‘ಅಪಾರ್ಟ್‌ಮೆಂಟ್’ಗಳ ಮೋಸದ ಮಾಯಾ ಜಾಲ

ಬೆಂಗಳೂರು ಬೆಳೆಯುತ್ತಿದ್ದರೂ, ಅಪಾರ್ಟ್‌ಮೆಂಟ್ ನಿರ್ಮಾಣ ಕಂಪೆನಿಗಳನ್ನು ನಿಯಂತ್ರಿಸುವ ಗ್ರಾಹಕರ ದೂರು ದುಮ್ಮಾನ ಆಲಿಸುವ ವ್ಯವಸ್ಥೆ ಕಲ್ಪಿಸಿಲ್ಲ. ಸರಕಾರ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವ ಕಂಪೆನಿಗಳ ಮೇಲೆ ನಿಗಾ ವಹಿಸದಿದ್ದರೆ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಮಳೆಗಾಲದಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳು ಮುಳುಗಡೆಯಾಗುವ ದೃಶ್ಯ ನೋಡಿದರೆ ಸಂಕಟವಾಗುತ್ತದೆ. ಕೋಟಿ ಕೋಟಿ ಹಣ ಸುರಿದು ಅಂಥ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರ ಮನಸ್ಥಿತಿ ಹೇಗಿದ್ದಿರಬೇಕು?
ಇಂದು ರಿಯಲ್ ಎಸ್ಟೇಟ್ ಉದ್ಯಮವು ಸರಕಾರದ ನಿಯಂತ್ರಣ ಮೀರಿ ಕಟ್ಟಡ ನಿರ್ಮಾಣ ಕಂಪೆನಿಗಳ ಮಾಲಕರು ಮತ್ತು ದಲ್ಲಾಳಿಗಳ ಮರ್ಜಿಯಂತೆ ನಡೆಯುತ್ತಿದೆ. ಲಾಭದ ಪ್ರಮಾಣ ನಿಗದಿಗೆ ಒಂದು ವೈಜ್ಞಾನಿಕ ಮಾನದಂಡ ನಿಗದಿಯಾಗಿಲ್ಲ. ಹಾಗಾಗಿಯೇ ಇಂದು, ದೊಡ್ಡ ಊರು, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಕೃಷಿ ಜಮೀನು ಕೃಷಿಯೇತರ ಎಂದು ಪರಿವರ್ತಿಸಿ ಬಡಾವಣೆಗಳನ್ನು ನಿರ್ಮಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಡೆ ರಿಯಲ್ ಎಸ್ಟೇಟ್ ಮಾಫಿಯಾ ತನ್ನ ಕಬಂಧ ಬಾಹುಗಳನ್ನು ಚಾಚಿ ಅಕ್ರಮಗಳ ಸಂತೆಯಾಗಿದೆ. ನ್ಯಾಯಯುತ ಬೆಲೆಗೆ ಜಮೀನು ಖರೀದಿಸಿ, ನಿಯಮ ಬದ್ಧವಾಗಿ ಬಡಾವಣೆ ನಿರ್ಮಿಸಿ ಒಂದಷ್ಟು ಲಾಭ ಮಾಡಿಕೊಂಡರೆ ಯಾರ ಆಕ್ಷೇಪಣೆಯೂ ಇರುವುದಿಲ್ಲ. ಭಾರತ ದೇಶದಲ್ಲಿನ ವಸತಿ ಸಮಸ್ಯೆ ಪರಿಹರಿಸಲು ರಿಯಲ್ ಎಸ್ಟೇಟ್ ಉದ್ಯಮ ನೆರವಿಗೆ ನಿಂತಂತಾಗುತ್ತದೆ. ಎಷ್ಟೋ ಜನ ಕೃಷಿ ಜಮೀನನ್ನು ಕೃಷಿಯೇತರ ಬಳಕೆಗೆ ಭೂ ಪರಿವರ್ತನೆ ಮಾಡಿಸಿಕೊಳ್ಳದೆ ಬಡಾವಣೆ ನಿರ್ಮಿಸಿ ಕರ್ಮಕಾಂಡ ಮಾಡುತ್ತಾರೆ. ಒಂದು ನಿವೇಶನ ಇಬ್ಬರಿಗಿಂತ ಹೆಚ್ಚು ಜನರಿಗೆ ಮಾರಾಟ ಮಾಡಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡುತ್ತಾರೆ. ಇನ್ನೂ ಕೆಲವರು ಕೃಷಿ ಜಮೀನನ್ನು ಕೃಷಿಯೇತರ ಎಂದು ಭೂ ಪರಿವರ್ತನೆ ಮಾಡಿಯೇ ಬಡಾವಣೆ ನಿರ್ಮಾಣ ಮಾಡಿರುತ್ತಾರೆ. ಯೋಜನಾ ಪ್ರಾಧಿಕಾರದಿಂದ ನಕ್ಷೆಯನ್ನು ಮಂಜೂರು ಮಾಡಿಸಿಕೊಂಡಿರುತ್ತಾರೆ. ಆದರೆ ಬಡಾವಣೆಯನ್ನು ಯೋಜನಾ ಬದ್ಧವಾಗಿ ನಿರ್ಮಾಣ ಮಾಡಿರುವುದಿಲ್ಲ. ಸಮರ್ಪಕ ಚರಂಡಿ ನಿರ್ಮಿಸಿರುವುದಿಲ್ಲ. ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಿರುವುದಿಲ್ಲ. ನಿವೇಶನ ಮಾರಾಟ ಮಾಡುವಾಗ ಎಲ್ಲ ಇದೆ ಎಂದು ಭ್ರಮೆ ಬಿತ್ತಿ, ಲಾಭ ಮಾಡಿಕೊಂಡ ಮೇಲೆ ತಿರುಗಿಯೂ ನೋಡುವುದಿಲ್ಲ. ಭೂ ವ್ಯಾಜ್ಯ ಇರುವ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ, ನಿವೇಶನ ಮಾರಾಟ ಮಾಡಿ ಪರಾರಿಯಾಗುತ್ತಾರೆ. ನಿವೇಶನ ಖರೀದಿಸಿದವರು ಕೋರ್ಟ್‌ಗೆ ಅಲೆದಾಡಬೇಕಾಗುತ್ತದೆ. ಖಾಸಗಿ ಬಡಾವಣೆಗಳ ವ್ಯವಹಾರ ಒತ್ತಟ್ಟಿಗಿರಲಿ, ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ಮಿಸಿದ ಬಡಾವಣೆಗಳು ಹಗರಣಗಳ ಕೂಪಗಳಾಗಿವೆ. ಕೆಲವು ಖಾಸಗಿ ಕಂಪೆನಿಗಳು ಅತ್ಯುತ್ತಮ ಬಡಾವಣೆ ನಿರ್ಮಿಸಿರುತ್ತಾರೆ, ಆದರೆ ಅವು ಬಡ ಮಧ್ಯಮ ವರ್ಗದ ಗ್ರಾಹಕರ ಕೈಗೆ ಎಟಕುವುದಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಅತ್ಯುತ್ತಮ ಬಡಾವಣೆಗಳಲ್ಲಿ ಶ್ರೀಮಂತರು ಮತ್ತು ರಾಜಕಾರಣಿಗಳು ಮಾತ್ರ ನಿವೇಶನ ಖರೀದಿ ಮಾಡಿರುತ್ತಾರೆ. ಹೆಚ್ಚೆಂದರೆ ಪ್ರಭಾವಿ ಅಧಿಕಾರಿಗಳು ಅವಕಾಶ ಪಡೆದಿರುತ್ತಾರೆ. ಜನಸಾಮಾನ್ಯರು ಅವಕಾಶ ವಂಚಿತರಾಗಿರುತ್ತಾರೆ. ಜನಸಾಮಾನ್ಯರ ಮಾತು ಬಿಡಿ, ಐಟಿ, ಬಿಟಿ ಉದ್ಯೋಗಿಗಳಿಗೂ ಸರಕಾರ ನಿರ್ಮಿಸಿರುವ ಬಡಾವಣೆಗಳಲ್ಲಿ ಒಂದು ನಿವೇಶನ ಖರೀದಿಸಲು ಸಾಧ್ಯವಾಗುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ನಿವೇಶನ ಖರೀದಿಸಿ, ಮನೆ ಕಟ್ಟುವುದು ದುಬಾರಿ ಮತ್ತು ರಿಸ್ಕಿ ಕೆಲಸವೆನಿಸಿರುವುದರಿಂದ ಬಹುತೇಕ ಜನ ಅಪಾರ್ಟ್‌ಮೆಂಟ್‌ಗಳತ್ತ ಒಲವು ತೋರುತ್ತಿದ್ದಾರೆ. ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಂಗಳೂರಿನಂಥ ನಗರಗಳಲ್ಲೂ ಜನ ಅಪಾರ್ಟ್‌ಮೆಂಟ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಹಳ್ಳಿ, ಪಟ್ಟಣ ಮತ್ತು ನಗರಗಳ ನಿವಾಸಿಗಳು ಇನ್ನೂ ನಿವೇಶನ ಖರೀದಿಸಿ ಮನೆ ಕಟ್ಟಿ ಕೊಳ್ಳುವ ಆಸಕ್ತಿ ಉಳಿಸಿಕೊಂಡಿದ್ದಾರೆ. ಮಹಾನಗರ ಪಾಲಿಕೆ ಇರುವಲ್ಲಿ ನಿವೇಶನ ಮತ್ತು ಅಪಾರ್ಟ್‌ಮೆಂಟ್ ಖರೀದಿಸುವ ಎರಡೂ ಪ್ರವೃತ್ತಿ ಜಾರಿಯಲ್ಲಿದೆ. ಆದರೆ, ಬೃಹತ್ ಬೆಂಗಳೂರಿನಲ್ಲಿ ಜನ ಅಪಾರ್ಟ್ ಮೆಂಟ್ ಉತ್ತಮ ಎಂಬ ನಿಲುವಿಗೆ ತಲುಪಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದ ಜನ ಬೆಂಗಳೂರಿನಂಥ ಮಹಾನಗರದಲ್ಲಿ ದುಬಾರಿ ಬೆಲೆಯ ನಿವೇಶನ ಖರೀದಿಸಿ ಮನೆ ಕಟ್ಟಿಸುವ ಸ್ಥಿತಿಯಲ್ಲಿ ಇಲ್ಲ.
ಸದ್ಯ ಬೆಂಗಳೂರು ಐಟಿ, ಬಿಟಿ ಉದ್ಯೋಗಿಗಳಿಂದ ಕಿಕ್ಕಿರಿದಿದೆ. ಬೆಂಗಳೂರು ಮಿನಿ ಭಾರತವಾಗಿ ಪರಿವರ್ತಿತಗೊಂಡಿದೆ. ದೇಶದ ಎಲ್ಲಾ ರಾಜ್ಯಗಳ ಜನರು ಬೆಂಗಳೂರಿನಲ್ಲಿ ವಾಸಿಸಲು ಆಸೆ ಪಡುತ್ತಾರೆ. ಬೆಂಗಳೂರು ಹವಾಮಾನ ಮತ್ತು ಸಿಲಿಕಾನ್ ಸಿಟಿ ಎಂಬ ಖ್ಯಾತಿ ಎಲ್ಲರನ್ನು ಆಕರ್ಷಿಸುತ್ತಿದೆ. ಐಟಿ, ಬಿಟಿ ಉದ್ಯೋಗಿಗಳು ಮಾತ್ರವಲ್ಲ, ಹೊರ ರಾಜ್ಯದ ಶ್ರೀಮಂತರು ನಿವೇಶನ ಖರೀದಿಸಿ ಮನೆ ಕಟ್ಟುವುದರತ್ತ ಒಲವು ತೋರುವುದಿಲ್ಲ. ಅದರ ಬದಲಿಗೆ ಎಲ್ಲ ಸವಲತ್ತು ಇರುವ ದುಬಾರಿ ಬೆಲೆಯ ಅಪಾರ್ಟ್‌ಮೆಂಟ್ ಖರೀದಿಸುತ್ತಾರೆ. ಹಾಗಾಗಿಯೇ ಬೆಂಗಳೂರಿನಲ್ಲಿ ಲಕ್ಷದಿಂದ ಕೋಟಿ ಕೋಟಿ ಬೆಲೆ ಬಾಳುವ ಅಪಾರ್ಟ್‌ಮೆಂಟ್‌ಗಳು ಖರೀದಿಗೆ ಲಭ್ಯ ಇವೆ. ನಿವೇಶನ ಖರೀದಿಯಲ್ಲಿನ ಗೊಂದಲ, ಕಳ್ಳ ಕಾಕರ ಭಯ, ಅತ್ಯುತ್ತಮ ಸವಲತ್ತುಗಳ ಕಾರಣಕ್ಕೆ ಬೆಂಗಳೂರಿನ ಬಹುತೇಕ ಮಂದಿ ಅಪಾರ್ಟ್ ಮೆಂಟ್ ಬೆಸ್ಟ್ ಎಂದು ಪರಿಗಣಿಸಿ ನೆಲದ ಆಸೆ ಬಿಟ್ಟು ಆಕಾಶದಲ್ಲಿ ಮನೆ ಮಾಡಿಕೊಳ್ಳುತ್ತಿದ್ದಾರೆ.
ವಿಶೇಷವಾಗಿ ಮಧ್ಯಮ ಮತ್ತು ಮೇಲು ಮಧ್ಯಮವರ್ಗದ ಅನಿವಾರ್ಯತೆಯನ್ನು ಅಪಾರ್ಟ್‌ಮೆಂಟ್ ನಿರ್ಮಾಣ ಕಂಪೆನಿಗಳು ಬಹುದೊಡ್ಡ ಅವಕಾಶವೆಂದು ಸುಲಿಗೆ ಮಾಡುತ್ತಿವೆ. ಅಪಾರ್ಟ್ ಮೆಂಟ್ ನಿರ್ಮಾಣದ ಖರ್ಚು ಹತ್ತು ರೂಪಾಯಿ ಆಗಿದ್ದರೆ, ನೂರು ರೂಪಾಯಿಯನ್ನು ಗ್ರಾಹಕರಿಂದ ಕಿತ್ತು ಕೊಳ್ಳುತ್ತಿವೆ. ಬಣ್ಣ ಬಣ್ಣದ ಮಾತು ಹೇಳಿ ಮರುಳು ಮಾಡುತ್ತಿವೆೆ. ಮಧ್ಯಮ ವರ್ಗದ ಅಪಾರ್ಟ್‌ಮೆಂಟ್ ಖರೀದಿದಾರರ ಹಿತ ಕಾಪಾಡುವ ಯಾವ ಕಾನೂನು ಸರಕಾರ ಮಾಡಿಲ್ಲ. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವೇನೋ ಅಸ್ತಿತ್ವದಲ್ಲಿದೆ. ಆದರೆ ಅದು ಹಲ್ಲು ಕಿತ್ತ ಹಾವಿನಂತಿದೆ. ಶ್ರೀಮಂತ ಅಪಾರ್ಟ್‌ಮೆಂಟ್ ನಿರ್ಮಾಣ ಕಂಪೆನಿಗಳ ಮೇಲೆ ಕ್ರಮ ಜರುಗಿಸುವ ಅಧಿಕಾರವೇ ‘ರೇರಾ’ಗೆ ಇಲ್ಲ. ಇನ್ನೂ ಕೆಲವೊಂದು ಕಟ್ಟಡ ನಿರ್ಮಾಣ ಕಂಪೆನಿಗಳು ರೇರಾ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವುದಿಲ್ಲ. ಅಂಥ ಸಂಸ್ಥೆಗಳ ವ್ಯವಹಾರ ವಹಿವಾಟನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
ಬೆಂಗಳೂರಿನಲ್ಲಿ ಅರ್ಧದಷ್ಟು ಅಪಾರ್ಟ್‌ಮೆಂಟ್‌ಗಳು ಚಿಕ್ಕ ನಿವೇಶನಗಳಲ್ಲಿ ನಿರ್ಮಾಣವಾಗಿರುತ್ತವೆ. ಹಳೆಯ ಮನೆಯನ್ನೇ ಕೆಡವಿ, ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇಂಥ ಅಪಾರ್ಟ್‌ಮೆಂಟ್‌ಗಳಲ್ಲಿ ಯಾವ ಸವಲತ್ತುಗಳು ಇರುವುದಿಲ್ಲ. ಅಷ್ಟೇ ಯಾಕೆ, ಸಕ್ಷಮ ಪ್ರಾಧಿಕಾರದ ನಿಯಮದಂತೆ ಸೆಟ್‌ಬ್ಯಾಕ್ ಬಿಟ್ಟಿರುವುದಿಲ್ಲ. ಒಂದು