯುತ್ತಮ ಬಸ್‌ಗಳು, ಅತ್ಯುತ್ತಮ ಬಸ್ ನಿಲ್ದಾಣ ಹೊಂದಿಯೂ ಪ್ರಯಾಣಿಕರನ್ನು ಆಕರ್ಷಿಸುವಲ್ಲಿ ವಿಫಲವಾಗಿದ್ದಕ್ಕೆ ಮುಖ್ಯ ಕಾರಣ, ಅಪಪ್ರಚಾರ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ರಾತ್ರಿ ಪ್ರಯಾಣ ಸುರಕ್ಷಿತವಲ್ಲ ಎಂಬುದನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ. ಈ ಮಾತಿಗೆ ಪೂರಕವೆನ್ನುವಂತೆ ಕೆಲವು ಸಲ ಕರ್ನಾಟಕ ರಸ್ತೆ ಸಾರಿಗೆ ಬಸ್‌ಗಳು ಅಪಘಾತಕ್ಕೀಡಾಗಿ ಪ್ರಯಾಣಿಕರ ಜೀವ ತೆಗೆದುಕೊಂಡಿವೆ. ವಿಆರ್‌ಎಲ್ ಹೊರತು ಪಡಿಸಿದರೆ ಬಹುತೇಕ ಖಾಸಗಿ ಸಾರಿಗೆ ಸಂಸ್ಥೆಗಳು ಹಲವು ಬಾರಿ ಅಪಘಾತಕ್ಕೀಡಾಗಿ ಹಲವರ ಜೀವ ತೆಗೆದುಕೊಂಡ ನಿದರ್ಶನಗಳಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೂ ಸುರಕ್ಷಿತವಾಗಿ ರಾತ್ರಿ ಪ್ರಯಾಣ ಮಾಡಬಹುದು ಎಂಬುದು ನಂಬಿಕೆಯಾಗಿ ನೆಲೆ ನಿಲ್ಲಬೇಕೆಂದರೆ ಮಂತ್ರಿ, ಶಾಸಕರು ಆ ಬಸ್‌ಗಳಲ್ಲಿ ಪ್ರಯಾಣ ಮಾಡಬೇಕು. ಈಶಾನ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಕರ್ನಾಟಕ ಸರಕಾರದ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡಿ ಎಲ್ಲರೂ ಪ್ರಯಾಣ ಮಾಡಬಹುದು ಎಂದು ಕರೆ ಕೊಟ್ಟಿದ್ದರು. ಇದು ಎಲ್ಲ ಕಡೆ ಮಾದರಿಯಾಗಿ ಅನುಸರಿಸಬೇಕು.
ಈಗ ಚಿತ್ರದುರ್ಗ -ಹಿರಿಯೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾಗಿ ಹಲವು ಜನರ ಜೀವ ಕಿತ್ತುಕೊಂಡ ಸೀಬರ್ಡ್ ಸಾರಿಗೆ ಸಂಸ್ಥೆ ಸೇರಿದಂತೆ ಎಲ್ಲ ಖಾಸಗಿ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ತೀವ್ರ ನಿಗಾ ಇಡಬೇಕು. ಖಾಸಗಿ ಸಾರಿಗೆ ಸಂಸ್ಥೆಯ ಬಸ್‌ಗಳ ಗುಣಮಟ್ಟವನ್ನು ತೀವ್ರ ತಪಾಸಣೆಗೆ ಒಳಪಡಿಸಬೇಕು. ಕರ್ನಾಟಕ ಸರಕಾರಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಾಭ ಮಾಡಲೇಬೇಕು ಎಂಬ ಇರಾದೆ ಇದ್ದಿದ್ದರೆ ಈ ಕೂಡಲೇ ಅದರ ವಿಶ್ವಾಸಾರ್ಹತೆ ಹೆಚ್ಚಿಸಲು ಮುಂದಾಗಬೇಕು. ಅತ್ಯುತ್ತಮ ಬಸ್‌ಗಳು ಎಲ್ಲ ಮೂಲಭೂತ ಸೌಕರ್ಯ ಹೊಂದಿರುವ ನಿಲ್ದಾಣ ಮತ್ತು ವ್ಯವಸ್ಥಿತ ಡಿಪೋಗಳನ್ನು ಹೊಂದಿರುವ ಕರ್ನಾಟಕ ಸರಕಾರದ ಸಾರಿಗೆ ಸಂಸ್ಥೆಗಳು ಅತ್ಯುತ್ತಮ ಮ್ಯಾನೇಜ್ ಮೆಂಟ್ ಅಳವಡಿಸಿಕೊಂಡರೆ ಲಾಭವೂ ಮಾಡಬಹುದು. ಹಾಗೆಯೇ ಸುರಕ್ಷಿತ ಪ್ರಯಾಣದ ಭರವಸೆ ಸಾಕಾರ ಮಾಡಿ ಪ್ರಯಾಣಿಕರ ಜೀವ ಉಳಿಸಬಹುದು.
