Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಮುಖ್ಯಮಂತ್ರಿ ಬದಲಾವಣೆಯ ‘ಕೆಟ್ಟ...

ಮುಖ್ಯಮಂತ್ರಿ ಬದಲಾವಣೆಯ ‘ಕೆಟ್ಟ ಪರಿಣಾಮಗಳು’

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ1 Nov 2025 12:12 PM IST
share
ಮುಖ್ಯಮಂತ್ರಿ ಬದಲಾವಣೆಯ ‘ಕೆಟ್ಟ ಪರಿಣಾಮಗಳು’

ಸದ್ಯದ ಸ್ಥಿತಿಯಲ್ಲಿ ಕರ್ನಾಟಕವನ್ನು ಮುನ್ನಡೆಸುವ ಸಾಮರ್ಥ್ಯ, ಅನುಭವ, ಸಾಮಾಜಿಕ ಬದ್ಧತೆ ಇರುವುದು ಸಿದ್ದರಾಮಯ್ಯ ಅವರಿಗೆ ಮಾತ್ರ. ಅವರನ್ನು ಬದಲಾಯಿಸಿ ಆ ಜಾಗಕ್ಕೆ ಬೇರೊಬ್ಬರನ್ನು ಕೂಡಿಸಿದರೆ ಮತದಾರರ ತೀರ್ಪಿಗೆ ದ್ರೋಹ ಬಗೆದಂತೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಕೇವಲ ರಾಜಕೀಯ ಪಕ್ಷಗಳಾಗಿದ್ದರೆ ಆತಂಕ ಪಡುವ ಆಗತ್ಯವಿರಲಿಲ್ಲ. ಆ ಎರಡು ಪಕ್ಷಗಳು ಮತೀಯ ರಾಜಕಾರಣದ ಮೂಲಕ ಅಧಿಕಾರ ಹಿಡಿಯಲು ಹೊರಟಿವೆ. ಅದು ಕರ್ನಾಟಕದ ಸೌಹಾರ್ದ ಬದುಕಿಗೆ ಹೆಚ್ಚು ಅಪಾಯಕಾರಿ.

ಒಂದಾನೊಂದು ಕಾಲವಿತ್ತು: ಕಾಂಗ್ರೆಸ್ ಪಕ್ಷದಿಂದ ಕತ್ತೆಗೆ ಟಿಕೆಟ್ ಕೊಟ್ಟರೂ ಗೆಲುವು ನಿಶ್ಚಿತ ಎಂಬ ನಂಬಿಕೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ನೆಹರೂ, ಇಂದಿರಾಗಾಂಧಿ ಕಾಲದ ಕಾಂಗ್ರೆಸ್ ಪಕ್ಷ ಜನಮಾನಸದಲ್ಲಿ ಬಲವಾಗಿ ಬೇರೂರಿತ್ತು. ಕಾಂಗ್ರೆಸ್ ಟಿಕೆಟ್ ಎಂಬುದು ಶಾಸನ ಸಭೆಗೆ ಹೋಗುವ ಪ್ರಮಾಣ ಪತ್ರವಾಗಿತ್ತು. ಆ ಕಾರಣಕ್ಕೆ ಮುಖ್ಯಮಂತ್ರಿ ಮತ್ತು ಮಂತ್ರಿ ಮಂಡಲದ ಆಯ್ಕೆ ಹೈಕಮಾಂಡ್ ಮರ್ಜಿಯನ್ನು ಅವಲಂಬಿಸಿತ್ತು.

