ಗ್ರಾಮೀಣಾಭಿವೃದ್ಧಿ ಮತ್ತು ಗಾಂಧೀಜಿ ಕನಸು

ಗ್ರಾಮೀಣಾಭಿವೃದ್ಧಿ ಎಂದರೆ ಎಲ್ಲ ಮಂತ್ರಿಗಳು ಕಾಮಗಾರಿ ಮಾಡಿಸುವುದು, ಕಮಿಷನ್ ಪಡೆದುಕೊಳ್ಳುವುದು ಎಂದಷ್ಟೇ ಭಾವಿಸಿದ್ದಾರೆ. ಚೀನಾ, ಜಪಾನ್ ದೇಶಗಳ ಹಳ್ಳಿಗಳು ಮಹಾತ್ಮಾ ಗಾಂಧೀಜಿಯವರ ಕನಸುಗಳಿಂದ ಪ್ರೇರೇಪಣೆ ಪಡೆದುಕೊಂಡು ಸಮೃದ್ಧವಾಗಿ ಆರ್ಥಿಕ ಚಟುವಟಿಕೆ ನಡೆಸುತ್ತಿವೆ. ಕರ್ನಾಟಕದ ಹಳ್ಳಿಗಳು ಯಾಕೆ ಕಳಾಹೀನವಾಗಿವೆ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಖಾತೆಯ ನೂತನ ಮಂತ್ರಿ ಈಶ್ವರ್ ಖಂಡ್ರೆಯವರು ತಮ್ಮ ಕೆಲಸಗಳ ಮೂಲಕ ನಿಜವಾದ ಮಹಾತ್ಮಾ ಗಾಂಧೀಜಿಯವರ ಅನುಯಾಯಿ ಎಂಬುದನ್ನು ಸಾಬೀತುಪಡಿಸಬೇಕು. ಸಂಘ ಪರಿವಾರ ಮತ್ತು ಬಿಜೆಪಿಯವರ ಕೋಮುವಾದಿ ರಾಜಕಾರಣವನ್ನು ಅಭಿವೃದ್ಧಿ ರಾಜಕಾರಣದ ಮೂಲಕ ಸೋಲಿಸಬೇಕು.
‘‘ಸ್ವಾತಂತ್ರ್ಯ ಬುಡದಲ್ಲಿ ಆರಂಭವಾಗಬೇಕು. ಅದರಂತೆ, ಪ್ರತಿಯೊಂದು ಹಳ್ಳಿಯೂ ಪೂರ್ಣ ಅಧಿಕಾರವುಳ್ಳ ಗಣರಾಜ್ಯವಾಗಿರಬೇಕು. ಪ್ರತಿಯೊಂದು ಹಳ್ಳಿಯೂ ಸ್ವ ಸಾಮರ್ಥ್ಯ ಪಡೆದಿರಬೇಕು. ಇಡೀ ಜಗತ್ತನ್ನೇ ಎದುರಿಸಿ ನಿಂತು ಹೋರಾಡಿ ತನ್ನನ್ನು ರಕ್ಷಿಸಿಕೊಳ್ಳುವಷ್ಟು ತನ್ನ ವ್ಯವಹಾರವನ್ನು ನಿರ್ವಹಿಸುವ ಶಕ್ತಿ ಪಡೆದಿರಬೇಕು.’’
-ಮಹಾತ್ಮಾ ಗಾಂಧೀಜಿ
ಹಳ್ಳಿಗಳನ್ನು ಸ್ವತಂತ್ರ ಆಡಳಿತದ ಘಟಕಗಳನ್ನಾಗಿ ನಿರ್ಮಿಸುವ ಕನಸು ಮಹಾತ್ಮಾ ಗಾಂಧೀಜಿಯವರದಾಗಿತ್ತು. ಹಾಗಾಗಿಯೇ ಅವರು ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದರು. ಗ್ರಾಮ ಸ್ವರಾಜ್ ಪರಿಕಲ್ಪನೆ ಭಾರತದ ಮಟ್ಟಿಗೆ ಬಹುದೊಡ್ಡ ಆದರ್ಶವಾಗಿಯೇ ಉಳಿಯಿತು.