ಸೀಬರ್ಡ್ ಖಾಸಗಿ ಸಾರಿಗೆ ಸಂಸ್ಥೆ ಸೇರಿ ಎಲ್ಲ ಖಾಸಗಿ ಸಾರಿಗೆ ಸಂಸ್ಥೆಗಳು ಅತ್ಯುತ್ತಮ ಮೂಲಭೂತ ಸೌಕರ್ಯ ಹೊಂದಿದ ಬಸ್ ನಿಲ್ದಾಣ ಹೊಂದಲು ಕಡ್ಡಾಯ ಮಾಡಲು, ಯಾವ ಖಾಸಗಿ ಸಾರಿಗೆ ಸಂಸ್ಥೆ ಗುಣಮಟ್ಟದ ಬಸ್, ಉತ್ತಮ ಸೌಕರ್ಯದ ನಿಲ್ದಾಣ ಮತ್ತು ಸುರಕ್ಷಿತ ಪ್ರಯಾಣ ಖಾತ್ರಿ ಪಡಿಸುತ್ತದೆಯೋ ಅಂಥ ಸಂಸ್ಥೆಗಳಿಗೆ ಮಾತ್ರ ಸರಕಾರ ಅನುಮತಿ ನೀಡಬೇಕು.
ಸಾರ್ವಜನಿಕ ರಸ್ತೆಗಳನ್ನೇ ಬಸ್ ನಿಲ್ದಾಣವನ್ನಾಗಿ ಮಾಡಿಕೊಳ್ಳುವ ಮತ್ತು ಟ್ರಾಫಿಕ್ ಜನದಟ್ಟಣೆಗೆ ಕಾರಣವಾಗುವ ಎಲ್ಲಾ ಖಾಸಗಿ ಸಾರಿಗೆ ಸಂಸ್ಥೆಗಳ ಪರವಾನಿಗೆ ರದ್ದು ಪಡಿಸಬೇಕು. ಭೀಕರ ಅಪಘಾತ ಮಾಡಿ ಜನರ ಜೀವ ತೆಗೆಯುವ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ ಸೇವೆ ಸ್ಥಗಿತಗೊಳಿಸಬೇಕು. ಕರ್ನಾಟಕ ಸರಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಮುಂದಾಗದ ಹೊರತು ಅಪಘಾತಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್ ಅಪಘಾತ ಮಾಡಿ ಜನರ ಜೀವ ತೆಗೆದರೆ ಸಂಬಂಧ ಪಟ್ಟ ಡಿಪೋ ಮ್ಯಾನೇಜರ್ ಅವರನ್ನು ಹೊಣೆಗಾರರನ್ನಾಗಿ ಕ್ರಮ ಜರುಗಿಸಬೇಕು. ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಅತ್ಯಂತ ಅನುಭವಿ ರಾಜಕಾರಣಿ. ಗೃಹ ಖಾತೆ ನಿಭಾಯಿಸಿದವರು. ಅವರು ಮನಸ್ಸು ಮಾಡಿದರೆ ಕರ್ನಾಟಕ ಸಾರಿಗೆ ಇಲಾಖೆಗೆ ಹೊಸ ರೂಪ ಕೊಡಬಲ್ಲರು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲ ಮುಖ್ಯಸ್ಥರ ಆಯ್ಕೆಯಲ್ಲಿ ತುಸು ನಿಗಾ ವಹಿಸಿ ಅವರಿಗೆ ಟಾರ್ಗೆಟ್ ಕೊಟ್ಟರೆ ಖಂಡಿತಾ ಲಾಭ ಮಾಡಬಹುದು. ಅಷ್ಟು ಮಾತ್ರವಲ್ಲ ಸುರಕ್ಷಿತ ಪ್ರಯಾಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅನಿವಾರ್ಯ ಎಂಬ ವಾತಾವರಣ ಮೂಡಿಸಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮತ್ತು ಸರಕಾರದ ಅಧೀನದಲ್ಲಿರುವ ಇನ್ನಿತರ ಸಾರಿಗೆ ಸಂಸ್ಥೆಗಳು ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡಿ ವಿಶ್ವಾಸ ಗಳಿಸಿದರೆ ಖಾಸಗಿ ಸಾರಿಗೆ ಸಂಸ್ಥೆಗಳು ತಮ್ಮಷ್ಟಕ್ಕೆ ಬಾಗಿಲು ಮುಚ್ಚಿಕೊಂಡು ಹೋಗುತ್ತವೆ. ಒಂದೆರಡು ಖಾಸಗಿ ಸಾರಿಗೆ ಸಂಸ್ಥೆಗಳನ್ನು ಹೊರತು ಪಡಿಸಿದರೆ, ಬಹುತೇಕ ಖಾಸಗಿ ಸಾರಿಗೆ ಸಂಸ್ಥೆಗಳು ಅಸುರಕ್ಷಿತ ಪ್ರಯಾಣಕ್ಕೆ ಖ್ಯಾತಿ ಪಡೆದಿವೆ. ಅತ್ಯಂತ ಕಳಪೆ ಗುಣಮಟ್ಟದ ಬಸ್‌ಗಳನ್ನು ಬಳಸುತ್ತವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಗಿಂತಲೂ ಹೆಚ್ಚು ಹಣವನ್ನು ಪೀಕುತ್ತವೆ. ಹಬ್ಬ ಹರಿದಿನದ ಸಂದರ್ಭದಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣಿಕರ ಸುಲಿಗೆ ಮಾಡುತ್ತವೆ.
ಭೀಕರ ರಸ್ತೆ ಅಪಘಾತ ಸಂಭವಿಸಿದಾಗ ಸ್ಪಂದಿಸಿ ಮತ್ತೆ ಅದೇ ನಿರ್ಲಕ್ಷ್ಯ ತೋರಿದರೆ ಜನ ಸರಕಾರದ ಮೇಲಿನ ಭರವಸೆ ಕಳೆದುಕೊಳ್ಳುತ್ತಾರೆ. ಖಾಸಗಿ ಸಾರಿಗೆ ಸಂಸ್ಥೆಯ ರಾತ್ರಿ ಬಸ್ ಸೇವೆ ಈ ಕೂಡಲೇ ನಿಲ್ಲಿಸಿದರೆ ಉತ್ತಮ. ಅದು ಸಾಧ್ಯವಾಗದಿದ್ದರೆ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬಹುದು. ಆ ಷರತ್ತುಗಳಲ್ಲಿ ಸುರಕ್ಷತೆ ಮತ್ತು ಸ್ವಂತ ಬಸ್ ನಿಲ್ದಾಣ ಹೊಂದುವುದನ್ನು ಕಡ್ಡಾಯಗೊಳಿಸಬೇಕು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವೈಫಲ್ಯವನ್ನೇ ಖಾಸಗಿ ಸಾರಿಗೆ ಸಂಸ್ಥೆಗಳು ಬಂಡವಾಳ ಮಾಡಿಕೊಂಡು ಲಾಭ ಮಾಡುತ್ತಿವೆ. ಕರ್ನಾಟಕ ಸರಕಾರ ತನ್ನ ಸಾರಿಗೆ ಸಂಸ್ಥೆಗಳಲ್ಲಿ ಆಡಳಿತದ ಶಿಸ್ತು ಮತ್ತು ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಕಲ್ಪಿಸಿದರೆ ಜನ ಬೇರೆಡೆಗೆ ಕಣ್ಣು ಹಾಯಿಸುವುದಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಭೂತ ಸೌಕರ್ಯಗಳೊಂದಿಗೆ ಪೈಪೋಟಿ ನಡೆಸುವ ಶಕ್ತಿ ಹೊಂದಿರುವ ಖಾಸಗಿ ಸಾರಿಗೆ ಸಂಸ್ಥೆ ಮಾತ್ರ ಉಳಿದುಕೊಳ್ಳುತ್ತದೆ. ಕರ್ನಾಟಕ ಸರಕಾರ ಚಿತ್ರದುರ್ಗದ ಭೀಕರ ಅಪಘಾತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಮೃತರ ಗೌರವಾರ್ಥ ಕರ್ನಾಟಕ ಸಾರಿಗೆ ಸಂಸ್ಥೆಗೆ ಕಾಯಕಲ್ಪ ನೀಡಲು ಮುಂದಾಗಬೇಕು. ಮೊಸಳೆ ಕಣ್ಣೀರು ಸುರಿಸುವುದರಿಂದ ಯಾರಿಗೂ ಒಳಿತಾಗುವುದಿಲ್ಲ.







