ರಾಜ್ಯ ಚಲನಚಿತ್ರ ಪ್ರಶಸ್ತಿ: ಆಯ್ಕೆ ಮಾನದಂಡ ಬದಲಾಗಲಿ

ಒಬ್ಬ ಹೊಸ ನಿರ್ದೇಶಕ, ನಟ, ನಟಿ, ಗಾಯಕ, ಗಾಯಕಿ ಮತ್ತು ತಂತ್ರಜ್ಞ ಪ್ರತಿಭಾಶಾಲಿಯಾಗಿದ್ದು ಹಿರಿಯರ ಹಿರಿತನದ ಕಾರಣಕ್ಕೆ ಪ್ರಶಸ್ತಿಯಿಂದ ವಂಚಿತವಾಗುವುದು ಕನ್ನಡ ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಅಪಾಯಕಾರಿ ಸಂಗತಿ. ವ್ಯಕ್ತಿ, ಜಾತಿ ಮತ್ತು ಇನ್ನಿತರ ಪ್ರಭಾವದ ಏಕ ಸ್ವಾಮ್ಯತೆ ತಪ್ಪಬೇಕೆಂದರೆ ಪ್ರಶಸ್ತಿ ಆಯ್ಕೆಯ ಮಾನದಂಡಗಳನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಬೇಕು. ಸಬ್ಸಿಡಿ ನೀಡುವಿಕೆಯಲ್ಲೂ ಕಟ್ಟು ನಿಟ್ಟಿನ ಮಾನದಂಡಗಳನ್ನು ರೂಪಿಸುವ ಅಗತ್ಯವಿದೆ.
ಇದೇ ತಿಂಗಳ ಮೂರರಂದು ಮೈಸೂರಿನಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು. ಪ್ರಶಸ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಚ್ಚುಕಟ್ಟಾಗಿ ಆಯೋಜಿಸರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿ ಮತ್ತು ಬದ್ಧತೆ ಮೆಚ್ಚುವಂತಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯ ಮೇಲೆ ಮತ್ತು ಮುಂಭಾಗದಲ್ಲಿ ಚಲನಚಿತ್ರ ರಂಗದ ಅನೇಕ ದಿಗ್ಗಜರು ಉಪಸ್ಥಿತರಿದ್ದರು. ಅವರ ಸಮ್ಮುಖದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿನ ಚಲನಚಿತ್ರಗಳ ಕುರಿತು ವಸ್ತುನಿಷ್ಠ ಮಾತುಗಳನ್ನಾಡಿದರು. ಅವರ ಮಾತುಗಳಲ್ಲಿ ಕನ್ನಡ ಚಲನಚಿತ್ರಗಳ ಕುರಿತು ಗಂಭೀರ ವಿಮರ್ಶೆಯ ಕಾಳಜಿ ಎದ್ದು ಕಾಣುತಿತ್ತು. ‘‘ಚಲನಚಿತ್ರ ಅತ್ಯಂತ ಪ್ರಭಾವಿ ಮಾಧ್ಯಮ. ಹಿಂದಿನ ಕಾಲದಲ್ಲಿ ಕಡಿಮೆ ಚಲನಚಿತ್ರಗಳು ತೆರೆ ಕಾಣುತ್ತಿದ್ದವು. ಆದರೆ ಅತ್ಯುತ್ತಮ ಚಲನಚಿತ್ರಗಳು ನೋಡಲು ಸಿಗುತ್ತಿದ್ದವು. ಹಾಗಾಗಿ ನಾನು ನೋಡಿದ ಸಿನೆಮಾಗಳನ್ನೇ ಮತ್ತೆ ಮತ್ತೆ ನೋಡುತ್ತಿದ್ದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನೆಮಾಗಳು ತೆರೆ ಕಾಣುತ್ತಿವೆ. ಆದರೆ ಗುಣಮಟ್ಟದ ಸಿನೆಮಾಗಳ ಸಂಖ್ಯೆ ಕುಸಿಯುತ್ತಿದೆ. ಹೀಗಾಗಿ ಸಿನೆಮಾಗಳನ್ನು ನೋಡಬೇಕೆಂದು ಅನಿಸುತ್ತಿಲ್ಲ. ನಾನು ಹೆಚ್ಚು ಸಿನೆಮಾಗಳನ್ನು ನೋಡದೆ ಇರಲು ಸಮಯದ ಅಭಾವವೂ ಕಾರಣವಾಗಿರಬಹುದು. ಅತ್ಯುತ್ತಮ ಸಿನೆಮಾಗಳು ತೆರೆ ಕಂಡಾಗ ಅಂಥ ಸಿನೆಮಾಗಳನ್ನು ಖಂಡಿತ ನೋಡುತ್ತೇನೆ. ಪ್ರಶಸ್ತಿಗಾಗಿ ಮತ್ತು ಸಬ್ಸಿಡಿಗಾಗಿ ಸಿನೆಮಾ ಮಾಡಬೇಡಿ’’ ಎಂದು ಚಿತ್ರರಂಗದ ಮಂದಿಗೆ ಕಿವಿ ಮಾತು ಹೇಳಿದರು.