ಈಗ ಕಾಲ ಬದಲಾಗಿದೆ. ಜನತಂತ್ರದ ಸಾಧ್ಯತೆ ವ್ಯಾಪಕವಾಗಿ ವಿಸ್ತರಿಸಿದೆ. ನೆಹರೂ ಅವರ ಕಾಲದಲ್ಲೂ ಸ್ಥಳೀಯ ನಾಯಕತ್ವ ಮತ್ತು ಜಾತಿಯ ಸಮೀಕರಣಗಳು ಮಹತ್ವದ ಪಾತ್ರ ವಹಿಸುತ್ತಿದ್ದವು. ಆದರೆ ಚುನಾವಣೆಯಲ್ಲಿ ಮತಗಳು ಸ್ಥಳೀಯ ನಾಯಕತ್ವದ ಕಾರಣಕ್ಕೆ ಸಿಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ಎಂಬುದು ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಹಾಗಾಗಿ ಹೈಕಮಾಂಡ್ ಕೈ ಮೇಲಾಗಿತ್ತು. ಹೈಕಮಾಂಡ್ ಬಲ ಮತ್ತು ಸ್ಥಳೀಯ ನಾಯಕತ್ವದ ಪ್ರಾಬಲ್ಯ ಸರಿದೂಗಿಸಿದಾಗೆಲ್ಲ ಕಾಂಗ್ರೆಸ್ ನಾಗಲೋಟ ನಿರಾತಂಕವಾಗಿ ಸಾಗಿತ್ತು. ಅಷ್ಟಾಗಿಯೂ ಎಸ್. ನಿಜಲಿಂಗಪ್ಪ, ಕಾಮರಾಜ್ ಮುಂತಾದವರು ಕಾಂಗ್ರೆಸ್ ಹೈಕಮಾಂಡ್‌ಗೆ ಸೆಡ್ಡು ಹೊಡೆದು ಯಶಸ್ವಿ ರಾಜಕಾರಣ ಮಾಡಲು ಸಾಧ್ಯವಾಗಲಿಲ್ಲ. ಅತ್ಯಂತ ಜನಪ್ರಿಯ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಶೇಷವಾಗಿ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಬಂಡೆದ್ದು ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ವಿಯಾದ ಒಂದೇ ಒಂದು ನಿದರ್ಶನ ಇಲ್ಲ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದರಲ್ಲದೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದರು. ಆಂಧ್ರಪ್ರದೇಶದಲ್ಲಿ ವೈ. ಎಸ್. ರಾಜಶೇಖರ ರೆಡ್ಡಿ ಪುತ್ರ ಜಗನ್ ರೆಡ್ಡಿ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಕಟ್ಟಿ ಅಧಿಕಾರ ಪಡೆದುಕೊಂಡರು. ಕೆಲವು ಕಡೆಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿದ್ದರೂ ಹಲವು ರಾಜ್ಯಗಳಲ್ಲಿ ವಿಫಲ ಯತ್ನಗಳು ನಡೆದಿವೆ. ಶರದ್ ಪವಾರ್ ಅವರಂತಹ ಪ್ರಬಲ ಸಮುದಾಯದ ನಾಯಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರಬಹುದು. ಆದರೆ ಸ್ವತಂತ್ರವಾಗಿ ಅಧಿಕಾರ ದಕ್ಕಿಸಿಕೊಳ್ಳಲು ದಶಕಗಳೇ ಕಳೆದರೂ ಅವರಿಗೆ ಸಾಧ್ಯವಾಗಿಲ್ಲ. ಹಾಗಂತ ಸ್ಥಳೀಯ ಪ್ರಬಲ ನಾಯಕತ್ವ ಕಾಂಗ್ರೆಸ್ ಪಕ್ಷದ ವಿರುದ್ದ ಬಂಡೆದ್ದಾಗ ಕೆಟ್ಟ ಪರಿಣಾಮಗಳೇ ಆಗಿಲ್ಲ ಎಂದು ಹೇಳಲಾಗದು. ಈ ಹೊತ್ತು ಕಾಂಗ್ರೆಸ್ ಪಕ್ಷ ದೇಶದಲ್ಲಿ ಬಲಹೀನವಾಗಲು ಸ್ಥಳೀಯ ನಾಯಕತ್ವವನ್ನು ಸಮರ್ಪಕವಾಗಿ ಬಳಸಿಕೊಳ್ಳದಿರುವುದರಿಂದ. ಬಿಹಾರ, ಗುಜರಾತ್, ಉತ್ತರ ಪ್ರದೇಶ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಹಲವು ರಾಜ್ಯಗಳು ಬಿಜೆಪಿ ಮತ್ತು ಜನತಾ ಪರಿವಾರದ ಪಾಲಾಗಲು ಸ್ಥಳೀಯ ಪ್ರಬಲ ನಾಯಕತ್ವದ ಕಡೆಗಣನೆಯೇ ಕಾರಣ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಪಕ್ಷದ ಸರಕಾರ ಅಧಿಕಾರಕ್ಕೆ ಬರಲು ರಾಜ್ಯದ ಪ್ರಬಲ ನಾಯಕರಾಗಿದ್ದ ದೇವರಾಜ ಅರಸು ಅವರನ್ನು ಕಡೆಗಣಿಸಿದ್ದು ಮುಖ್ಯ ಕಾರಣ. ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿದಿದ್ದರೆ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಸರಕಾರ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗುತ್ತಿರಲಿಲ್ಲ. ನಿಜಲಿಂಗಪ್ಪ ನೇತೃತ್ವದ ಸಂಸ್ಥಾ ಕಾಂಗ್ರೆಸ್ ಮತ್ತದರ ಪ್ರಮುಖ ನಾಯಕರೇ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ಮುನ್ನಡೆಸಿದ್ದು. ನಿಜಲಿಂಗಪ್ಪ ಅವರ ಶಿಷ್ಯ ವೀರೇಂದ್ರ ಪಾಟೀಲರು ಕೆಲ ಕಾಲ ಜನತಾ ಪಕ್ಷದಲ್ಲಿದ್ದರು. ರಾಮಕೃಷ್ಣ ಹೆಗಡೆ ಮುಂತಾದವರು ಮೂಲ ಕಾಂಗ್ರೆಸ್ ಪಕ್ಷದವರೇ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಶಕ್ತಿಯಾಗಿ ಬೆಳೆದವರು. ಅಷ್ಟಕ್ಕೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದರಿಂದ ಅದರ ಬಿಸಿ ಕರ್ನಾಟಕಕ್ಕೆ ಹೆಚ್ಚು ತಟ್ಟಿರಲಿಲ್ಲ. ಅರಸು, ವೀರೇಂದ್ರ ಪಾಟೀಲ್ ಮತ್ತು ಎಸ್. ಬಂಗಾರಪ್ಪ ಅವರ ಕಡೆಗಣನೆಯಿಂದ ಕಾಂಗ್ರೆಸ್ ಪಕ್ಷ ತೀವ್ರ ಹಿನ್ನಡೆ ಅನುಭವಿಸಿದ್ದು ಒಪ್ಪಿಕೊಳ್ಳಲೇಬೇಕಾದ ಕಟು ಸತ್ಯ.