ಮಹಾತ್ಮಾ ಗಾಂಧೀಜಿ ಬದುಕಿದ್ದ ಕಾಲದಲ್ಲಿ ಭಾರತದ ಹಳ್ಳಿಗಳು ಅಕ್ಷರಶಃ ಕುಗ್ರಾಮಗಳಾಗಿದ್ದವು. ವಿದ್ಯುತ್ ಮತ್ತು ಸಾರಿಗೆ ಸಂಪರ್ಕಗಳಿಲ್ಲದ ಹಳ್ಳಿಗಳ ಸಂಖ್ಯೆಯೇ ಅಧಿಕವಾಗಿತ್ತು. ಆಧುನಿಕತೆಯ ಸೋಂಕು ತಗಲದ ಹಳ್ಳಿಗಳನ್ನು ಸ್ವತಂತ್ರ ಆಡಳಿತದ ಘಟಕಗಳನ್ನಾಗಿ ರೂಪಿಸಿ ಜಾತಿ ಮತ್ತು ವರ್ಗರಹಿತ ಗ್ರಾಮ ಸ್ವರಾಜ್‌ಗಳನ್ನಾಗಿ ನೋಡುವ ಕನಸು ಮಹಾತ್ಮಾ ಗಾಂಧೀಜಿಯವರದಾಗಿತ್ತು. ಎಂಟು ದಶಕಗಳು ಕಳೆಯುತ್ತಾ ಬಂದರೂ ಗಾಂಧೀಜಿ ಕನಸು ನನಸು ಮಾಡುವುದು ಒತ್ತಟ್ಟಿಗಿರಲಿ ಮುಂಚಿನ ಹಳ್ಳಿಗಳ ಸಮೃದ್ಧಿಯನ್ನು ಉಳಿಸಿಕೊಳ್ಳಲಾಗಿಲ್ಲ. ಡೆಂಕಲ್ ಪ್ರಸ್ತಾವ, ಗ್ಯಾಟ್ ಒಪ್ಪಂದ, ಜಾಗತೀಕರಣದ ಪ್ರಕ್ರಿಯೆಗೆ ಚಾಲನೆ ಸಿಗುವ ಮುಂಚೆ ಹಳ್ಳಿಗಳು ಆರ್ಥಿಕವಾಗಿ, ಸಾಂಸ್ಕೃತಿವಾಗಿ ಸಮೃದ್ಧವಾಗಿದ್ದವು. ಊಳಿಗ ಮಾನ್ಯ ಪದ್ಧತಿ, ಜಾತೀಯತೆ, ಅನಕ್ಷರತೆ ಹಳ್ಳಿಗಳಿಗೆ ಶಾಪವಾಗಿ ಪರಿಣಮಿಸಿದ್ದರೂ ಬರಡು ಬರಡಾಗಿರಲಿಲ್ಲ. ಗ್ರಾಮೀಣ ಪ್ರದೇಶದ ಆಟೋಟ, ಸಾಂಪ್ರದಾಯಿಕ ಕಲೆ, ಸಂಸ್ಕೃತಿ, ಹಬ್ಬಹರಿದಿನಗಳು ಹಳ್ಳಿಗಳನ್ನು ಸದಾ ನಳನಳಿಸುವಂತೆ ಮಾಡಿದ್ದವು. ಜನಪದ ಪ್ರದರ್ಶನ ಕಲೆಗಳು ಗ್ರಾಮೀಣ ಬದುಕಿನ ಆತ್ಮಗಳಾಗಿದ್ದವು. ಮಳೆಯಾಧಾರಿತ ಕೃಷಿಯ ಅನಿಶ್ಚಿತತೆ ಆಗಲೂ ಇತ್ತು. ಆದರೆ ಆಗ ಕೃಷಿ ಮತ್ತು ಕೃಷಿ ಮಾರುಕಟ್ಟೆ ವ್ಯವಸ್ಥೆ ಪರಾವಲಂಬಿಯಾಗಿರಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಕೃಷಿ ಉತ್ಪನ್ನಗಳಲ್ಲಿ ಕೃಷಿಗೆ ಪೂರಕವಾಗಿ ನಿಂತ ಕುಲಕಸುಬಿನವರು ಮಾತ್ರ ಪಾಲುದಾರರಾಗಿದ್ದರು. ಈಗ ಗೊಬ್ಬರ, ಬೀಜ, ಕ್ರಿಮಿನಾಶಕ ಔಷಧಿ ಕಂಪೆನಿಗಳು, ಮೀಟರ್ ಬಡ್ಡಿ ದಂಧೆಯವರು ಮತ್ತು ಕೃಷಿ ಮಾರುಕಟ್ಟೆಯ ದಲ್ಲಾಳಿಗಳು ರೈತರನ್ನು ಅಕ್ಷರಶಃ ಹುರಿದು ಮುಕ್ಕಿ ತಿನ್ನುತ್ತಿದ್ದಾರೆ. ಆಧುನಿಕ ಕೃಷಿ ಪದ್ಧತಿಯಿಂದ ಇಳುವರಿ ಹೆಚ್ಚಿರಬಹುದು, ಹಸಿರುಕ್ರಾಂತಿ ಸಂಭವಿಸಿರಬಹುದು. ಆದರೆ ಹಗಲಿರುಳು ದುಡಿಯುವ ರೈತ ಬಸವಳಿದಿದ್ದಾನೆ. ದಿನೇ ದಿನೇ ಕೃಷಿ ಆಕರ್ಷಣೆ ಕಳೆದುಕೊಳ್ಳುತ್ತಿದೆ. ಕೃಷಿಯೆಂದರೆ ಲಾಭದಾಯಕವಲ್ಲದ ವೃತ್ತಿಯಾಗಿದೆ. ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಹಳ್ಳಿಗಳು ಜೀವಂತ ಶವಗಳಾಗಿವೆ. ಸಣ್ಣ ಹಿಡುವಳಿದಾರರು ಕೇವಲ ಕೃಷಿಯನ್ನು ಅವಲಂಬಿಸಿ ಬದುಕುವ ಸ್ಥಿತಿಯಲ್ಲಿ ಇಲ್ಲ. ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ಗೋವಾ ಕಡೆಗೆ ಗುಳೆ ಹೋಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಜಾಗತೀಕರಣದ ಪರಿಣಾಮವಾಗಿ ಗ್ರಾಮೀಣ ಕಲೆಗಳು ಸಂಪೂರ್ಣ ನಾಶವಾಗಿವೆ. ಗ್ರಾಮೀಣ ಸೌಹಾರ್ದ ಸಂಸ್ಕೃತಿ ಅಳಿವಿನಂಚಲ್ಲಿದೆ. ಕರ್ನಾಟಕದ ಅಸಂಖ್ಯಾತ ಹಳ್ಳಿಗಳಲ್ಲಿ ಮುಸ್ಲಿಮ್ ಸಮುದಾಯದವರು ಇಲ್ಲದಿದ್ದರೂ ಅಲ್ಲಿ ಮುಹರ‌್ರಂ ಆಚರಿಸಲಾಗುತ್ತಿತ್ತು. ಜಾತೀಯತೆ ಒಂದು ಸಂರಚನೆಯಾಗಿತ್ತು. ಆದರೆ ಮನುಷ್ಯ ಸಂಬಂಧಗಳು ಆ ಸಂರಚನೆಯಾಚೆ ಜೀವಂತವಾಗಿದ್ದವು. ಧರ್ಮವು ಮನುಷ್ಯ ಸಂಬಂಧಗಳಲ್ಲಿ ಬಿರುಕು ಮೂಡಿಸುವ ಅಸ್ತ್ರಗಳಾಗಿರಲಿಲ್ಲ. ‘‘ಭಾರತದ ಸ್ವರಾಜ್ಯ ಎಂದರೆ ಬಹುಮತದ ಕೋಮಿನ ಅಥವಾ ಹಿಂದೂಗಳ ರಾಜ್ಯ ಎನ್ನಲಾಗಿದೆ. ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಅದೇ ನಿಜವಾದರೆ, ನಾನಂತೂ ಅದನ್ನು ಸ್ವರಾಜ್ಯ ಎನ್ನುವುದಿಲ್ಲ. ನನ್ನ ಎಲ್ಲ ಶಕ್ತಿಯಿಂದಲೂ ಅದರ ವಿರುದ್ಧ ಹೋರಾಡುತ್ತೇನೆ. ಏಕೆಂದರೆ ನನ್ನ ಪಾಲಿಗೆ ಹಿಂದ್ ಸ್ವರಾಜ್ಯ ಎನ್ನುವುದು ಎಲ್ಲ ಜನರ ಆಡಳಿತ, ನ್ಯಾಯದ ಆಡಳಿತ’’ ಎಂದು ಮಹಾತ್ಮಾ ಗಾಂಧೀಜಿಯವರು ತಮ್ಮ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಬರೆದುಕೊಂಡಿದ್ದರು. ಗುಜರಾತಿನ ನರೇಂದ್ರ ಮೋದಿ ಗಾಂಧೀಜಿಯವರ ಈ ಎರಡು ಸಾಲುಗಳನ್ನು ಓದಿ ಗೌರವ ಕೊಟ್ಟಿದ್ದರೆ ಭಾರತ ಇಂದು ಕೋಮು ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರಲಿಲ್ಲ.
ಮಹಾತ್ಮಾ ಗಾಂಧೀಜಿಯವರ ಕಾಲದಲ್ಲಿ ಭಾರತಕ್ಕೆ ಆಧುನಿಕತೆ ಅಷ್ಟಾಗಿ ಪ್ರವೇಶ ಮಾಡಿರಲಿಲ್ಲ. ಆಗಿನ ಹಳ್ಳಿಗಳಲ್ಲೇ ಸ್ವರಾಜ್ಯ ಕಲ್ಪನೆ ಕಂಡಿದ್ದರು. ಗಾಂಧೀಜಿಯವರ ಕನಸಿನ ಹಳ್ಳಿಗಳು ಈಗ ಚೀನಾ, ಜಪಾನ್ ದೇಶಗಳಲ್ಲಿ ನೋಡಲು ಸಿಗುತ್ತವೆ. ಕರ್ನಾಟಕದ ಬಹುತೇಕ ಜನಪ್ರತಿನಿಧಿಗಳು ಆ ದೇಶಗಳನ್ನು, ಅಲ್ಲಿಯ ಅಭಿವೃದ್ಧಿಯ ಪರಿಯನ್ನು ಕಣ್ಣಾರೆ ಕಂಡು ಬಂದಿದ್ದಾರೆ. ಆದರೆ ಕರ್ನಾಟಕದ ಹಳ್ಳಿಗಳನ್ನು ಆ ಮಟ್ಟಕ್ಕೆ ಎತ್ತರಿಸುವ, ಸ್ವಾವಲಂಬಿ ಘಟಕಗಳನ್ನಾಗಿ ರೂಪಿಸಬೇಕು ಎಂದು ಯಾರಿಗೂ ಅನಿಸುವುದಿಲ್ಲ.