ಕನ್ನಡ ಚಲನಚಿತ್ರಗಳ ಕುರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಅದೇ ಅಭಿಪ್ರಾಯವನ್ನು ಜನಸಾಮಾನ್ಯರು ಹೊಂದಿದ್ದಾರೆ. ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಕಳಪೆ ಚಲನಚಿತ್ರಗಳ ಕಾರಣಕ್ಕೆ ಅತ್ಯುತ್ತಮ ಸಿನೆಮಾಗಳೂ ಪ್ರೇಕ್ಷಕರ ಕಡೆಗಣನೆಗೆ ಗುರಿಯಾಗುತ್ತಿವೆ. ಕನ್ನಡದಲ್ಲಿ ಭಿನ್ನವಾಗಿ ಆಲೋಚಿಸುವ ಮತ್ತು ಸಾಮಾಜಿಕ ಕಾಳಜಿ ಇಟ್ಟುಕೊಂಡು ಪ್ರತಿವರ್ಷ ಅನೇಕ ಸಿನೆಮಾಗಳು ತೆರೆ ಕಾಣುತ್ತಿವೆ. ಆದರೆ ಕೆಟ್ಟ ಚಿತ್ರಗಳ ಅಬ್ಬರದಲ್ಲಿ ಒಳ್ಳೆಯ ಸಿನೆಮಾಗಳು ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ಕನ್ನಡದಲ್ಲಿ ಅತ್ಯುತ್ತಮ ಸಿನೆಮಾಗಳ ಮಹಾಪೂರವೇ ಹರಿದು ಬರುತ್ತಿತ್ತು. ದಕ್ಷಿಣ ಭಾರತ ಮಾತ್ರವಲ್ಲ ಇಡೀ ಭಾರತದಲ್ಲಿ ಕನ್ನಡ ಸಿನೆಮಾಗಳ ಗುಣಮಟ್ಟದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದವು. ಸಿನೆಮಾಗಳನ್ನು ಕಲಾತ್ಮಕ ಮತ್ತು ಕಮರ್ಷಿಯಲ್ ಎಂದು ವಿಭಾಗೀಕರಿಸುವ ಪ್ರವೃತ್ತಿ ಬೆಳೆದಾಗಿನಿಂದ ಗುಣಮಟ್ಟ ಕುಸಿಯುವಂತಾಗಿದೆ. ಕಮರ್ಷಿಯಲ್ ಚಲನಚಿತ್ರಗಳು ಮಚ್ಚು, ಲಾಂಗು, ಹೊಡೆದಾಟದ ದೃಶ್ಯಗಳಿಂದ ಅಸಹ್ಯ ಎನಿಸುವ ಮಟ್ಟಿಗೆ ಸಂವೇದನಾಹೀನವಾಗಿ ಪ್ರೇಕ್ಷಕರಿಂದ ತಿರಸ್ಕೃತವಾಗುತ್ತಿವೆ. ಕಲಾತ್ಮಕ ಸಿನೆಮಾಗಳು ಆ ಮಾಧ್ಯಮದ ಸಾಮರ್ಥ್ಯ ಬಳಸಿಕೊಳ್ಳದೆ ಸೊರಗುತ್ತಿವೆ. ಕಮರ್ಷಿಶಿಯಲ್ ಚಲನಚಿತ್ರಗಳು ಹಣ ಮಾಡಲು, ಕಲಾತ್ಮಕ ಸಿನೆಮಾಗಳು ಪ್ರಶಸ್ತಿ ಗಿಟ್ಟಿಸಲು ಎಂಬ ಸರಳ ಸಿದ್ಧ ಸೂತ್ರ ಕನ್ನಡ ಚಿತ್ರರಂಗವನ್ನು ಅಧೋಗತಿಗೆ ತಂದು ನಿಲ್ಲಿಸಿದೆ. ಒಂದು ಅತ್ಯುತ್ತಮ ಚಲನಚಿತ್ರ ಏಕಕಾಲಕ್ಕೆ ಕಲಾತ್ಮಕವು ಮತ್ತು ಹೆಚ್ಚು ಜನ ಪ್ರೇಕ್ಷಕರಿಗೆ ತಲುಪುವ ಮೂಲಕ ಆರ್ಥಿಕ ಯಶಸ್ಸು ಪಡೆದುಕೊಳ್ಳುತ್ತದೆ. ಕಲಾತ್ಮಕ ಸಿನೆಮಾದ ಹೆಸರಲ್ಲಿ ಆಕಳಿಕೆ ಬರಿಸುವ ಚಿತ್ರಗಳು ನಿರ್ಮಾಣವಾಗುತ್ತಿರುವುದು ಕನ್ನಡ ಭಾಷೆಯ ದುರಂತ. ಆರ್ಥಿಕವಾಗಿ ಯಶಸ್ಸು ಪಡೆಯುವ ಸಿನೆಮಾವನ್ನು ಕಲಾತ್ಮಕವಲ್ಲದ ಚಿತ್ರ ಎಂದು ಬ್ರಾಂಡ್ ಮಾಡುವ ಪ್ರವೃತ್ತಿ ಇದೆ. ಆಕಳಿಕೆ ಬರಿಸುವ ಸಿನೆಮಾಗಳನ್ನು ಅತ್ಯುತ್ತಮ ಎಂದು ಪರಿಗಣಿಸಿ ಪ್ರಶಸ್ತಿ ನೀಡುವ ಪ್ರವೃತ್ತಿಯೂ ನಿಲ್ಲಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿದ ಮಾತುಗಳನ್ನು ಕನ್ನಡ ಚಿತ್ರರಂಗ ಗಂಭೀರವಾಗಿ ಪರಿಗಣಿಸಬೇಕಿದೆ. ಅಷ್ಟು ಮಾತ್ರವಲ್ಲ ಅತ್ಯುತ್ತಮ ಸಿನೆಮಾಗಳನ್ನು ಗುರುತಿಸಲು ಪ್ರಶಸ್ತಿ ಆಯ್ಕೆಯ ಮಾನದಂಡಗಳನ್ನು ಬದಲಾಯಿಸುವ ಅಗತ್ಯವಿದೆ.