ನಿವೇಶನದಲ್ಲಿ ಎಂಟೋ ಹತ್ತೋ ಫ್ಲ್ಯಾಟ್ ನಿರ್ಮಾಣ ಮಾಡಿರುತ್ತಾರೆ. ಸೆಕ್ಯೂರಿಟಿ ವ್ಯವಸ್ಥೆ ಇರುವುದಿಲ್ಲ, ಕುಡಿಯುವ ನೀರಿಗೂ ತೊಂದರೆ ಅನುಭವಿಸಬೇಕಾಗುತ್ತದೆ. ಇಂತಹ ಅಪಾರ್ಟ್‌ಮೆಂಟ್‌ಗಳನ್ನು ಜನ ಖರೀದಿಸಲು ಮುಖ್ಯ ಕಾರಣ, ಬೆಂಗಳೂರಿನ ಅತ್ಯುತ್ತಮ ಹಳೆಯ ಬಡಾವಣೆಯಲ್ಲಿ ನಿರ್ಮಾಣವಾಗಿರುತ್ತವೆ. ಬಸ್ಸು, ರೈಲು, ಆಸ್ಪತ್ರೆ, ಶಾಲೆ, ಕಾಲೇಜು ಹತ್ತಿರದಲ್ಲೇ ದೊರೆಯುತ್ತವೆ. ಇಂಥ ಅಪಾರ್ಟ್‌ಮೆಂಟ್‌ಗಳನ್ನು ಜಾಯಿಂಟ್ ವೆಂಚರ್‌ನಲ್ಲಿ ನಿರ್ಮಾಣ ಮಾಡಿ ರುತ್ತಾರೆ. ನಿವೇಶನದ ಮಾಲಕ ಮತ್ತು ಬಿಲ್ಡರ್ ಜಂಟಿಯಾಗಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿ ಅತ್ಯುತ್ತಮ ಬೆಲೆಗೆ ಮಾರಾಟ ಮಾಡಿ ಹೋಗುತ್ತಾರೆ. ಸಮಸ್ಯೆ ಎದುರಿಸುವವರು ಅಲ್ಲಿಯ ನಿವಾಸಿಗಳು. ಕಾನೂನು ಬಾಹಿರವಾಗಿ ನಿರ್ಮಾಣ ಮಾಡಿದ ಇಂಥ ಹಲವಾರು ಅಪಾರ್ಟ್ ಮೆಂಟ್‌ಗಳನ್ನು ಕೆಡವಿದ ನಿದರ್ಶನಗಳಿವೆ. ಹಲವಾರು ಅಪಾರ್ಟ್‌ಮೆಂಟ್‌ಗಳು ಮಳೆಗಾಲದಲ್ಲಿ ಅರ್ಧ ಮುಳುಗಿರುತ್ತವೆ. ಪಾಲಿಕೆ ಅಧಿಕಾರಿಗಳು ಇವರ ಗೋಳಿಗೆ ಕಿವಿಗೊಡುವುದಿಲ್ಲ. ಜನದಟ್ಟಣೆ ಇರುವ ನಗರ ಮಧ್ಯದ ಅಪಾರ್ಟ್‌ಮೆಂಟ್‌ಗಳ ಗೋಳು ಒಂದು ರೀತಿಯಾದರೆ, ನಗರದ ಹೊರ ವಲಯದಲ್ಲಿ ನಿರ್ಮಾಣವಾದ ಅತ್ಯಂತ ದುಬಾರಿ ಬೆಲೆಯ ವಸತಿ ಸಮುಚ್ಚಯಗಳು ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತವೆ. ಮಳೆ ನೀರು ಹರಿದು ಹೋಗಲು ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿರುವುದಿಲ್ಲ.
ಬೆಂಗಳೂರಿನಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೂ ಪೂರ್ವದಲ್ಲೇ ಹೆಸರಾಂತ ಕಂಪೆನಿಗಳು ಅತ್ಯುತ್ತಮ ಸವಲತ್ತು ಉಳ್ಳ ಪ್ರಾಜೆಕ್ಟ್ ಅಂತ ಸಾಕಷ್ಟು ಪ್ರಚಾರ ಮಾಡಿಕೊಳ್ಳುತ್ತವೆ. ಮಾರಾಟ ಪ್ರತಿನಿಧಿಗಳ ಮೂಲಕ ಗ್ರಾಹಕರನ್ನು ವಿವಿಧ ಬಗೆಯಲ್ಲಿ ಸೆಳೆಯಲು ಯತ್ನಿಸುತ್ತವೆ. ಅನೇಕ ಸವಲತ್ತುಗಳು ಇರುವುದಾಗಿ ಬಣ್ಣ ಬಣ್ಣದ ಕನಸು ಬಿತ್ತುತ್ತವೆ. ರೇರಾ ಅಡಿಯಲ್ಲಿ ನೋಂದಣಿಯಾಗಿರುವುದಾಗಿ ನಂಬಿಸುತ್ತವೆ. ನಿಗದಿತ ಸಮಯದಲ್ಲಿ ಅಪಾರ್ಟ್‌ಮೆಂಟ್ ಕಟ್ಟಡ ನಿರ್ಮಾಣವಾಗಿರುವುದಿಲ್ಲ. ಒಂದು ವೇಳೆ ನಿರ್ಮಾಣವಾದರೂ ಅಗತ್ಯದ ಸವಲತ್ತುಗಳು ನೀಡಿರುವುದಿಲ್ಲ. ರೇರಾ ಮೊರೆ ಹೋದರೆ ಅದೂ ಅಸಹಾಯಕತೆ ವ್ಯಕ್ತ ಪಡಿಸುತ್ತದೆ. ಯಾಕೆಂದರೆ, ಅಪಾರ್ಟ್‌ಮೆಂಟ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರು ಅತ್ಯಂತ ಪ್ರಭಾವಿಯಾಗಿರುತ್ತಾರೆ. ಪ್ರಭಾವಿ ರಾಜಕಾರಣಿಗಳೇ ಅವುಗಳ ಪಾಲುದಾರರಾಗಿರುತ್ತಾರೆ.
ಬಹುತೇಕ ನೌಕರದಾರರು, ಐಟಿ, ಬಿಟಿ ಉದ್ಯೋಗಿಗಳು ಇವರ ಗ್ರಾಹಕರಾಗಿರುತ್ತಾರೆ. ಒಂದು ಫ್ಲ್ಯಾಟ್‌ಗೆ ಮಾಲಕನಾಗುವುದು ಇವರ ಜೀವಮಾನದ ಕನಸಾಗಿರುತ್ತದೆ. ಅಪಾರ್ಟ್‌ಮೆಂಟ್ ನಿರ್ಮಾಣದ ಪೂರ್ವದಲ್ಲಿ ಅಥವಾ ನಂತರದಲ್ಲಿ ಫ್ಲ್ಯಾಟ್ ಖರೀದಿಗೆ ಹೋದರೆ, ಎರಡು ಬೆಡ್ ರೂಮಿನ ಬೆಲೆ ಒಂದು ಕೋಟಿಗೂ ಕಡಿಮೆ ಇರುವುದಿಲ್ಲ. ಪೂರ್ವ ಮತ್ತು ಉತ್ತರ ದಿಕ್ಕಿನ ಫ್ಲ್ಯಾಟ್‌ಗಳು ಮತ್ತಷ್ಟು ದುಬಾರಿ. ಮೂರನೇ ಅಂತಸ್ತಿನ ಮೇಲಿನ ಫ್ಲ್ಯಾಟ್ ಬೆಲೆ ಮತ್ತಷ್ಟು ದುಬಾರಿ ಇರುತ್ತದೆ. ನಿರ್ಮಾಣದ ವೆಚ್ಚ ಮತ್ತು ಮಾರಾಟದ ಬೆಲೆಯ ನಡುವೆ ಅಜಗಜಾಂತರ ಇರುತ್ತದೆ. ರೇರಾ ಬೆಲೆ ನಿಗದಿಯಲ್ಲಾಗಲಿ, ಅಪಾರ್ಟ್‌ಮೆಂಟ್‌ಗಳ ಗುಣ ಮಟ್ಟದಲ್ಲಾಗಲಿ ನಿರ್ಣಾಯಕ ಪಾತ್ರ ವಹಿಸುವಂತಿಲ್ಲ. ಹತ್ತು ವರ್ಷಗಳ ಹಿಂದೆ ಅಪಾರ್ಟ್‌ಮೆಂಟ್‌ನಲ್ಲಿ ಸ್ವರ್ಗವೇ ತಂದಿದ್ದೇವೆ ಎಂದು ಹೇಳಿರುತ್ತಾರೆ. ಈಗ ಆ ಅಪಾರ್ಟ್‌ಮೆಂಟ್ ಮುದಿಯಾಗಿ, ಮೆಂಟೈನನ್ಸ್ ಇಲ್ಲದೆ ಚಾರ್ಮ್ ಕಳೆದುಕೊಂಡಿರುತ್ತದೆ.
