Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಶಾಲಾ ಶಿಕ್ಷಣದ ‘ದುಬಾರಿ’ ವ್ಯಾಪಾರೀಕರಣ

ಶಾಲಾ ಶಿಕ್ಷಣದ ‘ದುಬಾರಿ’ ವ್ಯಾಪಾರೀಕರಣ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ5 July 2025 12:43 PM IST
share
ಶಾಲಾ ಶಿಕ್ಷಣದ ‘ದುಬಾರಿ’ ವ್ಯಾಪಾರೀಕರಣ
ಒಂದು ಕಾಲದಲ್ಲಿ ಸಾಹಿತಿ, ಕಲಾವಿದರು ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದರು. ಯಾವಾಗ ನ್ಯಾಯಾಲಯಗಳೇ ಶಿಕ್ಷಣ ಮಾಧ್ಯಮವನ್ನು ಪೋಷಕರ ಆಯ್ಕೆ ಎಂದು ಹೇಳಿದವೋ ಅಂದಿನಿಂದ ಕನ್ನಡ ಕರ್ನಾಟಕದಲ್ಲೇ ಅನಾಥವಾಗಿದೆ. ಕನ್ನಡ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಆರಂಭವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಸರಕಾರಿ ಶಾಲೆಗಳು ಕೊನೆಯ ಆಯ್ಕೆಗಳಾಗಿ ಉಳಿದಿವೆ. ಆದರೆ ಅಲ್ಲೂ ಕನ್ನಡ ಕೊನೆಯ ಆಯ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಮೇಲು ಮಧ್ಯಮವರ್ಗ, ಮಧ್ಯಮವರ್ಗ ಮತ್ತು ಕೆಳ ಮಧ್ಯಮವರ್ಗ ತನ್ನ ಆದಾಯದ ಒಟ್ಟು ಮೊತ್ತದಲ್ಲಿ ಅನ್ನ, ಬಟ್ಟೆಗಿಂತಲೂ ಹೆಚ್ಚು ಖರ್ಚು ಮಾಡುವುದು ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಆರೋಗ್ಯಕ್ಕಾಗಿ. ಆದಾಯ ಕಡಿಮೆಯಿದ್ದು ಕುಟುಂಬ ದೊಡ್ಡದಿದ್ದರೆ ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯ ಗಗನ ಕುಸುಮವಾಗುತ್ತದೆ. ಐವತ್ತು ವರ್ಷಗಳ ಹಿಂದೆ ಶಿಕ್ಷಣ ನೀಡುವುದು, ಆರೋಗ್ಯ ಸೇವೆ ಒದಗಿಸುವುದು ದೇವರ ಕೆಲಸವಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳು, ಕ್ರಿಶ್ಚಿಯನ್ ಮಿಷನರಿ ಸೇರಿದಂತೆ ಶಾಲೆ ಮತ್ತು ಆಸ್ಪತ್ರೆಗಳನ್ನು ಸೇವಾ ಮನೋಭಾವ ಉಳ್ಳವರು ಆರಂಭಿಸುತ್ತಿದ್ದರು. ಹಣ ಗಳಿಕೆಯಲ್ಲಿ ಸಾರಾಯಿ ದಂಧೆ ಮುಂಚೂಣಿಯಲ್ಲಿ ಇತ್ತು. ಇನ್ನಿತರ ವ್ಯಾಪಾರ ವಹಿವಾಟುಗಳು ತಕ್ಕ ಮಟ್ಟಿಗೆ ಲಾಭ ತರುವ ಸಾಧನಗಳಾಗಿದ್ದವು. ರಸಗೊಬ್ಬರ, ಕ್ರಿಮಿ ನಾಶಕ ಔಷಧಿ, ಟ್ರ್ಯಾಕ್ಟರ್ ಪ್ರವೇಶ ಪಡೆಯುವವರೆಗೂ ಕೃಷಿಯೂ ಲಾಭದಾಯಕ ವೃತ್ತಿ ಎನಿಸಿಕೊಂಡಿತ್ತು.