ಅರಸು ನಿರ್ಗಮನದ ನಂತರ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರೀ ಹಿನ್ನಡೆ ಅನುಭವಿಸಿತ್ತು. 1983 ಮತ್ತು 1985ರ ವಿಧಾನಸಭಾ ಚುನಾವಣೆಗಳು ಕಾಂಗ್ರೆಸ್ ಪಕ್ಷದ ಪಾಲಿಗೆ ಅಕ್ಷರಶಃ ದುಃಸ್ವಪ್ನದಂತಿದ್ದವು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವೇ ಇಲ್ಲವೇನೋ ಎಂಬ ಭಾವನೆ ಎಲ್ಲೆಡೆ ಮೂಡಿತ್ತು.

ಕಾಂಗ್ರೆಸ್ ಪಕ್ಷಕ್ಕೆ ಮರು ಜೀವ ಕೊಟ್ಟವರು ವೀರೇಂದ್ರ ಪಾಟೀಲರು. ಮೂಲತಃ ಕಾಂಗ್ರೆಸ್ ಪಕ್ಷದ ವೀರೇಂದ್ರ ಪಾಟೀಲರು ಎಸ್. ನಿಜಲಿಂಗಪ್ಪ ಅವರೊಂದಿಗೆ ಸೇರಿ ಇಂಡಿಕೇಟ್ ಸಿಂಡಿಕೇಟ್ ಸಂಘರ್ಷದ ಭಾಗವಾಗಿದ್ದರು. ಕರ್ನಾಟಕದಲ್ಲಿ ಇಂದಿರಾ ಕಾಂಗ್ರೆಸ್ ಮೇಲುಗೈ ಸಾಧಿಸಿದಾಗ ಅನಿವಾರ್ಯವಾಗಿ ಮರಳಿ ಪಕ್ಷ ಸೇರಿಕೊಂಡಿದ್ದರು. ಹಾಗೆ ನೋಡಿದರೆ, ವೀರೇಂದ್ರ ಪಾಟೀಲರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ಜನತಾ ಪಕ್ಷದ ಅಭ್ಯರ್ಥಿಯಾಗಿ ಸೋತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ವೀರೇಂದ್ರ ಪಾಟೀಲರ ಅಗತ್ಯ ಕಂಡು ಬಂತು. ಹಾಗೆಯೇ ವೀರೇಂದ್ರ ಪಾಟೀಲರಿಗೂ ಕಾಂಗ್ರೆಸ್ ಅನಿವಾರ್ಯವಾಗಿತ್ತು. ಎಂಭತ್ತರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಸತತ ಎರಡು ಚುನಾವಣೆಗಳಲ್ಲಿ ಸೋತಾಗ ಅನುಭವಿ ನಾಯಕ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೈಕಮಾಂಡ್ ರಾಜ್ಯಕ್ಕೆ ಕಳುಹಿಸಿಕೊಟ್ಟಿತ್ತು. 1989ರಲ್ಲಿ ವೀರೇಂದ್ರ ಪಾಟೀಲರು ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ದೊರೆಯಿತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 178 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದರು. ಅದು ಐತಿಹಾಸಿಕ ಗೆಲುವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಅರಗಿಸಿಕೊಳ್ಳುವ ತಾಳ್ಮೆ ಮತ್ತು ಶಕ್ತಿ ಇಲ್ಲವೆಂಬುದನ್ನು ವೀರೇಂದ್ರ ಪಾಟೀಲರ ಕಾಲಾವಧಿ ರುಜುವಾತುಪಡಿಸಿತು. ಈ ಹೊತ್ತಿಗೂ ಕಾಂಗ್ರೆಸ್ ಮುಖಂಡರು ಅದನ್ನೇ ಸಾಬೀತುಪಡಿಸುತ್ತಿದ್ದಾರೆ.