ಕರ್ನಾಟಕದಲ್ಲಿ ಸರಿ ಸುಮಾರು ಮೂವತ್ತು ಸಾವಿರ ಹಳ್ಳಿಗಳಿವೆ. ಸಾವಿರಾರು ತಾಂಡಾಗಳನ್ನು ಇತ್ತೀಚಿನ ದಿನಗಳವರೆಗೆ ಕಂದಾಯ ಗ್ರಾಮಗಳನ್ನಾಗಿ ರೂಪಿಸಲು ಸಾಧ್ಯವಾಗಿರಲಿಲ್ಲ. ಮೂವತ್ತು ಸಾವಿರ ಹಳ್ಳಿಗಳ ಹಣೆಬರಹ ಬರೆಯುವ 6,022 ಗ್ರಾಮ ಪಂಚಾಯತ್ ಗಳಿವೆ. ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಅಸ್ತಿತ್ವಕ್ಕೆ ಬಂದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳು ಜನಪ್ರತಿನಿಧಿಗಳಿಲ್ಲದೆ ಬಣಗುಟ್ಟುತ್ತಿವೆ. ಅಧಿಕಾರ ವಿಕೇಂದ್ರೀಕರಣದ ಮೂಲ ಆಶಯವೇ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು. ಪ್ರತೀ ಹಳ್ಳಿಯೂ ತನ್ನ ಅಭಿವೃದ್ಧಿ ಮೀಮಾಂಸೆಯನ್ನು ತಾನೇ ರೂಪಿಸಿಕೊಳ್ಳಬೇಕು. ಹಳ್ಳಿಗಳ ಅಭಿವೃದ್ಧಿಯ ರೂಪುರೇಷೆ ರಾಜ್ಯದ ರಾಜಧಾನಿಯಿಂದ ಹೇರಲ್ಪಡಬಾರದು ಎಂಬುದು ಮಹಾತ್ಮಾ ಗಾಂಧೀಜಿ, ಡಾ. ರಾಮ ಮನೋಹರ್ ಲೋಹಿಯಾ ಮುಂತಾದವರ ಕನಸಾಗಿತ್ತು. ಲೋಹಿಯಾ ಅವರು ಚೌಕಂಬಾ ಅರ್ಥಾತ್ ನಾಲ್ಕು ಸ್ತರದಲ್ಲಿನ ಆಡಳಿತ ವ್ಯವಸ್ಥೆಯ ಕನಸು ಕಂಡಿದ್ದರು. ಗ್ರಾಮ, ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಆಡಳಿತ ವ್ಯವಸ್ಥೆ ಇರಬೇಕೆಂದು ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ನೀಡಿದರು. ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಿದವರಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಪ್ರಮುಖರು. ಇಂದಿನ ಕಾಂಗ್ರೆಸ್ ನಾಯಕರಿಗೆ ಮಹಾತ್ಮಾ ಗಾಂಧೀಜಿಯವರ ಕನಸುಗಳೇ ಲೆಕ್ಕಕ್ಕೆ ಇಲ್ಲ. ಇದ್ದಿದ್ದರೆ ರಾಜೀವ್ ಗಾಂಧಿಯವರ ಕನಸಿನ ಪಂಚಾಯತ್ ರಾಜ್ ವ್ಯವಸ್ಥೆ ಈ ಪರಿ ದುರ್ಬಲವಾಗಲು ಬಿಡುತ್ತಿರಲಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯಕ್ಕೆ ಅವಕಾಶ ಕಲ್ಪಿಸಿದ್ದು ದಿ. ರಾಜೀವ್ ಗಾಂಧಿಯವರು. ಬಹುತೇಕರು ರಾಜೀವ್ ಗಾಂಧಿಯವರ ಕನಸುಗಳನ್ನು ಮರೆತು ಅಧಿಕಾರ ನಡೆಸುತ್ತಿದ್ದಾರೆ. ದಿ. ರಾಜೀವ್ ಗಾಂಧಿಯವರ ಕನಸಿನ ನವೋದಯ ಶಾಲೆಗಳು ಈ ಹೊತ್ತಿಗೂ ಅತ್ಯುತ್ತಮ ಗುಣಮಟ್ಟ ಉಳಿಸಿಕೊಂಡು ಬೇಡಿಕೆ ಹೆಚ್ಚಿಸಿಕೊಳ್ಳುತ್ತಿವೆ. ದುಡ್ಡಿನ ಆಸೆಗೆ ರಾಜ್ಯ ಸರಕಾರ ನಿರ್ಮಿಸಿರುವ ವಸತಿ ಶಾಲೆಗಳು ರಾಜೀವ್ ಗಾಂಧಿ ಕನಸನ್ನೇ ವಿರೂಪಗೊಳಿಸಿದಂತಿವೆ.
ಮಹಾತ್ಮಾ ಗಾಂಧೀಜಿಯವರು ತಮ್ಮ ಆದರ್ಶದ ಹಳ್ಳಿಗಳ ಬಗ್ಗೆ ಖಚಿತ ಮತ್ತು ಸ್ಪಷ್ಟವಾದ ಕನಸುಗಳನ್ನು ಹೊಂದಿದ್ದರು. ‘‘ನನ್ನ ವಿಚಾರದಲ್ಲಿ ಗ್ರಾಮ ಸ್ವರಾಜ್ಯ ಒಂದು ಪೂರ್ಣ ಗಣ ರಾಜ್ಯ. ತನ್ನ ಮುಖ್ಯ ಅಗತ್ಯಗಳ ಬಗ್ಗೆ ನೆರೆಯ ಗ್ರಾಮಗಳಿಂದ ಸ್ವತಂತ್ರವಾದುದು. ಆದರೂ ಹಲವು ವಿಷಯಗಳಲ್ಲಿ ಅವಲಂಬನೆ ಅಗತ್ಯವಿದ್ದಲ್ಲಿ ಪರಸ್ಪರಾವಲಂಬನೆ ಇರುವುದು. ಅಂತೆಯೇ ತನ್ನ ಆಹಾರವನ್ನು ಬೆಳೆದುಕೊಳ್ಳುವುದು, ತನ್ನ ಬಟ್ಟೆಗೆ ಹತ್ತಿಯನ್ನು ಬೆಳೆದುಕೊಳ್ಳುವುದು ಹಳ್ಳಿಯ ಪ್ರಥಮ ಲಕ್ಷ್ಯ. ದನಕರುಗಳಿಗೆ ಬೇಕಾದ ಮೇವು, ಹಿರಿಯರಿಗೆ, ಮಕ್ಕಳಿಗೆ ಮನೋರಂಜನೆ ಆಟದ ಮೈದಾನ ಇರಬೇಕು. ಆನಂತರ ಹೆಚ್ಚುವರಿ ಭೂಮಿ ಇದ್ದಲ್ಲಿ ಉಪಯುಕ್ತ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಅವಕಾಶ ಇರಬೇಕು. ಹಳ್ಳಿಗೊಂದು ನಾಟಕ ಶಾಲೆ ಇರುತ್ತದೆ. ಶಾಲೆ, ಸಾರ್ವಜನಿಕ ಸಭಾಂಗಣ ಇರುತ್ತದೆ. ಶುದ್ಧ ನೀರಿನ ಸರಬರಾಜಿಗೆ ಅದರದೇ ಜಲಾಗಾರ ಇರುತ್ತದೆ. ಸುರಕ್ಷಿತವಾದ ಬಾವಿ ಅಥವಾ ಕೆರೆಗಳಿಂದ ಇದು ಸಾಧ್ಯ. ಮೂಲ ಶಿಕ್ಷಣದ ಆಖೈರು ಪರೀಕ್ಷೆಯವರೆಗೂ ಶಿಕ್ಷಣ ಕಡ್ಡಾಯ. ಸಾಧ್ಯವಾದಷ್ಟು ವ್ಯವಹಾರವೆಲ್ಲ ಸಹಕಾರದ ಆಧಾರದ ಮೇಲೆ ನಡೆಯುತ್ತವೆ. ಇವೊತ್ತು ಇರುವಂತೆ, ಅಸ್ಪಶ್ಯತೆಯ ಶ್ರೇಣಿಯುಳ್ಳ ಜಾತಿಪದ್ಧತಿ ಇರುವುದಿಲ್ಲ. ಸತ್ಯಾಗ್ರಹ, ಅಸಹಕಾರ ತಂತ್ರಗಳುಳ್ಳ ಅಹಿಂಸೆಯೇ ಗ್ರಾಮಸಮುದಾಯದ ದಂಡಕ ಶಕ್ತಿಯಾಗಿರುತ್ತದೆ’’ ಎಂದು ಮಹಾತ್ಮಾ ಗಾಂಧೀಜಿಯವರು ತಮ್ಮ ಕನಸುಗಳನ್ನು ದಾಖಲೆ ಮಾಡಿದ್ದಾರೆ. ಗಾಂಧೀಜಿಯವರ ಕನಸುಗಳಿಗೆ ಕೊಳ್ಳಿ ಇಟ್ಟು ಭಾರತವನ್ನು ವಿಕೃತಗೊಳಿಸಲು ನರೇಂದ್ರ ಮೋದಿ ಆಮಿತ್ ಶಾ ಪಣ ತೊಟ್ಟಂತಿದೆ. ಮನುಧರ್ಮ ಪಾಲನೆ ಅವರ ಗುರಿಯಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ರಾಜ್ಯಭಾರ ಮಾಡುತ್ತಿದೆ. ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸುಗಳನ್ನು ನನಸು ಮಾಡುವ ಹಂಬಲ ಕಾಂಗ್ರೆಸ್ ಸರಕಾರದ ನಾಯಕರಿಗಾದರೂ ಇರಬೇಕಲ್ಲ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯಲ್ಲಿ ಅಬ್ದುಲ್ ನಝೀರ್ ಸಾಬ್ ಅವರು ಗಮನಾರ್ಹ ಕೆಲಸ ಮಾಡಿದ್ದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮರು ರೂಪಿಸಿದ ಕೀರ್ತಿ ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ. ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕಾಯಕಲ್ಪ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದವರಿಂದ ಮಾತ್ರ ಅಪೇಕ್ಷೆ ಇಟ್ಟುಕೊಳ್ಳಬಹುದು. ಬಿಜೆಪಿ ನಾಯಕರಿಗೆ ಹಿಂದೂ ರಾಷ್ಟ್ರ ಮೊದಲ ಆದ್ಯತೆಯಾಗಿರುವುದರಿಂದ ಹಿಂದ್ ಸ್ವರಾಜ್ಯ ಪರಿಕಲ್ಪನೆಯೇ ಅರ್ಥವಾಗುವುದಿಲ್ಲ. ಶೋಭಾ ಕರಂದ್ಲಾಜೆ, ಕೆ.ಎಸ್. ಈಶ್ವರಪ್ಪ ಮುಂತಾದ ಬಿಜೆಪಿ ಮಂತ್ರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಏನೆಲ್ಲಾ ಅನಾಚಾರ ಮಾಡಿದ್ದಾರೆ ಎಂಬುದಕ್ಕೆ ಇತಿಹಾಸ ದಾಖಲೆ ಒದಗಿಸುತ್ತದೆ. ಕಾಂಗ್ರೆಸ್ ನಾಯಕರಾದರೂ ಮಹಾತ್ಮಾ ಗಾಂಧೀಜಿ ಮತ್ತು ರಾಜೀವ್ ಗಾಂಧೀಯವರ ಕನಸುಗಳನ್ನು ಸಾಕಾರಗೊಳಿಸಲು ಯತ್ನಿಸಬೇಕಲ್ಲವೇ?