ಹಾಗೆ ನೋಡಿದರೆ ಅತ್ಯುತ್ತಮ ಚಲನಚಿತ್ರಗಳನ್ನು ಗುರುತಿಸಿ ಪ್ರಶಸ್ತಿ ಮತ್ತು ಸಬ್ಸಿಡಿಯನ್ನು ನಿಗದಿತ ಸಮಯಕ್ಕೆ ನೀಡುವ ಪರಿಪಾಠವನ್ನು ಹಿಂದಿನ ಎಲ್ಲ ಸರಕಾರಗಳು ರೂಢಿಸಿಕೊಂಡಿದ್ದವು. ಒಳ್ಳೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟವರು 2019ರಿಂದ 2023ರವರೆಗೆ ಆಡಳಿತ ನಡೆಸಿದ ಬಿಜೆಪಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು. ಅದಕ್ಕೂ ಹಿಂದಿನ ಸರಕಾರ, 2018ರಲ್ಲಿ ತೆರೆ ಕಂಡ ಸಿನೆಮಾಗಳಿಗೆ ಪ್ರಶಸ್ತಿ ಮತ್ತು ಸಬ್ಸಿಡಿ ನೀಡಲು ಆಯ್ಕೆ ಸಮಿತಿಗಳನ್ನು ರಚಿಸಿ ಫಲಿತಾಂಶ ಪಡೆದುಕೊಂಡಿತ್ತು. ಯಡಿಯೂರಪ್ಪ ಸರಕಾರ 2018ರ ಸಿನೆಮಾಗಳಿಗೆ ಪ್ರಶಸ್ತಿ ನೀಡುವ ಗೋಜಿಗೆ ಹೋಗಲಿಲ್ಲ. ಅಷ್ಟು ಮಾತ್ರವಲ್ಲ 2019ರಲ್ಲಿ ತೆರೆ ಕಂಡ ಸಿನೆಮಾಗಳ ಆಯ್ಕೆಗೆ ಪ್ರಶಸ್ತಿ ಮತ್ತು ಸಬ್ಸಿಡಿ ಸಮಿತಿಗಳನ್ನು ರಚಿಸಲಿಲ್ಲ. ನಂತರ ಬಂದ ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಸಾಹಿತ್ಯ, ಚಲನಚಿತ್ರ ಮೊದಲ ಆದ್ಯತೆಯಾಗಲಿಲ್ಲ. ಹಿಜಾಬ್, ಹಲಾಲ್, ಉರಿಗೌಡ -ನಂಜೇಗೌಡ, ಟಿಪ್ಪು ವಿವಾದ ಮೊದಲ ಆದ್ಯತೆ ಎನಿಸಿದವು. ಹಾಗಾಗಿ ಚಲನಚಿತ್ರ ಪ್ರಶಸ್ತಿಯೂ ಸೇರಿದಂತೆ ಸಾಹಿತ್ಯ ಕಲೆಗಳಿಗೆ ಸಂಬಂಧಿಸಿದ ಪ್ರಶಸ್ತಿ ಆಯ್ಕೆ ಸಮಿತಿಗಳನ್ನು ರಚಿಸದೆ ದಿನ ತಳ್ಳಿತು.
ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ 2023ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗ ಐದು ವರ್ಷಗಳ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಕಾರ್ಯ ಬಾಕಿ ಇತ್ತು. ಅದರಲ್ಲೂ ನಾಲ್ಕು ವರ್ಷಗಳ ಪ್ರಶಸ್ತಿ ಮತ್ತು ಸಬ್ಸಿಡಿ ಆಯ್ಕೆ ಸಮಿತಿಗಳನ್ನು ರಚಿಸುವ ಕೆಲಸ ಪೆಂಡಿಂಗ್ ಇತ್ತು. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದ್ಧತೆ ತೋರಿದ್ದಾರೆ. 2019, 2020 ಮತ್ತು 2021ರ ಚಲನಚಿತ್ರ ಪ್ರಶಸ್ತಿ-ಸಬ್ಸಿಡಿ ಆಯ್ಕೆ ಸಮಿತಿಗಳನ್ನು ರಚಿಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. 2022, 2023 ಮತ್ತು 2024ರ ಸಿನೆಮಾಗಳ ಆಯ್ಕೆಗೆ ಪ್ರಶಸ್ತಿ-ಸಬ್ಸಿಡಿ ಸಮಿತಿಗಳನ್ನು ರಚಿಸುವ ಕಾರ್ಯ ಜಾರಿಯಲ್ಲಿದೆ. ಮೈಸೂರಿನಲ್ಲಿ ಎರಡು ವರ್ಷಗಳ (2018 ಮತ್ತು 2019) ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿಸಿ ಸಾಂಸ್ಕೃತಿಕ ಕಾಳಜಿ ಮೆರೆದಿದ್ದಾರೆ.
ಪ್ರತಿವರ್ಷ ಕರ್ನಾಟಕ ಸರಕಾರ ಚಲನಚಿತ್ರ ರಂಗದ ಮೂರು ಜನ ಹಿರಿಯ ಸಾಧಕರನ್ನು ಗುರುತಿಸಿ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. ಕನ್ನಡದ ಮೇರು ನಟ ಡಾ. ರಾಜಕುಮಾರ್, ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ಹಿರಿಯ ನಟ ಡಾ. ವಿಷ್ಣುವರ್ಧನ್ ಅವರ ಹೆಸರಲ್ಲಿ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಆಯ್ಕೆಗೆ ಚಿತ್ರರಂಗದ ಹಿರಿಯರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿ ಸಾಧಕರನ್ನು ಗುರುತಿಸಲಾಗುತ್ತಿದೆ.
ಅಷ್ಟು ಮಾತ್ರವಲ್ಲ, ಪ್ರತಿವರ್ಷ ತೆರೆ ಕಂಡ ನೂರಾರು ಚಲನಚಿತ್ರಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಗುರುತಿಸಿ ‘ರಾಜ್ಯ ಚಲನಚಿತ್ರ ಪ್ರಶಸ್ತಿ’ಗಳನ್ನು ನೀಡಲಾಗುತ್ತಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಹಲವು ವಿಭಾಗಗಳಲ್ಲಿ ವರ್ಗೀಕರಿಸಿ ಎಲ್ಲ ವಿಭಾಗದ ಸಾಧಕರನ್ನು ಗುರುತಿಸಿ ಗೌರವಿಸುವ ಪರಿಪಾಠ ನಮ್ಮಲ್ಲಿದೆ. ಪ್ರಶಸ್ತಿ ಆಯ್ಕೆ ಸಮಿತಿಗಳು ಸಾಧ್ಯವಾದಷ್ಟು ಪಾರದರ್ಶಕವಾಗಿ ಆಯ್ಕೆ ಮಾಡುತ್ತಾ ಬಂದಿವೆ. ನಿಜವಾದ ಸಾಧಕರ ಆಯ್ಕೆ ನಡೆಯುವಲ್ಲಿ ಪ್ರಶಸ್ತಿ ಆಯ್ಕೆಯ ಮಾನದಂಡಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಪ್ರತೀ ವರ್ಷ ಎಂಟು ಸಿನೆಮಾಗಳಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡುವ ಪದ್ಧತಿ ಜಾರಿಯಲ್ಲಿದೆ. ಈ ಅತ್ಯುತ್ತಮ ಚಿತ್ರ ಪ್ರಶಸ್ತಿ ನಿರ್ಮಾಪಕ ಮತ್ತು ನಿರ್ದೇಶಕರಿಗೆ ನೀಡಲಾಗುತ್ತದೆ. ಈ ವಿಭಾಗದಲ್ಲಿ ಮೊದಲನೇ ಅತ್ಯುತ್ತಮ ಚಿತ್ರ, ಎರಡನೇ ಅತ್ಯುತ್ತಮ ಚಿತ್ರ, ಮೂರನೇ ಅತ್ಯುತ್ತಮ ಚಿತ್ರ, ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ, ಅತ್ಯುತ್ತಮ ಮಕ್ಕಳ ಚಿತ್ರ, ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಎಂದು ಗುರುತಿಸಿ ಪ್ರಶಸ್ತಿಗೆ ಸಿನೆಮಾಗಳನ್ನು ಆಯ್ಕೆ ಮಾಡುತ್ತಾರೆ. ಪ್ರಶಸ್ತಿಗಳ ಆಯ್ಕೆಯ ವಿಭಾಗೀಕರಣದಲ್ಲೇ ಕಲಾತ್ಮಕ-ಕಮರ್ಷಿಯಲ್ ತಾರತಮ್ಯ ಸೃಷ್ಟಿಸಲಾಗಿದೆ. ವಿಶೇಷ ಸಾಮಾಜಿಕ ಕಾಳಜಿಯ, ಜನಪ್ರಿಯ ಮನರಂಜನಾ ವರ್ಗೀಕರಣವೇ ಮೂಲತಃ ತಪ್ಪು ಗ್ರಹಿಕೆಯಿಂದ ಕೂಡಿದೆ. ಒಂದು ಅತ್ಯುತ್ತಮ ಚಲನಚಿತ್ರ ಏಕಕಾಲಕ್ಕೆ ಸಾಮಾಜಿಕ ಕಾಳಜಿಯ ಹಾಗೂ ಮನರಂಜನಾ ಅಂಶಗಳನ್ನು ಒಳಗೊಂಡಾಗಲೇ ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಾಧ್ಯ. ಡಾ. ರಾಜಕುಮಾರ್ ಅವರ ಅಭಿನಯದ ಚಲನಚಿತ್ರಗಳು ಸಾಮಾಜಿಕ ಕಾಳಜಿ ಇಟ್ಟುಕೊಂಡೇ ಮನರಂಜನೆ ನೀಡುತ್ತಿದ್ದವು. ಅಷ್ಟು ಮಾತ್ರವಲ್ಲ ಅವು ಕಲಾತ್ಮಕ ಚಿತ್ರಗಳಾಗಿಯೂ ಪ್ರೇಕ್ಷಕರ ಎದೆಗೆ ಇಳಿಯುತ್ತಿದ್ದವು. ಮಯೂರ, ಬಭ್ರುವಾಹನ ಮುಂತಾದ ಚಲನಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದ್ದವು. ಜೊತೆಗೆ ಪ್ರೇಕ್ಷಕರ ಮನದಲ್ಲಿ ಉಳಿಯುವ ಶಕ್ತಿ ಪಡೆದಿದ್ದವು. ಹಳೆಯ ಕನ್ನಡದ ಚಲನಚಿತ್ರಗಳು ಏಕಕಾಲಕ್ಕೆ ಕಲಾತ್ಮಕವೂ, ಹೆಚ್ಚು ಜನ ಪ್ರೇಕ್ಷಕರಿಗೆ ಮನರಂಜನೆ ನೀಡಿ ಹಣವೂ ಮಾಡುತ್ತಿದ್ದವು. ಚಲನಚಿತ್ರ ಮಾಧ್ಯಮ ಅತ್ಯಂತ ಪ್ರಭಾವಶಾಲಿಯಾಗಿರುವುದರಿಂದ ಅಲ್ಲಿ ಕಲಾತ್ಮಕ, ಸಾಮಾಜಿಕ, ಮನರಂಜನೆ ಎಂದು ಪ್ರತ್ಯೇಕಿಸಲು ಅವಕಾಶವೇ ಇಲ್ಲ.
ಜೊತೆಗೆ ಆಯಾ ವರ್ಷದಲ್ಲಿ ತೆರೆ ಕಂಡ ಸಿನೆಮಾಗಳಲ್ಲಿನ ಪ್ರತಿಭಾ ಸಾಮರ್ಥ್ಯ ಆಧರಿಸಿ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಕತೆ, ಅತ್ಯುತ್ತಮ ಚಿತ್ರಕತೆ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಬಾಲ ನಟ, ಅತ್ಯುತ್ತಮ ಬಾಲ ನಟಿ, ಅತ್ಯುತ್ತಮ ಕಲಾ ನಿರ್ದೇಶನ, ಅತ್ಯುತ್ತಮ ಗೀತೆ ರಚನೆ, ಅತ್ಯುತ್ತಮ ಹಿನ್ನೆಲೆ ಗಾಯಕ, ಅತ್ಯುತ್ತಮ ಹಿನ್ನೆಲೆ ಗಾಯಕಿ ಮತ್ತು ಇಬ್ಬರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ. ಜೊತೆಗೆ ಚಲನಚಿತ್ರ ಕುರಿತ ಎರಡು ಸಾಹಿತ್ಯ ಪುಸ್ತಕಗಳಿಗೆ ವಾರ್ಷಿಕ ಪ್ರಶಸ್ತಿ ನೀಡುವ ಪರಿಪಾಠವಿದೆ. ವಿಶೇಷವೆಂದರೆ ಈ ಪ್ರಶಸ್ತಿಯನ್ನು ಪುಸ್ತಕದ ಲೇಖಕರು ಮತ್ತು ಪ್ರಕಾಶಕರಿಗೆ ನೀಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಕಿರುಚಿತ್ರಕ್ಕೂ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಲಾಗುತ್ತಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಹಿರಿತೆರೆಯಷ್ಟೇ ಕಿರುತೆರೆಯೂ ಅತ್ಯಂತ ಪ್ರಭಾವಶಾಲಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕಿರುತೆರೆಗೂ ರಾಜ್ಯ ಚಲನಚಿತ್ರ ಪ್ರಶಸ್ತಿ ವ್ಯಾಪ್ತಿಗೆ ತರುವುದು ಒಳ್ಳೆಯದು.
ಕನ್ನಡ ಚಿತ್ರ ರಂಗದ ಹಿರಿಯರು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಎಲ್ಲ ವಿಭಾಗಗಳ ಸಾಧಕರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕನ್ನಡ ಚಿತ್ರರಂಗದ ವ್ಯಾಪ್ತಿ ಸೀಮಿತವಾದ ಸಂದರ್ಭದಲ್ಲಿ ಪ್ರಶಸ್ತಿ ಆಯ್ಕೆಯ ಮಾನದಂಡಗಳು ರೂಪುಗೊಂಡಿದ್ದವು. ಈಗ ಕನ್ನಡ ಚಿತ್ರರಂಗದ ವ್ಯಾಪ್ತಿ ವಿಸ್ತರಿಸಿದೆ. ಆದರೆ ಗುಣಮಟ್ಟ ಕುಸಿಯುತ್ತಿದೆ. ಕನ್ನಡ ಚಿತ್ರರಂಗದ ಗುಣಮಟ್ಟ ಹೆಚ್ಚಬೇಕೆಂದರೆ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆಯ ಮಾನದಂಡಗಳನ್ನು ಬದಲಾಯಿಸಬೇಕು. ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ಅನೇಕ ಹೊಸ ಪ್ರತಿಭೆಗಳು ಪ್ರಯೋಗಶೀಲತೆಯಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಿರುತ್ತಾರೆ. ಹೊಸ ಪ್ರತಿಭೆಗಳ ಪ್ರಯೋಗಶೀಲತೆ ಪತ್ತೆ ಹಚ್ಚಬೇಕೆಂದರೆ ಪ್ರಶಸ್ತಿ ಆಯ್ಕೆಯ ಮಾನದಂಡಗಳಲ್ಲಿ ಗಣನೀಯ ಬದಲಾವಣೆಯನ್ನು ಅಳವಡಿಸಬೇಕು. ಇಲ್ಲಿಯವರೆಗಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವೇ ಜನರ ಹೆಸರುಗಳು ಹಲವು ವಿಭಾಗಗಳಲ್ಲಿ ಪುನರಾವರ್ತನೆಗೊಂಡಿವೆ. ಯಾವುದೇ ಭಾಷೆಯ ಚಿತ್ರರಂಗದಲ್ಲಿ ವೈವಿಧ್ಯತೆ, ಅನನ್ಯತೆ ಮತ್ತು ಹೊಸತನ ಕಾಣಬೇಕೆಂದರೆ ಹೊಸ ಪ್ರತಿಭೆಗಳು ಹರಿದು ಬರಬೇಕು. ಅಷ್ಟು ಮಾತ್ರವಲ್ಲ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ವ್ಯವಸ್ಥೆ ನಿರ್ಮಾಣ ಮಾಡಬೇಕು. ಹಲವು ಬಾರಿ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿಗೆ ಭಾಜನರಾದವರೇ ಅತ್ಯುತ್ತಮ ಕತೆ, ಚಿತ್ರಕತೆ ವಿಭಾಗಗಳಲ್ಲೂ ಪ್ರಶಸ್ತಿ ಪಡೆದಿರುತ್ತಾರೆ. ‘ಜೀವಮಾನ ಸಾಧನೆ ಪ್ರಶಸ್ತಿ’ ಪಡೆದುಕೊಂಡವರು ಅತ್ಯುತ್ತಮ ಗೀತೆ ರಚನೆ ವಿಭಾಗದಲ್ಲಿ ಮತ್ತೆ ಮತ್ತೆ ಪ್ರಶಸ್ತಿ ಪಡೆದುಕೊಳ್ಳುವುದು ಎಷ್ಟು ಸರಿ? ಕೆಲವೊಮ್ಮೆ ನಾಮ ಬಲದ ಮೇಲೆ ಅನಿವಾರ್ಯವಾಗಿ ಪ್ರಶಸ್ತಿ ನೀಡಬೇಕಾಗುತ್ತದೆ. ಪ್ರಶಸ್ತಿಯ ಪುನರಾವರ್ತನೆ ತಪ್ಪಿಸಬೇಕೆಂದರೆ ಹೊಸ ಮತ್ತು ಕಠಿಣ ಮಾನದಂಡಗಳನ್ನು ರೂಪಿಸಬೇಕು.