ಕೊಠಾರಿ ಆಯೋಗ ಶಿಫಾರಸು ಮಾಡಿದ ಪ್ರತಿ ಶತ ಆರರಷ್ಟು ಹಣವನ್ನು ಶಿಕ್ಷಣಕ್ಕಾಗಿ ಯಾವ ಸರಕಾರವು ಆಯವ್ಯಯದಲ್ಲಿ ಮೀಸಲಿಟ್ಟಿಲ್ಲ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಲಾದ ಮಟ್ಟಿಗೆ ಶಿಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡುತ್ತಲೇ ಇವೆ. ಶಿಕ್ಷಣಕ್ಕಾಗಿ ಹೆಚ್ಚು ಹಣ ತೆಗೆದಿರಿಸಬೇಕೆಂದು ಅಪೇಕ್ಷೆ ಪಡುವ ಜನ ಸಮರ್ಪಕ ಬಳಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕರ್ನಾಟಕ ಸರಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಪ್ರತೀ ವರ್ಷ ಕೋಟಿ ಕೋಟಿ ಹಣವನ್ನು ವ್ಯಯ ಮಾಡುತ್ತಲೇ ಇದೆ. ಆದರೆ ಗುಣಮಟ್ಟದ ಶಿಕ್ಷಣವೆಂಬುದು ಮರೀಚಿಕೆಯಾಗುತ್ತಿದೆ. ಒಂದು ಕಾಲದಲ್ಲಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಹೆಸರು ಮಾಡಿದ್ದವು. ಖಾಸಗಿ ಶಾಲೆಗಳನ್ನು ಧಾರ್ಮಿಕ ಸಂಸ್ಥೆಗಳು ಸೇವಾ ಮನೋಭಾವದಿಂದ ನಡೆಸುತ್ತಿದ್ದವು. ಅನ್ನ ಮತ್ತು ಅಕ್ಷರ ನೀಡುವುದನ್ನು ಪುಣ್ಯದ ಕೆಲಸವೆಂದೇ ಭಾವಿಸಲಾಗಿತ್ತು. ಈಗ ಖಾಸಗಿ ಶಾಲೆಗಳು ಸರಕಾರಿ ಶಾಲೆಗಳನ್ನು ಆಪೋಷನ ತೆಗೆದುಕೊಳ್ಳುವಷ್ಟು ಬೆಳೆದು ನಿಂತಿವೆ. ಸರಕಾರಿ ವ್ಯವಸ್ಥೆಯ ಮಿತಿಮೀರಿದ ಭ್ರಷ್ಟಾಚಾರ, ಅರಾಜಕ ಆಡಳಿತ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ‘ಸರಕಾರಿ ಶಾಲಾ ಶಿಕ್ಷಣ’ ದಿನೇ ದಿನೇ ಮಹತ್ವ ಕಳೆದುಕೊಳ್ಳುತ್ತಿದೆ.ಸರಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯ ವೈಫಲ್ಯದ ಫಲವಾಗಿ ಖಾಸಗಿ ಶಾಲಾ ಶಿಕ್ಷಣ ವ್ಯವಸ್ಥೆ ಬೃಹದಾಕಾರದಲ್ಲಿ ಬೆಳೆದು ನಿಂತಿದೆ. ಅಷ್ಟು ಮಾತ್ರವಲ್ಲ ಜನಪ್ರತಿನಿಧಿಗಳು, ವ್ಯಾಪಾರಿಗಳು ಖಾಸಗಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬೃಹತ್ ವ್ಯಾಪಾರಿ ಕೇಂದ್ರವನ್ನಾಗಿ ರೂಪಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಸರಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶದ ಎಲ್ಲ ಜಾತಿಯ ಬಡವರು, ನಗರ ಪ್ರದೇಶದಲ್ಲಿ ಬಡವರು, ಕೆಳ ಮಧ್ಯಮವರ್ಗದವರು ಮಾತ್ರ ಆಶ್ರಯಿಸಿದ್ದಾರೆ. ಸರಕಾರಿ ಶಾಲೆಗಳು ಮಕ್ಕಳ ಹಾಜರಾತಿ ಪ್ರಮಾಣ ಕುಸಿಯುತ್ತಿರುವ ಕಾರಣಕ್ಕೆ ಮುಚ್ಚಲ್ಪಡುತ್ತಿವೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಕುಸಿಯಲು ಆಂಗ್ಲ ಮಾಧ್ಯಮದ ಭೂತ ಕಾರಣವೆಂದು ಭಾವಿಸಿ ಕರ್ನಾಟಕ ಸರಕಾರ ಪ್ರಾಥಮಿಕ ಹಂತದಿಂದಲೇ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದ ಶಾಲೆಗಳನ್ನು ಆರಂಭಿಸಿದೆ. ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪೂರ್ವ ಪ್ರಾಥಮಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಾಥಮಿಕ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಕರ್ನಾಟಕ ಸರಕಾರ ಹೆಚ್ಚು ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿದೆ. ನವೋದಯ ಶಾಲೆಗಳ ಮಾದರಿಯ ವಸತಿ ಶಾಲೆಗಳನ್ನು ನಡೆಸುತ್ತಿದೆ. ಇಷ್ಟಾದರೂ ಖಾಸಗಿ ಶಾಲಾ ಶಿಕ್ಷಣ ವ್ಯವಸ್ಥೆಯು ಮಕ್ಕಳನ್ನು, ಪಾಲಕರನ್ನು ಆಕರ್ಷಣೆ ಮಾಡುತ್ತಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಮಕ್ಕಳು ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಮಠ ಮಾನ್ಯಗಳು ಮತ್ತು ಶಿಕ್ಷಣ ವ್ಯಾಪಾರಿಗಳು ನಡೆಸುವ ಹೈಟೆಕ್ ಆಂಗ್ಲ ಮಾಧ್ಯಮದ ಶಾಲೆಗಳನ್ನು ಹೊರತು ಪಡಿಸಿದರೆ ಖಾಸಗಿಯವರ ಹಿಡಿತದಲ್ಲಿ ಇರುವ ಬಹುಪಾಲು ಆಂಗ್ಲ ಮಾಧ್ಯಮದ ಶಾಲೆಗಳು ಸರಕಾರಿ ಶಾಲಾ ವ್ಯವಸ್ಥೆ ಕಲ್ಪಿಸಿದಷ್ಟು ಮೂಲಭೂತ ಸೌಕರ್ಯ ಹೊಂದಿಲ್ಲ. ಸರಕಾರಿ ಶಾಲೆಗಳಲ್ಲಿ ಹೆಚ್ಚು ಪ್ರತಿಭೆಯುಳ್ಳ ಶಿಕ್ಷಕರನ್ನೇ ಆಯ್ಕೆ ಮಾಡಿರುತ್ತಾರೆ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಡಿಮೆ ಪ್ರತಿಭೆ ಇರುವ, ಕಡಿಮೆ ಸಂಬಳಕ್ಕೆ ದುಡಿಯುವ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಆದರೂ ಅವರ ಶಿಕ್ಷಣ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

ಆಂಗ್ಲ ಮಾಧ್ಯಮದ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ಗಳು ಅದರಲ್ಲೂ ವಸತಿ ಶಾಲೆಗಳು ಅಭೂತಪೂರ್ವ ಮೂಲಭೂತ ಸೌಕರ್ಯ ಒದಗಿಸುತ್ತವೆ. ಹೆಚ್ಚು ಸಂಬಳದ ಶಿಕ್ಷಕರನ್ನು ನೇಮಿಸಿಕೊಂಡಿರುತ್ತಾರೆ. ಸಹಜವಾಗಿ ದುಡ್ಡುಳ್ಳವರು ತಮ್ಮ ಮಕ್ಕಳನ್ನು ಅಂಥ ಶಾಲೆಗಳಲ್ಲಿ ಸೇರಿಸುತ್ತಾರೆ. ಹೈಟೆಕ್ ಆಂಗ್ಲ ಮಾಧ್ಯಮದ ಶಾಲೆಗಳು ಮಧ್ಯಮ ವರ್ಗದ ಜನರೂ ಭರಿಸಲಾಗದಷ್ಟು ದುಬಾರಿ ಶುಲ್ಕ ವಿಧಿಸುತ್ತವೆ.

ಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳು, ಜನಪರವಾಗಿ ಆಲೋಚಿಸುವವರು ಸಮಾನ ಶಿಕ್ಷಣ ವ್ಯವಸ್ಥೆಯ ಕನಸು ಬಿತ್ತುತ್ತಲೇ ಇದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿನ ಅಸಮಾನತೆ ಹೆಚ್ಚುತ್ತಲೇ ಇದೆ. ಬಡ ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಕೂತು ಶಿಕ್ಷಣ ಪಡೆಯುವ ಕಾಲ ಗತ ಕಾಲದ ಹಳವಂಡವಾಗಿದೆ.

ಸರಕಾರಿ ಶಾಲೆಗಳು ಹೆಚ್ಚು ಮಕ್ಕಳನ್ನು ಆಕರ್ಷಿಸಲು ಮಧ್ಯಾಹ್ನದ ಊಟ, ಉಚಿತ ಸಮವಸ್ತ್ರ, ಪುಸ್ತಕ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತ ಸೈಕಲ್ ನೀಡುವ ಯೋಜನೆ ಜಾರಿಗೆ ತರಲಾಯಿತು. ಅತಿ ಕಡಿಮೆ ಶುಲ್ಕದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಬಹುದಾಗಿದೆ. ಇಷ್ಟೆಲ್ಲ ಸವಲತ್ತುಗಳಿದ್ದರೂ ಪೋಷಕರ ಮನವೊಲಿಸುವಲ್ಲಿ ಮತ್ತು ಮಕ್ಕಳನ್ನು ಆಕರ್ಷಣೆ ಮಾಡುವಲ್ಲಿ ಸರಕಾರಿ ಶಾಲೆಗಳು ಸಂಪೂರ್ಣ ವಿಫಲವಾಗಿವೆ. ಸರಕಾರಿ ಶಾಲಾ ವ್ಯವಸ್ಥೆಯ ವೈಫಲ್ಯವೇ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಣ ವ್ಯಾಪಾರವನ್ನು ಸುಗಮಗೊಳಿಸಿದೆ.