ಅತ್ಯಂತ ಕ್ರಿಯಾಶೀಲ ಯುವ ನಾಯಕ ಪ್ರಿಯಾಂಕ್ ಖರ್ಗೆಯವರು ಮೂರು ವರ್ಷಗಳ ಕಾಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮಂತ್ರಿಯಾಗಿದ್ದರು. ಮೂರು ವರ್ಷಗಳ ಕಾಲಾವಧಿಯಲ್ಲಿ ಕರ್ನಾಟಕದ ಎಲ್ಲ ಹಳ್ಳಿಗಳಿಗೆ ಕನಿಷ್ಠ ಪಕ್ಷ ಶುದ್ಧ ಕುಡಿಯುವ ನೀರಿನ ಘಟಕ ಕಲ್ಪಿಸಿ, ಶೌಚಾಲಯ ವ್ಯವಸ್ಥೆ ಒದಗಿಸಬಹುದಿತ್ತು. ಗ್ರಾಮೀಣ ಮಹಿಳೆಯರು ಶೌಚಕ್ಕಾಗಿ ಪರದಾಡುವ ಸ್ಥಿತಿ ಶೋಚನೀಯ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಿರಿಯರು ಪ್ರತೀ ಹಳ್ಳಿಗಳಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಭಾವಚಿತ್ರಗಳು ಇರುವ ಬೋರ್ಡ್ ಹಾಕಿ ಅಸ್ಪಶ್ಯತೆ ನಿವಾರಣೆಯ ಕನಸುಗಳನ್ನು ಸಾಂಕೇತಿಕವಾಗಿ ಬಿತ್ತಿದ್ದರು. ಅದರ ಫಸಲು ತೆಗೆಯುವ ಕೆಲಸ ಮಾಡಬಹುದಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಜೊತೆಗೆ ಪ್ರಿಯಾಂಕ್ ಖರ್ಗೆಯವರಿಗೆ ಐಟಿ, ಬಿಟಿ ಖಾತೆಯೂ ಹೊಂದಿದ್ದರು. ಚೀನಾ, ಜಪಾನ್ ದೇಶಗಳ ಮಾದರಿಯಲ್ಲಿ ಪ್ರತೀ ಹಳ್ಳಿಯಲ್ಲಿ ಅತ್ಯಾಧುನಿಕ ಗುಡಿ ಕೈಗಾರಿಕೆಗಳನ್ನು ಅಥವಾ ಕೃಷಿಯಾಧಾರಿತ ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ಹತ್ತೋ ಇಪ್ಪತ್ತೋ ಸಾವಿರ ರೂಪಾಯಿ ಸಂಬಳಕ್ಕೆ ನಮ್ಮ ಯುವಕರು ದೊಡ್ಡ ದೊಡ್ಡ ಶಹರುಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದಿತ್ತು. ಮಹಾತ್ಮಾ ಗಾಂಧೀಜಿಯವರ ಕನಸುಗಳನ್ನು ಸಾಕಾರಗೊಳಿಸಲು ಪ್ರಿಯಾಂಕ್ ಖರ್ಗೆ ಯಾವ ಬಗೆಯಲ್ಲಿ ಪ್ರಯತ್ನ ಮಾಡಿದ್ದಾರೆ ಎಂಬುದು ಅವರೇ ಹೇಳಬೇಕು. ಹಳ್ಳಿಗಳ ಜನರಿಗೆ ಬದಲಾವಣೆ ಕಾಣಿಸುತ್ತಿಲ್ಲ.
ನಮ್ಮ ಬಹುಪಾಲು ಜನಪ್ರತಿನಿಧಿಗಳಿಗೆ ಮಂತ್ರಿಯಾಗಬೇಕು ಎಂಬ ಹಂಬಲ ಅದಮ್ಯವಾಗಿರುತ್ತದೆ. ಆದರೆ ಮಂತ್ರಿ ಕುರ್ಚಿಯಲ್ಲಿ ಕುಳಿತ ಮೇಲೆ ಕರ್ನಾಟಕದ ಜನತೆಗೆ ಯಾವ ಬಗೆಯಲ್ಲಿ ಒಳಿತು ಮಾಡಬಹುದು ಎನ್ನುವ ಕನಸುಗಳು ಇರುವುದಿಲ್ಲ. ವಹಿಸಿಕೊಂಡ ಖಾತೆಯಲ್ಲಿ ಇಲ್ಲಿಯವರೆಗೆ ಏನೆಲ್ಲಾ ಕೆಲಸಗಳು ಆಗಿವೆ. ರಾಜ್ಯದ ಜನತೆಯ ಒಳಿತಿಗಾಗಿ ನಾನು ಏನು ಮಾಡಬಹುದು ಎಂಬ ಕನಿಷ್ಠ ತಿಳುವಳಿಕೆ ಇಲ್ಲದಿರುವುದರಿಂದ ಅಧಿಕಾರಿಗಳ ಕೈಗೊಂಬೆಯಾಗಿ ಕೇವಲ ದರ್ಬಾರ್ ನಡೆಸುತ್ತಾರೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ಗ್ರಾಮೀಣಾಭಿವೃದ್ಧಿಗಾಗಿ ಖರ್ಚು ಮಾಡಿರುವ ಹಣದ ಮೊತ್ತ ಸಣ್ಣದಲ್ಲ. ಕರ್ನಾಟಕದ ಎಲ್ಲ ಹಳ್ಳಿಗಳನ್ನು ಸ್ವಾವಲಂಬಿ ಘಟಕಗಳನ್ನಾಗಿ ರೂಪಿಸುವ ಎಲ್ಲ ಸದಾವಕಾಶಗಳಿದ್ದವು. ಕನಸುಗಳಿಲ್ಲದ ಹಾದಿಯಲ್ಲಿ ಎಷ್ಟು ಸಾಗಿದರೇನು? ಹಳ್ಳಿಗಳು ನಿಂತಲ್ಲೇ ನಿಂತಿವೆ. ಹಳ್ಳಿಗಳಲ್ಲಿ ಅಭಿವೃದ್ಧಿ ಎಂಬುದು ಯಾರದೋ ಲಾಭದ ಸಾಧನೆಗಳಾಗಿವೆ.