ವೀರೇಂದ್ರ ಪಾಟೀಲರು ಐದು ವರ್ಷಗಳ ಕಾಲ ಅಧಿಕಾರ ನಡೆಸುವ ಅವಕಾಶ ಪಡೆದಿದ್ದರೆ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಖಾಯಂ ಆಗಿ ನೆಲೆಯೂರುತ್ತಿತ್ತು. ದುರಂತವೆಂದರೆ, ಮೂರು ಜನ ಮುಖ್ಯಮಂತ್ರಿಗಳು ಅಧಿಕಾರ ನಡೆಸಿದರು. ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಿದ್ದನ್ನು ಅನಾರೋಗ್ಯದ ಕಾರಣ ಮುಂದು ಮಾಡಿ ಸಮರ್ಥಿಸಿಕೊಳ್ಳಬಹುದು. ಆದರೆ ಅತ್ಯಂತ ಕ್ರಿಯಾಶೀಲವಾಗಿದ್ದ ಮತ್ತು ಜನಪ್ರಿಯ ಆಡಳಿತ ನೀಡುತ್ತಿದ್ದ ಎಸ್. ಬಂಗಾರಪ್ಪ ಅವರನ್ನು ಎರಡೇ ವರ್ಷಕ್ಕೆ ಸಿ.ಎಂ. ಕುರ್ಚಿಯಿಂದ ಕೆಳಗಿಳಿಸಿದ್ದು ಸಮರ್ಥನೀಯ ನಿರ್ಧಾರ ಆಗಿರಲಿಲ್ಲ. ಅದರಲ್ಲೂ ಎಸ್. ಬಂಗಾರಪ್ಪ ಅವರ ಉತ್ತರಾಧಿಕಾರಿಯನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡದೆ ಮುಚ್ಚಿದ ಲಕೋಟೆಯಲ್ಲಿ ಹೆಸರು ಬರೆದು ಕಳುಹಿಸಲಾಗಿತ್ತು. ಹೈಕಮಾಂಡ್ ಅತ್ಯಂತ ಶಕ್ತಿಶಾಲಿ ಎಂಬ ಸಂದೇಶವೇನೋ ರವಾನಿಸಿತು. ಆದರೆ ಆ ನಿರ್ಧಾರದ ಕೆಟ್ಟ ಪರಿಣಾಮಗಳನ್ನು ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೇ ಅನುಭವಿಸಬೇಕಾಯಿತು. 1989ರಿಂದ 1994ರ ಅವಧಿಯಲ್ಲಿ ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ ಮತ್ತು ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅದರ ಕೆಟ್ಟ ಪರಿಣಾಮವಾಗಿ 1994ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯಾ ಬಲ 34ಕ್ಕೆ ಕುಸಿಯಿತು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವೀರೇಂದ್ರ ಪಾಟೀಲ್ ನಾಯಕತ್ವ ತೋರಿಸಿ ಮತ ಪಡೆದಿತ್ತು. ನಂತರ ಹೈಕಮಾಂಡ್ ಇಚ್ಛೆಯಂತೆ ಮುಖ್ಯಮಂತ್ರಿಗಳು ಬದಲಾದರು. ಕಾಂಗ್ರೆಸ್ ಪಕ್ಷದ ಆ ತೀರ್ಮಾನವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳಲಿಲ್ಲ. ಇದೇ ಬಗೆಯ ತೀರ್ಮಾನ ಕರ್ನಾಟಕದ ಮತದಾರ ಜನತಾ ಪಕ್ಷ, ಬಿಜೆಪಿ ನಾಯಕತ್ವದ ವಿಷಯದಲ್ಲಿ ತೆಗೆದುಕೊಂಡಿದ್ದಾರೆ. 1983ರಲ್ಲಿ ಜನತಾ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿತ್ತು. ಆದರೆ 1985ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ರಾಮಕೃಷ್ಣ ಹೆಗಡೆಯವರು ಕರ್ನಾಟಕ ಜನತಾ ಪಕ್ಷದ ನಾಯಕರಾಗಿ ಜನಪ್ರಿಯರಾಗಿದ್ದರು. ಹೆಗಡೆಯವರನ್ನು ಸಿ.ಎಂ. ಕುರ್ಚಿಯಿಂದ ಇಳಿಸಿ ಎಸ್. ಆರ್. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರ ಕೆಟ್ಟ ಪರಿಣಾಮವೇ 1999ರ ಚುನಾವಣೆಯಲ್ಲಿ ಜನತಾ ಪರಿವಾರ ಅಕ್ಷರಶಃ ಧೂಳೀಪಟವಾಯಿತು. ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷವನ್ನು ಮತದಾರ ಒಪ್ಪಿಕೊಳ್ಳಲಿಲ್ಲ. ಹೆಗಡೆ ನೇತೃತ್ವದ ಜನತಾ ದಳ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ಒಟ್ಟಿನಲ್ಲಿ ಜನತಾ ಪರಿವಾರ ನುಚ್ಚು ನೂರಾಗಿತ್ತು. ಕರ್ನಾಟಕದ ಮತದಾರರು ಸ್ಥಿರ ಸರಕಾರಕ್ಕೆ ಮೊದಲ ಆದ್ಯತೆ ನೀಡುತ್ತಾರೆ.

2008ರಲ್ಲಿ ಬಿಜೆಪಿ ಯಡಿಯೂರಪ್ಪ ಮುಖ ತೋರಿಸಿ ವೋಟು ಪಡೆದಿದಿತ್ತು. ಐದು ವರ್ಷದ ಅವಧಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳನ್ನು ಬಿಜೆಪಿ ದಯಪಾಲಿಸಿತು. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಅಧಿಕಾರವೇನೋ ನಡೆಸಿದರು. ಆದರೆ ನಂತರದ ಚುನಾವಣೆಯಲ್ಲಿ ಮತದಾರರಿಂದ ತಿರಸ್ಕೃತರಾದರು. 1999ರಿಂದ 2004ರವರೆಗೆ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಭಿನ್ನಮತಕ್ಕೆ ಅವಕಾಶ ಇಲ್ಲದಂತೆ ಆಡಳಿತ ನೀಡಿತು. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೂ ಶಾಸಕರ ಸಂಖ್ಯಾಬಲ ಗಣನೀಯವಾಗಿ ಕುಸಿದಿರಲಿಲ್ಲ. ಧರಂಸಿಂಗ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚಿಸುವಷ್ಟು ಕಾಂಗ್ರೆಸ್ ಪ್ರಬಲವಾಗಿತ್ತು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಸಮನ್ವಯತೆಯಿಂದ ಆಡಳಿತ ನಡೆಸಿದ್ದರೆ ಬಿಜೆಪಿಗೆ ಕರ್ನಾಟಕದಲ್ಲಿ ಅವಕಾಶವೇ ಸಿಗುತ್ತಿರಲಿಲ್ಲ. ಕುಮಾರಸ್ವಾಮಿಯವರ ತಪ್ಪು ನಿರ್ಧಾರದಿಂದ ರಾಜ್ಯದಲ್ಲಿ ಬಿಜೆಪಿ ನೆಲೆ ಕಂಡುಕೊಂಡಿತ್ತು.