ಹಲವು ಕಡೆ ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡಿ ಅತ್ಯುತ್ತಮ ಫಲಿತಾಂಶ ತಂದರೂ ಹೆಚ್ಚು ಪ್ರಚಾರ ಮಾಡಿಕೊಳ್ಳುವುದಿಲ್ಲ. ಆದರೆ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳು ಪ್ರಚಾರ ಮಾಡಿಕೊಳ್ಳುವ ಮೂಲಕ ಪಾಲಕರಲ್ಲಿ ಭ್ರಮೆಯನ್ನು ಬಿತ್ತುತ್ತವೆ. ಮುಖ್ಯವಾಗಿ ಪಾಲಕರಲ್ಲಿ ಆಂಗ್ಲ ಮಾಧ್ಯಮದ ಬಗ್ಗೆ ಅಪಾರ ಪ್ರಮಾಣದ ಭ್ರಮೆಗಳನ್ನು ಬಿತ್ತಿ ಖಾಸಗಿ ಶಾಲೆಗಳು ಲಾಭ ಮಾಡಿಕೊಳ್ಳುತ್ತಿವೆ. ತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಒಂದು ಉದ್ಯೋಗ ಪಡೆದುಕೊಳ್ಳಲು ಸಮರ್ಥರಾಗುತ್ತಾರೆ ಎಂಬ ಭ್ರಮೆ ಬಲವಾಗಿ ಬೆರೂರಿದೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ಭವಿಷ್ಯ ಇಲ್ಲ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿ ಆವರಿಸಿದೆ. ಇಂಗ್ಲಿಷ್ ಭಾಷೆ ಮಾತ್ರವಲ್ಲ ಜಗತ್ತಿನ ಯಾವುದೇ ಭಾಷೆಯನ್ನು ಆರೇಳು ತಿಂಗಳಲ್ಲಿ ಕಲಿತು ವ್ಯವಹರಿಸಬಹುದೆಂಬ ವೈಜ್ಞಾನಿಕ ಸತ್ಯವನ್ನೇ ಮರೆಮಾಚಲಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿ ಇಂಜಿನಿಯರ್-ಡಾಕ್ಟರ್ ಆದವನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಬಂದವನಷ್ಟೇ ವ್ಯವಹಾರಕ್ಕೆ ಇಂಗ್ಲಿಷ್ ಬಳಸುತ್ತಾನೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವನು ವಿಷಯಗಳ ಆಳ ಅಗಲ ಸ್ಪರ್ಶಿಸಲು ಸಾಧ್ಯವಾಗಿರುವುದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದವನು ವಿಷಯದ ಆಳಕ್ಕೆ ಇಳಿದು ಅರಿವು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಸಾಬೀತಾದ ಸತ್ಯ. ಹಿರಿಯ ಸಮಾಜವಾದಿ ನಾಯಕ ಡಾ. ರಾಮಮನೋಹರ್ ಲೋಹಿಯಾ ಅವರು ಪಿಎಚ್.ಡಿ. ಅಧ್ಯಯನವನ್ನು ಕೈಗೊಳ್ಳಲು ಜರ್ಮನಿಗೆ ಹೋಗುತ್ತಾರೆ. ಅವರ ಮಾರ್ಗದರ್ಶಕರು ಜರ್ಮನ್ ಭಾಷೆಯಲ್ಲಿ ಪಿಎಚ್. ಡಿ. ಮಹಾಪ್ರಬಂಧ ಬರೆಯುವುದಾದರೆ ಗೈಡ್ ಮಾಡುವುದಾಗಿ ಷರತ್ತು ವಿಧಿಸುತ್ತಾರೆ. ಲೋಹಿಯಾ ಅವರು ಅತ್ಯಂತ ಕಠಿಣ ಭಾಷೆಯಾದ ಜರ್ಮನಿಯನ್ನು ಕೇವಲ ಮೂರು ತಿಂಗಳಲ್ಲಿ ಕಲಿತು ಆ ಭಾಷೆಯಲ್ಲೇ ಪಿಎಚ್. ಡಿ. ಮಹಾಪ್ರಬಂಧ ಬರೆದು ಪದವಿಗೆ ಭಾಜನರಾಗುತ್ತಾರೆ. ಆರೇಳು ತಿಂಗಳ ಕಾಲ ಒಂದು ಭಾಷೆಯನ್ನು ಮನಸ್ಸಿಟ್ಟು ಕಲಿತರೆ ಆ ಭಾಷೆಯಲ್ಲಿ ವ್ಯವಹರಿಸುವಷ್ಟು ಪರಿಣಿತಿ ಸಾಧಿಸಬಹುದು.

ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿರುವ ಪಾಲಕರು ತಮ್ಮ ದುಡಿಮೆಯ ಹೆಚ್ಚು ಪಾಲನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದಾರೆ.