ಕರ್ನಾಟಕ ಸಾಹಿತ್ಯ ಅಕಾಡಮಿಯಲ್ಲೂ ಪ್ರತಿವರ್ಷ ಆಯ್ದ ಕೆಲವರೇ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದರು. ಪ್ರತಿಭೆಯ ಕಾರಣಕ್ಕೆ ಅವರು ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಅವರು ಹೊಸ ಪ್ರತಿಭೆಗಳ ಪ್ರವೇಶಕ್ಕೆ ಅಡ್ಡಿಯಾಗಿದ್ದರು. ಅಷ್ಟು ಮಾತ್ರವಲ್ಲ ಹೊಸ ಪ್ರತಿಭೆಗಳ ಕರ್ತೃತ್ವ ಶಕ್ತಿಯನ್ನೇ ಅನುಮಾನಿಸುವಂತಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿನ ಏಕ ಸ್ವಾಮ್ಯತೆಗೆ ಕಡಿವಾಣ ಹಾಕಲು ಕರ್ನಾಟಕ ಸಾಹಿತ್ಯ ಅಕಾಡಮಿಯ ಅಂದಿನ ಅಧ್ಯಕ್ಷ ನಾಡೋಜ ಡಾ. ಶಾಂತರಸರು ಪ್ರಶಸ್ತಿ ಆಯ್ಕೆಗೆ ಹೊಸ ಮಾನದಂಡಗಳನ್ನು ರೂಪಿಸಿದರು. ಒಂದು ವಿಭಾಗದಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಪಡೆದುಕೊಂಡಿದ್ದರೆ ಅದೇ ವಿಭಾಗದಲ್ಲಿ ಮೂರನೇ ಬಾರಿಗೆ ಅವರನ್ನು ಪ್ರಶಸ್ತಿಗೆ ಪರಿಗಣಿಸಬಾರದು. ಎಲ್ಲ ವಿಭಾಗಗಳಲ್ಲಿ ಒಟ್ಟು ನಾಲ್ಕು ಬಾರಿ ಪ್ರಶಸ್ತಿ ಪಡೆದುಕೊಂಡಿದ್ದರೆ ಅಂಥವರನ್ನು ಐದನೇ ಬಾರಿಗೆ ಪ್ರಶಸ್ತಿಗೆ ಪರಿಗಣಿಸುವಂತಿಲ್ಲ. ಜೀವಮಾನ ಸಾಧನೆಯ ಪ್ರಶಸ್ತಿ ಪಡೆದುಕೊಂಡವರನ್ನು ಮತ್ತೆ ವಾರ್ಷಿಕ ಪ್ರಶಸ್ತಿಗೆ ಪರಿಗಣಿಸುವಂತಿಲ್ಲ. ಕರ್ನಾಟಕ ಸಾಹಿತ್ಯ ಅಕಾಡಮಿ ಈ ಹೊಸ ಮಾನದಂಡಗಳನ್ನು ಅಳವಡಿಸಿಕೊಂಡಿದ್ದರಿಂದ ಯುವ ಪ್ರತಿಭೆಗಳಿಗೆ ಅವಕಾಶ ಸಿಗುವಂತಾಗಿದೆ. ಪ್ರಶಸ್ತಿ: ಪ್ರತಿಭೆಯನ್ನು ಗುರುತಿಸುವ ಒಂದು ಒರೆಗಲ್ಲಷ್ಟೇ. ಒಂದು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದರೆ ಅವರ ಪ್ರತಿಭಾ ಸಾಮರ್ಥ್ಯ ಸಿದ್ಧವಾದಂತೆ. ಹೆಚ್ಚು ಪ್ರತಿಭಾವಂತ ಎಂದು ತೋರಿಸಿಕೊಳ್ಳಲು ಒಂದೇ ವಿಭಾಗದ ಪ್ರಶಸ್ತಿಯನ್ನು ನೂರು ಬಾರಿ ಪಡೆದುಕೊಳ್ಳುವ ಅಗತ್ಯವಿಲ್ಲ.
ರಾಜ್ಯ ಚಲನಚಿತ್ರ ಪ್ರಶಸ್ತಿ ವಿಷಯದಲ್ಲೂ ಕೆಲವರಿಗೆ ಮತ್ತೆ ಮತ್ತೆ ಪ್ರಶಸ್ತಿ ಎನ್ನುವಂತಾಗಿದೆ. ಅನೇಕ ಜನ ಪ್ರತಿಭಾವಂತರು ದಶಕಗಳ ಕಾಲ ಚಿತ್ರರಂಗದಲ್ಲಿ ಕ್ರಿಯಾಶೀಲವಾಗಿದ್ದರೂ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಪ್ರಶಸ್ತಿ ಗಿಟ್ಟಿಸುವುದು ಒಂದು ವ್ಯಸನವಾಗಬಾರದು. ಜೀವಮಾನದ ಪ್ರಶಸ್ತಿಗೆ ಭಾಜನರಾದ ಮೇಲೆ ಅರ್ಥಾತ್ ರೂ. ಐದು ಲಕ್ಷದ ದೊಡ್ಡ ಮೊತ್ತದ ಪ್ರಶಸ್ತಿ ತೆಗೆದುಕೊಂಡ ಮೇಲೆ ಮತ್ತೆ ವಾರ್ಷಿಕ ಪ್ರಶಸ್ತಿಗೆ ಆಸೆ ಪಡುವುದು, ಆಯ್ಕೆ ಸಮಿತಿ ಅವರನ್ನು ಆ ಪ್ರಶಸ್ತಿಗೆ ಪರಿಗಣಿಸುವುದು ಎರಡೂ ಅಪರಾಧವೇ.