2013ರಿಂದ 2018ರವರೆಗೆ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಭಿನ್ನಮತಕ್ಕೆ ಆಸ್ಪದ ಇರಲಿಲ್ಲ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 80 ಶಾಸಕರನ್ನು ಗೆಲ್ಲಿಸಿಕೊಂಡು ಪ್ರಾಬಲ್ಯ ಉಳಿಸಿಕೊಂಡಿತ್ತು. ಅಷ್ಟು ಮಾತ್ರವಲ್ಲ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಪಾಲು ಪಡೆದಿತ್ತು. ಆಗ ಕಾಂಗ್ರೆಸ್ ಪಕ್ಷ ಸಮ್ಮಿಶ್ರ ಸರಕಾರದ ನೇತೃತ್ವವನ್ನು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿದ್ದರೆ ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಾಯಕತ್ವ ಬದಲಾವಣೆಯ ಮಾತುಗಳು ಚುನಾವಣಾ ಪೂರ್ವದಲ್ಲೇ ನಿರ್ಧಾರವಾದರೆ ಮತದಾರ ಒಪ್ಪಿಕೊಳ್ಳುತ್ತಾನೆ. ಸರಕಾರ ರಚನೆಯಾಗಿ ಅರ್ಧ ಹಾದಿ ಸವೆಸಿದ ಮೇಲೆ ಬೇರೆ ನಾಯಕತ್ವವನ್ನು ಹೈಕಮಾಂಡ್ ಬಲವಂತವಾಗಿ ಹೇರಿದರೆ ಅದರ ಕೆಟ್ಟ ಪರಿಣಾಮಗಳನ್ನು ಆಯಾ ಪಕ್ಷಗಳೇ ಎದುರಿಸಿವೆ. ಹೀನಾಯವಾಗಿ ಸೋಲು ಕಂಡಿವೆ. ಕಾಂಗ್ರೆಸ್ ಪಕ್ಷಕ್ಕೆ ಹೊಸ ನಾಯಕತ್ವವನ್ನು ರೂಪಿಸುವ ಉದ್ದೇಶ ಇದ್ದಿದ್ದರೆ, 2019ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಲೇ ಯೋಚಿಸಬೇಕಿತ್ತು. ಸಿದ್ದರಾಮಯ್ಯ ಅವರ ಬದಲಿಗೆ ಬೇರೊಬ್ಬ ಸಮರ್ಥ ನಾಯಕನಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಬೇಕಿತ್ತು. ಆಗ ಸಮರ್ಥ ನಾಯಕರಾರೂ ದೊರೆಯದ ಕಾರಣಕ್ಕೆ ಸಿದ್ದರಾಮಯ್ಯ ಅವರ ಹೆಗಲಿಗೆ ಜವಾಬ್ದಾರಿ ವಹಿಸಲಾಗಿತ್ತು. ಸಿದ್ದರಾಮಯ್ಯ ಅವರು ನಾಲ್ಕು ವರ್ಷಗಳ ಕಾಲ ಅತ್ಯಂತ ಸಮರ್ಥವಾಗಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ 2023ರ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಎದುರಿಸಿತ್ತು. ಕಾಂಗ್ರೆಸ್ ಶಾಸಕರ ಸಂಖ್ಯಾ ಬಲ 136ಕ್ಕೆ ಹೆಚ್ಚಲು ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಡಿ.ಕೆ. ಶಿವಕುಮಾರ್ ಕಾರಣ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಹಾಗಾದರೆ 2013ರ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಡಾ.ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಗ ಅಧ್ಯಕ್ಷರ ಪಾಲು ಪರಮೇಶ್ವರ್ ಅವರಿಗೆ ಸಿಗಲೇ ಇಲ್ಲ. ಡಿ.ಕೆ. ಶಿವಕುಮಾರ್ ಜಾಗದಲ್ಲಿ ಈಶ್ವರ್ ಖಂಡ್ರೆ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಹೆಚ್ಚು ಕಡಿಮೆ ಇಷ್ಟೇ ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಲಭಿಸುತ್ತಿದ್ದವು. ಬಿಜೆಪಿಯ ಆಡಳಿತ ವಿರೋಧಿ ಅಲೆ, ನಾಯಕತ್ವದ ಕೊರತೆ ಮತ್ತು ಅಲ್ಲಿನ ಗೊಂದಲಗಳು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿದ್ದವು. ಎಲ್ಲಕ್ಕೂ ಮಿಗಿಲಾಗಿ ಸಿದ್ದರಾಮಯ್ಯ ಅವರ ಸಮರ್ಥ ನಾಯಕತ್ವ. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವ ಇರದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಸಮೀಪವಾಗುತ್ತಿರಲಿಲ್ಲ. ಕೇವಲ ಡಿ.ಕೆ. ಶಿವಕುಮಾರ್ ಅವರ ಮುಖ ತೋರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ ಎಂಬ ಸತ್ಯ ಗೊತ್ತಿದ್ದೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಅವಲಂಬಿಸಿತ್ತು. ಸಿದ್ದರಾಮಯ್ಯ ಅವರು ಪಕ್ಷಕ್ಕೆ ಮತಗಳನ್ನು ತಂದು ಕೊಡುವ ಅತ್ಯಂತ ಜನಪ್ರಿಯ ಜನನಾಯಕ. ಅವರಿಗೆ ಮತ ಸೆಳೆಯುವ ಶಕ್ತಿ ಇರುವ ಕಾರಣಕ್ಕೆ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದು. ಆ ಶಕ್ತಿ ಡಿ.ಕೆ. ಶಿವಕುಮಾರ್ ಅವರಿಗೆ ಇದ್ದಿದ್ದರೆ ಶಾಸಕರು ಅವರ ಜೊತೆಗೆ ನಿಲ್ಲುತ್ತಿದ್ದರು. ಹಾಗೆ ನೋಡಿದರೆ ಸಿದ್ದರಾಮಯ್ಯ ಅವರು ಎಲ್ಲರನ್ನೂ ಮಂತ್ರಿ ಮಾಡಿಲ್ಲ. ಮಾಡಲು ಸಾಧ್ಯವೂ ಇಲ್ಲ. ಹೀಗಿದ್ದರೂ ಅಧಿಕಾರ ಸಿಕ್ಕವರು, ಸಿಗದಿದ್ದವರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆಂದರೆ ಅವರ ನಾಯಕತ್ವ ಗಟ್ಟಿಯಾಗಿದೆ ಎಂದೇ ಭಾವಿಸಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಸಮರ್ಥ ಆಡಳಿತ ನೀಡುತ್ತಿದ್ದಾರೆ. ಅವರ ಕ್ರಿಯಾಶೀಲತೆ, ಉತ್ಸಾಹ ಕುಂದಿಲ್ಲ. ಮೈಸೂರು ಮುಡಾ ಹಗರಣದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಈ ಹಂತದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸಕಾರಣ ಇಲ್ಲ. ಆರೋಗ್ಯ ಚೆನ್ನಾಗಿದೆ. ವಯಸ್ಸಿನ ಕಾರಣ ಮುಂದು ಮಾಡಿ ಇಳಿಸಬೇಕೆಂದರೆ, ವಯಸ್ಸಿನಲ್ಲಿ ಅವರಿಗಿಂತ ಹಿರಿಯರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ದೇಶ ಸುತ್ತುತ್ತಿದ್ದಾರೆ. ಸಿದ್ದರಾಮಯ್ಯ ಅವರು ಯಾವುದೇ ಪ್ರಮುಖ ಹಗರಣದಲ್ಲಿ ಸಿಲುಕಿಲ್ಲ. ಕಾರಣ ಇಲ್ಲದೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದು ತಪ್ಪು ನಡೆ ಎನಿಸಿಕೊಳ್ಳುತ್ತದೆ. ಅಷ್ಟಕ್ಕೂ ಸಿದ್ದರಾಮಯ್ಯ ಅವರು ಹೆಚ್ಚು ಕಾಂಗ್ರೆಸ್ ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾದವರು. ಶಾಸಕರ ಬೆಂಬಲ ಅವರ ಜೊತೆಗೆ ಇರುವವರೆಗೆ ಅವರ ಕುರ್ಚಿ ಭದ್ರ.