ಆಟದ ಮೈದಾನ, ವ್ಯವಸ್ಥಿತ ಗ್ರಂಥಾಲಯ ಮತ್ತು ಹೆಚ್ಚು ಮೆರಿಟ್ ಇರುವ ಶಿಕ್ಷಕರು ಇಲ್ಲದ ಒಂದು ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಎಲ್‌ಕೆಜಿಗೆ ಪ್ರವೇಶ ಪಡೆಯಲು ಏನಿಲ್ಲವೆಂದರೂ ಐವತ್ತು ಸಾವಿರ ರೂ. ವಂತಿಗೆ ನೀಡಬೇಕು. ಟ್ಯೂಷನ್ ಫೀ, ಸಮವಸ್ತ್ರ, ಪುಸ್ತಕ ಖರೀದಿ ಎಂದು ಮತ್ತೆ ಐವತ್ತು ಸಾವಿರ ರೂ. ಪೀಕುತ್ತಾರೆ. ಅಷ್ಟು ಮಾತ್ರವಲ್ಲ ತಿಂಗಳ ಫೀ, ಬಸ್ ವ್ಯವಸ್ಥೆಗಾಗಿ ಪ್ರತೀ ತಿಂಗಳು ಒಬ್ಬ ವಿದ್ಯಾರ್ಥಿಯಿಂದ ಕನಿಷ್ಠ ಐದಾರು ಸಾವಿರ ಸುಲಿಯುತ್ತಾರೆ. ಕಡಿಮೆ ಸಂಬಳದ ವ್ಯಕ್ತಿಗಳು ಆಂಗ್ಲ ಮಾಧ್ಯಮದ ವ್ಯಾಮೋಹದಲ್ಲಿ ಖಾಸಗಿ ಆಂಗ್ಲ ಶಾಲೆಗಳ ಬೇಡಿಕೆ ಪೂರೈಸಲು ದುಡಿಯುತ್ತಲೇ ಇರುತ್ತಾರೆ. ಅವುಗಳನ್ನು ಶಾಲೆಗಳು ಎನ್ನುವುದಕ್ಕಿಂತ ಕೋಚಿಂಗ್ ಕೇಂದ್ರಗಳು ಎನ್ನುವುದು ಸೂಕ್ತ. ಹಾಗೆ ನೋಡಿದರೆ ಖಾಸಗಿ ಶಾಲಾ ವ್ಯವಸ್ಥೆಯೇ ಟ್ಯೂಷನ್ ಮಾಫಿಯಾ ಆಗಿ ಬಿಟ್ಟಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮಾಯವಾಗಿ ಹೆಚ್ಚು ಅಂಕ ಗಳಿಸುವ ಟ್ರಿಕ್ ಹೇಳಿಕೊಡುವ ಕೋಚಿಂಗ್ ಸೆಂಟರ್‌ಗಳಾಗಿವೆ. ಇದು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಆಂಗ್ಲ ಮಾಧ್ಯಮ ಶಾಲೆಗಳ ಕತೆ. ಆಂಗ್ಲ ಮಾಧ್ಯಮ ಎಂಬ ಭ್ರಮೆ ತಣಿಸಲು ಮಾತ್ರ ಈ ಶಾಲೆಗಳು ಕಾರ್ಯ ನಿರ್ವಹಿಸುತ್ತವೆ. ಉಳಿದಂತೆ ಸುಲಿಗೆಯೇ ಅವುಗಳ ಮುಖ್ಯ ಕಾಳಜಿ. ಅಷ್ಟೋ ಇಷ್ಟೋ ಮೂಲಭೂತ ಸೌಕರ್ಯ ಹೊಂದಿರುವ, ಕಾನ್ವೆಂಟ್ ಪರಿಸರದ, ಪ್ರತೀ ವರ್ಷ ಉತ್ತಮ ಫಲಿತಾಂಶಕ್ಕೆ ಹೆಸರಾಗಿರುವ ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗಳು ಪಾಲಕರ ಭಾವನೆಗಳ ಜೊತೆಗೆ ಆಟವಾಡುತ್ತವೆ. ಆ ಶಾಲೆಯಲ್ಲಿ ಪ್ರವೇಶ ಪಡೆಯಬೇಕೆಂದರೆ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಂಪಾದಿಸಿಕೊಳ್ಳಬೇಕು. ಅರ್ಜಿ ಸಲ್ಲಿಸಿದ ಮೇಲೆ ಅವರು ಕರೆದಾಗ ಪಾಲಕರೇ ಸಂದರ್ಶನಕ್ಕೆ ಹೋಗಬೇಕು. ಮೆರಿಟ್ ಆಯ್ಕೆ ಎಂಬ ಭ್ರಮೆ ಹುಟ್ಟಿಸಿ ಹೆಚ್ಚು ಸುಲಿಗೆ ಮಾಡುವ ತಂತ್ರವಿದು. ನಮ್ಮಲ್ಲಿ ಶಿಫಾರಸು ನಡೆಯುವುದಿಲ್ಲ ಎಂದು ಪ್ರಚಾರ ಬೇರೆ ಮಾಡಿಕೊಂಡಿರುತ್ತಾರೆ. ಮಂತ್ರಿ, ಶಾಸಕ ಯಾರ ಮೊಬೈಲ್ ಕರೆಯನ್ನು ಸ್ವೀಕರಿಸುವುದಿಲ್ಲ. ಅಧಿಕಾರಿಗಳಿಗೂ ಸೊಪ್ಪು ಹಾಕುವುದಿಲ್ಲ ಎಂದು ಬಿಲ್ಡಪ್ ಕೊಟ್ಟುಕೊಂಡಿರುತ್ತಾರೆ. ಆದರೆ ಹಣದ ಜೊತೆಗೆ ಹೋದರೆ ಒಬ್ಬ ಪೊಲೀಸ್ ಇನ್‌ಸ್ಪೆಕ್ಟರ್ ಶಿಫಾರಸು ಕೂಡಾ ಅಲ್ಲಿ ದೊಡ್ಡದೇ. ಸಮವಸ್ತ್ರ, ಬೂಟು, ಪೆನ್ ಪುಸ್ತಕ, ನೋಟ್ ಬುಕ್ ಸೇರಿ ಸಕಲ ಸಾಮಗ್ರಿಗಳನ್ನು ಅಲ್ಲಿಯೇ ಖರೀದಿಸಬೇಕು. ಮೊದಲ ಬಾರಿಗೆ ದೊಡ್ಡ ಮೊತ್ತದ ವಂತಿಗೆ ವಸೂಲಿ ಮಾಡಿರುತ್ತಾರೆ. ಮಧ್ಯಮ ವರ್ಗದ ಸಂಬಳದಾರರು ತಮ್ಮ ಮಕ್ಕಳನ್ನು ಅಲ್ಲಿ ಓದಿಸಲು ಸುಸ್ತಾಗಿ ಹೋಗುತ್ತಾರೆ. ಎಪ್ರಿಲ್, ಮೇ, ಜೂನ್-ಮೂರು ತಿಂಗಳು ಪಾಲಕರು ತುದಿಗಾಲ ಮೇಲೆ ನಿಂತು ಪ್ರವೇಶ ಪಡೆದುಕೊಳ್ಳಬೇಕು. ಕೊನೆಗೆ ಪ್ರವೇಶ ಸಿಕ್ಕಿದ್ದೇ ನಿಮ್ಮ ಪುಣ್ಯ ಎಂಬಂತೆ ಬಡಾಯಿ ಕೊಚ್ಚಿಕೊಳ್ಳುವ ಈ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳು ಅಬಾಧಿತವಾಗಿ ಶಿಕ್ಷಣ ವ್ಯಾಪಾರದಲ್ಲಿ ತೊಡಗಿಕೊಂಡಿವೆ.