ಇನ್ನು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆಗೆ ಸರಕಾರ ಆಯ್ಕೆ ಸಮಿತಿಯೇನೋ ರಚಿಸುತ್ತದೆ. ಅಲ್ಲಿಯೂ ಖಚಿತ ಮತ್ತು ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿಲ್ಲ. ಸಾಹಿತ್ಯ, ಸಂಗೀತ, ಛಾಯಾಗ್ರಹಣ, ಸಂಕಲನ ವಿಭಾಗಗಳ ಪ್ರತಿಭಾವಂತರನ್ನು ಸಮರ್ಪಕವಾಗಿ ಗುರುತಿಸಲು, ಪ್ರಶಸ್ತಿಗೆ ಆಯ್ಕೆ ಮಾಡಲು ಆಯಾ ವಿಭಾಗದ ತಜ್ಞರು ಆಯ್ಕೆ ಸಮಿತಿಯಲ್ಲಿ ಕಡ್ಡಾಯವಾಗಿ ಇರಬೇಕು. ಅಷ್ಟು ಮಾತ್ರವಲ್ಲ ಒಂದು ಚಲನಚಿತ್ರದ ಮೌಲ್ಯ ಮಾಪನವು ಎಲ್ಲ ಸಾಮಾಜಿಕ ವಲಯದ ಕಣ್ಣೋಟದ ಮೂಲಕ ನಡೆಯಬೇಕು. ಒಂದೇ ಜಾತಿ, ಒಂದೇ ಪ್ರದೇಶ ಮತ್ತು ಒಂದೇ ವಿಭಾಗದ ತಂತ್ರಜ್ಞರು ಎಲ್ಲ ವಿಭಾಗದ ವೈವಿಧ್ಯಮಯ ಕಲಾ ಪ್ರತಿಭೆಯನ್ನು ಸಮರ್ಪಕವಾಗಿ ಗುರುತಿಸಲಾರರು. ಸಿನೆಮಾದಲ್ಲಿ ಸಾಮಾಜಿಕ ನ್ಯಾಯ ಅನಗತ್ಯ ಎಂದು ಪ್ರತಿಪಾದಿಸುವ ಮನಸ್ಸುಗಳು ಪ್ರತಿಭಾವಂತರು ಎಲ್ಲ ಕಡೆಗೆ ಇದ್ದಾರೆ ಎಂಬ ಸಹಜ ಸತ್ಯವನ್ನು ಮರೆಮಾಚಲು ಯತ್ನಿಸುತ್ತಾರೆ.
ಕನ್ನಡ ಚಿತ್ರರಂಗ ಮತ್ತಷ್ಟು ವಿಸ್ತಾರವಾಗಿ ಬೆಳೆಯಬೇಕೆಂದರೆ ಸಮಸ್ತ ಕರ್ನಾಟಕದ ಪ್ರತಿಭೆಗಳ ಕಲಾ ನೈಪುಣ್ಯ ಬಳಸಿಕೊಳ್ಳುವಂತಾಗಬೇಕು. ಪಕ್ಕದ ಕೇರಳ ರಾಜ್ಯದ ಮಲಯಾಳಂ ಚಿತ್ರರಂಗ ವೈವಿಧ್ಯಮಯವಾಗಿ ಬೆಳೆಯುತ್ತಿರುವುದು ತಾಜಾ ನಿದರ್ಶನ.
ಒಬ್ಬ ಹೊಸ ನಿರ್ದೇಶಕ, ನಟ, ನಟಿ, ಗಾಯಕ, ಗಾಯಕಿ ಮತ್ತು ತಂತ್ರಜ್ಞ ಪ್ರತಿಭಾಶಾಲಿಯಾಗಿದ್ದು ಹಿರಿಯರ ಹಿರಿತನದ ಕಾರಣಕ್ಕೆ ಪ್ರಶಸ್ತಿಯಿಂದ ವಂಚಿತವಾಗುವುದು ಕನ್ನಡ ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಅಪಾಯಕಾರಿ ಸಂಗತಿ. ವ್ಯಕ್ತಿ, ಜಾತಿ ಮತ್ತು ಇನ್ನಿತರ ಪ್ರಭಾವದ ಏಕ ಸ್ವಾಮ್ಯತೆ ತಪ್ಪಬೇಕೆಂದರೆ ಪ್ರಶಸ್ತಿ ಆಯ್ಕೆಯ ಮಾನದಂಡಗಳನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಬೇಕು. ಸಬ್ಸಿಡಿ ನೀಡುವಿಕೆಯಲ್ಲೂ ಕಟ್ಟು ನಿಟ್ಟಿನ ಮಾನದಂಡಗಳನ್ನು ರೂಪಿಸುವ ಅಗತ್ಯವಿದೆ. ಪ್ರಶಸ್ತಿ ಮತ್ತು ಸಬ್ಸಿಡಿಗಾಗಿ ಚಲನಚಿತ್ರ ನಿರ್ಮಾಣ ಮಾಡುವ ಸಮಯ ಸಾಧಕರನ್ನು ದೂರ ಇಟ್ಟಾಗ ಮಾತ್ರ ಚಿತ್ರರಂಗದಲ್ಲಿ ನೈಜ ಕಲೆ ಮತ್ತು ಪ್ರತಿಭಾವಂತರಿಗೆ ಬೆಲೆ ಸಿಗುತ್ತದೆ. ಮುಲಾಜಿಲ್ಲದೆ ಮಾತನಾಡುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಕನ್ನಡ ಚಿತ್ರರಂಗದ ಕಾಯಕಲ್ಪ ಮಾಡಬಲ್ಲರು.