ಹೆಚ್ಚಿನ ಶಾಸಕರು ಸಿದ್ದರಾಮಯ್ಯ ಅವರ ಕಾರ್ಯ ವೈಖರಿ ಬಗ್ಗೆ ಅತೃಪ್ತಿ ಹೊಂದಿದ್ದರೆ ಆಗ ಹೈಕಮಾಂಡ್ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತಿಸಬಹುದು.

ಸದ್ಯದ ರಾಜಕೀಯ ಬೆಳವಣಿಗೆ ಗಮನಿಸಿದರೆ ಡಿ.ಕೆ. ಶಿವಕುಮಾರ್ ಅವರ ಪರ ಒಲವು ಹೊಂದಿರುವ ಶಾಸಕರ ಸಂಖ್ಯೆ ಕಡಿಮೆ ಇದೆ ಎನಿಸುತ್ತದೆ. ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು ಎಂಬ ಕಾರಣಕ್ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ವಾದಿಸುವವರು ಡಾ.ಜಿ. ಪರಮೇಶ್ವರ್ ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದನ್ನು ಪರಿಗಣಿಸಬೇಕಾಗುತ್ತದೆ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿ ಹಿರಿತನ ಸಂಪಾದಿಸಿದ್ದಾರೆ. ಪರಮೇಶ್ವರ್ ಮುಖ್ಯಮಂತ್ರಿಯಾಗಲು ದಲಿತ ಸಮುದಾಯದ ಇನ್ನೊಬ್ಬ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರು ಸಹಮತ ವ್ಯಕ್ತ ಪಡಿಸಿದ್ದಾರೆ.