ಮಠ ಮಾನ್ಯಗಳು ನಡೆಸುವ ಹೈಟೆಕ್ ವಸತಿ ಶಾಲೆಗಳ ವಸೂಲಿ ಪರಿ ಇದಕ್ಕಿಂತಲೂ ಭಿನ್ನ. ಸಾಮಾನ್ಯವಾಗಿ ಆ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅಕ್ರಮ ಸಂಪಾದನೆಯಲ್ಲಿ ತೊಡಗಿರುವ ಮಂದಿಯೇ ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಅಂಥ ಸಂಸ್ಥೆಗಳ ಸಾರಥಿ ಪ್ರಭಾವಿ ಸ್ವಾಮೀಜಿ ಆಗಿರುತ್ತಾರೆ. ವ್ಯವಹಾರ ಜ್ಞಾನ ಬಲ್ಲ ಒಬ್ಬ ಪ್ರಾಂಶುಪಾಲನಿಂದ ಪ್ರತೀ ವರ್ಷ ಕೋಟಿ ಕೋಟಿ ರೂ. ವ್ಯವಹಾರ ನಡೆಸುತ್ತಾರೆ. ತಮ್ಮದೇ ಜಾತಿಯ ಬಡವರ ಬಗ್ಗೆಯೂ ಕರುಣೆ ತೋರುವುದಿಲ್ಲ. ಯಾವ ಪ್ರಭಾವಕ್ಕೂ ಕೇರ್ ಮಾಡುವುದಿಲ್ಲ. ಯಾರಾದರೂ ಶ್ರೀಮಂತ ಪಾಲಕರು ವಂತಿಗೆಯಲ್ಲಿ ರಿಯಾಯಿತಿ ಕೇಳಿದರೆ ಅಪರಾಧಿ ಪ್ರಜ್ಞೆ ಮೂಡಿಸುತ್ತಾರೆ. ‘‘ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಖರ್ಚು ಮಾಡದ ನೀವು ತಂದೆ ತಾಯಿಯಾಗಲು ಯೋಗ್ಯರಲ್ಲ’’ ಎಂಬ ಭಾವನೆ ಮೂಡಿಸುತ್ತಾರೆ. ಒಟ್ಟಿನಲ್ಲಿ ಭರ್ಜರಿ ಶಿಕ್ಷಣ ವ್ಯಾಪಾರ ನಡೆಸುತ್ತಾರೆ. ಆರ್‌ಟಿಇ ಕಾಯ್ದೆಯನ್ನೇ ದುರ್ಬಲಗೊಳಿಸುವ ಭೂಪರಿವರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಖಾಸಗಿ ಶಿಕ್ಷಣ ಸಂಸ್ಥೆಯವರ ಗುಲಾಮರಂತೆ ನಡೆದುಕೊಳ್ಳುತ್ತಾರೆ. ಜಾತಿಬಲ, ರಾಜಕೀಯ ಬಲ ಹೊಂದಿರುವ ಈ ಶಿಕ್ಷಣ ವ್ಯಾಪಾರಿಗಳು ಹಣಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮ ಶಾಲೆಗಳ ಫಲಿತಾಂಶ ಹೆಚ್ಚು ಬರುವಂತೆ ನಿಗಾ ವಹಿಸುತ್ತಾರೆ. ಅಗತ್ಯ ಬಿದ್ದರೆ ಫಲಿತಾಂಶವನ್ನೇ ತಮಗೆ ಬೇಕಾದಂತೆ ತರಿಸಿಕೊಳ್ಳುತ್ತಾರೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಜ್ಞಾನ, ನೈತಿಕತೆ, ಮಾನವೀಯತೆಯಂಥ ಮೌಲ್ಯಗಳಿಗೆ ಜಾಗವೇ ಇರುವುದಿಲ್ಲ. ನುಗ್ಗು, ಮುನ್ನುಗ್ಗು ಎಂಬುದಷ್ಟೇ ಅವರ ಮಂತ್ರವಾಗಿರುತ್ತದೆ. ಅವರು ಶಿಕ್ಷಕರ ಬದಲಿಗೆ ಟ್ಯೂಟರ್‌ಗಳನ್ನು ನೇಮಿಸಿಕೊಂಡಿರುತ್ತಾರೆ. ಹಾಗೆ ನೋಡಿದರೆ ಧಾರ್ಮಿಕ ಮುಖವಾಡ ಧರಿಸಿರುವ ಈ ಶಿಕ್ಷಣ ಸಂಸ್ಥೆಗಳೇ ಆಂಗ್ಲ ಮಾಧ್ಯಮದ ಶಿಕ್ಷಣದ ಭ್ರಮೆಯನ್ನು ಸಮಾಜದಲ್ಲಿ ಸ್ಥಾಯಿಯಾಗಿ ನೆಲೆಸುವಂತೆ ಮಾಡಿದ್ದು.