ಅಪಾರ್ಟ್‌ಮೆಂಟ್ ನಿರ್ಮಾಣಕ್ಕೂ ಮುಂಚೆ ಮಾರಾಟ ಪ್ರತಿನಿಧಿ ಗಳು ಸ್ವಿಮ್ಮಿಂಗ್ ಪೂಲ್, ಆಟದ ಮೈದಾನ, ಕ್ಲಬ್ ಹೌಸ್ ಮತ್ತು ಹತ್ತು ಹಲವಾರು ಸವಲತ್ತು ಇರುವುದಾಗಿ ನಂಬಿಸಿರುತ್ತಾರೆ. ಸಾವಿರಾರು ಜನ ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಸ್ವಿಮ್ಮಿಂಗ್ ಪೂಲ್ ಇರುತ್ತದೆ. ಉಳಿದೆಲ್ಲ ಸವಲತ್ತುಗಳನ್ನು ಎಲ್ಲ ನಿವಾಸಿಗಳು ಬಳಸಲು ಸಾಧ್ಯವಾಗುವುದಿಲ್ಲ. ಒಂದು ಫ್ಲ್ಯಾಟ್‌ಗೆ ಒಂದು ಕೋಟಿ ಬೆಲೆ, ಕಾರ್ ಪಾರ್ಕಿಂಗ್ ಸೇರಿ ಇನ್ನಿತರ ಸವಲತ್ತುಗಳಿಗೆ ಪ್ರತ್ಯೇಕ ಬೆಲೆ. ನೋಂದಣಿ ಶುಲ್ಕ, ಇಂಟೀರಿಯರ್‌ಗೆ ಮತ್ತಷ್ಟು ಹಣ ಖರ್ಚು ಮಾಡಬೇಕು.
ಬೆಂಗಳೂರಿನ ದಶ ದಿಕ್ಕುಗಳಲ್ಲಿ ನೂರಾರು ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಹೆಸರಾಂತ ಅಪಾರ್ಟ್ ಮೆಂಟ್ ನಿರ್ಮಾಣ ಕಂಪೆನಿಗಳು ತನ್ನ ಮಾರಾಟ ಪ್ರತಿನಿಧಿಗಳ ಮೂಲಕ ಪ್ರಚಾರ ಮಾಡುತ್ತಿವೆ. ಗ್ರಾಹಕರಲ್ಲಿ ಬಣ್ಣ ಬಣ್ಣದ ಕನಸು ಬಿತ್ತುತ್ತಿವೆೆ. ಎಲ್ಲ ಸವಲತ್ತು ನೀಡಿರುವುದಾಗಿ ಹೇಳಿಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಹಾಗಿಲ್ಲ. ಸಾವಿರ ಜನವಸತಿ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಸ್ವಿಮ್ಮಿಂಗ್ ಪೂಲ್ ಇರುತ್ತದೆ. ಉಳಿದೆಲ್ಲ ಸವಲತ್ತುಗಳ ಹಣೆ ಬರಹ ಅದೇ ಆಗಿರುತ್ತದೆ.
ಪ್ರೆಸ್ಟೀಜ್, ಶೋಭಾ, ಮಂತ್ರಿ, ಟಾಟಾ ಸೇರಿದಂತೆ ಬೆರಳೆಣಿಕೆಯ ಕೆಲವು ಕಂಪೆನಿಗಳು ತನ್ನ ಶ್ರೀಮಂತ ಗ್ರಾಹಕರಿಗೆ ಅತ್ಯುತ್ತಮ ಸವಲತ್ತು ಉಳ್ಳ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿರುತ್ತವೆ. ಆದರೆ ಅವುಗಳ ಬೆಲೆ ಐದಾರು ಕೋಟಿ ರೂ.ಗೂ ಮಿಕ್ಕಿರುತ್ತದೆ.