ಹಾಗೆ ನೋಡಿದರೆ ಸಿದ್ದರಾಮಯ್ಯ ಅವರ ಸೈದ್ಧಾಂತಿಕ ಬದ್ಧತೆಗೆ ಸರಿಸಾಟಿಯಾಗಬಲ್ಲ ಇನ್ನೊಬ್ಬ ನಾಯಕ ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಸಂಘ ಪರಿವಾರವನ್ನು ಸೈದ್ಧಾಂತಿಕ ನೆಲೆಯಲ್ಲಿ ವಿರೋಧಿಸುವ ವೈಚಾರಿಕ ಸ್ಪಷ್ಟತೆ ಇರುವುದು ಸಿದ್ದರಾಮಯ್ಯ ಅವರಿಗೆ ಮಾತ್ರ. ಡಿ.ಕೆ. ಶಿವಕುಮಾರ್, ಡಾ.ಜಿ. ಪರಮೇಶ್ವರ್ ಅವರು ಸಂಘ ಪರಿವಾರ ಮತ್ತು ಕೋಮುವಾದಿ ರಾಜಕಾರಣದ ವಿಷಯದಲ್ಲಿ ಗಟ್ಟಿ ದನಿಯಾಗುವಷ್ಟು ವೈಚಾರಿಕ ಸ್ಪಷ್ಟತೆ ರೂಢಿಸಿಕೊಂಡಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿ ಪ್ರಿಯಾಂಕ್ ಖರ್ಗೆಯವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇದೆ. ಸಂಘ ಪರಿವಾರ ಮತ್ತು ಬಿಜೆಪಿಯ ಕೋಮುವಾದಿ ನಿಲುವನ್ನು ಎದುರಿಸುವ ಛಾತಿ ಇದೆ. ಆದರೆ ಅವರು ಸಿದ್ದರಾಮಯ್ಯ ಅವರ ಸ್ಥಾನ ತುಂಬುವ ಹಿರಿತನ ಪಡೆದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇದೆ. ಕೋಮುವಾದಿ ರಾಜಕಾರಣವನ್ನು ವಿರೋಧಿಸುತ್ತಲೇ ಸಾರ್ವಜನಿಕ ಬದುಕಿನಲ್ಲಿ ನೆಲೆ ನಿಂತವರು. ಕಾಂಗ್ರೆಸ್ ಪಕ್ಷದ ಉಳಿದ ನಾಯಕರಿಗೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರಿಗೆ ಇರುವಷ್ಟು ಸೈದ್ಧಾಂತಿಕ ಸ್ಪಷ್ಟತೆ ಇಲ್ಲವೇ ಇಲ್ಲ. ಮಂತ್ರಿಯಾಗಿ ಕಾರ್ಯ ನಿರ್ವಹಿಸುವಷ್ಟು ಚಾಕಚಕ್ಯತೆ ಹಲವರಿಗೆ ಇದೆ. ಇನ್ನೂ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೆ ಸರಿಗಟ್ಟುವ ಬೇರೊಬ್ಬ ನಾಯಕ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಸಿದ್ದರಾಮಯ್ಯ ಅವರ ವ್ಯಕ್ತಿತ್ವದ ಬಹುದೊಡ್ಡ ಶಕ್ತಿ ಸಾಮಾಜಿಕ ನ್ಯಾಯದ ಬಗೆಗಿನ ಅವರ ಅಚಲ ನಿಲುವು, ಬದ್ಧತೆ.

ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಕಾಂಗ್ರೆಸ್ ವಲಯದಿಂದಲೇ ಕೇಳಿ ಬರುತ್ತಿವೆ. ಡಿ.ಕೆ. ಶಿವಕುಮಾರ್ ಅಭಿಮಾನಿಗಳು ತಮ್ಮ ನಾಯಕ ಸಿ.ಎಂ. ಹುದ್ದೆ ಅಲಂಕರಿಸುತ್ತಾರೆ ಎಂಬ ವಿಶ್ವಾಸದ ಮಾತುಗಳನ್ನು ಬಲವಾಗಿಯೇ ಪ್ರತಿಪಾದಿಸುತ್ತಿದ್ದಾರೆ. ನಾಯಕತ್ವದ ವಿಚಾರ ಹಾದಿ ಬೀದಿಯಲ್ಲಿ ನಿರ್ಣಯ ಮಾಡಲಾಗದು ಎಂಬ ಕಟು ಸತ್ಯವನ್ನು ಎಲ್ಲರಿಗೂ ಮನಗಾಣಿಸಬೇಕು. ಕಾಂಗ್ರೆಸ್ ಹೈಕಮಾಂಡ್‌ಗೆ ಮುಖ್ಯಮಂತ್ರಿಯನ್ನು ಬದಲಾಯಿಸುವ ಇರಾದೆ ಇದ್ದರೆ, ಸಿದ್ದರಾಮಯ್ಯ ಮತ್ತು ಅವರ ಬೆಂಬಲಿತ ಶಾಸಕರ ಅಭಿಪ್ರಾಯ ಗೌರವಿಸಿ ಮುಂದುವರಿಯಬೇಕಾಗುತ್ತದೆ. ಹೈಕಮಾಂಡ್ ಮೇಲಿನಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೇರುವ ಪ್ರಯತ್ನ ಮಾಡಿದರೆ ಶಾಸಕರ ವಿರೋಧ ಎದುರಿಸಬೇಕಾಗುತ್ತದೆ. ನಾಯಕತ್ವ ಬದಲಾವಣೆ ಮಾಡುವುದು ಕಾಂಗ್ರೆಸ್ ಹೈಕಮಾಂಡ್‌ಗೆ ನೀರು ಕುಡಿದಷ್ಟೇ ಸರಳ ಇರಬಹುದು. ಆದರೆ ನಂತರದ ಕೆಟ್ಟ ಪರಿಣಾಮಗಳನ್ನು ಕಾಂಗ್ರೆಸ್ ಪಕ್ಷ ಎದುರಿಸಬೇಕಾಗುತ್ತದೆ. ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಬದಲಾಯಿಸಿದ್ದರಿಂದ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಬೇಕಾಯಿತು. ಅಕ್ಟೋಬರ್ ಕ್ರಾಂತಿ, ನವೆಂಬರ್ ಕ್ರಾಂತಿ ಬಗ್ಗೆ ಮಾತನಾಡುವುದು ಬಹಳ ಸರಳ. ಅನುಷ್ಠಾನಕ್ಕೆ ತರಬೇಕೆಂದರೆ ಕರ್ನಾಟಕದ ರಾಜಕೀಯ ಚರಿತ್ರೆಯ ಪುಟಗಳನ್ನು ಒಮ್ಮೆ ತಿರುವಿ ಹಾಕಬೇಕು.