ಮಹಾತ್ಮಾ ಗಾಂಧೀಜಿಯವರು ಗ್ರಾಮೀಣಾಭಿವೃದ್ಧಿ ಬಗ್ಗೆ ಕಂಡ ಕನಸುಗಳನ್ನು ಸಾಕಾರಗೊಳಿಸಲು ಯತ್ನಿಸಿದರೂ ಹಳ್ಳಿಗಳು ಎಷ್ಟೋ ಸುಧಾರಣೆಯಾಗುತ್ತವೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆದು ಎಷ್ಟೋ ವರ್ಷಗಳು ಕಳೆದಿವೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಣ ಕೊಟ್ಟು ಹುದ್ದೆಗೆ ಬಂದಿದ್ದರಿಂದ ಅವರ ಲೆಕ್ಕದಲ್ಲಿ ಖೊಟ್ಟಿ ಬಿಲ್ಲುಗಳನ್ನು ಸೃಷ್ಟಿಸಿ ಹಣ ಕೊಳ್ಳೆ ಹೊಡೆಯುವುದು ಎಂಬಂತಾಗಿದೆ.
ಬಲಿಷ್ಠ ರಾಜ್ಯ ಸರಕಾರ ಹಳ್ಳಿಗಳ ಸ್ವಯಂ ಆಡಳಿತ ವ್ಯವಸ್ಥೆಯನ್ನು ನಾಶ ಮಾಡಿದೆ. ಸದ್ಯಕ್ಕೆ ಹಳ್ಳಿಗಳು ವಾಸ ಯೋಗ್ಯ ತಾಣಗಳಾಗಿ ಉಳಿದಿಲ್ಲ. ಮೂರು ವರ್ಷಗಳ ಅರಣ್ಯ ಮಂತ್ರಿಯಾಗಿದ್ದ ಈಶ್ವರ್ ಖಂಡ್ರೆಯವರು ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಮಂತ್ರಿಗಿರಿ ವಹಿಸಿಕೊಂಡಿದ್ದಾರೆ. ಜಮೀನ್ದಾರಿ ಪಳೆಯುಳಿಕೆಯಂತಿರುವ ಈಶ್ವರ್ ಖಂಡ್ರೆಯವರು ಅರಣ್ಯ ಖಾತೆಯಲ್ಲಿ ಏನೇನೂ ಮಾಡಲಿಲ್ಲ. ಅವರು ಮನಸ್ಸು ಮಾಡಿದ್ದರೆ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಬಹುದಿತ್ತು. ಮರುಭೂಮಿಯಲ್ಲಿ ಹಸಿರು ಕಂಗೊಳಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಬಿಸಿಲಿನ ಪ್ರದೇಶವಾಗಿದ್ದರೂ ಮಳೆ ಬೀಳುವ ನಾಡು. ಮಳೆ ಬೀಳುವ ಕಾಲದಲ್ಲಿ ಸಸಿ ನೆಟ್ಟು ಬೇಸಿಗೆ ಬರುವ ಹೊತ್ತಿಗೆ ಸಮೃದ್ಧ ಕಾಡು ಸೃಷ್ಟಿಸಬಹುದಿತ್ತು. ಕೊನೆಗೂ ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರ ಕೆಟ್ಟ ಟೀಕೆಯನ್ನು ಸವಾಲಾಗಿ ಸ್ವೀಕರಿಸಲಿಲ್ಲ. ಈಗ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡುವ ಅವಕಾಶ ಪಡೆದಿದ್ದಾರೆ. ಅವಕಾಶ ಸಿಕ್ಕಾಗ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿ ತೋರಿಸಬೇಕು. ಅಂತಿಮವಾಗಿ ಕೆಲಸಗಳು ಉಳಿಯುತ್ತವೆ ಮತ್ತು ಮಾತಾಡುತ್ತವೆ.
ಸದ್ಯ ಹಳ್ಳಿಗಳು ಬೆಂಗಾಡುಗಳಾಗಿವೆ. ವಯಸ್ಸಾದವರು, ಅಸಹಾಯಕರ ತಾಣಗಳಾಗಿವೆ. ಹಳ್ಳಿಗಳಲ್ಲಿನ ಶಾಲೆಗಳು ಓದುವವರಿಲ್ಲದೆ ಮುಚ್ಚುತ್ತಿವೆ. ವಲಸೆ ಪ್ರಮಾಣ ಜಾಸ್ತಿಯಾಗುತ್ತಿದೆ. ಕೃಷಿ ಲಾಭದಾಯಕ ಉದ್ಯೋಗವಾಗಿಲ್ಲ. ಕೃಷಿ ಮಾರುಕಟ್ಟೆ ವ್ಯವಸ್ಥೆ ದಲ್ಲಾಳಿಗಳ ಪರವಾಗಿದೆ. ಕಷ್ಟ ಪಟ್ಟು ಬೆಳೆ ಬೆಳೆದರೂ ಉತ್ತಮ ಬೆಲೆ ಸಿಗದಿರುವುದರಿಂದ ರೈತರು ಕಂಗಲಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಸಾಧ್ಯವಾಗುವುದು ಕೃಷಿ, ಕೃಷಿ ಮಾರುಕಟ್ಟೆ ಸೇರಿದಂತೆ ಇನ್ನಿತರ ಇಲಾಖೆಗಳ ಸಮರ್ಪಕ ಸಮನ್ವಯದ ಮೂಲಕ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಎಂಬುದು ಭ್ರಷ್ಟಾಚಾರ ವಿಕೇಂದ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಭಾರತೀಯ ಜನತಾ ಪಕ್ಷದವರಿಗೆ ಮಹಾತ್ಮಾ ಗಾಂಧೀಜಿಯವರ ಬಗ್ಗೆ, ಅವರ ಕನಸುಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಅವರ ಹೆಸರನ್ನೇ ಕಿತ್ತು ಹಾಕುವ ನೀಚತನ ತೋರಿದರು. ಬಿಜೆಪಿಯವರಿಂದ ಗಾಂಧಿ ಕನಸುಗಳನ್ನು ಕೊಲ್ಲುವ ಕೆಲಸಗಳಾಗಿವೆ. ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧೀಜಿಯವರನ್ನು ಒಂದು ಬಾರಿ ಗುಂಡಿಕ್ಕಿ ಕೊಂದ. ಆದರೆ ಬಿಜೆಪಿಯವರು ನಿತ್ಯ ಕೊಲ್ಲುತ್ತಿದ್ದಾರೆ. ಕಾಂಗ್ರೆಸ್ ಜನಪ್ರತಿನಿಧಿಗಳು ಬಿಜೆಪಿಯವರ ವಿಕೃತಿಯನ್ನು ನೋಡುತ್ತಾ ನಿಂತಿದ್ದಾರೆ. ಈಶ್ವರ್ ಖಂಡ್ರೆಯವರಿಗೆ ಒಂದು ಅತ್ಯುತ್ತಮ ಅವಕಾಶ ದೊರೆತಿದೆ. ಮಹಾತ್ಮಾ ಗಾಂಧೀಜಿಯವರ ಹಿಂದ್ ಸ್ವರಾಜ್ಯ ಪರಿಕಲ್ಪನೆಯನ್ನು ಮರುಸ್ಥಾಪಿಸುವ ಪುಣ್ಯದ ಕೆಲಸ ಸಿಕ್ಕಿದೆ. ಎರಡು ವರ್ಷ ಸಣ್ಣ ಅವಧಿಯಲ್ಲ. ಈಶ್ವರ್ ಖಂಡ್ರೆಯವರು ಮನಸ್ಸು ಮಾಡಿದರೆ ಎಲ್ಲ ಹಳ್ಳಿಗಳನ್ನು ಮೂಲ ಸೌಕರ್ಯಗಳಿಂದ ನಳನಳಿಸುವಂತೆ ಮಾಡಬಹುದು. ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಚಿಗುರುವಂತೆ ಮಾಡಿದರೆ ಹಳ್ಳಿಗಳು ತಂತಾನೆ ಅರಳುತ್ತವೆ. ಜಾತ್ಯತೀತ ಮನೋಭಾವ ಈ ಹೊತ್ತಿಗೂ ಜೀವಂತವಾಗಿರುವುದು ಹಳ್ಳಿಗಳಲ್ಲೇ. ಹಳ್ಳಿಗಳಲ್ಲಿನ ಜಾತ್ರೆಗಳು ಸೌಹಾರ್ದ ಪರಂಪರೆಯ ತೇರನ್ನು ನಿತ್ಯ ಎಳೆಯುತ್ತಿವೆ. ಆದರೆ ಹಳ್ಳಿಗರು ಸೊರಗಿದ್ದಾರೆ. ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿರುವ ಗ್ರಾಮೀಣ ಸಮುದಾಯಗಳನ್ನು ತಲೆ ಎತ್ತಿ ನಿಲ್ಲುವಂತೆ ಮಾಡಬೇಕು. ಗ್ರಾಮೀಣಾಭಿವೃದ್ಧಿ ಎಂದರೆ ಎಲ್ಲ ಮಂತ್ರಿಗಳು ಕಾಮಗಾರಿ ಮಾಡಿಸುವುದು, ಕಮಿಷನ್ ಪಡೆದುಕೊಳ್ಳುವುದು ಎಂದಷ್ಟೇ ಭಾವಿಸಿದ್ದಾರೆ. ಚೀನಾ, ಜಪಾನ್ ದೇಶಗಳ ಹಳ್ಳಿಗಳು ಮಹಾತ್ಮಾ ಗಾಂಧೀಜಿಯವರ ಕನಸುಗಳಿಂದ ಪ್ರೇರೇಪಣೆ ಪಡೆದುಕೊಂಡು ಸಮೃದ್ಧವಾಗಿ ಆರ್ಥಿಕ ಚಟುವಟಿಕೆ ನಡೆಸುತ್ತಿವೆ. ಕರ್ನಾಟಕದ ಹಳ್ಳಿಗಳು ಯಾಕೆ ಕಳಾಹೀನವಾಗಿವೆ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಖಾತೆಯ ನೂತನ ಮಂತ್ರಿ ಈಶ್ವರ್ ಖಂಡ್ರೆಯವರು ತಮ್ಮ ಕೆಲಸಗಳ ಮೂಲಕ ನಿಜವಾದ ಮಹಾತ್ಮಾ ಗಾಂಧೀಜಿಯವರ ಅನುಯಾಯಿ ಎಂಬುದನ್ನು ಸಾಬೀತುಪಡಿಸಬೇಕು. ಸಂಘ ಪರಿವಾರ ಮತ್ತು ಬಿಜೆಪಿಯವರ ಕೋಮುವಾದಿ ರಾಜಕಾರಣವನ್ನು ಅಭಿವೃದ್ಧಿ ರಾಜಕಾರಣದ ಮೂಲಕ ಸೋಲಿಸಬೇಕು. ಮಹಾತ್ಮಾ ಗಾಂಧೀಜಿಯವರ ಸಂಪರ್ಕದಲ್ಲಿ ಅದೆಷ್ಟೋ ಜಮೀನ್ದಾರಿಗಳು ಬದಲಾಗಿದ್ದಾರೆ. ಈಶ್ವರ್ ಖಂಡ್ರೆ ಮನಸ್ಥಿತಿ ಬದಲಿಸಿಕೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಆತ್ಮ ಮೆಚ್ಚುವ ಕೆಲಸ ಮಾಡುತ್ತಾರೆ ಎಂದೇ ಅಪೇಕ್ಷೆ ಇಟ್ಟುಕೊಳ್ಳೋಣ.