ಆದರೆ ಮಧ್ಯಮ ವರ್ಗದವರ ಬಳಕೆಗೆಂದು ನಿರ್ಮಾಣವಾಗುವ ಬಹುತೇಕ ಅಪಾರ್ಟ್‌ಮೆಂಟ್‌ಗಳು ದುಬಾರಿಯಾಗಿರುತ್ತವೆ ಮತ್ತು ಉತ್ತಮ ಗುಣಮಟ್ಟ ಕಾಯ್ದು ಕೊಂಡಿರುವುದಿಲ್ಲ. ನೀರಿನ ವ್ಯವಸ್ಥೆ ಇಲ್ಲದ, ಮಳೆಗಾಲದಲ್ಲಿ ಮುಳುಗುವ ಅಪಾರ್ಟ್‌ಮೆಂಟ್‌ಗಳು ಹೆಚ್ಚಾಗಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ರೇರಾ ಸಂಸ್ಥೆಗಳು ಗ್ರಾಹಕರಿಗೆ ನ್ಯಾಯ ಒದಗಿಸಲು ಗಂಭೀರ ಪ್ರಯತ್ನವೇನೂ ಮಾಡುತ್ತಿಲ್ಲ. ಕೆಲವು ಹೆಸರಾಂತ ಕಂಪೆನಿಗಳು ಮಾರ್ಕೆಟಿಂಗ್ ಮಾಡುವಾಗ ನೀಡಿದ ಭರವಸೆಗಳನ್ನು ನಂತರ ಮರೆತು ಹೋಗಿರುತ್ತವೆ. ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಹಲವು ಅಪಾರ್ಟ್‌ಮೆಂಟ್‌ಗಳು ವೃಷಭಾವತಿ ನದಿಯ ಪಕ್ಕದಲ್ಲೇ ನಿರ್ಮಾಣಗೊಂಡಿವೆ. ಅದರ ಕೆಟ್ಟ ವಾಸನೆಯ ಕಿರಿ ಕಿರಿ ಅಪಾರ್ಟ್ ಮೆಂಟ್ ನಿವಾಸಿಗಳು ಅನುಭವಿಸಬೇಕು.
ಬೆಂಗಳೂರು ಬೆಳೆಯುತ್ತಿದ್ದರೂ, ಅಪಾರ್ಟ್‌ಮೆಂಟ್ ನಿರ್ಮಾಣ ಕಂಪೆನಿಗಳನ್ನು ನಿಯಂತ್ರಿಸುವ ಗ್ರಾಹಕರ ದೂರು ದುಮ್ಮಾನ ಆಲಿಸುವ ವ್ಯವಸ್ಥೆ ಕಲ್ಪಿಸಿಲ್ಲ. ಸರಕಾರ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವ ಕಂಪೆನಿಗಳ ಮೇಲೆ ನಿಗಾ ವಹಿಸದಿದ್ದರೆ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಮಳೆಗಾಲದಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳು ಮುಳುಗಡೆಯಾಗುವ ದೃಶ್ಯ ನೋಡಿದರೆ ಸಂಕಟವಾಗುತ್ತದೆ. ಕೋಟಿ ಕೋಟಿ ಹಣ ಸುರಿದು ಅಂಥ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರ ಮನಸ್ಥಿತಿ ಹೇಗಿದ್ದಿರಬೇಕು? ಕಚೇರಿಯಲ್ಲಿ ಕೂತು ಒಸಿ, ಸಿಸಿ ನೀಡುವ ಕೆಟ್ಟ ಚಾಳಿ ನಿಂತಾಗ ಮಾತ್ರ ಗುಣಮಟ್ಟದ ಅಪಾರ್ಟ್ ಮೆಂಟ್ ನಿರ್ಮಾಣವಾಗುತ್ತವೆ. ಸುಂದರ ಬೆಂಗಳೂರು ಕನಸು ಸಾಕಾರಗೊಳ್ಳುತ್ತದೆ.