ಸದ್ಯದ ಸ್ಥಿತಿಯಲ್ಲಿ ಕರ್ನಾಟಕವನ್ನು ಮುನ್ನಡೆಸುವ ಸಾಮರ್ಥ್ಯ, ಅನುಭವ, ಸಾಮಾಜಿಕ ಬದ್ಧತೆ ಇರುವುದು ಸಿದ್ದರಾಮಯ್ಯ ಅವರಿಗೆ ಮಾತ್ರ. ಅವರನ್ನು ಬದಲಾಯಿಸಿ ಆ ಜಾಗಕ್ಕೆ ಬೇರೊಬ್ಬರನ್ನು ಕೂಡಿಸಿದರೆ ಮತದಾರರ ತೀರ್ಪಿಗೆ ದ್ರೋಹ ಬಗೆದಂತೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಕೇವಲ ರಾಜಕೀಯ ಪಕ್ಷಗಳಾಗಿದ್ದರೆ ಆತಂಕ ಪಡುವ ಆಗತ್ಯವಿರಲಿಲ್ಲ. ಆ ಎರಡು ಪಕ್ಷಗಳು ಮತೀಯ ರಾಜಕಾರಣದ ಮೂಲಕ ಅಧಿಕಾರ ಹಿಡಿಯಲು ಹೊರಟಿವೆ. ಅದು ಕರ್ನಾಟಕದ ಸೌಹಾರ್ದ ಬದುಕಿಗೆ ಹೆಚ್ಚು ಅಪಾಯಕಾರಿ.

ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಯಾವ ಬಗೆಯ ಒಪ್ಪಂದ ಆಗಿದೆಯೋ ಆ ಪಕ್ಷದ ಹಿರಿಯ ನಾಯಕರಿಗೆ ಗೊತ್ತು. ಆದರೆ ಕರ್ನಾಟಕದ ಮತದಾರ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ್ದು ಸಿದ್ದರಾಮಯ್ಯ ಅವರ ನಾಯಕತ್ವ ನಂಬಿಕೊಂಡು. ಒಂದು ವೇಳೆ ಕಾಂಗ್ರೆಸ್ ಪಕ್ಷದ ಇನ್ನೊಬ್ಬರಿಗೆ ಮುಖ್ಯಮಂತ್ರಿ ಹುದ್ದೆಯ ಅವಕಾಶ ನೀಡುವ ಇರಾದೆ ಹೈಕಮಾಂಡ್‌ಗೆ ಇದ್ದಿದ್ದರೆ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡಬೇಕು. ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಒಪ್ಪಿಸಿ ಇದು ಶಾಸಕರ ತೀರ್ಮಾನ ಎಂದು ಅನನುಭವಿ ಮತ್ತು ಸೈದ್ಧಾಂತಿಕ ಸ್ಪಷ್ಟತೆ ಇರದವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿದರೆ ಪಕ್ಷ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಜುಗರ ತರುವ ಯಾವ ತೀರ್ಮಾನವೂ ಪಕ್ಷಕ್ಕೆ ಒಳಿತು ಮಾಡುವುದಿಲ್ಲ. ಸಿದ್ದರಾಮಯ್ಯ ಅವರನ್ನು ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸಿ ಅವರ ನೇತೃತ್ವದಲ್ಲಿಯೇ 2028ರ ಚುನಾವಣೆ ಎದುರಿಸಿದರೆ ಹೀನಾಯ ಸೋಲಿನಿಂದ ಪಾರಾಗಬಹುದು. ಮುಖ್ಯಮಂತ್ರಿ ಬದಲಾವಣೆ ಅನಿವಾರ್ಯ ಎನಿಸಿದರೆ ಆ ಜಾಗಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ತಂದರೆ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಉಳಿಯುತ್ತದೆ. ಸರಕಾರದ ಚುಕ್ಕಾಣಿ ಸಮರ್ಥ ವ್ಯಕ್ತಿಯ ಕೈಗೆ ನೀಡಿದಂತಾಗುತ್ತದೆ. ಜನತೆಯ ಆಶೋತ್ತರ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರ ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಮುಂದುವರಿಯುವುದು ಕಾಲದ ಅಗತ್ಯವಾಗಿದೆ. ಹೈಕಮಾಂಡ್ ಸ್ಥಳೀಯ ಪ್ರಬಲ ನಾಯಕತ್ವವನ್ನು ಹತ್ತಿಕ್ಕಲು ಹೊಸ ಪ್ರಯೋಗಕ್ಕೆ ಇಳಿದರೆ ಕೆಟ್ಟ ಪರಿಣಾಮ ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ.

share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X