ಧಾರ್ಮಿಕ ಮುಖವಾಡದ ಮಠ ಮಾನ್ಯಗಳ ಶಿಕ್ಷಣ ಸಂಸ್ಥೆಗಳು ಎಲ್‌ಕೆಜಿಯಿಂದ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣದವರೆಗೆ ವ್ಯಾಪಾರ ನಡೆಸುತ್ತವೆ. ಡೀಮ್ಡ್ ವಿಶ್ವವಿದ್ಯಾನಿಲಯದ ಮಾನ್ಯತೆ ಕೂಡಾ ಪಡೆದುಕೊಂಡಿರುತ್ತವೆ. ಒಬ್ಬ ವಿದ್ಯಾರ್ಥಿ ಇವರಲ್ಲಿ ಎಲ್‌ಕೆಜಿಗೆ ಸೇರಿದರೆ ಸಂಪೂರ್ಣ ಶಿಕ್ಷಣ ಪೂರೈಸಿಯೇ ಹೊರ ಹೋಗಬೇಕು. ಅಂತಹ ವ್ಯವಸ್ಥೆ ನಿರ್ಮಾಣ ಮಾಡಿಕೊಂಡಿವೆ. ಈ ಸಂಸ್ಥೆಗಳವರು ಉನ್ನತ ಶಿಕ್ಷಣದಲ್ಲಿ ಸಂಪಾದಿಸಿದಷ್ಟೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ವ್ಯಾಪಾರದಲ್ಲಿ ದುಡಿಯುತ್ತಾರೆ. ಚಾರಿಟಿ ಎಂಬ ಪದವೇ ಇವರ ಪದಕೋಶದಲ್ಲಿ ಇರುವುದಿಲ್ಲ.

ಧಾರ್ಮಿಕ ಮುಖವಾಡ ಧರಿಸಿರುವ ಮಠ ಮಾನ್ಯಗಳ ಶಿಕ್ಷಣದ ವ್ಯಾಪಾರದ ಪರಿ ಒಂದು ಬಗೆಯಾದರೆ, ರಾಜಕಾರಣಿಗಳು ನಡೆಸುವ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಗಳು ಅವರ ಪಕ್ಷದ ಕಾರ್ಯಕರ್ತರಿಗೂ ನಿಲುಕುವುದಿಲ್ಲ. ನ್ಯಾಷನಲ್ ಪಬ್ಲಿಕ್ ಸ್ಕೂಲ್, ಡೆಲ್ಲಿ ಪಬ್ಲಿಕ್ ಸ್ಕೂಲ್ ಬ್ರಾಂಡ್ ಮತ್ತು ಕಲಿಕಾ ಮಾದರಿ ಅನುಸರಿಸುವ ಈ ಖಾಸಗಿ ಶಾಲೆಗಳು ಕರ್ನಾಟಕದ ಪಠ್ಯ ಕೂಡಾ ಅಳವಡಿಸಿಕೊಳ್ಳುವುದಿಲ್ಲ. ಕರ್ನಾಟಕದ ಶಾಲಾ ಶಿಕ್ಷಣದ ಭಾಗವಾಗಿರುವುದಿಲ್ಲ. ಸಿಬಿಎಸ್‌ಇ, ಐಸಿಎಸ್‌ಇ ಪಠ್ಯ ಕ್ರಮ ಮತ್ತು ಕಲಿಕಾ ಮಾದರಿ ಅಳವಡಿಸಿಕೊಳ್ಳುವ ಈ ಹೈಟೆಕ್ ದುಬಾರಿ ಶಾಲೆಗಳು ಕನ್ನಡಕ್ಕೆ ಕನಿಷ್ಠ ಕಿಮ್ಮತ್ತು ಕೊಡುವುದಿಲ್ಲ. ವಸತಿ ಮತ್ತು ವಸತಿ ರಹಿತ ಶಾಲೆಗಳು ಹಣಕ್ಕಾಗಿ ಶಿಕ್ಷಣವನ್ನು ಮಾರಾಟ ಮಾಡುತ್ತವೆ. ಇಂತಹ ಶಾಲೆಗಳ ಒಡೆತನವನ್ನು ಎಲ್ಲ ಪಕ್ಷದ ರಾಜಕಾರಣಿಗಳು ಹೊಂದಿದ್ದಾರೆ. ಕಪ್ಪು ಹಣವನ್ನು ಬಿಳಿಯಾಗಿಸುವ ಮತ್ತು ಆದಾಯ ತೆರಿಗೆ ಇಲಾಖೆಯವರನ್ನು ಹಾದಿ ತಪ್ಪಿಸುವ ಈ ಶಾಲೆಗಳು ಕೇವಲ ಶ್ರೀಮಂತರ ಮಕ್ಕಳಿಗೆ ಮೀಸಲು. ಬಟ್ಟೆ, ಪಠ್ಯ ಪುಸ್ತಕ, ಲೇಖನ ಸಾಮಗ್ರಿ, ವಸತಿ ವ್ಯವಸ್ಥೆ, ಬಸ್ ವ್ಯವಸ್ಥೆ ಎಲ್ಲ ಸೇರಿ ಪ್ರತೀ ತಿಂಗಳು ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತವೆ. ಕೋಟ್ಯಧಿಪತಿಗಳ ಮಕ್ಕಳು ಮಾತ್ರ ಈ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಮೇಲ್ನೋಟಕ್ಕೆ ಫೀಸು ಮಾತ್ರ ಪಡೆದುಕೊಳ್ಳುತ್ತೇವೆ ಎಂದು ಹೇಳಿಕೊಳ್ಳುವ ಈ ಶಾಲೆಗಳು ಅತಿ ಹೆಚ್ಚು ವಂತಿಗೆ ನೀಡಿದವರಿಗೆ ಪ್ರವೇಶ ನೀಡುತ್ತವೆ. ಶಿಕ್ಷಣ ಇಲಾಖೆಯ ನಿಯಂತ್ರಣವೇ ಇವರ ಮೇಲೆ ಇರುವುದಿಲ್ಲ. ಎಲ್‌ಕೆಜಿಯಿಂದ ಶುರುವಾಗುವ ಇವರ ಸುಲಿಗೆ ಉನ್ನತ ಶಿಕ್ಷಣ ಪೂರೈಸುವವರೆಗೂ ಮುಂದುವರಿಯುತ್ತದೆ.

ಒಂದು ಕಾಲದಲ್ಲಿ ಸಾಹಿತಿ ಕಲಾವಿದರು ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದರು. ಯಾವಾಗ ನ್ಯಾಯಾಲಯಗಳೇ ಶಿಕ್ಷಣ ಮಾಧ್ಯಮವನ್ನು ಪೋಷಕರ ಆಯ್ಕೆ ಎಂದು ಹೇಳಿದವೋ ಅಂದಿನಿಂದ ಕನ್ನಡ ಕರ್ನಾಟಕದಲ್ಲೇ ಅನಾಥವಾಗಿದೆ. ಕನ್ನಡ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಆರಂಭವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಸರಕಾರಿ ಶಾಲೆಗಳು ಕೊನೆಯ ಆಯ್ಕೆಗಳಾಗಿ ಉಳಿದಿವೆ. ಆದರೆ ಅಲ್ಲೂ ಕನ್ನಡ ಕೊನೆಯ ಆಯ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬ ಬೇಡಿಕೆಗೆ ಹೈಟೆಕ್ ಶಾಲೆಗಳು ಸ್ಪಂದಿಸಿಲ್ಲ. ಕನ್ನಡಕ್ಕೆ ಬೆಲೆ ಕೊಡದವರು ಸಾಮಾಜಿಕ ನ್ಯಾಯ, ಚಾರಿಟಿಯಂಥ ಮೌಲ್ಯಗಳನ್ನು ಗೌರವಿಸುವುದು ಸಾಧ್ಯವಿಲ್ಲದ ಮಾತು. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲಾ ಹಂತದಲ್ಲೇ ಅಸಮಾನ ಶಿಕ್ಷಣ ವ್ಯವಸ್ಥೆ ಇರುವಾಗ ಸಮಾಜದಲ್ಲಿ ಸಮಾನತೆ ನಿರೀಕ್ಷಿಸಲು ಸಾಧ್ಯವೇ. ಈ ಆಂಗ್ಲ ಮಾಧ್ಯಮದ ಖಾಸಗಿ ಶಾಲಾ ಶಿಕ್ಷಣದಿಂದ ಭಾರೀ ಪ್ರಮಾಣದಲ್ಲಿ ವ್ಯಾಪಾರ ನಡೆಸುತ್ತಿರುವವರನ್ನು ನಿಯಂತ್ರಿಸಲು ನಮ್ಮಲ್ಲಿ ಕಾಯ್ದೆ ಕಾನೂನು ಸೋತಿವೆ. ಶಿಕ್ಷಣದ ವ್ಯಾಪಾರ ಮಕ್ಕಳನ್ನು, ಪೋಷಕರನ್ನು ಮಾತ್ರ ಶೋಷಿಸುತ್ತಿಲ್ಲ ಇಡೀ ಶೈಕ್ಷಣಿಕ ಮೌಲ್ಯಗಳನ್ನು ನಾಶ ಪಡಿಸುತ್ತಿದೆ. ಕನ್ನಡ ಭಾಷೆ ಕರ್ನಾಟಕದಲ್ಲಿಯೇ ಕಡೆಗಣನೆಗೆ ಒಳಗಾಗಿದೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಸಮಾನ ಪಾತಳಿಯಲ್ಲಿ ಪುನರ್ ರೂಪಿಸದಿದ್ದರೆ ಸಂವಿಧಾನದ ಆಶಯಗಳು ಒಟ್ಟು ವ್ಯವಸ್ಥೆಯಲ್ಲೇ ಅಪ್ರಸ್ತುತ ಎನಿಸಿಕೊಳ್ಳುತ್ತವೆ.

share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X